೧೯೮೬ನೇ ಇಸವಿಯ ಸಂಕ್ರಾಂತಿ ಹಬ್ಬದ ಹಿಂದಿನ ದಿವಸ. ಆದಿನ ಇದ್ದಕ್ಕಿದ್ದಂತೆಯೇ ನನ್ನ ಯಜಮಾನತಿಗೆ ಮನೆಯಲ್ಲೇ ಸಕ್ಕರೆಯ ಅಚ್ಚಿನ ಗೊಂಬೆ ತಯಾರಿಸುವ ಉಮೇದುಬಂತು. ಆದಿನ ನನಗೆ, ಅಂಗಡಿಯಲ್ಲಿ ದೊರೆಯುವ ಸಕ್ಕರೆ ಅಚ್ಚಿನ ಗೊಂಬೆಗಳಿಗೆ ಯಾವುದಾವುದೋ ಕಚಡಾ ಬಣ್ಣ ಹಾಕಿರುತ್ತಾರೆ, ಆದ್ದರಿಂದ ಮಕ್ಕಳ ಆರೋಗ್ಯಕ್ಕೆ ಕೊಂಡುತಂದ ಸಕ್ಕರೆಗೊಂಬೆಗಳು ಚೆನ್ನಾಗಿರುವುದಿಲ್ಲ. ಆದ್ದರಿಂದ, ನೀವು ಸಿಟಿಮಾರುಕಟ್ಟೆಗೆ (ಅಂದರೆ ಕೃಷ್ಣ ರಾಜೇಂದ್ರ ಮಾರುಕಟ್ಟೆಗೆ) ಹೋಗಿ, ಹತ್ತಿಪ್ಪತ್ತು ನಮೂನೆಯ ಸಕ್ಕರೆ ಅಚ್ಚುಗಳನ್ನು ತನ್ನಿರಿ. ಹಾಗೆಯೇ, ನಾಳಿನ ಹಬ್ಬಕ್ಕೆ ಬೇಕಾದ ಕಬ್ಬಿನಜಲ್ಲೆ, ಹೂವು, ಹಣ್ಣುಗಳು ಮತ್ತು ತರಕಾರಿಗಳನ್ನು ಕೊಂಡುಕೊಂಡು ಬನ್ನಿ ಎಂಬ ಆರ್ಡರ್ ಬಂತು! ನನಗೆ ಅಚ್ಚುಗಿಚ್ಚು ಕೊಳ್ಳಲು ಗೊತ್ತಾಗುವುದಿಲ್ಲ..! ನೀನೂ ಬಾ ನನ್ನ ಜತೆಗೆ! ಎಂದೆ.

ನನಗೆ ನಿಮ್ಮ ಜತೆಗೆ ಬರಲು ಇಂದು ಬಿಡುವೆಲ್ಲಿ? ನಾಳೆ ಹಬ್ಬಕ್ಕೆ ಬೀರುವ ಎಳ್ಳು ತಯಾರಿಸಬೇಕು. ಇತ್ತ ಅಡುಗೆಯೂ ಆಗಬೇಕು. ಕೆಲಸದವಳು ಬೇರೆ ಇಂದು ಕೈಕೊಟ್ಟಿದ್ದಾಳೆ! ನೀವು ಹೋಗಿ ಅಚ್ಚಿನ ಅಂಗಡಿಯಲ್ಲಿ ಕೇಳಿ! ಎಲ್ಲಾ ತರದ ಒಂದೊಂದು ಅಚ್ಚು ತನ್ನಿ..! ಮನೆ ಎಂದ ಮೇಲೆ ಅವೆಲ್ಲಾ ಬೇಕಾಗುತ್ತವೆ! ಅವು ಹಾಳಾಗುವ ಸಾಮಗ್ರಿಯೇನೂ ಅಲ್ಲ! ಎಂದು ವಾದಿಸಿ ನನ್ನನ್ನು ಸಾಗಹಾಕಿದಳು.

ನಾನು ಸಿಟಿ ಮಾರುಕಟ್ಟೆಗೆ ಹೋದೆ. ಬೆಳಗಿನ ಸುಮಾರು ಹನ್ನೊಂದು ಗಂಟೆಯ ಸಮಯ. ಹಬ್ಬದ ಖರೀದಿಯ ಭರಾಟೆ ಇದ್ದರೂ, ಕಾರು ನಿಲ್ಲಿಸಲು ಜಾಗ ಸುಲಭವಾಗಿಯೇ ಸಿಕ್ಕಿತು. ಮೊದಲು ಮಾರುಕಟ್ಟೆಯ ಹಿಂಬದಿಯಲ್ಲಿರುವ ಸಕ್ಕರೆ ಅಚ್ಚು ಮಾರುವ ಅಂಗಡಿಗೆ ನಡೆದೆ. ಅಂಗಡಿಯವರಿಗೆ ಎಲ್ಲಾ ತರಹೆಯ ಒಂದೊಂದು ಸಕ್ಕರೆ ಅಚ್ಚು ಕೊಡಿ! ಎಂದೆ. ಆತ ದೊಡ್ಡ ಒಂದು ಬಟ್ಟೆಯ ಚೀಲ ತೆಗೆದುಕೊಂಡು ಅದಕ್ಕೆ ಅಚ್ಚುಗಳನ್ನು ತುಂಬಿಸತೊಡಗಿದ..! ಆತನು ಚೀಲಕ್ಕೆ ವಿವಿಧ ಅಚ್ಚುಗಳನ್ನು ತುಂಬುವುದನ್ನು ನೋಡುತ್ತಾ, ನಾನು ಐದುನಿಮಿಷ ಕಾಯಬೇಕಾಯಿತು. ನಿಮ್ಮ ಅದೃಷ್ಟ ಸಾರ್!, ನಿಮಗೆ ಒಟ್ಟು ಐವತ್ತೆರಡು ನಮೂನೆಯ ಅಚ್ಚುಗಳು ಸಿಕ್ಕವು. ಎಲ್ಲಾ ತರಹೆಯ ಅಚ್ಚುಗಳನ್ನು ನೀವು ಕೊಳ್ಳುತ್ತಾ ಇರುವುದರಿಂದ, ನಿಮಗೆ ಸ್ಪೆಶಲ್‌ಡಿಸ್ಕೌಂಟ್ ಕೊಡುತ್ತೇನೆ. ಇವುಗಳ ಬೆಲೆ ಏಳುನೂರಾ ಎಂಬತ್ತು ರೂಪಾಯಿ..! ಹತ್ತು ಪರ‍್ಸೆಂಟ್ ಡಿಸ್ಕೌಂಟ್! ಅಂದರೆ, ಏಳುನೂರಾ ಎರಡು ರೂಪಾಯಿ ಆಗುತ್ತೆ! ನೀವು ಏಳುನೂರೇ ಕೊಡಿ! ಎಂದು ನಾನು ಕೇಳದಿದ್ದರೂ, ತನ್ನ ಔದಾರ್ಯವನ್ನು ಮೆರೆಯುತ್ತಾ, ಆ ಅಂಗಡಿಯ ಮಾಲಿಕ ನನ್ನ ಕಡೆಗೆ ಒಂದು ದೇಶಾವರಿ ನಗೆಬೀರಿದ. ನಾನು ಪಾಕೀಟ್ ಬಿಚ್ಚಿ ನೋಡಿದರೆ, ನನ್ನ ಪಾಕೀಟಿನಲ್ಲಿ ಏಳುನೂರ ಹತ್ತು ರೂಪಾಯಿ ಮಾತ್ರ ಇತ್ತು. ನಾನು ಮನಸ್ಸೊಳಗೇ ಏಕಪ್ಪಾ ಇವಳಿಗೆ ಇಷ್ಟು ಸಕ್ಕರೆ ಅಚ್ಚು? ಅಂತ ಸ್ವಲ್ಪ ವ್ಯಥೆಪಟ್ಟೆ. ಆದರೂ, ನನ್ನ ವ್ಯಥೆಯನ್ನು ಅಂಗಡಿಯವನಿಗೆ ತೋರ್ಪಡಿಸದೇ, ಶ್ರೀಮತಿ ಸರೋಜಮ್ಮ ಪೆಜತ್ತಾಯರ ಸಂತೋಷಕ್ಕಾಗಿ ಏಳುನೂರು ರೂಪಾಯಿ ತೆತ್ತುಬಿಟ್ಟೆ. ಜೇಬಿನಲ್ಲಿ ಆಮೇಲೆ ಉಳಿದುದು ಬರೇ ಹತ್ತುರೂಪಾಯಿಗಳು! ಹಬ್ಬಕ್ಕೆ ಬೇಕಾದ ಕಬ್ಬಿನಜಲ್ಲೆ, ಹೂವು, ಹಣ್ಣು, ತರಕಾರಿ ಎಲ್ಲವನ್ನೂ ನಮ್ಮಮನೆ ಹತ್ತಿರದ ಕಾಕ್ಸ್‌ಟೌನ್ ಮಾರುಕಟ್ಟೆಯಿಂದ ಸಾಯಂಕಾಲ ಕೊಂಡರಾಯಿತು. ಸದ್ಯಕ್ಕೆ ಅತೀ ಮುಖ್ಯವಾದ ಸಕ್ಕರೆ ಅಚ್ಚು ಸಿಕ್ಕಿತಲ್ಲಾ! ಎಂದು ಸಂತಸಪಟ್ಟೆ.

ಅಂಗಡಿಯವನು ಕೂಲಿ ಹುಡುಗನನ್ನು ಕರೆಯಲೇ? ಎಂದು ಕೇಳಿದ. ಇದೇನೂ ಭಾರವಿಲ್ಲ..! ಥ್ಯಾಂಕ್ಸ್…! ಎನ್ನುತ್ತ ಮಹಾ ಬಲವಂತನಂತೆ ತಿರುಗಿಯೂ ನೋಡದೆ ಮಾರುಕಟ್ಟೆಯ ಮುಂದೆ ನಿಲ್ಲಿಸಿದ್ದ ನನ್ನ ಕಾರಿನ ಕಡೆಗೆ ಹೆಜ್ಜೆಹಾಕಿದೆ. ಅಚ್ಚುಗಳ ಭಾರಕ್ಕೆ ಕೈ ನೋಯಹತ್ತಿತು. ಹೇಗೋ, ಕೈ ಬದಲಾಯಿಸುತ್ತಾ ಕಾರು ನಿಲ್ಲಿಸಿದ್ದ ಜಾಗ ತಲುಪಿದೆ. ಕೀಲಿ ಉಪಯೋಗಿಸಿ ನನ್ನ ಬೂದುಬಣ್ಣದ ಫಿಯಾಟ್ ಕಾರಿನ ಬಾಗಿಲು ತೆರೆದೆ. ಕೈಲಿದ್ದ ಚೀಲವನ್ನು ಪ್ಯಾಸೆಂಜರ್ ಸೀಟಿನ ಮೇಲೆ ಕುಳ್ಳಿರಿಸಿ ದೊಡ್ಡ ಏದುಸಿರು ಬಿಟ್ಟೆ. ಪಾರ್ಕಿಂಗ್ ಕಾಸಿಗೋಸ್ಕರ ಹುಡುಗ ಬಂದ. ಆತನಿಗೆ ಆಷ್‌ಟ್ರೇಯಲ್ಲಿ ಸಂಗ್ರಹಿಸಿಟ್ಟ ಚಿಲ್ಲರೆ ಸಂಗ್ರಹದಿಂದ ಐವತ್ತು ಪೈಸೆಯ ಶುಲ್ಕ ನೀಡಿದೆ. ಉಸ್ಸಪ್ಪಾ! ಎನ್ನುತ್ತಾ ಕಾರಿನ ಕೀ ಕೈಗೆತ್ತಿಕೊಂಡು, ಕಾರ್ ಸ್ಟಾರ್ಟ್‌ಮಾಡಿದೆ.

ಇನ್ನೇನು ಕಾರನ್ನು ರಿವರ್ಸ್ ತೆಗೆಯಬೇಕು.., ಅಷ್ಟರಲ್ಲಿ ಸುಮಾರು ಅರುವತ್ತರ ಹರೆಯದ ಸುಶಿಕ್ಷಿತ ಚಹರೆಯ ಗೌರವಾನ್ವಿತ ಮಹಿಳೆಯೊಬ್ಬರು ಕಾರಿನ ಮುಂದಿನ ಗ್ಲಾಸಿನ ಮೇಲೆ ತನ್ನ ಕೈಯ್ಯಲ್ಲಿದ್ದ ಬೀಗದ ಕೈಯ್ಯನ್ನು ಕಟಕಟಾಯಿಸುತ್ತಾ, “Where are you taking my car young man?” ಎಂದರು. ನಾನು ಗಾಬರಿಯಾದರೂ ತೋರಿಸಿಕೊಳ್ಳದೆ, ಕಾರಿನ ಒಳಗೆ ಇನ್ನೊಮ್ಮೆ ದೃಷ್ಟಿಬೀರಿ, ಇದು ನನ್ನ ಕಾರೇ…! ಎಂದು ಖಚಿತಪಡಿಸಿಕೊಂಡೆ. ಸೀಟಿನಬಣ್ಣ, ಮ್ಯಾಟಿಂಗ್, ಮ್ಯೂಸಿಕ್‌ಸಿಸ್ಟಮ್ ಎಲ್ಲವೂ ನನ್ನ ಕಾರಿನದೇ! ಆದರೆ…, ಡ್ಯಾಷ್‌ಬೋರ್ಡಿನ ಮೇಲೆ ನನ್ನ ಮಗಳು ರಾಧಿಕಾ ಹಚ್ಚಿದ್ದ ಮಿಕ್ಕಿಮೌಸ್‌ನ ಸ್ಟಿಕ್ಕರ್ ಮಾತ್ರ ಇಲ್ಲ…!

ಈ ಕಾರು ನನ್ನದಲ್ಲವೇ? ಎಂಬ ಸಂಶಯ ಆಗ ನನ್ನ ತಲೆಯಲ್ಲಿ ಉದ್ಭವಿಸಿತು. ಪಕ್ಕದಲ್ಲಿ ನಿಂತಿದ್ದ ಇತರ ಕಾರುಗಳ ಕಡೆಗೆ ಕಣ್ಣು ಹಾಯಿಸುತ್ತ ಎಂಜಿನ್ ಆಫ್ ಮಾಡಿದೆ. ಹೌದು..! ನನ್ನ ಕಾರು ಅದೇ ಲೈನಿನಲ್ಲಿ ಇನ್ನೊಂದು ಕಾರಿನ ಆಚೆಗೆ ತಣ್ಣಗೆ ನಿಂತಿತ್ತು!! ಗಾಬರಿಯಲ್ಲಿ ನನ್ನ ಹೃದಯವೇ ಬಾಯಿಗೆ ಬಂದುಬಿಟ್ಟಿತ್ತು..! ನನಗೆ ನಾಚಿಕೆ ಮತ್ತು ಭಯಗಳಿಂದ ಮಾತನಾಡುವುದೇ ಕಷ್ಟವಾಯಿತು.

ಮ್ಯಾಡಮ್, ಐ ಅಪೋಲೋಜೈಸ್! ಐ ಅಮ್ ವೆರಿಸಾರಿ! ಕೈಂಡ್ಲೀ ಎಕ್ಸಕ್ಯೂಸ್‌ಮೀ ಎಂದು ಕ್ಷಮೆಬೇಡುತ್ತಾ ಆ ಕಾರಿನಿಂದ ಕೆಳಗಿಳಿದೆ. ನನ್ನ ಮೈ ಬೆವರುತ್ತಿತ್ತು! ಹೃದಯ ಜೋರಾಗಿ ಬಡಿದುಕೊಳ್ಳುತ್ತಿತ್ತು! ನನ್ನ ದೇಹದ ರಕ್ತವೆಲ್ಲಾ ನನ್ನ ಮುಖ ಮತ್ತು ಕಿವಿಗಳಿಗೆ ನುಗ್ಗಿದಂತೆ ಭಾಸವಾಯಿತು. ನಾನು ಕಕ್ಕಾಬಿಕ್ಕಿಯಾಗಿ ಆ ಮಹಿಳೆಯ ಮುಂದೆ ತಲೆತಗ್ಗಿಸಿ ನಿಂತಿದ್ದೆ.

ಆಗ ಆಕೆಯೇ ಸ್ವಲ್ಪ ಸುಧಾರಿಸಿಕೊಂಡು, ನನ್ನ ಕಾರಿನ ಕಡೆಗೆ ನೋಡುತ್ತಾ ದ್ಯಾಟ್ ಆಲ್ಸೋ ಸೀಮ್ಸ್ ಟು ಬಿ ಎ ನೈನ್‌ಟೀನ್ ಸೆವೆಂಟೀ ವನ್ ಮಾಡೆಲ್ ಫಿಯಾಟ್! ಸೇಮ್ ಕಲರ್. ಸೇಮ್‌ಕೈಂಡ್ ಆಫ್ ಒರಿಜಿನಲ್ ಸೀಟ್ಸ್! ಎಂದು ಉದ್ಗಾರ ತೆಗೆದರು. ಆಗ ನಾನು ನಿಧಾನವಾಗಿ ಉಸಿರಾಡತೊಡಗಿದೆ! ಐ ಕ್ಯಾನ್ ಸೀ ಯುವರ್ ಕಾರ್! ನೌ. ಐ ಆಮ್ ಶೂರ್ ಯೂ ಆರ್ ನಾಟ್ ಎ ಕಾರ್ ತೀಫ್ ಎಂದರು..! ಆಕೆಯೇ ನಗುತ್ತಾ ಯಂಗ್‌ಮ್ಯಾನ್! ಟೇಕ್ ಯುವರ್ ಶಾಪ್ಪಿಂಗ್ ಬ್ಯಾಗ್! ಲೆಟ್‌ಅಸ್ ಗೋ ಟು ಯುವರ್ ಕಾರ್ ಎಂದರು. ಅವರ ಬೀಗದ ಕೈ ಉಪಯೋಗಿಸುತ್ತಾ ನನ್ನ ಕಾರಿನ ಬಾಗಿಲು ತೆಗೆದೇಬಿಟ್ಟರು! ಯುಂಗ್‌ಮ್ಯಾನ್! ನೋ ವಂಡರ್! ದಿಸ್ ಕುಡ್ ಹ್ಯಾವ್ ಹ್ಯಾಪ್ಪೆನ್ಡ್ ಟು ಮೀ ಟೂ! ಡೋಂಟ್ ವರ್ರೀ! ಎಂದು ಉದ್ಗರಿಸುತ್ತಾ ನನ್ನತ್ತ ನಗೆ ಬೀರಿದರು. ಎರಡೂ ಕಾರುಗಳು ಒಂದೇ ಮಾಡೆಲ್, ಒಂದೇ ಕಲರ್, ಒಂದೇ ಕಲರಿನ ಒರಿಜಿನಲ್ ಸೀಟ್! ನನ್ನ ಕಾರು M.E.B 9031 ಆದರೆ ಅವರ ಕಾರಿನ ನೋಂದಣಿ ನಂಬರು ಹತ್ತು ಹೆಚ್ಚು ಕಡಿಮೆ!

ಆ ಮಹಾತಾಯಿ ನನ್ನ ಭುಜವನ್ನು ತಟ್ಟುತ್ತಾ, “It is nice to see another car maintained with originality like mine! Young man! Hence forth, before you enter any car, – FIRST, ASCERTAIN THE NUMBER” ಎನ್ನುತ್ತಾ ತಮ್ಮ ಕಾರಿನತ್ತ ನಡೆದರು. ಕಾರು ರಿವರ್ಸ್‌ಮಾಡಿ ಹೊರಡುವಾಗ ನನ್ನತ್ತ ನಗುತ್ತಾ ಕೈಬೀಸಿದರು. ಆ ಮಹಾತಾಯಿ ಬರುವುದು ಒಂದು ನಿಮಿಷ ತಡವಾಗಿದ್ದರೆ ನಾನೊಬ್ಬ ಕಾರುಕಳ್ಳನಾಗಿ ಜೈಲುಸೇರುತ್ತಿದ್ದೆ! ಇದಕ್ಕೆ ಎನ್ನುವುದು, ಮನುಷ್ಯ ಅದೃಷ್ಟಶಾಲಿ ಆಗಿರಬೇಕು..! ಎಂದು.

ನೋಟ್ : ಕಬ್ಬಿನ ಜಲ್ಲೆ, ಹೂವು, ಹಣ್ಣು ತರಕಾರಿ ಎಲ್ಲಾ ಬಿಟ್ಟು, ನಾನು ಒಂದು ದೊಡ್ಡ ಮೂಟೆ ಆಗುವಷ್ಟು ಸಕ್ಕರೆ ಅಚ್ಚು ಮಾತ್ರ ಹೊತ್ತುಕೊಂಡು ಮನೆಗೆ ತಂದಾಗ ಮನೆಯ ಯಜಮಾನತಿ ಸ್ವಲ್ಪ ಸಿಟ್ಟುಗೊಂಡಳು. ಆದರೆ, ಕಾರು ಕಳ್ಳನಾಗದೇ ನಾನು ಮನೆಗೆ ಬಂದ ಕಥೆ ಹೇಳಿದಾಗ ಮನಸಾರೆ ನಕ್ಕಳು. ಆ ಸಕ್ಕರೆ ಅಚ್ಚುಗಳು ಇಂದು ಅಟ್ಟದಲ್ಲೆಲ್ಲೋ ಬಿದ್ದಿವೆ. ಪ್ರತೀ ಸಂಕ್ರಾಂತಿ ಹಬ್ಬಕ್ಕೆ ಬಣ್ಣಹಾಕದ ಸಕ್ಕರೆಗೊಂಬೆಗಳನ್ನು ಮಾರುಕಟ್ಟೆಯಿಂದಲೇ ಕೊಂಡು ತರುತ್ತೇವೆ.

* * *