ಶರೀಫ್ ಸಾಹೇಬರು ಚಿಕ್ಕಮಗಳೂರಿನ ಹಿರಿಯ ಪ್ಲಾಂಟರ್. ಅವರದು ಖಾಂದಾನೀ ಮುಸ್ಲಿಮ್ ಮನೆತನ. ಅವರು ಆಗರ್ಭ ಶ್ರೀಮಂತರು. ಬಾಬಾಬುಡಾನ್‌ಗಿರಿಯಲ್ಲಿನ ಅವರ ದೊಡ್ಡ ತೋಟ ಹೆಸರುವಾಸಿಯಾದ ತೋಟ. ದಾನಧರ್ಮಗಳಿಗೆ ಮತ್ತು ಅತಿಥಿಸತ್ಕಾರಕ್ಕೆ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲೇ ಹೆಸರು ಪಡೆದಿದ್ದರು. ಚಿಕ್ಕಮಗಳೂರು ಪಟ್ಟಣದಲ್ಲಿ ಮತ್ತು ಬೆಂಗಳೂರಿನಲ್ಲಿ ಅವರಿಗೆ ದೊಡ್ಡ ವಾಸದ ಬಂಗಲೆಗಳಿವೆ. ಹೆಚ್ಚಾಗಿ ಅವರು ಚಿಕ್ಕಮಗಳೂರಿನ ಬಂಗಲೆಯಲ್ಲಿ ವಾಸವಾಗಿರುತ್ತಿದ್ದರು.

೧೯೮೦ನೇ ಇಸವಿ ಇರಬೇಕು, ನಾನೊಂದು ದಿನ ಕಾರ್ಯನಿಮಿತ್ತವಾಗಿ ಚಿಕ್ಕಮಗಳೂರಿಗೆ ಹೋದಾಗ ಒಂದುರಾತ್ರಿಯ ಮಟ್ಟಿಗೆ ಅನಿವಾರ್ಯವಾಗಿ ಅಲ್ಲಿ ಉಳಿಯಲೇಬೇಕಾಯಿತು. ನಾನು ನಮ್ಮ ತೋಟದಿಂದ ಬರೇ ನೂರಾ ಐದು ಕಿ.ಮೀ. ದೂರದಲ್ಲಿ ಇರುವ  ಚಿಕ್ಕಮಗಳೂರಿನಲ್ಲಿ ಉಳಿಯಲು ಹೆಚ್ಚಾಗಿ ಇಷ್ಟಪಡುವುದಿಲ್ಲ. ಸಾಮಾನ್ಯವಾಗಿ ರಾತ್ರಿ ಎಷ್ಟು ಹೊತ್ತಾದರೂ, ಕೆಲಸಗಳನ್ನು ಮುಗಿಸಿಕೊಂಡು, ನಮ್ಮ ಸುಳಿಮನೆ ಕಾಫಿತೋಟಕ್ಕೆ ಹಿಂತಿರುಗಲು ಇಷ್ಟಪಡುತ್ತೇನೆ. ಆದರೆ, ಆದಿನ ಚಿಕ್ಕಮಗಳೂರಿಗೆ ಹೋದ ಮುಖ್ಯ ಕೆಲಸವೇ ಆಗಿರಲಿಲ್ಲ. ನಾನು ನಮ್ಮ ಆಡಿಟರನ್ನು ಕಾಣಲು ಹೋಗಿದ್ದೆ. ಅವರು ಆದಿನ ಊರಿನಲ್ಲಿ ಇರಲಿಲ್ಲ. ಅವರನ್ನು ಫೋನ್‌ನಲ್ಲಿ ಸಂಪರ್ಕಿಸಿದಾಗ ಮರುದಿನ ಬೆಳಗ್ಗೆ ಏಳು ಗಂಟೆಗೆ ಖಂಡಿತವಾಗಿಯೂ ಭೆಟ್ಟಿಯಾಗುವೆ ಎಂದು ಹೇಳಿದ್ದರು. ರಾತ್ರಿ ಮನೆಗೆ ಓಡಿಹೋಗಿ, ಮರುದಿನ ಬೆಳಗ್ಗೆ ಬೇಗನೆ ಎದ್ದು, ಪುನಃ ಚಿಕ್ಕಮಗಳೂರಿಗೆ ಹಿಂತಿರುಗಿ ಬರುವುದು ತ್ರಾಸದಾಯಕ ಮತ್ತು ಸಮಯವ್ಯರ್ಥ ಎಂದು ಕಂಡಿತು. ಚಿಕ್ಕಮಗಳೂರಿನ ಪ್ಲಾಂಟರ್ಸ್ ಕೋರ್ಟ್ ಎಂಬ ಉತ್ತಮ ಹೋಟೆಲಿನಲ್ಲಿ ರೂಮ್ ಪಡೆದು, ವಾಸ್ತವ್ಯ ಹೂಡಿದೆ.

ನನಗೆ ರಾತ್ರಿಯ ಹೊತ್ತು ಏನಾದರೂ ಓದುವ ಅಭ್ಯಾಸ. ಜಿಟಿಜಿಟಿ ಮಳೆ ಬೇರೆ ಬೀಳುತ್ತಾ ಇತ್ತು. ಈ ಹೋಟೆಲ್ ಇರುವುದು ಚಿಕ್ಕಮಗಳೂರು-ಮಂಗಳೂರು ರಸ್ತೆಯಲ್ಲಿ, ಪೇಟೆಯಿಂದ ಒಂದು ಕಿ.ಮೀ. ದೂರ. ಹೋಟೆಲಿನ ಹತ್ತಿರದಲ್ಲಿ ಯಾವುದೇ ಪುಸ್ತಕದ ಅಂಗಡಿಗಳು ಇಲ್ಲ. ಆಗಲೇ ಗಂಟೆ ಎಂಟಾಗಿತ್ತು. ಬೇಗನೆ ಮಹಾತ್ಮಗಾಂಧಿ ರಸ್ತೆಯ ಪುಸ್ತಕದ ಅಂಗಡಿಗೆ ಹೋಗಿ, ಓದಲು ಏನಾದರೂ ಮ್ಯಾಗಜಿನ್ ಅಥವಾ ಪುಸ್ತಕ ತರೋಣ ಎಂದು ನನ್ನ ಹಸಿರು ಬಣ್ಣದ ಮಾರುತಿ ಜಿಪ್ಸಿ ಜೀಪ್ ಹೊರಡಿಸಿದೆ.

ನಾನು ಪುಸ್ತಕಕೊಳ್ಳುತ್ತಿರುವಾಗ, ಗ್ರೀಟಿಂಗ್ ಕಾರ್ಡ್‌ಗಳನ್ನು ಕೊಳ್ಳಲು ಬಂದಿದ್ದ ಶ್ರೀಮಾನ್ ಶರೀಫ್ ಸಾಹೇಬರ ದರ್ಶನವಾಯಿತು. ಹಲ್ಲೋ ಕೇಸರಿ!, ಏನು ಇಷ್ಟು ಹೊತ್ತಿನಲ್ಲಿ ನೀವು ಇಲ್ಲಿ? ಎಂದು ವಿಚಾರಿಸುತ್ತಾ ಅವರು ಮಾತಿಗಿಳಿದರು. ನನ್ನ ಹೆಸರು ಮಧುಸೂದನ ಪೆಜತ್ತಾಯ ಎಂದಿದ್ದರೂ, ಚಿಕ್ಕಮಗಳೂರಿನಲ್ಲಿ ಹೆಚ್ಚಿನವರು ನನ್ನನ್ನು ನನ್ನ ಪೆಟ್‌ನೇಮ್ ಆದ ಕೇಸರಿ ಎಂಬ ನಾಮಧೇಯದಿಂದಲೇ ಕರೆಯುತ್ತಾರೆ. ನನಗೆ ಶರೀಫ್ ಸಾಹೇಬರ ಪರಿಚಯ ಮೊದಲೇ ಇತ್ತು. ಅವರಿಗೆ ಮತ್ತು ನನಗೆ ಒಬ್ಬರೇ ಆಡಿಟರು.

ಇಂದು ಆಡಿಟರ್ ಸಿಗಲಿಲ್ಲ. ಮೂಡುಗೆರೆ ಹತ್ತಿರದ ಶ್ರೀ ಎಮ್.ಆರಾನ್ನಾ ಅವರ ಸಬ್ಬೇನಹಳ್ಳಿ ಕಾಫಿ ತೋಟಕ್ಕೆ ಹೋಗಿದ್ದಾರೆ. ಅವರು ರಾತ್ರಿ ಹಿಂತಿರುಗಿ ಬರುವಾಗ ತಡವಾಗಬಹುದು ಎಂದು ಅವರ ಆಫೀಸಿನಲ್ಲಿ ಹೇಳಿದರು. ಶ್ರೀ ಅರಾನ್ನಾರ ಮನೆಗೆ ಫೋನ್ ಮಾಡಿ, ಅವರನ್ನು ಸಂಪರ್ಕಿಸಿದೆ. ಅವರು ನನಗೆ ನಾಳೆ ಬೆಳಗ್ಗೆ ಏಳುಗಂಟೆಗೆ ಸಿಗುವುದಾಗಿ ಅಪಾಯಿಂಟ್‌ಮೆಂಟ್ ಕೊಟ್ಟಿದ್ದಾರೆ ಎಂದು ಹೇಳಿದೆ.

ಇಂದು ನಮ್ಮ ಮನೆಯಲ್ಲಿ ಉಳಿಯಿರಿ..! ಎನ್ನುತ್ತಾ ಆ ಹಿರಿಯರು ನನ್ನನ್ನು ಒತ್ತಾಯಿಸಿದರು. ಅದಕ್ಕೆ ನಾನು ಈಗಾಗಲೇ ಪ್ಲಾಂಟರ್ಸ್‌ಕೋರ‍್ಟ್ ಹೋಟೆಲಿನಲ್ಲಿ ಒಂದು ರೂಮ್ ತೆಗೆದುಕೊಂಡಿರುವುದಾಗಿ ಹೇಳಿದೆ. ರೂಮ್ ಖಾಲಿ ಮಾಡಿ ನಮ್ಮಲ್ಲಿಗೆ ಬಂದರಾಯಿತು ಎಂದು ಒತ್ತಾಯಿಸಿದರು ಆ ಹಿರಿಯರು.      ನಾನು, ಸರ್, ಹೇಗೂ ರೂಮ್ ತೆಗೆದುಕೊಂಡಾಯ್ತು  ಯಾವಾಗಲಾದರೂ ಇನ್ನೊಮ್ಮೆ ಚಿಕ್ಕಮಗಳೂರಿನಲ್ಲಿ ಉಳಿಯಬೇಕಾದಾಗ ಖಂಡಿತವಾಗಿ ನಿಮ್ಮಲ್ಲಿಗೇ ಬರುವೆ ಎಂದು ಸಮಾಧಾನ ಹೇಳಿದೆ. ಸರಿ, ಹಾಗಾದರೆ ಬೆಳಗ್ಗೆ ನಮ್ಮ ಮನೆಗೆ ಬ್ರೇಕ್‌ಫಾಸ್ಟ್‌ಗೆ ಬಂದುಬಿಡಿ! ನಿಮ್ಮನ್ನು ಕಾಯುತ್ತಿರುತ್ತೇನೆ ಎಂದರು ಶರೀಫ್ ಸಾಹೇಬರು. ನಾನು ಸಾಧ್ಯವಿಲ್ಲವೆಂದು ಹಿರಿಯರಾದ ಅವರಿಗೆ ಉತ್ತರಿಸುವ ಹಾಗೆಯೇ ಇರಲಿಲ್ಲ..!

ತರುಣ ಪ್ಲಾಂಟರುಗಳಾದ ನಾವು ಹಿರಿಯ ಪ್ಲಾಂಟರುಗಳಿಗೆ ತುಂಬಾ ಗೌರವ ನೀಡುತ್ತಿದ್ದೆವು. ಹಲವಾರು ಬಾರಿ ಆ ಹಿರಿಯರುಗಳಿಂದ ಮಾರ್ಗದರ್ಶನ ಕೂಡಾ ಪಡೆಯುತ್ತಿದ್ದೆವು. ಹಿರಿಯ ಪ್ಲಾಂಟರುಗಳನ್ನು ಸರ್ ಎಂದು ಸಂಬೋಧಿಸುವುದು ನಮ್ಮ ಕಟ್ಟಳೆ.

ಆಗಲಿ ಸರ್, ಬರುತ್ತೇನೆ. ಬೆಳಗ್ಗೆ ಎಂಟೂವರೆಗೆ ತಮ್ಮ ಬಂಗಲೆಗೆ ಬರಲೇ? ಎಂದು ಕೇಳಿದೆ. ಅದಕ್ಕೆ ಅವರು ನಸುನಗುತ್ತಾ, ಬೆಳಗ್ಗೆ ಹನ್ನೊಂದಕ್ಕೆ ಬಂದರೆ ಅನುಕೂಲ ಎಂದರು. ಇದೇನು? ಇವರಲ್ಲಿ ಬೆಳಗ್ಗೆ ಹನ್ನೊಂದಕ್ಕೆ ತಿಂಡಿ..? ಎಂದು ಅಚ್ಚರಿಪಟ್ಟರೂ, ಅದನ್ನು ತೋರಿಸಿಕೊಳ್ಳದೇ ಹನ್ನೊಂದಕ್ಕೆ ಬರುತ್ತೇನೆ, ಸರ್! ನಾನು ಶುದ್ಧ ಸಸ್ಯಾಹಾರಿ ಎಂದು ತಮಗೆ ಗೊತ್ತಿದೆ ತಾನೇ? ಎಂದುತ್ತರಿಸಿ, ಅವರಿಗೆ ವಂದನೆ ಹೇಳಿದೆ.

ಅದಕ್ಕೆ ಶರೀಫ್ ಸಾಹೇಬರು ನಗುತ್ತಾ ನಿಮ್ಮ ಹೆಸರು ಕೇಸರಿ! ಆದರೂ ನೀವೊಬ್ಬ ವೆಜಿಟೇರಿಯನ್ ಲಯನ್! ಎಂದು ತಮಾಷೆ ಮಾಡುತ್ತಾ ತಮ್ಮ ಎರಡನೇ ಮಹಾಯುದ್ಧದ ೧೯೪೬ನೇಯ ಮಾಡೆಲ್ ಫೋರ್ಡ್‌ಜೀಪ್ ಏರಿದರು. ಅವರ ಜೀಪು ಅಷ್ಟು ಹಳೆಯ ಮಾಡೆಲ್ ಆದರೂ ಹೊಚ್ಚಹೊಸದರಂತೆ ಥಳಥಳಿಸುತ್ತಿತ್ತು. ಅವರು ವಾಹನಗಳನ್ನು ಮೈಂಟೈನ್ ಮಾಡುವುದರಲ್ಲಿ ಚಿಕ್ಕಮಗಳೂರು ಜಿಲ್ಲೆಗೇ ಹೆಸರುವಾಸಿ. ಅವರ ಮನೆಯಲ್ಲಿ ನಾಲ್ಕಾರು ವಾಹನಗಳಿದ್ದುವು. ಎಲ್ಲ ವಾಹನಗಳೂ ಶೋರೂಮ್ ಮಾಡೆಲ್ ತರಹ ಜಾಗರೂಕತೆಯಿಂದ ಮೈಂಟೈನ್ ಮಾಡಲ್ಪಡುತ್ತಿದ್ದುವು. ಅವರ ಮನೆಯಲ್ಲಿ ಎರಡು ಜನ ಡ್ರೈವರುಗಳು ಇದ್ದರು. ಅವರ ತೋಟದಲ್ಲೇ ಕೆಲಸಕ್ಕೆ ಇದ್ದ ಮೆಕ್ಯಾನಿಕ್ ಒಬ್ಬನಿಗೆ ಅವರ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟು ಹೊಸ ವಾಹನಗಳ ರೀತಿ ಕಾಣುವಂತೆ ನೋಡಿಕೊಳ್ಳುವುದೇ ಕೆಲಸ ಆಗಿತ್ತು. ಅವರ ಮಿಲಿಟರಿ ಮಾಡೆಲ್ ಫೋರ್ಡ್ ಓಪನ್ ಜೀಪಿಗೆ ಮುಂದುಗಡೆಯ ಗ್ಲಾಸಿನ ಹತ್ತಿರ ಮಿಲಿಟರಿಯ ರೈಫಲ್ ರ‍್ಯಾಕ್ ಕೂಡಾ ಇತ್ತು. ಶರೀಫ್ ಸಾಹೇಬರು ತೋಟಕ್ಕೆ ಹೋಗುವಾಗ ತಮ್ಮಲ್ಲಿದ್ದ ಬಂದೂಕುಗಳಲ್ಲಿ ಒಂದನ್ನು ಆ ಸ್ಟ್ಯಾಂಡಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಶರೀಫ್ ಸಾಹೇಬರ ಕಾರುಗಳನ್ನು ನೋಡುವುದೆಂದರೆ ನನಗೆ ಯಾವಾಗಲೂ ಇಷ್ಟ. ಆ ವಾಹನಗಳ ಮೇಲೆ ಒಂದು ಧೂಳಿನ ಕಣ ಕೂರಲೂ ಅವರು ಬಿಡುತ್ತಿರಲಿಲ್ಲ. ಅವರ ಕಾರುಗಳಂತೆ ಅವರ ಬಂಗಲೆಗಳು ಕೂಡಾ ಅದೇ ಸ್ವಚ್ಚತೆಯಿಂದ ಮೆರೆಯುತ್ತಿದ್ದುವು.

ಶರೀಫ್ ಸಾಹೇಬರು ತುಂಬಾ ಶಿಸ್ತಿನ ಮನುಷ್ಯ. ಅವರ ತೋಟ, ಮನೆ, ಕಾರುಗಳು, ಬಂದೂಕುಗಳು ಎಲ್ಲವೂ ಅಚ್ಚುಕಟ್ಟು. ಅವರ ದಿರಿಸು ಕೂಡಾ ತುಂಬಾ ಅಚ್ಚುಕಟ್ಟು. ಅವರು ತೆಳ್ಳಗಿನ ನೀಳಕಾಯದ ವ್ಯಕ್ತಿ. ಅವರ ಬೂಟುಗಳು ಯಾವಾಗಲೂ ಕನ್ನಡಿಯಂತೆ ಮಿರುಗುತ್ತಿದ್ದುವು.                    ನಾನು ನನ್ನ ಹೋಟೆಲಿನ ರೂಮಿಗೆ ಹೋಗಿ ಸ್ವಲ್ಪ ಹೊತ್ತು ನ್ಯೂಸ್‌ಪೇಪರುಗಳನ್ನು ನೋಡಿದೆ. ಚಿಕ್ಕಮಗಳೂರಿಗೆ ಆಗ ಟೀವಿ ಪ್ರಸಾರ ಇನ್ನೂ ಬಂದಿರಲಿಲ್ಲ. ರಾತ್ರಿಯ ಊಟಮಾಡಿ ಸ್ವಲ್ಪ ಹೊತ್ತಿನವರೆಗೆ ಪುಸ್ತಕ ಓದಿ, ಆಮೇಲೆ ನಿದ್ದೆ ಮಾಡಿದೆ. ಮರುದಿನ ಬೆಳಗ್ಗೆ ಆರುಗಂಟೆಗೆ ಎದ್ದು ಪ್ರಾತರ್ವಿಧಿಗಳನ್ನು ಪೂರೈಸಿ ಒಂದು ಕಪ್ ಕಾಫಿಕುಡಿದೆ.

ಸರಿಯಾಗಿ ಏಳುಗಂಟೆಗೆ ನಮ್ಮ ಆಡಿಟರನ್ನು ಕಂಡೆ. ಎಂಟುಗಂಟೆಗೆ ನನ್ನ ಕೆಲಸ ಮುಗಿಯಿತು. ಪ್ಲಾಂಟರ್ಸ್‌ಕೋರ್ಟ್ ಹೋಟೆಲಿಗೆ ಬಂದು ಮಾಮೂಲಿ ಸಮಯಕ್ಕೆ ಸ್ವಲ್ಪ ಲಘು‌ಉಪಹಾರ ತೆಗೆದುಕೊಂಡೆ. ಬೆಳಗಿನ ಹನ್ನೊಂದಕ್ಕೆ ಶರೀಫ್ ಸಾಹೇಬರಲ್ಲಿ ನನಗೆ ಉಪಹಾರದ ಆಹ್ವಾನ ಇತ್ತು. ಆದರೆ, ಅದು ತನಕ ನಾನು ಉಪವಾಸವಿರಲು ಸಾಧ್ಯವಿರಲಿಲ್ಲ. ಈ ಶರೀಫ್ ಸಾಹೇಬರು ಬೆಳಗ್ಗೆ ಎಷ್ಟು ಹೊತ್ತಿಗೆ ಏಳುತ್ತಾರೆ..? ಇಷ್ಟು ತಡವಾಗಿ ಏಳುವ ಈ ಶ್ರೀಮಂತ ಅದೆಷ್ಟು ಹೊತ್ತಿಗೆ ರಾತ್ರಿ ಮಲಗಿಯಾರು..? ಅವರು ಖಂಡಿತವಾಗಿ, ಬೆಳಗಿನಜಾವದ ತನಕ ಕ್ಲಬ್ಬು ಅಥವಾ ಪಾರ್ಟಿಗಳಲ್ಲಿ ಕಾಲ ಕಳೆಯುತ್ತಾರೆ! ಎಂತ ಲೆಕ್ಕಹಾಕಿದೆ. ಅವರ ವಿಚಿತ್ರವಾದ ದಿನಚರಿಯ ಬಗ್ಗೆ ಆಲೋಚಿಸಿದಾಗ ನನಗೆ ಮನಸ್ಸಿನಲ್ಲೇ ನಗುಬಂತು.

ಸರಿಯಾಗಿ ಹನ್ನೊಂದಕ್ಕೆ ಶರೀಫ್ ಸಾಹೇಬರ ಬಂಗಲೆ ತಲುಪಿದೆ. ಬಂಗಲೆಯ ಗೇಟ್ ತೆರೆದ ಅವರ ಡ್ರೈವರ್ ನನಗೆ ಸಲಾಮ್ ಮಾಡಿ ಸರ್! ತಮ್ಮ ಜೀಪನ್ನು ಪಾರ್ಕ್ ಮಾಡುತ್ತೇನೆ ಎಂದು ಹೇಳಿದ. ನಾನು ಜೀಪಿನ ಕೀಲಿ ಅವನ ಕೈಗೆಕೊಟ್ಟು ಅವರ ಮನೆಯನ್ನು ಪ್ರವೇಶಿಸಿದೆ. ಮುಂದಿನ ಹಜಾರದಲ್ಲಿ ನನ್ನ ಬೂಟ್‌ಗಳನ್ನು ಬಿಚ್ಚಿದೆ. ಅಷ್ಟರಲ್ಲಿ ಒಬ್ಬ ಚೋಕ್ರಾ (ಕೆಲಸದ ಹುಡುಗ) ನನ್ನ ಎದುರಿಗೆ ಒಂದು ಜತೆ ಮನೆಯಲ್ಲಿ ತೊಡುವ ಹೊಸ ಚಪ್ಪಲಿಗಳನ್ನು ತಂದಿರಿಸಿ ಅವುಗಳನ್ನು ಧರಿಸಿಕೊಳ್ಳಲು ತಿಳಿಸಿದ. ನಾನು ಚಪ್ಪಲಿಗಳನ್ನು ಧರಿಸಿ ಎದ್ದುನಿಲ್ಲುತ್ತಲೇ, ನೀಟಾಗಿ ಡ್ರೆಸ್‌ಮಾಡಿಕೊಂಡು ಸಿಲ್ಕಿನ ಹೌಸ್‌ಕೋಟ್ ತೊಟ್ಟ ಶರೀಫ್ ಸಾಹೇಬರು ಗುಡ್‌ಮಾರ್ನಿಂಗ್, ಕೇಸರಿ ಎನ್ನುತ್ತಾ ಬಂದು ನನ್ನನ್ನು ತಬ್ಬಿ ಸ್ವಾಗತಿಸಿದರು.

ನನ್ನ ಕೈಹಿಡಿದು ಮನೆಯ ಸಿಟ್ಟಿಂಗ್ ರೂಮಿಗೆ ಕರೆದೊಯ್ದು ದೊಡ್ಡ ಸೋಫಾದಲ್ಲಿ ಕುಳ್ಳಿರಿಸಿ ನನ್ನ ಪಕ್ಕಕ್ಕೆ ಕುಳಿತರು. ಅವರ ಬಟ್ಲರ್, ದಿನದ ಇಂಗ್ಲಿಷ್ ಮತ್ತು ಕನ್ನಡಪತ್ರಿಕೆಗಳನ್ನು ನನ್ನ ಎದುರಿಗೆ ಬೆಳ್ಳಿಯ ಟ್ರೇಯಲ್ಲಿ ತಂದಿರಿಸಿ, ನನ್ನನ್ನು ಉದ್ದೇಶಿಸಿ, ಸಲಾಮ್ ಸಾಬ್!ಎಂದ. ಪ್ರತಿವಂದನೆ ಹೇಳಿದೆ. ಪೇಪರ್ ನೋಡಿ, ಕೇಸರೀ ಎನ್ನುತ್ತ ಶರೀಫ್ ಸಾಹೇಬರು ನನಗೆ ಎರಡು ಔನ್ಸಿನಷ್ಟು ಹಿಡಿಸುವ ‘ಡ್ರೆಸ್ಡೆನ್ ಪಿಂಗಾಣಿಯ ಪುಟ್ಟ ಅರೇಬಿಯನ್ ಸೈಜಿನ ಕಪ್ನಲ್ಲಿ ಖಾವ (ಕಡುಕಾಫಿ) ಇತ್ತರು. ಯಾಲಕ್ಕಿ ಹಾಕಿ ಕಾಸಿದ್ದ ಆ ಬಾಬಾಬುಡಾನ್‌ಗಿರಿಯ ಉತ್ಕೃಷ್ಟಕಾಫಿ ಸುಮಧುರವಾಗಿತ್ತು. ನಾನು ಕಾಫಿ ಕುಡಿಯುತ್ತಾ ದಿನಪತ್ರಿಕೆಯ ಮೇಲೆ ಕಣ್ಣಾಡಿಸಿದೆ. ಕಪ್ ಖಾಲಿಯಾಗುತ್ತಲೇ ಶಿಷ್ಟಾಚಾರಕ್ಕೆ ಇನ್ನೂ ಸ್ವಲ್ಪ ಕಾಫಿ ಎನ್ನುತ್ತಾ ಸ್ವಲ್ಪ ಕಾಫಿ ಕಪ್ಪಿಗೆ ಸುರಿದರು. ನಾನು ಥ್ಯಾಂಕ್ಸ್, ಸರ್ ಎನ್ನುತ್ತ ಕಪ್ ಕೈಗೆತ್ತಿಕೊಂಡೆ. ಅದನ್ನು ಕುಡಿದು ಮುಗಿಸಿದಾಗ ಶರೀಫ್ ಸಾಹೇಬರು ಪುನಃ ಬೆಳ್ಳಿಯ ಕೆಟಲ್ ಕೈಗೆತ್ತಿಕೊಂಡರು. ನಾನು ಕಪ್ಪನ್ನು ಕೈಬೆರಳುಗಳಿಂದ ಮುಚ್ಚಿ ಬೇಡವೆಂದು ತಲೆ ಆಡಿಸುತ್ತಾ ನೋ, ಥ್ಯಾಂಕ್ ಯೂ, ಸರ್! ಎಂದೆ. ಈ ತರಹದ ಕಡುಕಾಫಿಯ ಸ್ವಾಗತದ ರಿವಾಜು ಅರೇಬಿಯಾದ ಶ್ರೀಮಂತರಲ್ಲಿ ಇದೆ ಎಂದು ಕೇಳಿಬಲ್ಲವನಾಗಿದ್ದೆ. ಎರಡು ಸಲ ಕಾಫಿ ಹಾಕಿಸಿಕೊಂಡು ನಂತರ ಕಾಫಿ ಬೇಡ ಎನ್ನಬಹುದಂತೆ!. ಅರೇಬಿಯಾ ದೇಶದಲ್ಲಿ ಮೊದಲ ಕಪ್ಪಿಗೇ ಸಾಕು ಎಂದರೆ ಅತಿಥೇಯರಿಗೆ ಅವಮಾನಮಾಡಿದಂತೆ!ಎಂಬ ಭಾವನೆ ಅತಿಥೇಯರಲ್ಲಿ ಉಂಟಾಗುತ್ತದಂತೆ! ಈ ಕ್ರಮದ ಬಗ್ಗೆ ನನಗೆ ಹಲವಾರು ವರ್ಷ ಅರೇಬಿಯಾದ ಬರ್ಮಾ ಶೆಲ್ ಆಯಿಲ್ ಕಂಪನಿಯಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡಿ ರಿಟಾಯರ್ ಅದ ಹಿರಿಯರೊಬ್ಬರು ವಿವರಿಸಿ ಹೇಳಿದ್ದರು. ಅತಿಥಿಯು ಎರಡನೇ ಸಲ ಸ್ವಲ್ಪವಾದರೂ ಕಾಫಿಯನ್ನು ಶಿಷ್ಟಾಚಾರಕ್ಕೆ ಕುಡಿಯಲೇಬೇಕು..! ಎಂಬ ಬಗ್ಗೆ ನನಗಾಗಲೇ ಗೊತ್ತಿದ್ದರಿಂದ, ಎರಡನೇ ಬಾರಿ ಕಾಫಿ ಸೇವಿಸಿದ್ದೆ.

ಅವರ ಅರೇಬಿಯನ್ ರೀತಿಯ ಕಾಫಿ ಕೊಟ್ಟು ಸತ್ಕರಿಸುವ ಸ್ವಾಗತಕ್ಕೆ ನನ್ನ ಪ್ರತಿಕ್ರಿಯೆ ಮತ್ತು ಶಿಷ್ಟಾಚಾರದ ಸೌಜನ್ಯದ ನಡವಳಿಕೆಯು ಶರೀಫ್ ಸಾಹೇಬರಿಗೆ ಒಪ್ಪಿಗೆ ಆಯಿತೆಂದು ಅವರ ಮಂದಹಾಸದಿಂದ ನನಗೆ ತಿಳಿಯಿತು.

ಕೇಸರಿ, ಕ್ಷಮಿಸಿ! ಇಂದು ನಮ್ಮ ಬೇಗಂ ಸಾಹೀಬಾ ಮತ್ತು ಮಕ್ಕಳು ಮನೆಯಲ್ಲಿಲ್ಲ. ಅವರೆಲ್ಲಾ ಬೆಂಗಳೂರಿಗೆ ಹೋಗಿದ್ದಾರೆ. ಇಂದು ನಾನೊಬ್ಬನೇ ನೌಕರರೊಡನೆ ನಿಮ್ಮನ್ನು ಸ್ವಾಗತಿಸುತ್ತಿದ್ದೇನೆ. ಈ ವಿಚಾರ ನಾನು ನಿನ್ನೆ ತಮಗೆ ತಿಳಿಸದೇ ಇದ್ದುದಕ್ಕೆ ಕ್ಷಮೆಯಿರಲಿ ಎಂದರು ಮೆಲುದನಿಯಲ್ಲಿ. ನಾನು ಪರವಾಗಿಲ್ಲ, ಸರ್, ತಾವು ನನ್ನನ್ನು ಇಂದು ಬೆಳಗಿನ ಉಪಹಾರಕ್ಕೆ ಪ್ರೀತಿಯಿಂದ ಕರೆದುದು ನನಗೆ ದೊಡ್ಡ ಗೌರವ ಎಂದೆ.

ಬನ್ನಿ, ಉಪಹಾರ ಮಾಡೋಣವೇ? ಎನ್ನುತ್ತಾ ತಮ್ಮ ಮನೆಯ ಊಟದಹಾಲ್‌ಗೆ ಕೈ ಹಿಡಿದು ಕರೆದೊಯ್ದರು. ಹನ್ನೆರಡು ಮಂದಿ ಕೂರುವ ದೊಡ್ಡ ಕರಿಮರದ ಮೇಜು, ಮತ್ತು ಮೆತ್ತೆ ಹಾಸಿದ ಕರಿಮರದ ಕುರ್ಚಿಗಳು ಆ ಕೋಣೆಯಲ್ಲಿ ಶೋಭಿಸುತ್ತಿದ್ದವು. ಪಾಲಿಶ್‌ಹಾಕಿ ಮಿರುಗುತ್ತಿದ್ದ ಮೇಜಿಗೆ ಬಿಳಿಬಣ್ಣದ ಕಸೂತಿಯ ಮೇಲ್‌ಹಾಸಲು ಹಾಸಿತ್ತು. ನಾವು ಮೇಜಿನ ಅಡ್ಡ‌ಅಡ್ಡಕ್ಕೆ ಎದುರುಬದುರಾಗಿ ಕುಳಿತೆವು. ಬಟ್ಲರ್ ಬಂದು ನಮಗೆ ನ್ಯಾಪ್ಕಿನ್‌ಗಳನ್ನು ಕೊಟ್ಟು, ಪಿಂಗಾಣಿಯ ತಟ್ಟೆಗಳನ್ನು ನಮ್ಮೆದುರು ಜೋಡಿಸಿ, ಬೆಳ್ಳಿಯ ಚಮಚ, ಫೋರ್ಕ್ ಮತ್ತು ನೈಫ್ ಇರಿಸಿ, ಗ್ಲಾಸುಗಳಿಗೆ ಬೆಳ್ಳಿಯ ಜಗ್‌ನಿಂದ ನೀರು ತುಂಬಿದನು. ಬಟ್ಲರನೂ ಆತನ ಸಹಾಯಕನೂ ಒಂದೊಂದಾಗಿ ಐಟಮ್‌ಗಳನ್ನು ತಂದು ನಮ್ಮೆದುರಿಗೆ ಇಡತೊಡಗಿದರು.

ಬಿಸಿ ಬ್ರೆಡ್‌ಟೋಸ್ಟ್, ಕಾರ್ನ್‌ಪ್ಲೇಕ್ಸ್, ಪಾರಿಜ್, ಪರಾಠಾ, ಅಕ್ಕಿರೊಟ್ಟಿ ಮತ್ತು ಪೂರಿಗಳ ದೊಡ್ಡ ಸರ್ವಿಂಗ್‌ಡಿಶ್‌ಗಳು ನಮ್ಮೆದುರಿಗೆ ಬಂದುವು. ಎರಡು ತರಹೆಯ ಜಾಮ್, ಮಾರ್ಮಲೇಡ್, ಬೆಣ್ಣೆ, ಆಲೂಪಲ್ಯ, ಹಸಿಬಟಾಣಿಯ ಪಲ್ಯ, ತರಕಾರಿ ಸಾಗು, ಕರಿದ ಪಾನೀರಿನ ವ್ಯಂಜನ, ಕೇಸರಿಬಾತ್ ಮತ್ತು ಇನ್ನೆರಡು ತರಹದ ಸಿಹಿತಿಂಡಿಗಳು ನಮ್ಮ ಇದುರಿಗೆ ಇಡಲ್ಪಟ್ಟುವು.

ಕೇಸರೀ, ಸಂಕೋಚ ಮಾಡಬೇಡಿ, ದಯವಿಟ್ಟು ತಿಂಡಿ ತೆಗೆದುಕೊಳ್ಳಿ. ತಾವು ಎಲ್ಲ ಬಗೆಯ ತಿಂಡಿಗಳ ರುಚಿ ನೋಡಲೇಬೇಕು ಎನ್ನುತ್ತಾ ಶರೀಫ್ ಸಾಹೇಬರು ಬಿಸ್ಮಿಲ್ಲಾಹ್ ಎಂದರು. ನಾನು ದೇವರಿಗೆ ಕೈಮುಗಿದು ತಿನ್ನತೊಡಗಿದೆ.

ಶರೀಫ್ ಸಾಹೇಬರು ಒಂದು ಪರಾಠ ಮತ್ತು ಸ್ವಲ್ಪವೇ ಬಟಾಣಿ ಕಾಳಿನ ಪಲ್ಯ ತನ್ನ ತಟ್ಟೆಗೆ ಹಾಕಿಕೊಂಡು ತಿನ್ನುತ್ತಾ ಕೇಸರೀ, ನೀವು ಚೆನ್ನಾಗಿ ತಿಂಡಿತಿನ್ನಬೇಕು ನನ್ನ ಪ್ಲೇಟ್‌ಕಡೆಗೆ ನೋಡಬೇಡಿರಿ! ಈ ಪ್ರಾಯದಲ್ಲಿ ನನಗೆ ಮಿತ ಆಹಾರ ಸಾಕಾಗುತ್ತೆ. ನೀವು ಯುವಕ! ಸಂಕೋಚ ಮಾಡದೇ ಚೆನ್ನಾಗಿ ತಿನ್ನಬೇಕು. ಬೇಕಾದುದನ್ನು ಕೇಳಿ ಹಾಕಿಸಿಕೊಂಡು ತಿಂದರೆ ಮಾತ್ರ ನನಗೆ ತೃಪ್ತಿ! ಎಂದು ನಿಧಾನವಾಗಿ ಪರಾಠಾ ತಿನ್ನುತ್ತಾ ಕುಳಿತರು.

ನನಗೆ ಆಗ ಮೂವತ್ತನಾಲ್ಕರ ಪ್ರಾಯ. ಕಲ್ಲು ತಿಂದರೂ ಕರಗಿಸಿಕೊಳ್ಳುವ ವಯಸ್ಸು! ನಾನು ಆ ದಿನಗಳಲ್ಲಿ ಚೆನ್ನಾಗೇ ಊಟ ಮಾಡುತ್ತಿದ್ದೆ. ಆದರೂ, ಶರೀಫ್ ಸಾಹೇಬರ ಟೇಬಲ್ ಮೇಲಿದ್ದ ತಿನಸುಗಳ ವೈವಿಧ್ಯ ನೋಡಿ ಆಗಲೇ ಬೆರಗಾಗಿದ್ದೆ! ಆದರೂ, ಎಲ್ಲಾ ತರಹದ ಐಟಮ್‌ಗಳ ತಟ್ಟೆಗಳಿಂದ ಬೇಕಾದಷ್ಟು ಬಡಿಸಿಕೊಂಡು ಚೆನ್ನಾಗೇ ತಿಂದೆ. ಶರೀಫ್ ಸಾಹೇಬರು ಹೆಚ್ಚಿಗೆ ಏನೂ ಬಡಿಸಿಕೊಂಡು ತಿನ್ನದಿದ್ದರೂ, ನನಗೆ ಮಾತ್ರ ಬಹುವಾಗಿ ಉಪಚಾರ ಮಾಡಿದರು. ನನ್ನ ಉಪಹಾರ ಮುಗಿಯುತ್ತಾ ಬಂದಂತೆ ಅವರು ತನ್ನ ಬಟ್ಲರಿಗೆ ಹಣ್ಣು ಬಡಿಸು ಎಂದರು. ಕೆಲವು ತಟ್ಟೆಗಳು ನಮ್ಮೆದುರು ಹಾಜರಾದುವು….! ಹೆಚ್ಚಿದ ಪಪ್ಪಾಯಿ, ಅನಾನಾಸು, ಮಾವು, ಮೂಸಂಬಿ, ಕಾಬೂಲಿ ದಾಳಿಂಬೆ, ದ್ರಾಕ್ಷಿ, ಬಾಳೆಹಣ್ಣುಗಳ ತಟ್ಟೆಗಳು ನಮ್ಮೆದುರು ಕುಳಿತವು. ಶರೀಫ್ ಸಾಹೇಬರು ನಾಲ್ಕು ಹೋಳು ಪಪ್ಪಾಯಿ ಹಣ್ಣು ತನ್ನ ತಟ್ಟೆಗೆ ಬಡಿಸಿಕೊಂಡರು. ಈ ವಯಸ್ಸಿನಲ್ಲಿ ಇಷ್ಟು ನನಗೆ ಸಾಕು! ನೀವು ಮಾತ್ರ ಎಲ್ಲಾ ತರಹೆಯ ಹಣ್ಣುಗಳನ್ನೂ ತಿನ್ನಬೇಕು! ಎನ್ನುತ್ತಾ ಒತ್ತಾಯ ಮಾಡಿದರು. ನಾನು ಎಲ್ಲಾ ಹಣ್ಣುಗಳ ರುಚಿಯನ್ನು ನೋಡುವಷ್ಟರಲ್ಲಿ ನನ್ನ ಹೊಟ್ಟೆ ಬಿರಿಯುವಂತಾಯಿತು.

ಕೇಸರಿ! ನೀವು ನಮ್ಮ ತೋಟದ ಆರೆಂಜ್ ರುಚಿ ನೋಡಬೇಕಿತ್ತು! ಆದರೆ, ಈಗ ಆರೆಂಜ್ ಸೀಸನ್ ಅಲ್ಲ! ಎಂದು ಶರೀಫ್ ಸಾಹೇಬರು ವ್ಯಥೆಪಟ್ಟರು.

ಬಿಸಿಬಿಸಿ ಟೀ ಚಿತ್ತಾರದ ಪಿಂಗಾಣಿಯ ವಿಲಾಯತೀ ಕಪ್ಪುಗಳಲ್ಲಿ ಬಂತು! ನಾವು ಟೀ ಕುಡಿದಂತೆಯೇ ಬಟ್ಲರ್ ಕಪ್ಪುಗಳಿಗೆ ಟೀ ತುಂಬಿಸತೊಡಗಿದ. ಶರೀಫ್ ಸಾಹೇಬರು ತಾನು ಕಪ್ಪು ಟೀ ಸೇವಿಸಿದರು. ನನಗೂ ಕಪ್ಪು ಟೀ ಆಗಬಹುದು! ಎಂದೆ.

ಕೇಸರೀ! ನಿಮ್ಮ ಪ್ರಾಯಕ್ಕೆ ಬೆಳಗಿನ ಹೊತ್ತು, ಹಾಲುಹಾಕಿದ ಟೀಯೇ ಸರಿ! ಅವರಿಗೆ ಹಾಲು ಮತ್ತು ಸಕ್ಕರೆ ಬೆರಸಿದ ಟೀ ಹಾಕು ಎಂದು ಬಟ್ಲರನಿಗೆ ಆಜ್ಞಾಪಿಸಿದರು. ಒಂದು ಅರ್ಧ ಲೀಟರಿನಷ್ಟು ಹಾಲುಸಕ್ಕರೆ ಬೆರೆಸಿದ ಅತ್ಯಂತ ರುಚಿಯಾದ ಒಳ್ಳೆಯ ಆರೆಂಜ್ ಪೆಕ್ಕೋ ವೆರೈಟಿಯ ಟೀಯನ್ನು, ಆದಿನ ಅವರು ನೀಡಿದ ಆ ಬ್ರಹ್ಮಾಂಡ ಬ್ರೇಕ್‌ಫಾಸ್ಟ್‌ನ ಮೇಲೆ ಸೇವಿಸಿದ್ದೆ..!! ಅಂತೂ ನಮ್ಮ ಬ್ರೇಕ್‌ಫಾಸ್ಟ್ ಹನ್ನೆರಡೂ ಮುಕ್ಕಾಲಕ್ಕೆ ಕೊನೆಗೊಂಡಿತು!

ಬನ್ನಿ ನನ್ನ ಲೈಬ್ರರಿ ಕಮ್ ಹೋಂ ಆಫೀಸಿನಲ್ಲಿ ಕೂರೋಣ! ಎನ್ನುತ್ತಾ ಅವರ ಆಫೀಸಿಗೆ ಕರೆದೊಯ್ದರು. ಲೆದರ್ ಕವರ್ ಮಾಡಿದ್ದ ಅರಾಮಾಸನದಲ್ಲಿ ನನ್ನನ್ನು ಕುಳ್ಳಿರಿಸಿದರು. ಬಟ್ಲರ್ ಬೆಳ್ಳಿಯ ಟ್ರೇಯಲ್ಲಿ ಸ್ಟೇಟ್‌ಎಕ್ಸ್‌ಪ್ರೆಸ್ ಇಂಟರ್‌ನ್ಯಾಷನಲ್ ಸಿಗರೇಟುಗಳು ಮತ್ತು ಬೆಳ್ಳಿಯ ಫ್ಯಾಬೆರ್ಜೆ ಲೈಟರ್ ತಂದಿರಿಸಿದ. ನಮ್ಮ ಪಕ್ಕಕ್ಕೆ ಚಿಕ್ಕ ಸ್ಟೂಲ್‌ಗಳನ್ನು ತಂದಿರಿಸಿ,  ಅದರ ಮೇಲೆ ಆಷ್‌ಟ್ರೇಗಳನ್ನು ಇಟ್ಟು ಹೊರಟುಹೋದ. ನಾನು ಸಿಗರೇಟು ಸೇದುವ ವಿಚಾರ ಶರೀಫ್ ಸಾಹೇಬರಿಗೆ ಗೊತ್ತಿತ್ತು. ಆದ್ದರಿಂದ, ನಾನು ಸಂಕೋಚಪಡದೇ(ಅಂದರೆ ಬೇಡಬೇಡ ಎನ್ನದೇ) ಅವರು ಸಿಗರೇಟ್ ನನ್ನಮುಂದೆ ಚಾಚಿದಾಗ ತೆಗೆದುಕೊಂಡು ಸೇದಿದೆ. ಬಹುತೇಕ ತರುಣ ಪ್ಲಾಂಟರುಗಳು ಹಿರಿಯ ಪ್ಲಾಂಟರುಗಳ ಎದುರು ಸಿಗರೇಟ್ ಸೇದುವುದಿಲ್ಲ. ಈ ಪರಿಪಾಠ ನಾನೂ ಇಟ್ಟುಕೊಂಡಿದ್ದೆ. ಆದರೆ, ನಾನು ನಮ್ಮ ಆಡಿಟರ ಆಫೀಸಿನಲ್ಲಿ ಸಿಗರೇಟ್ ಸೇದುತ್ತಿದ್ದುದನ್ನು ಶರೀಫ್ ಸಾಹೇಬರು ಮೊದಲೇ ಕಂಡಿದ್ದರು. ಆದ್ದರಿಂದ ನನಗೆ ಆ ಬಗ್ಗೆ ಮುಜುಗರ ಅನ್ನಿಸಲಿಲ್ಲ.

ನಾವು ಅದು ಇದು ಮಾತನಾಡುತ್ತಾ, ನಾನು ಹಿಂದಿನ ಕಾಲದ ಕಾಫಿ ಪ್ಲಾಂಟಿಂಗ್ ಬಗ್ಗೆ ಅವರ ಅನುಭವದಿಂದ ಬಹಳಷ್ಟು ವಿಚಾರಗಳನ್ನು ಕೇಳಿತಿಳಿದುಕೊಂಡೆ. ತದನಂತರ,  ನನ್ನ ಕುತೂಹಲ ತಣಿಸಿಕೊಳ್ಳಲು ಸರ್, ತಾವು ಎಷ್ಟೊತ್ತಿಗೆ ಮಧ್ಯಾಹ್ನದ ಊಟ ಮಾಡುತ್ತೀರಿ? ಎಂದು ಕೇಳಿದೆ. ಅದಕ್ಕೆ ಅವರು ನನಗೆ ಮಧ್ಯಾಹ್ನದ ಊಟದ ಪರಿಪಾಠವೇ ಇಲ್ಲ..! ಅಂದುಬಿಟ್ಟರು.

ಈ ದಿನಗಳಲ್ಲೂ ಬೆಳಗ್ಗೆ ನಾಲ್ಕಕ್ಕೇ ಎದ್ದು, ನಮಾಜು ಮುಗಿಸಿ, ಐದುಗಂಟೆಗೆ ಮನೆಬಿಟ್ಟರೆ, ಆರು ಗಂಟೆಗೆ ನಮ್ಮ ತೋಟ ಸೇರುತ್ತೇನೆ. ಇಬ್ಬನಿ ಬೀಳುತ್ತಿದ್ದರೂ ಒಂದು ಸುತ್ತು ನಡೆದು ತೋಟ ಸುತ್ತುತ್ತೇನೆ. ಏಳೂಕಾಲಕ್ಕೆ ಆಳುಗಳ ‘ಗೆಣಿತೆ (ಬೆಳಗಿನ ಹಾಜರಿ) ಮಾಡಿ, ಕೆಲಸಕಾರ್ಯಗಳನ್ನು ಶುರುಮಾಡಿಸುತ್ತೇನೆ. ಆ ನಂತರ ಅಲ್ಲಿಂದ ಹೊರಟು ಸಾಧಾರಣ ಬೆಳಗಿನ ಹತ್ತೂಕಾಲಕ್ಕೆ ಚಿಕ್ಕಮಗಳೂರಿನ ಮನೆ ಸೇರುತ್ತೇನೆ. ನಂತರ ಸ್ನಾನ ಮುಗಿಸಿ ಬೆಳಗಿನ ಹನ್ನೊಂದಕ್ಕೆ ಸರಿಯಾಗಿ ಉಪಹಾರ ಸೇವಿಸುತ್ತೇನೆ. ಲಂಚ್ ಎಂದೂ ತೆಗೆದುಕೊಳ್ಳುವುದಿಲ್ಲ.  ಮಧ್ಯೆ ಎಲ್ಲಾದರೂ, ಲಭ್ಯವಿದ್ದರೆ ಒಂದು ಟೀ! ಇಲ್ಲದಿದ್ದರೆ ಏನೂ‌ಇಲ್ಲ!  ರಾತ್ರಿ ಒಂಬತ್ತಕ್ಕೆ ಸರಿಯಾಗಿ ಊಟ. ಹತ್ತಕ್ಕೆ ನಿದ್ರೆ. ಇದು ನನ್ನ ದಿನಚರಿ ಎಂದು ವಿವರಿಸಿದರು. ಅವರ ಕಷ್ಟಜೀವನ ವನ್ನು ಕಂಡು ನನಗೆ ಅಚ್ಚರಿಯೆನಿಸಿತು.

ಅವರು ಬೆಳಗಿನ ಹನ್ನೊಂದಕ್ಕೆ ತಿಂಡಿ ತಿನ್ನುತ್ತಾರೆ! ಎಂಬ ಸಂಗತಿ ಮೊದಲು ನನಗೆ ತಿಳಿದಾಗ, ನನ್ನ ತಲೆಯಲ್ಲಿ ಏನೇನೋ ಕಲ್ಪನೆಗಳು ಮೂಡಿದ್ದುವು. ಶ್ರೀಮಂತರಾದ ಶರೀಫ್ ಸಾಹೇಬರು ಕ್ಲಬ್ ಅಥವಾ ಪಾರ್ಟಿಗಳೆಂದು ರಾತ್ರಿ ಸಮಯ ಕಳೆಯುತ್ತಾ, ಬೆಳಗಿನಜಾವ ಹಾಸಿಗೆ ಸೇರಿ, ಹತ್ತಕ್ಕೆ ಏದ್ದು, ಬೆಳಗಿನ ಹನ್ನೊಂದಕ್ಕೆ ತಿಂಡಿ ತಿನ್ನುವ ವಿಲಾಸೀ ಶ್ರೀಮಂತ ಎಂಬ ಅಭಿಪ್ರಾಯ ಮಾಡಿಕೊಂಡಿದ್ದುದಕ್ಕೆ ನನಗೆ ಬಹು ನಾಚಿಕೆ ಎನ್ನಿಸಿತು. ಪಿತೃಸಮಾನ ವ್ಯಕ್ತಿಯಾದ ಅವರ ಬಗ್ಗೆ ಹುಂಬನಂತೆ ಆ ರೀತಿ ಆಲೋಚಿಸಿದುದಕ್ಕೆ ಅವರ ಕ್ಷಮಾಪಣೆಯನ್ನು ಬೇಡಿದೆ. ಅದಕ್ಕೆ ಅವರು ನಗುತ್ತಾ ಅದೊಂದು ಮ್ಯೂಚುವಲ್‌ಫೀಲಿಂಗ್ ಆಗಿತ್ತು! ಎಂದರು. ನಾನು ಅದು ಹೇಗೆ ಸರ್? ಎಂದೆ.

ನಾನು ಕೂಡ ನಿಮ್ಮನ್ನು ಮೇಲ್ನೋಟದಿಂದ ತಪ್ಪುತಿಳಿದಿದ್ದೆ! ನಿಮ್ಮ ಜೀನ್ಸ್‌ಪ್ಯಾಂಟ್, ಫ್ಯಾನ್ಸಿಹ್ಯಾಟ್‌ಗಳು, ಫ್ರೆಂಚ್‌ಗಡ್ಡ, ಲೇಟೆಸ್ಟ್ ಮಾರುತಿ ಜಿಪ್ಸಿ ಜೀಪ್, ಘಟ್ಟಿಯಾಗಿ ಕಿರಿಚುವ ನಿಮ್ಮ ಕಾರಿನ ಮ್ಯೂಸಿಕ್‌ಸಿಸ್ಟಮ್ ಇವನ್ನೆಲ್ಲಾ ನೋಡಿ, ನಿಮ್ಮನ್ನು ‘ಒಬ್ಬ ಶೋಕಿಯ ಬೆಂಗಳೂರುವಾಸಿ ಹುಡುಗ ಎಂದು ತಿಳಿದಿದ್ದೆ. ನಿಮ್ಮ ಆಡಿಟರ್ ಮುಖಾಂತರ ನಿಮ್ಮ ಬಗ್ಗೆ ಹೆಚ್ಚಿನ ವಿಚಾರಗಳು ತಿಳಿದುವು. ನೀವು ಬೆಂಗಳೂರಿನಲ್ಲಿ ಮನೆ ಮಾಡಿದ್ದರೂ, ಶುಕ್ರವಾರ ಸಾಯಂಕಾಲ ಸಂಸಾರಸಮೇತ ಹೊರಟು, ರಾತ್ರಿಯೆಲ್ಲಾ ಡ್ರೈವ್‌ಮಾಡಿ ತೋಟ ಸೇರಿ, ಕೆಲಸಕಾರ್ಯ ಗಮನಿಸುತ್ತೀರಿ. ಭಾನುವಾರ ರಾತ್ರಿ ಎರಡು ಗಂಟೆಗೆ ಹೊರಟು, ಮುನ್ನೂರ ನಾಲ್ವತ್ತು ಕಿಲೋಮೀಟರ್ ಡ್ರೈವ್‌ಮಾಡಿ ಸೋಮವಾರ ಬೆಳಗ್ಗೆ ಎಂಟಕ್ಕೆ ಮಕ್ಕಳನ್ನು ಹೇಗೆ ಶಾಲೆಗೆ ಕಳುಹಿಸುತ್ತೀರಿ, ಎಂಬ ವಿಚಾರ ನನಗೆ ಅವರಿಂದ ತಿಳಿಯಿತು. ಸ್ಪ್ರಿಂಕ್ಲರ್‌ಇರಿಗೇಶನ್, ರಾಸಾಯನಿಕ ಸ್ಪ್ರೇ ಮತ್ತು ಗೊಬ್ಬರ ಹಾಕುವಿಕೆಯಲ್ಲಿ ನಿಮಗಿರುವ ಅನುಭವ, ತೋಟದ ಆಳುಗಳ ಮತ್ತು ನೌಕರರ ಮೇಲಿನ ಕರುಣೆ ಹಾಗೂ ಅವರ ಮೇಲಿನ ಹಿಡಿತ, ಇವುಗಳ ಬಗ್ಗೆ ಕೂಡಾ ನಮ್ಮ ಆಡಿಟರ್ ನನಗೆ ತಿಳಿಸಿ ಹೇಳಿದರು. ಕೆಲವುಸಲ ಮೇಲ್ನೋಟದ ಅಭಿಪ್ರಾಯ ನಿಜವಲ್ಲ ಎಂದು ಸೂಕ್ಷ್ಮವಾಗಿ ನಾವು ಪರಿಶೀಲಿಸಿದಾಗ ಮಾತ್ರ ಗೊತ್ತಾಗುತ್ತದೆ..! ಮೇಲ್ನೋಟಕ್ಕೆ ನಾವಿಬ್ಬರೂ ಇತರರಿಗೆ ವಿಚಿತ್ರ ವ್ಯಕ್ತಿಗಳಾಗಿ ಕಂಡುಬರುತ್ತೇವೆ, ವಾಸ್ತವದಲ್ಲಿ, ನಾವಿಬ್ಬರೂ ಕಷ್ಟಪಟ್ಟು ಬದುಕುವ ಪ್ಲಾಂಟರುಗಳು. ಅದಕ್ಕೇ ನಾವಿಬ್ಬರು ವಯಸ್ಸಿನ ಅಂತರವಿದ್ದರೂ ಒಳ್ಳೆಯ ಸ್ನೇಹಿತರು..ಎಂದರು.

ಸುಮಾರು ಒಂದು ಗಂಟೆಯ ಸಮಯಕ್ಕೆ ನಾನು ಶರೀಫ್ ಸಾಹೇಬರಿಗೆ ಧನ್ಯವಾದ ಅರ್ಪಿಸುತ್ತಾ ಹೊರಡಲು ಎದ್ದೆ. ಹೊರಗಿನ ಹಜಾರಕ್ಕೆ ಬಂದು ನೋಡುತ್ತೇನೆ! ನನ್ನ ಬೂಟುಗಳು ಪಾಲಿಷ್ ಆಗಿ ಕನ್ನಡಿಯಂತೆ ಹೊಳೆಯುತ್ತಿವೆ.

ನನ್ನ ಬೂಟುಗಳ ಜತೆಗೆ ನಿಮ್ಮ ಬೂಟುಗಳನ್ನೂ ನಮ್ಮ ಚೋಕ್ರಾ ಪಾಲಿಶ್ ಮಾಡಿದ್ದಾನೆ..! ಎಂದರು ಶರೀಫ್ ಸಾಹೇಬರು ನಗುತ್ತಾ..!!

ಅವರ ಬಂಗಲೆಯ ಪೋರ್ಟಿಕೋದಲ್ಲಿ ನನ್ನ ಜೀಪ್ ವ್ಯಾಕ್ಸ್ ಪಾಲಿಶ್ ಹಾಕಿಸಿಕೊಂಡು ಹೊಳೆಯುತ್ತಾ ನಿಂತಿತ್ತು. ಸರ್! ತಮ್ಮ ವಾಹನಗಳ ಜತೆಗೆ ಇಂದು ನನ್ನ ಜೀಪಿಗೂ ಸ್ನಾನ ಮತ್ತು ಪಾಲಿಶ್ ಆಗಿದೆ! ಎನ್ನುತ್ತಾ ಶ್ರೀಮಾನ್ ಶರೀಫ್ ಸಾಹೇಬರಿಗೆ ವಂದನೆ ಹೇಳಿ ನನ್ನ ಜೀಪ್ ಹತ್ತಿದೆ.

ನನಗೆ ಒಬ್ಬ ಬಕಾಸುರನಿಗೆ ತಿನ್ನಿಸುವಷ್ಟು ಉಪಹಾರ ತಿನ್ನಿಸಿ, ತಾನು ಮಾತ್ರ ಒಂದು ರೊಟ್ಟಿ ಮತ್ತು ನಾಲ್ಕು ಚೂರು ಪಪ್ಪಾಯಿ ಹಣ್ಣು ತಿಂದಿದ್ದರು. ನನಗೋಸ್ಕರ ಅವರು ಅಷ್ಟು ಅದ್ದೂರಿಯ ಉಪಚಾರ ಯಾಕೆ ಮಾಡಬೇಕಿತ್ತು? ಎಂದು ವಿಸ್ಮಯಪಟ್ಟೆ. ಇದು ಅವರ ಸ್ವಭಾವ ಮತ್ತು ದೊಡ್ಡ ಗುಣ ಎಂದು ನಾನು ಹಲವರಿಂದ ಕೇಳಿದ್ದೆ.

ವಾಪಾಸ್ ಹೊರಡುತ್ತಾ ಶರೀಫ್ ಸಾಹೇಬರ ಶಿಸ್ತು ಮತ್ತು ಕ್ರಮ ಅಳವಡಿಸಿಕೊಂಡರೆ ಬದುಕು ಎಷ್ಟು ಚೆನ್ನ! ಅಂದುಕೊಂಡೆ. ಆದರೆ, ಈ ಜನ್ಮದಲ್ಲಿ ನನ್ನಿಂದ ಶರೀಫ್ ಸಾಹೇಬರ ಶಿಸ್ತು ಮತ್ತು ಅತಿಥಿಸತ್ಕಾರಗಳನ್ನು ಅನುಕರಿಸಲು ಸಾಧ್ಯವೇ ಇಲ್ಲ! ಎಂದು ಅನಿಸಿತು.

* * *