ನನ್ನ ಮಕ್ಕಳು ಹೈಸ್ಕೂಲಲ್ಲಿ ಓದುತ್ತಿದ್ದಾಗ ಸಂಗೀತ ಮಾಸ್ಟರರೊಬ್ಬರು ಮನೆಗೆ ಬಂದು ನನ್ನ ಮಕ್ಕಳಿಬ್ಬರಿಗೂ ಸಂಗೀತ ಹೇಳಿಕೊಡುತ್ತಿದ್ದರು. ಅವರಿಗೆ ಸ್ವಲ್ಪ ಹಣದ ತಾಪತ್ರಯ ಯಾವಾಗಲೂ ಇರುತ್ತಿತ್ತು. ನಮ್ಮ ಮನೆ ಪಾಠದಿಂದ ಅವರಿಗೆ  ಸ್ವಲ್ಪ ಸಹಾಯವೂ ಆಗುತ್ತಿತ್ತು. ನಮ್ಮ ಮಕ್ಕಳಿಗೆ ಸಂಗೀತದಲ್ಲಿ ಬಹಳ ಆಸ್ಥೆ ಇಲ್ಲದಿದ್ದರೂ, ನಮ್ಮ ಒತ್ತಾಯಕ್ಕೆ ಸಂಗೀತ ಕಲಿಯುತ್ತಿದ್ದರು. ದೊಡ್ಡ ಮಗಳು ರಾಧಿಕಾ ಪಿಯೂಸಿ ಕ್ಲಾಸಿಗೆ ಸೇರಿದೊಡನೆ, ಡ್ಯಾಡಿ, ನನಗೆ ಇನ್ನು ಸಂಗೀತ ಬೇಡ. ನಾನು ಓದಿ ಮೆಡಿಕಲ್ ಸೇರಬೇಡವೇ? ಎಂದು ಸಂಗೀತಕ್ಕೆ ಚಕ್ಕರ್ ಹಾಕಿಯೇಬಿಟ್ಟಳು. ಚಿಕ್ಕ ಮಗಳು ರಚನಾ ತನ್ನ ಅಕ್ಕ ಹೇಳಿದ್ದು ಕೇಳಿ, ನಾನು ಕಂಪ್ಯೂಟರ್‌ಕ್ಲಾಸ್ ಸೇರಿಕೊಳ್ಳುವೆ. ನನಗೂ ಸಂಗೀತ ಪಾಠ ಬೇಡವೇ ಬೇಡ ಎಂದು ಹಠ ಹಿಡಿದಳು. ನನಗೇಕೋ ಸಂಗೀತ ಮಾಸ್ಟರ ಪಾಠ ನಿಲ್ಲಿಸಲು ಮನಸ್ಸು ಒಪ್ಪಲಿಲ್ಲ.

ಅವರ ಆದಾಯಕ್ಕೆ ತೊಂದರೆ ಆಗಬಾರದು ಎಂಬ ಹಿರಿಯಾಸೆಯಿಂದ ನನ್ನ ಪತ್ನಿ ಸರೋಜಮ್ಮಗೆ ಸಂಗೀತ ಕಲಿಯಲು ಜುಲುಮೆ ಮಾಡಿದೆ. ಅದಕ್ಕೆ ಅವಳು ನಾನು ಸಂಗೀತ ಹಾಡುತ್ತಾ ಕೂತರೆ ನಿಮಗೆ ಹೊತ್ತುಹೊತ್ತಿಗೆ ಅಡುಗೆಮಾಡಿ ಬಡಿಸುವುದು ಯಾರು? ಎನ್ನುತ್ತಾ ಜಾರಿಕೊಂಡಳು.

ಕೊನೆಗೆ ನಾನು ಒಂದು ದೊಡ್ಡ ಮಹತ್ಕಾರ್ಯಕ್ಕೆ ಸಿದ್ಧನಾದೆ. ನಾನೇ ಮಕ್ಕಳ ಬದಲಿಗೆ ಸಂಗೀತ ಕಲಿಯುವುದಾಗಿ ಹೇಳಿ ಮಾಸ್ಟರನ್ನು ಒಪ್ಪಿಸಿದೆ.

ಸರಿ, ಶುರುವಾಯಿತು ನನ್ನ ಸಂಗೀತ ಪಾಠ…!! ಮೊದಲ ದಿನ ಸಂಗೀತ ಪಾಠವು ಸ, ರಿ, ಗ, ಮ…. ಎಂದು ಶುರುವಾಯಿತು. ಪದೇ ಪದೇ ಮಾಸ್ತರರು ನನ್ನನ್ನು ತಿದ್ದಿದರು. ಅವರ ತಿದ್ದುವಿಕೆಯಿಂದ ನನಗೆ ಮುಖಭಂಗವಾದಂತೆ ಅನ್ನಿಸಿತು. ನಾನು ಸರ್, ನನಗೆ ಈ ಬಾಲಿಶವಾದ ‘ಸರಿಗಮ ಬೇಡ..! ನಾಳೆಯಿಂದ ನನಗೆ ಪುರಂದರದಾಸರ ಕೀರ್ತನೆಗಳನ್ನು ಕಲಿಸಿರಿ. ನನಗೆ ದೇವರ ಭಜನೆ ಹೇಳಲು ಬಂದರೆ ಸಾಕು ಎಂದು ಹೇಳಿದೆ. ನನ್ನ ಕೇಳಿಕೆಗೆ ಅವರು ಮನಸಾರೆ ಒಪ್ಪಿದರು.

ಮರುದಿನ ನನಗೆ ದಾಸನ ಮಾಡಿಕೊ ಎನ್ನಾ…. ಎಂಬ ಕೀರ್ತನೆಯ ಪಾಠ ಶುರುವಾಯಿತು. ಎಲ್ಲಿತ್ತೋ ನಮ್ಮ ಕರೀ ಬೆಕ್ಕು ಬಿಲ್ಲಿ ನಾವು ಕುಳಿತಿದ್ದಲ್ಲಿಗೆ ಬಂದು ಮಾಸ್ಟರಿಗೆ ತನ್ನ ಚೋಟಿನಲ್ಲಿ ಉಗುರು ಬಿಡದೆ ಹೊಡೆಯಲು ಶುರುಮಾಡಿತು. ಮಾಸ್ಟರರು ಹೆದರಿ ಕಂಗಾಲು! ಪಾಪ…! ನಮ್ಮ ಬಿಲ್ಲಿಗೆ ಮಾಸ್ಟರು ಕಿರುಚಾಡಿ ನನ್ನನ್ನು ಅಳಿಸುತ್ತಿದ್ದಾರೆ ಎಂತ ಅನ್ನಿಸಿರಬೇಕು..!! ನಾನು ಸರೋಜಳನ್ನು ಕರೆದು ಬೆಕ್ಕನ್ನು ನನ್ನ ಪಾಠ ಮುಗಿಯುವ ತನಕ ಕೂಡಿಹಾಕುವಂತೆ ಹೇಳಿ, ಗಂಟಲು ಸರಿಮಾಡಿ ಕುಳಿತೆ. ಪುನಃ ನಾನು ಹಾಡಲು ಶುರುಮಾಡಿದಾಗ, ಮನೆಯ ಅಂಗಳದಲ್ಲಿ ಕಟ್ಟಿಹಾಕಿದ್ದ ನಮ್ಮ ಗ್ರೇಟ್‌ಡೇನ್ ನಾಯಿ ರಕ್ಷಾ ಮತ್ತು ಅವನ ಸಂಗಾತಿ ಫಾಕ್ಸ್ ಟೆರ್ರಿಯರ್ ರಂಜನ್ ಒಂದೇ ಸಮನೆ ನನಗಿಂತ ಜೋರಾಗಿ ಮತ್ತು ನನಗಿಂತ ಇಂಪಾಗಿ(!)…. ಆಲಾಪನೆ ಮಾಡಲುತೊಡಗಿದುವು.

ಒಂದು ಕಡೆ ಮಾಸ್ತರರ ಅರಚಾಟ, ಅದಕ್ಕೆ ಉತ್ತರವಾಗಿ ನನ್ನ ಕಿರುಚಾಟ….!,  ನನ್ನ ಸ್ವರ ನಿಂತ ಕೂಡಲೇ ರಕ್ಷಾ ಮತ್ತು ರಂಜನರ ಉಚ್ಚಸ್ಥಾಯಿಯ ಊಳಿಡುವಿಕೆ ಇವನ್ನು ಕೇಳಲಾರದೆ ಸರೋಜಮ್ಮ ನಮ್ಮ ನಾಯಿಗಳಿಗೆ ಸುಮ್ಮನಿರುವಂತೆ ಹೆದರಿಸಿ ನೋಡಿದಳು. ಆದರೆ ನಮ್ಮ ಮುದ್ದಿನ ನಾಯಿಗಳು ಅವಳ ಬೆದರಿಕೆಗೆ ಬಗ್ಗದೇ ಇನ್ನೂ ಜೋರಾಗಿ ಊಳಿಡಲು ಆರಂಭಿಸಿದುವು.

ನೆರೆಕರೆಯವರೂ ಕಿಟಿಕಿ ತೆರೆದು ನಮ್ಮ ಮನೆಯ ಕಡೆ ನೋಡಲು ಆರಂಭಿಸಿದಾಗ, ಸರೋಜ ತಡೆಯಲಾರದೇ, ನನಗೂ ಮಾಸ್ಟರಿಗೂ ಬಿಸಿಬಿಸಿ ಕಾಫಿ ತಂದು ನಮ್ಮ ಸಂಗೀತಕ್ಕೆ ಭಂಗ ತಂದಳು.

ಮಾಸ್ಟರು ಯಾಕೋ ಕಸಿವಿಸಿಗೊಂಡಂತೆ ಕಂಡರು. ಏನೋ ಯೋಚಿಸುತ್ತಾ ಮೌನವಾಗಿ ಕಾಫಿ ಕುಡಿದು, ಮರುದಿನ ಬರುವುದಾಗಿ ಹೇಳಿ, ಹೊರಟುಹೋದರು. ಆ ನಂತರ ನಮ್ಮ ಸಂಗೀತಮಾಸ್ಟರರು ನಮ್ಮ ಮನೆಗೆ ಬರುವುದು ಬಿಡಿ, ನಮ್ಮ ಬೀದಿಯಲ್ಲಿ ಕೂಡಾ ಇದುವರೆವಿಗೆ ಓಡಾಡಿಲ್ಲ.

* * *