ನಮ್ಮ ಸುಪ್ತಮನಸ್ಸು ಪ್ರಾಣಾಂತಿಕ ಕಾಯಿಲೆಗಳ ಬಗ್ಗೆ ಆಲೋಚಿಸಲು ಇಷ್ಟಪಡುವುದಿಲ್ಲ. ಇಂದಿನ ನಮ್ಮ ದೈಹಿಕ ವ್ಯಾಯಾಮ ಕಡಿಮೆಯಿರುವ ಜೀವನಶೈಲಿಯಲ್ಲಿ ಬೊಜ್ಜು, ರಕ್ತದ ಒತ್ತಡ ಮತ್ತು ಸಕ್ಕರೆಕಾಯಿಲೆಗಳು ಕಂಡು ಬರುವುದು ಸಾಮಾನ್ಯವೆನ್ನಿಸಿದೆ. ಇವನ್ನು ನಾವು ಪ್ರಥಮ ಲಕ್ಷಣಗಳನ್ನು ಎಚ್ಚರಿಕೆಯ ಗಂಟೆಗಳೆಂದು ಪರಿಗಣಿಸಲೇ ಬೇಕು.

ಹೆಚ್ಚಿನ ಭಾರತೀಯರಲ್ಲಿ ಮೂವತ್ತನೆಯ ವರ್ಷದ ನಂತರ ಸ್ಥೂಲದೇಹಿಗಳಾಗುವ ಲಕ್ಷಣ ಕಂಡುಬರುತ್ತಿದೆ. ದೇಹ ಸ್ಥೂಲವಾಗುತ್ತಿದ್ದಂತೆಯೇ ರಕ್ತದ ಒತ್ತಡ ಸಮಸ್ಯೆ ಕಂಡುಬರುವುದು. ಕೆಲವರಿಗೆ ಚಿಕ್ಕಪ್ರಾಯದಲ್ಲೇ ಸಕ್ಕರೆಕಾಯಿಲೆಯ ಲಕ್ಷಣಗಳು ಕಂಡುಬರುವುದು ಕೂಡಾ ಸಾಮಾನ್ಯವಾಗಿಬಿಟ್ಟಿದೆ. ಈ ಕಾಯಿಲೆಗಳು ತಂದೊಡ್ಡುವ ಸಮಸ್ಯೆ ಹಲವಾರು. ಈ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಮಾಡುವುದು ನನ್ನ ಉದ್ದೇಶ ಅಲ್ಲ. ನಾನು ಹೇಗೆ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾದೆ ಎಂದು ವಿವರಿಸುವುದೇ ಈ ಲೇಖನದ ಉದ್ದೇಶ.