ಮುಖ ಪರಿಚಯದಿಂದ ಒಬ್ಬೊಬ್ಬರನ್ನು ನೆನಪಿಟ್ಟುಕೊಳ್ಳುವುದು ಸುಲಭ. ಆದರೆ ನನ್ನ ತಂದೆಯವರನ್ನು ಕಂಡಿದ್ದ ಹಿರಿಯರೊಬ್ಬರು ನನ್ನ ಮುಖದ ಹೋಲುವೆಯನ್ನು ನೋಡಿ, ನನ್ನನ್ನು ಗುರುತಿಸಿದುದೇ ಆಶ್ಚರ್ಯಕರ ಸಂಗತಿ.

೧೯೮೪ನೇ ಇಸವಿಯ ನವರಾತ್ರಿಯ ರಜೆಯಲ್ಲಿ ನಾವು ಕೊಡಗು ಜಿಲ್ಲೆಯ ಪ್ರವಾಸ ಮಾಡಿದೆವು. ನಮ್ಮ ಮಕ್ಕಳಾದ ರಾಧಿಕಾ ಮತ್ತು ರಚನಾ ಬೆಂಗಳೂರಿನ ಸೈಂಟ್‌ಚಾರ್ಲ್ಸ್ ಕಾನ್ವೆಂಟ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ನಾವು ಮಡಿಕೇರಿಯ ಪ್ರಸಿದ್ಧ ಹೋಟೆಲ್‌ವೊಂದರಲ್ಲಿ ನಾಲ್ಕಾರು ದಿನ ವಸತಿಮಾಡಿ, ಕೊಡಗಿನ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲಾ ನೋಡುತ್ತಿದ್ದೆವು. ನಮ್ಮ ಪ್ರವಾಸದ ಕೊನೆಯದಿನ, ಬೆಳಗ್ಗೆ ಹೊರಟು ತಲಕಾವೇರಿ ಕ್ಷೇತ್ರವನ್ನು ನೋಡಲು ಭಾಗಮಂಡಲ ಮಾರ್ಗವಾಗಿ ಹೊರಟೆವು. ಅದೇ ದಿನ ಮಡಿಕೇರಿಗೆ ವಾಪಸ್ ಆಗಿ, ನಾವು ತಂಗಿದ್ದ  ಹೋಟೆಲ್ ರೂಮ್ ಖಾಲಿಮಾಡಿ, ಆ ದಿನದ ಸಾಯಂಕಾಲ ಹೊತ್ತಿಗೆ ಮೈಸೂರು ತಲುಪುವ ಆಲೋಚನೆ ಮಾಡಿದ್ದೆವು.

ದಾರಿ ಉದ್ದಕ್ಕೂ ಆದಿನ ಎಡೆಬಿಡದೆ ಮಳೆ ಬರುತ್ತಿತ್ತು. ನಿಧಾನವಾಗಿ ನಮ್ಮ ಫಿಯಾಟ್ ಕಾರನ್ನು ನಡೆಸುತ್ತಾ, ಆ ಮಲೆನಾಡಿನ ಅಪರಿಚಿತ ಹಾದಿಯಲ್ಲಿ ಸಾಗಿದೆ. ಸುಮಾರು ಹತ್ತು ಘಂಟೆ ಸಮಯಕ್ಕೆ ನಾವು ತಲಕಾವೇರಿಯ ದೇವಸ್ಥಾನಗಳ ಸಮುಚ್ಛಯ ಸೇರಿದೆವು. ಕಾರಿನಿಂದ ಇಳಿದವರೇ, ಮೊದಲು ಕಾವೇರಿ ನದಿಯ ಉದ್ಭವ ಕುಂಡದ ಬಳಿಗೆ ಹೋದೆವು.

ಅಲ್ಲಿ ಸುಮಾರು ಎಪ್ಪತ್ತರ ಹರೆಯದ ಹಿರಿಯ ಪುರೋಹಿತರೊಬ್ಬರು ಯಾತ್ರಾರ್ಥಿಗಳಾದ ಇನ್ನೊಬ್ಬ ದಂಪತಿಗಳ ಕೈಯ್ಯಲ್ಲಿ ಕಾವೇರಿಮಾತೆಯ ಪೂಜೆ ಮಾಡಿಸುತ್ತಾ ಇದ್ದರು. ನಮ್ಮನ್ನು ತಲೆಯೆತ್ತಿ ನೋಡಿದವರೇ, ನಾವುಗಳು ಮನೆಮಾತಾಗಿ ಆಡುವ ತುಳು ಭಾಷೆಯಲ್ಲಿ, ತನ್ನ ಮಗನನ್ನು ಕರೆದು, ಲೋ, ಪೆಜತ್ತಾಯರು ಬಂದಿದ್ದಾರೆ, ಅವರನ್ನು ಮೊದಲಿಗೆ ಕಾವೇರಿ ಅಮ್ಮನ ದೇವಸ್ಥಾನದ ಒಳಗೆ ಕರೆದುಕೊಂಡು ಹೋಗಿ, ಪೂಜೆ ಮಾಡಿಸಿಕೊಂಡು ಬಾ ಎಂದು ಹೇಳಿ ತಮ್ಮ ಕೆಲಸದಲ್ಲಿ ತಲ್ಲೀನರಾದರು…!! ಅವರನ್ನು ನನಗೆ ಕಂಡ ನೆನಪೇ ಇಲ್ಲ..! ಅವರು ಹೇಗೆ ನನ್ನ ಗುರುತು ಹಿಡಿದರು? ಎಂದು ಯೋಚಿಸಿದೆ. ಅದಲ್ಲದೇ, ಅವರನ್ನು ಒಮ್ಮೆ ಕಂಡರೆ ಮರೆಯಲು ಸಾಧ್ಯವೇ ಇಲ್ಲದಂತಹಾ ಚಹರೆ. ಅವರು ಒಬ್ಬ ವೇದಾಂತಿಯ ಲಕ್ಷಣದ ಬ್ರಾಹ್ಮಣ. ಅವರ ಒಂದು ಕಾಲು ಮೊಣಕಾಲಿನಿಂದ ಮೇಲೆ ಆಂಪುಟೇಶನ್ ಮಾಡಲ್ಪಟ್ಟಿತ್ತು. ಅವರು ಕಾವೇರಿಮಾತೆಯ ಉದ್ಭವ ಕುಂಡದ ಬಳಿ ಒಂದು ಮಣೆ ಹಾಕಿ ಕುಳಿತಿದ್ದರು. ಕುಳಿತಲ್ಲಿಂದಲೇ ಶಾಸ್ತ್ರೋಕ್ತವಾಗಿ ಮಂತ್ರಗಳನ್ನು ಹೇಳುತ್ತಾ, ಯಾತ್ರಾರ್ಥಿಗಳ ಪೂಜಾವಿಧಿಗಳನ್ನು ಕ್ರಮವತ್ತಾಗಿ ನಡೆಸುತ್ತಿದ್ದರು.

ಅರ್ಚಕರಿಗೆ ನನ್ನ ಗುರುತು ಹೇಗಾಯ್ತು? ಅವರು ನನಗೆ ಸಂಪೂರ್ಣ ಅಪರಿಚಿತರು ಅನ್ನಿಸಿತು. ನಾನು ಅರ್ಚಕರ ಮಗನೊಂದಿಗೆ, ನಿಮಗೆ ನನ್ನ ಪರಿಚಯ ಇದೆಯೇ?    ನಿಮ್ಮ ತಂದೆಯವರು ನನ್ನ ಗುರುತು ಹಿಡಿದು ಕರೆದರು. ಅವರನ್ನು ನೋಡಿದ ನೆನಪೇ  ನನಗಿಲ್ಲ..!ಎಂದು ಕೇಳಿದೆ. ಆ ಯುವಕ ನನಗೆ ತಮ್ಮ ಪರಿಚಯ ಇಲ್ಲ. ನಮ್ಮ ಸ್ವಂತ ಊರು ಉಡುಪಿಯ ಹತ್ತಿರದ ಒಂದು ಹಳ್ಳಿ. ನಮ್ಮ ತಂದೆಯವರು ಚಿಕ್ಕಂದಿನಿಂದ ಇಲ್ಲಿಯ ಪೂಜಾಕೈಂಕರ್ಯ ಮಾಡುತ್ತಾ ಇದ್ದಾರೆ. ನಾನು ಇದೇ ಊರಲ್ಲಿ ಬೆಳೆದವನು. ಅವರು ಬಹಳ ಅಪರೂಪಕ್ಕೆ ತಮ್ಮ ಸ್ವಂತ ಊರಿಗೆ ಹೋಗುವುದು. ಅವರು ಹೇಗೆ ನಿಮ್ಮ ಗುರುತು ಹಿಡಿದರೋ ಗೊತ್ತಿಲ್ಲ..! ಎಂದು ಉತ್ತರಿಸಿದರು.

ದೇವಸ್ಥಾನದ ಒಳಗೆ ಅರ್ಚನೆ ಮಾಡಿಸಿದ ನಂತರ ನಾವು ದೊಡ್ಡ ಪುರೋಹಿತರು ಕುಳಿತಿದ್ದ ಉದ್ಭವ ಕುಂಡದ ಬಳಿಗೆ ಬಂದೆವು. ನಾವು ಬರುವಾಗ ಕಾವೇರಿಯಮ್ಮನ ಪೂಜೆ ಮಾಡುತ್ತಿದ್ದ ದಂಪತಿಗಳ ಪೂಜೆ ಮುಗಿದಿತ್ತು. ಪುರೋಹಿತರು ಬಿಡುವಾಗಿದ್ದರು. ನಾನು ಮತ್ತು ಸರೋಜಮ್ಮನನ್ನು ಅವರು ಅಲ್ಲಿ ಹಾಸಿದ್ದ ಪುಟ್ಟ ಚಾಪೆಗಳ ಮೇಲೆ ಕುಳಿತುಕೊಳ್ಳುವಂತೆ ಹೇಳಿದರು. ನಾನು ಕುತೂಹಲ ತಡೆಯಲಾರದೇ ಸ್ವಾಮೀ, ಕ್ಷೇತ್ರಪುರೋಹಿತರೇ, ತಮಗೆ ನನ್ನ ಗುರುತು ಹೇಗಾಯಿತು? ಎಂದು ಪ್ರಶ್ನಿಸಿಯೇಬಿಟ್ಟೆ.

ಪೆಜತ್ತಾಯರೆ, ನಾನು ನಿಮ್ಮನ್ನು ನೋಡುವುದು ಇದೇ ಮೊದಲು..! ಆದರೆ, ನಾನು ಉಡುಪಿಯಲ್ಲಿ ೧೯೩೦ನೇ ಇಸವಿಯಲ್ಲಿ ವೇದಪಾಠ ಕಲಿತವನು. ಆಗ ಫಲಿಮಾರು ಮಠದ ದಿವಾನರಾಗಿದ್ದ ತಮ್ಮ ತಂದೆಯವರು ನನಗೆ ವೈಯಕ್ತಿಕವಾಗಿ ಬಹಳ ಸಹಾಯಮಾಡಿದ್ದರು. ಅವರನ್ನು ನಾನು ಮರೆಯಲು ಸಾಧ್ಯವೇ ಇಲ್ಲ..! ನಿಮ್ಮ ಮುಖ ನೋಡಿದರೆ ನನಗೆ ಅವರ ಮುಖದ ನೆನಪು ಬಂತು..! ಆದ್ದರಿಂದ, ಪೆಜತ್ತಾಯರು ಬಂದರು ಎಂದು ನನ್ನ ಮಗನಿಗೆ ತಿಳಿಸಿದೆ ಎಂದರು.

ಅವರ ಮಾತು ಕೇಳಿ ನನಗೆ ಆಶ್ಚರ್ಯವಾಯಿತು. ನಾನು ಹತ್ತುತಿಂಗಳ ಮಗು ಆಗಿದ್ದಾಗಲೇ ನನ್ನ ತಂದೆಯವರು ತೀರಿಕೊಂಡಿದ್ದರು. ಅವರನ್ನು ಕಂಡ ನೆನಪು ನನಗಿಲ್ಲ. ನಾನು ಕೇಳಿದ ಪ್ರಕಾರ ನನ್ನ ತಂದೆಯವರು ನನಗಿಂತಲೂ ಬಿಳುಪಿನ, ಆರಡಿಗೂ ಮೀರಿದ ನೀಳಕಾಯದ ವ್ಯಕ್ತಿ. ನಾನಾದರೋ, ಐದಡಿ ಏಳಿಂಚು ಎತ್ತರದ ಎಣ್ಣೆಕಪ್ಪಿನ, ಸ್ವಲ್ಪ ಸ್ಥೂಲವೇ ಎನ್ನಬಹುದಾದ ಮೈಕಟ್ಟಿನ ವ್ಯಕ್ತಿ. ನನಗೂ ನನ್ನ ತಂದೆಯವರಿಗೂ ಸಾಮ್ಯ ಬಹುಕಡಿಮೆ ಎಂಬ ಅಭಿಪ್ರಾಯ ಅದುವರೆಗೆ ನನ್ನಲ್ಲಿತ್ತು. ಅವರ ಮಾತುಗಳನ್ನು ಕೇಳಿ ನನಗೆ ಬಹು ಆಶ್ಚರ್ಯ ಮತ್ತು ಸಂತೋಷವುಂಟಾಯಿತು.

ಪುರೋಹಿತರು ಆದರದಿಂದ ಶಾಸ್ತ್ರೋಕ್ತವಾಗಿ ಕಾವೇರಿ ಅಮ್ಮನಿಗೆ ನಮ್ಮ ಕೈಯ್ಯಲ್ಲಿ ಪೂಜೆ ಮಾಡಿಸಿದರು. ಆಚಾರ್ಯರೇ, ನಾವು ಇನ್ನು ಹೊರಡುತ್ತೇವೆ. ಅಪ್ಪಣೆ ಕೊಡಿ. ಎಂದು ಅವರಿಗೆ ನಾವು ಮತ್ತು ನಮ್ಮ ಮಕ್ಕಳು ನಮಿಸಿದೆವು. ಆಗ ಆಚಾರ್ಯರು ಮಧ್ಯಾಹ್ನ ತಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗಲೇಬೇಕೆಂದು ವಿನಂತಿಸಿದರು. ಅದಕ್ಕೆ ನಾನು ನಾವು ಕೂಡಲೇ ಮಡಿಕೇರಿಗೆ ಹೋಗಿ, ಅಲ್ಲಿನ ವಸತಿಗೃಹದ ರೂಮನ್ನು ಬಿಟ್ಟು, ಕತ್ತಲಾಗುವ ಮೊದಲು ಮೈಸೂರನ್ನು ಮುಟ್ಟಬೇಕಾಗಿದೆ ಎನ್ನುವ ವಿಚಾರವನ್ನು ತಿಳಿಸಿ, ಅವರ ಆಮಂತ್ರಣವನ್ನು ಸವಿನಯವಾಗಿ ನಿರಾಕರಿಸಿ ಹೊರಟೆವು. ಶೀಘ್ರಮೇವ ಪುನಃ ಕಾವೇರಿ ದರ್ಶನಂ ಪ್ರಾಪ್ತಿರಸ್ತು ಎಂದು ಅವರು ನಮ್ಮನ್ನು ಹರಸಿ ಬೀಳ್ಕೊಟ್ಟರು.

ನಾನು ಮಡಿಕೇರಿಯ ಹಾದಿಯಲ್ಲಿ ಹಿಂತಿರುಗಿ ಬರುತ್ತಿರುವಾಗ ನನ್ನ ಹೆಂಡತಿ ಮಕ್ಕಳೊಡನೆ, “I am really very happy today! The elderly Purohit says that I look like the chip of the old block!” ಎನ್ನುತ್ತಾ ತುಂಬಾ ಸಂತೋಷಪಟ್ಟೆ.

* * *