ಕಲ್ಲು ದೇವಸ್ಥಾನ ಸುಬ್ಬರಾಯರು ಮೂಲತಃ ಶೃಂಗೇರಿಯವರು. ಅವರ ಹೆಸರು ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಚಿರಪರಿಚಿತ. ಸುಬ್ಬರಾಯರು ಶೃಂಗೇರಿಯ ಪ್ರಕಾಂಡ ಪಂಡಿತರೇನೂ ಅಲ್ಲ. ಅಥವಾ, ಅವರೊಬ್ಬ ಹೇಳಿಕೊಳ್ಳುವಷ್ಟು ದೊಡ್ಡ ಧನಿಕರೂ ಆಗಿರಲಿಲ್ಲ. ಅವರೊಬ್ಬ ರಾಜಕಾರಣಿಯೂ ಅಲ್ಲ. ಅವರ ಜನಪ್ರಿಯತೆಗೆ ಅವರ ಸಹೃದಯ ಮತ್ತು ಆತಿಥ್ಯಗಳೇ ಕಾರಣ.

ನಾನು ಸುಬ್ಬರಾಯರನ್ನು ನೋಡುವಾಗ ಅವರಿಗೆ ಸುಮಾರು ಅರುವತ್ತರ ಪ್ರಾಯ ಇದ್ದೀತು. ಶುಭ್ರವಾದ ಬಿಳಿಪಂಚೆ, ಅದರ ಮೇಲೆ ಒಂದು ಬಿಳಿ ಬುಷ್‌ಶರಟು. ಹೆಗಲ ಮೇಲೊಂದು ಬಿಳಿ ಟವಲು. ಕೈಯ್ಯಲ್ಲೊಂದು ಚಿಕ್ಕ ಬ್ಯಾಗ್. ಮುಖದ ಮೇಲೆ ಅಲ್ಲಲ್ಲಿ ಇನ್ನೂ ಕಪ್ಪುಕೂದಲಿದ್ದ ಮೀಸೆ, ಅದಕ್ಕೊಪ್ಪುವ ಕ್ರೂ ಕಟ್ ಶೈಲಿಯಲ್ಲಿ ಕ್ಷೌರ ಮಾಡಿದ ತಲೆಕೂದಲು. ನಮ್ಮ ಹಳ್ಳಿಗಳಲ್ಲಿ ಆ ರೀತಿಯ ಕೇಶಶೈಲಿಯನ್ನು ಬಾಕ್ಸರ್‌ಕಟ್ ಎಂದು ಕೂಡಾ ಅನ್ನುತ್ತಿದ್ದರು.

ಸುಬ್ಬರಾಯರ ಇನ್ನೊಂದು ಟ್ರೇಡ್‌ಮಾರ್ಕ್ ಎಂದರೆ ಅವರ ಕೈಯ್ಯಲ್ಲಿ ಸದಾ ಉರಿಯುವ ಸಿಗರೇಟು..! ಅವರ ನೆಚ್ಚಿನ ಬ್ರಿಸ್ಟಲ್ ಬ್ರ್ಯಾಂಡಿನ ಸಿಗರೇಟ್‌ಪ್ಯಾಕೆಟ್ ಅವರ ಹಸ್ತದಲ್ಲಿ ತಪ್ಪುತ್ತಲೇ ಇರಲಿಲ್ಲ. ಸ್ನಾನ, ಜಪ, ಪೂಜೆ, ಊಟ ಮತ್ತು ನಿದ್ದೆಯ ವೇಳೆಯಲ್ಲಿ ಮಾತ್ರ ನಮ್ಮ ಸುಬ್ಬರಾಯರು ಸಿಗರೇಟು ಸೇದುತ್ತಿರಲಿಲ್ಲ. ಸುಬ್ಬರಾಯರು ದಿನಕ್ಕೆ ಹದಿನೈದು ಪ್ಯಾಕೆಟ್ ಸಿಗರೇಟು ಸೇದುತ್ತಿದ್ದರು ಎಂದು ಎಲ್ಲರ ಅಂಬೋಣ. ಸುಬ್ಬರಾಯರಿಗೆ ಬೆಂಕಿಪೆಟ್ಟಿಗೆಯ ಅಗತ್ಯವೇ ಇಲ್ಲ…! ಒಂದರ ಹಿಂದೆ ಸಿಗರೇಟು ಸೇದುವುದರಿಂದ, ಒಂದು ಸಿಗರೇಟ್ ಮುಗಿಯುತ್ತಾ ಬಂದಾಗ, ಇನ್ನೊಂದನ್ನು ಮುಗಿಯುತ್ತಾ ಬಂದ ಸಿಗರೇಟಿನ ಕುತ್ತಿಯಿಂದಲೇ ಹಚ್ಚಿಕೊಳ್ಳುತ್ತಾರೆ…! ಎಂದು ಜನರು ನೆಗೆಯಾಡುತ್ತಿದ್ದರು. ದಿನಕ್ಕೆ ಅರುವತ್ತರ ತನಕ ಸಿಗರೇಟು ಸುಡುತ್ತಿದ್ದ ನಾನು ಕೂಡಾ ಈ ಎಸ್ಟಿಮೇಟ್ ಸರಿ.. ಎಂದು ಒಪ್ಪಿದ್ದೆ. ಮಧ್ಯಬೆರಳು ಮತ್ತು ತರ್ಜನಿ ಬೆರಳುಗಳ ನಡುವೆ ಸಿಗರೇಟು ಹಿಡಿದು ಹಸ್ತವನ್ನು ಮುಷ್ಟಿಕಟ್ಟಿ ಅವರು ಧಂ.. ಎಳೆಯುತ್ತಿದ್ದುದನ್ನೇ ನೋಡುವುದೇ ನಮಗೆ ಒಂದು ಮಜಾ..! ಸಿಗರೇಟ್ ಬೇಕೆನಿಸಿದವರು ಅವರ ಹತ್ತಿರ ಕುಳಿತರೆ ಸಾಕು…! ಅವರಿಗೂ ಸಿಗರೇಟ್ ಸಮಾರಾಧನೆ ಆಗುತ್ತಿತ್ತು.

ಸುಬ್ಬರಾಯರು ಸದಾ ನಗುಮುಖ ಮತ್ತು ಪರೋಪಕಾರಿ ಸ್ವಭಾವದವರು. ಇವರ ಮನೆ ಶೃಂಗೇರಿ ಪೇಟೆಯ ಬಸ್ ನಿಲ್ದಾಣದ ಪಕ್ಕದಲ್ಲೇ ಇತ್ತು. ಅವರ ಮನೆಯ ಪಕ್ಕದಲ್ಲೇ, ಅವರ ಆಡಳಿತಕ್ಕೆ ಸೇರಿದ ಕಲ್ಲಿನಲ್ಲಿಯೇ ಕಟ್ಟಿದ ಸುಂದರ ದೇವಸ್ಥಾನ ಇತ್ತು. ಆ ದೇವಸ್ಥಾನದಲ್ಲಿ ಯಾವ ದೇವರ ಮೂರ್ತಿ ಇತ್ತು ಎಂದು ನನಗೆ ಈಗ ನೆನಪಿಲ್ಲ. ಊರವರೆಲ್ಲ ಆ ದೇವಸ್ಥಾನವನ್ನು ಕಲ್ಲು ದೇವಸ್ಥಾನ ಎನ್ನುತ್ತಿದ್ದರು. ಹಾಗಾಗಿ, ನಮ್ಮ ಸುಬ್ಬರಾಯರನ್ನು ಎಲ್ಲರೂ ಕಲ್ಲು ದೇವಸ್ಥಾನ ಸುಬ್ಬರಾಯರು ಎಂತಲೇ ಕರೆಯುತ್ತಿದ್ದರು. ತಾನು ಮನೆಯಲ್ಲಿ ಇದ್ದಾಗ ಸುಬ್ಬರಾಯರು ಶಾಸ್ತ್ರೋಕ್ತವಾಗಿ ಆ ದೇವಸ್ಥಾನದಲ್ಲಿನ ದೇವರಪೂಜೆಯನ್ನು ಶೃದ್ಧೆಯಿಂದ ಮಾಡುತ್ತಿದ್ದರು.

ಸುಬ್ಬರಾಯರ ನಿತ್ಯ ವೃತವೆಂದರೆ, ಅವರು ಮನೆಯಲ್ಲಿ ಅತಿಥಿ ಅಭ್ಯಾಗತರಿಲ್ಲದೆ ಒಬ್ಬರೇ ಎಂದೂ ಊಟ ಮಾಡಿದುದೇ ಇಲ್ಲ…! ಸುಬ್ಬರಾಯರ ಮನೆಯಲ್ಲಿ ಯಾವಾಗಲೂ ಅತಿಥಿಗಳು ಇದ್ದೇ ಇರುತ್ತಿದ್ದರು. ಅವರ ಮನೆಗೆ ಅದೆಷ್ಟು ಜನ ಬಂದರೂ ಅವರಿಗೆ ಸಂತೋಷವಂತೆ. ಅತಿಥಿ ದೇವೋ ಭವ ಎನ್ನುವ ನಾಣ್ಣುಡಿಯು ಅವರ ಮನೆಯಲ್ಲಿಯೇ ಹುಟ್ಟಿರಬೇಕು..! ಎಂದು ಅವರನ್ನು ಬಲ್ಲವರು ಹೇಳುತ್ತಿದ್ದರು.

ಶೃಂಗೇರಿ ಒಂದು ಪುಣ್ಯಕ್ಷೇತ್ರ ಹಾಗೂ ತಾಲ್ಲೂಕು ಪಟ್ಟಣ. ಸುತ್ತುಮುತ್ತಲ ಹಳ್ಳಿಗಳಿಂದ ಕೆಲಸಕಾರ್ಯಗಳಿಗೆ ಬರುವ ಜನರು ಬಸ್ ಇಳಿದು ಸುಬ್ಬರಾಯರ ಮನೆಯ ಮುಂದೆ ಹಾದು ಹೋಗುತ್ತಿದ್ದರೆ, ಸುಬ್ಬರಾಯರು ಓ..! ಇವರೇ, ಬನ್ನಿ ಒಂದು ಮಿನಿಟು, ಬಾಯಾರಿಕೆ ಕುಡಿದು ಮುಂದೆ ಹೋಗಬಹುದು ಎನ್ನುತ್ತಿದ್ದರಂತೆ. ಸರಕಾರೀ ಆಫೀಸುಗಳಲ್ಲಿನ ಕೆಲಸಗಳಿಗೆ ಬಂದವರು ಸುಬ್ಬರಾಯರೇ, ಆಮೇಲೆ ಬಂದರಾಗದೇ? ಸರಕಾರೀ ಆಫೀಸಿನಲ್ಲಿ ಸ್ವಲ್ಪ ಕೆಲಸವಿತ್ತು ಅಂದರೆ, ಬನ್ನಿ, ಬಾಯಾರಿಕೆ ಕುಡಿದು ಹೋಗೋಣ, ನಾನೂ ನಿಮ್ಮ ಜತೆಗೆ ಬರುತ್ತೇನೆ ಎಂದು ಕರೆದು ಅತಿಥಿಗಳಿಗೆ ಕಾಫಿ ಕುಡಿಸಿ, ತಾಂಬೂಲದ ಹರಿವಾಣ ಮುಂದಿಟ್ಟು, ಅವರ ಕುಶಲ ವಿಚಾರಿಸಿದ ನಂತರ, ಅವರ ಜತೆಗೇ ಹೋಗಿ ಅವರ ಕೆಲಸ ಮಾಡಿಸಿಕೊಟ್ಟು ಅವರನ್ನು ಮಧ್ಯಾಹ್ನದ ಊಟಕ್ಕೆ ತನ್ನ ಮನೆಗೆ ಕರೆದುಕೊಂಡೇ ಬರುತ್ತಿದ್ದರು.

ಸುಬ್ಬರಾಯರ  ಪರಿಚಯವಿಲ್ಲದ ಸರಕಾರಿ ಅಧಿಕಾರಿ ಶೃಂಗೇರಿಯಲ್ಲಿರಲಿಲ್ಲ. ಎಲ್ಲರೂ ಅವರ ನಿಸ್ವಾರ್ಥ ಆತಿಥ್ಯ ಪಡೆದವರೇ ಆಗಿರುತ್ತಿದ್ದರು. ಹಾಗಾಗಿ, ಸುಬ್ಬರಾಯರು ಯಾರ ಜತೆಗಾದರೂ ಸರಕಾರೀ ಅಫೀಸುಗಳಿಗೆ ನಡೆದರೆ, ಅವರ ಕೆಲಸ ಸುಲಭವಾಗಿ ಆಗಿಬಿಡುತ್ತಿತ್ತು. ಹೀಗಾಗಿ ಸರಕಾರೀ ಕೆಲಸ ಆಗಬೇಕಿದ್ದವರು, ನೇರವಾಗಿ ಸುಬ್ಬರಾಯರ ಮನೆಗೆ ಬರುವುದೂ ವಾಡಿಕೆ ಆಗಿತ್ತು. ಇದರಿಂದ ಸುಬ್ಬರಾಯರಿಗೆ ಸಂತೋಷವೇ ವಿನಃ ಬೇಸರ ಎಂದೂ ಅಗುತ್ತಿರಲಿಲ್ಲ. ಅತಿಥಿಗಳ ಕೆಲಸಮಾಡಿಸಿಕೊಟ್ಟ ಮೇಲೆ ಅವರನ್ನು ತಮ್ಮ ಮನೆಗೆ ಕರೆದು, ಅವರಿಗೆ ಚೌಕ ಶುದ್ಧ ಭೋಜನವಿಕ್ಕಿ ಸಂತೋಷಪಡುತ್ತಿದ್ದರು.

ಸುಬ್ಬರಾಯರಿಗೆ ಜಾತಿಮತ ಬೇಧವಾಗಲೀ,  ಬಡವಬಲ್ಲಿದ ಎನ್ನುವ ಬೇಧವಾಗಲೀ ಇರಲಿಲ್ಲ. ಅವರಿಗೆ ಅತಿಥಿಯೇ ಸಾಕ್ಷಾತ್ ಪರಬ್ರಹ್ಮ! ಅವರ ಪತ್ನಿಯು ಕೂಡ ಅವರಿಗೆ ಅನುಕೂಲೆಯಾಗಿ ಇದ್ದರು. ಯಾರೇ ಬರಲಿ, ಎಷ್ಟು ಜನರೇ ಬರಲಿ, ಅವರಿಗೆ ಊಟ, ತಿಂಡಿ, ಕಾಫಿ, ಶರಬತ್ತು ಕೊಟ್ಟು ಸತ್ಕರಿಸುವ ಸಾಧ್ವಿ ಅವರು. ಎಷ್ಟೋಸಲ ಮನೆಗೆ ಊಟದ ಹೊತ್ತಿಗೆ ಹತ್ತಾರು ಜನರನ್ನು ಸುಬ್ಬರಾಯರು ಊಟಕ್ಕೆ ಕರೆದುಕೊಂಡು ಬರುತ್ತಿದ್ದರಂತೆ! ಮನೆಯಲ್ಲಿ ಅತಿಥಿಗಳ ಸತ್ಕಾರಕ್ಕೆ ಬೇಕಾದ ಅಡುಗೆಯ ಸಾಮಗ್ರಿಗಳು ಕಡಿಮೆ ಬಿದ್ದರೆ, ತಮ್ಮ ಗಂಡನನ್ನು ಗುಟ್ಟಾಗಿ ಒತ್ತಟ್ಟಿಗೆ ಕರೆದು, ಮನೆಗೆ ತರಬೇಕಾದ ಸಾಮಗ್ರಿಗಳ ಪಟ್ಟಿ ಹೇಳುತ್ತಿದ್ದರಂತೆ. ಸುಬ್ಬರಾಯರು ಸದ್ದಿಲ್ಲದೆ ದೇವಸ್ಥಾನದ ಬಾಗಿಲಿನಿಂದಲೇ ದಿನಸಿ ಅಂಗಡಿಗೆ ಧಾವಿಸಿ, ಸಾಮಗ್ರಿಗಳನ್ನು ತಂದು ಹಿಂಬಾಗಿಲಿನಿಂದಲೇ ಅಡುಗೆಮನೆಗೆ ಪೂರೈಸಿ, ಅತಿಥಿಗಳಿಗೆ ಈ ವಿಚಾರ ಗೊತ್ತಾಗದ ರೀತಿಯಲ್ಲಿ, ಅವರ ಎದುರು ಏನೂ ತೋರಿಸಿಕೊಳ್ಳದೇ, ಸಹಜವಾಗಿ ಎನ್ನುವಂತೆ  ಅಡುಗೆಮನೆಯಿಂದ ಮನೆಯ ಹೊರಚಾವಡಿಗೆ ಬರುತ್ತಿದ್ದರಂತೆ. ಅಜೀವಪರ್ಯಂತವೂ ಸುಬ್ಬಾರಾಯರ ಸತತವಾದ ಅತಿಥಿ ಸತ್ಕಾರವು ಕುಂದಿಲ್ಲದೆ ಮುಂದುವರಿಯಿತಂತೆ.

ಸುಬ್ಬರಾಯರ ಅಚ್ಚುಮೆಚ್ಚಿನ ಹವ್ಯಾಸ ಎಂದರೆ ಯಕ್ಷಗಾನ. ಅವರಿಗೆ ಯಕ್ಷಗಾನದ ಹೆಚ್ಚಿನ ಪ್ರಸಂಗಗಳ ಪದಗಳೆಲ್ಲವೂ ಬಾಯಿಪಾಠ ಬರುತ್ತಿದ್ದುವು. ಸುಬ್ಬರಾಯರದು ಸ್ವಲ್ಪ ಗಡುಸಾದ ಗಂಡು ಸ್ವರ ಹಾಡುಗಾರಿಕೆಗೆ ಅಷ್ಟು ಹೊಂದಾಣಿಕೆ ಆಗುತ್ತಿರಲಿಲ್ಲ. ಆದ್ದರಿಂದ ಅವರು ಭಾಗವತರಂತೆ ಹಾಡುಗಾರಿಕೆ ಮಾಡುತ್ತಿರಲಿಲ್ಲ. ಸುಬ್ಬಾರಾಯರು ಬಣ್ಣದವೇಷ ಹಾಕಿ ಯಕ್ಷಗಾನ ಪ್ರಸಂಗಗಳಲ್ಲಿ ಅಭಿನಯಿಸುತ್ತಿರಲೂ ಇಲ್ಲ. ಇದಕ್ಕೆ ಕಾರಣ ಯಕ್ಷಗಾನದ ರಂಗಸ್ಥಳದಲ್ಲಿ ವೇಷಧಾರಿಯು ಸಿಗರೇಟು ಸೇದುವ ಹಾಗಿಲ್ಲವಲ್ಲ? ಎಂದು ಅವರನ್ನು ಬಲ್ಲವರು ನಗೆಯಾಡುತ್ತಿದ್ದರು. ಚಿಕ್ಕವಯಸ್ಸಿನಲ್ಲಿ ಸುಬ್ಬರಾಯರು ಹವ್ಯಾಸೀ ಯಕ್ಷಗಾನ ಮೇಳಗಳಲ್ಲಿ ಬಣ್ಣದವೇಷಗಳನ್ನು ಹಾಕುತ್ತಿದ್ದರಂತೆ. ಮುಂದಕ್ಕೆ ಸಿಗರೇಟು ಹವ್ಯಾಸ ಅತಿಯಾದಾಗ, ಬಣ್ಣದ ವೇಷ ಹಾಕುವ ಹವ್ಯಾಸ ಬಿಟ್ಟರು…! ಎಂದು ಅವರನ್ನು ಬಲ್ಲ ಹಿರಿಯರು ಹೇಳುತ್ತಿದ್ದರು.                 ಮಲೆನಾಡಿನಲ್ಲಿ ತಾಳಮದ್ದಳೆ ಅಥವಾ ಜಾಗರ ಎಂದು ಕರೆಯಲ್ಪಡುವ ಯಕ್ಷಗಾನದ ಒಂದು ಆಯಾಮವಿದೆ. ಈ ಕಾರ್ಯಕ್ರಮಗಳಲ್ಲಿ ಬಣ್ಣದವೇಷ ಹಾಕಿ ಕುಣಿಯುವ ಅಥವಾ ಅಭಿನಯಿಸುವ ಕ್ರಮವಿಲ್ಲ. ಹಲವರು ಅರ್ಥಧಾರಿಗಳು ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರು ಹಾಡುವ ಪ್ರಸಂಗದಲ್ಲಿ ಬರುವ ಪಾತ್ರಗಳನ್ನು ವಹಿಸಿಕೊಂಡು, ಭಾಗವತರು ಇಂಪಾಗಿ ಹೇಳುವ ಪ್ರಸಂಗದ ಪದಗಳಿಗೆ ಅರ್ಥಹೇಳುತ್ತಾ ಬಣ್ಣದ ವೇಷಗಳನ್ನು ಹಾಕದೇ ಮತ್ತು ಕುಣಿಯದೇ ಕುಳಿತಲ್ಲೇ ಸಂಬಾಷಣೆ ನಡೆಸುತ್ತಾ ಭಾಗವಹಿಸುತ್ತಾರೆ. ಸ್ವಾರಸ್ಯವಾಗಿ ಅರ್ಥ ಹೇಳುವ ಪಾತ್ರಧಾರಿಗಳಿದ್ದರೆ ಈ ಪ್ರಸಂಗಗಳು ನಡೆಯುವಾಗ ಸಮಯ ಹೋದುದೇ ಸಭಿಕರಿಗೆ ತಿಳಿಯುವುದಿಲ್ಲ. ರಸವತ್ತಾದ ಪ್ರಸಂಗಗಳನ್ನು ಅರ್ಥೈಸುತ್ತಾ ಒಳ್ಳೆಯ ಅರ್ಥಧಾರಿಗಳು ಕುಳಿತರೆ, ರಾತ್ರಿ ಸುಮಾರು ಒಂಬತ್ತಕ್ಕೆ ಶುರುವಾಗುವ ಈ ತಾಳಮದ್ದಳೆಯ ಪ್ರಸಂಗಗಳು ಮರುದಿನದ ಸೂರ್ಯೋದಯದವರೆಗೂ ನಡೆಯುವುವು. ಸಭೆಯಲ್ಲಿ ತಾಳಮದ್ದಳೆಯವರ ಹಿಮ್ಮೇಳಕ್ಕೆ ಭಾಗವತರು ತನ್ನ ಜಾಗಟೆ ಅಥವಾ ತಾಳ ಬಾರಿಸುತ್ತಾ,  ಪ್ರಸಂಗದ ಸೊಲ್ಲುಗಳನ್ನು ಇಂಪಾಗಿ ಹಾಡುತ್ತಾರೆ. ಆಯಾಪಾತ್ರ ವಹಿಸಿರುವ ಅರ್ಥಧಾರಿಗಳು ರಸವತ್ತಾಗಿ ಆ ಪದ್ಯಗಳ ಅರ್ಥಕ್ಕೆ ಸರಿಯಾಗಿ ಸಂಭಾಷಿಸುತ್ತಾ ಪಾತ್ರಗಳನ್ನು ನಿರೂಪಿಸುತ್ತಾರೆ.

ಈ ಯಕ್ಷಗಾನ ತಾಳಮದ್ದಳೆಯ ಕಾರ್ಯಕ್ರಮಗಳು ಹೆಚ್ಚಾಗಿ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ದಕ್ಷಿಣ ಮತ್ತು ಉತ್ತರಕನ್ನಡದ ಜಿಲ್ಲೆಗಳ ಜನರ ಮನೋರಂಜನಾ ಹವ್ಯಾಸ. ವರ್ಷಕ್ಕೆ ಸುಮಾರು ಆರುತಿಂಗಳು ಎಡೆ ಬಿಡದೆ ಮಳೆ ಸುರಿಯುವ ಈ ಊರುಗಳಲ್ಲಿ,  ಈ ತಾಳಮದ್ದಳೆಯ ಕಾರ್ಯಕ್ರಮಗಳು ಮಳೆಗಾಲದ ಮುಖ್ಯ ಮನೋರಂಜನೆ. ಮಳೆಗಾಲ ಕಳೆದ ಮೇಲೆ ಅರ್ಥಧಾರಿಗಳಲ್ಲಿ ಹೆಚ್ಚಿನವರು ಯಕ್ಷಗಾನ ಮೇಳಗಳಲ್ಲಿ ಭಾಗವಹಿಸಿ ಬಣ್ಣದವೇಷ ಹಾಕುವುದೂ ಇದೆ. ಈ ಕಾರ್ಯಕ್ರಮಗಳಿಂದ ಯಕ್ಷಗಾನದ ತಾಲೀಮು ಇವುಗಳಲ್ಲಿ ಭಾಗವಹಿಸುವವರಿಗೆ ಸಿಗುತ್ತದೆ. ಮಲೆನಾಡಿನ ದೊಡ್ಡ ಮನೆಗಳಲ್ಲಿ ಹಬ್ಬಹರಿದಿನಗಳ ರಾತ್ರಿ ಅಥವಾ ಸತ್ಯನಾರಾಯಣ ಪೂಜೆ ಇಲ್ಲವೇ ಹರಿಸೇವೆ ಎನ್ನುವ ಕಾರ್ಯಕ್ರಮಗಳನ್ನು ಆಚರಿಸುವ ರಾತ್ರಿಗಳಲ್ಲಿ, ಈ ಜಾಗರ ಎಂಬ ಕಾರ್ಯಕ್ರಮಗಳು ಕಡ್ಡಾಯವಾಗಿ ಇರುತ್ತಿದ್ದವು.

ಮಲೆನಾಡಿನ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುವ ರಾತ್ರಿ ಈ ತಾಳಮದ್ದಳೆ ಕಾರ್ಯಕ್ರಮ ಇರುವುದು ಸಾಮಾನ್ಯ. ಚಿಕ್ಕಮಕ್ಕಳಾದಿಯಾಗಿ ಊರಜನರೆಲ್ಲರೂ ಒಂದೆಡೆ ಸೇರಿ ತಾಳಮದ್ದಳೆ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ನಾನು ಚಿಕ್ಕವನಿದ್ದಾಗ ಇಂತಹ ಕಾರ್ಯಕ್ರಮಗಳನ್ನು ಬಹಳ ವೀಕ್ಷಿಸಿದ್ದೇನೆ.

ನಾನು ಬಾಲ್ಯದಲ್ಲಿ ಓದಿದ ಕಿನ್ನಿಕಂಬಳದ ಶಾಲೆಯಲ್ಲೂ ತಿಂಗಳಿಗೊಮ್ಮೆ ಇಂತಹಾ ಕಾರ್ಯಕ್ರಮಗಳು ಅಹೋರಾತ್ರಿ ಅಲ್ಲದಿದ್ದರೂ, ಸಾಯಂಕಾಲ ಹೊತ್ತು ನಡೆಯುತ್ತಿದ್ದುವು. ನಮ್ಮ ಉಪಾಧ್ಯಾಯರುಗಳು ಹೆಚ್ಚಾಗಿ ಅರ್ಥಧಾರಿಗಳಾಗಿ ಭಾಗವಹಿಸುತ್ತಿದ್ದರು. ನಾನು ಚಿಕ್ಕಂದಿನಲ್ಲಿ ವೀಕ್ಷಿಸಿ ಆನಂದಪಟ್ಟ ಪರಶುರಾಮ ಕಾಳಗ, ಭೀಷ್ಮ ಪ್ರತಿಜ್ಞೆ, ಕೃಷ್ಣ ಸಂಧಾನ, ವಾಲಿ ವಧೆ, ಲಂಕಾದಹನ, ಭೀಷ್ಮ ಪರ್ವ, ಗದಾಯುದ್ಧ ಮೊದಲಾದ ಪ್ರಸಂಗಗಳನ್ನು ಮರೆಯಲಾರೆ.

ನಮ್ಮ ಸುಬ್ಬರಾಯರು ತಾಳಮದ್ದಲೆಯ ಪ್ರಸಂಗಗಳಲ್ಲಿ ಅರ್ಥೈಸುವುದರಲ್ಲಿ ಹೆಸರುವಾಸಿ. ಅವರು ವಹಿಸುತ್ತಿದ್ದ ವಾಲಿ, ದುರ್ಯೋಧನ, ರಾವಣ, ದ್ರೋಣ, ಅರ್ಜುನ, ಭೀಷ್ಮ, ಭೀಮಸೇನ, ಘಟೋತ್ಕಚ ಮೊದಲಾದ ಪಾತ್ರಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅವರು ಈ ಪ್ರಸಂಗಗಳಲ್ಲಿ ಅರ್ಥೈಸುವ ಪಾತ್ರದ ಒಳಗೇ ಪ್ರವೇಶಿಸಿ, ಅಂತೆಯೇ ಸಂಭಾಷಿಸುತ್ತಿದ್ದರು. ಭಾಗವತರು ಹಾಡುತ್ತಿರುವ ಸಮಯ ಪಕ್ಕಕ್ಕೆ ಹೋಗಿ ತಮ್ಮ ಧೂಮಪಾನದಲ್ಲೂ ತೊಡಗುತ್ತಿದ್ದರು. ಈ ಧೂಮಪಾನ ಚಟವು ಅವರ ಅರ್ಥಧಾರಿಕೆಗೆ ಎಂದೂ ಅಡಚಣೆ ಉಂಟುಮಾಡುತ್ತಿರಲಿಲ್ಲ, ಅದು ಅವರಿಗೆ ಹೆಚ್ಚಿನ ಉಮೇದನ್ನು ಕೊಡುತ್ತಿತ್ತೆಂದು ಅವರ ಸರೀಕರು ಇಂದಿಗೂ ಹೇಳುತ್ತಾರೆ.

ಸುಬ್ಬರಾಯರ ಇನ್ನೊಂದು ಚಟವೆಂದರೆ ಇಸ್ಪೀಟು! ಅವರನ್ನು ಬಲ್ಲವರಾದ ನಾವು ಅವರ ಈ ಚಟವನ್ನು ಮುಚ್ಚಿಟ್ಟರೆ, ಅದು ಸಾಧುವಾಗಲಿಕ್ಕಿಲ್ಲ! ಜಾಗರ ಇಲ್ಲದ ರಾತ್ರಿಗಳಲ್ಲಿ ಮತ್ತು ಸಾಯಂಕಾಲದ ಹೊತ್ತು ಸುಬ್ಬರಾಯರಿಗೆ ಇಸ್ಪೀಟೇ ಸಂಗಾತಿ. ಇಸ್ಪೀಟು ಪ್ರಿಯನಾದರೂ ಅವರು ದೊಡ್ಡ ಜೂಜುಕೋರರಾಗಿರಲಿಲ್ಲ. ಆಟಕ್ಕೆ ಉಮೇದು ಬರಲು ತಕ್ಕಷ್ಟೇ ಸಣ್ಣ ಪ್ರಮಾಣದಲ್ಲಿ ಬಾಜಿ ಒಡ್ಡಿ ಅವರು ಇಸ್ಪೀಟು ಆಡುತ್ತಿದ್ದರು. ಈ ಇಸ್ಪೀಟು ಪ್ರಸಂಗಗಳೂ ಸುಬ್ಬರಾಯರ ಹಾಸ್ಯ ಚಟಾಕಿಗಳಿಂದೊಡಗೂಡಿ ಅಹೋರಾತ್ರಿ ನಡೆಯುತ್ತಿದ್ದುದೇ ಹೆಚ್ಚು. ರಾತ್ರಿಯಿಡೀ ನಡೆಯುವ ಇಸ್ಪೀಟು ಆಟದ ಮಧ್ಯೆ ಮಧ್ಯೆ ಯಕ್ಷಗಾನದ ಪದ್ಯಗಳೂ ಮತ್ತು ಅವುಗಳ ರಸವತ್ತಾದ ಅರ್ಥಗಳು ಮೂಡುತ್ತಿದ್ದುವಂತೆ. ಇಸ್ಪೀಟಾಟ ನಡೆಯುತ್ತಿದ್ದರೆ ಮನೆಯ ಹೆಂಗಸರು ಮಕ್ಕಳು ಕೂಡಾ, ಅವರ ರಸವತ್ತಾದ ಮಾತುಗಳು ಅಥವಾ ಹಾಸ್ಯ ಚಟಾಕಿಗಳನ್ನು ಕೇಳಲು, ನಿದ್ರಿಸದೇ ಕುಳಿತು ಕೇಳುತ್ತಿದ್ದರಂತೆ. ಈ ಕಾರಣದಿಂದ ಅಲ್ಲಿರುವ  ಕ್ರೀಡಾಪಟುಗಳಿಗೆ ಬೇಕಾದ ಚಹಾ ಅಥವಾ ಕಾಫಿ ಸರಬರಾಜಿಗೆ ಅಡ್ಡಿ ಉಂಟಾಗುತ್ತಿರಲಿಲ್ಲವಂತೆ….!

ಸುಬ್ಬರಾಯರಿಗೆ ನಿದ್ರಿಸುವ ಅಭ್ಯಾಸವೇ ಕಡಿಮೆ. ಏಷ್ಟು ದಿನ ನಿದ್ರೆಬಿಟ್ಟರೂ, ಬಹಳ ಲವಲವಿಕೆಯಿಂದ ಇರುವ ವ್ಯಕ್ತಿ ಅವರಾಗಿದ್ದರು. ಸುಬ್ಬರಾಯರು ಪ್ರವೇಶಿಸಿದ ಊರೇ ಗೆಲುವಾಗಿ,  ಅವರೊಡನೆ ಯಕ್ಷಗಾನ ಅಥವಾ ಇಸ್ಪೀಟು ಆಟದಲ್ಲಿ ತಲ್ಲೀನವಾಗಿ ಬಿಡುತ್ತಿದ್ದ ಸಂಗತಿ ಜನಜನಿತವಾಗಿತ್ತು. ಹೀಗೆ ಜನಪ್ರಿಯ ವ್ಯಕ್ತಿ ಅನ್ನಿಸಿಕೊಂಡಿದ್ದ ಅವರಿಗೆ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಮತ್ತು ಉತ್ತರಕನ್ನಡ ಜಿಲ್ಲೆಯ ಅಸಂಖ್ಯ ಮಹನೀಯರುಗಳ ಪರಿಚಯವಿತ್ತು. ಈ ಜಿಲ್ಲೆಗಳ ಹೆಸರಾಂತ ಮಹನೀಯರುಗಳು ತಮ್ಮಲ್ಲಿಯ ವಿಶೇಷ ಸಮಾರಂಭಗಳನ್ನು ನಡೆಸುವ ಮೊದಲೇ ಕಲ್ಲು ದೇವಸ್ಥಾನ ಸುಬ್ಬರಾಯರರಿಗೆ ಅಗ್ರ ವೀಳ್ಯ (ಅಂದರೆ ಮೊದಲ ಆಮಂತ್ರಣ) ಕಳುಹಿಸಿಕೊಡುತ್ತಿದ್ದರಂತೆ..! ಎಲ್ಲರೂ ಸುಬ್ಬರಾಯರನ್ನು ಮನೆಗೆ  ಆಹ್ವಾನಿಸುವವರೇ..! ಸುಬ್ಬರಾಯರು ಚಿತ್ತೈಸಿದೊಡನೆ ಅವರುಗಳ ಮನೆಗಳಲ್ಲಿ ಒಂದೋ ಎರಡೋ ಜಾಗರ (ತಾಳಮದ್ದಲೆ) ಸಮಾರಂಭಗಳು ನಡೆದೇ ನಡೆಯುವವು ಎಂಬುದು ಆ ಊರವರಿಗೆ ಖಂಡಿತವಾಗುತ್ತಿತ್ತು..! ಸುಬ್ಬರಾಯರನ್ನು ಕಂಡರೆ ಯಕ್ಷಗಾನ ಪ್ರಿಯರು ಹೇಗೆ ಒಟ್ಟಾಗುತ್ತಿದ್ದರೋ ಅದೇರೀತಿ ಇಸ್ಪೀಟು ಬಳಗದವರೂ ಕಲೆಯುತ್ತಿದ್ದರು. ಅಂತೂ ಸುಬ್ಬರಾಯರ ಇದ್ದ ಊರುಗಳಲ್ಲಿ ‘ಯಕ್ಷಗಾನದ ಒಡ್ಡೋಲಗ ಮತ್ತು ‘ಇಸ್ಪೀಟಿನ ರಂಗಸ್ಥಳ ಎರಡೂ ಖಾಯಂ! ಎಂಬ ವದಂತಿ ಪ್ರಚಲಿತವಾಗಿತ್ತು.

ಸುಬ್ಬರಾಯರದು ವಿಶ್ವಾಸೀ ಮನೋಭಾವ.  ಯಾವ ಊರಿಗೆ ಹೋದರೂ ಅವಸರ ಅವಸರವಾಗಿ ಹೊರಟುಬರುವ ಜಾಯಮಾನ ಅವರದಲ್ಲ. ಸುತ್ತುಮುತ್ತಲಿನ ಪರಿಚಯಸ್ಥರನ್ನು ಮಾತನಾಡಿಸಿಕೊಂಡೇ ಊರಿಗೆ ಮರಳುತ್ತಿದ್ದರು.

ಹಿಂತಿರುಗಿ ಊರಿಗೆ ಬರುವಾಗ ಜತೆಯಲ್ಲಿ ಹೊಸ ಪರಿಚಯಸ್ಥರನ್ನು ತಮ್ಮ ಊರು ತೋರಿಸಲು ಕರೆದುಕೊಂಡು ಬರುವುದು ಕೂಡಾ ಅವರ ಹವ್ಯಾಸ. ಅವರ ಮನೆಗೆ ಬಂದ ಅತಿಥಿಗಳು ಅವರ ಮನೆಯಲ್ಲಿ ವಾರಗಟ್ಟಲೆ ತಂಗಿರುತ್ತಿದ್ದರು. ಕಲ್ಲು ದೇವಸ್ಥಾನ ಸುಬ್ಬರಾಯರ ಮನೆಯ ರಾಜೋಪಚಾರಗಳನ್ನು ಸ್ವೀಕರಿಸುತ್ತಾ, ಶೃಂಗೇರಿಕ್ಷೇತ್ರ ಮತ್ತು ಸುತ್ತುಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಾದ ಹರಿಹರಪುರ, ಕಿಗ್ಗ (ಋಶ್ಯಶೃಂಗಪುರ) ಗಂಗಾಮೂಲ ಮೊದಲಾದುವನ್ನು ನೋಡಿಕೊಂಡೇ ನಿಧಾನವಾಗಿ ತಮ್ಮ ಊರಿಗೆ ಮರಳುತ್ತಿದ್ದರು.

ಅದೇ ರೀತಿ ನಮ್ಮ ಸುಬ್ಬರಾಯರು ಯಾವ ಊರಿಗೆ ಹೋದರೂ, ಅವರನ್ನು ಕೂಡಲೇ ಹೊರಡಲು ಅವರ ಮಿತ್ರಬಾಂಧವರು ಬಿಡುತ್ತಿರಲಿಲ್ಲ. ಅವರ ಯಕ್ಷಗಾನ ತಾಳಮದ್ದಳೆಯಿಂದ ಪ್ರಭಾವಿತರಾದ ಅನೇಕರು ಅವರನ್ನು ನಮ್ಮ ಊರಿಗೆ ಬರಲೇಬೇಕು! ಎಂದು ಒತ್ತಾಯದಿಂದ ಕರೆದುಕೊಂಡೇ ಹೋಗುತ್ತಿದ್ದರು. ಹೊಸ ಪರಿಸರದಲ್ಲಿ ಒಂದೆರಡು ಜಾಗರ, ಕೆಲವು ಅಹೋರಾತ್ರಿಯ ಇಸ್ಪೀಟಿನ ಆಖಾಡ ಮುಗಿಸಿ ಸುಬ್ಬರಾಯರು ಹೊರಡಬೇಕಾದರೆ ನಾಲ್ಕಾರು ದಿನಗಳೇ ಕಳೆಯುತ್ತಿದ್ದುವು.

ಬಾಳೆಹೊಳೆಗೆ ಬಂದಾಗ ಸುಬ್ಬರಾಯರು ನನ್ನ ಮಾವನವರಾದ ದಿವಂಗತ ರಘುಪತಿ ಹೆಬ್ಬಾರರ ಪರಿಚಯಸ್ಥರಾದುದರಿಂದ ನಮ್ಮಲ್ಲಿಗೆ ಬಂದು, ನಮ್ಮನ್ನೆಲ್ಲಾ ವಿಶ್ವಾಸದಿಂದ ಮಾತನಾಡಿಸಿಕೊಂಡು ಹೋಗುತ್ತಿದ್ದರು. ಹೆಚ್ಚಾಗಿ ನಮ್ಮಲ್ಲಿಗೆ ಪೂರ್ವಾಹ್ನದಲ್ಲಿಯೇ ಬಂದು, ಮಧ್ಯಾಹ್ನ ನಮ್ಮಲ್ಲಿ ಊಟಮಾಡಿ, ಒಂದು ಸಣ್ಣ ನಿದ್ದೆ ತೆಗೆದು, ಸಾಯಂಕಾಲದ ಕಾಫಿ ಕುಡಿದು ಹೊರಡುತ್ತಿದ್ದರು. ಅವರು ಸಾಯಂಕಾಲ ನಮ್ಮಲ್ಲಿ ಮೊಕ್ಕಾಂ ಮಾಡುತ್ತಿರಲಿಲ್ಲ. ನಾನು ಎಷ್ಟು ಯಕ್ಷಗಾನಪ್ರಿಯನೋ, ಅಷ್ಟೇ ಇಸ್ಪೀಟ್ ದ್ವೇಷಿ ಎಂಬುದೇ ಇದಕ್ಕೆ ಕಾರಣ..! ನಾನು ನಮ್ಮ ಮನೆಯೊಳಗೆ ಇಸ್ಪೀಟಿಗೆ ಪ್ರವೇಶವಿಲ್ಲ ಎನ್ನುವ ಪೈಕಿಯಾದರೂ, ನನ್ನ ಮೇಲಿನ ಪ್ರೀತಿವಿಶ್ವಾಸಗಳಿಂದ ಸುಬ್ಬರಾಯರು ನಮ್ಮ ಮನೆಗೆ ವರ್ಷಕ್ಕೆ ಒಂದೆರಡುಬಾರಿ ಬಂದು, ನಮ್ಮ ಆತಿಥ್ಯ ಸ್ವೀಕರಿಸಿ, ನಮ್ಮನ್ನೆಲ್ಲಾ ಪ್ರೀತಿಯಿಂದ ಮಾತನಾಡಿಸಿ, ನಮ್ಮನ್ನು ತಪ್ಪದೆ ಅವರ ಶೃಂಗೇರಿಯ ಮನೆಗೆ ಆಹ್ವಾನಿಸಿ ಹೋಗುತ್ತಿದ್ದರು.

ಅವರು ನಮ್ಮ ಕಡೆಗೆ ಬಂದಾಗ ನಮ್ಮೂರ ಫಾಸಲೆಯಲ್ಲಿಯೇ ಅವರ ಜಾಗರ ಮತ್ತು ಇಸ್ಪೀಟಿನ ಕಾರ್ಯಕ್ರಮಗಳು ಬಹಳಕಡೆ ನಡೆಯುತ್ತಿದ್ದುವು. ತಮ್ಮ ಮಾತುಗಾರಿಕೆಯಿಂದ ಸುಬ್ಬರಾಯರು ನಿಜಜೀವನದಲ್ಲೂ ಬಹಳ ಮಂದಿಯನ್ನು ಆಕರ್ಷಿಸುತ್ತಿದ್ದರು. ಅವರು ಬಂದಾಗ ಊರಿಗೆ ಊರೇ ಗೆಲುವಾಗಿ ಇರುತ್ತಿತ್ತು! ಅವರ ಒಂದೆರಡು ಅರ್ಥಗಾರಿಕೆಯ ಪಾತ್ರಗಳನ್ನು ವೀಕ್ಷಿಸುವ ಭಾಗ್ಯ ನನಗಿತ್ತು ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ.

ಅವರು ಅಂತಹಾ ಆಸ್ತಿವಂತರು ಅಥವಾ ಹಣವಂತರು ಆಗಿರದಿದ್ದರೂ, ಬಹು ಜನಪ್ರಿಯ ವ್ಯಕ್ತಿ. ಅವರ ಆತಿಥ್ಯ ಅನುಭವಿಸದ ಪರಿಚಯಸ್ಥರು ಬಹಳ ವಿರಳ. ಕರಾವಳಿ ಮತ್ತು ಮಲೆನಾಡಿನ ಜನರು ಈಗಲೂ ಕಲ್ಲು ದೇವಸ್ಥಾನದ ಸುಬ್ಬರಾಯರನ್ನು ನೆನಪಿಸಿಕೊಳ್ಳುತ್ತಾರೆ. ಸುಬ್ಬರಾಯರ ಮತ್ತು ಅವರ ಸಂಸಾರದವರ ನಗುಮೊಗದ ಉಪಚಾರ ಯಾರೂ ಮರೆಯಲು ಸಾಧ್ಯವಿಲ್ಲ. ಅವರ ಸ್ಪಷ್ಟವಾದ ಮಾತಿನ ಯಕ್ಷಗಾನದ ಅರ್ಥಗಾರಿಕೆಯು ಅವರ ಶ್ರೋತೃಗಳ ಮನದಲ್ಲಿ ಅಚ್ಚಳಿಯದೆ ಇಂದಿಗೂ ನಿಂತಿದೆ. ಸುಬ್ಬರಾಯರ ಕರ್ಣನ ಪಾತ್ರವನ್ನು ಕರಾವಳಿಯ ಜನರು ಮತ್ತು ಮಲೆನಾಡಿಗರು ಮರೆಯುವಂತೆಯೇ ಇಲ್ಲ. ಅವರ ಕರ್ಣನ ಪಾತ್ರ ಯಾವಾಗಲೂ ಜನಪ್ರಿಯವಾಗಿತ್ತು.

ಸುಬ್ಬರಾಯರ ಮಧ್ಯಮ ವಯಸ್ಸಿನಲ್ಲಿ ಒಂದುದಿನ ಬಹು ವಿಚಿತ್ರವಾದ ಸಂಗತಿಯೊಂದು ನಡೆಯಿತಂತೆ. ಅದರ ಬಗ್ಗೆ ಈಗಲೂ ಜನ ಆಡಿಕೊಳ್ಳುತ್ತಾರೆ. ಸುಬ್ಬರಾಯರು ಶೃಂಗೇರಿಯ ಹತ್ತಿರದ ಒಂದು ಊರಿನಲ್ಲಿ ತಾಳಮದ್ದಳೆಯ ಪ್ರಸಂಗದಲ್ಲಿ ಯುದ್ಧಪರ್ವದ ಕರ್ಣನ ಪಾತ್ರ ವಹಿಸಿದ್ದರಂತೆ. ಆದಿನದ ಬೆಳಗಿನಜಾವ ಸಮಯದಲ್ಲಿ,  ಕರ್ಣನು ಯುದ್ಧದಲ್ಲಿ ಅಕಾಲಿಕ ಮರಣ ಹೊಂದಿದ ತನ್ನ ಮಗ ವೃಷಸೇನನ ಮರಣವಾದ ಸುದ್ದಿ ಕೇಳಿ ಪ್ರಲಾಪಿಸುದುದನ್ನು ಅವರ ಅಂದಿನ ಶ್ರೋತೃಗಳು ಇಂದಿಗೂ ಮರೆತಿಲ್ಲ! ಅಂದಿನ ಅವರ ಕರ್ಣ ಪಾತ್ರದ ದುಃಖದ ಆಲಾಪ ಅಷ್ಟು ಮನೋಜ್ಞವಾಗಿ ಮೂಡಿಬಂದಿತ್ತಂತೆ!  ಸಭೆಗೆ ಸಭೆಯೇ ಅವರ ಆಲಾಪವನ್ನು ಕೇಳಿ ಕಣ್ಣೀರಿಟ್ಟರಂತೆ!

ಸುಬ್ಬರಾಯಯರು ಪ್ರಸಂಗ ಮುಗಿಸಿ ತಮ್ಮ ಮನೆಗೆ ಲಗುಬಗೆಯಿಂದ ಹೊರಟರಂತೆ! ಅವರ ಮಗನಿಗೆ ಅಂದು ಸ್ವಲ್ಪ ಹುಶಾರಿಲ್ಲ ಎಂಬುದೇ ಅವರ ಆತುರಕ್ಕೆ ಕಾರಣ ಆಗಿತ್ತಂತೆ. ಏನೋ ಸ್ವಲ್ಪ ಜ್ವರ ಬಂದು ಅವರ ಜೇಷ್ಠ ಪುತ್ರ ಮಲಗಿದ್ದನಂತೆ. ಆತನ ಆರೋಗ್ಯ ಹೇಗಿದೆಯೋ ಎಂಬ ಚಿಂತೆಯಲ್ಲೇ ಸುಬ್ಬರಾಯರು ಮನೆಗೆ ಹೊರಟರಂತೆ.

ಮನೆಯ ಸಮೀಪ ಹೋಗುತ್ತಲೇ ಅವರಿಗೆ ಗೋಳೋ..! ಎಂಬ ರೋದನ ಕೇಳಿ ಬಂದಿತಂತೆ. ಆ ಬೆಳಗಿನಜಾವದ ತಾಳಮದ್ದಲೆಯ ಪ್ರಸಂಗದಲ್ಲಿ ವೃಷಸೇನನು ಮರಣಿಸಿದ ಸಂದರ್ಭ ಉಂಟಾದಾಗಲೇ, ಸುಬ್ಬರಾಯರ ತರುಣ ಮಗ ಕೂಡಾ ಅಕಾಲಿಕ ಮರಣವನ್ನು ಅಪ್ಪಿದ್ದನಂತೆ! ಆದಿನದ ಪ್ರಸಂಗ ನಿಜಜೀವನದಲ್ಲಿ ಕೂಡಾ ಸುಬ್ಬರಾಯರ ಮಟ್ಟಿಗೆ ನಿಜವಾಗಿತ್ತು!. ಈ ದುಃಖಕರ ಘಟನೆಯ ನಂತರ ಸುಬ್ಬರಾಯರು ಜರ್ಝರಿತರಾದರು! ಆದರೂ, ತಮ್ಮ ಅತಿಥಿಸತ್ಕಾರದ ವ್ರತವನ್ನು ಮುಂದುವರಿಸಿಕೊಂಡೇ ಮುನ್ನಡೆದರು. ಅತಿಥಿಗಳ ಎದುರಿಗೆ ತನ್ನ ಸ್ವಂತದುಃಖವನ್ನು ಸುಬ್ಬರಾಯರು ಎಂದೂ ತೋಡಿಕೊಂಡವರೇ ಅಲ್ಲವಂತೆ! ಅದೇರೀತಿ, ಅವರು ಗೆಳೆಯರ ಬಳಗದ ಎದುರು ಬಲತ್ಕಾರದ ನಗುವನ್ನು ಮುಖದ ಮೇಲೆ ತಂದುಕೊಂಡು ಮಾತನಾಡುತ್ತಿದ್ದರು. ಅವರ ಅವಸಾನದ ತನಕವೂ, ಅವರು ತಾಳಮದ್ದಳೆಯ ಪ್ರಸಂಗಗಳಲ್ಲಿ ಅರ್ಥಧಾರಿಗಳಾಗಿ ಮುಂದುವರಿದರು. ಮುಂದಕ್ಕೆ ಕರ್ಣನ ಪಾತ್ರದ ಅರ್ಥಧಾರಿಗಳಾಗಿ ಮಾತ್ರ ಅವರು ಎಲ್ಲೂ ಭಾಗವಹಿಸಲಿಲ್ಲವಂತೆ!

ಇಂದಿಗೂ ಸುಬ್ಬರಾಯರ ಪ್ರಸ್ತಾಪ ಬಂದಾಗ ಅವರರನ್ನು ಬಲ್ಲ ಜನರು ದಾನಶೂರ ಕರ್ಣನಂತೆ ನಿಜ ಜೀವನದಲ್ಲೂ ಬದುಕಿದ ಜೀವ..! ಎಂದು ನಿಟ್ಟುಸಿರು ಬಿಡುತ್ತಾರೆ. ಅಂತಹಾ ಅವರ ಅಭಿಮಾನಿಗಳಲ್ಲಿ ನಾನೂ ಒಬ್ಬ!

* * *