ಶ್ರೀ ಜಾನ್‌ಬಾಪ್ಟಿಸ್ಟ್ ಪಿಂಟೋ ನಮ್ಮ ಸುಳಿಮನೆ ತೋಟದ ಹಿರಿಯ ರೈಟರ್ ಆಗಿದ್ದರು. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ಹತ್ತಿರದ ಒಂದು ಹಳ್ಳಿ ಅವರ ಸ್ವಂತ ಊರಾಗಿತ್ತು. ನಾನು ೧೯೭೧ನೇ ಇಸವಿಯಲ್ಲಿ ಬಾಳೆಹೊಳೆಯ ಸುಳಿಮನೆ ತೋಟದಲ್ಲಿ ನೆಲೆಸಿದೆ. ನನಗೆ ಕಾಫಿಯ ತೋಟದ ನಿರ್ವಹಣೆಯ ಅನುಭವವನ್ನು ಪಿಂಟೋ ಹೇಳಿಕೊಟ್ಟರು ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.

ಪಿಂಟೋ ರೈಟರು ನಮ್ಮ ತೋಟದಲ್ಲಿ ಆಗಲೇ ಹಲವು ವರ್ಷ ಸೇವೆ ಸಲ್ಲಿಸಿ ದಕ್ಷ ಹಾಗೂ ಜನಪ್ರಿಯ ರೈಟರ್ ಎಂಬ ಹೆಸರು ಪಡೆದಿದ್ದರು. ಪ್ರತಿ ಭಾನುವಾರ ಬೆಳಗಿನ ಒಂಬತ್ತಕ್ಕೆ ಹೊರಟು ಎಂಟು ಮೈಲಿ ದೂರದ ಮಾಗುಂಡಿ ಎಂಬ ಊರಿನಲ್ಲಿದ್ದ ತಮ್ಮ ಪ್ಯಾರಿಷ್ ಚರ್ಚ್‌ಗೆ ಹೋಗಿ, ಪ್ರಾರ್ಥನೆ ಮುಗಿಸಿಕೊಂಡು ಮಧ್ಯಾಹ್ನ ಒಂದು ಗಂಟೆಯೊಳಗೆ ಅವರು ಹಿಂತಿರುಗಿ ನಮ್ಮ ತೋಟಕ್ಕೆ ಬರುತ್ತಿದ್ದರು. ವಾರದಲ್ಲಿ ಈ ನಾಲ್ಕು ಗಂಟೆಗಳ ಅವಧಿಯನ್ನು ಹೊರತುಪಡಿಸಿ, ಅವರು ಸದಾ ನಮ್ಮ ತೋಟದಲ್ಲೇ ಇರುತ್ತಿದ್ದರು. ಭಾನುವಾರ ರಜಾದಿನವಾದರೂ, ಅವರು ಮಧ್ಯಾಹ್ನದ ಊಟ ಮುಗಿಸಿ, ತೋಟ ಸುತ್ತಲು ಹೊರಟರೆ, ಹಿಂತಿರುಗಿ ಅವರು ಮನೆ ಸೇರುವಾಗ ಸಾಯಂಕಾಲ ಆಗುತ್ತಿತ್ತು.

ಕಾಫಿತೋಟದ ರೈಟರ್ ಎಂದರೆ ಬಹಳ ಜವಾಬ್ದಾರಿಯ ಕೆಲಸ. ತೋಟದ ಎಲ್ಲಾ ಆಗುಹೋಗುಗಳಿಗೆ ರೈಟರೇ ಜವಾಬ್ದಾರರು. ಆಳುಗಳ ಯೋಗಕ್ಷೇಮ, ಅವರಿಂದ ಕೆಲಸ ಮಾಡಿಸುವ ಜವಾಬ್ದಾರಿ ಮತ್ತು ವಾರಾಂತ್ಯದಲ್ಲಿ ಆಳುಗಳಿಗೆ ಬಟವಾಡೆ ಕೊಡುವ ಕೆಲಸ ಅವರದಾಗಿರುತ್ತದೆ. ಕಾಫಿ ಹಾಗೂ ಇತರ ಬೆಳೆಗಳ ಸಂರಕ್ಷಣೆ ಮತ್ತು ಕೊಯ್ಲಿನ ಜವಾಬ್ದಾರಿ ಕೂಡಾ ಅವರಿಗೆ ಇರುತ್ತದೆ. ಕಾಫಿಯ ತೋಟಗಳಲ್ಲಿ ಮಾಲಿಕನ ಬಲಗೈಯ್ಯಂತೆ ರೈಟರು ಇರುತ್ತಾರೆ. ರೈಟರ ಕೈಕೆಳಗೆ ತೋಟದ ಇತರೇ ಸಿಬ್ಬಂದಿ ಇರುತ್ತಾರೆ. ತೋಟದ ಕೆಲಸ ಮಾಡಿಸಲು ಮೇಸ್ತ್ರಿಗಳು ಇರುತ್ತಾರೆ. ಮೇಸ್ತ್ರಿಗಳ ಕೈಕೆಳಗೆ ಆಳುಗಳು ಇರುತ್ತಾರೆ. ಮೇಸ್ತ್ರಿ ಮತ್ತು ಆಳುಗಳು ತೋಟದ ಕೂಲಿ ಲೈನ್‌ಗಳಲ್ಲಿ ವಾಸ ಮಾಡುತ್ತಾರೆ. ರೈಟರಿಗೆ ಪ್ರತ್ಯೇಕ ವಾಸದ ಮನೆ ಇರುತ್ತದೆ. ಇದಕ್ಕೆ ರೈಟರ್ ಬಂಗಲೆ ಎಂದು ಹೆಸರು. ರೈಟರ್ ಬಂಗಲೆಯ ಸಮೀಪವೇ ತೋಟದ ಆಫೀಸ್ ಮತ್ತು ಗೋದಾಮುಗಳು ಇರುತ್ತವೆ. ತೋಟದ ಮಾಲಿಕರಮನೆ ಗಾತ್ರದಲ್ಲಿ ದೊಡ್ಡದಿರಲಿ ಅಥವಾ ಚಿಕ್ಕದೇ ಆಗಿರಲಿ, ಅದನ್ನು ತೋಟದ ಮಾಲಿಕರ ಬಂಗಲೆ ಎಂದು ಕರೆಯುವುದು ರೂಢಿ.

ಮಾಲಿಕರು ತಮ್ಮ ತೋಟದ ರೈಟರುಗಳಿಗೆ ತುಂಬಾ ಮರ್ಯಾದೆ ಕೊಟ್ಟು ನಡೆಸಿಕೊಳ್ಳುತ್ತಾರೆ. ಅವರ ಅನುಭವ ಮತ್ತು ಅಭಿಪ್ರಾಯಗಳಿಗೆ ಹೊಂದಿಕೊಂಡು ತೋಟದ ಕೆಲಸಕಾರ್ಯಗಳನ್ನು ಮಾಡಿಸುತ್ತಾರೆ. ತೋಟದ ಶಿಸ್ತು ಮತ್ತು ಏಳಿಗೆಗಳಿಗೆ ಈ ರೈಟರುಗಳು ಪ್ರಮುಖ ಕೊಡುಗೆ ನೀಡಿರುತ್ತಾರೆ. ತೋಟದ ಸಾಹುಕಾರ ತೋಟದಲ್ಲಿ ಇರಲಿ ಅಥವಾ ಹೊರಗೆ ಹೋಗಿರಲಿ, ತೋಟದ ಎಲ್ಲಾ ಕೆಲಸಕಾರ್ಯಗಳನ್ನು ರೈಟರುಗಳು ತಾವೇ ಸ್ವಂತ  ಜವಾಬ್ದಾರಿ ವಹಿಸಿ ನಿರ್ವಹಿಸುತ್ತಾರೆ. ತೋಟದ ಮಾಲಿಕನ ನಂತರ ತೋಟದ ರೈಟರೇ ತೋಟದ ಪ್ರಮುಖ ವ್ಯಕ್ತಿ. ಈ ರೈಟರುಗಳು ತಮ್ಮ ಮೇಲೆ ತೋಟದ ಮಾಲಿಕ ವಿಶ್ವಾಸವಿಟ್ಟಿರುವ ರೀತಿಯಲ್ಲೇ, ಮಾಲಿಕನನ್ನು ಗೌರವಿಸಿ, ಪ್ರೀತಿಯಿಂದ ತೋಟದ ಕೆಲಸಕಾರ್ಯಗಳನ್ನು ಮಾಡಿಸುತ್ತಾರೆ.

ಪಿಂಟೋ ರೈಟರು ಜನ್ಮತಃ ಕ್ಯಾಥೋಲಿಕ್ ಕ್ರಿಶ್ಚಿಯನ್. ಆದರೂ, ಅವರಿಗೆ ಹಿಂದುಗಳ ಹಬ್ಬಹರಿದಿನಗಳ ಬಗ್ಗೆ ಅರಿವು ಇತ್ತು. ನಮ್ಮ ತೋಟದ ಪಕ್ಕದಲ್ಲಿ ಇರುವ ನಮ್ಮ ಊರಿನ ದೇವಸ್ಥಾನದ ಎಲ್ಲಾ ವಿಶೇಷ ಪೂಜೆಗಳ ಸಂದರ್ಭದಲ್ಲಿ ಮತ್ತು ಉತ್ಸವಗಳಲ್ಲಿ ಪಿಂಟೋ ರೈಟರು ನಮ್ಮ ತೋಟದ ಆಳುಗಳನ್ನು ಕರೆದುಕೊಂಡು ಹೋಗಿ, ದೇವಸ್ಥಾನದ ಕೆಲಸಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದರು. ದೇವಸ್ಥಾನಕ್ಕೆ ಸುಣ್ಣಬಣ್ಣ ಬಳಿಸುವುದು, ತೋರಣ ಕಟ್ಟಿಸುವುದು, ಪೂಜೆಗೆ ಬೇಕಾದ ಎಲ್ಲಾ ಸಮಿಧೆ, ಹೂವು ಮತ್ತು ಇತರ ಪರಿಕರಗಳನ್ನು ಜೋಡಿಸಿ ಇಡುವುದು ಮೊದಲಾದ ಕಾರ್ಯಗಳನ್ನು ಅವರೇ ಸ್ವತಃ ನಿಂತು ಮಾಡಿಸುತ್ತಿದ್ದರು. ನಮ್ಮೂರ ವಾರ್ಷಿಕ ಉತ್ಸವ ಅಥವಾ ವಿಶೇಷ ಪೂಜಾ ಸಂದರ್ಭಗಳಲ್ಲಿ ಊರವರು ಪಿಂಟೋ ರೈಟರಿಗೆ ಅರ್ಚಕರ ಕೈಯ್ಯಿಂದ ಕಾಯಿಕಡಿ ಪ್ರಸಾದ ಕೊಡಿಸಿ, ಗೌರವ ತೋರುತ್ತಿದ್ದರು. ಹುಟ್ಟಿನಲ್ಲಿ ಕ್ರೈಸ್ಥರಾದರೂ, ಜಾತಿಬೇಧದ ಭಾವನೆ ಪಿಂಟೋ ರೈಟರಲ್ಲಿ ಇರಲಿಲ್ಲ.

ನಮ್ಮ ಊರಿನಲ್ಲಿ ಇಂದಿಗೂ ಇದೇ ರೀತಿಯ ಸಮರಸದ ಭಾವನೆ ಇದೆ. ನಮ್ಮೂರಿನ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಬೇದಭಾವ ಇಲ್ಲದೆ ಇಂದಿಗೂ ಬಾಳುತ್ತಿದ್ದೇವೆ. ಇಷ್ಟು ವಿಚಾರ ಹೇಳದಿದ್ದರೆ ಮುಂದಿನ ಸಂಗತಿ ಹೇಳಲು ಕಷ್ಟವಾಗುತ್ತದೆ. ಅದಕ್ಕೇ, ಈ ವಿಚಾರಗಳನ್ನು ತಮಗೆ ಹೇಳಿದೆ.

೧೯೮೧ನೇ ಇಸವಿಯ ಏಪ್ರಿಲ್ ತಿಂಗಳು ಕಳೆಯುತ್ತಾ ಬಂದರೂ, ನಮ್ಮ ತೋಟಕ್ಕೆ ಹೂವಿನ ಮಳೆ ಬಂದಿರಲಿಲ್ಲ. ಮಾರ್ಚ್ ಅಥವಾ ಏಪ್ರಿಲ್ ತಿಂಗಳುಗಳಲ್ಲಿ ಬೀಳುವ ಮೊದಲ ಮಳೆಗೆ ಕಾಫಿಗಿಡಗಳು ಹೂವು ಬಿಡುತ್ತವೆ. ಈ ಹೂವುಗಳಿಂದಲೇ ನಮ್ಮ ಮುಂದಿನ ವರ್ಷದ ಕಾಫಿಯ ಬೆಳೆ ನಿರ್ಧರಿತವಾಗುತ್ತದೆ. ಸದ್ರಿ ವರ್ಷದ ಬೇಸಿಗೆಯಲ್ಲಿ ನಮ್ಮ ಕಾಫಿಯ ಗಿಡಗಳು ಬಿಸಿಲಿಗೆ ಒಣಗಿ ಸೋತುಹೋಗಿದ್ದುವು. ಇನ್ನು ಮಳೆ ಬರದಿದ್ದರೆ ಮುಂದಿನ ವರ್ಷ ಬೆಳೆ ಬಹಳ ಕಡಿಮೆ ಆಗಬಹುದೆಂಬ ಆತಂಕ ನಮಗೆ ಶುರುವಾಯಿತು. ನಮ್ಮ ಸ್ಪ್ರಿಂಕ್ಲರ್ ನೀರಾವರಿಯ ಪಂಪಿನ ಭಾರೀ ಗಾತ್ರದ ಮೋಟರ್ ದುರದೃಷ್ಟವಶಾತ್ ಆ ಸಮಯದಲ್ಲೇ ಸುಟ್ಟುಹೋಯಿತು. ಬೆಂಗಳೂರಿಗೆ ಅದನ್ನು ಕಳುಹಿಸಿ ದುರಸ್ತಿ ಮಾಡಿಸಲು ಒಂದು ತಿಂಗಳ ಕಾಲ ಬೇಕಾಗಿತ್ತು. ಅದನ್ನು ರಿಪೇರಿಗೆ ಕಳುಹಿಸಿ ಅದರ ಬರವನ್ನೇ ಕಾದು ಕುಳಿತಿದ್ದೆವು. ಕಾಫಿಗಿಡಗಳಿಗೆ ನಮಗೆ ಸಾಧ್ಯವಾದಷ್ಟು ತುಂತುರು ನೀರು ಹನಿಸುವ ಅವಕಾಶವೂ ಆ ವರ್ಷ ಕೈತಪ್ಪಿಹೋಗಿತ್ತು. ನಾವೆಲ್ಲರೂ ತಲೆಯ ಮೇಲೆ ಕೈಹೊತ್ತು, ಆಕಾಶದ ಕಡೆಗೆ ನೋಡುತ್ತಾ ದೇವರನ್ನು ಪ್ರಾರ್ಥಿಸಹತ್ತಿದೆವು.

ನಾನು ಮತ್ತು ಪಿಂಟೋ ರೈಟರ್ ಆ ಮಧ್ಯಾಹ್ನದ ಉರಿಬಿಸಿಲಿನಲ್ಲಿ ಒಂದು ಹಲಸಿನ ಮರದ ನೆರಳಿನಲ್ಲಿ ಕುಳಿತು ಮಳೆಯ ಬಗ್ಗೆ ಮಾತನಾಡುತ್ತಾ ಚಿಂತಿಸತೊಡಗಿದೆವು. ಆಗ ಒಮ್ಮಿಂದೊಮ್ಮೆಗೇ ಪಿಂಟೋ ರೈಟರು, ಸರ್, ಈಗ ನೀವು ಒಂದು ಹರಕೆ ಮಾಡಿಕೊಳ್ಳಿ. ಈ ದಿನ ಸರಿಯಾದ ಹೂವಿನ ಮಳೆ ಬಂದರೆ, ಹೊರನಾಡು ಅನ್ನಪೂರ್ಣೇಶ್ವರೀ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಶರಣಾಗುತ್ತೇವೆ ಎಂದು ಪ್ರಾರ್ಥನೆ ಮಾಡಿಕೊಳ್ಳಿ ಎಂದರು.

ಕಳಸದ ಊರಿಗೆ ಹೋಗಿ ಹತ್ತು ವರುಷಗಳು ಆಗುತ್ತಿದ್ದರೂ, ನಾನು ಹೊರನಾಡಿನ ದೇವಸ್ಥಾನಕ್ಕೆ ಹೋಗಿರಲಿಲ್ಲ. ಆದರೂ, ನನ್ನ ಯಜಮಾನತಿ ಸರೋಜಮ್ಮನವರ ಅಭೀಷ್ಟದಂತೆ ಪ್ರತಿವರ್ಷವೂ ನಾವು ಬೆಳೆದ ಬೆಳೆಗಳ ಮೊದಲ ಕೊಯ್ಲಿನ ಕಾಣಿಕೆಯನ್ನು ಆ ದೇವಸ್ಥಾನಕ್ಕೆ ತಪ್ಪದೆ ಒಪ್ಪಿಸುತ್ತಾ ಬಂದಿದ್ದೆವು. ಹೊರನಾಡು ದೇವಸ್ಥಾನದ ಊಳಿಗದವರು ಪ್ರತಿವರ್ಷ ನಮ್ಮ ಮನೆ ಬಾಗಿಲಿಗೆ ಬಂದು ನಾವು ಅನ್ನಪೂರ್ಣೇಶ್ವರೀ ಅಮ್ಮನಿಗೆ ಮೀಸಲಿಟ್ಟ ಫಲಗಳು ಮತ್ತು ನಮ್ಮ ಕಾಣಿಕೆಯನ್ನು ಒಯ್ಯುತ್ತಿದ್ದರು. ಈ ಸಂಪ್ರದಾಯ ಈಗಲೂ ನಡೆಯುತ್ತಿದೆ. ನಾನು ಅದುವರೆವಿಗೆ ನಮ್ಮೂರ ದೇವಸ್ಥಾನಕ್ಕೆ ಹೊರತಾಗಿ ಬೇರೆಲ್ಲೂ ಹೋದವನಲ್ಲ. ಹೊರನಾಡು ದೇವಸ್ಥಾನದ ಅನ್ನದಾನದ ಮಹಿಮೆಯ ಬಗ್ಗೆ ನಾನು ಬಹಳ ಕೇಳಿದ್ದರೂ, ಅಲ್ಲಿಗೆ ಹೋಗುವ ಮನಸ್ಸು ಮಾಡಿರಲಿಲ್ಲ.

ನಾನು, ಹಾಗೆಯೆ ಆಗಲಿ, ಪಿಂಟೋ ರೈಟರೇ! ಈ ದಿನ ಮಳೆ ಬಿದ್ದರೆ, ಖಂಡಿತವಾಗಿ ಅನ್ನಪೂರ್ಣೆಯ ದೇವಸ್ಥಾನಕ್ಕೆ ಹೋಗಿ ಬರೋಣ, ನೀವೂ ಬರುತ್ತೀರಿ ತಾನೇ?ಎಂದೆ. ಆಗ ಪಿಂಟೋ ರೈಟರು ಖಂಡಿತವಾಗಿ ಹೋಗಿ ಬರೋಣಎಂದರು.

ಹತಾಶರಾಗಿದ್ದ ನಾವು ಆಕಾಶ ನೋಡುತ್ತಿದ್ದಂತೆಯೇ, ಎಲ್ಲಿಂದಲೋ ಒಂದು ಚಿಕ್ಕ ಮೋಡ ಕಾಣಿಸಿತು..! ಅದನ್ನು ಆಸೆಯಿಂದ ನೋಡುತ್ತಿದ್ದಂತೆಯೇ, ಆ ಮೋಡ ದೊಡ್ಡದಾಗುತ್ತಾ ಹೋಗಿ ನಮ್ಮ ತೋಟದ ಮೇಲೆ ವ್ಯಾಪಿಸಿತು. ಕೆಲವೇ ನಿಮಿಷಗಳಲ್ಲಿ ಧಾರಾಕಾರ ಮಳೆ ಸುರಿಯಹತ್ತಿತು. ನಾನು ಮತ್ತು ಪಿಂಟೋ ರೈಟರ್ ಆ ಮಳೆಯಲ್ಲೆ ನೆನೆಯುತ್ತಾ ನಿಂತು ದೇವರ ದಯೆಯನ್ನು ಕೊಂಡಾಡಿದೆವು. ಒಂದು ಗಂಟೆ ಎಡೆಬಿಡದೆ ಮಳೆ ಸುರಿಯಿತು. ನಾವು ಆ ಮಳೆಯಲ್ಲೇ ನೆನೆಯುತ್ತಾ ಬಂಗಲೆಯ ಕಡೆಗೆ ನಡೆದು ಬಂದೆವು. ಮಳೆ ನಿಂತೊಡನೆ ಮಳೆಯನ್ನು ಅಳೆದರೆ, ಒಂದು ಇಂಚು ಎಂಬತ್ತು ಸೆಂಟ್ಸ್ ಮಳೆಯಾಗಿತ್ತು. ನಮ್ಮ ಸಂತಸಕ್ಕೆ ಪಾರವೇ ಇಲ್ಲ.

ಹೊರಡಿ ರೈಟರೇ!, ಹೋಗೋಣ ಈಗಲೇ ದೇವಸ್ಥಾನಕ್ಕೆ ಎನ್ನುತ್ತಾ ಬಟ್ಟೆ ಬದಲಾಯಿಸಲು ಓಡಿದೆ. ನನ್ನ ಯಜಮಾನತಿ ಸರೋಜಮ್ಮನಿಗೆ ನನ್ನ ಅಂದಿನ ನಡವಳಿಕೆ ಬಹುವಿಚಿತ್ರವಾಗಿ ಕಂಡಿರಬೇಕು. ನಾನು ಮತ್ತು ಪಿಂಟೋ ರೈಟರ್ ಹೊರನಾಡು ದೇವಸ್ಥಾನಕ್ಕೆ ಹೋಗುತ್ತಿದ್ದೇವೆ. ನೀನೂ ಬರುವೆಯಾ? ಎಂದು ಕೇಳಿದೆ. ಸರೋಜಮ್ಮನವರು ನನ್ನ ಗಡಿಬಿಡಿ ನೋಡಿ ಗಾಬರಿಯಾಗಿ, ನಾನು ಇನ್ನೊಂದು ದಿನ ಬರುವೆ ಎಂದಳು.

ನನ್ನ ನಾಲ್ಕುವರ್ಷ ಪ್ರಾಯದ ಚಿಕ್ಕ ಮಗಳು ರಚನಾ ನನ್ನ ಮಾತುಗಳನ್ನು ಕೇಳಿದವಳೇ, ತಲೆಗೊಂದು ಹ್ಯಾಟ್ ಏರಿಸಿಕೊಂಡು ಜೀಪಿನಲ್ಲಿ ಹೋಗಿ ಕುಳಿತಿದ್ದಳು..! ನನ್ನ ಎಂಟು ವರ್ಷದ ದೊಡ್ಡ ಮಗಳು ರಾಧಿಕಾ, ಮಳೆ ಕಡಿಮೆ ಆದೊಡನೆ ತನ್ನ ಕಪಿಸೈನ್ಯ ಸೇರಿಸಿಕೊಂಡು ತೋಟ ಸುತ್ತಲು ಹೋಗಿದ್ದಳು.

ಬಂಗಲೆಗೆ ಬಂದು ಹತ್ತು ನಿಮಿಷದೊಳಗೆ ನಾನು, ಪಿಂಟೋ ರೈಟರ್ ಮತ್ತು ರಚನಾ ಹೊರನಾಡು ದೇವಸ್ಥಾನದ ದಾರಿ ಹಿಡಿದಿದ್ದೆವು..! ಎಂಟು ಮೈಲು ದೂರ ಸಾಗಿದರೆ ಕಳಸ, ಅಲ್ಲಿಂದ ಹೊರನಾಡು ನಾಲ್ಕು ಮೈಲಿ ದೂರ. ಕಚ್ಚಾರಸ್ತೆಯ ಪಯಣ. ಆ ಮಾರ್ಗದಲ್ಲಿ ಸಾಗಿದರೆ ಬೇಸಗೆಯಲ್ಲಿ ಬತ್ತಿ ಹರಿಯುತ್ತಿದ್ದ ಭದ್ರಾನದಿಯನ್ನು ದಾಟಿ, ಹೊರನಾಡಿಗೆ ಹೋಗಬೇಕಿತ್ತು. ಜೀಪ್ ಆದುದರಿಂದ ಬೇಸಗೆಯ ಬಿಸಿಗೆ ಸೊರಗಿ ಹರಿಯುತ್ತಿದ್ದ ಹೊಳೆಯನ್ನು ಸಲೀಸಾಗಿ ದಾಟಿ ಹೊರನಾಡು ಸೇರಿದೆವು.

ಮೂವರೂ ಕೈಕಾಲು ತೊಳೆದುಕೊಂಡು ದೇವಸ್ಥಾನವನ್ನು ಪ್ರವೇಶಿಸಿದೆವು. ಆಗ ಸಮಯ ಸುಮಾರಿಗೆ ಮಧ್ಯಾಹ್ನದ ಮೂರೂವರೆ ಗಂಟೆ ಇರಬಹುದು. ಹೆಬ್ಬಾಗಿಲಲ್ಲೇ, ಶ್ರೀ ಅನ್ನಪೂರ್ಣೆಯ ಭವ್ಯಮೂರ್ತಿಯ ದರ್ಶನ ಆಯಿತು. ದೇವರಿಗೆ ನಮಿಸಿ, ಪಕ್ಕದ ದೇವಸ್ಥಾನದ ಆಫೀಸಿನಲ್ಲಿ ನಮ್ಮವತಿಯ ಪೂಜೆಯ ರಶೀದಿ ಬರೆಸುತ್ತಿರುವಾಗಲೇ ದೇವಸ್ಥಾನದ ಸಿಬ್ಬಂದಿಯೋರ್ವರು ಬಂದು ತಮ್ಮ ಮಧ್ಯಾಹ್ನದ ಊಟ ಆಗಿದೆಯೇ? ಊಟ ಆಗದಿದ್ದರೆ ಸಂಕೋಚ ಇಲ್ಲದೆ ಬನ್ನಿ ಎಂದು ಕರೆದರು.

ನಾವು ಮಧ್ಯಾಹ್ನದ ಊಟ ಮುಗಿಸಿಯೇ ಬಂದಿದ್ದೇವೆ ಎಂದು ಉತ್ತರಿಸಿದೆವು. ಹಾಗಾದರೆ ಕಾಫಿತಿಂಡಿಗೆ ಬನ್ನಿ ಎಂದು ಆಹ್ವಾನಿಸುತ್ತಾ ನಮ್ಮನ್ನು ಒಂದು ಕೋಣೆಗೆ ಕರೆದೊಯ್ದರು. ನಾವು ಯಾರು? ಎಲ್ಲಿನವರು ಎಂದು ಅವರು ಕೇಳಲಿಲ್ಲ. ಆದರೂ, ಪಿಂಟೋ ರೈಟರ್ ನಾನು ಕ್ರಿಶ್ಚಿಯನ್ ಮತದವನು. ನಾನು ಒಳಗೆ ಬರಬಹುದೇ? ಎಂದರು.                  ಆಗ ನಮ್ಮನ್ನು ಕರೆದೊಯ್ಯುತ್ತಿದ್ದ ಮಹನೀಯರು, ಹೊರನಾಡಿನ ಅನ್ನಪೂರ್ಣಮ್ಮನ ದೇವಸ್ಥಾನದಲ್ಲಿ ಜಾತಿಮತದ ಪರಿಗಣನೆ ಇಲ್ಲ. ಇಲ್ಲಿಗೆ ಬಂದ ಪ್ರತಿಯೊಬ್ಬರೂ ಈ ಅಮ್ಮನ ಸನ್ನಿಧಿಯಲ್ಲಿ ಆಹಾರ ಸೇವಿಸಿಯೇ ಹೊರಡಬೇಕು. ಇದು ಇಲ್ಲಿನ ಕ್ರಮ. ಸಂಕೋಚವಿಲ್ಲದೆ ಬನ್ನಿ ಎಂದು ನಮ್ಮನ್ನು ಕರೆದೊಯ್ದು ಉದ್ದಕ್ಕೆ ಹಾಸಿದ ನೀಳವಾದ ಚಾಪೆಯ ಮೇಲೆ ಕುಳ್ಳಿರಿಸಿದರು.

ಆಗ ನಮ್ಮೂರಿನಲ್ಲಿ ಬಾಳೆಯ ಬೆಳೆಗೆ ಬಂಚೀ ಟಾಪ್ ಎಂಬ ವೈರಾಣು ರೋಗ ಶುರುವಾಗಿ ಬಾಳೆಯ ಸಂತತಿಯೇ ನಾಶದ ಅಂಚಿನಲ್ಲಿತ್ತು. ಅದುವರೆಗೆ, ದೇವಸ್ಥಾನದಲ್ಲಿ ಎಲ್ಲರಿಗೂ ಬಾಳೆಯ ಎಲೆಯಲ್ಲಿ ಊಟ ಅಥವಾ ತಿಂಡಿ ಉಣಬಡಿಸುತ್ತಾ ಇದ್ದರಂತೆ. ಬಾಳೆ ಎಲೆ ಸಂಗ್ರಹಿಸಲು ಕಷ್ಟವಾದ್ದರಿಂದ, ನಮ್ಮೆಲ್ಲರ ಇದುರಿಗೆ ಫಳಪಳನೆ ಹೊಳೆಯುವ ಹಿತ್ತಾಳೆಯ ತಟ್ಟೆಗಳನ್ನು ಇರಿಸಿ, ಹಿತ್ತಾಳೆಲೋಟಗಳಲ್ಲಿ ಕುಡಿಯುವ ನೀರನ್ನು ಇರಿಸಿದರು. ಪಕ್ಕದ ಅಡುಗೆಮನೆಯಿಂದ ನಮಗೆ ಬಿಸಿಬಿಸಿ ಉಪ್ಪಿಟ್ಟು ಮತ್ತು ಖಾರವಾದ ಅವಲಕ್ಕಿ ಉಪ್ಪುಕರಿ ತಂದು ಪ್ರೀತಿಯಿಂದ ಬಡಿಸಿದರು. ಇವುಗಳ ಜತೆಜತೆಗೇ ದ್ರಾಕ್ಷಿ ಗೋಡಂಬಿಯುಕ್ತವಾದ ಹಬೆಯಾಡುತ್ತಾ ಇದ್ದ ಘಮಘಮಿಸುತ್ತಿದ್ದ ಕೇಸರಿಭಾತ್ ಬಡಿಸುತ್ತಾ ಬಂದರು. ಕಾಫಿ ಕುಡಿಯುವವರಿಗೆ ರುಚಿಯಾದ ಬಿಸಿಬಿಸಿ ಕಾಫಿ, ಇಲ್ಲವೇ ಚಹಾ, ಇವೆರಡೂ ಒಗ್ಗದವರಿಗೆ ಹಾಲು, ಇವನ್ನು ಹಿತ್ತಾಳೆಯ ಲೋಟದಲ್ಲಿ ತಂದಿಟ್ಟರು. ತಿಂಡಿ, ಚಹಾ, ಕಾಫಿ ಇವುಗಳನ್ನು ಎರಡೆರಡು ಸಲ ವಿಚಾರಿಸಿ ಬಡಿಸಿದರು. ನಾವು ಮನದಣಿಯೆ ಉಪಹಾರ ಮಾಡಿದೆವು.

ನಾವು ಸಂತೃಪ್ತರಾಗಿ ಆ ಭೋಜನಶಾಲೆಯಿಂದ ಹೊರಬಂದು ಅನ್ನಪೂರ್ಣೆಯ ದರ್ಶನವನ್ನು ಇನ್ನೊಮ್ಮೆ ಮಾಡಿ, ನಮ್ಮ ಸೇವೆಗಳ ರಶೀದಿ ತೋರಿಸಿ ಪ್ರಸಾದ ಪಡೆದೆವು. ನಿಸರ್ಗದ ಮಡಿಲಿನಲ್ಲಿ ಇರುವ ಈ ದೇವಸ್ಥಾನದಲ್ಲಿ ಯಾತ್ರಾರ್ಥಿಗಳಿಗೆ ಮನಶ್ಯಾಂತಿ ದೊರಕುತ್ತದೆ. ಹೊಟ್ಟೆ ತುಂಬಾ ರುಚಿಕಟ್ಟಾದ ಊಟ ತಿಂಡಿ ದೊರೆಯುತ್ತದೆ. ಧರ್ಮಾರ್ಥ ವಸತಿ ಸೌಲಭ್ಯ ಕೂಡಾ ಯಾತ್ರಾರ್ಥಿಗಳಿಗೆ ಇಲ್ಲಿದೆ. ಒಟ್ಟಿನಲ್ಲಿ ಭಕ್ತರೆಲ್ಲರಿಗೂ ಅನ್ನಪೂರ್ಣಾ ತಾಯಿಯ ಆದರದ ಸ್ವಾಗತ ಈ ಮಂದಿರದಲ್ಲಿ ಸದಾ ದೊರೆಯುತ್ತದೆ. ಆ ಸೇವೆ ಮಾಡಿಸಿ! ಈ ಸೇವೆ ಮಾಡಿಸಿ! ಎಂಬ ಒತ್ತಾಯ ಯಾರಿಗೂ ಇಲ್ಲ. ವ್ಯಾಪಾರೀ ಮನೋಭಾವ ಈ ದೇವಸ್ಥಾನದಲ್ಲಿ ಎಲ್ಲೂ ಕಂಡು ಬರುವುದಿಲ್ಲ. ಇಲ್ಲಿ ದೊರೆಯುವ ಅನ್ನಪೂರ್ಣಾದೇವಿಯ ಪ್ರಸಾದದ ರುಚಿಗೆ ಸರಿಸಾಟಿಯೇ ಇಲ್ಲ!

ಭಕ್ತರ ದಾನದಿಂದಲೇ ಈ ದೇವಳ ನಡೆಯುತ್ತದಂತೆ! ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ನುಡಿಗೆ ಈ ದೇವಾಲಯವೇ ಜ್ವಲಂತ ನಿದರ್ಶನ. ಮಲೆನಾಡಿನ ಎಲ್ಲ ಮನೆಗಳಲ್ಲೂ ಪ್ರತೀ ವರುಷವೂ ಮೊದಲ ಕೊಯ್ಲಿನ ಬೆಳಸನ್ನು ಈ ಹೊರನಾಡಿನ ಅಮ್ಮನಿಗೆ  ಮುಡಿಪಾಗಿ ತೆಗೆದಿರಿಸಿ ಅರ್ಪಿಸುತ್ತಾರೆ.

ಪಿಂಟೋ ರೈಟರ ದೆಸೆಯಿಂದ ನನಗೆ ಈ ದೇವಸ್ಥಾನದ ಪ್ರಥಮ ದರ್ಶನ ಆಯಿತು. ನಾಲ್ಕು ವರುಷದ ಮಗಳು ರಚನಾಳ ಸಂತೋಷಕ್ಕೆ ಎಣೆಯೇ ಇಲ್ಲ! ಮನೆಗೆ ಬಂದೊಡನೇ, ಅವಳ ಅಮ್ಮನೊಡನೆ, ಹೊರನಾಡಿನ ಅಮ್ಮನ ದೇವಸ್ಥಾನದಲ್ಲಿ ನಮಗೆ ಬಂಗಾರದ ತಟ್ಟೆ ಮತ್ತು ಲೋಟದಲ್ಲಿ ಕಾಫಿತಿಂಡಿಗಳನ್ನು ಕೊಟ್ಟರು! ಎಂದು ಹೇಳಿಕೊಂಡು ಸಂಭ್ರಮಪಟ್ಟಳು. ಈಗ ಹಿತ್ತಾಳೆಯ ತಟ್ಟೆಲೋಟಗಳ ಬದಲಿಗೆ, ಭಕ್ತಾದಿಗಳು ಒಪ್ಪಿಸಿದ ಸ್ಟೈನ್‌ಲೆಸ್ ಸ್ಟೀಲ್ ತಟ್ಟೆ ಮತ್ತು ಲೋಟಗಳನ್ನು ದೇವಸ್ಥಾನದ ಭೋಜನ ಶಾಲೆಗಳಲ್ಲಿ ಉಪಯೋಗಿಸುತ್ತಿದ್ದಾರೆ. ಈಗ ಭದ್ರಾನದಿಗೆ ಸೇತುವೆ ಆಗಿ ಹೊರನಾಡು ತನಕ ಡಾಂಬರ್ ರಸ್ತೆ ಆಗಿದೆ. ಅಂತೆಯೇ, ಈಗ ಪ್ರತಿದಿನವೂ ಅಲ್ಲಿಗೆ ಬರುವ ದರ್ಶನಾರ್ಥಿಗಳ ಸಂಖ್ಯೆ ಹಲವು ಸಾವಿರಕ್ಕೆ ಏರಿದೆ. ನಿತ್ಯವೂ ಅಲ್ಲಿ ನಡೆಯುತ್ತಿರುವ ಸತ್ಕಾರ ಮತ್ತು ದಾಸೋಹ ಅದೇ ರೀತಿಯಲ್ಲಿ ಮುಂದುವರೆದಿದೆ.                 ನಾನು ಕುರುಡು ನಂಬಿಕೆಯ ಮನುಷ್ಯನಲ್ಲ. ಯಾವುದೇ ದೇವರು ಅಥವಾ ದೇವಸ್ಥಾನಕ್ಕೆ ಕುರುಡು ಭಕ್ತಿ ತೋರಿಸುವ ಜಾಯಮಾನ ನನ್ನಲ್ಲಿಲ್ಲ. ಆದರೂ, ಹೊರನಾಡ ಅಮ್ಮನ ಹೆಸರು ಯಾರಾದರೂ ಹೇಳಿದರೆ, ನಾನು ಆ ತಾಯಿಗೆ ಮನದಲ್ಲೇ ವಂದಿಸುತ್ತೇನೆ.

ಈ ಘಟನೆ ನಡೆದ ನಂತರದ ವರ್ಷಗಳಲ್ಲಿ ಸರಿಯಾಗಿ ಹೂವಿನ ಮಳೆ ಆಗದಿದ್ದಾಗ ನಾನು ಮತ್ತು ಪಿಂಟೋ ರೈಟರ್ ಮೇಲ್ಕಾಣಿಸಿದ ರೀತಿಯಲ್ಲಿ ಪುನಃ ಹರಕೆ ಮಾಡಿದೆವು. ಹೆಚ್ಚಿನ ಪ್ರಯೋಜನ ಆಗಲಿಲ್ಲ. ಆ ಅನ್ನಪೂರ್ಣೆಗೆ ಜಗತ್ತಿನ ತುಂಬಾ ಭಕ್ತರು! ಪ್ರತಿಬಾರಿಯೂ ನನ್ನಂತಹಾ ಎಡಬಿಡಂಗಿಗಳಿಗೆ ಬೇಡಿದಾಗಲೆಲ್ಲ ಮಳೆ ಸುರಿಯುವಂತೆ ಮಾಡುವುದು ಅವಳ ರೂಢಿ ಆಗಬಾರದಲ್ಲಾ ಎಂದು ಆಕೆ ಸುಮ್ಮನಿದ್ದಾಳೆ ಕಾಣುತ್ತೆ.

ನಾನು ಪ್ರತಿವರ್ಷ ಮೊದಲ ಕೊಯ್ಲಿನಲ್ಲಿ ಒಂದು ಭಾಗ ಆಕೆಗೆ ಮುಡಿಪು ಇಟ್ಟೇ ಮುಂದುವರಿಯುತ್ತಾ ಇದ್ದೇನೆ. ಇದರಿಂದ ನನ್ನ ಮನಸ್ಸಿಗೆ ತುಂಬಾ ಶಾಂತಿ ಲಭಿಸುತ್ತಿದೆ. ಈ ಶಾಂತಿಯ ತಾಣ ತೋರಿದುದಕ್ಕಾಗಿ ನಾನು ನಮ್ಮ ಪಿಂಟೋ ರೈಟರಿಗೆ ಚಿರ‌ಋಣಿ. ಈಗ ಪಿಂಟೋ ರೈಟರ್ ನಿವೃತ್ತರಾಗಿ ತಮ್ಮ ಸ್ವಂತ ಊರಲ್ಲಿ ನೆಲೆಸಿದ್ದಾರೆ.

* * *