೧೯೮೨ನೇ ಇಸವಿ ಮೇ ತಿಂಗಳ ಕೊನೆಯ ವಾರ. ವರ್ಷದ ಲೆಕ್ಕಚಾರ ಮಾಡಿಸಿಕೊಂಡು ಏಪ್ರಿಲ್ ತಿಂಗಳಲ್ಲಿ ಊರಿಗೆ ಹೋಗಿದ್ದ ಕಾಫಿತೋಟದ ಆಳುಗಳು ನಮ್ಮ ತೋಟಕ್ಕೆ ಹಿಂದಿರುಗುತ್ತಾ ಇದ್ದರು. ಜೂನ್ ಒಂದನೇ ತಾರೀಕು ನಮ್ಮಲ್ಲಿ ಹೊಸಪಟ್ಟಿಯ ಕೆಲಸ ಶುರು. ಆಳುಗಳು ಒಂದುವಾರ ಮೊದಲೇ ಬಂದು ತಮಗೆ ಮಳೆಗಾಲಕ್ಕೆ ಬೇಕಾದ ಉರುವಲಿನ ಕಟ್ಟಿಗೆ ದಾಸ್ತಾನು ಮಾಡಿಕೊಳ್ಳುತ್ತಿದ್ದರು. ಹೊಸದಾಗಿ ನಮ್ಮಲ್ಲಿ ಕೆಲಸಕ್ಕೆ ಸೇರುವ ಆಳುಗಳು ತೋಟದ ಆಫೀಸಿಗೆ ಬಂದು ಹೊಸ ಆಳುಗಳ ಪಟ್ಟಿಗೆ ತಮ್ಮ ಹೆಸರು ನೊಂದಾಯಿಸಿಕೊಳ್ಳುತ್ತಿದ್ದರು.

ನಾನು ಬಂಗಲೆಯಲ್ಲಿ ಬೆಳಗಿನ ಹನ್ನೊಂದು ಗಂಟೆಯ ಸುಮಾರಿಗೆ ಯಾವುದೋ ಪುಸ್ತಕ ಓದುತ್ತಾ ಕುಳಿತಿದ್ದೆ. ನಮಸ್ಕಾರ ಪೆಜತ್ತಾಯ ಸಾಹುಕಾರರಿಗೆ! ಎನ್ನುತ್ತಾ ಸುಮಾರು ಐವತ್ತೈದು ವರ್ಷ ಪ್ರಾಯದವರಂತೆ ಕಾಣುತ್ತಿದ್ದ ಕೃಶಕಾಯದ ವ್ಯಕ್ತಿಯೊಬ್ಬರು ಬಂಗಲೆಯ ಒಳಗೆ ಬಂದರು. ಅವರು ನೀಲಿ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಬುಷ್ ಶರ್ಟ್ ತೊಟ್ಟಿದ್ದರು. ಅವರನ್ನು ಹಜಾರದಲ್ಲಿ ಕುಳ್ಳಿರಿಸಿ, ಬಂಗಲೆಯ ಅಡುಗೆಯವರ ಹತ್ತಿರ ಅವರಿಗೆ ಒಂದು ಕಪ್ ಕಾಫಿಮಾಡಿ ತರಲು ಹೇಳಿದೆ. ಬಂದ ಆಗಂತುಕರು ಕಾಫಿ ಕುಡಿದಾದ ಕೂಡಲೇ ಮಲೆನಾಡಿನ ಸಂಪ್ರದಾಯ ಪ್ರಕಾರ ಅವರ ಮುಂದೆ ತಾಂಬೂಲದ ಹರಿವಾಣ ಇರಿಸಿದೆ. ಅವರು ವೀಳ್ಯದ ಹರಿವಾಣವನ್ನೊಮ್ಮೆ ಮುಟ್ಟಿ, ಧನ್ಯವಾದಗಳು. ನನಗೆ ವೀಳ್ಯದ ಅಭ್ಯಾಸವಿಲ್ಲ ಅಂದರು. ಆಗ ನಾನು, ನನಗೂ ವೀಳ್ಯದ ಅಭ್ಯಾಸವಿಲ್ಲ. ಆದರೆ, ಈ ಊರಿನ ಶಿಷ್ಟಾಚಾರದ ಪ್ರಕಾರ ಮನೆಗೆ ಬಂದ ಅತಿಥಿಗಳಿಗೆ ಬಾಯಾರಿಕೆ ಕೊಟ್ಟ ಮೇಲೆ ವೀಳ್ಯದ ತಟ್ಟೆ ಮುಂದಿಟ್ಟು ಸತ್ಕಾರ ಮಾಡಲೇಬೇಕು ಎಂದೆ.

ಅದಕ್ಕವರು, ತಾವು ಹೇಳುವ ಮಾತು ಸರಿ. ಹಿಂದೆ ನಮ್ಮೂರಿನಲ್ಲೂ ಈ ಕಟ್ಟಳೆಯಿತ್ತು. ಇತ್ತೀಚೆಗೆ ಅದು ಅಪರೂಪವೆನ್ನಿಸಿದೆ. ನನ್ನ ಸ್ವಂತ ಊರು ದಕ್ಷಿಣಕನ್ನಡದ ನಾರಾವಿ ಎಂಬ ಊರಿನ ಹತ್ತಿರದ ಹಳ್ಳಿ. ನನ್ನ ಹೆಸರು ಬಾಬು ಪೂಜಾರಿ. ನಾನು ಕರ್ಕಿಕೊಂಡ ತೋಟದ ದೊರೆ ಮಿ.ಕೀನ್ ಸಾಹೇಬರ ಹತ್ತಿರ ಫೀಲ್ಡ್‌ರೈಟರ್ ಕೆಲಸ ಮಾಡುತ್ತಾ ರಿಟೈರ್ ಆದವನು. (ಫೀಲ್ಡ್‌ರೈಟರ್ ಅಂದರೆ, ಕಾಫಿತೋಟದ ಫೀಲ್ಡ್ ಸುಪರ್ವೈಜರ್‌ಗಳ ಮೇಲಧಿಕಾರಿಯ ಕೆಲಸ.) ಈ ಚಿಕ್ಕಮಗಳೂರು ಜಿಲ್ಲೆಯ ಜನರು ನನ್ನನ್ನು ಬಾಬು ರೈಟರ್ ಎಂದೇ ಗುರುತಿಸುತ್ತಿದ್ದಾರೆ. ನಾನು ಐವತ್ತೆಂಟನೇ ವಯಸ್ಸಿಗೇ ಕರ್ಕಿಕೊಂಡ ತೋಟದ ಹುದ್ದೆಯಿಂದ ನಿವೃತ್ತನಾದೆ. ನಮ್ಮ ಊರಿಗೆ ಹೋಗಿ ಸ್ವಲ್ಪ ಕಾಲ ಇದ್ದೆ. ನನ್ನ ಊರಿನಲ್ಲಿ ನನಗೆ ಸ್ವಂತ ಮನೆ ಮತ್ತು ಸ್ವಲ್ಪ ಆಸ್ತಿ ಇದ್ದರೂ, ಅಲ್ಲಿ ನನಗೆ ಸಮಯ ಕಳೆಯುವುದೇ ಕಷ್ಟವಾಯಿತು. ಊರಿನಲ್ಲಿ ನನ್ನ ಹೆಂಡತಿ ಮಕ್ಕಳು ನಮ್ಮ ಆಸ್ತಿ ಮತ್ತು ಮನೆ ನೋಡಿಕೊಂಡು ಇದ್ದಾರೆ. ನಾನು ಘಟ್ಟದಲ್ಲಿ ಕೆಲಸಕ್ಕಿದ್ದಾಗ ನನ್ನ ಹೆಂಡತಿ ಊರಿನ ಆಸ್ತಿಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಳು. ನಮ್ಮ ಮಕ್ಕಳೂ ಅಲ್ಲೇ ಶಾಲೆಗೆ ಹೋಗುತ್ತಿದ್ದರು. ಈಗ ಮಕ್ಕಳೆಲ್ಲಾ ಸಂಸಾರಸ್ಥರಾಗಿ ಊರಲ್ಲೇ ಇದ್ದಾರೆ. ನಾನು ದೊರೆಗಳ ತೋಟದಲ್ಲಿ ಕೆಲಸಕ್ಕೆ ಇದ್ದಾಗ, ಆಗಾಗ ಊರಿಗೆ ಹೋಗಿ ಬರುತ್ತಿದ್ದೆ. ಬೇಸಿಗೆಯ ಒಂದು ತಿಂಗಳು ರಜಾದಲ್ಲಿ (ಈ ಬೇಸಿಗೆಯ ರಜೆಗೆ ಕಾಫಿತೋಟದ ಭಾಷೆಯಲ್ಲಿ ಸಮ್ಮರ್ ಫರ್ಲೋ ಎಂಬ ಹೆಸರಿತ್ತು) ನಮ್ಮ ಊರಿನಲ್ಲೇ ಇರುತ್ತಿದ್ದೆ. ಏನು ಮಾಡಲಿ ಸಾರ್! ನನಗೆ ಈ ಘಟ್ಟದ ಕಾಫಿಯ ತೋಟದ ವಾತಾವರಣವೇ ರೂಢಿ ಆಗಿಬಿಟ್ಟಿದೆ. ಈಗ ನನಗೆ ೬೫ನೇ ವರ್ಷ ನಡೆಯುತ್ತಾ ಇದೆ. ಇನ್ನೂ ಕೈಕಾಲು ಗಟ್ಟಿ ಇದೆ, ಕಣ್ಣುಗಳು ಚುರುಕಾಗಿ ಇವೆ. ನನಗೆ ಹನ್ನೊಂದು ತಿಂಗಳ ಕಾಂಟ್ರಾಕ್ಟ್ ಮೇಲೆ ನಿಮ್ಮಲ್ಲಿ ಫೀಲ್ಡ್‌ರೈಟರ್ ಕೆಲಸ ಕೊಟ್ಟರೆ ಬಹಳ ಉಪಕಾರ ಇತ್ತು. ತಮಗೆ ನನ್ನ ಕೆಲಸ ಹಿಡಿಸದಿದ್ದ ಪಕ್ಷದಲ್ಲಿ, ನನಗೆ ಒಂದು ಮಾತು ಹೇಳಿ, ನಾನು ಯಾವ ತಕರಾರೂ ಮಾಡದೇ ನನ್ನ ಊರಿಗೆ ಹೊರಟು ಹೋಗುತ್ತೇನೆ. ನನಗೆ ಒಂದು ಚಾನ್ಸ್ ಕೊಟ್ಟು ನೋಡಿ..!ಎಂದು ನಮ್ಮ ಮಾತೃಭಾಷೆಯಾದ ತುಳುವಿನಲ್ಲಿ ಹೇಳಿದರು.  ನಮ್ಮಲ್ಲಿ ಕೆಲಸ ಮಾಡುತ್ತಿದ್ದ ಸೀನಿಯರ್ ಫೀಲ್ಡ್‌ರೈಟರ್ ಅದೇವರ್ಷ ರಿಟೈರ್ ಆದ ವಿಷಯ ಕೇಳಿಕೊಂಡೇ, ಈ ಬಾಬುರೈಟರ್ ನಮ್ಮಲ್ಲಿಗೆ ಕೆಲಸ ಕೇಳಿಕೊಂಡು ಬಂದಂತೆ ಇತ್ತು! ಬಾಬು ರೈಟರೇ ನೀವು ಈಗ ಒಂದು ಕೆಲಸ ಮಾಡಿ. ನೀವು ನಮ್ಮ ತೋಟ ಒಮ್ಮೆ ಸುತ್ತಾಡಿ ಬನ್ನಿ. ನಿಮ್ಮ ಜತೆಗೆ ನಮ್ಮ ವಾಚ್‌ನ್ಯಾನ್ ಕಿಸಾನ್ ಬಹಾದೂರ್ ಗೂರ್ಖಾನನ್ನು ಕಳುಹಿಸುತ್ತೇನೆ ಎಂದು ಅವರನ್ನು ನಮ್ಮ ತೋಟ ತಿರುಗಿ ಬರಲು ಕಳುಹಿಸಿದೆ.

ಅವರು ತೋಟ ತಿರುಗಾಡಿ ಬರಲು ಹೋದೊಡನೆ, ಮೊದಲು ಟೆಲಿಫೋನ್ ಸರಿ ಇದೆಯೋ ನೋಡಿಕೊಂಡೆ. ಸರಿಯಿತ್ತು..! ನಮ್ಮ ಕಳಸಾ ಟೆಲಿಫೋನ್ ಎಕ್ಸ್‌ಚೇಂಜ್ ಆಪರೇಟರಿಗೆ ಫೋನ್‌ಮಾಡಿ ದಯವಿಟ್ಟು ಕೊಪ್ಪಾ ಎಕ್ಸ್‌ಚೇಂಜಿನ ಪರಿಧಿಯಲ್ಲಿ ಇರುವ ಕರ್ಕಿಕೊಂಡ ಕಾಫಿತೋಟದ ಮ್ಯಾನೇಜರಿಗೆ ಅರ್ಜೆಂಟ್ ಪಿ.ಪಿ. ಕಾಲ್ ಬುಕ್‌ಮಾಡಿ ಎಂದು ಕೇಳಿಕೊಂಡೆ. ನನ್ನ ಅದೃಷ್ಟಕ್ಕೆ ಕೂಡಲೇ ಸಂಪರ್ಕ ಸಿಕ್ಕಿತು. ಕರ್ಕಿಕೊಂಡ ತೋಟದ ಮ್ಯಾನೇಜರ್ ಸಾಹೇಬರನ್ನು ವಿಚಾರಿಸಲಾಗಿ, ಬಾಬು ರೈಟರ್ ಬಗ್ಗೆ ಅವರು ಅತ್ಯುತ್ತಮ ಶಿಫಾರಸನ್ನೇ ಕೊಟ್ಟರು. ನನ್ನ ಸುಯೋಗದಿಂದ ನಮ್ಮ ತೋಟಕ್ಕೆ ಒಳ್ಳೆಯ ಅನುಭವೀ ರೈಟರ್ ಸಿಗುವ ಅವಕಾಶ ಬಂದಿದೆ ಅಂತ ಅಂದುಕೊಂಡೆ.

ಮಧ್ಯಾಹ್ನ ಸುಮಾರು ಎರಡರ ಹೊತ್ತಿಗೆ ಬಾಬು ರೈಟರು ತೋಟ ತಿರುಗಿ ನಮ್ಮ ಬಂಗಲೆಗೆ ವಾಪಸ್ ಬಂದರು. ಮೊದಲು ಅವರನ್ನು ಊಟಮಾಡಿ ಬನ್ನಿ ಎಂತ ಒಳಗೆ ಕಳುಹಿಸಿದೆ. ನನ್ನ ಊಟ ಮಾಮೂಲಿನಂತೆ ಒಂದು ಗಂಟೆಗೆ ಆಗಿತ್ತು. ಬಾಬುರೈಟರ್ ಚುರುಕಾಗಿ ಹತ್ತು ನಿಮಿಷದೊಳಗೆ ಊಟ ಮುಗಿಸಿ ಬಂದರು. ಸರ್, ತಮ್ಮ ತೋಟದಲ್ಲಿ ಕೆಲಸ ಮಾಡಲು ಒಪ್ಪಿಗೆ ಇದೆ ಅಂದರು.

ನಾನು ಅವರೊಡನೆ ಮಾತನಾಡಿ, ಅವರ ವಾರ್ಷಿಕ ಸಂಬಳ ನಿಗದಿಪಡಿಸಿಯಾದ ಮೇಲೆ, ನಾವು ನಿಮಗೆ ಕೊಡುವ ವಾಸದ ಮನೆಯನ್ನು ನೋಡಿಕೊಂಡು ಬನ್ನಿ. ನಿಮಗೆ ಒಪ್ಪಿಗೆ ಆದರೆ ಅಗ್ರೀಮೆಂಟ್ ಬರೆಯೋಣ! ಎಂದೆ. ಕಾಫಿ ತೋಟಗಳಲ್ಲಿ ಹಿರಿಯ ರೈಟರ್ ವಾಸಿಸುವ ಮನೆಯನ್ನು ರೈಟ್ರ ಬಂಗ್ಲೆ ಎಂದು ಕರೆಯುವುದು ರೂಢಿ. ಅದೇ ರೀತಿ ತೋಟದ ಮಾಲಿಕನು ವಾಸಿಸುವ ಮನೆಯನ್ನು ಸಾಹುಕಾರರ ಬಂಗ್ಲೆ ಅನ್ನುತ್ತಾರೆ.

ವಾಸದ ಮನೆಯನ್ನು ನೋಡಿ ಬಂದ ಬಾಬು ರೈಟರು, ನಿಮ್ಮಲ್ಲಿ ನನಗೆ ನೀವು ಕೊಡುವ ರೈಟ್ರ ಬಂಗ್ಲೆ ಸಾಕಷ್ಟು ದೊಡ್ಡದಾಗೇ ಇದೆ. ಈಗ ಇಲ್ಲಿ ನಾನು ಮತ್ತು ನನ್ನ ಅಡುಗೆಯ ಆಳು ಮಾತ್ರ ಇರುವುದು. ನನಗೆ ಯಾವುದಾದರೂ ಚಿಕ್ಕಬಿಡಾರ ಕೊಟ್ಟರೂ ಸಾಕು! ಎಂದರು. ಆಗ ನಾನು, ಬಾಬು ರೈಟರೇ, ನೀವು ಆ ದೊಡ್ಡ ಮನೆಯಲ್ಲೇ ವಾಸವಾಗಿರಬೇಕಾಗುತ್ತೆ. ಯಾಕೆಂದರೆ ಆ ಮನೆಯು ನಮ್ಮ ಕಾಫಿ ಒಣಗಿಸುವ ಕಣದ ಪಕ್ಕದಲ್ಲೇ ಇದೆ. ಅಲ್ಲದೆ, ಮೊದಲಿನಿಂದಲೂ ಅದು ನಮ್ಮ ಸೀನಿಯರ್ ಫೀಲ್ಡ್‌ರೈಟರ ಮನೆ ಎಂದು ನಮ್ಮ ತೋಟದಲ್ಲಿ ಗುರುತಿಸಲ್ಪಟ್ಟಿದೆ. ಆ ದೊಡ್ಡ ಮನೆಯಲ್ಲೇ ನೀವು ವಾಸವಿದ್ದರೆ ತೋಟಕ್ಕೆ ಶೋಭೆ! ಎಂದು ಹೇಳಿದೆ. ಕೂಡಲೇ ಬಾಬು ರೈಟರು ನನ್ನ ಮಾತಿಗೆ ಒಪ್ಪಿದರು.  ಮೇ ಮೂವತ್ತೊಂದನೇ ತಾರೀಕಿಗೆ ತನ್ನ ಮನೆ ಸಾಮಾನುಗಳೊಂದಿಗೆ ಬರುವುದಾಗಿ ಹೇಳಿ ನನಗೆ ವಂದಿಸಿ ತನ್ನ ಊರಿಗೆ ಹೊರಟರು. ಮೇ ಮೂವತ್ತೊಂದನೇ ತಾರೀಕು ಬಾಬು ರೈಟರ್ ಬಂದು ನಮ್ಮ ತೋಟದ ರೈಟ್ರ ಬಂಗ್ಲೆಯಲ್ಲಿ ನೆಲಸಿದರು.

ಜೂನ್ ಒಂದನೇ ತಾರೀಕು ಕಾಫಿತೋಟಗಳಲ್ಲಿ ಹೊಸ ಆಳುಪಟ್ಟಿಯ ಕೆಲಸ ಶುರುವಾಯಿತು. ಬಾಬು ರೈಟರು ಖಾಕಿಚಡ್ಡಿ ಮತ್ತು ಬಣ್ಣಮಾಸಿದ ಹಸಿರು ಆಲಿವ್ ಗ್ರೀನ್ ಬಣ್ಣದ ಅರ್ಧತೋಳಿನ ಶರ್ಟು ಧರಿಸಿ, ತಲೆಗೆ ಬಣ್ಣಮಾಸಿದ ಫೀಲ್ಡ್‌ಹ್ಯಾಟ್ ತೊಟ್ಟು, ಕೈಯ್ಯಲ್ಲಿ ಫಳಫಳನೆ ಹೊಳೆಯುವ ಕಸಿಚಾಕು (ಚಿಕ್ಕಸೈಜಿನ ಕೊಕ್ಕೆಕತ್ತಿ) ಹಿಡಿದು ಬೆಳಗಿನ ಆರೂಮುಕ್ಕಾಲು ಗಂಟೆಗೇ ಬಂಗಲೆ ಹತ್ತಿರ ಬಂದರು. ಕಾಲಿನ ಮಣಿಗಂಟಿನವರೆಗೆ ಬರುವ ಡಕ್‌ಬ್ಯಾಕ್ ಕಂಪನಿಯ ಆಂಕಲ್ ಬೂಟ್ ಧರಿಸಿದ್ದರು. ಅವರ ಬೂಟಿನಲ್ಲಿ ಇದ್ದ ಕೆಸರು ನೋಡಿದರೆ, ಆಗಲೇ ಅವರು ಒಂದು ರೌಂಡ್ ತೋಟ ತಿರುಗಿ ಬಂದಂತೆ ಕಾಣುತ್ತಿತ್ತು. ನಾನು ಏಳೂಕಾಲು ಗಂಟೆಗೆ ನಡೆಯುವ ಆಳುಗಳ ಹಾಜರಿಪಟ್ಟಿ ಮಾಡುವ ಗೆಣ್ತೆ ಕಣಕ್ಕೆ ಹೊರಡಲು, ಆವರದೇ ತರಹೆಯ ಫೀಲ್ಡ್ ಡ್ರೆಸ್ ಧರಿಸಿ ಹೊರಡಲು ಆಗಷ್ಟೇ ತಯಾರಾಗುತ್ತಾ ಇದ್ದೆ. (ಬೆಳಗಿನ ಹಾಜರಿಯ ಕ್ರಮಕ್ಕೆ ಕಾಫಿತೋಟದಲ್ಲಿ ಗೆಣ್ತೆ ಅಥವಾ ಲೇಬರ್ ಮಸ್ಟರ್ ಎನ್ನುತ್ತಾರೆ.)

ಬಾಬುರೈಟರು, ಗುಡ್‌ಮಾರ್ನಿಂಗ್ ಸರ್! ಎನ್ನುತ್ತಾ ನನಗೆ ಒಂದು ಮಿಲಿಟರಿ ಸೆಲ್ಯೂಟ್ ಹೊಡೆದರು. ನಾನೂ ಅವರ ರೀತಿಯಲ್ಲೇ ಅವರಿಗೆ ಪ್ರತಿವಂದನೆ ಮಾಡಿದೆ. ತಾವು ಏಳೂಕಾಲಕ್ಕೆ ಗೆಣ್ತೆಕಣಕ್ಕೆ ಬಂದರೆ ಸಾಕು, ನಾನು ಅಷ್ಟರಲ್ಲಿ ನಮ್ಮ ಕೂಲಿ ಲೈನ್ ಬಾಗಿಲಿಗೆ ಹೋಗಿ ಆಳುಗಳನ್ನು ಕೆಲಸಕ್ಕೆ ಹೊರಡಿಸುತ್ತೇನೆ. ನನಗೆ ಯಾವಾಗಲೂ ನಮ್ಮ ತೋಟದ ಆಳುಗಳೆಲ್ಲಾ ಬಂದು ಬೆಳಗಿನ ಏಳೂಹತ್ತಕ್ಕೆ ಗೆಣ್ತೆಕಣದಲ್ಲಿ ಸಾಲಾಗಿ ನಿಂತಿರಬೇಕು. ಇದು ನನ್ನ ಸಿಸ್ಟಂ! ಎನ್ನುತ್ತಾ ನೇರವಾಗಿ ಆಳುಗಳ ವಾಸದ ಲೈನ್‌ಗಳ (ಸಾಲುಮನೆಗಳು) ಕಡೆಗೆ ನಡೆದರು.

ಕೂಲಿ ಲೈನ್‌ಗಳ ಹತ್ತಿರ ಬಾಬುರೈಟರು ಏರಿದ ಸ್ವರದಲ್ಲಿ ಆಳುಗಳನ್ನು ಕೆಲಸಕ್ಕೆ ಹೊರಡಿಸುವ ಸ್ವರ ನಮ್ಮ ಬಂಗ್ಲೆಯ ಬಾಗಿಲಿಗೆ ಕೇಳಿಸುತ್ತಿತ್ತು. ಬಾಬುರೈಟರು ಯಾಕೆ ಆರೂಮುಕ್ಕಾಲು ಗಂಟೆಗೆ ಬಂಗಲೆ ಹತ್ತಿರ ಬಂದರು? ಎಂದು ಆಲೋಚಿಸಿದಾಗ, ತೋಟದ ಪ್ಲಾಂಟರ್ ಆದ ನಾನು ಬೆಳಗಿನ ಆರೂಮುಕ್ಕಾಲು ಗಂಟೆಗೆ ಫೀಲ್ಡ್ ಡ್ರೆಸ್ ಧರಿಸಿಕೊಂಡು, ಅವರು ಬೆಳಗಿನ ಒಂದು ರೌಂಡ್ ತೋಟ ತಿರುಗಿ ಬರುವುದನ್ನು ಕಾಯುತ್ತಾ ಇರಬೇಕು! ಎಂಬ ಅವರ ಬಾಯಿ ಬಿಟ್ಟು ಹೇಳದ ಸೂಚನೆಯನ್ನು ನಾನು ಅಂದೇ ಅರ್ಥ ಮಾಡಿಕೊಂಡೆ. ಮುಂದಕ್ಕೆ ಎಂದಿಗೂ ಬಾಬುರೈಟ್ರು ಆರೂ ಮುಕ್ಕಾಲಕ್ಕೆ ನಮ್ಮ ಬಂಗಲೆ ಹತ್ತಿರ ಬರುವಾಗ, ನಾನು ಫೀಲ್ಡ್ ಡ್ರೆಸ್ ಧರಿಸಿ ದಿನದ ಕೆಲಸಕ್ಕೆ ತಯಾರಾಗಿ ಇರುತ್ತಿದ್ದೆ. ಅವರ ದೈನಂದಿನ ಸೆಲ್ಯೂಟ್ ಕಾರ್ಯಕ್ರಮ ಆದ ಮೇಲೆ ನಾನು ಏಳೂಹತ್ತರ ತನಕ ಮನೆಯ ಮುಂದಿನ ಹೂವಿನತೋಟದಲ್ಲಿ ಸುತ್ತಾಡುತ್ತಾ ಇದ್ದೆ.

ಬಾಬುರೈಟರ್ ಅವರು ಬೆಳ್ಳಂಬೆಳಗಿನ ನಸುಬೆಳಕಿನಲ್ಲೇ ಪ್ರತಿದಿನ ತೋಟ ಸುತ್ತಲು ಹೊರಡುತ್ತಿದ್ದರು. ಎಡಕೈಯ್ಯಲ್ಲಿ ಒಂದು ವಾಕಿಂಗ್ ಸ್ಟಿಕ್ ತರಹೆಯ ಬಹುಗಟ್ಟಿಯಾದ ಚಿಪ್ಪುಳು ಎಂಬ ಮರದ ಕೋಲು, ಬಲಗೈಯ್ಯಲ್ಲಿ ಅವರ ಸದಾ ಸಂಗಾತಿಯಾದ ಕಸಿ ಚಾಕು  ಹಿಡಿದು ದಾಪುಗಾಲು ಹಾಕುತ್ತಾ ಇಡೀ ತೋಟವನ್ನು ಸುತ್ತಿಬರುವುದು ಅವರ ನಿತ್ಯಹವ್ಯಾಸ. ಮಳೆಗಾಲವಾದರೆ ವಾಕಿಂಗ್ ಸ್ಟಿಕ್ ಬದಲಾಗಿ ಅವರು ಒಂದು ಸೂರ್ಯ ಮಾರ್ಕಿನ ಜೆಂಟ್ಸ್‌ಕೊಡೆ ಹಿಡಿದುಕೊಳ್ಳುತ್ತಿದ್ದರು. ಅತೀವ ಚಳಿ ಇರುವ ನಮ್ಮಲ್ಲಿಯ ಚಳಿಗಾಲದ ಸಮಯದಲ್ಲಿ ತಮ್ಮ ಫೀಲ್ಡ್ ಶರ್ಟಿನ ಒಳಗಿನಿಂದ ಉಣ್ಣೆಯ ವೆಸ್ಟ್‌ವೊಂದನ್ನು ಧರಿಸುತ್ತಿದ್ದರು. ಬಂಗಲೆ ಹತ್ತಿರ ಬರಬೇಕಾದರೆ ತಮ್ಮ ಕೈಯ ಕೋಲನ್ನು ಹೂವಿನ ಗಿಡವೊಂದಕ್ಕೆ ಒರಗಿಸಿಟ್ಟು ಬರುತ್ತಿದ್ದರು. ನನ್ನನ್ನು ಕಂಡ ಕೂಡಲೇ ಅವರ ಬಲಕೈಯ್ಯಲ್ಲಿ ಇದ್ದ ಕತ್ತಿ ಅವರ ಎಡಕೈಗೆ ರವಾನೆಯಾಗುತ್ತಿತ್ತು. ಪ್ರಸನ್ನ ಮುಖದಿಂದ ತನ್ನ ಬಲಗೈ ಎತ್ತಿ ನನಗೆ ಒಂದು ಗುಡ್ ಮಾರ್ನಿಂಗ್ ಸೆಲ್ಯೂಟ್ ಹೊಡೆಯುತ್ತಿದ್ದರು. ತಮ್ಮ ಬೆಳಗಿನ ಸುತ್ತಿನಲ್ಲಿ ವಿಶೇಷವೇನಾದರೂ ಕಂಡು ಬಂದರೆ ಅದನ್ನು ನನಗೆ ತಪ್ಪದೇ ಹೇಳುತ್ತಿದ್ದರು.

ನಾವಿಬ್ಬರೂ ದಕ್ಷಿಣಕನ್ನಡ ಜಿಲ್ಲೆಯವರೇ ಆದ್ದರಿಂದ ನಾವು ಯಾವಾಗಲೂ ಮಾತನಾಡುವಾಗ ನಮ್ಮ ಮಾತೃಭಾಷೆಯಾದ ತುಳುವಿನಲ್ಲೇ ಆತ್ಮೀಯವಾಗಿ ಮಾತನಾಡುತ್ತಿದ್ದೆವು. ನಾವು ನಮ್ಮ ಮಾತೃಭಾಷೆಯಲ್ಲಿ ಮಾತನಾಡಿದಾಗ ಮಾತ್ರ ನಮಗೆ ಹಿತ ಅನ್ನಿಸುತ್ತಿತ್ತು. ಸರ್, ಇಂತಹಾ ಪಟ್ಟೆಯಲ್ಲಿ ಒಂದು ಮರ ರಾತ್ರಿ ಮಳೆ ಮತ್ತು ಗಾಳಿಗೆ ಬಿದ್ದಿದೆ., ಇಂತಹಾ ಪಟ್ಟೆಯಲ್ಲಿ ನೀರು ಹರಿದುಹೋಗುವ ಚರಂಡಿ ತುಂಬಿ ಹರಿದು, ಕೆಲವು ಕಾಫಿಗಿಡಗಳಿಗೆ ತೊಂದರೆ ಆಗಿದೆ, ಅಥವಾ ಪಕ್ಕದ ಶಿವಣ್ಣನ ಎಮ್ಮೆಗಳು ಹಳೇತೋಟದ ಒಳಗೆ ಚಿಗುರಿದ ಹುಲ್ಲು ಮೇಯುತ್ತಾ ಇದ್ದುವು. ಅವನ್ನು ಹೊರಗೆ ಕಳುಹಿಸಿ ಗೇಟ್‌ಹಾಕಿ ಬಂದೆ.. ಅನ್ನುತ್ತಾ ಏನೋ ಒಂದು ಸುದ್ದಿ ನನಗೆ ತುಳುಭಾಷೆಯಲ್ಲಿ ಹೇಳುತ್ತಿದ್ದರು. ಏನೂ ವಿಶೇಷ ಇಲ್ಲದಿದ್ದರೆ, ಸೆಲ್ಯೂಟ್ ವಿನಿಮಯ ಆದಕೂಡಲೇ ಕೂಲಿಲೈನ್ ಕಡೆಗೆ ನಡೆದು, ಆಳುಗಳನ್ನು ಕೆಲಸಕ್ಕೆ ಹೊರಡಲು ದೊಡ್ಡಸ್ವರದಲ್ಲಿ ಕರೆಯುತ್ತಿದ್ದರು.

ದಿನವೂ ಏಳು ಗಂಟೆಗೆ ವಾಚ್‌ಮ್ಯಾನ್, ಕಣದಲ್ಲಿನ ಗಂಟೆ ಬಾರಿಸಿ ಆಳುಗಳಿಗೆ ಗೆಣ್ತೆಗೆ ಬರಲು ಸೂಚನೆ ಕೊಡುತ್ತಿದ್ದ. ಅದಕ್ಕಿಂತ ಮೊದಲೇ ಬಾಬುರೈಟ್ರ ಸುಪ್ರಭಾತ ಆಳುಗಳಿಗೆ ಆಗಿರುತ್ತಿತ್ತು. ಬಾಬು ರೈಟ್ರ ಅಭಿಪ್ರಾಯದಲ್ಲಿ ಆಳುಗಳನ್ನು ಬೇಗ ಹೋಗಿ ಎಬ್ಬಿಸದಿದ್ದರೆ, ಕೆಲವರು ಕೆಲಸಕ್ಕೆ ಬಾರದೇ ಉದಾಸೀನ ಮಾಡಿ ಗೆಣ್ತೆಗೆ ಕಡಿಮೆ ಜನ ಬರುತ್ತಾರೆ, ಹಾಜರಿ ಕಡಿಮೆ ಆದರೆ ತೋಟದ ಕೆಲಸಕ್ಕೆ ತೊಂದರೆ ಆಗುತ್ತೆ ಅಂತ ಇತ್ತು. ಇಂದಿಗೂ ಹಲವು ಜನ ಹಿರಿಯ ಪ್ಲಾಂಟರುಗಳು ಈ ಹಳೆಯ ಕಾಲದ ಕ್ರಮವನ್ನು ಅನುಮೋದಿಸಿ ಅನುಸರಿಸುತ್ತಿದ್ದಾರೆ. ಇದು ಬಾಬು ರೈಟರ ಕ್ರಮ ಎಂದು ನಾನು ತಿಳಿದುಕೊಂಡು ಈ ಬಗ್ಗೆ ಅವರನ್ನು ಎಂದಿಗೂ ಪ್ರಶ್ನಿಸಲು ಹೋಗಲಿಲ್ಲ.

ಬಾಬುರೈಟರು ಏಳೂಕಾಲಕ್ಕೆ ನಿಖರವಾಗಿ ಹಾಜರಿ ಬರೆದುಕೊಂಡು, ಅವರು ಸೂಚಿಸಿದ ಕೆಲಸಕ್ಕೆ ಜನಗಳನ್ನು ಮೇಸ್ತ್ರಿ ಅಥವಾ ಸೂಪರ್ವೈಜರ್‌ಗಳ ಜತೆಗೆ ಕೆಲಸಕ್ಕೆ ಕಳುಹಿಸುತ್ತಿದ್ದರು. ಬಾಬುರೈಟರು ಗೆಣ್ತೆಗೆ ತಡವಾಗಿ ಬಂದ ಆಳುಗಳನ್ನು ತಡವಾಗಿ ಬಂದುದಕ್ಕೆ ಚೆನ್ನಾಗಿ ಗದರಿ, ಅವರರವರ ಮನೆಗೇ ವಾಪಾಸ್ ಕಳುಹಿಸಿ, ಅವರಿಗೆ ಆದಿನದ ಹಾಜರಿ ಇಲ್ಲದಂತೆ ಮಾಡುತ್ತಿದ್ದುದರಿಂದ ನಮ್ಮಲ್ಲಿ ಆಳುಗಳು ತಡವಾಗಿ ಗೆಣ್ತೆಗೆ ಬಂದು ಹಲ್ಲುಕಿರಿಯುತ್ತಾ, ಆದಿನದ ಕೆಲಸಕ್ಕೆ ಸೇರಿಸಿಕೊಳ್ಳಿ ಎನ್ನುವ ಹಳೆಯ ಪರಿಪಾಠ ನಿಂತೇಹೋಯ್ತು.

ಬಾಬುರೈಟರಿಗೆ ತೋಟದ ಕೆಲಸದ ಮಟ್ಟಿಗೆ ಚೆನ್ನಾಗಿ ಅನುಭವವಿತ್ತು. ಅವರು ಮಾಡಿಸುತ್ತಿದ್ದ ಎಲ್ಲಾ ಕೆಲಸಗಳಲ್ಲೂ ಒಪ್ಪ ಓರಣ ಎದ್ದು ಕಾಣಿಸುತ್ತಿತ್ತು. ಜನಗಳಿಗೆ ಕೆಲಸದ ವೇಳೆ ಒಮ್ಮೆ ಗದರಿದರೂ, ಅವರಿಗೆ ನಮ್ಮ ತೋಟದ ಆಳುಗಳ ಮೇಲೆ ಪ್ರೀತಿ ಇತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಅವರಲ್ಲಿ ಶಿಸ್ತು ಎದ್ದುಕಾಣುತ್ತಿತ್ತು. ದೊರೆ ತೋಟದಲ್ಲಿ ಕೆಲಸ ಮಾಡಿದ್ದರಿಂದ ಸಮಯ ಪರಿಪಾಲನೆ ಮಾಡುವ ಅಭ್ಯಾಸ ಅವರಿಗೆ ಮೈಗೂಡಿತ್ತು. ತೋಟದಲ್ಲಿ ಆಗಬೇಕಾದ ಕೆಲಸಗಳನ್ನು ಕ್ಲಿಪ್ತ ಸಮಯದಲ್ಲಿ ಮಾಡಿಸುತ್ತಿದ್ದರು. ೬೫ ವಯಸ್ಸಿನ ವೃದ್ಧರಾದರೂ ಹದಿಹರೆಯದವರನ್ನು ನಾಚಿಸುವ ಹುಮ್ಮಸ್ಸು ಹಾಗೂ ಲವಲವಿಕೆ ಬಾಬುರೈಟರಲ್ಲಿ ಇತ್ತು.

ನಮ್ಮ ಬಾಬುರೈಟರ ಕೆಲವು ಮಾತುಗಳನ್ನು ನಾನು ಮರೆಯಲಾರೆ. ಅವರು ನನ್ನೊಡನೆ ಯಾವಾಗಲೂ ತುಳುಭಾಷೆಯಲ್ಲೇ ಮಾತನಾಡುತ್ತಿದ್ದರು. ಮಾತಿನ ಮಧ್ಯೆ ಆಗಾಗ ಸೈಯ್ಯಡ್ ತುಕಾ ಮಣ್ಣ್ ಪಾಡಡ್! ಎನ್ನುವ ಅಭ್ಯಾಸ ಅವರಿಗೆತ್ತು. ಈ ವಾಕ್ಯದ ಅರ್ಥ ಸಾಯಲಿ ನೋಡೋಣ! ಇಷ್ಟು ಮಣ್ಣು ಹಾಕ..! ಎಂದು. ಅವರು ಈ ವಾಕ್ಯವನ್ನು ಒಂದುಸಲ ಅರಿವಿಲ್ಲದೇ ನನ್ನ ಮೇಲೆ ಪ್ರಯೋಗಿಸಿ ಮುಜುಗರಕ್ಕೆ ಸಿಲುಕಿದ ಸಂದರ್ಭ ನನಗೆ ನೆನಪಾಗುತ್ತಿದೆ.

ಒಂದುದಿನ ಹಾಸನ ಬೇಲೂರು ರಸ್ತೆಯ ಮೇಲೆ ಬೆಂಗಳೂರಿನಿಂದ ನಮ್ಮ ತೋಟಕ್ಕೆ ಹೊರಟೆ. ಹಾಸನದ ಪೇಟೆಯಲ್ಲಿ ನನ್ನ ಕಾಲೇಜ್ ಸಹಪಾಠಿಯೊಬ್ಬ ಅನಾಮತ್ತಾಗಿ ಸಿಕ್ಕಿಬಿಟ್ಟ. ಹಾಸನದ ಕಲ್ಯಾಣಮಂದಿರವೊಂದರಲ್ಲಿ ಆತನ ತಂಗಿಯ ಮದುವೆ ಅದೇದಿನ ಸಾಯಂಕಾಲ ಇತ್ತು. ಆತನ ಒತ್ತಾಯಕ್ಕೆ ಮಣಿದು ಮದುವೆಯ ಮುಹೂರ್ತಕ್ಕೆ ನಿಂತು, ರಾತ್ರಿಯ ಊಟ ಅಲ್ಲೇ ಮುಗಿಸಿ ತೋಟಕ್ಕೆ ಹೊರಟು ಬಂದೆ. ಮನೆ ಮುಟ್ಟಿದಾಗ ರಾತ್ರಿ ಮೂರು ಗಂಟೆ ಆಗಿತ್ತು. ತುಂಬಾ ಸುಸ್ತಾಗಿದ್ದರಿಂದ ಬೆಳಗ್ಗೆ ಏಳುವಾಗ ಗಂಟೆ ಎಂಟಾಗಿತ್ತು. ಬಾಬುರೈಟರು ಬೆಳಗಿನ ಗೆಣ್ತೆ ಪೂರೈಸಿ ಆಳುಗಳನ್ನು ಆ ದಿನದ ಕೆಲಸಗಳಿಗೆ ಹಚ್ಚಿ, ಪ್ರತಿದಿನ ಸಾಧಾರಣ ಒಂಬತ್ತು ಗಂಟೆಗೆ ಅವರ ಮನೆಗೆ ಬೆಳಗಿನ ಗಂಜಿ ಊಟಕ್ಕೆ ಬರುತ್ತಿದ್ದರು. ಅವರಿಗೆ ಬೆಳಗಿನ ಹೊತ್ತು ತಿಂಡಿ ತಿನ್ನುವ ಅಭ್ಯಾಸವಿರಲಿಲ್ಲ. ಬೆಳಗಿನ ಹೊತ್ತು ದಕ್ಷಿಣಕನ್ನಡದ ಗ್ರಾಮೀಣ ಜನರ ಪದ್ಧತಿಯಂತೆ ಕುಚ್ಚಿಲು ಅಕ್ಕಿಯ ಗಂಜಿ ಊಟಮಾಡಲು ತಮ್ಮ ಮನೆಗೆ ಬರುತ್ತಿದ್ದರು. ಕುಚ್ಚಿಲಕ್ಕಿಯ ಗಂಜಿಯ ಊಟ ಅಂದರೆ, ಬಾಯಿಲ್ಡ್ ರೈಸ್ ಅಥವಾ ಕುಸುಬಲು ಅಕ್ಕಿಯ ನೀರಿನ ಅಂಶ ಬಸಿಯದ ಅನ್ನದ ಊಟ. ಗಂಜಿಯ ಜತೆಗೆ ಉಪ್ಪಿನಕಾಯಿಯೋ ಅಥವಾ ಇನ್ನಾವುದಾದರೂ ವ್ಯಂಜನದೊಂದಿಗೆ ನಾವು ಊಟ ಮಾಡುತ್ತೇವೆ. ಬಿಸಿಲಿನಲ್ಲಿ ಕೆಲಸಮಾಡುವ ಜನರಿಗೆ ಈ ಊಟ ತುಂಬಾ ಹಿತವಾಗಿರುತ್ತದೆ.

ಬಾಬುರೈಟರು ಬೆಳಗ್ಗೆಯೇ ನನ್ನ ಕಾರು ನೋಡಿದ್ದರು, ಆದ್ದರಿಂದ ಬೆಳಗಿನ ಒಂಬತ್ತೂವರೆಗೆ ನನ್ನನ್ನು ಕಾಣಲು ಬಂಗಲೆಗೆ ಬಂದಿದ್ದರು. ಸರ್! ನೀವು ಬರುವಾಗ ಬೆಳಗಿನ ಜಾವ ಆಗಿತ್ತು ಅಂತ ಗೊತ್ತಾಯಿತು, ಹಾಗಾಗಿ ಸ್ವಲ್ಪ ಮಲಗಿ ಸಾಯಲಿ ನೋಡೋಣ! ಇಷ್ಟು ಮಣ್ಣು ಹಾಕ! ಎಂದು ತಮ್ಮನ್ನು ಎಬ್ಬಿಸಲಿಲ್ಲ ಎಂದು ನಮ್ಮ ತುಳುಭಾಷೆಯಲ್ಲಿ ಅವರ ಅಭ್ಯಾಸದ ಪ್ರಕಾರ ಹೇಳಿಬಿಟ್ಟರು. ನಾನು ಉಕ್ಕಿಬರುವ ನಗು ತಡೆಯಲಾರದೇ, ಹೌದು! ಬಾಬುರೈಟರೇ! ತಾವು ಬಹಳ ಒಳ್ಳೆಯ ಕೆಲಸ ಮಾಡಿದಿರಿ.. ಎಂದು ಉತ್ತರಿಸಿದೆ!

ಕೂಡಲೇ ಬಾಬುರೈಟರಿಗೆ ತನ್ನ ತಪ್ಪಿನ ಅರಿವಾಯಿತು! ಒಮ್ಮೆಗೇ ಬೆಚ್ಚಿಬಿದ್ದರು! ಕೂಡಲೇ ತನ್ನ ತಲೆಯ ಹ್ಯಾಟ್ ಮತ್ತು ಕೈಯ್ಯಲ್ಲಿನ ಕತ್ತಿ ಬದಿಗೆ ತೆಗೆದಿಟ್ಟು ನನ್ನಿಂದ ದೊಡ್ಡ ಅಪರಾಧ ಆಯಿತು ಸರ್, ಕ್ಷಮಿಸಬೇಕು! ಎನ್ನುತ್ತಾ ನನ್ನ ಕಾಲು ಹಿಡಿಯಲು ಬಗ್ಗಲು ಶುರು ಮಾಡಿದರು. ನಾನು ಕೂಡಲೇ ಅವರ ಭುಜಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಬಾಬು ರೈಟರೇ, ನಾನು ತಮ್ಮ ಮಕ್ಕಳಿಗಿಂತಲೂ ಚಿಕ್ಕವನು! ನೀವು ಕ್ಷಮೆ ಕೇಳುವಂತಹಾ ತಪ್ಪೇನೂ ಮಾಡಲಿಲ್ಲ. ಈಗ ಬಿಟ್ಟುಬಿಡಿ ಆ ವಿಚಾರವನ್ನು! ಅದಕ್ಕೆ ಸ್ವಲ್ಪ ಮಣ್ಣು ಹಾಕಿತು! ಈಗ ನೀವು ಒಮ್ಮೆ ದೊರೆತೋಟದ ರೈಟ್ರುಗಳಂತೆ ‘Sorry’ ಹೇಳಿದರೆ ಈ ಪ್ರಕರಣಕ್ಕೆ ತೆರೆ ಬೀಳುತ್ತೆ!ಎಂದೆ.

ಬಾಬುರೈಟರು ಅದು ಇಂಗ್ಲಿಷ್‌ನವರ ಸ್ಸಾರಿ ಹತ್ತು ಖೂನಿ ಮಾಡಿದರೂ ಒಮ್ಮೆ ಸ್ಸಾರಿ ಸರ್! ಅಂತ ಹೇಳಿಬಿಟ್ಟರೆ ಅವರಲ್ಲಿ ಮಾಫಿ ಸಿಗುತ್ತೆ! ಅವರ ಸ್ಸಾರಿಗೆ ಒಂದಿಷ್ಟು ಪೂರಿ! ಎಂದರು. ನಾನು ಅವರನ್ನು ಮನೆಯೊಳಗೆ ಕರೆದು ಒಂದು ನಿಮಿಷ ಕುಳಿತುಕೊಳ್ಳಿ ಎಂದು ಕುರ್ಚಿ ತೋರಿಸುತ್ತಾ ಬಾಬುರೈಟರೇ, ಇಂದು ನನ್ನ ಜತೆಗೆ ಒಂದು ಲೋಟ ಕಾಫಿ ಕುಡಿಯಿರಿ ಎಂದೆ. ಅಡುಗೆಯವರು ಕಾಫಿ ತಂದುಕೊಟ್ಟರು. ನಾವು ಕಾಫಿ ಕುಡಿಯುತ್ತಾ ಇದ್ದಾಗ, ನಾನು ನಮ್ಮ ಅಡುಗೆಯವರಿಗೆ ಸಾಯಂಕಾಲ ಐದು ಗಂಟೆಗೆ ಸ್ವಲ್ಪ ಪೂರಿ ತಯಾರಿಸಿ, ಬಾಬುರೈಟರು ಇಂದು ಸಂಜೆ ಐದು ಗಂಟೆಗೆ ನಮ್ಮ ಬಂಗಲೆಗೆ ತಿಂಡಿಗೆ ಬರುತ್ತಾರೆ ಎಂದು ಹೇಳಿದೆ. ಅಂದು ಸಾಯಂಕಾಲ ನಾನು ಮತ್ತು ಬಾಬುರೈಟರ್ ಜತೆಗೆ ಕುಳಿತು ತಿಂಡಿ ತಿಂದೆವು. ನಾನು ನಾಲ್ಕಾರು ಪೂರಿ ಹೊಟ್ಟೆ ತುಂಬಾ ತಿಂದರೆ, ಬಾಬುರೈಟರು ತಮ್ಮ ಲಿಮಿಟ್ ಪ್ರಕಾರ ಎರಡು ಪೂರಿ ಬಡಿಸಿದ ಕೂಡಲೇ ಸಾಕು ಎಂದರು. ಬಾಬುರೈಟರ ಊಟತಿಂಡಿ ಬಹು ಸೂಕ್ಷ್ಮ. ಕೃಶಕಾಯದ ಅವರು ಬಾಯಿರುಚಿಗೆ ಬಲಿಯಾಗಿ ಹೆಚ್ಚಿಗೆ ತಿಂದುದನ್ನು ನಾನು ಎಂದಿಗೂ ಕಾಣಲಿಲ್ಲ. ಅಂತೂ ಅವರ Sorryಗೆ ಪ್ರತಿಯಾಗಿ ನಾನು ಅವರಿಗೆ ಪೂರಿ ತಿನ್ನಿಸಿ ಸಂತೋಷಪಟ್ಟೆ.

ಪ್ರಾಯ ಅರುವತ್ತೈದು ದಾಟಿದ್ದರೂ ಬಾಬುರೈಟರದು ಚಟುವಟಿಕೆ ತುಂಬಿದ ಜೀವ. ಅವರು ಎಂದೂ ಸಾಯಂಕಾಲ ಹೊತ್ತು ಇತರ ಸಿಬ್ಬಂದಿಯವರಂತೆ ಬಾಳೆಹೊಳೆಯ ಕಡೆಗೆ ತಿರುಗಾಡಲು ಹೋಗುತ್ತಿರಲಿಲ್ಲ. ದಿನನಿತ್ಯದಲ್ಲಿ ನಮ್ಮ ತೋಟದ ಕೆಲಸಗಳು ಸಾಯಂಕಾಲದ ಮೂರುವರೆಗೆ ಮುಗಿಯುತ್ತಿದ್ದುವು. ಬೆಳಗಿನ ಹಾಜರಿ ಹಾಕಿದ ಮೇಲೆ ಆಳುಗಳು ಏಳೂವರೆಗೆ ಕೆಲಸ ಶುರುಮಾಡಿದರೆ, ಮಧ್ಯಾಹ್ನ ಹನ್ನೆರಡೂವರೆಗೆ ಬುತ್ತಿಬಿಚ್ಚಿ ಊಟ ಮಾಡುತ್ತಿದ್ದರು. ಊಟಮಾಡಿ ಒಂದು ಗಂಟೆಗೆ ಕೆಲಸ ಶುರುಮಾಡಿದರೆ, ನಾವು ಮೂರೂವರೆ ಗಂಟೆಗೆ ಅವರ ಕೆಲಸ ಕೈ ಬಿಡುತ್ತಿದ್ದೆವು.

ಬಾಬುರೈಟರು ತೋಟದ ಆಫೀಸಿಗೆ ಹೋಗಿ ಆಫೀಸ್‌ರೈಟರ ಹತ್ತಿರ ದಿನದ ಕೆಲಸದ ವಿವರಗಳನ್ನು ಪುಸ್ತಕಗಳಲ್ಲಿ ಬರೆಸಿ ತಮ್ಮ ಮನೆಗೆ ಹೋಗಿ, ಪುನಃ ಐದುಗಂಟೆಯ ಹೊತ್ತಿಗೆ ಒಬ್ಬನೇ ತೋಟ ಸುತ್ತಲು ಹೊರಟರೆ ಸಾಯಂಕಾಲ ಸೂರ್ಯಾಸ್ತದ ವೇಳೆಗೆ ಬಂಗಲೆಗೆ ಬರುತ್ತಿದ್ದರು. ನಮ್ಮ ದಿನದ ಪೇಪರ್ ಪ್ರಜಾವಾಣಿ ಸಾಯಂಕಾಲ ನಾಲ್ಕೂವರೆಗೆ ಬಂದು ತಲುಪುತ್ತಿತ್ತು. ಅದರ ಜತೆಗೇ ಹಿಂದಿನ ದಿನದ ಹಿಂದೂ ಇಂಗ್ಲೀಷ್‌ದೈನಿಕ ದಿನದ ಟಪಾಲಿನಜತೆಗೆ ಬರುತ್ತಿತ್ತು. ದಿನವೂ ಟಪಾಲು ಮತ್ತು ಪೇಪರ್ ನಮ್ಮ ಟಪಾಲಿನ ಆಳು ತರುತ್ತಿದ್ದ. ಬಾಬುರೈಟರು ತೋಟದ ರಜಾದಿನಗಳಲ್ಲಿ ಹಾಗೂ ಭಾನುವಾರದ ರಜಾದಿನದಂದು ಕೂಡಾ ನಮ್ಮ ತೋಟವನ್ನು ಮೂರ್ನಾಲ್ಕು ಸುತ್ತು ತಿರುಗಿಯೇ ತಿರುಗುತ್ತಿದ್ದರು. ಇದು ಅವರ ರೀತಿ ಆಗಿತ್ತು. ನಾನು ಬಾಬುರೈಟರ್ ಸಾಯಂಕಾಲ ಹೊತ್ತು ತೋಟ ಸುತ್ತಿ ಬಂಗ್ಲೆಗೆ ಬರುವಷ್ಟರಲ್ಲಿ, ಆದಿನದ ಪೇಪರುಗಳ ಮೇಲೆ ಕಣ್ಣಾಡಿಸಿ ಮುಗಿಸುತ್ತಿದ್ದೆ. ಬಾಬು ರೈಟರು ಪ್ರತಿದಿನವೂ ಪೇಪರ್‌ಗಳನ್ನು ಓದಿ, ಏಳೂಕಾಲು ಗಂಟೆಯ ಹೊತ್ತಿಗೆ ತಪ್ಪದೇ ನನ್ನನ್ನು ಬಂಗ್ಲೆಯ ನನ್ನ ಸ್ವಂತ ಆಫೀಸ್‌ರೂಮಿಗೆ ಬಂದು ಕಾಣುತ್ತಿದ್ದರು. ಹತ್ತುನಿಮಿಷದ ಅವಧಿಯಲ್ಲಿ ಅಂದಿನ ದಿನದ ಕೆಲಸದ ವಿವರ ಮೊದಲು ತಿಳಿಸಿ, ನಾವು ಮರುದಿನ ಮಾಡಿಸಬೇಕೆಂದಿರುವ ಕೆಲಸದ ವಿವರಗಳನ್ನು ಹೇಳುತ್ತಿದ್ದರು. ನಾನು ಏನಾದರೂ ಅಗತ್ಯವಾಗಿ ಆಗಬೇಕಾದ ಕೆಲಸ ಸೂಚಿಸಿದರೆ, ಆ ಕೆಲಸದ ವಿವರಗಳನ್ನು ತನ್ನ ಪಾಕೆಟ್ ಡೈರಿಯಲ್ಲಿ ಬರೆದುಕೊಂಡು, ಏಳೂವರೆಗೆ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದರು.

ಇತ್ತೀಚೆಗೆ ತೋಟಗಳಲ್ಲಿ ರೈಟರುಗಳು ತಮಗೆ ಓಡಾಡಲು ಸುಲಭವಾಗುತ್ತದೆ ಎಂಬ ಉದ್ದೇಶದಿಂದ ಆಳುಗಳನ್ನು ಒಂದು ಅಥವಾ ಎರಡು ಕಡೆಗಳಲ್ಲಿ ಮಾತ್ರ ಕೆಲಸಕ್ಕೆ ಹಚ್ಚುತ್ತಾರೆ. ಆದರೆ, ನಮ್ಮ ಬಾಬುರೈಟರು ಎಲ್ಲೆಲ್ಲಿ ಕೆಲಸ ಇರುತ್ತೆಯೋ ಎಂಬುದನ್ನು ಮೊದಲೇ ನಿರ್ಧರಿಸಿ, ಒಬ್ಬ ಮೇಸ್ತ್ರಿ ಅಥವಾ ಜೂನಿಯರ್ ಸುಪರ್ವೈಜರ್ ಸುಪರ್ದಿಯಲ್ಲಿ ನಮ್ಮ ಜನಗಳನ್ನು ತೋಟದ ನಾಲ್ಕಾರು ಕಡೆಗಳಲ್ಲಿ ಕೆಲಸಕ್ಕೆ ಹಚ್ಚುತ್ತಿದ್ದರು. ಅವರು ದಿನದ ಕೆಲಸ ನಡೆಯುತ್ತಿರುವ ಸಮಯ ಆ ಎಲ್ಲಾ ಜಾಗಗಳಿಗೂ ನಾಲ್ಕಾರು ಸಲ ಭೆಟ್ಟಿಯಿತ್ತು ಆ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಬಾಬುರೈಟರಿಗೆ ತೋಟದಲ್ಲಿ ನಡೆದುಕೊಂಡು ತಿರುಗಲು ಬೇಸರವೇ ಇರಲಿಲ್ಲ. ಅವರ ಹಗುರವಾದ ಮೈ ಈ ತರಹದ ನಿರಂತರ ಓಡಾಟಕ್ಕೆ ಸಹಾಯಕವಾಗಿತ್ತು. ಅರುವತ್ತೈದು ವರ್ಷ ಪ್ರಾಯದ ಬಾಬುರೈಟರ ಜತೆಯಲ್ಲಿ, ಅವರಿಗೆ ಸರಿಸಮವಾದ ವೇಗದಲ್ಲಿ, ತೋಟದಲ್ಲಿ ನಡೆದು ತಿರುಗಲು ಮೂವತ್ತೈದುವರ್ಷ ಪ್ರಾಯದ ನನಗೆ ತುಂಬಾ ಕಷ್ಟ ಎನಿಸುತ್ತಿತ್ತು. ತೋಟದಲ್ಲಿ ಬಾಬುರೈಟರು ಎಲ್ಲಾದರೂ ಭೆಟ್ಟಿಯಾದರೆ, ಬಾಬು ರೈಟರೇ, ನೀವು ಮುಂದಿನಿಂದ ಹೋಗಿ, ನಾನು ನಿಧಾನವಾಗಿ ನಿಮ್ಮ ಹಿಂದೆ ಬರುತ್ತೇನೆ! ಅನ್ನುತ್ತಿದ್ದೆ.

ಬಾಬುರೈಟರು ಕೆಲಸ ನಡೆಯುವಲ್ಲಿ ಇದ್ದಾಗ ದೊಡ್ಡ ದನಿ ತೆಗೆದು ಆಳುಗಳ ತಪ್ಪುಗಳನ್ನು ತೋರಿಸುತ್ತಾ, ಸರಿಯಾದ ರೀತಿಯಲ್ಲಿ ಕೆಲಸ ಮಾಡಿಸುತ್ತಿದ್ದರು. ಅವರ ಕಂಚಿನ ಕಂಠದ ಸ್ವರ ಕೇಳಿಯೇ ನಾವು ಬಾಬುರೈಟರು ಇರುವ ಜಾಗವನ್ನು ಪತ್ತೆಹಚ್ಚುತ್ತಿದ್ದೆವು. ನಾನು ಬೆಂಗಳೂರಿನಲ್ಲಿ ಮೊಕ್ಕಾಂ ಇದ್ದಾಗ ಬಾಬುರೈಟರು ಪ್ರತೀ ದಿನದ ಕೆಲಸದ ವಿವರಗಳನ್ನು ವಿವರವಾಗಿ ಬರೆದು ನನಗೆ ಡೈಲೀ ರಿಪೋರ್ಟ್ ಕಳುಹಿಸುತ್ತಿದ್ದರು. ಆ ರಿಪೋರ್ಟ್‌ಗಳು ನನಗೆ ಎರಡುದಿನ ಬಿಟ್ಟು ಕ್ಲಿಪ್ತವಾಗಿ ಟಪಾಲಿನಲ್ಲಿ ಬರುತ್ತಿದ್ದುವು. ಕಾಫಿಹಣ್ಣಿನ ಸಮಯ ಬಾಬುರೈಟರು ರಾತ್ರಿಹೊತ್ತು ಕೈಯ್ಯಲ್ಲಿ ಟಾರ್ಚು ಹಿಡಿದು ಇಡೀ ತೋಟ ಸುತ್ತಿಬರುತ್ತಿದ್ದರು. ಅವರು ರಾತ್ರಿ ತೋಟ ಸುತ್ತಿ ಬರುವ ಸಮಯ ಪ್ರತಿದಿನವೂ ಬದಲಾಗುತ್ತಿತ್ತು. ಬಾಬುರೈಟರ್ ಅವರ ರೌಂಡ್‌ಗಳ ಸಮಯ ಬದಲಾಗುತ್ತಾ ಇರುವುದರಿಂದ ಕಾಫಿಯ ಹಣ್ಣಿನ ಸಮಯ ಕಾವಲಿಗೆ ಬಿಟ್ಟ ಆಳುಗಳು ನಿದ್ರೆಮಾಡುವಂತೆ ಇರಲಿಲ್ಲ.

ರಾತ್ರಿಯ ಹೊತ್ತು ಕೃತಕಮಳೆ ನೀಡುವ ಸ್ಪ್ರಿಂಕ್ಲರ್ ಪೈಪ್‌ಗಳನ್ನು ಜೋಡಿಸುವ ಆಳುಗಳಿಗೂ ಅವರ ಗಸ್ತಿನ ಸಮಯದ ಅಂದಾಜು ಆಗದೇ ಇರುವುದರಿಂದ, ಅವರು ತೋಟದಲ್ಲಿ ನಿದ್ರಿಸದೇ ಸರಿಯಾಗಿ ಡ್ಯೂಟಿ ಮಾಡುತ್ತಿದ್ದರು.

ಬಾಬುರೈಟರು ಡ್ಯೂಟಿಯ ಸಮಯ ಆಳುಗಳನ್ನು ನಿರ್ದಾಕ್ಷಿಣ್ಯವಾಗಿ ದುಡಿಸುತ್ತಿದ್ದರು. ಆದರೆ ಅವರು ಸದಾ ಆಳುಗಳ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದರು. ಆಳುಗಳೂ ಅಷ್ಟೇ, ಬಾಬುರೈಟರಿಗೆ ತುಂಬಾ ಮರ್ಯಾದೆ ಕೊಡುತ್ತಿದ್ದರು.

ಬಾಬುರೈಟರಿಗೆ ಆಳುಗಳಲ್ಲಿ ಇಸ್ಪೀಟಾಟ ಆಡುವವರನ್ನು ಅಂದರೆ ಜುಗಾರಿಕೋರರನ್ನು ಮತ್ತು ಕುಡುಕರನ್ನು ಕಂಡರೆ ಆಗುತ್ತಿರಲಿಲ್ಲ. ರಾತ್ರಿ ಆಳುಗಳು ಕೆಲವೊಮ್ಮ ತಮ್ಮ ವಾಸದ ಲೈನಿನಲ್ಲಿ ಇಸ್ಪೀಟಾಟ ಆಡುವ ಸುದ್ದಿ ಗೊತ್ತಾದರೆ ಬಾಬುರೈಟರು ಅವರ ಲೈನಿಗೆ ತಾನೊಬ್ಬನೇ ನುಗ್ಗಿ ತಮ್ಮ ಕೈಕೋಲಿನಿಂದ ಬಾರಿಸಿದ ನಿದರ್ಶನಗಳೂ ಇವೆ.

ಒಂದೇಮನೆಗೆ ಸೇರಿದ ಎಲ್ಲಾ ವ್ಯಕ್ತಿಗಳೂ ಕೆಲವು ಸಲ ಶೀತಜ್ವರ ಬಂದು ಕಾಯಿಲೆಬಿದ್ದ ಸಂದರ್ಭದಲ್ಲಿ, ಅವರೆಲ್ಲರನ್ನೂ ತನ್ನ ಮನೆಗೇ ಕರೆಸಿ, ಊಟಹಾಕಿ, ಶುಶ್ರೂಷೆ ಮಾಡಿದ ಉದಾಹರಣೆಗಳೂ ಬಹಳ ಇವೆ.

ಬಾಬುರೈಟರು ದಿನಕ್ಕೆ ಎಂಟುಗಂಟೆಯ ಡ್ಯೂಟಿ ಮಾಡಿ ಸಂಬಳ ಎಣಿಸುವ ಪ್ರವೃತ್ತಿಯವರಲ್ಲ. ಅವರು ಯಾವಾಗಲೂ ನಮ್ಮ ತೋಟದ ಪರ್ಮನೆಂಟ್ ಇನ್-ಛಾರ್ಜ್ ಆಗಿದ್ದರು. ಬಾಬುರೈಟರು ತೋಟದಲ್ಲಿ ಇದ್ದಾಗ ನನಗೆ ಹೆಚ್ಚಿನ ಕೆಲಸವೇ ಇರಲಿಲ್ಲ. ಹಾಗಾಗಿ, ಅವರು ನಮ್ಮ ತೋಟದಲ್ಲಿ ಕೆಲಸಮಾಡುತ್ತಾ ಇದ್ದ ಅವಧಿಯಲ್ಲಿ ನಾನು ಹೆಚ್ಚಾಗಿ ನನ್ನ ಸಮಯವನ್ನು ಬೆಂಗಳೂರಿನಲ್ಲೇ ಕಳೆಯುತ್ತಿದ್ದೆ. ಬೆಂಗಳೂರಿನ ಮನೆಯಲ್ಲಿ ಇದ್ದು ಮಕ್ಕಳ ಲಾಲನೆಪಾಲನೆಯ ಬಗ್ಗೆ ಹೆಚ್ಚಿನ ಗಮನ ಕೊಡಲು ನನಗೆ ಅವಕಾಶ ಸಿಕ್ಕಿತು. ಮಕ್ಕಳಿಗೆ ಶಾಲೆ ಇದ್ದಾಗ, ಮಕ್ಕಳೊಡನೆ ಬೆಂಗಳೂರಿನ ಮನೆಯಲ್ಲಿ ಇರುತ್ತಿದ್ದ ನನ್ನ ಪತ್ನಿ ಸರೋಜಮ್ಮನಿಗೂ ನನ್ನ ಹಾಜರಾತಿಯಿಂದ ಧೈರ್ಯ ಹಾಗೂ ಸಮಾಧಾನ ಸಿಗುತ್ತಿತ್ತು.

ಬಾಬುರೈಟರು ಎರಡು ಅಥವಾ ಮೂರು ತಿಂಗಳಿಗೊಮ್ಮೆ ಶನಿವಾರ ಭಾನುವಾರ ನನಗೆ ಮುಂಚಿತವಾಗಿ ತಿಳಿಸಿ, ರಜಾಮಾಡಿ ತಮ್ಮ ಊರಿಗೆ ಹೋಗಿ ಬರುತ್ತಿದ್ದರು. ತಮ್ಮ ಬೆಳ್ಳಿಕೂದಲನ್ನು ನೀಟಾಗಿ ಬಾಚಿ, ಪ್ಯಾಂಟ್‌ಶರ್ಟ್ ಧರಿಸಿ ಊರಿಗೆ ಹೋಗಿ ಬರುತ್ತಿದ್ದರು. ಇಲ್ಲದಿದ್ದರೆ ತೋಟದಲ್ಲಿ ಅವರ ಡ್ರೆಸ್ ಸದಾ ಖಾಕಿ ಹಾಫ್ ಪ್ಯಾಂಟ್ ಮತ್ತು ಬಣ್ಣಮಾಸಿದ ಹಸಿರು ಶರ್ಟು!

ಒಮ್ಮೆ ಬಾಬುರೈಟರು ತನಗೆ ಒಂದು ವಾರ ರಜಾ ಬೇಕೆಂದು ಕೇಳಿದರು. ಏನು ವಿಶೇಷ ಎಂದು ಕೇಳಿದಾಗ, ನಾನು ಚಿಕ್ಕವನಿದ್ದಾಗ ಹಿರಿಯರು ಹೇಳಿದ್ದ ತಿರುಪತಿಯಾತ್ರೆಯ ಹರಕೆ ಬಾಕಿ ಇದೆ. ಆಗಾಗ ಹುಂಡಿಗೆ ಹಾಕಲು ತೆಗೆದಿಟ್ಟ ಹಣವನ್ನು ಒಂದು ದೊಡ್ಡ ತಾಮ್ರದ ಕೊಡದಲ್ಲಿ ಹಾಕುತ್ತಿದ್ದೆವು. ಇತ್ತೀಚೆಗೆ ಆ ಕೊಡ ತುಂಬಿಬಿಟ್ಟಿದೆ. ಇನ್ನು ಕಾಯಲು ಸಾಧ್ಯವಿಲ್ಲ. ಆ ತಾಮ್ರದ ಕೊಡ ಮತ್ತು ಅದರಲ್ಲಿನ ಹಣವನ್ನು ಸ್ವಾಮಿ ತಿರುಪತಿ ತಿಮ್ಮಪ್ಪನಿಗೆ ನಾನು ಅರ್ಪಿಸಬೇಕು. ನನ್ನ ಸಂಸಾರದವರು ಮತ್ತು ನನಗೆ ಅತೀ ಹತ್ತಿರದ ಬಂಧುಮಿತ್ರರನ್ನು ಕರೆದುಕೊಂಡು ನಾನು ತಿರುಪತಿಗೆ ಯಾತ್ರೆ ಹೋಗಬೇಕಾಗಿದೆ. ಹೊರಡುವ ಮೊದಲು ಮನೆಯಲ್ಲಿ ಆ ಹುಂಡಿಯ ಪೂಜೆ ಮಾಡಿ ಬಂಧುಮಿತ್ರರಿಗೆ ಊಟ ಹಾಕಿ, ನಾವೂ ಉಂಡು ಹೊರಡುತ್ತೇವೆ. ಆ ನಂತರದ ಊಟ ತಿರುಪತಿಯ ತಿಮ್ಮಪ್ಪನ ದರ್ಶನಮಾಡಿ, ಹುಂಡಿ ಅರ್ಪಿಸಿದ ಮೇಲೆಯೇ! ಅದುತನಕ ನಾವು ಹಸಿವೆಯಾದಾಗ ಬರೇ ಹಾಲುಹಣ್ಣು ಮಾತ್ರ ತೆಗೆದುಕೊಳ್ಳುತ್ತೇವೆ. ನಾನು ಇದುವರೆಗೆ ಕರ್ನಾಟಕ ಬಿಟ್ಟು ಹೊರಗೆ ಹೋದವನೇ ಅಲ್ಲ. ಹೋಗುವಾಗ ಹೇಗೂ ಬೆಂಗಳೂರಿನ ಮೇಲೆಯೇ ಹೋಗುತ್ತೇವೆ. ನಿಮ್ಮ ಬೆಂಗಳೂರಿನ ಬಂಗಲೆಗೆ ಹೋಗಿ ಸರೋಜಮ್ಮ ಮತ್ತು ಮಕ್ಕಳನ್ನು ನೋಡಿಕೊಂಡೇ ನಾವು ಮುಂದೆ ಹೋಗುತ್ತೇವೆ ಎಂದರು.

ಬಹಳ ಸಂತೋಷ, ದೇವರ ದರ್ಶನ ಮಾಡಿಬನ್ನಿ. ನಿಮ್ಮ ಪ್ರಯಾಣ ಸುಖಕರ ಮತ್ತು ಆನಂದದಾಯಕವಾಗಿರಲಿ! ಎಂದು ಹಾರೈಸಿ, ಬಾಬುರೈಟರನ್ನು ಕಳುಹಿಸಿಕೊಟ್ಟೆ. ಅವರು ಬೆಂಗಳೂರಿನ ನಮ್ಮ ಮನೆಗೆ ಬರುವಾಗ ನಾನು ಅಲ್ಲಿ ಇರಬೇಡವೇ? ಎಂದುಕೊಂಡು ಎರಡುದಿನ ಬಿಟ್ಟು ನಾನು ಬೆಂಗಳೂರಿಗೆ ಹೊರಟೆ. ಬಾಬುರೈಟರ ಬರವನ್ನೇ ಕಾಯುತ್ತಾ ಬೆಂಗಳೂರಿನ ಮನೆಯಲ್ಲಿದ್ದೆ.

ನಾನು ಬೆಂಗಳೂರಿನ ಮನೆಗೆ ತಲುಪಿದ ಮರುದಿವಸದ ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಬಾಬುರೈಟರ ತಿರುಪತಿ ಯಾತ್ರಾ ತಂಡದವರು ನಮ್ಮ ಮನೆಗೆ ಬಂದರು. ಒಂದು ದೊಡ್ಡ ಮೆಟಾಡೋರ್ ವ್ಯಾನ್ ತುಂಬಾ ಬಾಬುರೈಟರ ಸಂಸಾರ ಮತ್ತು ಇಷ್ಟಮಿತ್ರರು ಬಂದಿಳಿದರು. ಮೆಟಾಡೋರ್ ವ್ಯಾನಿನ ಮುಂದಿನ ಸೀಟಿನಲ್ಲಿ ಅವರು ಮನೆಯಿಂದ ತಂದ ದೊಡ್ಡ ತಾಮ್ರದ ಕೊಡ ವಿರಾಜಿಸುತ್ತಾ ಇತ್ತು. ಕೆಂಪುವಸ್ತ್ರದಲ್ಲಿ ಬಾಯಿ ಕಟ್ಟಿಟ್ಟಿದ ಆ ಕೊಡಕ್ಕೆ  ನಾಮ ಬಳಿದು, ಹೂವು ಏರಿಸಿ, ಊದುಕಡ್ಡಿ ಹಚ್ಚಿದ್ದರು. ಚಿಕ್ಕಮಕ್ಕಳು ಸೇರಿ ಸುಮಾರು ಇಪ್ಪತ್ತು ಜನ ಇದ್ದರು. ಗಂಡಸರೆಲ್ಲಾ ಬಿಳಿಪಂಚೆ ಉಟ್ಟು ಶಾಲು ಹೊದ್ದೇ ಊರಿನಿಂದ ಹೊರಟಿದ್ದರು. ಹೆಂಗಸರು ಪಟ್ಟೆಸೀರೆ ಉಟ್ಟಿದ್ದರು. ಎಲ್ಲರ ಮುಖಗಳಲ್ಲೂ ತಾವು ಯಾತ್ರೆಗೆ ಹೊರಟ ಭಕ್ತಿಪೂರ್ಣ ಉತ್ಸಾಹ ಎದ್ದುಕಾಣುತ್ತಿತ್ತು. ನಾವು ಯಾತ್ರಾರ್ಥಿಗಳನ್ನು ತುಂಬು ಹೃದಯದಿಂದ ಸ್ವಾಗತಿಸಿದೆವು. ನಮ್ಮ ಮಕ್ಕಳೂ ಕೈಮುಗಿದು ಎಲ್ಲರನ್ನೂ ಒಳಗೆ ಬರಮಾಡಿಕೊಂಡರು. ಮನೆಯ ಹಾಲಿನಲ್ಲಿ ಅತಿಥಿಗಳಿಗೆ ಕುಳಿತುಕೊಳ್ಳಲು ದೊಡ್ಡ ಜಮಖಾನ ಹಾಸಿದ್ದೆವು. ನಮಗೆ ಯಾತ್ರಾರ್ಥಿಗಳು ಬರುವ ವಿಚಾರ ಮೊದಲೇ ಗೊತ್ತಿದ್ದರಿಂದ, ಅವರ ಫಲಹಾರಕ್ಕೆ ಬೇಕಾದಷ್ಟು ಬಾಳೆಹಣ್ಣು, ಸೇಬು, ದ್ರಾಕ್ಷಿ ಮತ್ತು ಮೂಸಂಬಿಹಣ್ಣುಗಳನ್ನು ಮೊದಲೇ ತಂದಿಟ್ಟಿದ್ದೆವು. ಅತಿಥಿಗಳು ಕೈಕಾಲು ತೊಳೆದು ಬರುವಷ್ಟರಲ್ಲಿ, ಸರೋಜಮ್ಮ ನಮ್ಮ ಮನೆಯ ಎದುರಿನಲ್ಲೇ ಇದ್ದ ಪಂಕಜ ಡೈರಿಯಿಂದ ಆರು ಲೀಟರ್ ಆಗಷ್ಟೇ ಕರೆದ ದನದ ಹಾಲು ತರಿಸಿದ್ದಳು. ಹಾಲನ್ನು ಕುದಿಸಿ ಸಕ್ಕರೆ ಹಾಕಿ ಎಲ್ಲರಿಗೂ ಕುಡಿಯಲು ಕೊಟ್ಟಳು. ಎಲ್ಲರೂ ಹೊಟ್ಟೆ ತುಂಬಾ ಹಣ್ಣು ತಿಂದು ಹಾಲು ಕುಡಿದರು. ಬಂದ ಅತಿಥಿಗಳೆಲ್ಲರೂ ಪೇಟೆಯ ನಮ್ಮ ಚಿಕ್ಕ ಮನೆಯೊಳಗೆ ತಿರುಗಾಡಿ ಮನೆಯ ಎಲ್ಲಾ ಕೋಣೆಗಳನ್ನು ನೋಡಿದರು.

ನಮ್ಮಲ್ಲಿಗೆ ಬಂದ, ಯಾತ್ರೆಗೆ ಹೊರಟ ತಂಡದವರ ಮುಖದಲ್ಲಿ ಇದ್ದ ಅಪೂರ್ವವಾದ ಉತ್ಸಾಹ ಮತ್ತು ಭಕ್ತಿಭಾವಗಳನ್ನು ಕಂಡು ನಾವು ಬಹು ಸಂತೋಷಪಟ್ಟೆವು.

ಫಲಾಹಾರ ಆದೊಡನೆಯೇ ಯಾತ್ರಾರ್ಥಿಗಳು ಹೊರಟರು. ನಾನು ಗಂಡಸರಿಗೆ ಮೂಸಂಬಿಯ ಹಣ್ಣು ಕೊಟ್ಟು ಕೈ ಮುಗಿದೆ. ಸರೋಜಮ್ಮ ಹೆಂಗಸರಿಗೆ ಮತ್ತು ಮಕ್ಕಳಿಗೆ ತಾಂಬೂಲದ ಜತೆಗೆ ಕುಂಕುಮ ತೆಂಗಿನಕಾಯಿ ಮತ್ತು ಸೇಬಿನಹಣ್ಣು ಕೊಟ್ಟು ವಂದನೆ ಹೇಳಿದಳು. ನಮ್ಮ ಮನೆಗೆ ಬಂದ ಬಾಬುರೈಟರ್ ತಂಡದವರು ಗೋವಿಂದ ಅನ್ನೀ! ಗೋವಿಂದಾ! ಎನ್ನುತ್ತಾ ತಮ್ಮ ವ್ಯಾನ್ ಹತ್ತಿದರು. ನಾವು ಗೋವಿಂದಾ! ಎನ್ನುತ್ತಾ ಕೈಮುಗಿದು ಅವರಿಗೆ ಸುಖ ಪ್ರಯಾಣವನ್ನು ಹಾರೈಸಿದೆವು. ಬಾಬುರೈಟರ ಸಂಸಾರದವರ ತಿರುಪತಿಯಾತ್ರೆಯ ಸವಿನೆನಪನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಬಾಬುರೈಟರಿಗೆ ನಮ್ಮ ಮಲೆನಾಡಿನ ಪ್ರತಿಯೊಂದು ಗಿಡ, ಮರಗಳ ಮತ್ತು ಸಸ್ಯಗಳ ಪೂರ್ಣ ಪರಿಚಯವಿತ್ತು. ನಮ್ಮ ಮಲೆನಾಡು ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಬೆಳೆಯುವ ಪ್ರತಿ ಅಣಬೆ, ಗಿಡ, ಬಳ್ಳಿ, ಪೊದೆ, ಗಿಡಮರ ಅಥವಾ ಔಷಧೀಯ ಸಸ್ಯಗಳ ಹೆಸರು ಅವರಿಗೆ ಗೊತ್ತಿತ್ತು. ಯಾವ ಸಸ್ಯ ತೋರಿಸಿದರೂ, ಅವುಗಳ ಕನ್ನಡ ಮತ್ತು ತುಳುಭಾಷೆಯ ಹೆಸರುಗಳನ್ನು ಅವರು ಹೇಳುತ್ತಿದ್ದರು. ಕನ್ನಡ ಅಥವಾ ತುಳುಭಾಷೆಯ ಹೆಸರುಗಳು ನಮಗೆ ಒಮ್ಮೆ ಗೊತ್ತಾದರೆ, ಆ ಸಸ್ಯಗಳ ಶಾಸ್ತ್ರೀಯ ಅಥವಾ ಬೊಟ್ಯಾನಿಕಲ್ ಹೆಸರುಗಳನ್ನು ನಮ್ಮ ತೋಟದ ಲೈಬ್ರರಿಯಲ್ಲಿದ್ದ ಡಾ.ಸಿಸಿಲ್.ಜೆ.ಸಲ್ದಾನ ಮತ್ತು ಡಾ.ಡ್ಯಾನ್ ನಿಕೋಲ್ಸನ್ ಅವರು ಬರೆದ ಪುಸ್ತಕಗಳನ್ನು ನೋಡಿ, ನಾವು ಆ ಸಸ್ಯಗಳ ಬೊಟ್ಯಾನಿಕಲ್ ಹೆಸರುಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತಿತ್ತು.            ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿದ್ದ ನಮ್ಮ ಮಕ್ಕಳು ಬಾಬುರೈಟರ ಈ ಅಸಾಧಾರಣ ಜ್ಞಾನವನ್ನು ಕಂಡು ಬೆರಗಾಗುತ್ತಿದ್ದರು. ಅವರು ಬಾಬುರೈಟರಿಗೆ ಡಾ.ಬಾಬುರೈಟರ್ ಪ್ರೊಫೆಸರ್ ಆಫ್ ಬಾಟನಿ, ಬಾಳೆಹೊಳೆ, ರಿವರ್‌ಸೈಡ್ ಯೂನಿವರ್ಸಿಟಿ ಎಂಬ ಅಡ್ಡಹೆಸರು ಇಟ್ಟಿದ್ದರು.

ನಮ್ಮ ಮಕ್ಕಳನ್ನು ಕಂಡರೆ ಬಾಬುರೈಟ್ರಿಗೆ ಬಹಳ ಪ್ರೀತಿ. ಅವರು ರಾಧಿಕಾ ಮತ್ತು ರಚನಾರಿಗೆ ನಮ್ಮ ಸುತ್ತಮುತ್ತಲ ಕಾಡಿನಲ್ಲಿ ದೊರೆಯುವ ಕುಂಟಾಲಹಣ್ಣು, ಬ್ರಮ್ಮೇರ್ಲಹಣ್ಣು,  ಚೊಟ್ಟೆಹಣ್ಣು, ಚೂರಿಮುಳ್ಳಿನ ಹಣ್ಣು ಮೊದಲಾದ ವೈಲ್ಡ್ ಬೆರ್ರೀಸ್ಗಳನ್ನು ತಂದುಕೊಡುತ್ತಿದ್ದರು. ನಮ್ಮ ತೋಟದಲ್ಲೇ ಸಿಗುವ ಹೆಬ್ಬಲಸು, ಜಾರಿಗೆ, ರೆಂಜ, ತೌಂಪು, ಬ್ಯಾಲೆ ಮೊದಲಾದ ಕಾಡುಜಾತಿಯ ಹಣ್ಣುಗಳ ಪರಿಚಯವನ್ನು ಮಾಡಿಸಿ ಅವುಗಳ ರುಚಿಯನ್ನು ಕೂಡಾ ಅವರಿಗೆ ತೋರಿಸಿದರು. ನಾವು ಚಿಕ್ಕಂದಿನಲ್ಲಿ ಈ ಹಣ್ಣುಗಳನ್ನು ತಿಂದವರೇ! ಆದರೆ, ಪೇಟೆಯಲ್ಲಿ ಬೆಳೆದ ನಮ್ಮ ಮಕ್ಕಳಿಗೆ ಈ ಹಣ್ಣುಗಳ ಪರಿಚಯವೇ ಇರಲಿಲ್ಲ.

ಒಮ್ಮೆ ಬಾಬುರೈಟರು ನಮ್ಮನ್ನೆಲ್ಲರನ್ನೂ ನಮ್ಮ ನಾಗೇಹಡ್ಲು ಎಂಬ ಕಾಫಿಯ ತಾಕಿಗೆ ಕರೆದುಕೊಂಡು ಹೋಗಿ ಡ್ಯಾನ್ಸಿಂಗ್ ನನ್ ಎಂಬ ಅಪರೂಪದ ಅಣಬೆಯನ್ನು ತೋರಿಸಿದರು. ಅದರ ಅಂದ ಚಂದವನ್ನು ನನ್ನಿಂದ ವಿವರಿಸಿ ಹೇಳಲು ಸಾಧ್ಯವಾಗುತ್ತಿಲ್ಲ. ಅದರ ಫೋಟೋ ಹಿಡಿಯೋಣವೆಂದರೆ ನನ್ನ ಕ್ಯಾಮೆರಾದಲ್ಲಿ ಫಿಲ್ಮ್ ಮುಗಿದಿತ್ತು! ನಾನು ಶಿವಮೊಗ್ಗದಿಂದ ಫಿಲ್ಮ್ ತರಲು ಬಸ್‌ಡ್ರೈವರ್ ಗೋಪಾಲನಿಗೆ ಹೇಳಿದೆ. ಫಿಲ್ಮ್ ಮರುದಿನ ಬರುವಾಗ ಆ ಅದ್ಭುತ ಅಣಬೆ ಬಾಡಿಹೋಗಿತ್ತು!

ಬಾಬುರೈಟರ್ ಮಕ್ಕಳೊಡನೆ ನಿರರ್ಗಳವಾಗಿ ಆಂಗ್ಲೇಯರ ಆಕ್ಸೆಂಟ್ನಲ್ಲಿ ಇಂಗ್ಲಿಷ್ ಮಾತನಾಡುತ್ತಿದ್ದರು. ಕಾನ್ವೆಂಟ್‌ನಲ್ಲಿ ಓದುತ್ತಿದ್ದ ನಮ್ಮ ಮಕ್ಕಳಿಗೆ ಬಾಬುರೈಟರ ಇಂಗ್ಲಿಷ್ ಉಚ್ಛಾರ ಬಹಳ ಇಷ್ಟವಾಗುತ್ತಿತ್ತು. ಇನ್ನು ಬಾಬುರೈಟರ್ ಅವರ ಬರವಣಿಗೆಯ ಬಗ್ಗೆ ನಾನು ಒಂದು ಮಾತು ಹೇಳಲೇಬೇಕು. ಕನ್ನಡವಾಗಲೀ, ಇಂಗ್ಲಿಷ್ ಆಗಲೀ ಬಾಬುರೈಟರ್ ಬರೆದರು ಅಂದರೆ, ಅವರ ಬರವಣಿಗೆ ಮುತ್ತು ಪೋಣಿಸಿದಷ್ಟು ಚಂದವಾಗಿತ್ತು.

ಒಂದುದಿನ ಬಾಬುರೈಟರನ್ನು ನಮ್ಮ ಮಕ್ಕಳು ಬಾಬುರೈಟರನ್ನು ಎಷ್ಟು ಓದಿದ್ದೀರಿ? ಎಂತ ಕೇಳಿದರು. ಅವರು ಯಾವ ಮುಚ್ಚುಮರೆ ಇಲ್ಲದೇ ನಾನು ಕಾರ್ಕಳದ ಕಾನ್ವೆಂಟಿನಲ್ಲಿ ನಾಲ್ಕನೇ ಕ್ಲಾಸಿನವರೆಗೆ ಮಾತ್ರ ಓದಿದೆ. ನನಗೆ ವಿದ್ಯಾಭ್ಯಾಸ ಮುಂದುವರೆಸಲು ಅನುಕೂಲವಿರಲಿಲ್ಲ ಎಂದು ಉತ್ತರಿಸಿದರು. ನನ್ನ ಮಕ್ಕಳಿಗೆ ಅವರ ಉತ್ತರ ಕೇಳಿ ಆಶ್ಚರ್ಯವಾಯಿತು. ಅವರ ಇಂಗ್ಲೀಷ್‌ಜ್ಞಾನ ಮತ್ತು ಬರವಣಿಗೆ ಇಂದಿನ ಗ್ರಾಜುವೇಟ್‌ಗಳನ್ನು ಮೀರಿಸುವಂತಿತ್ತು.

ಬಾಬುರೈಟರ್ ನಮ್ಮಲ್ಲಿ ಐದುವರ್ಷ ಕಂಟ್ರಾಕ್ಟ್ ಮೇಲೆ ಕೆಲಸ ಮಾಡಿದರು. ೧೯೮೭ನೇ ಇಸವಿ ಮೇ ತಿಂಗಳ ಒಂದು ದಿನ ಬಂಗಲೆಯಲ್ಲಿನ ನನ್ನ ಸ್ವಂತ ಆಫೀಸ್‌ರೂಮಿಗೆ ಅವರು ಬಂದು, ಸರ್! ಐದುವರ್ಷ ತಮ್ಮಲ್ಲಿ ಸಂತೋಷದಿಂದ ಕೆಲಸಮಾಡಿದೆ. ನನಗೆ ಇನ್ನು ಊರಿಗೆ ಹೊರಡಲು ಅಪ್ಪಣೆ ಕೊಡಬೇಕು ಎಂದರು.

ನಾನು, ಬಾಬುರೈಟರೇ! ನೀವು ನಮ್ಮ ತೋಟದ ಅವಿಭಾಜ್ಯ ಅಂಗದಂತೆ ಈ ಐದುವರ್ಷಗಳಲ್ಲಿ ದುಡಿದಿದ್ದೀರಿ. ಇಷ್ಟು ಬೇಗನೇ ನೀವು ನಿಮ್ಮ ಸ್ವಂತ ಊರಿಗೆ ಹೊರಡುತ್ತೀರಿ ಎಂದು ಎಣಿಸಿರಲಿಲ್ಲ. ನಮ್ಮ ಕಡೆಯಿಂದ ನಿಮಗೆ ಏನಾದರೂ ಬೇಸರ ಉಂಟಾಗಿದೆಯೇ? ಎಂದು ಕೇಳಿದೆ.

ಸರ್, ಅಂತಹಾ ಘಟನೆ ಏನೂ ನಡೆದಿಲ್ಲ. ನಿಮ್ಮ ತೋಟದಲ್ಲಿ ನಾನು ಬಹಳ ಸಂತೋಷದಿಂದಲೇ ಐದುವರ್ಷ ಕೆಲಸಮಾಡಿದೆ. ತಾವುಗಳು ನನಗೆ ಅದಕ್ಕೆ ಪ್ರತಿಫಲವಾಗಿ ಒಳ್ಳೆಯ ಮೊಬಲಗನ್ನೇ ಕೊಟ್ಟಿರುತ್ತೀರಿ. ನನಗೆ ಈಗ ಎಪ್ಪತ್ತನೇ ವರ್ಷ ನಡೆಯುತ್ತಾ ಇದೆ. ನಾನು ಹದಿನಾಲ್ಕರ ಚಿಕ್ಕಪ್ರಾಯದಲ್ಲಿ ಕೆಲಸ ಕಲಿಯಲು ಬಾಳೂರು ಫಾಸ್ಟರ್ ದೊರೆಗಳಲ್ಲಿ ಸೇರಿದೆ. ಸ್ವಲ್ಪ ಸಮಯ ರೀಡ್ ದೊರೆಗಳ ಮೆರ್ತಿಕಾನು ತೋಟದಲ್ಲಿಯೂ ಇದ್ದೆ. ಆಮೇಲೆ ಕೀನ್‌ದೊರೆಗಳ ತೋಟದಲ್ಲಿ ಬಹಳ ವರುಷ ದುಡಿದು ಅಲ್ಲೇ ರಿಟೈರ್ ಆದೆ. ರಿಟೈರ್ ಆದ ಮೇಲೆಯೂ ಈ ಕಾಫಿತೋಟಗಳ ಪರಿಸರವನ್ನು ಬಿಟ್ಟುಹೋಗಲು ಮನಸ್ಸು ಬರದೇ ಇದ್ದುದರಿಂದ  ನಿಮ್ಮಲ್ಲಿ ಐದುವರ್ಷ ಕೆಲಸಮಾಡಿದೆ. ನಾನು ಇದುವರೆಗೆ ಸರಿಯಾಗಿ ಎರಡು ತಿಂಗಳು ನನ್ನ ಸ್ವಂತ ಮನೆಯಲ್ಲಿ ಹೆಂಡತಿ ಮಕ್ಕಳ ಜತೆಗೆ ಇದುವರೆಗೆ ಕಾಲಹಾಕಿದ ಆಸಾಮಿಯಲ್ಲ. ಈಗ ಮಕ್ಕಳು ದೊಡ್ಡವರಾಗಿದ್ದಾರೆ. ರೆಕ್ಕೆ ಬಲಿತ ಹಕ್ಕಿಗಳಂತೆ ತಮ್ಮದೇ ಆದ ಗೂಡು ಕಟ್ಟಿಕೊಂಡಿದ್ದಾರೆ. ಈಗ ನನ್ನ ಪತ್ನಿ ಒಬ್ಬಂಟಿಯಾಗಿ ನಮ್ಮ ಹಿರಿಯರ ದೊಡ್ಡ ಮನೆಯಲ್ಲಿ ಇದ್ದಾಳೆ. ಆಕೆಯನ್ನು ಘಟ್ಟಕ್ಕೆ ಬಾ ಎಂದು ಕರೆದರೆ ತನ್ನ ಮನೆ, ಆಸ್ತಿ, ಜಾನುವಾರು, ಮನೆಯ ದೇವರು, ದೈವಗಳು ಇವನ್ನೆಲ್ಲಾ ಚಿಕ್ಕಪ್ರಾಯದಲ್ಲಿ ಬಿಟ್ಟು ಎಲ್ಲಿಗೂ ಬಾರದೇ ಇದ್ದವಳು, ಈಗ ಈ ಪ್ರಾಯದಲ್ಲಿ ಇವನ್ನೆಲ್ಲಾ ಬಿಟ್ಟು ಎಲ್ಲಿಗೆ ಬರಲಿ? ಎನ್ನುತ್ತಾ ಇದ್ದಾಳೆ. ಜೀವಮಾನ ಇಡೀ ಕವಡೆ ಕಟ್ಟಿಕೊಂಡು ನಮ್ಮ ಒಳಿತಿಗಾಗಿ ನೀವು ಘಟ್ಟದ ತೋಟಗಳಲ್ಲಿ ದುಡಿದಿರಿ. ಈಗಲಾದರೂ ಈ ಮನೆಯ ನೆನಪು ಮಾಡಿಕೊಂಡು ಬಂದು, ನಿಮ್ಮ ಸ್ವಂತಮನೆಯಲ್ಲಿ ನಿರಾಳವಾಗಿ ಆಗಿ, ಕಾಲುನೀಡಿ ವಿಶ್ರಾಂತಿ ಪಡೆಯುತ್ತಾ, ಸ್ವಲ್ಪ ಆರಾಮವಾಗಿ ಇರಿ, ಎಂದು ನಮ್ಮಾಕೆ ಕರೆಯುತ್ತಿದ್ದಾಳೆ. ಹಾಗಾಗಿ ನನ್ನ ಶೇಷಾಯುಷ್ಯವನ್ನು ನನ್ನ ಸ್ವಂತಮನೆಯಲ್ಲೇ ಕಳೆಯಲು ನಿರ್ಧರಿಸಿರುತ್ತೇನೆ. ದಯವಿಟ್ಟು ನನಗೆ ಅಪ್ಪಣೆ ಕೊಡಿರಿ ಎಂದರು.

ಬಾಬುರೈಟರು ಇಷ್ಟು ಹೇಳಬೇಕಾದರೆ ನಾಚಿ ಕೆಂಪುಕೆಂಪಾಗಿದ್ದರು. ಎಪ್ಪತ್ತನೇ ವಯಸ್ಸಿನಲ್ಲಿ ತನಗಾಗಿ ಹಂಬಲಿಸುವ ಜೀವವೊಂದಿದೆ ಎಂಬ ಅರಿವು ಅವರಿಗೆ ಮೂಡಿತ್ತು. ಜೀವಮಾನವಿಡೀ ಕೆಲಸ..! ಕೆಲಸ..! ಎಂದು ತನ್ನ ಸ್ವಂತಮನೆಯ ಜವಾಬ್ದಾರಿಗಳನ್ನು ತಮ್ಮ ಹೆಂಡತಿಯ ಮೇಲೆಯೇ ಸಂಪೂರ್ಣವಾಗಿ ಬಿಟ್ಟು ಘಟ್ಟದ ಕಾಫಿಯ ತೋಟಗಳಲ್ಲಿ ದುಡಿದು ಹಣ ಸಂಪಾದಿಸಿದ ಜೀವಕ್ಕೆ ಎಪ್ಪತ್ತರಪ್ರಾಯದಲ್ಲಿ ತನ್ನ ಮಡದಿಯೊಂದಿಗೆ ವಿಶ್ರಾಂತ ಜೀವನ ನಡೆಸುವ ಉತ್ಕಟ ಇಚ್ಛೆ ಉಂಟಾಗಿತ್ತು. ಆಗ ನಾನು ಬಾಬುರೈಟರೇ, ನಿಮ್ಮ ಆಲೋಚನೆ ಸರಿಯಾಗಿದೆ. ನಾವು ನಿಮ್ಮನ್ನು ಮೇ ಮೂವತ್ತೊಂದನೆ ತಾರೀಕು ಬೀಳ್ಕೊಡುತ್ತೇವೆ. ಅದರ ಹಿಂದಿನ ದಿನ ನಿಮ್ಮ ಲೆಕ್ಕಾಚಾರ ಚುಕ್ತಾ ನಿಶಿಯಿಂದ ಮಾಡುತ್ತೇವೆ. ಆದಿನ ನೀವು ನಮ್ಮ ಜತೆಗೆ ನಮ್ಮ ಬಂಗಲೆಯಲ್ಲೇ ಊಟ ಮಾಡಬೇಕು. ಮಾರನೇ ದಿನ ನೀವು ನಿಮ್ಮ ಊರಿಗೆ ನಮ್ಮ ಜೀಪಿನಲ್ಲೇ ಹೋಗಬೇಕು ಅಂತ ಹೇಳಿದೆ. ಬಾಬುರೈಟರು ಆಗಲಿ ಸರ್ ಎನ್ನುತ್ತಾ ತನ್ನ ಮನೆಯ ಕಡೆಗೆ ಹೆಜ್ಜೆ ಹಾಕಿದರು.

ಮೇ ಮೂವತ್ತನೇ ತಾರೀಕು ಬಂದೇ ಬಂತು. ಬಾಬುರೈಟರ ಲೆಕ್ಕಾಚಾರ ಚುಕ್ತಾದಿಂದ ಮಾಡಿ ಯಥಾನುಶಕ್ತಿ ಅವರಿಗೆ ಕೃತಜ್ಞತಾಪೂರ್ವಕ ಇನಾಮಿನ ಚೆಕ್ ಬರೆದುಕೊಟ್ಟೆ. ಅಂದು ಬಂಗಲೆಯಲ್ಲಿ ಸರೋಜಮ್ಮ, ಮಕ್ಕಳು, ನಾನು, ಮತ್ತು ಬಾಬುರೈಟರು ಒಟ್ಟಿಗೆ ಕುಳಿತು ಪಾಯಸದ ಊಟ ಮಾಡಿದೆವು. ನೆನಪಿಗೋಸ್ಕರ ಬಾಬುರೈಟರ ಫೋಟೋ ತೆಗೆದೆ.

ಮರುದಿನ ಮುಂಜಾನೆ ಬಾಬುರೈಟರು ತಮ್ಮ ಸ್ವಂತ ಊರಿಗೆ ನಮ್ಮ ಜೀಪಿನಲ್ಲಿ ಹೊರಟರು. ನಮ್ಮ ಜೀಪ್‌ಡ್ರೈವರ್ ಅವರ ಒಂದು ಸೂಟ್‌ಕೇಸ್, ಒಂದು ಕಿಟ್‌ಬ್ಯಾಗ್, ಒಂದುಮೂಟೆ ಪಾತ್ರೆಗಳು ಮತ್ತು ಒಂದು ಹಾಸಿಗೆಯ ಹೋಲ್ಡಾಲ್ ಇವುಗಳನ್ನು ಎತ್ತಿ ಜೀಪಿಗೆ ಇಟ್ಟಿದ್ದ. ಬಾಬು ರೈಟರು ನಮ್ಮ ತೋಟಕ್ಕೆ ಬರುವಾಗ ತಂದ ಸಾಮಾನುಗಳು ಇಷ್ಟೇ ಆಗಿದ್ದುವು. ಹೊರಡುವಾಗಲೂ ಅಷ್ಟೇ ಸಾಮಾನುಗಳನ್ನು ಒಯ್ಯುತ್ತಾ ಇದ್ದರು.

ಬಾಬುರೈಟರ್ ನೀಲಿಪ್ಯಾಂಟ್ ಬಿಳಿಶರ್ಟ್ ಧರಿಸಿ, ತಮ್ಮ ಬೆಳ್ಳಿಕೂದಲನ್ನು ಬಾಚಿಕೊಂಡು ಹೊರಟುಬಂದರು. ಬಾಬುರೈಟರನ್ನು ಕಳುಹಿಸಿಕೊಡಲು ತೋಟದಲ್ಲಿ ಇದ್ದವರೆಲ್ಲಾ ಬಂದು ಜೀಪಿನ ಹತ್ತಿರ ನೆರೆದಿದ್ದರು. ಬಾಬುರೈಟರು ನಮಗೆಲ್ಲಾ ಕೈಮುಗಿದು ವಿದಾಯ ಹೇಳಿದರು. ನಮ್ಮ ಮಕ್ಕಳು ಒತ್ತರಿಸಿ ಬರುತ್ತಿದ್ದ ಅಳುವನ್ನು ತಡೆದುಕೊಳ್ಳುತ್ತಾ ಗುಡ್ ಬೈ ಪ್ರೊಫೆಸರೆಂದು S ಬಾಬುರೈಟರಿಗೆ ಹಸ್ತಲಾಘವ ಕೊಟ್ಟರು. ಬಾಬುರೈಟರಿಗೆ ಒಮ್ಮೆಗೇ ಕಣ್ಣೀರು ಒತ್ತರಿಸಿ ಬಂತು. ಬಾಬುರೈಟರು ಜೀಪಿನಲ್ಲಿ ಕುಳಿತುಕೊಳ್ಳುವ ಮೊದಲು ನಮಗೆಲ್ಲಾ ಇನ್ನೊಮ್ಮೆ ಕೈ ಮುಗಿದರು. ನಾವೂ ಅವರಿಗೆ ಪ್ರತಿ ವಂದನೆ ಮಾಡಿದೆವು.

ಎಂದೂ ಪಬ್ಲಿಕ್ ಆಗಿ ಅಳದ ನಾನು ಅಂದು ಬೆಳಗ್ಗೆ ಸರೋಜಮ್ಮ ಮತ್ತು ಮಕ್ಕಳ ಜತೆಗೆ ಸೇರಿ ಅಳುತ್ತಾ ನಮ್ಮ ಬಾಬು ರೈಟರಿಗೆ ವಿದಾಯ ಹೇಳಿದೆ. ಒಬ್ಬ ನಿಶ್ಕಲ್ಮಷ ಹೃದಯದ ಹಿರಿಯ ಮನುಷ್ಯನನ್ನು ಅಗಲುವಾಗ ನಾವು ಕಣ್ಣೀರು ಹಾಕಿದ್ದು ನನಗೆ ವಿಚಿತ್ರ ನಡವಳಿಕೆ ಎಂದು ಎಂದಿಗೂ ಅನ್ನಿಸುವುದಿಲ್ಲ.

ನಾವು ಬಾಬುರೈಟರನ್ನು ಮರೆತಿಲ್ಲ. ನಮ್ಮ ಮಕ್ಕಳು ಕೂಡಾ ಅವರ ಬಾಟನಿ ಪ್ರೊಫೆಸರ್ ಆಫ್ ಬಾಳೆಹೊಳೆ ರೈಟರನ್ನು ಮರೆತಿಲ್ಲ.

ಬಾಬು ರೈಟರ್ ಇಂದು ಸ್ವರ್ಗಸ್ಥರಾಗಿದ್ದಾರಂತೆ. ಆದರೆ ಅವರ ನೆನಪಂತೂ ನಮ್ಮಲ್ಲಿ ಹಸಿರಾಗಿಯೇ ಉಳಿದಿದೆ.

* * *