ನನಗೆ ೨೦೦೭ನೇ ನವೆಂಬರ ಇಪ್ಪತ್ತಮೂರನೇ ತಾರೀಕು ಕಾರ್ಡಿಯಕ್ ಆರ್ಟರಿ ಬೈಪಾಸ್ ಸರ್ಜರಿ ಆಯಿತು. ನನ್ನ ಹೃದಯದ ಮೂರು ಧಮನಿಗಳಲ್ಲಿ ರಕ್ತ ಸರಿಯಾಗಿ ಸಂಚಲನೆ ಆಗುತ್ತಿರಲಿಲ್ಲ. ನನ್ನ ಎರಡು ಕಾಲುಗಳ ಮೀನಖಂಡಗಳ ಹತ್ತಿರ ಸುಮಾರು ಒಂದು ಅಡಿ ಉದ್ದದ ಗಾಯಗಳನ್ನು ಹಾಕಿ, ರಕ್ತನಾಳಗಳನ್ನು ತೆಗೆದು ನನ್ನ ಹೃದಯಕ್ಕೆ ಕಸಿ ಹಾಕಿ ಬೈಪಾಸ್ ನಿರ್ಮಿಸಿ ಡಾಕ್ಟರುಗಳು ನನ್ನನ್ನು ಬದುಕಿಸಿದ್ದಾರೆ. ಎದೆಗೂಡನ್ನು ತೆರೆದು ಸುಮಾರು ನಾಲ್ಕೂವರೆ ಗಂಟೆಗಳಿಗೂ ಹೆಚ್ಚಿನ ಕಾಲ ಈ ಶಸ್ತ್ರಚಿಕಿತ್ಸೆ ಮಾಡಲು ಡಾಕ್ಟರುಗಳು ಶ್ರಮಿಸಿದ್ದಾರೆ. ಆಪರೇಶನ್ ಆಗಿ ಹತ್ತನೇ ದಿವಸಕ್ಕೇ ನನ್ನನ್ನು ಮನೆಗೆ ಕಳುಹಿಸಿದರು. ನಾನು ಮನೆಗೆ ಬಂದು ಎರಡನೇ ವಾರದಲ್ಲಿ ನನ್ನ ಡಾಕ್ಟರುಗಳು ಮೊದಲ ಪೋಸ್ಟ್ ಆಪರೇಟಿವ್ ಚೆಕ್‌ಅಪ್‌ಗೆ ಕರೆದರು. ಇಂದು ಎರಡನೇ ಚೆಕ್‌ಅಪ್ ಮಾಡಿಸಲು ಡಾಕ್ಟರುಗಳ ಆಣತಿಯ ಪ್ರಕಾರ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ಹೋದೆ. ಅವರೆಲ್ಲಾ ಒಟ್ಟಾಗಿ ನನ್ನನ್ನು ತಪಾಸಿಸಿ ನಿಮ್ಮ ಆರೋಗ್ಯ ಸುಧಾರಿಸುತ್ತಾ ಇದೆ ಎಂದರು. ನನ್ನ ಡಾಕ್ಟರುಗಳೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸಿದೆ.

ನನ್ನ ಎದೆಯ ಮೇಲಿನ ಗಾಯ ಈಗ ಸಂಪೂರ್ಣ ಗುಣವಾಗಿದೆ. ಎದೆಗೂಡನ್ನು ಪುನಃ ಕೂಡಿಸಿದಲ್ಲಿ ಮಾತ್ರ ಸ್ವಲ್ಪ ನೋವು ಇನ್ನೂ ಇದೆ. ಕಾಲಿನ ಗಾಯಗಳು ಮಾಯುತ್ತಿವೆ. ಇನ್ನು ನಾನು ಕಾಲುಗಳಿಗೆ ಪೈನ್ ಸಪೋರ್ಟ್‌ಸ್ಟಾಕಿಂಗ್ಸ್ ಧರಿಸಿ ಪಾರ್ಕಿನಲ್ಲಿ ವಾಕ್ ಮಾಡಬಹುದು ಎಂದಿದ್ದಾರೆ. ನನ್ನ ವಾಕಿಂಗ್‌ದೋಸ್ತಿಗಳು ನನ್ನನ್ನು ಸಂತೋಷದಿಂದ ಸ್ವಾಗತಿಸುತ್ತಾರೆ.

ಇನ್ನು ಇನ್ನೂರು ಮೈಲು ದೂರ ಇರುವ ನಮ್ಮ ತೋಟಕ್ಕೆ ಪ್ರಯಾಣಿಸಲು ನನಗೆ ಡಾಕ್ಟರುಗಳು ಪರ್ಮಿಶನ್ ಕೊಟ್ಟಿಲ್ಲ. ಒಂದು ತಿಂಗಳ ನಂತರ ನಿಮ್ಮ ಮೂರನೇ ಚೆಕ್‌ಅಪ್ ಆದ ಮೇಲೆ ಹೇಳುತ್ತೇವೆ ಎಂದರು. ನೀವುಗಳು ಒಪ್ಪಿಗೆ ಕೊಟ್ಟ ಮೇಲೆ ನಾನು ನನ್ನ ಪ್ರೀತಿಯ ಮಹೀಂದ್ರಾ ಜೀಪಿನಲ್ಲಿ ತೋಟಕ್ಕೆ ಹೋಗಿ ಬರಬಹುದೇ? ಎಂದು ಡಾಕ್ಟರುಗಳನ್ನು ಕೇಳಿದೆ. ಯಾವ ಮಾಡೆಲ್? ಅಂತ ಕೇಳಿದರು. ‘1994 Model MM 540 Jeep’ ಎಂದೆ.             ಸರ್, ಇನ್ನು ಮುಂದೆ ನೀವು ಸದ್ರಿ ಜೀಪನ್ನು ಉಪಯೋಗಿಸುವಂತೆಯೇ ಇಲ್ಲ. ಅದರ ಸಸ್ಪೆನ್ಷನ್ ತುಂಬಾ ರಿಜಿಡ್ ಆಗಿ ಇರುತ್ತೆ. ನೀವು ಬೇಕಾದರೆ ‘4WD Suzuki Grand Vitara,  Tata 4WD Safari ,  4WD Nissan or 4WD Ford Endeavor’ ಉಪಯೋಗಿಸಬಹುದು. ಈ ಹೊಸಾ ಮಾಡೆಲ್‌ಗಳ ಸಸ್ಪೆನ್ಷನ್ ಸ್ಮೂತ್ ಆಗಿ ಇರುತ್ತವೆ. ‘Mahindra MM 540’ ಮಾತ್ರ ಬೇಡ! ಆ ಜೀಪ್ ತುಂಬಾ ಜಂಪ್ ಆಗುವುದರಿಂದ ಅದರಲ್ಲಿ ಪ್ರಯಾಣಿಸಬೇಡಿ. ಬೆನ್ನುಹುರಿ ಕುಲುಕುವ ಪ್ರಯಾಣವು ನಿಮ್ಮ ಹೃದಯಕ್ಕೆ ಇನ್ನು ಒಳ್ಳೆಯದಲ್ಲ ಎಂದರು. ಈ ತರುಣ ಸೂಪರ್ ಸ್ಪೆಶಲಿಸ್ಟ್ ವೈದ್ಯರುಗಳ ಕಾರ್ ಜ್ಞಾನ ಕಂಡು ನಾನು ಬೆರಗಾದೆ..!

ಇವರ ಪ್ರಕಾರ ನನ್ನ ಪ್ರೀತಿಯ ‘4WD  Mahindra Jeepಗೆ ನಾನು ವಿದಾಯ

ಹೇಳಬೇಕಂತೆ…!!. ಅವರು ನನಗೆ ರೆಕಮೆಂಡ್ ಮಾಡಿದ ದುಬಾರಿ ಕ್ರಯದ ಆಲ್ ವ್ಹೀಲ್ ಡ್ರೈವ್ ಕಾರುಗಳು ನಮ್ಮ ತೋಟದಲ್ಲಿನ ಅಗಲ ಕಿರಿದಾದ ಮತ್ತು ಬಹು ಕಡಿದಾದ ಒಳಹಾದಿಗಳಿಗೆ ಒಗ್ಗುವುದಿಲ್ಲ. ಈ ಹೊಸ ರೀತಿಯ ಹೊಸ ವಿನ್ಯಾಸದ ಥಳಥಳ ಹೊಳೆಯುವ ಕಾರುಗಳಿಗೆ ಕಾಫಿಯ ರೆಪ್ಪೆಗಳು (ರೆಂಬೆಗಳು) ತಾಗಿದರೆ, ಅವುಗಳ ಮೇಲೆ ಗೀರುಗಳು ಉಂಟಾಗುತ್ತವೆ. ಅವುಗಳಿಗೆ ಸಣ್ಣಪುಟ್ಟ ಡೆಂಟ್‌ಗಳು ಉಂಟಾದರೆ ಕೂಡಾ, ಈ ವಾಹನಗಳ ಬಾಡಿಯನ್ನು ನಮ್ಮ ಹತ್ತಿರದ ಪೇಟೆಗಳಲ್ಲಿ ರಿಪೇರಿಮಾಡಿ ಮೊದಲಿನ ಸ್ಥಿತಿಗೆ ತರುವುದು ಸಾಧ್ಯವಿಲ್ಲ, ಅವುಗಳ ರಿಪೇರಿ ನಮಗೆ ಬಹಳ ದುಬಾರಿ ಎನಿಸುತ್ತದೆ. ಅಲ್ಲದೇ, ಈ ಹೊಸ ತರಹದ ವಾಹನಗಳನ್ನು ನಮ್ಮ ಗುಡ್ಡಗಾಡಿನ ಹಳ್ಳಿಗಳಲ್ಲಿ ರಿಪೇರಿ ಮಾಡಲು ನಮ್ಮಲ್ಲಿಯ ಸಾಂಪ್ರದಾಯಿಕ ಮೆಕ್ಯಾನಿಕ್‌ಗಳಿಗೆ ಸಾಧ್ಯವಾಗುವುದಿಲ್ಲ. ಅವುಗಳ ಸ್ಪೇರ್‌ಪಾರ್ಟ್‌ಗಳೂ ನಮ್ಮ ಊರಿನಲ್ಲಿ ಸಿಗುವುದಿಲ್ಲ. ಇಂತಹಾ ಕಾರುಗಳ ರಿಪೇರಿ ಆಗಬೇಕಾದರೆ ಹತ್ತಿರದ ಸಿಟಿಗಳಲ್ಲಿ ಇರುವ ಅವುಗಳ ಕಂಪೆನಿಯ ಶೋರೂಮ್ ಅಥವಾ ಅಧಿಕೃತ ವರ್ಕ್‌ಶಾಪ್‌ಗಳಿಗೇ ಒಯ್ಯಬೇಕು. ನಮಗೆ ಹತ್ತಿರದ ಸಿಟಿಯಾದ ಚಿಕ್ಕಮಗಳೂರು ನೂರು ಕಿಲೋಮೀಟರ್ ದೂರ..!

ನಮ್ಮ ತೋಟದ ಕೆಲಸ ಅಥವಾ ತಿರುಗಾಟಕ್ಕೆ MM540 ಅಥವಾ CJ ಮಾಡೆಲಿನ ಮಹೀಂದ್ರಾ ಕಂಪೆನಿ ತಯಾರಿಯ ಹಳೆಯ ಜೀಪುಗಳೇ ಸರಿ. ಇವನ್ನು ನಮ್ಮ ಹಳ್ಳಿಯ ಬರಿಗಾಲಿನ ಮೆಕ್ಯಾನಿಕ್‌ಗಳು ಅಥವಾ ನಮ್ಮೂರಿನ ಕಮ್ಮಾರರು ಕೂಡಾ ರಿಪೇರಿ ಮಾಡುವಷ್ಟು ಪಳಗಿರುತ್ತಾರೆ. ಇವುಗಳ ಸ್ಪೇರ್‌ಪಾರ್ಟ್‌ಗಳು ನಮ್ಮ ಹೋಬಳಿಯ ಚಿಕ್ಕ ಪೇಟೆಗಳಲ್ಲಿ ಲಭ್ಯವಿರುತ್ತವೆ. ಇವುಗಳ ಚಿಕ್ಕಪುಟ್ಟ ರಿಪೇರಿಗಳಾದರೆ ಅವನ್ನು ನಾವೇ ಮನೆಯಲ್ಲಿ ಮಾಡಿಕೊಳ್ಳುತ್ತೇವೆ. ಆದರೆ, ಈ ವಿಚಾರಗಳನ್ನು ಈ ಹೈಟೆಕ್ ಆಸ್ಪತ್ರೆಯ ವೈದ್ಯರ ತಂಡಕ್ಕೆ ನಾನು ವಿವರಿಸಿ ಹೇಳಿದರೂ, ಏನೂ ಪ್ರಯೋಜನವಾಗದು ಎಂದು ಸುಮ್ಮನಾದೆ.

ಡಾಕ್ಟರುಗಳೇ! ತೋಟದವರೆಗೆ ಕಾರಿನಲ್ಲಿ ಹೋಗಿ, ನನ್ನ ಜೀಪನ್ನು ತೋಟದ ಒಳಗೆ ಓಡಾಡಲು ಮಾತ್ರ ಉಪಯೋಗಿಸಬಹುದೇ? ಎಂದು ಕೇಳಿದೆ.

ನಿಮಗಿನ್ನು ಜೀಪ್ ಸವಾರಿ ಬೇಡ. ನಿಮ್ಮ ದೇಹವನ್ನು ಎತ್ತಿಹಾಕುವ ವಾಹನದಲ್ಲಿ ನೀವು ಇನ್ನು ಕೂರಲೇಬಾರದು. ನಿಮ್ಮ ಬೆನ್ನುಹುರಿಗೆ ತ್ರಾಸವಾಗುವ ಪ್ರಯಾಣ ಇನ್ನು ನಿಮ್ಮ ಹೃದಯಕ್ಕೆ ಒಳ್ಳೆಯದಲ್ಲ ಎಂಬ ಕೊನೆಯ ತೀರ್ಮಾನವನ್ನು ಡಾಕ್ಟರುಗಳು ಹೇಳಿಯೇಬಿಟ್ಟರು.               ಹೃದಯದ ತೊಂದರೆಯಿಂದ ಆಸ್ಪತ್ರೆ ಸೇರುವವರೆಗೆ, ನನ್ನ 4WD – MM 540 ಮಹೀಂದ್ರಾ ಜೀಪ್ ನನ್ನ ದೇಹದ ಒಂದು ಭಾಗದಂತೆಯೇ ಇತ್ತು. ತೊಂಬತ್ತನಾಲ್ಕನೇ ಮಾಡೆಲ್ ಆದರೂ, ನನ್ನ ಜೀಪಿನಂತಹಾ ಜೀಪ್, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗಾ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲೇ ಕಾಣಸಿಗುತ್ತಾ ಇಲ್ಲ. ನನ್ನ ಜೀಪನ್ನು ಕೊಳ್ಳುವಾಗಲೇ ಕಸ್ಟಮ್‌ಬಿಲ್ಟ್ ಪಿಗಾಸಸ್ ಫೈಬರ್‌ಬಾಡಿ ಮತ್ತು ಜಪಾನಿನ ಯುನಿಕ್ಲಾ ಸೂಪರ್‌ಕಿಂಗ್ ಏರ್‌ಕಂಡೀಶನರ್ ಆಪ್ಷನಲ್ ಆಗಿ ಹಾಕಿಸಿದ್ದೆ. ಮಳೆ ಬಿಸಿಲು ಚಳಿಗಳ ಪರಿವೆಯಿಲ್ಲದೆ ನನ್ನ ಜೀಪಿನಲ್ಲಿ ನಾನು ಹಗಲು ರಾತ್ರಿಯೆನ್ನದೆ ಸುತ್ತುತ್ತಿದ್ದೆ.

ನನ್ನ ಜೀಪ್ ಎಂತಹಾ ಕೆಸರಿರುವ ಕೊರಕಲು ಜಾಗ ಇರಲಿ, ಅಂಜದೇ ದಾಟಿ ಹೋಗುತ್ತಿತ್ತು. ಎಂತಹಾ ಕಡಿದಾದ ತೋಟದ ಒಳಗಿನ ರಸ್ತೆಗಳಲ್ಲಿಯೂ ನಿರಾಯಾಸವಾಗಿ ಅದನ್ನು ಚಲಾಯಿಸುತ್ತಿದ್ದೆ. ಬೇಸಿಗೆಯ ಸಮಯದಲ್ಲಿ ಭದ್ರಾ ನದಿಯನ್ನು ನೀರು ಕಡಿಮೆಯಿದ್ದ ಜಾಗ ನೋಡಿ ಸಲೀಸಾಗಿ ದಾಟಿ ಹೋಗುತ್ತಿದ್ದೆ. ಮುಳ್ಳಯ್ಯನಗಿರಿ, ಕುದುರೆಮುಖದ ಪರ್ವತಪ್ರದೇಶದ ರಸ್ತೆಗಳನ್ನು ಹತ್ತುವುದು ಅದಕ್ಕೆ ನೀರು ಕುಡಿದಷ್ಟು ಸುಲಭವಾಗಿತ್ತು.

ನನ್ನ ಜೀಪು ಇದುವರೆಗೆ ಒಮ್ಮೆಯೂ ಕೆಟ್ಟುನಿಂತು ನನ್ನನ್ನು ದಾರಿಯಲ್ಲಿ ನಿಲ್ಲಿಸಿಲ್ಲ. ಕಾಫಿಹಣ್ಣಿನ ಸಮಯದಲ್ಲಿ ರಾತ್ರಿಹೊತ್ತು ಸರ್ಚ್‌ಲೈಟ್ ಹಾಕಿಕೊಂಡು ನಮ್ಮ ತೋಟದ ಎಲ್ಲಾ ತಾಕುಗಳಿಗೂ ಹೋಗಿ ಬರುತ್ತಿದ್ದೆ. ಸಣ್ಣ ಸಣ್ಣ ರೋಟುಗಳಲ್ಲಿ (ರೋಟು ಅಂದರೆ ತೋಟದ ಭಾಷೆಯಲ್ಲಿ ಅಗಲ ಬಹಳ ಕಿರಿದಾದ ನಡೆಯುವ ಹಾದಿಗಳು) ಅದನ್ನು ಓಡಿಸಿ ನಾನು ರಾತ್ರಿಯ ಹೊತ್ತಿನ ತೋಟಕಾವಲು ನಡೆಸುತ್ತಿದ್ದೆ. ಅದು ಕಳ್ಳಕಾಕರಿಗೆ ಭಯ ಹುಟ್ಟಿಸುತ್ತಿತ್ತು. ಇಂತಹಾ ಜೀಪನ್ನು ನಾನು ಅಗಲಬೇಕೇ…?

ನನ್ನ ಮಗಳಂದಿರಿಗಾದರೂ ಅದನ್ನು ಕೊಡೋಣ ಎಂದರೆ, ನನ್ನ ಮಕ್ಕಳಿಬ್ಬರೂ ಬೆಂಗಳೂರು ಸಿಟಿಯಲ್ಲೇ ಜಾರಿಬಿದ್ದು ಬೆನ್ನುಹುರಿಗೆ ಪೆಟ್ಟು ಮಾಡಿಕೊಂಡು ಬಿಟ್ಟಿದ್ದಾರೆ. ಅವರು ನನ್ನ ಜೀಪನ್ನು ಉಪಯೋಗಿಸಲಾರರು. ಈಗ ಜೀಪ್ ನಮ್ಮ ಬೆಂಗಳೂರಿನ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಜಾಗದಲ್ಲಿ ಅನಾಥವಾಗಿ ನಿಂತಿದೆ. ಅದನ್ನು ನೋಡಿದಾಗ ನನಗೆ ಈಗ ವಿರಹ ವೇದನೆ ಉಂಟಾಗುತ್ತಿದೆ. ಅದನ್ನು ಮಾರಲು ಮನಸ್ಸಿಲ್ಲ. ಇಟ್ಟುಕೊಂಡರೆ, ಸದ್ಯಕ್ಕೆ ಅದನ್ನು ಉಪಯೋಗಿಸುವವರು ಇಲ್ಲ.

ಆದರೂ, ಅದನ್ನು ಮಾರದೇ ಹಾಗೆಯೇ ಇಟ್ಟುಕೊಳ್ಳೋಣ…! ಎಂದು ನಿರ್ಧಾರ ಮಾಡಿದ್ದೇನೆ. ಅದಕ್ಕೆ ಕೊಟ್ಟ ಹಣವನ್ನು ಅದು ಯಾವಾಗಲೋ ನಮಗೆ ದುಡಿದುಕೊಟ್ಟಿದೆ. ಈಗ ಕೂಡಾ ಅದು ನನ್ನ ದೃಷ್ಟಿಯಲ್ಲಿ ಶೋರೂಮ್ ಕಂಡೀಶನ್‌ನಲ್ಲಿದೆ. ಮುಂದೆ, ಎಂದಾದರೊಂದು ದಿನ, ನನ್ನ ಮೊಮ್ಮಕ್ಕಳು ಅಜ್ಜನ Antique Jeep ಅಂತ ನನ್ನ ತೊಂಬತ್ತನಾಲ್ಕನೇ ಮಾಡೆಲ್ ಜೀಪನ್ನು ಖಾಯಶ್‌ಮಾಡಿ ಓಲ್ಡ್ ಕಾರ್ ರ‍್ಯಾಲಿಗಳಲ್ಲಿ ಅದನ್ನು ಓಡಿಸಿಯಾರೇ..?

ಸದ್ಯಕ್ಕೆ ಎಂಟು ಸೀಟುಗಳು ಇರುವ ಟೊಯೋಟಾ ಇನ್ನೋವಾ ನನ್ನ ಕಾರು. ಭಾರತದಲ್ಲಿ ಸಿಗುವ ಕಾರುಗಳಲ್ಲೇ ಇನ್ನೋವಾ ಸ್ಮೂತ್ ರೈಡ್ ಕೊಡುವ ಕಾರು. ತಾರುರಸ್ತೆಯಲ್ಲಿ ಅದು ರಾಜ. ಆದರೆ ಇನ್ನೋವಾಕ್ಕೆ ರೋಡ್ ಕ್ಲೀಯರನ್ಸ್ ಕಡಿಮೆ. ಅದರಲ್ಲಿ ಕುಳಿತು ತೋಟ ಸುತ್ತಲು ಬರುವುದಿಲ್ಲ. ನಮ್ಮ ತೋಟದಲ್ಲಿ ಇರುವ ಮ್ಯಾಸಿ ಫರ್ಗುಸನ್ ಟ್ರ್ಯಾಕ್ಟರ್ ಮತ್ತು ನನ್ನ ಪ್ರೀತಿಯ ಜೀಪ್ ಇವುಗಳನ್ನು ಇನ್ನು ಮುಂದಕ್ಕೆ ನಾನು ಓಡಿಸುವ ಹಾಗಿಲ್ಲ.

ಸರಿ..! ನನ್ನ ಜೀವನದ ಸೆಕೆಂಡ್ ಇನ್ನಿಂಗ್ಸ್‌ನ ಜೀವನ ರೀತಿಯನ್ನು ಡಾಕ್ಟರುಗಳು ಹೇಳಿದ ರೀತಿಯೇ ಬದಲಾಯಿಸಿಕೊಳ್ಳಬೇಕು! ನನಗೆ ಬೇರೆ ವಿಧಿಯೇ ಇಲ್ಲ.

ಜಾಗ್ರತೆಯಾಗಿ ಡಯಟ್ ಮಾಡುತ್ತಾ ಮತ್ತು ನಿಗದಿತ ವ್ಯಾಯಾಮ ಮಾಡುತ್ತಾ ಇದ್ದರೆ, ನನ್ನ ಹಾರ್ಟ್ ಇನ್ನು ಹತ್ತರಿಂದ ಹದಿನೈದು ವರ್ಷ ಬಾಳುತ್ತೆ ಅಂತ ನನ್ನ ಹೃದಯತಜ್ಞರುಗಳು ಇಂದು ಹೇಳಿದರು. ಕಾಲಕ್ಕೆ ತಕ್ಕ ಕೋಲ ಕಟ್ಟಿಕೊಂಡು ಅವರು ಹೇಳಿದ ರೀತಿಯಲ್ಲೇ ಬಾಳುತ್ತೇನೆ. ಡಾಕ್ಟರುಗಳು ಹೇಳಿದಂತೆಯೇ ಕೇಳುತ್ತೇನೆ.

|| ಕಾಲಾಯ ತಸ್ಮೈ ನಮಃ ||

* * *