ನೈನಿತಾಲದ ಕ್ಯಾಂಪಿಗೆ ಹೋಗಿದ್ದಾಗ ನಮಗೆ ದಿನಬಿಟ್ಟು ದಿನ ಸಾಯಂಕಾಲ ನಾಲ್ಕರಿಂದ ಆರುಗಂಟೆಯ ತನಕ ಆ ಮನೋಹರ ಪ್ರವಾಸಿಧಾಮದಲ್ಲಿ ತಿರುಗಾಡಿಕೊಂಡು ಬರುವ ಅವಕಾಶ ಇತ್ತಿದ್ದರು. ನಾವು ನಮ್ಮ ಆ ಲಿಬರ್ಟಿ ಸಮಯವನ್ನು ಸರೋವರದ ಬದಿಯಲ್ಲಿ, ಇಲ್ಲವೇ ಮಾಲ್ (Mall) ಎಂದು ಕರೆಯಲ್ಪಡುವ ಬಜಾರಿನಲ್ಲಿ, ಇಲ್ಲವೇ ಉದ್ಯಾನವನದಲ್ಲಿದ್ದ ಬ್ಯಾಂಡ್ ಸ್ಟಾಂಡ್ ಹತ್ತಿರ ಕಳೆಯುತ್ತಿದ್ದೆವು.

ನಮಗೆ ಕ್ಯಾಂಪಿನಲ್ಲಿ ಒಳ್ಳೆಯ ಆಹಾರ ಸಿಗುತ್ತಿದ್ದುದರಿಂದ ನಮಗೆ ನೈನಿತಾಲ್ ಪೇಟೆಯಲ್ಲಿ ದೊರೆಯುತ್ತಿದ್ದ ವಿವಿಧ ತಿಂಡಿಗಳ ಬಗ್ಗೆ ಅಥವಾ ಅಲ್ಲಿನ ಉಪಹಾರಗೃಹಗಳ ಬಗ್ಗೆ ಹೆಚ್ಚಿನ ಆಕರ್ಷಣೆ ಇರಲಿಲ್ಲ.

ಮೇ ತಿಂಗಳಾದುದರಿಂದ ನೈನಿತಾಲದ ಪ್ರವಾಸಿಧಾಮವು ಪ್ರವಾಸಿಗಳಿಂದ ತುಂಬಿ ತುಳುಕುತ್ತಿತ್ತು. ದೇಶವಿದೇಶಗಳಿಂದ ಅಲ್ಲಿ ಬಂದ ತರಹೇವಾರಿ ಜನರು ನೋಡಲು ಸಿಗುತ್ತಿದ್ದರು. ಬೀದಿಬದಿಯಲ್ಲಿ ಮತ್ತು ಅಂಗಡಿಗಳಲ್ಲಿ ಬಗೆಬಗೆಯ ಉಣ್ಣೆಯ ಉಡುಪು, ಒಣಗಿಸಿದ ಹಣ್ಣುಗಳು, ಬಾದಾಮಿ, ಆಕ್ರೋಟು, ಚಾಪುಡಿ, ಆಟಿಕೆಗಳು, ಫ್ಯಾನ್ಸಿ ವಸ್ತುಗಳು, ಪಾದರಕ್ಷೆಗಳು, ಕಲಾ-ಕೈಗಾರಿಕೆಯ ವಸ್ತುಗಳು, ಫೋಟೋ ಆಲ್ಬಮ್‌ಗಳು, ತರತರಹದ ಟೋಪಿಗಳು ಮತ್ತು ಬಟ್ಟೆಬರೆಗಳ ವ್ಯಾಪಾರವು ಜೋರಾಗಿ ನಡೆಯುತ್ತಿತ್ತು. ನಮ್ಮಲ್ಲಿದ್ದ ನಿಯಮಿತ ಪಾಕೆಟ್‌ಮನಿಯಲ್ಲಿ ನಾವು ಹೆಚ್ಚಿನ ಖರೀದಿ ಮಾಡಲು ಸಾಧ್ಯವಿರಲಿಲ್ಲ. ಆದ್ದರಿಂದ ಸುಮ್ಮನೆ ಸುತ್ತುತ್ತಾ ಕಾಲ ಕಳೆಯುತ್ತಿದ್ದೆವು. ಹೆಚ್ಚಿನ ಪ್ರವಾಸಿಗಳು ನೈನಿತಾಲಿನ ಸುಂದರ ಸರೋವರದಲ್ಲಿ ದೋಣಿ ವಿಹಾರ ಮಾಡುತ್ತಿದ್ದರು. ಇದು ಅಲ್ಲಿನ ಮುಖ್ಯ ಆಕರ್ಷಣೆ. ತರತರಹದ ಬಣ್ಣ ಬಣ್ಣಗಳಿಂದ ಅಲಂಕೃತವಾದ ದೋಣಿಗಳು ಅಲ್ಲಿ ಬಾಡಿಗೆಗೆ ಸಿಗುತ್ತಿದ್ದುವು. ಭಾರತೀಯ ನೌಕಾಪಡೆಯ ಎನ್.ಸಿ.ಸಿ. ಕ್ಯಾಡೇಟ್‌ಗಳಾದ ನಮಗೆ ದೋಣಿ ವಿಹಾರದಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ. ಆ ದೋಣಿಗಳಿಗಿಂತ ಬಹಳ ಉತ್ತಮವಾದ ಭಾರತೀಯ ನೌಕಾಪಡೆಯ ಡಿಂಘಿ ಮತ್ತು ಕಟ್ಟರ್ ಎಂಬ ದೋಣಿಗಳಲ್ಲಿ ನಾವು ದಿನಾಲೂ ಮಧ್ಯಾಹ್ನ ಆ ಸರೋವರದಲ್ಲಿ ದೋಣಿ ನಡೆಸುವ ಅಭ್ಯಾಸ ಮಾಡುತ್ತಿದ್ದೆವು.

ನೈನಿತಾಲದ ಸರೋವರದ ಸುತ್ತಲೂ ಇರುವ ವರ್ತುಲಮಾರ್ಗದಲ್ಲಿ ಕುದುರೆ ಸವಾರಿ ಮಾಡುವುದು ಪ್ರವಾಸಿಗಳಿಗೆ ಇನ್ನೊಂದು ಮೋಜಿನ ಆಕರ್ಷಣೆಯಾಗಿತ್ತು. ಅಲ್ಲಿ ಸವಾರಿಗೆ ಕುದುರೆಗಳು ಬಾಡಿಗೆಗೆ ದೊರೆಯುತ್ತಿದ್ದುವು. ಕುದುರೆ ಸವಾರಿ ಗೊತ್ತಿದ್ದವರಿಗೆ ಕುದುರೆಯ ಮಾಲಿಕರು ಸ್ವಂತವಾಗಿ ಕುದುರೆ ಓಡಿಸಲು ಕೊಡುತ್ತಿದ್ದರು. ಹೆಚ್ಚಿನ ಕುದುರೆಗಳು ಸಾಮಾನ್ಯಗಾತ್ರದ ಪೋನಿ ಎಂದು ಕರೆಯಲ್ಪಡುವ ಗಿಡ್ಡು ಜಾತಿಯ ಪಹಾಡೀ ಕುದುರೆಗಳಾಗಿದ್ದುವು. ಈ ಕುದುರೆಗಳಿಗೆ ಸವಾರನ್ನು ಬೀಳಿಸದೇ ಸರೋವರ ಸುತ್ತಿ ಪುನಃ ಬ್ಯಾಂಡ್‌ಸ್ಟಾಂಡ್ ಪಕ್ಕದ ಆ ಜಾಗಕ್ಕೆ ಹಿಂದಿರುಗಿ ಬರುವ ರೂಢಿ ಒಗ್ಗಿಹೋಗಿತ್ತು. ಸ್ವಲ್ಪ ಕುದುರೆ ಸವಾರಿ ಬಲ್ಲವರು ಕುದುರೆಗಳನ್ನು ಬಾಡಿಗೆಗೆ ಪಡೆದರೆ, ಕುದುರೆಗಳ ಮಾಲಿಕರಿಗೆ ಈ ಕುದುರೆಗಳ ಲಗಾಮು ಕೈಯ್ಯಲ್ಲಿ ಹಿಡಿದು ಸವಾರಿ ಮಾಡುವವರ ಕುದುರೆಗಳ ಮುಂದೆ ನಡೆಯುತ್ತಾ ಸರೋವರವನ್ನು ಸುತ್ತುವ ಕೆಲಸ ಉಳಿಯುತ್ತಿತ್ತು. ಅವರು ಸವಾರಿ ಗೊತ್ತಿಲ್ಲದ ಜನರ ಕುದುರೆಗಳ ಲಗಾಮು ಕೈಯಲ್ಲಿ ಹಿಡಿದು ಸರೋವರ ಸುತ್ತಿಸಿ ಬರುತ್ತಿದ್ದರು. ಈ ಕುದುರೆಗಳು ಬಹು ನಿಧಾನ ಚಲಿಸುತ್ತಿದ್ದುವು. ಯಾವಾಗಲೂ ಅದೇ ಕೆಲಸ ಮಾಡುತ್ತಾ ಇದ್ದುದರಿಂದ, ಅವಕ್ಕೆ ಆ ಕೆಲಸ ರೋಸಿ ಹೋದಂತಿತ್ತು.

ಆ ಗಿಡ್ಡು ಕುದುರೆಗಳ ಮೇಲೆ ನಾವು ಕುಳಿತರೆ ನಮ್ಮ ಕಾಲುಗಳು ನೆಲಕ್ಕೆ ಮುಟ್ಟಲು ಕೇವಲ ಆರು ಇಂಚು ಉಳಿಯುತ್ತಿತ್ತು. ಈ ಒಂದು ಸುತ್ತಿನ ಕುದುರೆ ಸವಾರಿಗೆ ಆಗ ಬರೇ ಒಂದು ರುಪಾಯಿ ಶುಲ್ಕ ವಿಧಿಸುತ್ತಿದ್ದರು.

ಆದ್ದರಿಂದ ನಾವು ಕುದುರೆ ಮಾಲಿಕರೊಡನೆ ನಮಗೆ ಕುದುರೆ ಸವಾರಿ ಬರುತ್ತೆ ಎಂದು ಹೇಳಿ, ಒಂದು ರೂಪಾಯಿ ಕೊಟ್ಟು ಕುದುರೆಗಳನ್ನು ಬಾಡಿಗೆಗೆ ಪಡೆದು, ಅಮೇರಿಕನ್ ಕೌ ಬಾಯ್ಗಳ ತರಹಾ ಸ್ಟೈಲ್‌ನಲ್ಲಿ ಸವಾರಿ ಮಾಡುತ್ತಾ ಬಹುದೊಡ್ಡ ರೌಂಡ್ ಹೊಡೆದು ಬರಬೇಕು ಎಂದುಕೊಳ್ಳುತ್ತಾ, ಮೊದಲನೇ ದಿನದಂದು ಕುದುರೆ ಹತ್ತಿದೆವು.

ಆ ಬೇಸತ್ತ ಬಾಡಿಗೆಯ ಕುದುರೆಗಳು ನಮ್ಮ ಯಾವ ಸೂಚನೆಗಳಿಗೂ ಸೊಪ್ಪುಹಾಕದೇ ತಲೆ ತಗ್ಗಿಸಿಕೊಂಡು ಅಲ್ಲಲ್ಲಿ ಹುಲ್ಲುಮೂಸುತ್ತ ನಿಧಾನಗತಿಯಲ್ಲಿ ವರ್ತುಲ ರಸ್ತೆಯಲ್ಲಿ ಮಾತ್ರ ಚಲಿಸಿ ಮಾಲೀಕನಲ್ಲಿಗೆ ವಾಪಾಸ್ ಬಂದುಬಿಟ್ಟವು…!! ನಾವು ಲಗಾಮಿನ ಕೊನೆಯಿಂದ ಅವಕ್ಕೆ ಚುರುಕು ಮುಟ್ಟಿಸಿದರೂ, ನಮ್ಮ ಆ ಬಡಪೆಟ್ಟನ್ನು ಅವು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ…!!. ಅವುಗಳ ಈ ಉದಾಸೀನ ಭಾವಕ್ಕೆ ನಾವು ತೀರಾ ಜಿಗುಪ್ಸೆ ಪಟ್ಟು ಆ ಮಾಮೂಲೀ ಪ್ರವಾಸಿತಾಣದ ಕುದುರೆಗಳ ಬಗ್ಗೆ ಆಸಕ್ತಿ ಕಳೆದುಕೊಂಡು ಅನಗತ್ಯವಾಗಿ ಒಂದು ರೂಪಾಯಿ ಕಳೆದುಕೊಂಡೆವಲ್ಲಾ ಎಂದು ವ್ಯಥೆಪಟ್ಟೆವು.

ಎರಡನೇ ಸಲದ ನಮ್ಮ ಲಿಬರ್ಟಿಯ ತಿರುಗಾಟದ ಸಮಯ ನಮಗೆ ನಿಜವಾದ ಕೌಬಾಯ್ ಕುದುರೆ ತರಹದ ಒಂದು ಕುದುರೆ ಕಣ್ಣಿಗೆ ಬಿತ್ತು. ಅದು ಅಂದೇ ನೈನಿತಾಲ್‌ಗೆ ಬಂದಿಳಿದಿದ್ದ ದೊಡ್ಡ ಕುದುರೆ. ಅದು ರಿಟಾಯರ್ಡ್ ರೇಸ್ ಕುದುರೆ ಎಂದು ಅದರ ಮಾಲಿಕ ಹೇಳಿದ. ಅದು ಅಚ್ಚ ಕಪ್ಪು ಬಣ್ಣದ ಬಲಿಷ್ಟವಾದ ದೊಡ್ಡ ಸೈಜಿನ ಕುದುರೆ. ಅದು ಅಲ್ಲಿದ್ದ ಮಾಮೂಲಿ ಕುದುರೆಗಳಿಗಿಂತ ಮೂರುಪಟ್ಟು ದೊಡ್ಡ ಗಾತ್ರವುಳ್ಳದ್ದಾಗಿತ್ತು. ಅದರ ಹೆಸರು ಕಾಲೂ ಎಂದು ಅದರ ಮಾಲೀಕ ಹೇಳಿದ. ಒಂದು ರೌಂಡ್‌ಗೆ ಐದು ರೂಪಾಯಿ ಚಾರ್ಜ್ ಎಂದು ಕೂಡಾ ಆತ ಹೇಳಿದ. ಅಷ್ಟರಲ್ಲೇ, ಕುದುರೆ ಸವಾರಿ ಚೆನ್ನಾಗಿ ಬಲ್ಲ ಹಿರಿಯರೊಬ್ಬರು ಅಲ್ಲಿಗೆ ಬಂದು ಆತನಿಗೆ ಗರಿಗರಿ ಐದು ರೂಪಾಯಿಯ ನೋಟ್ ಕೊಟ್ಟು,  ಒಳ್ಳೆಯ ಕೌಬಾಯ್ ತರಹ ಕುದುರೆ ಹತ್ತಿ, ನಮ್ಮೆದುರೇ ಕುದುರೆಯನ್ನು ಜೋರಾಗಿ ಓಡಿಸುತ್ತ ಸರೋವರಕ್ಕೆ ಒಂದು ರೌಂಡ್ ಹೋಗಿ ಬಂದರು.

ನಾವು ಐದು ರೂಪಾಯಿ ಚಾರ್ಜ್ ಬಗ್ಗೆ ಕುದುರೆ ಮಾಲಿಕನ ಹತ್ತಿರ ಚೌಕಾಸಿ ಮಾಡುತ್ತಾ ಇರುವಾಗ,  ಬೊಂಬಾಯಿ ಸೇಠುಗಳಂತೆ ಕಾಣುತ್ತಿದ್ದ ಸ್ಥೂಲಕಾಯದ ದಂಪತಿಗಳು ಅಲ್ಲಿಗೆ ಬಂದರು. ಅವರು ಆ ಕಾಲೂ ಎಂಬ ಕುದುರೆಯೇ ತಮ್ಮ ಸವಾರಿಗೆ ಬೇಕು ಎಂದರು. ಸೇಠು ಮೊದಲು ಕುದುರೆ ಹತ್ತಲು ಹೋದರೆ, ಸೇಠಾಣಿಗೆ ಕೋಪ ಬಂತು. ತಾನೇ ಮೊದಲು ರೌಂಡ್ ಹೋಗಿಬರುತ್ತೇನೆ ಎಂದರು. ಕೇವಲ ನೂರಾ ಇಪ್ಪತ್ತು ಕಿಲೋ ಭಾರದ ಆ ಧಡೂತಿ ಹೆಂಗಸನ್ನು ಆಕೆಯ ಗಂಡ ಮತ್ತು ಕುದುರೆಯ ಮಾಲೀಕ ಕುದುರೆ ಹತ್ತುವ ಬಗ್ಗೆ ಒಂದು ಸ್ಟೂಲ್ ತಂದಿರಿಸಿ, ಕಷ್ಟಪಟ್ಟು ಕುದುರೆ ಏರಿಸಿದರು. ಸಿಲ್ಕ್‌ಸೀರೆ ಉಟ್ಟ ಆ ಮಹಾತಾಯಿ ಕುದುರೆಯ ಮೇಲೆ ಕುಳಿತವರೇ ಕುದುರೆಯ ಲಗಾಮು ತಿರುಗಿಸಿ ಕುದುರೆಗೆ  ಒಂದು ಪೆಟ್ಟುಕೊಟ್ಟರು. ಕುದುರೆ ಗಾಬರಿಗೊಂಡು ಜೋರಾಗಿಯೇ ಹೆಜ್ಜೆ ತೆಗೆಯಿತು.  ಘೋಡಾವಾಲನು ಕುದುರೆಯ ಜತೆಗೆ ಓಡುತ್ತಾ ಹೋಗಿ ಕುದುರೆಯ ಲಗಾಮು ಹಿಡಿದು ನಡೆಯತೊಡಗಿದ. ಆ ಮೇಲೆ ಕುದುರೆ ನಿಧಾನವಾಗಿಯೇ ಹೆಜ್ಜೆಹಾಕುತ್ತಾ ನಡೆಯತೊಡಗಿತು.

ಕುದುರೆಯ ಮಾಲಿಕ ಸೇಠಾಣಿ ಭದ್ರವಾಗಿ ಕುಳಿತಿದ್ದಾರೆಂದು ಹಿಂದೆ ನೋಡದೆ ನಡೆಯತೊಡಗಿದ. ಅಷ್ಟರಲ್ಲಿ ಆ ಸಿಲ್ಕ್‌ಸೀರೆ ಉಟ್ಟ ಮಹಿಳೆ ಒಂದು ಪಕ್ಕಕ್ಕೆ ವಾಲತೊಡಗಿದರು. ಆಕೆ ಎರಡುಸಲ ಕ್ಷೀಣದನಿಯಲ್ಲಿ ಘೋಡಾ ವಾಲೇ! ಘೋಡಾ ವಾಲೇ..! ಎಂದು ಕೂಗಿದರು. ಕುದುರೆಯ ಮಾಲಿಕನು ಹಿಂದೆ ತಿರುಗಿ ನೋಡುವಷ್ಟರಲ್ಲಿ, ಆಕೆಯು ಕುದುರೆಯ ಜೀನಿನಿಂದ ಪಕ್ಕಕ್ಕೆ ವಾಲಿದ್ದರು..! ಕುದುರೆಯ ಮಾಲಿಕನು ಆಕೆಯನ್ನು ಭದ್ರವಾಗಿ ಕುಳ್ಳಿರಿಸಲು ಪ್ರಯತ್ನ ಮಾಡುವುದರೊಳಗೆ, ಆಕೆ ಹೆದರಿ ಕುದುರೆಯ ಮಾಲಿಕನ ಮೇಲೆ ಹಾರಿ, ಆತನನ್ನೇ ಆಧಾರಕ್ಕೆ ಹಿಡಿದುಕೊಂಡರು. ಪಾಪ..! ಕೃಶಕಾಯದ ಬಡಪಾಯಿ ಕುದುರೆ ಮಾಲಿಕ ಆಕೆಯ ಭಾರವನ್ನು ತಾಳಲಾರದೇ ಕೆಳಗೆ ಕುಸಿದುಬಿಟ್ಟ..!

ಆ ಮಹಾತಾಯಿಯ ಪುಣ್ಯಕ್ಕೆ ಆಕೆಯ ಕಾಲಲ್ಲಿದ್ದ ಪಂಪ್‌ಶೂಗಳು ಜಾರಿದ್ದರಿಂದ ಆಕೆಯ ಕಾಲು ಜೀನಿನ ರಿಕಾಪಿನಲ್ಲಿ ಸಿಕ್ಕಿಕೊಂಡು ತೊಂದರೆಯಾಗಲಿಲ್ಲ.

ಕೆಳಗೆ ಬಿದ್ದಿದ್ದ ಕುದುರೆ ಮಾಲಿಕನು ಆಕೆಯ ಭಾರ ತಾಳಲಾರದೇ ಏದುಸಿರು ಬಿಡುತ್ತಾ ಜ್ಞಾನತಪ್ಪುವುದೊಂದೇ ಬಾಕಿ..!! ನಮ್ಮ ಗುಂಪಿನಿಂದ ಎರಡು ಹುಡುಗರು ಓಡಿಹೋಗಿ ಕೈಕೊಟ್ಟು ಆಕೆಯನ್ನು ಮೇಲಕ್ಕೆ ಎಬ್ಬಿಸಿದರು. ಆಕೆ ಅವರಿಗೆ ಥ್ಯಾಂಕ್ಸ್ ಕೂಡಾ ಹೇಳಲಿಲ್ಲ. ಅವಮಾನ ಮತ್ತು ನಾಚಿಕೆಯಿಂದ ಆಕೆ ಕೆಂಪುಕೆಂಪಾಗಿದ್ದರು. ಆಕೆಯ ಪತಿ ಆಕೆಯ ಬಳಿಸಾರಿ ಸಮಾಧಾನಪಡಿಸಲು ಪ್ರಯತ್ನಿಸಿದರು. ಆಗ ಆಕೆಯ ಕೋಪ ತಾರಕಕ್ಕೇರಿತು. ಆಕೆ ತನ್ನ ಪರ್ಸಿನಿಂದ ಇಪ್ಪತ್ತು ರೂಪಾಯಿಗಳನ್ನು ತೆಗೆದುಕೊಟ್ಟು ಬಸ್ ಹುವಾ! ಆಪ್ ಕೀ ಘೋಡೇಕಿ ಸವಾರಿ..! ಎಂದು ಬುಸುಗುಟ್ಟುತ್ತಾ, ತನ್ನ ಪತಿಯ ಕೈ ಹಿಡಿದು ದರದರನೆ ಎಳೆಯುತ್ತಾ, ಅವರುಗಳು ತಂಗಿದ್ದ ಹೋಟೆಲ್ ಕಡೆಗೆ ನಡೆದರು. ಒಂದೇ ನಿಮಿಷದ ಒಳಗೆ ಕುದುರೆಯಾತ ಇಪ್ಪತ್ತು ರೂಪಾಯಿ ಸಂಪಾದನೆ ಮಾಡಿದ್ದ..!!

ನಮ್ಮ ಚೌಕಾಸಿಯ ಮಾತಿಗೆ ಕುದುರೆ ಮಾಲಿಕ ಒಪ್ಪುವ ಹಾಗೆ ಕಾಣಲಿಲ್ಲ. ನಮ್ಮ ಗುಂಪಿನಲ್ಲಿದ್ದ ದೀಪಕ್ ಸೈಕಿಯಾ ಕುದುರೆ ಸವಾರಿ ಕಲಿತಿದ್ದ. ಆತ ಅಸ್ಸಾಮಿನ ಸಿಬ್‌ಸಾಗರ್ ಎಂಬ ಊರಿನ ಶ್ರೀಮಂತ ಮನೆತನದ ಹುಡುಗ. ಆತ ನಿರಾಳವಾಗಿ ಐದು ರೂಪಾಯಿ ಕೊಟ್ಟು ಕಾಲೂವನ್ನು ಏರಿ ಸರೋವರಕ್ಕೆ ಒಂದು ಸುತ್ತು ಬಂದೇಬಿಟ್ಟ. ನನಗೆ ಕುದುರೆ ಸವಾರಿ ಮಾಡುವ ಆಸೆಯನ್ನು ತಡೆದುಕೊಳ್ಳಲು ಸಾಧ್ಯವೇ ಆಗಲಿಲ್ಲ. ಐದು ರೂಪಾಯಿ ಹೋದರೆ ಹೋಗಲಿ ಎಂದು ಮನಸ್ಸು ಮಾಡಿಯೇಬಿಟ್ಟೆ.

ಕುದುರೆಯ ಮಾಲಿಕನಿಗೆ ಐದು ರೂಪಾಯಿ ತೆರುತ್ತಾ ಮೈ ಘುಡ್‌ಸವಾರಿ ಜಾನ್‌ತಾ ಹೂಂ ಎಂದು ಸ್ಟೈಲಾಗಿ ಸುಳ್ಳು ಹೇಳಿದೆ. ಕುದುರೆಯಾತ ಕುದುರೆಯನ್ನು ನನ್ನ ಹತ್ತಿರ ತಂದು ನಿಲ್ಲಿಸಿದ.

ಆ ದೈತ್ಯ ಕರೀ ಕುದುರೆಯ ಮಿಂಚುವ ಬೆನ್ನು ನನಗಿಂತ ಎತ್ತರದಲ್ಲಿತ್ತು..! ನಾನು ಒಳಗೊಳಗೇ ಧೈರ್ಯ ತಂದುಕೊಂಡೆ..! ಹೇಗಿದ್ದರೂ, ನಾವುಗಳು ಆ ಕಾಲದಲ್ಲಿ ಭಾನುವಾರ ನಮ್ಮೂರಿನ ಏಕೈಕ ಸಿನೆಮಾ ಥಿಯೇಟರಿನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಕೌಬಾಯ್ ಪಿಕ್ಚರುಗಳನ್ನು  ನೋಡಿ ಅನುಭವ ಪಡೆದುಕೊಂಡು, ಆಗಿನ ಫ್ಯಾಶನ್ ಆಗಿದ್ದ ‘ಟೈಟ್‌ಪ್ಯಾಂಟ್ ಮತ್ತು ಕೌಬಾಯ್ ಸ್ಟೈಲಿನ ಆಂಕಲ್ ಬೂಟ್ ಧರಿಸುತ್ತಿದ್ದ ಕಾಲೇಜ್ ಹುಡುಗರು..!!

ನಮ್ಮೂರಾದ ಉಡುಪಿಯಲ್ಲಿ ಕೆಲವೇಕೆಲವು ಜಟ್ಕಾದ ಬಡಕಲಾದ ಮುದಿಕುದುರೆಗಳನ್ನು ಬಿಟ್ಟರೆ ಬೇರೆ ಕುದುರೆಗಳೇ ಇರಲಿಲ್ಲ. ಹಾಗಾಗಿ, ನಮಗೆ ನಮ್ಮೂರಲ್ಲಿ ಕುದುರೆ ಸವಾರಿಗೆ ಅನುಕೂಲವೇ ಇರಲಿಲ್ಲ. ನಾವು ನಮ್ಮ ನಿತ್ಯ ವಾಹನಗಳಾದ ಸೈಕಲ್‌ಗಳನ್ನು ಕುದುರೆಗಳೆಂದು ಭಾವಿಸಿಕೊಳ್ಳುತ್ತಾ ಕೌಬಾಯ್ ಸ್ಟೈಲಿನಲ್ಲಿ ಓಡಿಸುತ್ತಿದ್ದೆವು.

ನಮ್ಮ ತಲೆಯಲ್ಲಿ ನಮಗೆ ಕುದುರೆ ಓಡಿಸಲು ಬರುತ್ತದೆ ಎಂಬ ಅಹಂಕಾರಯುಕ್ತ ಅಭಿಪ್ರಾಯ ಮಾತ್ರ ಬಲವಾಗಿ ಬೇರೂರಿತ್ತು. ಹೇಗೂ ಬಹಳಷ್ಟು ಕೌಬಾಯ್ ಪಿಕ್ಚರ್ ನೋಡಿದ ವೆಟೆರನ್ ನಾನಲ್ಲವೇ? ಈ ಕುದುರೆ ಸವಾರಿ ನನಗೇನು ದೊಡ್ಡ ವಿಷಯವೆಂದು ಮನದಲ್ಲೇ ಜಂಭ ಕೊಚ್ಚಿಕೊಳ್ಳುತ್ತಾ, ಆ ದೊಡ್ಡ ಕುದುರೆಯ ಜೀನಿನ ಕೊಂಬನ್ನು ಕೈಯ್ಯಲ್ಲಿ ಹಿಡಿದು ರಿಕಾಪಿನ ಮೇಲೆ ಕಾಲನ್ನು ಇರಿಸಿ ಜೀನಿನ ಮೇಲೆ ಜಿಗಿದೆ. ನನ್ನ ಕುದುರೆಯ ಆರೋಹಣದ ಮೋಡಿಯನ್ನು ನೋಡಿ ಕುದುರೆಯ ಮಾಲಿಕನಿಗೆ ಮತ್ತು ಕಾಲೂ ಎಂಬ ಆ ಕುದುರೆಗೆ ನಾನೊಬ್ಬ ‘ನುರಿತ ಸವಾರ ಎನ್ನಿಸಿರಬೇಕು. ಕುದುರೆ ಆರಾಮವಾಗಿ ನಿಂತಿತ್ತು. ನನ್ನ ಆಂಕಲ್ ಬೂಟಿಗೆ ರೈಡಿಂಗ್‌ಸ್ಪರ್ ಇಲ್ಲವಲ್ಲಾ ಎಂದು ಸ್ವಲ್ಪ ಬೇಸರವೆನಿಸಿತು. ಕುದುರೆಯ ಮಾಲಿಕ ಮರುಕ್ಷಣದಲ್ಲೇ ನನ್ನ ಕೈಯಲ್ಲಿ ಕುದುರೆಯ ಲಗಾಮುಗಳನ್ನು ಬಹಳ ನಂಬಿಕೆಯಿಂದ ಕೊಟ್ಟ.

ನಾನು ಈಗ ಇಡೀ ನೈನಿತಾಲ್ ಪಟ್ಟಣಕ್ಕೇ ಮಾದರಿ ಸವಾರನಂತೆ ಸವಾರಿ ಮಾಡಿ ತೋರಿಸುತ್ತೇನೆ ಎಂಬ ಆತ್ಮವಿಶ್ವಾಸ ನನ್ನಲ್ಲಿ ಉಂಟಾಯಿತು.

ನನ್ನ ಕೈಗಳಿಗೆ ಆ ಉದ್ದದ ಲಗಾಮುಗಳನ್ನು ಒಂದು ಸುತ್ತು ಸುತ್ತಿ ಹಿಡಿದು, ಕುದುರೆಯ ಭುಜವನ್ನು ಎಡಕೈಯಿಂದ ನೇವರಿಸಿದೆ. ನಾನು ಕೂಡಾ ‘ಜಾನ್‌ವೇನ್ ತರಹ ಸ್ಟೈಲ್‌ನಲ್ಲಿ ಸವಾರಿ ಮಾಡಬೇಕು ಎಂದುಕೊಳ್ಳುತ್ತ ಲಗಾಮುಗಳನ್ನು ನನ್ನತ್ತ ಎಳೆದುಕೊಂಡು,  ಎರಡೂ ಬೂಟುಗಳ ಹಿಮ್ಮಡಿಗಳಿಂದ ಕುದುರೆಯ ಹಿಂದಿನ ತೊಡೆಗಳ ಬುಡವನ್ನು ತಿವಿದೆ. ಆ ಮೇಲೆ ಯಾವುದೂ ನಾನು ಏಣಿಸಿದಂತೆ ಆಗಲಿಲ್ಲ..!

ಲಗಾಮುಗಳನ್ನು ಒಮ್ಮೆಗೇ ಎಳೆದು, ಹಿಮ್ಮಡಿಗಳಿಂದ ತಿವಿದುದಕ್ಕೆ, ಕುದುರೆ ಕೆನೆಯುತ್ತಾ, ತನ್ನ ಹಿಂಗಾಲುಗಳ ಮೇಲೆ ನಿಂತಿತು. ನಾನು ಬಹಳ ಗಾಬರಿಯಾಗಿಬಿಟ್ಟೆ! ರಿಕಾಪುಗಳ ಮೇಲೆ ನನ್ನ ಭಾರಹಾಕಿ ನನ್ನ ಸಮತೋಲ ಕಾಪಾಡಿಕೊಂಡೆ. ಇಷ್ಟಾದರೂ, ನನ್ನ ಹೆದರಿಕೆಯನ್ನು ತೋರಿಸಿಕೊಳ್ಳದೇ ಗಟ್ಟಿಯಾಗಿ ಗೋ ಎಂದೆ.

ಕುದುರೆ ನಾಗಾಲೋಟದಿಂದ ಮುಂದಕ್ಕೆ ನೆಗೆಯಿತು. ಮೊದಲನೇ ನೆಗೆತಕ್ಕೇ ನಾನು ಆಯ ತಪ್ಪಿದ್ದೆ. ಎರಡನೇ ನೆಗೆತಕ್ಕೆ ಕುದುರೆಯ ಭುಜದ ಜೂಲಿನ ಹತ್ತಿರ ಇದ್ದೆ..!. ಮೂರನೇ ನೆಗೆತಕ್ಕೆ ನಾನು ಸಂಪೂರ್ಣವಾಗಿ ಆ ದೈತ್ಯ ಕುದುರೆಯ ಕುತ್ತಿಗೆಯನ್ನು ಅಪ್ಪಿಕೊಂಡುಬಿಟ್ಟಿದ್ದೆ!  ಕುದುರೆಗೆ ಸಿಟ್ಟು ಬಂದು ಹುಚ್ಚಾಪಟ್ಟೆ ಧೌಡಾಯಿಸುವ ಲಕ್ಷಣ ಕಾಣಿಸಿತು. ಜೀನಿನ ರಿಕಾಪುಗಳು ನನ್ನ ಬೂಟುಗಳನ್ನು ಕಚ್ಚಿದ್ದುವು. ನಾನು ಆಯತಪ್ಪಿ ಬಿದ್ದರೆ ತಲೆಕೆಳಗಾಗಿ ಜೋಲಾಡುವೆನು ಎಂಬುದು ಖಂಡಿತವಾಯಿತು. ತಲೆ ಒಡೆದು ಸಾಯುವ ಕಾಲ ಬಂತಲ್ಲಾ? ಎಂದು ಚಿಂತಿಸಿದೆ.

ಹೇಗಾದರೂ, ಈ ಗಂಡಾಂತರದಿಂದ ಬದುಕಿಕೊಳ್ಳಬೇಕು ಎಂದುಕೊಳ್ಳುತ್ತಾ ಇನ್ನು ಕೆಲವೇ ಕ್ಷಣಗಳಲ್ಲಿ ಒಡೆದು ಹೋಗಲಿದ್ದ ನನ್ನ ತಲೆಯನ್ನೇ ಉಪಯೋಗಿಸಲು ಮೊದಲುಮಾಡಿದೆ. ಪ್ರಾಣ ಉಳಿಸಿಕೊಳ್ಳಲು ಒಂದೇ ಉಪಾಯ ಇದೆ ಎಂದು ತೋಚಿತು. ಕೂಡಲೇ ಕಾರ್ಯರೂಪಕ್ಕೆ ಇಳಿದೆ.

ಕೋಪದಿಂದ ಹುಚ್ಚೆದ್ದ ಕುದುರೆಯ ಕತ್ತಿನ ಮೇಲಿನಿಂದ ನಾನು ಕೆಳಗೆ ಜಾರಿಬೀಳದಂತೆ  ಕೈಕಾಲುಗಳನ್ನು ಭದ್ರಪಡಿಸುತ್ತಾ, ಅದರ ಕತ್ತಿನ ಮೇಲೆಯೇ ಸ್ವಲ್ಪ ಮುಂದಕ್ಕೆ ಸರಿದೆ. ಕುದುರೆಯ ಎರಡು ಕಣ್ಣುಗಳನ್ನು ನನ್ನ ಅಂಗೈಗಳಿಂದ ಭದ್ರವಾಗಿ ಮುಚ್ಚಿ ಹಿಡಿದು ಬಿಟ್ಟೆ ನನ್ನ ಉಪಾಯ ಕೂಡಲೇ ಫಲ ನೀಡಿತು. ಕಣ್ಣುಕಾಣದ ಕುದುರೆ ಕೂಡಲೇ ನಿಂತುಬಿಟ್ಟಿತು….

ಆದರೂ, ಅದರ ಕುತ್ತಿಗೆಯನ್ನು ಬಳಸಿ ಹಿಡಿದು, ಅದರ ಕುತ್ತಿಗೆಯ ಮೇಲೆಯೇ ಭಾರಹಾಕಿ ಕುಳಿತಿದ್ದ ನನ್ನನ್ನು ಹೇಗಾದರೂ ಮಾಡಿ ಕೆಳಗೆ ಹಾಕಿ, ಒದೆಯುವ ಪ್ರಯತ್ನವನ್ನು ಅದು ಮುಂದುವರಿಸಿಯೇ ಇತ್ತು. ಬಾಯಿ ತೆರೆದು ಜೋರಾಗಿ ಕೆನೆಯುತ್ತಾ, ತನ್ನ ಕತ್ತನ್ನು ಹಿಂದೆ ತಿರುಗಿಸಿ, ನನ್ನನ್ನು ಕಚ್ಚಲು ಪ್ರಯತ್ನ ಮಾಡುತ್ತಲೇ ಇತ್ತು. ನಾನು ಅದರ ಕಣ್ಣಿನ ಮೇಲಿನ ಕೈಗಳನ್ನು ಸಡಿಲಗೊಳಿಸಲೇ ಇಲ್ಲ. ಅಷ್ಟರಲ್ಲಿ, ಕುದುರೆ ಮಾಲಿಕ ಬಂದು ಕುದುರೆಯ ಲಗಾಮು ಹಿಡಿದು ಬಲವಾಗಿ ಕೆಳಗೆ ಜಗ್ಗಿ ಹಿಡಿದ. ಆ ನಂತರ, ಅದರ ಕಡಿವಾಣದ ಬೆಲ್ಟನ್ನು ಬಲವಾಗಿ ಎರಡೂ ಕೈಗಳಲ್ಲಿ ಆತ ಎಳೆದು ಹಿಡಿದು, ಅದು ಮಿಸುಕಾಡದಂತೆ ಹಿಡಿದ. ದೀಪಕ್ ಸೈಕಿಯಾ ಓಡಿಬಂದು ಕುದುರೆಯ ರಿಕಾಪಿಗೆ ತೊಡರಿದ್ದ ನನ್ನ ಆಂಕಲ್ ಬೂಟುಗಳನ್ನು ಬಿಡಿಸಿದ. ನಾನು ಮೊದಲು ಒಂದು ಪಕ್ಕಕ್ಕೆ ಜಾರಿಕೊಂಡು ನೆಲಕ್ಕೆ ಇಳಿಯುವ ಮೊದಲು ಅದರ ಕಣ್ಣುಗಳನ್ನು ಮುಚ್ಚಿದ್ದ ನನ್ನ ಹಸ್ತಗಳನ್ನು ತೆಗೆದೆ. ಮಿಂಚಿನಂತೆ ಆ ಕುದುರೆಯಿಂದ ನಾಲ್ಕು ಗಜ ದೂರ ಸರಿದ ಮೇಲೆ, ನಿಶ್ಚಿಂತೆಯಿಂದ ನಿಟ್ಟುಸಿರುಬಿಟ್ಟೆ. ಈ ಎಲ್ಲಾ ಸಂಗತಿಗಳು ಕೆಲವೇ ಸೆಕೆಂಡ್‌ಗಳಲ್ಲಿ ನಡೆದು ಹೋಗಿದ್ದುವು..!!

ಘೋಡಾವಾಲಾ ನನ್ನ ಕಡೆಗೆ ಕೆಕ್ಕರಿಸಿ ನೋಡಿ, ಏನೋ ಜೋರಾಗಿ ಒದರುತ್ತಾ, ತನ್ನ ಕುದುರೆಯನ್ನು ಸಮಾಧಾನಪಡಿಸುವ ಯತ್ನದಲ್ಲಿದ್ದ. ನಾನು ಅಲ್ಲಿ ನಿಂತರೆ ಫಚೀತಿ ಎಂದು ಸ್ವಲ್ಪದೂರ ಓಡಿಹೋಗಿ, ಅಲ್ಲಿ ತಿರುಗಾಡುತ್ತಿದ್ದ ಪ್ರವಾಸಿಗಳ ಗುಂಪಿನಲ್ಲಿ ಸೇರಿಕೊಂಡು, ಕುದುರೆ ಮಾಲಿಕನ ಬಾಯಿಯಿಂದ ಹರಿದು ಬರಲಿರುವ ಶುದ್ಧ ಉರ್ದೂಭಾಷೆಯ ಬೈಗಳಿನ ಸಹಸ್ರ ನಾಮಾರ್ಚನೆಯಿಂದ ತಪ್ಪಿಸಿಕೊಂಡೆ.

ನನ್ನ ಕುದುರೆ ಸವಾರಿಯ ಶೋಕಿ ಅಂದಿಗೇ ಕೊನೆಯಾಗಿ ಬಿಟ್ಟಿತು. ಎಲ್ಲಿಯಾದರೂ ಕುದುರೆ ಕಂಡರೆ, ಅದರ ಹತ್ತಿರ ಹೋಗುವುದು ಬಿಡಿ, ಅದನ್ನು ಸರಿಯಾಗಿ ನೋಡಲು ಕೂಡಾ ನಾನು ಈಗ ತಯಾರಿಲ್ಲ.

* * *