ಪ್ರೊಫೆಸರ್ ಯು.ಎಲ್.ಆಚಾರ್ಯರು ಉಡುಪಿಯ ಎಮ್.ಜಿ.ಎಮ್ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಅವರ ಸಂಪೂರ್ಣ ಹೆಸರು ಉದ್ಯಾವರ ಲಕ್ಷ್ಮೀನಾರಾಯಣ ಆಚಾರ್ಯ ಎಂದು. ಉಡುಪಿಯ ಅತಿ ಮೇಧಾವಿಗಳಲ್ಲಿ ಅವರೊಬ್ಬರು ಎನ್ನುವುದರಲ್ಲಿ ಸಂಶಯವೇ ಇಲ್ಲ.

ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರೊಫೆಸರರಾಗಿದ್ದ ಅವರು ತುಂಬಾ ತೀಕ್ಷ್ಣಮತಿ. ತನ್ನ ಕ್ಲಾಸುಗಳಲ್ಲಿ ಕ್ಲಿಷ್ಟಕರವಾದ ಲೆಕ್ಕಗಳನ್ನು ಮಾಡುವಾಗ ಲಾಗರಿತಮ್ ಸಂಖ್ಯೆಗಳನ್ನು ಕ್ಲಾರ್ಕ್ಸ್ ಲಾಗರಿತಮ್ ಮತ್ತು ಪೀರಿಯಾಡಿಕ್ ಟೇಬಲ್ಸ್  ನೋಡದೇ ಬರೆಯುವಷ್ಟು ಜ್ಞಾಪಕಶಕ್ತಿ ಅವರಿಗಿತ್ತು. ಇಡೀ ಲಾಗರಿತಮ್ ಮತ್ತು ಪೀರಿಯಾಡಿಕ್ ಟೇಬಲ್ಸ್ ಅವರ ನೆನಪಿನ ಪಟಲದಲ್ಲಿ ಛಾಯಾಚಿತ್ರದಂತೆ ಮೂಡಿತ್ತು. ಅವರು ಕ್ಲಾಸುಗಳಿಗೆ ಪಾಠಮಾಡಲು ಬರುವಾಗ ಎಂದೂ ನೋಟ್ಸ್ ಬರೆದುಕೊಂಡು ಬರುತ್ತಿರಲಿಲ್ಲ. ಬರೇ ಕೈಯ್ಯಲ್ಲಿ ಕ್ಲಾಸುಗಳಿಗೆ ಬಂದು, ಭೌತಶಾಸ್ತ್ರದ ಸಿದ್ಧಾಂತ ಮತ್ತು ಪ್ರಮೇಯಗಳನ್ನು ಬೋರ್ಡಿನ ಮೇಲೆ ಬರೆದು, ಅವಕ್ಕೆ ಸಂಬಂಧ ಪಟ್ಟ ಗಣಿತಸಮಸ್ಯೆಗಳು ಮತ್ತು ಅಂಕಿ‌ಅಂಶಗಳನ್ನು ನಿಖರವಾಗಿ ನೀಡುತ್ತಾ ಪಾಠ ಮಾಡುತ್ತಿದ್ದರು ಮತ್ತು ನಮಗೆ ಅವರು ನೋಟ್ಸ್ ಡಿಕ್ಟೇಟ್ ಮಾಡುತ್ತಿದ್ದರು. ಪ್ರೊಫೆಸರ್ ಯು.ಎಲ್.ಆಚಾರ್ಯರು ಕ್ಲಾಸುಗಳಲ್ಲಿ ಡಿಕ್ಟೇಟ್ ಮಾಡಿದ ನೋಟ್ಸ್ ಇದ್ದರೆ, ಟೆಕ್ಸ್ಟ್‌ಬುಕ್‌ಗಳನ್ನು ಅವರ ವಿದ್ಯಾರ್ಥಿಗಳು ಓದುವ ಅಗತ್ಯವೇ ಬೀಳುತ್ತಿರಲಿಲ್ಲ. ಅಷ್ಟು ಸಮಗ್ರವಾಗಿ ಮತ್ತು ನಿಖರವಾಗಿ ಅವರು ನೋಟ್ಸ್ ಡಿಕ್ಟೇಟ್ ಮಾಡುತ್ತಿದ್ದರು. ಅವರಿಗೆ ವಿದ್ಯಾರ್ಥಿಗಳಾದ ನಮ್ಮೆಲ್ಲರ ಹೆಸರುಗಳು ನಮ್ಮ ಇನಿಶಿಯಲ್ಸ್ ಸಮೇತ ಜ್ಞಾಪಕದಲ್ಲಿರುತ್ತಿತ್ತು. ನಾವು ಹಿಂದಿನ ಪರೀಕ್ಷೆಗಳು ಮತ್ತು ಟೆಸ್ಟ್‌ಗಳಲ್ಲಿ ಪಡೆದ ಅಂಕಗಳನ್ನೂ ಅವರು ಮರೆಯುತ್ತಿರಲಿಲ್ಲ..!

ಅವರು ಸ್ವಾತಂತ್ರ್ಯಪೂರ್ವದಲ್ಲಿ, ದಕ್ಷಿಣಭಾರತದಲ್ಲೇ ಪ್ರಖ್ಯಾತವಾಗಿದ್ದ ಮದರಾಸ್ ವಿಶ್ವವಿದ್ಯಾಲಯದಲ್ಲಿ ಸುವರ್ಣಪದಕ ವಿಜೇತ ವಿದ್ಯಾರ್ಥಿಯಾಗಿದ್ದರಂತೆ. ಆ ಕಾಲದಲ್ಲಿ ಸೈನ್ಸ್‌ಸಬ್ಜೆಕ್ಟ್‌ಗಳಿಗೆ ಕೂಡಾ ಸ್ನಾತಕೋತ್ತರ ಪದವಿಯಾಗಿ ಎಮ್.ಏ. ಎಂಬ ಪದವಿಯನ್ನೇ ಮದ್ರಾಸ್ ವಿಶ್ವವಿದ್ಯಾಲಯದವರು ನೀಡುತ್ತಿದ್ದರಂತೆ. ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿದ್ದ ಅವರಿಗೆ ಆಗಿನ ಸರಕಾರದ ಹಲವಾರು ಹುದ್ದೆಗಳನ್ನು ಸ್ವೀಕರಿಸಲು ಸರಕಾರೀ ಆಮಂತ್ರಣಗಳು ತಾವಾಗೇ ಬಂದಿದ್ದುವಂತೆ. ತಮ್ಮ ವಿದ್ಯಾರ್ಥಿಜೀವನದಲ್ಲಿ ಶ್ರೀ ಯು.ಎಲ್.ಆಚಾರ್ಯರು ಮಹಾತ್ಮಗಾಂಧಿಯವರ ವ್ಯಕ್ತಿತ್ವ ಮತ್ತು ಸ್ವಾತಂತ್ರ ಚಳುವಳಿಗಳಿಂದ ಆಕರ್ಷಿತರಾದರಂತೆ. ಅವರು ವಿದ್ಯಾರ್ಥಿಯಾಗಿದ್ದಾಗಲೇ ಖಾದಿಬಟ್ಟೆ ತೊಡುವ ಪ್ರತಿಜ್ಞೆ ಸ್ವೀಕರಿಸಿದ್ದರಂತೆ. ಅವರು ಯಾವಾಗಲೂ ಬಿಳೇ ಬಣ್ಣದ ದೊರಗು ಖಾದಿ ಬಟ್ಟೆಯ ಜುಬ್ಬಾ ಮತ್ತು ಖಾದಿ ಪಂಚೆಯನ್ನು ಕಚ್ಚೆಹಾಕಿ ಉಡುತ್ತಿದ್ದರು. ಉಡುಪಿಯ ತೆಂಕು ಪೇಟೆ ಎಂಬಲ್ಲಿದ್ದ ಅವರ ಮನೆಯಿಂದ ತಮ್ಮ ಹಳೆಯ ಸೈಕಲ್ ಸವಾರಿ ಮಾಡುತ್ತಾ, ಎರಡು ಮೈಲಿ ದೂರದ ನಮ್ಮ ಕಾಲೇಜಿಗೆ ಬಂದು ಹೋಗುತ್ತಿದ್ದರು.

ಅವರದು ಸರಳ ನಿರಾಡಂಬರ ವ್ಯಕ್ತಿತ್ವ ಮತ್ತು ಸರಳವಾದ ನಿರಾಡಂಬರ ಜೀವನ. ಉಡುಪಿಯ ಪೇಟೆಯಲ್ಲಿ ಅವರನ್ನು ಅರಿಯದ ಜನರೇ ಇರಲಿಲ್ಲ ಎನ್ನಬಹುದು.

ನಮ್ಮ ಹೆತ್ತವರನ್ನು ಮತ್ತು ಹಿರಿಯರನ್ನು ಆಚಾರ್ಯರು ಚೆನ್ನಾಗಿ ಬಲ್ಲವರು. ಅವರು ನನ್ನ ದಿವಂಗತ ತಂದೆಯವರ ಪರಿಚಯಸ್ಥರು ಮತ್ತು ನನ್ನ ಹಿರಿಯ ಅಣ್ಣಂದಿರಿಗೆ ಕಾಲೇಜಿನಲ್ಲಿ ಪಾಠ ಹೇಳಿದವರು, ಅವರನ್ನು ಕಂಡರೆ ನಮಗೆ ತುಂಬಾ ಭಯಭಕ್ತಿ ಇತ್ತು.

ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ, ಸ್ವತಂತ್ರ ಭಾರತದ ಕನಸು ಕಾಣುತ್ತಿದ್ದ ಆಚಾರ್ಯರು ಸರಕಾರೀ ಹುದ್ದೆಗಳನ್ನು ನಿರಾಕರಿಸಿ, ತನ್ನ ಹುಟ್ಟೂರಾದ ಉಡುಪಿಗೆ ಮರಳಿ ಬಂದರಂತೆ. ಉಡುಪಿಯಲ್ಲಿ ಆಗ ಯಾವ ಕಾಲೇಜೂ ಇರಲಿಲ್ಲ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಅವರಿಗೆ ಭೌತಶಾಸ್ತ್ರದ ಅಧ್ಯಾಪಕ ಹುದ್ದೆ ದೊರೆಯಿತಂತೆ. ಅದನ್ನು ಸ್ವೀಕರಿಸಿ, ಅವರು ಮಂಗಳೂರಿಗೆ ಹೋಗಿ ಮೊದಲ ದಿವಸದ ಪಾಠ ಮಾಡಿದರಂತೆ. ಆದರೆ, ಆ ಕಾಲೇಜಿನ ಪ್ರಾಂಶುಪಾಲರು ಅವರನ್ನು ತನ್ನ ಆಫೀಸಿಗೆ ಮೊದಲ ದಿನದ ಸಾಯಂಕಾಲ ಹೊತ್ತಿಗೆ ಕರೆದು, ಕಾಲೇಜಿನ ಡ್ರೆಸ್‌ಕೋಡ್ ಪ್ರಕಾರ, ಅಧ್ಯಾಪಕರಾದ ನೀವು ಸೂಟ್ ಧರಿಸಿ ಬಂದು ಪಾಠ ಮಾಡಬೇಕು ಎಂದು ತಾಕೀತು ಮಾಡಿದರಂತೆ..!! ಮರುದಿನ ಆಚಾರ್ಯರು ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಒಂದು ಸೂಟ್ ಇರಿಸಿಕೊಂಡು ಕಾಲೇಜಿಗೆ ಹೋದರಂತೆ. ಆ ಪೆಟ್ಟಿಗೆಯನ್ನು ಹೊತ್ತು ಕಾಲೇಜಿನ ಪ್ರಾಂಶುಪಾಲರ ಆಫೀಸಿಗೆ ಹೋದರಂತೆ. ಶಾಂತ ಸ್ವರದಿಂದಲೇ ಮಾನ್ಯ ಪ್ರಾಂಶುಪಾಲ ಸಾಹೇಬರೇ, ದಯವಿಟ್ಟು ಈ ಸೂಟ್‌ನ ಹತ್ತಿರ ನಿಮ್ಮ ವಿದ್ಯಾರ್ಥಿಗಳಿಗೆ ಪಾಠಮಾಡಲು ಹೇಳಿ! ಎಂದು ಗುಡುಗಿ, ಸೂಟ್‌ನ ಪೆಟ್ಟಿಗೆಯ ಜತೆಗೆ ತನ್ನ ರಾಜೀನಾಮೆ ಪತ್ರವನ್ನೂ ಪ್ರಾಂಶುಪಾಲರ ಟೇಬಲ್ ಮೇಲೆ ಇಟ್ಟು, ಹಿಂತಿರುಗಿ ನೋಡದೆ ಪುನಃ ತನ್ನ ಸ್ವಂತ ಊರಾದ ಉಡುಪಿಗೆ ಮರಳಿ ಬಂದರಂತೆ.

ಅವರ ವಿದ್ಯಾಯೋಗ್ಯತೆಗೆ ತಕ್ಕ ಕಾಲೇಜು ಉಡುಪಿಯಲ್ಲಿ ಇರದ ಕಾರಣ, ಹತ್ತಿರದ ಕಲ್ಯಾಣಪುರ ಎಂಬ ಹಳ್ಳಿ ಊರಿನಲ್ಲಿ ಹೊಸದಾಗಿ ಶುರುವಾದ ಹೈಸ್ಕೂಲ್‌ವೊಂದರಲ್ಲಿ ಸೈನ್ಸ್‌ಮಾಸ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡರಂತೆ. ಆ ವರ್ಷ ಕಲ್ಯಾಣಪುರ ಹೈಸ್ಕೂಲಿನ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಅತ್ಯುತ್ತಮ ಅಂಕ ಪಡೆದುಕೊಂಡು ತೇರ್ಗಡೆಯಾದರಂತೆ.

ಮುಂದಕ್ಕೆ ಉಡುಪಿಯಲ್ಲಿ ಏಮ್.ಜಿ.ಎಮ್ ಕಾಲೇಜಿನ ಪ್ರಾರಂಭೋತ್ಸವವಾಯಿತಂತೆ. ಭೌತಶಾಸ್ತ್ರದ ಪ್ರಾಧ್ಯಾಪಕರ ಹುದ್ದೆ ಅವರನ್ನು ತಾನಾಗಿ ಅರಸಿಕೊಂಡು ಬಂದಂತೆ ಬಂದು, ಅವರಿಗೆ ಪ್ರಾಪ್ತವಾಯಿತಂತೆ. ಈ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿದ ಯು.ಎಲ್.ಆಚಾರ್ಯರು ಅದೇ ಹುದ್ದೆಯಲ್ಲಿ ರಿಟಾಯರ್ ಆಗುವ ತನಕ ಮುಂದುವರೆದರು. ತನ್ಮಧ್ಯೆ ಕಾಲೇಜಿನ ಪ್ರಾಂಶುಪಾಲರಾಗುವ ಅವಕಾಶಗಳು ಅವರಿಗೆ ಹಲವು ಬಾರಿ ಬಂದರೂ, ಆ ಹುದ್ದೆಯನ್ನು ಅವರು ನಿರಾಕರಿಸುತ್ತಾ, ತಾನೊಬ್ಬ ಪ್ರೊಫೆಸರರಾಗಿಯೇ ಮುಂದುವರೆದರು. ಅವರಿಗೆ ಪ್ರಾಂಶುಪಾಲ ಹುದ್ದೆಯ ಅಧಿಕಾರ ಮತ್ತು ಹೆಚ್ಚಿನ ಮರ್ಯಾದೆಗಳ ಲಾಲಸೆ ಇರಲಿಲ್ಲ. ವಿದ್ಯಾರ್ಥಿಗಳಿಗೆ ಚೆನ್ನಾಗಿ ಪಾಠಹೇಳುವುದೇ ಅವರ ಧ್ಯೇಯವಾಗಿತ್ತು.

ಅವರ ಕ್ಲಾಸಿನಲ್ಲಿ ಪಾಠ ಸರಿಯಾಗಿ ಅರ್ಥವಾಗದೇ ಹೋದರೆ, ಕೆಲ ವಿದ್ಯಾರ್ಥಿಗಳು ಅವರ ಡಿಪಾರ್ಟ್‌ಮೆಂಟಿನ ಅವರ ಸ್ವಂತ ಆಫೀಸಿಗೆ ಹೋಗಿ, ತಮಗೆ ಅರ್ಥವಾಗದ ಪಾಠಗಳ ಬಗ್ಗೆ ತಿಳಿಸಿದರೆ, ಬೇಸರವಿಲ್ಲದೆ ಅವರು ಆ ಪಾಠಗಳನ್ನು ವಿವರಿಸುತ್ತಿದ್ದರು. ಪರೀಕ್ಷಾ ಸಮಯದಲ್ಲಿ ಸರಿಯಾಗಿ ಮನನವಾಗದ ಪಾಠಗಳನ್ನು ವಿದ್ಯಾರ್ಥಿಗಳಿಗೆ ಪುನಃ ಪಾಠ ಮಾಡಲು ಅವರು ಸದಾ ತಯಾರಿರುತ್ತಿದ್ದರು. ಹಣ ಪಡೆದು ಜೀವಮಾನದಲ್ಲೇ ಅವರು ಯಾರಿಗೂ ಟ್ಯೂಷನ್  ಹೇಳಿದವರಲ್ಲ. ಅವರ ಮನೆಗೆ ಹೋಗಿ ಅರ್ಥವಾಗದ ಪಾಠಗಳನ್ನು ಕೇಳಿದ ಇತರೇ ಕಾಲೇಜಿನ ವಿದ್ಯಾರ್ಥಿಗಳಿಗೆ ಕೂಡಾ ಮನದಟ್ಟಾಗುವಂತೆ ಪಾಠಗಳನ್ನು ಧರ್ಮಾರ್ಥವಾಗಿ ಹೇಳಿಕೊಡುತ್ತಿದ್ದರು. ಪ್ರೊಫೆಸರ್ ಆಚಾರ್ಯರು ವಿದ್ಯಾರ್ಥಿಗಳಿಗೆ ಪಾಠ ಹೇಳಲೆಂದೇ ತಮ್ಮ ಜೀವನವನ್ನು ಮುಡುಪಾಗಿರಿಸಿದ ವ್ಯಕಿಯಾಗಿದ್ದರು. ಅವರಿಗೆ ಅಶಿಸ್ತು ಮತ್ತು ಅಸಭ್ಯತೆ ಕಂಡರಾಗುತ್ತಿರಲಿಲ್ಲ. ಶೀಘ್ರಕೋಪಿಯಾದ ಅವರು ಅಶಿಸ್ತು ಮತ್ತು ಕೆಟ್ಟನಡತೆ ಕಂಡಲ್ಲಿ ವಿದ್ಯಾರ್ಥಿಗಳನ್ನು ಬೈದೇಬಿಡುತ್ತಿದ್ದರು.

ನಾನು ಎಮ್.ಜಿ.ಎಮ್ ಕಾಲೇಜಿಗೆ ೧೯೬೨ನೇ ಇಸವಿಯಲ್ಲಿ ಸೇರಿದೆ. ನಾನು ಅಂತಹಾ ಉತ್ತಮಶ್ರೇಣಿಯ ವಿದ್ಯಾರ್ಥಿಯೇನೂ ಅಗಿರಲಿಲ್ಲ. ನಾನು ಪ್ರೀ ಯೂನಿವರ್ಸಿಟಿ ಕ್ಲಾಸ್ ಮತ್ತು ಫೈನಲ್ ಬಿ.ಎಸ್.ಸಿ. ಕ್ಲಾಸುಗಳಲ್ಲಿ ಡುಂಕಿ ಹೊಡೆದೇ ಮುಂದುವರಿದೆ..! ನಾನು ಚಿಕ್ಕಂದಿನಿಂದಲೂ ಗಣಿತ ವಿಷಯದಲ್ಲಿ ಬಹು ಹಿಂದೆ! ಗಣಿತಶಾಸ್ತ್ರವನ್ನು ಉಪಾಧ್ಯಾಯರುಗಳು  ಹೇಗೆ ಅರೆದು ಕುಡಿಸಿದರೂ, ಅದು ನನ್ನ ತಲೆಯೊಳಗೆ ಹೋಗುತ್ತಿರಲಿಲ್ಲ. ಗಣಿತದ ಬಗ್ಗೆ ನನಗೆ ವಿಶೇಷವಾದ ಒಲವಿರದೇ ಇದ್ದುದೇ, ನನ್ನ ದಡ್ಡತನಕ್ಕೆ ಕಾರಣ ಇದ್ದಿರಬಹುದು. ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರಗಳಲ್ಲಿ ನಾನು ಹೇಳಿಕೊಳ್ಳುವಷ್ಟು ದಡ್ಡನಾಗಿರಲಿಲ್ಲ. ನಾನು ವಿಜ್ಞಾನದ ವಿದ್ಯಾರ್ಥಿಯಾಗಿ ನಿರಾತಂಕವಾಗಿ ಮುಂದುವರೆಯಲು, ನನ್ನ ಗಣಿತಶಾಸ್ತ್ರದಲ್ಲಿನ ಅಲ್ಪಜ್ಞಾನವು ಬಿಡುತ್ತಿರಲಿಲ್ಲ. ಆದುದರಿಂದ, ನಾನು ಕಾಲೇಜು ಜೀವನದಲ್ಲಿ ಒಳ್ಳೆಯ ಪ್ರಗತಿ ತೋರದೇ ಕುಂಟುತ್ತಾ ಸಾಗಿದೆ.

ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಮುಂದಾಗಿಯೇ ಇದ್ದೆ..! ನಮ್ಮ ಕಾಲೇಜಿನ ಆಟಪಾಠಗಳ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಭಾರತೀಯ ನೌಕಾಪಡೆಯ ಎನ್.ಸಿ.ಸಿ. ವಿಭಾಗದಲ್ಲಿ ನಾನೇ ಮೊದಲಿಗನಾಗಿ ಹಲವಾರು ಕ್ಯಾಂಪ್‌ಗಳಲ್ಲಿ ಭಾಗವಹಿಸಿದೆ. ೧೯೬೬ನೇ ಇಸವಿಯ ದೆಹಲಿಯ ಗಣರಾಜ್ಯ ಉತ್ಸವದ ಪೆರೇಡ್‌ನಲ್ಲಿ ಆಗ ಮೈಸೂರು ರಾಜ್ಯ ಎಂದು ಕರೆಯಲ್ಪಡುತ್ತಿದ್ದ ನಮ್ಮ ರಾಜ್ಯದ ಪ್ರತಿನಿಧಿಯಾಗಿ ಕೂಡಾ ಭಾಗವಹಿಸಿದೆ. ನಾನು ಈ ಗಣರಾಜ್ಯ ಪೆರೇಡಿನಲ್ಲಿ ಭಾಗವಹಿಸುತ್ತಿರುವ ಸಂದರ್ಭದಲ್ಲೇ, ನಮ್ಮ ದೇಶದ ನೆಚ್ಚಿನ ಪ್ರಧಾನಿ ಶ್ರೀ ಲಾಲ್‌ಬಹದ್ದೂರ ಶಾಸ್ತ್ರಿಯವರು ಕಾಲವಶರಾದರು. ಅವರ ಅಂತಿಮಯಾತ್ರೆಯಲ್ಲಿ ಭಾಗವಹಿಸುವ ಅವಕಾಶವೂ ನನಗೆ ಸಿಕ್ಕಿತು. ನಾನು ಲಾಲ್‌ಬಹದ್ದೂರ್ ಶಾಸ್ತ್ರಿಯವರ ವ್ಯಕ್ತಿತ್ವದಿಂದ ಪ್ರಭಾವಿತನಾದೆ.

ನಾನು ಗಣಿತದಲ್ಲಿ ಸ್ವಲ್ಪ ದಡ್ಡ ವಿದ್ಯಾರ್ಥಿ ಎಂದು ಗೊತ್ತಿದ್ದರೂ, ಪ್ರೊಫೆಸರ್ ಯೂ.ಎಲ್.ಆಚಾರ್ಯರು ನನ್ನನ್ನು ಎಂದೂ ಹೀನಾಯ ಮಾಡಿದವರಲ್ಲ. ಕಾಲೇಜಿನ ಸೈನ್ಸ್‌ಕ್ಲಬ್ ಚಟುವಟಿಕೆಗಳಲ್ಲಿ ಅವರು ನನ್ನನ್ನು ಭಾಗವಹಿಸುವಂತೆ ಒತ್ತಾಯಿಸುತ್ತಿದ್ದರು. ನನ್ನನ್ನು ಒಂದುಸಾರಿ ಆಧುನಿಕ ಯುದ್ಧ ಶಸ್ತ್ರಾಸ್ತ್ರಗಳ ಬಗ್ಗೆ,  ಮತ್ತೊಮ್ಮೆ ಆಧುನಿಕ  ವಿಮಾನಗಳ ಬಗ್ಗೆ,  ಪ್ರಬಂಧಗಳನ್ನು ಮಂಡಿಸಲು ಅವರು ನಿಯಮಿಸಿಯೇ ಬಿಟ್ಟರು..! ರಾತ್ರಿ ಒಂಬತ್ತರ ತನಕ ಕಾಲೇಜಿನ ಲೈಬ್ರರಿಯಲ್ಲಿ ಕುಳಿತು, ಬೃಹತ್ ಪುಸ್ತಕಗಳನ್ನು ನೋಡಿ ಟಿಪ್ಪಣಿ ಮಾಡಿಕೊಳ್ಳಲು ನನಗೆ ಅವಕಾಶ ಒದಗಿಸಿಕೊಟ್ಟರು. ಅವರ ನಂಬಿಕೆಯನ್ನು ಸುಳ್ಳುಮಾಡದೇ,  ನಾನು ಆ ಪ್ರಬಂಧಗಳನ್ನು ಚೆನ್ನಾಗಿಯೇ ಮಂಡಿಸಿ, ಅಧ್ಯಾಪಕವರ್ಗದಿಂದ ಶಹಭಾಸ್‌ಗಿರಿ ಪಡೆದೆ. ಯು.ಎಲ್.ಆಚಾರ್ಯರು ಎರಡು ಸಂದರ್ಭಗಳಲ್ಲೂ ನನ್ನ ಬೆನ್ನುತಟ್ಟಿ ಪ್ರಶಂಸಿಸಿದರು. ಅವರ ಕ್ಲಾಸಿನಲ್ಲಿ ನಾನು ಯಾವ ಹೆಚ್ಚಿನ ಚೇಷ್ಟೆ ಮಾಡದೇ ಸುಮ್ಮನಿದ್ದರೂ, ಬೇರೆ ಲೆಕ್ಚರುಗಳ ಪಾಠಗಳ ಸಮಯದಲ್ಲಿ ಬಾಲಬಿಚ್ಚುತ್ತಿದ್ದೆ! ಕಾಲೇಜಿನ ಎನ್.ಸಿ.ಸಿ. ನೇವಲ್‌ವಿಂಗ್‌ನಲ್ಲಿ ಮೊದಲಿಗ ಎನ್ನಿಸಿ, ದೈಹಿಕವಾಗಿಯೂ ಧಾಂಡಿಗ  ಅನ್ನಿಸಿಕೊಂಡಿದ್ದ ನನಗೆ, ನಮ್ಮ ಕಾಲೇಜಿನ ಅಧ್ಯಾಪಕರು ಸ್ವಲ್ಪ ಹೆಚ್ಚಿನ ಮರ್ಯಾದೆ ಕೊಡುತ್ತಿದ್ದರು. ನಾನು ಕ್ಲಾಸುಗಳಲ್ಲಿ ಕೆಲವೊಮ್ಮೆ ಸ್ವಲ್ಪ ತುಂಟುತನ ಮಾಡಿದರೂ, ಸಾಮಾನ್ಯವಾಗಿ ನನಗೆ ಅಲ್ಪಸ್ವಲ್ಪ ಛೀಮಾರಿಯ ಶಿಕ್ಷೆ ಸಿಕ್ಕಿದರೂ, ಕ್ಲಾಸಿನಿಂದ ಡಿಬಾರ್ ಮೊದಲಾದ ಉಗ್ರಶಿಕ್ಷೆಗಳು ವಿಧಿಸಲ್ಪಡದೇ, ಅವುಗಳಿಂದ ಮಾಫಿ ದೊರೆಯುತ್ತಿತ್ತು. ಆದರೂ, ಕೆಲವೊಮ್ಮೆ ನನ್ನ ಚೇಷ್ಟೆಗಳು ಅತಿಯಾದಾಗ, ಆ ವಿಚಾರವು ಹೇಗೋ ಪ್ರೊಫೆಸರ್ ಯು.ಎಲ್.ಆಚಾರ್ಯರಿಗೆ ತಿಳಿದುಹೋಗುತ್ತಿತ್ತು. ಅವರು ನನ್ನನ್ನು ಭೌತಶಾಸ್ತ್ರದ ಡಿಪಾರ್ಟ್‌ಮೆಂಟಿನ ಅವರ ಸ್ವಂತ ಆಫೀಸಿಗೆ ಕರೆಸಿ ಗಂಟೆಗಟ್ಟಳೆ ಬಯ್ಯುತ್ತಿದ್ದರು. ಈ ಏಕಾಂತದ ಪರ್ಸನಲ್ ಬೈಗಳನ್ನು ನಾನು ಬಹು ವಿಧೇಯನಾಗಿ ಕೇಳುತ್ತಿದ್ದೆ! ನಾನು ಎಂದೂ ಅವರಿಗೆ ಎದುರುತ್ತರ ಕೊಡುತ್ತಿರಲಿಲ್ಲ. ಪ್ರೊಫೆಸರ್ ಆಚಾರ್ಯರ ಕೈಯ್ಯಲ್ಲಿ ಬೈಗಳು ತಿನ್ನುವುದೇ ಒಂದು ಸೊಗಸು! ಏಕಾ‌ಏಕಿ ಜಡಿಮಳೆ ಸುರಿಯುವಂತೆ ಬೈಗಳ ಮಳೆಯೇ ಸುರಿಯುತ್ತಿತ್ತು..! ಅವರ ಬೈಗಳ ಮಾಲಿಕೆಗಳಲ್ಲಿ ಅನ್- ಪಾರ್ಲಿಮೆಂಟರಿ ಶಬ್ದಗಳು ಎಂದೂ ನುಸುಳಿ ಬರುತ್ತಿರಲಿಲ್ಲ. ಬೈಗಳಿನ ಮಧ್ಯೆ ಡಾರ್ವಿನನ ವಿಕಾಸವಾದ, ನ್ಯೂಟನನ ಥಿಯರಿ ಆಫ್ ಗ್ರಾವಿಟಿ, ಐನ್‌ಸ್ಟೈನ್‌ನ ಥಿಯರಿ ಆಫ್ ರಿಲೇಟಿವಿಟಿ, ಅಟಾಮಿಕ್ ಎನರ್ಜಿ, ಟ್ರಾನ್ಸ್‌ಮ್ಯುಟೇಶನ್ ಆಫ್ ಎಲಿಮೆಂಟ್ಸ್ ಮೊದಲಾದುವು ಎಲ್ಲಾ ಸೇರಿಕೊಂಡು, ಅವರು ಹಾಕುವ ಆ ಛೀಮಾರಿಯ ಸರಮಾಲೆಗಳು, ನನ್ನ ಕಡೆಗೆ ಪುಂಖಾನುಪುಂಖವಾಗಿ ಒಳ್ಳೆಯ ಪಾಠದ ರೂಪದಲ್ಲೇ ಹರಿದು ಬರುತ್ತಿದ್ದವು. ನಾನು ಹಂಸಕ್ಷೀರ ನ್ಯಾಯದಲ್ಲಿ ಬೇಕಾದುದನ್ನು ಕೇಳಿ, ಬೇಡವಾದುವನ್ನು ಅಲ್ಲೇ ಮರೆಯುತ್ತಿದ್ದೆ. ನಾನು ಹೀಗೆ ಗಂಟೆಗಟ್ಟಲೆ ಅವರಿಂದ ಬೈಗಳು ತಿಂದರೂ, ಅವರ ಮುಂದಿನ ಕ್ಲಾಸಿನಲ್ಲಿ ಅವರು ನನ್ನನ್ನು ಇತರೇ ವಿದ್ಯಾರ್ಥಿಗಳ ಎದುರಿನಲ್ಲಿ ಹೀನಾಯಿಸಿದ ನಿದರ್ಶನ ಎಂದಿಗೂ ಇಲ್ಲ.

ಅವರು ನನ್ನನ್ನು ಒಬ್ಬ ಜಂಟಲ್‌ಮ್ಯಾನ್ ತರಹ ಟ್ರೀಟ್ ಮಾಡುತ್ತಿದ್ದರು! ನಾನೂ ಅವರಿಗೆ ಅತೀ ಹೆಚ್ಚಿನ ಮರ್ಯಾದೆ ಕೊಡುತ್ತಾ ಇರುತ್ತಿದ್ದೆ. ಅವರ ಎದುರು ನಾನು ಎಂದೂ ಸುಳ್ಳು ಹೇಳುತ್ತಿರಲಿಲ್ಲ.  ಒಮ್ಮೆ ಅವರು ಯಾರದೋ ಚಾಡಿಮಾತು ಕೇಳಿ ನನ್ನನ್ನು ಸುಖಾಸುಮ್ಮನೆ ಬೈದರು! ಸುಮಾರು ಒಂದು ಗಂಟೆ ಅವರ ಬೈಗಳು ಕೇಳಿದ ನಂತರ,  ನಾನೂ ತಿರುಗಿ ಬಿದ್ದು ನನ್ನ ನಿರಪರಾಧಿತನವನ್ನು ಜೋರಾಗಿಯೇ ಕಿರುಚಿ ನಿರೂಪಿಸಿದೆ. ಅವರು ನನ್ನ ವಿಚಾರ ಸರಣಿಯನ್ನು ಒಪ್ಪಿದರು. ತಾನು ಸುಖಾಸುಮ್ಮನೆ ಬೈದೆ! ಎಂಬ ವಿಚಾರ ಅವರಿಗೆ ಮನದಟ್ಟಾಯಿತು. ನೋಡು! ಪೆಜತ್ತಾಯಾ, ನಾನು ನಿನ್ನ ತುಂಟುತನಕ್ಕೆ ಬೈದರೂ, ನೀನು ಪೋಲಿಯಲ್ಲ. ತುಂಟುತನ ನಿನ್ನ ಪ್ರಾಯದವರಿಗೆ ಇರಬೇಕಾದ ಗುಣ. ಆದರೂ, ಅದು ಎಲ್ಲೆ ಮೀರಬಾರದು. ನೀನು ಇದುವರೆಗೆ ಎಂದೂ ಅಗ್ಗದ ಪೋಲಿಯಂತೆ ವರ್ತಿಸಿಲ್ಲ ಎಂದು ತಿಳಿದು ನನಗೆ ಸಂತೋಷವಾಗಿದೆ. ಎಂದಿಗೂ ‘ಸುಳ್ಳು ಹೇಳಿ ಬಚಾಯಿಸಿಕೊಳ್ಳಲು ನೀನು ಪ್ರಯತ್ನ ಮಾಡಿಲ್ಲ! ನೀನು ಎಂದಿಗೂ ಸುಳ್ಳು ಹೇಳುವುದಿಲ್ಲ ಎಂದು ನನಗೆ ಮನದಟ್ಟಾಗಿದೆ. ನಿನಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳುತ್ತಾ ಆ ದಿನದ ಬೈಗಳ ಪಾಠ ಮುಗಿಸಿದರು. ಆಗ ನಾನು ಫೈನಲ್ ಇಯರಿನಲ್ಲಿದ್ದೆ.

ಮುಂದಕ್ಕೆ ಕಾಲೇಜಿನಿಂದ ಹೊರಬಂದೆ. ದಿವಂಗತ ಲಾಲ್ ಬಹಾದ್ದೂರ್ ಶಾಸ್ತ್ರಿಯವರಿಂದ ಪ್ರಭಾವಿತನಾದ ನಾನು ಭಾರತೀಯ ನೌಕಾಪಡೆಯನ್ನು ಸೇರಿಕೊಳ್ಳದೆ, ಜೈ ಕಿಸಾನ್ ಎಂದು ವ್ಯವಸಾಯ ಕ್ಷೇತ್ರಕ್ಕೆ ಇಳಿದೆ. ನಾನು ವ್ಯವಸಾಯ ಕ್ಷೇತ್ರದಲ್ಲಿ ಕಷ್ಟಪಟ್ಟು ದುಡಿದು ಒಳ್ಳೆಯ ಹೆಸರನ್ನು ಪಡೆದೆ. ನಾನು ಕಾಲೇಜು ಬಿಟ್ಟನಂತರ ಯೂ.ಎಲ್.ಆಚಾರ್ಯರು ನನ್ನ ಹಿರಿಯ ಹಿತೈಷಿಗಳೇ ಆದರು.

ನಾನು ಕಾಡು ಕಡಿದು ನನ್ನ ಅಕ್ಕ ಡಾಕ್ಟರ್ ಶಶಿಕಲಾ ಆಚಾರ್ಯಳಿಗೆ ತೆಂಗಿನತೋಟ ಮಾಡಿಕೊಡುತ್ತಿದ್ದ ಸಮಯ ನನಗೆ ಅವರು ತುಂಬಾ ಪ್ರೋತ್ಸಾಹ ಕೊಟ್ಟರು ಮತ್ತು ನನಗೆ ಸಂಜೆಯ ಹೊತ್ತು ಓದಿಕೊಳ್ಳಲು ಒಳ್ಳೆಯ ಪುಸ್ತಕಗಳನ್ನು ನೀಡಿದರು. ನಾನು ರಾಯಚೂರಿನ ತುಂಗಭದ್ರಾ ಫಾರ್ಮಿನ ಮ್ಯಾನೇಜರನಾಗಿ ನೇಮಕಗೊಂಡಾಗ ನನ್ನನ್ನು ಆಶೀರ್ವದಿಸಿ, ಬೀಳ್ಕೊಟ್ಟರು.

ಕಳಸದ ದಿವಂಗತ ಶ್ರೀ ರಘುಪತಿ ಹೆಬ್ಬಾರರ ಮಗಳ ನೆಂಟಸ್ತಿಕೆ ನನಗೆ ಬಂದಾಗ ಜಾತಕ ಹೊಂದಾಣಿಕೆ ಆಗುತ್ತದೆ. ಈ ಸಂಬಂಧ ಮುಂದುವರೆಸಿ ಎಂದು ನನ್ನ ತಾಯಿ ಮತ್ತು ದೊಡ್ಡ ಅಣ್ಣನಿಗೆ ಸಲಹೆ ನೀಡಿದ್ದರು. ಅದೇ ರೀತಿ ನನ್ನ ಮದುವೆಯೂ ಆಯಿತು. ನಾನು ಕಳಸದ ಬಾಳೆಹೊಳೆಯಲ್ಲಿ ನೆಲೆಸಿದೆ.

ಶ್ರೀ ಯು.ಎಲ್.ಆಚಾರ್ಯರು ಈ ಸಮಯದಲ್ಲಿ ರಿಟಾಯರ್ ಆದರು. ಹವ್ಯಾಸಕ್ಕಾಗಿ, ತಾನು ಮೊದಲೇ ತಿಳಿದುಕೊಂಡಿದ್ದ ಜ್ಯೋತಿಷ್ಯಶಾಸ್ತ್ರದಲ್ಲಿ ಇನ್ನೂ ಹೆಚ್ಚಿನ ಅಭ್ಯಾಸ ಮಾಡಿದರು. ಜ್ಯೋತಿಷ್ಯಶಾಸ್ತ್ರದ ಅಭ್ಯಾಸವನ್ನು ಅವರು ಹಲವು ಜನರ ಉಪಯೋಗಕ್ಕೆ ಧಾರೆಯೆರೆದರು. ಹಲವಾರು ಜನರಿಗೆ ಧರ್ಮಾರ್ಥ ಜಾತಕ ಬರೆದುಕೊಟ್ಟರು. ಅವರ ಅಗಾಧ ಗಣಿತಶಾಸ್ತ್ರದ  ಜ್ಞಾನದಿಂದ ಅವರು ಬರೆದ ಜಾತಕಗಳು ಬಹಳ ಪರಿಪೂರ್ಣವಾಗಿ ಇರುತ್ತಿದ್ದುವಂತೆ. ಕೆಲವು ಹುಡುಗರಿಗೆ ಜ್ಯೋತಿಷ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಹೇಳಿಕೊಟ್ಟರು. ಅವರ ಶಿಷ್ಯರು ಇಂದಿಗೆ ಪ್ರಸಿದ್ಧ ಜ್ಯೋತಿಷಿಗಳೆಂದು ಹೆಸರು ಪಡೆದಿದ್ದಾರೆ.

ಅವರು ತನ್ನ ಗೆಳೆಯರ ಬಳಗದೊಂದಿಗೆ ಉಡುಪಿಯ ರಥಬೀದಿಯಲ್ಲಿ ಸಾಯಂಕಾಲ ಹೊತ್ತು ಸುತ್ತಾಡುತ್ತಿರುತ್ತಿದ್ದರು. ಅಲ್ಲೂ, ಅವರು ತಾನು ಕಂಡ ಅನ್ಯಾಯದ ವಿಚಾರಗಳನ್ನು ತೀವ್ರವಾಗಿ ಖಂಡಿಸುತ್ತಾ, ನ್ಯಾಯವಾದ ವಿಚಾರಗಳನ್ನು ಪ್ರೋತ್ಸಾಹಿಸುತ್ತಿದ್ದರು. ನಾನು ಉಡುಪಿಗೆ ಹೋದಾಗಲೆಲ್ಲಾ ಅವರನ್ನು ಕಂಡು ಬರುತ್ತಿದ್ದೆ, ಮುಂದಕ್ಕೆ ನನ್ನ ಮಕ್ಕಳು ರಾಧಿಕಾ ಮತ್ತು ರಚನಾ ಹುಟ್ಟಿದ ವಿಚಾರ ಅವರಿಗೆ ತಿಳಿದಾಗ, ನನ್ನ ಮಗಳಂದಿರ ಜಾತಕಗಳನ್ನು ಸ್ಫುಟಮಾಡಿ ಬರೆದು ನನಗೆ ಟಪಾಲಿನಲ್ಲಿ ಕಳುಹಿಸಿಕೊಟ್ಟರು. ನಾನು ಕಾಲು ಹಿಡಿದು ಬೇಡಿಕೊಂಡರೂ ಅವರು ನನ್ನಿಂದ ಹಣ ಪಡೆಯಲಿಲ್ಲ.

ನಾನು ಒಮ್ಮೆ ಉಡುಪಿಗೆ ಹೋದಾಗ ಅವರನ್ನು ಕಂಡೆ. ಶ್ರೀ ಆಚಾರ್ಯರು ನನ್ನ ಪೂಜ್ಯ ತಂದೆ ಪೂಮಾವರ ಶ್ರೀನಿವಾಸ ಪೆಜತ್ತಾಯರನ್ನು ಸನಿಹದಿಂದ ಬಲ್ಲವರು. ನನ್ನ ತಂದೆಯವರ ವಿಚಾರವಾಗಿ ಅವರನ್ನು ಪ್ರಶ್ನಿಸಿ, ತಿಳಿದುಕೊಂಡೆ. ನನ್ನ ತಂದೆಯವರು ನನಗೆ ಹತ್ತುತಿಂಗಳ ಪ್ರಾಯ ಇದ್ದಾಗ ತೀರಿಕೊಂಡಿದ್ದರು. ನನ್ನ ತಾಯಿಯವರು ನಮ್ಮ ತಂದೆಯವರ ಮರಣದ ನಂತರ ಅವರ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ತಂದೆಯವರ ವಿಚಾರ ಎತ್ತಿದರೆ, ನನ್ನ ತಾಯಿಯವರಿಗೆ ನನ್ನ ತಂದೆಯವರ ನೆನಪು ಬಂದು ದುಃಖ ಉಮ್ಮಳಿಸಿಬರುತ್ತಿತ್ತು. ಆದ್ದರಿಂದ, ನಾವು ತಾಯಿಯವರ ಬಳಿ ನಮ್ಮ ತಂದೆಯವರ ಸುದ್ದಿ ಕೇಳುತ್ತಿರಲಿಲ್ಲ. ಅವರನ್ನು ಸನಿಹದಿಂದ ಬಲ್ಲ ವ್ಯಕ್ತಿಯೆಂದರೆ ನಮ್ಮ ಯು.ಎಲ್.ಆಚಾರ್ಯರು. ನನ್ನ ತಂದೆಯವರಿಗಿಂತ ಬಹಳ ಚಿಕ್ಕವರಾದರೂ ವಿದ್ಯಾವಂತ ಯುವಕನೆಂದು ನನ್ನ ತಂದೆಯವರು ಯು.ಎಲ್.ಆಚಾರ್ಯರನ್ನು ಬಹಳವಾಗಿ ಮೆಚ್ಚಿಕೊಂಡಿದ್ದರಂತೆ. ಉಡುಪಿಯಲ್ಲಿ ಎಮ್.ಜಿ.ಎಮ್. ಕಾಲೇಜಿನ ಸ್ಥಾಪನೆಯ ಯೋಜನೆ ಶುರುವಾದಾಗ, ನನ್ನ ತಂದೆಯವರು ಆ ಯೋಜನೆಗೆ ಬಹಳ ಸಹಕಾರ ನೀಡಿದ್ದರಂತೆ.

ನಾನು ನನ್ನ ಕಾಗದದ ದೋಣಿಯ ಪಯಣ (Voyages of a paper boat)  ಎಂಬ ಆಂಗ್ಲಭಾಷೆಯ ಕೃತಿಯಲ್ಲಿ ನನ್ನ ತಲೆಮಾರು ಮತ್ತು ನನ್ನ ತಂದೆಯವರ ಬಗ್ಗೆ ಬರೆದ  ಅಧ್ಯಾಯಗಳನ್ನು ಅವರಿಗೆ ಓದಿನೋಡಲು ಕೊಟ್ಟಾಗ, ಅವರು ತನ್ನ ಎಂಬತ್ತೆರಡನೇ ವಯಸ್ಸಿನಲ್ಲಿ ಇದ್ದರೂ, ನನ್ನ ಲೇಖನವನ್ನು ತಿದ್ದಿಕೊಟ್ಟರು..! ನನ್ನ ಗ್ರಾಮೀಣ ಇಂಗ್ಲೀಷ್‌ಭಾಷೆಯನ್ನು ಕೆಲವು ಕಡೆ ತಿದ್ದಿ ಬರೆಯಲು ಸಲಹೆ ಕೊಟ್ಟರು. ಅವರು ತಿದ್ದಿ ಕೊಟ್ಟ ಕರಡು ಪ್ರತಿಯನ್ನು ನಾನು ಬಹಳ ಜೋಪಾನವಾಗಿ ಇರಿಸಿಕೊಂಡಿದ್ದೇನೆ. ಈ ಭೆಟ್ಟಿಯ ನಂತರದ ಹದಿನೈದು ದಿವಸಗಳಲ್ಲಿ ಅವರು ಪರಂಧಾಮವನ್ನೈದಿದರು.

ಅವರನ್ನು ತಿಳಿದವರು ಬಲ್ಲಂತೆ, ಪ್ರೊಫೆಸರ್ ಯು.ಎಲ್. ಆಚಾರ್ಯರು ಮೊದಲಿನಿಂದಲೂ ಒಬ್ಬ ಬೆಂಕಿ ನವಾಬ (i.e. a Fire Brand!). ಅವರು ಹೆದರುತ್ತಿದ್ದುದು ದೇವರಿಗೆ ಮಾತ್ರ. ಯಾರನ್ನು ಎಲ್ಲಿಬೇಕಾದರೂ ತಪ್ಪುಕಂಡರೆ ಖಂಡಿಸುವ ಛಾತಿ ಅವರಿಗಿತ್ತು. ಅವರ ಡೆವಿಲ್ ಮೇ ಕೇರ್ ಪಾಲಿಸಿಯಿಂದ ಅವರು ಕೆಲವು ಕುಖ್ಯಾತ ವ್ಯಕ್ತಿಗಳಿಗೆ ಸಿಂಹಸ್ವಪ್ನ ಆಗಿದ್ದರು. ವಿದ್ಯಾರ್ಥಿಗಳಿಗೆ ಅವರು ವಿಶ್ವಾಮಿತ್ರ ಋಷಿ ಸಮಾನರಾಗಿ ಪ್ರೀತಿಯಿಂದ ವಿದ್ಯೆಯನ್ನು ಧಾರೆಯೆರೆದರು.

ಶ್ರೀ ಆಚಾರ್ಯರು ನಿವೃತ್ತರಾದ ಮೇಲೂ,  ಬಹಳ ಜನ ವಿದ್ಯಾರ್ಥಿಗಳು ಅವರೊಡನೆ ಯಾವುದಾದರೂ ಪಾಠ ಅರ್ಥವಾಗಲಿಲ್ಲ ಎಂದರೆ, ಅವರನ್ನು ತಮ್ಮ ಮನೆಗೆ ಕರೆದು, ಅವರಿಗೆ ಮನದಟ್ಟಾಗುವಂತೆ ಪಾಠ ಹೇಳುತ್ತಿದ್ದರು. ತನ್ನ ಈ ಕೆಲಸಕ್ಕೆ ಅವರು ಯಾವ ಸಂಭಾವನೆಯನ್ನೂ ಪಡೆದವರಲ್ಲ. ವಿದ್ಯಾದಾನವೇ ಅವರ ಜೀವನದ ಧ್ಯೇಯವಾಗಿತ್ತು. ಹಲವಾರು ಮಂದಿ ಭೌತಶಾಸ್ತ್ರದ ವಿದ್ಯಾರ್ಥಿಗಳು ತಮ್ಮ ಪಿ.ಹೆಚ್.ಡಿ ಥೀಸಿಸ್‌ಗಳನ್ನು ಬರೆಯುವಾಗ ಅವರ ಸಲಹೆ ಪಡೆದು ಬರೆದು, ಉತ್ತೀರ್ಣರಾಗಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪ್ರೊಫೆಸರ್ ಯು.ಎಲ್.ಆಚಾರ್ಯರ ಆಶೀರ್ವಾದ ಯಾವತ್ತೂ ನನ್ನ ಮೇಲೆ ಇದೆ ಎಂದು ನಾನು ಇಂದಿಗೂ ಭಾವಿಸುತ್ತೇನೆ. ಆಚಾರ್ಯ ಎಂಬ ನಾಮಕ್ಕೆ ಅನುಗುಣವಾಗಿ, ಅವರು ತಮ್ಮ ಜೀವನಪರ್ಯಂತ ಒಬ್ಬ ಉಪಾಧ್ಯಾಯರೇ ಅಗಿ ಬಾಳಿದರು.

* * *