ಲಾಲ್‌ಬಹಾದೂರ್ ಶಾಸ್ತ್ರಿಯವರು ನನ್ನ ಮೇಲೆ ಬಹಳ ಪ್ರಭಾವ ಬೀರಿದವರು. ೧೯೬೦ರ ದಶಕದಲ್ಲಿ ಅವರು ನಮ್ಮ ದೇಶದ ಪ್ರಧಾನಿಯಾಗಿದ್ದರು. ಆಗ ನಮ್ಮ ದೇಶ ತೀವ್ರವಾದ ಆಹಾರವಸ್ತುಗಳ ಅಭಾವವನ್ನು ಎದುರಿಸುತ್ತಿತ್ತು. ಅದಲ್ಲದೇ, ಹೊರರಾಷ್ಟ್ರಗಳು ನಮ್ಮ ಮೇಲೆ ಯುದ್ಧಸಾರಿ, ನಮ್ಮ ದೇಶದ ಗಡಿಗಳನ್ನು ಅತಿಕ್ರಮಣ ಮಾಡುತ್ತಾ ಇದ್ದುವು. ಅಂತಹ ಅಭಾವದ ಸಮಯದಲ್ಲಿ, ಆಹಾರಧಾನ್ಯಗಳನ್ನು ಉಳಿಸುವ ಸಲುವಾಗಿ ಮಾನ್ಯ ಲಾಲ್‌ಬಹಾದೂರ್ ಶಾಸ್ತ್ರಿಗಳವರು ನಮ್ಮ ದೇಶದ ಜನತೆಯನ್ನು ವಾರಕ್ಕೆ ಒಂದು ಹೊತ್ತಿನ ಊಟವನ್ನು ಬಿಟ್ಟು ಉಪವಾಸ ಮಾಡಲು ಕೇಳಿಕೊಂಡಿದ್ದರು. ಆಹಾರಕ್ಕಾಗಿ ಹೊರದೇಶಗಳ ಜನರನ್ನು ಕೇಳುವುದಕ್ಕಿಂತ ಒಂದು ಹೊತ್ತಿನ ಉಪವಾಸ ಮೇಲು ಅಲ್ಲವೆ? ಇದರಿಂದ ಆಹಾರಧಾನ್ಯಗಳಲ್ಲಿ ಸ್ವಲ್ಪ ಉಳಿತಾಯ ಆಗುತ್ತೆ. ಅದಕ್ಕಿಂತಲೂ ಮುಖ್ಯವಾಗಿ, ನಾವು ಇನ್ನೂ ಹೆಚ್ಚು ಆಹಾರ ಧಾನ್ಯಗಳನ್ನು ಬೆಳೆಯಬೇಕು ಎಂಬ ಪ್ರಜ್ಞೆಯು ನಮ್ಮ ಜನರಲ್ಲಿ ಮೂಡುತ್ತದೆ ಎಂದು ಅವರು ಪ್ರತಿಪಾದಿಸುತ್ತಾ ಇದ್ದರು. ಜೈ ಜವಾನ್, ಜೈ ಕಿಸಾನ್ ಎಂಬುದು ಅವರ ಬೀಜಮಂತ್ರವಾಗಿತ್ತು.

ನಾನು ಕಾಲೇಜಿನಿಂದ ಹೊರಬರುವಾಗ ನಮ್ಮ ಗಡಿಗಳಲ್ಲಿನ ಯುದ್ಧಭಯ ಕಡಿಮೆಯಾಗಿತ್ತು. ಆದರೆ, ದೇಶದಲ್ಲಿ ಆಹಾರದ ಅಭಾವ ತಾಂಡವವಾಡುತ್ತಿತ್ತು. ನಾನು ಲಾಲ್‌ಬಹಾದ್ದೂರರ ಕರೆಗೆ ಓಗೊಟ್ಟು ರೈತನ ಜೀವನ ಆರಿಸಿಕೊಂಡೆ. ಅವರ ಕೋರಿಕೆಯಂತೆ ನಾನು ಪ್ರತೀ ಸೋಮವಾರ, ಒಂದು ಹೊತ್ತಿನ ಊಟ ಮಾಡದೇ ಒಪ್ಪೊತ್ತು ಊಟ ಮಾಡುತ್ತಿದ್ದೆನು. ಸೋಮವಾರದ ರಾತ್ರಿ ಊಟದ ಬದಲು ಹೊಟ್ಟೆ ತುಂಬಾ ನೀರು ಕುಡಿದು ಮಲಗುತ್ತಿದ್ದೆ. ಕೆಲವೊಮ್ಮೆ ಹಸಿವಿನಿಂದ ರಾತ್ರಿ ತಡವಾಗಿ ನಿದ್ರೆ ಬರುತ್ತಿತ್ತು. ಈ ಉಪವಾಸಗಳಿಂದಾಗಿ ನನಗೆ ನಿಜವಾದ ಹಸಿವಿನ ಪರಿಚಯ ಹಾಗೂ ಆಹಾರ ವಸ್ತುಗಳ ಪ್ರಾಮುಖ್ಯತೆಯು ಅರಿವಿಗೆ ಬಂತು ಎಂದು ಹೇಳಲು ಹರ್ಷಿಸುತ್ತೇನೆ.

ಉಪವಾಸ ಮಾಡಿದಾಗ ಮನುಷ್ಯನ ಮೆದುಳು ಚುರುಕಾಗಿ ಕೆಲಸಮಾಡುತ್ತದೆ. ಅದಲ್ಲದೆ, ಹಸಿವಿನಿಂದ ಬಳಲುವ ಜನರ ಪರಿಸ್ಥಿತಿಯ ಅರಿವು ನಮಗೆ ಉಂಟಾಗುತ್ತದೆ. ನನಗಂತೂ, ಪ್ರತೀ ಅಗುಳು ಅನ್ನದ ಬೆಲೆಯ ಅರಿವು ಆ ದಿನಗಳಲ್ಲಿ ಚೆನ್ನಾಗಿ ತಿಳಿಯಿತು. ಅಂದಿನಿಂದ ನಾನು ತಟ್ಟೆಯಲ್ಲಿ ಅನ್ನ ಅಥವಾ ಯಾವುದೇ ಪದಾರ್ಥವನ್ನು ಹಾಕಿಸಿಕೊಂಡ ಮೇಲೆ ವ್ಯರ್ಥಮಾಡುವುದನ್ನು ಬಿಟ್ಟುಬಿಟ್ಟೆ. ಯಾಕೆಂದರೆ, ನಾವು ಎಸೆಯುವ ಆಹಾರ ಇನ್ನೊಬ್ಬನ ತುತ್ತಾಗಬಹುದು. ಈ ಪದ್ಧತಿಯನ್ನು ಇಂದಿಗೂ ಪಾಲಿಸುತ್ತಿದ್ದೇನೆ. ಹೋಟೆಲ್ ಅಥವಾ ಉಪಹಾರ ಗೃಹಗಳಿಗೆ ಹೋದಾಗಲೂ ನನ್ನ ಪ್ಲೇಟಿನಲ್ಲಿರುವ ಅಹಾರ ಇಂದಿಗೂ ಖಾಲಿಮಾಡುತ್ತೇನೆ. ನನಗೆ ನಾವು ಉಣ್ಣುವ ಆಹಾರದ ಬೆಲೆಯು ಲಾಲ್‌ಬಹದ್ದೂರ್ ಶಾಸ್ತ್ರಿಯವರು ಬೋಧಿಸಿದ ಈ ಒಪ್ಪೊತ್ತು ಊಟದ ತ್ಯಾಗದಿಂದ ಚೆನ್ನಾಗಿ ಅರಿವಾಯಿತು.

ನಮ್ಮ ದೇಶದ ಆಹಾರದ ಸಮಸ್ಯೆ ಜಟಿಲವಾಗಿರುವಾಗಲೇ, ನಮ್ಮ ದೇಶಕ್ಕೂ ಪಾಕಿಸ್ತಾನಕ್ಕೂ ಯುದ್ಧ ಶುರುವಾಗಿತ್ತು. ವಾಮನಾಕಾರದ ನಮ್ಮ ಪ್ರಧಾನಿ ಶ್ರೀ ಲಾಲ್ ಬಹದ್ದೂರರು ತಮ್ಮ ಹೆಸರಿಗೆ ತಕ್ಕ ಧೀಮಂತತನವನ್ನು ತೋರಿಸಿ ಪಾಕಿಸ್ತಾನವನ್ನು ಯುದ್ಧರಂಗದಲ್ಲಿ ಎದುರಿಸಲು ದೇಶಕ್ಕೆ ಕರೆ ನೀಡಿದರು. ಜೈ ಜವಾನ್, ಜೈ ಕಿಸಾನ್ ಎಂಬ ಉಕ್ತಿ ಅವರದಾಯಿತು. ತಾಷ್ಕೆಂಟ್ ಸಮ್ಮೇಳನಕ್ಕೆ ಅವರು ಶಾಂತಿಯ ಮಾತುಕತೆಗೆ ತೆರಳಿದಾಗ ಅವರ ದೇಹಾಂತ್ಯವಾಯಿತು.  ೧೯೬೬ ಜನವರಿ ಹದಿಮೂರನೇ ತಾರೀಕು ನಡೆದ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಭಾಗ್ಯ ನನಗಿತ್ತು. ನಾನು ಆಗ ಉಡುಪಿ ಪಟ್ಟಣದ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಎನ್.ಸಿ.ಸಿ ನೇವಲ್‌ವಿಂಗ್ ಸೇರಿಕೊಂಡು ಆ ವರ್ಷ ನಾನು ಪೆಟ್ಟಿ ಆಫೀಸರ್ ರ‍್ಯಾಂಕ್ ಪಡೆದು ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದೆ. ನಮ್ಮ ಕಾಲೇಜಿನ ಅತ್ಯುತ್ತಮ ಕ್ಯಾಡೇಟ್ ಎನ್ನಿಸಿಕೊಂಡಿದ್ದರಿಂದ ನನಗೆ ೧೯೬೬ನೇ ಇಸವಿಯಲ್ಲಿ ದೆಹಲಿಯಲ್ಲಿ ನಡೆಯುವ ಗಣರಾಜ್ಯ ದಿವಸದ ಪೆರೇಡ್‌ನಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಆ ವರ್ಷವಿಡೀ ಭಾರತದಿಂದ ಆರಿಸಲ್ಪಟ್ಟ ಸೀನಿಯರ್ ವಿಂಗ್ ನೇವಲ್ ಎನ್.ಸಿ.ಸಿ.ಯ ೩೪ ಮಂದಿಯ ಪ್ಲಟೂನಿನಲ್ಲಿ ನಾನೂ ಒಬ್ಬನಾಗಿದ್ದೆ. ನಮ್ಮನ್ನು ೧೯೬೫ರ ಡಿಸೆಂಬರ್ ೨೬ ನೇ ತಾರೀಕಿನಿಂದ ಹೆಚ್ಚಿನ ತರಬೇತಿಗೆ ಬೆಂಗಳೂರಿಗೆ ಕರೆಸಿಕೊಳ್ಳಲಾಯಿತು. ಜನವರಿ ಆರನೇ ತಾರೀಕಿನಂದು ಕರ್ನಾಟಕದ ಇತರೇ ಎನ್.ಸಿ.ಸಿ. ಕ್ಯಾಡೇಟ್‌ಗಳೊಂದಿಗೆ ನಾನು ಕೂಡಾ ದೆಹಲಿಗೆ ಹೊರಟೆ.

ತಾರೀಕು ಒಂಬತ್ತರಿಂದ ನಮ್ಮ ಪೆರೇಡ್ ತರಬೇತಿ ಪಾಲಂ ವಾಯುನಿಲ್ದಾಣದ ಪಕ್ಕಕ್ಕೆ ನಿರ್ಮಿಸಿದ್ದ ಆಲ್ ಇಂಡಿಯಾ ರಿಪಬ್ಲಿಕ್ ಡೇ ಕಂಟಿಂಜೆಂಟ್‌ಕ್ಯಾಂಪ್ನಲ್ಲಿ ಶುರುವಾಯಿತು. ಬೀಸುವ ಧೂಳಿನೊಡಗೂಡಿದ ಬಿರುಗಾಳಿಯ ಪರಿಣಾಮ ಹವಾಮಾನದ ಉಷ್ಣತೆ ರಾತ್ರಿಹೊತ್ತು ಮೂರು ಡಿಗ್ರಿಗಳಿಗೆ ಒಮ್ಮೊಮ್ಮೆ ಇಳಿಯುತ್ತಿತ್ತು. ಅದುವರೆಗೆ ಆ ರೀತಿಯ ಚಳಿಯನ್ನು ದಕ್ಷಿಣಭಾರತದಲ್ಲಿ ಅನುಭವಿಸದ ನಾವು ಕ್ಯಾನ್ವಾಸ್‌ಟೆಂಟ್‌ಗಳಲ್ಲಿ ವಾಸಿಸುತ್ತಾ ತಡೆದುಕೊಳ್ಳಬೇಕಿತ್ತು. ದಿನಾ ಸುಮಾರು ಆರು ಕಿಲೋ ತೂಗುವ ೩೦೩ ರೈಪಲ್ಗಳನ್ನು ಎಡಗೈಯ್ಯಿನ ಮಧ್ಯಬೆರಳಲ್ಲಿ ಆಧರಿಸಿ ಹೊತ್ತು, ಇಂಡಿಯಾ ಗೇಟ್ ಬಳಿಯಿಂದ ಆರಂಭವಾಗಿ ಕೆಂಪುಕೋಟೆಯಲ್ಲಿ ಕೊನೆಗೊಳ್ಳುವ ಸುಮಾರು ಹನ್ನೆರಡು ಮೈಲಿದೂರದ ಪಥವನ್ನು ಆಕರ್ಷಕವಾಗಿ ಮಾರ್ಚ್ ಮಾಡುತ್ತಾ ಕ್ರಮಿಸುವ ಅಭ್ಯಾಸ ಮಾಡಬೇಕಿತ್ತು. ವಯಸ್ಸಿಗೆ ಸಹಜವಾದ ಹುಮ್ಮಸ್ಸು ಮತ್ತು ದೇಶಭಕ್ತಿಯ ಭಾವನೆಗಳು ನಮ್ಮಲ್ಲಿ ಇದ್ದುದರಿಂದ ಇದೇನೂ ಕಷ್ಟವಾಗಿ ನಮಗೆ ತೋರುತ್ತಿರಲಿಲ್ಲ. ಕ್ಯಾಂಪಿನಲ್ಲಿ ಶ್ರೀ ಲಾಲ್ ಬಹದ್ದೂರರ ಮರಣವಾರ್ತೆ ಹಬ್ಬಿತು. ತಾರೀಕು ಹನ್ನೆರಡರಂದೇ ನಮಗೆ ಶೋಕ್ ಶಸ್ತ್ರ್ ಎಂಬ ರೈಫಲ್‌ಗಳನ್ನು ತಲೆಕೆಳಗೆ ಮಾಡಿ ಹಿಡಿದು, ಅತಿ ಗಣ್ಯರಿಗೆ ಕೊನೆಯ ನಮನ ಕೊಡುವ ತರಬೇತಿಯನ್ನು ಕೊಡಲಾಯಿತು.

ಜನವರಿ ಹದಿಮೂರನೇ ತಾರೀಕು ಬೆಳಗ್ಗೆ ಎಂಟಕ್ಕೆಲ್ಲಾ ನಮ್ಮನ್ನು ರಾಜ್‌ಪಥದಲ್ಲಿ ಸಾಲಾಗಿ ನಿಲ್ಲಿಸಲಾಯಿತು. ಗನ್ ಕ್ಯಾರೇಜ್ ಮೇಲೆ ತ್ರಿವರ್ಣಧ್ವಜ ಹೊದೆಸಿ ಬಂದ ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳ ಪಾರ್ಥಿವ ಶರೀರಕ್ಕೆ ನಮ್ಮ ರೈಫಲ್‌ಗಳನ್ನು ಉಲ್ಟಾ ಹಿಡಿದು, ನಾವೆಲ್ಲರೂ ಶಿರಬಾಗಿ ಅಂತಿಮ ನಮನ ಸಲ್ಲಿಸಿದೆವು.

ಅವರ ಅಂತ್ಯಕ್ರಿಯೆಗೆ ಬಂದ ಎಲ್ಲಾ ಗಣ್ಯರನ್ನು ನಾವು ಹತ್ತಿರದಿಂದ ನೋಡಿದೆವು. ಭಾರತದ ಕೊನೆಯ ವೈಸರಾಯ್ ಮತ್ತು ಬ್ರಿಟನ್‌ನ ಫಸ್ಟ್ ಸೀ ಲಾರ್ಡ್ ಆಗಿದ್ದ ಅಡ್ಮಿರಲ್ ಲೂಯೀ ಮೌಂಟ್‌ಬ್ಯಾಟನ್ ಅವರನ್ನು ಬಹಳ ಹತ್ತಿರದಿಂದ ನೋಡಿದ ನೆನಪು ಇನ್ನೂ ನನ್ನ ಮನದಲ್ಲಿ ಹಸಿಯಾಗಿದೆ.

ಜನವರಿ ಇಪ್ಪತ್ತಾರರಂದು ಆಗಿನ ನಮ್ಮ ರಾಷ್ಟ್ರಪತಿ ಸರ್ ಡಾ.ಎಸ್.ರಾಧಾಕೃಷ್ಣನ್  ವಂದನೆ ಸ್ವೀಕರಿಸಿದರು. ಆದಿನ ನಾವು ಬಹು ಹುಮ್ಮಸ್ಸಿನಿಂದ ಮಾರ್ಚ್ ಮಾಡಿದೆವು. ಆದಿನ ನಾವು ಹೊತ್ತಿದ್ದ ರೈಫಲ್‌ಗಳ ಭಾರ ಅಥವಾ ಕ್ರಮಿಸಿದ ದೂರ, ನಮ್ಮ ಗೋಷ್ಟಿಗೇ ಬರಲಿಲ್ಲ! ಲಕ್ಷಾಂತರ ಜನರು ನಮ್ಮ ಪೆರೇಡ್ ನೋಡುತ್ತಿದ್ದರು. ಸಾವಿರಾರು ಕ್ಯಾಮೆರಾಗಳು ನಮ್ಮ ಪಥಚಲನವನ್ನು ಚಿತ್ರೀಕರಿಸುತ್ತಿದ್ದುವು. ಈ ರಾಷ್ಟ್ರೀಯ ಪಥಚಲನೆಯಲ್ಲಿ ಭಾಗವಹಿಸಿದುದು ನಮ್ಮ ಜೀವನದ ಅವಿಸ್ಮರಣೀಯ ಅನುಭವ. ಪದ್ಧತಿ ಪ್ರಕಾರ, ಭಾರತದೇಶವನ್ನೇ ಪ್ರತಿನಿಧಿಸುತ್ತಿದ್ದ ನಮ್ಮ ಕ್ಯಾಂಪಿನ ಯುವಕ ಯುವತಿಯರಿಗೆ ರಾಷ್ಟ್ರಪತಿ ಡಾ.ಸರ್.ಎಸ್.ರಾಧಾಕೃಷ್ಣನ್ ಅವರು ರಾಷ್ಟ್ರಪತಿ ಭವನದ ಮೊಘಲ್‌ಗಾರ್ಡನ್‌ನಲ್ಲಿ ಟೀ ಪಾರ್ಟಿ ಕೊಟ್ಟರು. ಈ ಚಹಾಕೂಟದಲ್ಲಿ ಭಾಗವಹಿಸಿದ ನೆನಪು ನನ್ನ ಮನದಲ್ಲಿ ಅಚ್ಚಳಿಯದೇ ನಿಂತಿದೆ.

ಹೊಸದಾಗಿ ದೇಶದ ಪ್ರಧಾನಿ ಪಟ್ಟ ಸ್ವೀಕರಿಸಿದ ಶ್ರೀಮತಿ ಇಂದಿರಾಗಾಂಧಿಯವರಿಗೆ ಮೊದಲ ಸಮ್ಮಾನ್ ಗಾರ್ಡ್ (Ceremonial Gaurd of Honour) ಕೊಟ್ಟ ಹಿರಿಮೆ ನಮ್ಮದಾಗಿತ್ತು. Beating the Retreat ಸಮಾರಂಭದೊಡನೆ ನಮ್ಮ ದೆಹಲಿ ಕ್ಯಾಂಪ್ ಕೊನೆಗೊಂಡಿತು.

ನಾನು ಮೇಲಿನ ವಿಚಾರ ಯಾಕೆ ಬರೆದೆನೆಂದರೆ, ಶ್ರೀ ಲಾಲ್‌ಬಹದ್ದೂರರಿಂದ ಪ್ರಭಾವಿತನಾದ ನಾನು ಯುದ್ಧ ಮುಗಿದು ಶಾಂತಿ ನೆಲಸಿದ ನಂತರ ಅವರ ಜೈ ಕಿಸಾನ್ ಕರೆಗೆ ಓಗೊಟ್ಟು ರೈತನಾದೆ. ಪ್ರತೀ ಅಗುಳು ಅನ್ನದ ಹಿಂದಿರುವ ರೈತನ ನಿರಂತರ ಕಷ್ಟದ ಅರಿವು, ರೈತ ವೃತ್ತಿ ಅವಲಂಬಿಸಿದ ನಂತರ ನನಗೆ ಗೋಚರವಾಯಿತು. ನನ್ನ ಜೀವಮಾನದಲ್ಲಿ ಬೇಸಾಯದ ಕೆಲಸ ಬಿಟ್ಟು, ನಾನು ಬೇರೆ ಯಾವ ಕೆಲಸವನ್ನೂ ಮಾಡಿಲ್ಲ.

೧೯೬೯ನೇ ಇಸವಿಯಲ್ಲಿ ನಾನು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೆರೆ ಎಂಬ ಗ್ರಾಮದಲ್ಲಿನ ತುಂಗಭದ್ರಾ ಫಾರ್ಮ್ ಎಂಬ ಸಸ್ಯಕ್ಷೇತ್ರದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಸಿಂಧನೂರಿನಲ್ಲಿ ನನ್ನ ಪರಿಚಯಸ್ಥರಾದ ಶ್ರೀ ವಾಮನ ಆಚಾರ್ ಎಂಬವರು ಸಿಂಡಿಕೇಟ್ ಬ್ಯಾಂಕ್‌ನ ಸ್ಥಳೀಯ ಶಾಖೆಯ ಮ್ಯಾನೇಜರ್ ಆಗಿದ್ದರು. ನಾನು ಸಿಂಧನೂರಿಗೆ ಹೋದಾಗ ಅವರು ನನ್ನನ್ನು ಆಗಾಗ ಅವರ ಮನೆಗೆ ಚಹಾಪಾನಕ್ಕೆ ಆಹ್ವಾನಿಸುತ್ತಿದ್ದರು. ನಾನು ಕೂಡಾ ಆಗಾಗ ಅವರು ಮತ್ತು ಅವರ ಸಂಸಾರದವರನ್ನು ನಮ್ಮ ಫಾರ್ಮ್‌ಗೆ ಚಹಾಕೂಟಕ್ಕೆ ಆಹ್ವಾನಿಸುತ್ತಿದ್ದೆ.

ಒಂದುಸಾರಿ ಶ್ರೀ ವಾಮನ ಆಚಾರ್ ದಂಪತಿಗಳಿಗೆ ಜೋಳದ ರೊಟ್ಟಿ ತಿನ್ನುವ ಹಂಬಲವಾಯಿತು. ಅವರು ಅದುವರೆವಿಗೆ ಜೋಳದ ರೊಟ್ಟಿ ತಿಂದಿರಲಿಲ್ಲ. ಅವರು ನಮ್ಮ ದಕ್ಷಿಣಕನ್ನಡ ಜಿಲ್ಲೆಯವರು. ಅವರಿಗೆ ಗೋಧಿಯ ಚಪಾತಿ ಮತ್ತು ಅನ್ನ ರೂಢಿ. ಜೋಳದರೊಟ್ಟಿಯ ಸ್ಯಾಂಪಲ್ ನೋಡಲು ನನ್ನ ಫಾರ್ಮ್‌ಗೆ ಒಮ್ಮೆ ಊಟಕ್ಕೆ ಬಂದರು. ನನ್ನ ಅಡುಗೆಯ ಲಕ್‌ಪತಿ (ಅಂದರೆ ಲಂಬಾಣಿ ಭಾಷೆಯಲ್ಲಿ ಲಕ್ಷಾಧಿಪತಿ), ಅಂದು ತನಗೆ ತಿಳಿದಷ್ಟು ಮಟ್ಟಿಗೆ ಚೆನ್ನಾಗಿ ಅಡುಗೆ ಮಾಡಿದ್ದ. ಲಂಬಾಣಿಯಾದ ಆತ ಜೋಳದ ರೊಟ್ಟಿಯನ್ನು ಸ್ವಲ್ಪ ದಪ್ಪವಾಗೇ ತಟ್ಟುತ್ತಿದ್ದ. ಜೋಳದ ರೊಟ್ಟಿಯ ಜತೆಗೆ ಒಂದು ಎಣ್ಣೆಗಾಯಿ. (ಬದನೆಕಾಯಿ ಪಲ್ಯ). ಅನ್ನ,  ಹೀರೆಕಾಯಿ ಸಾಂಬಾರ್ ಎನ್ನುವ ಪದಾರ್ಥ ಮಾಡಿಟ್ಟಿದ್ದ. ತನಗೆ ತಿಳಿದ ಏಕಾ‌ಏಕಿ ಐಟಮ್ ಸಿಹಿತಿಂಡಿಯಾದ ಡಬಲ್ ರೋಟೀ ಕಾ ಮೀಠಾ (ಬ್ರೆಡ್‌ನ ಸಿಹಿ) ಮತ್ತು ಮೊಸರು ಇದ್ದುವು. ನೆಂಜಿಕೊಳ್ಳಲು ಪುಂಡಿಪಲ್ಲೆ ಸೊಪ್ಪಿನ ಚಟ್ನಿ (ಗೊಂಕೂರ ಚಟ್ನಿ) ಇತ್ತು. ಇವಿಷ್ಟೇ ಐಟಮ್‌ಗಳು. ನಾನೇನೋ ಅಭ್ಯಾಸಬಲದಿಂದ ಸರಿಯಾಗೇ ಉಂಡೆ. ವಾಮನ ಆಚಾರ್ ಕಷ್ಟಪಟ್ಟು ಒಂದು ರೊಟ್ಟಿ ತಿಂದರು. ಅವರ ಪತ್ನಿ ಶಾಂತಕ್ಕ ಅರ್ಧರೊಟ್ಟಿ ತಿಂದರು. ನನ್ನ ಬಾಣಸಿಗ ಲಕ್‌ಪತಿಯ ಅಡುಗೆಯ ಚಾತುರ್ಯ ನೋಡಿ ಶಾಂತಕ್ಕನಿಗೆ ಅಯ್ಯೋ! ಅನಿಸಿರಬೇಕು. ಪೆಜತ್ತಾಯರೇ, ಮುಂದಿನ ಶನಿವಾರ ಸಾಯಂಕಾಲ ನಮ್ಮ ಮನೆಗೆ ಊಟಕ್ಕೆ ಬನ್ನಿ! ಎಂದು ಆಮಂತ್ರಣವಿತ್ತರು.

ಮುಂದಿನ ಶನಿವಾರ ನಾನು ಶ್ರೀ ವಾಮನ ಆಚಾರ್ಯರ ಮನೆಗೆ ಸಾಯಂಕಾಲ ಏಳೂವರೆಗೆ ಊಟಕ್ಕೆ ಹಾಜರಾದೆ. ಅವರ ಮನೆ ಹೊಕ್ಕೊಡನೆ, ಶಾಂತಕ್ಕ ನನಗೆ ಮತ್ತು ವಾಮನ ಆಚಾರ್ಯರಿಗೆ ಹಣ್ಣಿನರಸ ಕುಡಿಯಲು ತಂದುಕೊಟ್ಟರು. ಸಾಯಂಕಾಲದ ಎಂಟೂವರೆಗೆ ಊಟ ತಯಾರಾಗುತ್ತೆ ಎಂದು ಹೇಳಿ ಆಕೆ ಅಡುಗೆಮನೆ ಸೇರಿದರು. ನಾನು ಮತ್ತು ಆಚಾರ್ಯರು ರೇಡಿಯೋ ವಾರ್ತೆಗಳನ್ನು ಕೇಳಿ ಲೋಕಾಭಿರಾಮ ಹರಟೆಯಲ್ಲಿ ತೊಡಗಿದೆವು. ಸರಿಯಾಗಿ ಎಂಟೂವರೆಗೆ ಶಾಂತಕ್ಕ ನಮ್ಮನ್ನು ಊಟಕ್ಕೆ ಕರೆದರು.

ಪೆಜತ್ತಾಯರೇ, ಇಂದು ಶನಿವಾರ ನನಗೆ ಒಪ್ಪತ್ತು. ಅಂದರೆ, ಇಂದು ಸಂಜೆ ನಾನು ಏನೂ ಆಹಾರ ಸೇವಿಸುವುದಿಲ್ಲ. ದಯವಿಟ್ಟು ಸಂಕೋಚವಿಲ್ಲದೆ ಊಟಮಾಡಿ. ಎಲ್ಲಾ ಐಟಮ್‌ಗಳನ್ನು ಟೇಬಲ್ ಮೇಲೆ ಜೋಡಿಸಿದ್ದೇನೆ. ನೀವು ಸ್ವಲ್ಪವೂ ಉಳಿಸದೆ, ನಾನು ಇಂದು ತಯಾರಿಸಿದ್ದನ್ನೆಲ್ಲಾ ಊಟಮಾಡಬೇಕು..! ಎಂದರು.

ನಾನು ಮತ್ತು ವಾಮನ ಆಚಾರ್ಯರು ಎದುರುಬದಿರಾಗಿ ಕುಳಿತೆವು. ನಾವೇ ಬಡಿಸಿಕೊಂಡು ನಿಧಾನವಾಗಿ ಊಟ ಮಾಡುವುದಾಗಿ ಶಾಂತಕ್ಕಗೆ ಹೇಳಿದೆವು. ಅವರು ಏನೋ ಕಸೂತಿ ಕೈಯ್ಯಲ್ಲಿ ಹಿಡಿದು ಹಾಲಿನಲ್ಲಿದ್ದ ರೇಡಿಯೋ ಬಳಿ ಕುಳಿತರು.

ಟೇಬಲ್ ಮೇಲೆ ಹತ್ತು ಹನ್ನೆರಡು ಘಮಘಮಿಸುವ ಮಿದು ಚಪಾತಿ, ಕೋಸುಂಬರಿ, ಎರಡು ತರಹದ ಪಲ್ಯ, ಸಾರು ಸಾಂಬಾರು, ಆಗಷ್ಟೇ ಗೋಡಂಬಿ ಮತ್ತು ದ್ರಾಕ್ಷಿ ಸುರಿದು ತಯಾರಿಸಿದ ಕೇಸರಿ ಭಾತು, ಮೊಸರು ಅನ್ನ ಮತ್ತು ಹಪ್ಪಳ ಸಂಡಿಗೆ ಇದ್ದುವು.

ಸಂಕೋಚವಿಲ್ಲದೇ ಊಟಮಾಡಿ, ಇಲ್ಲಿರುವುದನ್ನೇಲ್ಲಾ ನಾವಿಬ್ಬರೇ ಮುಗಿಸಬೇಕು. ನೀವು ಸರಿಯಾಗಿ ಊಟಮಾಡದಿದ್ದರೆ ನಿಮ್ಮ ಶಾಂತಕ್ಕನಿಗೆ ಬೇಸರವಾಗುತ್ತೆ..! ಎಂದು ಉಪಚರಿಸುತ್ತಾ ವಾಮನ ಆಚಾರ್ಯರು ಊಟಕ್ಕೆ ಶುರುಮಾಡಿದರು.

ನಮ್ಮ ಊಟ ಶುರುವಾಯಿತು. ವಾಮನ ಆಚಾರ್ಯರದು ಬಹಳ ಸೂಕ್ಷ್ಮದ ಊಟ. ಸ್ವಲ್ಪ ಕೂಸುಂಬರಿ, ಸ್ವಲ್ಪ ಪಲ್ಯ, ಎರಡೇ ಎರಡು ಚಪಾತಿ, ಸ್ವಲ್ಪ ಅನ್ನಸಾರು, ಸಾಂಬಾರ್ ಮತ್ತು ಸ್ವಲ್ಪವೇ ಕೇಸರಿಬಾತ್ ಮತ್ತು ಕೊನೆಗೆ ಸ್ವಲ್ಪ ಮೊಸರನ್ನ ಇವುಗಳಲ್ಲಿ ಅವರ ಊಟ ಮುಗಿಯಿತು. ನನಗೆ ಆ ದಿನ ಚೆನ್ನಾಗಿ ಹಸಿವಾಗಿತ್ತು. ಮಾತನಾಡುತ್ತಾ ನಾನು ಚಪಾತಿ ತಿನ್ನುತ್ತಿರಲು ಶ್ರೀ ವಾಮನ ಆಚಾರ್ಯರ ಊಟ ಮುಗಿದೇಬಿಟ್ಟಿತ್ತು.

ನೀವು ಸಂಕೋಚವಿಲ್ಲದೇ ನಿಧಾನವಾಗಿ ಊಟಮಾಡಿ ಎನ್ನುತ್ತಾ ನನ್ನ ಎದುರಿಗೆ ಮಾತನಾಡುತ್ತಾ ಕುಳಿತರು. ನನಗೆ ಆ ದಿನ ಹೊಟ್ಟೆಯೊಳಗೆ ಭೂತ ಹೊಕ್ಕಷ್ಟು ಹಸಿವೆ! ಹಲವಾರು ತಿಂಗಳು ನನ್ನ ಪಾಕಪ್ರವೀಣ, ಅನ್ನದಾತ, ಲಕ್ಷಾಧಿಪತಿ (=ಲಕ್‌ಪತಿ) ಮಾಡುತ್ತಿದ್ದ ದಪ್ಪದ ಜೋಳದ ರೊಟ್ಟಿ, ಬ್ಯಾಳಿ, ಕಾಯಿಪಲ್ಲೆ, ಮೊಸರು ತಿಂದು ಜೀವಧಾರಣೆ ಮಾಡಿದ್ದ ನಾನು, ಅಂದು ನನ್ನ ಹುಟ್ಟೂರಾದ ಉಡುಪಿ ಕಡೆಯ ಊಟ ಕಂಡಿದ್ದೆ. ಜಿಡ್ಡು ಕಟ್ಟಿದ್ದ ನನ್ನ ನಾಲಿಗೆಗೆ ಆಚಾರ್ಯರ ಮನೆ ಊಟ ಅಮೃತಸದೃಶವಾಗಿತ್ತು. ಅವರೇ ತಿಳಿಸಿದಂತೆ ನಾನು ಎಲ್ಲಾ ಖಾಲಿ ಮಾಡಬೇಕಾಗಿತ್ತು. ಯಾಕೆಂದರೆ, ಶಾಂತಕ್ಕನವರಿಗೆ ಆ ದಿನ ಒಪ್ಪೊತ್ತು! ನಾನು ನಿಸ್ಸಂಕೋಚವಾಗಿ ಊಟ ಶುರುಮಾಡಿದೆ.

ಮೊದಲು ಅಲ್ಲಿದ್ದ ಎಲ್ಲಾ ಚಪಾತಿ ಪಲ್ಯ ಮುಗಿಸಿದೆ. ಅನ್ನ ಸಾರು ಬಹಳ ರುಚಿಯಾಗಿತ್ತು,

ವಾಮನ ಆಚಾರ್ಯರು ಸ್ವಲ್ಪ ತುಪ್ಪ ಬಡಿಸಿ, ಕರಿದ ಎಲ್ಲಾ ಹಪ್ಪಳ ಮತ್ತು ಸಂಡಿಗೆ ನನ್ನ ತಟ್ಟೆಗೆ ಸುರಿದರು. ಅದರ ನಂತರ, ನಾನು ಅನ್ನಸಾಂಬಾರು ಖಾಲಿ ಮಾಡಿದೆ. ಶಾಂತಕ್ಕನಿಗೆ ಇಂದು ಒಪ್ಪೊತ್ತು, ಕೇಸರಿಭಾತ್ ಉಳಿಸಬಾರದು! ಎಂದು ಆಚಾರ್ಯರು ಹೇಳುತ್ತಾ ಕೇಸರಿಭಾತಿನ ಬೋಗುಣಿಯನ್ನೇ ನನ್ನ ತಟ್ಟೆಯ ಮೇಲೆ ಬೋರಲು ಹಿಡಿದರು. ಮಾತನಾಡುತ್ತ ನಿಧಾನವಾಗಿ ಅದನ್ನೆಲ್ಲಾ ಖಾಲಿ ಮಾಡಿದೆ. ಆಮೇಲೆ ಒಳ್ಳೆಯ ಮೊಸರು ಅನ್ನ ಮತ್ತು ಮಂಗಳೂರಿನ ಮಾವಿನಮಿಡಿಯ ಉಪ್ಪಿನಕಾಯಿ ಇತ್ತು. ಅನ್ನಮೊಸರೂ ಉಳಿಸಲಿಲ್ಲ. ಅಂತೂ, ಸುಮಾರು ಒಂಬತ್ತೂವರೆ ಗಂಟೆಯ ಹೊತ್ತಿಗೆ ಟೇಬಲ್ ಮೇಲಿನ ಪಾತ್ರೆಗಳೆಲ್ಲಾ ಖಾಲಿಯಾದುವು. ಊಟದ ನಂತರ ಶಾಂತಕ್ಕ ಒಳ್ಳೆಯ ರಸಬಾಳೆಹಣ್ಣು ತಂದು ಮುಂದಿಟ್ಟು ತಿನ್ನಲು ಒತ್ತಾಯಿಸಿದರು. ನನಗಾಗಲೇ ಹೊಟ್ಟೆ ತುಂಬಿದೆ ಎನ್ನುತ್ತಾ ಒಂದೇ ಒಂದು ಬಾಳೆಹಣ್ಣು ತಿಂದೆ. ಎಲೆ ಅಡಿಕೆ ಹಾಕಿಕೊಳ್ಳಿ ಅಂದರೆ ನನಗೆ ಅಭ್ಯಾಸ ಇಲ್ಲ ಎಂದು ನಿರಾಕರಿಸಿದೆ.

ಸ್ವಲ್ಪ ಹೊತ್ತು ಮಾತನಾಡುತ್ತಾ ಕಾಲ ಕಳೆದು ನನ್ನ ಅತಿಥೇಯರಿಗೆ ವಂದನೆ ಹೇಳಿ ಜೀಪು ಹತ್ತಿ ನನ್ನ ಫಾರ್ಮ್‌ಗೆ ಹಿಂದಿರುಗಿದೆ. ಮರುವರ್ಷ ವಾಮನ ಆಚಾರ್ಯರಿಗೆ ಬಳ್ಳಾರಿಗೆ ವರ್ಗವಾಯಿತು.

ನನಗೆ ೧೯೭೧ನೇ ಇಸವಿಯಲ್ಲಿ ಮದುವೆ ಆಯಿತು. ನಾನು ಕೂಡಾ ಜವಳಗೆರೆಯ  ಊರನ್ನು ಬಿಟ್ಟು ಬಾಳೆಹೊಳೆಯಲ್ಲಿ ನೆಲೆಸಿದೆ. ಅದೇವರ್ಷ ಪತ್ನಿಸಮೇತನಾಗಿ ನಮ್ಮ ಫಿಯಾಟ್ ಕಾರಿನಲ್ಲಿ ಆಂಧ್ರಪ್ರದೇಶದಲ್ಲಿ ಇರುವ ಮಂತ್ರಾಲಯ ಕ್ಷೇತ್ರಕ್ಕೆ ಹೊರಟೆವು. ಬಹಳ ದೂರದ ದಾರಿಯಾದ್ದರಿಂದ ಬಳ್ಳಾರಿಯ ಮೀನಾಕ್ಷಿಭವನ ಹೋಟೆಲ್‌ನಲ್ಲಿ ತಂಗಿದೆವು. ಮರುದಿನ ಸಿಂಡಿಕೇಟ್ ಬ್ಯಾಂಕಿಗೆ ಹೋಗಿ ವಾಮನ ಆಚಾರ್ಯರನ್ನು ಭೆಟ್ಟಿಯಾದೆ. ಆಚಾರ್ಯರು ಆದಿನ ಸಂಜೆಯ ಊಟಕ್ಕೆ ಅವರ ಮನೆಗೆ ಬರಲೇಬೇಕೆಂದು ನಮ್ಮನ್ನು ಒತ್ತಾಯಿಸಿದರು. ಶಾಂತಕ್ಕ ನಮ್ಮ ಹೋಟೆಲ್ ರೂಮಿಗೆ ಪುನಃ ಫೋನ್ ಮಾಡಿ, ಬಹು ಆದರದಿಂದ ನಮ್ಮನ್ನು ಊಟಕ್ಕೆ ಆಹ್ವಾನಿಸಿದರು. ಸಾಯಂಕಾಲ ವಾಮನ ಅಚಾರ್ಯರ ಮನೆಗೆ ನಾನು ಮತ್ತು ನನ್ನ ಪತ್ನಿ ಸರೋಜಮ್ಮ ಹೋದೆವು.

ನೀವು ಸಂಕೋಚವಿಲ್ಲದೆ ಹಿಂದಿನ ರೀತಿಯಲ್ಲೇ ಊಟಮಾಡಬೇಕು..! ಎಂದರು. ನನ್ನ ಸ್ವಂತ ಅಕ್ಕನಂತೆ ಇರುವ ನಿಮ್ಮ ಮನೆಯಲ್ಲಿ ನನಗೇನು ದಾಕ್ಷಿಣ್ಯವಿಲ್ಲ ಎನ್ನುತ್ತಾ ಕೈತೊಳೆದು ಊಟಕ್ಕೆ ಕುಳಿತರೆ.., ಎರಡು ಆನೆಗಳಿಗೆ ಸಾಕಾಗುವಷ್ಟು ಆಹಾರ ಟೇಬಲ್ ಮೇಲೆ ಕಂಡುಬಂತು..!!

ಶಾಂತಕ್ಕ ನಮಗೆ ಒತ್ತಾಯ ಮಾಡುತ್ತಾ, ಬಗೆಬಗೆಯ ಅಡುಗೆಗಳನ್ನು ಧಾರಾಳವಾಗಿ ಬಡಿಸತೊಡಗಿದರು. ನನಗೆ ಅವರು ಬಡಿಸುವ ರೀತಿ ನೋಡಿ ಹೆದರಿಕೆಯಾಯಿತು. ಪ್ರತಿಯೊಂದು ಪದಾರ್ಥವನ್ನೂ ಧಾರಾಳವಾಗಿ ನನ್ನ ಬಟ್ಟಲಿಗೆ ಸುರಿಯತೊಡಗಿದ್ದರು. ಆಗ ನನಗೆ ಅವರ ಸಿಂಧನೂರಿನ ಮನೆಯಲ್ಲಿ ಮಾಡಿದ ಊಟದ ನೆನಪಾಯಿತು..!

ಶಾಂತಕ್ಕಾ, ಹಿಂದಿನಂತೆ ಈಗ ಹೆಚ್ಚು ಊಟ ಮಾಡಲು ಆಗುತ್ತಿಲ್ಲ. ನೀವೂ ನಮ್ಮ ಜತೆಗೆ ಊಟಕ್ಕೆ ಕುಳಿತುಕೊಳ್ಳಿ. ನನಗೆ ಬೇಕಾದಷ್ಟನ್ನು ಬಡಿಸಿಕೊಂಡು ನಾನು ಸಂಕೋಚವಿಲ್ಲದೆ ಉಣ್ಣುವೆ ಎಂದು ಅವರನ್ನೂ ನಮ್ಮ ಜತೆಗೇ ಕೂರಿಸಿಕೊಂಡು ಊಟ ಮಾಡಿದೆವು.

ಊಟದ ಮಧ್ಯದಲ್ಲಿ ಶಾಂತಕ್ಕ ಪೆಜತ್ತಾಯರೇ..! ನೀವು ದಾಕ್ಷಿಣ್ಯ ಮಾಡಿಕೊಳ್ಳುತ್ತಿದ್ದೀರಿ, ಇಂದು ನೀವು ಸರಿಯಾಗಿ ಊಟಮಾಡುತ್ತಿಲ್ಲ ಎಂದು ಹೇಳುತ್ತಲೇ ಇದ್ದರು. ನಾನು ಅವರ ಮಾತನ್ನು ಅಲ್ಲಗಳೆಯುತ್ತಾ ಚೆನ್ನಾಗೇ ಊಟಮಾಡಿದೆ.

ಊಟದ ನಂತರ ಹಾಲಿನಲ್ಲಿ ಕುಳಿತು ಮಾತನಾಡುತ್ತಿದ್ದೆವು. ಆಗ ಶಾಂತಕ್ಕ ಬೇಸರದಿಂದ ಅದ್ಯಾಕೋ ಪೆಜತ್ತಾಯರು ಈ ದಿನ ಸರಿಯಾಗಿ ಊಟಮಾಡಿಲ್ಲ..! ಎಲ್ಲಾ ಪದಾರ್ಥಗಳು ಹಾಗೆಯೇ ಉಳಿದಿವೆ! ಹಿಂದೆ ನೀವು ಸಿಂಧನೂರಿನಲ್ಲಿ ಊಟಮಾಡಿದ ರೀತಿಯಲ್ಲಿ ಊಟ ಮಾಡುವಿರೆಂದು, ಕಷ್ಟಪಟ್ಟು ಬಗೆಬಗೆಯ ಅಡುಗೆ ತಯಾರಿಸಿದರೆ, ನೀವು ಈ ದಿನ ಸರಿಯಾಗಿ ಊಟ ಮಾಡಲೇ ಇಲ್ಲ..!! ಎಂದು ಹೇಳಿದರು. ಆಗ ವಾಮನ ಆಚಾರ್ಯರು ನಗುತ್ತಾ ಅವಳು ನಿಮ್ಮ ಸಿಂಧನೂರಿನ ಊಟ ಮರೆತಿಲ್ಲ. ಅವಳು ಶನಿವಾರದ ಒಪ್ಪೊತ್ತು ಎಂದರೆ, ಸ್ವಲ್ಪ ಫಲಹಾರ ಮಾಡುತ್ತಿದ್ದಳು. ಅಂದರೆ ಅಕ್ಕಿಯ ಪದಾರ್ಥ ತಿನ್ನುತ್ತಿರಲಿಲ್ಲ. ಅಂದು ನೀವು ನಮ್ಮ ಮನೆಯಲ್ಲಿ ಊಟಮಾಡಿ ಖಾಲಿ ಪಾತ್ರೆ ಮಾತ್ರ ಉಳಿಸಿದ್ದಿರಿ. ನೀವು ಊಟ ಮಾಡಿದ ರೀತಿ ನೋಡಿ ನಿಮ್ಮ ಶಾಂತಕ್ಕಗೆ ಬಹಳ ಸಂತೋಷವಾಗಿತ್ತು. ಆದಿನ ಅವಳ ಶನಿವಾರದ ಒಪ್ಪೊತ್ತಿಗೆ ಬರೇ ಬಾಳೆಹಣ್ಣು ಮತ್ತು ಸ್ವಲ್ಪ ಹಾಲು ಮಾತ್ರ ಉಳಿದಿತ್ತು..!, ಅದೇ ನೆನಪಿನಲ್ಲಿ, ಈ ದಿನ ಒಬ್ಬ ಬಕಾಸುರನಿಗೆ ಆಗುವಷ್ಟು ಊಟ ತಯಾರಿಸಿ, ಖಾಲಿಯಾಗಲಿಲ್ಲ ಎಂದು ಬೇಸರಪಡುತ್ತಿದ್ದಾಳೆ…!! ಎಂದರು.

ಆಗ ನನಗೆ ನನ್ನ ಜವಳಗೆರೆಯ ಪರಿಸ್ಥಿತಿ ನೆನಪಾಯಿತು. ತಿಂಗಳುಗಟ್ಟಳೆ ಜವಳಗೆರೆಯಲ್ಲಿ ಮನೆಯ ಊಟ ಕಾಣದೆ ಚಡಪಡಿಸುತ್ತಿದ್ದು, ಒಳ್ಳೆಯ ಊಟ ಕಂಡಾಗ ಮರುಭೂಮಿಯಲ್ಲಿ ನೀರುಕಂಡ ಪಯಣಿಗನಂತೆ, ನಾನು ಅಂದು ಮಾಡಿದ ಬಕಾಸುರನ ಊಟದ ನೆನಪಾಯಿತು..!!.

ಆ ನಂತರ ಸಮಾಧಾನವಾಗಿ ಶಾಂತಕ್ಕಾ, ನಿಜವಾಗಿಯೂ ನನಗೆ ಆ ತರಹ ಊಟ ಮಾಡಲು ಇಂದು ಸಾಧ್ಯವಾಗುತ್ತಿಲ್ಲ. ಕಾರಣ, ನನ್ನ ಪತ್ನಿ ಸರೋಜಳು, ನನ್ನ ಅಡುಗೆಯ ಹುಡುಗ ಲಕ್‌ಪತಿಗಿಂತ ಚೆನ್ನಾಗಿ ಅಡುಗೆ ಮಾಡುತ್ತಿದ್ದಾಳೆ. ಸಿಂಧನೂರಿನ ತಮ್ಮ ಮನೆಯಲ್ಲಿ ‘ಹಲವು ತಿಂಗಳ ಅನ್ನದಾಹ ನಾನು ತೀರಿಸಿಕೊಂಡಿದ್ದೆ. ಇಂದು ‘ಈ ಹೊತ್ತಿನ ಅನ್ನದಾಹ ತೀರಿಸಿಕೊಳ್ಳುವಂತೆ ಊಟಮಾಡಿದೆ. ದಯವಿಟ್ಟು ಬೇಸರ ಮಾಡಬೇಡಿರಿ ಎಂದು ಕ್ಷಮೆ ಬೇಡಿದೆ.

ಅದಕ್ಕೆ ಶಾಂತಕ್ಕ ಪೆಜತ್ತಾಯರೇ, ನೀವು ಆ ದಿನ ಪಾತ್ರೆಗಳನ್ನು ಖಾಲಿ ಮಾಡಿದ ರೀತಿ ನೋಡಿ, ನಮ್ಮ ಮನೆಯಲ್ಲಿ ಅರೆಹೊಟ್ಟೆ ಊಟ ಮಾಡಿಹೋದಿರೋ? ಎಂದೆನ್ನಿಸಿತು ಎಂದರು. ಇಲ್ಲ. ಶಾಂತಕ್ಕಾ..!! ನಾನು ಆದಿನ ಹೊಟ್ಟೆ ಭರ್ತಿ ಊಟ ಮಾಡಿದ್ದೆ, ಅದಕ್ಕೆ ಸಾಕ್ಷಿಯಾಗಿ, ನಿಮ್ಮ ಮನೆಯಲ್ಲಿ ಕೆಲವು ಬಾಳೆಹಣ್ಣುಗಳನ್ನು ಉಳಿಸಿದ್ದೆ ಎಂದೆ. ಆಗ ಶಾಂತಕ್ಕನ ಸಂಶಯ ನಿವಾರಣೆಯಾದಂತೆ ಕಂಡಿತು. ಅವರು ನಿರಾಳವಾಗಿ ಸಂತೋಷದಿಂದ ನಕ್ಕರು.

ನಾವು ಆ ರಾತ್ರಿ ಅವರಿಗೆ ಅನ್ನದಾತೋ ಸುಖೀಭವ ಎಂದು ನಮಸ್ಕರಿಸಿ ಅವರಿಂದ ಬೀಳ್ಕೊಂಡೆವು. ಈಗಲೂ ಒಪ್ಪೊತ್ತು ಅಂದರೆ ನನಗೆ ಶಾಂತಕ್ಕನ ನೆನಪು ಬರುತ್ತದೆ.

* * *