ಆಶಾಳ್ ಭೀಮಪ್ಪ ಎಂದರೆ ಭೀಮನ ಗಾತ್ರದ ಆಳೇನಲ್ಲ. ಆತ ಸುಮಾರು ಐದಡಿ ಎಂಟು ಇಂಚು ಎತ್ತರದ ಕಟ್ಟುಮಸ್ತಾದ ತೆಳು ಮೈಕಟ್ಟಿನ ಆಳು. ನಾನು ಆತನನ್ನು ನೋಡುವಾಗಲೇ ಆತನಿಗೆ ಐವತ್ತೈದು ವರ್ಷ ಪ್ರಾಯ ಆಗಿದ್ದೀತು. ತಲೆಯ ಮೇಲೆ ದೊಡ್ಡ ಮುಂಡಾಸು ಬಿಗಿದಾಗ ಆತ ಆರಡಿ ಎತ್ತರದವನಂತೆ ಕಾಣುತ್ತಿದ್ದ. ಆತ ಲಂಬಾಣಿ ಪಂಗಡಕ್ಕೆ ಸೇರಿದವನು. ಆತನ ಸ್ವಂತ ಊರು ಬಿಜಾಪುರ ಜಿಲ್ಲೆಯ ಆಶಾಳ್ ತಾಂಡ.

೧೯೬೯ನೇ ಇಸವಿಯಲ್ಲಿ ನಾನು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೆರೆಯ ತುಂಗಭದ್ರಾ ಫಾರ್ಮ್‌ನ ಮ್ಯಾನೇಜರನಾಗಿ ಕೆಲಸಮಾಡುತ್ತಾ ಇದ್ದೆ. ನಮ್ಮ ಫಾರ್ಮಿನ ಎಲ್ಲಾ ಕಾರ್ಮಿಕರು ಬಿಜಾಪುರ, ಗುಲ್ಬರ್ಗ ಹಾಗೂ ಬೀದರ್ ಜಿಲ್ಲೆಯ ಲಂಬಾಣಿಗಳು. ಅವರೆಲ್ಲಾ ನಮ್ಮ ಫಾರ್ಮಿನಲ್ಲಿ ಕ್ಯಾಂಪ್ ಹಾಕಿಕೊಂಡು ವಾಸಮಾಡುತ್ತಿದ್ದರು. ಲಂಬಾಣಿಗಳ ಕ್ಯಾಂಪ್ ಅಂದರೆ ಬಿಳಿಯ ಜೋಳದ ಒಣಗಿದ ಸಪ್ಪಿ (ಅಂದರೆ ಒಣಗಿದ ಬಿಳಿಜೋಳದ ಗಿಡಗಳು) ಮುಚ್ಚಿದ ಶಂಕು ಆಕೃತಿಯ ಹಲವಾರು ಗುಡಿಸಲುಗಳು. ಈ ಗುಡಿಸಲುಗಳನ್ನು ಅವರು ಕೆಲವೇ ಗಂಟೆಗಳ ಒಳಗೆ ನಮ್ಮ ಫಾರ್ಮಿನಲ್ಲೇ ಸಿಗುವ ಕಚ್ಚಾವಸ್ತುಗಳಿಂದ ಕಟ್ಟಿಕೊಳ್ಳುತ್ತಿದ್ದರು. ಜಾಲಿಯ ಮರದ ಉದ್ದನೆಯ ಕಂಬಗಳನ್ನು ಶಂಕು ಆಕೃತಿಗಳಲ್ಲಿ ಜೋಡಿಸಿ, ನಾವು ದನಗಳಿಗೆ ಆಹಾರವಾಗಿ ಬಳಸುತ್ತಿದ್ದ ಬಿಳಿಯ ಜೋಳದ ಸಪ್ಪಿಯನ್ನು ಹತ್ತಿರ ಹತ್ತಿರವಾಗಿ ಜೋಡಿಸುತ್ತಾ ತಮ್ಮ ಗುಡಿಸಲುಗಳನ್ನು ಹೊದೆಸುತ್ತಿದ್ದರು. ನೆಲವನ್ನು ಸೆಗಣಿ ಸಾರಿಸಿ, ನುಣ್ಣಗೆ ಮಾಡಿಟ್ಟುಕೊಳ್ಳುತ್ತಿದ್ದರು. ಈ ಗುಡಿಸಲುಗಳಿಗೆ ಒಂದೇ ಒಂದು ಜೋಳದ ಸಪ್ಪಿಯ ತಟ್ಟಿಕಟ್ಟಿದ ಬಾಗಿಲು ಇರುತ್ತಿತ್ತು. ಈ ಗುಡಿಸಲುಗಳಲ್ಲಿ ಲಂಬಾಣಿ ಜನರು ಹೇಗೆ ವಾಸ ಮಾಡುತ್ತಾರೋ? ಎಂದು ನನಗೆ ಆಶ್ಚರ್ಯ ಆಗುತ್ತಿತ್ತು. ಆದರೆ, ಅವರುಗಳು ಈ ತರಹದ ಗುಡಿಸಲುಗಳಲ್ಲೇ ಬಹು ಸುಖಿಗಳಾಗಿ ಜೀವಿಸುತ್ತಿದ್ದರು.

ಲಂಬಾಣಿ ಗಂಡಸರಲ್ಲಿ ಹೆಚ್ಚಿನವರು ಸರಾಯಿ ಕುಡಿಯುವ ಅಭ್ಯಾಸವುಳ್ಳವರು. ಕುಡಿಯುವ ಗಂಡಸರ ದುಡಿತ ಅವರ ಸರಾಯಿಗೇ ಸರಿಯಾಗುತ್ತಿತ್ತು. ಅವರ ಮನೆಯ ಹೆಂಗಸರ ದಿನಗೂಲಿಯ ಹಣದಿಂದ ಅವರ ಅಡುಗೆ ಮತ್ತು ಊಟೋಪಚಾರ ನಡೆಯಬೇಕಿತ್ತು. ನಮ್ಮಲ್ಲಿ ಕೆಲಸ ಮಾಡುತ್ತಿದ್ದ ಲಂಬಾಣಿಗಳಿಗೆ ದಿನ ರಾತ್ರಿ ಎಡೆಬಿಡದೆ ಹಾಡುವ ಅಭ್ಯಾಸವಿತ್ತು. ಅವರ ಹಾಡುಗಳು ಅವರಿಗೆ ಇಂಪಾಗಿ ಕೇಳಿಸುತ್ತಿದ್ದವೋ ಏನೋ? ಅವರ ಕೀರಲು ಧ್ವನಿಯ ಹಾಡುಗಳನ್ನು ನಮಗೆ ಜಾಸ್ತಿಹೊತ್ತು ಕೇಳಲು ಆಗುತ್ತಿರಲಿಲ್ಲ. ನನಗಂತೂ ಅವರ ಹಾಡು ಕೇಳಿದರೆ ತಲೆ ಸಿಡಿಯುತ್ತಿತ್ತು. ನಮ್ಮ ಇತರೇ ಸಿಬ್ಬಂದಿ ವರ್ಗದವರಿಗೂ ಹಾಗೆಯೇ ತಲೆ ಸಿಡಿಯುತ್ತಿತ್ತೇನೋ? ಆದ್ದರಿಂದ ನಾವು ಲಂಬಾಣಿಗಳ ಗುಂಪಿಗೆ ನಮ್ಮ ವಾಸದ ಮನೆಗಳಿಂದ ಬಹುದೂರದಲ್ಲಿ ಕ್ಯಾಂಪ್ ಹಾಕಲು ಜಾಗ ಕೊಟ್ಟಿದ್ದೆವು. ಅವರುಗಳು ಸಾಯಂಕಾಲ ತಮ್ಮ ಕ್ಯಾಂಪ್ ಸೇರಿದ ಮೇಲೆ ಅವರ ಕೀರಲು ದ್ವನಿಯ ಹಾಡುಗಳು ನಮಗೆ ಕೇಳಿಸಲಾರದಷ್ಟು ದೂರದಲ್ಲಿ ಅವರು ವಾಸಿಸುವ ಕ್ಯಾಂಪ್ ಇತ್ತು. ಆದರೂ, ಅವರ ಹಬ್ಬಹರಿದಿನಗಳಲ್ಲಿ ಮತ್ತು  ಹುಣ್ಣಿಮೆಯ ದಿನಗಳಲ್ಲಿ ಲಂಬಾಣಿಗಳ ಹಾಡು ತಾರಕ ಸ್ವರಕ್ಕೆ ಏರುತ್ತಿತ್ತು. ಅಂತಹಾ ದಿನಗಳಲ್ಲಿ ಅವರ ಹಾಡು ನಮ್ಮ ವಾಸದ ಮನೆಗಳಿಗೂ ಕೇಳಿಬರುತ್ತಿತ್ತು. ಲಂಬಾಣಿ ಜನರು ಗುಂಪಾಗಿ ಕೆಲಸ ಮಾಡುವ ವೇಳೆ ಹಾಡಿಕೊಂಡೇ ಕೆಲಸ ಮಾಡುತ್ತಿದ್ದರು. ಅವರ ಹಾಡು ನಿಲ್ಲಿಸಲು ಹೇಳಿದರೆ, ಅವರಿಗೆ ಏಕಾಗ್ರತೆಯಿಂದ ಕೆಲಸಮಾಡಲು ಆಗುತ್ತಿರಲಿಲ್ಲ. ಹಾಡುವುದು ಲಂಬಾಣಿಗಳ ಜೀವನ ರೀತಿ. ಬೇಕೆಂದಾಗ ಹಕ್ಕಿಗಳಂತೆ ಮೈಮರೆತು ಹಾಡುತ್ತಿದ್ದರು. ಅವರ ಹಾಡಿಗೆ ಭಂಗ ತರುವಷ್ಟು ಕಠಿಣರಾಗಿ ನಾವು ಎಂದೂ ವರ್ತಿಸಲಿಲ್ಲ.

ಈಗ ನಾನು ಆಶಾಳ್ ಭೀಮಪ್ಪನ ವಿಚಾರ ಹೇಳುತ್ತೇನೆ. ಆಶಾಳ್ ಭೀಮಪ್ಪನು ಆಶಾಳ್‌ತಾಂಡದಿಂದ ಬಂದ ನೂರಮೂವತ್ತು ಜನ ಆಳುಗಳ ನಾಯಕನಾಗಿದ್ದ. ಕೆಲಸದ ಎಂಟು ಗಂಟೆಯ ಅವಧಿ ಬಿಟ್ಟು ಉಳಿದ ಸಮಯದಲ್ಲಿ ಆತ ಸದಾ ಸರಾಯಿಯ ಸಹವಾಸದಲ್ಲೇ ಇರುತ್ತಿದ್ದ. ಆದರೆ ಆತ ಸರಾಯಿ ಕುಡಿದು ಯಾರೊಂದಿಗೂ ತಲೆ ತುಂಬಾ ಮಾತನಾಡಿ ಜಗಳ ಕಾಯ್ದ ಮನುಷ್ಯನಲ್ಲ. ತನ್ನ ತಾಂಡಾದ ಎಲ್ಲರ ಮೇಲೆ ಆತನಿಗೆ ಸದಾ ಹತೋಟಿ ಇರುತ್ತಿತ್ತು. ನಮ್ಮಲ್ಲಿ ಒಟ್ಟಿಗೆ ಸುಮಾರು ಇನ್ನೂರು ಮಂದಿ ಲಂಬಾಣಿ ಕಾರ್ಮಿಕರಿದ್ದರು. ಆಶಾಳ್‌ತಾಂಡದ ನೂರಾಮೂವತ್ತು ಮಂದಿ ಬಿಟ್ಟರೆ ಇತರರು ಬೇರೆ ಬೇರೆ ತಾಂಡಗಳಿಗೆ ಸೇರಿದವರಾಗಿದ್ದರು. ಆದರೆ, ನಮ್ಮಲ್ಲಿಯ ಎಲ್ಲಾ ಲಂಬಾಣಿ ಕಾರ್ಮಿಕರೂ ಭೀಮಪ್ಪನನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡು ಅವನು ಹೇಳಿದ ಪ್ರಕಾರ ನಡೆಯುತ್ತಾ ಇದ್ದರು. ಲಂಬಾಣಿಗಳು ಆಶಾಳ್ ಭೀಮಪ್ಪನನ್ನು ಭೀಮ್ಯಾ ನಾಯ್ಕ ಎಂದು ಮರ್ಯಾದೆಯಿಂದ ಕರೆಯುತ್ತಿದ್ದರು. ಆತನಿಗೆ ಅವರು ಬಹಳ ಮರ್ಯಾದೆ ಕೊಡುತ್ತಿದ್ದರು. ನಮ್ಮಲ್ಲಿಯ ಆಳುಗಳಾರೂ ಭೀಮಪ್ಪನ ಎದುರು ತಲೆಯೆತ್ತಿ ನಿಲ್ಲುತ್ತಿರಲಿಲ್ಲ. ಅವನ ಎದುರಲ್ಲಿ ಅವರು ದನಿ ಏರಿಸಿ ಮಾತನಾಡುತ್ತಲೂ ಇರಲಿಲ್ಲ.

ಆಶಾಳ್ ಭೀಮಪ್ಪ ಸದಾ ಬಿಳಿಯ ಧೋತರವನ್ನು ಕಚ್ಚೆಹಾಕಿ ಉಟ್ಟು ಅದರ ಮೇಲೆ ಬಿಳಿಯ ಅಂಗಿ ತೊಟ್ಟು ತಲೆಗೆ ಬಿಳಿ ಬಣ್ಣದ ದೊಡ್ಡ ಮುಂಡಾಸು ಧರಿಸುತ್ತಿದ್ದ. ಆತ ಅವರ ಪಂಗಡದಲ್ಲೇ ಎದ್ದು ಕಾಣುವ ವ್ಯಕ್ತಿತ್ವ ಹೊಂದಿದ್ದ. ಆತನ ಮೈಬಣ್ಣ ಅವನ ತಾಂಡಾದ ಉಳಿದ ಜನರಿಗಿಂತ ಸ್ವಲ್ಪ ಬಿಳಿ ಆಗಿತ್ತು. ಆದರೆ ಸದಾ ಸರಾಯಿ ಸೇವನೆಯಿಂದಾಗಿ ಆತನ ಮೈಬಣ್ಣ ತಾಮ್ರದ ವರ್ಣಕ್ಕೆ ತಿರುಗಿ ನಿಂತಿತ್ತು. ಕಣ್ಣುಗಳಲ್ಲಿ ಕೆಂಪು ಛಾಯೆ ಸದಾ ನೆಲೆಸಿರುತ್ತಿತ್ತು. ಮುಖದ ಮೆಲೆ ಗಿರಿಜಾ ಮೀಸೆ ಹೊತ್ತ ಅವನಲ್ಲಿ ನಾಯಕನ ಕಳೆ ಎದ್ದು ಕಾಣುತ್ತಿತ್ತು. ನಾಯಕನ ಯೋಗ್ಯತೆಗೆ ಸರಿಯಾಗಿ ಆತ ತನ್ನ ಜನರನ್ನು ಹದ್ದು ಬಸ್ತಿನಲ್ಲಿಟ್ಟಿದ್ದ.

ಆಶಾಳ ಭೀಮಪ್ಪ ತಾನು ನಾಯಕನಾದರೂ ಎಲ್ಲ ಆಳುಗಳೊಂದಿಗೆ ಸೇರಿ ಎಲ್ಲರಿಗಿಂತಲೂ ಮುತುವರ್ಜಿಯಿಂದ ಮೈಮುರಿದು ದುಡಿಯುತ್ತಿದ್ದ. ಯಾರನ್ನೂ ಕೆಲಸದ ವೇಳೆ ವೃಥಾ ನಿಂತು ಕಾಲ ಕಳೆಯಲು ಬಿಡುತ್ತಿರಲಿಲ್ಲ. ಆಶಾಳ್ ಭೀಮಪ್ಪನ ಈ ಕಟ್ಟುನಿಟ್ಟಿನಿಂದಾಗಿ ನಮ್ಮ ಲಂಬಾಣಿ ಕಾರ್ಮಿಕರು ನಮಗೆ ಕೂಡಾ ವಿಧೇಯರಾಗಿದ್ದರು. ಅವರಿಂದ ನಮಗೆ ಯಾವ ತೊಂದರೆಯೂ ಇರಲಿಲ್ಲ. ನಮ್ಮ ಲಂಬಾಣಿ ಆಳುಗಳಿಂದ ನಮಗೆ ಯಾವ ರೀತಿಯ ನ್ಯಾಯಬಾಹಿರ ನಡತೆ ಅಥವಾ ಗಲಾಟೆಯ ಸಮಸ್ಯೆಗಳು ಎಂದೂ ಉಂಟಾಗಲಿಲ್ಲ. ನಮ್ಮಲ್ಲಿ ಕೆಲಸ ಮಾಡುತ್ತಿದ್ದ ಜನರಲ್ಲಿ ಸುಮಾರು ಅರ್ಧದಷ್ಟು ಹೆಣ್ಣಾಳುಗಳು ಇದ್ದರು. ಹೆಣ್ಣಾಳುಗಳು ತುಂಬಾ ಮರ್ಯಾದಸ್ಥರಾಗಿದ್ದರು.

ಲಂಬಾಣಿ ಜನರು ಬಂದು ಕೆಲಸಕ್ಕೆ ಸೇರುವ ತನಕ ನಮ್ಮ ಫಾರ್ಮಿನಲ್ಲಿ ಸದಾ ಕಾರ್ಮಿಕರ ಕೊರತೆ ಇತ್ತು. ಲಂಬಾಣಿ ಜನರು ನಮ್ಮಲ್ಲಿಗೆ ಹೊಸದಾಗಿ ಬಂದು ಕ್ಯಾಂಪ್‌ಹಾಕಿ  ಕುಳಿತೊಡನೆ, ನಮ್ಮ ಅಕ್ಕಪಕ್ಕದ ರೈತರು ಒಟ್ಟಾಗಿ ನನ್ನ ಹತ್ತಿರ ಬಂದು, ಸಾರ್, ನೀವು ಲಂಬಾಣಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾ ಇದ್ದೀರಿ, ಅವರು ಅಲೆಮಾರಿ ಜನಾಂಗಕ್ಕೆ ಸೇರಿದವರು. ಅವರೆಂದೂ ಮೈಮುರಿದು ಕೆಲಸಮಾಡುವವರಲ್ಲ. ಅವರಲ್ಲಿ ಕುಡಿತ, ಜಗಳ, ಗಲಾಟೆ ಮುಂತಾದುವು ತಪ್ಪಿದ್ದಲ್ಲ. ಅವರು ಇದ್ದ ಊರಿನಲ್ಲಿ ಸಣ್ಣಪುಟ್ಟ ಕಳ್ಳತನಗಳು ಸಾಮಾನ್ಯ. ಅವರು ತಮ್ಮ ದುರ್ನಡತೆ ತೋರಿಸಿದರೆ ನಾವು ಸಹಿಸುವವರಲ್ಲ ಎಂದು ನನ್ನನ್ನು ಎಚ್ಚರಿಸಿದರು. ಆಗ ನಾನು ಆಶಾಳ್ ಭೀಮಪ್ಪನನ್ನು ಕರೆಸಿ, ನಮ್ಮ ನೆರೆಹೊರೆಯವರ ಮುಂದೆಯೇ, ನೋಡು ಭೀಮಪ್ಪಾ, ನಿಮ್ಮ ಲಂಬಾಣಿ ಮಂದಿಯ ಮೇಲೆ ನಮ್ಮ ಊರಿನ ಜನರಿಗೆ ಒಳ್ಳೆಯ ಅಭಿಪ್ರಾಯ ಇಲ್ಲ. ನೀವುಗಳು ಕುಡಿತ, ಗಲಾಟೆ ಮೊದಲಾದುವನ್ನು ಮಾಡಿದರೆ, ನಮ್ಮೂರಿನ ಜನರು ಖಂಡಿತವಾಗಿ ಸಹಿಸಲಾರರು. ನೀನು ನಿನ್ನ ಸ್ವಂತ ಜವಾಬ್ದಾರಿ ಕೊಟ್ಟು ನಿಮ್ಮ ಜನರಿಂದ ಯಾವ ತಂಟೆತಕರಾರು ಬರದಂತೆ ನೋಡಿಕೊಳ್ಳುವುದಾದರೆ ಮಾತ್ರ ನಾನು ನಮ್ಮ ಫಾರ್ಮಿನಲ್ಲಿ ನಿಮ್ಮನ್ನು ವರ್ಷವಿಡೀ ಕೆಲಸಕ್ಕೆ ಇಟ್ಟುಕೊಳ್ಳಬಹುದು ಎಂದು ಹೇಳಿದೆ.

ಆಗ ಆಶಾಳ್ ಭೀಮಪ್ಪ ನೋಡು ಸಾಹೇಬ, ನಾನು ನಮ್ಮ ತಾಂಡದ ನಾಯಕ. ನಮ್ಮ ಆಶಾಳ್ ತಾಂಡಕ್ಕೆ ನಿಜಾಮರ ಕಾಲದಿಂದಲೂ ನಮ್ಮ ತಾಂಡಾದ ಆಸುಪಾಸಿನಲ್ಲಿ ನೂರು ಕೂರಿಗೆ ಅಂದರೆ ನಾಲ್ಕು ನೂರು ಎಕರೆ ಜಮೀನಿದೆ. ಕಳೆದ ಮೂರು ವರ್ಷಗಳಿಂದಲೂ ನಮ್ಮ ಊರಿನಲ್ಲಿ ಒಂದು ಹನಿ ಮಳೆ ಆಗದೇ ಇದ್ದುದರಿಂದ, ನಾವು ನಿಮ್ಮಲ್ಲಿಗೆ ಕೆಲಸಕ್ಕೆ ಬಂದು ಸೇರಿದ್ದೇವೆ. ಮಾನವಂತರಾದ ಜವಳಗೆರೆಯ ಜನರೇ! ತಿಳಿದುಕೊಳ್ಳಿ, ನಾವು ಮರ್ಯಾದೆಯಲ್ಲಿ ನಿಮಗಿಂತ ಎಳ್ಳಷ್ಟೂ ಕಡಿಮೆ ಇಲ್ಲ. ನಮ್ಮ ತಾಂಡದಿಂದ ನಾವು ಒಟ್ಟಿಗೆ ನೂರಾಮೂವತ್ತು ಮಂದಿ ಇಲ್ಲಿಗೆ ಬಂದಿದ್ದೇವೆ. ನಮ್ಮ ಜತೆಗೆ ನಮ್ಮೂರ ಪಕ್ಕದ ತಾಂಡಾಗಳಿಂದ ಇನ್ನೂ ಎಪ್ಪತ್ತು ಮಂದಿ ಇಲ್ಲಿಗೆ ಬಂದಿದ್ದಾರೆ. ನಾವು ಇಲ್ಲಿ ಬಂದು ಗುಡಿಸಲುಗಳನ್ನು ಕಟ್ಟಿ ನಮ್ಮದೇ ಒಂದು ತಾಂಡ ಕಟ್ಟಿದ್ದೇವೆ. ಈ ಇನ್ನೂರು ಮಂದಿಯ ನಾಯಕ ನಾನು. ನಮ್ಮಿಂದ ಈ ಊರಿನ ಜನರಿಗೆ ಏನಾದರೂ ತೊಂದರೆ ಆದರೆ ನೀವುಗಳು ಬಂದು ನಮ್ಮ ಸಾಹೇಬನಿಗೆ ಒಂದು ಮಾತು ಹೇಳಿ. ನಾನು ದೂರನ್ನು ನಿಮ್ಮ ಎದುರಿಗೇ ವಿಚಾರಣೆ ಮಾಡುತ್ತೇನೆ. ನೀವುಗಳು ಹೇಳಿದ ದೂರು ಸರಿ ಎಂದು ಕಂಡುಬಂದರೆ, ಇಪ್ಪತ್ತನಾಲ್ಕು ಗಂಟೆಗಳ ಒಳಗೆ ಈ ಜಾಗ ಖಾಲಿ ಮಾಡಿ ನಾವು ನಮ್ಮೂರಿಗೆ ಹೊರಟು ಹೋಗುತ್ತೇವೆ. ಸಾಹೇಬ, ಇವರಿಗೆ ನಮ್ಮ ಒಳ್ಳೆಯ ನಡತೆಯ ಬಗ್ಗೆ ಗ್ಯಾರಂಟಿ ಕೊಟ್ಟುಬಿಡುಎಂದ.

ನಾನು ನಮ್ಮ ನೆರೆಕರೆಯ ರೈತರನ್ನು ಕುಳ್ಳಿರಿಸಿ, ಅವರಿಗೆಲ್ಲಾ ಚಹಾ ಕೊಟ್ಟು, ಆಶಾಳ್ ಭೀಮಪ್ಪ ನಾಯ್ಕನನ್ನು ನಂಬಿ, ಅವನು ಸುಳ್ಳುಹೇಳುವ ಪೈಕಿಯವನಲ್ಲ. ಅವನು ಮತ್ತು ಅವನ ಜನರ ಬಗ್ಗೆ ನಾನು ನಿಮಗೆ ಗ್ಯಾರೆಂಟಿ ಕೊಡುತ್ತೇನೆ ಎಂದು ಹೇಳಿದೆ. ಊರಿನ ರೈತರು ನನ್ನ ಮತ್ತು ಭೀಮಪ್ಪನ ಮಾತಿನ ಮೇಲೆ ಭರವಸೆ ಇಟ್ಟು ಏನೂ ತಕರಾರು ಮಾಡದೇ ಹಿಂತಿರುಗಿದರು.

ಮುಂದಕ್ಕೆ ನಮ್ಮ ಕ್ಯಾಂಪಿನ ಜನರು ಆರು ದಿನ ನಮ್ಮ ಹೊಲಗಳಲ್ಲಿ ದುಡಿದು, ಭಾನುವಾರ ದಿನದಂದು ಮಾತ್ರ ನಮ್ಮ ಪಕ್ಕದ ಊರಾದ ಜವಳಗೆರೆಗೆ ಹೋಗಿ ತಮಗೆ ಬೇಕಾದ ದಿನಸಿ ಮತ್ತು ಇತರೇ ವಸ್ತುಗಳನ್ನು ಕೊಂಡುಬರುತ್ತಿದ್ದರು. ಅವರಿಂದ ಊರವರಿಗೆ ಒಂದೇ ಒಂದು ತೊಂದರೆಯಾದ ನಿದರ್ಶನವೇ ಇಲ್ಲ. ಊರ ಜನರು ನಮ್ಮ ಲಂಬಾಣಿ ಆಳುಗಳನ್ನು ನಂಬತೊಡಗಿದರು. ಭಾನುವಾರ ದಿನದದಂದು ಬಟವಾಡೆ ಹಣ ಕೈಯ್ಯಲ್ಲಿ ಹಿಡಿದು ಜವಳಗೆರೆಗೆ ಹೋಗುವ ನಮ್ಮ ಕಾರ್ಮಿಕರಿಗಾಗಿಯೇ, ಒಂದು ಸಣ್ಣಮಟ್ಟಿನ ಸಂತೆಯ  ವ್ಯಾಪಾರ ಕೂಡಾ ಜವಳಗೆರೆಯಲ್ಲಿ ಶುರುವಾಯಿತು. ಜವಳಗೆರೆಯ ಸಣ್ಣ ಪುಟ್ಟ ಅಂಗಡಿಗಳವರು ನಮ್ಮ ಇನ್ನೂರು ಮಂದಿ ಕಾರ್ಮಿಕರು ಮಾಡುವ ಭಾನುವಾರದ ದಿನಸಿ ವ್ಯಾಪಾರವನ್ನು ಮನಃಪೂರ್ವಕವಾಗಿ ಸ್ವಾಗತಿಸಿದರು.

೧೯೭೦ನೇ ಇಸವಿ ಮೇ ತಿಂಗಳ ಕೊನೆಯಲ್ಲಿ, ಬಿಜಾಪುರ್, ಗುಲ್ಬರ್ಗಾ ಮತ್ತು ಬೀದರ್ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಯಿತು. ಅದಕ್ಕೆ ಹಿಂದಿನ ಮೂರು ವರ್ಷಗಳಲ್ಲೂ ದೀಪಾವಳಿ ಹಬ್ಬದ ತನಕ ಅವರ ಊರಿನಲ್ಲಿ ಒಂದೇ ಒಂದು ಹನಿ ಮಳೆ ಬಿದ್ದೇ ಇರಲಿಲ್ಲವಂತೆ. ಮಳೆ ಬಿದ್ದ ಸಮಾಚಾರ ತಿಳಿಯುತ್ತಲೇ ನಮ್ಮಲ್ಲಿಯ ಲಂಬಾಣಿ ಆಳುಗಳಲ್ಲಿ ಊರಿಗೆ ಮರಳುವ ತವಕ ಶುರುವಾಯಿತು. ಜಮೀನು ಹೊಂದಿದ್ದ ಸುಮಾರು ನೂರು ಜನ ಆಳುಗಳು ತಮ್ಮ ಊರುಗಳಿಗೆ ಹೊರಟೇಬಿಟ್ಟರು. ತಮ್ಮ ಊರುಗಳಿಗೆ ಹೋಗಿ, ಹೊಲ ಸಾಗುವಳಿ ಮಾಡುವ ಉಮೇದಿನಲ್ಲಿ ಇದ್ದ ಅವರನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ನನಗೆ ಅನ್ನಿಸಿತು. ಆಶಾಳ್ ಭೀಮಪ್ಪ ನನ್ನ ಆಫೀಸಿಗೆ ಬಂದು ಈ ವಿಚಾರ ತಿಳಿಸಿದ.

ನಾನು ಹೇಳಿದೆ, ಭೀಮಪ್ಪಾ, ಹೀಗೆ ನೀವೆಲ್ಲರೂ ಹೊರಟರೆ ನಿಮ್ಮನ್ನೇ ನಂಬಿಕೊಂಡು ವ್ಯವಸಾಯ ಮಾಡುತ್ತಿರುವ ನಮ್ಮ ಗತಿ ಏನು? ಅರ್ಧವಾಸಿ ಜನರಾದರೂ ಇಲ್ಲಿ ಉಳಿಯಿರಿ ಎಂದು ಅವನನ್ನು ಕೇಳಿಕೊಂಡೆ.

ಮಾರನೇ ದಿವಸ ಆಶಾಳ್ ಭೀಮಪ್ಪ ನನ್ನ ಆಫೀಸಿಗೆ ಬಂದು, ಸಾಹೇಬ, ನೀನು ಹೇಳಿದ ಮಾತಿನಂತೆ ನಾನು ನೂರು ಜನರನ್ನು ಇಲ್ಲೇ ಉಳಿಯುವಂತೆ ಒಪ್ಪಿಸಿರುತ್ತೇನೆ. ಹೊರಡುವವರ ಜತೆಗೆ ನಾನೂ ನಮ್ಮೂರಿಗೆ ಹೋಗಲೇಬೇಕಾಗುತ್ತೆ. ನಮ್ಮ ಜನ ಬರಗಾಲದ ಬೇಗೆ ಸಹಿಸಲಾರದೆ ಹೊಲ ಹೂಡುವ ಎತ್ತುಗಳನ್ನು ಮಾರಿಬಿಟ್ಟಿದ್ದಾರೆ. ದಾಸ್ತಾನಿಟ್ಟ ಬಿತ್ತನೆಯ ಬೀಜಗಳನ್ನು ತಿಂದು ಮುಗಿಸಿದ್ದಾರೆ. ನಾನು ನಮ್ಮ ಊರಿಗೆ ಖುದ್ದಾಗಿ ಹೋಗದೇ ವ್ಯವಸಾಯದ ಕೆಲಸ ಶುರುಮಾಡುವ ಹಾಗೆ ಇಲ್ಲ. ನನ್ನ ಸಂಬಂಧಿಕನಾದ ಮಾನಪ್ಪ ಎಂಬುವನನ್ನು ನಮ್ಮಲ್ಲಿ ಉಳಿಯುವ ಜನರಿಗೆ ನಾಯಕನನ್ನಾಗಿ ಮಾಡಿ ನಾನು ನಮ್ಮೂರಿಗೆ ಹೋಗಿ ಬರುತ್ತೇನೆ. ಈ ವರ್ಷ ಬಿದ್ದಿರುವ ಮಳೆಯ ಸದುಪಯೋಗ ಮಾಡಿಕೊಂಡು, ನಮ್ಮ ತಾಂಡದ ನೂರು ಕೂರಿಗೆ ಜಮೀನು ಸಾಗುಮಾಡಿದರೆ, ನಮ್ಮ ತಾಂಡ ಆಹಾರದ ಅಭಾವವಿಲ್ಲದೇ ಎರಡು ವರ್ಷಕಾಲ ಜೀವನ ಮಾಡಬಲ್ಲುದು. ನೀನು ಕರುಣೆಯಿಟ್ಟು ನಮಗೆ ಊರಿಗೆ ಹೋಗಿ ಬರಲು ಅಪ್ಪಣೆ ಕೊಡಲೇಬೇಕು ಎಂದು ಹೇಳಿದ.

ನೋಡು ಭೀಮಪ್ಪಾ, ನಾವು ಇಲ್ಲಿ ತುಂಗಭದ್ರೆಯ ಅಣೆಕಟ್ಟಿನ ಅಚ್ಚುಕಟ್ಟಿನಲ್ಲಿ ಲಘು ನೀರಾವರಿಯಲ್ಲಿ ವ್ಯವಸಾಯ ಮಾಡುವವರು. ಯಾವ ಕಾರಣಕ್ಕೂ ನಾನು ವ್ಯವಸಾಯ ಮಾಡದೇ ಭೂಮಿಯನ್ನು ಬಂಜರು ಬಿಡುವ ಹಾಗಿಲ್ಲ. ನಮ್ಮ ಫಾರ್ಮಿನ ಮಾಲಿಕರುಗಳಿಗೆ ನಾನು ಈಗಾಗಲೇ ನಾವು ಬಿತ್ತುವ ಮುಂದಿನ ಬೆಳೆಯ ಬಗ್ಗೆ ಮಾಹಿತಿ ಕೊಟ್ಟಾಗಿದೆ. ನಾನು ಈಗ ಹೆಚ್ಚಿನ ಬದಲಾವಣೆ ಮಾಡುವ ಹಾಗಿಲ್ಲ. ಈಗ ನೀವು ನೂರು ಮಂದಿ ಊರಿಗೆ ಹೊರಟರೆ, ನನ್ನ ಬಲಗೈ ಮುರಿದ ಹಾಗೆ ಆಗುತ್ತೆ. ನಾನು ಈಗ ಏನು ಮಾಡಲಿ? ಎಂದೆ.

ಆಗ ಭೀಮಪ್ಪನು ಸಾಹೇಬ, ನಾನು ಬಹಳ ಪ್ರಯತ್ನ ಮಾಡಿ ನೂರು ಮಂದಿಯನ್ನು ಇಲ್ಲಿ ನಿಲ್ಲಿಸುತ್ತೇನೆ. ನೀನು ಈ ಮಳೆಗಾಲದಲ್ಲಿ ಸ್ವಲ್ಪ ಮಳೆಯಾಧಾರಿತ ಜವಾರಿ ಬೆಳೆ ಹಾಕಿ ನಿನ್ನಲ್ಲಿ ಈಗ ಉಳಿಯುವ ನೂರು ಮಂದಿಯನ್ನು ದಗ್ದ ಮಾಡಿಸಿ (ಕೆಲಸ ಮಾಡಿಸಿ) ಅವರ ಕೈಲಾಗುವಷ್ಟು ನೀರಾವರಿ ಬೆಳೆ ಬೆಳೆಸಿಕೊ. ದೀಪಾವಳಿಯ ಸಮಯ ನಮ್ಮೂರ ಬಿಳಿ ಜೋಳ ಕೊಯ್ದಾದೊಡನೆ ನಾನು ನೂರು ಮಂದಿಯನ್ನು ಕರೆದುಕೊಂಡು ಬಂದು ಪುನಃ ನಿನ್ನ ಫಾರಂ ಕೆಲಸ ಮಾಡಿಕೊಡುತ್ತೇವೆ ಎಂದ. ನಾನು ಬೇರೆ ಉಪಾಯ ಕಾಣದೇ, ಭೀಮಪ್ಪನ ಮಾತಿಗೆ ಒಪ್ಪಿಕೊಳ್ಳಲೇಬೇಕಾಯಿತು. ಭೀಮಪ್ಪ ತನ್ನ ತಾಂಡದ ಕಡೆಗೆ ಹೊರಟುಹೋದ.             ನಾನು ಕೂಡಲೇ ನಮ್ಮ ಫಾರ್ಮಿನ ಮಾಲಿಕರಿಗೆ ಪತ್ರ ಬರೆದು, ಇದ್ದಕ್ಕಿದ್ದಂತೆಯೇ ನೂರುಜನ ಕಾರ್ಮಿಕರು ಊರಿಗೆ ಹೊರಟ ಕಾರಣ, ನಾವು ಈ ಮಳೆಗಾಲದಲ್ಲಿ ಇನ್ನೂ ಹೆಚ್ಚು ಮಳೆ ಆಧರಿತ ಜವಾರಿ ಬೆಳೆಗಳನ್ನು ಬೆಳೆಯುವ ಯೋಜನೆ ಮಾಡಬೇಕಾಗುತ್ತದೆ. ಮಳೆ ಆಧಾರಿತ ಬೆಳೆಗಳನ್ನು ಒಮ್ಮೆ ಬಿತ್ತಿದ ನಂತರ ಕಟಾವಿನ ತನಕ ಬೇರೇನು ಹೆಚ್ಚಿನ ಕೆಲಸಗಳನ್ನು ಅವುಗಳ ರಖೋಲೆಗೆ ಮಾಡಬೇಕಾಗಿಲ್ಲ. ನೂರು ಜನರನ್ನು ಬಳಸಿ, ಎಷ್ಟು ಬೆಳೆಯುವುದು ಸಾಧ್ಯವೋ ಅಷ್ಟು ಮಾತ್ರ ಲಘು ನೀರಾವರಿ ಆಧರಿತ ಬೆಳೆಗಳನ್ನು ಬೆಳೆಯುವ ನಿರ್ಧಾರವನ್ನು ನಾವು ಮಾಡಬೇಕಿದೆ. ದಯವಿಟ್ಟು ತಾವು ಒಪ್ಪಿಗೆ ನೀಡಬೇಕು ಎಂಬ ವಿನಂತಿ ಮಾಡಿದೆ.

ನಾನು ಆಫೀಸಿನಿಂದ ನನ್ನ ಬಿಡಾರಕ್ಕೆ ಹೋಗಿ ಸಾಯಂಕಾಲದ ಸ್ನಾನ ಮುಗಿಸುವಷ್ಟರಲ್ಲಿ ಆಶಾಳ್ ಭೀಮಪ್ಪನ ಸವಾರಿ ಬಂತು. ಸಾಹೇಬ, ನಿನ್ನೊಡನೆ ಸ್ವಲ್ಪ ಮಾತಾಡುವುದಿದೆ. ಒಳಗೆ ಬರಬಹುದೇ? ಎಂದು ನನ್ನ ಅಪ್ಪಣೆ ಬೇಡಿದ. ನಾನು ಅಗತ್ಯವಾಗಿ ಬಾ ಭೀಮಪ್ಪಾ ಎಂದು ಆತನನ್ನು ಒಳಗೆ ಕರೆದು ಕುರ್ಚಿ ಹಾಕಿ ಕುಳ್ಳಿರಿಸಿದೆ. ನನ್ನ ಬಿಡಾರದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಲಖ್‌ಪತಿ ಎಂಬ ಲಂಬಾಣಿ ಹುಡುಗನ ಹತ್ತಿರ ನೋಡೋ, ಲಖ್‌ಪತಿ, ನಿಮ್ಮ ನಾಯಕರು ಇಂದು ನಮ್ಮ ಮನೆಗೆ ಬಂದಿದ್ದಾರೆ, ನಮಗಿಬ್ಬರಿಗೂ ಖಡಖ್ ಚಹಾ ಮಾಡಿಕೊಡು ಎಂದೆ. ತಮ್ಮ ತಾಂಡದ ನಾಯಕ ನನ್ನ ಮನೆಯೊಳಗೆ ಬಂದು ಕುಳಿತುದನ್ನು ನೋಡಿದ ಲಖ್‌ಪತಿಗೆ ಹೆದರಿಕೆಯಿಂದ ನಿಜವಾಗಿಯೂ ಜಂಘಾಬಲ ಉಡುಗಿತ್ತು. ಚಹಾ ಮಾಡಿ ತಂದು ನಡುಗುವ ಕೈಗಳನ್ನು ಹೇಗೋ ಸಂಭಾಳಿಸಿಕೊಂಡು ನಮಗೆ ಚಹಾ ನೀಡಿ, ಆತ ನನ್ನ ಮನೆಯ ಹಿಂದೆ ಮಾಯವಾಗಿಬಿಟ್ಟ. ಭೀಮಪ್ಪ ಚಹಾ ಸೇವಿಸಿಯಾದ ಮೇಲೆ ಏನು ವಿಷಯ ಭೀಮಪ್ಪ? ಎಂದು ಕೇಳಿದೆ.

ಭೀಮಪ್ಪ ಸುತ್ತು ಬಳಸದೇ, ಸಾಹೇಬ, ನಿನಗೆ ನನ್ನ ಮೇಲೆ ನಂಬಿಕೆ ಇದೆಯೊ? ಎಂದು ಒಂದೇ ಪ್ರಶ್ನೆ ಎಸೆದು ಸುಮ್ಮನಾದ.

ನಾನು ಭೀಮಪ್ಪಾ, ನಿನ್ನ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದೆ.

ಆಗ ಆತ, ಹಾಗಾದರೆ, ನನಗೆ ನೀನು ಹತ್ತು ಸಾವಿರ ರೂಪಾಯಿ ಸಾಲ ಕೊಡಿಸಬೇಕು, ಆರು ತಿಂಗಳ ನಂತರ, ನಮ್ಮೂರಿನ ಬೆಳೆ ಕಟಾವು ಆದೊಡನೆ ನೀನು ಕೊಡಿಸುವ ರೊಕ್ಕವನ್ನು ನ್ಯಾಯವಾದ ಬಡ್ಡಿ ಸಮೇತ ತೀರಿಸುತ್ತೇನೆ ಎಂದು ಹೇಳಿದ. ಯಾಕೆ ಭೀಮಪ್ಪಾ, ಹತ್ತುಸಾವಿರ ರೂಪಾಯಿಯಷ್ಟು ದೊಡ್ಡ ಮೊತ್ತ ನಿನಗೆ ಯಾಕೆ ಬೇಕು? ಎಂದು ಕೇಳಿದೆ. ನನ್ನ ಮಟ್ಟಿಗೆ ಹತ್ತು ಸಾವಿರ ರೂಪಾಯಿ ಬಹಳ ದೊಡ್ಡ ಮೊತ್ತ ಅನ್ನಿಸಿತ್ತು. ಹತ್ತು ಸಾವಿರ ರೂಪಾಯಿಗಳಿಗೆ ನಮ್ಮ ಜವಳಗೆರೆ ಗ್ರಾಮದಲ್ಲಿ ಹತ್ತು ಎಕರೆ ಜಮೀನು ಕೊಳ್ಳಬಹುದಿತ್ತು.

ಆ ದಿನಗಳಲ್ಲಿ ಒಬ್ಬ ಬ್ಯಾಂಕ್ ಮ್ಯಾನೇಜರನ ಸಂಬಳ ೪೬೦/- ರೂಪಾಯಿ ಆಗಿತ್ತು. ನನಗೆ ಅದೇ ಸ್ಕೇಲಿನ ಸಂಬಳ ಮತ್ತು ಇತರೇ ಸವಲತ್ತುಗಳು ಕೊಡಲ್ಪಟ್ಟಿದ್ದುವು. ನಮ್ಮ ಫಾರ್ಮಿನಲ್ಲಿ ಕೆಲಸ ಮಾಡುವ ಸಿಬ್ಬಂದಿ ಅಥವಾ ಕಾರ್ಮಿಕರಿಗೆ ಯಾವ ರೀತಿಯ ಸಾಲಗಳನ್ನೂ ಕೊಡಬಾರದು ಎಂಬ ಕಟ್ಟಪ್ಪಣೆ ನಮ್ಮ ಮಾಲಿಕರಿಂದ ನಮಗೆ ಜಾರಿಯಾಗಿತ್ತು. ಭೀಮಪ್ಪ, ನಿನಗೆ ತಿಳಿದಂತೆ ಸಾಲ ಅಥವಾ ಅಡ್ವಾನ್ಸ್ ನೀಡಲು ನಮ್ಮ ಫಾರ್ಮಿನ ಮಾಲಿಕರಿಂದ ನಮಗೆ ಅಧಿಕಾರ ಇಲ್ಲ. ಇಷ್ಟೊಂದು ಹಣ ನಿನಗೆ ಈಗ ಯಾಕೆ ಬೇಕಾಗಿದೆ? ಹೇಳು! ಎಂದೆ.

ಸಾಹೇಬ, ಈಗ ನಮ್ಮೂರಲ್ಲಿ ನಮ್ಮ ಬಂಗಾರ ಭೂಮಿಯ ಮೇಲೆ ಮಳಿ ಆಗೈತೆ. ಮೂರು ವರ್ಷಗಳ ಬರದ ನಂತರ, ಈಗ ನಮ್ಮಲ್ಲಿ ಬಿತ್ತನೆಯ ಬೀಜ ಇಲ್ಲ. ಹೂಡಲು ಎತ್ತಿನ ಜೋಡಿ ಇಲ್ಲ. ಅವನ್ನೆಲ್ಲಾ ನಾಯಕನಾದ ನಾನು ಈಗ ಹೋಗಿ ಹೊಂದಿಸಬೇಕು. ಹತ್ತುಸಾವಿರ ರೂಪಾಯಿಗಳು ಇಲ್ಲದೇ ಇದ್ದರೆ ನಮ್ಮಿಂದ ಈಗ ನಮ್ಮ ತಾಂಡಕ್ಕೆ ಸೇರಿದ ನೂರು ಕೂರಿಗೆ ಸಾಗು ಮಾಡಲು ಸಾಧ್ಯವೇ ಇಲ್ಲ. ಈ ಹಣವನ್ನು ನೀನೇ ನಮಗೆ ಹೊಂದಿಸಿಕೊಡಬೇಕು. ಲಂಬಾಣಿಗಳಾದ ನಮಗೆ ನಮ್ಮೂರಲ್ಲಿ ಯಾರೂ ಸಾಲಕೊಡುವುದಿಲ್ಲ. ಸಣ್ಣಪುಟ್ಟ ಸಾಲ ಕೊಟ್ಟರೂ ಆರು ತಿಂಗಳ ಮಟ್ಟಿಗೆ ರೂಪಾಯಿಗೆ ರೂಪಾಯಿ ಬಡ್ಡಿ ಕಟ್ಟಬೇಕಾಗ್ತೈತೆ. ಈ ಪಾಟಿ ಬಡ್ಡಿ ಕೊಟ್ಟು ನಾವು ಏನು ಉಳಿಸಬಹುದು? ಎಂದ.

ಭೀಮಪ್ಪನ ಕೇಳಿಕೆ ನ್ಯಾಯಯುತವಾದದ್ದು ಎಂದು ನನಗೆ ಅನ್ನಿಸಿದರೂ, ನಮ್ಮ ಆಫೀಸಿನಿಂದ ಅವರಿಗೆ ಯಾವ ಸಾಲವನ್ನೂ ಕೊಡುವ ಹಾಗಿರಲಿಲ್ಲ. ಈ ವಿಚಾರ ಭೀಮಪ್ಪನಿಗೂ ಚೆನ್ನಾಗಿ ಗೊತ್ತಿತ್ತು. ಭೀಮಪ್ಪ ನಾನು ನಾಳೆ ಸಿಂಧನೂರಿಗೆ ಹೋಗಿ ನಿನಗೆ ಬೇಕಾದ ಹಣ ಹೊಂದಿಸಲು ಪ್ರಯತ್ನಿಸುತ್ತೇನೆ. ಅಕಸ್ಮಾತ್ ಹಣ ಸಿಗದಿದ್ದರೆ, ನೀನು ನನ್ನ ಮೇಲೆ ಬೇಸರ ಮಾಡಬಾರದು ಎಂದೆ.

ನೀನು ಪ್ರಯತ್ನ ಮಾಡಿದರೆ ಹಣ ಸಿಕ್ಕೇ ಸಿಗುತ್ತೆ! ನಾಳೆ ನೀನು ಸಿಂಧನೂರಿಂದ ಬಂದವನೇ ನನಗೆ ಕರೆ ಕಳುಹಿಸು. ಹೋಗ್ಬರ್ತೀನ್ರೀ ಸಾಹೇಬ. ಸಲಾಮ್ರೀ ಯಪ್ಪ ಎನ್ನುತ್ತಾ ನನಗೊಂದು ಬಿಜಾಪುರ ಶೈಲಿಯ ಸಲಾಮ್ ಮಾಡಿ ತನ್ನ ಕ್ಯಾಂಪಿಗೆ ಹೊರಟುಹೋದ.             ಆಶಾಳ್ ಭೀಮಪ್ಪನ ಬೇಡಿಕೆ ಬಹು ನ್ಯಾಯಯುತವಾಗಿತ್ತು. ಆದರೆ, ಅಷ್ಟು ಹಣ ಹೊಂದಿಸುವ ಧೈರ್ಯ ನನಗಿರಲಿಲ್ಲ. ನನಗೆ ಹಣ ಹೊಂದಿಸಿಕೊಡುವ ಆಲೋಚನೆಯಲ್ಲೇ ಆ ರಾತ್ರಿ ಸರಿಯಾಗಿ ನಿದ್ರೆ ಬೀಳಲಿಲ್ಲ. ಒಂದು ವೇಳೆ ನಾನು ಈ ಹಣ ಹೊಂದಿಸಿ ಕೊಡದಿದ್ದರೆ ಭೀಮಪ್ಪನ ಎಲ್ಲಾ ಜನರೂ ತಮ್ಮ ಊರಿಗೆ ಹೊರಟರೆ, ಕಾರ್ಮಿಕರಿಲ್ಲದೆ ನಾನು ನಮ್ಮ ಜಮೀನು ಹೇಗೆ ರೂಢಿಸಲು ಸಾಧ್ಯ? ಎಂಬ ಆಲೋಚನೆಯೂ ನನ್ನ ತಲೆಯನ್ನು ಕೊರೆಯಹತ್ತಿತು.

ಮರುದಿನ ಮುಂಜಾನೆ ನಾನು ನೇರವಾಗಿ ಹನ್ನೆರಡು ಮೈಲಿ ದೂರದ ಸಿಂಧನೂರಿಗೆ ಹೋದೆ. ಅಲ್ಲಿರುವ ನನ್ನ ಮಿತ್ರರಾದ ಶ್ರೀ ಕೃಷ್ಣಶೆಟ್ಟಿಯವರ ಮಂಡಿಗೆ ಹೋದೆ.

ಕೃಷ್ಣಶೆಟ್ಟಿಯವರು ನಮ್ಮ ಊರಿನವರು. ಅಂದರೆ, ಉಡುಪಿ ತಾಲೂಕಿನಲ್ಲೇ ಹುಟ್ಟಿ ಬೆಳೆದವರು. ಒಂದೇ ಊರಿನವರಾದುದರಿಂದ ನಾವು ಒಳ್ಳೆಯ ಮಿತ್ರರಾಗಿದ್ದೆವು. ಕೃಷ್ಣಶೆಟ್ಟಿಯವರು ಭವಾನಿ ಟ್ರೇಡಿಂಗ್ ಕಂಪನಿ ಎಂಬ ಹೆಸರಿನ ದಲ್ಲಾಳಿ ಮಂಡಿಯನ್ನು ಹಲವು ವರ್ಷಗಳಿಂದ ನಡೆಸುತ್ತಿದ್ದರು. ನಮ್ಮ ಫಾರ್ಮಿನ ಹೆಚ್ಚಿನ ಉತ್ಪನ್ನಗಳನ್ನು ಅವರ ಮಂಡಿಯ ಮುಖಾಂತರವೇ ನಾವು ಬಿಕರಿ ಮಾಡುತ್ತಿದ್ದೆವು. ನಾನು ಕೃಷ್ಣಶೆಟ್ಟರೊಡನೆ ವಾಸ್ತವ ಸಂಗತಿಗಳನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಂಡು ಆಶಾಳ್ ಭೀಮಪ್ಪನ ಬೇಡಿಕೆ ಹೀಗಿದೆ ಅಂತ ತಿಳಿಸಿದೆ.

ಅವರು ಪೆಜತ್ತಾಯರೇ, ನಿಮ್ಮ ಆಶಾಳ್‌ಭೀಮಪ್ಪ ಯಾರು ಅಂತ ನನಗೆ ಗೊತ್ತಿಲ್ಲ. ಇದುವರೆಗೆ ವ್ಯವಹಾರದಲ್ಲಿ ನೀವು ಯಾವ ಸಾಲವನ್ನೂ ಉಳಿಸಿಕೊಂಡವರಲ್ಲ. ಮೇಲಾಗಿ ನಾವಿಬ್ಬರೂ ಒಂದೇ ಊರಿನಲ್ಲಿ ಹುಟ್ಟಿ ಬೆಳೆದವರು. ನೀವು ನನ್ನ ಒಳ್ಳೆಯ ಮಿತ್ರರು. ನಿಮಗೆ ಇಲ್ಲ ಎನ್ನಲು ಸಾಧ್ಯವಿಲ್ಲ. ನಿಮ್ಮ ವೈಯ್ಯಕ್ತಿಕ ಭರವಸೆಯ ಮೇಲೆ ನಿಮಗೆ ನಾನು ಹತ್ತುಸಾವಿರ ರೂಪಾಯಿ ಸಾಲ ನೀಡಲು ಸಿದ್ಧನಿದ್ದೇನೆ. ನಿಮ್ಮ ಆಶಾಳ್ ಭೀಮಪ್ಪ ಯಾರು ಎಂದು ನನಗೆ ಗೊತ್ತಿಲ್ಲ. ಆದ್ದರಿಂದ ಆತನನ್ನು ಈ ವ್ಯವಹಾರದ ಹೊರಗೆ ಇಟ್ಟುಕೊಳ್ಳೋಣ. ನೀವು ಪ್ರೋನೋಟ್ ಸಹಿಮಾಡಿ ಕೊಡುವುದಾದರೆ, ನಿಮಗೆ ಅತಿ ಕಡಿಮೆ ಅಂದರೆ ಶೇಕಡಾ ಎಂಟರ ದರದಲ್ಲಿ ಸಾಲ ನೀಡಬಲ್ಲೆ. ಬಡ್ಡಿಯ ಹಣವನ್ನು ಮಾತ್ರ ನೀವು ಪ್ರತೀ ವರ್ಷ ತಪ್ಪದೇ ನನಗೆ ಸಲ್ಲಿಸಬೇಕು. ಏನಂತೀರಾ? ಎಂದರು.

ನನಗೆ ಸಂತೋಷದಿಂದ ಮಾತೇ ಹೊರಡಲಿಲ್ಲ. ಆಯಿತು ಕೃಷ್ಣಣ್ಣಾ, ಸಾಲದ ಬಡ್ಡಿಯನ್ನು ಪ್ರತೀವರ್ಷ ಇಂದಿನ ತಾರೀಕಿಗೆ ತಮಗೆ ತಪ್ಪದೇ ಕಟ್ಟುತ್ತೇನೆ. ಎರಡು ವರ್ಷಗಳ ಅವಧಿಯ ಒಳಗೆ ಈ ಸಾಲವನ್ನು ಚುಕ್ತಾದಿಂದ ತೀರಿಸುತ್ತೇನೆ ಎಂದೆ. ನನ್ನ ಜೀವನದಲ್ಲಿ ಮೊದಲಬಾರಿಗೆ ನಾನು ಅಂದು ಪ್ರೋನೋಟ್ ಮೇಲೆ ಸಹಿಮಾಡಿ ಸಾಲಪಡೆದು ಹತ್ತುಸಾವಿರ ರೂಪಾಯಿಗಳನ್ನು ನನ್ನ ಕೈ ಚೀಲಕ್ಕೆ ಹಾಕಿಕೊಂಡೆ. ಹಣ ಪಡೆದುಕೊಂಡವನೇ ತರಾತುರಿಯಿಂದ ನಮ್ಮ ಫಾರ್ಮನ್ನು ತಲುಪಿದೆ.

ಆಶಾಳ ಭೀಮಪ್ಪನನ್ನು ಕರೆಸಿ, ಭೀಮಪ್ಪಾ, ನನ್ನ ಹೆಸರಿನಲ್ಲೇ ಪ್ರೊನೋಟ್ ಬರೆಸಿ ಸಾಲ ಪಡೆದು ಹತ್ತುಸಾವಿರ ರೂಪಾಯಿಗಳನ್ನು ಕೃಷ್ಣಶೆಟ್ಟಿ ಸಾಹುಕಾರರಿಂದ ಸಾಲವಾಗಿ ಪಡೆದು ತಂದಿದ್ದೇನೆ. ಬಡ್ಡಿಯ ದರ ಶೇಕಡ ಎಂಟು ಮಾತ್ರ. ಈಗ ನೀನು ನನ್ನಿಂದ ಈ ಹತ್ತುಸಾವಿರ ರೂಪಾಯಿಗಳನ್ನು ಪಡೆದ ಬಗ್ಗೆ ನನಗೆ ಒಂದು ಪ್ರೋನೋಟ್ ಕೊಡಬೇಕು ಮತ್ತು ಇಬ್ಬರು ಸಾಕ್ಷಿದಾರರ ಸಹಿ ಕೊಡಬೇಕು ಎಂದೆ.

ಪ್ರೋನೋಟ್ ಬರೆದುಕೊಡು ಹೆಬ್ಬೆಟ್ಟು ಹಾಕುತ್ತೇನೆ. ಸಾಕ್ಷಿದಾರರಾಗಿ ನಿಮ್ಮಲ್ಲೇ ನಿಂತು ಕೆಲಸಮಾಡುವ ಮಾನಪ್ಪ ಮತ್ತು ಸಕರಪ್ಪನವರ ಸಹಿ ಹಾಕಿಸುತ್ತೇನೆ ಎಂದ. ಅದೇರೀತಿ, ಶೇಕಡಾ ಎಂಟಕ್ಕೆ ಪ್ರೋನೋಟ್ ಬರೆದು ಅವರುಗಳ ಹೆಬ್ಬೆಟ್ಟು ಪಡೆದೆ. ಆತನ ಕೈಯ್ಯಲ್ಲಿ ಹಣ ಇಟ್ಟೆ. ಆತನ ಕಣ್ಣಲ್ಲಿ ಆನಂದಭಾಷ್ಪಗಳು ಉದುರಿದುವು.

ಸಾಹೇಬ, ಈ ಹಣ ಪಡೆದುದಕ್ಕೆ ಈ ಮಾನಪ್ಪ ಮತ್ತು ಸಕರಪ್ಪ ಎಂಬವರು ಸಾಕ್ಷಿದಾರರು ಹೌದು. ಇವರಲ್ಲದೆ ಇನ್ನೂ ಮೂವರು ಸಾಕ್ಷಿದಾರರು ಇದ್ದಾರೆ. ಅವರು ಯಾರು ಗೊತ್ತೇ? ಈ ಭೂಮಿತಾಯಿ, ಸೂರ್ಯ ದೇವರು ಮತ್ತು ನಮ್ಮನ್ನು ಸಲಹುತ್ತಿರುವ ತುಂಗಭದ್ರೆ ಎಂದ..! ಬಗ್ಗಿ ನನ್ನ ಕಾಲು ಹಿಡಿದು ನಿನ್ನ ಉಪಕಾರ ಮರೆಯಲಾರೆ ಸಾಹೇಬ! ನಾನು ಈ ರೊಕ್ಕವನ್ನು ಆರು ತಿಂಗಳಲ್ಲಿ ನಿನಗೆ ಬಡ್ಡಿ ಸಮೇತ ತಂದು ಮುಟ್ಟಿಸುವೆ ಎಂದು ನಿನ್ನ ಪಾದದ ಆಣೆ ಪ್ರಮಾಣ ಮಾಡುತ್ತಾ ಇದ್ದೇನೆ ಎಂದ. ಮರುದಿನ ತನ್ನ ನೂರುಮಂದಿ ಜನರನ್ನು ಕರೆದುಕೊಂಡು ಆಶಾಳ್‌ಭೀಮಪ್ಪ ತನ್ನ ಊರಿಗೆ ಹೊರಟುಹೋದ.

ಅವನು ಬರೆದುಕೊಟ್ಟ ಪ್ರೋನೋಟ್ ಹಿಡಿದುಕೊಂಡು ನಾನೇನು ಮಾಡಬಲ್ಲೆ? ಎಂಬ ಆಲೋಚನೆ ನನಗೆ ಆಗಾಗ ಬರುತ್ತಿತ್ತು. ಅವರೆಲ್ಲರೂ ನಿರಕ್ಷರಕುಕ್ಷಿಗಳು. ಅವರ ಅಡ್ರಸ್ ಕೂಡಾ ಪತ್ರದಲ್ಲಿ ಸರಿಯಾಗಿಲ್ಲ. ಏನೋ ಭಂಡ ಧೈರ್ಯಮಾಡಿ ಅವರಿಗೆ ಸಾಲ ತಂದುಕೊಟ್ಟೆ. ಕೃಷ್ಣಶೆಟ್ಟರ ಸಾಲವನ್ನು ಭೀಮಪ್ಪ ತಂದುಕೊಡದಿದ್ದರೆ, ನಾನು ಹೇಗೆ ತೀರಿಸಲಿ? ಎಂಬ ಚಿಂತೆ ನನ್ನನ್ನು ಆಗಾಗ ಕಾಡುತ್ತಿತ್ತು. ಕೆಲವು ಸರ್ತಿ ಪದೇಪದೇ ಇದೇ ಆಲೋಚನೆಯೇ ಬಂದು ಕೆಲವು ರಾತ್ರಿ ನನಗೆ ನಿದ್ದೆ ಬರುತ್ತಿರಲಿಲ್ಲ.

ನಾನು ನೂರುಜನ ಲಂಬಾಣಿ ಕಾರ್ಮಿರನ್ನು ದುಡಿಸಿಕೊಳ್ಳುತ್ತಾ ನನ್ನಿಂದ ಆದಷ್ಟು ಲಘು ನೀರಾವರಿಯ ಬೆಳೆಗಳನ್ನು ಆ ಮಳೆಗಾಲದಲ್ಲಿ ಬೆಳೆದೆ. ಬಾಕಿ ಉಳಿದ ಜಮೀನಿನಲ್ಲಿ ಮಳೆ ಆಧಾರಿತ ಬಿಳಿಜೋಳವನ್ನು ಬೆಳೆದೆ.

ಆಶಾಳ್ ಭೀಮಪ್ಪನು ನನ್ನಿಂದ ಸಾಲ ಪಡೆದು ಐದು ತಿಂಗಳು ಮೂರು ವಾರವಾಗಿತ್ತು. ಆಶಾಳ್‌ತಾಂಡದಲ್ಲಿದ್ದ ಅವನಿಂದ ನನಗೆ ಯಾವ ಸುದ್ದಿಯೂ ಬರಲಿಲ್ಲ. ಆರುತಿಂಗಳ ವಾಯಿದೆ ಮುಗಿಯಲು ಮೂರು ದಿನವಿತ್ತು. ನನಗೆ ಭೀಮಪ್ಪನ ಬಗ್ಗೆಯೇ ಆಲೋಚನೆಯಾಗುತ್ತಿತ್ತು.

ಸಾಯಂಕಾಲದ ಐದು ಗಂಟೆಯ ಹೊತ್ತಿಗೆ ಯಾವುದೋ ಒಂದು ಲಾರಿ ಜನ ತುಂಬಿಕೊಂಡು ನಮ್ಮ ಕಾರ್ಮಿಕರ ಕ್ಯಾಂಪಿನ ಹತ್ತಿರ ಬಂದುನಿಂತಿತು. ನಮ್ಮ ಕಾರ್ಮಿಕರು ಉತ್ಸಾಹದಿಂದ ಆ ಲಾರಿಯನ್ನು ಸುತ್ತುವರಿದು, ಬಂದವರ ಸಾಮಾನು ಸರಂಜಾಮುಗಳನ್ನು ಇಳಿಸತೊಡಗಿದರು. ಕೆಲನಿಮಿಷಗಳಲ್ಲೇ ಲಂಬಾಣಿ ತಂಡದಿಂದ ಅವರ ಸಾಮೂಹಿಕ ಗಾನ ಹೊರಹೊಮ್ಮತೊಡಗಿತು. ಬಿಳಿಬಟ್ಟೆ ತೊಟ್ಟಿದ್ದ ನೀಳಕಾಯದ ಮನುಷ್ಯನೊಬ್ಬ ನಮ್ಮ ಆಫೀಸಿನ ಕಡೆಗೆ ನಡೆದುಬರಹತ್ತಿದ. ಹತ್ತಿರ ಬರುತ್ತಲೇ ಆತ ನಮ್ಮ ಆಶಾಳ್ ಭೀಮಪ್ಪ ಎಂದು ನನಗೆ ಗುರುತಾಯಿತು.

ಹತ್ತಿರಬಂದವನೇ ನನಗೆ ಸಲಾಮ್ರೀಯಪ್ಪ! ಎಂದು ಬಗ್ಗಿ ಸಲಾಮ್ ಹೊಡೆದ. ನಾನು ಆತನನ್ನು ಆಫೀಸಿನ ಒಳಗೆ ಬರಲು ಹೇಳಿದೆ.

ಸಾಹೇಬ, ಇಂದು ಚಂದ್ರನ ಲೆಕ್ಕದಲ್ಲಿ ನಾನು ನಿನ್ನಿಂದ ಹಣ ಪಡೆದು ಆರು ತಿಂಗಳಾಯಿತು. ನಿನ್ನ ಹತ್ತುಸಾವಿರ ಹಣ ಮತ್ತು ವರ್ಷದ ಬಡ್ಡಿ ಎಂಟುನೂರು ರೂಪಾಯಿ ತಂದುಕೊಡುತ್ತಾ ಇದ್ದೇನೆ. ಎಣಿಸಿಕೋ ಎನ್ನುತ್ತಾ ತನ್ನ ಅಂಗಿಯ ಜೇಬಿನಿಂದ ಪೇಪರಿನಲ್ಲಿ ಕಟ್ಟಿದ ಒಂದು ಕಟ್ಟು ಹಣವನ್ನು ನನ್ನ ಟೇಬಲ್ ಮೇಲೆ ಇಟ್ಟ. ಹಣ ಹತ್ತುಸಾವಿರದ ಎಂಟು ನೂರು ಇತ್ತು. ನಾನು ಆತನಿಗೆ ಹೇಳಿದೆ ನೀನು ಕೊಡಬೇಕಾದುದು ಹತ್ತುಸಾವಿರದ ನಾಲ್ಕುನೂರು ಮಾತ್ರ. ಯಾಕೆಂದರೆ ಆರು ತಿಂಗಳ ಬಡ್ಡಿ ಬರೇ ನಾಲ್ಕು ನೂರು ರೂಪಾಯಿ ಮಾತ್ರ ಎಂದೆ. ಅದಕ್ಕಾತ, ಅದು ನಿನ್ನ ಇಂಗ್ಲಿಷ್ ಲೆಕ್ಕವಾಗಿರಬಹುದು. ಲಂಬಾಣಿ ಲೆಕ್ಕದ ಪ್ರಕಾರ ನಾನು ನಿನಗೆ ಎಂಟುನೂರು ರೂಪಾಯಿ ಬಡ್ಡಿ ಕೊಡಲೇಬೇಕು. ತೆಗೆದುಕೋ ಎಂದ..!

ನಾನು ಆತ ಬರೆದುಕೊಟ್ಟ ಸಾಲಪತ್ರವನ್ನು ಆತನಿಗೆ ಹಿಂದಿರುಗಿಸಿ, ಭೀಮಪ್ಪ. ಈ ಪ್ರೋನೋಟನ್ನು ಹರಿದು ಹಾಕು. ನಾಳೆ ನಾನು ಸಾಲ ಪಡೆದ ಕೃಷ್ಣಶೆಟ್ಟರಿಗೆ ರೊಕ್ಕ ಮತ್ತು ನೀನು ಕೊಟ್ಟಿರುವ ಬಡ್ಡಿ ಹಣ ಕೊಟ್ಟು ನಾನು ಕೊಟ್ಟ ಪ್ರೊನೋಟ್ ಕೇಳಿ ಹಿಂತಿರುಗಿ ಪಡೆದು ಅದನ್ನು ಹರಿದು ಹಾಕುವೆ ಎಂದೆ.

ಮರುದಿನ ಬೆಳಗ್ಗೆ ಬೈಕ್ ಹತ್ತಿ ಭವಾನಿ ಟ್ರೇಡಿಂಗ್ ಕಂಪೆನಿಗೆ ಹೋದೆ. ಕೃಷ್ಣಶೆಟ್ಟರು ಮಂಡಿಯ ಗಲ್ಲಾದಲ್ಲಿ ಕುಳಿತಿದ್ದರು. ಅವರ ಇದುರು ಕುಳಿತವನೇ ಆಶಾಳ್ ಭೀಮಪ್ಪ ಕೊಟ್ಟ ಹಣವನ್ನು ಅವರ ಮುಂದೆ ಇಟ್ಟೆ.

ಲೆಕ್ಕದ ಪ್ರಕಾರ ನಿಮ್ಮ ಭೀಮಪ್ಪ ಹತ್ತುಸಾವಿರದ ನಾಲ್ಕುನೂರು ರೂಪಾಯಿ ಕೊಡಬೇಕಾಗಿತ್ತು. ಇನ್ನೂ ನಾಲ್ಕುನೂರು ಜಾಸ್ತಿ ಕೊಟ್ಟಿದ್ದಾನೆ ಅಂದರು. ಅದಕ್ಕೆ ನಾನು ಆಶಾಳ್ ಭೀಮಪ್ಪನ ಲೆಕ್ಕಾಚಾರ ಹೇಳಿ ನಸುನಕ್ಕೆ. ಕೃಷ್ಣಶೆಟ್ಟಿಯವರ ಮುಖದಲ್ಲಿ ಮಂದಹಾಸ ಮಿನುಗಿತು. ನಾನು ಬರೆದು ಕೊಟ್ಟಿದ್ದ ಪ್ರೋನೋಟ್ ನನ್ನ ಮುಂದೆ ಇಟ್ಟು, ಪೆಜತ್ತಾಯರೇ, ಇದನ್ನು ಹರಿದುಹಾಕಿ ಎಂದರು. ನಾನು ಹಾಗೆಯೇ ಮಾಡಿದೆ.

ಸದ್ರಿ ಹಣದಲ್ಲಿ ಹತ್ತುಸಾವಿರ ರೂಪಾಯಿಗಳನ್ನು ತನ್ನ ಗುಮಾಸ್ತ ಶರಣಪ್ಪನಿಗೆ ಕೊಡುತ್ತಾ, ಶರಣಪ್ಪಾ, ಒಂದು ಖಾಲಿ ಲಕೋಟೆ ಇತ್ತ ಕೊಡು ಎಂದರು. ಆ ಲಕೋಟೆಯಲ್ಲಿ ಎಂಟುನೂರು ರೂಪಾಯಿಗಳನ್ನು ಇರಿಸುತ್ತಾ ಸ್ವಾಮೀ ಪೆಜತ್ತಾಯರೇ, ದಯವಿಟ್ಟು ಈ ಎಂಟುನೂರು ರೂಪಾಯಿ ಹಣವನ್ನು ನಿಮ್ಮ ಆಶಾಳ್ ಭೀಮಪ್ಪನಿಗೆ ನನ್ನ ವತಿಯಿಂದ ಇನಾಮ್ ಎಂದು ಕೊಡಿರಿ ಎಂದರು. ಕೃಷ್ಣಣ್ಣ ತನ್ನ ದೊಡ್ಡತನವನ್ನು ಮೆರೆದಿದ್ದರು. ಅವರಿಗೆ ವಂದಿಸಿ ನಾನು ನಮ್ಮ ಫಾರ್ಮಿಗೆ ಹೊರಟೆ.

ಆಫೀಸ್ ತಲುಪಿದವನೇ ಭೀಮಪ್ಪನಿಗೆ ಕರೆ ಕಳುಹಿಸಿದೆ. ಭೀಮಪ್ಪ ಓಡೋಡುತ್ತಾ  ಬಂದು ಸಾಹೇಬ! ನಿಮ್ಮ ಲೆಕ್ಕ ಜಳ ಝಳ (=ಚುಕ್ತಾ) ಆಯಿತೇ? ಎಂದು ಆತಂಕದಿಂದಲೇ ಪ್ರಶ್ನಿಸಿದ.

ಇಲ್ಲ ಭೀಮಪ್ಪಾ, ನಮ್ಮ ಸಾಹುಕಾರ್ ಕೃಷ್ಣಶೆಟ್ಟಿ ಸಾಹೇಬರು ನಿನಗೆ ಕೊಡಲು ಒಂದು ಲಕೋಟೆಯನ್ನು ಕೊಟ್ಟಿದ್ದಾರೆ. ಅದರಲ್ಲಿರುವ ಲೆಕ್ಕ ನೀನು ಒಪ್ಪಿಕೊಂಡರೆ, ಅವರ ಲೆಕ್ಕ ಚುಕ್ತಾ ಆದಂತೆ ಎಂದು ಹೇಳಿದ್ದಾರೆ..! ಈ ಲಕೋಟೆ ತೆಗೆದುಕೋ ಎಂದೆ..!

ಗಾಬರಿಯಿಂದ ಭೀಮಪ್ಪ, ಅದೇನು ಆ ಲಕೋಟೆ ಒಡೆದು ಓದಿ ಹೇಳಪ್ಪಾ ನನ್ನ ಸಾಹೇಬ! ಇನ್ನೇನಾದರೂ ಅವರಿಗೆ ಬಾಕಿ ಇದೆಯಾದರೆ, ನಾನು ಖಂಡಿತಾ ತೀರಿಸುವೀಂದ. ಆಗ ನಾನು ಅದೆಲ್ಲ ನನಗೆ ಗೊತ್ತಿಲ್ಲ, ನಿನಗೆ ಕೊಟ್ಟ ಲಕೋಟೆ ನೀನೇ ಒಡೆದುನೋಡುಎಂದೆ. ಭೀಮಪ್ಪ ಬಲು ಗಾಬರಿಯಿಂದ ನಡುಗುವ ಕೈಗಳಿಂದ ಆ ಲಕೋಟೆ ಒಡೆದು ನೋಡಿದ. ಒಳಗಿದ್ದ ಎಂಟುನೂರು ರೂಪಾಯಿಗಳನ್ನು ಎಣಿಸಿದ.

ಈ ಎಂಟುನೂರು ರೂಪಾಯಿ ಕೃಷ್ಣಾಸಾಹೇಬರಿಂದ ನಿನಗೆ ಭಕ್ಷೀಸ್ ಅಂತೀಂದೆ. ಆಗ ಭೀಮಪ್ಪ, ನನಗೆ ಕೃಷ್ಣಾಸಾಹೇಬರ ಕೂನ್ (ಪರಿಚಯ) ಇಲ್ಲ. ಆದರೂ, ಅವರ ದೊಡ್ಡತನವಿದು. ಅವರನ್ನು ದೇವರು ಚೆನ್ನಾಗಿಟ್ಟಿರಲಿಎಂದು ತುಂಬಿದ ಕಣ್ಣುಗಳಿಂದ ಹರಸಿದ.           ನನ್ನ ಆಫೀಸ್ ಮೇಜಿನ ಈಚೆಗೆ ಬಂದು ಸಾಹೇಬ, ನಿನ್ನ ಉಪಕಾರ ನಾವು ಮತ್ತು ನಮ್ಮ ತಾಂಡದ ಜನರು ಮರೆಯುವ ಹಾಗಿಲ್ಲ. ಆ ದೇವರು ನಿನ್ನನ್ನೂ, ಮುಂದಕ್ಕೆ ನಿನ್ನವರಾಗುವ ಹೆಂಡಿರು (ಆಗಲೇ ನನ್ನ ಹೆಂಡತಿಗೆ ಬಹುವಚನ!) ಮಕ್ಕಳನ್ನೂ ಸೊಂಪಾಗಿ ಇಟ್ಟಿರಲಿ ಎಂದು ನನ್ನ ಕಾಲುಗಳನ್ನು ಗಟ್ಟಿಯಾಗಿ ಹಿಡಿದ.

ಆಗ ನಾನು ಆಶಾಳ್ ಭೀಮಪ್ಪನಿಗೆ ಹೇಳಿದೆ, ಭೀಮಪ್ಪಾ, ನಾನು ಇನ್ನೂ ಹುಡುಗ. ನಿನ್ನ ಅರ್ಧದಷ್ಟು ಪ್ರಾಯದವನು. ನೀನು ನನ್ನ ಕಾಲು ಹಿಡಿಯಬೇಡ. ನೀನು ನನಗೆ ಆಶೀರ್ವಾದ ಮಾಡು, ಅಷ್ಟು ಸಾಕು ಎಂದು ಹೇಳಿದೆ. ಭೀಮಪ್ಪ ಹೆಚ್ಚಿಗೆ ಮಾತನಾಡಲು ಆಗದೇ ಗದ್ಗದ ಕಂಠದಿಂದ ಬರ್ತೀನ್ ಸಾಹೇಬ ಎನ್ನುತ್ತಾ ತನ್ನ ಕ್ಯಾಂಪ್ ಕಡೆಗೆ ನಡೆದ.

ಭೀಮಪ್ಪನ ಆಗಮನದ ನಂತರ ನಮ್ಮಲ್ಲಿಯ ಕಾರ್ಮಿಕರ ಸಂಖ್ಯೆ ಇನ್ನೂರಾಯಿತು. ನಮ್ಮ ಕೃಷಿಕ್ಷೇತ್ರದ ಕೆಲಸಕಾರ್ಯಗಳೆಲ್ಲಾ ಸುಗಮವಾದುವು.

ಅಂದು ಆಶಾಳ ಭೀಮಪ್ಪನಿಗೆ ಅಷ್ಟು ಸಹಾಯ ಮಾಡದೇ ಇದ್ದರೆ, ನಾನು ಇಂದು ನನ್ನ ಮನದೊಳಗೆಯೇ ನಾನೊಬ್ಬ ದೊಡ್ಡ ಪಾಪಿ ಅಂದುಕೊಳ್ಳುತ್ತಾ ಇರಬೆಕಾಗಿತ್ತು. ಇಂದು ಆತ ಬದುಕಿದ್ದಾನೋ ಇಲ್ಲವೋ ಗೊತ್ತಿಲ್ಲ. ಆತನ ಹಾರೈಕೆಯಂತೆ, ಇಂದು ನಾನು ಮತ್ತು ನನ್ನ ಸಂಸಾರ ಸಂತೃಪ್ತಿಯ ಜೀವನ ನಡೆಸುತ್ತಾ ಇದ್ದೇವೆ.

* * *