ಹುಟ್ಟಿದ ಜೀವಕ್ಕೆ ಮರಣವು ಶತಸ್ಸಿದ್ಧ. ಹುಟ್ಟು-ಸಾವಿನ ಮಧ್ಯದ ಕಾಲವನ್ನು ನಾವು ಜೀವನ ಎನ್ನುತ್ತೇವೆ. ಹಲವರು ತಮ್ಮ ಪೂರ್ಣಾಯುಷ್ಯ ಬದುಕಿದರೆ, ಕೆಲವರು ಮಧ್ಯವಯಸ್ಸಿನಲ್ಲಿ ತೀರಿಹೋಗುತ್ತಾರೆ. ತಾರುಣ್ಯದಲ್ಲಿ ಅಪರೂಪಕ್ಕೆ ಕೆಲವರು ಸತ್ತರೆ, ಅವರ ಸಂಸಾರದ ಕೊರಗು ನೋಡುವುದು ತುಂಬಾ ಕಷ್ಟ. ಅದಕ್ಕಿಂತಲೂ, ಬಾಲ್ಯದಲ್ಲಿ ಯಾರಾದರೂ ಮರಣ ಹೊಂದಿದರೆ, ಅದು ಅತೀ ಶೋಚನೀಯ ದುಃಖ. ಮನುಷ್ಯನಾಗಿ ಹುಟ್ಟಿದ ಮೇಲೆ ಕಾಯಿಲೆ, ಕಸಾಲೆ, ಅಪಘಾತ ಮತ್ತು ಅವಘಡಗಳಿಂದ ಮರಣಭಯ ತಪ್ಪಿದ್ದಲ್ಲ. ಆಯುಷ್ಯವೊಂದು ಚೆನ್ನಾಗಿದ್ದರೆ ಸಕಲಜೀವಿಗಳೂ ದುರ್ಮರಣದಿಂದ ಪಾರಾಗುತ್ತವೆ. ಆಗ ಜೀವದ ಸೆಲೆ ಹೇಗಾದರೂ ಬದುಕಿ ಉಳಿಯುತ್ತೆ. ವಿಧಿಯ ತೀರ್ಮಾನದಂತೆ, ಅಪಘಾತಕ್ಕೊಳಗಾದ ಜೀವವು ಬದುಕಿ ಉಳಿದರೆ,- ಅದಕ್ಕಿಂತ ಸಂತೋಷ ವಾರ್ತೆ ಬೇರೊಂದಿಲ್ಲ! ಇದಕ್ಕೊಂದು ಉದಾಹರಣೆ ಹೇಳುತ್ತೇನೆ.

ನನ್ನ ಅಕ್ಕ ಶಶಿಕಲಾ ಆಚಾರ್ಯಳ ಮಗ ಚಿ.ವೃಜನಾಥನ ಉಪನಯನ ಸಮಾರಂಭವು ಸುಮಾರು ಇಪ್ಪತ್ತೈದು ವರ್ಷಗಳ ಕೆಳಗೆ ಉತ್ತರಕನ್ನಡ ಜಿಲ್ಲೆಯ ಸೋಂದಾಕ್ಷೇತ್ರದಲ್ಲಿ ನಡೆಯಿತು. ನನ್ನ ಅಕ್ಕನಿಗೆ ಒಬ್ಬನೇ ಮಗ, ಆದುದರಿಂದ ಬಳಗದ ನಾವೆಲ್ಲರೂ ಸೋಂದಾಕ್ಷೇತ್ರದಲ್ಲಿ ಸೇರಿದ್ದೆವು. ಉಪನಯನ ಸಮಾರಂಭ ಬಲು ವಿಜೃಂಭಣೆಯಿಂದ ನಡೆಯಿತು. ಮಧ್ಯಾಹ್ನದ ಸಂತರ್ಪಣೆಯೂ ಅದ್ಧೂರಿಯಿಂದ ನಡೆಯಿತು.

ನಾವೆಲ್ಲರೂ ಊಟಮಾಡಿ ಕೈತೊಳೆದುಕೊಳ್ಳಲು ಹೋದಾಗ, ಕೈತೊಳೆಯಲು ತುಂಬಿಸಿಟ್ಟ ಹಂಡೆಯ ನೀರು ಮುಗಿಯುತ್ತಾ ಬಂದಿತ್ತು. ನಾನು ಹೇಗೋ ಕೈತೊಳೆದುಕೊಂಡೆ. ನಂತರ, ನನ್ನ ಹೆಂಡತಿ ಮತ್ತು ಮಕ್ಕಳಿಗೆ ಕೈತೊಳೆದುಕೊಳ್ಳುವ ಸಲುವಾಗಿ ನೀರು ತರಲು ಸೋಂದಾಕ್ಷೇತ್ರದ ಧವಳ ಗಂಗೆ ಎಂದು ಪ್ರಸಿದ್ಧವಾದ ದೊಡ್ಡ ಸರೋವರದ ಕಡೆಗೆ ದೊಡ್ಡ ಬಿಂದಿಗೆಯೊಂದನ್ನು ಹಿಡಿದು ನಡೆದೆ.

ಆ ಸರೋವರದ ಮೆಟ್ಟಿಲುಗಳನ್ನು ಇಳಿಯುತ್ತಾ ಇರುವಾಗ ಸರೋವರದ ಕಿನಾರೆಗೆ ಹತ್ತಿರವಾಗಿ ಎನೋ ಕೆಂಚುಬಣ್ಣದ ವಸ್ತುವೊಂದು ತೇಲಿಕೊಂಡು ಮೇಲೆ ಬಂದು ಪುನಃ ಮುಳುಗಿದಂತೆ ಭಾಸವಾಯಿತು. ಏನೋ ಹುಲ್ಲುಜೊಂಡು ಇರಬಹುದೆಂದು ನಾನು ಅದರ ಬಗ್ಗೆ ಹೆಚ್ಚಿನ ಗಮನ ಕೊಡಲಿಲ್ಲ. ನಾನು ತುಂಬಿದ ಸರೋವರದ ಮೆಟ್ಟಿಲನ್ನು ಇಳಿದು ಬಿಂದಿಗೆಯಲ್ಲಿ ನೀರು ತುಂಬಿಕೊಳ್ಳುತ್ತಿರುವಾಗ, ಅದೇ ಕೆಂಚಗಿನ ವಸ್ತು ಕೆರೆಯ ಮಧ್ಯದಲ್ಲಿ ಪುನಃ ಮೇಲೆದ್ದಿತು. ನೋಡುತ್ತೇನೆ…!! ಅದು ಕೆಂಚುಬಣ್ಣದ ಕೂದಲಿನಿಂದ ಕೂಡಿದ ಮಗುವಿನ ಶಿರೋಭಾಗ..!! ಬಿಂದಿಗೆಯನ್ನು ಬದಿಗೆಸೆದು, ನೀರಿಗೆ ಧುಮುಕಿ, ಆ ಮಗುವಿನ ಕೂದಲನ್ನು ಬಲವಾಗಿ ಹಿಡಿದು, ಮಗುವಿನ ತಲೆಯನ್ನು ನೀರಿನ ಮೇಲಕ್ಕೆ ಎತ್ತಿಹಿಡಿದೆ. ಸುಮಾರು ಐದು ವರುಷದ ಚಿಕ್ಕ ಹೆಣ್ಣು ಮಗು ಮೂಗುಬಾಯಿಯಿಂದ ನೀರು ಸುರಿಸುತ್ತಾ ಉಸಿರಾಡಲು ಪ್ರಯತ್ನಪಡುತ್ತಿತ್ತು. ಅದಲ್ಲದೇ, ಆ ಮಗು ಪ್ರಾಣಭಯದಲ್ಲಿ ನನ್ನ ಕೈಯ್ಯನ್ನು ಬಲವಾಗಿ ಹಿಡಿದುಕೊಂಡಿತು. ನಾನು ನನ್ನ ಎಡಕೈಯ ಸಹಾಯದಿಂದ ಈಜುತ್ತಾ ದಡ ತಲುಪಿ, ಸರೋವರದ ಪಾವಟಿಕೆಯ ಮೇಲೆ ಅದನ್ನು ಬೋರಲಾಗಿ ಮಲಗಿಸಿ, ಅದರ ಪಕ್ಕೆಗಳನ್ನು ಒತ್ತಿ, ಉಸಿರಾಡಲು ಸಹಾಯ ಮಾಡಿದೆ. ನನ್ನ ಎನ್.ಸಿ.ಸಿ.ಯ ನಾವಿಕ ತರಬೇತಿಯಲ್ಲಿ ಕಲಿತ ಈ ಕೃತಕ ಉಸಿರಾಟದ ಕ್ರಮ ಅಂದು ಉಪಯೋಗಕ್ಕೆ ಬಂದಿತ್ತು..!!

ಆ ಹೆಣ್ಣು ಮಗುವಿನ ಬಾಯಿ ಹಾಗೂ ಮೂಗುಗಳಿಂದ ಸುಮಾರು ಒಂದು ಲೀಟರ್ ನೀರು ಹೊರಬಂತು. ತದನಂತರ, ಕೆಮ್ಮುತ್ತಾ ಅದೇ ಉಸಿರಾಡತೊಡಗಿತು. ಸ್ವಲ್ಪ ಸಮಯದ ನಂತರ ಗಾಬರಿಯಿಂದ ಮತ್ತು ನಾಚಿಕೆಯಿಂದ ಆ ಮಗುವು ಅಳಲು ಶುರುಮಾಡಿತು. ಅಷ್ಟರಲ್ಲಿ ನಾನು ಆ ಮಗುವನ್ನು ಗುರುತಿಸಿದೆ. ಅದು ನನ್ನ ಭಾವನ ಹಿರಿಯ ತಂಗಿ ಅಶ್ವಿನಿ ಎಂಬುವರ ಮೊದಲನೇ ಹೆಣ್ಣು ಕೂಸಾಗಿತ್ತು.

ಕೆಲವೇ ನಿಮಿಷಗಳಲ್ಲಿ ಅದರ ತಂದೆತಾಯಿ ಬಂದರು. ನನಗೆ ಕೃತಜ್ಞತೆ ಹೇಳಿ ಮಗುವನ್ನು ಮುದ್ದಾಡಿದರು. ಮಗುವಿನ ಬಟ್ಟೆ ಬದಲಾಯಿಸಿದರು. ಸ್ವಲ್ಪ ಹೊತ್ತಿನ ನಂತರ, ಅದು ಸಹಜವಾಗಿಯೇ ಆಡಲು ಶುರುಮಾಡಿತು. ಬದುಕಿನ ಸೊಡರು ನಂದದೆ ಉಳಿದಿತ್ತು.

ಮೊನ್ನೆ ತಾರೀಕು ಜೂನ್ ಹನ್ನೆರಡರಂದು ನಾನು ಉಡುಪಿಗೆ ಹೋಗಿದ್ದೆ. ನನ್ನ ಅಕ್ಕನ ಮಗ ವೃಜನಾಥ ತನ್ನ ತಾಯಿಯ ವೈದಿಕಕರ್ಮಗಳನ್ನು ಪುರೋಹಿತರ ಸಮಕ್ಷಮದಲ್ಲಿ ನೆರವೇರಿಸುತ್ತಿದ್ದ. ನಾನೂ ಸಭೆಯಲ್ಲಿ ಕುಳಿತೆ. ಅಷ್ಟರಲ್ಲಿ, ನನ್ನ ಭಾವನವರ ಹಿರಿಯ ತಂಗಿ ಅಶ್ವಿನಿ ಬಂದು ನನ್ನನ್ನು ಮಾತನಾಡಿಸಿದರು. ಅವರ ಹಿರಿಯ ಮಗಳು ಎಲ್ಲಿ ಎಂದು ಕೇಳಿದೆ. ಆಗ ಅವರು ಹಿಂದೆ ನಡೆದ ಸೋಂದಾಕ್ಷೇತ್ರದ ಅಪಘಾತವನ್ನು ನೆನಪಿಸಿಕೊಳ್ಳುತ್ತಾ, ಆಕೆ ಇಂದು ಗೋವಾದ ಪಣಜಿಯಲ್ಲಿ ಒಬ್ಬ ಗುಣವಂತ ಹೋಟೆಲ್ ಮಾಲಿಕನ ಕೈಹಿಡಿದು ಸುಖವಾಗಿ ಇದ್ದಾಳೆ ಎಂದರು. ಆಗ ನಾನು ತುಂಬಾ ಸಂತೋಷ ಎಂದು ಅವರನ್ನು ಅಭಿನಂದಿಸಿದೆ.

ಅವರ ಮುಖದಲ್ಲಿ ಕೃತಜ್ಞತೆಯ ನಗುವೊಂದು ಮಿಂಚಿತು. ಜೀವದ ಸೆಲೆಯು ಬತ್ತದೆ ಉಳಿದರೆ, ಜೀವನ ಅದೆಷ್ಟು ಸುಂದರ.

* * *