೧೯೮೪ನೇ ಇಸವಿ ಇರಬೇಕು, ನಾವು ಬೆಂಗಳೂರಿನ ಚಾರ್ಲ್ಸ್ ಕ್ಯಾಂಪ್‌ಬೆಲ್ ರೋಡಿನಲ್ಲಿ, ಆಗ ಪೋಲಿಸ್ ಇಲಾಖೆಯಲ್ಲಿ ಡಿ.ಎಸ್.ಪಿ. ಆಗಿದ್ದ ಎಸ್.ಕೃಷ್ಣಮೂರ್ತಿಯವರ ಮನೆಯಲ್ಲಿ, ಬಾಡಿಗೆದಾರರಾಗಿ ವಾಸವಾಗಿದ್ದೆವು. ಮಕ್ಕಳಿಬ್ಬರೂ ಸೈಂಟ್‌ಚಾರ್ಲ್ಸ್ ಕಾನ್ವೆಂಟ್‌ನಲ್ಲಿ ಓದುತ್ತಿದ್ದರು. ಓಡಾಡಲು ಆ ಕಾಲದ ಫ್ಯಾಶನೇಬಲ್ ಕಾರು ಅನ್ನಿಸಿಕೊಂಡಿದ್ದ ಫಿಯಾಟ್ ಇತ್ತು. ಅದರ ನಂಬರ್ ಕೂಡಾ ನೆನಪಿದೆ ಎಮ್.ಇ.ಬಿ.೯೦೩೧. ಮಕ್ಕಳ ಓದಿಗೋಸ್ಕರ ೧೯೮೦ರಲ್ಲಿ ಬೆಂಗಳೂರಿಗೆ ಬಂದು ಬಿಡಾರ ಮಾಡಿದ್ದೆವು. ವಾರಾಂತ್ಯದಲ್ಲಿ ತೋಟದ ಕೆಲಸದ ಕಡೆ ನಿಗಾಕೊಡುತ್ತಾ, ವಾರವಿಡೀ ಮಕ್ಕಳ ಲಾಲನೆಪಾಲನೆಯಲ್ಲಿ ಕಾಲ ಹಾಕುತ್ತಿದ್ದೆವು. ನಾನು ಮಕ್ಕಳನ್ನು ಶಾಲೆಗೆ ಬಿಟ್ಟ ಬಳಿಕ, ಉಳಿದ ಸಮಯವನ್ನು, ಮಾರಾಟಕ್ಕಿರುವ ಯಾವುದಾದರೂ ಹಳೆಯ ಮನೆಯನ್ನು ಕೊಂಡು, ರಿಪೇರಿಮಾಡಿ ಲಾಭಕ್ಕೆ ಮಾರುವ ವೃತ್ತಿಯಲ್ಲಿ ನಿರತನಾಗಿದ್ದೆ. ಜೀವನ ಹೇಗೋ ಒಂದುರೀತಿ ನಡೆಯುತ್ತಿತ್ತು. ಸಂತೋಷದ ಸಂಗತಿ ಎಂದರೆ ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಬಿಡದೆ, ಅವರ ಜತೆಯಲ್ಲೇ ನಾವು ವಾಸಿಸುತ್ತಿದ್ದೆವು.

ಪ್ರತೀ ಶುಕ್ರವಾರ ಸಂಜೆ ಶಾಲೆಯ ಬಳಿಯಲ್ಲೇ ಮಕ್ಕಳನ್ನು ಪಿಕ್‌ಅಪ್ ಮಾಡಿ, ೩೪೦ ಕಿಲೋಮೀಟರ್ ದೂರದಲ್ಲಿನ ನಮ್ಮ ತೋಟಕ್ಕೆ ಹೊರಡುತ್ತಿದ್ದೆವು. ಹಾಸನಮಾರ್ಗ ಚೆನ್ನಾಗಿ ಇರದಿದ್ದುದರಿಂದ ತುಮಕೂರು-ತಿಪಟೂರು-ಕಡೂರು-ಚಿಕ್ಕಮಗಳೂರು-ಮೂಡಿಗೆರೆ, ಕೊಟ್ಟಿಗೆಹಾರ, ಹಿರೇಬೈಲು ಮಾರ್ಗವಾಗಿ ಬಾಳೆಹೊಳೆಯ ನಮ್ಮ ಸುಳಿಮನೆ ಕಾಫಿತೋಟಕ್ಕೆ ಪ್ರಯಾಣಿಸುತ್ತಿದ್ದೆವು. ಹಿರೇಬೈಲಿನಲ್ಲಿ ತಾರುರಸ್ತೆ ಕೊನೆಗೊಳ್ಳುತ್ತಿತ್ತು. ಅಲ್ಲಿಂದ ನಮ್ಮ ಮನೆಯತನಕದ ರಸ್ತೆಯು ಮಲ್ಲೇಶನ ಗುಡ್ಡ ಎಂಬ ಕಾಫಿತೋಟದ ಮೂಲಕ ಸಾಗುತ್ತಿತ್ತು. ಕೊನೆಯ ಈ ಹದಿನೈದು ಕಿಲೋಮೀಟರ್ ಮಣ್ಣಿನ ರಸ್ತೆಯ ಪ್ರಯಾಣವು ಒಂದೂವರೆ ಗಂಟೆ ಸಮಯ ಕಬಳಿಸುತ್ತಿತ್ತು. ಯಾಕೆಂದರೆ, ಅದು ಮಲೆನಾಡಿನ ಸಾಮಾನ್ಯ (=ಅಸಾಮಾನ್ಯ) ಎತ್ತಿನಗಾಡಿ ಓಡಾಡುವ ರಸ್ತೆ.

ಪ್ರತೀ ಶುಕ್ರವಾರ ಬೆಂಗಳೂರಿನಿಂದ ಹೊರಟು ನೆಲಮಂಗಲ ಮುಟ್ಟುವುದರೊಳಗೆ, ನನ್ನ ಪತ್ನಿ ಸರೋಜಳು ಮಕ್ಕಳಿಗೆ ಕಾರಿನಲ್ಲೇ ಉಪಹಾರ ತಿನ್ನಿಸುತ್ತಿದ್ದಳು. ಮಾರ್ಗದಲ್ಲಿ ಈಗಿನಷ್ಟು ಟ್ರಾಫಿಕ್ ಆದಿನಗಳಲ್ಲಿ ಇರಲಿಲ್ಲ. ಬೆಂಗಳೂರಿನಿಂದ ತುಮಕೂರು ತಲುಪಲು ಒಂದೂ ಕಾಲುಗಂಟೆ ಸಾಕಾಗುತ್ತಿತ್ತು. ನನ್ನ ಕಾರಿನಲ್ಲಿ ಟಿ.ಡಿ.ಕೆ. ಬ್ರಾಂಡಿನ ಉತ್ತಮ ಕ್ಯಾಸೆಟ್ ಪ್ಲೇಯರ್ ಇತ್ತು. ಯಾವಾಗಲೂ ಮ್ಯೂಸಿಕ್ ಹಾಕಿಕೊಂಡೇ ಡ್ರೈವ್ ಮಾಡುತ್ತಿದ್ದೆ. ನೆಲಮಂಗಲ ದಾಟುತ್ತಲೇ, ಮೊದಲು ಮಕ್ಕಳು, ಆಮೇಲೆ ನನ್ನ ಪತ್ನಿ ಸರೋಜಮ್ಮ ಕೂಡಾ ಕಾರಿನಲ್ಲಿ ನಿದ್ದೆಮಾಡಿಬಿಡುತ್ತಿದ್ದರು. ನಾನು ಟೇಪ್ ಸಂಗೀತದೊಂದಿಗೆ ಗುನುಗುತ್ತಾ, ನಿದ್ರೆ ಓಡಿಸಲು ಆಗಾಗ ಸಿಗರೇಟ್ ಸೇದುತ್ತಾ, ಕಾರು ಚಲಾಯಿಸಿಕೊಂಡು ರಾತ್ರಿ ಎಂಟೂವರೆ ವೇಳೆಗೆ ತಿಪಟೂರಿನ ಕಾಮತ್ ಹೋಟೆಲ್ ತಲುಪುತ್ತಿದ್ದೆ. ಅಲ್ಲಿ ಊಟ ಮುಗಿಸಿ ಹೊರಟರೆ ಹಿರೇಬೈಲು ಸೇರುವಾಗ ಮಧ್ಯರಾತ್ರಿಯೇ ಆಗುತ್ತಿತ್ತು. ಅಲ್ಲಿಂದ ಹದಿನೈದು ಕಿಲೋಮೀಟರ್ ಗಾಡಿ ರಸ್ತೆಯನ್ನು ಆಮೆವೇಗದಿಂದ ಕ್ರಮಿಸಿ, ಮನೆಸೇರುವಾಗ ರಾತ್ರಿ ಘಂಟೆ ಒಂದೋ ಎರಡೊ ಆಗುತ್ತಿತ್ತು. ಈ ಕಾಡು ಮತ್ತು ಕಾಫಿತೋಟದ ಮಧ್ಯೆಸಾಗುವ ದಾರಿಯಲ್ಲಿ ಬಹಳಷ್ಟುಸಾರಿ ಮೊಲ, ನರಿ, ಜಿಂಕೆಗಳ ಹಿಂಡು, ಕಡವೆ, ಕಾಡು ಕುರಿ (ಬಾರ್ಕಿಂಗ್ ಡೀಯರ್) ಬರ್ಕ (ಮೌಸ್ ಡೀಯರ್) ಮುಳ್ಳುಹಂದಿ, ಕಾಡುಹಂದಿ ಮೊದಲಾದ ಪ್ರಾಣಿಗಳು ಕಾಣಿಸುತ್ತಿದ್ದವು.            ಶನಿವಾರ ಬೆಳಗ್ಗೆ ಆರಕ್ಕೇ ಎದ್ದು ನಾನು ಒಂದು ಸುತ್ತು ತೋಟ ಸುತ್ತಿ ಬರುತ್ತಿದ್ದೆ. ಬೆಳಗ್ಗೆ ಏಳೂಕಾಲು ಗಂಟೆಗೆ ಕೆಲಸಕ್ಕೆ ಬಂದಿರುತ್ತಿದ್ದ ಆಳುಗಳ ಗೆಣಿತೆಗೆ, ಅಂದರೆ ಹಾಜರಾತಿ ತೆಗೆಯಲು ಬಂಗ್ಲೆಯ ಮುಂದಿನ ಕಾಫಿ ಒಣಗಿಸುವ ಮಂಗಳೂರು ಇಟ್ಟಿಗೆ ಹಾಸಿದ ಕಣದಲ್ಲಿ  ಹಾಜರಾಗುತ್ತಿದ್ದೆ. ಹೆಚ್ಚಿನ ದಿನಗಳಲ್ಲಿ, ನನ್ನ ಚಿಕ್ಕಮಗಳು ರಚನಾ ನನ್ನೊಡನೆಯೇ ಎದ್ದು, ನಮ್ಮ ಕೆಲಸದ ದಿರುಸಿನಲ್ಲಿ, ಅಂದರೆ ತಲೆಗೆ ಒಂದು ಹ್ಯಾಟ್ ಏರಿಸಿ, ಹಾಫ್‌ಪ್ಯಾಂಟ್ ಮತ್ತು ಬೂಟ್ಸ್ ಧರಿಸಿ ಕೈಯಲ್ಲಿ ಪುಟ್ಟಕತ್ತಿ ಹಿಡಿದು, ನನ್ನ ಜತೆಗೇ ಬರುತ್ತಿದ್ದಳು. ದೊಡ್ಡ ಮಗಳು ರಾಧಿಕಾ ಸ್ವಲ್ಪ ತಡವಾಗಿ ಎದ್ದರೂ, ಗೆಣಿತೆಗೆ ಸರಿಯಾಗಿ ಬಂದು ನಮ್ಮನ್ನು ಕೂಡಿಕೊಳ್ಳುತ್ತಿದ್ದಳು.   ಹಾಜರಾತಿ ಮುಗಿಸಿ ದಿನದ ಕೆಲಸಕಾರ್ಯ ಶುರುಮಾಡಿಸಿದ ನಂತರ ನಾವು ಬೆಳಗಿನ ತಿಂಡಿ ತಿನ್ನಲು ಬಂಗಲೆಗೆ ಬರುತ್ತಿದ್ದೆವು. ಪುನಃ ಕೆಲಸದ ಕಡೆ ನಾನು ಹೋದರೆ, ರಾಧಿಕಾ ಮತ್ತು ರಚನಾ ತೋಟದಲ್ಲಿನ ಇತರೇ ಮಕ್ಕಳ ಕಪಿ ಸೈನ್ಯ ಸೇರಿಸಿಕೊಂಡು ಸೀಬೇ ಮರ, ಸೀತಾಫಲದ ಮರ, ಬೆಣ್ಣೆ ಹಣ್ಣಿನ ಮರ, ಧಾರೆಹುಳಿಯ ಮರ ಮುಂತಾದುವನ್ನು ಶೋಧಿಸುತ್ತಿದ್ದರು. ಇಲ್ಲವೇ ಚೌಕಾಭಾರ ಅಥವಾ ಕಳ್ಳಪೋಲಿಸ್ ಆಟ ಆಡುತ್ತಿದ್ದರು. ನಮ್ಮ ತೋಟದಲ್ಲಿ ಮಕ್ಕಳಿಗೆ ಆಡಲು ಭಯವಿಲ್ಲ. ಸುತ್ತಲೂ ತಂತಿಬೇಲಿ ಇದೆ. ನಮ್ಮ ನೀರಿನ ತೊರೆಗಳು ಕೂಡಾ ಆಳವಾಗಿಲ್ಲ. ನೀರು ಸಂಗ್ರಹಣೆ ಟ್ಯಾಂಕುಗಳ ಬಳಿಗೆ ಆಳುಗಳ ಮಕ್ಕಳು ಹೋಗಿ ಆಡಬಾರದೆಂದು ಮುಳ್ಳು ತಂತಿಬೇಲಿ ಹಾಕಿರುತ್ತೇವೆ. ನಮ್ಮ ತೋಟದ ಪಶ್ಚಿಮಬೌಂಡರಿಯ ಪಕ್ಕದಲ್ಲೇ ಹರಿಯುವ ಭದ್ರಾನದಿಗೆ ಮಕ್ಕಳು ಆಡಲು ಹೋಗುವ ಭಯವಿಲ್ಲ, ಏಕೆಂದರೆ ಅಲ್ಲಿ ಬಲವಾದ ಬೇಲಿ ಇದೆ. ನಮ್ಮ ತೋಟದಲ್ಲಿ ಹಲವಾರು ಬಗೆಯ ಹಾವುಗಳು ಇದ್ದರೂ, ಕಳೆದ ತೊಂಬತ್ತುವರ್ಷಗಳ ಇತಿಹಾಸದಲ್ಲಿ ಅವು ಯಾರಿಗೂ ಕಚ್ಚಿದ ನಿದರ್ಶನ ಇದುವರೆಗೆ ಇಲ್ಲ. ಮಕ್ಕಳಿಗೆ ನಮ್ಮ ತೋಟವು ಒಂದು ಮಂಕೀ ಪೆರಡೈಸ್ ಎಂದು ನಾವು ಯಾವಾಗಲೂ ನಕ್ಕು ನುಡಿಯುತ್ತೇವೆ.           ನಾನು ಶನಿವಾರ ಮಧ್ಯಾಹ್ನ ನಾಲ್ಕುಗಂಟೆಗೆ ತೋಟದ ಆಳುಗಳ ಬಟವಾಡೆ ಮುಗಿಸಿದ ನಂತರ, ಸಾಯಂಕಾಲ ತೋಟದಲ್ಲಿರುವ ಎಲ್ಲಾ ಮಕ್ಕಳನ್ನು ಕರೆದು ಅವರ  ಜತೆಗೆ ನಮ್ಮ ಮಕ್ಕಳನ್ನೂ ಸೇರಿಸಿ ಬ್ಯಾಡ್ಮಿಂಟನ್, ರಬ್ಬರ್‌ಬಾಲ್ ಕ್ರಿಕೆಟ್ ಅಥವಾ ಟೊಪ್ಪಿ ಆಟ ಆಡುತ್ತಿದ್ದೆ. ಸಂಜೆಯ ಸ್ನಾನದ ನಂತರ ಮಕ್ಕಳಿಗೆ ಕಥೆ ಹೇಳುತ್ತಿದ್ದೆ.

ಭಾನುವಾರ ತೋಟದ ಆಳುಗಳಿಗೆ ರಜಾ. ನಾನು ಭಾನುವಾರ ಹಗಲು ಆಫೀಸಿನ ಲೆಕ್ಕ ಹಾಗೂ ತೋಟದ ರಖೋಲೆಯ ಕೆಲಸಗಳಲ್ಲಿ ನಿರತನಾಗಿರುತ್ತಿದ್ದೆ. ಭಾನುವಾರ ಸಂಜೆ ಬೇಗ ಊಟ ಮುಗಿಸಿ ಮಲಗುತ್ತಿದ್ದೆವು. ಮಕ್ಕಳಿಗೆ ಸ್ಕೂಲ್ ಯೂನಿಫಾರಂ ಹಾಕಿಯೇ ಮಲಗಿಸುತ್ತಿದ್ದೆವು.

ಸೋಮವಾರ ಬೆಳಗಿನ ಏರಡು ಗಂಟೆಗೆ ಮಕ್ಕಳನ್ನು ಎತ್ತಿ ಕಾರಿನಲ್ಲಿ ಮಲಗಿಸಿ ಬೆಂಗಳೂರಿಗೆ ಹಿಂತಿರುಗಿ ಹೊರಡುತ್ತಿದ್ದೆವು. ತುಮಕೂರಿನಲ್ಲಿ ನಾನು ಸ್ವಲ್ಪ ಟೀ ಕುಡಿದು, ಅಲ್ಲಿನ ವೂಡ್ ಲ್ಯಾಂಡ್ಸ್ ಹೋಟೆಲಿನಿಂದ ಎಲ್ಲರಿಗೂ ಬೆಳಗಿನ ಉಪಹಾರಕ್ಕೆ ಏನಾದರೂ ಪಾರ್ಸೆಲ್ ಕಟ್ಟಿಸುತ್ತಿದ್ದೆ. ಬೆಂಗಳೂರಿನ ಮನೆ ಸೇರಿದೊಡನೆ ಮಕ್ಕಳಿಗೆ ಉಪಹಾರ ಮಾಡಿಸಿ ಕೈಗೆ ಪುಸ್ತಕದ ಚೀಲ ಕೊಟ್ಟು ಸ್ಕೂಲಿಗೆ ಬಿಡುತ್ತಿದ್ದೆವು. ಹೀಗೆ ಸಾಗುತ್ತಿತ್ತು ನಮ್ಮ ಜೀವನ ರೀತಿ.

ಒಮ್ಮೆ ಚಳಿಗಾಲ ಕಳೆದು ಬೇಸಗೆ ಶುರುವಾಗಲು ಮಕ್ಕಳಿಬ್ಬರೂ ಜ್ವರ ಎಂದು ಶಾಲೆಯಿಂದ ಬಂದರು. ಸಂಜೆಯಾಗುತ್ತಲೇ ಮೈಯಲ್ಲಿ ಕೋಟಲೆಯ (ಚಿಕನ್ ಪಾಕ್ಸ್ನ) ಬೊಬ್ಬೆಗಳು ಕಾಣಿಸಿಕೊಂಡವು. ಇದು ಮಾಮೂಲಿ ಚಿಕನ್ ಪಾಕ್ಸ್ ಎಂದು ಡಾಕ್ಟರು ಔಷಧೋಪಚಾರ ಹೇಳಿದರು. ಅಷ್ಟರಲ್ಲಿ ಸರೋಜಳಿಗೂ ಜ್ವರ ಶುರುವಾಗಿ ಮೈಮೆಲೆ ಬೊಬ್ಬೆಗಳು ಎದ್ದುವು. ಅವಳಿಗೆ ಕೂಡಾ ಅದೇ ಔಷದ ಉಪಚಾರಗಳನ್ನು ಡಾಕ್ಟರರು ಹೇಳಿದರು. ಅವಳಿಗೆ ಚಿಕ್ಕಂದಿನಲ್ಲಿ ಚಿಕನ್‌ಪಾಕ್ಸ್ ಆಗಿರಲಿಲ್ಲವಂತೆ. ಆದರಿಂದ, ತಡವಾಗಿ ಆಯಿತು ಎಂದು ನಮ್ಮ ಕಾಮತ್ ಡಾಕ್ಟರರು ಅಭಿಪ್ರಾಯಪಟ್ಟರು. ಸರೋಜಳಿಗೆ ಕೂಡ ಡಾಕ್ಟರರು ಬೆಡ್‌ರೆಸ್ಟ್ ಕಡ್ಡಾಯ ಎಂದು ಹೇಳಿದರು. ನನಗೆ ಅಡುಗೆ ಮನೆಯ ಡ್ಯೂಟಿ ಸಿಕ್ಕಿಯೇ ಬಿಟ್ಟಿತು. ನನಗೆ ಅಡುಗೆ ಮಾಡಿ ಗೊತ್ತಿಲ್ಲ. ಅಂದರೆ….., ಒಳ್ಳೆಯ ಅಡುಗೆ ಮಾಡಿ ಗೊತ್ತಿಲ್ಲ..!

ಬೆಳಗಿನ ಮತ್ತು ಸಂಜೆಯ ತಿಂಡಿಗೆ ಬ್ರೆಡ್ ಅಥವಾ ಟೋಸ್ಟ್ ಮತ್ತು ಜತೆಗೆ ಸ್ವಲ್ಪ ಜಾಮ್ ರೋಗಿಗಳಿಗೆ ಕೊಡಿರೆಂದು ಡಾಕ್ಟರೇ ಹೇಳಿದ್ದರು. ಆದ್ದರಿಂದ, ಬೆಳಗಿನ ಮತ್ತು ಸಂಜೆಯ ಉಪಹಾರದ ಬಗ್ಗೆ ನಾನು ಚಿಂತಿಸಬೇಕಾಗಿರಲಿಲ್ಲ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಏನು ಮಾಡಲಿ? ಎಂಬ ಚಿಂತೆ ನನ್ನನ್ನು ಕಾಡಿತು.

ಬಹಳ ವರ್ಷಗಳ ಹಿಂದೆ ನಾನು ಶೀರೂರಿನಲ್ಲಿ ನನ್ನ ಅಕ್ಕನಿಗೋಸ್ಕರ ತೆಂಗಿನತೋಟ ಮಾಡಿಕೊಡುವ ಕಾರ್ಯದಲ್ಲಿ ತೊಡಗಿದ್ದಾಗ, ಎರಡು ವರ್ಷಗಳ ಕಾಲ ಅನಿವಾರ್ಯವಾಗಿ ನಾನು ನನ್ನ ಸರ್ವೈವಲ್ಗೋಸ್ಕರ ಅಡುಗೆ ಮಾಡಿಕೊಂಡಿದ್ದ ಅನುಭವವಿತ್ತು. ಆದರೆ, ನನ್ನ ಅಡುಗೆಯನ್ನು ಯಾರಿಗೂ ಬಡಿಸುವ ಧೈರ್ಯ ಮಾತ್ರ ಮಾಡಿರಲಿಲ್ಲ.

ನನಗೆ ನಾಯಿಗಳೆಂದರೆ ಬಹು ಪ್ರೀತಿ. ಆದರೆ, ನಾನು ನನ್ನ ಅಕ್ಕನ ತೋಟದಲ್ಲಿ ನಾಯಿ ಸಾಕುವ ಧೈರ್ಯ ಮಾಡಿರಲಿಲ್ಲ.  ಯಾಕೆಂದರೆ ನಾನು ಬೇಯಿಸಿದ ಅಡುಗೆಯನ್ನು ನಾಯಿ ತಿನ್ನದಿದ್ದರೆ? ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ಅಲ್ಲಿ ಇದ್ದಾಗ ಹಲವು ಸಲ ನಾನು ಮಾಡಿದ ಅಡುಗೆಯನ್ನು ತಿನ್ನಲಾರದೇ, ಆಚೆಗೆಸೆದು ಅವಲಕ್ಕಿಮೊಸರು ತಿಂದುಮಲಗಿದ್ದೆ.

ಈಗ ನಾನು ಪಥ್ಯದ ಅಡುಗೆ ಮಾಡಬೇಕಿತ್ತು. ಎಣ್ಣೆ, ತುಪ್ಪ, ಹುಳಿ, ಖಾರ ಇವೆಲ್ಲವೂ ವರ್ಜ್ಯ! ನನ್ನ ಹೆಂಡತಿ ಮಕ್ಕಳಿಗೆ ಗಂಜಿ ಊಟ ಸೇರದು. ಏನು ಮಾಡಲಿ? ಎಂದು ಆಲೋಚಿಸುತ್ತಾ ನೇರವಾಗಿ ಮಹಾತ್ಮಗಾಂಧಿ ರಸ್ತೆಯ ಒಂದು ಪುಸ್ತಕದ ಅಂಗಡಿಗೆ ಹೋದೆ. ಅಲ್ಲಿ ಆಂಗ್ಲಭಾಷೆಯ ಒಂದು ದುಬಾರಿ ಪಾಕ ಪುಸ್ತಕ ಕೊಂಡುತಂದೆ. ಆ ಪುಸ್ತಕದಲ್ಲಿ ನನ್ನ ಹೆಂಡತಿ ಮಕ್ಕಳ ಪಥ್ಯಕ್ಕೆ ಹೊಂದುವ ಅಡುಗೆಗಾಗಿ ಹುಡುಕತೊಡಗಿದೆ. ಕೊನೆಗೂ ಸಿಕ್ಕಿತು! ಬಸಂತ್ ಪಲಾವ್ ಎಂಬ ಭಕ್ಷ! ಅದು ಎಲ್ಲಾ ದೃಷ್ಟಿಕೋನಗಳಿಂದ ನಮ್ಮ ಪಥ್ಯಕ್ಕೆ ಹೊಂದುವಂತೆ ಇತ್ತು.

ಬಸಂತ್ ಪಲಾವ್ ತಯಾರಿಕೆಗೆ ಎಣ್ಣೆ ತುಪ್ಪ ಬೇಡವೇ ಬೇಡ! ಬರೇ ಅಕ್ಕಿಯಿಂದ ತಯಾರಾಗುವ ಒಳ್ಳೆಯ ಆಹಾರ ಇದು. ತಯಾರಿಸಲು ಕೂಡಾ ಸುಲಭ! ದಿನಾ ಅನ್ನಕ್ಕೆ ಇಡುವ ರೀತಿಯಲ್ಲೇ ಅಕ್ಕಿತೊಳೆದು, ಪ್ರೆಷರ್‌ಕುಕ್ಕರಿಗೆ ಹಾಕಿ ಮುಚ್ಚುವ ಮೊದಲು, ಒಂದು ಪರಿಶುದ್ಧವಾದ ಬಟ್ಟೆಯ ತುಂಡಿನಲ್ಲಿ ಸ್ವಲ್ಪ ಉಪ್ಪು, ಅರಸಿನ, ಜೀರಿಗೆ (ಮತ್ತಿನ್ನೇನೂ ಇಲ್ಲ ಎಂದು ನೆನಪು) ಇವುಗಳನ್ನು ಕಟ್ಟಿ ನಿತ್ಯದಂತೆ, ಅಂದರೆ, ಮಾಮೂಲಿ ರೀತಿಯಲ್ಲಿ, ಅನ್ನ ಮಾಡಿಬಿಟ್ಟರೆ ಬಸಂತ್ ಪಲಾವ್ ತಯಾರ್. ನನ್ನ ಸಂಶೋಧನೆಯ ಬಗ್ಗೆ ನಾನು ಬಹಳ ಹೆಮ್ಮೆಪಟ್ಟುಕೊಂಡೆ…! ಇದಕ್ಕೆ ವ್ಯಂಜನವಾಗಿ ಮೊಸರು ಪಚ್ಚಡಿ..! ಸೌತೇಕಾಯಿ ಈರುಳ್ಳಿ ಸಣ್ಣದಾಗಿ ಹೆಚ್ಚಿ ಮೊಸರು ಬೆರೆಸಿದರೆ ಆಯಿತು.

ಇದೇ ಪಾಕ ಪ್ರಯೋಗವು ಪ್ರತಿದಿನ, ದಿನಕ್ಕೆ ಎರಡಾವರ್ತಿ ನಡೆಯಿತು. ಮೊದಲದಿನ ಒಂದು ಹೊತ್ತು ಎಲ್ಲರೂ ಈ ಪಲಾವ್ ಸೇವಿಸಿದೆವು. ಎರಡನೇ ಬಾರಿಯಿಂದ ತಿನ್ನಲು ಸೇರದಿದ್ದರೂ, ಅದನ್ನೇ ತಿನ್ನಬೇಕಾಯಿತು. ಕಾರಣ, ಬೇರೆ ಯಾವ ಪಥ್ಯದ ಅಡುಗೆ ಮಾಡಲು ನನಗೆ ತೋಚಲಿಲ್ಲ. ನಾನಂತೂ ಮರುದಿವಸದಿಂದಲೇ ಬ್ರೆಡ್ಡನ್ನು ಮುಖ್ಯ ಆಹಾರ ಮಾಡಿಕೊಂಡು ಪದೇಪದೇ ಕಾಫಿಮಾಡಿಕೊಂಡು ಕುಡಿದು, ಐದುದಿನ ನಿರಂತರವಾಗಿ ಏಕತಾನದ ಬಸಂತ್ ಪಲಾವ್ ಮಾಡಿ ಎಲ್ಲರಿಗೂ ಬಡಿಸುತ್ತಿದ್ದೆ.

ಐದನೇ ದಿನ ಬಸಂತ್‌ಪಲಾವ್ನ ನಿತ್ಯದರ್ಶನಕ್ಕೆ ಹೆದರಿ ಸರೋಜಮ್ಮ ಬೇಗನೆ ನೀರು ಹಾಕಿಕೊಂಡು ಬಂದು, ಅಡುಗೆಮನೆಯಿಂದ ನನ್ನನ್ನು ಹೊರಗೆ ಕಳುಹಿಸಿಬಿಟ್ಟಳು. ನಾನು ಮಾತನಾಡದೆ ಜಾಗ ಖಾಲಿಮಾಡಿದೆ. ನನಗೂ ಬಸಂತ್ ಪಲಾವ್ ತಯಾರಿ ಮತ್ತು ಭಕ್ಷಣೆ ಸಾಕಾಗಿ ಹೋಗಿತ್ತು. ನನ್ನ ಮಕ್ಕಳಿಗಂತೂ ಬಸಂತ್‌ಪಲಾವ್ನ ಹೆಸರು ಹೇಳಿದರೆ ವಾಂತಿಯೇ ಬರುತ್ತಿತ್ತು. ಈಗಲೂ ಮಡದಿ ಮಕ್ಕಳನ್ನು ಹೆದರಿಸಬೇಕಾದರೆ ಒಮ್ಮೆ ಬಸಂತ್ ಪಲಾವ್ ಮಾಡಿ ಬಡಿಸುವೆ ಎಂದು ಬೆದರಿಕೆ ಹಾಕುತ್ತಿರುತ್ತೇನೆ. ಅಂದಿನಿಂದ ಇಂದಿನವರೆಗೆ, ಮಗದೊಂದು ಬಾರಿ ನನ್ನನ್ನು ಬಸಂತ್‌ಪಲಾವ್ ಮಾಡಿ ಬಡಿಸಲು ನನ್ನ ಮಡದಿ ಮಕ್ಕಳು ಬಿಟ್ಟಿಲ್ಲ. ನಾನೆಲ್ಲಿಯಾದರೂ ಅಡುಗೆಮನೆ ಹೊಕ್ಕರೆ, ದಯವಿಟ್ಟು ಬಸಂತ್ ಪಲಾವ್ ಮಾಡಬೇಡಿರಿ ಎಂದು ಎಲ್ಲರೂ ಅಂಗಲಾಚಿ ಬೇಡುತ್ತಾರೆ. ನಾನು ಈ ಕಾರಣದಿಂದ ಆವತ್ತಿನಿಂದ ಈವತ್ತಿನವರೆಗೆ ಅಡುಗೆಮನೆ ಕಡೆಗೆ ತಿರುಗಿ ನೋಡದೆ ಆರಾಮಾಗಿದ್ದೇನೆ.

* * *