ಯಾರಿಗಾದರೂ ಪಂಗನಾಮ ಹಾಕುವ ಛಾತಿ ಮತ್ತು ಚತುರತೆ ನನಗೆ ಒಗ್ಗಿಬಂದಿಲ್ಲ. ಆದರೆ, ಜೀವನದಲ್ಲಿ ಹಲವು ಬಾರಿ ಪಂಗನಾಮ ಹಾಕಿಸಿಕೊಂಡ ಅನುಭವ ಮಾತ್ರ ನನಗಿದೆ. ಪಂಗನಾಮ ಹಾಕಿಸಿಕೊಳ್ಳುವಷ್ಟು ಭೋಳೆತನ ನನ್ನಲ್ಲಿ ಇದೆ ಎಂದು ನನಗೆ ನಾಮಹಾಕುವವರು ನನ್ನನ್ನು ನೋಡಿ, ಮೊದಲೇ ಅಂದಾಜು ಮಾಡಿರುತ್ತಾರೆ. ಒಂದು ಸಲ ತಿರುಪತಿಯಲ್ಲೇ ನಾನು ಪಂಗನಾಮ ಹಾಕಿಸಿಕೊಂಡ ನೆನಪು ಬರುತ್ತಾ ಇದೆ.

೧೯೯೬ನೇ ಇಸವಿ. ಹೊಸದಾಗಿ ಮಾರುತಿ ಜಿಪ್ಸಿ ಜೀಪ್ ಕೊಂಡಿದ್ದೆ. ಹೊಸ ಜೀಪಿನಲ್ಲಿ ನಾವೆಲ್ಲಾ ಒಟ್ಟಾಗಿ ತಿರುಪತಿಗೆ ಹೋಗಿಬರೋಣ ಎಂದು ತೀರ್ಮಾನ ಮಾಡಿದೆವು. ನನ್ನ ಯುವ ಮಿತ್ರರಾದ ಶಂಕರ ಎಂಬ ಮೈನಿಂಗ್ ಎಂಜಿನೀಯರ್ ಮತ್ತು ಉದಯ ಎಂಬ ಮಾಸ್ಟರ್ ಮೆಕ್ಯಾನಿಕ್ ಇವರುಗಳು ನಾವು ಹೊರಡುವ ವಿಚಾರ ತಿಳಿದೊಡನೆ ನಿಮ್ಮ ಜತೆಗೆ ತಿಮ್ಮಪ್ಪನ ದರ್ಶನಕ್ಕೆ ನಾವೂ ಬರುತ್ತೇವೆ ಎನ್ನುತ್ತಾ ಸೇರಿಕೊಂಡರು. ನಾವೆಲ್ಲ ಒಟ್ಟಿಗೆ ತಿರುಪತಿಗೆ ಪ್ರಯಾಣ ಬೆಳೆಸಿದೆವು.

ಪ್ರಯಾಣ ಸುಗಮವಾಗಿತ್ತು. ಆದಿನ ನಮಗೆ ವಸತಿಗೆ ಒಳ್ಳೆಯ ಕಾಟೇಜ್ ಕೂಡಾ ಸುಲಭವಾಗಿ ಸಿಕ್ಕಿತು. ಬ್ಯಾಗೇಜು ರೂಮಿನಲ್ಲಿ ಇಟ್ಟು ಸ್ಪೆಶಲ್ ದರ್ಶನದ ಟಿಕೆಟ್ ಪಡೆಯಲು ಕ್ಯೂ ನಿಂತೆವು. ಅದೂ ಸುಲಭವಾಗಿ ಸಿಕ್ಕಿತು. ನಾವುಗಳು ಉಪಹಾರ ಸೇವಿಸಿ ಸ್ಪೆಶಲ್ ದರ್ಶನದ ಸಾಲಿಗೆ ಸೇರುವ ಮೊದಲು ನಮಗೆ ಅರ್ಧಗಂಟೆಯ ಬಿಡುವಿತ್ತು. ದೇವಸ್ಥಾನದ ಎದುರಿನಲ್ಲಿರುವ ಅಂಗಡಿಗಳ ಸಾಲಿಗೆ ನನ್ನ ಮಡದಿಮಕ್ಕಳು ಉಮೇದಿನಿಂದ ಧಾಳಿಯಿಟ್ಟರು.

ನಾವು ಮೂರು ಜನ ಗಂಡಸರು ಬೇರೇನೂ ಕೆಲಸ ಇಲ್ಲದೆ ಅಲ್ಲೇ ನಿಂತಿದ್ದಾಗ ಒಬ್ಬ ಪಂಗನಾಮ ಬಳಿಯುವ ಸರದಾರ ನಮ್ಮ ಹತ್ತಿರಕ್ಕೆ ಬಂದ. ಒಳ್ಳೆಯ ಇಂಗ್ಲೀಷ್ ಭಾಷೆ ಮಾತನಾಡುತ್ತಿದ್ದ ಆತ ನಿಮ್ಮ ಹಣೆಗಳ ಮೇಲೆ ತಿರುಪತಿ ತಿಮ್ಮಪ್ಪನ ತಿರುನಾಮವನ್ನು ಬರೆಸಿಕೊಂಡು ದೇವರ ದರ್ಶನಮಾಡಿ ಎಂಬ ವರಾತ ಹಚ್ಚಿದ. ಮೊದಲು ನಾವು ನಮಗೆ ನೀನು ಬಳಿಯುವ ನಾಮ ಬೇಡವೇ ಬೇಡ…! ಎಂದೆವು. ಆಗ ಅವನು ನಾನು ಗ್ರಾಜುವೇಟ್ ಸಾರ್..! ನನಗೆ ಸಹಾಯ ಮಾಡಿ, ನಾನು ಬಹಳ ಹೈಜೀನಿಕ್ ಆಗಿ ತಮಗೆ ನಾಮಧಾರಣೆ ಮಾಡಿಸುತ್ತೇನೆ. ನೋಡಿ ಸಾರ್, ನಾನು ಸ್ಟೆರೈಲ್ ಕಾಟನ್ ಮತ್ತು ಕ್ಲೆನ್ಸಿಂಗ್ ಲೋಷನ್ ಬಳಸಿ ತಮ್ಮ ಹಣೆ ಕ್ಲೀನ್‌ಮಾಡಿ, ಪ್ರತಿಯೊಬ್ಬರಿಗೂ ಬೇರೆ ಬೇರೆ ಸ್ಟೆರೈಲ್ ಬ್ರಶ್‌ಗಳನ್ನು ಬಳಸಿ ನಾಮ ಹಾಕುತ್ತೇನೆ. ಬರೇ ಹತ್ತು ರೂಪಾಯಿ ಸಾರ್! ಎಂದು ಗೋಗರೆದ. ಕೊನೆಗೂ ಅವನ ವರಾತಕ್ಕೆ ಸೋತು ನಾನು ಮತ್ತು ಶಂಕರ ನಾಮ ಹಾಕಿಸಿಕೊಂಡು ದೇವರ ದರ್ಶನಕ್ಕೆ ಹೋಗಲು ಒಪ್ಪಿದೆವು. ಉದಯ ಸುತಾರಾಂ ಒಪ್ಪಲಿಲ್ಲ.

ನಾಮಹಾಕುವ ಆ ಯುವಕನು ತನ್ನ ಹಡಪಬಿಚ್ಚಿ ಒಳ್ಳೆಯ ಸರ್ಜನ್ ತರಹ ಚಾಕಚಕ್ಯತೆಯಿಂದ ಮೊದಲು ಶಂಕರನಿಗೆ, ಆ ಮೇಲೆ ನನಗೆ ತಿರುಪತಿ ವೆಂಕಟರಮಣನ ನಾಮ ಬರೆದ. ನನಗೆ ನಾಮ ಬರೆಯಬೇಕಾದರೆ ನಾನು ನನ್ನ ಕನ್ನಡಕವನ್ನು ತೆಗೆಯಲೇಬೇಕಾಗಿತ್ತು. ಕನ್ನಡಕವನ್ನು ತೆಗೆದು ಕೈಯ್ಯಲ್ಲಿ ಹಿಡಿದು, ಆ ಉರಿಬಿಸಿಲಿನಲ್ಲಿಯೇ ಆತನು ಹಾಕಿಕೊಟ್ಟ ಪ್ಲಾಸ್ಟಿಕ್ ಸ್ಟೂಲ್ ಮೇಲೆ ಆಸೀನನಾಗಿ ನಾಮ ಬಳಿಸಿಕೊಳ್ಳಹತ್ತಿದೆ. ಶಂಕರ ನನಗಿಂತ ಮೊದಲು ತನ್ನ ನಾಮವನ್ನು ಪ್ರದರ್ಶಿಸಲು ಉದಯನ ಜತೆಗೆ ನನ್ನ ಮಕ್ಕಳು ಇದ್ದಲ್ಲಿಗೆ ಹೊರಟುಹೋದ.

ನನ್ನ ನಾಮವನ್ನು ಬಹಳ ಮುತುವರ್ಜಿಯಿಂದಲೇ ಹಾಕಿ ಮುಗಿಸಿದ ನಾಮ ಹಾಕುವ ಆಸಾಮಿಯು ಸರ್! ಇನ್ನು ಐದು ನಿಮಿಷ ತಾವು ಕನ್ನಡಕ ಧರಿಸಬೇಡಿರಿ! ಅಷ್ಟರ ಒಳಗೆ ತಮ್ಮ ನಾಮ ಒಣಗಿ ಬಿಡುತ್ತೆ! ಆಮೇಲೆ ಕನ್ನಡಕವನ್ನು ಧರಿಸಿಕೊಳ್ಳಬಹುದು! ಎಂದ. ಬಿಸಿಲಿನಲ್ಲಿಯೇ ತನ್ನ ಕನ್ನಡಿಯನ್ನು ನನ್ನ ಮುಖದ ಎದುರು ಝಳಪಿಸಿ ಸಾರ್! ತಮ್ಮ ನಾಮದ ಚೆಂದವನ್ನು ನೋಡಿ ಎಂದ..! ಕನ್ನಡಿಯಿಂದ ಪ್ರತಿಫಲನಗೊಂಡ ಪ್ರಖರವಾದ ಸೂರ್ಯನ ಬೆಳಕಿಗೆ ನನ್ನ ಮುಖವೇ ನನಗೆ ಕಾಣಲಿಲ್ಲ.

ಜೀವನದಲ್ಲಿ ಮೊದಲನೇ ಬಾರಿ ಶ್ರೀ ತಿರುಪತಿ ತಿಮ್ಮಪ್ಪನ ನಾಮ ಧರಿಸಿದ್ದೆ ಎಂಬ ಕಾರಣದಿಂದ ನನ್ನ ಮನಸ್ಸಿಗೆ ಏನೋ ಒಂದು ಬಗೆಯ ತೃಪ್ತಿಯಾಗಿತ್ತು. ನನ್ನ ಹೆಂಡತಿ ಮಕ್ಕಳು ನನ್ನ ವಿಚಿತ್ರ ನಾಮವನ್ನು ನೋಡಿ ನಗುವರಾದರೂ, ಪರವೂರಾದ ತಿರುಪತಿಯಲ್ಲಿ ನನ್ನನ್ನು ಗೇಲಿಮಾಡುವ ಇತರೇ ಪರಿಚಿತರಾರೂ ಇಲ್ಲವಲ್ಲ ಎಂದು ಸಂತೋಷಪಟ್ಟೆ. ನಾಮ ಹಾಕುವವನ ಸೇವೆಯಿಂದ ತುಂಬಾ ಸಂತುಷ್ಟನಾಗಿದ್ದ ನಾನು ಅವನಿಗೆ, ನಿನಗೆ ನಿಗದಿಪಡಿಸಿದ ಇಪ್ಪತ್ತುರೂಪಾಯಿ ಚಾರ್ಜಿನ ಮೇಲೆ ಎಂಬತ್ತು ರೂಪಾಯಿ ಭಕ್ಷೀಸು ಕೊಡುವೆ..! ಎಂದು ನನ್ನ ಪರ್ಸ್ ಬಿಚ್ಚಿ ಆತನಿಗೆ ನೂರರ ಒಂದು ನೋಟು ನೀಡಿದೆ. ನಾನು ಮೊದಲೇ ನೋಡಿಕೊಂಡಿದ್ದಂತೆ ನನ್ನ ಪರ್ಸಿನಲ್ಲಿ ಒಂದು ಐನೂರರ ನೋಟು ಮತ್ತು ನೂರರ ಒಂದು ನೋಟು ಮಾತ್ರ ಇದ್ದುವು. ಮುಂಜಾಗರೂಕತೆಯಿಂದ ನನ್ನ ಬಳಿಯಿದ್ದ ದೊಡ್ಡ ಮೊತ್ತದ ಹಣವನ್ನು ಅಂದು ಬೆಳಗಿನ ಸಮಯವೇ ನನ್ನ ಯಜಮಾನತಿಯ ದೊಗಲೆ ಜಂಬದ ಚೀಲದಲ್ಲಿ ಸೇಫ್‌ಕಸ್ಟಡಿಗೋಸ್ಕರ ಇರಿಸಿದ್ದೆ. ಆಗ ಆ ಗ್ರಾಜುವೇಟ್ ನಾಮ ಹಾಕುವವನು, ಸಾರ್! ಈ ಐನೂರರ ನೋಟ್ ಯಾಕೆ ಕೊಡುತ್ತಿದ್ದೀರಿ? ನೂರರ ನೋಟ್ ಕೊಟ್ಟರೆ ನಾನು ತಮಗೆ ಬಹು ಆಭಾರಿ..!ಎಂದು ವಿನಯದಿಂದ ಬೇಡಿಕೊಂಡ. ನನಗೆ ಆ ಬಿಸಿಲಿನ ಝಳದಲ್ಲಿ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಅದಲ್ಲದೇ, ಕೆಲವೇ ಸೆಕೆಂಡುಗಳ ಹಿಂದೆ ನನ್ನ ಕಣ್ಣೆದುರು ಅವನ ಕನ್ನಡಿ ಬೇರೆ ಕಣ್ಣು ಕುಕ್ಕಿಸುವಷ್ಟು ಪ್ರಕಾಶ ಬೀರಿತ್ತು..! ಅವನ ಸಾಚಾತನವನ್ನು ಮನದಲ್ಲೇ ಪ್ರಶಂಸಿಸುತ್ತಾ, ನನ್ನ ಪರ್ಸಿನಲ್ಲಿದ್ದ ಇನ್ನೊಂದು ನೋಟನ್ನು ಆತನಿಗೆ ನೀಡಿ, ಮೊದಲು ಕೊಟ್ಟ ನೋಟನ್ನು ಪಡೆದು ಅವನಿಗೆ ಥ್ಯಾಂಕ್ಸ್ ಎಂದೆ. ಆತ ನನಗೆ ನಮಸ್ಕರಿಸಿ ಪದೇಪದೇ ತುಂಬಾ ಉಪಕಾರವಾಯಿತು ಎನ್ನುತ್ತಾ ಹೊರಟುಹೋದ.

ನಾನು ನಿಧಾನವಾಗಿ ನಡೆದು ಅಂಗಡಿಗಳ ಬಳಿ ಇದ್ದ ನಮ್ಮ ಗುಂಪನ್ನು ಸೇರಿದೆ. ನನ್ನ ತಿರುಪತಿ ನಾಮವನ್ನು ನೋಡಿ ನನ್ನ ಸಂಸಾರದವರು ಮನಸಾರೆ ನಕ್ಕರು. ನಾನೂ ಪ್ರತಿಯಾಗಿ ತೃಪ್ತಿಯಿಂದ ನಕ್ಕೆ! ನಾವು ಅಲ್ಲೇ ಇದ್ದ ಜೂಸ್ ಅಂಗಡಿಯಲ್ಲಿ ಮೋಸಂಬಿಜೂಸ್ ಸೇವಿಸಿದೆವು. ಅಷ್ಟರಲ್ಲಿ ಐದು ಮಿನಿಟುಗಳು ಕಳೆದಿದ್ದುವು. ನಾನು ಪುನಃ ಕನ್ನಡಕ ಧರಿಸಿದೆ. ಜೂಸ್ ಅಂಗಡಿಯವನಿಗೆ ಐನೂರರ ನೋಟ್ ಕೊಟ್ಟು ಚಿಲ್ಲರೆ ಪಡೆಯಲು ನನ್ನ ಪರ್ಸ್ ಬಿಚ್ಚಿದೆ. ಅದರಲ್ಲಿ ಐನೂರು ರೂಪಾಯಿ ನೋಟಿನ ಬದಲು ನೂರು ರೂಪಾಯಿನ ನೋಟ್ ಮಾತ್ರ ಇದ್ದಿತು….! ನನಗೆ ನಾಮಹಾಕಿದ ಆ ಅಸಾಧ್ಯ ಬುದ್ಧಿವಂತ ಜನಂಗುಳಿಯಲ್ಲಿ ಮರೆಯಾಗಿದ್ದ..! ನಾನಂದು ಹಾಕಿಸಿಕೊಂಡ ತಿರುಪತಿನಾಮದ ನೆನಪನ್ನು ಇನ್ನೂ ಮರೆತಿಲ್ಲ!

* * *