ಕಳೆದವರ್ಷ ಬೇಸಗೆಯ ಒಂದುದಿನ. ಬೆಂಗಳೂರಿನ ಫ್ರೇಜರ್‌ಟೌನಿನ ಮಸೀದಿರಸ್ತೆಯಲ್ಲಿನ ಒಂದು ಅಂಗಡಿಯ ಬಳಿ ದಿನಸಿಕೊಳ್ಳಲು ಕಾರು ನಿಲ್ಲಿಸಿದೆ. ನಾನು ಕೆಳಗಿಳಿಯುವಷ್ಟರಲ್ಲಿ ಯಾರೋ ನನ್ನ ಭುಜ ತಟ್ಟಿ ಕರೆದಂತೆ ಆಯಿತು. ಇದು ಯಾರಪ್ಪಾ ನನ್ನನ್ನು ಮೈ ಮುಟ್ಟಿ ಮಾತನಾಡಿಸುವವರು? ಎಂದು ಸಿಟ್ಟು ಮತ್ತು ಆಶ್ಚರ್ಯ ಜತೆಜತೆಗೇ ಆದುವು. ಹಿಂತಿರುಗಿ ನೋಡುತ್ತೇನೆ, ಗುಲಾಬಿ ಬಣ್ಣದ ದಾವಣಿ ತೊಟ್ಟ ಹದಿಹರೆಯದ ಹುಡುಗಿ…! ಆಕೆ ಒಳ್ಳೆಯ ಅರಿಸಿನ ಬಿಳುಪಿನ ಮೈಬಣ್ಣ ಹೊಂದಿದ್ದಳು. ಎತ್ತರ ಸುಮಾರು ಐದಡಿ ನಾಲ್ಕು ಇಂಚು ಇರಬಹುದು.

ಏನಮ್ಮಾ ಏನಾಗಬೇಕಿತ್ತು? ಎಂದು ಆಕೆಯನ್ನು ಪ್ರಶ್ನಿಸಿದೆ. ನನ್ನೊಡನೆ ಮಾತನಾಡಲು ಪ್ರಯತ್ನಿಸುವಾಗ ಆಕೆಯ ಕಣ್ಣುಗಳು ವಕ್ರವಾಗಿ ಬಲಗಡೆಗೆ ಸೆಳೆದುಕೊಂಡುವು. ಏನೋ ಮಾತನಾಡಲು ಹೊರಟ ಆಕೆಯ ಬಾಯಿ ವಿಕಾರವಾಗಿ ಸೊಟ್ಟಗಾಯಿತು. ಅರ್ಥವಿಲ್ಲದ ಯಾವುದೋ ಒಂದುರೀತಿಯ ದೈನ್ಯಸ್ವರ ಆಕೆಯ ಬಾಯಿಯಿಂದ ಹೊರಟಿತು. ಶತಪ್ರಯತ್ನಪಟ್ಟು ಆಕೆ ನೆಟ್ಟಗೆ ನಿಲ್ಲಲು ಪ್ರಯತ್ನಿಸುತ್ತಿದ್ದಳು. ಆಕೆಯ ಬಲಕೈ ಕಷ್ಟಪಟ್ಟು ಏನೋ ಯಾಚಿಸುವಂತೆ ಮುಂದೆ ಬಂತು. ಆಕೆಯ ಬಲ ಅಂಗೈಯ್ಯಲ್ಲಿ ಒಂದು ದೊಡ್ಡ ಕೆಂಪುಮಚ್ಚೆ ಇರುವುದು ನನ್ನ ಗಮನಕ್ಕೆ ಬಂತು.

ಅಯ್ಯೋ..! ಈ ಹುಡುಗಿಗೆ ಬುದ್ಧಿಮಾಂದ್ಯ ಮತ್ತು ಅದರಿಂದಾಗಿ ಈ ಅಂಗವಿಕಲತೆ, ಈಕೆ ಏನೋ ಬೇಡುತ್ತಿದ್ದಾಳೆ! ಎಂದುಕೊಂಡು ನನ್ನ ಮನ ಮರುಗಿತು. ಅವಳ ದೈನ್ಯಾವಸ್ಥೆ ನೋಡಿ ನನಗೆ ಅಯ್ಯೋ ಪಾಪ ಅನ್ನಿಸಿತು. ನನ್ನ ಪರ್ಸಿನಿಂದ ಇಪ್ಪತ್ತು ರೂಪಾಯಿ ತೆಗೆದು ಆಕೆಯ ಕೈಯ್ಯಲ್ಲಿಟ್ಟೆ. ಆಕೆ ಯಾವ ಭಾವನೆಯನ್ನೂ ಸೂಚಿಸದೇ ವಕ್ರವಕ್ರವಾಗಿ ಕಾಲೆಳೆಯುತ್ತಾ ನಿಧಾನವಾಗಿ ಮುಂದೆ ನಿಂತಿದ್ದ ಇನ್ನೊಂದು ಕಾರಿನತ್ತ ಸಾಗಿದಳು.

ಅಯ್ಯೋ! ಇಂತಹಾ ಸುಂದರ ಹುಡುಗಿಗೆ ಈ ದೌರ್ಬಲ್ಯ! ಈ ಕಾಯಿಲೆ ಇಲ್ಲದೇ ಇದ್ದರೆ ಆಕೆ ಈಗ ಯಾವುದೋ ಪ್ರೌಢಶಾಲೆ ಅಥವಾ ಕಾಲೇಜಿನಲ್ಲಿ ಓದಿಕೊಂಡು ನಲಿದಾಡಬೇಕಾದ ಪ್ರಾಯ. ಇಷ್ಟು ಸುಂದರವಾದ ಹುಡುಗಿಗೆ ಆ ವಿಧಾತನು ಎಷ್ಟು ಕೆಟ್ಟಕಾಯಿಲೆ ಕೊಟ್ಟನಪ್ಪಾ..! ಎಂದು ಯೋಚಿಸುತ್ತಾ ನಾನು ದಿನಸಿ ಅಂಗಡಿಯತ್ತ ಸಾಗಿದೆ. ನಾನು ನನಗೆ ಬೇಕಾದ ವಸ್ತುಗಳನ್ನು ಖರೀದಿಸಿ ಕಾರಿನ ಬಳಿ ಬಂದಾಗ ಆಕೆ ಅಲ್ಲಿ ಕಾಣಿಸಲಿಲ್ಲ. ಆ ಹದಿಹರೆಯದ ಹುಡುಗಿಯ ದಯನೀಯ ಚಿತ್ರವು ನನ್ನ ಮನದಲ್ಲಿ ಅಚ್ಚಳಿಯದೇ ನಿಂತಿತು.

ಅದೇ ದಿನ ಸಂಜೆ ನಾನು ಸಂಸಾರ ಸಮೇತನಾಗಿ ಫೋರಮ್‌ಮಾಲ್‌ನ ಪಿ.ವಿ.ಆರ್. ಸಿನಿಮಾಕ್ಕೆ ರಾಮ ಭಾಮ ಶ್ಯಾಮ ಎಂಬ ಚಿತ್ರ ವೀಕ್ಷಿಸಲು ಸಂಸಾರಸಮೇತ ಹೋಗಿದ್ದೆ. ಟಿಕೆಟ್‌ಕೊಳ್ಳಲು ಲೈನ್‌ನಲ್ಲಿ ನಿಂತಾಗ, ನನ್ನ ಮುಂದೆ ಚೊಕ್ಕವಾಗಿ ಜೀನ್ಸ್ ಟೀಶರ್ಟ್ ಧರಿಸಿದ ಹದಿಹರೆಯದ ಹುಡುಗಿಯೊಬ್ಬಳು ನಿಂತಿದ್ದಳು. ಇವಳನ್ನು ಎಲ್ಲೋ ನೋಡಿದಂತೆ ಇದೆಯಲ್ಲಾ? ಎಂದು ನನಗನ್ನಿಸಿತು. ಅಷ್ಟರಲ್ಲಿ ಆಕೆ ಟಿಕೆಟ್ ಕೌಂಟರಿನ ಮುಂದೆ ನಿಂತು, ತನ್ನ ಬೆಲೆಬಾಳುವ ಕೈಚೀಲದಿಂದ ಹಣ ತೆಗೆದು ಟಿಕೆಟ್‌ಗಾಗಿ ನೀಡಿದಳು. ಆಗ ಅವಳ ಅಂಗೈಯ್ಯಲ್ಲಿನ ದೊಡ್ಡ ಕೆಂಪುಮಚ್ಚೆ ಕಂಡಿತು. ಕೂಡಲೇ ನನಗೆ, ನಾನು ಇಂದು ಬೆಳಗ್ಗೆ ಮಸೀದಿರಸ್ತೆಯಲ್ಲಿ ಕಂಡ ಬುದ್ಧಿಮಾಂದ್ಯದ ಹುಡುಗಿ ಇವಳೇ..! ಎಂದು ಖಚಿತವಾಯಿತು. ಆದರೂ, ನಾನು ಆಕೆಯನ್ನು ಉದ್ದೇಶಿಸಿ, ಕ್ಷಮಿಸಿ, ನಾನು ನಿಮ್ಮನ್ನು ಎಲ್ಲೋ ಈ ಹಿಂದೆ ಭೆಟ್ಟಿಯಾಗಿದ್ದೇನೆ ಅನ್ನಿಸುತ್ತೆ! ಎಂದು ಹೇಳಿದೆ. ನನ್ನ ಮಾತು ಕೇಳಿ ಆಕೆ ತಿರುಗಿ ನನ್ನತ್ತ ನೋಡಿದಳು. ನನ್ನನ್ನು ನೋಡಿದವಳೇ ಆಕೆ ಒಮ್ಮೆ ಬೆಚ್ಚಿಬಿದ್ದಳು. ಕೂಡಲೇ ಸುಧಾರಿಸಿಕೊಂಡು, “Sorry, I do not know what you are talking about!” ಅನ್ನುತ್ತಾ ನಾವು ನಿಂತಲ್ಲಿಂದ ದೂರ ಹೊರಟು ಹೋಗಲು ತಿರುಗಿದಳು. ಆಗ ನಾನು, “The reddish birth mark in your right palm does not tell lies” ಎಂದು ಹೇಳಿಯೇ ಬಿಟ್ಟೆ. ಆಕೆ ನನ್ನ ಮಾತುಗಳನ್ನು ಕೇಳಿಯೂ ಕೇಳದಂತೆ ನಮ್ಮಿಂದ ದೂರ ಸರಿದು ದುಬಾರಿ ಕೋಕ್ ಮತ್ತು ಪಾಪ್‌ಕಾರ್ನ್ ಕೊಳ್ಳಲು ಇನ್ನೊಂದು ಕ್ಯೂನಲ್ಲಿ ನಿಂತಳು. ಆಕೆ ದೂರಸರಿದು ಹೋದೊಡನೆಯೇ ನಾನು ನನ್ನ ಮಡದಿಮಕ್ಕಳಿಗೆ ಅಂದು ಬೆಳಗ್ಗೆ ನಾನು ಅವಳನ್ನು ಭಿಕ್ಷುಕಿ ವೇಷದಲ್ಲಿ ನೋಡಿದ ಸಂಗತಿಯನ್ನು ವಿವರಿಸಿ ಹೇಳಿದೆ. ಅವರ‍್ಯಾರೂ ನನ್ನ ಮಾತುಗಳನ್ನು ನಂಬಿದಂತೆ ಕಾಣಲಿಲ್ಲ.

ಆ ಸಿನೆಮಾ ನೋಡಿಬಂದು ಎರಡು ದಿನ ಕಳೆದಿದ್ದುವು. ನಾವು ನಮ್ಮ ದೊಡ್ಡ ಮಗಳು ಡಾಕ್ಟರ್ ರಾಧಿಕಾಳ ಕಾರಿನಲ್ಲಿ ಫ್ರೇಜರ್‌ಟೌನಿನ ಮಸೀದಿರಸ್ತೆಯನ್ನು ಹಾದುಹೋಗುತ್ತಿದ್ದೆವು. ನಾನು ಹಿಂದಿನ ಸೀಟಿನಲ್ಲಿ ಕುಳಿತಿದ್ದೆ. ಆಗ ಅದೇ ಬುದ್ಧಿಮಾಂದ್ಯದ ಹುಡುಗಿ ಬೇಡುತ್ತಾ ಇರುವುದು ನನ್ನ ಗಮನಕ್ಕೆ ಬಂತು. ರಾಧಿಕಾ, ಸ್ವಲ್ಪ ಕಾರು ನಿಲ್ಲಿಸಮ್ಮಾ! ಎಂದು ನನ್ನ ಮಗಳಿಗೆ ಹೇಳಿದೆ. ಕಾರನ್ನು ಆಕೆ ಬದಿಗೆ ನಿಲ್ಲಿಸಿದಳು. ನಮ್ಮ ಕಾರು ನಿಂತಲ್ಲಿಗೆ ಆ ಬುದ್ಧಿಮಾಂದ್ಯದ ಹುಡುಗಿ ಭಿಕ್ಷೆ ಕೇಳಲು ಬಂದಳು. ಅವಳ ಪರಿಚಯ ನನ್ನ ಮಕ್ಕಳಿಗೂ ಆಯಿತು. ಆ ಹುಡುಗಿ ದೈನ್ಯತೆಯಿಂದ ಬೇಡುತ್ತಾ ನನ್ನ ಮಗಳ ಹತ್ತಿರ ಭಿಕ್ಷೆ ಕೇಳಿದಳು. ಆಗ ನನ್ನ ಮಗಳು, ಇಂದು ಯಾವ ಸಿನಿಮಾಕ್ಕೇ ಹೋಗುವೆ? ಎಂದು ಆಕೆಯನ್ನು ಪ್ರಶ್ನಿಸಿದಳು. ಆದರೂ, ಆ ಶಾಣೆ ಭಿಕ್ಷುಕಿ ನನ್ನ ಮಗಳು ಕೇಳಿದ್ದು ಅರ್ಥ ಆಗದವಳಂತೆ ನಟಿಸುತ್ತಾ ಪುನಃ ಕೈನೀಡಿ ಭಿಕ್ಷೆ ಕೇಳಿದಳು. ಅಷ್ಟರಲ್ಲಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನಾನು ಭಿಕ್ಷುಕಿಯ ಕಣ್ಣಿಗೆ ಬಿದ್ದೆ. ಆಕೆ ನನ್ನನ್ನು ಗುರುತಿಸದಂತೆ ನಟಿಸುತ್ತಾ, ಏನೋ ಒಂದು ವಿಕಾರ ಶಬ್ದವನ್ನು ಬಾಯಲ್ಲಿ ಹೊರಡಿಸುತ್ತಾ, ಪುನಃ ನನ್ನ ಮಗಳೊಡನೆ ಭಿಕ್ಷೆ ಕೇಳಿದಳು. ನನ್ನ ಮಗಳು ನಿನಗೆ ಭಿಕ್ಷೆ ಕೊಡುವುದಿಲ್ಲ ಎಂದು ಕೈ ಆಡಿಸಿದಳು. ಆಗ ಆ ಬುದ್ದಿಮಾಂದ್ಯದ ಹುಡುಗಿ ಏನೂ ನಡೆದಿಲ್ಲವೇನೋ ಎಂಬಂತೆ ಮುಂದೆ ನಡೆದಳು. ತನ್ನ ಗುಟ್ಟು ರಟ್ಟಾದರೂ ಆಕೆ ಆ ಅಂಶವನ್ನು ತನ್ನ ನಟನೆಯಲ್ಲಿ ತೋರಗೊಡದೇ, ತಾನು ನಿಜವಾಗಿಯೂ ಬುದ್ಧಿಮಾಂದ್ಯತೆ ಇದ್ದವಳಂತೆಯೇ ನಟಿಸುತ್ತಾ ಮುಂದಕ್ಕೆ ಹೋದಳು. ಆಗ ನನ್ನ ಜತೆಗೆ ಕುಳಿತಿದ್ದ ನನ್ನ ಯಜಮಾನತಿ ಉದರನಿಮಿತ್ತಂ ಬಹುಕೃತವೇಷಂ ಎಂಬ ಗಾದೆಯನ್ನು ಹೇಳಿ ನೋಡಿ..! ಆ ಹುಡುಗಿ ತನ್ನೆರಡು ಅವತಾರದ ವೇಷಗಳನ್ನೂ ಅದೆಷ್ಟು ಚೆನ್ನಾಗಿ ನಿಭಾಯಿಸುತ್ತಿದ್ದಾಳೆ! ಹೀಗಿದೆ ದೊಡ್ಡನಗರದಲ್ಲಿನ ಜೀವನ. ಬೇಡುವುದೂ ಇಂಥವರಿಗೆ ಒಂದು ಪಾರ್ಟ್‌ಟೈಮ್ ಕೆಲಸ. ಅರ್ಧದಿನ ಭಿಕ್ಷೆಬೇಡಿ ಆಕೆ ಕಡಿಮೆಯೆಂದರೂ ರೂಪಾಯಿ ಐನೂರರಿಂದ ಸಾವಿರದವರೆಗೆ ಸಂಪಾದಿಸುತ್ತಾಳೆ. ಮಧ್ಯಾಹ್ನದ ಮೇಲೆ ನಾವೇ ನೋಡಿದೆವಲ್ಲ ಈಕೆಯ ಐಷಾರಾಮೀ ಜೀವನ! ಎಂದಳು. ಇಂದಿಗೂ ಒಮ್ಮೊಮ್ಮೆ ಮಸೀದಿರಸ್ತೆಯಲ್ಲಿ ನಾವು ಹಾದು ಹೋಗುವಾಗ, ಆ ಬುದ್ಧಿಮಾಂದ್ಯದ ಹುಡುಗಿ ದೈನ್ಯತೆಯಿಂದ ಬೇಡುವ ದೃಶ್ಯ ನಮ್ಮ ಕಣ್ಣಿಗೆ ಗೋಚರವಾಗುತ್ತದೆ.

* * *