ನನ್ನ ಯಜಮಾನತಿ ಶ್ರೀಮತಿ ಸರೋಜಮ್ಮನವರ ನಲ್ವತ್ತೆರಡನೇ ಹುಟ್ಟುಹಬ್ಬ ನಾನು ಎಂದಿಗೂ ಮರೆಯಲಾರದ ಹುಟ್ಟುಹಬ್ಬ. ೧೯೮೯ನೇ ಮೇ ಆರನೇ ತಾರೀಕು ಅವರ ಹುಟ್ಟುಹಬ್ಬದ ದಿನವಾಗಿತ್ತು.

ನಮ್ಮ ಇಬ್ಬರು ಮಗಳಂದಿರೂ ಆಗ ಬೆಂಗಳೂರಿನ ಸೈಂಟ್‌ಚಾರ್ಲ್ಸ್ ಕಾನ್ವೆಂಟ್‌ನಲ್ಲಿ ಓದುತ್ತಿದ್ದರು. ಮಕ್ಕಳಿಗೆ ಬೇಸಗೆಯ ರಜಾ ಇದ್ದ ಕಾರಣ, ಕೆಲವು ದಿನಗಳ ಮಟ್ಟಿಗೆ ನಮ್ಮ ಸುಳಿಮನೆ ಕಾಫಿತೋಟದಲ್ಲೇ ನಾವು ವಾಸವಾಗಿದ್ದೆವು.

ಮೇ ಐದನೇ ತಾರೀಕಿನ ಸಂಜೆ ನಮ್ಮ ಲಾಯರ್ ದಿನಕರರಾಯರು ನನ್ನನ್ನು ಚಿಕ್ಕಮಗಳೂರಿನ ಆಫೀಸಿಗೆ ಸಾಯಂಕಾಲ ಎಂಟು ಗಂಟೆಗೆ ಬರಲು ಹೇಳಿದ್ದರು. ನಾನು ಮಧ್ಯಾಹ್ನ ನಾಲ್ಕು ಗಂಟೆಗೆ ತೋಟದಿಂದ ನಮ್ಮ ಫಿಯಾಟ್ ಕಾರಿನಲ್ಲಿ ಹೊರಟು, ಸಾಯಂಕಾಲ ಆರೂವರೆಗೆ ಚಿಕ್ಕಮಗಳೂರು ಸೇರಿದೆ. ಆಗ ಚಿಕ್ಕಮಗಳೂರಿನಲ್ಲಿ ಉತ್ತಮ ಹೋಟೆಲ್ ಎನಿಸಿದ್ದ ಹೋಟೆಲ್ ಭಾಗೀರಥಿಯಲ್ಲಿ ಕಾಫಿತಿಂಡಿ ಮುಗಿಸಿ, ಸರೋಜಮ್ಮನವರಿಗೆ ಒಂದು ಚಿಕ್ಕ ಉಡುಗೊರೆ ಕೊಳ್ಳಬೇಕೆಂದು ಗಾಂಧೀಬಜಾರಿನ ಸುಪ್ರಸಿದ್ಧ ಕೇಸರಿ ಜೂವೆಲ್ಲರ್ಸ್ ಹೊಕ್ಕೆ. ನನ್ನ ಅಂದಿನ ಹಣಕಾಸು ಪರಿಸ್ಥಿತಿಗೆ ಹೊಂದುವಂತಿದ್ದ ಒಂದು ಅಮೇರಿಕನ್ ಡೈಮಂಡ್ ಪೆಂಡೆಂಟ್ ಕೊಂಡೆ. ಆಗಲೇ ಸಮಯ ಎಂಟಕ್ಕೆ ಹತ್ತು ನಿಮಿಷ ಇತ್ತು.

ಠೀಕಾಗಿ ಎಂಟುಗಂಟೆಗೆ ಶ್ರೀ ದಿನಕರರಾಯರ ಪ್ರಭು ಬೀದಿಯಲ್ಲಿನ ಛೇಂಬರ್ ಹೊಕ್ಕೆ. ಲಾಯರು ಬಿಡುವು ಮಾಡಿಕೊಂಡು ನನ್ನನ್ನು ಕಾಯುತ್ತಿದ್ದರು. ಅವರಲ್ಲಿನ ವ್ಯವಹಾರ ಮುಗಿಸಿ ಒಂಬತ್ತು ಗಂಟೆಗೆ ನನ್ನನ್ನು ಬೀಳ್ಕೊಟ್ಟರು. ನಾನು ಹೊರ ಬಂದು ಕಾರು ಹತ್ತುತ್ತಿರುವಾಗ ಶ್ರೀ ದಿನಕರರಾಯರು ಅವರ ಆಫೀಸಿನ ಬಾಗಿಲಿಗೆ ಬಂದು, ಪೆಜತ್ತಾಯರೇ, ತೋಟಕ್ಕೆ ಹೊರಟಿರಾ? ಇಂದು ರಾತ್ರಿ ಹೊರಡಬೇಡಿ. ಬಾಳೆಹೊನ್ನೂರಿನ ಹತ್ತಿರ ಒಂಟಿಸಲಗದ ಹಾವಳಿ ಇದೆಯಂತೆ! ಇಂದು ಕಡೂರ್ ಕ್ಲಬ್ (ಪ್ಲಾಂಟರ್ಸ್ ಕ್ಲಬ್) ಅಥವಾ ಯಾವುದಾದರೂ ವಸತಿಗೃಹದಲ್ಲಿ ಮೊಕ್ಕಾಂ ಮಾಡಿ. ಬೆಳಗ್ಗೆ ಬೇಗ ತೋಟಕ್ಕೆ ಹೊರಡುವಿರಂತೆ! ಎಂದರು. ನಾನು ಆಗಲಿ ಸಾರ್! ಎನ್ನುತ್ತಾ ಅವರ ಕಾಂಪೌಂಡ್ ದಾಟಿದೆ.

ಸಾಮಾನ್ಯವಾಗಿ ನಾನು ಯಾವತ್ತೂ ಹಿರಿಯರು ಹೇಳುವ ಮಾತುಗಳನ್ನು ಮೀರುವುದಿಲ್ಲ. ಶ್ರೀ ದಿನಕರರಾಯರು ಹಿರಿಯರು ಹಾಗೂ ನನ್ನ ಹಿತೈಷಿ. ಬೇರಾವ ದಿನವಾದರೂ,  ನಾನು ಆ ರಾತ್ರಿಯನ್ನು ಚಿಕ್ಕಮಗಳೂರಿನಲ್ಲೇ ಕಳೆಯುತ್ತಿದ್ದೆ. ಆದರೆ, ಮರುದಿನ ನನ್ನ ಪತ್ನಿಯ ನಲ್ವತ್ತೆರಡನೇ ಹುಟ್ಟುಹಬ್ಬವಾಗಿತ್ತು! ಯಾಕೋ! ಅವಳಿಗೆ ಸುಪ್ರಭಾತ ಹೇಳಲು ನಾನು ತೋಟದಲ್ಲಿ ಇರಲೇಬೇಕೆನಿಸಿತು. ಹೊರಟೇ ಬಿಡೋಣ..! ಎಂದಿತು ನನ್ನ ಮನಸ್ಸು. ಅಂದಿನ ರಾತ್ರಿಯೇ ತೋಟಕ್ಕೆ ಹೊರಡುವ ತಯಾರಿ ನಡೆಸಿದೆ.

ನನ್ನ ದೊಡ್ಡ ಟಾರ್ಚ್‌ಗೆ ಹೊಸ ನಾಲ್ಕು ಸೆಲ್ ಕೊಂಡುಕೊಂಡೆ. ನನ್ನ ಫಿಯಾಟ್ ಕಾರಿನ ಸ್ಟೀರಿಂಗ್ ಕೆಳಗಿನ ರ‍್ಯಾಕ್‌ನಲ್ಲಿ ನನ್ನ ಜೋಡು ನಳಿಗೆಯ ಜಾನ್ ರಿಗ್ಬೀ ಕಂಪೆನಿಯ  ವಿಲಾಯತೀ ಕೋವಿಯು ಮಲಗಿತ್ತು. ಹಲವಾರು ತೋಟಾಗಳೂ ಇದ್ದುವು. ಎಲ್ಲಾದರೂ ಕಾಡಾನೆ ಎದುರಾದರೆ ಬೆದರು ಗುಂಡು ಹಾರಿಸಿ, ದಾರಿ ಮಾಡಿಕೊಂಡು ಮನೆ ಸೇರುತ್ತೇನೆ! ಎನ್ನುವ ಮೊಂಡು ಧೈರ್ಯವೂ ನನ್ನಲ್ಲಿ ಅಂದು ಉಂಟಾಯಿತು. ಅದಲ್ಲದೆ, ಮನೆಯಲ್ಲಿ ರಾತ್ರಿ ಹಿಂತಿರುಗಿ ಬರುತ್ತೇನೆ ಎಂದು ಹೇಳಿ ಬಂದಿದ್ದೆ. ಮನೆಗೆ ಫೋನ್ ಮಾಡೋಣ ಎಂದು ಒಂದು ‘ಫೋನ್ ಬೂತ್ಗೆ ಹೋದೆ. ಆ ಸಂಜೆಯಷ್ಟೇ ಜೋರಾಗಿ ಮಳೆ ಸುರಿದಿತ್ತು. ಫೋನ್ ಬೂತಿನ ಮನುಷ್ಯ ಸಾಯಂಕಾಲದಿಂದಲೇ ಬಾಳೆಹೊನ್ನೂರು ಮತ್ತು ಕಳಸಾ ಲೈನ್ ಇಲ್ಲ, ಸಾರ್! ಎಂದ. ಮಲೆನಾಡಿನ ಹಳ್ಳಿಗಳಲ್ಲಿ ಟೆಲಿಫೋನ್ ಎಂಬುದು ಅಲಂಕಾರಕ್ಕೆ ಮಾತ್ರ!  ಉಪಯೋಗಕ್ಕೆ ಇಲ್ಲ! ಎಂದು ಅದನ್ನು ಶಪಿಸಿ, ಟ್ಯಾಂಕ್‌ಫುಲ್ ಮಾಡಲು ಪೆಟ್ರೋಲ್‌ಬಂಕಿಗೆ ನಡೆದೆ. ಕಾರಿನ ಹೊಟ್ಟೆ ತುಂಬಿಸಿದೆ. ಹಸಿದು ಮಧ್ಯರಾತ್ರಿ ಮನೆಗೆ ಹೋಗುವ ಬದಲು, ಊಟ ಮಾಡಿಕೊಂಡೇ ಹೋಗೋಣ ಎಂದು ನೇರವಾಗಿ ಹೋಟೆಲ್ ಭಾಗೀರಥಿಗೆ ಹೋಗಿ ಊಟಮಾಡಿದೆ.

ನಾನು ಹೋಟೆಲ್‌ನಿಂದ ಹೊರಗೆ ಬಂದಾಗ ಪುನಃ ಮೋಡ ಕವಿಯುತ್ತಿತ್ತು. ಕಾರಿನಲ್ಲಿ ಕುಳಿತು ಸಿಗರೇಟು ಸೇದುತ್ತಾ ಏನು ಮಾಡಲಿ? ಎಂದು ಪುನಃ ಆಲೋಚಿಸಿದೆ. ಕಾರಿನಲ್ಲಿ ಮಕ್ಕಳಿಗೋಸ್ಕರ ಭಾಗೀರಥಿ ಹೋಟೆಲಿನಲ್ಲಿ ಕಟ್ಟಿಸಿಕೊಂಡ ಸಿಹಿತಿಂಡಿಯಿತ್ತು. ಚಿಕ್ಕಮಗಳೂರಿನಲ್ಲಿ ಬೆಳಗಿನ ತನಕ ಯಾಕೆ ಕಾಲಹರಣ ಮಾಡಲಿ? ಈಗಲೇ ಇಲ್ಲಿಂದ ಹೊರಟುಬಿಡೋಣ ಅನ್ನಿಸಿತು.

ನನ್ನ ಕಾರು ಎಂದಿನಂತೆ ದೂರದ ಪ್ರಯಾಣಕ್ಕೆ ಅಣಿಯಾಗೇ ಇತ್ತು. ಎಮರ್ಜೆನ್ಸಿಗೆ ಕುಡಿಯುವ ನೀರು, ಒಂದು ಲೋಫ್‌ಬ್ರೆಡ್, ಸಿಗರೇಟ್ ಪ್ಯಾಕೆಟ್, ಟೂಲ್‌ಕಿಟ್, ಎಕ್ಸ್ಟ್ರಾ ಫ್ಯಾನ್‌ಬೆಲ್ಟ್, ಎಕ್ಸ್ಟ್ರಾಬಲ್ಬ್‌ಗಳು ಹಾಗೂ ಫ್ಯೂಜ್‌ಗಳು ಇದ್ದುವು. ರೇಡಿಯೇಟರಿನ ಹೋಸ್ ಪೈಪ್ಗಳ ಸೆಟ್, ಅಕಸ್ಮಾತ್ ಪಂಕ್ಚರ್ ಆದರೆ ಹೊಸ ಟ್ಯೂಬ್, ಗಾಳಿ ಹಾಕಿಕೊಳ್ಳಲು ಒಂದು ಚಿಕ್ಕ ಪೆಡಲ್‌ಪಂಪ್, ಸ್ವಲ್ಪ ಎಮರ್ಜೆನ್ಸಿಗಾಗಿ ಟೂಲ್ ಬಾಕ್ಸಿನಲ್ಲಿ ಬಚ್ಚಿಟ್ಟ ಹಣ ಮತ್ತು ಫಸ್ಟ್ ಎಯ್ಡ್ ಕಿಟ್ ಎಲ್ಲಾ ಕಾರಿನಲ್ಲಿ ಇದ್ದುವು. ದಾರಿಯಲ್ಲಿ ಏನಾದರೂ ಮರ ಬಿದ್ದಿದ್ದರೆ, ಅದರ ಕೊಂಬೆ ಕಡಿದು ದಾರಿಮಾಡಿಕೊಂಡು ಹೋಗಲು ಇರಿಸಿದ ಮಚ್ಚುಕತ್ತಿ ಕೂಡಾ ಇತ್ತು!!.

ನನ್ನ ಕಾರು ಯಾವಾಗಲೂ ಪ್ರಯಾಣಕ್ಕೆ ಸಜ್ಜಾಗಿಯೇ ಇರುತ್ತದೆ. ಮುಂಜಾಗ್ರತೆಗಾಗಿ ಇರಿಸಿದ ಎಲ್ಲಾ ವಸ್ತುಗಳೂ ಕಾರಿನಲ್ಲಿ ಇವೆ. ಆಯುಧ ಕೂಡಾ ಇದೆ. ನನ್ನ ವಾಹನದ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ. ನಾನು ಇನ್ಯಾಕೆ ಸಾಮಾನ್ಯ ಹೇಡಿಯಂತೆ ಚಿಕ್ಕಮಗಳೂರಿನಲ್ಲಿ ನಿಲ್ಲಲಿ? ಎಂದಿತು ಮನಸ್ಸು.

ರಾತ್ರಿಯಾದರೆ ಏನಂತೆ? ಭಗವಂತನು ಹೇಗೆ ಹಗಲನ್ನು ಸೃಷ್ಟಿಸಿದನೋ, ಅದೇ ರೀತಿ ರಾತ್ರಿಯನ್ನೂ ಸೃಷ್ಟಿಸಿದ್ದಾನೆ. ಕತ್ತಲಿಗೆ ಏಕೆ ಭಯಪಡಬೇಕು? ಧೈರ್ಯವಾಗಿ ಮನೆಗೆ ಹೋಗಿಯೇ ಬಿಡೋಣ! ಅಂದುಕೊಂಡು ಹೊರಟೇಬಿಟ್ಟೆ.

ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಸ್ವಲ್ಪ ಸ್ಪೀಡಾಗೇ ತೊಂಬತ್ತೈದು ಕಿಲೋಮೀಟರ್ ದೂರದ ನಮ್ಮ ಮನೆಯ ಕಡೆಗೆ ಕಾರು ಓಡಿಸುತ್ತಾ ಆಲ್ದೂರು ಪೇಟೆ ದಾಟಿದೆ. ಆ ಊರಿನ ಹೊರಗೆ ಬಾಳೆಹೊನ್ನೂರು ರಸ್ತೆಯಲ್ಲಿ ಇರುವ ಫಾರೆಸ್ಟ್ ಚೆಕ್‌ಪೋಸ್ಟ್ ಗೇಟ್ ಹಾಕಿಕೊಂಡಿತ್ತು.  ಕಾರುನಿಲ್ಲಿಸಿ ಹಾರ್ನ್ ಹಾಕಿದೆ. ಫಾರೆಸ್ಟ್ ಪೇದೆ ನಿಧಾನವಾಗಿ ಕಾರಿನ ಹತ್ತಿರ ಬಂದನು. ನನ್ನ ಪರಿಚಯ ಹತ್ತಿ ನಮಸ್ಕಾರ ಸಾರ್! ಬಾಳೆಹೊಳೆಯ ತಮ್ಮ ತೋಟಕ್ಕೆ ಈ ಅಪರಾತ್ರಿಯಲ್ಲಿ ಹೊರಟಿರಾ? ಬಾಳೆಹೊನ್ನೂರಿನ ಹತ್ತಿರ ಒಂಟಿ ಸಲಗ ಸುತ್ತುತ್ತಾ ಇದೆ. ಸಾರ್! ತಾವು ಈಗ  ಹೋಗಲೇಬೇಕೇನು? ಎಂದ. ಅದಕ್ಕೆ ನಾನು ಅಡವಿಯೊಳು ಮನೆಮಾಡಿ ಮೃಗಗಳಿಗೆ ಅಂಜಿದರೆ ಎಂತಯ್ಯ..! ಎಂಬ ನಾಣ್ಣುಡಿ ಹೇಳಿ ನಕ್ಕೆ. ಅದಕ್ಕೆ ಅವನು ನೀವು ಹೇಳುವುದೂ ಸರಿಸಾರ್, ಜಾಗ್ರತೆ ಹೋಗಿಬನ್ನಿ ಎಂದ. ನಾನು, ಈ ಕಡೆಗೆ ಹಿಂತಿರುಗಿ ಬರುವುದು ಬರುವ ವಾರ, ಆಗ ಸಿಗೋಣ ಎಂದು ನಕ್ಕೆ. ಆ ಪೇದೆಗೆ ಒಂದು ಸಿಗರೇಟ್ ಕೊಟ್ಟು, ನಾನೂ ಒಂದು ಸಿಗರೇಟ್ ಹಚ್ಚಿಕೊಂಡು ಅಲ್ಲಿಂದ ಮುಂದೆ ಇರುವ ಘಾಟ್ ರಸ್ತೆಯಲ್ಲಿ ಇಳಿಯತೊಡಗಿದೆ.

ಮಳೆ ಬಂದು ನಿತ್ತಿದ್ದರಿಂದ, ಟಾರ್ ರಸ್ತೆಯ ಮೇಲೆ ಹಬೆಯಾಡುತ್ತಿತ್ತು. ಆಕಾಶದಲ್ಲಿ ಒಂದೊಂದು ಚುಕ್ಕೆಗಳು ಕಾಣಹತ್ತಿದುವು. ಮರಗಿಡಗಳು ಮಳೆಯಲ್ಲಿ ಮಿಂದು ಫಳಫಳನೆ ಹೊಳೆಯುತ್ತಿದ್ದುವು. ಕಾದ ಮಣ್ಣಿಗೆ ಹೊಸ ಮಳೆಯು ಬಿದ್ದ ಪರಿಮಳ ಪಸರಿಸಿತ್ತು. ಆನೆಯ ಹೆದರಿಕೆಯಿಂದ ಯಾವ ವಾಹನವೂ ಪ್ರಯಾಣಿಸುತ್ತಿಲ್ಲ ಎಂದು ನನಗನ್ನಿಸಿತು. ರಸ್ತೆ ವಾಹನ ರಹಿತವಾಗಿತ್ತು. ನನಗೆ ಕಾರು ಓಡಿಸಲು ಬಹಳ ಖುಷಿ ಎನ್ನಿಸಿತು. ಸ್ವಲ್ಪ ಹೊತ್ತಿನಲ್ಲಿ ಚಂದ್ರ ಕಂಡು ಬಂದ. ನಾನು ಡಾನ್ ವಿಲಿಯಮ್ಸ್‌ನ ಯೆಲ್ಲೋ ಮೂನ್ ಪದ್ಯದ ಟೇಪ್ ಹಾಕಿ,  ಅವನ ಜತೆಗೆ ನಾನೂ ಕಿರಿಚುತ್ತಾ ಕಾರು ಓಡಿಸಹತ್ತಿದೆ.

ಸಂಗಮೇಶ್ವರ ಪೇಟೆಯ ಬಳಿ ಜಿಂಕೆಗಳ ಹಿಂಡೊಂದು ಮಾರ್ಗದ ಮೇಲೆಯೇ ನಿಂತಿತ್ತು. ನಾನು ಕಾರಿಗೆ ಬ್ರೇಕ್ ಹಾಕಿದೆ. ಕಾರು ಹತ್ತಿರ ಬರುತ್ತಲೇ ಕಾರಿನ ಹೆಡ್‌ಲೈಟ್ ಪ್ರಕಾಶವು ಅವುಗಳ ಕಣ್ಣುಗಳಿಂದ ಪ್ರತಿಫಲಿಸುತ್ತಿತ್ತು. ಆ ಹಸುರು ನೀಲಿ ಬೆರೆತ ಕಣ್ಣುಗಳು ಎಷ್ಟು ಚೆಂದ..!. ಮರುಕ್ಷಣದಲ್ಲೇ ಅವು ಗಾಬರಿಗೊಂಡು ಸಾಗುವಾನಿಯ ನೆಡುತೋಪಿನ ಕಡೆಗೆ ನೆಗೆಯುತ್ತಾ ಓಡಿದುವು. ಮುಂದೆ ಭದ್ರಾ ನದಿಗುಂಟ ಭದ್ರಾಗ್ರೂಪ್ ತೋಟಗಳ ಹತ್ತಿರ ಕಾಡುಹಂದಿಗಳ ಗುಂಪೊಂದು ರಸ್ತೆಯ ಬದಿಯ ತೋಡೊಂದರ ಬಳಿಯಲ್ಲಿ ಎರೆಹುಳಗಳಿಗಾಗಿ ಉಳುಮೆ ಮಾಡುತ್ತಿದ್ದವು. ಅವು ನನ್ನನ್ನು ಮತ್ತು ನನ್ನ ಕಾರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ತಮ್ಮ ಅಗೆತದಲ್ಲಿ ತಲ್ಲೀನವಾಗಿದ್ದುವು. ಬಾಳೆಹೊನ್ನೂರಿನ ಭದ್ರಾನದಿಯ ಸೇತುವೆಯ ಬಳಿ ಒಂದು ಮೊಲ ರಸ್ತೆಗೆ ಅಡ್ಡಬಂತು. ಅದು ಗಾಬರಿಗೊಂಡು ಸೇತುವೆಯ ಮೇಲೆಯೇ ಓಡುತ್ತಾ ಹೋಗಿ ಆಚೆ ದಡದಲ್ಲಿನ ಪೊದೆಯೊಂದನ್ನು ಹೊಕ್ಕು ಕಣ್ಮರೆಯಾಯಿತು. ನಾನು ನಿಧಾನವಾಗಿ ಕಾರು ನಡೆಸುತ್ತಾ ಬಾಳೆಹೊನ್ನೂರಿನ ಪೇಟೆ ದಾಟಿದೆ.

ಪೇಟೆ ದಾಟಿದಮೇಲೆ ಬೈರೇಗುಡ್ಡ ಕಾಫಿ ತೋಟ ಸಿಗುತ್ತೆ. ಅದನ್ನು ದಾಟಿದಮೇಲೆ ಸಾಗುವಾನಿ ನೆಡುತೋಪನ್ನು ಹಾದುಹೋಗುವ ರಸ್ತೆ ಇದೆ. ಆ ರಸ್ತೆಯಲ್ಲಿ ಸಾಗುತ್ತಾ ಇದ್ದಾಗ ಹವಾ ತುಂಬಾ ತಂಪಾಗಹತ್ತಿತು. ಮಳೆಬಿಟ್ಟು ಬಹಳ ಹೊತ್ತಾದುದರಿಂದ ಈಗ ಡಾಂಬರ್ ರಸ್ತೆಯಿಂದ ಹಬೆ ಏಳುವುದು ನಿಂತಿತ್ತು. ಕಾಡಿನೊಳಗಿನ ದಾರಿ, ಕಾರಿನ ಹ್ಯಾಲೋಜೆನ್ ಲೈಟುಗಳ ಪ್ರಕಾಶದಲ್ಲಿ ನಿಚ್ಚಳವಾಗಿ ಕಾಣುತ್ತಿತ್ತು. ಕಾರು ಚೆನ್ನಾಗಿ ಇಟ್ಟುಕೊಂಡಿದ್ದರಿಂದ ನಾನೆಷ್ಟು ಸುರಕ್ಷಿತ ಎಂಬ ಭಾವನೆ ನನ್ನ ತಲೆಯಲ್ಲಿ ಸುಳಿದುಹೋಯಿತು. ಜೊತೆಗೇ, ಕಾರು ಚೆನ್ನಾಗಿ ಇಟ್ಟುಕೊಂಡಿದ್ದರಿಂದ ನಾನು ಮನೆಯಲ್ಲಿದ್ದಷ್ಟೇ ಸುರಕ್ಷಿತನಾಗಿದ್ದೇನೆ! ಎಂಬ ಕೊಂಚ ಹೆಮ್ಮೆಯ ಭಾವನೆ ಕೂಡಾ ನನ್ನ ತಲೆಯಲ್ಲಿ ಸುಳಿಯಿತು. ಆದರೆ, ಈ ಭಾವನೆ ಹೆಚ್ಚೊತ್ತು ಉಳಿಯಲಿಲ್ಲ.

ನಾನು ಸಾಗುವಾನಿಯ ತೋಪಿನ ಮಧ್ಯಭಾಗದಲ್ಲಿ ಸಾಗುತ್ತಿದ್ದಂತೆಯೇ ಮಾರ್ಗದ ಮಧ್ಯದಲ್ಲಿ ಆಗ ತಾನೇ ಹಾಕಿದ ಆನೆಯ ಲದ್ದಿ ಹಬೆಯಾಡುತ್ತಾ ಬಿದ್ದಿತ್ತು. ಇನ್ನೂ ಬಿಸಿ ಬಿಸಿಯಾಗಿದ್ದ ಆನೆಯ ಲದ್ದಿ ಅಲ್ಲಿ ಬಿದ್ದಿರಬೇಕಾದರೆ, ಆ ಆನೆ ಇಲ್ಲೆಲ್ಲೋ ಸನಿಹದಲ್ಲಿಯೇ ಇದೆ ಅಂದುಕೊಂಡು ನಾನು ಜಾಗರೂಕನಾದೆ. ಮೊದಲು ಕಾರಿನ ಕ್ಯಾಸೆಟ್ ಪ್ಲೇಯರ್  ಆಫ್ ಮಾಡಿದೆ. ಪ್ರಾಣಾಪಾಯ ಬಂದರೆ ಬೆದರು ಗುಂಡು ಹಾರಿಸಲು ಇರಲಿ ಎಂದು ನನ್ನ ಬಂದೂಕಿಗೆ ಎರಡು ಏಳು ನಂಬರಿನ ತೋಟಾಗಳನ್ನು ತುಂಬಿದೆ. ಇವು ಹಕ್ಕಿ ಶಿಖಾರಿಗೆ ಬಳಸುವ ತೋಟಾಗಳು. ನನಗೆ ಆನೆಗೆ ಸರ್ವಥಾ ಗುರಿ ಹಿಡಿಯುವ ಇರಾದೆ ಇರಲಿಲ್ಲ,  ಬರೇ ಶಬ್ದ ಹೊರಡಿಸುವುದಕ್ಕಾಗಿ ಈ ತೋಟಾಗಳನ್ನು ಬಂದೂಕಿಗೆ ತುಂಬಿದ್ದೆ.

ನನಗ್ಯಾಕೋ ಆನೆ ಎಂದರೆ ಬಹಳ ಗೌರವ. ಚಿಕ್ಕಂದಿನಲ್ಲಿ ಮುರಲಿ ಎಂಬ ಉಡುಪಿಯ ದೇವಸ್ಥಾನದ ಆನೆ ನನ್ನ ಬಹು ಪ್ರೀತಿಯ ಮತ್ತು ಅಭಿಮಾನದ ಮಿತ್ರನಾಗಿತ್ತು. ಆನೆಯದು ಎಂತಹಾ ದೈತ್ಯಶಕ್ತಿ ಮತ್ತು ಭವ್ಯ‌ಆಕಾರ! ಅದರ ಎದುರು ಹುಲುಮಾನವನು ಎಷ್ಟು ಕುಬ್ಜ..! ಎಲ್ಲಾದರೂ ನನ್ನ ದುರಾದೃಷ್ಟದಿಂದ ಆನೆ ನನ್ನ ಮೇಲೆ ಏರಿಬಂದರೆ?…. ಹುಸಿಗುಂಡು ಹಾರಿಸಿ ಹೆದರಿಸುವೆ. ಮತ್ತೂ, ಮುನ್ನುಗ್ಗಿ ಬಂದರೆ ಓಡುವೆ. ಕೊನೆಗೂ ಬಚಾಯಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ?…. ಅದಕ್ಕೆ ನಾನು ಶರಣಾಗಿ ನನ್ನ ಪ್ರಾಣವನ್ನಾದರೂ ತೆರುವೆ..! ಆನೆಯನ್ನು ಘಾಸಿಗೊಳಿಸಲು ಅಥವಾ ಅದಕ್ಕೆ ಪ್ರಾಣಾಪಾಯ ಮಾಡಲು ನಾನು ಖಂಡಿತವಾಗಿ ಬಂದೂಕು ಎತ್ತುವುದಿಲ್ಲ ಎಂದು ನನ್ನ ಮನದೊಳಗೇ ತೀರ್ಮಾನ ಮಾಡಿದೆ. ಈ ತೀರ್ಮಾನ ಮಾತ್ರ ನಾನು ಜೀವದಿಂದ ಇರುವವರೆಗೂ ಬದಲಾಗುವುದಿಲ್ಲ. ಯಾಕೆಂದರೆ, ಭಗವಂತನ ಅದ್ಭುತ ಸೃಷ್ಟಿಯಾದ ಆನೆಯ ಗಾತ್ರಕ್ಕೆ, ಅದರ ಅಪಾರ ಶಕ್ತಿಗೆ, ಅದರ ಗ್ರಹಣಶಕ್ತಿಗೆ, ಅದರ ಚುರುಕಾದ ಚಲನವಲನಕ್ಕೆ ಮತ್ತು ಅದರ ಬುದ್ಧಿಮತ್ತೆಗೆ, ಹುಲುಮಾನವನಾದ ನಾನು ಕೊಡಲೇ ಬೇಕಾದ ಗೌರವ ಇದು..! ಎಂದು ಈಗಲೂ ನಾನು ನನ್ನ ಆತ್ಮಸಾಕ್ಷಿಯಾಗಿ ತಿಳಿಯುತ್ತೇನೆ.

ಆನೆಯ ಲದ್ದಿ ನೋಡಿದ ಜಾಗದಿಂದ ಸ್ವಲ್ಪ ಮುಂದೆ ಹೋಗುತ್ತಲೇ, ನನ್ನ ಕಾರಿನ ಎಂಜಿನ್ ಯಾಕೋ ನಿಧಾನವಾಗುತ್ತಾ ನಿಂತುಬಿಟ್ಟಿತು!!. ಎಷ್ಟು ಸೆಲ್ಫ್‌ಸ್ಟಾರ್ಟರ್ ಹೊಡೆದರೂ ಕಾರು ಸ್ಟಾರ್ಟ್ ಆಗಲಿಲ್ಲ. ಪಾರ್ಕ್‌ಲ್ಯಾಂಪ್ ಹಾಕಿ ಸ್ವಲ್ಪ ಹೊತ್ತು ಕಾರಿನಲ್ಲಿ ಕುಳಿತು ಕಿವಿಕೊಟ್ಟು ಆಲಿಸಿದೆ. ಆನೆ ಸೊಪ್ಪುಮುರಿಯುವ ಶಬ್ದ ಎಲ್ಲೂ ಕೇಳಿ ಬರಲಿಲ್ಲ. ಸಾಮಾನ್ಯವಾಗಿ ಕಾಡಿನಲ್ಲಿ ಆನೆಗಳು ಧಾಳಿಮಾಡುವ ಮುನ್ನ ಕಲ್ಲಿನಂತೆ ಸ್ತಬ್ಧವಾಗಿ ನಿಂತು, ಹಠಾತ್ತನೇ ಧಾಳಿ ಮಾಡುತ್ತವೆ. ಅಷ್ಟು ದೊಡ್ಡ ಪ್ರಾಣಿ ಕಾಡಿನಲ್ಲಿ ಅದು ಹೇಗೆ ಅಷ್ಟು ಮೌನವಾಗಿ ಮತ್ತು ಅಗೋಚರವಾಗಿ ಇರುತ್ತದೆ ಎಂಬುದೇ ಆಶ್ಚರ್ಯ!. ಇದು ಆನೆಯ ಹುಟ್ಟು ಸ್ವಭಾವ, ಬುದ್ಧಿವಂತನಾದ ಮನುಷ್ಯಜನ್ಮದಲ್ಲಿ ಹುಟ್ಟಿದ ನಾನು, ಆನೆಯಿರುವ ಜಾಗದಲ್ಲಿ ಅತೀ ಜಾಗರೂಕನಾಗಿ ಇರಬೇಕಾದುದು ನನ್ನ ಕರ್ತವ್ಯ ಎಂದುಕೊಳ್ಳುತ್ತಾ, ನಾನು ಕೂಡಾ ಅತೀ ಜಾಗ್ರತನಾಗಿ ಕಾರಿನೊಳಗೆಯೇ ಕಾಡಿನಲ್ಲಿನ ಶಬ್ದಗಳನ್ನು ತದೇಕಚಿತ್ತದಿಂದ ಆಲಿಸುತ್ತಾ ಕುಳಿತೆ.

ಐದು ನಿಮಿಷಗಳ ನಂತರ ಆನೆ ಹತ್ತಿರದಲ್ಲಿ ಇಲ್ಲ ಎಂದು ಮನವರಿಕೆಯಾಯ್ತು. ಮೆಲ್ಲಗೆ ಕಾರಿನಿಂದ ಇಳಿದು, ಬಾನೆಟ್‌ಎತ್ತಿ ಎಂಜಿನ್ ಲೈಟು ಬೆಳಗಿ, ಡಿಸ್ಟ್ರಿಬ್ಯೂಟರ್, ರೋಟರ್, ಕೆಪ್ಯಾಸಿಟರ್, ಕಂಡೆನ್ಸರ್ ಇವುಗಳ ಕನೆಕ್ಷನ್‌ಗಳನ್ನು ತಡವಿ, ಎಲ್ಲಾ ಸರಿಯಾಗಿವೆ ಎಂದು ಖಚಿತಪಡಿಸಿಕೊಂಡೆ. ಮೆದುವಾಗಿ ಬಾನೆಟ್ ಮುಚ್ಚಿ, ಸ್ಟಾರ್ಟರ್ ತಿರುಗಿಸಿದೆ. ಕಾರು ಚಾಲೂ ಆಗಿ, ಒಂದು ನೂರು ಮೀಟರ್ ದೂರ ಹೋಗಿ ಪುನಃ ನಿಂತು ಬಿಟ್ಟಿತು. ಪುನಃ ಸ್ವಲ್ಪ ಸಮಯ ಕಾದು ಆನೆ ಹತ್ತಿರದಲ್ಲಿ ಇಲ್ಲ ಎಂದು ಸರಿಯಾಗಿ ಖಚಿತಪಡಿಸಿಕೊಂಡು ಕಾರಿನಿಂದ ಇಳಿದೆ. ಹಿಂದಿನ ರೀತಿಯೇ ಎಲ್ಲಾ ಕನೆಕ್ಷನ್‌ಗಳನ್ನು ತಡವಿ, ಪುನಃ ಸ್ಟಾರ್ಟ್ ಮಾಡಿದರೆ, ಇನ್ನೊಂದು ನೂರು ಮೀಟರ್ ಹೋಗಿ ಕಾರು ಸ್ಥಬ್ದವಾಯಿತು..!!

ಎಂಜಿನ್ ಬಿಸಿಯಾಗಿ ಹೀಗೆ ಆಗಿರಬಹುದೆಂದು, ಕುಡಿಯುವ ನೀರಿನ ಬಾಟಲಿಯಲ್ಲಿ  ಇದ್ದ ನೀರನ್ನು ಕಾರು ಒರೆಸುವ ಬಟ್ಟೆಗಳಿಗೆ ಸುರಿದು ತೇವ ಮಾಡಿ ಒಂದನ್ನು ಇಗ್ನಿಶನ್‌ಕಾಯಿಲ್ ಮೇಲಿರಿಸಿ, ಇನ್ನೊಂದು ಬಟ್ಟೆಯನ್ನು ಡಿಸ್ಟ್ರಿಬ್ಯೂಟರ್ ಮೇಲೆ ಇರಿಸಿದೆ. ಕಾರುಸ್ಟಾರ್ಟ್ ಆದರೆ ಮೊದಲು ಬಾಳೆಹೊನ್ನೂರಿಗೆ ಹಿಂದಿರುಗಿ, ಶ್ರೀನಿವಾಸ ಆಚಾರಿ ಎಂಬ ನನ್ನ ಮಾಮೂಲಿ ಮೆಕ್ಯಾನಿಕ್ ಹತ್ತಿರ ತೋರಿಸಿಯೇ ಮುಂದುವರೆಯುವುದು ಎಂದು ಆಲೋಚಿಸುತ್ತಾ ಸ್ಟಾರ್ಟರ್ ತಿರುಗಿಸಿದೆ. ಎಂಜಿನ್ ಬೇಕೋ ಬೇಡವೋ ಎಂದು ಜೀವಂತವಾಯಿತು. ಹೇಗೋ, ಪ್ರಯತ್ನಪಡುತ್ತಾ ಅದನ್ನು ಜೀವಂತವಿರಿಸಿ, ರಿವರ್ಸ್ ಲೈಟ್ ಹಾಕಿಕೊಂಡು, ಆ ಇಕ್ಕಟ್ಟಿನ ಮಾರ್ಗದಲ್ಲೇ ಕಾರನ್ನು ತಿರುಗಿಸಿ, ಮುಗ್ಗರಿಸುತ್ತಾ ಬಾಳೆಹೊನ್ನೂರಿನ ಶ್ರೀನಿವಾಸ ಆಚಾರಿಯ ಮನೆ ಕಮ್ ಗ್ಯಾರೇಜ್ ತಲುಪಿ ಬಾಗಿಲು ಬಡಿದೆ.

ಶ್ರೀನಿವಾಸ ಆಚಾರಿ ಆಗ ಬ್ರಹ್ಮಚಾರಿ. ಸುಮಾರು ಇಪ್ಪತ್ತೆರಡು ವರ್ಷ ಪ್ರಾಯದ ಹುಡುಗ. ನಮ್ಮ ತೋಟದ ಟ್ರಾಕ್ಟರ್, ಪಂಪುಗಳು, ಸ್ಪ್ರೇಯರುಗಳು ಮೊದಲಾದ ಯಂತ್ರಗಳನ್ನು ಆತ ರಿಪೇರಿ ಮಾಡುತ್ತಿದ್ದ. ನನ್ನ ಸ್ವರ ಕೇಳಿದೊಡನೇ ಎದ್ದು ಬಂದು ಗ್ಯಾರೇಜ್ ಬಾಗಿಲು ತೆರೆದ. ನನ್ನ ಕಾರಿನ ಕಥೆಯನ್ನು ಹೇಳಿ ನನಗೆ ಅರ್ಜೆಂಟಾಗಿ ತೋಟಕ್ಕೆ ಹೋಗಲೇಬೇಕು ಎಂದೆ. ಮೌನವಾಗಿ ನನ್ನ ಮಾತನ್ನೆಲ್ಲಾ ಕೇಳಿಕೊಂಡ ನಂತರ, ಶ್ರೀನಿವಾಸ ಆಚಾರಿಯು ಕಾರಿನ ನಾಲ್ಕು ಸ್ಪಾರ್ಕ್ ಪ್ಲಗ್, ಡಿಸ್ಟ್ರಿಬ್ಯೂಟರ್, ರೋಟರ್, ಇಗ್ನಿಶನ್ ಸಿಸ್ಟಮ್ ಎಂದು ಎಲ್ಲಾ ಪಾರ್ಟ್‌ಗಳನ್ನು ಬಿಚ್ಚಿ, ಅವುಗಳಿಗೆ ಮತ್ತು ಅವನ್ನು ಜೋಡಿಸುವ ಎಲ್ಲಾ ವಯರುಗಳಿಗೆ, ಸೊನ್ನೆ ನಂಬರಿನ ಪಾಲಿಶ್ ಕಾಗದ ಉಜ್ಜಿ ಪುನಃ ಜೋಡಿಸಿದ. ಅವನು ಸ್ಟಾರ್ಟರ್ ತಿರುಗಿಸಿದ ಕೂಡಲೇ ಇಂಜಿನ್ ಅಪಸ್ವರ ಮಾಡದೇ ಸ್ಟಾರ್ಟ್ ಆಯಿತು..! ಒಂದು ರೌಂಡ್ ಟ್ರಯಲ್ ನೋಡಿ ಕಾರು ತಂದು ನನ್ನೆದುರು ನಿಲ್ಲಿಸಿ ಇನ್ನು ಹೊರಡಿ, ಸಾರ್ ಎಂದ.                         ನನಗ್ಯಾಕೋ, ನನ್ನ ಕಾರು ಸಂಪೊರ್ಣವಾಗಿ ರಿಪೇರಿಯಾಗಿಲ್ಲ ಎಂಬ ಭಾವನೆ ಮನಸ್ಸಿನಲ್ಲಿ ಕಾಡುತ್ತಿತ್ತು..! ನಾನು ಶ್ರೀನಿವಾಸ, ನನ್ನ ಜತೆ ಈಗ ತೋಟಕ್ಕೆ ಬಾ. ಬೆಳಗ್ಗೆ ಮೊದಲನೇ ಬಸ್ಸಿನಲ್ಲೇ ನಿನ್ನನ್ನು ವಾಪಾಸ್ ಕಳುಹಿಸುತ್ತೇನೆ ಎಂದೆ.

ಅದಕ್ಕವನು ಸಾರ್, ನಾನು ಹಗಲಿನಲ್ಲಿ ಸಂಚಾರ ಮಾಡುವ ಪಿಶಾಚಿ! ಈ ರಾತ್ರಿ ನಾನೆಲ್ಲಿಗೂ ಬರುವುದಿಲ್ಲ. ನನಗೆ ಸಂಸಾರದ ಚಿಂತೆ ಇಲ್ಲದಿರಬಹುದು. ಆದರೆ, ನಾನು ಒಂದು ಬೆಕ್ಕು ಸಾಕಿದ್ದೇನೆ. ಅದನ್ನು ಅನಾಥವಾಗಿ ಮಾಡಲು ನಾನು ಸಿದ್ಧನಿಲ್ಲ! ಅದಲ್ಲದೇ,  ದಾರಿಯಲ್ಲಿ ಆನೆಯ ಬಿಸಿ ಲದ್ದಿ ಬೇರೆ ಕಂಡೆ ಎಂದು ಬೇರೆ ಹೇಳುತ್ತೀರಿ! ತಾವು ಹೋಗಿ ಬನ್ನಿ ಸಾರ್, ನಮಸ್ಕಾರ..! ಎಂದು ಕೈಮುಗಿದುಬಿಟ್ಟ. ಇನ್ನೇನು ಮಾಡಲಿ ಎಂದುಕೊಂಡು ಆತನ ಕೈಗೆ ಐವತ್ತು ರೂಪಾಯಿ ನೋಟು ತುರುಕಿ ನಮ್ಮ ತೋಟದ ಕಡೆಗೆ ಕಾರು ತಿರುಗಿಸಿದೆ.

ಬೈರೇಗುಡ್ಡ ಎಸ್ಟೇಟಿನ ಸರಹದ್ದು ದಾಟುತ್ತಲೇ ಕಾರಿನ ಇಂಜಿನ್ ಕೆಮ್ಮಿದಂತೆ ಸದ್ದು ಮಾಡುತ್ತಾ ನಿಂತೇ ಬಿಟ್ಟಿತು..! ಪುನಃ ತಣ್ಣೀರು ಬಟ್ಟೆಯ ಉಪಚಾರಮಾಡಿ ಸ್ಟಾರ್ಟ್ ಮಾಡಿದರೆ,  ಮೊದಲಿನ ತರಹವೇ ಅರೆಮನಸ್ಸಿನಿಂದ ಸ್ಟಾರ್ಟ್ ಆಯಿತು. ಎಲ್ಲಾ ಹಿಂದಿನ ಪರಿಯೇ! ಏನೂ ವ್ಯತ್ಯಾಸ ಕಾಣಿಸಲಿಲ್ಲ. ಪುನಃ ಶ್ರೀನಿವಾಸನಿಗೇ ತೋರಿಸೋಣ ಎನ್ನುತ್ತಾ ಬಂದದಾರಿಯಲ್ಲೇ ಬಾಳೆಹೊನ್ನೂರಿಗೆ ಹಿಂದಿರುಗಿದೆ.

ಪುನಃ ಅದೇ ಟ್ರಬಲ್ ಬಂತೇ, ಸಾರ್? ಎನ್ನುತ್ತಾ ಶ್ರೀನಿವಾಸ ತಾನು ಮಾಡಿದ ಮೊದಲಿನ ಪ್ರೊಸೀಜರನ್ನೇ ರಿಪೀಟ್ ಮಾಡುತ್ತಾ, ತನ್ನ ಮೆಕ್ಯಾನಿಕ್ ತಲೆ ಓಡಿಸಿದ. ಸಾರ್! ಈಗ ನನಗೆ ಖಂಡಿತಾ ಆಯಿತು.  ಅದು ನಿಮ್ಮ ಕಾರಿನ ಇಗ್ನಿಶನ್ ಕಾಯಿಲ್‌ನ ತೊಂದರೆಯೇ. ನಾನು ಬೇರೆ ಗಾಡಿಗೆ ತರಿಸಿಟ್ಟ ಹೊಸ ಇಗ್ನಿಶನ್‌ಕಾಯಿಲ್ ಇದೆ. ಅದನ್ನು ತಮ್ಮಗಾಡಿಗೆ ಹಾಕಲೇ? ಎಂದ. ನನಗೂ ಅದೇ ಸರಿಯಾದ ಉಪಾಯವೆನ್ನಿಸಿ ಹೊಸ ಕಾಯಿಲ್ ಹಾಕಿಸಿದೆ.                   ಶ್ರೀನಿವಾಸ ಹೊಸ ಕಾಯಿಲ್ ಹಾಕಿದ ಕೂಡಲೇ ಕಾರು ಉತ್ಸಾಹದಿಂದ ಸ್ಟಾರ್ಟ್ ಆಯಿತು. ನಾನು ಶ್ರೀನಿವಾಸನಿಗೆ ಮುನ್ನೂರಾ ಐವತ್ತು ರೂಪಾಯಿ ಕೊಟ್ಟು ಥ್ಯಾಂಕ್ಸ್ ಹೇಳಿದೆ. ಮುಂದಾಲೋಚನೆಯಿಂದ ನನಗೆ ಕುಡಿಯುವ ನೀರು ಬೇಕು ಎಂದು ಕೇಳಿ, ನನ್ನ ನೀರಿನ ಎರಡು ಬಾಟಲ್‌ಗಳನ್ನು ಪೂರ್ತಿಯಾಗಿ ತುಂಬಿಸಿಕೊಂಡು, ನಮ್ಮ ಮನೆಯ ಕಡೆಗೆ ಕಾರು ನಡೆಸಿದೆ. ಆಗಲೇ ಗಂಟೆ ಎರಡು ಮುಕ್ಕಾಲು ಆಗಿತ್ತು.

ಕಾರು ಯಾವ ತಕರಾರು ಮಾಡದೇ ಸಾಗುವಾನಿ ನೆಡುತೋಪಿನಲ್ಲಿನ ಲದ್ದಿ ಕಂಡ ಜಾಗವನ್ನು ದಾಟಿತು. ನೆಡುತೋಪಿನ ಮಧ್ಯಭಾಗವನ್ನು ದಾಟುತ್ತಿದ್ದಂತೆಯೇ, ಕಾರಿಗೆ ಹಳೆಯ ರೋಗ ಉಲ್ಭಣಿಸಿ ನಿಂತೇಬಿಟ್ಟಿತು! ಒಂದೆರಡು ಬಾರಿ ಸೆಲ್ಫ್ ಹೊಡೆದೆ. ಎಂಜಿನ್ ಸ್ಟಾರ್ಟ್ ಆಗಲಿಲ್ಲ. ಕಾರಿನ ಒಳಗೆ ಸುಮ್ಮನೆ ಕಾಲುಗಂಟೆ ಕುಳಿತು ಸನಿಹದಲ್ಲೆಲ್ಲೋ ಇರಬೇಕಾದ ಒಂಟಿ ಸಲಗದ ಶಬ್ದಕ್ಕೆ ಆಲಿಸತೊಡಗಿದೆ. ಏನೂ ಶಬ್ದ ಗೊತ್ತಾಗಲಿಲ್ಲ. ಆದರೂ, ನನ್ನ ಮನಸ್ಸಿನೊಳಗೆ ಯಾರೋ ನನ್ನನ್ನು ನೋಡುತ್ತಿದ್ದಾರೆ ಅನ್ನಿಸಿತು. ಮನಸ್ಸಿನ ಭಾವನೆಗೆ ಮನ್ನಣೆ ಕೊಟ್ಟು ಮತ್ತೂ ಹತ್ತು ನಿಮಿಷ ಕಾರಿನೊಳಗೇ ಕುಳಿತೆ..! ಯಾಕೋ, ಕೆಳಗೆ ಇಳಿಯಲು ಅಧೈರ್ಯ!             ಹತ್ತುನಿಮಿಷ ಕಳೆಯುತ್ತಲೇ ಗಾಳಿಗೆ ಮೋಡ ಚದುರಿ ಚಂದ್ರ ಹೊರಬಂದ. ನನ್ನ ವಾಹನದ ಎದುರಿಗೇ ಮಾರ್ಗದಲ್ಲೊಂದು ಚಿಕ್ಕದೊಂದು ತಿರುವು. ಅಲ್ಲೊಂದು ಬಿದಿರಿನ ಮೆಳೆ. ಅದರ ಆಚೆಗೆ ಒಂದು ಬಂಡೆ ಕಂಡುಬಂತು. ಆದರೂ, ನನಗೇಕೊ ಕಾರಿನಿಂದ ಇಳಿಯಲು ಅಥವಾ ಟಾರ್ಚು ಬೆಳಗಲು ಹೆದರಿಕೆ..! ನನಗೆ ಆ ದಾರಿಯಲ್ಲಿ ಯಾವ ಬಂಡೆಯನ್ನೂ ನೋಡಿದ ನೆನಪಿರಲಿಲ್ಲ..! ಸದಾ ಓಡಾಡುವ ಸುಪರಿಚಿತ ದಾರಿಯಲ್ಲಿ ಈ ಬಂಡೆ ಇರಲಿಲ್ಲವಲ್ಲಾ? ಎಂದು ಅನ್ನಿಸಿತು. ಮತ್ತೂ ಹತ್ತುಹದಿನೈದು ನಿಮಿಷ ಅಲುಗಾಡದೇ ಕಾರಿನೊಳಗೇ ಕುಳಿತು ಆ ಬಂಡೆಯನ್ನೇ ಗಮನಿಸಹತ್ತಿದೆ. ಆಗ ಬಿದಿರು ಮೆಳೆಯ ಆಚಿನ ಬಂಡೆ ಸ್ವಲ್ಪ ಅಲುಗಿದಂತೆ ಭಾಸವಾಯಿತು! ಅದನ್ನೇ ತದೇಕಚಿತ್ತನಾಗಿ ನೋಡುತ್ತಾ ಕುಳಿತೆ. ಬಂಡೆ ನಿಧಾನವಾಗಿ ಸ್ವಲ್ಪಸ್ವಲ್ಪವೇ ಸರಿಯುತ್ತಾ ತಾರು ಹಾಕಿದ ಮಾರ್ಗದ ಮಧ್ಯಕ್ಕೇ ಬಂದಿತು!  ಆನೆ ನನ್ನಿಂದ ಮೂವತ್ತು ಮೀಟರ್ ದೂರದಲ್ಲಿ ಮಾರ್ಗದ ಮೇಲೆ ಬಂದು ನಿಂತಾಗಿತ್ತು..!!            ನನ್ನ ಹೆಡ್ಡುತನಕ್ಕೆ ನನ್ನನ್ನೇ ಶಪಿಸಿಕೊಂಡೆ. ನಾನು ಬಾಳೆಹೊನ್ನೂರಿನ ಪೇಟೆಯ ಒಳಗೆಯೇ ಎಲ್ಲಾದರೂ ಕಾರು ನಿಲ್ಲಿಸಿ ನಿದ್ರಿಸಿ, ಬೆಳಗ್ಗೆ ಹೊರಡಬೇಕಾಗಿತ್ತು! ಆದದ್ದು ಆಗಿ ಹೋಯಿತು! ನನಗೆ ಈಗ ಆ ಆನೆಯಿಂದ ತಪ್ಪಿಸಿಕೊಳ್ಳುವುದು ಒಂದೇ ದಾರಿ! ನನ್ನ ಸಹಾಯಕ್ಕೆ ಯಾರೂ ಬರುವವರಿಲ್ಲ. ಆ ದಾರಿಯಲ್ಲಿ ರಾತ್ರಿಹೊತ್ತು ವಾಹನ ಸಂಚಾರವೇ ಇರಲಿಲ್ಲ. ಅತೀ ಹತ್ತಿರದ ಮನುಷ್ಯವಾಸದ ಮನೆಯು ಕಡಿಮೆಪಕ್ಷ ಮೂರು ಕಿಲೋಮೀಟರ್ ದೂರದಲ್ಲಿತ್ತು. ಕಾರು ಬೇರೆ ಕೆಟ್ಟು ಕೂತಿದೆ!

ಏನು ಮಾಡಲಿ? ಎಂದು ಆಲೋಚಿಸುತ್ತಾ ಮೆಲ್ಲನೆ ನನ್ನ ಬಂದೂಕನ್ನು ತೊಡೆಯ ಮೇಲೆ ಎಳೆದುಕೊಂಡು, ಮೆಲ್ಲನೆ ಬಂದೂಕಿನ ‘ಸೇಫ್ಟಿ ಕ್ಯಾಚ್ ಓಪನ್ ಮಾಡಿದೆ. ನನ್ನದು ಹ್ಯಾಮರ್ ಲೆಸ್ ಅಂಡರ್ ಲಿವರ್ ಬಂದೂಕು. ಬಂದೂಕು ಲೋಡ್ ಮಾಡಿದಾಗಲೇ ಫಯರಿಂಗ್ ಪಿನ್‌ಗಳು ಕಾಕ್ ಆಗಿದ್ದುವು. ಸೇಫ್ಟಿ ಸರಿಸಿದ ಕೂಡಲೇ ಬಂದೂಕು ಗುಂಡು ಹಾರಿಸಲು ತಯಾರಾಗಿತ್ತು. ಸೇಫ್ಟಿ ಸರಿಸಿದಾಗ ಬಂದ ಶಬ್ದ ಅತಿಸೂಕ್ಷ್ಮವಾದ ಶಬ್ದ ಆದರೆ ಆ ಸಲಗದ ಕಿವಿಗೆ ಈ ಶಬ್ದ ಸ್ಪಷ್ಟವಾಗಿ ಕೇಳಿಸಿತ್ತು..!!

ಆ ಪುಟ್ಟಸದ್ದಿಗೇ ಕೆರಳಿ, ಸಲಗ ಮುಂದೆ ಬರುತ್ತಿರುವುದನ್ನು ನಾನು, ತಿಂಗಳಬೆಳಕಿನಲ್ಲಿ  ಕಂಡೆ. ಬಂದೂಕು ಬಳಸಿ ಹೆದರಿಸುವುದು ನನ್ನ ಕೊನೆಯ ಉಪಾಯ. ಈಗ ಅದಕ್ಕಿಂತ ಮೊದಲು ಇನ್ನೊಂದು ಉಪಾಯ ಬಳಸೋಣ ಎಂದು ಕ್ಷಣದೊಳಗೆ ತೀರ್ಮಾನ ಮಾಡಿದೆ. ಕಾರಿನ ಎರಡು ಹ್ಯಾಲೋಜಿನ್ ಹೆಡ್‌ಲೈಟುಗಳು ಮತ್ತು ಎರಡು ಹಳದಿ ಫಾಗ್‌ಲ್ಯಾಂಪ್‌ಗಳನ್ನು ಏಕಕಾಲಕ್ಕೆ ಸ್ವಿಚ್‌ಹಾಕಿ ಬೆಳಗಿದೆ. ಕಾರಿನಲ್ಲಿ ಜರ್ಮನ್ ಬಾಷ್ (Bosch) ಕಂಪೆನಿಯ ಕರ್ಕಶ ಶಬ್ದದ ಹಾರನ್‌ಗಳು ಇದ್ದುವು. ಹಾರನ್ ಬಟನ್ ಕೂಡಾ ದಬ್ಬಿ ಹಿಡಿದೆ..!! ಕಾರಿನತ್ತ ನುಗ್ಗಿ ಬರುತ್ತಿದ್ದ ಆನೆ, ನನ್ನ ಕಾರಿನಿಂದ ಹದಿನೈದು ಅಡಿಗಳ ಅಂತರದಲ್ಲಿ ಬೆಚ್ಚಿ ನಿಂತಿತು..! ಸೊಂಡಿಲನ್ನು ಮೇಲೆತ್ತಿ ಬೀಸಿ ಒಂದು ಕೂಗು ಹಾಕಿ, ಅದು ಮಾರ್ಗದ ಎಡಬದಿಯಲ್ಲಿನ ತಗ್ಗು ಇಳಿದು ಮಾಯವಾಯಿತು…!

ಸದ್ಯಕ್ಕೆ ಬದುಕಿಕೊಂಡೆ..! ಎಂದುಕೊಳ್ಳುತ್ತಾ ಕಾರಿನ ಲೈಟುಗಳನ್ನು ಆಫ್‌ಮಾಡಿ, ಕಾರನ್ನು ಪುನಃ ಸ್ಟಾರ್ಟ್‌ಮಾಡಲು ಪ್ರಯತ್ನಿಸಿದೆ. ಕಾರು ಕೂಡಲೇ ಸ್ಟಾರ್ಟ್ ಆಯಿತು. ತಕ್ಷಣ ಗೇರ್ ಎಂಗೇಜ್ ಮಾಡಿ ಕಾರನ್ನು ವೇಗವಾಗಿ ಮುನ್ನಡೆಸಿದೆ. ಆಗ ಗಂಟೆ ಬೆಳಗಿನ ನಾಲ್ಕು ಆಗುತ್ತಾ ಬಂದಿತ್ತು. ಸುಮಾರು ಐದು ಕಿಲೋಮೀಟರ್ ಮುಂದಕ್ಕೆ ಹೋದ ನಂತರ ಕಾರಿನ ಎಂಜಿನ್ ಪುನಃ ಕೆಮ್ಮುತ್ತಾ ಸುಮ್ಮನಾಯಿತು. ಆ ಒಂಟಿಸಲಗ ಐದುಕಿಲೋಮೀಟರ್ ಬಂದು, ನನ್ನನ್ನು ಹೆದರಿಸುವ ಪ್ರಮೇಯ ಈಗಿಲ್ಲ ಎಂದುಕೊಂಡು ಕಾರಿನಿಂದ ಧೈರ್ಯವಾಗಿ ಇಳಿದು, ಕಾಯ್ಲ್ ಮತ್ತು ಡಿಸ್ಟ್ರಿಬ್ಯೂಟರುಗಳಿಗೆ ತಣ್ಣೀರು ಬಟ್ಟೆಯ ಉಪಚಾರಮಾಡಿದೆ. ಹತ್ತು ನಿಮಿಷಗಳ ನಂತರ ಕಾರನ್ನು ಸ್ಟಾರ್ಟ್ ಮಾಡಿದರೆ ಕಾರು ತಕರಾರಿಲ್ಲದೆ ಸ್ಟಾರ್ಟ್ ಆಯಿತು.  ಮುಂದಿನ ಪ್ರತಿ ನಾಲ್ಕು ಐದು ಕಿಲೋಮೀಟರುಗಳಿಗೆ ಇದೇ ತೊಂದರೆ ಪುನರಾವರ್ತನೆಯಾದರೂ ನನ್ನ ಒದ್ದೆ ಬಟ್ಟೆಯ ಶೈತ್ಯೋಪಚಾರ ಪ್ರತಿಬಾರಿಯೂ ಕೆಲಸಮಾಡಿತು. ನಾನು ಬೆಳಗಿನ ಐದೂವರೆ ಗಂಟೆಗೆ ಬಾಳೆಹೊಳೆ ತಲುಪಿದೆ.

ಬೇಸಿಗೆಯ ಸಮಯವಾಗಿದ್ದುದರಿಂದ ಬಾಳೆಹೊಳೆ (ಭದ್ರಾನದಿ) ಯಾವಾಗಲಿನಂತೆ ಬತ್ತಿಕೊಂಡು, ನದಿಯ ಪಾತ್ರದಲ್ಲಿ ಸ್ವಲ್ಪವೇ ನೀರು ಹರಿಯುತ್ತಿತ್ತು. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಆಳವಿಲ್ಲದ ಜಾಗ ನೋಡಿಕೊಂಡು ನಾವು ಕಾರನ್ನು ನದಿ ದಾಟಿಸುತ್ತಿದ್ದೆವು. ಹೊಳೆಯಲ್ಲಿ ಮೊಣಕಾಲು ಮುಳುಗುವಷ್ಟು ನೀರಿತ್ತು. ಹೊಳೆಯ ಮಧ್ಯದಲ್ಲಿ ಕಾರಿನ ಇಂಜಿನ್ ಕೈಕೊಟ್ಟರೆ, ಕೇವಲ ಎರಡು ಕಿಲೋಮೀಟರ್ ದೂರದ ನಮ್ಮ ತೋಟಕ್ಕೆ ನಡೆದುಹೋಗಿ, ಜನರನ್ನು ಕರೆದುಕೊಂಡು ಬಂದು ಕಾರನ್ನು ಆಚೆ ದಡಕ್ಕೆ ತಳ್ಳಬಹುದು ಎಂದುಕೊಂಡು,  ಕಾರನ್ನು ಬತ್ತಿ ಹರಿಯುತ್ತಾ ಇದ್ದ ಹೊಳೆಗೆ ಇಳಿಸಿದೆ. ಕಾರು ತಕರಾರು ಮಾಡದೇ ದೋಣಿಯಂತೆ ನೀರನ್ನು ಸೀಳುತ್ತಾ ಹೊಳೆಯನ್ನು ದಾಟಿಯೇ ಬಿಟ್ಟಿತು. ಅಲ್ಲಿಂದ ನಿಧಾನವಾಗಿ ಮಣ್ಣಿನ ರಸ್ತೆಯಲ್ಲಿ ಸಾಗುತ್ತಾ, ನಮ್ಮ ಸುಳಿಮನೆ ಕಾಫಿತೋಟದ ಗೇಟ್ ತಲುಪಿದೆ. ಗೇಟು ತೆರೆದು ಮನೆಯ ಅಂಗಳದಲ್ಲಿ ಕಾರು ನಿಲ್ಲಿಸಿದಾಗ ಬೆಳಗಿನ ಆರು ಗಂಟೆಗೆ ಐದು ನಿಮಿಷಗಳಿದ್ದುವು. ಕಾರಿನ ಸದ್ದು ಕೇಳುತ್ತಲೇ ನನ್ನ ಯಜಮಾನತಿ ಸರೋಜಮ್ಮನವರು ಎದ್ದು ಬಂದರು. ನಾನು ಸಂಭ್ರಮದಿಂದ ಹ್ಯಾಪಿ ಬರ್ತ್‌ಡೇ ಹೇಳುತ್ತಾ ತಂದ ಪುಟ್ಟ ಉಡುಗೊರೆಯನ್ನು  ಒಪ್ಪಿಸಿದೆ.

ಬಹಳ ಬೇಗನೇ ಎದ್ದು ಚಿಕ್ಕಮಗಳೂರಿನಿಂದ ಹೊರಟಿರಾ? ಎಂದು ಅವಳು ಕೇಳಲು, ಇಲ್ಲ, ನಿನ್ನೆ ರಾತ್ರಿ ಹತ್ತಕ್ಕೇ ಹೊರಟು ಈಗ ಮನೆಗೆ ತಲುಪುತ್ತಾ ಇದ್ದೇನೆ ಎಂದು ನಡೆದ ಕಥೆಯನ್ನು ಸಂಕ್ಷಿಪ್ತವಾಗಿ ತಿಳಿಸಿದೆ. ನಿಮಗೆ ಪ್ರಾಯ ನಲವತ್ತಮೂರಾದರೂ, ಹುಡುಗಾಟಿಕೆ ಇನ್ನೂ ಬಿಟ್ಟಿಲ್ಲ! ಯಾಕೆ ರಾತ್ರಿಯೇ ಹೊರಟು ಬರಬೇಕಾಗಿತ್ತು? ಎನ್ನುತ್ತಾ ಕಾಫಿ ತರಲು ಅಡುಗೆಮನೆಗೆ ಹೋದಳು. ನಾನು ಬೆಳಗಿನ ಸ್ನಾನ ಮುಗಿಸಿ ಸರೋಜಮ್ಮಳೊಡನೆ ಕುಳಿತು ತಿಂಡಿ ತಿಂದೆ. ಅಡುಗೆಯ ಸುಲೋಚನಮ್ಮ ನಮಗೆ ದೋಸೆ ಬಡಿಸಿದರು.

ಆಗ ಸುಲೋಚನಮ್ಮ ಮತ್ತು ಚಂದ್ರಶೇಖರಭಟ್ಟರು ಎಂಬ ಹಿರಿಯ ದಂಪತಿಗಳು ನಮ್ಮ ಬಂಗಲೆಯ ರಖೋಲೆ ನೋಡಿಕೊಂಡು ನಮಗೆ ಅಡುಗೆಮಾಡಿ ಬಡಿಸುತ್ತಿದ್ದರು. ಬಹು ನಂಬಿಕಸ್ಥರು. ಇಬ್ಬರಿಗೂ ಸುಮಾರು ಐವತ್ತೈದರ ಮೇಲಿನ ಪ್ರಾಯ. ಇಬ್ಬರೂ ಸ್ವಲ್ಪ ಮುಗ್ಧ ಸ್ವಭಾವದವರು. ಏನೋ! ತಮಗೆ ತಿಳಿದಂತೆ ಅಡುಗೆಮಾಡಿ ಬಡಿಸುತ್ತಾ, ನಮ್ಮ ಬಂಗಲೆಯ ರಖೋಲೆ ನೋಡುತ್ತಿದ್ದರು. ನಾನು ತಿಂಡಿ ತಿಂದು ಕೈತೊಳೆದವನೇ, ಪುನಃ ಅಡುಗೆಮನೆ ಹೊಕ್ಕು ಸುಲೋಚನಮ್ಮಾ, ಇಂದು ಸರೋಜಮ್ಮನವರ ಹುಟ್ಟಿದ ದಿನ. ಆದ್ದರಿಂದ, ಮಧ್ಯಾಹ್ನ ಊಟಕ್ಕೆ ಪಾಯಸ ಮತ್ತು ಚಿತ್ರಾನ್ನ ಮಾಡಿರಿ ಎಂದು ಗುಟ್ಟಾಗಿ ಅವರಿಗೆ ಹೇಳಿದೆ. ಆವರು ಆಗಲಿ ಸಾರ್, ಮಾಡುತ್ತೇನೆ ಅಂದರು.

ಆ ನಂತರ, ನಮ್ಮ ಕಾರಿಗೆ ಏನಾಗಿದೆ? ಎಂದು ಪರೀಕ್ಷೆ ಮಾಡಲುತೊಡಗಿದೆ. ಇಗ್ನಿಶನ್‌ಸಿಸ್ಟಮ್ ಸರಿಯಾಗಿಯೇ ಇತ್ತು. ಕಾರ್ಬರೇಟರ್, ಫ್ಯೂಯೆಲ್‌ಪಂಪ್ ಕೂಡಾ ಸರಿಯಾಗೇ ಇದ್ದುವು. ತಣ್ಣೀರು ಪಟ್ಟಿ ಇಟ್ಟಾಗ ಸ್ಟಾರ್ಟ್ ಆಗಿ ಇಂಜಿನ್ ಬಿಸಿಯಾದಾಗ ಏಕೆ ನಿಂತಿತು? ಎಂದು ತಲೆ ಕೆಡಿಸಿಕೊಳ್ಳುತ್ತಾ, ಇಗ್ನಿಶನ್ ಕಾಯಿಲ್‌ನ ಅರ್ಥಿಂಗ್ ವೈರನ್ನು ತಡವಿದೆ. ಅದು ತುಂಬಾ ಪೆಡಸಾಗಿತ್ತು. ಎಷ್ಟು ಪೆಡಸಾಗಿತ್ತೆಂದರೆ, ಅದನ್ನು ಸ್ವಲ್ಪ ಅಮುಕಲು, ಅದು ತುಂಡಾಗಿಯೇ ಬಿಟ್ಟಿತು! ನಾನು ಹೊಸ ಒಂದು ಪೀಸ್ ತಾಮ್ರದ ವೈರನ್ನು ಅದರ ಬದಲಾಗಿ ಜೋಡಿಸಿದೆ. ಕಾರು ಕೂಡಲೇ ಸ್ಟಾರ್ಟ್ ಆಯಿತು. ಕಾರಿನ ಟ್ರಯಲ್ ನೋಡಲು ಹೊರಟೆ. ಬಾಳೆಹೊಳೆಯನ್ನು ಸರಾಗವಾಗಿ ದಾಟಿದೆ. ನಂತರ ಕಳಸಕ್ಕೆ ಹೋಗುವ ಏರುರಸ್ತೆಯಲ್ಲಿ ಲೋ ಗೇರಿನಲ್ಲಿ ಬೇಕೆಂದೇ ವೇಗವಾಗಿ ಚಲಿಸಿದೆ. ಕಾರಿನ ಎಂಜಿನ್ ಬಹಳ ಬಿಸಿಯೇರಿದರೂ ಆಫ್ ಆಗುವ ಲಕ್ಷಣತೋರಲಿಲ್ಲ. ಹದಿನಾಲ್ಕು ಕಿಲೋಮೀಟರ್ ದೂರದ ಕಳಸದ ಪೇಟೆಯ ತನಕವೂ ಕಾರು ನಿರಾತಂಕವಾಗಿ ಚಲಿಸಿತು. ಆಗ ಕಳಸದ ಪೇಟೆಯಲ್ಲಿ ಸ್ವೀಟ್‌ಶಾಪ್ ಇರಲಿಲ್ಲ. ರಾಮಹೆಗ್ಡೆಯವರ ದಿನಸಿ ಅಂಗಡಿಯಿಂದ ಮಕ್ಕಳಿಗೆ ಸ್ವಲ್ಪ ಚಾಕಲೇಟ್ ಕೊಂಡುಕೊಂಡೆ. ಹಿಂದಿರುಗುವ ದಾರಿಯಲ್ಲಿ ಕಾರನ್ನು ಇನ್ನೊಮ್ಮೆ ಪರೀಕ್ಷಿಸಲು ಬೇಕೆಂದೇ ಮತ್ತೂ ಸ್ವಲ್ಪ ದೂರ ಲೋ ಗೇರಿನಲ್ಲೇ ವೇಗವಾಗಿ ಓಡಿಸಿದೆ. ಕಾರಿನ ಎಂಜಿನ್ ಚೆನ್ನಾಗಿ ಬಿಸಿಯಾಯಿತು, ರೇಡಿಯೇಟರ್ ಹಬೆಕಾರತೊಡಗಿತು. ಆದರೂ, ಹಿಂದಿನ ದಿನದಂತೆ ಎಂಜಿನ್ ಆಫ್ ಆಗಲೇ ಇಲ್ಲ. ದಾರಿಯಲ್ಲಿ ಕಾರು ನಿಲ್ಲಿಸಿ, ನನ್ನ ಹಳೆಯ ಇಗ್ನಿಶನ್‌ಕಾಯಿಲ್ ಜೋಡಿಸಿದೆ. ಮೊದಲಿನ ದಿವಸ ಕೊಂಡ ಹೊಸ ಇಗ್ನಿಶನ್ ಕಾಯಿಲನ್ನು ಸ್ಪೇರ್ ಆಗಿ ಇರಿಸಿಕೊಂಡೆ. ಕಾರು ಚೆನ್ನಾಗೇ ಓಡತೊಡಗಿತು. ಏನೂ ತೊಂದರೆ ಆಗಲಿಲ್ಲ. ಕಾರು ಸಂಪೂರ್ಣ ಸರಿಯಾಗಿತ್ತು..!

ಹಿಂದಿನ ದಿನ ಕಾರು ಪದೇಪದೇ ನಿಲ್ಲುತ್ತಿದ್ದ ಕಾರಣ ನನಗೆ ಆಗ ಸ್ಪಷ್ಟವಾಗಿ ಗೊತ್ತಾಯಿತು. ಆ ಹಳೇ ಅರ್ಥಿಂಗ್ ವೈರ್ ಎಂಜಿನ್ನಿನ ಬಿಸಿಗೆ ಪೆಡಸಾಗಿತ್ತು. ಅದರ ಹೊರಕವಚ ಎಂಜಿನ್ ಬಿಸಿಗೆ ಹಿಗ್ಗಿದಾಗ, ಇಗ್ನಿಶನ್ ಕಾಯಿಲ್‌ಗೆ ಅರ್ಥ್ ಕನೆಕ್ಷನ್ ಕಲ್ಪಿಸಲು ಆಗದಷ್ಟು ಹಿಗ್ಗಿ, ಅಂದರೆ, ಅದರ ಒಳಗಿನ ತಾಮ್ರದತಂತಿಯನ್ನು ತುಂಡರಿಸಿ ದೂರ ಸರಿಸುವಷ್ಟು ಹಿಗ್ಗಿ ಹೋಗುತ್ತಿತ್ತು. ಕಾರಿನ ಇಂಜಿನ್ ತಣಿದಾಗ, ಆ ಪ್ಲಾಸ್ಟಿಕ್ ವೈರಿನ ಒಳಗಣ ತಾಮ್ರದ ತಂತಿ ಸ್ವಲ್ಪ ಮಟ್ಟಿಗೆ ಕೂಡಿಕೊಂಡು ಅರ್ಥ್ ಆಗುವಂತೆ ಕೆಲಸ ಮಾಡುತ್ತಿತ್ತು. ಆಗಾಗ ನಾನು ಮಾಡುತ್ತಿದ್ದ ಶೈತ್ಯೋಪಚಾರ ಈ ಪ್ಲಾಸ್ಟಿಕ್ ವೈರಿನ ಕವಚದ ಕುಗ್ಗುವ ಪ್ರಕ್ರಿಯೆಗೆ ಸಹಾಯಕವಾಗುತ್ತಿತ್ತು! ಇದನ್ನು ತಿಳಿಯಲಾರದ ನನ್ನ ಬುದ್ಧಿವಂತಿಕೆಗೆ ನಾನೇ ನಕ್ಕೆ…! ಹಾಗೂ, ನನ್ನ ಬೆಕ್ಕು ಸಂಸಾರಿ, ಆದರೂ ಬ್ರಹ್ಮಚಾರಿ ಎಂದುಕೊಳ್ಳುವ ನಮ್ಮ ಮೆಕ್ಯಾನಿಕ್ ಶ್ರೀನಿವಾಸ ಆಚಾರಿಯನ್ನು ಮನಸ್ಸಿನಲ್ಲಿ ಬಹಳವಾಗಿ ಪ್ರಶಂಶಿಸಿದೆ. (ಅಂದರೆ ಬೈದೆ..!) ಹಿಂದಿನದಿನ ರಾತ್ರಿ ಬರೇ ಒಂದು ಅರ್ಥಿಂಗ್ ವೈರ್‌ನ ತುಂಡು, ತನ್ನ ಪ್ರಾಮುಖ್ಯತೆ ಮತ್ತು ಪ್ರಭಾವವನ್ನು ತೋರಿಸಿತ್ತು! ಈ ಘಟನೆ ನಡೆದ ನಂತರ, ಇಂದಿನವರೆಗೂ, ನಾನು ತಪ್ಪದೆ ಒಂದು ಮೀಟರ್ ಆಗುವಷ್ಟು ತಾಮ್ರದ ವೈರನ್ನು ಅದು ನನಗೆ ಉಪಯೋಗ ಬರಲಿ ಬಿಡಲೀ, ಮರೆಯದೇ, ನನ್ನ ಕಾರಿನ ಟೂಲ್‌ಕಿಟ್‌ನಲ್ಲಿ ಇರಿಸಲು ಮರೆಯುವುದಿಲ್ಲ.

ಸುಮಾರು ಹತ್ತು ಗಂಟೆಗೆ ಸುಳಿಮನೆ ತೋಟಕ್ಕೆ ಹಿಂದಿರುಗಿದೆ. ಮಕ್ಕಳಿಗೆ ಚಾಕಲೇಟ್ ಕೊಟ್ಟೆ. ಯಾಕೆಂದರೆ ಬಾಳೆಹೊಳೆಯಲ್ಲಿ ಕ್ಯಾಡ್‌ಬರಿ ಚಾಕಲೇಟ್ ಆಗ ಸಿಕ್ಕುತ್ತಿರಲಿಲ್ಲ. ಯಾಕೆ?…. ಈಗಲೂ ಸಿಕ್ಕುವುದಿಲ್ಲ!

ಹಿಂತಿರುಗಿ ಬಂದವನೇ, ನೇರವಾಗಿ ಅಡುಗೆಮನೆಗೆ ಹೋಗಿ ಒಂದು ಕಪ್ ಕಾಫಿ ಕೇಳಿ ಕುಡಿದೆ. ಪುನಃ ಸುಲೋಚನಮ್ಮನವರನ್ನು ಚಿತ್ರಾನ್ನ ಪಾಯಸ ಮಾಡುತ್ತೀರಲ್ಲವೆ? ಎಂದು ನೆನಪಿಸಿದೆ. ಅವರು ಮಾಡುತ್ತಾ ಇದ್ದೇನೆ, ಸರ್ ಎಂದರು. ನಂತರ ನಾನು ನನ್ನ ಕೆಲಸದ ಮೇಲೆ ತೋಟದ ಕಡೆಗೆ ಹೊರಟೆ. ಎಂದಿನಂತೆ, ಮಧ್ಯಾಹ್ನ ಒಂದಕ್ಕೆ ಸರಿಯಾಗಿ ಮನೆಗೆ ಊಟಮಾಡಲು ಬಂದೆ.

ವಿಶೇಷದ ದಿನವಾದ್ದರಿಂದ ಮನೆಯ ಒಳಗಿನ ಚೌಕಿಯಲ್ಲಿ ಎಲ್ಲರಿಗೂ ಮಣೆ ಇಟ್ಟು ಬಾಳೆ ಎಲೆಹಾಕಿ ಊಟ ಬಡಿಸಿರಿ ಎಂದೆ. ಹುಟ್ಟುಹಬ್ಬದ ಊಟವಾದುದರಿಂದ ಮೊದಲು ಒಂದು ಬಿಂದು ತುಪ್ಪ ಬಡಿಸಿ, ಅದರಮೇಲೆ ಸ್ವಲ್ಪವೇ ಪಾಯಸ ಬಡಿಸಿರಿ. ಆಮೇಲೆ ಚಿತ್ರಾನ್ನ ಬಡಿಸಿರಿ. ದಿನನಿತ್ಯದಂತೆ ಮೊದಲಿಗೆ ಉಪ್ಪು ಉಪ್ಪಿನಕಾಯಿ ಬಡಿಸಬೇಡಿರಿ ಎಂದು ಚಂದ್ರಶೇಖರಭಟ್ಟರನ್ನು ಎಚ್ಚರಿಸಿದೆ. ಯಾಕೆಂದರೆ, ಹಬ್ಬಹರಿದಿನಗಳಲ್ಲಿ ಮಲೆನಾಡಿನ ಮನೆಗಳಲ್ಲಿ ಉಪ್ಪು ಮತ್ತು ಉಪ್ಪಿನಕಾಯಿ ಮೊದಲು ಬಡಿಸುವುದಿಲ್ಲ. ನನ್ನ ಮಕ್ಕಳನ್ನು ಊಟಕ್ಕೆ ಕರೆದೆ. ಎರಡುಸಾರಿ ಜೋರಾಗಿ ಕೂಗಿದ ಮೇಲೆ, ಮನೆಪಕ್ಕದ ಅಡಿಕೆತೋಟದ ಯಾವ ಮೂಲೆಯಲ್ಲೋ ಆಡುತ್ತಿದ್ದ ರಾಧಿಕಾ ಮತ್ತು ರಚನಾ ತಮ್ಮ ಕಪಿಸೈನ್ಯ ಸಮೇತ ಊಟಕ್ಕೆ ಹಾಜರಾದರು. ರಾಧಿಕಾ ಮತ್ತು ರಚನಾ ತೋಟದಲ್ಲಿ ಇದ್ದಾಗ ತೋಟದಲ್ಲಿನ ಚಿಕ್ಕಮಕ್ಕಳನ್ನು ಕರೆದುಕೊಂಡು ಆಡುತ್ತಿದ್ದರು. ಊಟಕ್ಕೂ ಆ ಮಕ್ಕಳು ಜತಗಿರಲೇ ಬೇಕು. ಇದು ನಿತ್ಯ ಕಟ್ಟಳೆ.

ಮಕ್ಕಳೆಲ್ಲರಿಗೂ ಬೇಗ ಬೇಗ ಮುಖ ಕೈಕಾಲುಗಳನ್ನು ತೊಳೆದು ಬೇಗನೆ ಊಟಕ್ಕೆ ಬನ್ನಿರೆಂದು ತಾಕೀತು ಮಾಡಿದೆ. ಸುಲೋಚನಮ್ಮ ಕ್ರಮ ಪ್ರಕಾರ ಕುಡಿಬಾಳೆ‌ಎಲೆಯ ಬಲಬದಿಗೆ ತುಪ್ಪದ ಬಿಂದುವಿನ ಮೇಲೆ ಪಾಯಸ ಬಡಿಸಿ, ಎಲೆಯ ಎಡತುದಿಗೆ ಚಿತ್ರಾನ್ನ ಬಡಿಸಿದ್ದರು.  ಎಲ್ಲಾರೂ ಸಂಭ್ರಮದಿಂದಲೇ ಊಟಕ್ಕೆ ಕುಳಿತೆವು.

ಸುಲೋಚನಮ್ಮಾ ಅನ್ನ ಬಡಿಸಿ ಎಂದರೆ, ಸುಲೋಚನಮ್ಮ ಅನ್ನ ಮಾಡಿಲ್ಲ ಸಾರ್…! ಇಂದು ಬರೀ ಚಿತ್ರಾನ್ನ ಮತ್ತು ಪಾಯಸ ಮಾತ್ರ ತಾವು ಹೇಳಿದಂತೆ ಮಾಡಿದ್ದೇನೆ ಎಂದರು. ನಾನು ಒಮ್ಮೆಗೇ ಕಕ್ಕಾಬಿಕ್ಕಿ ಆದೆ….! ನನಗೆ ಅಳಬೇಕೋ? ನಗಬೇಕೋ? ಗೊತ್ತಾಗಲಿಲ್ಲ!               ಇದು ಯಾವ ತರಹದ ಊಟ? ಎಲ್ಲಾದರೂ ಚಿತ್ರಾನ್ನ ಮತ್ತು ಪಾಯಸ ಮಾತ್ರ ಊಟಕ್ಕೆ ತಯಾರು ಮಾಡಿ ಬಡಿಸುತ್ತಾರೆಯೇ? ಎಂದು ನಮ್ಮ ಅನ್ನದಾತ ದಂಪತಿಗಳನ್ನು ಪ್ರಶ್ನಿಸಿದೆ. ಚಂದ್ರಶೇಖರ ಭಟ್ಟರು ತಗ್ಗಿದ ಸ್ವರದಲ್ಲಿ ತಾವು ಹೇಳಿದಂತೆ ಅಡುಗೆ ಮಾಡಿದ್ದೇವೆ ಸಾರ್..! ಎಂದರು. ನನ್ನ ಮೋರೆಗೆ ತಣ್ಣೀರು ಎರಚಿದಂತೆ ಆಯಿತು!

ಅಷ್ಟರಲ್ಲಿ ಸರೋಜಮ್ಮನವರು ಅಡುಗೆಮನೆಯೊಳಗೆ ಹೋಗಿ, ಹಿಂತಿರುಗಿ ಬಂದು

ಇಂದು ನಮಗೆಲ್ಲಾ ಎರಡೇ ಐಟಮ್ಮಿನ ಸ್ಪೆಷಲ್ ಊಟ! ಪುಣ್ಯಕ್ಕೆ ಎಲ್ಲರಿಗೂ ಸಾಕಾಗುವಷ್ಟು ಚಿತ್ರಾನ್ನ ಮತ್ತು ಪಾಯಸ ಇದೆ! ಈಗ ಇಂದಿನ ಸ್ಪೆಷಲ್ ಊಟ ಮಾಡೋಣ!  ಸಾಯಂಕಾಲ ನಾಲ್ಕುಗಂಟೆಗೆ ಎಲ್ಲರಿಗೂ ‘ಘೀರೈಸ್ ಮತ್ತು ಗ್ರೇವಿ ಮಾಡಿಬಡಿಸುವೆ ಎಂದಳು.

ನಮ್ಮ ಅಡುಗೆಯ ಸುಲೋಚನಮ್ಮನವರ ಬುದ್ಧಿವಂತಿಕೆಯನ್ನು ಶ್ಲಾಘಿಸುತ್ತಾ, ಎಲ್ಲರೂ ನಗುನಗುತ್ತಾ ಚೆನ್ನಾಗಿಯೇ ಊಟ ಮಾಡಿದೆವು. ಪುಣ್ಯಕ್ಕೆ, ಯಾರೂ ಅತಿಥಿಗಳನ್ನು ಆ ಮಧಾಹ್ನದ ಊಟಕ್ಕೆ ಕರೆದಿರಲಿಲ್ಲ..!

ಸಾಯಂಕಾಲ ನಾಲ್ಕು ಗಂಟೆಗೆ ಎಲ್ಲರಿಗೂ ಘಮಘಮಿಸುವ ಘೀ ರೈಸ್ ಮತ್ತು ಗ್ರೇವಿಯನ್ನು ಸರೋಜಮ್ಮ ತಯಾರಿಸಿದರು. ಸುಲೋಚನಮ್ಮ ಮತ್ತು ಚಂದ್ರಶೇಖರಭಟ್ಟರನ್ನೂ ಚೌಕಿಯಲ್ಲಿ ನಮ್ಮೊಡನೆ ಕೂರಿಸಿಕೊಂಡೆವು. ಸರೋಜಮ್ಮ ಧಾರಾಳವಾಗಿ ಬಡಿಸಿದರು. ಅವರ ಬರ್ತ್‌ಡೇ ಸ್ಪೆಶಲ್ ಆಗಿ, ಅವರೇ ತಯಾರಿಸಿದ ಸರ್‌ಪ್ರೈಸ್ ಸಿಹಿ ಕೇಸರಿಬಾತ್ ಕೂಡಾ ಬಡಿಸಿದರು.

ಹಾಗಾಗಿ, ಸರೋಜಮ್ಮನವರ ನಲ್ವತ್ತೆರಡನೇ ಬರ್ತ್‌ಡೇ ಎಂದೂ ಮರೆಯಲಾಗದ್ದು. ಆ ಅಮೋಘ ಬರ್ತ್‌ಡೇಯ ನೆನಪಿನ ಜತೆಗೆ ನನಗೆ ಆ ಕಾಡಾನೆ ಮತ್ತು ಕಾಪರ್ ವೈರ್ ಇವುಗಳ ನೆನಪುಗಳೂ ಅಚ್ಚಳಿಯದೆ ಉಳಿದಿವೆ.

* * *