೧೯೬೯ನೇ ಇಸವಿಯಲ್ಲಿ ನಾನು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೆರೆ ಎಂಬ ಗ್ರಾಮದಲ್ಲಿನ ತುಂಗಭದ್ರಾ ಫಾರಂ ಎಂಬ ಸಸ್ಯಕ್ಷೇತ್ರದ ಮ್ಯಾನೇಜರನಾಗಿ ಕೆಲಸಮಾಡುತ್ತಿದ್ದೆ.

ಜವಳಗೆರೆ ಎಂಬ ಚಿಕ್ಕಹಳ್ಳಿಯು ನಮ್ಮ ಫಾರಂನಿಂದ ೩ ಕಿ.ಮೀ.ದೂರದಲ್ಲಿತ್ತು. ಸಿಂಧನೂರು ಎಂಬ ತಾಲೂಕು ಕೇಂದ್ರದ ಪಟ್ಟಣ ೧೫ ಕಿ.ಮೀ. ದೂರದಲ್ಲಿತ್ತು. ಸಿಂಧನೂರಿಗೆ ನಮ್ಮ ಮನೆವಾರ್ತೆಯ ಅಗತ್ಯಗಳಿಗಾಗಿ ಮತ್ತು ನಮ್ಮ ಸಸ್ಯಕ್ಷೇತ್ರಕ್ಕೆ ಬೇಕಾದ ಪರಿಕರಗಳನ್ನು ಖರೀದಿಸಲು ಮತ್ತು ಬ್ಯಾಂಕ್ ಸೌಲಭ್ಯಕ್ಕಾಗಿ, ವಾರಕ್ಕೊಮ್ಮೆಯಾದರೂ ನಾನು ಹೋಗಲೇಬೇಕಾಗಿತ್ತು.

ಒಮ್ಮೆ, ನಾನು ಸಿಂಧನೂರಿನ ಬ್ಯಾಂಕಿನ ಹತ್ತಿರ ಜೀಪಿನಿಂದ ಇಳಿಯುತ್ತಿದ್ದಂತೆಯೇ ದೈತ್ಯಾಕಾರದ ಸಾಧುವೇಷದ ವ್ಯಕ್ತಿಯೊಬ್ಬ ಓ! ಮಂಗಳೂರ್ ಕೇ ಆದ್ಮಿ! ಇದರ್ ಆವೋ! ಎಂದು ನನ್ನನ್ನು ಸಂಬೋಧಿಸಿ ಕರೆದ.

ಆತನ ರೂಪ ಮತ್ತು ಆಕಾರ ಮರೆಯಲಾರದಂತೆ ಇತ್ತು. ಕಡಿಮೆ ಪಕ್ಷ ಆರೂವರೆ ಅಡಿ ಎತ್ತರವಿದ್ದು ಸಾಧುವಿನಂತೆ ಜಟಾಜೂಟ ಹೊಂದಿದ್ದ. ಆತನ ತೂಕ ಸುಮಾರು ೧೫೦ ಕಿಲೋಗ್ರಾಮುಗಳ ಮೇಲೆಯೇ ಇರಬಹುದು. ಆ ದೈತ್ಯಾಕಾರದ ದೇಹವುಳ್ಳ ಬೈರಾಗಿಯು ಆರೋಗ್ಯಸೂಸುವ ದೇಹ ಹೊಂದಿದ್ದು, ಮೂವತ್ತುವರ್ಷ ಪ್ರಾಯದ ಒಳಗಿನವರಂತೆ ಕಾಣುತ್ತಿದ್ದ. ಆತ ಕಷಾಯವಸ್ತ್ರವನ್ನು ಅಡ್ಡಪಂಚೆಯಂತೆ ಉಟ್ಟು, ಕಷಾಯಬಣ್ಣದ ಸಾದಾ ಅರ್ಧತೋಳಿನ ಅಂಗಿ ಧರಿಸಿದ್ದ. ಬಗಲಲ್ಲಿ ಒಂದು ಕಾವೀ ಬಣ್ಣದ ಹೆಗಲು ಚೀಲ ಇತ್ತು. ಆತ ಬರೇ ಕಾಲಿನಲ್ಲಿ ನಡೆಯುತ್ತಿದ್ದ. ಹಣೆಯಲ್ಲಿ ವಿಭೂತಿ ಧರಿಸಿ, ನೊಸಲಿನ ಮಧ್ಯೆ ದೊಡ್ಡದಾದ ಕುಂಕುಮದ ಬೊಟ್ಟು ಧರಿಸಿದ್ದ. ಆತನ ಹೊಳೆಯುವ ಕಣ್ಣುಗಳಲ್ಲಿ ಯಾವುದೋ ಒಂದು ಕೆಟ್ಟಭಾವದ ಆಕರ್ಷಣೆ ಎದ್ದು ಕಾಣುತ್ತಿತ್ತು. ಆತನ ಕೈಯ್ಯಲ್ಲಿ ಸುಮಾರು ಎರಡಡಿ ಉದ್ದದ ಒಂದು ಬೆಳ್ಳಿಯ ತ್ರಿಶೂಲ ಇತ್ತು. ಹೊಳೆಯುತ್ತಿದ್ದ ಆ ತ್ರಿಶೂಲಕ್ಕೆ ಆತನು ಕುಂಕುಮ, ಶ್ರೀಗಂಧ ಮತ್ತು  ಭಸ್ಮ ಹಚ್ಚಿ ತನ್ನ ಕೈಯಲ್ಲಿ ಹಿಡಿದಿದ್ದ. ನೀಳವಾದ ತನ್ನ ಕೂದಲನ್ನು ನೆತ್ತಿಯ ಮೇಲೆ ಗಂಟು ಹಾಕಿಕೊಂಡಿದ್ದ. ಆತನ ಕೊರಳಲ್ಲಿ ದೊಡ್ಡ ಗಾತ್ರದ ರುದ್ರಾಕ್ಷಿಗಳ ಮಾಲೆ ಇತ್ತು. ಆತನ ವಿಚಿತ್ರ ರೂಪವನ್ನು ಒಮ್ಮೆ ನೋಡಿದವರು ಮರೆಯಲು ಸಾಧ್ಯವೇ ಇರಲಿಲ್ಲ. ಅಂತಹ ದೈತ್ಯ ಆಕಾರ.

ಆದರೆ, ಆತನ ಮುಖದಲ್ಲಿ ಒಬ್ಬ ಸನ್ಯಾಸಿಗೆ ಇರಬೇಕಾದ ಸಾತ್ವಿಕ ಕಳೆ ಮಾತ್ರ ಇರಲಿಲ್ಲ. ಸ್ವಾರ್ಥ ತುಂಬಿದ ಪ್ರಕಾಶಮಾನವಾದ ಆತನ ಕಣ್ಣುಗಳಲ್ಲಿ ಈರ್ಷೆಯೇ ಮನೆಮಾಡಿತ್ತು.  ಆತನು ನನ್ನನ್ನು ಸಂಬೋಧಿಸಿ ಕರೆಯುತ್ತಿದ್ದರೂ, ನಾನು ಆತನನ್ನು ಗಮನಿಸದೇ ಬ್ಯಾಂಕಿಗೆ ಹೋದೆ. ನನಗೆ ಈ ತರಹದ ಭೈರಾಗಿಗಳಲ್ಲಿ ನಂಬಿಕೆ ಇಲ್ಲ. ಮುಗ್ಧ ಜನರನ್ನು ನಂಬಿಸಿ, ಅವರನ್ನು ಸುಲಿಗೆ ಮಾಡುತ್ತಾರೆ…! ಎಂಬ ಕಾರಣಕ್ಕೆ ನನಗೆ ಅಂತಹವರ ಮೇಲೆ ಜಿಗುಪ್ಸೆ.                    ಬ್ಯಾಂಕಿನಿಂದ ಹಿಂದಿರುಗುವಾಗ ಆತ ಅಲ್ಲೆಲ್ಲೂ ಕಾಣಲಿಲ್ಲ. ಸದ್ಯಕ್ಕೆ ಅವನ ಕಾಟ ತಪ್ಪಿತು ಎಂದು ಸಮಾಧಾನಪಟ್ಟುಕೊಂಡೆ.

ಅಂದು ಶನಿವಾರ. ಆದುದರಿಂದ ಬ್ಯಾಂಕಿನಿಂದ ಹಿಂದಿರುಗಿ ಬಂದವನೇ, ಆಳುಗಳ ವಾರದ ಬಟವಾಡೆ ಮುಗಿಸಿದೆ. ಬ್ಯಾಂಕಿನಿಂದ ತಂದ ಎರಡು ಸಾವಿರದಲ್ಲಿ ಕೇವಲ ಮೂವತ್ತು ರೂಪಾಯಿ ಶಿಲ್ಕು ಉಳಿಯಿತು. ಅದನ್ನು ಭದ್ರವಾಗಿ ಆಫೀಸಿನ ಆಲ್ಮೆರಾದಲ್ಲಿ ಇರಿಸಿ ಲಾಕ್ ಮಾಡಿದೆ. ನಾಲ್ಕು ಗಂಟೆಗೆ ನಾನು ಸಂಜೆಯ ಚಹಾ ಕುಡಿಯುತ್ತಾ ನನ್ನ ಆಫೀಸಿನಲ್ಲಿ ಕುಳಿತಿದ್ದೆ. ನಮ್ಮ ಫಾರ್ಮಿನ ಕಾವಲು ನಾಯಿ ಹೆದರುತ್ತಾ ಅರಚಿಕೊಂಡು ಓಡಿದ ಶಬ್ದವಾಯಿತು. ನಾಯಿ ಯಾಕೆ ಹೆದರಿ ಓಡಿತು? ಎಂದು ಆಲೋಚಿಸಿ ಏನಾಯಿತೆಂದು ನೋಡಲು ಕುರ್ಚಿಯಿಂದ ಎದ್ದೆ.

ಜೈ… ಭೋಲಾನಾಥ್..! ಜೈ ಶಿವಶಂಕರ್..! ಎಂದು ಗಟ್ಟಿಯಾಗಿ ಕೂಗುತ್ತಾ ನಾನು ಆ ಮಧ್ಯಾಹ್ನ ನೋಡಿದ ಭೈರಾಗಿ ನನ್ನ ಆಫೀಸ್ ಪ್ರವೇಶಿಸಿದ. ಆರು ಅಡಿ ಎತ್ತರದ ಬಾಗಿಲಿನೊಳಗೆ ಆತ ತಲೆ ಬಗ್ಗಿ ಪ್ರವೇಶಿಸಿ ಬಂದು, ನನ್ನ ಮೇಜಿನ ಎದುರು ಇದ್ದ ಕಬ್ಬಿಣದ ಕುರ್ಚಿಯ ಮೇಲೆ ಕುಳಿತೇಬಿಟ್ಟ. ಆತನ ಭಾರಕ್ಕೆ ಕುರ್ಚಿ ಕಿರ್ರೆಂದು ಸದ್ದು ಮಾಡಿತು.

ಆತ ನನ್ನನ್ನು ನೋಡುತ್ತಾ ಅರೇ ಬಾಲಕ್, ಏಕ್ ಕಪ್ ಚಾಯ್ ಹೋ ಜಾಯೇ ಎಂದ. ಆತನ ಸ್ವರ ಕೇಳಿದ ನನ್ನ ಅಡುಗೆಯ ಲಂಬಾಣಿ ಹುಡುಗ ಲಕ್‌ಪತಿ ಧಾವಿಸಿಬಂದ. ಸನ್ಯಾಸಿಯ ವಿಚಿತ್ರ ರೂಪವನ್ನು ಕಂಡೊಡನೆಯೇ, ಆತ ಹೆದರಿ ಗಡಗಡ ನಡುಗಹತ್ತಿದ. ನಾನು ಲಕ್‌ಪತೀ ಹೆದರಬೇಡ, ಹೋಗಿ, ಈ ಸನ್ಯಾಸಿಗಳಿಗೆ ಒಂದು ಕಪ್ ಚಾ ಮಾಡಿ ತಾ! ಎಂದು ಹೇಳಿದೆ. ಅಷ್ಟೇ ಕಾರಣ ಸಾಕು ಎಂಬಂತೆ ಲಕ್‌ಪತಿ ಜಾಗ ಖಾಲಿಮಾಡಿದ.

ಭೈರಾಗಿಯು ಬಾಲಕ್, ನನ್ನ ಕರೆಗೆ ಓ ಎನ್ನದೆ ನೀನು ಯಾಕೆ ಇಂದು ಬ್ಯಾಂಕಿನೊಳಗೆ ಹೋದೆ? ಈಗ ನಾನೇ ನಿನ್ನಲ್ಲಿಗೆ ಬಂದಿದ್ದೇನೆ. ನಾನು ಯಾಕೆ ನಿನ್ನನ್ನು ಹುಡುಕಿಕೊಂಡು ಬಂದೆ ಗೊತ್ತೇ? ಎಂದು ದಕ್ಷಿಣ ಭಾರತೀಯ ಧಾಟಿಯ ಹಿಂದಿಭಾಷೆಯಲ್ಲಿ ಮಾತನಾಡಿದ. ನಾನು ಗೊತ್ತಿಲ್ಲ ಎಂದೆ. ಬಾಲಕನೇ ಕೇಳು, ನಿನ್ನ ಬೆನ್ನಿನ ಹಿಂದೆಯೇ ಬೆನ್ನಟ್ಟಿ ಬರುತ್ತಿರುವ ಅಕಾಲಮೃತ್ಯುವನ್ನು ಈ ನನ್ನ ದಿವ್ಯದೃಷ್ಟಿಯಿಂದ ಕಂಡೆ. ಅದನ್ನು ನಿವಾರಿಸುವ ಉಪಾಯ ತಿಳಿಸೋಣವೆಂದರೆ, ನೀನು ನುಣುಚಿಕೊಂಡೆ. ಈಗ ಆ ಭೋಲಾನಾಥನ ದಯೆಯಿಂದ ನಾನಾಗಿಯೇ ನಿನ್ನನ್ನು ಹುಡುಕಿಕೊಂಡು ಬಂದಿದ್ದೇನೆ. ಇದು ನಿನ್ನ ಸೌಭಾಗ್ಯವೆಂದು ತಿಳಿಎಂದ.

ಅದಕ್ಕೆ ನಾನು, ಮನುಷ್ಯನನ್ನು ಹುಟ್ಟಿದ ದಿನದಿಂದಲೇ ಮೃತ್ಯು ನೆರಳಾಗಿ ಹಿಂಬಾಲಿಸುತ್ತಿದೆ. ಅದಕ್ಕೆ ಹೆದರಿ ಫಲವೇನು? ಎಂದೆ. ಅಷ್ಟರಲ್ಲಿ ಲಕ್‌ಪತಿ ಬಿಸಿ ಚಾ ಮಾಡಿಕೊಂಡು ಬಂದ. ಭೈರಾಗಿ ಚಾವನ್ನು ಬಸಿಯಲ್ಲಿ ಸುರಿದು ಸೊರ್ರನೆ ಶಬ್ದಮಾಡುತ್ತಾ ಕುಡಿದ ಮತ್ತು ನನ್ನ ಸಿಗರೇಟು ಪ್ಯಾಕಿಗೆ ಸೀದ ಕೈಹಾಕಿದ. ಎರಡು ಸಿಗರೇಟುಗಳನ್ನು ಒಮ್ಮೆಗೇ ಹಚ್ಚಿ, ಎರಡನ್ನೂ ತನ್ನ ತೋರುಬೆರಳು ಮತ್ತು ಮಧ್ಯದ ಬೆರಳುಗಳ ಮಧ್ಯೆ ಇರಿಸಿ, ಭಂಗಿ ಸೇದುವ ಶೈಲಿಯಲ್ಲಿ, ನಾಲ್ಕೇ ನಾಲ್ಕು ನಿಡಿದಾದ ದಮ್ಮುಗಳಲ್ಲಿ ಆ ಸಿಗರೇಟುಗಳನ್ನು ಅತಿವೇಗದಲ್ಲಿ, ಸೇದಿ ಭಸ್ಮ ಮಾಡಿ ಮುಗಿಸಿದ..!! ನನಗೆ ಆತನ ಈ ತರಹದ ಸೇದುವಿಕೆ ಕಂಡು ಅತೀ ಆಶ್ಚರ್ಯವಾಯಿತು. ದೊಡ್ಡದಾಗಿ ಕಣ್ಣುಬಿಡುತ್ತಾ ಆತ ಈಗ ನಾನು ಏನಾದರೂ ಪರಿಹಾರ ಕ್ರಮ ಮಾಡದಿದ್ದರೆ, ನಿನಗೆ ಮರಣ ಕಂಡಿತಾ… ಎಂದು ಹೇಳಿದ…!! ನಾನು ಉತ್ತರ ಹೇಳದೆ ನಸುನಕ್ಕೆ.

ಕೈ ಹಿಡಿ ಎನ್ನುತ್ತಾ, ತನ್ನ ರುದ್ರಾಕ್ಷಿ ಜಪಮಾಲೆಯಯನ್ನು ಬಿಚ್ಚಿ, ಅದರ ಒಂದು ತುದಿಯನ್ನು ನನ್ನ ಅಂಗೈ ಮೇಲಿಟ್ಟ. ನನ್ನ ಕೈಯಲ್ಲಿ ಒಂದು ಚಮಚ ಆಗುವಷ್ಟು ಪರಿಮಳವಾದ ವಿಭೂತಿ ಬಿತ್ತು..!

ಇದು ಪಂಡರಾಪುರದ ವಿಠೋಬನ ಪ್ರಸಾದ, ಹಚ್ಚಿಕೋ ಎಂದ. ನಾನು ಸುಮ್ಮಗೆ ನನಗೆ ಸ್ನಾನವಾಗಿಲ್ಲ. ಆ ಮೇಲೆ ಹಚ್ಚಿಕೊಳ್ಳುವೆ ಎಂದು ಆ ಘಮಘಮಿಸುವ ಭಸ್ಮವನ್ನು ಒಂದು ಕಾಗದಕ್ಕೆ ಸುರಿದು ಬದಿಗೆ ಇಟ್ಟುಬಿಟ್ಟೆ. ಭೈರಾಗಿಯು ಪುನಃ ಕೈ ನೀಡು ಎನ್ನುತ್ತಾ ತನ್ನ ರುದ್ರಾಕ್ಷಿಮಾಲೆಯನ್ನು ಪುನಃ ನನ್ನ ಅಂಗೈಯಲ್ಲಿ ಇಟ್ಟ. ಪರಿಮಳಯುಕ್ತವಾದ ಒಂದು ಚಮಚವಾಗುವಷ್ಟು ನೀರು ನನ್ನ ಹಸ್ತದಲ್ಲಿ ಪ್ರತ್ಯಕ್ಷವಾಯಿತು!

ಇದು ಪಂಡರಾಪುರದ ವಿಠೋಬನ ತೀರ್ಥ, ಇದನ್ನು ಕುಡಿ ಎಂದು ಆಜ್ಞಾಪಿಸಿದ! ನಾನು ಆ ನೀರನ್ನು ಕುಡಿಯುವವನಂತೆ ನಟಿಸುತ್ತಾ, ಆ ನೀರನ್ನು ನನ್ನ ಮೊಣಕೈಯಿಂದ ಕೆಳಗೆ ಹರಿಯಬಿಡುತ್ತಾ, ಕುಡಿದಂತೆಯೇ ನಟಿಸಿದೆ. ತದನಂತರ, ಸನ್ಯಾಸಿ ವೇಷಧಾರಿಯು ಇನ್ನೊಂದು ಬಾರಿ ತನ್ನ ಜಪಮಾಲೆಯನ್ನು ನನ್ನ ಅಂಗೈಗೆ ಸೋಕಿಸಿದ. ಆಗಷ್ಟೇ ಕೊಯ್ದು ತಂದತಿದ್ದ ಮಂಗಳೂರು ಮಲ್ಲಿಗೆಯ ನಾಲ್ಕು ಹೂವುಗಳು ನನ್ನ ಕೈಯಲ್ಲಿ ಬಿದ್ದುವು. ಗಮನಿಸಿ ನೋಡಿದೆ. ಹೌದು…! ಮಂಗಳೂರು ಮಲ್ಲಿಗೆ ಹೂವೇ…! ಈ ಉರಿಬಿಸಿಲಿನ ರಾಯಚೂರು ಜಿಲ್ಲೆಗೆ ಮಂಗಳೂರಿನ ನವಪುಷ್ಪ ಬರಲು ಸಾಧ್ಯವೇ ಇಲ್ಲ….! ಹೇಗೆ ಬಂತೆಂದು ಅಚ್ಚರಿಪಟ್ಟೆ..! ಆಗ ಭೈರಾಗಿಯು ಈ ಹೂವನ್ನು ನಿನ್ನ ಆಫೀಸ್ ತಿಜೋರಿಯ ಒಳಗೆ ಇಡು ಎಂದು ಆಜ್ಞೆಮಾಡಿದ. ನಾನು ತಿಜೋರಿಯ ಬೀಗದಕೈಗಳನ್ನು ಕಳೆದವನಂತೆ ನಟಿಸುತ್ತಾ, ಆ ಹೂವುಗಳನ್ನು ಆಫೀಸ್ ಟೇಬಲ್ ಮೇಲಿರಿಸಿದೆ.

ನಿನಗೋಸ್ಕರ ಒಂದು ಪೂಜೆ ಮಾಡಲು ಸಾವಿರದ ಒಂದು ರೂಪಾಯಿ ನನ್ನ ಕೈಯಲ್ಲಿ ಮಡಗು….! ಎಂದು ಜೋರಾಗಿ ಹೇಳಿದ.

ಆಗ ನಾನು, ನನ್ನ ಕೈಯಲ್ಲಿ ಅಷ್ಟು ಹಣ ಇಲ್ಲ. ನಾವು ಇಲ್ಲಿ ಹಣ ಕೈಯಲ್ಲಿ ಇಟ್ಟುಕೊಳ್ಳುವುದಿಲ್ಲ. ಈಗ ನನ್ನಲ್ಲಿ ಇರುವಷ್ಟು ಹಣ ಕೊಡುತ್ತೇನೆ ಎನ್ನುತ್ತಾ ನನ್ನಲ್ಲಿದ್ದ ಹಣದ ಪರ್ಸ್ ತೋರಿಸಿದೆ. ಅದರಲ್ಲಿ ಬರೇ ಏಳು ರೂಪಾಯಿ ಇತ್ತು. ಒಂದು ರೂಪಾಯಿ ಉಳಿಸಿಕೊಂಡು, ಆರು ರೂಪಾಯಿ ಆತನ ಕೈಗಿಟ್ಟೆ. ಹಣ ಆತನ ಜೋಳಿಗೆ ಸೇರಿತು.

ಈಗ ಭೈರಾಗಿ ತನ್ನ ವರಸೆ ಬದಲಾಯಿಸಿದ. ಒಂದು ಬೆಳ್ಳಿಯ ಪಾತ್ರೆ ಕೊಡುಎಂದ. ನಾನು ಬ್ರಹ್ಮಚಾರಿಯಾದ ನನ್ನಲ್ಲಿ ಅಲ್ಯುಮಿನಿಯಮ್ ಪಾತ್ರೆ ಬಿಟ್ಟರೆ ಬೇರೆ ಪಾತ್ರೆ ಇಲ್ಲ ಎಂದು ನಗೆಯಾಡಿದೆ.

ಹಾಗಾದರೆ, ನಿನ್ನ ಹೊಸ ಕೋಟ್‌ವೊಂದನ್ನು ಕೊಡು ಎಂದ. ನಾನು ನಗುತ್ತ, ಈ ಸೆಖೆಯ ಊರಲ್ಲಿ ಕೋಟ್ ಯಾರು ಹಾಕುತ್ತಾರೆ? ನನ್ನಲ್ಲಿ ಇರುವುದೇ ನಾಲ್ಕು ಶರಟು ಅದರಲ್ಲಿ ಒಂದನ್ನು ನಿನಗೆ ಕೊಡುತ್ತೇನೆ ಎಂದು ಹಳೆಯದೊಂದು ಶರಟನ್ನು ಅವನಿಗೆ ಕೊಟ್ಟೆ. ಅದೂ ಅವನ ಜೋಳಿಗೆ ಸೇರಿತು.

ಅಷ್ಟರಲ್ಲಿ ನನ್ನ ಮುಸ್ಲಿಮ್ ಟ್ರಾಕ್ಟರ್ ಡ್ರೈವರ್ ರಾಜ್, ಸುಪರ್ವೈಸರ್‌ಗಳಾದ ತಿಪ್ಪಯ್ಯ ಮತ್ತು ವೀರಭದ್ರಗೌಡ ಇವರು ನನ್ನ ಆಫೀಸಿಗೆ ಬಂದರು.

ಡ್ರೈವರ್ ರಾಜ್ ಭೈರಾಗಿಗೆ, ಇನ್ನು ಹೊರಡಿ. ಸನ್ಯಾಸಿ ಮಹಾರಾಜ್..! ಇಲ್ಲಿ ಇದಕ್ಕಿಂತ ಹೆಚ್ಚಿಗೆ ಏನೂ ಸಿಗುವುದಿಲ್ಲ. ನಿಮ್ಮ ಹಗಲುದರೋಡೆಯ ಕೀರ್ತಿ ನಾನು ಕೇಳಿಬಲ್ಲೆ. ಇಂದು ಸಾಯಂಕಾಲ ಲಿಂಗಸಗೂರು ಸರ್ಕಲ್ ಇನ್ಸ್‌ಪೆಕ್ಟರ್ ಸಭಾಪತಿಶೆಟ್ಟಿಯವರು ನಮ್ಮ ಫಾರಂ ಮ್ಯಾನೇಜರ್ ಸಾಹೇಬರನ್ನು ರಾಯಚೂರಿನ ಕ್ಲಬ್ಬಿನ ಸಮಾರಂಭಕ್ಕೆ ಕರೆದುಕೊಂಡು ಹೋಗಲು ಬರುವ ಹೊತ್ತಾಯಿತು. ಇಲ್ಲಿ ನಿಂತರೆ ನಿಮಗೆ ಫಚೀತಿ..! ಎಂದು ‘ಖಡಕ್ ಆಗಿ ಹೇಳಿದ.

ಭೈರಾಗಿಯು, ಜೈ ಭೊಲಾನಾಥ್..! ಎನ್ನುತ್ತಾ ನನ್ನ ಆಫೀಸಿನಿಂದ ಹೊರಗೆ ನಡೆದು ರಸ್ತೆ ಗುಂಟ ಸಾಗಿದ.

ಸಾರ್! ನೀವು ಎಷ್ಟು ಹಣ ಆತನಿಗೆ ಸುರಿದಿರಿ? ಎಂದು ರಾಜ್ ಕೇಳಿದ. ಅದಕ್ಕೆ ನಾನು, ಆರು ರೂಪಾಯಿ ಮತ್ತು ಒಂದು ಹಳೇ ಶರಟು ಮಾತ್ರ ಎಂದೆ.

ಆಗ ಡ್ರೈವರ್ ರಾಜ್ ಸಾರ್! ತಮ್ಮ ದೋಸ್ತ್ ಸರ್ಕಲ್‌ಇನ್ಸ್‌ಪೆಕ್ಟರ್ ಸಭಾಪತಿಶೆಟ್ಟರು ಈತನನ್ನು ಲಿಂಗಸಗೂರಿನಿಂದ ಗಡೀಪಾರು ಮಾಡಿದ್ದಾರೆ! ಲಿಂಗಸಗೂರಿನಲ್ಲಿ ಈತ ಹಲವಾರು ಜನರಿಗೆ ಮಂಕುಬೂದಿ ಹಚ್ಚಿ, ಮಂತ್ರದ ನೀರು ಕುಡಿಸಿ, ಲಕ್ಷಾಂತರ ಹಣ ದೋಚಿದನಂತೆ! ಪೋಲಿಸಿನವರು ಪ್ರಶ್ನಿಸಲು ಜನರೆಲ್ಲರೂ ತನಗೆ ‘ಹಣ ದಾನಕೊಟ್ಟರು, ನಿಮಗೇನು? ಎಂದು ಕಾನೂನಿನ ಕೈಯಿಂದ ನುಣುಚಿಕೊಂಡನಂತೆ! ಕೊನೆಗೂ ಸರ್ಕಲ್‌ಇನಸ್ಪೆಕ್ಟರ್ ಸಭಾಪತಿಶೆಟ್ಟರು ಆತನನ್ನು ಹೆದರಿಸಿ, ಲಿಂಗಸಗೂರಿನ ಗಡಿ ದಾಟಿಸಿದರಂತೆ. ಈತನು ಭಯಂಕರ ಭೈರಾಗಿ ಎಂದು ಕುಪ್ರಸಿದ್ಧ ವ್ಯಕ್ತಿ. ಅದಕ್ಕೇ, ಆತನು ಸರ್ಕಲ್‌ಇನ್ಸ್‌ಪೆಕ್ಟರ್ ಸಭಾಪತಿಶೆಟ್ಟರ ಹೆಸರು ಕೇಳಿದೊಡನೆ ಜಾರಿಕೊಂಡ ಎಂದು ಹೇಳಿದ. ಆಂದಿಗೆ ಆ ಪ್ರಕರಣ ಮುಗಿಯಿತು.

ಮರುದಿನ ನಮ್ಮ ಪಕ್ಕದ ಫಾರಂ ಮ್ಯಾನೇಜರ್ ಸುಬ್ಬಾರಾಜು ನಮ್ಮಲ್ಲಿಗೆ ಪೆಚ್ಚುಮೋರೆ ಹಾಕಿಕೊಂಡು ಬಂದರು. ನಾನು ಟೀ ಕೊಟ್ಟು ಉಪಚರಿಸಿ, ಕುಶಲೋಪರಿ ಮಾತನಾಡಿದ ನಂತರ, ತಮ್ಮಲ್ಲಿ ನಡೆದ ಸಂಗತಿ ತಿಳಿಸಿದರು. ಹಿಂದಿನ ದಿನ ಭೈರಾಗಿಯೊಬ್ಬ ಬಂದು ಅವರ ಮನೆಯವರೆಲ್ಲರಿಗೂ ತನ್ನ ರುದ್ರಾಕ್ಷಿಯ ಜಪಮಾಲೆಯ ಮೂಲಕ ಪಂಡರಾಪುರದ ತೀರ್ಥಪ್ರಸಾದ ಕೊಟ್ಟು ನಂಬಿಕೆ ಹುಟ್ಟಿಸಿದನಂತೆ. ಈ ರೀತಿಯ ಮೋಡಿಮಾಡಿದ ಮೇಲೆ, ತಾವೆಲ್ಲರೂ ಮೂಢರಂತೆ ಮನೆಯಲ್ಲಿದ್ದ ಬೆಳ್ಳಿಬಂಗಾರ, ಹಣ ಎಲ್ಲವನ್ನೂ ಆತ ಕೇಳಿದ ಪ್ರಕಾರ ಒಪ್ಪಿಸಿದರಂತೆ! ಆಮೇಲೆ ಕೃತಾರ್ಥಭಾವನೆಯಿಂದ ಆತನ ಕಾಲಿಗೆ ಬಿದ್ದು ಬೀಳ್ಕೊಟ್ಟರಂತೆ! ಮರುದಿನ ವಿವೇಚನೆ ಮೂಡಿದಾಗ, ತಾವು ಹಿಂದಿನ ದಿನ ಆತನ ಮೋಡಿಗೊಳಗಾಗಿ ತಮ್ಮಲ್ಲಿದ್ದ ಬೆಲೆಬಾಳುವ ವಸ್ತುಗಳೆಲ್ಲವನ್ನೂ ಕೊಟ್ಟುದು ಅವರ ಅರಿವಿಗೆ ಬಂತಂತೆ…!!

ಈಗ ಏನು ಮಾಡೋಣ? ಎಂದು ಸುಬ್ಬಾರಾಜು ನನ್ನನ್ನು ಕೇಳಿದರು. ನಾನು ಅವರಿಗೆ ಪೋಲೀಸ್ ಕಂಪ್ಲೈಂಟ್ ಕೊಡಿರಿ ಎಂದು ಹೇಳಿದೆ. ಪೋಲಿಸ್ ಕಂಪ್ಲೈಂಟ್ ಕೊಟ್ಟರೂ, ಶ್ರೀ ಸುಬ್ಬಾರಾಜು ಅವರಿಗೆ ಏನೂ ಪ್ರಯೋಜನ ಆಗಲಿಲ್ಲ. ಭಯಂಕರ ಬೈರಾಗಿಯು ಬೇಕಷ್ಟು ಹಣ ಸಂಪಾದಿಸಿ ಬೇರೆ ಊರಿಗೆ ಹೊರಟು ಹೋಗಿದ್ದ…!!

* * *