ಈ ಮೇಲಿನ ಗಾದೆ ನಮಗೆ ಸದಾ ಬಾಯಿಪಾಠ. ನಾವು ಮಳೆಗಾಲದಲ್ಲಿ ಹಲವು ಬಾರಿ ಕಾಫಿತೋಟದ ಒಳಗೆ ಈ ಗಾದೆಯನ್ನು ಪಠಿಸುತ್ತೇವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ತೋಟದ ಒಳಗೆ ಜಾರಿ ಬೀಳುವುದಕ್ಕೆ ಲೆಕ್ಕವೇ ಇಲ್ಲ. ನಾವು ಜಾರಿ ಬಿದ್ದುದನ್ನು ಯಾರಾದರೂ ನೋಡಿದರೆ, ಅವರುಗಳು ಕೆಲವು ಸಾರಿ ಎಷ್ಟು ರೂಪಾಯಿ ಹೆಕ್ಕಿದಿರಿ? ಎಂದು ನಗುತ್ತಾ ಪ್ರಶ್ನಿಸುತ್ತಾರೆ. ಆಗ ನಾವು ನಮ್ಮ ಮೈಗಾದ ಪೆಟ್ಟನ್ನು ರೂಪಾಯಿಗಳಲ್ಲಿ ಅಳೆದು ಸುಮಾರು ನೂರು ಅಥವಾ ಇನ್ನೂರು ಎಂದು ಉತ್ತರಿಸಿ, ನಗುತ್ತೇವೆ. ಅಂತೂ, ಬಿದ್ದವರು ಮತ್ತು ಬಿದ್ದುದನ್ನು ಕಂಡವರು ನಗಲೇಬೇಕು, ಇದು ನಮ್ಮ ಕಾಫಿತೋಟದ ಸದಾಚಾರಗಳಲ್ಲಿ ಒಂದು. ಬಿದ್ದು ತುಂಬಾ ಪೆಟ್ಟು ಮಾಡಿಕೊಂಡರೆ ಅಥವಾ ಮೂಳೆ ಮುರಿದುಕೊಂಡರೆ ನೋಡಿದವರು ನಗುವನ್ನು ಪೋಸ್ಟ್‌ಪೋನ್ ಮಾಡಿ ನಮ್ಮ ಸಹಾಯಕ್ಕೆ ಬಂದೇಬರುತ್ತಾರೆ.

ಕಾಫಿತೋಟಗಳ ಆಫೀಸಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ತ್ಯಾಂಪಣ್ಣ ಭಂಡಾರಿಯವರ ನೋವಿನ ಎಣ್ಣೆ, ಹಳೆಯ ಔಷಧವಾದ ಸ್ಲೋನ್ಸ್ ಲಿನಿಮೆಂಟ್ ಅಥವಾ ಆಧುನಿಕ ನೋವು ನಿವಾರಕ ಔಷಧಿಯಾದ ಡೀಪ್ ಹೀಟ್ ಆಯಿಂಟ್‌ಮೆಂಟ್ ಇದ್ದೇ ಇರುತ್ತೆ. ಇವಕ್ಕೂ ನೋವು ಬಗ್ಗದೇ ಇದ್ದರೆ, ಡಾಕ್ಟರನ್ನು ಕರೆಸಿ ಉಪಚಾರ ಮಾಡುವುದು ಕಾಫಿತೋಟದವರ ರೂಢಿ.

ನಾನು ಕಳೆದ ಎರಡು ವರ್ಷಗಳಿಂದ ತೋಟದ ಒಳಗೆ ಜಾರಿ ಬಿದ್ದಿಲ್ಲ. ಯಾಕೆಂದರೆ, ಕಳೆದ ಎರಡು ವರ್ಷಗಳಿಂದ ನಾನು ಒಬ್ಬನೇ ಮನೆ ಬಿಟ್ಟು ಹೊರಗೆ ಹೋಗುತ್ತಿಲ್ಲ. ನನ್ನ ಕಣ್ಣಿನ ತೊಂದರೆಗಳು ತೀವ್ರವಾದ ನಂತರ, ಯಾರಾದರೂ, ನನ್ನ ಕೈಹಿಡಿದು ನಡೆಸುತ್ತಾರೆ. ಆದರೂ, ರಾತ್ರಿ ಶಿಕಾರಿಗೆ ಹೋದಾಗ ಸಖತ್ತಾಗಿ ಜಾರಿಬಿದ್ದರೂ, ಬದುಕಿ ಬಂದ ನೆನಪು ನನ್ನನ್ನು ಒಮ್ಮೊಮ್ಮೆ ಕಾಡುತ್ತದೆ.

೧೯೭೨ನೇ ಇಸವಿಯಲ್ಲಿ ನನ್ನ ದೊಡ್ಡ ಮಗಳು ರಾಧಿಕಾ ಹುಟ್ಟಿದಳು. ಅವಳು ಹುಟ್ಟಿದ ಮೇಲೆ ನಾನು ಕಟ್ಟಾ ಪರಿಸರಪ್ರೇಮಿಯಾದೆ. ಪ್ರಾಣಿಹಿಂಸೆ ಮಾಡಬಾರದು ಎಂದು ತೀರ್ಮಾನಿಸಿ, ಅಂದಿನಿಂದಲೇ ನಾನು ಶಿಕಾರಿಯ ಹವ್ಯಾಸ ಬಿಟ್ಟುಬಿಟ್ಟೆ. ಮಲೆನಾಡಿನ ಪಶುಪಕ್ಷಿ ಹಾಗೂ ಅಪರೂಪದ ವೃಕ್ಷಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತೆ. ನಾನೂ ಒಬ್ಬ ನಿಸರ್ಗದ ಅಭಿಮಾನಿ ಅನ್ನಿಸಿಕೊಂಡೆ.

ಇದು ೧೯೭೧ನೇ ಇಸವಿಯ ಸಮಯ. ನನಗಾಗ ತುಂಬಾ ಶಿಕಾರಿ ಹುಚ್ಚಿತ್ತು ಆಗ ನಾವುಗಳು ನಮ್ಮ ಸಮೂಹದ ನಾಲ್ಕು ಕಾಫಿತೋಟಗಳನ್ನು ಒಟ್ಟು ಸೇರಿಸಿ ಒಂದೇ ಪಾಲುದಾರಿಕೆಯ ಸಂಸ್ಥೆ ಮಾಡಿಕೊಂಡಿದ್ದೆವು. ರಸಗೊಬ್ಬರ, ನೀರಾವರಿ ವಿಚಾರಗಳಲ್ಲಿ ನಾನು ಹೆಚ್ಚಿನ ಅನುಭವ ಹೊಂದಿದ್ದರಿಂದ ನಮ್ಮ ಸಮೂಹದ ನಾಲ್ಕು ತೋಟಗಳನ್ನೂ ಸುತ್ತಾಡುವ ಅವಕಾಶ ನನಗಿತ್ತು. ನನ್ನ ಪತ್ನಿ ಶ್ರೀಮತಿ ಸರೋಜಮ್ಮ ಹುಟ್ಟಿ ಬೆಳೆದ ಹಾರ್ಮಕ್ಕಿ ಎಸ್ಟೇಟ್ ಎಂಬ ತೋಟವು ಆಕೆಯ ತಂದೆಯವರ ವಿಲ್ ಪ್ರಕಾರ ಸರೋಜಮ್ಮಳ ಅಕ್ಕ – ಶ್ರೀಮತಿ ಫಣಿಯಮ್ಮ ಮತ್ತು ಅವರ ಪತಿ ಶ್ರೀ ರಾಮರಾವ್ ಅವರ ಪಾಲಿಗೆ ಸೇರಿತ್ತು. ನಾನು ಸರೋಜಮ್ಮಳ ಜತೆಗೆ ಆ ತೋಟದ ಕೆಲಸಗಳ ಉಸ್ತುವಾರಿಗೆ ಹೋದಾಗ ತಪ್ಪದೆ ಶಿಕಾರಿಗೆ ಹೋಗುವ ಅವಕಾಶ ಕೂಡಾ ಸಿಕ್ಕುತ್ತಿತ್ತು. ಫಣಿಯಮ್ಮ ಮತ್ತು ರಾಮರಾಯರಿಗೆ ಮಕ್ಕಳಿಲ್ಲ. ಹಾಗಾಗಿ ಅಲ್ಲಿಗೆ ಹೋದರೆ ನಾವೇ ಮಕ್ಕಳು! ಸರೋಜಮ್ಮನೇ ಆ ಮನೆಯ ಚಿಕ್ಕ ಮಗು ಅನ್ನಿಸಿಕೊಂಡಿದ್ದಳು. ಅಲ್ಲಿಗೆ ಹೊಗುವಾಗ ಸದಾ ಸರೋಜಮ್ಮ ನನ್ನ ಜತೆಗೆ ಹಾರ್ಮಕ್ಕಿ ತೋಟಕ್ಕೆ ಬರುತ್ತಿದ್ದಳು. ಅದು ನಿಜವಾಗಿಯೂ ಅವಳ ತವರುಮನೆಯಾಗಿತ್ತು. ಹಾರ್ಮಕ್ಕಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹಳೆಯ ಆಳುಗಳು ಸರೋಜಮ್ಮಳನ್ನು, ಜತೆಗೆ ನನ್ನನ್ನು ಕೂಡಾ, ಏನು ಮಗಾ ಎಂದೇ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಇಂದು ಆ ಆಳುಗಳೆಲ್ಲಾ ರಿಟೈರ್ ಆಗಿದ್ದಾರೆ.

ಹಾರ್ಮಕ್ಕಿ ತೋಟಕ್ಕೆ ಹೋದಾಗ ನಾವು ಕನಿಷ್ಟಪಕ್ಷ ಅಲ್ಲಿ ಒಂದು ವಾರ ಝಂಡಾ ಊರುತ್ತಿದ್ದೆವು. ಸರೋಜಮ್ಮಳಿಗೆ ಅದು ಹುಟ್ಟಿ ಬೆಳೆದ ಮನೆ. ಅಲ್ಲಿಯ ಪ್ರತೀ ಕಾಫಿಯ ತಾಕು, ಗಿಡ, ಮರ, ನೀರಿನ ಝರಿ ಎಲ್ಲಾ ಆಕೆಗೆ ಗೊತ್ತು. ಆ ತೋಟದಲ್ಲಿದ್ದ ದನಕರುಗಳು ಕೂಡಾ ಆಕೆಯನ್ನು ಮರೆತಿರಲಿಲ್ಲ. ಹಾರ್ಮಕ್ಕಿ ತೋಟದ ಹೂ ಮತ್ತು ತರಕಾರಿ ತೋಟ ಆಕೆಗೆ ಬಲು ಪ್ರಿಯವಾದ ಜಾಗ. ಸರೋಜಮ್ಮ ಬಂಗಲೆಯಲ್ಲಿ ತನ್ನ ಅಕ್ಕನೊಡನೇ ಕಾಲಕಳೆದರೆ, ನಾನು ಹಗಲು ರಾತ್ರಿ ಕೋವಿ ಹಿಡಿದು ತೋಟ ತಿರುಗುತ್ತಿದ್ದೆ.

ಹಗಲು ಹೊತ್ತು ತೋಟ ಸುತ್ತುವಾಗ ನಾನು ಕೋವಿ ಒಯ್ಯುತ್ತಿದ್ದೆ. ಯಾಕೆಂದರೆ ಆ ತೋಟದಲ್ಲಿ ಮಂಗಗಳ ಹಾವಳಿ ಜಾಸ್ತಿ. ಮಂಗಗಳ ಹಿಂಡು ಕಂಡಾಗ ಹುಸಿಗುಂಡು ಹಾರಿಸಿ ಅವನ್ನು ಓಡಿಸುತ್ತಿದ್ದೆ. ಮಂಗಗಳು ನಮ್ಮ ಫಸಲು ಇರುವ ಕಾಫಿ, ಅಡಿಕೆ ಮತ್ತು ಏಲಕ್ಕಿ ಗಿಡಗಳಿಗೆ ತುಂಬಾ ಹಾನಿ ಉಂಟುಮಾಡುತ್ತಿದ್ದವು. ನಾನು ಎಂದೂ ಮಂಗಗಳನ್ನು ಕೊಂದವನಲ್ಲ. ಮಂಗ ಎಂದರೆ ಹಿಂದೂಗಳಿಗೆ ಆಂಜನೇಯನಿಗೆ ಸಮಾನ.

ಹಾರ್ಮಕ್ಕಿಯ ಕಾಫಿತೋಟದಲ್ಲಿ ಆಗ ವರ್ಷಕ್ಕೆ ಸರಾಸರಿ ೨೨೦ ಇಂಚು ಮಳೆ ಆಗುತ್ತಿತ್ತು. ಅಲ್ಲಿ ವರ್ಷಕ್ಕೆ ಎಂಟು ತಿಂಗಳು ಮಳೆಗಾಲ, ತೋಟವೋ… ಬಹಳ ಕಡಿದಾದ ಇಳಿಜಾರು..! ತೋಟದ ಮೇಲ್ಗಡೆ ನಾವು ಕೆರೆ ಕಾಡು ಎಂದು ಕರೆಯುತ್ತಾ ಇದ್ದ ಶೋಲಾ ಕಾಡು ಇತ್ತು. ರಾತ್ರಿ ಸುಮಾರು ಹತ್ತುಗಂಟೆಯ ನಂತರ ಆ ಕಾಡಿನಿಂದ ನಮ್ಮ ತೋಟಕ್ಕೆ ಹಿಂಡು ಹಿಂಡಾಗಿ ಕಾಡುಹಂದಿಗಳು ಇಳಿದು ಬರುತ್ತಿದ್ದವು. ಕಾಡುಕೋಣ, ಸಾರಗ(ಕಡವೆ), ಜಿಂಕೆ, ಬಾರ್ಕಿಂಗ್ ಡೀಯರ್ (ಕಾನುಕುರಿ ಅಥವಾ ಕೆಮ್ಮ), ಮೌಸ್ ಡೀಯರ್(ಬರ್ಕ), ಫ್ಲಯಿಂಗ್‌ಸ್ಕ್ವಿರೆಲ್(ಹಾರುಬೆಕ್ಕು), ಟಾಡಿ ಕ್ಯಾಟ್(ಕಬ್ಬೆಕ್ಕು), ಪುಣುಗಿನ ಬೆಕ್ಕು (ಸಿವೆಟ್ ಕ್ಯಾಟ್), ಅಸಂಖ್ಯ ಮೊಲಗಳು ಕೂಡಾ ಆ ಕಾಡಿನಿಂದ ನಮ್ಮ ತೋಟದ ಒಳಗೆ ಇಳಿದು ಬರುತ್ತಿದ್ದವು. ನಾನು ಕಾಡುಹಂದಿಗಳನ್ನು ಮಾತ್ರ ಬೇಟೆಯಾಡಲು ಹೋಗುತ್ತಿದ್ದೆ. ಬೇರೆ ಯಾವ ಪ್ರಾಣಿಗಳನ್ನು ಕೊಲ್ಲಲು ನಾನು ಎಂದೂ ಕೋವಿ ಎತ್ತುತ್ತಿರಲಿಲ್ಲ. ಸಾರಂಗ ಮತ್ತು ಜಿಂಕೆಯ ಜಾತಿಯ ಇತರೇ ಪ್ರಾಣಿಗಳಿಂದ ನಮ್ಮ ತೋಟಕ್ಕೆ ಯಾವ ಹಾನಿಯೂ ಇರಲಿಲ್ಲ. ಅವಕ್ಕೆ ನಾನು ಹಿಂಸೆ ಮಾಡುತ್ತಿರಲಿಲ್ಲ. ಕಬ್ಬೆಕ್ಕು, ಹಾರುಬೆಕ್ಕು ಅಲ್ಪ ಸ್ವಲ್ಪ ಕಾಫಿಯ ಹಣ್ಣು ತಿಂದರೆ ಪರವಾಗಿಲ್ಲ ಎಂದು ಅವಕ್ಕೆ ನಾನು ಗುಂಡು ಹಾರಿಸುತ್ತಿರಲಿಲ್ಲ.

ನಮ್ಮ ಭತ್ತದ ಗದ್ದೆಗಳನ್ನು ಕಾಡುಹಂದಿಗಳ ಕಾಟದಿಂದ ನಾವು ರಕ್ಷಿಸಲೇಬೇಕಿತ್ತು. ಅವುಗಳನ್ನು ಹೆದರಿಸಿ ಓಡಿಸಲೇಬೇಕಿತ್ತು, ಇಲ್ಲವೇ ಶಿಕಾರಿ ಮಾಡಬೇಕಿತ್ತು. ಅವನ್ನು ಹೊಡೆಯದೇ ಇದ್ದರೆ ನಮಗೆ ಅವುಗಳ ಕಾಟ ಮಿತಿಮೀರಿ, ನಾವು ಬೆಳೆದ ಭತ್ತದ ಬೆಳೆ ಕೈಗೆ ದಕ್ಕುತ್ತಿರಲಿಲ್ಲ.

ಕಾಫಿ ತೋಟದಲ್ಲಿ ಹಂದಿ ಶಿಕಾರಿ ಮಾಡಿದರೆ, ನಮ್ಮ ಆಳುಗಳಿಗೆ ಖುಷಿಯೋಖುಷಿ. ಒಂದು ಕಾಡುಹಂದಿ ಶಿಕಾರಿಯಲ್ಲಿ ಅವರಿಗೆಲ್ಲಾ ಹಂಚಿಕೊಂಡು ತಿನ್ನುವಷ್ಟು ಮಾಂಸ ಸಿಗುತ್ತಿತ್ತು. ನಾವು ಸಸ್ಯಾಹಾರಿಗಳಾದ್ದರಿಂದ ನಮ್ಮ ಪಾಲಿನ ಮಾಂಸ ಕೂಡಾ ನಮ್ಮ ಆಳುಗಳಿಗೆ ಸಿಕ್ಕುತ್ತಿತ್ತು. ನಾನು ಶಿಕಾರಿಗೆ ಹೋದಾಗ ಕಾಡುಹಂದಿ ಕಂಡರೆ ಮಾತ್ರ ಹೊಡೆಯುತ್ತಿದ್ದೆ.

ನಮ್ಮ ಹಾರ್ಮಕ್ಕಿ ತೋಟದಲ್ಲಿ ಆರು ಎಕರೆ ಗದ್ದೆ ಜಾಗದಲ್ಲಿ ನಾವು ಭತ್ತ ಬೆಳೆಯುತ್ತಿದ್ದೆವು. ಆ ಭತ್ತದ ಪೈರನ್ನು ಕಾಡುಹಂದಿಗಳು ಹಠ ಹಿಡಿದು ನಾಶ ಮಾಡುತ್ತಿದ್ದವು. ರಾತ್ರಿ ಹೊತ್ತು ನಮ್ಮ ಪೈರನ್ನು ಕಾಯಲು ಜನ ಬಿಡುತ್ತಿದ್ದೆವು. ಮಚಾನು ಕಟ್ಟಿ ಕಾವಲಿನ ಜನರು ಸೀಮೆ‌ಎಣ್ಣೆಯ ಡಬ್ಬವನ್ನು ಜೋರಾಗಿ ಬಡಿಯುತ್ತಾ ಕೂಗಾಡಿ, ಹಂದಿಗಳು ನಮ್ಮ ಪೈರನ್ನು ಬಂದು ತಿನ್ನದಂತೆ ಬೆದರಿಸುತ್ತಿದ್ದರು. ಆದರೂ ಕಾವಲಿನ ಆಳುಗಳು ಮನುಷ್ಯರಲ್ಲವೆ? ಮಧ್ಯರಾತ್ರಿಯ ನಂತರ ಅವರಿಗೂ ನಿದ್ರೆಯ ಜೊಂಪು ಹತ್ತುತ್ತಾ ಇತ್ತು. ಅದೇ ಸಮಯ ನೋಡಿಕೊಂಡು ಹಂದಿಗಳ ಹಿಂಡು ನಮ್ಮ ಭತ್ತದ ಗದ್ದೆಗೆ ಇಳಿದು ಪೈರನ್ನು ನಾಶಪಡಿಸುತ್ತಿದ್ದವು. ಒಮ್ಮೆ ಹಂದಿಗಳು ಭತ್ತದ ಗದ್ದೆಗೆ ಇಳಿದರೆ ಅವು ತಿಂದುದಕ್ಕಿಂತ ಜಾಸ್ತಿ ಭತ್ತದ ಪೈರನ್ನು ತುಳಿದು ನಾಶಮಾಡುತ್ತಿದ್ದವು. ಅಷ್ಟೇ ಸಾಲದು ಎಂಬಂತೆ ಅಲ್ಲಲ್ಲಿ ಎರೆಹುಳಗಳಿಗೋಸ್ಕರ ಗದ್ದೆಯ ಮಣ್ಣನ್ನು ಕೆದಕಿ ಉಳುಮೆ ಮಾಡುತ್ತಿದ್ದವು. ಅವು ಉಳುಮೆ ಮಾಡಿದ ಜಾಗದ ಭತ್ತದ ಪೈರು ಕೊಳತೇ ಹೋಗುತ್ತಿತ್ತು. ಹಂದಿಗಳು ಹೊಕ್ಕ ಗದ್ದೆಯನ್ನು ಮರುದಿನ ನೋಡಿದರೆ, ಯಾವ ರೈತನಿಗೂ ಸುಮ್ಮನೆ ಇರಲಾರದಷ್ಟು ಸಿಟ್ಟು ಬರುವುದು ಸಹಜ. ನಾವು ಹಂದಿಗಳನ್ನು ಬರದಂತೆ ತಡೆಯಲೇಬೇಕಿತ್ತು. ಅವು ಗದ್ದೆಗೆ ಇಳಿದಾಗ ಕಾವಲಿನವರು ಅವನ್ನು ಓಡಿಸದೇ ಇದ್ದರೆ, ನಮ್ಮ ಬೆಳೆ ಸರ್ವನಾಶ ಆಗುತ್ತಿತ್ತು.

ಆಗಿನ ಕಾಲದಲ್ಲಿ ವಿದ್ಯುತ್ ಬೇಲಿಗಳು ಇರಲಿಲ್ಲ. ಈಗ ಅವು ಸುಲಭವಾಗಿ ದೊರಕಿದರೂ, ಬೆಲೆ ಮಾತ್ರ ದುಬಾರಿ. ಆದ್ದರಿಂದ ಅವನ್ನು ಎಲ್ಲಾ ರೈತರು ಅಳವಡಿಸಲಾರರು. ಇಂದಿಗೂ ರಾತ್ರಿ ಹೊತ್ತು ನಿದ್ರೆಗೆಟ್ಟು ಗದ್ದೆ ಕಾಯುವ ಪಾಡು ಮಲೆನಾಡಿನ ರೈತರಿಗೆ ತಪ್ಪಿದ್ದಲ್ಲ. ಹಂದಿಗಳಿಗೆ ಗುಂಡು ಹಾಕಿ ಒಂದೆರಡನ್ನು ಕೊಂದರೆ ಮುಂದಿನ ಒಂದೆರಡು ವಾರ ಅವು ನಮ್ಮ ಗದ್ದೆಗಳ ಕಡೆಗೆ ಸುಳಿಯುತ್ತಿರಲಿಲ್ಲ. ಹಾಗಾಗಿ, ಹಂದಿಗಳನ್ನು ಶಿಕಾರಿ ಮಾಡದೇ ಇದ್ದರೆ ನಮಗೆ ನಾವು ಬೆಳೆದ ಭತ್ತದ ಬೆಳೆ ಕೈಗೆ ದಕ್ಕುತ್ತಿರಲ್ಲ.

ರಾತ್ರಿ ಹೊತ್ತು ಲೈಟ್ ಶಿಕಾರಿಗೆ ನನ್ನ ಜತೆಗೆ ನನ್ನಂತೆಯೇ ಶಿಕಾರಿಯ ಹುಚ್ಚಿದ್ದ ಸುಬ್ಬಯ್ಯನಾಯಕ್ ಎಂಬ ಹಿರಿಯ ಫೀಲ್ಡ್‌ರೈಟರ್ ಒಬ್ಬರು ಬರುತ್ತಿದ್ದರು. ಸುಬ್ಬಯ್ಯ ನಾಯ್ಕರಿಗೆ ಆಗ ಸುಮಾರು ಐವತ್ತರ ಪ್ರಾಯ. ಮೇಲಾಗಿ, ಅವರು ಅಷ್ಟು ಒಳ್ಳೆಯ ಈಡುಗಾರರಲ್ಲ. ಆ ದಿನಗಳಲ್ಲಿ ನಾನು ಇಪ್ಪತ್ತೈದು ವರ್ಷ ಪ್ರಾಯದ ಹುಡುಗ. ನನ್ನ ಈಡು ಸಾಮಾನ್ಯವಾಗಿ ತಪ್ಪುತ್ತಿರಲಿಲ್ಲ. ನನ್ನ ಜೊತೆಗೆ ಸುಬ್ಬಯ್ಯನಾಯ್ಕರು ಬಂದಾಗ ಏನಾದರೂ ಶಿಕಾರಿ ಆದರೆ, ಆ ಶಿಕಾರಿ ಮಾಂಸದಲ್ಲಿ ಹೊಡೆದವರ ಪಾಲಿನ ಮಾಂಸವಾದ ಒಂದು ತೊಡೆಯ ಮಾಂಸ ಅವರ ಪಾಲಿನ ಮಾಂಸದ ಜತೆಗೆ ಸೇರಿ ಅವರ ಮನೆಯ ಅಡುಗೆ ಮನೆ ಸೇರುತ್ತಿತ್ತು. ನಾನು ಶಾಖಾಹಾರಿ ಆದ್ದರಿಂದ ಈ ಹೆಚ್ಚಿನ ಮಾಂಸದ ಹಕ್ಕು ತಾನಾಗಿ ಅವರಿಗೆ ಹೋಗುತ್ತಿತ್ತು. ಈ ಆಸೆಯಿಂದ ಅವರು ಸದಾ ನನ್ನನ್ನು ಇಂದು ರಾತ್ರಿ ಲೈಟ್ ಶಿಕಾರಿಗೆ ಹೋಗೋಣ! ಎಂದು ಸಾಯಂಕಾಲ ಆದ ಕೂಡಲೇ ಬಂದು ಕರೆಯುತ್ತಿದ್ದರು.

ಕೆಲವು ಸಾರಿ ರಾತ್ರಿ ಇಡೀ ತೋಟ ಜಾಲಾಡುತ್ತಾ ತಿರುಗಿದರೂ ಶಿಕಾರಿ ಆಗುತ್ತಿರಲಿಲ್ಲ. ಸುರಿಯುವ ಮಳೆಯಲ್ಲಿ ಜಿಗಣೆಗಳಿಂದ ಕಚ್ಚಿಸಿಕೊಳ್ಳುತ್ತಾ ಚಳಿಗೆ ನಡುಗುತ್ತಾ ನಾವು ಕಡಿದಾದ ತೋಟದ ಒಳಗೆ ಸುತ್ತಬೇಕಿತ್ತು. ಆಗಾಗ ಕಾಲುಜಾರಿ ಬೀಳುವುದು ಕೂಡಾ ಅನಿವಾರ್ಯವಾಗಿತ್ತು. ಅಪರೂಪಕ್ಕೆ ಕಾಡುಕೋಣಗಳು ತೋಟದ ಒಳಗೆ ಕಂಡರೆ ಹುಸಿ ಈಡು ಹಾರಿಸಿ ಅವನ್ನು ತೋಟದಿಂದ ಹೊರಗೆ ಓಡಿಸುತ್ತಿದ್ದೆವು. ಎಷ್ಟಾದರೂ ಕಾಡುಕೋಣ ಹಾಗೂ ಕಾಡೆಮ್ಮೆಗಳು ನಮಗೆ ದನಗಳಿಗೆ ಸಮಾನ. ಹಿಂದೂ ಜನರಾರೂ ಅವಕ್ಕೆ ಹಿಂಸೆ ಮಾಡುತ್ತಿರಲಿಲ್ಲ.

ನಮ್ಮ ಗದ್ದೆಗಳಿಗೆ ಬಹು ಕಡಿದಾದ ಇಳಿಜಾರು ದಾರಿಯಲ್ಲಿ ಇಳಿದು ಹೋಗಬೇಕಿತ್ತು. ನಮ್ಮ ಗದ್ದೆಗಳು ಜೌಗು ಪ್ರದೇಶದಲ್ಲಿ ಇದ್ದುದರಿಂದ, ಭಾರವಾದ ಮೈ ಇರುವ ಕಾಡುಕೋಣಗಳು ತಮ್ಮ ಕಾಲುಗಳು ಕೆಸರಿನಲ್ಲಿ ಹುಗಿದುಕೊಳ್ಳುತ್ತವೆ ಎಂಬ ಭಯದಿಂದ ನಮ್ಮ ಗದ್ದೆಗಳ ಬಳಿಗೇ ಬರುತ್ತಿರಲಿಲ್ಲ. ಆ ತೋಟದ ವಿಶಾಲವಾದ ಜಾಗದಲ್ಲಿ ಸಮತಳದ ಜಾಗವೇ ಕಡಿಮೆ. ಎಲ್ಲಿ ನೋಡಿದರೂ ಹಾವಸೆ. ಕಾಲಿಟ್ಟರೆ ಜಾರುವ ದಾರಿಗಳು. ನಾನು ಮತ್ತು ಸುಬ್ಬಯ್ಯನಾಯ್ಕರು ರೈನ್‌ಕೋಟ್ ತೊಟ್ಟು, ತಲೆಗೆ ಹೆಡ್‌ಲೈಟ್ ಕಟ್ಟಿ, ರಾತ್ರಿ ಹನ್ನೊಂದರ ಮೇಲೆ ಶಿಕಾರಿಗೆ ಹೊರಡುತ್ತಿದ್ದೆವು. ಹೀಗೆ ಹೋದಾಗ ಒಬ್ಬರಾದ ಮೇಲೆ ಒಬ್ಬರು ಜಾರಿ ಬೀಳುತ್ತಿದ್ದೆವು. ಒಬ್ಬರನ್ನೊಬ್ಬರು ಆಧರಿಸಿ ಎಬ್ಬಿಸುತ್ತಿದ್ದೆವು. ನಮ್ಮಿಬ್ಬರನ್ನು ಬಿಟ್ಟರೆ ನಮ್ಮ ಪಾಡು ನೋಡಿ ನಗುವವರು ಯಾರೂ ಹತ್ತಿರ ಇರಲಿಲ್ಲ.

ಒಮ್ಮೆ ಸುಬ್ಬಯ್ಯನಾಯ್ಕರು ಮತ್ತು ನಾನು ಇಬ್ಬರೂ ಸಖತ್ ಜಾರಿಬಿದ್ದೆವು. ಒಬ್ಬರಿಗೊಬ್ಬರು ಆಧಾರ ಕೊಡಲು ಕೂಡಾ ಅಂದು ಸಾದ್ಯವಾಗಲಿಲ್ಲ. ನಾವು ಅಂದು ಜಾರಿ ಬಿದ್ದ ಕಡಿದಾದ ದಾರಿ ಹಾವಸೆಯಿಂದ ಕೂಡಿತ್ತು. ಸುಮಾರು ಮುನ್ನೂರು ಅಡಿಗಳಷ್ಟು ಉದ್ದದ ತೀರಾ ಕಡಿದಾದ ಜಾರುಬಂಡೆಯಂತಿದ್ದ ತೋಟದ ಮಧ್ಯದ ನಡೆದಾಡುವ ರೋಡಿನಲ್ಲಿ (ನಾವು ಇದಕ್ಕೆ ಕಾಫಿತೋಟದ ಭಾಷೆಯಲ್ಲಿ ರೋಟು ಎನ್ನುವುದು) ನಾವು ಕಾಲಿನ ಆಧಾರ ತಪ್ಪಿ ಮಕ್ಕಳು ಜಾರುಬಂಡೆಯಲ್ಲಿ ಜಾರಿದಂತೆ ಜಾರಿಬಿದ್ದೆವು. ಎಷ್ಟು ಪ್ರಯತ್ನಪಟ್ಟರೂ ನಮಗೆ ಎದ್ದು ನಿಲ್ಲಲು ಆಗಲಿಲ್ಲ. ಒಬ್ಬರು ಇನ್ನೊಬ್ಬರಿಗೆ ಆಧಾರ ಕೊಡಲು ಎಷ್ಟು ಪ್ರಯತ್ನಿಸಿದರೂ,  ಆ ತುಂತುರು ಮಳೆಯಲ್ಲಿ ಜಾರಿಕೊಂಡೇ ಕೆಳಗೆ ಹೋಗುತ್ತಾ ಇದ್ದೆವು. ನಮ್ಮ ಸತತ ಪ್ರಯತ್ನದಿಂದ ಆ ಇಳಿಜಾರಿನಲ್ಲಿ ಜಾರಿ, ಕೆಳಗೆ ಜಾರಿಕೊಂಡು ಹೋಗುವ ವೇಗ ಸ್ವಲ್ಪ ಕಡಿಮೆಯಾಯಿತು ಅಷ್ಟೇ!

ಹನಿಮಳೆ, ೪೫೦೦ ಅಡಿ ಎಮ್.ಎಸ್.ಎಲ್. ಎತ್ತರದ ತೋಟ, ನುಗ್ಗುವ ಮೋಡ, ಚಳಿ, ಇವುಗಳ ಮಧ್ಯೆ ಕಡಿದಾದ ಹಾವಸೆ ಹಿಡಿದ ದಾರಿಯಲ್ಲಿ ನಾವು ಒಂದೇ ಸಮನೆ ಜಾರಿ ಕೆಳಗೆ ಹೋಗುತ್ತಾ ಇದ್ದೆವು. ಕಾಫಿಗಿಡ ಅಥವಾ ಯಾವುದಾದರೂ ಮರದ ಆಧಾರ ಹಿಡಿದು ಎಲ್ಲಾದರೂ ಒಂದು ಕಡೆ ನಿಂತು ಒಬ್ಬರು ಇನ್ನೊಬ್ಬರನ್ನು ಬಲ ಮಾಡಲು ಸಾಧ್ಯವಾಗಲೇ ಇಲ್ಲ. ನಾವು ಬೀಳುವ ರಭಸಕ್ಕೆ ನಮ್ಮಿಬ್ಬರ ಕೋವಿಗಳೂ ನಮ್ಮ ಕೈತಪ್ಪಿ ಕಾಫಿಗಿಡಗಳ ಬುಡಕ್ಕೆ ಸೇರಿದುವು. ನಾವು ಹೀಗೆಯೇ ಸುಮಾರು ಮುನ್ನೂರು ಅಡಿ ಜಾರಿದ ನಂತರ ಇನ್ನೊಂದು ಅಡ್ಡ ರೋಡ್ ಬಂದಾಗ ಆಧರಿಸಿಕೊಂಡು ಹೇಗೋ ಎದ್ದು ನಿಂತೆವು. ನಮ್ಮ ರೈನ್‌ಕೋಟ್‌ಗಳು ಹರಿದುಹೋಗಿದ್ದುವು, ಪ್ಯಾಂಟ್‌ಶರ್ಟ್‌ಗಳ ಗತಿಯೂ ಅದೇ! ನಮ್ಮ ಹೆಡ್‌ಲೈಟ್‌ಗಳು ಮಾತ್ರ ಭದ್ರವಾಗಿದ್ದವು.

ಎದ್ದು ನಿಂತು ನೋಡುತ್ತೇವೆ.., ನಮ್ಮ ಎದುರೇ ಸುಮಾರು ಇಪ್ಪತ್ತು ಕಾಡುಹಂದಿಗಳ ಗುಂಪು..!! ಅವು ನಮ್ಮನ್ನೇ ದುರುಗಟ್ಟಿಕೊಂಡು ನೋಡುತ್ತಾ ಇವೆ. ಆದರೆ, ನಮ್ಮ ಕೈಯ್ಯಲ್ಲಿ ಕೋವಿಗಳೇ ಇಲ್ಲ!!

ಗುಂಪಿನಲ್ಲಿದ್ದ ಕೋರೆದಾಡೆಯ ದೊಡ್ಡ ಹಂದಿ ನಾಲ್ಕು ಆಳು ಹೊರಬೇಕು! ಅಷ್ಟು  ದೊಡ್ಡದು. ನಾವು ಹೊ..! ಹೋ..! ಹಚಾ! ಎನ್ನುತ್ತಾ ಅವನ್ನು ದೂರ ಓಡಿಸಿದೆವು. ಅವು ಗುರುಟು ಹಾಕುತ್ತಾ ನಿಧಾನವಾಗಿ ಕಾಡಿನ ಕಡೆಗೆ ನಡೆದುವು. ಅಂದು ನಮ್ಮ ಸುಬ್ಬಯ್ಯನಾಯ್ಕರಿಗೆ ಆದ ನಿರಾಸೆಗೆ ಲೆಕ್ಕವೇ ಇಲ್ಲ.

ಆ ರಾತ್ರಿ ಬೆಳಗಾಗುವ ತನಕ ನಾವು ನಮ್ಮ ಕೋವಿಗಳನ್ನು ಹುಡುಕಿದ್ದೇ ಹುಡುಕಿದ್ದು! ಬೆಳಗ್ಗೆ ಆರುಗಂಟೆಗೆ ಆದ ಮೇಲೆಯೇ ನಸುಬೆಳಕಿನಲ್ಲಿ ಅವು ನಮಗೆ ಕಾಫಿಗಿಡಗಳ ಕೆಳಗೆ ಕಂಡು ಬಂದುವು. ಅಂತೂ, ನಮ್ಮ ತೋಟಾಕೋವಿಗಳು ನಮ್ಮ ಕೈ ಸೇರಿದಾಗ, ಆ ಹಂದಿಗಳ ಗುಂಪು ಕಾಡುಸೇರಿ ನಾಲ್ಕು ಗಂಟೆಗಳೇ ಕಳೆದಿರಬಹುದು. ಹ್ಯಾಪ್ ಮೋರೆ ಹೊತ್ತು ಬೇಗನೇ ಮನೆ ಸೇರಿ, ಮೈಗೆ ಕಚ್ಚಿದ್ದ ನೂರಾರು ಜಿಗಣೆಗಳನ್ನು ಕಿತ್ತೆಸೆದು, ಸ್ನಾನ ಮಾಡಿದೆವು. ಹರಿದು ಚಿಂದಿ ಚಿಂದಿ ಆಗಿದ್ದ ರೈನ್‌ಕೋಟ್, ಪ್ಯಾಂಟ್, ಎಲ್ಲಾ ಬಚ್ಚಲ ಒಲೆಗೆ ಸೇರಿದವು. ನಮ್ಮ ಮೈ ತರಚಿದ ಗಾಯಗಳು ಯಾರಿಗೂ ಕಾಣದಂತೆ ಫುಲ್ ಕೈ ಅಂಗಿ, ಬೇರೆ ಪ್ಯಾಂಟ್ ಧರಿಸಿದೆವು. ಇಷ್ಟರವರೆಗೆ ಈ ವಿಚಾರ ನನಗೆ ಮತ್ತು ಸುಬ್ಬಯ್ಯನಾಯ್ಕರಿಗೆ ಮಾತ್ರ ತಿಳಿದಿತ್ತು. ಈಗ ನಿಮಗೂ ಗೊತ್ತಾಗಿದೆ.

* * *