ಶ್ರೀ ರಾಘವರಾಜು ನಮ್ಮ ಫಾರ್ಮ್ ಸಮುದಾಯದ ಸೀನಿಯರ್ ಮ್ಯಾನೇಜರ್ ಆಗಿದ್ದ ಸಭ್ಯ ಗೃಹಸ್ಥ. ಅವರು ಆಂಧ್ರದ ಪೂರ್ವಗೋದಾವರಿ ಜಿಲ್ಲೆಯಿಂದ ಬಂದು, ರಾಯಚೂರು ಜಿಲ್ಲೆಯಲ್ಲಿ ನೆಲಸಿದ, ಮೊದಲ ವಲಸೆಗಾರ ಪಂಗಡದ ಆಂಧ್ರ ರಾಜ್ಯದ ರೈತರಂತೆ. ರಾಘವ ರಾಜು ಅವರದು ಗೌರವಾನ್ವಿತ ಕ್ಷತ್ರಿಯ ಕುಟುಂಬ. ಅವರ ಹಿರಿಯರು ಬಹುಹಿಂದೆ ಕರ್ನಾಟಕದ ಆನೆಗೊಂದಿ ಸಂಸ್ಥಾನದಲ್ಲಿ ದಳಪತಿಗಳಾಗಿ ಕೆಲಸ ಮಾಡಿಕೊಂಡಿದ್ದರಂತೆ. ಆದರೂ ಕಾಲಕ್ರಮೇಣ, ಅವರ ಹಿರಿಯರು, ಹುಟ್ಟೂರಾದ ಆಂಧ್ರಕ್ಕೇ ಹೋಗಿ ನೆಲಸಿದರಂತೆ.

ರಾಘವ ರಾಜು ಅವರದು ಗೌರವಾನ್ವಿತ ವ್ಯಕ್ತಿತ್ವ. ಆರಡಿ ಎತ್ತರದ ಗೌರವರ್ಣದ ನೀಳಕಾಯದ ಶಕ್ತಿವಂತ ವ್ಯಕ್ತಿ. ನಾನು ನೋಡುವಾಗಲೇ ಅವರಿಗೆ ವಯಸ್ಸು ಐವತ್ತೈದಾಗಿರಬಹುದು. ಯಾವಾಗಲೂ ಶುಭ್ರವಸನಧಾರಿಯಾಗಿ ಇರುತ್ತಿದ್ದರು. ಬಿಳಿ ವೇಸ್ಟಿ ಮತ್ತು ಖಾದಿಜುಬ್ಬಾ ಅವರ ದೈನಂದಿನ ಉಡುಪು. ಗೋಲ್ಡ್ ಫ್ರೇಮಿನ ಕನ್ನಡಕ ಧರಿಸುತ್ತಿದ್ದರು. ಅವರು ಮಲಿನವಾದ ಬಟ್ಟೆಗಳನ್ನು ಧರಿಸುದುದನ್ನು ನಾನೆಂದೂ ಕಂಡಿಲ್ಲ. ಪ್ರತಿದಿನ ಸೂರ್ಯ ಹುಟ್ಟುವುದಕ್ಕೆ ಮೊದಲೇ ಎದ್ದು ಸ್ನಾನಜಪಗಳನ್ನು ಮುಗಿಸಿ, ಅಚ್ಚ ಬಿಳುಪಿನ ವಸ್ತ್ರಗಳನ್ನು ಧರಿಸುತ್ತಿದ್ದರು. ಅವರ ಅಚ್ಚ ಬಿಳಿಬಣ್ಣದ ತಲೆಕೂದಲು ಯಾವತ್ತೂ ಒಂದೇತರಹದ ಕ್ರೂಕಟ್ ಶೈಲಿಯಲ್ಲಿ ಇರುತ್ತಿತ್ತು. ಅವರು ದಿನಾ ನುಣ್ಣಗೆ ಮುಖಕ್ಷೌರ ಮಾಡಿಕೊಳ್ಳುತ್ತಿದ್ದರು. ಒಂದು ಬಿಳಿಯ ಪೇಟವನ್ನು ಅವರ ತಲೆಯ ಮೇಲೆ ಇಟ್ಟುಬಿಟ್ಟರೆ, ನಮ್ಮ ದೇಶದ ಮಾಜಿ ರಾಷ್ಟ್ರಪತಿ ಸರ್ ಎಸ್. ರಾಧಾಕೃಷ್ಣನ್ ಅವರ ತರಹವೇ ಕಾಣಬಹುದೆಂದು ನಾವು ಅಂದುಕೊಳ್ಳುತ್ತಿದ್ದೆವು.               ರಾಘವರಾಜು ಅವರು ಆಂಧ್ರಾ ಯೂನಿವರ್ಸಿಟಿಯ ಮೊದಲನೇಯ ಬ್ಯಾಚಿನ ಆಗ್ರಿಕಲ್ಚರ್ ಬಿ.ಎಸ್.ಸಿ. ಡಿಗ್ರಿ ಪಾಸ್ ಮಾಡಿದವರಂತೆ. ಅವರ ಉಡುಗೆಯಂತೆ ಅವರ ಆಫೀಸು, ಮನೆ ಮತ್ತು ವಾಹನವಾದ ವಿಲ್ಲೀಸ್ 4WD ಜೀಪ್ ಕೂಡಾ ಸದಾ ಚೊಕ್ಕವಾಗಿ ಇರುತ್ತಿದ್ದುವು. ರಾಘವ ರಾಜು ಅವರದು ಸದಾ ನಗುಮುಖ. ಸಿಟ್ಟು ಬಂದಾಗಲೂ ಅವರು ಸ್ಥಿಮಿತ ಕಳೆದುಕೊಳ್ಳದೆ, ಗಂಭೀರ ಸ್ವರದಲ್ಲಿ ವ್ಯವಹರಿಸುತ್ತಿದ್ದರು. ಅವರು ಎಂದಿಗೂ ಸಿಟ್ಟಿನ ಕೈಗೆ ಬುದ್ಧಿಕೊಟ್ಟು ಸ್ವರ ಏರಿಸಿ ಯಾರನ್ನೂ ಬೈದವರಲ್ಲ.

ನಾನು ಅವರನ್ನು ಮೊದಲ ಸಲ ಕಂಡ ಸಮಯದಲ್ಲಿಯೇ, ಕಾರಣಾಂತರಗಳಿಂದ ನಮ್ಮ ದೊಡ್ಡ ಫಾರಂಸಮೂಹ ಒಡೆದು ಬೇರೆಬೇರೆ ತುಕಡಿಗಳಾಗಿದ್ದುವು. ನನಗೆ ಅವರ ಪರಿಚಯವಾದಾಗ, ಅವರು ಶ್ರೀ ಪಾಪಾರಾವ್ ಎಂಬ ಪ್ರಗತಿಪರ ರೈತರ ಫಾರಂ ಮ್ಯಾನೇಜರ್ ಆಗಿದ್ದರು. ಅದು ನಮ್ಮ ಫಾರ್ಮ್‌ನಿಂದ ಐದು ಮೈಲು ದೂರದಲ್ಲಿತ್ತು. ರಾಘವ ರಾಜು ಅವರು ಕೂಡಾ ನನ್ನಂತೆಯೇ, ಹುಲ್ಲು ಹೊದೆಸಿದ ಬಿದಿರು ತಡಿಕೆಗಳ ಗೋಡೆಗಳುಳ್ಳ ಪರ್ಣಕುಟಿಯಲ್ಲಿ ವಾಸಮಾಡುತ್ತಿದ್ದರು. ರಾಯಚೂರಿನ ಹವಾಮಾನಕ್ಕೆ ಈ ತರಹದ ಫಾರಂ ಮನೆಗಳೇ ವಾಸಕ್ಕೆ ಅತ್ಯುತ್ತಮ ಎನಿಸಿದ್ದುವು. ಅವು ಬಿಸಿಲಿಗೆ ತಂಪಾಗಿ, ಚಳಿಗಾಲದಲ್ಲಿ ಬೆಚ್ಚಗಿರುತ್ತಿದ್ದುವು. ನಾನು ತುಂಗಭದ್ರಾ ಫಾರಂ ಎಂಬ ತುಕಡಿಯ ಮ್ಯಾನೇಜರನಾಗಿದ್ದೆ. ಆಗ  ನನಗೆ ಇಪ್ಪತ್ತೊಂದು ವರ್ಷ ಪ್ರಾಯ. ನನಗೆ ಆಗ ರಾಯಚೂರು ಜಿಲ್ಲೆಯ ಜವಳಗೆರೆ ಹೊಸ ಊರು. ನನಗೆ ಕಪ್ಪುಮಣ್ಣಿನ ಬೇಸಾಯದಲ್ಲಿ ಸಾಕಷ್ಟು ಅನುಭವ ಇರಲಿಲ್ಲ. ಹತ್ತಿ ಮತ್ತು ಗೋಧಿ ನಮ್ಮ ಫಾರ್ಮ್‌ನ ಮುಖ್ಯ ಬೆಳೆಗಳಾಗಿದ್ದುವು. ನಾನು ಆಗಾಗ ರಾಘವರಾಜು ಅವರನ್ನು ಕಂಡು, ಅವರ ಸಲಹೆ ಪಡೆಯುತ್ತಾ ನನ್ನ ಕೆಲಸ ನಿಭಾಯಿಸುತ್ತಿದ್ದೆ. ಅರುವತ್ತು ಮೈಲಿ ದೂರದ ರಾಯಚೂರಿನ ಸರಕಾರೀ ಆಫೀಸುಗಳಲ್ಲಿ, ನಮಗಿಬ್ಬರಿಗೂ ಕೆಲಸವಿದ್ದ ಸಂದರ್ಭಗಳಲ್ಲಿ, ನಾನು ರಾಘವರಾಜು ಅವರ ಜತೆಗೆ ರಾಯಚೂರಿಗೆ ಹೋಗುತ್ತಿದ್ದೆ. ಅವರ ಪ್ರಭಾವ ಮತ್ತು ಪರಿಚಯಗಳಿಂದ ನನ್ನ ಕೆಲಸ ಸುಲಭವಾಗಿ ಆಗುತ್ತಿತ್ತು. ಅವರಿಂದಾಗಿ ನನಗೆ ಜಿಲ್ಲೆಯ ಅತೀ ಗಣ್ಯವ್ಯಕ್ತಿಗಳ ಹಾಗೂ ಸರಕಾರಿ ಅಧಿಕಾರಿಗಳ ಪರಿಚಯವಾಯಿತು. ಎಲ್ಲೆಲ್ಲೂ ರಾಘವರಾಜು ಅವರು ನನ್ನನ್ನು ಅತಿ ಮರ್ಯಾದೆಯಿಂದ ಪರಿಚಯಿಸುತ್ತಿದ್ದರು.

ರಾಘವ ರಾಜು ನನ್ನನ್ನು ಪ್ರೀತಿಯಿಂದ ಸ್ವಂತ ಮಗನಂತೆ ಪ್ರೀತಿಸುತ್ತಿದ್ದರು. ನಾನು ಅವರ ಜತೆಗೆ ಹೋದಾಗ ಅವರ ಜೀಪು ನಾನೇ ನಡೆಸಬೇಕು! ಹುಡುಗ ಪ್ರಾಯದ ನನಗೆ  ಶೋರೂಮ್ ಕಂಡೀಶನ್ನಲ್ಲಿ ಇರುತ್ತಿದ್ದ ಅವರ ಜೀಪ್ ಓಡಿಸುವುದೆಂದರೆ ಬಹಳ ಖುಶಿ.

ಹೋಟೆಲ್‌ಗಳಲ್ಲಿ ಅವರು ಎಂದೂ ನನಗೆ ಹಣ ತೆರಲು ಬಿಟ್ಟವರಲ್ಲ. ನಾನು ಪ್ರಾಯದಲ್ಲಿ ಹಿರಿಯ, ಆದ್ದರಿಂದ ನಾನೇ ಬಿಲ್ಲು ತೆರಬೇಕು ಎಂದು ಹಠಹಿಡಿದು, ಅವರು ನನಗೆ ಖರ್ಚುಮಾಡಲು ಬಿಡುತ್ತಲೇ ಇರಲಿಲ್ಲ. ಜತೆಯಾಗಿ ಊಟ ತಿಂಡಿಗಳಿಗೆ ಹೋದಾಗ, ಅವರಿಗೆ ನನಗೆ ತಿನ್ನಿಸಿದಷ್ಟು ತೃಪ್ತಿ‌ಇಲ್ಲ. ಚಿಕ್ಕ ಪ್ರಾಯದ ಹುಡುಗರು ಚೆನ್ನಾಗಿ ತಿನ್ನಬೇಕು ಮತ್ತು ಮೈಮುರಿದು ದುಡಿಯಬೇಕು ಎನ್ನುವುದು ಅವರ ವಾದವಾಗಿತ್ತು. ಯಾವ ಹೊತ್ತಿನಲ್ಲಿ ಅವರ ಮನೆಗೆ ಹೋದರೂ ನನಗೆ ಊಟ ಅಥವಾ ಉಪಹಾರ ಕೊಡದೇ ಕಳುಹಿಸಿಕೊಡುತ್ತಿರಲಿಲ್ಲ. ಅವರ ಮನೆಯಲ್ಲಿ ಅವರು ಎಂದಿಗೂ ನನಗೆ ಬರೇ ಚಾ ಕೊಟ್ಟವರೇ ಅಲ್ಲ. ಏನಾದರೂ ತಿಂಡಿ, ಬಿಸ್ಕೆಟ್ ಮತ್ತು ಹಣ್ಣು ತಿನ್ನದೇ ಅವರ ಮನೆಯಲ್ಲಿ ಚಾ ಕುಡಿದ ನೆನಪಿಲ್ಲ.

ಶ್ರೀಮತಿ ರಾಘವರಾಜು ಅವರು ಮಾತೃಸ್ವರೂಪಿ ಮಹಿಳೆ. ಸಂಸ್ಕೃತ ಭಾಷೆಯಲ್ಲಿ ಅವರಿಗೆ ತುಂಬಾ ಪಾಂಡಿತ್ಯವಿತ್ತು. ಮೂಲತಃ ತೆಲುಗು ಭಾಷೆಯವರಾದ ಅವರಿಗೆ ಕನ್ನಡ ಮಾತನಾಡಲು ಸ್ವಲ್ಪ ಕಷ್ಟವೆನಿಸಿದಾಗಲೆಲ್ಲಾ ಸಂಸ್ಕೃತ ಬೆರಸಿ ಮಾತನಾಡುತ್ತಿದ್ದರು.

ರಾಘವ ರಾಜು ದಂಪತಿಗಳಿಗೆ ಬಹುಕಾಲ ಮಕ್ಕಳೇ ಆಗದೆ, ಬಹಳ ವರ್ಷಗಳ ನಂತರ ಅವರಿಗೊಬ್ಬ ಮಗಳು ಹುಟ್ಟಿದಳು. ಅವಳಿಗೆ ಪ್ರಮೀಳ ಎಂದು ಹೆಸರಿಟ್ಟರು. ಮಗಳು ಹುಟ್ಟಿದಾಗ ರಾಘವರಾಜು ದಂಪತಿಗಳ ಸಂತೋಷಕ್ಕೆ ಪಾರವೇ ಇಲ್ಲ. ಆಂಧ್ರಪ್ರದೇಶದಲ್ಲಿ ವಾಸುಸಿತ್ತಿದ್ದ ರಾಘವ ರಾಜು ಅವರ ತಾಯಿಯವರು ಮಗನ ಮನೆಗೆ ಬಂದು ಮೊಮ್ಮಗಳನ್ನು ಮುದ್ದಾಡಿ, ಮಗುವಿಗೆ ನೂರು ಸವರನ್ ಬಂಗಾರ ಉಡುಗೊರೆ ಮಾಡಿದ್ದರು. ಅಷ್ಟು ಬಂಗಾರವನ್ನು ತಮ್ಮ ಪರ್ಣಕುಟಿಯಲ್ಲಿ ಇರಿಸಿಕೊಳ್ಳಲು ಹೆದರಿ, ದಂಪತಿಗಳು ಆ ಬಂಗಾರವನ್ನು ಅವರುಗಳ ಬ್ಯಾಂಕ್ ಲಾಕರಿನಲ್ಲಿ ಮಗಳಿಗೋಸ್ಕರ ಜೋಪಾನವಾಗಿ ಇರಿಸಿದ್ದರು.

ನಾನು ರಾಘವ ರಾಜು ಅವರಿಂದ ಕರ್ತವ್ಯ ಪಾಲನೆ, ಸಮಯ ನಿಷ್ಟುರತೆ ಮತ್ತು ಕೈಕೆಳಗೆ ಕೆಲಸಮಾಡುವ ಸಿಬ್ಬಂದಿ ಮತ್ತು ಆಳುಕಾಳುಗಳ ಮೇಲೆ ಪ್ರೀತಿಯಿರಿಸುವ ಸ್ವಭಾವದ ಮೇಲ್ಪಂಗ್ತಿಗಳನ್ನು ಕಲಿತೆನು.

ಒಮ್ಮೆ ನಾನು ಮತ್ತು ರಾಘವ ರಾಜು ಜತೆಗೆ ರಾಯಚೂರಿಗೆ ಕೆಲಸದ ಮೇಲೆ ಹೋಗಿದ್ದೆವು. ಅವರು ಮತ್ತು ನಾನು ಜತೆಜತೆಗೇ ಹೋಗಿ ನಮ್ಮ ನಮ್ಮ ಫಾರಂಗಳಿಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದೆವು. ನಾವು ಒಂದು ಅಂಗಡಿಯಲ್ಲಿನ ಖರೀದಿ ಮುಗಿಸಿ ಇನ್ನೊಂದು ಅಂಗಡಿಗೆ ಸಾಗುವಾಗ, ಪೆಜತ್ತಾಯಗಾರೂ (=ತೆಲುಗು ಭಾಷೆಯಲ್ಲಿ ಪೆಜತ್ತಾಯ ಅವರೇ) ನಿನ್ನ ಹತ್ತಿರ ಈಗ ಆಫೀಸಿನ ಹಣದ ಶಿಲ್ಕು ಎಷ್ಟು ಇದೆ? ಎಂದು ಪ್ರಶ್ನಿಸಿದರು. ಆಗ ನಾನು ಸರ್, ನನ್ನಲ್ಲಿರುವ ಬಿಲ್‌ಗಳನ್ನು ಎಣಿಸಿ ಹೇಳಬೇಕಾಗುವುದು ಎಂದೆ. ಕೂಡಲೇ ಅವರು, ನಿನ್ನ ಸ್ವಂತ ಹಣ ಮತ್ತು ಆಫೀಸಿನ ಹಣ ಇವುಗಳನ್ನು ನೀನು ಒಟ್ಟಿಗೆ ಇರಿಸಿಕೊಂಡಿದ್ದಿ. ಇದು ತಪ್ಪು ಕ್ರಮ. ಆಫೀಸಿನ ಹಣವನ್ನು ಯಾವಾಗಲೂ ದೇವರ ಹುಂಡಿಯ ಹಣ ಎಂದು ನಾವು ಗೌರವಿಸಬೇಕು. ಆ ಹಣವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ನಿನ್ನ ಸ್ವಂತ ಹಣದೊಂದಿಗೆ ಯಾವಾಗಲೂ ಅದನ್ನು ಬೆರೆಸಿ ಇಟ್ಟುಕೊಳ್ಳಬಾರದು. ಆಫೀಸಿನ ಹಣದ ಜತೆಗೆ ಒಂದು ಚಿಕ್ಕ ನೋಟ್‌ಬುಕ್ ಇರಿಸಿಕೊಂಡು, ಎಡಬದಿಯ ಪುಟದಲ್ಲಿ ನಾವು ಆಫೀಸಿನಿಂದ ತಂದ ಹಣದ ಮೊಬಲಗನ್ನು ಗುರುತುಹಾಕಿ ಇಟ್ಟುಕೊಂಡು, ಬಲಬದಿಯ ಪುಟದಲ್ಲಿ ನಾವು ಆಫೀಸಿಗೋಸ್ಕರ ಖರ್ಚುಮಾಡಿದ ಹಣವನ್ನು ಬರೆದು, ಪ್ರತೀ ಖರೀದಿಯ ನಂತರ, ಎಡಪುಟದಲ್ಲಿ ಶಿಲ್ಕು ಎಷ್ಟು ಉಳಿದಿದೆ ಎಂದು ಲೆಕ್ಕಹಾಕಿ ಬರೆದುಕೊಳ್ಳಬೇಕು. ಯಾವ ಸಮಯದಲ್ಲೇ ಆಗಲಿ, ನಮ್ಮ ಕೈಯ್ಯಲ್ಲಿರುವ ಆಫೀಸ್ ಹಣದ ವಿವರ ಕ್ಷಣದೊಳಗೆ ನೀಡಲು ಮ್ಯಾನೇಜರುಗಳಾದ ನಾವು ತಯಾರಾಗಿರಬೇಕು. ಅದಲ್ಲದೆ ನಮ್ಮ ಫಾರ್ಮ್ ಆಫೀಸುಗಳನ್ನು ತಲುಪಿದ ತಕ್ಷಣ ಬಿಲ್ಲುಗಳನ್ನು ಆಫೀಸಿನ ಪುಸ್ತಕದಲ್ಲಿ ಜಮಾಖರ್ಚು ಮಾಡಿಸಿ, ಉಳಿದ ಹಣವನ್ನು ಆಫೀಸಿನ ಕ್ಯಾಶಿಯರಿಗೆ ಜಮಾ ಕೊಡಬೇಕು ಎಂದು ಗಂಭೀರ ಸ್ವರದಲ್ಲಿ ಹೇಳಿ ನನಗೆ ತಿಳುವಳಿಕೆ ಕೊಟ್ಟರು.

ಅಂದು ಅವರು ನನಗೆ ಉಪದೇಶಿಸಿದ ನೀತಿಪಾಠವನ್ನು ನಾನು ಇಂದಿಗೂ ಪರಿಪಾಲಿಸುತ್ತಿದ್ದೇನೆ. ಈ ಜಮಾಖರ್ಚಿನ ಲೆಕ್ಕಗಳ ಜತೆಗೆ, ನಾನು ಆಯಾದಿನದ ದಿನಚರಿಯನ್ನು ಕೂಡಾ ಸಂಕ್ಷಿಪ್ತವಾಗಿ ಗುರುತು ಹಾಕಿಕೊಳ್ಳುತ್ತೇನೆ. ಅದ್ದರಿಂದ, ನನಗೆ ಈ ನೋಟ್‌ಪುಸ್ತಕಗಳು ತುಂಬಾ ಅಮೂಲ್ಯವಾದ ದಿನಚರಿಯ ವಿವರ ನೀಡುವ ಪುಸ್ತಕಗಳಾಗಿವೆ.

ರಾಘವ ರಾಜು ಅವರ ಇನ್ನೊಂದು ಸಲಹೆಯನ್ನು ಕೂಡಾ ನಾನು ಇಂದಿಗೂ ಪಾಲಿಸುತ್ತಿದ್ದೇನೆ. ಅವರು ಹೇಳಿಕೊಟ್ಟ ಸಲಹೆ ಈ ರೀತಿ ಇದೆ. ಅತೀ ಉದ್ವೇಗ, ಅತೀ ಸಂತೋಷ, ಅತೀ ದುಃಖ ಅಥವಾ ಅತೀ ತುರ್ತಾದ ಸಂದರ್ಭಗಳಲ್ಲಿ, ನಾವು ನಡೆಸುತ್ತಾ ಇರುವ ವಾಹನಗಳನ್ನು ವೇಗವಾಗಿ ಓಡಿಸಲೇಬಾರದು. ಚಾಲಕನ ಸ್ಥಾನದಲ್ಲಿ ಕುಳಿತೊಡನೆ, ಇತರ ಎಲ್ಲಾ ಆಲೋಚನೆಗಳನ್ನು ಬಿಟ್ಟು, ವಾಹನವನ್ನು ಸುರಕ್ಷಿತವಾಗಿ ನಡೆಸುವ ಬಗ್ಗೆ ಮಾತ್ರ ಚಿಂತಿಸಬೇಕು. ಅತೀ ತುರ್ತಾಗಿ ತಲುಪಬೇಕಾದ ಉದ್ವೇಗದ ಕ್ಷಣಗಳಲ್ಲಿ, ಹತ್ತು ಕಿಲೋಮೀಟರ್ ವೇಗ ಜಾಸ್ತಿಮಾಡುವ ಬದಲು, ಹತ್ತು ಕಿಲೋಮೀಟರ್ ನಿಧಾನಮಾಡಿ, ಅತೀ ಜಾಗರೂಕನಾಗಿ ವಾಹನ ಚಲಾಯಿಸಬೇಕು. ಅತಿಯಾದ ವೇಗದಿಂದಲೇ ಅಪಘಾತಗಳಾಗುತ್ತವೆ. ಉದ್ವೇಗದ ಸಮಯದಲ್ಲಿ ನಾವು ಹತ್ತು ಸಲ ಯೋಚಿಸಿ ಮಾತನಾಡಬೇಕು. ಉದ್ವೇಗಪೂರಿತ ಮಾತುಗಳಿಂದ ಪ್ರಯೋಜನಕ್ಕಿಂತ ಅನಾಹುತವೇ ಜಾಸ್ತಿ ಎನ್ನುವುದು ನೆನಪಿರಲಿ ಎನ್ನುತ್ತಿದ್ದರು.

ಈ ಸಲಹೆಗಳನ್ನು ನಾನು ಆದಷ್ಟು ಪರಿಪಾಲಿಸಿಕೊಂಡು ಬಂದಿದ್ದೇನೆ. ಈ ಸಲಹೆಗಳು ನನಗೆ ಇದುವರೆಗಿನ ಜೀವನದಲ್ಲಿ ತುಂಬಾ ಉಪಯುಕ್ತವಾಗಿವೆ.

ಶ್ರೀ ರಾಘವರಾಜು ಅವರನ್ನು ನಾನು ನೋಡಿ ಮೂವತ್ತೈದು ವರ್ಷಗಳೇ ಸಂದಿವೆ. ಇಂದು ಅವರು ಎಲ್ಲಿದ್ದಾರೋ ಗೊತ್ತಿಲ್ಲ. ಅವರನ್ನು ನಾನು ಎಂದಿಗೂ ಹಿರಿಯರ ಸ್ಥಾನದಲ್ಲಿಟ್ಟು,  ಮರೆಯದೇ ಮನದಲ್ಲಿ ಗೌರವಿಸುತ್ತೇನೆ.

* * *