ನನ್ನ ನೆರೆಮನೆಯ ಗೆಳೆಯ ಡಾ.ಶ್ರೀನಿವಾಸನ್ ಇಂಗ್ಲೆಂಡ್ ದೇಶವಾಸಿಯಾಗಿ ಸುಮಾರು ಮೂವತ್ತೈದು ವರ್ಷಗಳು ಕಳೆದಿವೆ. ಅವರು ಇಂದು ಬ್ರಿಟಿಷ್ ಪ್ರಜೆ. ಅವರ ಹೆಂಡತಿ ಶ್ರೀiತಿ ಸರಸ ಮತ್ತು ಮಕ್ಕಳಾದ ಉಮಾನಂದಿನಿ ಮತ್ತು ಶ್ರೀನಂದನ್ ಅಪ್ಪಟ ಭಾರತೀಯ ರಕ್ತದವರಾದರೂ ಇಂದು ಬ್ರಿಟಿಷ್ ಪ್ರಜೆಗಳು. ಇವರು ತಾಯ್ನಾಡನ್ನು ಮರೆಯಲಾರದ ಭಾರತೀಯರು.

ಪ್ರತಿವರ್ಷ ಅವರುಗಳು ಭಾರತಕ್ಕೆ ಬಂದು ತಮ್ಮ ಬಳಗದವರನ್ನೆಲ್ಲ ನೋಡಿಕೊಂಡು, ತಮಗೆ ಇಷ್ಟವಾದ ಎಲ್ಲಾ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿಕೊಂಡು,  ತಮ್ಮ ದೇಶಕ್ಕೆ ಹಿಂದಿರುಗುತ್ತಾರೆ. ಅವರು ಭಾರತಕ್ಕೆ ಬಂದಾಗ ಇಂಗ್ಲೆಂಡ್ ದೇಶದ ಶಿಸ್ತು, ಶುಚಿತ್ವ ಮತ್ತು ಶ್ರೀಮಂತಿಕೆಯ ಬಗ್ಗೆ ಮಾತನಾಡುತ್ತಾ ಅವರ ದೇಶವನ್ನು ಬಹಳ ಹೊಗಳುತ್ತಾರೆ. ಅಲ್ಲಿನ ಜನರ ನಾಗರಿಕತೆ ಮತ್ತು ಸಾಮಾಜಿಕ ಪ್ರಜ್ಞೆಗಳನ್ನು ಕೊಂಡಾಡುತ್ತಾರೆ. ಇಂಗ್ಲೆಂಡಿನ ಜನರ ಸಮಾನತೆ ಮತ್ತು ಸಾಮಾಜಿಕ ಭದ್ರತೆಯನ್ನು ಈ ದೇಶದಲ್ಲಿ ಆಲೋಚಿಸಲು ಕೂಡಾ ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಏನು ಮಾಡೋಣ! ದೂರ ಹೋದಷ್ಟೂ ತಾಯ್ನಾಡಿನ ಸೆಳೆತ ನಮ್ಮವರಿಗೆ ಜಾಸ್ತಿಯಾಗುತ್ತಾ ಹೋಗುತ್ತದೆ. ಇದು ಭಾರತೀಯರಲ್ಲಿ ಇರುವ ಸಹಜ ಗುಣ ಅಲ್ಲವೆ?

ಬೆಂಗಳೂರಿಗೆ ಬಂದಾಗ, ಅವರು ಆಟೋ ಹತ್ತಿ ಬಳೇಪೇಟೆ, ಚಿಕ್ಕಪೇಟೆ, ಅವೆನ್ಯೂರಸ್ತೆ ಮತ್ತು ಶಿವಾಜಿನಗರದ ಜನನಿಬಿಡ ಪ್ರದೇಶಗಳನ್ನು ಸಂಚರಿಸಿ ಬರುತ್ತಾರೆ. ಗಾಜಿನಬಳೆ, ಹಣೆಗಿಡುವ ಕುಂಕುಮ, ತಿಲಕಗಳು, ದೇವರಪೂಜೆಗೆ ಬೇಕಾದ ಆರತಿ, ದೀಪಗಳು, ಒಳ್ಳೆಯ ಅಗರಬತ್ತಿ, ಶ್ರೀಗಂಧದ ಉಂಡೆ, ಪನ್ನೀರು, ಪಟ್ಟೆಯ ಸೀರೆ. ಹಲವಾರು ಬ್ಲೌಸ್‌ಪೀಸುಗಳು, ಗಂಡುಮಕ್ಕಳಿಗೆ ಜುಬ್ಬಾ ಹೊಲಿಸುವ ಬಟ್ಟೆ, ಗಂಡಸರಿಗೆ ಧೋತಿ ಶಲ್ಯ, ಹೆಣ್ಣು ಮಕ್ಕಳಿಗೆ ಜರತಾರಿ ಲಂಗ, ದಾವಣಿ ಮೊದಲಾದ ವಸ್ತುಗಳ ನಿರಂತರ ಖರೀದಿ ನಡೆಯುತ್ತದೆ. ಬಳೇಪೇಟೆಯ ಕೃಷ್ಣಭವನದ ಸಾಗು ದೋಸೆ, ಖಾರ ಹಚ್ಚಿದ ಗೋಡಂಬಿ, ಎಮ್.ಟಿ.ಆರ್.ನ ತಿಂಡಿಗಳು, ಭಗತ್‌ರಾಮ್ ಸ್ವೀಟ್ಸ್‌ನ ಜಾಮೂನು, ಆರ್ಯಭವನದ ಹಲ್ವಾ, ವಿದ್ಯಾರ್ಥಿಭವನದ ಮಸಾಲೆದೋಸೆ ಮುಂತಾದುವನ್ನು ಮನಸಾರೆ ಸವಿಯುತ್ತಾರೆ. ಹಲವಾರು ತಮಿಳು ಮತ್ತು ಕನ್ನಡ ಸಿನಿಮಾಗಳನ್ನು ನೋಡುತ್ತಾರೆ. ಹೊಸ ಹಾಗೂ ಹಳೆಯ ಭಾರತೀಯ ಸಿನಿಮಾಗಳ ಡಿ.ವಿ.ಡಿ., ಭಕ್ತಿಗೀತೆಗಳ ಸಿ.ಡಿ. ಎಲ್ಲವೂ ಖರೀದಿಯಾಗುತ್ತವೆ. ಅಲ್ಲಲ್ಲಿ ಕಂಡುಬರುವ ಕೈಗಾಡಿ ಮತ್ತು ಎತ್ತಿನಗಾಡಿಗಳ ಫೋಟೋ ತೆಗೆಯುತ್ತಾರೆ. ಅವರ ಮಕ್ಕಳಂತೂ ಭೇಲ್‌ಪುರಿ ಅಂಗಡಿಗಳ ಮುಂದೆ ನಿಂತು ಭೇಲ್‌ಪುರಿ ಕೋ ಕಾಲ ಕದಿಮೆ ಹಾಕಿಕೊಡಿ! ಎಂದು ತಮ್ಮ ಕನ್ನಡ ಭಾಷಾಜ್ಞಾನ ಪ್ರದರ್ಶಿಸುತ್ತಾ ಭೇಲ್‌ಪುರಿ, ಪಾನಿಪೂರಿಗಳನ್ನು ಕಣ್ಣೀರು ಇಳಿಸಿಕೊಂಡೇ ತಿನ್ನುತ್ತಾ, ಕಾಲ ಜಾಸ್ತಿ ಆಚಿ! ಸ್ವೀಟ್ ಕುಡು! ಎನ್ನುತ್ತಾ ಆಗಾಗ ಸ್ವೀಟ್ ತಿನ್ನುತ್ತಾ ಮಧ್ಯೆಮದ್ಯೆ ಕೋಕ್ ಕುಡಿಯುತ್ತಾ ಆ ತಿಂಡಿಗಳನ್ನು ಖಾಲಿಮಾಡುತ್ತಾರೆ. ವುಡ್‌ಲ್ಯಾಂಡ್ಸ್ ಹೋಟೆಲಿಗೆ ನಾವೆಲ್ಲಾ ಜತೆಯಾಗಿ ಬಾಳೆ‌ಎಲೆ ಊಟಕ್ಕೆ ಹೋದರೆ, ಅವರ ಮಕ್ಕಳು ಬಾಳೆ‌ಎಲೆಯ ಮೇಲೆ ಚಮಚ  ಆಡಿಸಿಕೊಂಡು ಚೆನ್ನಾಗೇ ಊಟ ಮಾಡುತ್ತಾರೆ.

ಅವರುಗಳು ಇಲ್ಲಿನ ನವನಾಗರೀಕ ಶಾಪಿಂಗ್‌ಕಾಂಪ್ಲೆಕ್ಸ್‌ಗಳನ್ನು, ಪಂಚತಾರಾ ಹೋಟೆಲ್‌ಗಳನ್ನು ನೋಡಿ ಮೆಚ್ಚುತ್ತಾರೆ. ಸುಧಾರಿಸಿದ ಟೆಲಿಫೋನ್, ಇಂಟರ್ನೆಟ್, ಕೇಬಲ್ ಟೀವಿ ಮತ್ತು ಸಾರಿಗೆ ಸೌಕರ್ಯ ಇವನ್ನು ಮೆಚ್ಚುತ್ತಾರೆ. ಈಗ ನಮ್ಮ ದೇಶದಲ್ಲೂ ಧಾರಾಳವಾಗಿ ಸಿಗುತ್ತಿರುವ ಗೃಹೋಪಯೋಗಿ ಉಪಕರಣಗಳಾದ ಆವೆನ್, ಮೈಕ್ರೋ ಆವೆನ್, ವಾಶಿಂಗ್‌ಮಶೀನ್, ಡಿಶ್‌ವಾಶರ್, ತರಹೇವಾರು ಮಿಕ್ಸಿಗಳು, ವ್ಯಾಕ್ಯೂಮ್ ಕ್ಲೀನರ್ ಮೊದಲಾದುವನ್ನು ನೋಡಿ, ನಮ್ಮ ದೇಶವೂ ಈಗ ತುಂಬಾ ಮುಂದುವರಿದೆ ಎನ್ನುತ್ತಾರೆ.

ತಾವು ಇಲ್ಲಿ ಬೆಳೆದ ನಿಶ್ಕಲ್ಮಷ ವಾತಾವರಣ ಹಳೆಯಕಾಲದ ಜನರ ನಿಷ್ಟೆ ಮೊದಲಾದುವನ್ನು ತಮ್ಮ ಹಳೆಯ ನೆನಪುಗಳನ್ನು ವರ್ಣಿಸುತ್ತಾ ಭಾರತದಲ್ಲಿ ಕಳೆದ ತಮ್ಮ ಬಾಲ್ಯವನ್ನು ಸ್ಮರಿಸುತ್ತಾರೆ. ತಾವು ವಿದೇಶವಾಸಿಗಳಾದರೂ, ನಾವು ಭಾರತೀಯ ಸಂಸ್ಕೃತಿಯನ್ನು ಇನ್ನೂ ಉಳಿಸಿಕೊಂಡಿದ್ದೇವೆ..! ಎನ್ನುತ್ತಾರೆ. ಇವೆಲ್ಲಾ ನಮಗೆ ಸಂತೋಷ ತರುವ ಸಂಗತಿಗಳು.

ಅವರುಗಳು ಭಾರತಕ್ಕೆ ಬಂದಾಗ ನಾವು ಅವರ ಸಂಸಾರ ಜತೆಯಾಗೇ ನಮ್ಮ ಕಾರುಗಳಲ್ಲಿ ತಿರುಗಾಡುತ್ತೇವೆ ಹಾಗೂ ಅವರನ್ನು ನಾವು ಬೀಳ್ಕೊಡುತ್ತೇವೆ. ಅವರ ಮಕ್ಕಳು ಮತ್ತು ನಮ್ಮ ಮಕ್ಕಳು ಸದಾ ಜತೆಯಾಗೇ ಊಟತಿಂಡಿ ಮಾಡಿ ಆಟ ಆಡುತ್ತಾರೆ. ನಾವು ನಿಜವಾದ ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದೇವೆ. ನಮ್ಮ ಮಿತ್ರರು ಪ್ರತೀಸಲ ಹೊರಡುವಾಗ ನಮ್ಮನ್ನು ಇಂಗ್ಲೆಂಡಿಗೆ ಆಹ್ವಾನಿಸುತ್ತಾರೆ.

ಈ ಪರಿಪಾಠ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ನಾವುಗಳು ಕೊನೆಗೊಮ್ಮೆ ೧೯೯೮ನೇ ಇಸವಿಯ ಡಿಸೆಂಬರ್‌ನಲ್ಲಿ ಇಂಗ್ಲೆಂಡ್, ಯುರೋಪ್, ಅಮೆರಿಕಾ ಮತ್ತು ದುಬೈ ಪ್ರವಾಸಕ್ಕೆ ಯೋಜನೆ ಹಾಕಿದೆವು. ಆಗ ನಮ್ಮ ಇಬ್ಬರೂ ಮಕ್ಕಳ ಗ್ರಾಜುವೇಶನ್ ಮುಗಿದಿತ್ತು, ಸಾಕಷ್ಟು ಟ್ಯಾಕ್ಸ್ ಕಟ್ಟಿದ ನಂತರದ ಉಳಿದ ಉಳಿತಾಯದ ಹಣ ಬ್ಯಾಂಕಿನಲ್ಲಿತ್ತು.

ಬರೇ ಹಣ ಉಳಿತಾಯ ಮಾಡಿ ಸಂತಸಪಡುವುದಕ್ಕಿಂತ, ಈ ಬಾರಿ ವಿದೇಶ ಪ್ರವಾಸ ಮಾಡಿ ನಾವು ನೋಡದ ದೇಶಗಳನ್ನು ಸುತ್ತಾಡಿ ಬರೋಣ. ಅಲ್ಲಿನ ಜನರ ಜೀವನದ ಬಗ್ಗೆ ತಿಳಿಯೋಣ. ಇದರಿಂದ ನಮ್ಮ ಮತ್ತು ಮಕ್ಕಳ ಲೋಕಜ್ಞಾನ ಹೆಚ್ಚುವುದು! ಅಂದುಕೊಂಡು ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಂಡೆವು.

ಮೊದಲು ಇಂಗ್ಲೆಂಡ್ ಮತ್ತು ಯೂರೋಪ್‌ನ ದೇಶಗಳನ್ನು ನೋಡಿದ ಮೇಲೆ ಅಮೇರಿಕೆಗೂ ಹೋಗೋಣ ಮತ್ತು ಹಿಂದಿರುಗಿ ಬರುವಾಗ ಮಧ್ಯಪ್ರಾಚ್ಯದ ದುಬಾಯಿ ನೋಡಿಕೊಂಡು ಹಿಂದಿರುಗೋಣ ಎಂದುಕೊಂಡೆವು.

ನಾವುಗಳು ಪದೇ ಪದೇ ಅಮೆರಿಕಾದ ಸಂಯುಕ್ತ ಸಂಸ್ಥಾನಗಳಿಗೆ ಹೋಗಲಾಗುವುದಿಲ್ಲ, ಆದ್ದರಿಂದ ಮಕ್ಕಳು ಸದಾ ಹಂಬಲಿಸುತ್ತಿದ್ದ ಫ್ಲಾರಿಡಾದ ಆರ್ಲ್ಯಾಂಡೋ ಬಳಿ ಇರುವ ಡಿಸ್ನೇ ವರ್ಲ್ಡ್ ನೋಡಲು ನಿಶ್ಚಯಿಸಿ, ಅಲ್ಲಿ ಒಂದು ವಾರದ ಮಟ್ಟಿಗೆ ವಾಸ್ತವ್ಯ ಮಾಡಲು ಒಂದು ಉತ್ತಮ ಆರ್.ಸಿ.ಐ. ರಿಸಾರ್ಟ್‌ನಲ್ಲಿ ತಂಗಲು ಅನುಕೂಲವಾಗುವಂತೆ, ನಮ್ಮ ವಸತಿಯನ್ನು ಈ-ಮೈಲ್ ಮೂಲಕ ಕಾದಿರಿಸಿದೆವು.

ನಮ್ಮ ಜೀವನದಲ್ಲಿ ಮಾಡುವ ಈ ದೊಡ್ಡ ಪ್ರವಾಸದಲ್ಲಿ, ನಾನು ಸದಾ ಪ್ರಯಾಣಿಸಿ ಅನುಭವಿಸಲು ಆಸೆ ಪಡುತ್ತಿದ್ದ, ಜಗತ್ತಿನ ಅತ್ಯುತ್ತಮ ಅರಿಸ್ಟೋಕ್ರೆಟಿಕ್ ಹಾಲಿಡೇ ಅನ್ನಿಸಿಕೊಳ್ಳುವ ಕ್ಯಾರಿಬಿಯನ್ ಸಮುದ್ರಯಾನ ಕೂಡಾ ಸೇರಿಸಿದೆವು. ಈ ನೌಕಾಯಾನ ಫ್ಲಾರಿಡಾದ ಮಯಾಮಿ ಬಂದರಿನಿಂದ ಹೊರಡುತ್ತಿತ್ತು. ನಮ್ಮ ಅದೃಷ್ಟಕ್ಕೆ ಸೊವೆರೇನ್ ಆಫ್ ದ ಸೀಸ್ ಎಂಬ ರಾಯಲ್ ಕೆರಿಬಿಯನ್ ಹಡಗು ಪ್ರವಾಸ ಸಂಸ್ಥೆಗೆ ಸೇರಿದ ವೈಭವಪೂರ್ಣವಾದ ಹದಿನಾಲ್ಕು ಮಜಲುಗಳ ದೈತ್ಯ ಹಡಗಿನಲ್ಲಿ ಸಮುದ್ರದ ದೃಶ್ಯ ಕಾಣುವ ಎರಡು ಅಕ್ಕಪಕ್ಕದ ಸ್ಟೇಟ್‌ರೂಮ್ಸ್ ವಿತ್‌ದ ಫುಲ್ ವ್ಯೂ ಆಫ್ ದ ಸೀ ಎಂದು ಕರೆಯಲ್ಪಡುವ ಅತ್ಯುತ್ತಮ ಕ್ಯಾಬಿನ್‌ಗಳು ಕೂಡಾ ನಮಗೆ ಮುಂಗಡ ಬುಕ್ಕಿಂಗ್ ಮಾಡಿದ್ದರಿಂದ ಸಿಕ್ಕಿದುವು. ಈ ಅತ್ಯಂತ ಆರಾಮದಾಯಕ ಸಮುದ್ರಯಾನಕ್ಕೆ ನಾವು ತೆತ್ತ ಬೆಲೆಯನ್ನು ನಾನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಆರುದಿನ ಮತ್ತು ಐದುರಾತ್ರಿಗಳ ಈ ವೈಭವಯುತ ಹಡಗು ಪಯಣದಲ್ಲಿ ಬಹಾಮಾ ದೇಶದ ದೊಡ್ಡ ಬಂದರಾದ ನಸ್ಸಾವು ಎಂಬ ಪಟ್ಟಣ, ಕೋಕೋ ಕೇ ಎಂಬ ರಾಯಲ್ ಕೆರಿಬಿಯನ್ ನೌಕಾಯಾನ ಸಂಸ್ಥೆಯು ಕೆರಿಬಿಯನ್ ಸಮುದ್ರದಲ್ಲಿ ಹೊಂದಿರುವ ಖಾಸಗಿ ದ್ವೀಪ ಮತ್ತು ಅಮೇರಿಕಾದ ಸಂಯುಕ್ತ ಸಂಸ್ಥಾನಗಳ ಅತ್ಯಂತ ದಕ್ಷಿಣದ ಸರಹದ್ದಾದ     ಕೀ ವೆಸ್ಟ್ ಎಂಬ ದ್ವೀಪಗಳನ್ನು ನೋಡಿ ವಾಪಾಸ್ ಮಯಾಮಿ ಬಂದರಿಗೆ ಬರುವ ಕಾರ್ಯಕ್ರಮ ಅಡಕವಾಗಿತ್ತು.

ಇಂಗ್ಲೆಂಡ್‌ಗೆ ಬಂದು ನಮ್ಮ ಮನೆಯಲ್ಲೇ ಕೆಲವು ದಿನ ಇರಬೇಕು ಎಂದು ಒತ್ತಾಯಿಸುತ್ತಿರುವ ಡಾ.ಶ್ರೀನಿವಾಸನ್ ಅವರ ಮನೆಯಲ್ಲಿ ಯೂರೋಪ್ ಪ್ರವಾಸದ ಮೊದಲು ಐದುದಿನ ಮತ್ತು ಆ ನಂತರ ಎರಡುದಿನ ವಾಸವಾಗಿರಲೇಬೇಕೆಂಬ ಸಂಕಲ್ಪ ಮಾಡಿದೆವು. ಇಂಗ್ಲೆಂಡ್ ದೇಶಕ್ಕೆ ಹೋಗಿ ಅವರ ಮನೆಗೆ ಹೋಗದಿದ್ದರೆ ನಮ್ಮ ಸ್ನೇಹಿತರಿಗೆ ಬೇಸರವಾಗಬಹುದು ಎಂದು, ಅವರ ಮನೆಗೆ ನಾವು ಬರುತ್ತಿರುವ ವಿಚಾರ ಫೋನ್‌ಮಾಡಿ ತಿಳಿಸಿದೆವು. ಮುಂಜಾಗ್ರತೆಯ ಕ್ರಮವಾಗಿ, ಇಂಗ್ಲೆಂಡಿನಲ್ಲಿ ಅವರ ಮನೆಯ ಹತ್ತಿರವೇ, ಅಂದರೆ ಸುಮಾರು ನಲ್ವತ್ತು ಮೈಲಿ ದೂರದಲ್ಲಿ ಇರುವ ಈಸ್ಟ್ ಬಾರ್ನ್ ಎಂಬ ಸಮುದ್ರ ತೀರದ ಪ್ರವಾಸೀ ತಾಣದಲ್ಲಿ ಇರುವ ಆರ್.ಸಿ.ಐ ರೆಸಾರ್ಟ್ ಒಂದರಲ್ಲಿ ಎರಡು ವಾರಗಳ ವಸತಿ ಏರ್ಪಾಡು ಕೂಡಾ ಮಾಡಿಕೊಂಡೆವು. ನಾವು ಬೆಂಗಳೂರಿನಿಂದ ೧೯೯೮ನೇ ಇಸವಿ ಡಿಸೆಂಬರ್ ಆರರಂದು ಹೊರಟು ಸಾಯಂಕಾಲದ ಹೊತ್ತಿಗೆ ಲಂಡನ್ ಶಹರದ ಹೀತ್ರೋ ನಿಲ್ದಾಣ ಸೇರಿದೆವು. ನಮ್ಮನ್ನು ಇದುರುಗೊಳ್ಳಲು ಸ್ನೇಹಿತರಾದ ಡಾ.ಶ್ರೀನಿವಾಸ್ ಮತ್ತು ಅವರ ಮಗಳು ಬಂದಿದ್ದರು. ನಾವು ವಿಮಾನ ನಿಲ್ದಾಣದಿಂದಲೇ ಈಸ್ಟ್‌ಬಾರ್ನ್‌ಗೆ ಹೋಗಬೇಕಿತ್ತು. ನಮ್ಮ ಸ್ನೇಹಿತರ ಮಗಳು ಉಮಾನಂದಿನಿ ಆಗ ಲಂಡನ್‌ನಲ್ಲೇ ಕೆಲಸಮಾಡುತ್ತಾ ಒಂದು ಹಾಸ್ಟೆಲ್‌ನಲ್ಲಿ ವಾಸಿಸುತ್ತಾ ಇದ್ದಳು. ಆಕೆ ನಮಗೋಸ್ಕರ ಒಂದು ದೊಡ್ಡ ಎಂಟುಸೀಟಿನ ರೆಂಟಲ್ ಕಾರ್ ತಂದಿದ್ದಳು. ಆ ಕಾರಿನಲ್ಲಿ ನಮ್ಮ ಬ್ಯಾಗೇಜ್ ಎಲ್ಲಾ ತುಂಬಿಕೊಂಡು ಅರಾಮವಾಗಿ ನಾವು ಈಸ್ಟ್ ಬಾರ್ನ್ ತಲುಪಿದೆವು. ಅಂದು ವಿಮಾನನಿಲ್ದಾಣದಲ್ಲೇ ನಮಗೆ ದಶಂಬರದ ಲಂಡನ್ ಹವೆಯ ಪ್ರಥಮ ರುಚಿ ಸಿಕ್ಕಿತು. ಆದರೆ ಕಾರಿನ ಒಳಗೆ ಕುಳಿತ ಮೇಲೆ ಹೀಟರ್ ಇದ್ದುದರಿಂದ ಲಂಡನಿನ ಚಳಿ ಗೊತ್ತಾಗಲಿಲ್ಲ.

ನಮ್ಮ ಮುಂಗಡಬುಕ್ಕಿಂಗ್ ಇದ್ದುದರಿಂದ ರಿಸಾರ್ಟ್ನವರು ನಮ್ಮನ್ನು ಆದರದಿಂದಲೇ ಬರಮಾಡಿಕೊಂಡರು. ಹೊರಗೆ ಕೊರೆಯುವ ಚಳಿ ಇದ್ದರೂ ರೆಸಾರ್ಟಿನ ಒಳಗೆ ಹೀಟಿಂಗ್ ಇದ್ದುದರಿಂದ ನಮಗೆ ಇಂಗ್ಲೆಂಡ್ ದೇಶದ ಚಳಿಯ ಭರಾಟೆ ಗೊತ್ತಾಗಲಿಲ್ಲ. ಉಮಾನಂದಿನಿ ನಮ್ಮನ್ನು ರೆಸಾರ್ಟ್‌ನಲ್ಲಿ ಬಿಟ್ಟು ಆ ಸಂಜೆಗೇ ಲಂಡನ್‌ಗೆ ವಾಪಸ್ ಹೋದಳು.

ನಾವು ತಂಗಿದ್ದ ಈಸ್ಟ್‌ಬೋರ್ನ್ ತುಂಬ ಮನೋಹರವಾದ ಸಮುದ್ರತೀರದ ಪ್ರವಾಸಿತಾಣ. ಸಮುದ್ರ ತೀರದ ಬೀಚ್‌ಗಳನ್ನು ಬಹು ಸುಂದರವಾಗಿ ಕಾಪಾಡಿದ್ದರು. ಎಲ್ಲಿಯೂ ಒಂದು ಸ್ವಲ್ಪ ಕಸ ನಮ್ಮ ಕಣ್ಣುಗಳಿಗೆ ಕಾಣಲಿಲ್ಲ. ನಾವಿದ್ದ ರೆಸಾರ್ಟ್‌ನಲ್ಲಿ ಐರೋಪ್ಯ ಸಸ್ಯಾಹಾರ  ಸಿಗುತ್ತಿದ್ದರೂ, ಭಾರತೀಯ ಊಟ ತಿಂಡಿ ದೊರೆಯುತ್ತಿರಲಿಲ್ಲ. ಆದರೆ, ಅಡುಗೆ ಮಾಡಿಕೊಳ್ಳುವ ವ್ಯವಸ್ಥೆ ನಮಗೆ ರೆಸಾರ್ಟ್‌ನವರು ಕೊಟ್ಟ ಅಪಾರ್ಟ್‌ಮೆಂಟಿನಲ್ಲಿ ಇತ್ತು. ನಮಗೆ ವಾರಾಂತ್ಯದವರೆಗೆ ಬೇಕಾಗುವ ಕಿರಾಣಿ ಸಾಮಾನುಗಳನ್ನು ಹತ್ತಿರದಲ್ಲೇ ಇರುವ ಒಂದು ಡಿಪಾರ್ಟ್‌ಮೆಂಟಲ್ ಸ್ಟೋರಿನಿಂದ ಖರೀದಿಸಿ ನಮಗೆ ಬೇಕೆನಿಸಿದಾಗ ಭಾರತೀಯ ಅಡುಗೆ ಮಾಡುತ್ತಾ ಈಸ್ಟ್‌ಬಾರ್ನ್‌ನಲ್ಲಿ ಸುಖವಾಗಿ ವಿಹರಿಸಿದೆವು.

ಈಸ್ಟ್‌ಬಾರ್ನ್ ವಿಹಾರಧಾಮದ ಆಕರ್ಷಣೆಯೆಂದರೆ ಅಲ್ಲಿನ ಸಮುದ್ರತೀರ ಮತ್ತು ಹತ್ತಿರದಲ್ಲೇ ಸಮುದ್ರದ ಬಳಿ ಇರುವ ಬೀಚೀ ಹೆಡ್ಸ್ ಎಂದು ಕರೆಯಲ್ಪಡುವ ಸುಣ್ಣದ ಕಲ್ಲು ಸೇರಿದ ಸಮುದ್ರ ತೀರದ ಬಹು ಕಡಿದಾದ ಪರ್ವತಗಳು. ಈ ಸಮುದ್ರ ತೀರದ ಪರ್ವತಗಳು ಸಮುದ್ರತೀರಕ್ಕೆ ಲಂಬವಾದ ಕೋನದಲ್ಲಿ ನಿಂತಿವೆ. ಆಗಾಗ ಸುಣ್ಣದ ಕಲ್ಲಿನ ಮಣ್ಣು ಜಾರಿ ಸಮುದ್ರಕ್ಕೆ ಬೀಳುವ ದೃಶ್ಯ ಅಲ್ಲಿ ಸಾಮಾನ್ಯ. ಹಾಗಾಗಿ ಈ ಗುಡ್ಡಗಳನ್ನು ಹತ್ತಲು ಪ್ರವಾಸಿಗಳನ್ನು ಬಿಟ್ಟರೂ, ಪ್ರಪಾತಗಳ ಬಳಿ ಹೋಗಲು ವಾಹನ ಅಥವಾ ಮನುಷ್ಯರನ್ನು ಸರಕಾರದವರು ಬಿಡುವುದಿಲ್ಲ. ಇವನ್ನು ನಾವು ದೂರದ ಬೀಚಿನಲ್ಲಿ ನಿಂತು ನೋಡಬಹುದು ಅಥವಾ ಈ ಗುಡ್ಡಗಳ ಬೆನ್ನಿನ ಮೇಲೆ ಸಾಕಷ್ಟು ದೂರದಲ್ಲಿ ನಾವು ನಡೆದುಕೊಂಡು ಅಥವಾ ವಾಹನಗಳಲ್ಲಿ ಹೋಗಿ ಸಮುದ್ರ ಹಾಗೂ ಅದರ ಪಕ್ಕದಲ್ಲಿ ಗೋಡೆಯ ತರಹ ನಿಂತ ಈ ಪರ್ವತಗಳನ್ನು ನೋಡಬಹುದು. ಈ ಬೀಚೀಹೆಡ್ಸ್ ಪರ್ವತಗಳಿಗೆ ಆತ್ಮಹತ್ಯೆ ಮಾಡುವ ಪರ್ವತಗಳು ಎಂಬ ಅಡ್ಡ ಹೆಸರೂ ಇದೆ. ಈ ತಾಣ ಹಿಂದೆ ಮನುಷ್ಯರ ಆತ್ಮಹತ್ಯೆಗೂ ಪ್ರಶಸ್ಥ ತಾಣ ಆಗಿತ್ತಂತೆ!

ಈಸ್ಟ್‌ಬಾರ್ನ್ ನಗರದ ಜನರು ಸ್ನೇಹಮಯಿಗಳು. ನಗು ನಗುತ್ತಾ ಹಲೋ ಎನ್ನುತ್ತಾರೆ. ಈ ಚರ್ಯೆ ನಮಗೆ ಲಂಡನ್ ನಗರದಲ್ಲಿ ಕಾಣಸಿಗುವುದಿಲ್ಲ. ಲಂಡನ್ ನಗರದ ಮತ್ತು ಇತರೇ ನಗರಗಳ ಬ್ರಿಟಿಷ್ ಪ್ರಜೆಗಳು ಸದಾ ಗಂಟುಮುಖ ಹಾಕಿಕೊಂಡು ಬಹು ಗಂಭೀರವಾಗಿ ಬಹು ಸಂಪ್ರದಾಯದ ರೀತಿನೀತಿಗಳನ್ನು ಪಾಲಿಸುತ್ತಾರೆ. ಈಸ್ಟ್ ಬಾರ್ನ್ ನಗರದ ಇನ್ನೊಂದು ಆಕರ್ಷಣೆ ಎಂದರೆ ಅಲ್ಲಿನ ಅಂಗಡಿಗಳು ತಯಾರಿಸುವ ಸಕ್ಕರೆ ಮಿಠಾಯಿಗಳು. ಅಲ್ಲಿ ಬಣ್ಣಬಣ್ಣದ ತರತರಹದ ಸಕ್ಕರೆಯ ಅಚ್ಚಿನ ಮಿಠಾಯಿಗಳು ದೊರೆಯುತ್ತವೆ, ಪ್ರವಾಸಿಗಳಿಗೆ ಈ ಅಂಗಡಿಗಳನ್ನು ಸಂದರ್ಶಿಸುವುದು ಮತ್ತು ಮಿಠಾಯಿಗಳನ್ನು ಖರೀದಿಸುವುದು ಇನ್ನೊಂದು ದೊಡ್ಡ ಆಕರ್ಷಣೆ. ಇಲ್ಲಿ ತಯಾರಿಸುವ ಮಿಠಾಯಿಗಳ ವೈವಿಧ್ಯ ಬೇರೆಲ್ಲೂ ಸಿಗುವುದಿಲ್ಲ. ಇವನ್ನು ಕ್ಯಾಂಡೀಸ್ ಎಂದು ಕರೆಯುತ್ತಾರೆ. ಈ ಕ್ಯಾಂಡೀಗಳನ್ನು ನೋಡಿದಾಗ ನಮ್ಮ ಹಳ್ಳಿಗಳ ಜಾತ್ರೆಯ ಮಿಠಾಯಿ ಬತ್ತಾಸು ನೆನಪಾಗುತ್ತದೆ. ಈ ಪುಟ್ಟ ನಗರದ ಜನಜೀವನ ಪ್ರವಾಸಿಗಳಿಂದಲೇ ನಡೆಯುತ್ತಿದೆ ಎಂದರೆ ತಪ್ಪಾಗಲಾರದು.

ನಾವು ಒಂದುದಿನದ ಮಟ್ಟಿಗೆ ಲಂಡನ್ ಶಹರಕ್ಕೆ ರೈಲಿನಲ್ಲಿ ಪ್ರಯಾಣಿಸಿ ಪ್ರವಾಸಿಗಳಿಗೆ ಇರುವ ಡಬಲ್‌ಡೆಕ್ಕರ್ ಬಸ್‌ನ ಇಡೀ ದಿನದ ಪ್ರವಾಸಿ ಟಿಕೇಟ್ ಖರೀದಿಸಿ ಶಹರದ ಮುಖ್ಯ ಆಕರ್ಷಣೆಗಳನ್ನು ನೋಡಿ ಹಿಂತಿರುಗಿದೆವು. ಈಸ್ಟ್‌ಬಾರ್ನ್ ಪಟ್ಟಣದ ಜನರ ಸ್ನೇಹ ಸೌಹಾರ್ದತೆ ಕಂಡ ನಮಗೆ ಲಂಡನ್‌ನಗರದ ಬಿಗುಮುಖದ ಜನರನಡುವೆ ಉಳಿಯಲು ಮನಸ್ಸೇ ಆಗಲಿಲ್ಲ.

ಶನಿವಾರ ದಿವಸ ನಮ್ಮ ಸ್ನೇಹಿತರು ಸಂಸಾರ ಸಮೇತ ನಮ್ಮ ರೆಸಾರ್ಟಿನ ರೂಮಿಗೇ ಡೇ ಗೆಸ್ಟ್‌ಗಳಾಗಿ ಬಂದು ಇಳಿದರು. ಇಂಗ್ಲೆಂಡಿನಲ್ಲಿ ಚಳಿಗಾಲದ ಸಮಯ ಬಹು ಅಪರೂಪವೆನಿಸುವ  ಕೊತ್ತಂಬರಿ ಸೊಪ್ಪು, ಹಸಿ ಬಟಾಣಿ ಮತ್ತು ಇಂಗ್ಲೆಂಡಿನ ಬಗೆಬಗೆಯ ಬಿಸ್ಕತ್ತುಗಳನ್ನು ನಮಗೆ ಉಡುಗೊರೆಯಾಗಿ ತಂದಿದ್ದರು. ಅಂದು ಸರೋಜಮ್ಮ ಎಲ್ಲರಿಗೂ ಬೆಂಗಳೂರಿನ ತರಹ ಟೊಮೆಟೋಸಾರು, ಪಲ್ಯ, ಸಾಂಬಾರು ಮತ್ತು ಪಾಯಸ ಅಡುಗೆಮಾಡಿ  ಊಟ ಬಡಿಸಿದಳು. ರಾತ್ರಿ ತಂಗಲು ಅವರಿಗೆ ಆ ಆರ್.ಸಿ.ಐ. ರೆಸಾರ್ಟ್ನಲ್ಲಿ ಅವಕಾಶವಿರಲಿಲ್ಲ. ರಾತ್ರಿ ಹತ್ತಕ್ಕೆ ಅವರುಗಳು ಪಕ್ಕದ ಹೋಟೆಲ್‌ವೊಂದರಲ್ಲಿ ತಂಗಿದರು. ರಾತ್ರಿ ನಮಗೆ ಗುಡ್‌ನೈಟ್ ಹೇಳುತ್ತಾ ನಮ್ಮ ಮಿತ್ರದಂಪತಿಗಳು ನೀವು ರೆಸಾರ್ಟ್ ಬಿಟ್ಟು ಹೊರಟು ನಾಡಿದ್ದು ಶನಿವಾರ ನಮ್ಮ ಮನೆಗೆ ಬನ್ನಿ. ನಾನು ಕಾರು ತರುತ್ತೇನೆ. ನಮ್ಮ ಮನೆಯಲ್ಲೇ ಎಲ್ಲರೂ ಸೇರಿ ಐದು ದಿವಸಗಳನ್ನು ಸಂತೋಷದಿಂದ ಕಳೆಯೋಣ ಎಂದರು.

ಆ ವಾರಾಂತ್ಯದ ಶನಿವಾರ ನಾವು ನಮ್ಮ ರೆಸಾರ್ಟ್ ರಿಸರ್ವೇಶನ್ ಕ್ಯಾನ್ಸಲ್‌ಮಾಡಿ,  ನಮ್ಮ ಒರಿಜಿನಲ್ ಪ್ಲಾನ್ ಪ್ರಕಾರವೇ ಐದುದಿನಗಳ ಮಟ್ಟಿಗೆ ನಾವು ಕೆಟೆರಿಂಗ್ ಎಂಬ ಊರಿನಲ್ಲಿರುವ ಅವರ ಮನೆಗೆ ಅವರ ಟೊಯೋಟಾ ಕಾರಿನಲ್ಲಿ ಹೊರಟೆವು. ದಾರಿಯಲ್ಲಿ ಪೆಟ್ರೋಲ್ ಸ್ಟೇಶನ್‌ವೊಂದರಲ್ಲಿ ನಮ್ಮ ಅತಿಥೇಯರ ಮನೆಗೆ ಹೂವಿನ ಗುಚ್ಛ ಕೊಂಡೆವು. ಹೂವುಗಳು ಬಹಳ ಚೆನ್ನಾಗಿದ್ದುವು. ಚಳಿಗಾಲವಾದ್ದರಿಂದ ಕ್ರಯ ಕೂಡಾ ಇಪ್ಪತ್ತು ಪೌಂಡ್!                    ಮರುದಿನ ಬೆಳಗ್ಗೆ ನನ್ನ ಅಭ್ಯಾಸದಂತೆ ವಾಕ್ ಹೋಗಿ ಬಂದೆ. ಕೆಟೆರಿಂಗ್ ಚಿಕ್ಕ ಊರಾದರೂ ಚೊಕ್ಕವಾಗಿತ್ತು. ಹನ್ನೆರಡಕ್ಕೆ ಅತಿಥೇಯರ ಎರಡು ಕಾರುಗಳಲ್ಲಿ ಸುತ್ತಾಡಲು ಹೊರಟೆವು. ಅಲ್ಲಿ ಇಲ್ಲಿ, ಶಾಪಿಂಗ್ ಮಾಲ್ ಎಲ್ಲಾ ಸುತ್ತಿ ಮಾರ್ಕ್ ಅಂಡ್ ಸ್ಪೆನ್ಸರ್ ಮಾಲ್‌ನ ಕ್ಯಾಫೆಟೆರಿಯಾದಲ್ಲಿ ನಾವೆಲ್ಲರೂ ಟೀ ಕುಡಿದೆವು. ನಾನು ಅಂದು ಇಂಗ್ಲೆಂಡಿನ ಸ್ಪೆಷಲ್ ತಿಂಡಿ ಅನ್ನಿಸಿದ ಹಾಟ್‌ಕ್ರಾಸ್ ಬನ್ ಕೂಡಾ ಎರಡು ಡಜನ್ ಕಟ್ಟಿಸಿಕೊಂಡೆ. ನಮ್ಮ ಸ್ನೇಹಿತರು ಕೂಡಾ ತಮ್ಮ ಮನೆಗೆ ಬೇಕಾದ ದಿನಸಿ ಸಾಮಾನು ಕೊಂಡರು. ನಾವು ಹಿಂತಿರುಗಿ ಅವರ ಮನೆಗೆ ಬರುವಾಗ ಸಾಯಂಕಾಲ ಐದಾಗಿತ್ತು. ಆಗಲೇ ಚೆನ್ನಾಗಿ ಕತ್ತಲೆಯಾಗಿತ್ತು. ನಮ್ಮ ಅತಿಥೇಯರು ಊಟ ಮಾಡೋಣ ಎಂದರು. ನಮಗೆ ತುಂಬಾ ಹಸಿವಾದುದರಿಂದ ನಾವೆಲ್ಲರೂ ಆದಿನ ಇಂಗ್ಲೀಷರ ವೆಜಿಟೇರಿಯನ್ ಊಟ ಮಾಡಿ ಮಲಗಿದೆವು. ಮರುದಿವಸ ನಮ್ಮ ಸ್ನೇಹಿತರ ಹೆಂಡತಿಗೆ ಜ್ವರ ಶುರುವಾಯಿತು. ಆ ದಿನವೂ ಚೀಸ್, ಬ್ರೆಡ್, ಬಟರ್, ಜಾಮ್ ಮತ್ತು ಹಣ್ಣುಗಳಲ್ಲೇ ನಮ್ಮ ಊಟ ಕಳೆಯಿತು. ಮರುದಿನ ನನ್ನ ಹೆಂಡತಿ ಮತ್ತು ಮಕ್ಕಳಿಗೂ ಜ್ವರ ಬದಲಾಯಿಸಿತು. ಅವರ ಮಕ್ಕಳಿಗೂ ಜ್ವರ ಶುರುವಾಯಿತು. ಸಾಯಂಕಾಲ ನನ್ನ ಸ್ನೇಹಿತ ಡಾಕ್ಟರು ಕೂಡಾ ಜ್ವರದಲ್ಲಿ ಮಲಗಿದರು. ಆ ಕೆಟರಿಂಗ್‌ನ ಮನೆಯಲ್ಲಿ ನಾನೊಬ್ಬನೇ ಆರೋಗ್ಯವಂತ! ಹಾಗಾಗಿ ಅಂದು ನನ್ನ ಪಾಕ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದೆ!

ಆ ರಾತ್ರಿಗೆ ಅನ್ನ ಮತ್ತು ನಮ್ಮ ಬ್ಯಾಗಿನಲ್ಲಿದ್ದ ಎಮ್.ಟೀ.ಆರ್. ಧಿಡೀರ್ ಸಾರು ಮಾಡಿದೆ. ಎಲ್ಲರೂ ಉಂಡೆವು. ಮಿಕ್ಕಿದುದ್ದನ್ನು ಫ್ರಿಜ್‌ನಲ್ಲಿ ಇರಿಸಿದೆ.

ಆಗ ನಮ್ಮ ದೊಡ್ಡಮಗಳು ರಾಧಿಕಾ ಎಮ್.ಬಿ.ಬಿ.ಎಸ್ ಡಾಕ್ಟರು. ಆದರೂ, ಅವಳ ಹೆಸರು ಬ್ರಿಟನ್‌ನಲ್ಲಿ ರಿಜಿಸ್ಟರ್ ಆಗಿರದಿದ್ದರಿಂದ ಅವಳ ಪ್ರಿಸ್ಕ್ರಿಪ್ಷನ್ ಚೀಟಿಗೆ ಇಂಗ್ಲೆಂಡ್‌ನಲ್ಲಿ ಮಾನ್ಯತೆಯಿಲ್ಲ. ರಾಧಿಕಾ ಮುಂಜಾಗ್ರತೆಯಿಂದ ಭಾರತದಿಂದಲೇ ಜತೆಗೆ ಒಯ್ದಿದ್ದ ಆಂಟಿಬಯಾಟಿಕ್ ಮತ್ತು ಅನಾಲ್ಜೆಸಿಕ್ ಔಷಧಿ ಇದ್ದುವು. ಅವನ್ನು ರಾಧಿಕಾ ಎಲ್ಲರಿಗೂ ಹಂಚಿದಳು. ಮರುದಿನ ರಾತ್ರಿ ರಾಧಿಕಾಳಿಗೆ ಜ್ವರ ಸ್ವಲ್ಪ ಇಳಿಮುಖವಾಯಿತು. ಅಂದು ರಾಧಿಕಾ ಬಿಸಿ ಬಿಸಿ ಅಡುಗೆ ಮಾಡಿದಳು. ಐದು ದಿನಗಳು ಔಷಧಿ ಸೇವನೆ ಮತ್ತು ಮಾತುಕತೆಗಳಲ್ಲೇ ಕಳೆದುಹೋದುವು. ಕೊನೆಯ ದಿವಸ ರಾಧಿಕಾ ಮಾಮೂಲಿ ಊಟದ ಜತೆಗೆ ಬಿಸಿಬೇಳೆಬಾತ್ ತಯಾರಿಸಿದಳು. ಎಲ್ಲರೂ ಸಂತೋಷದಿಂದ ಒಟ್ಟಿಗೆ ಕುಳಿತು ಊಟಮಾಡಿದೆವು.

ವೈದ್ಯದಂಪತಿಗಳು ನಮಗೆ ಉಣ್ಣೆಯ ಸ್ವೆಟ್ಟರುಗಳನ್ನು ಉಡುಗೊರೆ ಮಾಡಿದರು. ನಾವು ಆ ಸಂಸಾರದ ನಾಲ್ವರಿಗೂ ಭಾರತದಿಂದ ಕೊಂಡುಹೋಗಿದ್ದ ಉಡುಗೊರೆಗಳನ್ನು ಕೊಟ್ಟು ವಂದನೆ ಹೇಳಿದೆವು ಮತ್ತು ಅವರಿಗೆಲ್ಲಾ ಜ್ವರ ಬರುತ್ತಿರುವಾಗಲೇ ಬಂದು ಇಳಿದು ಅವರಿಗೆ ತುಂಬಾ ತ್ರಾಸ ಕೊಟ್ಟಿದ್ದಕ್ಕೆ ಕ್ಷಮೆ ಕೇಳಿದೆವು. ನನ್ನ ಹೆಂಡತಿಮಕ್ಕಳ ಆರೋಗ್ಯ ಚೆನ್ನಾಗಿಲ್ಲದಿದ್ದರೂ, ನಮ್ಮ ಕಾರ್ಯಕ್ರಮ ಪ್ರಕಾರ ನಾವು ಯೂರೋಪಿಗೆ ಹೊರಟೆವು.

ಟ್ರಫಾಲ್ಗರ್ ಟ್ರಾವೆಲ್ಸ್ ಅವರ ಂiರೋಪ್ ಟೂರಿನ ಐಷಾರಾಮೀ ಪ್ಯಾಕೇಜ್‌ಟೂರ್ ಕೊಂಡಿದ್ದೆವು. ಲಂಡನ್‌ನಿಂದ ಡೋವರ್ ಅವರ ಬಸ್‌ನಲ್ಲಿ ಕ್ರಮಿಸಿದೆವು. ಡೋವರಿನಿಂದ ಫೆರಿ ಮೂಲಕ ಇಂಗ್ಲಿಷ್ ಚಾನೆಲ್ ದಾಟಿ ಫ್ರಾನ್ಸಿನ ಕ್ಯಾಲೇ ಮುಟ್ಟಿದೆವು. ನಮ್ಮ ಪ್ರಯಾಣಕ್ಕೆ ಅತೀ ಉತ್ತಮವಾದ ಬಸ್ (ಕೋಚ್) ಸಿಕ್ಕಿತ್ತು. ಒಳ್ಳೆಯ ಗೈಡ್ ಇದ್ದರು. ಫ್ರಾನ್ಸ್, ಸ್ವಿಟ್ಜರ್‌ಲ್ಯಾಂಡ್, ಜರ್ಮನಿ, ನೆದರ್ ಲ್ಯಾಂಡ್, ಬೆಲ್ಗಿಯಂ ದೇಶಗಳನ್ನು ಸುತ್ತಿ ನಾವು ಪುನಃ ಕ್ಯಾಲೆಗೇ ಬಂದು ಲಂಡನ್ ಸೇರಿದೆವು. ಈ ದೇಶಗಳ ಪ್ರಯಾಣದ ಅನುಭವದ ಬಗ್ಗೆ ನಾನು ಸವಿಸ್ತಾರ ವರ್ಣನೆ ನೀಡುವುದಿಲ್ಲ. ಈ ದೇಶಗಳ ಬಗ್ಗೆ ಬಹಳಷ್ಟು ಲೇಖನಗಳು ಈಗಾಗಲೇ ಪ್ರಕಟವಾಗಿವೆ. ಪ್ಯಾರಿಸ್, ಈಫೆಲ್‌ಟವರ್, ನೋತ್ರೆಡಾಮ್ ಚರ್ಚ್, ಲೂವರ್ ಅವರ ವಿಜಯಚೌಕ, ಕ್ಯಾಲೆಯ ಅರಮನೆ, ಸೀನ್‌ನದಿ, ಸ್ವಿಸ್ ಪರ್ವತಗಳು, ಸ್ವಿಸ್ ರೈಲು, ಸ್ವಿಸ್ ದನಗಳು, ಸ್ವಿಟ್ಜರ್ಲ್ಯಾಂಡಿನ ಅಪೂರ್ವ ಗಡಿಯಾರಗಳು, ಸೈಂಟ್ ಬರ್ನಾರ್ಡ್ ಎಂಬ ದೊಡ್ಡ ನಾಯಿಗಳು, ಜರ್ಮನಿಯ ರೈನ್ ನದಿ, ಬ್ಲ್ಯಾಕ್ ಫಾರೆಸ್ಟ್, ಹೈಡೆಲ್‌ಬರ್ಗ್, ಜರ್ಮನಿಯ ಶಿಸ್ತು, ಆಟೋಬಾಹ್ನ್ ಎಂಬ ರಸ್ತೆಗಳು, ಹಾಲೆಂಡಿನ ವಿಂಡ್‌ಮಿಲ್‌ಗಳು, ಆರ್ಟ್ ಮ್ಯೂಸಿಯಂಗಳು, ಬೆಲ್ಜಿಯಂ ದೇಶದ ಗ್ಲಾಸ್ ಮತ್ತು ವಜ್ರ ಪಾಲಿಶ್ ಮಾಡುವ ಫ್ಯಾಕ್ಟರಿಗಳು ಮತ್ತು ಮಳಿಗೆಗಳನ್ನು ಕಂಡ ಅನುಭವ ಮರೆಯಲಾರೆವು

ಪ್ರತೀದೇಶಕ್ಕೂ ತನ್ನದೇ ಆದ ಭಾಷೆ ಮತ್ತು ವಿಭಿನ್ನವಾದ ಸಂಸ್ಕೃತಿ ಇರುವುದನ್ನು ನಾವು ಕಂಡೆವು. ಆಗ ಯೂರೋ ನಾಣ್ಯ ಸಂಪೂರ್ಣ ಚಲಾವಣೆಗೆ ಬಂದಿಲ್ಲವಾದ ಕಾರಣ, ನಾವು ಆಯಾದೇಶದ ನಾಣ್ಯಗಳನ್ನು ಕೊಂಡು ವ್ಯವಹರಿಸಬೇಕಾಯಿತು. ನಮ್ಮ ಗೈಡ್ ದ್ವಿಭಾಷಿಯ ಪಾತ್ರವಹಿಸಿ ನಮಗೆ ಸಹಾಯ ಮಾಡುತ್ತಿದ್ದರು. ನಾವು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಶೌಚಾಲಯ ಇತ್ತು. ಹೀಟಿಂಗ್ ವ್ಯವಸ್ಥೆ ಚೆನ್ನಾಗಿತ್ತು. ಹೋಟೆಲ್‌ಗಳಲ್ಲಿ ಮತ್ತು ಎಲ್ಲಾ ಜಾಗಗಳಲ್ಲಿ ಒಳ್ಳೆಯ ಹೀಟಿಂಗ್ ವ್ಯವಸ್ಥೆ ಕಂಡೆವು. ಆದರೂ ಬಯಲಿನಲ್ಲಿ ಇದ್ದ ಪ್ರೇಕ್ಷಣೀಯ ಜಾಗಗಳಲ್ಲಿ ಡಿಸೆಂಬರ್ ತಿಂಗಳ ಯೂರೋಪಿನ ಅಸಾಧ್ಯ ಚಳಿ ಹಾಗೂ ಹಿಮದ ವಾತಾವರಣ ನಮ್ಮನ್ನು ನಡುಗಿಸುತ್ತಿತ್ತು. ಯೂರೋಪಿನ ಚಳಿಗೆ ನನ್ನ ಹೆಂಡತಿ ಮಕ್ಕಳಿಗೆ ಜ್ವರ ಮರುಕಳಿಸಿತು. ಪುನಃ ಮರುಕಳಿಸಿದ ಜ್ವರದಿಂದ ಬಸವಳಿದು ಕೆಮ್ಮುತ್ತಲೇ ನಾವು ಯೂರೋಪ್ ಪಯಣವನ್ನು ಆ ಚಳಿಯಲ್ಲಿಯೇ ಪೂರೈಸಿ ಹಿಂತಿರುಗಿ ಕೆಟೆರಿಂಗ್ ತಲುಪಿದೆವು.

ನಾವು ಕೆಟೆರಿಂಗ್‌ನಲ್ಲಿ ಕಳೆದ ನಲ್ವತ್ತೆಂಟು ಗಂಟೆಗಳ ಅವಧಿಯಲ್ಲಿ ಅತಿಥೇಯರು ನಮಗೆ ಔಷಧೋಪಚಾರ ನೀಡಿ, ಭಾರತೀಯ ರೀತಿಯ ಊಟವನ್ನು ಬಡಿಸಿ ಸತ್ಕರಿಸಿದರು. ಆದರೂ ನಮ್ಮ ಜ್ವರ ಮತ್ತು ಕೆಮ್ಮು ಇಂಗ್ಲೆಂಡಿನ ಚಳಿ ಮತ್ತು ಮಳೆಯ ಹವಾಮಾನಕ್ಕೆ ಕಡಿಮೆ ಬರಲಿಲ್ಲ.

ಯೂರೋಪ್ ಪ್ರವಾಸದಲ್ಲಿ ನಾವು ಉಣ್ಣುತ್ತಿದ್ದ ರೈ ಧಾನ್ಯದಬ್ರೆಡ್, ಸಲಾಡ್ ಮತ್ತು ಕ್ಯಾನ್‌ಮಾಡಿದ ಹಣ್ಣುಗಳ ವೆಜಿಟೇರಿಯನ್ ಊಟಗಳು ನಮ್ಮನ್ನು ತುಂಬಾ ನಿತ್ರಾಣಗೊಳಿಸಿದ್ದುವು. ಕೆಟೆರಿಂಗ್‌ನಲ್ಲಿ ಎರಡು ಹಗಲು ಕಳೆದೆವು, ಡಾಕ್ಟರರ ಮನೆಯಲ್ಲಿ ನಮಗೆ ಭಾರತೀಯ ಊಟ ಮತ್ತು ಔಷಧೋಪಚಾರ ಸಿಕ್ಕಿದರೂ, ಸರೋಜಮ್ಮ ಮತ್ತು ಮಕ್ಕಳ ಜ್ವರ ಕೆಮ್ಮು ಕಡಿಮೆಯಾಗಲಿಲ್ಲ.              ಮರುದಿನ ಬೆಳಗ್ಗೆ ನಾಲ್ಕುಗಂಟೆಗೆ ನಾವು ಅಮೆರಿಕಕ್ಕೆ ಹೋಗುವವರಾದ್ದರಿಂದ ಬೆಳಗಿನ ನಾಲ್ಕು ಗಂಟೆಗೆ ಟ್ಯಾಕ್ಸಿಯೊಂದನ್ನು ಗೊತ್ತುಮಾಡಿ ನಾವು ಏರ್‌ಪೋರ್ಟಿಗೆ ಹೊರಟೆವು. ನಮ್ಮ ಸ್ನೇಹಿತರು ಇನ್ನೊಮ್ಮೆ ಒಂದು ತಿಂಗಳು ನಿಲ್ಲುವಂತೆ ನಮ್ಮ ಮನೆಗೆ ಬರಬೇಕು ಎನ್ನುತ್ತಾ ನಮ್ಮನ್ನು ಬೀಳ್ಕೊಟ್ಟರು. ಡಾಕ್ಟರ್ ಸಾಹೇಬರು ನಿಮಗ್ಯಾರಿಗೂ ಅಷ್ಟು ಮೈ ಚೆನ್ನಾಗಿಲ್ಲ, ಆದ್ದರಿಂದ ನ್ಯೂಯಾರ್ಕಿಗೆ ಹೋದೊಡನೆ ಒಳ್ಳೆಯ ಆಸ್ಪತ್ರೆಗೆ ಅಡ್ಮಿಟ್ ಆಗಿಬಿಡಿ ಎಂದು ನಮಗೆ ಪ್ರಾಮಾಣಿಕ ಸಲಹೆ ಕೂಡಾ ಕೊಟ್ಟರು..! ಯಾಕೆಂದರೆ, ಅಂದು ನನಗೂ ಆಗ ಜ್ವರ ಶುರುವಾಗಿತ್ತು.

೧೯೯೯ರ ಜನವರಿ ಒಂದರಂದು ನ್ಯೂಯಾರ್ಕಿನ ನೆವಾರ್ಕ್ ವಿಮಾನ ನಿಲ್ದಾಣಕ್ಕೆ ನನ್ನ ಅಣ್ಣ ಲಕ್ಷ್ಮೀಶರಾವ್ ಮತ್ತು ಮಗ ಆಯುಷ್ಯ ಬಂದಿದ್ದರು. ಅವರಿಬ್ಬರೂ ಇಂದು ಅಮೇರಿಕನ್ನರೇ ಆಗಿದ್ದಾರೆ. ನನ್ನ ಅಣ್ಣನ ಮಗ ಆಯುಷ್ಯ ಆರಡಿ ಎತ್ತರದ ಗಟ್ಟಿಮುಟ್ಟಾದ ಹುಡುಗ. ದೇಶಭಕ್ತನಾದ ಆತ ಯು.ಎಸ್.ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಲಕ್ಷ್ಮೀಶಣ್ಣ ಅವರಿಗೆ ನಮ್ಮ ಅವಸ್ಥೆ ಕಂಡು ಗಾಬರಿಯಾಯಿತು. ಜೆರ್ಸಿ ಸಿಟಿಯಲ್ಲಿ ಇರುವ ಅವರ ಮನೆಗೆ ಕರೆದುಕೊಂಡು ಹೋಗಿ ನಮ್ಮನ್ನು ನೇರವಾಗಿ ಊಟದ ಮೇಜಿನ ಮುಂದೆ ಕೂರಿಸಿದರು. ಅತ್ತಿಗೆ ಜಯಂತಿರಾವ್ ಬಿಸಿಬಿಸಿ ಅನ್ನ, ಕರಿಮೆಣಸಿನ ಸಾರು, ಬದನೇಕಾಯಿ ಗೊಜ್ಜು, ಬೆಂಡೆಕಾಯಿ ಹುಳಿ, ಮೊಸರು ಮತ್ತು ಮಿಡಿ ಉಪ್ಪಿನಕಾಯಿಯ ಭರ್ಜರಿ ಊಟಹಾಕಿದರು. ನಮ್ಮ ಸ್ವಂತ ಮನೆಯ ರೀತಿಯ ಆಹಾರ ಹೊಟ್ಟೆಗೆ ಬಿದ್ದುದೇ ನಮಗೆ ಅರೆವಾಸಿ ಕಾಯಿಲೆ ಮಾಯವಾಯಿತು. ನನ್ನ ಅಣ್ಣ ತನ್ನ ಔಷಧಪೆಟ್ಟಿಗೆಯಿಂದ ಏನೋ ಮಾತ್ರೆ ತೆಗೆದು ನಮಗೆ ತಿನ್ನಿಸಿ ನಮ್ಮನ್ನು ಮಲಗಲು ಹೇಳಿದರು. ಎಲ್ಲರಿಗೂ ಹೊಟ್ಟೆ ಭರ್ಜರಿಯಾಗಿ ತುಂಬಿದುದಕ್ಕೆ ಕೂಡಲೇ ನಿದ್ದೆ ಬಂತು..!!

ದೊಡ್ಡ ಅಣ್ಣನ ಮನೆ ಹೊಕ್ಕ ನಮಗೆ, ಇನ್ನು ಅಣ್ಣ ನಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ಧೈರ್ಯದ ಭರವಸೆ ಉಂಟಾಯಿತು. ನಿಶ್ಚಿಂತೆಯಿಂದ ಎಲ್ಲರೂ ಹನ್ನೆರಡು ಗಂಟೆಹೊತ್ತು ನಿದ್ರೆಮಾಡಿದೆವು. ಹೊಟ್ಟೆ ತುಂಬಾ ಮನೆಯ ಊಟ ಮತ್ತು ಕೊಂಚ ಔಷಧಿಯ ಉಪಚಾರದಲ್ಲಿ ನಮ್ಮ ಜ್ವರ ಹೇಳಹೆಸರಿಲ್ಲದೆ ಓಡಿ ಹೋಗಿತ್ತು..! ಅನ್ನಮ್ ಪರಮೌಷಧಂ ಎಂಬ ವಿಚಾರ ನಮಗೆ ಆ ದಿವಸ ಮನದಟ್ಟಾಯಿತು.

ಮುಂದಿನ ನಲವತ್ತು ದಿನಗಳ ಕಾಲ ನಾವು ಬಹು ಆರೋಗ್ಯವಾಗೇ ಅಮೇರಿಕಾ ಪ್ರವಾಸ ಮಾಡಿದೆವು. ನನ್ನ ಅಣ್ಣನಮನೆ, ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ನನ್ನ ಹಳೆಯ ಅಮೇರಿಕನ್ ಸ್ನೇಹಿತರ ಮನೆಗಳಲ್ಲಿ ಅವರ ಸಂಸಾರಗಳೊಂದಿಗೆ ಪ್ರೀತಿಯಿಂದ ಹೊಂದಿಕೊಂಡು ಬಹು ಸುಖವಾಗಿ ಇದ್ದೆವು.

ಅಮೇರಿಕಾದಲ್ಲಿ ನಮ್ಮ ಆಹಾರದ್ದು ದೊಡ್ಡ ಸಮಸ್ಯೆ ಅನ್ನಿಸಲೇ ಇಲ್ಲ. ಬೇಕಾದಷ್ಟು ತಾಜಾ ಹಣ್ಣು, ತರಕಾರಿ, ಹಾಲು ಸಿಕ್ಕುವ ದೇಶವದು. ಇಂಡಿಯನ್ ಸ್ಟೋರುಗಳಿಗೆ ಹೋದರೆ ಭಾರತದ ಅಡುಗೆಯ ಸಾಮಾನುಗಳೆಲ್ಲಾ ಸಿಗುತ್ತಿದ್ದವು. ನಾವು ಉಳಿದುಕೊಂಡಿರುವ ರೆಸಾರ್ಟ್‌ಗಳ ರೂಮುಗಳಲ್ಲಿ ಅಡುಗೆಯ ಸೌಕರ್ಯ ಇದ್ದುದರಿಂದ ಬೇಕೆನಿಸಿದಾಗ ನಾವು ಭಾರತೀಯ ಅಡುಗೆ ಮಾಡಿಕೊಳ್ಳುತ್ತಿದ್ದೆವು. ತಿರುಗಾಡಲು ಹೊರಟಾಗ ಸರೋಜಮ್ಮ ಮಧ್ಯಾಹ್ನದ ಊಟಕ್ಕೆ ತಾಜಾ ಹಣ್ಣು, ಒಂದು ದೊಡ್ಡ ಟಬ್ ಪಾಪ್‌ಕಾರ್ನ್ ಮತ್ತು ಕೋಕ್ ಕುಡಿಯುತ್ತಿದ್ದಳು. ನಾನು ಮತ್ತು ಮಕ್ಕಳು ವೆಜ್ ಪಿಜ್ಜಾ, ವೆಜ್ ಬರ್ಗರ್, ಮೆಕ್ಸಿಕನ್ ಅಥವಾ ಅಮೇರಿಕನ್ ಸಸ್ಯಾಹಾರದ ಊಟ ಮಾಡುತ್ತಿದ್ದೆವು. ಅಮೇರಿಕದ ಬ್ಯಾಗೆಲ್, ಡೋನಟ್, ಪ್ರೆಟ್ಜೆಲ್ ಎಂಬ ಕೋಡುಬಳೆ ತರಹೆಯ ತಿಂಡಿ, ಫಿಂಗರ್‌ಚಿಪ್ಸ್ ಮತ್ತು ಆನಿಯನ್‌ರಿಂಗ್ಸ್ ಎಂಬ ಈರುಳ್ಳಿ  ಬೋಂಡಾ ನಮ್ಮ ನೆಚ್ಚಿನ ತಿಂಡಿಗಳೇ ಆದುವು. ಅಮೆರಿಕಾದಲ್ಲಿ ಒಳ್ಳೆಯ ಕಾಫಿ ಎಲ್ಲೆಲ್ಲೂ ಲಭ್ಯವಿತ್ತು. ನಾವು ಆರಾಮದಿಂದ ಎಲ್ಲಾ ಊರುಗಳನ್ನು ಸುತ್ತಿದೆವು.

ಮೊದಲು ಬಾಲ್ಟಿಮೋರ್ ಮೂಲಕ ಫ್ಲಾರಿಡಾದ ಆರ್ಲ್ಯಾಂಡೋ ತಲುಪಿದೆವು. ಫ್ಲಾರಿಡಾದ ಡಿಸ್ನೇವರ್ಲ್ಡ್ ನೋಡುವುದು ನಮ್ಮೆಲ್ಲರ ಮಹದಾಸೆಯಾಗಿತ್ತು. ಡಿಸ್ನೇವರ್ಲ್ಡ್‌ಗೆ ಬಹುಹತ್ತಿರವೇ ಇರುವ ಕಿಸ್ಸೀಮಿ ಎಂಬ ಜಾಗದ ರಿಸಾರ್ಟ್‌ವೊಂದರಲ್ಲಿ ಒಂದು ವಾರ ಕಾಲ ನಿಂತು, ಸುಮಾರು ಐವತ್ತು ಸಾವಿರ ಎಕರೆಗಳ ಡಿಸ್ನೇವರ್ಲ್ಡ್ ವಠಾರವನ್ನು ಹಗಲು ರಾತ್ರಿಯೆನ್ನದೇ ಸುತ್ತಿದೆವು. ಅಲ್ಲಿನ ಸುವ್ಯವಸ್ಥೆ, ಶುಚಿಯಾದ ಊಟತಿಂಡಿ ಮತ್ತು ಸುರಕ್ಷಿತತೆ ಕಂಡು ನಾವು ತಲೆದೂಗಿದೆವು. ಅಲ್ಲಿನ ವೈಚಿತ್ರ ಹಾಗೂ ಅನುಭವಗಳನ್ನು ಹಲವಾರು ಲೇಖಕರು ಈಗಾಗಲೇ ವರ್ಣಿಸಿರುವುದರಿಂದ ಆ ಬಗ್ಗೆ ನಾನು ಹೆಚ್ಚಿಗೆ ಬರೆಯಲು ಇಷ್ಟಪಡುವುದಿಲ್ಲ.

ವಾಲ್ಟ್ ಡಿಸ್ನೇ ಮಹನೀಯರು ಸೃಷ್ಟಿಸಿದ ಈ ಡಿಸ್ನೇವರ್ಲ್ಡ್ ಎಂಬ ಮಾಯಾಲೋಕ ಹಾಗೂ ವೈಜ್ಞಾನಿಕ ಅನುಭವದ ಖನಿಯನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಆ ಜಾಗದ ಬಗ್ಗೆ ಬರೆಯಲು ಹೊರಟರೆ, ಅದು ದೊಡ್ಡ ಪುಸ್ತಕವೇ ಆದೀತು. ನಾವು ಹೋದಾಗ ಅಲ್ಲಿ ಇದ್ದ ಕಿಲ್ಲರ್‌ವ್ಹೇಲ್ ಜಾತಿಯ ಶಾಮು ಎಂಬ ತಿಮಿಂಗಿಲ ನಮ್ಮ ಮನಸ್ಸನ್ನೇ ಸೂರೆಗೊಂಡಿತು. ಅದು ಮಾನವ ಪ್ರೇಮಿ ತಿಮಿಂಗಿಲ ಆಗಿಯೇ ತನ್ನ ಸಹಚರರೊಡನೆ ಅಲ್ಲಿ ಮೆರೆಯುತ್ತಾ ಇತ್ತು. ಅದು ನೀರಿಗೆ ಬಿದ್ದ ಒಂದು ಚಿಕ್ಕ ಮಗುವನ್ನು ರಕ್ಷಿಸುವ ಪವಾಡ ತೋರಿಸಿದ್ದನ್ನು ನಾವು ಈ ಜೀವಮಾನದಲ್ಲೇ ಮರೆಯಲಾರೆವು.

ಕಿಸ್ಸೀಮಿಯಿಂದ ಮಯಾಮಿಗೆ ಹೋದೆವು. ಅಲ್ಲಿನ ಸಮುದ್ರ ಕಿನಾರೆಯನ್ನು ನೋಡಿದೆವು. ನಾವು ಮಯಾಮಿ ಬಂದರಿನಿಂದಲೇ ಹೊರಟು ಬಹಾಮ ತನಕ ಕೆರಿಬಿಯನ್ ಸಮುದ್ರದ ಯಾನ ಹೋಗಿ ಮಯಾಮಿಗೆ ಹಿಂತಿರುಗಿ ಮರಳಿದೆವು.

ಭೂಲೋಕದ ಅತೀ ವೈಭವೊಪೇತ ಮತ್ತು ಸುಖಕರವೆನ್ನಿಸಿಕೊಂಡ ಈ ನೌಕಾಯಾನದ ಅನುಭವನ್ನು ನಾವು ಪಡೆದೆವು. ಹಡಗಿನಲ್ಲಿ ನಮಗೆ ದೊರೆತ ಸಸ್ಯಾಹಾರಿ ಊಟ‌ಉಪಚಾರಗಳನ್ನು ನಾವು ಎಂದಿಗೂ ಮರೆಯಲಾರೆವು. ಹಡಗಿನ ಕ್ಯಾಪ್ಟನ್ ಜತೆಗೆ ಔಪಚಾರಿಕ ಊಟಕ್ಕೆ ನಾನು ಸೂಟ್ ಧರಿಸಿ ಹೋಗಬೇಕಿತ್ತು. ನನ್ನ ಕಪ್ಪುಬಣ್ಣದ ಸೂಟ್ ಧರಿಸಿ ಹೋದೆ. ಸೂಟ್ ತರದಿದ್ದ ಪ್ರಯಾಣಿಕ ಗಂಡಸರಿಗೆ ಹಡಗಿನವರೇ ಕಪ್ಪುಬಣ್ಣದ (ಟಕ್ಸೀಡೋ) ಸೂಟ್ ಒದಗಿಸಿಕೊಟ್ಟರು. ಸ್ತ್ರೀಯರಿಗೆ ಈ ಕಟ್ಟಳೆ ಇರಲಿಲ್ಲ. ಈ ಸಮಾರಂಭಕ್ಕೆ ಸರೋಜಮ್ಮ ಜರತಾರೀ ಸೀರೆ ಧರಿಸಿದ್ದಳು. ರಾಧಿಕಾ ರಚನಾ ಬಣ್ಣದ ಸಲ್ವಾರ್ ಕಮೀಜ್ ಧರಿಸಿದ್ದರು. ಚಳಿಗಾಲದ ಸಮಯವಾದ್ದರಿಂದ ಭಾರತದ ಜನರು ನಮ್ಮ ನೌಕಾಯಾನದಲ್ಲಿ ಕಡಿಮೆ ಇದ್ದರು. ನಮ್ಮನ್ನು ಬಿಟ್ಟರೆ ಇನ್ನೊಂದು ಸಂಸಾರ ಮಾತ್ರ ನಮ್ಮ ನೌಕಾಯಾನದಲ್ಲಿ ಇದ್ದರು. ಭಾರತೀಯ ಉಡುಗೆ ಧರಿಸಿದ್ದ ನನ್ನ ಮಡದಿ ಮಕ್ಕಳು ನಮ್ಮ ಸಹಪ್ರಯಾಣಿಕರ ಗಮನ ಸೆಳೆದರು. ಆದಿನ ಅವರದೆಷ್ಟು ಭಾವಚಿತ್ರಗಳು ಕ್ಲಿಕ್ ಮಾಡಲ್ಪಟ್ಟುವೋ, ಲೆಕ್ಕಮಾಡಲು ಸಾಧ್ಯವಿಲ್ಲ. ಆ ಹಡಗಿನ ಕ್ಯಾಪ್ಟನ್ ಕೊಟ್ಟ ಊಟದ ಖಾದ್ಯ, ಪಾನೀಯ ಮತ್ತು ಮನೋರಂಜನೆಯ ಕಾರ್ಯಕ್ರಮಗಳು ಅವಿಸ್ಮರಣೀಯ. ನಾವು ಸಸ್ಯಾಹಾರಿಗಳು ಮತ್ತು ಮದ್ಯ ಸೇವಿಸುವ ಜನರಲ್ಲ ಎಂಬ ವಿಚಾರ ಹಡಗಿನ ಆಹಾರ ಸರಬರಾಜು ಅಧಿಕಾರಿಯ ರಿಜಿಸ್ಟರ್‌ನಲ್ಲಿ ನಾವು ಹಡಗು ಹತ್ತುವ ಮೊದಲೇ ದಾಖಲೆ ಆಗಿದ್ದುದರಿಂದ, ನಮಗೆ ಹಣ್ಣಿನ ರಸಗಳು ಮತ್ತು ವೈವಿಧ್ಯಮಯ ಸಸ್ಯಾಹಾರದ ಊಟವನ್ನು ಹಡಗಿನ ಬಾಣಸಿಗರು ಒದಗಿಸಿದ್ದರು.

ನಸ್ಸಾವು ಬಹು ಸುಂದರವಾದ ರೇವು ಮತ್ತು ಪಟ್ಟಣ. ಅಲ್ಲಿನ ಸ್ಥಳೀಯ ಜನರಲ್ಲಿ  ಹೆಚ್ಚಿನವರು ಬಿಳಿಯ ಚರ್ಮ ಹೊಂದಿಲ್ಲ. ಕಪ್ಪು ಅಥವಾ ಕಂದುಬಣ್ಣದ ಸ್ಥಳೀಯ ಜನರು ಹಸನ್ಮುಖಿಗಳು ಮತ್ತು ಸಂಗೀತ ಪ್ರಿಯರು. ಒಳ್ಳೆಯ ರಾಕ್ ಅಥವಾ ಸಾಂಬಾ ನೃತ್ಯದ ಸಂಗೀತ ನಸ್ಸಾವು ಪಟ್ಟಣದ ಎಲ್ಲಾ ಉಪಹಾರಗೃಹ ಮತ್ತು ಮಾಲ್‌ಗಳಲ್ಲಿ ದಿನವಿಡೀ ಮೊಳಗುತ್ತಿರುತ್ತವೆ. ಒಳ್ಳೆಯ ಸಂಗೀತ ಕಿವಿಗೆ ಬಿದ್ದೊಡನೇ ಸ್ಥಳೀಯ ಜನರು ಎಲ್ಲಿ ಬೇಕೆಂದರಲ್ಲಿ, ಅಂದರೆ ಮಾರ್ಗಬದಿಯಲ್ಲಿ ಕೂಡಾ, ಯಾವ ಮುಜುಗರವೂ ಇಲ್ಲದೇ ನೃತ್ಯಮಾಡುತ್ತಾ ಇರುವುದನ್ನು ನಾವು ಕಂಡೆವು. ಸಂಗೀತ ಮತ್ತು ನೃತ್ಯ ಕ್ಯಾರಿಬಿಯನ್ ಜನರ ಜೀವನ ರೀತಿ ಎಂಬ ಅಂಶ ನಮಗೆ ನಸ್ಸಾವು ಪಟ್ಟಣದಲ್ಲಿ ಮನದಟ್ಟಾಯಿತು.

ಕಡುನೀಲಿ ಆಕಾಶದ ಕೆಳಗೆ ಹಸಿರುಬೆರೆತ ಕಡುನೀಲಿಯ ಶಾಂತವಾದ ಸಮುದ್ರದಲ್ಲಿ ನೌಕಾಯಾನ ಮಾಡುವುದೇ ಒಂದು ಸೊಗಸು. ರಾತ್ರಿ ಹೊತ್ತು ಶುಭ್ರ ಆಕಾಶದ ಅಡಿಯಲ್ಲಿ ನಮ್ಮ ಬೃಹತ್‌ನೌಕೆ ಭೊರ್ಗರೆಯುತ್ತಾ ಸಾಗುವುದು ಇನ್ನೊಂದು ಅನುಭವ. ಮೂರು ಸಿನಿಮಾ ಹಾಲ್‌ಗಳು, ಮೂರು ಉಪಹಾರ ಮಂದಿರಗಳು, ಎರಡು ಪಾನಗೃಹಗಳು, ದ್ಯೂತಪ್ರಿಯರಿಗೆ ಆಧುನಿಕ ಕ್ಯೆಸಿನೋ, ಮಕ್ಕಳು ಆಡುವ ಜಾಗ, ಚೈಲ್ಡ್‌ಕೇರ್, ಡ್ರೈಕ್ಲೀನ್ ಅಂಗಡಿ, ಬಟ್ಟೆ‌ಅಂಗಡಿಗಳು, ಲೈಬ್ರರಿ, ಪುಸ್ತಕದ ಅಂಗಡಿ, ಸಂಗೀತ ಕ್ಯಾಸೆಟ್ ಮತ್ತು ಸಿ.ಡಿ. ಅಂಗಡಿ, ಹೂವಿನ ಅಂಗಡಿ, ಎರಡು ಈಜುಕೊಳ. ಲೈವ್‌ಬ್ಯಾಂಡ್, ದೊಡ್ಡ ಡ್ಯೂಟಿ ಫ್ರೀ ಮಾಲ್‌ಗಳು, ಸ್ಟುಡಿಯೊ, ಜಿಮ್, ಬ್ಯೂಟಿ ಪಾರ್ಲರ್, ಸುಸಜ್ಜಿತ ಆಸ್ಪತ್ರೆ ಮುಂತಾದುವನ್ನು ಹಸನ್ಮುಖದ ಸ್ನೇಹಮಯಿ ನೌಕಾ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಸದಾಕಾಲ ಆಸ್ಪತ್ರೆ, ಎರಡು ಉಪಹಾರಗೃಹ ಮತ್ತು ಬಾರ್ ತೆರೆದೇ ಇರುತ್ತವೆ. ಹಾಗೆಯೇ, ದ್ಯೂತಪ್ರಿಯರ ಕ್ಯಾಸಿನೋ ಕೂಡಾ. ಆರುದಿನ ಮತ್ತು ಐದುರಾತ್ರಿಗಳ ಈ ನೌಕಾಯಾನದಲ್ಲಿ ಸಾಮಾನ್ಯವಾಗಿ ಒಬ್ಬ ಪ್ರಯಾಣಿಕ ಐದುಪೌಂಡ್ ತೂಕ ಹೆಚ್ಚಿಸಿಕೊಳ್ಳುತ್ತಾನೆಂಬುದು ಈ ಹಡಗಿನ ಮುಖ್ಯ ಬಾಣಸಿಗನ ಹೆಗ್ಗಳಿಕೆ. ಪ್ರತೀ ಮೂರು ಸ್ಟೇಟ್‌ರೂಮುಗಳಿಗೆ ಒಬ್ಬ ಸೇವಕ ಇರುತ್ತಾನೆ. ಊಟ ತಿಂಡಿಗಳನ್ನು ನಮ್ಮ ಕೋಣೆಗಳಿಗೇ ಸರಬರಾಜು ಮಾಡುವ ವ್ಯವಸ್ಥೆ ಕೂಡಾ ಇದೆ. ನಗುಮುಖದ, ವಿನಯಪೂರಿತ ಸೇವೆಯೇ ಈ ನೌಕಾಯಾನದ ಹೆಗ್ಗಳಿಕೆ. ದಿನವೂ ನಮ್ಮ ಕೋಣೆಗಳಿಗೆ ಮುಂಜಾನೆ ಹೊಚ್ಚ ಹೊಸ ಹೂವು ಇರಿಸಿದ ಹೂದಾನಿ ಮತ್ತು ತಾಜಾಹಣ್ಣುಗಳ ತಟ್ಟೆ ಬರುತ್ತಿತ್ತು. ರಾತ್ರಿ ಹಾಸಿಗೆ ಹಾಸುವಾಗ ಪ್ರತಿಯೊಬ್ಬ ಪ್ರಯಾಣಿಕನ ದಿಂಬಿನ ಮೇಲೆ ಒಂದು ಬಾರ್ ಸ್ವಿಸ್ಸ್ ಚಾಕಲೇಟು ಇಡುತ್ತಿದ್ದರು. ಪ್ರತೀರೂಮಿನಿಂದಲೂ ಭೂಭಾಗ ಸಂಪರ್ಕಿಸಬಲ್ಲ ಟೆಲಿಫೋನ್ ಇತ್ತು. ಸ್ಯಾಟೆಲೈಟ್ ಟೀವಿ ಮತ್ತು ಈಮೈಲ್/ಇಂಟೆರ್‌ನೆಟ್ ಸೌಲಭ್ಯ ಕೂಡಾ ಇದ್ದುವು.

ನಮ್ಮ ಹಡಗು ಪರಿಸರ ಪ್ರೇಮಿ ಹಡಗಾಗಿತ್ತು. ಹಡಗಿನಿಂದ ಯಾವರೀತಿಯ ತ್ಯಾಜ್ಯ ಅಥವಾ ಕಲ್ಮಷವೂ ಸಮುದ್ರಕ್ಕೆ ಸೇರದಂತೆ ಜಾಗ್ರತೆ ವಹಿಸುವ ವ್ಯವಸ್ಥೆ ಇತ್ತು.

ಕ್ಯಾರಿಬಿಯನ್ ಸಮುದ್ರದಲ್ಲಿ ಅಲ್ಲಲ್ಲಿ ಪುಟ್ಟಪುಟ್ಟ ದ್ವೀಪಗಳು. ಅವುಗಳಲ್ಲಿ ಹೆಚ್ಚಾಗಿ ತೆಂಗಿನಮರಗಳು. ಅವುಗಳ ಮರಳದಂಡೆ ಬಹು ಸುಂದರ. ರಾಯಲ್ ಕ್ಯಾರಿಬಿಯನ್ ಸಂಸ್ಥೆಯ ಸ್ವಂತ ದ್ವೀಪವಾದ ಕೊಕೋಕೇ ಬಹು ಸುಂದರವಾದ ದ್ವೀಪ. ಅಲ್ಲಿ ಸುಸಜ್ಜಿತ ಉಪಹಾರಗೃಹ ಮತ್ತು ಎಲ್ಲಾ ರೀತಿಯ ಜಲ ಕ್ರೀಡಾ ಸೌಲಭ್ಯಗಳು ಇಲ್ಲಿ ನೌಕಾಯಾನಿಗಳಿಗೆ ಲಭ್ಯವಾಗುತ್ತಿದ್ದವು.

ಅಮೆರಿಕಾದ ಸಂಯುಕ್ತ ಸಂಸ್ಥಾನಗಳ ಅತೀ ದಕ್ಷಿಣದ ಸರಹದ್ದಿನ ದ್ವೀಪವೇ          ಕೀ ವೆಸ್ಟ್. ಅಲ್ಲಿನ ಸರ್ವೆಯ ಕಲ್ಲಿನಬಳಿ ಭಾವಚಿತ್ರ ತೆಗೆಸಿಕೊಳ್ಳುವುದೇ ಪ್ರವಾಸಿಗಳಿಗೆ ಹೆಮ್ಮೆಯ ವಿಷಯ. ಈ ದ್ವೀಪದ ‘ಲೆಮನ್ ಪೈ ಖಾದ್ಯಕ್ಕೆ ಪ್ರವಾಸಿಗಳು ಮುಗಿದು ಬೀಳುತ್ತಾರೆ. ಅದು ಅಷ್ಟು ರುಚಿ! ಈ ಕೀ ವೆಸ್ಟ್ ದ್ವೀಪದಲ್ಲಿ ನಾವು ನೋಬೆಲ್ ಪ್ರಶಸ್ತಿ ವಿಖ್ಯಾತ ಎರ್ನೆಸ್ಟ್ ಹೆಮಿಂಗ್‌ವೇ ಅವರ ಮನೆಯ ದರ್ಶನವನ್ನು ಮಾಡಿದೆವು. ಈ ದ್ವೀಪದ ಸುತ್ತಾಟ ಒಂದು ಅಪೂರ್ವ ಅನುಭವ. ಕ್ಯಾರಿಬಿಯನ್ ಸಮುದ್ರದಲ್ಲಿ ಸುತ್ತುವಾಗ ಪ್ರವಾಸಿಗಳಿಗೆ ಬ್ಲ್ಯಾಕ್ ಬೀಯರ್ಡ್ ದ ಪೈರೇಟ್ ನೆನಪು ಬರುವುದು ಸಹಜ ತಾನೇ? ಎಲ್ಲೆಲ್ಲೂ ಆತನ ಟೋಪಿ, ಜ್ಯಾಕೆಟ್, ಒಂದು ಕಣ್ಣಿನಪ್ಯಾಚ್, ನಕಲಿಖಡ್ಗ, ನಕಲಿಮ್ಯಾಪ್, ಬಂದೂಕು, ಸಂಪತ್ತಿನ ಸಂದೂಕ, ಹಿತ್ತಾಳೆಯ ಟೆಲಿಸ್ಕೋಪ್, ಮನುಷ್ಯನ ತಲೆಬುರುಡೆಯ ಮಾರ್ಕ್‌ವುಳ್ಳ ಜಾಲೀ ರಾಜರ್ ಬಾವುಟ ಮೊದಲಾದ ನೆನಪು ಹುಟ್ಟಿಸುವ ಮೊಮೆಂಟೋಗಳು ಪ್ರವಾಸಿಗೆ ಲಭ್ಯ. ಈ ನೌಕಾಯಾನದ ಸೌಲಭ್ಯಗಳು, ಸುರಕ್ಷಿತತೆ ಮತ್ತು ಐಶಾರಾಮಗಳನ್ನು ವರ್ಣಿಸಲು ಕಷ್ಟ. ಜೀವನದಲ್ಲಿ ಈ ನೌಕಾಯಾನ ಮಾಡಿದವರು ಖಂಡಿತವಾಗಿ ಈ ಬಗ್ಗೆ ಹೆಮ್ಮೆಪಡುತ್ತಾರೆ. ನಾನು ಇಷ್ಟು ಮಾತ್ರ ಹೇಳಬಲ್ಲೆ. ಬಾರಿನ ಬಿಲ್ ಹೊರತುಪಡಿಸಿ, ಬೇರೆಲ್ಲಾ ಆಹಾರ ಮತ್ತು ಪೇಯಗಳು ನಮ್ಮ ಟಿಕೆಟ್ ಮೊತ್ತದಲ್ಲೇ ಸೇರಿರುತ್ತವೆ. ಜುಗಾರಿ ಆಡುವ ಹಣವನ್ನು ಖಂಡಿತವಾಗಿ ಪ್ರಯಾಣಿಕರು ನಗದಾಗಿಯೇ ಪಾವತಿಸಬೇಕು. ದ್ಯೂತದಲ್ಲಿ ಗೆದ್ದವರಿಗೆ ಜುಗಾರಿಯ ಹಣ ನಗದಾಗಿಯೇ ಸಿಗುತ್ತೆ. ಆದರೆ, ಜುಗಾರಿ ಆಡಿ ಹಣಗಳಿಸುವ ಮಂದಿಯ ಸಂಖ್ಯೆ ಎಷ್ಟು? – ಎಂಬುದು ಎಲ್ಲರಿಗೂ ಉತ್ತರ ಗೊತ್ತಿರುವ ಪ್ರಶ್ನೆಯೇ.

ನಾವು ಮಯಾಮಿಗೆ ಬಂದವರೇ ಆರ್ಲ್ಯಾಂಡೋಗೆ ಹೊರಟೆವು. ಹೋಗುವ ದಾರಿಯಲ್ಲಿ ಇದ್ದ ಕಿತ್ತಳೆ ಹಣ್ಣುಗಳ ತೋಟಗಳನ್ನು ನೋಡಿ ಆನಂದಿಸಿದೆವು.

ಪೂರ್ವ ಕಿನಾರೆಯ ಆರ್ಲ್ಯಾಂಡೋ ನಗರದಿಂದ ಅಮೇರಿಕೆಯ ಸಂಯುಕ್ತಸಂಸ್ಥಾನಗಳ ಪಶ್ಚಿಮ ಕಿನಾರೆಯ ಸ್ಯಾನ್‌ಫ್ರಾನ್ಸಿಸ್ಕೋ ನಗರಕ್ಕೆ ನಾರ್ಥ್ ಕ್ಯಾರೋಲಿನಾದ ಶಾರ್ಲೆಟ್ ಎಂಬ ಟ್ರಾನ್ಸಿಟ್ ವಿಮಾನ ನಿಲ್ದಾಣದ ಮೂಲಕ ಹಾರಿದೆವು. ಬರೇ ನೂರುಮೈಲಿ ದೂರದ ನಾರ್ಥ್ ಕೆರೊಲಿನಾದ ಪರ್ವತ ಪ್ರದೇಶದಲ್ಲಿ ನನ್ನ ದೋಸ್ತಿ ಮುನ್ರೋ ಗಿಲ್ಮರ್ ಇರುವ ಸಂಗತಿ ನಮಗೆ ಗೊತ್ತಿರಲಿಲ್ಲ. ಆತನ ಅಡ್ರೆಸ್ಸ್ ನನ್ನ ಹತ್ತಿರ ಇಲ್ಲದಿರುವುದರಿಂದ ಆತನನ್ನು ನೋಡಲು ಆಗಲಿಲ್ಲ. ನಾವು ಭಾರತಕ್ಕೆ ಬಂದಮೇಲೆ ಆತ ನನ್ನ ವಿಳಾಸ ಕೆನೆತ್ ಮೂಲಕ ತಿಳಿದುಕೊಂಡು ನಮಗೆ ಈಮೈಲ್ ಕಳುಹಿಸಿದ.

ಸ್ಯಾನ್‌ಫ್ರಾನ್ಸಿಸ್ಕೋ ಶಹರದಲ್ಲಿರುವ ನನ್ನ ಅಮೇರಿಕನ್ ಗೆಳೆಯರಾದ ಕೆನೆತ್ ಕರ್ಕಾಫ್ ಮತ್ತು ಜಾನ್‌ಕೆಲ್ಲಿಯವರು ವಿಮಾನನಿಲ್ದಾಣದಲ್ಲಿ ನಮ್ಮನ್ನು ಸ್ವಾಗತಿಸಿದರು. ನಾನು ಅವರುಗಳನ್ನು ಕಂಡು ಇಪ್ಪತ್ತೇಳು ವರ್ಷಗಳೇ ಆಗಿದ್ದುವು. ಈ ಗೆಳೆಯರಿಬ್ಬರೂ ತಮ್ಮಗಳ ಮನೆಯ ಕಿಚನ್‌ನಲ್ಲಿ ಹೊಸ ಪಾತ್ರೆ, ಹೊಸ ಮಿಕ್ಸಿ, ಭಾರತೀಯ ದಿನಸಿ ಮತ್ತು ತರಕಾರಿ ತಂದುಜೋಡಿಸಿ ನಮಗಾಗಿ ಕಾಯುತ್ತಿದ್ದರು. ಅವರಿಗೆ ನನ್ನ ಯಜಮಾನತಿ ಸರೋಜಮ್ಮ ಸ್ವಲ್ಪ ಮಡಿ ಸ್ವಭಾವದ ಕಟ್ಟಾ ಸಸ್ಯಾಹಾರಿ ಎಂಬ ವಿಚಾರ ನಮ್ಮಲ್ಲಿಗೆ ಕೆನೆತ್ ಇಪ್ಪತ್ತೇಳು ವರ್ಷಗಳ ಹಿಂದೆ, ಒಂದು ಸಾರಿ ಬಾಳೆಹೊಳೆಯ ನಮ್ಮ ಮನೆಗೆ ಬಂದಾಗ ತಿಳಿದುಕೊಂಡಿದ್ದನು.

ಕೆನೆತ್, ಜಾನ್ ಮತ್ತು ಮುನ್ರೋ ನಾನು ಸಿಂಧನೂರಿನಲ್ಲಿ ಫಾರ್ಮ್ ಮ್ಯಾನೇಜರನಾಗಿ ಕೆಲಸಮಾಡುತ್ತಿದ್ದ ದಿನಗಳ ಮಿತ್ರರು. ಆಗ ಅವರೆಲ್ಲಾ ನನ್ನಂತೆ ಬ್ರಹ್ಮಾಚಾರಿಗಳು. ಅಮೇರಿಕನ್ ಪೀಸ್ ಕೋರಿನ ಸ್ವಯಂ ಸೇವಕರಾಗಿ ಅವರು ನಮ್ಮ ಸುತ್ತಣ ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಮೆರಿಕಾದಲ್ಲಿ ಪುನಃ ನೆಲಸಿದ ಮೇಲೆ ಅವರುಗಳ ಮದುವೆ ಆಯಿತು. ಭಾರತ ಬಿಟ್ಟು ಹೊರಟಾಗ ಅವರಿಗೆ ಮದುವೆಯೇ ಆಗಿದ್ದಿಲ್ಲ. ಈಗ ಅವರ ಸಂಸಾರದವರು ನಮ್ಮ ದಾರಿ ಕಾಯುತ್ತಾ ಇದ್ದರು. ಅವರ ಹೆಂಡತಿ ಮಕ್ಕ್ಕಳನ್ನು ನನ್ನ ಹೆಂಡತಿ ಮಕ್ಕಳು ಅಂದೇ ಮೊದಲಾಗಿ ಭೆಟ್ಟಿ ಆಗುತ್ತಾ ಇದ್ದೆವು. ವಿಮಾನನಿಲ್ದಾಣದಲ್ಲೇ ಇಳಿದೊಡನೆಯೇ ನಮ್ಮ ಬ್ಯಾಗೇಜ್ ಎಲ್ಲವನ್ನೂ ನಮ್ಮಿಂದ ಕಿತ್ತುಕೊಂಡು ಅವನ್ನು ತಾವೇ ಸಾಗಿಸಿ ಅವರ ಕಾರುಗಳಲ್ಲಿಟ್ಟರು.

ನಾವು ಅಲ್ಲಿ ಮೊದಲು ಮಾಡಿದ ಕೆಲಸ ಎಂದರೆ, ಬರ್ಕೆಲಿಯ ಭಾರತೀಯ ಹೋಟೆಲಿನಲ್ಲಿ ಜಾನ್ ಮತ್ತು ಕೆನೆತ್ ಸಂಸಾರದವರು ನಿಯೋಜಿಸಿದ್ದ ಭಾರತೀಯ ಸಸ್ಯಾಹಾರೀ ಔತಣದಲ್ಲಿ ಪಾಲ್ಗೊಂಡಿದ್ದು! ನಾವಿರುವಷ್ಟು ದಿನ ಹುಟ್ಟಾ ಬಿಳಿಯ ಅಮೇರಿಕನ್ನರಾದ ಅವರುಗಳು ತಮ್ಮ ಮನೆಯೊಳಗೆ ಮೀನುಮಾಂಸ ತರಲಿಲ್ಲ. ಜಾನ್, ಐರಿಷ್ ಮೂಲದವನಾದರೆ, ಕೆನೆತ್, ಜರ್ಮನ್ ಮೂಲದ ಅಮೆರಿಕನ್. ನಮ್ಮ ಜತೆಗೆ ಮನೆಯಲ್ಲಿ ಮಾತ್ರವಲ್ಲದೆ ಹೊರಗೆ ಹೋದಲ್ಲಿ ಕೂಡಾ ನಮ್ಮ ಜತೆ ಸಸ್ಯಾಹಾರ ತಿಂದು, ನಮ್ಮೆಲ್ಲರ ಪ್ರೀತಿ, ಗೌರವಗಳಿಸಿದರು.

ಅವರು ಒಂದು ದೊಡ್ಡ ಏಳು ಸೀಟಿನ ಪ್ಲೈಮೌತ್ ವ್ಯಾನ್ ರೆಂಟಲ್‌ಗೆ ತಂದು ಅವರ ಒಂದು ಫ್ಯಾಮಿಲಿ ಕಾರನ್ನು ಜತೆಗೂಡಿಸಿ, ಎಲ್ಲರೂ ಒಟ್ಟಾಗಿ ಸ್ಯಾನ್‌ಫ್ರಾನ್ಸಿಸ್ಕೋ ಮತ್ತು ಸುತ್ತುಮುತ್ತಲಿನ ಊರೆಲ್ಲಾ ಸುತ್ತಿಸಿದರು. ಏನು ಮಾಡಿದರೂ ನಮಗೆ ಒಂದು ಡಾಲರ್ ಖರ್ಚು ಮಾಡಲು ಬಿಡಲಿಲ್ಲ. ಇಪ್ಪತ್ತೇಳು ವರುಷಗಳ ನಂತರದ ಪುನರ್ಮಿಲದಲ್ಲಿ ಅವರ ಸಂಸಾರಗಳು ಮತ್ತು ನನ್ನ ಸಂಸಾರ ಒಂದೇ ಮನೆಯವರಂತೆ ನಗುನಗುತ್ತ ಎರಡು ವಾರಗಳನ್ನು ಕಳೆದೆವು. ಅವರ ಮಕ್ಕಳು ಮತ್ತು ನಮ್ಮ ಮಕ್ಕಳು ಆಶ್ಚರ್ಯಕರ ರೀತಿಯ ಹೊಂದಾಣಿಕೆ ಪ್ರದರ್ಶಿಸಿದರು.

ನಾವು ಸ್ಯಾನ್‌ಫ್ರಾನ್ಸಿಸ್ಕೋ ನಗರ ಹಾಗೂ ಸುತ್ತಲಿನ ಪ್ರದೇಶಗಳನ್ನು ಜತೆಯಾಗಿ ಸುತ್ತಿದೆವು.  ನಮಗೆ ನ್ಯಾಪಾ ವ್ಯಾಲಿ ಗೋಲ್ಡನ್‌ಗೇಟ್ ಸೇತುವೆ, ಗ್ಯಾರಾಡೆಲಿ, ನಗರದ ಟ್ರಾಮ್, ಅಲ್ಕಟ್ರಾಜ್ ದ್ವೀಪ, ರೆಡ್‌ವುಡ್ ಫಾರೆಸ್ಟ್ ಬಹಳ ಇಷ್ಟವಾಯಿತು. ಇವಕ್ಕಿಂತಲೂ ಹೆಚ್ಚಾಗಿ ನಮ್ಮ ಸ್ನೇಹಿತರ ಪ್ರೀತಿ ವಿಶ್ವಾಸಗಳು ನಮಗೆ ತುಂಬಾ ಇಷ್ಟ ಆದುವು. ಸ್ಯಾನ್‌ಫ್ರಾನ್ಸಿಸ್ಕೋ ನಗರದಿಂದ ನಾವು ಹೊರಟು ಸ್ಯಾನ್‌ಡಿಯಾಗೋ ಹತ್ತಿರದ ಸಮುದ್ರತಟದ ವಿಹಾರತಾಣವಾದ ಒಂದು ಆರ್.ಸಿ.ಐ. ರೆಸಾರ್ಟ್‌ವೊಂದರಲ್ಲಿ ಒಂದುವಾರ ಕಳೆಯಲು ಹೊರಟೆವು. ಹೊರಡುವಾಗ ಕೆನೆತ್ ಮತ್ತು ಜಾನ್ ಸಂಸಾರದವರು ಬಂದು ನಮ್ಮನ್ನು ಬೀಳ್ಕೊಟ್ಟರು. ನಾವು ಹೊರಡುವಾಗ ಎಲ್ಲರ ಕಣ್ಣಲ್ಲೂ ಕಣ್ಣೀರು ಬಂತು. ಬಿಳಿಯ ಜನರು ಇಷ್ಟು ಹೃದಯವಂತರಾಗಿರುತ್ತಾರೆಂದು ಸರೋಜಮ್ಮ ಮಕ್ಕಳು ಎಂದಿಗೂ ಭಾವಿಸಿಯೇ ಇರಲಿಲ್ಲವಂತೆ.

ಸ್ಯಾನ್ ಡಿಯಗೋದಲ್ಲಿ ಓಶನ್ ಸೈಡ್ ಎಂಬಲ್ಲಿಯ ಆರ್.ಸಿ.ಐ. ರೆಸಾರ್ಟ್‌ವೊಂದರಲ್ಲಿ ನಾವು ಒಂದುವಾರ ತಂಗಿದೆವು, ಸ್ಯಾನ್‌ಡಿಯಗೋದ ಜೂ, ಕೊರೋನ್ಯಾಡೊ ಬ್ರಿಡ್ಜ್, ನೈಸರ್ಗಿಕ ವೈಚಿತ್ರ್ಯವಾದ ಗೀಸರ್, ಸಿಟಿ ಸೆಂಟರ್, ಹೆರಿಟೇಜ್ ಪಾರ್ಕ್ ಎಲ್ಲವುಗಳ ನೆನಪು ಮರೆಯಲಾರೆವು. ಮೆಕ್ಸಿಕೋ ಕೊಲ್ಲಿಯ ತಿಮಿಂಗಿಲಗಳನ್ನು ನೋಡಲು ಹೋಗುವ ಮನಸ್ಸು ನಮಗಿದ್ದರೂ ಸರೋಜಮ್ಮ ತಾನು ಬರುವುದಿಲ್ಲ, ನೀವೂ ಹೋಗುವುದು ಬೇಡವೆಂದು ಹಠ ಹಿಡಿದು ತಾನೇ ಗೆದ್ದಳು.

ಸ್ಯಾನ್‌ಡಿಯಾಗೋದಿಂದ ನ್ಯೂಯಾರ್ಕಿಗೆ ಹಾರಿ, ಜೆರ್ಸಿ ಸಿಟಿಯ ಅಣ್ಣನ ಮನೆಯಲ್ಲಿ ಒಂದುವಾರ ನ್ಯೂಯಾರ್ಕ್, ಲಿಬರ್ಟಿ ಐಲ್ಯಾಂಡ್, ಎಲ್ಲಿಸ್ ಐಲ್ಯಾಂಡ್, ಟೈಮ್ಸ್ ಚೌಕ, ದೊಡ್ಡ ದೊಡ್ಡ ಮಾಲ್‌ಗಳು, ಆಗ ಇದ್ದ ವರ್ಲ್ಡ್ ಟ್ರೇಡ್ ಸೆಂಟರಿನ ಎರಡು ಗೋಪುರಗಳನ್ನು ಸುತ್ತುತ್ತಾ ಕಳೆದೆವು. ನಮಗೆ ವರ್ಲ್ಡ್ ಟ್ರೇಡ್ ಸೆಂಟರ್ ಸಂದರ್ಶಿಸಿದಕ್ಕೆ ಒಂದು ಸರ್ಟಿಫಿಕೇಟ್ ಕೂಡ ಕೊಟ್ಟರು. ಒಂದು ದಿನ ಅಟ್ಲ್ಯಾಂಟಿಚ್ ಸಿಟಿಯ ಜೂಜು ಕಟ್ಟೆಗಳನ್ನು ನೋಡಿಬಂದೆವು.  ಒಂದುದಿನ ಆಯುಷ್ಯ ಕಲಿಯುತ್ತಿದ್ದ ರಟ್ಗರ್ಸ್ ಯೂನಿವರ್ಸಿಟಿ ನೋಡಿ ಬಂದೆವು. ಕೊನೆಗೂ ಹೊರಡುವ ದಿನ ಬಂತು.  ಅಣ್ಣ ಅತ್ತಿಗೆ ಮತ್ತು ಆಯುಷ್ಯ ಇವರಿಗೆ ವಿದಾಯ ಹೇಳಿ ಲಂಡನ್ ಮೂಲಕ ದುಬಾಯಿ ತಲುಪಿದೆವು.

ಅಮೇರಿಕಾದಿಂದ ದುಬಾಯಿಗೆ ಬಂದು ಫೈವ್‌ಸ್ಟಾರ್ ಹೋಟೆಲ್‌ವೊಂದರಲ್ಲಿ ತಂಗಿದ್ದರೂ, ದಿನವೆಲ್ಲಾ ಗೆಳೆಯ ವಿನೋದ್‌ನಾಯ್ಡು ಅವರ ಮನೆಯಲ್ಲಿ ಊಟಮಾಡಿ, ಅವರ ಕಾರಿನಲ್ಲೇ ಊರು ಸುತ್ತುತ್ತಾ ಮೂರುದಿನ ಸುಖವಾಗಿ ಕಳೆದೆವು. ವಿನೋದ್‌ನಾಯ್ಡು ದುಬಾಯಿಯ ಎಮಿರೇಟ್ಸ್ ಬ್ಯಾಂಕ್‌ನ ಹಿರಿಯ ಅಧಿಕಾರಿ. ಅವರ ಆತಿಥ್ಯ ಮತ್ತು ಸೌಜನ್ಯ ಯಾವಾಗಲೂ ನಮ್ಮ ನೆನಪಿನಲ್ಲಿ ಉಳಿಯುತ್ತದೆ. ನಮಗೆ ದುಬಾಯಿಯ ಸಾಫಾ ಪಾರ್ಕ್ ಬಹಳ ಇಷ್ಟವಾಯಿತು. ಆ ಪಾರ್ಕ್ ಬೆಂಗಳೂರಿನ ಲಾಲ್‌ಬಾಗ್ ಇದ್ದಂತಿದೆ. ಅಲ್ಲಿ ನಮ್ಮಲ್ಲಿಯ ಮೈನಾ ಹಕ್ಕಿಗಳ್ನೂ ಕಂಡೆವು. ಕರ್ಜೂರದ ಮರಗಳ ಜತೆಗೆ ತೆಂಗಿನಮರಗಳೂ ಅಲ್ಲಿವೆ. ಮನೋರಂಜನೆಗೆ ಅಲ್ಲಿ ನಮ್ಮ ಲಾಲ್‌ಬಾಗ್‌ಗಿಂತ ಹೆಚ್ಚು ಸೌಲಭ್ಯಗಳು ಇವೆ.

ದುಬಾಯಿಯ ಊರಿನಲ್ಲಿ ಕಳ್ಳತನವೇ ಇಲ್ಲ. ಲೋಕಲ್ ಟೆಲಿಫೋನ್ ಮಾಡಲು ಎಲ್ಲೂ ಶುಲ್ಕ ಕೊಡಬೇಕಾಗಿಲ್ಲ. ದುಬಾಯಿಯ ಮಾರ್ಗಗಳು ಮತ್ತು ಮಾಲ್‌ಗಳು ತುಂಬಾ ಚೆನ್ನಾಗಿವೆ. ಭಾರತೀಯ ಹೋಟೆಲುಗಳು ತುಂಬಾ ರುಚಿಕಟ್ಟಾದ ಭಾರತೀಯ ಊಟ ನೀಡುತ್ತವೆ. ನಾನು ದುಬಾಯಿಯ ಸ್ಥಳೀಯ ರೊಟ್ಟಿಯಾದ ಕುಬ್ಬೂಸ್ ಮತ್ತು ಅಲ್ಲಿನ ತಾಜಾ ಖರ್ಜೂರದ ಹಣ್ಣುಗಳನ್ನು ಪ್ರತೀ ಊಟದ ಜತೆಗೂ ತಿನ್ನುತ್ತಿದ್ದೆ.

ದುಬಾಯಿಯಿಂದ ಬೊಂಬಾಯಿ ಮಾರ್ಗವಾಗಿ ನಮ್ಮ ಬೆಂಗಳೂರಿನ ಮನೆಗೆ ಸುಖವಾಗಿ ಬಂದು ಮುಟ್ಟಿದೆವು.

ಅರುವತ್ತೈದು ದಿನಗಳ ದೀರ್ಘಯಾತ್ರೆಯಲ್ಲಿ ನಾವು ಅರ್ಧ ಭೂಲೋಕ ಸುತ್ತಿ ಬಂದೆವು ಎಂಬ ಸಮಾಧಾನ ನಮಗೆ ಇಂದಿಗೂ ಇದೆ.

ಪದೆ ಪದೇ ಹೀಗೆ ಸುತ್ತಾಡಲು ಸಾಧ್ಯವೆ? ನಾವು ಈ ಪ್ರಯಾಣವನ್ನು ಟ್ರಿಪ್ ಆಫ್ ಎ ಲೈಫ್ ಟೈಮ್ ಎಂದು ನೆನಪಿಸಿಕೊಳ್ಳುತ್ತೇವೆ.

* * *