ನಾನು ಚೀಫ್ ಪೆಟ್ಟಿ ಆಫೀಸರ್ ಗೋವಿಯಸ್ ಅವರನ್ನು ನೋಡಿದುದು ೧೯೬೪ನೇ ಇಸವಿಯಲ್ಲಿ. ಅವರು ನಮ್ಮ ಕರ್ನಾಟಕ ಮೂರನೇ ಎನ್.ಸಿ.ಸಿ. ನೇವಲ್‌ವಿಂಗ್‌ನ ಮುಖ್ಯ ಇನ್ಸ್‌ಟ್ರಕ್ಟರ್ ಆಗಿ ನೇಮಕಗೊಂಡಿದ್ದರು. ಆಗಲೇ ಅವರ ಕೂದಲುಗಳು ಬೆಳ್ಳಗಾಗತೊಡಗಿದ್ದವು. ಅವರ ಪ್ರಾಯವೆಷ್ಟು ಎಂದು ಯಾರಿಗೂ ಹೇಳಲು ಸಾಧ್ಯವಿರಲಿಲ್ಲ. ಯಾಕೆಂದರೆ, ಅವರ ದೇಹದಾರ್ಢ್ಯ ಮತ್ತು ಚುರುಕುತನ ಹದಿಹರೆಯದ ಕ್ಯಾಡೇಟ್‌ಗಳಾದ ನಮ್ಮನ್ನು ನಾಚಿಸುವಂತಿತ್ತು.

ಗೋವಿಯಸ್ ಅವರು ಐದಡಿ ಐದು ಇಂಚು ಎತ್ತರದ, ತೆಳು ದೇಹದ, ಹುರಿಯಾದ ಸ್ನಾಯುಗಳುಳ್ಳ, ಕಂದುಬಣ್ಣದ ವ್ಯಕ್ತಿ. ಸ್ಪಷ್ಟವಾದ ಬ್ರಿಟಿಷ್ ಸೈಲರುಗಳ ಇಂಗ್ಲೀಷ್‌ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅದೇ ಆಂಗ್ಲಶೈಲಿಯ ಹಿಂದಿಭಾಷೆಯಲ್ಲಿ ಕೂಡಾ ಚೆನ್ನಾಗಿ ಮಾತನಾಡುತ್ತಿದ್ದರು. ಅವರ ಭಾಷಾಶೈಲಿಯಲ್ಲಿ ವ್ಯಾಕರಣಕ್ಕೆ ಸ್ಥಾನ ಇದ್ದಂತೆ ಕಾಣುತ್ತಿರಲಿಲ್ಲ. ಆದರೂ, ಅವರು ತಾನು ತಿಳಿಸಬೇಕಾದ ವಿಚಾರಗಳನ್ನು ಸ್ಪಷ್ಟವಾಗಿ ತಮ್ಮ ಕಂಚಿನ ಕಂಠದಲ್ಲಿ ತಿಳಿಸುತ್ತಿದ್ದರು.

ಅವರು ಡ್ರಿಲ್ ಮತ್ತು ಮಾರ್ಚಿಂಗ್ ಕಲಿಸುತ್ತಿದ್ದರೆ, ಇಡೀ ಪೆರೇಡ್ ಗ್ರೌಂಡಿನಲ್ಲಿ ಯಾರೂ ಒಂದು ಚಿಕ್ಕ ತಪ್ಪು ಮಾಡುವ ಹಾಗಿರಲಿಲ್ಲ. ಸದಾ ಅವರ ಕೆಂಗಣ್ಣು ನಮ್ಮ ಮೇಲೆಯೇ ನೆಲೆಸಿರುತ್ತಿತ್ತು. ಯಾರಾದರೂ ಒಂದು ಚಿಕ್ಕ ತಪ್ಪು ಮಾಡಿದರೆ ಸಾಕು, ಅವರು ನಿಂತಲ್ಲಿಂದಲೇ, ನಮ್ಮ ರ‍್ಯಾಂಕ್ ಮತ್ತು ಹೆಸರು ಹಿಡಿದು ಗದರುತ್ತಿದ್ದರು. ಮತ್ತೂ ಹೆಚ್ಚಿನ ತಪ್ಪು ಏನಾದರೂ ಕಂಡರೆ, ಮುಲಾಜಿಲ್ಲದೆ ನಮಗೆ ಅವರಿಂದ ಪನಿಷ್‌ಮೆಂಟ್ ಸಿಗುತ್ತಿತ್ತು. ಅವರ ಪನಿಷ್‌ಮೆಂಟ್ ಕೂಡಾ ಧಾರಾಳವಾಗೇ ಇರುತ್ತಿದ್ದುವು..! ಸಾಧಾರಣ ಪನಿಷ್‌ಮೆಂಟ್ ಎಂದರೆ, ಪೆರೇಡ್ ಗ್ರೌಂಡಿಗೆ ಐದು ಅಥವಾ ಹತ್ತು ರೌಂಡ್ ಓಟ..! ಅದೂ ರೈಫಲ್ ಸಮೇತ! ಅಥವಾ ಪರೇಡ್ ಗ್ರೌಂಡಿಗೆ ಒಂದು ರೌಂಡ್ ಕ್ರಾವ್ಲಿಂಗ್ ವಿದ್ ರೈಫಲ್ (ಅಂದರೆ ರೈಫಲ್ ನೆಲಕ್ಕೆ ತಾಗಿಸದೇ, ಹೊಟ್ಟೆಯ ಮೇಲೆ ತೆವಳಿಕೊಂಡೇ ಮುಂದೆ ಹೋಗಬೇಕು!). ಇವೆರಡೂ ಅಲ್ಲದಿದ್ದರೆ, ಫ್ರಂಟ್ ರೋಲ್ ಅಥವಾ ಬ್ಯಾಕ್ ರೋಲ್ ವಿತ್ ಔಟ್ ರೈಫಲ್! ಅಂದರೆ,  ಮುಂದೆ ಅಥವಾ ಹಿಂದಕ್ಕೆ ಪಲ್ಟಿಹಾಕುತ್ತಾ ಸಾಗಬೇಕು…!! ಅದೂ, ಅವರು ಕರೆಯುವವರೆಗೆ ಮಧ್ಯೆ ಎಲ್ಲೂ ನಿಲ್ಲಿಸುವಂತೆ ಇಲ್ಲ! ಮೊದಮೊದಲು ಈ ರೀತಿಯ ಪನಿಷ್‌ಮೆಂಟ್ ಅನುಭವಿಸುವಾಗ ನಮಗೆ ಜೀವನವೇ ಬೇಡ! ಎನ್ನಿಸುತ್ತಿತ್ತು! ಮುಂದಕ್ಕೆ, ನಮ್ಮ ಕೈಕಾಲು ಗಟ್ಟಿಯಾಗುತ್ತಾ ಹೋದಂತೆ, ಇದೂ ಒಂದು ಸೈನ್ಯದ ಶಿಸ್ತಿನ ಕ್ರಮ ಎಂದು ನಾವು ಇವನ್ನು ಒಪ್ಪಿಕೊಳ್ಳಲೇಬೇಕಾಯಿತು.

ಹೀಗೇ, ಹಲವು ಸಲ ಸರಿಯಾಗಿ ಪನಿಷ್ಮೆಂಟ್ ತಿಂದು, ನಾನೂ ಒಬ್ಬ ರ‍್ಯಾಂಕ್ ಹೊಲ್ಡರ್ ಅನ್ನಿಸಿದ ಮೇಲೆ, ಇದೇ ರೀತಿಯ ಪನಿಷ್‌ಮೆಂಟ್‌ಗಳನ್ನು ನಮ್ಮ ಜೂನಿಯರುಗಳಿಗೆ ಕೊಡುವ ಅಭ್ಯಾಸವೂ ನನಗೆ ರೂಢಿ ಆಯಿತು!

ನಾವು ಅನುಭವಿಸಿದ ಅತಿ ಕಠಿಣ ಪನಿಷ್ಮೆಂಟ್ ಎಂದರೆ ರೈಫಲ್ ತಲೆಯ ಮೇಲೆ ಎತ್ತಿ ಹಿಡಿದು ಓಡುವುದು! ಹೀಗೆ ಎರಡು ರೌಂಡಿನ ಮೇಲೆ ಓಡಲು ಸಾಧಾರಣವಾಗಿ ಯಾರಿಂದಲೂ ಸಾಧ್ಯ ಆಗುತ್ತಿರಲಿಲ್ಲ! ಯಾಕೆಂದರೆ ನಮ್ಮ ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನ ಪರೇಡ್‌ಗ್ರೌಂಡ್ ಬಹಳ ದೊಡ್ಡದಾಗಿತ್ತು.

ಕಾಲಕಳೆದಂತೆ, ಸೈನ್ಯದ ಈ ಪನಿಷ್ಮೆಂಟ್ ಎಂಬ ಕ್ರಮ ಕ್ಯಾಡೇಟ್‌ಗಳನ್ನು ಹೇಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತಯಾರುಗೊಳಿಸುತ್ತದೆ ಎಂಬ ವಿಷಯ ನಮಗೆ ಚೆನ್ನಾಗಿ ಮನದಟ್ಟಾಯಿತು.

ಪೆರೇಡ್ ಗ್ರೌಂಡಿನಲ್ಲಿ ಗೋವಿಯಸ್ ಸಾಹೇಬರು ಬಹು ಕಟ್ಟುನಿಟ್ಟು. ನಾವುಗಳು ತುಂಬಾ ಮಾರ್ಚ್ ಮಾಡಿ ಆಯಾಸವಾಗಿದೆ ಸರ್! ಎಂದರೆ ಅಥವಾ ಕಾಲಿನಲ್ಲಿನ ಬೂಟುಗಳು ಕಚ್ಚಿ ಬೊಬ್ಬೆಗಳು ಬಂದು ಮಾರ್ಚಿಂಗಿನಿಂದ ವಿನಾಯತಿ ಬೇಕು ಸರ್ ಎಂದು ಕೇಳಿದರೆ, ಅವರು ನಮ್ಮನ್ನು ಕೆಂಗಣ್ಣಿನಿಂದ ನೋಡಿ ಇಟ್ ಇಸ್ ನತ್ತಿಂಗ್ ಎಂದು ಗದರಿ, ಗೋ ಆನ್ ಎನ್ನುತ್ತಿದ್ದರು.

ಎನ್.ಸಿ.ಸಿ. ಗೆ ಸೇರಿದ ಮೊದಲನೇ ವಾರದಲ್ಲಿ, ನನ್ನ ಹೊಸ ಸೈಲರ್ಸ್ ಬೂಟುಗಳು ಕಚ್ಚಿದ್ದರಿಂದ, ನಾನು ಕಾಲುಗಳನ್ನು ಕುಂಟಿಸುತ್ತಾ ಮಾರ್ಚ್ ಮಾಡುತ್ತಿದ್ದೆ. ಪೆರೇಡ್ ಗ್ರೌಂಡಿನ ಇನ್ನೊಂದು ಮೂಲೆಯಿಂದ ಗೋವಿಯಸ್ ಅವರಿಂದ ಕ್ಯಾಡೇಟ್ ಪೆಜತ್ತಾಯಾ! ವ್ಹೈ ಆರ್ ಯೂ ಲಿಂಪಿಂಗ್? ರಿಪೊರ್ಟ್ ಟು ಮಿ ಎಂಬ ಆಜ್ಞೆ ಬಂತು. ಚೀಫ್ ಪೆಟ್ಟಿ ಆಫೀಸರ್ ಕರೆದಾಗ ನಾವು ಯಾವಾಗಲೂ ಆನ್ ದ ಡಬ್ಬಲ್ (ಅಂದರೆ ಓಡಿಕೊಂಡು) ಹೋಗಿಯೇ ರಿಪೋರ್ಟ್ ಮಾಡಬೇಕಿತ್ತು. ಕುಂಟುತ್ತಾ ಓಡಿಕೊಂಡು ಅವರ ಬಳಿ ಸಾಗಿ ಸಲ್ಯೂಟ್ ಕೊಟ್ಟು ಮೊಂಡು ಧೈರ್ಯದಿಂದ ಐ ಹಾವ್ ಗಾಟ್ ವ್ಹಾಟ್ ಯೂ ಕಾಲ್ ಆಸ್ ನತ್ತಿಂಗ್ ಆನ್ ಬೋತ್ ಮೈ ಫೀಟ್, ಸರ್ ಎಂದೆ. ಅವರು ವೆರಿಗುಡ್ ಮೈ ಕ್ಯಾಡೇಟ್, ಜಾಯ್ನ್ ಅಪ್ ದ ಪ್ಲಟೂನ್ ಆಂಡ್ ಕಂಟಿನ್ಯೂ ಟು ಮಾರ್ಚ್!ಎಂದು ಉತ್ತರಿಸುತ್ತಾ ನನ್ನ ಮೇಲೆ ಕರುಣೆ ತೋರದೇ, ಮಾರ್ಚ್ ಮಾಡಲು ಕಳುಹಿಸಿಯೇ ಬಿಟ್ಟರು..!. ಯಾತನೆ ಪಡುತ್ತಾ ಅಂದಿನ ಪೆರೇಡ್ ಮುಗಿಸಿದೆ!

ಅಂದು ಸಂಜೆ ನನ್ನ ಕಾಲಿನಲ್ಲಿನ ಬೊಬ್ಬೆಗಳ ಚರ್ಮ ಸುಲಿದು ರಕ್ತ ಸುರಿಯಲು ಮೊದಲಾಗಿತ್ತು! ಆ ಸಂಜೆ ಪರೇಡ್ ನಂತರ ಬೂಟ್ ಮತ್ತು ಸಾಕ್ಸ್‌ಗಳನ್ನು ಧರಿಸಲು ಸಾಧ್ಯವಾಗದೇ, ಅವನ್ನು ನನ್ನ ಸೈಕಲ್ಲಿನ ಕ್ಯಾರಿಯರ‍್ನಲ್ಲಿ ಇಟ್ಟುಕೊಂಡು, ಬರಿಗಾಲಿನಲ್ಲಿ ಸೈಕಲ್ ಹೊಡೆಯುತ್ತಾ ಮನೆ ಸೇರಿದ್ದೆ. ಒಂದು ವಾರದಲ್ಲಿ ನನ್ನ ಕಾಲುನೋವು ಸಂಪೂರ್ಣ ಗುಣವಾಗಿತ್ತು. ಆ ಹೊಸ ಜತೆ ಬೂಟ್‌ಗಳು ಕೂಡಾ ನನಗೆ ಹೆದರಿ ಮಣಿದಿದ್ದುವು! ಮುಂದಿನ ವಾರ ಸರಿಯಾಗಿ ಮಾರ್ಚ್ ಮಾಡುತ್ತಾ ಪರೇಡ್‌ನಲ್ಲಿ ಭಾಗವಹಿಸಿದೆ. ಚೀಫ್ ಪೆಟ್ಟಿ ಆಫೀಸರ್ ಗೋವಿಯಸ್ ನನಗೆ ಆ ವಾರದಲ್ಲಿ ಪ್ರಮೋಶನ್ ಕೊಡಿಸಿ, ಆರ್ಡಿನರಿ ಕ್ಯಾಡೇಟ್ ಆಗಿದ್ದ ನನ್ನನ್ನು ಏಬಲ್ ಕ್ಯಾಡೇಟ್ ಹುದ್ದೆಗೆ ಭಡ್ತಿ ಕೊಡಿಸಿದ್ದರು. ನಾನು ಅಷ್ಟು ನೋವು ತಿಂದುದು ಸಾರ್ಥಕವಾಗಿತ್ತು. ಅಂದಿನಿಂದಲೇ, ನೋವಿಗೆ ಹೆದರುವ ಚರ್ಯೆ ನನ್ನಲ್ಲಿ ಕಡಿಮೆಯಾಗಿ, ಹೊಸ ಧೈರ್ಯ ತುಂಬುತ್ತಾ ಬಂತು. ಮುಂದಕ್ಕೆ ನಾನು ನನ್ನ ಕಷ್ಟ ಸಹಿಷ್ಣುತಾ ಗುಣದಿಂದ ಚೀಫ್ ಪೆಟ್ಟಿ ಆಫೀಸರ್ ಗೋವಿಯಸ್ ಅವರ ಮೆಚ್ಚುಗೆ ಗಳಿಸಿದೆ. ನಾನು ಮುಂದಕ್ಕೆ ನಮ್ಮ ಕಾಲೇಜಿನ ಕ್ಯಾಡೇಟ್ ಕ್ಯಾಪ್ಟನ್ ಕೂಡಾ ಆದೆ!

ಪೆಟ್ಟಿ ಆಫೀಸರ್ ಗೋವಿಯಸ್ ಪರೇಡ್ ಗ್ರೌಂಡ್ ಮತ್ತು ಕ್ಲಾಸ್‌ಗಳಲ್ಲಿ ಎಂದೂ ನಗುತ್ತಿರಲಿಲ್ಲ. ಸದಾ ಕೆಂಪು ಕಣ್ಣು ತಿರುಗಿಸುತ್ತಿದ್ದರು. ಅಪರೂಪಕ್ಕೆ ನಾವು ನಮ್ಮ ನೇವಲ್‌ಯೂನಿಟ್‌ನ ಆಫೀಸ್ ಕಡೆಗೆ ಹೋದಾಗ ಆಯ್! (ಈ ಶಬ್ದಕ್ಕೆ ನೇವಿಯ ಭಾಷೆಯಲ್ಲಿ ‘ಯೆಸ್ ಎಂಬರ್ಥ) ಯು ಹೇವ್ ಕಮ್, ನವ್ ಹ್ಯಾವ್ ಸಮ್ ಟೀ ವಿದ್ ಮೀ ಎನ್ನುತ್ತಾ, ನನ್ನನ್ನು ಅವರ ಕೋಣೆಗೆ ಕರೆದು, ತಾನೇ ಕಯ್ಯಾರೆ ಒಂದು ಮಗ್ ಟೀ ತಯಾರಿಸಿ ಕುಡಿಸುತ್ತಿದ್ದರರು. ನಗುನಗುತ್ತಾ ಮಾತನಾಡುತ್ತಾ ತನ್ನ ನೌಕಾಸೈನ್ಯದ ನೆನಪುಗಳನ್ನು ನನ್ನೊಡನೆ ಹಂಚಿಕೊಳ್ಳುತ್ತಿದ್ದರು. ಮರುದಿನ ಪರೇಡ್ ಗ್ರೌಂಡಿನಲ್ಲಿ ಅವರು ಸಿಕ್ಕಿದಾಗ, ಅದೇ ಕೆಂಗಣ್ಣು, ಅದೇ ಒಣಮುಖ ಮತ್ತು ಅವೇ ವದರಾಟಗಳು ಮುಂದುವರೆಯುತ್ತಿದ್ದುವು..!

ಅವರು ಮೂಲತಃ ಕೇರಳ ರಾಜ್ಯದವರಂತೆ. ಆದರೆ ಅವರ ಮಾತಿನಲ್ಲಿ ಮಳೆಯಾಳದ ಛಾಯೆ ಕಾಣುತ್ತಿರಲಿಲ್ಲ. ಇದಕ್ಕೆ ಕಾರಣ, ಅವರು ಚಿಕ್ಕ ವಯಸ್ಸಿನಲ್ಲೇ ವೈಜಾಗ್ (ಈಗಿನ ವಿಶಾಖ ಪಟ್ಟಣಮ್) ನೇವಲ್ ಬೇಸ್‌ಗೆ ಹೋಗಿ, ಬಾಯ್ಸ್ ಎಂಟ್ರಿ ಮೂಲಕ ನಾವಿಕ ವೃತ್ತಿಗೆ ಸೇರಿದವರಂತೆ. ಅವರು ಭಾರತೀಯ ದೇಶದ ನೇವಿ ಸೇರಿದಾಗ ಅದು ಬ್ರಿಟಿಷರ ಕಾಲ. ಆಗ ನಮ್ಮ ದೇಶದ ನೇವಿಯನ್ನು  ರಾಯಲ್ ಇಂಡಿಯನ್ ಮೆರೈನ್ಸ್ ಎಂದು ಕರೆಯುತ್ತಿದ್ದರಂತೆ. ನೌಕಾಸೇನೆಯಲ್ಲೇ ಅವರ ಜೀವನ ರೂಪುಗೊಂಡಿತ್ತು. ಗೋವಿಯಸರು ಗನ್ನರಿ ವೃತ್ತಿಯಲ್ಲಿ ತರಬೇತಿ ಪಡೆದು, ನೌಕೆಗಳ ಫಿರಂಗಿ ಮತ್ತು ದೊಡ್ಡ ತೋಪುಗಳನ್ನು ಹಾರಿಸುವುದರಲ್ಲಿ ಪರಿಣತಿ ಹೊಂದಿದ್ದರಂತೆ. ಆಂಟಿ ಏರ್‌ಕ್ರಾಫ್ಟ್ ಕೋವಿಗಳನ್ನು ಹಾರಿಸುವುದರಲ್ಲಿ ಅವರು ನಿಸ್ಸೀಮ ಎನ್ನಿಸಿದರಂತೆ. ತನ್ನ ಜೀವಮಾನದ ಸೇವಾ ಅವಧಿಯಲ್ಲಿ ಅವರು ಭಾರತೀಯ ನೌಕಾಪಡೆಯ ಎಲ್ಲಾ ಬೇಸ್ ಮತ್ತು ನೌಕಾಪಡೆಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ನೌಕೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದರಂತೆ. ಹಲವಾರು ವರ್ಷ ವಿಶಾಖ ಪಟ್ಟಣದ ನೇವಲ್‌ಬೇಸ್‌ನಲ್ಲಿ ಬಾಯ್ಸ್ ಯೂನಿಟ್ನ ಚೀಫ್ ಇನ್ಸ್‌ಟ್ರಕ್ಟರ್ ಆಗಿ ಅವರು ಒಳ್ಳೆಯ ಹೆಸರು ಗಳಿಸಿದ್ದರಂತೆ. ಮುಂದೆ ಕೊಚ್ಚಿನ್ (ಈಗಿನ ಕೊಚ್ಚಿ) ನೇವಲ್‌ಬೇಸ್‌ನ ಆಫೀಸರ್ ಟ್ರೈನಿಗಳಿಗೆ ಇನ್ಸ್‌ಟ್ರಕ್ಟರ್ ಆಗಿ ಬಹಳ ವರ್ಷ ಅವರು ಕೆಲಸ ಮಾಡಿದರಂತೆ. ಹಾಗಾಗಿ, ಭಾರತೀಯ ನೌಕಾಪಡೆಯ ಎಲ್ಲಾ ಯೋಧರು ಮತ್ತು ಆಫೀಸರುಗಳು ಒಂದಲ್ಲ‌ಒಂದು ಸಂದರ್ಭದಲ್ಲಿ ಅವರ ಜತೆಗೆ ಕೆಲಸ ಮಾಡಿದ್ದವರೇ ಆಗಿದ್ದರು. ಅವರನ್ನು ಚೆನ್ನಾಗಿ ಬಲ್ಲ ಆಫೀಸರುಗಳು ಮತ್ತು ಯೋಧರು ಚೀಫ್ ಪೆಟ್ಟಿ ಆಫೀಸರ್ ಗೋವಿಯಸ್‌ರವರನ್ನು, ಬಹು ಮರ್ಯಾದೆ ಕೊಟ್ಟು ಚೀಫ್ ಎಂದೇ ಸಂಬೋಧಿಸಿ ಕರೆಯುತ್ತಿದ್ದರಂತೆ. ಗೋವಿಯಸ್ ಸಾಹೇಬರ ಈ ಜನಪ್ರಿಯತೆಗೆ ಒಂದು ನಿದರ್ಶನವನ್ನು ಕೆಳಗೆ ನಮೂದಿಸುತ್ತಿದ್ದೇನೆ.

ಒಮ್ಮೆ ರಜೆಯಲ್ಲಿ ಚೀಫ್ ಪೆಟ್ಟಿ ಆಫೀಸರ್ ಗೋವಿಯಸ್ ಕೊಚ್ಚಿಗೆ ಹೋಗಿದ್ದರಂತೆ.  ತಮ್ಮ ಪರಿಚಯದ ಒಬ್ಬರನ್ನು ಕಾಣಲು ಅಲ್ಲಿಯ ನೇವಲ್‌ಬೇಸ್‌ಗೆ ಅವರು ಸಿವಿಲ್ ಡ್ರೆಸ್ ಹಾಕಿಕೊಂಡು ಹೋದರಂತೆ. ನೇವಲ್‌ಬೇಸ್‌ನ ಒಳಗೆ ಅವರು ನಡೆದುಕೊಂಡು ಹೋಗುತ್ತಿದ್ದರಂತೆ. ಅಷ್ಟರಲ್ಲಿ ಅದೇ ದಾರಿಯಲ್ಲಿ ಸಾಗುತ್ತಿದ್ದ ಸ್ಟಾಫ್ಟ್ ಕಾರ್ ಒಂದು ಅವರ ಪಕ್ಕದಲ್ಲಿ ನಿಂತಿತಂತೆ. ಆದರೂ, ಅದನ್ನು ಗಮನಿಸದೆ ಗೋವಿಯಸ್ ಸಾಹೇಬರು ಮುಂದೆ ಹೆಜ್ಜೆ ಇಟ್ಟಾಗ ಚೀಫ್ ಎಂದು ಅದರೊಳಗೆ ಇದ್ದವರು ಕರೆದರಂತೆ.

ಆ ಸ್ವರವನ್ನು ಗುರುತಿಸಿದ ಗೋವಿಯಸ್ ಸಾಹೇಬರು ಹಿಂತಿರುಗಿಯೂ ನೋಡದೆ ಅಯ್! ಅಡ್ಮಿರಲ್ ಸರ್! ಎನ್ನುತ್ತ ‘ಅಬೌಟ್ ಟರ್ನ್ ಮಾಡಿ ಸಲ್ಯೂಟ್ ಕೊಟ್ಟರಂತೆ..! ತಮ್ಮ ಸ್ವರದಿಂದಲೇ ತನ್ನನ್ನು ಗುರುತಿಸಿದ್ದನ್ನು ಕಂಡು ಅಡ್ಮಿರಲ್ ಸಾಹೇಬರಿಗೆ ಆಶ್ಚರ್ಯ ಆಯಿತಂತೆ. ನೀವು ಹೇಗೆ ನನ್ನನ್ನು ಗುರುತಿಸಿದಿರಿ? ಎಂದು ಚಕಿತರಾದ ಅಡ್ಮಿರಲ್ ಸಾಹೇಬರು ಚೀಫ್ ಪೆಟ್ಟಿ ಆಫೀಸರ್ ಗೋವಿಯಸ್‌ರನ್ನು ಪ್ರಶ್ನಿಸಿದರಂತೆ.

ನಾನು ತಮ್ಮ ಟ್ರೈನೀ ಆಫೀಸರುಗಳ ಗ್ರೂಪನ್ನು ೧೯೪೯ನೇ ಇಸವಿಯಲ್ಲಿ ಅಂಡಮಾನಿನ ಒಂದು ಅಡವಿಯೊಳಗೆ ‘ನಲ್ವತ್ತೆಂಟು ಗಂಟೆಗಳ ಜಂಗಲ್ ಎಕ್ಸೆರ್ ಸೈಜ್ನಲ್ಲಿ ಲೀಡ್ ಮಾಡಿದ್ದು ಮರೆಯುತ್ತೇನೆಯೇ? ನಾನು ಕತ್ತಲೆಯ ಸಮಯದಲ್ಲಿ ತಮ್ಮನ್ನು ಲೀಡ್ ಮಾಡುತ್ತಿರುವಾಗ,  ನಿಮ್ಮನ್ನು ನಿಮ್ಮ ಸ್ವರದಿಂದಲೇ ಗುರುತಿಸಬಲ್ಲವನಾಗಿದ್ದೆ! ನಾನು ಹೇಗೆ ನಿಮ್ಮ ಸ್ವರ ಮರೆತೇನು? ಅಂದರಂತೆ.

ಅಡ್ಮಿರಲ್ ಸಾಹೇಬರಿಗೆ ಈ ಮನುಷ್ಯನ ಜ್ಞಾಪಕಶಕ್ತಿ ಕಂಡು ಅಚ್ಚರಿಯಾಯಿತಂತೆ! ಅಡ್ಮಿರಲ್ ಸಾಹೇಬರು ತನಗೆ ಟ್ರೈನಿಂಗ್ ಇನ್ಸ್‌ಟ್ರಕ್ಟರ್ ಆಗಿದ್ದ  ಗೋವಿಯಸ್ ಸಾಹೇಬರನ್ನು  ಮರೆತಿರಲಿಲ್ಲ! ಅಡ್ಮಿರಲ್ ಸಾಹೇಬರು ಗೋವಿಯಸ್ ಸಾಹೇಬರ ಕುಶಲ ವಿಚಾರಿಸಿಯೇ ಮುಂದುವರಿದು ಹೋದರಂತೆ. ಗೋವಿಯಸ್ ಸಾಹೇಬರ ಪಾಪ್ಯುಲಾರಿಟಿಯ ಬಗ್ಗೆ ಈ ಸನ್ನಿವೇಶ ಒಂದು ಸಣ್ಣ ನಿದರ್ಶನ.

ನಾವು ಗೋವಿಯಸರಿಗೆ ಗ್ರ್ಯಾಂಡ್ ಒಲ್ಡ್ ಮ್ಯಾನ್ ಆಫ್ ದ ಸೀ ಎಂದು ಅಡ್ಡ ಹೆಸರಿಟ್ಟು ಹಿಂದಿನಿಂದ ಕರೆಯುತ್ತಿದೆವು! ಎದುರಿಗೆ ಹಾಗನ್ನಲು ಧೈರ್ಯ ಇರಲಿಲ್ಲ!

ಗೋವಿಯಸ್ ಸಾಹೇಬರು ಬಾಯ್ಸ್ ಎಂಟ್ರಿಯಲ್ಲಿ ಬರೇ ನಾವಿಕನಾಗಿ ನೇವಿ ಸೇರದೆ, ಎನ್.ಡಿ.ಏ.(ನ್ಯಾಶನಲ್ ಡಿಫೆನ್ಸ್ ಅಕಾಡೆಮಿ) ಮುಖಾಂತರ ಆಫೀಸರ್ ಆಗಿ ನೌಕಾಪಡೆ ಸೇರಿದ್ದರೆ, ಯಾವ ಎತ್ತರಕ್ಕೆ ಏರುತ್ತಿದ್ದರು? ಎಂಬುದನ್ನು ಊಹಿಸಲು ಅಸಾಧ್ಯ! ಬಡತನ ಮತ್ತು ಪ್ರಾಥಮಿಕ ವಿದ್ಯಾಭ್ಯಾಸದ ಕೊರತೆ ಅವರನ್ನು ಸದ್ರಿ ಮಟ್ಟದಲ್ಲಿ ಇರಿಸಿತ್ತು.

ನೌಕಾಪಡೆಯಲ್ಲಿ ಸೆಮಾಫೋರ್ ಸಿಗ್ನಲ್, ಮೋರ್ಸ್ ಸಿಗ್ನಲ್ ಮತ್ತು ಲೈಟ್ ಫ್ಲಾಷಿಂಗ್ ಸಿಗ್ನಲ್ ಪ್ರತಿಯೊಬ್ಬನೂ ಕಲಿಯಲೇಬೇಕಾದ ಸಂಪರ್ಕದ ಸಿಗ್ನಲ್‌ಗಳು. ಈ ದಿನಗಳಲ್ಲಿ ಸಂಪರ್ಕ ತಂತ್ರಜ್ಞಾನ ಮುಂದುವರೆದಿದ್ದರೂ, ಇವನ್ನು ಪ್ರತೀ ನಾವಿಕನು ಕಡ್ಡಾಯವಾಗಿ ಇಂದಿಗೂ ಕಲಿಯಬೇಕು. ಇಂದು ಬಾಯಿಮಾತು ಅಥವಾ ಕೋಡ್ ಭಾಷೆ ಬಳಸಿ ರೇಡಿಯೋ ಮೂಲಕ ಸಂಭಾಷಣೆಯನ್ನು ನಾವು ಮಾಡಬಹುದು. ಆದರೂ. ಈ ಪ್ರಾಥಮಿಕ ಸಂಹವನ ವಿಧಾನಗಳು ನೌಕಾಸೈನ್ಯದಲ್ಲಿ ಇಂದಿಗೂ ಬಳಕೆಯಲ್ಲಿವೆ. ಈ ಮೂರು ತರಹದ ಸಿಗ್ನಲ್‌ಗಳಲ್ಲಿಯೂ ಚೀಫ್ ಗೋವಿಯಸ್ ಬಹಳ ನುರಿತವರು. ಅವರ ರಿಸೀವಿಂಗ್ ಮತ್ತು ಸೆಂಡಿಂಗ್ ಸ್ಪೀಡ್ಗಳು ಈ ಮೂರು ವಿಧಾನಗಳಲ್ಲಿ ಅಸಾಮಾನ್ಯವಾಗಿದ್ದುವು.

ರೈಫಲ್ ಷೂಟಿಂಗ್‌ನಲ್ಲಿಯೂ ಗೋವಿಯಸ್ ಸಾಹೇಬರು ಎತ್ತಿದ ಕೈ. ಬಹಳ ವರ್ಷ ನೌಕಾಪಡೆಯ ಮೈನ್ ಸ್ವೀಪರ್ ಹಡಗುಗಳಲ್ಲಿ ಅವರು ಕೆಲಸ ಮಾಡಿದ್ದರಂತೆ. ಮೈನ್ ಸ್ವೀಪರ್ ಹಡಗುಗಳು ಸಮುದ್ರದ ಒಳಗೆ ಮುಳುಗಿರುತ್ತಿದ್ದ ನೌಕಾಮೈನ್ ಎಂಬ ಬಾಂಬ್‌ಗಳನ್ನು ಅವುಗಳ ನೆಲೆ ತಪ್ಪಿಸಿ ತೇಲಾಡಿಸಿ ಬಿಡುತ್ತವೆ. ಅವನ್ನು ಸುಮಾರು ಮುನ್ನೂರು ಮೀಟರುಗಳಷ್ಟು ದೂರದಿಂದ ಸ್ಪ್ರಿಂಗ್‌ಫೀಲ್ಡ್ ಮಾರ್ಕ್ ಫೋರ್ ರೈಫಲ್ ಉಪಯೋಗಿಸಿ ಗುರಿ ಇಟ್ಟು ಹೊಡೆದು ಬ್ಲಾಸ್ಟ್‌ಮಾಡಿ ಅವನ್ನು ನಾಶಮಾಡಬೇಕು. ಈ ನಾಶಮಾಡುವ ಗುರಿಕಾರಿಕೆಯಲ್ಲಿ ಗೋವಿಯಸರು ನಿಸ್ಸೀಮರಂತೆ! ತೊನೆದಾಡುವ ಮೈನ್ ಸ್ವೀಪರ್ ಹಡಗಿನ ಡೆಕ್ ಮೇಲೆ ಅಥವಾ ಸಣ್ಣದಾದ ಒಂದು ದೋಣಿಯ ಮೇಲೆ ನಿಂತು, ಅವರು ರೈಫಲ್ ಗುರಿಹಿಡಿದರೆ, ಅವರ ಗುರಿ ಎಂದೂ ತಪ್ಪುತ್ತಲೇ ಇರಲಿಲ್ಲವಂತೆ!

ನಮಗೆ ಅವರು ಹುಟ್ಟು ಹಾಕುವ ಮತ್ತು ಹಾಯಿ ದೋಣಿ ನಡೆಸುವ ತಂತ್ರವನ್ನೂ ಹೇಳಿಕೊಟ್ಟರು. ಎದುರುಗಾಳಿ ಇದ್ದಾಗಲೂ ಹಾಯಿ ದೋಣಿಗಳನ್ನು ನಡೆಸುವ ಕಲೆ ಅವರಿಗೆ ಲೀಲಾಜಾಲವಾಗಿ ಕರಗತವಾಗಿತ್ತು.

ಚೀಫ್ ಪೆಟ್ಟಿ ಆಫೀಸರ್ ಗೋವಿಯಸ್ ಅವರಿಂದ ಜೀವನದಲ್ಲಿ ಅನುಸರಿಸಬೇಕಾದ ಶಿಸ್ತು ಮತ್ತು ಹಲವಾರು ನೀತಿಸಂಹಿತೆಗಳನ್ನು ನಾನು ಕಲಿತೆ. ಅವರು ಹೇಳುತ್ತಿದ್ದ ಒಂದು ಮಾತನ್ನು ನಾನೆಂದೂ ಮರೆಯಲಾರೆ.

ಅದು ಏನೆಂದರೆ ;

“Never under estimate your self !   You can always do the things that the other persons do!.    If the other fool can do it! –  You can always do it better than him!”

* * *