೧೯೮೦ನೇ ಇಸವಿ. ಅದುತನಕ ಶಿವಮೊಗ್ಗದಲ್ಲಿ ವಾಸವಾಗಿದ್ದ ನಾವು ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಲು ಬೆಂಗಳೂರಿಗೆ ಬರಬೇಕಾಯಿತು. ನಮ್ಮ ದೊಡ್ಡಮಗಳು ರಾಧಿಕ ೧೯೭೨ರಲ್ಲಿ ಹುಟ್ಟಿದಳು. ಅವಳನ್ನು ಶಾಲೆಗೆ ಸೇರಿಸುವ ತನಕ ನಾವು ಬಾಳೆಹೊಳೆಯ ಸುಳಿಮನೆ ಕಾಫಿತೋಟದಲ್ಲಿ ನೆಲೆಸಿದ್ದೆವು. ರಾಧಿಕಾಳಿಗೆ ನಾಲ್ಕುವರ್ಷ ತುಂಬುತ್ತಲೇ ನಾವು ಅವಳ ವಿದ್ಯಾಭ್ಯಾಸದ ಬಗ್ಗೆ ಬಹಳ ಯೋಚಿಸಿದೆವು.

ನಮ್ಮ ತೋಟದ ಪಕ್ಕದಲ್ಲೇ ಕೆಳಭಾಗ ಹೈಯರ್‌ಪ್ರೈಮರಿ ಕನ್ನಡಶಾಲೆ ಇತ್ತು. ನಮ್ಮ ತೋಟದಲ್ಲಿದ್ದ ಮಕ್ಕಳು ಅದೇ ಶಾಲೆಗೆ ಹೋಗುತ್ತಿದ್ದರು. ಏಳನೇ ಕ್ಲಾಸಿನವರೆಗೆ ಆ ಶಾಲೆಯಲ್ಲಿ ಕ್ಲಾಸುಗಳು ನಡೆಯುತ್ತಿದ್ದುವು. ಹೆಡ್‌ಮಾಸ್ಟರ್ ರಂಗಪ್ಪ ಒಳ್ಳೆಯ ಶಿಕ್ಷಕರಾಗಿದ್ದರು. ಅವರ ಸಹಾಯಕ್ಕೆ ಇನ್ನಿಬ್ಬರು ಸಹಾಯಕ ಶಿಕ್ಷಕರಿದ್ದರು. ಈ ಮೂವರು ಮೇಷ್ಟರುಗಳು ಏಳುಕ್ಲಾಸುಗಳನ್ನು ನಿಭಾಯಿಸಬೇಕಿತ್ತು. ಶಿಕ್ಷಕರು ಕಷ್ಟಪಟ್ಟು ಮಕ್ಕಳಿಗೆ ಕಲಿಸಿ ಶಾಲೆಗೆ ಒಳ್ಳೆಯ ಹೆಸರು ತಂದಿದ್ದರು. ನಾನು ಯಾವ ಕೆಲಸ ಮಾಡಬೇಕಾದರೂ ಸ್ವಲ್ಪ ಮುಂದಾಲೋಚನೆ ಮಾಡುವ ಸ್ವಭಾವದವನು. ನನ್ನ ಮಗಳನ್ನು ನಮ್ಮ ತೋಟದ ಪಕ್ಕದ ಶಾಲೆಗೆ ಹಾಕಿದರೆ, ಶಾಲೆಯ ಮಾಸ್ಟರುಗಳು ನನ್ನ ಮಗಳಿಗೆ ಬೈದು ಹೆದರಿಸುವುದಿಲ್ಲ. ಆ ಶಾಲೆಯ ಪ್ರಾರಂಭ ಆಗಬೇಕಿದ್ದರೆ ನಮ್ಮ ಹಿರಿಯರಿಂದ ದೊಡ್ಡ ದೇಣಿಗೆ ಕೊಡಲ್ಪಟ್ಟಿತ್ತು. ವಸತಿಯ ಏರ್ಪಾಡು ಸರಿಯಾಗಿ ಸಿಕ್ಕದೇ ಇನ್ನೊಬ್ಬ ಮೇಷ್ಟರು ನಮ್ಮ ತೋಟದ ಒಂದು ಬಿಡಾರದಲ್ಲಿ ವಾಸವಾಗಿದ್ದರು.

ಹಾಗಾಗಿ, ತಾವು ನಮ್ಮ ಮಕ್ಕಳ ಬಗ್ಗೆ ನಿರ್ದಾಕ್ಷಿಣ್ಯದಿಂದ ವರ್ತಿಸಿ..! ಎಂದು ಕೇಳಿಕೊಂಡರೂ, ನಮ್ಮ ಶಾಲೆಯ ಮೇಷ್ಟ್ರುಗಳು ದಾಕ್ಷಿಣ್ಯದಿಂದ ನಮ್ಮ ಮನೆಯ ಮಕ್ಕಳು ಏನು ತಪ್ಪುಮಾಡಿದರೂ ಬೈದು ಶಿಕ್ಷಿಸಿ ತಿದ್ದುವುದಿಲ್ಲ ಎಂಬ ವಿಚಾರ ನನಗೆ ಮನದಟ್ಟಾಗಿತ್ತು. ಅದಲ್ಲದೆ, ನಮ್ಮ ಮನೆಯ ಮಕ್ಕಳು ನಮ್ಮ ತೋಟದ ಕಾರ್ಮಿಕರ ಮಕ್ಕಳ ಜತೆಗೆ ಶಾಲೆಗೆ ಹೋಗಿ ಸಾಮಾನ್ಯರಂತೆ ಪಾಠ ಕಲಿತರೂ, ನಮ್ಮಲ್ಲಿಯ ಕಾರ್ಮಿಕರ ಮಕ್ಕಳು ನಮ್ಮ ಮನೆಯ ಮಕ್ಕಳಿಗೆ ಸಹಜವಾಗಿ ಗೌರವ ಕೊಡುತ್ತಾರೆ. ಇದರಿಂದ ನಮ್ಮ ಮನೆಯ ಮಕ್ಕಳಿಗೆ (ಅವರಿಗೆ ಅರಿವಿಲ್ಲದಂತೆಯೇ) ಸ್ವಲ್ಪ ಅಹಂಭಾವ ಬೆಳೆಯುವ ಸಾಧ್ಯತೆ ಕೂಡಾ ಇದೆ ಎಂಬ ವಿಚಾರವನ್ನು ಕೂಡಾ ನಾನು ಕಂಡುಕೊಂಡೆ.

ನಾನು ಕಂಡಂತೆ, ನಮ್ಮ ಅಕ್ಕಪಕ್ಕದ ಪ್ಲಾಂಟರುಗಳ ಮಕ್ಕಳು ಸ್ಥಳೀಯ ಶಾಲೆಗಳಲ್ಲಿ ಕಲಿತಾಗ ಪ್ರಾಥಮಿಕ ಶಾಲಾಮಟ್ಟವನ್ನು ಸುಲಭವಾಗಿ ದಾಟುತ್ತಿದ್ದರು. ಹೈಸ್ಕೂಲು ವಿದ್ಯಾಭ್ಯಾಸಕ್ಕಾಗಿ ಅವರು ಪಟ್ಟಣದ ಶಾಲೆ ಸೇರಿದ ಮೇಲೆ, ಅವರು ಪಟ್ಟಣದ ಶಾಲೆಗಳಲ್ಲಿ ಹತ್ತರೊಟ್ಟಿಗೆ ಹನ್ನೊಂದು ಎಂಬಂತಾಗಿ ಉಪಾಧ್ಯಾಯರುಗಳ ಹೆಚ್ಚಿನ ನಿಗಾ ಇಲ್ಲದೆ, ಪದೇ ಪದೇ ನಾಪಾಸಾಗುತ್ತಿದ್ದುದು ನನಗೆ ಗೋಚರವಾಯಿತು. ಕಾಲೇಜು ಮಟ್ಟದ ವಿದ್ಯಾಭ್ಯಾಸದ ಸಮಯದಲ್ಲಿ ಈ ವಿ.ಐ.ಪಿ. ಸ್ವಭಾವಗಳನ್ನು ಒಗ್ಗಿಸಿಕೊಂಡ ಮಕ್ಕಳು ತಮ್ಮ ಪಿ.ಯೂ.ಸಿ ಕ್ಲಾಸುಗಳನ್ನು ದಾಟಲು ಬಹು ಕಷ್ಟಪಡುವುದನ್ನು ಕೂಡಾ ನಾನು ಗಮನಿಸಿದೆ. ಆದ್ದರಿಂದ ೯೫ ಕಿ.ಮೀ. ದೂರದ ಶಿವಮೊಗ್ಗ ಪಟ್ಟಣದಲ್ಲಿ ನನ್ನ ಮಗಳನ್ನು ಶಾಲೆಗೆ ಸೇರಿಸುವ ಪ್ರಯತ್ನಮಾಡಿದೆ.

ನನ್ನ ಮಗಳು ನಾನು ಕಲಿತಂತೆಯೇ ಕನ್ನಡ ಮಾಧ್ಯಮದಲ್ಲಿಯೇ ಕಲಿಯಲಿ! ಎಂದು ಬಯಸಿದರೂ, ನನ್ನ ಹಿತೈಷಿಗಳಲ್ಲಿ ಹೆಚ್ಚಿನವರು ನನ್ನ ಮಗಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಲು ಸಲಹೆಯಿತ್ತರು. ಮುಂದಿನ ಓದಿಗೆ ಸಹಕಾರಿ ಆಗಬಹುದು ಎಂಬ ಆಕಾಂಕ್ಷೆಯಿಂದ ನನ್ನ ಮಗಳನ್ನು ಶಿವಮೊಗ್ಗದ ಮೇರಿ ಇಮ್ಮಾಕ್ಯುಲೇಟ್ ಕಾನ್ವೆಂಟ್‌ಗೆ ಸೇರಿಸಿದೆ.

ನಾಲ್ಕು ವರುಷದ ಚಿಕ್ಕ ಮಗುವನ್ನು ತಾಯಿಯಿಂದ ಅಗಲಿಸಿ ಹಾಸ್ಟೆಲ್‌ನಲ್ಲಿ ಇರಿಸಿ ಓದಿಸಲು ನಾನು ಒಪ್ಪಲಿಲ್ಲ. ಹಾಸ್ಟೆಲ್‌ವಾಸ ಮಾಡಿದ ಚಿಕ್ಕಮಕ್ಕಳಿಗೆ ತಮ್ಮ ಮನೆಯ ಮಾತು, ನಡೆ, ನುಡಿ ಮತ್ತು ಸಂಸ್ಕೃತಿ ರೂಢಿಯಾಗುವುದು ತುಂಬಾ ಕಷ್ಟ. ಹಾಗಾಗಿ, ನಾವು ಶಿವಮೊಗ್ಗದಲ್ಲಿ ಒಂದು ಬಾಡಿಗೆಯ ಬಿಡಾರ ಮಾಡಿದೆವು. ನಗರವಾಸದ ಖರ್ಚುವೆಚ್ಚ ಭರಿಸಿಕೊಳ್ಳಲು ನಾನು ಮೊದಲಿನ ಕೆಲವು ತಿಂಗಳು ತಂಪುಪಾನೀಯಗಳ ಏಜೆನ್ಸಿ ಪಡೆದು ದುಡಿಯುತ್ತಿದ್ದೆ. ತದನಂತರ ಒಂದು ಪಾಲೀಥೀನ್ ಬ್ಯಾಗ್ ತಯಾರಿಸುವ ಒಂದು ಕಾರ್ಖಾನೆಯನ್ನು ನನ್ನ ಮಿತ್ರರ ಸಹಯೋಗದಿಂದ ಕೊಂಡುಕೊಂಡು ನಡೆಸಿದೆ. ವಾರಕ್ಕೆ ಐದುದಿನ ಶಿವಮೊಗ್ಗದಲ್ಲಿ ಮತ್ತು ವಾರಾಂತ್ಯದಲ್ಲಿ ನಮ್ಮ ಸುಳಿಮನೆ ಕಾಫಿತೋಟದಲ್ಲಿ ದುಡಿಯಹತ್ತಿದೆ. ಈ ಎರ್ಪಾಡು ಚೆನ್ನಾಗಿಯೇ ನಡೆಯುತ್ತಿತ್ತು.

೧೯೭೬ರಲ್ಲಿ ನಮ್ಮ ಎರಡನೇ ಮಗಳು ರಚನಾ ಹುಟ್ಟಿದಳು. ರಚನಾಗೆ ನಾಲ್ಕು ವರುಷ ತುಂಬುವಾಗ, ಶಿವಮೊಗ್ಗದ ಕಾನ್ವೆಂಟಿನ ಕನ್ನಡೀಕರಣ ಶುರುವಾಯಿತು. ರಚನಾ ತನ್ನ ಅಕ್ಕ ರಾಧಿಕಾ ಓದುತ್ತಿದ್ದ ಕಾನ್ವೆಂಟ್ ಸೇರಿದರೂ, ಕನ್ನಡ ಮಾಧ್ಯಮದಲ್ಲಿ ಓದಬೇಕಾಯಿತು. ಈ ಅನಿರೀಕ್ಷಿತ ಬದಲಾವಣೆಯಿಂದಾಗಿ ದೊಡ್ಡ ಮಗಳಿಗೆ ಇಂಗ್ಲಿಷ್ ಮಾಧ್ಯಮದ ಓದು ಮತ್ತು ಚಿಕ್ಕವಳಿಗೆ ಕನ್ನಡ ಮಾಧ್ಯಮದ ಓದು ಎಂಬುದು ಖಂಡಿತವಾಯಿತು.

ಮಕ್ಕಳಿಗೆ ಈ ಮಾಧ್ಯಮಗಳ ತಾರತಮ್ಯ ಸೃಷ್ಟಿಸಲು ನಮ್ಮ ಮನಸ್ಸು ಒಪ್ಪದೇ,  ಚೆನ್ನಾಗಿ ನಡೆಯುತ್ತಿದ್ದ ಪ್ಲಾಸ್ಟಿಕ್ ಕಾರ್ಖಾನೆಯನ್ನು ಮಾರಿ, ನಾವು ಅನಾಮತ್ತಾಗಿ ಬೆಂಗಳೂರಿಗೆ  ಬಂದು ನೆಲೆಸಬೇಕಾಯಿತು. ಬೆಂಗಳೂರಿಗೆ ಬಂದು ಮಕ್ಕಳಿಬ್ಬರನ್ನೂ ಅಂಗ್ಲಮಾಧ್ಯಮ ಶಾಲೆಗೆ ಸೇರಿಸಿದ್ದಾಯಿತು. ಬೆಂಗಳೂರಿನಿಂದ ನಮ್ಮ ತೋಟ ೩೪೦ಕಿ.ಮೀ. ದೂರ. ಆದರೂ, ಪ್ರತೀ ವಾರಾಂತ್ಯದಲ್ಲಿ ನಾವು ತೋಟಕ್ಕೆ ಹೋಗಿಬರುತ್ತಿದ್ದೆವು.

ಶಹರಕ್ಕೆ ಬಂದು ನೆಲಸಿದ ಮೇಲೆ ಬೆಂಗಳೂರಿನಲ್ಲಿ ಒಂದು ವ್ಯಾಪ್ತಿ ಬೇಕಲ್ಲವೇ? ದ್ರಾಕ್ಷಿಯ ತೋಟ ಮಾಡೋಣ! ಎಂದು ಆಲೋಚಿಸಿ ಬೆಂಗಳೂರು ಶಹರದ ಆಸುಪಾಸಿನಲ್ಲಿ ಹತ್ತು ಎಕರೆಯಷ್ಟು ಜಮೀನು ಹುಡುಕುವ ಪ್ರಯತ್ನದಲ್ಲಿ ತೊಡಗಿದೆ. ಬೆಂಗಳೂರಿನ ಸುತ್ತಮುತ್ತ ದ್ರಾಕ್ಷಿಬೆಳೆ ಚೆನ್ನಾಗಿಯೇ ಬರುವುದು ಕಂಡುಬಂತು. ಸದಾ ಮೋಡದಿಂದ ಕೂಡಿದ ವಾತಾವರಣ ಇರುವ ಬೆಂಗಳೂರಿನ ಹವಾಮಾನದಲ್ಲಿ ಲಾಭದಾಯಕವಾಗಿ ದ್ರಾಕ್ಷಿ ಬೆಳೆಯಬೇಕಾದರೆ,  ದಿನ ಬಿಟ್ಟು ದಿನ ಎಂಬಂತೆ ಕೀಟನಾಶಕ ಮತ್ತು ರೋಗನಾಶಕ ರಾಸಾಯನಿಕಗಳನ್ನು ಸಿಂಪಡಣೆ ಮಾಡಲೇಬೇಕು ಎಂದು ತಿಳಿದುಬಂತು. ಈ ಅತೀ ಹೆಚ್ಚಿನ ರಾಸಾಯನಿಕ ಬಳಕೆ ನನ್ನ ಮನಸ್ಸಿಗೆ ಒಪ್ಪಿಗೆ ಆಗಲಿಲ್ಲ. ಈ ರಾಸಾಯನಿಕಗಳ ಶೇಷಾಂಶವು ತಿನ್ನುವ ದ್ರಾಕ್ಷಿಹಣ್ಣುಗಳಲ್ಲಿ ಉಳಿದುಕೊಂಡು ಗ್ರಾಹಕರ ಹೊಟ್ಟೆಗೆ ಸೇರುವುದು ಖಚಿತ ಎಂದು ನನಗೆ ಮನವರಿಕೆಯಾಯಿತು. ಈ ವಿಷ ಪ್ರಸರಣ ಬೇಸಾಯದ ಗೊಡವೆ ಬೇಡ ಎಂದು ಬೆಂಗಳೂರಿನ ಆಸುಪಾಸಿನಲ್ಲಿ ತೆಂಗಿನತೋಟ ಮಾಡುವ ಅಥವಾ ಒಳ್ಳೆಯ ತೆಂಗಿನತೋಟ ಸಿಕ್ಕರೆ ಕೊಳ್ಳುವ ಆಲೋಚನೆಮಾಡಿದೆ.

ಒಂದೆರಡು ತಿಂಗಳು ಹುಡುಕಾಟ ಮಾಡಿದರೂ, ಸರಿಯಾದ ಜಮೀನು ಅಥವಾ ತೋಟ ಕಂಡು ಬರಲಿಲ್ಲ. ನಾನು ಒಂದುದಿನ ನನ್ನ ಬ್ಯಾಂಕಿಗೆ ಹೋದಾಗ ನನ್ನ ಗುರುತಿನ ಬ್ಯಾಂಕ್ ಅಧಿಕಾರಿಯೊಬ್ಬರು ನನ್ನೊಂದಿಗೆ ಮಾತನಾಡುತ್ತಾ, ತಮ್ಮ ಹೆಂಡತಿಯ ತಂದೆಯವರು ಒಂದು ಫಸಲಿಗೆ ಬರಲು ಶುರುವಾಗಿದ್ದ ತೆಂಗಿನತೋಟವನ್ನು ಸೋವಿಯಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ಆ ತೋಟ ಬೆಂಗಳೂರುಜಿಲ್ಲೆಯ ಪಕ್ಕದ ಕೋಲಾರ ಜಿಲ್ಲೆಯಲ್ಲಿತ್ತು. ಅದು ಕೋಲಾರ ಜಿಲ್ಲೆಯ ಶಿಡ್ಲಘಟ್ಟ ಎಂಬ ಊರಿನ ಹೊರವಲಯದಲ್ಲಿತ್ತು. ಆ ತೋಟವು ಸ್ವಲ್ಪ ದೂರವಾದರೂ, ಇಪ್ಪತ್ತು‌ಎಕರೆಯಷ್ಟು ವಿಸ್ತೀರ್ಣದ ತೆಂಗಿನತೋಟ ಆದುದರಿಂದ ಪರವಾಗಿಲ್ಲ, ಅದನ್ನು ಕೊಂಡು ಒಳ್ಳೆಯ ನಂಬಿಕಸ್ಥ ಮ್ಯಾನೇಜರನ್ನು ಇಟ್ಟು ನಡೆಸುವ ಧೈರ್ಯ ಮಾಡಿದೆನು. ನನಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನನ್ನ ಅಕ್ಕನಿಗೆ ತೆಂಗಿನ ತೋಟ ಮಾಡಿಕೊಟ್ಟ ಅನುಭವ ಕೂಡಾ ಇದೆ. ಹೇಗೂ ಕಲ್ಪವೃಕ್ಷದ ಬೆಳೆ! ಒಂದು ಕೈ ನೋಡಿಯೇ ಬಿಡೋಣ! ಎಂದು ನಿರ್ಧರಿಸಿ, ಅಡ್ವಾನ್ಸ್ ಕೊಡಬೇಕಾದ ಹಣ ಹಿಡಿದುಕೊಂಡೇ ಶಿಡ್ಲಘಟ್ಟಕ್ಕೆ ಹೋದೆ.

ತೋಟದ ಮಾಲಿಕರು ಶಿಡ್ಲಘಟ್ಟ ಪೇಟೆಯಲ್ಲೇ ವಾಸವಾಗಿದ್ದರು. ಅವರು ಕೂಡಾ ನನ್ನಂತೆ ಮಂಗಳೂರು ಮೂಲದವರು. ಶಿಡ್ಲಘಟ್ಟದ ಬಸ್‌ಸ್ಟಾಂಡ್ ಸಮೀಪದಲ್ಲಿ ಒಂದು ಚಿಕ್ಕ ಉಪಹಾರಗೃಹವನ್ನು ನಡೆಸುತ್ತಿದ್ದರು. ಆ ಸಮಯ, ಹೋಟೆಲ್ ತಿಂಡಿ ಬೆಲೆ ಹೆಚ್ಚಿಸಬಾರದು ಎನ್ನುವ ಚಳವಳಿಯು ನಮ್ಮ ರಾಜ್ಯದಾದ್ಯಂತ ನಡೆಯುತ್ತಿತ್ತು. ಅವರು ವ್ಯಾಪಾರದಲ್ಲಿ ಲಾಭ ಕಾಣದೇ, ಸ್ವಲ್ಪ ಹಣದ ಮುಗ್ಗಟ್ಟಿನಲ್ಲಿ ಇದ್ದಂತೆ ಕಂಡುಬಂತು. ಕಾಲೇಜು ಓದುತ್ತಿದ್ದ ಇಬ್ಬರು ಗಂಡುಮಕ್ಕಳ ಓದಿನ ಖರ್ಚುಗಳ ಪೂರೈಕೆ ಮತ್ತು ಬೆಳೆದುನಿಂತ ಹೆಣ್ಣುಮಕ್ಕಳ ಮದುವೆಮಾಡುವ ಜವಾಬ್ದಾರಿ ಕೂಡಾ ಅವರ ಮೇಲೆ ಇದೆ ಎಂದು ಅವರೊಡನೆ ಸಂಭಾಷಿಸಿದಾಗ ತಿಳಿದುಬಂತು. ನಾನು ಅವರೊಂದಿಗೆ ಮಾತನಾಡುವಾಗಲೇ ಅವರು ಮುಗ್ಧ ಸ್ವಭಾವದ ಸಾಧುಮನುಷ್ಯ ಎಂದು ನನಗೆ ಮನವರಿಕೆಯಾಯಿತು.

ಸುಮಾರು ಹನ್ನೆರಡು ವರ್ಷಗಳಷ್ಟು ಹಿಂದೆ ಅವರು ಆ ತೋಟದ ಜಮೀನುಕೊಂಡು ತೆಂಗಿನಸಸಿ ಇಡಿಸಿದ್ದರಂತೆ. ಜಮೀನಿನಲ್ಲಿ ಭಗೀರಥ ಪ್ರಯತ್ನಮಾಡಿ ನಾಲ್ಕು ಬಾವಿ ತೋಡಿಸಿದ ನಂತರ ಅವರಿಗೆ ಸಾಕಾಗುವಷ್ಟು ನೀರು ಸಿಕ್ಕಿತಂತೆ. ಆ ಬೆಂಗಾಡು ಪ್ರದೇಶದಲ್ಲಿ ತೆಂಗಿನಗಿಡಗಳನ್ನು ನೆಟ್ಟು, ನೀರುಣಿಸಿ ಅವನ್ನು ಪ್ರೀತಿಯಿಂದ ಸಾಕಿದ್ದರಂತೆ. ದಿನಾ ಐದುಮೈಲಿ ಸೈಕಲ್ ತುಳಿದು, ತೋಟಕ್ಕೆ ಹೋಗಿ, ತೆಂಗಿನ ಸಸಿಗಳ ನಿಗಾ ನೋಡಿದ ಕಥೆಯನ್ನು ಅವರು ನನಗೆ ಹೇಳಿದರು. ಹನ್ನೆರಡು ವರ್ಷಗಳಿಂದ ತನ್ನ ವ್ಯಾಪಾರದ ಲಾಭದ ಹಣವನ್ನೆಲ್ಲಾ ಜಮೀನಿಗೆ ಸುರಿದಿದ್ದರು. ಆಗಲೇ, ವ್ಯಾಪಾರಸ್ಥರೊಬ್ಬರು ಅವರ ಆಸ್ತಿಯನ್ನು ಬಹಳ ಸೋವಿಯಾಗಿ ಕೇಳಿ, ಕೊಳ್ಳುವ ಹವಣಿಕೆಯಲ್ಲಿ ಇದ್ದರು. ಪುಣ್ಯವಶಾತ್, ಅವರಿಂದ ಅವರು ಮುಂಗಡ ಪಡೆದು ಮಾರುವುದಾಗಿ ಮಾತು ಕೊಟ್ಟಿರಲಿಲ್ಲ. ಆದರೂ, ಒಂದೆರಡು ದಿನದಲ್ಲಿ ತನ್ನ ಜಮೀನು ಮಾರಾಟ ಮಾಡಿಯೇ ಬಿಡಬೇಕು ಎಂದು ಅವರು ನಿರ್ಧರಿಸಿದಂತೆ ಕಂಡಿತು. ಅವರ ದೊಡ್ಡ ಅಳಿಯನ ಪರಿಚಯಸ್ಥನಾದ ನಾನು, ಜಮೀನನ್ನು ಆ ವ್ಯಾಪಾರಸ್ಥರು ಕೇಳಿದ ಕ್ರಯಕ್ಕೆ ಖರೀದಿಸಿದರೆ ತುಂಬ ಸಂತೋಷ ಅಂದು ಹೇಳಿದರು. ನನಗೆ ಆ ಜಮೀನು ಅಷ್ಟು ಕಡಿಮೆ ಕ್ರಯಕ್ಕೆ ಸಿಕ್ಕುವುದು! ಎಂದು ತಿಳಿದು ಮನದೊಳಗೆ ಸಂತೋಷವುಂಟಾಯಿತು.

ದಯವಿಟ್ಟು ತಮ್ಮ ಜಮೀನನ್ನು ನಮಗೆ ತೋರಿಸಿ ಎಂದೆ. ತೋಟದ ಮಾಲಿಕರನ್ನು ನಾನು ಮತ್ತು ನನ್ನ ಪತ್ನಿ ಸರೋಜಮ್ಮ ನಮ್ಮ ಕಾರಿನಲ್ಲಿ ಕುಳ್ಳಿರಿಸಿಕೊಂಡು, ಅವರ ತೋಟದ ಕಡೆಗೆ ಹೊರಟೆವು. ಊರ ಹೊರಗೆ ಸುಮಾರು ನಾಲ್ಕು ಮೈಲು ಸಾಗುತ್ತಲೇ, ಆ ಬೆಂಗಾಡು ಸೀಮೆಯ ಬಟ್ಟ ಬಯಲು ಜಾಗದಲ್ಲಿ ಆ ಇಪ್ಪತ್ತು‌ಎಕರೆಯ ತೋಟ ನಂದನವನದಂತೆ ನಳನಳಿಸುತ್ತಿರುವುದು ನಮಗೆ ಕಂಡುಬಂತು. ತಂತಿಬೇಲಿಯ ಗೇಟಿನ ಬಳಿ ಕಾರು ನಿಲ್ಲಿಸಿ,  ಅವರೊಡನೆ ಆ ತೋಟವನ್ನು ನಾವು ಸುತ್ತಿದೆವು.

ವಿದ್ಯುತ್‌ಪಂಪು ಅಳವಡಿಸಿದ ಬ್ರಹ್ಮಾಂಡವಾದ ನಾಲ್ಕು ಮಟ್ಟೆ ಬಾವಿಗಳನ್ನು ಮತ್ತು ಭರ್ಜರಿ ಫಸಲು ನೀಡಲು ತಯಾರಾಗಿ ನಿಂತಿದ್ದ ಎಳೇ ತೆಂಗಿನಮರಗಳನ್ನು ಅವರು ನಮಗೆ ತೋರಿಸಿ ನಿಟ್ಟುಸಿರುಬಿಟ್ಟರು. ಆ ದೊಡ್ಡ ಬಾವಿಗಳಿಗೆ ಅವರು ಮಾಡಿದ್ದ ಖರ್ಚನ್ನು ನನಗೆ ಊಹಿಸಲೂ ಕಷ್ಟವಾಯಿತು. ತೋಟವನ್ನು ತೋರಿಸಿದನಂತರ, ಅವರು ತಮ್ಮ ಆಳಿನ ಹತ್ತಿರ ಎಳನೀರು ಕೊಯ್ಯಲು ಹೇಳಿದರು.

ನಾನು ರಾಯರೇ, ದಯವಿಟ್ಟು ಎಳನೀರು ಕೊಯ್ಯಿಸಬೇಡಿರಿ. ಎಳೇ ಮರದಿಂದ ಎಳನೀರು ಕೊಯ್ದರೆ ಮರಕ್ಕೆ ನಂಜಾಗುತ್ತದೆ ಎಂದು ಹಳ್ಳಿಯಲ್ಲಿ ಹೇಳುತ್ತಾರೆ ಎಂದೆ. ಆಗ ರಾಯರು, ನಿಮ್ಮ ಮಾತು ಸರಿ. ಈ ಮರಗಳನ್ನು ಮನೆಯ ಮಕ್ಕಳಂತೆ ಇದುವರೆಗೆ ಸಾಕಿದ್ದೇನೆ. ನಾನು ಇದುವರೆಗೆ ಈ ತೋಟದ ಒಂದು ಎಳನೀರು ಕುಡಿದಿಲ್ಲ! ಆದರೆ, ಕೊಳ್ಳಬಂದ ಗಿರಾಕಿಯೆದುರು ಈ ಭಾವನೆ ತೋರಿಸಿದರೆ ಅವರು ನಗುವುದಿಲ್ಲವೇ? ಎಂದರು. ಆಗ ನಾನು ರಾಯರೇ, ನನ್ನ ಈ ಕೈಗಳು ಸಾವಿರಾರು ತೆಂಗಿನಗಿಡ ಹಚ್ಚಿದ ಕೈಗಳು. ನಾನು ನೆಟ್ಟ ಮರಗಳಿಂದ ಎಳನೀರು ಕೀಳಿಸಲು ನನಗೆ ಇಂದಿಗೂ ಮನಸ್ಸು ಒಪ್ಪುವುದಿಲ್ಲ ಎಂದೆ. ನನ್ನ ಮಾತು ಕೇಳಿ ಅವರ ಕಣ್ಣುಗಳಲ್ಲಿ ನೀರೂರಿತು. ನನಗೆ ಅವರೊಡನೆ ಏಕಾಂತದಲ್ಲಿ ಮಾತನಾಡಬೇಕು! ಅನಿಸಿತು. ಅವರನ್ನು ತೋಟದೊಳಗೆ ಸ್ವಲ್ಪ ದೂರ ಕರೆದುಕೊಂಡು ಹೋಗಿ ಏಕಾಂತದಲ್ಲಿ ರಾಯರೇ, ನಾನೂ ಒಬ್ಬ ಬೇಸಾಯಗಾರ. ದಯವಿಟ್ಟು ವೃತ್ತಿಬಾಂಧವನಾದ ನನ್ನೊಡನೆ ಸಂಕೋಚಬೇಡ. ದಯವಿಟ್ಟು ನೀವು ಈ ನಂದನವನದಂತಹಾ ತೋಟವನ್ನು ಇಷ್ಟು ಸೋವಿಯಾಗಿ ಮಾರಾಟಮಾಡುವ ಆಲೋಚನೆ ಯಾಕೆ ಮಾಡುತ್ತಿದ್ದೀರಿ? ಎಂದುಕೇಳಿದೆ.                ಆಗ ರಾಯರು ಭಾವೋದ್ವೇಗದಿಂದ ತನ್ನ ಕಥೆ ಹೇಳಿದರು. ನಾನು ಈ ಊರಿಗೆ ಅಲ್ಪ ಬಂಡವಾಳದೊಡನೆ ಬಂದು ಒಂದು ಉಪಹಾರಗೃಹ ಶುರುಮಾಡಿದೆ. ದೇವರ ದಯೆಯಿಂದ ವ್ಯಾಪಾರ ಚೆನ್ನಾಗಿಯೇ ಆಯಿತು. ಚಿಕ್ಕಂದಿನಿಂದಲೂ ತೆಂಗಿನತೋಟ ಮಾಡುವ ಹಂಬಲ ನನಗೆ! ದೇವರ ದಯದಿಂದ ಈ ಜಾಗ ಹನ್ನೆರಡು ವರ್ಷಗಳ ಹಿಂದೆ ಕಡಿಮೆ ಕ್ರಯದಲ್ಲಿ ಸಿಕ್ಕಿತು. ಮೊದಲು ಬಾವಿ ತೋಡಿಸಿದೆ. ಈ ಇಪ್ಪತ್ತು ಎಕರೆಗೆ ಸಾಕಾಗುವಷ್ಟು ನೀರು ಹುಟ್ಟಿಸಿಕೊಳ್ಳಲು ಬಹಳ ಖರ್ಚಾಯಿತು. ನಂತರ ಗಿಡಗಳನ್ನು ನೆಟ್ಟು ಅವನ್ನು ಮಕ್ಕಳಂತೆ ಪೋಷಿಸಿದೆ. ಈಗ ಮರಗಳು ಒಳ್ಳೆಯ ಫಸಲಿಗೆ ನಿಲ್ಲಲು ತಯಾರಾಗಿವೆ. ನನ್ನ ದೊಡ್ಡ ಮಗಳ ಮದುವೆಯನ್ನೇನೋ ಸಲೀಸಾಗಿ ಉಳಿತಾಯದ ಹಣದಿಂದ ಮಾಡಿಬಿಟ್ಟೆ. ಈಗ ಇಬ್ಬರು ಕಾಲೇಜು ಓದುವ ಗಂಡುಮಕ್ಕಳ ವಿದ್ಯಾಭ್ಯಾಸ ಹಾಗೂ ಉಳಿದಿಬ್ಬರು ಹೆಣ್ಣುಮಕ್ಕಳ ಮದುವೆ ಖರ್ಚು ನಾನು ನಿಭಾಯಿಸಬೇಕಾಗಿದೆ.  ಇದುತನಕ ನಾನು ಎಂದೂ, ಯಾರೊಡನೆಯೂ, ಒಂದು ಪೈಸೆ ಸಾಲ ಮಾಡಿದವನಲ್ಲ. ಆದರೆ ನಾನು ಈಗ ಸಾಲ ಮಾಡದೇ ಬೇರೆ ದಾರಿಯೇ ಇಲ್ಲ! ಈ ತೋಟ ಮಾಡುವುದಕ್ಕೆ ಮೊದಲು ನನ್ನ ಕೈಯ್ಯಲ್ಲಿ ನಾಲ್ಕು ಕಾಸು ಇದ್ದಾಗ, ಈ ಆಸ್ತಿ ಎರಡು ಗಂಡು ಮಕ್ಕಳಿಗೆ ಎಂದು ಸಂಕಲ್ಪ ಮಾಡಿದ್ದೆ. ಇದರ ಜತೆಗೆ, ಇದೇ ಊರೊಳಗೆ ಎರಡು ದೊಡ್ಡ ಸೈಟುಗಳನ್ನು ಕೊಂಡು ಇಟ್ಟಿದ್ದೂ ಇವೆ. ಆ ಸೈಟುಗಳು ನನ್ನ ಹೆಸರಿನಲ್ಲಿ ಇದ್ದರೂ, ‘ಅವು ನನ್ನ ಮಕ್ಕಳಿಗೆ ವಾಸದ ಮನೆ ಕಟ್ಟಲು ಎಂದು ತೀರ್ಮಾನಿಸಿದ್ದರಿಂದ, ಅವನ್ನು ಮಾರಲು ನನಗೆ ಇಷ್ಟವಿಲ್ಲ!  ಹಾಲಿ, ನಾವು ವಾಸವಿರುವುದು ಬಾಡಿಗೆಯ ಮನೆ. ಹೋಟೆಲ್‌ನ ಜಾಗವೂ ಭೋಗ್ಯದ್ದು! ಕೂಡಿಟ್ಟ ನಗನಾಣ್ಯ ಒಂದೂ ಇಲ್ಲ! ಆದ್ದರಿಂದ, ಈಗ ಮಾರಲು ಇನ್ನು ಉಳಿದುದು ಈ ತೆಂಗಿನತೋಟ ಮಾತ್ರ. ಈ ತೋಟವನ್ನು ಮಾರಿದರೆ, ನಾನು ಬೆಂಗಳೂರಿನಲ್ಲಿ ಕಾಲೇಜು ಓದುತ್ತಿರುವ ಇಬ್ಬರು ಹುಡುಗರ ವಿದ್ಯಾಭ್ಯಾಸಕ್ಕೆ ಹಣ ಪೂರೈಸಿ, ಉಳಿದ ಹಣದಲ್ಲಿ ಮದುವೆಗೆ ತಯಾರಾದ ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿಕೊಟ್ಟರೆ,  ನನ್ನ ಜವಾಬ್ದಾರಿ ನಿಭಾಯಿಸಿದಂತೆ ಆಯಿತು. ಹೀಗೆ ಅಭಿಪ್ರಾಯ ಮಾಡಿ ಈ ನಿರ್ಧಾರ ತೆಗೆದುಕೊಂಡೆ ಎಂದರು.

ಅವರ ಮಾತು ಕೇಳಿ ನಾನು ಜೋರಾಗಿ ನಕ್ಕುಬಿಟ್ಟೆ..! ಸಾರ್, ಸಾಲವೇ ಇಲ್ಲದ ನೀವು ಈ ರೀತಿ ಆಸ್ತಿ ಮಾರಲು ತಯಾರಾಗಿರುವುದನ್ನು ಕಂಡು ನನಗೆ ತಡೆಯಲಾರದ ನಗು ಬರುತ್ತಿದೆ! ಕಾಫಿತೋಟ ಮಾಡುವ ಮಂದಿ ನಾವು..! ಇಂದು ನಾವು ಕಳುಹಿಸಿದ ಕಾಫಿಗೆ ಮುಂದಿನ ವರ್ಷಗಳಲ್ಲಿ ನಮ್ಮ ಕಾಫಿ ಬೋರ್ಡ್ ಹಣ ಕೊಡುವುದು ರೂಢಿ. ಹಾಗಾಗಿ, ಸಾಲ ಮಾಡದೇ ನಾವು ಕಾಫಿತೋಟ ನಡೆಸುವುದು ಸಾಧ್ಯವೇ ಇಲ್ಲ. ನನ್ನ ಕಥೆ ಹೀಗಿದ್ದರೂ, ಇನ್ನೂ ಸ್ವಲ್ಪ ಸಾಲವನ್ನೇ ಮಾಡಿ, ನಿಮ್ಮ ತೋಟಕೊಳ್ಳಲು ಬಂದಿದ್ದೇನೆ..! ತಾವು ನನಗಿಂತ ಹಿರಿಯರು, ದಯವಿಟ್ಟು ನನ್ನ ಮಾತು ಕೇಳಿ! ಈ ತೋಟವನ್ನು ನೀವು ಜೀವದಿಂದ ಇರುವ ತನಕ ಮಾರಬೇಡಿರಿ..! ನಾನು ಕೊಳ್ಳಲು ಬಂದ ಗಿರಾಕಿಯಾದರೂ, ತಾವು ಈ ತೋಟಮಾಡಲು ಪಟ್ಟ ದೈಹಿಕ ಕಷ್ಟ ಮತ್ತು ಈ ಜಮೀನಿನಲ್ಲಿ ತಾವು ಸುರಿಸಿದ ಬೆವರು ಹಾಗೂ ತಾವು ಖರ್ಚುಮಾಡಿದ ಹಣದ ಅಗಾಧತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ..! ಈ ಜಮೀನನ್ನು ತಾವು ಮಾರಿಬಿಟ್ಟರೆ, ತಾವು ತಮ್ಮ ಈ ಪ್ರೀತಿಯ ಈ ಮರಗಳನ್ನು ಮಾರಿದ ನಂತರ ಸಂತೋಷದಿಂದ ಇರಲು ಸಾಧ್ಯವೇ ಇಲ್ಲ ಎಂದು ನನಗನ್ನಿಸುತ್ತದೆ. ಎಲ್ಲಾದರೂ ಈ ತೋಟವನ್ನು ಮಾರಿದರೆ ನೀವು ಮುಂದೆ ಪಶ್ಚಾತ್ತಾಪ ಪಡುತ್ತೀರಿ! ಇನ್ನೊಮ್ಮೆ ಈ ತರಹದ ತೋಟವನ್ನು ಮಾಡುವುದಾಗಲೀ ಅಥವಾ ಕೊಳ್ಳುವುದಾಗಲೀ ತಮಗೆ ಮುಂದಕ್ಕೆ ಸಾಧ್ಯವಾಗದು. ಈ ತೋಟವನ್ನೇ ಯಾವುದಾದರೂ ಒಳ್ಳೆಯ ಬ್ಯಾಂಕಿಗೆ ಅಡಮಾನ ಇಟ್ಟು, ಸ್ವಲ್ಪ ಸಾಲ ತೆಗೆದುಕೊಂಡು ನಿಮ್ಮ ಈಗಿನ ಅಗತ್ಯಗಳನ್ನು ಪೂರೈಸಿಕೊಳ್ಳಿ! ಇದು ನನ್ನ ಕಳಕಳಿಯ ಬೇಡಿಕೆ ಎಂದೆ.                ರಾಯರು ಸ್ವಲ್ಪಹೊತ್ತು ದಿಗ್ಮೂಢರಾಗಿ ಕುಳಿತುಕೊಂಡರು. ಕೊಳ್ಳಲು ಬಂದ ಗಿರಾಕಿ ಹೀಗೆ ಯಾಕೆ ಮಾತನಾಡುತ್ತಾ ಇದ್ದಾನೆ? ಎಂದು ಅವರಿಗೆ ಬಹಳ ಆಶ್ಚರ್ಯವಾಯಿತು. ಒಂದೈದು ನಿಮಿಷ ಕಳೆದಮೇಲೆ ಅವರಿಗೆ ನನ್ನ ಮಾತು ಅರ್ಥವಾದಂತೆ ಕಂಡಿತು. ಆದರೂ, ನಿಧಾನವಾಗಿ ಅವರು ಹೀಗೆಂದರು,

ಪೆಜತ್ತಾಯರೇ!  ಒಂದು ಲೆಕ್ಕದಲ್ಲಿ ನೀವೆನ್ನುವುದೇ ಸರಿ!  ಆದರೆ, ಈ ಜೀವನದಲ್ಲಿ ನಾನು ಎಂದಿಗೂ ಸಾಲ ಮಾಡಿದ ಮನುಷ್ಯನೇ ಅಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚಿದವನು. ಈಗಿನ ತಾತ್ಕಾಲಿಕ ಸಂಕಷ್ಟಗಳನ್ನು ನಿಭಾಯಿಸಲು ಈ ತೀರ್ಮಾನ ತೆಗೆದುಕೊಂಡಿದ್ದೆ. ಆದರೆ, ಈಗಲೂ ತಾವು ತಿಳಿಸಿದ ಪ್ರಕಾರ ಸಾಲ ಮಾಡಲು ನನ್ನ ಮನ ಒಪ್ಪುವುದಿಲ್ಲ! ಏನುಮಾಡಲಿ?

ಆಗ ನಾನು ರಾಯರೇ, ಈಗ ನೀವು ಹಣ ಅಷ್ಟು ಅರ್ಜೆಂಟಾಗಿ ಬೇಕಿದ್ದರೆ,  ನಿಮ್ಮ ಗಂಡುಮಕ್ಕಳಿಗೆ ತೆಗೆದಿರಿಸಿದ ಆ ಸೈಟುಗಳನ್ನು ಮಾರಿಬಿಡಿ! ವಿದ್ಯಾವಂತರಾದ ನಿಮ್ಮ ಗಂಡುಮಕ್ಕಳು ಈ ಚಿಕ್ಕ ಊರಿಗೆ ಬಂದು ನೆಲಸುವುದು ಅಷ್ಟರಲ್ಲೇ ಇದೆ! ಮುಂದಕ್ಕೆ ಅದೇ ಹಣಕ್ಕೆ ಬಡ್ಡಿ ಸೇರಿಸಿ ಬೆಂಗಳೂರಿನಲ್ಲಿ ಆ ಹುಡುಗರಿಗೆ ಸೈಟು ಕೊಡಿಸಿದರೆ ಆಯಿತು! ಎಂದೆ.

ರಾಯರಿಗೆ ಆಗ ಸ್ವಲ್ಪ ಸಮಾಧಾನವಾದಂತೆ ಕಂಡಿತು. ಭಾರವಾದ ಮನಸ್ಸಿಂದಲೇ ನಮ್ಮ ಕಾರು ಹತ್ತಿ ಶಿಡ್ಲಘಟ್ಟಕ್ಕೆ ಬಂದರು. ಒತ್ತಾಯಮಾಡಿ ನಮಗೆ ಪುನಃ ಕಾಫಿ ತಿಂಡಿ ಕೊಡಿಸಿ ಬೀಳ್ಕೊಟ್ಟರು.

ನನ್ನ ಅತಿಯಾದ ಬುದ್ಧಿವಂತಿಕೆಯಿಂದ ಸೋವಿಯಾಗಿ ಸಿಗುತ್ತಿದ್ದ ಆ ತೋಟ ಕೈಜಾರಿ ಹೋಗಿತ್ತು..! ಆ ಬಗ್ಗೆ ನಾನಾಗಲೀ, ನನ್ನ ಯಜಮಾನತಿ ಆಗಲೀ ತಲೆಕೆಡಿಸಿಕೊಳ್ಳಲಿಲ್ಲ. ನಾನು ಮುಂದಕ್ಕೆ ಬೆಂಗಳೂರಿನ ಸುತ್ತ ಜಮೀನು ಹುಡುಕುವುದನ್ನೇ ಬಿಟ್ಟು ಕಾಫಿತೋಟದ ಮೇಲೆ ಹೆಚ್ಚಿನ ನಿಗಾ ವಹಿಸಿ ಉತ್ತಮ ರೈತ ಅನ್ನಿಸಿಕೊಂಡೆ.

ಹತ್ತು ವರ್ಷಗಳು ಕಳೆದುವು. ಬೆಂಗಳೂರಿನಿಂದ ವರ್ಗವಾಗಿ ದೂರದ ಊರಿಗೆ ಹೋಗಿದ್ದ ಆ ರಾಯರ ಅಳಿಯ ಬ್ಯಾಂಕ್ ಮ್ಯಾನೇಜರಾಗಿ ಪುನಃ ಬೆಂಗಳೂರಿಗೆ ಬಂದರು. ಅಕಸ್ಮಾತ್, ಅವರನ್ನು ಕಂಡ ನಾನು ಅವರನ್ನು ಅಭಿನಂದಿಸಲು ಅವರ ಚೇಂಬರಿಗೆ ಹೋದೆ. ಆಗ ಅವರ ಮಾವನವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದೆ.

ಬ್ಯಾಂಕ್ ಮ್ಯಾನೇಜರರು ಬಹಳ ಸಂತೋಷದಿಂದ, ಅವರು ಚೆನ್ನಾಗಿ ಇದ್ದಾರೆ. ಊರೊಳಗಿನ ಆ ಎರಡು ಸೈಟುಗಳನ್ನು ಮಾರಿದರು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ಹಣ ಒದಗಿಸಿದರು ಮತ್ತು ತನ್ನ ಇಬ್ಬರು ಹೆಣ್ಣುಮಕ್ಕಳ ಮದುವೆಯನ್ನೂ ಮಾಡಿಕೊಟ್ಟರು. ಈಗ ಅವರಿಗೆ ಎಪ್ಪತ್ತರ ಹತ್ತಿರದ ಪ್ರಾಯ. ಆದ್ದರಿಂದ ಊರೊಳಗಿನ ಉಪಹಾರಗೃಹವನ್ನು ಬೇರೆಯವರಿಗೆ ವಹಿಸಿಕೊಟ್ಟು, ತಿಂಗಳಿಗೆ ಇಷ್ಟು ಎಂದು ಹಣ ಪಡೆಯುತ್ತಿದ್ದಾರೆ. ತಮ್ಮ ತೆಂಗಿನ ತೋಟದಲ್ಲೇ ಒಳ್ಳೆಯ ಬಂಗಲೆಯಂತಹಾ ಮನೆ ಕಟ್ಟಿಕೊಂಡು ಸಂತೋಷದಿಂದ ತಮ್ಮ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ! ಆಗಾಗ ಅವರು ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಆಗಾಗ ನಿಮ್ಮ ಯೋಗಕ್ಷೇಮ ವಿಚಾರಿಸುತ್ತಿರುತ್ತಾರೆ. ನೀವು ಆ ದಿವಸ ಅವರ ತೋಟಕ್ಕೆ ಗಿರಾಕಿಯಾಗಿ ಹೋಗದೇ ಇರುತ್ತಿದ್ದರೆ, ಆ ತೋಟವನ್ನು ಬೇರೆಯರಿಗೆ ಮಾರಿಯೇ ಬಿಡುತ್ತಿದ್ದರಂತೆ! ನೀವು ನಿಮಗೆ ಬಿಡುವಾದಾಗ ಅವರನ್ನು ಕಂಡು ಮಾತನಾಡಿಸಿದರೆ ತುಂಬಾ ಸಂತೋಷಪಟ್ಟಾರು ಎಂದರು.

ಬ್ಯಾಂಕ್ ಮ್ಯಾನೇಜರರ ಮಾತುಗಳನ್ನು ಕೇಳಿ ನನಗೆ ಹಾಲು ಕುಡಿದಷ್ಟು ಸಂತೋಷ ಆಯಿತು. ನಾನು ತೆಂಗಿನತೋಟದ ರಾಯರನ್ನು ಕಾಣಲು ಇದುತನಕ ಶಿಡ್ಲಘಟ್ಟಕ್ಕೆ ಹೋಗಿಲ್ಲ! ಅಲ್ಲಿಗೆ ಹೋಗುವ ಅಗತ್ಯವೂ ನನಗೆ ಕಾಣುವುದಿಲ್ಲ. ಕಷ್ಟಗಾರರಾದ ಹಿರಿಯ ರೈತರೊಬ್ಬರು ಸುಖವಾಗಿ ತನ್ನ ತೋಟದಲ್ಲಿ ನೆಲೆಸಿದ್ದಾರೆ! ಸುಖವಾಗಿ ಇದ್ದಾರೆ! ಎಂಬ ಒಳ್ಳೆಯ ವರ್ತಮಾನಕ್ಕಿಂತ ನನಗೆ ಹೆಚ್ಚಿನದು ಏನೂ ಬೇಕಿಲ್ಲ. ಅಂತಹಾ ಹಿರಿಯರ ಆಶೀರ್ವಾದದಿಂದ ನಾನೂ ನನ್ನ ಮಟ್ಟಿಗೆ ಸುಖ ಸಂತೋಷದಿಂದ ಕಾಫಿಯ ವ್ಯವಸಾಯ ಮಾಡುತ್ತಾ ಬದುಕಿದ್ದೇನೆ.

* * *