ಚಿಕ್ಕಪ್ರಾಯದಿಂದಲೂ ನನಗೆ ರಾಯಲ್‌ಎನ್‌ಫೀಲ್ಡ್ ಬುಲೆಟ್ ಮೋಟರ್‌ಸೈಕಲಿನ ಆಕರ್ಷಣೆ. ನನ್ನ ದೃಷ್ಟಿಯಲ್ಲಿ ಅಮೆರಿಕಾದ ಹಾರ್ಲೇ ಡೇವಿಡ್ಸನ್ ಮೋಟರ್ ಸೈಕಲ್ ಹೊರತು ಪಡಿಸಿದರೆ, ರಾಯಲ್ ಎನ್‌ಫೀಲ್ಡ್ ಬುಲೆಟ್ ಮೋಟರ್‌ಸೈಕಲ್ಲೇ ಇಂದಿಗೂ ರಸ್ತೆಯ ರಾಜ. ಬುಲೆಟ್ ಮೋಟಾರ್‌ಸೈಕಲ್ ಹೊರಡಿಸುವ ಶಬ್ದಕ್ಕೆ ಮತ್ತು ಅದರ ಧಡೂತಿ ಆಕಾರಕ್ಕೆ ನಾನು ಚಿಕ್ಕಂದಿನಲ್ಲೇ ಮರುಳಾಗಿದ್ದೆ. ಬುಲೆಟ್ ಮೋಟಾರ್‌ಸೈಕಲ್ ಹೊಂದಿರುವ ಜನರೇ ನನಗೆ ನನ್ನ ಬಾಲ್ಯದ ಹೀರೋಗಳು. ಆಗ ಉಡುಪಿಯಂತಹಾ ಚಿಕ್ಕ ಊರಿನಲ್ಲಿ ಮೂರು ಅಥವಾ ನಾಲ್ಕು ಬುಲೆಟ್ ಮೋಟರ್‌ಸೈಕಲ್‌ಗಳು ಇದ್ದುವು.

ಮೆಡಿಕಲ್ ಓದಿ ಮಣಿಪಾಲದಲ್ಲಿ ಹೌಸ್ ಸರ್ಜನ್ ಕೋರ್ಸ್ ಮಾಡುತ್ತಾ ಇದ್ದ ಡಾ.ಪಣಿಯಾಡಿ ಎಂಬುವರು ಯಾವಾಗಲೂ ಬುಲೆಟ್ ಬೈಕ್‌ನಲ್ಲಿ ಓಡಾಡುತ್ತಿದ್ದರು. ಆರಡಿ ಎತ್ತರದ ಗೌರವರ್ಣದ ಆ ಡಾಕ್ಟರದು ಒಳ್ಳೆಯ ಪೈಲ್ವಾನ್ ತರಹೆಯ ಮೈಕಟ್ಟು. ಅವರು ಸದಾ ಬಿಳಿಬಣ್ಣದ ಡ್ರೆಸ್ ಧರಿಸುತ್ತಿದ್ದರು. ಅವರು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್‌ನ ಮೊದಲ ಬ್ಯಾಚ್‌ನ ವಿದ್ಯಾರ್ಥಿ, ಕಾಲೇಜ್ ಸೇರಿದ ದಿನಗಳಿಂದ ಅವರ ವಾಹನ ಬುಲೆಟ್ ಮೋಟರ್ ಸೈಕಲ್ ಆಗಿತ್ತು. ಡಾ.ಪಣಿಯಾಡಿ ಮುಂದಕ್ಕೆ ಬೆಂಗಳೂರಿನಲ್ಲಿ ನೆಲೆಸಿ ಒಳ್ಳೆಯ ವೈದ್ಯರೆಂದು ಖ್ಯಾತಿ ಪಡೆದರು. ಅವರ ಖಾಸಾ ವಾಹನ ಮಾತ್ರ ಅವರ ಮೆಚ್ಚಿನ ಬುಲೆಟ್ಟೇ ಆಗಿತ್ತು.

ಇನ್ನೊಬ್ಬ ಬುಲೆಟ್ ಹೊಂದಿದ ಮೆಡಿಕಲ್ ಸ್ಟೂಡೆಂಟ್ ಅಂದರೆ ಕಸ್ತೂರ್ಬಾ ಮೆಡಿಕಲ್ ಕಾಲೇಜ್‌ಹಾಸ್ಟೆಲಿನಲ್ಲಿ ವಾಸಿಸುತ್ತಿದ್ದ ಉತ್ತಮ ಫುಟ್‌ಬಾಲ್ ಆಟಗಾರ ಅಶೋಕ್ ನಾಯರ್ ಎಂಬ ಧಾಂಡಿಗ ಆಸಾಮಿ. ಆತನನ್ನು ಕಂಡರೆ ವಿದ್ಯಾರ್ಥಿಗಳು ಹೆದರುತ್ತಿದ್ದರು. ಸ್ವಭಾವತಃ ಅತನು ಒಳ್ಳೆಯವನಾಗಿದ್ದರೂ, ಅವನನ್ನು ಅನಾವಶ್ಯಕ ಕೆಣಕಿ ಯಾರಾದರೂ ಜಗಳ ತೆಗೆದ ಸಂದರ್ಭಗಳಲ್ಲಿ, ಅಂತಹಾ ನಾಲ್ಕಾರು ಜನರನ್ನು ಏಕಾಂಗಿಯಾಗಿ ಇದುರಿಸಿ ಹಣ್ಣುಗಾಯಿ ನೀರುಗಾಯಿ ಮಾಡಿ ಹೊಡೆದುಹಾಕುತ್ತಿದ್ದ ಖ್ಯಾತಿ ಅವನಿಗೆ ಇತ್ತು. ಇಂದು ಆತ ಮಧ್ಯಪ್ರಾಚ್ಯದ ಯಾವುದೋ ದೇಶದಲ್ಲಿ ನೆಲಸಿ ಪ್ರಖ್ಯಾತ ಡಾಕ್ಟರ್ ಎನಿಸಿದ್ದಾನೆ.                   ಇನ್ನೊಬ್ಬ ಬುಲೆಟ್ಟಿಗ ನಮ್ಮ ಮನೆಯ ಪಕ್ಕದಲ್ಲೇ ವಾಸಿಸುತ್ತಿದ್ದ ಶ್ರೀ ಲಾರೆನ್ಸ್ ಸುವಾರಿಸ್. ಅವರು ನನ್ನ ದೊಡ್ಡ ಅಣ್ಣನ ಕ್ಲಾಸ್‌ಮೇಟ್. ಅವರು ಆರಡಿ ಎರಡಿಂಚು ಎತ್ತರವಿದ್ದು ಇನ್ನೂರು ಪೌಂಡ್ ತೂಕದ ಸುಂದರ ಯುವಕ. ಅವರು ಸಿಂಡಿಕೇಟ್‌ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದರು. ಅವರ ಬುಲೆಟ್‌ಬೈಕ್ ಯಾವಾಗಲೂ ಪಾಲಿಶ್ ಹಾಕಿಸಿಕೊಂಡು ಹೊಸ ಬೈಕ್ ತರಹ ಕಾಣುತ್ತಿತ್ತು. ಇಂದಿಗೆ ಅವರು ಬ್ಯಾಂಕ್ ಸರ್ವೀಸಿನಿಂದ ರಿಟೈರ್ ಆಗಿದ್ದಾರೆ. ಬಹಳ ವರ್ಷಗಳಿಂದ ಅವರು ಮನೆಯಲ್ಲಿ ಒಳ್ಳೆಯ ಕಾರು ಇಟ್ಟಿದ್ದರೂ, ಅವರ ಬುಲೆಟ್ ಮೋಹ ತಗ್ಗಿಲ್ಲ. ಅವರು ಇಂದಿಗೂ ತಮ್ಮ ಲೇಟೆಸ್ಟ್ ಮಾಡೆಲ್ ಬುಲೆಟ್ ಸವಾರಿ ಮಾಡುತ್ತಿದ್ದಾರೆ. ನನಗೆ ಗೊತ್ತಿದ್ದಂತೆ ಅವರು ನಲ್ವತ್ತು ವರ್ಷಗಳಿಂದಲೂ ರಾಯಲ್ ಎನ್‌ಫೀಲ್ಡ್  ಬುಲೆಟ್‌ಬೈಕ್‌ಗಳನ್ನು ಓಡಿಸುತ್ತಿದ್ದಾರೆ. ಬುಲೆಟ್ ಬೈಕ್ ಓಡಿಸಿಕೊಂಡೇ ಇಂದು ಸೀನಿಯರ್ ಸಿಟಿಜನ್ ಆಗಿರುವ ಅವರು ರಸ್ತೆಯಲ್ಲಿ ತಮ್ಮ ಬುಲೆಟ್ ಓಡಿಸುತ್ತಾ ಹೋಗುತ್ತಿದ್ದರೆ, ಅವರ ಅನುಪಮ ರೈಡಿಂಗ್ ಸ್ಕಿಲ್ ಕಂಡು ಇಂದಿನ ಯುವಕರೂ ನಾಚಿ ದಂಗಾಗುತ್ತಾರೆ.

ನಮ್ಮೂರಿನಲ್ಲಿ ಇದ್ದ ನಾಲ್ಕನೇ ಬುಲೆಟ್ ಅಂದರೆ ಉಡುಪಿ ಸರ್ಕಲ್‌ನ ಪೋಲಿಸ್ ಇನ್ಸ್‌ಪೆಕ್ಟರ್ ಅವರದು. ಅವರು ದೈತ್ಯಾಕಾರದ ಮೈಕಟ್ಟಿನ ಪೋಲಿಸ್ ಅಧಿಕಾರಿ. ನಿಧಾನವಾಗಿ ಉಡುಪಿಯ ಪೇಟೆಯಲ್ಲಿ ಅವರು ಗಸ್ತು ತಿರುಗುವ ರೀತಿಯಲ್ಲಿ ಆ ಕಡೆ ಈ ಕಡೆ ಗಮನಿಸುತ್ತಾ ತಮ್ಮ ಮೋಟಾರ್‌ಸೈಕಲ್ ಓಡಿಸುತ್ತಿದ್ದರು. ಅವರ ಬೈಕ್‌ನ ಶಬ್ದ ಕೇಳಿದರೆ ಸಾಕು, ನಮ್ಮೂರಿನ ಚಾಲಿಪೋಲಿಗಳು ರಸ್ತೆಯ ಬದಿಗೆ ಹೋಗಿ ಅಡಗಿಕೊಳ್ಳುತ್ತಿದ್ದರು..!!

ನಾನು ಮೊದಲ ಮೂರುಜನ ಬುಲೆಟ್ಟಿಗರ ಗುರುತು ಮಾಡಿಕೊಂಡು, ಅವರ ಜೂನಿಯರ್ ಫ್ಯಾನ್ ಆಗಿದ್ದೆ. ನಾನು ಸ್ಕೂಲಿಗೆ ಹೋಗುವಾಗ ಈ ಮೂರುಜನ ಬುಲೆಟ್ಟಿಗರೂ, ನಾನು ನಡೆದುಕೊಂಡು ಸ್ಕೂಲಿಗೆ ಹೋಗುತ್ತಿದ್ದರೆ, ನನ್ನನ್ನು ಕರೆದು ತಮ್ಮ ವಾಹನದಲ್ಲಿ ಕುಳ್ಳಿರಿಸಿಕೊಂಡು ನಮ್ಮ ಸ್ಕೂಲಿನ ಬಾಗಿಲಿನಲ್ಲಿ ಬಿಟ್ಟು ಮುಂದೆ ಹೋಗುತ್ತಿದ್ದರು. ಇದು ನನಗೆ ಬಹಳ ಹೆಮ್ಮೆಯ ವಿಚಾರವಾಗಿತ್ತು.

ಉಡುಪಿಯ ಪೋಲಿಸ್ ಸರ್ಕಲ್ ಇನ್ಸ್‌ಪೆಕ್ಟರ್, ರಸ್ತೆಯಲ್ಲಿ ತಮ್ಮ ಬುಲೆಟ್‌ಬೈಕ್ ಸವಾರಿ ಮಾಡುತ್ತಾ ಹೋಗುತ್ತಿದ್ದರೆ, ನಾನೂ ಇತರೇ ಹುಡುಗರ ತರಹ ಅವರು ಕಣ್ಮರೆಯಾಗುವವರೆಗೂ ನಿಂತು ನೋಡುತ್ತಿದ್ದೆ. ಬಹಳ ಗಂಭೀರ ಸ್ವಭಾವದವರಂತೆ ತೋರಿಬರುತ್ತಿದ್ದ ಅವರೊಡನೆ ಮಾತನಾಡಿ, ಅವರ ಪರಿಚಯ ಮಾಡಿಕೊಳ್ಳಲು ನನ್ನ ಮನಸ್ಸು ಅಳುಕುತ್ತಿತ್ತು.

ನಾನು ರಾಯಚೂರಿನ ಜವಳಗೆರೆಯಲ್ಲಿ ಫಾರ್ಮ್ ಮ್ಯಾನೇಜರ್ ಕೆಲಸಕ್ಕೆ ಸೇರಿದ ಮೇಲೆ ನನ್ನ ಸಂಬಳದ ಹಣ ಉಳಿಸಿ, ಒಂದು ಸೆಕೆಂಡ್‌ಹ್ಯಾಂಡ್ ಬುಲೆಟ್ ಬೈಕ್‌ಕೊಳ್ಳುವ ಕನಸು ಹೊತ್ತಿದ್ದೆ. ನಮ್ಮ ಹತ್ತಿರದ ಫಾರ್ಮ್‌ವೊಂದರ ಮಾಲಿಕರ ಹತ್ತಿರ ಒಂದು ಒಳ್ಳೆಯ ಇಂಗ್ಲೀಷ್ ಬುಲೆಟ್ ಇತ್ತು. ಅವರದು ನಮ್ಮ ಪಕ್ಕದ ಫಾರ್ಮ್ ಆದುದರಿಂದ ಅವರ ಸಖ್ಯ ಬೆಳೆಸುವುದು ನನಗೆ ಕಷ್ಟವಾಗಲಿಲ್ಲ. ಅವರ ಪರಿಚಯ ಚೆನ್ನಾಗಿ ಆದ ನಂತರ ನಿಧಾನಕ್ಕೆ ನನಗೆ ಒಂದು ಸೆಕೆಂಡ್‌ಹ್ಯಾಂಡ್ ಬುಲೆಟ್ ಖರೀದಿಸುವ ಆಸೆಯಿದೆ. ಎಂದಾದರೂ ತಮ್ಮ ಬುಲೆಟ್ ಮಾರುವುದಿದ್ದರೆ ನನಗೆ ಒಂದು ಮಾತು ಹೇಳಿ ಎಂತ ಕೇಳಿಕೊಂಡೆ. ನಾನು ಅವರೊಡನೆ ಕೇಳಿಕೊಂಡು ಸುಮಾರು ಆರು ತಿಂಗಳ ನಂತರ ಒಂದುದಿನ ಅವರ ಸವಾರಿ ನಮ್ಮ ಫಾರ್ಮಿಗೆ ಬಂತು.

ಪೆಜತ್ತಾಯರೇ! ನನ್ನ ತೊಂಬತ್ತೊಂದನೇ ಮಾಡೆಲ್ ವಿಲಾಯತೀ ಬುಲೆಟ್ ಎರಡುಸಾವಿರ ರೂಪಾಯಿಗಳಿಗೆ ಮಾರುತ್ತೇನೆ. ನಾನು ಹೊಸ ಇಂಡಿಯನ್ ಬುಲೆಟ್ ಕೊಳ್ಳುತ್ತೇನೆ. ಆದರೆ, ನನ್ನದು ಒಂದು ಕಂಡೀಶನ್ ಇದೆ. ನೀವು ಮುಂದೆಂದಾದರೂ ಈ ವಿಲಾಯತೀ ಬೈಕ್ ಮಾರುವುದಿದ್ದಲ್ಲಿ ನನಗೆ ತಿಳಿಸದೇ ಬೇರೆಯವರಿಗೆ ಮಾರಕೂಡದು ಎಂದರು.

ಆಗ ಹೊಸ ಇಂಡಿಯನ್ ಬುಲೆಟ್ ಬೈಕಿಗೆ ಸುಮಾರು ಹತ್ತುಸಾವಿರ ರೂಪಾಯಿ ಇತ್ತು. ಅಷ್ಟು ಹಣ ನನ್ನಿಂದ ಹೊಂದಿಸಲು ಸಾಧ್ಯವೇ ಇರಲಿಲ್ಲ. ಎರಡು ಸಾವಿರ ರೂಪಾಯಿಗಳಾದರೆ ನನ್ನ ಬಜೆಟ್‌ಗೆ ಹೊಂದುವ ಮೊತ್ತವಾಗಿ ಕಂಡುಬಂತು. ಆದ್ದರಿಂದ ಅವರು ಮಾರುತ್ತಿರುವ ತೊಂಬತ್ತೊಂದನೆಯ ಮಾಡೆಲ್‌ನ ಇಂಗ್ಲಿಷ್ ಬೈಕನ್ನು ಕೊಳ್ಳಲು ಮರುಮಾತಿಲ್ಲದೇ ಒಪ್ಪಿದೆ. ಮರುದಿನವೇ ಹಣ ಒಪ್ಪಿಸಿ ಮೋಟರ್ ಸೈಕಲ್ ಮಾಲಿಕತ್ವವನ್ನು ನನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡೆ.

ಬೈಕ್ ನನ್ನದಾದೊಡನೆ ಅದಕ್ಕೆ ಸ್ನಾನ ಮಾಡಿಸಿ, ವ್ಯಾಕ್ಸ್ ಪಾಲಿಷ್ ತಿಕ್ಕಿ ಥಳಥಳ ಹೊಳೆಯುವಂತೆ ಮಾಡಿದೆ. ಇಡೀ ದಿನದಲ್ಲಿ ಹಲವಾರು ಸಲ ಅದರ ಧೂಳೊರೆಸುವ ಕೆಲಸವೇ ನನಗೆ ಬಹಳ ಸಂತೋಷ ಕೊಡುತ್ತಿತ್ತು. ಬೈಕ್ ಕೊಂಡ ಹೊಸದರಲ್ಲಿ ನಾನು ನಮ್ಮ ಅಕ್ಕಪಕ್ಕದ ಫಾರ್ಮ್‌ಗಳಿಗೆಲ್ಲಾ ಹೋಗಿ ನನ್ನ ಬುಲೆಟ್ ಬೈಕನ್ನು ಅವರಿಗೆಲ್ಲಾ ತೋರಿಸಿದೆ. ಎಲ್ಲರೂ ಒಳ್ಳೆಯ ಬೈಕ್! ನ್ಯಾಯವಾದ ಬೆಲೆಗೆ ನಿಮಗೆ ಸಿಕ್ಕಿದೆ.! ಎಂದರು.

ನನ್ನ ಮೋಟರ್ ಬೈಕ್ ನನಗೆ ಒಳ್ಳೆಯ ಸಂಗಾತಿ ಆಯಿತು. ಸಿಂಧನೂರು, ರಾಯಚೂರು ಅಥವಾ ಬಳ್ಳಾರಿಗೆ ನಮ್ಮ ಫಾರ್ಮಿನ ಕೆಲಸದ ಮೇಲೆ ಹೋಗುವುದಾದರೆ, ನಾನು ನಮ್ಮ ಆಫೀಸ್ ಜೀಪಿನಲ್ಲಿ ಹೋಗದೇ, ಬೈಕ್‌ನಲ್ಲೇ ಹೋಗತೊಡಗಿದೆ. ಆಗ ಪೆಟ್ರೋಲ್ ಬೆಲೆ ಕೇವಲ ಲೀಟರಿಗೆ ಅರುವತ್ತೆರಡು ಪೈಸೆ ಇತ್ತು. ಆ ದಿನಗಳಲ್ಲಿ ಡೀಸೆಲ್ ಬೆಲೆ ಬರೇ ಮೂವತ್ತೆಂಟು ಪೈಸೆ ಇತ್ತು. ಆಫೀಸಿನ ವಿಲ್ಲೀಸ್ 4WD ಪೆಟ್ರೋಲ್ ಇಂಜಿನ್ ಜೀಪ್ ಬಳಸದೇ, ನನ್ನ ಬೈಕಿಗೆ ಪೆಟ್ರೋಲ್ ಹಾಕಿ ಓಡಿಸಿದರೆ ಚಾಲ್ತಿಯಲ್ಲಿದ್ದ ಬಸ್ ಪ್ರಯಾಣದರಕ್ಕಿಂತ ನನ್ನ ಬೈಕ್ ಸವಾರಿ ಸ್ವಲ್ಪವೇ ದುಬಾರಿ ಎನ್ನಿಸಿತ್ತು. ಆದರೂ ಇದರಿಂದ ನಮ್ಮ ಫಾರ್ಮಿಗೆ ಹಣ ಉಳಿತಾಯವಾಗುತ್ತಿತ್ತು.

ನಾನು ಸಿಂಧನೂರಿನ ಫಾರ್ಮಿನಲ್ಲಿ ಕೆಲಸಮಾಡುವ ಸಮಯದಲ್ಲಿ ವರ್ಷಕ್ಕೆ ಮೂರುದಿನ ಮಾತ್ರ ರಜಾ ಮಾಡಿ, ನನ್ನ ಪೂಜ್ಯ ತಂದೆಯವರ ವೈದಿಕ ಆಚರಿಸಲು ಉಡುಪಿಗೆ ಹೋಗಿ ಬರುತ್ತಿದ್ದೆ. ನಮ್ಮ ತಾಯಿಯವರ ಸಮಕ್ಷಮದಲ್ಲಿ ನಾವು ಅಣ್ಣತಮ್ಮಂದಿರು ಒಟ್ಟಾಗಿ ಪಿತೃಶ್ರಾದ್ಧದ ಕರ್ಮ ನೆರವೇರಿಸುತ್ತಾ ಇದ್ದೆವು. ಕೆಲಸದ ಜವಾಬ್ದಾರಿ ಜಾಸ್ತಿಯಿರುತ್ತಾ ಇದ್ದುದರಿಂದ, ನನಗೆ ಇದಕ್ಕಿಂತ ಹೆಚ್ಚಿನ ರಜಾ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಜವಳಗೆರೆಯಿಂದ ಉಡುಪಿಗೆ ಹೋಗಲು ನಾನು ದಿನವಿಡೀ ಬಸ್ ಪ್ರಯಾಣ ಮಾಡಿ ಸಾಯಂಕಾಲಕ್ಕೆ ಶಿವಮೊಗ್ಗ ತಲುಪುತ್ತಿದ್ದೆ. ಅಲ್ಲಿಂದ ರಾತ್ರಿಯ ಬಸ್ ಹಿಡಿದು ಬೆಳಗಿನಜಾವ ಉಡುಪಿ ಸೇರುತ್ತಿದ್ದೆ. ಹಿಂದೆ ಬರುವಾಗ ಹಗಲಿಡೀ ಪ್ರಯಾಣ ಮಾಡಿ, ಸಂಜೆ ಹೊಸಪೇಟೆ ಸೇರಿ, ಅಲ್ಲಿಂದ ರಾತ್ರಿಯ ಬಸ್ ಹಿಡಿದು ಬೆಳಗ್ಗೆ ಜವಳಗೆರೆಗೆ ವಾಪಸ್ ಆಗುತ್ತಿದ್ದೆ.

ಬೈಕ್ ಕೊಂಡ ವರ್ಷ ನನಗೆ ಬೈಕ್‌ನಲ್ಲೇ ಉಡುಪಿಗೆ ಹೋಗುವ ಉಮೇದುಬಂತು. ತಂದೆಯವರ ವೈದಿಕಕ್ಕೆ ನನ್ನ ಬೈಕ್‌ನಲ್ಲೇ ಯಾಕೆ ಹೋಗಬಾರದು? ಬೈಕ್ ಊರಿಗೆ ತೆಗೆದುಕೊಂಡು ಹೋದರೆ ಚೆನ್ನಾಗಿರುತ್ತೆ! ಎಂದುಕೊಂಡು ಹೊರಡುವ ಮೊದಲು ಸಿಂಧನೂರಿನ ಬುಲೆಟ್ ಮೆಕ್ಯಾನಿಕ್ ಖಾಜಾಸಾಬ್ ಹತ್ತಿರ ನನ್ನ ಮೋಟರ್‌ಸೈಕಲನ್ನು ಚೆಕ್‌ಅಪ್ ಮಾಡಿಸಿದೆ. ಆತ ನನ್ನ ಬುಲೆಟನ್ನು ತಪಾಸಣೆ ಮಾಡಿ ಸಬ್ ಠೀಕ್ ಹೈ! ಹಜಾರ್ ಮೈಲ್ ಜಾಕೆ ಆಸಕ್ತೇ ಸಾಬ್, ಗಾಡೀ ಬಿಲ್‌ಕುಲ್ ಅಚ್ಛೇ ಕಂಡೀಶನ್ ಮೇಹೈ ಎಂದು ಹೇಳಿದ. ಆಪ್ ಅಕೇಲೆ ಮಂಗ್ಳೂರ್ ಜಾನಾ ರಹೇತೋ, ಬೈಕ್ ಕಾ ಲಗೇಜ್ ಬಕ್ಸಾಮೇ ವಜನ್ ಕೇಲೀಯೇ ದೊ ಬಡಾ ಪತ್ಥರ್ ರಖೇಂಗೇ! ಗಾಡೀ ಜಂಪ್ ನಹೀಹೋಗಾ! ಎನ್ನುತ್ತಾ ಎರಡು ಬಾಂದುಕಲ್ಲಿನ ತರಹದ ಕಲ್ಲುಗಳನ್ನು ನನ್ನ ಬೈಕಿನ ಎರಡೂ ಕಡೆಯ ಲಗ್ಗೇಜ್ ಬಾಕ್ಸ್‌ಗಳಲ್ಲಿ ತುಂಬಿಯೇಬಿಟ್ಟ…! ಆದಿನ ರಾತ್ರಿ ನಾನು ಫಾರ್ಮಿಗೆ ಹೋಗುತ್ತಾ ಇರುವಾಗ ನಾನು ಗಮನಿಸಿದಂತೆ, ಮೆಕ್ಯಾನಿಕ್ ಖಾಜಾ ಹೇಳಿಕೊಟ್ಟ ಉಪಾಯ ಸರಿಯಾಗಿಯೇ ಇತ್ತು! ನನ್ನ ಬುಲೆಟ್ ಕಚ್ಚಾರಸ್ತೆಯಲ್ಲಿ ಹೋಗುವಾಗ ಜಾಸ್ತಿ ಜಂಪ್ ಆಗುತ್ತಿರಲಿಲ್ಲ. ಖಾಜಾಸಾಬ್ ಆ ಭಾರವಾದ ಕಲ್ಲುಗಳನ್ನು ಇಟ್ಟ ಮೇಲೂ ನನ್ನ ಸ್ವಂತ ಬಟ್ಟೆಬರೆಗಳನ್ನು ಇರಿಸಲು ಮೋಟರ್ ಸೈಕಲಿನ ಲಗ್ಗೇಜ್ ಬಾಕ್ಸ್‌ಗಳಲ್ಲಿ ಬೇಕಾದಷ್ಟು ಜಾಗ ಉಳಿದಿತ್ತು.

ಹೊರಡುವ ಹಿಂದಿನ ದಿನ ಸಂಜೆ ನನ್ನ ಅಮೇರಿಕನ್ ಪೀಸ್‌ಕೋರಿನ ಗೆಳೆಯ  ಕೆನೆತ್ ಕರ್ಖಾಫ್ ಮನೆಗೆ ಹೋಗಿ, ಕೆನೆತ್, ನಾನು ಸುಮಾರು ಮುನ್ನೂರ ಅರುವತ್ತು ಕಿಲೋಮೀಟರ್ ದೂರದ ಉಡುಪಿಗೆ ನನ್ನ ಬುಲೆಟ್ ಬೈಕಿನಲ್ಲಿ ಹೋಗಿ ಬರುತ್ತೇನೆ ಎಂದೆ. ಕೆನೆತ್ ಬಳಿ ಆಗ ಹೊಸ ಜಾವಾ ಯೆಜ್‌ಡಿ ಬೈಕ್ ಇತ್ತು. ಆತ ತನ್ನ ಅಮೆರಿಕನ್ನಡದಲ್ಲಿ ಪೆಜ್‌ಟಾಯಾ! ನೀನು ನನ್ನ ಹೆಲ್ಮೆಟ್ ಧರಿಸಿಕೊಂಡು ಹೋಗಿ ಬಾ! ನೀನು ಬಂದಮೇಲೆ ನನಗೆ ನನ್ನ ಹೆಲ್ಮೆಟ್ ಹಿಂತಿರುಗಿ ಕೊಡಬಹುದು. ಹೆಲ್ಮೆಟ್ ಧರಿಸಿದರೆ ನಿನ್ನ ಪ್ರಯಾಣ ಸೇಫ್ ಆಗಿರುತ್ತೆ ಎಂದು ಆತ ತನ್ನ ಯೆಜ್‌ಡಿ ಮೋಟರ್ ಸೈಕಲ್ ಹೊಡೆಯುವಾಗ ಸದಾ ಧರಿಸುತ್ತಿದ್ದ ಅಮೇರಿಕಾದಿಂದ ತಂದ ಕೆಂಪು ಮತ್ತು ಹಳದಿ ಬಣ್ಣದ ಹೊಸ ಹೆಲ್ಮೆಟ್ ನನಗೆ ಎರವಲು ನೀಡಿದ. ಆ ದಿನಗಳಲ್ಲಿ ಹೆಲ್ಮೆಟ್ ಕಡ್ಡಾಯ ಇರಲಿಲ್ಲ. ಭಾರತದಲ್ಲಿ ಹೆಲ್ಮೆಟ್‌ಗಳನ್ನು ಮಿಲಿಟರಿಯವರು ಮಾತ್ರ ಉಪಯೋಗಿಸುತ್ತಿದ್ದರು. ನಾನು ನನ್ನ ಜೀವನದಲ್ಲಿ ಹೆಲ್ಮೆಟ್ ಅಂದು ಮೊದಲಬಾರಿ ಧರಿಸಿದ್ದೆ..! ನನಗೆ ಆ ಇಂಪೋರ್ಟೆಡ್ ಹೆಲ್ಮೆಟ್ ಧರಿಸಲು ಹೆಮ್ಮೆಯೆನಿಸಿತು.

ನಾನು ಹೊರಡುವಾಗ ಕೆನೆತ್ ನನಗೆ ಒಂದು ಹೊಸ ಲಿವಾಯ್ ಸ್ಟ್ರಾಸ್ ಕಂಪೆನಿಯ ಹೆವಿ ಡೆನಿಮ್ ಜ್ಯಾಕೆಟ್ ಉಡುಗೊರೆಯಾಗಿ ಕೊಟ್ಟು, ಈ ಹೆವಿ ಜ್ಯಾಕೆಟ್ ಬೈಕ್‌ರೈಡ್ ಮಾಡುವಾಗ ಧರಿಸಲು ಚೆನ್ನಾಗಿರುತ್ತೆ ಮತ್ತು ನನ್ನ ಹೆಲ್ಮೆಟ್‌ಗೆ ಮ್ಯಾಚ್ ಆಗುತ್ತೆ ಎಂದ.

ಮರುದಿನ ಬೆಳಗ್ಗೆ ಏಳು ಗಂಟೆಗೆ ನಾನು ಉಡುಪಿಯ ಪ್ರಯಾಣಕ್ಕೆ ಸಿದ್ಧನಾದೆ. ಕೆನೆತ್ ಕೊಟ್ಟ ಜ್ಯಾಕೆಟ್ ಧರಿಸಿ ಹೆಲ್ಮೆಟ್ ಧರಿಸಿದೆ. ನಮ್ಮ ಫಾರ್ಮಿನ ಸೂಪರ್ವೈಜರ್ ವೀರಭದ್ರಗೌಡರು ತಾವು ಈಗ ಮೋಟರ್ ಬೈಕ್ ರೇಸ್‌ಗೆ ಹೊರಟವರ ತರಹಾ ಕಾಣುತ್ತೀರಿ, ಸರ್! ಎಂದರು. ನನಗೆ ತುಂಬಾ ಖುಷಿ ಆಯಿತು. ಗೌಡರ ಮಾತು ಕೇಳಿದ ನನಗೆ ಕೋತಿಗೆ ಕಳ್ಳು ಕುಡಿಸಿದಂತೆಯೇ ಆಯಿತು..! ರೇಸ್‌ಡ್ರೈವರ್ ಥರಹಾ ಒಮ್ಮೆಗೆ ಎಕ್ಸಲೇಟರ್ ಕೊಟ್ಟು ಧೂಳು ಎಬ್ಬಿಸುತ್ತಾ ನಾನು ನಮ್ಮ ಫಾರ್ಮಿನಿಂದ ಹೊರಟೆ.

ಆ ದಿನಗಳಲ್ಲಿ ರಸ್ತೆಯಲ್ಲಿ ವಾಹನದಟ್ಟಣೆ ಅಷ್ಟು ಜಾಸ್ತಿಯಾಗಿರಲಿಲ್ಲ. ನನ್ನ ಬುಲೆಟ್‌ಗಾಡಿಯನ್ನು ಜೋರಾಗಿಯೇ ಓಡಿಸಹತ್ತಿದೆ. ನೇರವಾದ ಬಯಲುಸೀಮೆಯ ರಸ್ತೆಗಳಲ್ಲಿ ಕೆಲವೊಮ್ಮೆ ನನ್ನ ಬೈಕಿನ ಸ್ಪೀಡೋಮೀಟರ್‌ನ ಕೆಂಪುಮುಳ್ಳು ಅರುವತ್ತರಿಂದ ಎಪ್ಪತ್ತು ಮೈಲುಗಳ ಮಧ್ಯೆ ತೋರಿಸುತ್ತಿತ್ತು. ಅದು ಇಂಗ್ಲೀಷ್ ಗಾಡಿಯಾದ್ದರಿಂದ ಅದರ ಸ್ಪೀಡೋಮೀಟರನ್ನು ಮೈಲುಗಳಲ್ಲಿ ಗುರುತಿಸಿದ್ದರು. ಸ್ಪೀಡೋಮೀಟರ್ ಡಯಲ್ ಮೇಲೆ ಕಿಲೋಮೀಟರ್ ಗುರುತು ಇರಲಿಲ್ಲ. ಹೆಲ್ಮೆಟ್ ಮತ್ತು ಜ್ಯಾಕೆಟ್ ಧರಿಸಿದ್ದುದರಿಂದ ಅಷ್ಟು ಸ್ಪೀಡ್‌ನಲ್ಲಿ ಹೋದರೂ ನನಗೆ ಗಾಳಿಯ ಹೊಡೆತದ ಅನುಭವ ಆಗುತ್ತಿರಲಿಲ್ಲ.

ಖಾಜಾಸಾಬ್ ಲಗೇಜ್‌ಬಾಕ್ಸ್‌ಗಳಲ್ಲಿ ಇರಿಸಿದ್ದ ಶಿಲೆಕಲ್ಲುಗಳು ನನ್ನ ಬುಲೆಟ್‌ಗಾಡಿಯನ್ನು ಸಿಕ್ಕಾಪಟ್ಟೆ ಜಂಪ್ ಆಗಲು ಬಿಡುತ್ತಿರಲಿಲ್ಲ. ನನ್ನ ಬೈಕಿಗೆ ಒಳ್ಳೆಯ ರೋಡ್‌ಗ್ರಿಪ್ ಇದ್ದಂತೆ ಅನಿಸಿತು. ನನ್ನ ಬುಲೆಟ್‌ಬೈಕು ರಸ್ತೆಯ ಕಿಲೋಮೀಟರ್ ಕಲ್ಲುಗಳನ್ನು ನಿರಾಯಾಸವಾಗಿ ಕಬಳಿಸುತ್ತಾ ಮುಂದೆ ಸಾಗಿತ್ತು. ಹೊಸಪೇಟೆಯಲ್ಲಿ ಕಾಫಿ ತಿಂಡಿಗೆ ಬೈಕ್ ನಿಲ್ಲಿಸಿದೆ. ಶಿವಮೊಗ್ಗ ಪಟ್ಟಣದಲ್ಲಿ ಪೆಟ್ರೋಲ್‌ಟ್ಯಾಂಕ್ ತುಂಬಿಸಿ, ಮಧ್ಯಾಹ್ನದ ಊಟ ಮಾಡಿ, ನನ್ನ ಪ್ರಯಾಣ ಮುಂದುವರಿಸಿದೆ.

ಶಿವಮೊಗ್ಗ ದಾಟುತ್ತಲೇ ಬಯಲುಸೀಮೆಯ ರಸ್ತೆ ಮುಗಿದು ಮಲೆನಾಡಿನ ರಸ್ತೆ ಶುರುವಾಯಿತು. ನಿತ್ಯಹರಿದ್ವರ್ಣದ ಕಾಡುಗಳ ನಡುವೆ ಸಾಗುವ ರಸ್ತೆಯಲ್ಲಿ ನನ್ನ ಬುಲೆಟ್‌ಬೈಕ್ ಓಡಿಸುವುದೇ ಒಂದು ಮೋಜು ಎನಿಸಿತು. ಮಲೆನಾಡಿನ ರಸ್ತೆಗಳ ತಿರುವಿಗೆ ಸರಿಯಾಗಿ ಸ್ವಲ್ಪ ಬ್ಯಾಂಕಿಂಗ್ ಕೊಟ್ಟಿರುತ್ತಾರೆ. ಬ್ಯಾಂಕಿಂಗ್ ಕೊಟ್ಟಿರುವ ರಸ್ತೆಗಳು ತಿರುವಿನಲ್ಲಿ ಭೂಮಿಗೆ  ಸಮತಟ್ಟಾಗಿರದೆ, ಅಡ್ಡ‌ಅಡ್ಡಕ್ಕೆ ಸ್ವಲ್ಪ ವಾಲಿಕೊಂಡಿರುತ್ತವೆ. ಹೀಗೆ ರಸ್ತೆಗಳನ್ನು ಬ್ಯಾಂಕ್ ಮಾಡುವುದರಿಂದ ಚಲಿಸುವ ವಾಹನಗಳಿಗೆ ಒಳ್ಳೆಯ ರೋಡ್‌ಗ್ರಿಪ್ ಸಿಗುತ್ತೆ ಮತ್ತು ಆ ರಸ್ತೆಗಳಲ್ಲಿ ಚಲಿಸುವ ವಾಹನಗಳ ಟಯರ್ ಸವಕಳಿ ಕಡಿಮೆ ಆಗುತ್ತದೆ. ಇಂತಹ ರಸ್ತೆಗಳಲ್ಲಿ ದ್ವಿಚಕ್ರವಾಹನಗಳನ್ನು ತಿರುವು ಇರುವ ಕಡೆಗೆ ಸ್ವಲ್ಪ ವಾಲಿಸಿ ಸವಾರರು ನಡೆಸಿದರೆ, ಚಾಲನೆ ಸಲೀಸಾಗಿ ಒಂದೇ ವೇಗದಲ್ಲಿ ರಸ್ತೆಯನ್ನು ಕ್ರಮಿಸಲು ಸಹಾಯ ಆಗುತ್ತದೆ. ಆದರೆ. ಪ್ರತೀ ತಿರುವಿನಲ್ಲೂ ಹಾರನ್ ಮಾಡಲು ಚಾಲಕರು ಮರೆಯಬಾರದು. ಯಾಕೆಂದರೆ, ಕಡಿದಾದ ಕಾಡಿನರಸ್ತೆಗಳಲ್ಲಿ ಮುಂದಿನ ತಿರುವಿನಲ್ಲಿ ತಮ್ಮ ಕಡೆಗೆ ಬರುವ ವಾಹನಗಳು ಚಾಲಕರಿಗೆ ಹತ್ತಿರ ಬರುವವರೆಗೂ ಕಾಣಿಸುವುದಿಲ್ಲ. ನಿರ್ಜನವಾದ ಮತ್ತು ವಾಹನದಟ್ಟಣೆ ಕಡಿಮೆಯಿರುವ ಆ ರಸ್ತೆಯಲ್ಲಿ ಬುಲೆಟ್ ಮೋಟರ್‌ಸೈಕಲನ್ನು ಪ್ರತೀ ತಿರುವಿನಲ್ಲೂ ಸ್ವಲ್ಪನೇ ವಾಲಿಸುತ್ತಾ ನಡೆಸುವುದೇ ರೋಚಕ ಅನುಭವ.

ಆಗುಂಬೆಯ ಘಾಟಿರಸ್ತೆಯನ್ನು ಜಾಗ್ರತೆಯಾಗಿ ಮೆಲ್ಲನೆ ಸೆಕೆಂಡ್ ಗೇರಿನಲ್ಲೇ ಇಳಿಸಿದೆ. ಆಗುಂಬೆಯ ಘಾಟಿ ಬಲು ಕಡಿದಾದ ರಸ್ತೆ. ಚಾಲಕರು ಜಾಗರೂಕತೆಯಿಂದ ಈ ಘಾಟ್ ರಸ್ತೆಯಲ್ಲಿ ವಾಹನ ನಡೆಸುತ್ತಾರೆ.

ಅಂದು ಸಾಯಂಕಾಲ ಕತ್ತಲಾಗುವ ಮೊದಲೇ ಉಡುಪಿಯ ನಮ್ಮ ಮನೆಯನ್ನು ತಲುಪಿದೆ. ನಾನು ಮೋಟರ್ ಸೈಕಲಿನಲ್ಲಿ ಒಬ್ಬನೇ ಜವಳಗೆರೆಯಿಂದ ಬಂದೆ ಎಂದು ತಿಳಿದಾಗ ಎಲ್ಲರಿಗೂ ಆಶ್ಚರ್ಯ ಆಯಿತು. ಆದರೆ, ನನ್ನ ತಾಯಿಯವರಿಗೆ ನನ್ನ ಮೇಲೆ ಸಿಟ್ಟೇ ಬಂತು. ಸುರಕ್ಷಿತವಾಗಿ ಬಸ್ಸಿನಲ್ಲಿ ಬರುವುದು ಬಿಟ್ಟು ಈ ಮೋಟರ್‌ಸೈಕಲ್ ಸವಾರಿಯ ಹುಚ್ಚಾಟ ನಿನಗ್ಯಾಕೆ? ಎಂದು ನನ್ನ ತಾಯಿಯವರು ನನ್ನನ್ನು ಗದರಿದರು.

ಮರುದಿನ ಮಧ್ಯಾಹ್ನದ ಮೊದಲೇ ಶ್ರಾದ್ಧದ ಕಾರ್ಯಕ್ರಮ ಮುಗಿಯಿತು. ಅಂದಿನ ಮಧ್ಯಾಹ್ನ ನಾನು ಉಡುಪಿಯಲ್ಲಿ ಇದ್ದ ಕೆಲವು ಸ್ನೇಹಿತರನ್ನು ಕಂಡು ಅವರೆದುರು ನನ್ನ ವಿಲಾಯತೀ ಬೈಕ್‌ನ ಪ್ರದರ್ಶನ ಮಾಡಿದೆ.

ಮರುದಿನ ನಾನು ಜವಳಗೆರೆಗೆ ಹೊರಟಾಗ ನನ್ನ ತಾಯಿ ಮತ್ತು ಅಕ್ಕಂದಿರು, ಮೂವತ್ತು ಮೈಲಿಗಿಂತ ಜಾಸ್ತಿ ಸ್ಪೀಡ್‌ನಲ್ಲಿ ಬೈಕ್ ಓಡಿಸಬಾರದು..! ಎಂದು ಕಟ್ಟಪ್ಪಣೆ ಮಾಡಿದರು. ನಾನು ನನ್ನ ಹೆಲ್ಮೆಟ್ ಧರಿಸಿದ ತಲೆ ಅಲ್ಲಾಡಿಸಿದೆ. ನಮ್ಮ ಮನೆ ಇದುರಿನ ರಸ್ತೆಯ ತಿರುವಿನವರೆಗೆ ನಾನು ಮೂವತ್ತುಮೈಲಿಯ ವೇಗವನ್ನು ಮೀರದೇ ನನ್ನ ವಿಧೇಯತೆಯನ್ನು ಮೆರೆದೆ. ಮನೆ ಎದುರಿನ ತಿರುವು ದಾಟಿದ ಕೂಡಲೇ ನನ್ನ ಮಾಮೂಲಿ ವೇಗದಲ್ಲಿ ಬೈಕ್ ಓಡಿಸತೊಡಗಿದೆ. ಮೂವತ್ತುಮೈಲಿಯ ಕೆಳಗಿನ ವೇಗದಲ್ಲಿ ಬೈಕ್ ಓಡಿಸಿದ್ದರೆ, ನಾನು ಮರುದಿನ ಸಂಜೆಗೆ ಜವಳಗೆರೆ ತಲುಪಬೇಕಾತ್ತು..! ವೇಗ ಹೆಚ್ಚಿಸಿದರೂ, ಜಾಗ್ರತೆಯಾಗಿ ಬೈಕ್ ನಡೆಸುತ್ತಾ ಅದೇದಿನ ಸಾಯಂಕಾಲ ಏಳು ಗಂಟೆಗೆ ನಾನು ಜವಳಗೆರೆಯ ನಮ್ಮ ಫಾರ್ಮ್ ತಲುಪಿದ್ದೆ.

ಹೀಗೆ ಒಟ್ಟಿನಿಂದ ಏಳುನೂರ ಇಪ್ಪತ್ತು ಕಿಲೋಮೀಟರ್ ಪ್ರಯಾಣಿಸಿ ಬಂದ ಮೇಲೆ ನನಗೆ ನನ್ನ ಬೈಕ್ ಮೇಲಿನ ಅಭಿಮಾನ ಇನ್ನೂ ಹೆಚ್ಚಿತು. ಮುಂದೆ ಹಿಂದೆ ಯಾವ ಚಿಂತೆಯೂ ಇಲ್ಲದ ಆ ದಿನಗಳಲ್ಲಿ ನನ್ನ ಮೋಟಾರ್ ಸೈಕಲನ್ನು ವೇಗವಾಗಿ ಓಡಿಸುವುದೇ ನನ್ನ ಮುಖ್ಯಹವ್ಯಾಸ ಆಯಿತು. ಈ ಹವ್ಯಾಸವೇ ನನ್ನ ಮೋಟರ್ ಸೈಕಲ್ ಮಾಲಿಕತ್ವಕ್ಕೆ ಮುಳುವಾಯಿತು. ಅದು ಹೇಗಾಯಿತು ಎಂದು ಈಗ ವಿವರಿಸಲೇ?

೧೯೭೦ನೇ ಇಸವಿಯಲ್ಲಿ ನನ್ನ ಮದುವೆಯ ನಿಶ್ಚಯ ಆಗಿತ್ತು. ಒಂದು ವರ್ಷದ ನಂತರ ಮದುವೆ ಎಂಬ ನನ್ನ ಕಂಡೀಶನ್‌ನನ್ನು ಹುಡುಗಿಯ ಕಡೆಯವರು ಒಪ್ಪಿದ್ದರು. ಅದೇ ರೀತಿ, ನನ್ನ ಮದುವೆ ನಡೆದದ್ದು ೧೯೭೧ನೇ ಮೇ ತಿಂಗಳ ಒಂಬತ್ತರಂದು. ನಮ್ಮಲ್ಲಿ ಮದುವೆಯ ಸಮಾರಂಭಗಳಿಗೆ ಮೊದಲು ನಾಂದಿಶಾಸ್ತ್ರ ಅಂತ ಒಂದು ಶಾಸ್ತ್ರವಿದೆ. ನಾಂದಿಶಾಸ್ತ್ರ ಆದಮೇಲೆ ಯಾವ ಕಾರಣಕ್ಕೂ, ಯಾವ ಅಮೆ ಸೂತಕ ಬಂದರೂ, ಮದುವೆಯ ದಿನವನ್ನು ಬದಲಾಯಿಸುವ ಹಾಗಿಲ್ಲ. ಈ ಶಾಸ್ತ್ರಕ್ಕೆ ನಾನು ಮದುವೆಯ ದಿನಕ್ಕಿಂತ ಹತ್ತುದಿನ ಮೊದಲು ಉಡುಪಿಗೆ ಹೊರಟು ಬರುವಂತೆ ನನ್ನ ತಾಯಿಯವರ ಪತ್ರ ಬಂತು. ಆ ಪತ್ರದ ಮೊದಲನೆಯ ಒಕ್ಕಣೆಯ ಸಾಲುಗಳು ಈ ರೀತಿ ಇದ್ದುವು….

ಇನ್ನು ಮುಂದೆ ನೀನು ಮದುವೆ ಆಗಿ ಗೃಹಸ್ಥ ಆಗುವವನಿದ್ದೀ. ನಿನ್ನ ಮದುವೆಯ ನಾಂದಿಶಾಸ್ತ್ರಕ್ಕೆ ಕುಳಿತುಕೊಳ್ಳುವ ಮೊದಲು ನಿನ್ನ ಹುಡುಗಾಟಿಕೆಯ ಬೇಜವಾಬ್ದಾರಿಯನ್ನು ಬಿಂಬಿಸುತ್ತಿರುವ ಮೋಟರ್‌ಸೈಕಲ್ ವೇಗವಾಗಿ ಓಡಿಸುವ ಹವ್ಯಾಸವನ್ನು ಬಿಡಬೇಕು. ನಾವು ಎಷ್ಟು ಹೇಳಿದರೂ, ಇದುವರೆಗೆ ನೀನು ನಮ್ಮ ಉಪದೇಶವನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ, ಆದ್ದರಿಂದ, ನೀನು ನಾಂದಿಶಾಸ್ತ್ರಕ್ಕೆ ಜವಳಗೆರೆಯಿಂದ ಹೊರಡುವ ಮುನ್ನ ನಿನ್ನ ಮೋಟರ್ ಸೈಕಲನ್ನು ವಿಕ್ರಯಿಸಿ, ಬಸ್ ಹಿಡಿದು ಬರಬೇಕು. ಇದು ನಿನ್ನ ತಾಯಿಯಾದ ನಾನು ಮಾಡುವ ಕಟ್ಟಪ್ಪಣೆ..! ಸದ್ಯಕ್ಕೆ ನಿನ್ನ ಬೈಕ್ ಸವಾರಿ ಸಾಕು. ಮುಂದಕ್ಕೆ ದೇವರು ಅನುಕೂಲ ಕೊಟ್ಟಾಗ ನೀನು ಒಳ್ಳೆಯ ಕಾರು ಕೊಳ್ಳುವೆಯಂತೆ…! ಎಂದು ಬರೆದಿದ್ದರು.

ನಾನು ದಿವಂಗತ ಶ್ರೀಮಾನ್ ಕಳಸ ರಘುಪತಿ ಹೆಬ್ಬಾರರ ಚತುರ್ಥ ಪುತ್ರಿ ಸರೋಜಮ್ಮಳನ್ನು ಮದುವೆಯಾಗಲು ಒಪ್ಪಿ ಆಗಲೇ ಒಂದು ವರ್ಷ ಆಗಿತ್ತು. ನಾನು ನನ್ನ ಮಾತು ಪ್ರಕಾರ ಅವಳನ್ನು ವರಿಸಲೇಬೇಕಿತ್ತು. ನಾನು ಅವಳನ್ನು ಮದುವೆಯಾಗಲು ಜವಳಗೆರೆಯಿಂದ ಹೊರಡಬೇಕಾದರೆ ನನ್ನ ಪ್ರೀತಿಯ ಬುಲೆಟ್ ಮೋಟರ್ ಸೈಕಲನ್ನು ಮಾರಿ ಬರಬೇಕೆಂದು ನನ್ನ ತಾಯಿಯವರು ಕಟ್ಟಪ್ಪಣೆ ಮಾಡಿದ್ದರು. ನಾನು ದೊಡ್ಡ ಇಬ್ಬಂದಿಯಲ್ಲಿ ಸಿಲುಕೊಂಡಿದ್ದೆ. ಮದುವೆ ಬೇಡ ಅನ್ನುವ ಹಾಗಿಲ್ಲ. ಮದುವೆ ಆಗಬೇಕಾದರೆ ನನ್ನ ಪ್ರೀತಿಯ ಬುಲೆಟ್‌ಬೈಕನ್ನು ಮಾರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ‘Either it is wife or the bike’ ಎನ್ನುವ ಪರಿಸ್ಥಿತಿಯನ್ನು ನನ್ನ ವೇಗವಾಗಿ ಬೈಕ್ ಓಡಿಸುವ ಹವ್ಯಾಸದಿಂದಾಗಿ ನನ್ನ ಮೇಲೆ ತಂದುಕೊಂಡಿದ್ದೆ..!! ನಾನು ಒಂದು ವರ್ಷ ಹಿಂದೆಯೇ ವಾಗ್ದಾನ ಕೊಟ್ಟಂತೆ ಸರೋಜಮ್ಮಳನ್ನು ಎಪ್ಪತ್ತ ಒಂದನೇ ಇಸವಿಯ ಮೇ ತಿಂಗಳಲ್ಲಿ ಮದುವೆ ಆಗಲೇಬೇಕಿತ್ತು. ಅದು ನನ್ನ ಮತ್ತು ನನ್ನ ಕುಟುಂಬದವರ ಮರ್ಯಾದೆಯ ಪ್ರಶ್ನೆ ಅಗಿತ್ತು. ನನ್ನ ತಾಯಿಯವರು ಎಂದೂ ನನಗೆ ಯಾವ ನಿಬಂಧನೆಯನ್ನೂ ಹಾಕಿದವರಲ್ಲ. ಅವರು ಅವರ ಜೀವನದಲ್ಲೇ ಮೊದಲ ಬಾರಿಗೆ ನನಗೆ ಹಾಕಿದ ಮೇಲ್ಕಾಣಿಸಿದ ನಿಬಂಧನೆಯನ್ನು ನಾನು ಮೀರುವಂತಿರಲಿಲ್ಲ. ನಾನು ಆ ರಾತ್ರಿ ನಾನು ನಿದ್ರೆ ಮಾಡಲಿಲ್ಲ.

ಬೆಳಗ್ಗೆ ಆರುಗಂಟೆಗೆ ಬೈಕ್ ಓಡಿಸುತ್ತಾ ನನಗೆ ಮೋಟರ್ ಸೈಕಲ್ ಮಾರಿದ್ದ ಮಹನೀಯರ ಮನೆಗೆ ಹೋಗಿ, ಮೋಟರ್ ಸೈಕಲ್ ಮಾರುತ್ತಾ ಇದ್ದೇನೆ. ಈ ವಿಚಾರ ತಮಗೆ ತಿಳಿಸಲು ಬಂದಿದ್ದೇನೆ ಎಂದೆ. ಅವರು ಬಹಳ ಸಂತೋಷದಿಂದ, ನೀವು ಕೊಟ್ಟಷ್ಟೇ ಹಣಕ್ಕೆ ಅದನ್ನು ವಾಪಾಸ್‌ಕೊಳ್ಳುತ್ತಾ ಇದ್ದೇನೆ ಎಂದು ಎರಡುಸಾವಿರ ರೂಪಾಯಿ ನಗದು ತಂದು ನನ್ನ ಕೈಯ್ಯಲ್ಲಿ ಇಟ್ಟರು. ನಾನು ಕಾಗದ ಪತ್ರಗಳಿಗೆ ಸಹಿಮಾಡಿ ಅವರಿಗೆ ಕೊಟ್ಟೆ. ಇಂದು ಬೆಳಗಿನ ನಾಷ್ಟ ನಮ್ಮಲ್ಲಿ ನೀವು ಮಾಡಲೇಬೇಕು ಎಂದು ಒತ್ತಾಯಿಸಿ, ಅವರಲ್ಲೇ ಬೆಳಗಿನ ಉಪಹಾರ ಮಾಡಿಸಿದರು.

ನನ್ನನ್ನು ಅವರ ಇಂಡಿಯನ್ ಬೈಕಿನಲ್ಲಿ ನಮ್ಮ ಫಾರ್ಮಿಗೆ ಕರೆತಂದು, ಬಿಟ್ಟು ಹೋಗುವಾಗ, ಪೆಜತ್ತಾಯರೇ, ಇಂದು ನೀವು ಹಿಂದಿರುಗಿಸಿದ ಇಂಗ್ಲೀಷ್ ಬುಲೆಟ್ ಮೋಟರ್ ಸೈಕಲನ್ನು ಇನ್ನು ಮುಂದಕ್ಕೆ ನಾನು ಯಾರಿಗೂ ಮಾರುವುದಿಲ್ಲ. ಅದು ನನ್ನ ಲಕ್ಕಿ ಬೈಕ್. ನಿಮಗೆ ಅದನ್ನು ಆದಿನ ಮನಸ್ಸಿಲ್ಲದ ಮನಸ್ಸಿನಿಂದ ಮಾರಿಬಿಟ್ಟು, ಆ ಬಗ್ಗೆ ದಿನಾ ಪರಿತಪಿಸುತ್ತಿದ್ದೆ. ಅದು ಇಂದು ನನ್ನಲ್ಲಿಗೆ ವಾಪಸ್ ಬಂತು ಎಂದು ಸಂತೋಷಿಸುತ್ತಿದ್ದೇನೆ ಎಂದು ನನಗೆ ವಂದಿಸಿ ತಮ್ಮ ಫಾರ್ಮಿಗೆ ಹೊರಟುಹೋದರು.

ನಾನು ಆದಿನ ಬಹು ದುಃಖಿತನಾಗಿದ್ದೆ. ಆನಂತರ ನಾನು ಜವಳಗೆರೆ ಬಿಟ್ಟು ಹೊರಡುವ ತನಕ ನಮ್ಮ ಆಫೀಸಿನ ವಿಲ್ಲೀಸ್ 4WD ಜೀಪಿನಲ್ಲೇ ಓಡಾಡಿದೆ. ಅದೇ ಮೇ ತಿಂಗಳ ಒಂಬತ್ತನೇ ತಾರೀಕು ನನ್ನ ಮದುವೆ ಆಯಿತು. ಮದುವೆಯಾದ ನಂತರ ನಮ್ಮದೇ ಆದ ಸ್ವಂತ ಕಾರು ಕೊಳ್ಳಲು ನನಗೆ ಆರುವರ್ಷಗಳೇ ಬೇಕಾದುವು.

ನನ್ನ ಪೂಜ್ಯ ತಾಯಿಯವರು ಎಂಬತ್ತರ ದಶಕದಲ್ಲಿ ತೀರಿಕೊಂಡರು. ಅವರ ಕಟ್ಟಾಜ್ಞೆಯಂತೆ ನಾನು ಮುಂದಕ್ಕೆ ಎಂದಿಗೂ ಸ್ವಂತ ಉಪಯೋಗಕ್ಕೆ ಮೋಟಾರ್ ಸೈಕಲ್ ಕೊಳ್ಳಲಿಲ್ಲ. ನನ್ನ ಚಿಕ್ಕ ಮಗಳು ರಚನಾ ಸ್ವಲ್ಪ ನನ್ನ ಹಾಗೆಯೇ! ಆಕೆ ಕಾಲೇಜಿಗೆ ಹೋಗುತ್ತಿರುವಾಗ ತನಗೆ ಬೈಕ್ ಬೇಕೆಂದು ಕೇಳಿದಳು. ಹೊಸ ಸುಜುಕಿ ಬೈಕ್ ತೆಗೆದುಕೊಟ್ಟೆ. ಆಕೆಗೆ ಇಂದು ಸ್ವಂತ ಕಾರು ಇದ್ದರೂ, ಆ ಸುಜುಕಿ ಬೈಕನ್ನು ಅವಳು ಇದುವರೆಗೆ ಮಾರಾಟ ಮಾಡಿಲ್ಲ. ಆ ಮೋಟಾರ್ ಸೈಕಲನ್ನು ಅವಳು ಆಗಾಗ ಓಡಿಸುತ್ತಾ ಸುಸ್ಥಿತಿಯಲ್ಲಿ ಇಟ್ಟಿದ್ದಾಳೆ. ಎಷ್ಟಾದರೂ ಆಕೆ ಈ ಅಪ್ಪನ ಮಗಳಲ್ಲವೆ?

ಬುಲೆಟ್ ಹೊಂದಿದ್ದ ಆ ಸುವರ್ಣದಿನಗಳಲ್ಲಿ ನನ್ನ ಮೋಟರ್ ಸೈಕಲ್ ಮೇಲೆ ಭಾರತದ ಪ್ರವಾಸ ಮಾಡಬೇಕೆಂಬ ಆಸೆ ಉಂಟಾಗಿತ್ತು. ಆದರೆ ಜೀವನದಲ್ಲಿ ಎಲ್ಲಾ ಆಸೆಗಳು ನೆರವೇರಲು ಸಾಧ್ಯವೆ? ವರ್ಷಕ್ಕೆ ಮೂರುದಿನ ಮಾತ್ರ ರಜಾ ಮಾಡುತ್ತಿದ್ದ ನನಗೆ ಭಾರತ ಸುತ್ತಲು ರಜೆ ಎಲ್ಲಿತ್ತು? ಆ ಕನಸು ಕನಸಾಗೇ ಉಳಿಯಿತು.

ಜವಳಗೆರೆಯ ಫಾರ್ಮಿನಲ್ಲಿ ಕಷ್ಟಪಟ್ಟು ದುಡಿದದ್ದರಿಂದ ಒಳ್ಳೆಯ ಫಾರ್ಮ್ ಮ್ಯಾನೇಜರ್ ಎಂಬ ಹೆಸರು ಪಡೆದೆ. ನಮ್ಮ ನಮ್ಮ ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಹೆಸರು ಪಡೆಯುವುದು ಜೀವನದ ದೊಡ್ಡ ಸಾಧನೆ. ನಾನು ನನ್ನ ಫಾರ್ಮಿನ ಮಾಲಿಕರಿಂದ ಪಡೆದ ಸಂಬಳಕ್ಕೆ ಪ್ರತಿಯಾಗಿ ನನ್ನ ಕೈಲಾದಷ್ಟು ದುಡಿದಿದ್ದೇನೆ ಎಂಬ ಸಮಾಧಾನ ನನಗೆ ಇದೆ. ಈ ಸ್ಯಾಟಿಸ್‌ಫ್ಯಾಕ್ಷನ್ ಗುರುತರವಾದದ್ದು ಎಂದು ನನ್ನ ಭಾವನೆ. ಮುಂದಕ್ಕೆ ನಾನು ಜವಳಗೆರೆಯಿಂದ ಹೊರಟು ಮಲೆನಾಡಲ್ಲಿ ನೆಲೆಸಿದೆ. ನಮ್ಮ ಜವಳಗೆರೆಯ ಫಾರ್ಮಿನ ಮಾಲಿಕರು ಆಶೀರ್ವಾದ ಮಾಡಿ ನನ್ನನ್ನು ಬೀಳ್ಕೊಟ್ಟರು.

ಇಂದು ಸ್ವಂತವಾಗಿ ವ್ಯವಸಾಯ ಮಾಡುತ್ತಾ ಒಳ್ಳೆಯ ಕಾಫಿ ಬೆಳೆಗಾರ ಎನ್ನಿಸಿಕೊಂಡಿದ್ದೇನೆ. ಹಿರಿಯರ ಆಶೀರ್ವಾದ ಮತ್ತು ನನ್ನ ತಾಯಿಯವರ ಹಾರೈಕೆಯಂತೆ, ಇಂದು ಮನೆಯಲ್ಲಿ ಕಾರು ಮತ್ತು ಜೀಪ್ ಇಟ್ಟುಕೊಂಡು ತೃಪ್ತಿಯ ಜೀವನ ನಡೆಸುತ್ತಿದ್ದೇನೆ.

ನನಗೀಗ ಅರುವತ್ತೆರಡು ವರ್ಷ ವಯಸ್ಸು. ಈಗಲೂ ಎಲ್ಲಾದರೂ ಒಳ್ಳೆಯ ಕಂಡೀಶನ್‌ನಲ್ಲಿ ಇರುವ ಬುಲೆಟ್ ಮೋಟರ್ ಸೈಕಲ್‌ಗಳು ಕಣ್ಣಿಗೆ ಬಿದ್ದರೆ, ಅವನ್ನು ಒಂದು ಕ್ಷಣ ನೋಡುತ್ತಾ ನಿಂತು, ನನ್ನ ಅರುವತ್ತ ಒಂದನೇ ಮಾಡೆಲ್ ಬೈಕ್‌ನ ನೆನಪು ಮಾಡಿಕೊಳ್ಳುತ್ತೇನೆ. ಇದುವರೆಗೆ ನನ್ನ ಸ್ವಂತ ಓಡಾಟಕ್ಕೋಸ್ಕರವಾಗಿ, ನನಗೆ ಅತ್ಯಂತ ಪ್ರಿಯವಾದ ರಾಯಲ್ ಎನ್‌ಫೀಲ್ಡ್ ಬುಲೆಟ್‌ಬೈಕ್ ಕೊಳ್ಳದೇ, ನನ್ನ ಮಾತೃವಾಕ್ಯವನ್ನು ಇಂದಿಗೂ ಪರಿಪಾಲಿಸುತ್ತಿದ್ದೇನೆ.

* * *