ತಿಮ್ಮೇಗೌಡರು ನನ್ನ ಅತೀ ಸನಿಹದ ನೆರೆಹೊರೆಯ ಹಿರಿಯ ಮಿತ್ರ. ಪಶ್ಚಿಮದಿಕ್ಕಿನಲ್ಲಿ ನಮ್ಮ ಜಮೀನಿಗೆ ಹೊಂದಿಕೊಂಡೇ ಅವರ ಜಮೀನಿದೆ. ನಮ್ಮಿಬ್ಬರಿಗೂ ಪಶ್ಚಿಮದಲ್ಲಿ ಹರಿಯುವ ಭದ್ರಾನದಿಯೇ ಸರಹದ್ದು. ತಿಮ್ಮೇಗೌಡರು ನನ್ನ ಆತ್ಮೀಯ ಗೆಳೆಯರು. ನಿಮಗೆ ಈ ಗಾಢವಾದ ಮೈತ್ರಿ ಹೇಗೆ ಉಂಟಾಯಿತು? ಎಂದು ಊರವರೆಲ್ಲಾ ಆಶ್ಚರ್ಯಪಡುತ್ತಿದ್ದರು. ಹೊರನೋಟಕ್ಕೆ ನಮ್ಮಿಬ್ಬರಲ್ಲಿ ಸಾಮ್ಯಕಡಿಮೆ. ಈ ಮೈತ್ರಿಗೆ ತಿಮ್ಮೇಗೌಡರ ನಿರ್ಮಲ ಮನಸ್ಸು ಹಾಗೂ ಅಗಾಧವಾದ ಪ್ರೀತಿಯೇ ಕಾರಣ. ಪ್ರಾಯದಲ್ಲಿ ಅವರು ನನಗಿಂತ ಮೂವತ್ತು ವರ್ಷಗಳಷ್ಟು ಹಿರಿಯರು.                 ನಾನೊಬ್ಬ ಆಧುನಿಕ ರಾಸಾಯನಿಕ ಬೇಸಾಯಗಾರ ಎನ್ನಿಸಿಕೊಂಡಿದ್ದ ಕಾಲವದು. ಅವರು ಅಪ್ಪಟ ಸಾವಯವ ಕೃಷಿಕ ಆಗಿದ್ದರು. ನಮ್ಮದು ಮಧ್ಯಮ ಗಾತ್ರದ ಹಿಡುವಳಿಯಾದರೆ, ಅವರದು ಚಿಕ್ಕದಾದ ಚೊಕ್ಕ ಹಿಡುವಳಿ. ಅವರು ನೇಗಿಲಯೋಗಿಯಾಗಿ ತಮ್ಮ ಜಮೀನಿನಲ್ಲಿ ಭತ್ತ, ಅಡಿಕೆ, ಬಾಳೆ ಮತ್ತು ರೋಬಸ್ಟಾ ಕಾಫಿ ಬೆಳೆ ಬೆಳೆಯುತ್ತಾ ಸಂತೃಪ್ತ ಜೀವನ ನಡೆಸುತ್ತಿದ್ದರು. ನಾನು ಆಧುನಿಕ ಕೃಷಿತಂತ್ರಜ್ಞಾನದ ಹಿಂದೆಬಿದ್ದು ಸದಾ ಮೈ ಪರಚಿಕೊಳ್ಳುವಷ್ಟು ಜಂಜಾಟದ ಜೀವನ ನಡೆಸುತ್ತಿದ್ದರೆ, ತಿಮ್ಮೇಗೌಡರದು ಸಾವಯವ ಕೃಷಿಯ ನಿಶ್ಚಿಂತ ಜೀವನ.

ತಿಮ್ಮೇಗೌಡರದು ಗೌರವರ್ಣದ ಎತ್ತರದ ನಿಲುವು. ಮಲೆನಾಡಿನ ತುಂಡು ಪಂಚೆ, ಚೌಕುಳಿ ಶರಟು. ಕಾಲಿಗೆ ಮಲೆನಾಡಿನ ಚಡಾವು. ಎಲೆ‌ಅಡಿಕೆ ಹವ್ಯಾಸ. ಅವರ ತಲೆಯಲ್ಲಿ ಕ್ರಾಪು ಮಾಡಿದ ಬೆಳ್ಳಿಕೂದಲು ಮಿಂಚುತ್ತಿತ್ತು. ಒಂದು ಕೈಯ್ಯಲ್ಲಿ ಕಾಫಿತೋಟದ ಕತ್ತಿ, ಇನ್ನೊಂದು ಕೈಯ್ಯಲ್ಲಿ ನಾವು ವಾಕಿಂಗ್‌ಸ್ಟಿಕ್ ಎನ್ನಬಹುದಾದ ಗಟ್ಟಿಯಾದ ಮರದ ಬೆತ್ತ. ಆ ಕಾಲದಲ್ಲಿ ನಾನು ಬೆಲ್‌ಬಾಟಮ್, ಜೀನ್ಸ್ ಮತ್ತು ಟೀಶರ್ಟ್ ಧಾರಿ. ಕೈಯ್ಯಲ್ಲಿ ಸದಾ ಸಿಗರೇಟು. ಮೊಣಕಾಲಿಗೆ ಬರುವ ಬೂಟು. ತಲೆತುಂಬಾ ಉದ್ದಕೂದಲು (ಹಳ್ಳಿಭಾಷೆಯಲ್ಲಿ ಹಿಪ್ಪಿಕಟ್) ಅದರ ಮೇಲೊಂದು ಅಗಲವಾದ ಹ್ಯಾಟು. ಮುಖದ ಮೇಲೆ ಹೋತನ ಗಡ್ಡ (ಫ್ರೆಂಚ್ ಬೀಯರ್ಡ್) ನನ್ನ ಕೈಯ್ಯಲ್ಲೂ ಕಾಫಿಯ ಕಶಿಚಾಕು(ಚಿಕ್ಕಸೈಜಿನ ಕತ್ತಿ). ಬಾಹ್ಯವೇಷದಲ್ಲಿ ಕೈಯಲ್ಲಿರುವ ಕತ್ತಿ ಮತ್ತು ಆಂತರಿಕವಾಗಿ ನಮ್ಮ ನಮ್ಮ ಕೆಲಸದಲ್ಲಿರುವ ಆಸಕ್ತಿ ಮಾತ್ರ ನಮ್ಮಲ್ಲಿದ್ದ ಹೊಂದಾಣಿಕೆಗಳು.

ರಾಸಾಯನಿಕಗೊಬ್ಬರ ಮತ್ತು ಕ್ರಿಮಿನಾಶಕಗಳ ಉಪಯೋಗವನ್ನು ತಿಮ್ಮೇಗೌಡರು ಸುತಾರಾಮ್ ಒಪ್ಪುತ್ತಿರಲಿಲ್ಲ. ನೋಡಿ, ಸ್ವಾಮೀ ಇವೆರಡೂ ಪ್ರಕೃತಿಸಹಜವಾದುದ್ದಲ್ಲ. ಎನ್ನುತ್ತಿದ್ದರು ತಿಮ್ಮೇಗೌಡರು. ಆದರೆ ನಾನು ನೋಡಿ ತಿಮ್ಮೇಗೌಡರೇ, ಈ ಬೆಳೆಯುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ಕೀಟ ಹಾಗೂ ರೋಗಗಳ ಬಾಧೆ, ಇವುಗಳಿಂದಾಗಿ ರಾಸಾಯನಿಕಗೊಬ್ಬರ ಹಾಗೂ ಕ್ರಿಮಿನಾಶಕಗಳ ಉಪಯೋಗ ಅನಿವಾರ್ಯ. ನಾವು ಲಭ್ಯವಿರುವ ಜಾಗದಲ್ಲಿ ಹೆಚ್ಚು ಆಹಾರ ಪದಾರ್ಥಗಳನ್ನು ಬೆಳೆಯಬೇಕಾಗಿರುವುದರಿಂದ, ಇವುಗಳ ಉಪಯೋಗವನ್ನು ಮಾಡಲೇಬೇಕಾಗಿದೆ! ಎನ್ನುತ್ತಿದ್ದೆ. ಈ ವಿಪರ್ಯಾಸಗಳ ನಡುವೆಯೂ, ನಾನು ಮತ್ತು ತಿಮ್ಮೇಗೌಡರು ಆಪ್ತ ಮಿತ್ರರು. ದಿನಾ ಒಬ್ಬರ ಮುಖ ಒಬ್ಬರು ಒಮ್ಮೆಯಾದರೂ ನೋಡಲೇಬೇಕು!

೧೯೭೨ನೇ ಇಸವಿಯಿಂದ ನಾವಿಬ್ಬರೂ ಮಿತ್ರರು. ನಮ್ಮಿಬ್ಬರದೂ ನಿರ್ವ್ಯಾಜ್ಯ ಪ್ರೇಮ. ಹಿರಿಯರಾದ ತಿಮ್ಮೇಗೌಡರನ್ನು ನಾನು ಗೌರವಿಸುತ್ತಾ ಇದ್ದರೆ, ಅವರು ಕಿರಿಯನಾದ ನನ್ನನ್ನು ಬಹುವಾತ್ಸಲ್ಯದಿಂದ ಕಾಣುತ್ತಿದ್ದರು. ಅವರ ಮನೆಯಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಚಕ್ಕೋತ, ಸೀತಾಫಲ ಮತ್ತು ಮೂಸಂಬಿ ಹಣ್ಣುಗಳಲ್ಲಿ ನನಗೊಂದು ಪಾಲು ಇದ್ದೇ ಇರುತ್ತಿತ್ತು. ಅಂತೆಯೇ, ನಮ್ಮಲ್ಲಿ ಬೆಳೆಯುತ್ತಿದ್ದ ಪನ್ನೇರಲು, ಕಸ್ತೂರಿಜಾಮ್ ಮತ್ತು ಬೆಣ್ಣೆಹಣ್ಣುಗಳು ತಿಮ್ಮೇಗೌಡರ ಮಕ್ಕಳ ಪಾಲಿಗೆ ಸಲ್ಲುತ್ತಿದ್ದುವು.

ಅವರ ಮನೆ ಪ್ರಶಾಂತವಾದ ಜಾಗದಲ್ಲಿತ್ತು. ಅವರ ಮನೆ ಜಗಲಿಯಲ್ಲಿ ಕುಳಿತು ಭತ್ತದ ಗದ್ದೆಗಳ ಆಚೆಗೆ ಹರಿಯುತ್ತಿದ್ದ ಭದ್ರಾನದಿಯನ್ನು ನೋಡುವುದೇ ಒಂದು ಸೊಗಸು. ನಮ್ಮ ಮನೆ ಮಂಗಳೂರು ಹೆಂಚಿನ ಮನೆಯಾದರೆ, ತಿಮ್ಮೇಗೌಡರದು ಹುಲ್ಲಿನ ಮಾಡಿನ ಚೊಕ್ಕ ಮನೆ. ಮನೆಯ ಪಕ್ಕದಲ್ಲೇ ಹುಲ್ಲುಮಾಡಿನ ಭತ್ತದ ಕಣಜ ಇದ್ದ ಕೊಟ್ಟಿಗೆ.  ಅದರ ಪಕ್ಕಕ್ಕೇ, ಹುಲ್ಲು ಹೊಚ್ಚಿದ ತುಂಬಿದ ಹಟ್ಟಿ. ಮನೆಯ ಸುತ್ತ ನಾಲ್ಕಾರು ಕಾವಲಿನ ನಾಯಿಗಳು. ಹುಲ್ಲಿನ ಮನೆಯಾದರೂ ಅವರ ಮನೆ ತುಂಬಾ ಅಚ್ಚುಕಟ್ಟು. ಪ್ರತಿವರ್ಷ ಮನೆಗೆ ಬಣ್ಣಸುಣ್ಣ ಮಾಡಿ, ಹೊಸ ಹುಲ್ಲು ಹೊಚ್ಚುತ್ತಿದ್ದರು. ಮಣ್ಣಿನ ನೆಲವಾದರೂ, ಭತ್ತದ ಹೊಟ್ಟಿನ ಮಸಿಯನ್ನು ಎಣ್ಣೆಯೊಂದಿಗೆ ಹಚ್ಚಿ, ಹೊಳೆಯ ಚಪ್ಪಟೆ ಕಲ್ಲುಗಳ ಸಹಾಯದಿಂದ ಅರೆದು ತಿಕ್ಕಿ ಹೊಳಪು ಬರುವಂತೆ ಮಾಡಿದ, ಥಳಥಳಿಸುವ ನೆಲವುಳ್ಳ ಮನೆ ಅವರದಾಗಿತ್ತು. ಸುಣ್ಣಹಚ್ಚಿದ ಗೋಡೆಯ ಮೇಲೆ ಅವರ ಮನೆಯ ಹೆಂಗಸರು ಕೆಮ್ಮಣ್ಣು ಉಪಯೋಗಿಸಿ ಸುಂದರ ಚಿತ್ತಾರ ಬಿಡಿಸುತ್ತಿದ್ದರು. ಅವರ ಮನೆಯ ಸೆಗಣಿ ಸಾರಿಸಿದ ಅಂಗಳದಲ್ಲಿದ್ದ ತುಳಸಿ ಕಟ್ಟೆಯ ಎದುರು ದಿನಕ್ಕೊಂದು ರೀತಿಯ ರಂಗೋಲೆ ಇರುತ್ತಿತ್ತು. ಮರದ ಮುಚ್ಚಿಗೆ ಇದ್ದ ಅವರ ಮನೆ ಚಳಿಗಾಲದಲ್ಲಿ ಬೆಚ್ಚಗೆ ಹಾಗೂ ಬೇಸಗೆಯಲ್ಲಿ ತಂಪಾಗಿ ಇರುತ್ತಿತ್ತು. ಮುಂದಣ ಜಗಲಿಯಲ್ಲಿ ತಿಮ್ಮೇಗೌಡರು ಕೂರುತ್ತಿದ್ದ ಕಂಬಳಿ ಹಾಸಿದ ದೊಡ್ಡ ಕರಿಮರದ ಮಂಚ ಇರುತ್ತಿತ್ತು. ಪಕ್ಕದಲ್ಲಿ ದಪ್ಪ ಮರದ ಹಲಿಗೆಗಳಿಂದ ಮಾಡಿದ ಎರಡು ಬೆಂಚುಗಳು ಇದ್ದುವು. ಅವರ ಮನೆಗೆ ಭೆಟ್ಟಿ ಕೊಡುವ ಸನ್ಮಾನ್ಯ ಅತಿಥಿಗಳಿಗೆಂದೇ ಮೀಸಲಾದ ಎರಡು ಕರಿಮರದ ಕುರ್ಚಿಗಳು ಅಲ್ಲಿ ಇರುತ್ತಿದ್ದುವು. ಅವುಗಳ ಮುಂದೆ ಒಂದು ದುಂಡಗಿನ ಹಲಿಗೆಯಲ್ಲಿ ತಯಾರಿಸಿದ ಮೂರುಕಾಲಿನ ಮುಕ್ಕಲಿಗೆ ಅಥವಾ ರೌಂಡ್‌ಟೀಪಾಯ್ ಇರುತ್ತಿತ್ತು. ಅದರಮೇಲೆ ಬಂಗಾರದಂತೆ ಹೊಳೆಯುವ ಹಿತ್ತಾಳೆಯ ತಟ್ಟೆ ಇರುತ್ತಿತ್ತು. ಆ ತಟ್ಟೆಯಲ್ಲಿ ಎಲೆ‌ಅಡಿಕೆ ಸದಾ ತುಂಬಿರುತ್ತಿತ್ತು. ಜಗಲಿಯ ಗೋಡೆಯ ಮೇಲೆ ಒಂದು ಕಡೆ ರಾಜಾ ರವಿವರ್ಮರು ಬರೆದ ಜರ್ಮನ್ ಲಿಥೋ ಪ್ರಿಂಟ್ನ ದೇವರುಗಳ ಪಟಗಳಿದ್ದರೆ, ಇನ್ನೊಂದುಬದಿಯಲ್ಲಿ ಹದಿಹರೆಯದ ಜಯಚಾಮರಾಜೇಂದ್ರ ಮಹಾರಾಜರ ಪಟ ಮನೆಯ ಜಗಲಿಗೆ ಸೊಬಗನ್ನು ನೀಡುತ್ತಿದ್ದುವು. ಮನೆಯ ಹಿಂಬದಿಯೇ ಹರಿಯುತ್ತಿದ್ದ ನೀರಿನ ತೊರೆಯಿಂದ ಶುದ್ಧ ಜಲವು ಅಡಿಕೆ ಮರದ ದಂಬೆಗಳ ಮೂಲಕ ಹರಿದು ಬಂದು ಅವರ ಮನೆಯ ಅಡುಗೆಮನೆ ಹಾಗೂ ಬಚ್ಚಲುಗಳಿಗೆ ಸುರಿಯುತ್ತಿತ್ತು. ಇನ್ನೊಂದು ದಂಬೆಯ ಮೂಲಕ ಅದೇ ತೊರೆಯ ನೀರು ಅಂಗಳದ ತುದಿಗೆ ಹಾಸಿದ್ದ ಶಿಲೆಕಲ್ಲಿನ ಚೌಕದ ಮೇಲೆ ಸುರಿಯುತ್ತಿತ್ತು. ಈ ನೀರಿನಲ್ಲಿ ಮನೆಗೆ ಬರುವ ಅತಿಥಿಗಳು ಕೈಕಾಲು ತೊಳೆದು ಮನೆಯ ಜಗಲಿಗೆ ಬಂದು ಕೂರುತ್ತಿದ್ದರು. ಈ ಮೂರು ದಂಬೆಗಳಿಂದ ಸುರಿದು ಹೆಚ್ಚಾದ ನೀರು, ಒಂದು ಪುಟ್ಟ ತೋಡಿನ ಮೂಲಕ ಮನೆಯ ಮುಂದಿನ ಗದ್ದೆಗಳ ಕಡೆಗೆ ಹರಿಯುತ್ತಿತ್ತು.

ತಿಮ್ಮೇಗೌಡರ ಮನೆಗೆ ನಾನು ಯಾವಾಗ ಹೋದರೂ, ಅಲ್ಲಿ ಕಲ್ಲುಸಕ್ಕರೆ ಹಾಕಿ ಕಾಸಿದ ಹಾಲು ಮತ್ತು ಬಹು ರುಚಿಯಾದ ಸಾವಯವ ರೀತಿಯಲ್ಲಿ ಬೆಳೆಸಿದ ಬಾಳೆಹಣ್ಣುಗಳ  ಸತ್ಕಾರ ಕಾದಿರುತ್ತಿತ್ತು.

ತಿಮ್ಮೇಗೌಡರು ಶಾಲೆಗೆ ಹೋಗಿ ವಿದ್ಯೆ ಕಲಿತವರಲ್ಲ. ಅವರು ಐಗಳ ಮಠದಲ್ಲಿ ಸ್ವಲ್ಪ ಸಮಯ ಓದು ಬರಹ ಕಲಿತವರು. ಅವರು ದಿನಾ ಕನ್ನಡ ದಿನಪತ್ರಿಕೆ ತರಿಸಿ ಓದುತ್ತಿದ್ದರು. ಮನೆಯಲ್ಲಿ ಕನ್ನಡಗದ್ಯ ರೂಪದಲ್ಲಿನ ಗೀತೆ, ರಾಮಾಯಣ ಮತ್ತು ಮಹಾಭಾರತ ಪುಸ್ತಕಗಳನ್ನು ದೇವರ ಮನೆಯಲ್ಲಿರಿಸಿ ಪೂಜಿಸಿ, ದಿನಾ ಸ್ವಲ್ಪಹೊತ್ತು ಅವುಗಳನ್ನು ಪಠಣ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರು. ಯಕ್ಷಗಾನ ಪದಗಳನ್ನು ಅವರು ನಿರರ್ಗಳವಾಗಿ ಬಾಯಿ ಪಾಠದಿಂದಲೇ ಹಾಡಿ ಅರ್ಥ ಹೇಳಬಲ್ಲವರಾಗಿದ್ದರು. ಅವರ ವ್ಯಾವಹಾರಿಕ ಮತ್ತು ಸಾಮಾಜಿಕ ಜ್ಞಾನ ಚೆನ್ನಾಗಿತ್ತು. ಆದರೂ, ಒಮ್ಮೊಮ್ಮೆ ತಿಮ್ಮೇಗೌಡರು ತಾನೊಬ್ಬ ವಿದ್ಯೆ ಇಲ್ಲದ ಮುಮುಕ್ಷು ಎಂದು ತನ್ನನ್ನು ತಾನೇ ಕರೆದುಕೊಳ್ಳುತ್ತಿದ್ದರು. ಅದಕ್ಕೆ ನಾನು ತಿಮ್ಮೇಗೌಡರೇ, ನೀವು ಶಾಲೆಗೆ ಹೋಗಿ ವಿದ್ಯೆ ಕಲಿತು ಡಿಗ್ರಿ ಪಡೆಯದೇ ಇದ್ದರೇನಾಯಿತು? ನಿಮಗಿರುವ ಜ್ಞಾನ ಇಂದಿನ ಸಾಮಾನ್ಯ ಪದವೀಧರನಿಗೆ ಇಲ್ಲ. ಶಾಲೆಯಲ್ಲಿ ಫೀಸು ಕಟ್ಟಿ ಕಲಿತ ವಿದ್ಯೆಗೂ, ಅನರ್ಘ್ಯವಾದ ನಿಮ್ಮ ಜ್ಞಾನಕ್ಕೂ ದಯವಿಟ್ಟು ತಾಳೆ ಹಾಕಬೇಡಿರಿ ಎನ್ನುತ್ತಿದ್ದೆ.

ನನ್ನ ಮಕ್ಕಳಿಗೆ ಶಾಲೆಗೆ ಹೋಗುವ ಪ್ರಾಯ ಆಗುತ್ತಿದ್ದಂತೆ, ನಾನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿವಮೊಗ್ಗ ಸಿಟಿಯಲ್ಲಿ ಮನೆ ಮಾಡಬೇಕಾಯಿತು. ಉದರಂಭರಣೆಗೆ ತಂಪು ಪಾನೀಯಗಳ ವಿತರಕನಾಗಿ ವ್ಯಾಪಾರಕ್ಕಿಳಿದು ಕ್ರಮೇಣ ಒಂದು ಪ್ಲಾಸ್ಟಿಕ್ ಕವರುಗಳನ್ನು ತಯಾರಿಸುವ ಕಾರ್ಖಾನೆಯ ಪಾಲುದಾರನಾದೆ. ಪ್ರತೀ ವಾರಾಂತ್ಯದಲ್ಲಿ ಬಾಳೆಹೊಳೆಗೆ ಬಂದು ನಮ್ಮ ಕಾಫಿತೋಟದ ಉಸ್ತುವಾರಿ ನೋಡಿಕೊಳ್ಳುತ್ತಾ ಇದ್ದೆ. ಆದರೂ, ಪ್ರತೀವಾರ ನಾನು ತಿಮ್ಮೇಗೌಡರನ್ನು ಭೆಟ್ಟಿ ಮಾಡುತ್ತಿದ್ದೆ.

ಹೀಗಿರುವಾಗ, ಒಮ್ಮೆ ಶ್ರೀಮತಿ ತಿಮ್ಮೇಗೌಡರ ಆರೋಗ್ಯ ಕೆಟ್ಟಿತು. ಅವರು ಶಿವಮೊಗ್ಗದ ನರ್ಸಿಂಗ್ ಹೋಮ್ ಒಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ನಮಗೆ ವಿಚಾರ ತಿಳಿದು, ನಾವೆಲ್ಲರೂ ಆಗಾಗ ಅವರನ್ನು ನೋಡಿ ವಿಚಾರಿಸಿಕೊಂಡು ಬರುತ್ತಿದ್ದೆವು. ಶ್ರೀಮತಿ ತಿಮ್ಮೇಗೌಡರು ಶಸ್ತ್ರಚಿಕಿತ್ಸೆಯಿಂದ ಬಹುಬೇಗನೆ ಚೇತರಿಸಿಕೊಂಡರು.

ಶ್ರೀಮತಿ ತಿಮ್ಮೇಗೌಡರು ಗುಣಮುಖರಾಗಿ ಮರುದಿವಸ ಬಾಳೆಹೊಳೆಗೆ ಹೊರಡುವವರಿದ್ದರು. ಆ ದಿನ ಸಾಯಂಕಾಲ ತಿಮ್ಮೇಗೌಡರು ನಮ್ಮ ಮನೆಗೆ ಬಂದರು. ಶಿವಮೊಗ್ಗದಲ್ಲಿ ಶಾಲೆಗೆ ಹೋಗುತ್ತಿದ್ದ ನನ್ನ ಪತ್ನಿ ಸರೋಜಮ್ಮಳ ಅಕ್ಕನ ನಾಲ್ಕು ಮಂದಿ ಮಕ್ಕಳು ಸ್ಕೂಲಿಗೆ ರಜಾ ಇದ್ದುದರಿಂದ ಆ ದಿನ ನಮ್ಮ ಮನೆಗೆ ಬಂದಿದ್ದರು. ಅವರೊಂದಿಗೆ ನಮ್ಮ ಮಕ್ಕಳು ಆಟವಾಡುತ್ತಿದ್ದರು.

ತಿಮ್ಮೇಗೌಡರು ತಮ್ಮ ಪತ್ನಿ ಗುಣಮುಖರಾದುದಕ್ಕೆ ತುಂಬಾ ಖುಷಿಯಾಗಿದ್ದರು. ಈ ದಿನ ನೀವೆಲ್ಲರೂ ದಯವಿಟ್ಟು ನನ್ನ ಟೀಪಾರ್ಟಿ ಸ್ವೀಕರಿಸಬೇಕು ಎಂದು ದುಂಬಾಲುಬಿದ್ದರು. ಇಂದು ನಮ್ಮ ಮನೆಯಲ್ಲೇ ಒಂದು ಪಾರ್ಟಿ ಮಾಡೋಣ ತಿಮ್ಮೇಗೌಡರೇ..! ಮನೆಯಲ್ಲಿ ಅಡುಗೆಯ ಭಟ್ಟರು ಹೇಗೂ ಇದ್ದಾರೆ. ಒಂದು ಸ್ವೀಟ್ ಎರಡು ಖಾರ ಐಟಮ್ ಮಾಡಿಸಿ, ಸ್ವಲ್ಪ ಐಸ್‌ಕ್ರೀಮ್ ತರೋಣ ಎಂದೆ..!

ಅದೆಲ್ಲ ಇಂದು ಬೇಡ. ನೀವು ಮಾಡಿಸಿದರೆ ನಾನು ಪಾರ್ಟಿ ಕೊಟ್ಟ ಹಾಗೆ ಆಗುವುದಿಲ್ಲ! ಎಲ್ಲಿ ಸರೋಜಮ್ಮ? ಎಲ್ಲರೂ ಹೊರಡಿ! ಶಿವಮೊಗ್ಗದಲ್ಲಿ ಅತೀ ಉತ್ತಮವಾದ ಹೋಟಲ್‌ಗೆ ಹೋಗೋಣ. ಇಂದು ನಿಮಗೆಲ್ಲಾ ನಾನು ಒಂದು ಮೇಜುವಾನಿ ಕೊಡಲೇಬೇಕು! ಎಂದು ಒತ್ತಾಯಿಸಿದರು. ನಾವು ಒಪ್ಪಲೇಬೇಕಾಯಿತು.

ಶಿವಮೊಗ್ಗದ ಅತ್ಯುತ್ತಮ ಹೋಟೆಲ್ ಜ್ಯೂವೆಲ್‌ರಾಕ್ಗೆ ನಾವು ನಮ್ಮ ಪುಟ್ಟ ಫಿಯಾಟ್ ಕಾರಿನಲ್ಲಿ ಎರಡೆರಡು ಟ್ರಿಪ್‌ಮಾಡಿ ತಲುಪಿದೆವು. ಜ್ಯೂವೆಲ್‌ರಾಕ್‌ನ ಜ್ಯೂವೆಲ್ ಗಾರ್ಡನ್‌ನಲ್ಲಿ ಎರಡೆರಡು ಟೇಬಲ್ ಜಾಯಿಂಟ್ ಮಾಡಿಸಿ, ನಾವು ಒಂಬತ್ತು ಮಂದಿ ಒಟ್ಟಾಗಿ ಕುಳಿತೆವು.

ಸರ್ವರ್ ಬಂದೊಡನೆ ತಿಮ್ಮೇಗೌಡರು, ಏನು ಸ್ವೀಟ್ ಇದೆ? ಎಲ್ಲಾ ಬಗೆಯದ್ದೂ ಒಂದೊಂದು ಪ್ರತಿಯೊಬ್ಬರಿಗೂ ತಂದುಕೊಡಿ ಎಂದು ಅಪ್ಪಣೆ ಕೊಡಿಸಿದರು..! ನಾವು ತಿಮ್ಮೇಗೌಡರೇ! ಎಲ್ಲಾ ತರಹದ ಒಂದೊಂದು ಸ್ವೀಟ್ ತಿನ್ನಲು ನಮ್ಮ ಹೊಟ್ಟೆ ಗುಡಾಣವಲ್ಲ. ಎಲ್ಲರೂ ಜಾಮೂನು ಮತ್ತು ಮಸಾಲೆದೋಸೆ ತಿನ್ನೋಣ ಎಂದೆವು. ಅದು ಸರಿ ಎಂದು ಆರ್ಡರ್ ಕೊಟ್ಟ ತಿಮ್ಮೇಗೌಡರು ದೋಸೆ ಬರುವ ತನಕ ಮೆಲ್ಲಲು, ಎಲ್ಲರಿಗೂ ‘ವೆಜಿಟೇಬಲ್ ಕಟ್ಲೆಟ್ ಆರ್ಡರ್ ಮಾಡಿಯೇಬಿಟ್ಟರು. ಜಾಮೂನು, ಕಟ್ಲೆಟ್, ಮಸಾಲೆದೋಸೆಗಳ ಮೇಲೆ ನಮಗೆ ಕಾಫಿ, ಮಕ್ಕಳಿಗೆ ಬಾದಾಮಿ ಹಾಲು ಸಮಾರಾಧನೆ ಆಯಿತು. ಹೊಟ್ಟೆ ತುಂಬಿಹೋಯಿತು ಎಂದರೂ ಕೇಳದೆ ಎಲ್ಲರಿಗೂ ಐಸ್‌ಕ್ರೀಮ್ ತರುವಂತೆ ಸರ್ವರ್‌ನಿಗೆ ತಿಮ್ಮೇಗೌಡರು ತಾಕೀತು ಮಾಡಿದರು..! ನಾವು ಐಸ್‌ಕ್ರೀಮ್ ಹೆಚ್ಚಾಯಿತು ಅಂದರೆ, ತಿಮ್ಮೇಗೌಡರು ಮಕ್ಕಳು ಸ್ವಲ್ಪ ಗಾರ್ಡನ್‌ನ ಉಯ್ಯಾಲೆಯಲ್ಲಿ ಆಡಲಿ, ಆಗ ಐಸ್‌ಕ್ರೀಮ್ ತಿನ್ನಲು ಜಾಗವಾಗುತ್ತೆ..! ಎಂದು ಮಕ್ಕಳನ್ನು ಉಯ್ಯಾಲೆ ಆಡಲು ಎಬ್ಬಿಸಿದರು. ಐಸ್‌ಕ್ರೀಮ್ ಬಂತು. ಅಂತೂ ಎಲ್ಲರೂ ಕಷ್ಟಪಟ್ಟು ಐಸ್‌ಕ್ರೀಮ್ ಮುಗಿಸಿದೆವು.

ತಿಮ್ಮೇಗೌಡರು ಎದ್ದು ನನ್ನ ಪಕ್ಕ ಬಂದು ಸ್ವಾಮೀ, ನೀವು ನನಗೆ ಒಂದು ದೊಡ್ಡ ಉಪಕಾರ ಮಾಡಬೇಕು ಎನ್ನುತ್ತಾ ನನ್ನ ಶರ್ಟಿನ ಜೇಬಿಗೆ ನೂರರ ಐದು ನೋಟುಗಳನ್ನು ತುರುಕಿದರು. ಈಗಿನ ಬಿಲ್ ಮತ್ತು ಆ ಮಾಣಿಗೆ ಭಕ್ಷೀಸು ನೀವೇ ನಿಮ್ಮ ಕೈಯ್ಯಲ್ಲೇ ಕೊಡಬೇಕು. ಯಾಕೆಂದರೆ, ನೀವುಗಳು ಈ ಜಾಗಕ್ಕೆ ಆಗಾಗ ಬರುವವರು. ನೀವು ಯಾರೆಂದು ಅವರುಗಳಿಗೆಲ್ಲಾ ಗುರುತಿದೆ. ನಿಮ್ಮ ಬಿಲ್ಲನ್ನು ಈ ಹಳ್ಳಿ ಮುದುಕ ಕೊಟ್ಟರೆ ಇಲ್ಲಿ ಚೆನ್ನಾಗಿರುವುದಿಲ್ಲ. ಇದು ತಮ್ಮ ಮರ್ಯಾದೆಗೆ ಕೂಡಾ ಸರಿಯಲ್ಲ ಎನ್ನುತ್ತಾ ಹಿಡಿದ ಪಟ್ಟನ್ನು ಬಿಡಲೇ ಇಲ್ಲ! ನಾನು ಅವರ ಮಾತನ್ನು ಒಪ್ಪಿ, ಅವರು ಹೇಳಿದಂತೆ ನಡೆಯಲೇಬೇಕಾಯಿತು..!

ಇಂದು ಆ ಸೌಜನ್ಯಮೂರ್ತಿ ತಿಮ್ಮೇಗೌಡರು ಇಲ್ಲ. ಅವರು ಕೆಲವರುಷಗಳ ಕೆಳಗೆ ಸುಖಮರಣವನ್ನೇ ಹೊಂದಿದರು. ಅವರ ಮಕ್ಕಳಿಬ್ಬರು ಪಾಲಾಗಿ, ಬೇರೆ ಬೇರೆ ಮಂಗಳೂರು ಹೆಂಚಿನ ಮನೆಗಳನ್ನು ಕಟ್ಟಿಕೊಂಡು ಇದ್ದಾರೆ. ನೀರಿಗೊಸ್ಕರ ಉಪಯೋಗಿಸುತ್ತಿದ್ದ ಅಡಿಕೆದಂಬೆಗಳು ಈಗ ಮಾಯವಾಗಿ ಪೈಪುಗಳು ಬಂದಿವೆ. ಅವರ ಎರಡು ಮನೆಗಳಿಗೆ ಇಂದು ವಿದ್ಯುದೀಕರಣ ಕೂಡಾ ಆಗಿದೆ. ಟೀವಿ, ಡಿ.ವಿ.ಡಿ. ಮತ್ತು ಡಿಶ್‌ಆಂಟೆನಾಗಳಿಂದ ಅವರ ಮನೆಗಳು ಶೋಭಿಸುತ್ತಿವೆ. ಓಡಾಡಲು ಜೀಪ್‌ಗಳು ಬಂದಿವೆ. ಆಧುನಿಕತೆಯ ಗಾಳಿ ಅವರ ಮಕ್ಕಳ ಮನೆಗಳನ್ನು ಆವರಿಸಿದೆ. ಅವರ ಮೊಮ್ಮಕ್ಕಳು ಈಗ ಬಾಳೆಹೊಳೆಯ ಹೈಸ್ಕೂಲ್ ಮತ್ತು ಕಳಸದ ಜೂನಿಯರ್ ಕಾಲೇಜಿನಲ್ಲಿ ಓದುತ್ತಾ ಇದ್ದಾರೆ. ಹೊಳೆಯ ಬದಿಯ ಅವರ ಭತ್ತದಗದ್ದೆಗಳ ಮೇಲೆ ಸುಳಿದುಬರುವ ಗಾಳಿಯಲ್ಲಿ ಅದೇ ಭತ್ತದ ಕಂಪು ಇಂದಿಗೂ ಇದೆ.

ತಂಗಾಳಿಗೆ ಭತ್ತದ ತೆನೆಗಳು ತುಯ್ದಾಡುವಾಗ, ನನಗೆ ನನ್ನ ಹಿರೇ ಮಿತ್ರ ತಿಮ್ಮೇಗೌಡರ ನಗುಮುಖ ನೆನಪಿಗೆ ಬರುತ್ತಿದೆ. ಅವರು ಅಂದು ನಮಗೆ ಶಿವಮೊಗ್ಗದಲ್ಲಿ ನೀಡಿದ ಮೇಜುವಾನಿಯನ್ನು ನಾವು ಈ ಜನ್ಮದಲ್ಲಿ ಮರೆಯಲಾರೆವು.

* * *