೧೯೬೩ನೇ ಇಸವಿಯ ಮೇ ತಿಂಗಳು. ನಾನು ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಮೊದಲನೇ ಬಿ.ಎಸ್.ಸಿ. ವ್ಯಾಸಂಗ ಮಾಡುತ್ತಿದ್ದೆ. ಎನ್.ಸಿ.ಸಿ.ಯ ನೇವಲ್ ಶಾಖೆಯ ಏಬಲ್ ಕ್ಯಾಡೇಟ್ ಆಗಿದ್ದ ನನಗೆ ಆಗಿನ ಉತ್ತರ ಪ್ರದೇಶದ ನೈನಿತಾಲ್ ಎಂಬ ಗಿರಿಧಾಮದಲ್ಲಿ ನಡೆಯುವ “INS Naav Sainik 1963” ಎಂಬ ಅಖಿಲ ಭಾರತದ ಆರ್ಮಿ, ನೇವಿ ಮತ್ತು ಏರ್‌ಫೋರ್ಸ್ ವಿಭಾಗಗಳ ಎನ್.ಸಿ.ಸಿ. ಕ್ಯಾಡೇಟ್‌ಗಳ ಕಂಬೈನ್ಡ್ ಟ್ರೈನಿಂಗ್ ಕ್ಯಾಂಪ್ನಲ್ಲಿ ಭಾಗವಹಿಸುವ ಅವಕಾಶ ದೊರೆತಿತ್ತು. ನನ್ನ ಜತೆಗೆ ನಮ್ಮ ಕಾಲೇಜಿನ ಇನ್ನಿಬ್ಬರು ಕ್ಯಾಡೇಟ್‌ಗಳೂ ಆರಿಸಲ್ಪಟ್ಟಿದ್ದು, ನಾನು ಅವರ ನಾಯಕನಾಗಿದ್ದೆ.

ನಮಗೆ ಮಂಗಳೂರಿನವರೆಗಿನ ಬಸ್‌ಟಿಕೆಟ್ ಮತ್ತು ಮಂಗಳೂರಿನಿಂದ ಉತ್ತರಪ್ರದೇಶದ ಖಾತ್ ಗೋದಾಮ್ ಎಂಬ ರೈಲು ತಲುಪುವ ಕೊನೆಯ ಊರಿನ ತನಕ ಜನತಾ ಕ್ಲಾಸಿನ ರೈಲ್ವೇಪಾಸ್ ಮತ್ತು ದಿನವೊಂದಕ್ಕೆ ಎರಡೂವರೆ ರೂಪಾಯಿಗಳ ಪ್ರಯಾಣ ಭತ್ಯೆ ಕೈಗಿರಿಸಿ, ನಮ್ಮ ಮೂರನೇ ಮೈಸೂರು (ಆಗ ಇನ್ನೂ ನವಕರ್ನಾಟಕದ ಉದಯ ಆಗಿರಲಿಲ್ಲ) ನೇವಲ್ ಯೂನಿಟ್ಟಿನ ಕಮಾಂಡಿಂಗ್ ಆಫೀಸರರರಾದ ಲೆಫ್ಟಿನೆಂಟ್ ಚಿಕ್ಕಪ್ಪ ರೈ ಎಂಬವರು ನಮ್ಮನ್ನು ಬೀಳ್ಕೊಟ್ಟರು.

ನಮ್ಮ ಬಟ್ಟೆಬರೆಗಳನ್ನು ಕಪ್ಪು ಗೂಡೆಗಳ ತರಹ ಕಾಣುತ್ತಿದ್ದ ಕಿಟ್‌ಬ್ಯಾಗ್ ಎಂಬ ಸಂಚಿಗಳ ಒಳಗೆ ತುಂಬಿಕೊಂಡು ನಾವು ಆ ಕ್ಯಾಂಪಿಗೆ ಹೊರಟೆವು. ನನಗೆ ಅದು ಸರಕಾರೀ ಖರ್ಚಿನಲ್ಲಿ ದೇಶ ಸುತ್ತಲು ದೊರೆತ ಮೊದಲನೇ ಅವಕಾಶ. ದಿನಭತ್ಯೆಗೆ ಕೊಡುತ್ತಿದ್ದ ಆ ಎರಡೂವರೆ ರೂಪಾಯಿಗಳು, ಆ ದಿನಗಳಲ್ಲಿ ಎರಡು ಊಟ ಮತ್ತು ಎರಡು ಸಲದ ಉಪಹಾರಗಳಿಗೆ ಸಾಕಾಗುತ್ತಿದ್ದುವು. ಆ ದಿನಗಳಲ್ಲಿ ಅರುವತ್ತು ಪೈಸೆಗೆ ಥಾಲಿ ಊಟ ದೊರೆಯುತ್ತಿತ್ತು. ಐವತ್ತು ಪೈಸೆಗೆ ಹೊಟ್ಟೆ ತುಂಬುವಷ್ಟು ತಿಂಡಿ (ನಾಲ್ಕು ಪೂರಿ ಅಥವಾ ನಾಲ್ಕು ಇಡ್ಲಿ) ಮತ್ತು ಚಹಾ ದೊರೆಯುತ್ತಿದ್ದುವು.

ನಾವು ಕ್ಯಾಂಪಿಗೆ ಹೋಗುವಾಗ ನೇರವಾಗಿ ಎಲ್ಲೂ ನಿಲ್ಲದೇ, ಮೂರು ರಾತ್ರಿ ಮತ್ತು ನಾಲ್ಕು ಹಗಲು ಪ್ರಯಾಣಿಸಿ ನೈನಿತಾಲ್ ತಲುಪಬೇಕಿತ್ತು. ಯಾಕೆಂದರೆ, ನಮಗೆ ಕ್ಯಾಂಪ್ ತಲುಪಲು ಕೇವಲ ನಾಲ್ಕು ದಿನಗಳ ವ್ಯವಧಾನವಿತ್ತು. ಆದರೆ, ಎರಡುವಾರ ಕಾಲಾವಧಿಯ ಕ್ಯಾಂಪ್ ಮುಗಿಸಿ ನೈನಿತಾಲ್‌ನಿಂದ ಹಿಂದಿರುಗುವಾಗ, ನಾವು ದೆಹಲಿ ಮತ್ತು ಸುತ್ತುಮುತ್ತಣ ಪ್ರದೇಶಗಳು, ಫತೇಪುರ ಸಿಕ್ರಿ ಮತ್ತು ಆಗ್ರಾ, ಮದರಾಸು (ಈಗಿನ ಚೆನ್ನೈ) ಪಟ್ಟಣ ಇವುಗಳನ್ನು ನೋಡಿಕೊಂಡು ವಾಪಸಾಗುವ ಅವಕಾಶವಿತ್ತು, ಯಾಕೆಂದರೆ, ಇನ್ನೂರ ಐವತ್ತು ಮೈಲು ರೈಲಿನಲ್ಲಿ ಪ್ರಯಾಣಿಸಿದ ನಂತರ, ನಾವು ಪ್ರಯಾಣವನ್ನು ನಮಗೆ ಬೇಕೆಂದಲ್ಲಿ ಎರಡುದಿನ ನಿಲ್ಲಿಸಿ, ಊರುಗಳನ್ನು ನೋಡಿಕೊಂಡು ಹಿಂದಿರುಗುವ ಅವಕಾಶವಿತ್ತು.

ನಮ್ಮ ಕಾಲೇಜನ್ನು ಪ್ರತಿನಿಧಿಸುತ್ತಿದ್ದ ನಾವು ಮೂವರೂ ಮೂರು ತೆರನಾದ ಆಕಾರದವರು. ನಾನು ಐದೂವರೆ ಅಡಿ ಎತ್ತರದ ಸಾಮಾನ್ಯ ಮೈಕಟ್ಟಿನ ಹುಡುಗನಾಗಿದ್ದರೆ,  ಒಂದನೇ ಬಿ.ಕಾಂ. ಓದುತ್ತಿದ್ದ ಏಬಲ್ ಕ್ಯಾಡೇಟ್ ಮೋಹನರಾವ್ ನಜೀರ್ಮಾರ್ ಸುಮಾರು ಐದು ಅಡಿ ಒಂದು ಇಂಚಿನ ಅತಿ ಚುರುಕಾದ ವ್ಯಕ್ತಿ. ಮೂರನೆಯ ವ್ಯಕ್ತಿಯಾದ ಆರ್ಡಿನರಿ ಕ್ಯಾಡೇಟ್ ಫರೂಕ್ ಅಹ್ಮದ್ ಎಂಬುವನು ಬರೇ ಆರು ಅಡಿ ನಾಲ್ಕೂವರೆ ಇಂಚು ಎತ್ತರದ ಸಣಕಲು ಮೈಯ ವ್ಯಕ್ತಿ. (ಇಂದು ಮೋಹನರಾವ್ ಭಾರತೀಯ ನೌಕಾಪಡೆಯಲ್ಲಿ ಕಮಾಂಡರ್ ಹುದ್ದೆಯಲ್ಲಿದ್ದಾನೆ. ಫರೂಕ್ ಮಧ್ಯಪ್ರಾಚ್ಯ ದೇಶದಲ್ಲಿ ಒಳ್ಳೆಯ ಸಂಪಾದನೆಯ ಕೆಲಸದಲ್ಲಿದ್ದಾನೆ.) ನಾವು ಖಾತ್ ಗೋದಾಮ್ (ಹಿಂದಿ ಭಾಷೆಯಲ್ಲಿ ನಾಟದ ಗೋದಾಮು ಎಂದು ಅರ್ಥ) ಸ್ಟೇಶನ್‌ನಲ್ಲಿ ಇಳಿಯುತ್ತಲೇ, ಅಲ್ಲಿ ನಮಗಾಗಿ ಕಾದಿದ್ದ ಭಾರತೀಯ ನೌಕಾಪಡೆಯ ಟ್ರಕ್‌ವೊಂದನ್ನು ಹತ್ತಿದೆವು. ನಮ್ಮದೇ ಟ್ರೈನಿನಲ್ಲಿ ಬಂದಿಳಿದ ಇತರೇ ಆರ್ಮಿ, ನೇವಿ ಮತ್ತು ಏರ್‌ಫೋರ್ಸ್ ವಿಭಾಗದ ಕ್ಯಾಡೇಟ್‌ಗಳನ್ನು ಭಾರತೀಯ ನೌಕಾಪಡೆಯ ಪೆಟ್ಟಿ ಆಫೀಸರ್ ಒಬ್ಬರು ಸ್ವಾಗತಿಸಿದ್ದರು.

ಕೆಲವೇ ಮೈಲುಗಳಲ್ಲಿ ಸಮತಟ್ಟಾದ ರಸ್ತೆ ಕೊನೆಗೊಂಡು, ನಮ್ಮ ಟ್ರಕ್ ಪರ್ವತಗಳ ಏರು ರಸ್ತೆ ಹಿಡಿಯಿತು. ಟ್ರಕ್ ಎಲ್ಲೂ ನಿಲ್ಲದೆ ನೈನಿತಾಲ್ ಸರಹದ್ದಿನ ಸಾರಿಗೆ ತಪಾಸಣೆಯ ಗೇಟ್‌ವೊಂದರಲ್ಲಿ ನಿಂತಿತು. ಅಲ್ಲಿ ತಲೆಹೊರೆಯ ವ್ಯಾಪಾರಸ್ಥರು ಅಕ್ರೋಟ್, ಬ್ಲೂಬೆರ್ರಿ ಮತ್ತು ರಾಸ್ಪ್‌ಬೆರ್ರಿ ಮಾರುತ್ತಿದ್ದರು. ನಾವು ತಲಾ ಇಪ್ಪತ್ತೈದು ಪೈಸೆಗೆ ಈ ಮೂರು ವಸ್ತುಗಳನ್ನು ಕೊಂಡು ರುಚಿ ನೋಡಿದೆವು. ನಮಗೆ ಅಪರೂಪಕ್ಕೆ ಉಡುಪಿಯಲ್ಲಿ ಅಕ್ರೋಟ್ ಸಿಗುತ್ತಿತ್ತು. ಆದರೆ, ಅದುವರೆಗೆ ನಾವು ಬ್ಲೂ ಬೆರ್ರಿ ಮತ್ತು ರಾಸ್ಪ್ ಬೆರ್ರಿ ಹಣ್ಣುಗಳನ್ನು ನೋಡಿರಲೇ ಇಲ್ಲ, ತಿಂದಿರಲೂ ಇಲ್ಲ..!

ತಪಾಸಣೆ ಗೇಟ್ ದಾಟಿ ಸ್ವಲ್ಪದೂರದಲ್ಲೇ ನಮಗೆ ನೈನಿತಾಲ್ ಸರೋವರ ಕಣ್ಣಿಗೆ ಬಿತ್ತು. ಸುಮಾರು ಐದೂಮುಕ್ಕಾಲು ಸಾವಿರ ಅಡಿ ಎತ್ತರದಲ್ಲಿರುವ. ಆ ಸ್ಪಟಿಕಜಲದ ಸರೋವರದ ಸೌಂದರ್ಯವನ್ನು ನಾವು ಕಣ್ಣಿಗೆ ತುಂಬಿಕೊಂಡೆವು. ಪರ್ವತರಾಯನ ಮಗಳಾದ ಪಾರ್ವತೀ ದೇವಿಯು ತನ್ನ ಪತಿ ಈಶ್ವರನ ಮನೆಯಾದ ಕೈಲಾಸಕ್ಕೆ ಮೊದಲ ಬಾರಿ ಹೋಗುವ ಸಂದರ್ಭದಲ್ಲಿ ಒಂದು ಬಿಂದು ಕಂಬನಿ ಸುರಿಸಿದಳಂತೆ..! ಅದೇ ಈ ನಯನ ಮನೋಹರವಾದ ಸರೋವರವಾಗಿ ನೈನಿತಾಲ್ (ನೈನಿ=ನಯನ) ಎಂಬ ಹೆಸರು ಪಡೆಯಿತೆಂದು ಸ್ಥಳೀಯರು ದಂತಕಥೆ ಹೇಳುತ್ತಾರೆ. ಸರೋವರದ ಆಚೆಗೆ ಬೃಹತ್ ಆಕಾರದ ಹಿಮಶಿಖರಗಳನ್ನು ಹೊಂದಿದ ಹಿಮಾಲಯ ಪರ್ವತಗಳ ಸಾಲನ್ನು ಕಂಡು ನಾವು ಚಕಿತರಾದೆವು. ಎತ್ತರದ ಶಿಖರಗಳು ಹಿಮದ ಹೊದಿಕೆ ಹೊಂದಿದ್ದರೆ ಸಾಮಾನ್ಯ ಗುಡ್ಡಗಳು ಓಕ್, ಫರ್ ಮತ್ತು ಪೈನ್ ವೃಕ್ಷಗಳ ದಟ್ಟ ಕಾಡಿನ ಹೊದಿಕೆ ಹೊಂದಿದ್ದುವು. ಅಲ್ಲಲ್ಲಿ ಮೇಪಲ್, ಚಿನಾರ್, ದೇವದಾರು ಮತ್ತು ಅಕ್ರೋಟ್ (ವಾಲ್‌ನಟ್) ಮರಗಳೂ ಕಂಡುಬಂದುವು.

ನೈನಿತಾಲ್ ಊರಿನ ಕೆಳಗಡೆ ಅಲ್ಮೋರ ಎಂಬ ಗಿರಿಧಾಮ ಮತ್ತು ಕಾರ್ಬೆಟ್ ನ್ಯಾಶನಲ್ ಪಾರ್ಕ್ ಎಂಬ ಅಭಯಾರಣ್ಯ ಇವೆ. ಈ ಪರ್ವತದ ಮೇಲಿನ ಸುಂದರವಾದ ಊರು ಮತ್ತು ಇದುವರೆಗೆ ನಾವು ಕಾಣದ ವೃಕ್ಷರಾಶಿಯನ್ನು ಕಂಡ ನಮಗೆ ನಾವು ಬೇರೆಯೇ ಲೋಕಕ್ಕೆ ಬಂದಿದ್ದೇವೆ! ಅನ್ನಿಸಿತು.

ಸಾಯಂಕಾಲ ನಾಲ್ಕಕ್ಕೇ ತಡೆಯಲಾರದ ಚಳಿಯನ್ನು ಅನುಭವಿಸಹತ್ತಿದೆವು. ಕೂಡಲೇ ನಮ್ಮ ಕಿಟ್‌ಬ್ಯಾಗ್ ಎಂಬ ಗೂಡೆಗಳನ್ನು ತೆರೆದು ಅದರೊಳಗಿದ್ದ ನಮ್ಮ ಯೂನಿಫಾರ್ಮಿನ ನೇವಿಬ್ಲೂ ಸ್ವೆಟರ್‌ಗಳನ್ನು ಹೊರತೆಗೆದು ಧರಿಸಿದೆವು.

ಸರೋವರದ ಸುತ್ತಲೂ ಮನೋಹರವಾದ ರಸ್ತೆ ಮತ್ತು ಉದ್ಯಾನವನಗಳು ಕಂಡುಬಂದುವು. ಸರೋವರದ ಸುತ್ತ ಪರ್ವತಗಳ ಇಳಿಜಾರಿನಲ್ಲಿ ನೈನಿತಾಲ್ ಪೇಟೆ ಹರಡಿತ್ತು. ಸರೋವರದ ಬದಿಯ ರಸ್ತೆಯನ್ನು ಬಳಸಿ ಸ್ವಲ್ಪ ದೂರ ಸಾಗಿ, ನಮ್ಮ ಟ್ರಕ್ ಸ್ವಲ್ಪ ಏರುರಸ್ತೆಯಲ್ಲಿ ಸಾಗಿತು. ಪೇಟೆಯನ್ನು ದಾಟಿದ ಸುಮಾರು ಐದು ನಿಮಿಷಗಳಲ್ಲಿ ನಾವು ನಮ್ಮ ತರಬೇತಿ ಕೇಂದ್ರವಾದ ಐ.ಎನ್.ಎಸ್. ನಾವ್ ಸೈನಿಕ್ ಇದ್ದ ಆರ್ಡ್ವೆಲ್ ಕ್ಯಾಂಪ್ ಎಂಬ ಸ್ಥಳವನ್ನು ತಲುಪಿದೆವು. ಸಂಜೆಯ ಗಂಟೆ ನಾಲ್ಕೂವರೆ ಆಗಿತ್ತು. ಆಗಲೇ ಚಳಿಗಾಳಿ ನಮ್ಮ ದೇಹಗಳನ್ನು ಕೊರೆಯುತ್ತಿತ್ತು. ಆರ್ಡ್ವೆಲ್ ಕ್ಯಾಂಪ್ ಅಂದರೆ ಅದೊಂದು ಸುವ್ಯವಸ್ಥಿತ ಕ್ಯಾಂಪ್. ಅಲ್ಲಿ ಟ್ರೈನೀ ಕ್ಯಾಡೇಟ್‌ಗಳಿಗೆಲ್ಲಾ ಬ್ಯಾರಾಕ್ ವಸತಿ ಕಲ್ಪಿಸಲಾಗಿತ್ತು. ದೊಡ್ಡ ಪರೇಡ್ ಗ್ರೌಂಡ್‌ಗೆ ಹೊಂದಿಕೊಂಡು ಕನ್ವೆನ್ಷನ್ ಹಾಲ್, ಕ್ಲಾಸ್ ರೂಮುಗಳು, ಅಚ್ಚುಕಟ್ಟಾದ ಪಾಕಶಾಲೆ, ಭೋಜನ ಶಾಲೆಗಳು ಮತ್ತು ಪ್ರಥಮ ಚಿಕಿತ್ಸಾ ಕೊಠಡಿಗಳು ಅಲ್ಲಿ ಇದ್ದುವು. ದೊಡ್ಡದಾದ ಗೇಟಿನ ಸನಿಹದಲ್ಲೇ ಇದ್ದ ಕಮಾಂಡಿಂಗ್ ಆಫೀಸರರ ಆಫೀಸಿನ ಎದುರು ಆರ್ಮಿ, ನೇವಿ ಮತ್ತು ಎರ್‌ಫೋರ್ಸ್ ಎನ್.ಸಿ.ಸಿ.ಯ ಧ್ವಜಗಳು ಹಾರಾಡುತ್ತಿದ್ದುವು. ಭಾರತೀಯ ನೌಕಾಪಡೆಯು ನಡೆಸುತ್ತಿದ್ದ ಟ್ರೈನಿಂಗ್‌ಕ್ಯಾಂಪ್ ಅದಾಗಿದ್ದುದರಿಂದ, ನಮ್ಮ ಕ್ಯಾಂಪಿಗೆ ನೌಕಾಪಡೆಯ ಆಫೀಸರ್ ಒಬ್ಬರನ್ನು ಕಮಾಂಡಿಂಗ್ ಆಫೀಸರ್ ಆಗಿ ನೇಮಕ ಮಾಡಿದ್ದರು.

ಕಮಾಂಡಿಂಗ್ ಆಫೀಸರ್ ಅವರ ಕಛೇರಿಯನ್ನು ನೌಕಾಪಡೆಯ ಪದ್ಧತಿಯಂತೆ ಕ್ವಾರ್ಟರ್ ಡೆಕ್ ಎಂದು ಕರೆಯಲಾಗುತ್ತಿತ್ತು.

ಆಗಷ್ಟೇ ಭಾರತೀಯ ನೌಕಾಪಡೆಯಲ್ಲಿ ಹಿಂದೀ ಭಾಷೆಯನ್ನು ದೈನಂದಿನ ಬಳಕೆಯ ಭಾಷೆಯಾಗಿ ಬಳಸಲು ಶುರುಮಾಡಿದ್ದರು. ಆದರೂ, ಮೊದಲಿನ ರೂಢಿ ಪ್ರಕಾರ ಇಂಗ್ಲೀಷ್ ಭಾಷೆಯನ್ನೇ ಹೆಚ್ಚಿನ ವ್ಯವಹಾರಕ್ಕೆ ಬಳಸುತ್ತಿದ್ದರು. ಹಿಂದಿ ಸರಿಯಾಗಿ ಬಾರದ ದಕ್ಷಿಣ ಭಾರತೀಯರಾದ ನಮಗೆ ಇದೊಂದು ಅನುಕೂಲವೇ ಆಗಿ ಪರಿಣಮಿಸಿತು. ನಮಗೆ ಕಲಿಸಬೇಕಾದ ಎಲ್ಲಾ ಪಠ್ಯವಿಚಾರಗಳನ್ನು ಇಂಗ್ಲೀಷ್‌ಭಾಷೆಯಲ್ಲೇ ಬೋಧಿಸುತ್ತಿದ್ದರು.

ಕ್ಯಾಂಪ್ ಆವರಣದಲ್ಲಿ ನಾವು ಇಳಿದು, ನಮ್ಮೊಂದಿಗೆ ಬಂದ ಇತರೇ ಕ್ಯಾಡೇಟ್‌ಗಳ ಜತೆಗೆ ಫಾಲ್-ಇನ್ (ಸಾಲುಕಟ್ಟಿ ನಿಲ್ಲುವುದು) ಮಾಡಿದೆವು.

ಅಚ್ಚ ಬಿಳಿಯ ಯೂನಿಫಾರಂ ಧರಿಸಿದ್ದ ಯೂರೋಪಿಯನ್ ತರಹ ಕಾಣುತ್ತಿದ್ದ ಸುಮಾರು ಐದು ಅಡಿ ನಾಲ್ಕು ಇಂಚು ಎತ್ತರವಿದ್ದ ಚುರುಕು ನೀಲಿ ಕಣ್ಣುಗಳ ಭಾರತೀಯ ನೇವಿಯ ಕಮೋಡೋರ್ ಒಬ್ಬರು ಶುದ್ಧ ಇಂಗ್ಲೀಷರ ಶೈಲಿಯಲ್ಲಿ ನಮ್ಮನ್ನು ಸ್ವಾಗತಿಸಿದರು. ಗುಡ್ ಈವಿನಿಂಗ್ ಬಾಯ್ಸ್! ನಾನು ಕಮೋಡೋರ್ ದಿನ್‌ಷಾ, ನಿಮ್ಮ ಕಮಾಂಡಿಂಗ್ ಆಫೀಸರ್. ವೆಲ್ ಕಮ್ ಟು INS Naav Sainik” ಎನ್ನುತ್ತಾ ನಮ್ಮನ್ನು ಸ್ವಾಗತಿಸಿದರು. ಆನಂತರ, ನಮ್ಮನ್ನು ಟೀ ಕುಡಿಯಲು ಮೆಸ್ ಕಡೆಗೆ ಹೋಗಿ! ಎಂದು ಆಣತಿಯಿತ್ತರು. ನಮ್ಮಲ್ಲಿ ಹೆಚ್ಚಿನವರು ಮಧ್ಯಾಹ್ನದ ಊಟ ಮಾಡಿಲ್ಲ! ಎಂಬ ಅರಿವು ಕಮಾಂಡಿಂಗ್ ಆಫೀಸರರಿಗೆ ಇತ್ತು. ನಮಗೆ ಒಂದು ದೊಡ್ಡ ಮಗ್ ಟೀಯ ಜತೆಗೆ ಎರಡು ದೊಡ್ಡ ಸೈಜಿನ ಬಿಸಿ ಬಿಸಿ ಬನ್ನುಗಳು ಮತ್ತು ತಲಾ ಐವತ್ತು ಗ್ರಾಮ್ ಬೆಣ್ಣೆ ಮತ್ತು ಮಿಕ್ಸ್ಡ್ ಫ್ರೂಟ್ ಜಾಮ್ ಮತ್ತು ಬಿಸಿಬಿಸಿ ಕಸ್ಟಾರ್ಡ್ ಪುಡ್ಡಿಂಗ್ ಅಲ್ಲಿ ಕಾಯುತ್ತಿದ್ದುವು. ನಾವು ನಮ್ಮ ಅನುಭವದಲ್ಲಿ ಯಾವ ಕ್ಯಾಂಪಿನಲ್ಲೂ ಈ ತರಹದ ರುಚಿಕಟ್ಟಾದ ಉತ್ತಮ ಆಹಾರ ಕಂಡಿರಲಿಲ್ಲ. ಅಷ್ಟರಲ್ಲೇ,  ನಮ್ಮ ಕಮಾಂಡಿಂಗ್ ಆಫೀಸರರ ಸವಾರಿ ನಾವು ಟೀ ಕುಡಿಯುತ್ತಿದ್ದಲ್ಲಿಗೇ ಬಂದಿತು. ಅವರು ನಮ್ಮನ್ನು ಉದ್ದೇಶಿಸಿ, ಈಟ್ ವೆಲ್ ಬಾಯ್ಸ್! ಹೊಟ್ಟೆ ತುಂಬಾ ತಿನ್ನಿರಿ. ನನಗೆ ನಿಮಗೆಲ್ಲಾ ಉಣಬಡಿಸುವುದೆಂದರೆ ತುಂಬಾ ಖುಶಿ. ಅದೇ ರೀತಿ, ನಿಮ್ಮನ್ನು ಪರೇಡ್ ಗ್ರೌಂಡಿನಲ್ಲಿ ಬೆವರುವಂತೆ ಕಸರತ್ತು ಮಾಡಿಸುವುದೆಂದರೆ ಇನ್ನೂ ಖುಶಿ..! ಎಂದರು. ಬೇಕಾದವರಿಗೆ ಎರಡನೇ ರೌಂಡ್ ಟೀ, ಬನ್ನು ಮತ್ತು ಕಸ್ಟಾರ್ಡ್ ತಾನೇ ನಿಂತು ಕೊಡಿಸಿದರು. ಹೊಟ್ಟೆ ತುಂಬಾ ಆ ರುಚಿಕಟ್ಟಾದ ಉಪಹಾರ ತಿಂದ ಮೇಲೆ, ನಮ್ಮೆಲ್ಲರ ಹಸಿವೆ ಮತ್ತು ಪ್ರಯಾಣದ ಆಯಾಸ ಹಿಂಗಿತ್ತು. ಆಮೇಲೆ, ನಾವು ನಮಗೆ ನಿಗದಿಪಡಿಸಿದ ಕೋಣೆಗಳಿಗೆ ಹೋಗಿ ನಮ್ಮ ಕಿಟ್‌ಬ್ಯಾಗ್‌ಗಳನ್ನು ಇರಿಸಿದೆವು. ನಮ್ಮ ನಮ್ಮ ಹಾಸಿಗೆ ಸರಿಪಡಿಸಿ, ನಮ್ಮ ನಮ್ಮ ಕಿಟ್‌ಬ್ಯಾಗ್‌ಗಳನ್ನು ಓರಣವಾಗಿ ಇರಿಸಿ ಸ್ವಲ್ಪ ಹೊತ್ತು ವಿಶ್ರಮಿಸಿದೆವು.

ಈವಿನಿಂಗ್ ಮಸ್ಟರ್ (ಸಾಯಂಕಾಲದ ಹಾಜರಿ ಪೆರೇಡ್) ಏಳುಗಂಟೆಗೆ ಕರೆಯಲಾಯಿತು. ಅಂದಿನ ಸಂಜೆಯ ಹಾಜರಿ ಪೆರೇಡ್‌ನಲ್ಲಿ ನಮ್ಮ ಎಕ್ಸಿಕ್ಯೂಟಿವ್ ಆಫೀಸರರಾದ ಕಮಾಂಡರ್ ಆರ್ಕ್‌ಲೇ ಅವರನ್ನು ಮೊದಲ ಬಾರಿಗೆ ಕಂಡೆವು. ಅವರು ಆರಡಿ ಎತ್ತರದ ಕ್ರೀಡಾಳುವಿನ ಮೈಕಟ್ಟಿನ ಆಂಗ್ಲೋ ಇಂಡಿಯನ್ ಆಫೀಸರ್. ಅವರು ತಮ್ಮ ಪರಿಚಯ ಮಾಡಿಕೊಟ್ಟ ನಂತರ, ಮರುದಿನದಿಂದ ಶುರುವಾಗುವ ನಮ್ಮ ಕಾರ್ಯಕ್ರಮಗಳ ವಿವರ ನೀಡಿದರು. ಬೆಳಗಿನ ಐದೂವರೆಗೆ ಬೆಡ್ ಟೀ ಮತ್ತು ಬೆಳಗಿನ ಆರೂವರೆಗೆ ಎಲ್ಲರೂ ಪಿ.ಟಿ. (ಫಿಸಿಕಲ್ ಟ್ರೈನಿಂಗ್)ಗೆ ಪಿ.ಟಿ. ಯೂನಿಫಾರಂ ಧರಿಸಿ ಹಾಜರಾಗಬೇಕು. ಎಂಟೂವರೆಗೆ ಬೆಳಗಿನ ಉಪಹಾರ. ಒಂಬತ್ತಕ್ಕೆ ಪಠ್ಯ ಕಾರ್ಯಕ್ರಮ ಶುರುವಾಗುತ್ತೆ. ಎಲ್ಲರೂ ಫುಲ್ ಯೂನಿಫಾರಂ ಧರಿಸಿ ಪಾಠಗಳಿಗೆ ಹಾಜರಾಗತಕ್ಕದ್ದು. ಮಧ್ಯಾಹ್ನ ಒಂದಕ್ಕೆ ಲಂಚ್ ಇರುತ್ತೆ. ಮಧ್ಯಾಹ್ನ ಎರಡರಿಂದ ಸಂಜೆಯ ನಾಲ್ಕರ ತನಕ ಪಾಠಗಳು. ಆನಂತರದ ಒಂದು ಗಂಟೆಯನ್ನು ಆಟವಾಡಲು ವಿನಿಯೋಗಿಸಬೇಕು. ಬೆಳಗಿನ ಹನ್ನೊಂದು ಮತ್ತು ಸಾಯಂಕಾಲದ ನಾಲ್ಕಕ್ಕೆ ಟೀ ಇರುತ್ತೆ. ಸಾಯಂಕಾಲ ಏಳಕ್ಕೆ ಮಸ್ಟರ್ ಮತ್ತು ಏಳೂವರೆಗೆ ಡಿನ್ನರ್ ಮತ್ತು ಪ್ರತಿದಿನ ಎಂಟರಿಂದ ಒಂಬತ್ತರ ತನಕ ಕ್ಯಾಡೇಟ್‌ಗಳಿಂದ ಮನೋರಂಜನಾ ಕಾರ್ಯಕ್ರಮ ಇರುತ್ತೆ. ರಾತ್ರಿ ಹತ್ತುಗಂಟೆಗೆ ಲೈಟ್ಸ್ ಆಫ್..! ಎಂದು ಹೇಳಿ ಅಂದಿನ ಪರೇಡ್ ಮುಕ್ತಾಯ ಮಾಡಿದರು. ನಾವು ಸಾಯಂಕಾಲದ ಊಟಕ್ಕೆ ತಯಾರಾದೆವು. ಮಾಂಸಾಹಾರಿಗಳಿಗೆ ಚಪಾತಿ, ಮೀನು, ತರಕಾರಿ, ಅನ್ನ, ದಾಲ್ ಮತ್ತು ಮೊಸರು ಇದ್ದರೆ, ಶಾಖಾಹಾರಿಗಳಾದ ನಮಗೆ ಕೇಸರಿಬಾತ್, ಚಪಾತಿ, ತರಕಾರಿ, ನಿಂಬೆ ಚಿತ್ರಾನ್ನ, ಅನ್ನ, ದಾಲ್ ಮತ್ತು ಮೊಸರು ಇದ್ದುವು. ನಾವೆಲ್ಲರೂ ಖುಶಿಯಿಂದ ಉಂಡೆವು. ನಾವು ಉಣ್ಣುತ್ತಿರುವಾಗ ಕಮೋಡೋರ್ ದಿನ್‌ಷಾ ಅವರು ನಮ್ಮ ನಡುವೆಯೇ ಸುತ್ತಾಡುತ್ತಾ, ನಮ್ಮನ್ನು ಚೆನ್ನಾಗಿ ಊಟಮಾಡಿರಿ! ಯಾವ ಐಟಮ್ ಬೇಕಾದರೂ ಬೇಕಷ್ಟು ಹಾಕಿಸಿಕೊಂಡು ಉಣ್ಣಬೇಕು! ಎನ್ನುತ್ತಿದ್ದರು.

ಅರ್ಡ್ವೆಲ್‌ಕ್ಯಾಂಪ್ ಎಂಬುದು ನೈನಿತಾಲ್ ಸರೋವರದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದ್ದ ಸುಂದರವಾದ ಸ್ಥಳ. ಕ್ಯಾಂಪಿನ ಎಲ್ಲಾ ಬ್ಯಾರಾಕ್‌ಗಳಲ್ಲೂ ಶೌಚ ಮತ್ತು ನೀರಿನ ಸೌಕರ್ಯವಿತ್ತು.  ಬ್ಯಾರಕ್‌ಗಳ ಪ್ರತಿ ಕೋಣೆಗೂ ಗಾಜಿನ ಕಿಟಿಕಿ ಮತ್ತು ಗಾಜು ಹೊಂದಿಸಿದ ಬಾಗಿಲುಗಳು ಇದ್ದುದರಿಂದ ನಮಗೆ ನೈನಿತಾಲಿನ ಕೊರೆಯುವ ಚಳಿ ತಡೆಯಲು ಅನುಕೂಲವಾಯಿತು. ಪ್ರತಿಕೋಣೆಯಲ್ಲೂ ಹನ್ನೆರಡು ಮಂದಿ ಕ್ಯಾಡೇಟ್‌ಗಳಿಗೆ ವಸತಿ ಕಲ್ಪಿಸಲಾಗಿತ್ತು, ನಮ್ಮ ದೇಶದ ವಿವಿಧ ಮೂಲೆಗಳಿಂದ ಬಂದ ಬೇರೆ ಬೇರೆ ಭಾಷೆಗಳನ್ನು ಆಡುವ ಕ್ಯಾಡೇಟ್‌ಗಳನ್ನು  ಆರ್ಮಿ, ನೇವಿ ಮತ್ತು ಎರ್‌ಫೋರ್ಸ್ ವಿಭಾಗಗಳಿಗೆ ಸೇರಿದ ತಲಾ ನಾಲ್ಕು ಕ್ಯಾಡೇಟ್‌ಗಳಂತೆ ಹಂಚಿ ಹಾಕಿ ವಸತಿ ಕೊಟ್ಟಿದ್ದರು. ಪ್ರತಿಕೋಣೆಯೂ ಸಮಗ್ರ ಭಾರತದ ಪ್ರತಿನಿಧಿಗಳನ್ನು ಹೊಂದಿದಂತೆ ಭಾಸವಾಗುತ್ತಿತ್ತು. ಈ ಕ್ರಮದಿಂದ ನಮ್ಮೊಳಗೆ ಸ್ನೇಹ ಬೆಳೆಯಲು ಅನುಕೂಲವಾಯಿತು.

ನನ್ನ ಒಂದು ಪಕ್ಕದಲ್ಲಿ ಆಸಾಮಿನ ಸಿಬ್‌ಸಾಗರದಿಂದ ಬಂದ ದೀಪಕ್ ಸೈಕಿಯಾ ಎಂಬ ಕ್ಯಾಡೇಟ್ ಕ್ಯಾಪ್ಟನ್ ಮತ್ತು ಇನ್ನೊಂದು ಪಕ್ಕದಲ್ಲಿ ಅಲ್ಬರ್ಟ್ ಸುಬೇಕ್ಕೋ ಎಂಬ ಗೋವಾದ ಆರ್ಡಿನರಿ ಕ್ಯಾಡೇಟ್ ಇದ್ದರು. ಈ ಕ್ಯಾಂಪಿನ ಮುಖ್ಯ ಉದ್ದೇಶವೇನೆಂದರೆ ಆರ್ಮಿ, ನೇವಿ ಮತ್ತು ಏರ್‌ಫೋರ್ಸ್ ವಿಭಾಗಗಳ ಎಲ್ಲಾ ಕ್ಯಾಡೇಟ್‌ಗಳು ಒಬ್ಬರನ್ನು ಒಬ್ಬರು ಹೊಂದಿಕೊಂಡು ತರಬೇತಿ ಪಡೆಯುವುದೇ ಆಗಿತ್ತು.

ಪ್ರತಿರೂಮಿನ ಹನ್ನೆರಡು ವಿದ್ಯಾರ್ಥಿಗಳನ್ನು ಒಂದು ಪಂಗಡವಾಗಿ ಪರಿಗಣಿಸಿ ಎಲ್ಲಾ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಸೂಚನೆ ಕೊಟ್ಟಿದ್ದರು.

ದಿನನಿತ್ಯದ ಪಠ್ಯಕ್ರಮದಲ್ಲಿ ಸೇನಾ ವಿಭಾಗದವರ ಜತೆಯಲ್ಲಿ ಮ್ಯಾಪ್ ರೀಡಿಂಗ್ ಮತ್ತು ಜಂಗಲ್‌ಕ್ರಾಫ್ಟ್ ತರಗತಿಗಳಿಗೆ ನೇವಿ ಮತ್ತು ಏರ್‌ಫೋರ್ಸ್ ಕ್ಯಾಡೇಟ್‌ಗಳು ಸೇರಿಕೊಳ್ಳಬೇಕಿತ್ತು. ನೇವಿಯ ಕ್ಯಾಡೇಟ್‌ಗಳ ಹುಟ್ಟು ಹಾಕುವ ಡಿಂಘಿ ದೋಣಿ ನಡೆಸುವಿಕೆ ಮತ್ತು ‘ಕಟ್ಟರ್ ಎಂಬ ಹಾಯಿ ದೋಣಿ ನಡೆಸುವಿಕೆಯಲ್ಲಿ ಇತರ ಕ್ಯಾಡೇಟ್‌ಗಳು ಸಹಕರಿಸಬೇಕಿತ್ತು. ಏರ್‌ವಿಂಗ್‌ನವರ ಏರೋ ಮಾಡೆಲಿಂಗ್ ಮತ್ತು ನ್ಯಾವಿಗಶನ್ ಮತ್ತು Identifying the targets for aerial support ತರಗತಿಗಳಲ್ಲಿ ಉಳಿದವರು ಭಾಗವಹಿಸಬೇಕಿತ್ತು. ಪ್ರತೀ ಕೋಣೆಯ ಪಂಗಡಕ್ಕೂ ಒಬ್ಬ ಲೀಡರನನ್ನು ಆಯ್ಕೆ ಮಾಡಿದ್ದರು. ಸರದಿಯ ಮೇಲೆ ಪ್ರತಿಯೊಬ್ಬ ಅಭ್ಯರ್ಥಿಯೂ ಕ್ವಾರ್ಟರ್ ಡೆಕ್ (ಕಂಟ್ರೋಲ್ ರೂಮ್) ಮತ್ತು ಸೆಕ್ಯೂರಿಟಿ ವಾಚ್‌ಗಳ ಡ್ಯೂಟಿ ಮಾಡಬೇಕಿತ್ತು.

ಪ್ರತಿದಿನವೂ ನಮ್ಮ ಬ್ಯಾರಾಕ್‌ಗಳ ಸ್ವಚ್ಚತೆ ಹಾಗೂ ಕಿಟ್ ಲೇ ಔಟ್(ನಮ್ಮ ಬಟ್ಟೆಬರೆ ಮತ್ತು ಸರಂಜಾಮುಗಳನ್ನು ಒಪ್ಪವಾಗಿ ಜೋಡಿಸುವುದು) ಇನ್ಸ್‌ಪೆಕ್ಷನ್ ಮಾಡಿ, ಪ್ರತಿದಿನ ನಾವು ಪಡೆದ ಮಾರ್ಕುಗಳನ್ನು ಕಮಾಂಡಿಂಗ್ ಆಫೀಸರರ ಕಛೇರಿಯಲ್ಲಿನ ಕರಿಹಲಗೆಯಲ್ಲಿ ದಾಖಲು ಮಾಡುತ್ತಿದ್ದರು. ನಾವು ನಮ್ಮ ಯೂನಿಫಾರಮ್‌ಗಳನ್ನು ಠೀಕಾಗಿ ಧರಿಸಬೇಕಿತ್ತು. ದಿನವೂ ಬೆಳಗ್ಗೆ ನಮ್ಮ ಯೂನಿಫಾರಮ್ ಧರಿಸಿದ ರೀತಿಗೆ ಮಾರ್ಕ್‌ಗಳನ್ನು ಕೊಡುತ್ತಿದ್ದರು. ಕ್ಯಾಂಪಿನಲ್ಲಿ ಶಿಸ್ತುಪಾಲನೆಗೆ ಬಹಳ ಪ್ರಾಮುಖ್ಯತೆಯಿತ್ತು. ಪರೇಡಿನಲ್ಲಿ ತಪ್ಪು ಮಾಡಿದವರಿಗೆ,  ಕ್ಯಾಂಪಿನಲ್ಲಿ ಮಿಸ್ ಬಿಹೇವ್ ಮಾಡಿದವರಿಗೆ ಕಮಾಂಡರ್ ಆರ್ಕ್‌ಲೇ ಅವರು ನಿರ್ದಾಕ್ಷಿಣ್ಯವಾಗಿ ಕಠಿಣಶಿಕ್ಷೆ ವಿಧಿಸುತ್ತಿದ್ದರು. ಸಮಗ್ರ ಚಟುವಟಿಕೆ ಮತ್ತು ಶಿಸ್ತು ಇವುಗಳಲ್ಲಿ ಉತ್ತಮ ಪ್ರದರ್ಶನವಿತ್ತ ಕ್ಯಾಡೇಟ್‌ಗಳಿಗೆ ಪ್ರಶಂಸೆ ಕೂಡಾ ಸಕಾಲಿಕವಾಗಿ ಸಿಗುತ್ತಿತ್ತು.

ಪ್ರತಿದಿನವೂ ಮಧ್ಯಾಹ್ನ ಸಮಯದಲ್ಲಿ ನಮ್ಮೆಲ್ಲರನ್ನೂ ನೈನಿತಾಲ್ ಸರೋವರಕ್ಕೆ ದೋಣಿಗಳನ್ನು ನಡೆಸುವ ತರಬೇತಿಗೆ ಕರೆದೊಯ್ಯುತ್ತಿದ್ದರು. ದೋಣಿಗಳನ್ನು ನಡೆಸುವ ತರಬೇತಿಯಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನೌಕಾಪಡೆಯ ಕ್ಯಾಡೇಟ್‌ಗಳಾದ ನಮಗೆ ನೀಡುತ್ತಿದ್ದರು. ದಿನಬಿಟ್ಟು ದಿನ ಬೆಟ್ಟ ಹತ್ತುವ ತರಬೇತಿ ಮತ್ತು ಅಣಕು ಯುದ್ಧದ ತರಬೇತಿ ಇರುತ್ತಿದ್ದುವು. ಅಲ್ಲಿ ಆರ್ಮಿ ವಿಭಾಗದವರು ಮಿಂಚುತ್ತಿದ್ದರು. Identifying the enemy Targets ಮತ್ತು ಏರೋ ಮಾಡೆಲಿಂಗ್‌ನಲ್ಲಿ ಏರ್‌ವಿಂಗ್‌ನ ವಿದ್ಯಾರ್ಥಿಗಳು ಮುಂದಿರುತ್ತಿದ್ದರು.                    ದಿನಬಿಟ್ಟು ದಿನ ಕ್ಯಾಂಪಿನ ಐವತ್ತು ಶೇಕಡಾ ಕ್ಯಾಡೇಟ್‌ಗಳನ್ನು ಸಾಯಂಕಾಲ ನಾಲ್ಕರಿಂದ ಆರು ಗಂಟೆಯ ತನಕ ನೈನಿತಾಲ್ ಪೇಟೆ ಸುತ್ತಿಕೊಂಡು ಬರಲು ಅನುಕೂವಾಗುವಂತೆ ಲಿಬರ್ಟಿ ಕೊಟ್ಟು ನಮ್ಮ ಕಮಾಂಡಿಂಗ್ ಆಫೀಸರರು ಕಳುಹಿಸುತ್ತಿದ್ದರು. ಹಾಗಾಗಿ, ನಮಗೆ ನೈನಿತಾಲದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಸಾಧ್ಯವಾಯಿತು. ದೂರದ ಊರುಗಳಿಂದ ಬಂದ ನಮ್ಮಂತಹಾ ಹುಡುಗರಿಗೆ ಇದು ಒಂದು ಆನಂದದಾಯಕ ಅವಕಾಶ ಅನ್ನಿಸಿತ್ತು. ಇಂತಹಾ ಅನುಕೂಲ ನಮಗೆ ಬೇರಾವ ಕ್ಯಾಂಪಿನಲ್ಲೂ ಕೊಡಲ್ಪಟ್ಟಿರಲಿಲ್ಲ. ಬೇರೆ ಟ್ರೈನಿಂಗ್  ಕ್ಯಾಂಪುಗಳಲ್ಲಿ ಕ್ಯಾಂಪಿನ ಕೊನೆಯ ದಿನಗಳಲ್ಲಿ ಒಂದು ಅರ್ಧದಿನ ಸುತ್ತಾಡಲು ಬಿಡುವುದು ರೂಢಿಯಲ್ಲಿತ್ತು. ದಿನಬಿಟ್ಟು ದಿನ ಈ ಅನುಕೂಲತೆ ನಮಗೆ ಸಿಕ್ಕಿದರೂ, ನಾವು ಸಮಯ ಪರಿಪಾಲನೆಯನ್ನು ಕಡ್ಡಾಯವಾಗಿ ಪಾಲಿಸಬೇಕಿತ್ತು. ಎಲ್ಲಾದರೂ ಕೆಲವು ನಿಮಿಷ ತಡವಾಗಿ ನಾವು ಹಿಂತಿರುಗಿ ಬಂದರೆ, ನಮಗೆ ಕಠಿಣಶಿಕ್ಷೆ ತಪ್ಪದೇ ಕಾದಿರುತ್ತಿತ್ತು.

ನಾವು ನೈನಿತಾಲ್ ಕ್ಯಾಂಪಿನಲ್ಲಿ ಕಂಡ ಶಿಸ್ತು, ಅನುಕೂಲತೆ ಮತ್ತು ತಿಂದಂತಹಾ ಆಹಾರವನ್ನು ಬೇರೆ ಯಾವ ಎನ್.ಸಿ.ಸಿ. ಕ್ಯಾಂಪಿನಲ್ಲೂ ಕಾಣಲಿಲ್ಲ. ನಮ್ಮ ಕಮಾಂಡಿಂಗ್ ಆಫೀಸರರು ಮತ್ತು ಎಕ್ಸಿಕ್ಯೂಟಿವ್ ಆಫೀಸರರು ಸ್ಥಳೀಯ ಡೈರಿಗಳಿಂದ ಹಾಲು, ಮೊಸರು, ಬೆಣ್ಣೆ ಇವುಗಳನ್ನು ಭಾರತದ ಮುಂದಿನ ಉತ್ತಮ ಪ್ರಜೆಗಳಾಗುವ ಕ್ಯಾಡೇಟ್‌ಗಳಿಗೋಸ್ಕರ ಎಂದು ರಿಯಾಯತಿ ದರದಲ್ಲಿ ಚೌಕಾಸಿಮಾಡಿ, ಕೊಂಡು ತರುತ್ತಿದ್ದರು. ಉತ್ತರಪ್ರದೇಶ, ಕುಮಾವೋ ಮತ್ತು ಹಿಮಾಚಲದ ವಿವಿಧ ಹಣ್ಣು ಸಂಸ್ಕರಿಸುವ ಫ್ಯಾಕ್ಟರಿಗಳಿಗೆ ಹೋಗಿ, ರಿಯಾಯಿತಿ ದರದಲ್ಲಿ ಹಣ್ಣಿನರಸ, ಜ್ಯಾಮ್ ಮತ್ತು ತಾಜಾ ಹಣ್ಣುಗಳನ್ನು ಪಡೆದುಕೊಂಡು ನಮಗೆ ಈಯುತ್ತಿದ್ದರು. ಹಾಗಾಗಿ ನಮ್ಮ ಆಹಾರಕ್ಕೆ ನಿಗದಿಪಡಿಸಿದ ಹಣದಲ್ಲಿ ನಮಗೆ ಈ ತರಹದ ಅತ್ಯುತ್ತಮ ಆಹಾರ ದೊರೆಯುವಂತಾಯಿತು.

ದಿನಾ ಬೆಳಗಿನ ಮತ್ತು ಸಾಯಂಕಾಲದ ತಿಂಡಿಗೆ ಪ್ರತೀ ಕ್ಯಾಡೇಟ್‌ಗೆ ಐವತ್ತುಗ್ರಾಮ್ ಬೆಣ್ಣೆ ಮತ್ತು ಐವತ್ತುಗ್ರಾಮ್ ಜ್ಯಾಮ್, ರಾತ್ರಿಯ ಊಟದ ನಂತರ ಫ್ರೂಟ್ ಸಲಾಡ್ ಅಥವಾ ಬಿಸಿಬಿಸಿ ಕಸ್ಟಾರ್ಡ್ ಕ್ರೀಮ್ ಸಿಗುತ್ತಿದ್ದುವು. ಅಡುಗೆಗೆ ಉತ್ತಮ ತರಕಾರಿ, ದಿನಸಿ, ಎಣ್ಣೆ, ತುಪ್ಪ ಬಳಸುತ್ತಿದ್ದರು. ತುಪ್ಪ ಬಳಸಿ ತಯಾರಿಸುತ್ತಿದ್ದ ಪರಾಠ, ಅತ್ಯುತ್ತಮ ಚಪಾತಿ, ಪೂರಿ ಮತ್ತು ಇತರೇ ತಿಂಡಿಗಳ ರುಚಿ ಅನುಪಮವಾಗಿದ್ದುವು. ಉತ್ತಮ ಸೋನಾ ಮಸೂರಿ ಅಕ್ಕಿಯ ಅನ್ನ ಕೊಡುತ್ತಿದ್ದರು. ಕೆಲವೊಮ್ಮೆ ಬಾಸುಮತಿ ಅಕ್ಕಿಯ ಹಾಲು ಪಾಯಸ ಬಡಿಸುತ್ತಿದ್ದರು.

ಇನ್ನು ವಾರಾಂತ್ಯದ ಬಡಾ ಖಾನಾ..!. ಬಡಾಖಾನದ ದಿನ ಸಸ್ಯಾಹಾರಿಗಳಿಗೆ ಶಾಖಾಹಾರಿ ಬಿರಿಯಾನಿ, ಮಾಂಸಾಹಾರಿಗಳಿಗೆ ಆಡಿನ ಮಾಂಸದ ಬಿರಿಯಾನಿ, ಸಲಾದ್, ಸ್ವೀಟುಗಳು ಮತ್ತು ಪಾಯಸ! ಆ ಬಡಾಖಾನಾಗಳನ್ನು ನಾವು ಯಾವತ್ತಿಗೂ ಮರೆಯಲು ಸಾಧ್ಯವೇ ಇಲ್ಲ! ಸಾಮಾನ್ಯವಾಗಿ ಎನ್.ಸಿ.ಸಿ ಕ್ಯಾಂಪ್ ಎಂದರೆ, ಅಲ್ಲಿ ಯಾವತ್ತೂ ಸಿಗುವುದು ಕಳಪೆ ಊಟ, ನೀರು ಚಹಾ. ಊಟತಿಂಡಿಯ ರುಚಿಯೋ, ದೇವರಿಗೇ ಪ್ರೀತಿ..!

ಇಂತಹಾ ಟ್ರೈನಿಂಗ್‌ಕ್ಯಾಂಪುಗಳಲ್ಲಿ ನಾವು ಕಳೆಯುತ್ತಿದ್ದ ಎರಡು ವಾರಗಳ ಅವಧಿಯಲ್ಲಿ, ಎರಡರಿಂದ ಮೂರು ಕಿಲೋಗ್ರಾಮ್ ತೂಕ ಕಳೆದುಕೊಂಡು ಹಿಂತಿರುಗಿ ಬರುತ್ತಿದ್ದ ಆಸಾಮಿಗಳು ನಾವು..! ಈ ನೈನಿತಾಲ್‌ಕ್ಯಾಂಪ್ ಮುಗಿಸಿ ಹೊರಬಂದಾಗ ನಾವು ಅಷ್ಟೇ ತೂಕ ಹೆಚ್ಚಿಸಿಕೊಂಡಿದ್ದೆವು..!

ನನ್ನ ವಿದ್ಯಾರ್ಥಿ ಜೀವನದಲ್ಲಿ ಒಟ್ಟು ಹದಿನಾಲ್ಕು ಕ್ಯಾಂಪುಗಳಿಗೆ ಹಾಜರಾಗಿದ್ದೇನೆ. ತೂಕ ಹೆಚ್ಚಿಸಿಕೊಂಡು ಮನೆಗೆ ಬಂದ ಕ್ಯಾಂಪ್ ಎಂದರೆ ನೈನಿತಾಲದ ಕ್ಯಾಂಪ್ ಮಾತ್ರ. ಇದು ಕರುಣಾಳುಗಳಾದ ನಮ್ಮ ಕಮಾಂಡಿಂಗ್ ಆಫೀಸರ್ ಕಮೋಡೋರ್ ದಿನ್‌ಷಾ ಮತ್ತು ಕಮಾಂಡರ್ ಆರ್ಕ್‌ಲೇ ಅವರುಗಳು ಕ್ಯಾಡೇಟ್‌ಗಳ ಮೇಲಿರಿಸಿದ ವಾತ್ಸಲ್ಯಕ್ಕೆ ಸಾಕ್ಷಿ.

ಕಮೋಡೋರ್ ದಿನ್‌ಷಾ ಅವರು ನಾವು ಊಟತಿಂಡಿ ಸೇವಿಸುತ್ತಾ ಇರುವಾಗ ನಮ್ಮ ಸನಿಹಕ್ಕೆ ಬಂದು ಹೌ ಇಸ್ ದ ಫುಡ್? ಎಂದು ಪ್ರಶ್ನಿಸುತ್ತಿದ್ದರು. ಯಾರಾದರೂ ಬಡಿಸಿದ ಪದಾರ್ಥ ಸರಿ ಇಲ್ಲಾ ಎಂದರೆ, ಕೂಡಲೇ ಒಂದು ಚಮಚ ತಂದು ಆತನ ಬಟ್ಟಲಿನ ಆಹಾರವನ್ನೇ ತಿಂದು ಪರೀಕ್ಷಿಸಿ, ಆತನ ಹೇಳಿಕೆ ನಿಜವಾಗಿದ್ದರೆ, ಆ ಕೂಡಲೇ ಅಡುಗೆಯ ಕಂಟ್ರಾಕ್ಟರನನ್ನು ಕರೆದು ಕೂಡಲೇ ತಕ್ಕ ಕ್ರಮ ತೆಗೆದುಕೊಳ್ಳುತ್ತಿದ್ದರು.

ನಮ್ಮ ಎಂಜಲು ಎಂದು ಪರಿಗಣಿಸದೇ, ನಮ್ಮ ತಟ್ಟೆಯ ಆಹಾರದ ರುಚಿ ಪರೀಕ್ಷಿಸಿ ನೋಡಿ, ಪಿತೃವಾತ್ಸಲ್ಯದಿಂದ ನಮ್ಮನ್ನು ನೋಡಿಕೊಂಡ ಭಾರತೀಯ ನೌಕಾಪಡೆಯ ಈ ಧೀಮಂತ ಅಧಿಕಾರಿಯನ್ನು ನಾವು ಈ ಜೀವನದಲ್ಲಿ ಮರೆಯಲಾರೆವು. ಅವರು ನಮ್ಮನ್ನು ಎಷ್ಟು ಪ್ರೀತಿಯಿಂದ ಕಾಣುತ್ತಿದ್ದರೋ, ಅಷ್ಟೇ ನಮ್ಮ ತರಬೇತಿ ಮತ್ತು ಪಠ್ಯಕ್ರಮದಲ್ಲಿ ನಿಷ್ಟುರರು ಕೂಡಾ ಅಗಿದ್ದರು! ಕ್ಯಾಡೇಟ್‌ಗಳಲ್ಲಿ ಎಳ್ಳಷ್ಟೂ ಅಶಿಸ್ತನ್ನು ಸಹಿಸುತ್ತಿರಲಿಲ್ಲ.

ಕಮೋಡೋರ್ ದಿನ್‌ಷಾ ಅವರ ರೂಪ ನೋಡಿದಾಗ  ಲಾರೆನ್ಸ್ ಆಫ್ ಅರೇಬಿಯಾ ಚಿತ್ರದ ನಾಯಕ ಪೀಟರ್ ಓಟೂಲ್ ಎಂಬ ನಟನ ನೆನಪಾಗುತಿತ್ತು.  ಲಾರೆನ್ಸ್ ಆಫ್ ಅರೆಬಿಯಾ ಪಾತ್ರದಂತೆಯೇ ಅವರು ಅತೀ ಮೃದು ಹಾಗೂ ಅತೀ ಕಠಿಣ ಸ್ವಭಾವದ ವ್ಯಕ್ತಿ.  ನಾವು ನಮ್ಮ ನಮ್ಮಲ್ಲೇ ಪಿಸುಗುಟ್ಟಿಕೊಳ್ಳುತ್ತಾ ಅವರನ್ನು ಲಾರೆನ್ಸ್ ಆಫ್ ಅರೇಬಿಯಾ ಎಂಬ ಅಡ್ಡಹೆಸರಿನಿಂದ ಪಿಸುಗುಟ್ಟಿ ಸಂಬೋಧಿಸುತ್ತಾ ನಮ್ಮೊಳಗೇ ನಗುತ್ತಿದ್ದೆವು.

ಎಕ್ಸಿಕ್ಯೂಟಿವ್ ಆಫೀಸರ್ ಕಮಾಂಡರ್ ಆರ್ಕ್‌ಲೇ ಭಾರತೀಯ ನೌಕಾಪಡೆಯ ಹಾಕಿ ಟೀಮಿನ ನಾಯಕರಾಗಿ ಇದ್ದವರಂತೆ. ಅವರು ನಮ್ಮ ನೌಕಾಪಡೆಯ ಹೆಸರಾಂತ ಗನ್ನರಿ ಆಫೀಸರ್ ಅಂತೆ. ಅವರು ನೌಕಾಪಡೆಯ ಫಿರಂಗಿಗಳನ್ನು ಸಿಡಿಸಿದರೆ ಎಂದೂ ಗುರಿ ತಪ್ಪುತ್ತಿರಲಿಲ್ಲವಂತೆ! ಅವರ ಚುರುಕಾದ ನೀಲಿಕಣ್ಣುಗಳನ್ನು ತಪ್ಪಿಸಿ ನಾವು ಪರೇಡ್ ಗ್ರೌಂಡ್‌ನಲ್ಲಿ ಏನೂ ಚೇಷ್ಟೆ ಮಾಡಲು ಸಾಧ್ಯವಿರಲಿಲ್ಲ. ನಮ್ಮ ಯೂನಿಫಾರಂ ಧರಿಸುವಿಕೆಯಲ್ಲಿ ಸಣ್ಣ ನ್ಯೂನತೆ ಇರಲಿ, ಯಾರಾದರೂ ಮುಖಕ್ಷೌರ ಸರಿಯಾಗಿ ಮಾಡಿಕೊಳ್ಳದಿರಲಿ, ಶೂಗಳಿಗೆ ಪಾಲಿಶ್ ಸರಿಯಾಗಿಲ್ಲದಿರಲೀ, ಪರೇಡ್‌ನಲ್ಲಿ ತಪ್ಪು ಹೆಜ್ಜೆ ಹಾಕಿರಲೀ – ಅದು ಅವರ ಕಣ್ಣಿಗೆ ಕೂಡಲೇ ಗೋಚರವಾಗಿ ಬಿಡುತ್ತಿತ್ತು! ಅದೇ ಕ್ಷಣ ನಮಗೆ ನೌಕಾಪಡೆಯ ವಿಶಿಷ್ಟವಾದ ಇಂಗ್ಲಿಷ್ ಭಾಷೆಯಲ್ಲಿ ನಮಗೆ ಮಂಗಳಾರತಿ ಮತ್ತು ಶಿಕ್ಷೆ ಕೂಡಾ ಸಿಕ್ಕಿಬಿಡುತ್ತಿತ್ತು! ಅವರ ಹೆದರಿಕೆಯಿಂದ ನಾವೆಲ್ಲರೂ ಸದಾ ಠೀಕಾಗಿ ಯೂನಿಫಾರಂ ಧರಿಸಿ, ತಲೆ ಎತ್ತಿಕೊಂಡು ನಡೆಯುತ್ತಿದ್ದೆವು. ಬೆಳಗಿನ ಐದೂವರೆಯ ಚಳಿ ಹೊತ್ತಿಗೇ ಮುಖಕ್ಷೌರ ಮಾಡಿಕೊಂಡು ನಮ್ಮ ಶೂಗಳಿಗೆ ಥಳಥಳನೆ ಪಾಲಿಶ್ ಹಚ್ಚಿ ಬೆಳಗಿನ ಪೆರೇಡ್‌ಗೆ ತಯಾರಾಗುತ್ತಿದ್ದೆವು. ಆ ಕೊರೆಯುವ ಚಳಿಯಲ್ಲೂ ಬೆಳಗ್ಗೆ ಆರೂಕಾಲಕ್ಕೆ ವ್ಯಾಯಾಮದ ದಿರಿಸನ್ನು ಧರಿಸಿ ರಸ್ತೆ ಓಟ ಮತ್ತು ವ್ಯಾಯಾಮಕ್ಕೆ ತಯಾರಾಗಿ ಕಮಾಂಡರ್ ಆರ್ಕ್‌ಲೇ ಅವರ ಬರವನ್ನು ಕಾಯುತ್ತಿದ್ದೆವು. ಆರ್ಕ್‌ಲೇಯವರು ನಮ್ಮೊಂದಿಗೆ ನೈನಿತಾಲ್ ಸರೋವರದ ಸುತ್ತ ನಾಲ್ಕು ಮೈಲು ರಸ್ತೆಯ ಓಟಕ್ಕೆ ನಮ್ಮೊಂದಿಗೇ ಓಡುತ್ತಾ ಬರುತ್ತಿದ್ದರು. ಆನಂತರ, ಕ್ಯಾಂಪಿನ  ಮೈದಾನದಲ್ಲಿ ಖುದ್ದಾಗಿ ಅವರೇ ನಿಂತು ನಮಗೆ ವ್ಯಾಯಾಮದ ಪಾಠ ಮಾಡುತ್ತಿದ್ದರು.

ಆರ್ಕ್‌ಲೇ ಅವರು ದಿನದ ತರಬೇತಿ ಕಾರ್ಯಕ್ರಮ ಮುಗಿಯುವ ತನಕ ನಗುತ್ತಿದ್ದುದೇ ಅಪರೂಪ. ಆದರೆ, ದಿನದ ಡ್ಯೂಟಿ ಮುಗಿದನಂತರ ಅವರ ವ್ಯಕ್ತಿತ್ವವೇ ಬದಲಾಗುತ್ತಿತ್ತು. ಡ್ಯೂಟಿ ಮುಗಿದ ಮೇಲೆ ಅವರು ನಮ್ಮೊಂದಿಗೆ ನಗುನಗುತ್ತಾ ವ್ಯವಹರಿಸುತ್ತಿದ್ದರು. ಸಾಯಂಕಾಲದ ಮನೋರಂಜನಾ ವೇಳೆಯಲ್ಲಿ ನಮ್ಮೊಂದಿಗೆ ಕುಳಿತು, ಎಲ್ಲರೊಂದಿಗೆ ಬೆರೆಯುತ್ತಾ ನಗುನಗುತ್ತಾ  ಮಾತನಾಡುತ್ತಿದ್ದರು. ಮರುದಿನ ಬೆಳಗ್ಗೆ ಪುನಃ ದೈನಂದಿನ ತರಬೇತಿ ಕಾರ್ಯಕ್ರಮಗಳು ಶುರುವಾಗುವಾಗ ಅವರು ಮೊದಲಿನ ಉರಿಮೂತಿಯ ಟಾಸ್ಕ್ ಮಾಸ್ಟರ್ ಆಗಿರುತ್ತಿದ್ದರು. ನಾವು ಈ ಕ್ಯಾಂಪಿನಲ್ಲಿ ಚೆನ್ನಾಗಿ ಉಣ್ಣಬೇಕು, ಚೆನ್ನಾಗಿ ದುಡಿಯಬೇಕು ಮತ್ತು ವಿಶ್ರಾಂತಿ ಪಡೆಯುವ ಸಮಯದಲ್ಲಿ ಉಲ್ಲಾಸದಿಂದ ಇದ್ದು ಚೆನ್ನಾಗಿ ವಿಶ್ರಾಂತಿ ಪಡೆಯಬೇಕು ಎಂಬ  ಪಾಠ ಕಲಿತೆವು. ಈ ಅಮೂಲ್ಯ ಪಾಠವು ಇಂದಿಗೂ ನನ್ನ ಜೀವನವನ್ನು ಸುಖಮಯವಾಗಿರಿಸಿದೆ.

ನೈನಿತಾಲ್ ಸರೋವರವು ೧೯೩೫ ಮೀಟರ್ ಎತ್ತರದಲ್ಲಿ ಇದೆ. ನೈನಿತಾಲ್ ಊರಿನ ಪಕ್ಕದಲ್ಲಿ ೨೬೧೧ ಮೀಟರ್ ಎತ್ತರದ ಚೈನಾ ಪೀಕ್ (ಈಗ ಇದನ್ನು ನೈನಿಪೀಕ್ ಎನ್ನುವರು) ಎಂಬ ಪರ್ವತ ಇದೆ. ಈ ಪರ್ವತವನ್ನು ಏರಲು ಕಾಲುದಾರಿ ಇದೆ. ನಮ್ಮ ತರಬೇತಿ ಕಾರ್ಯಕ್ರಮದಲ್ಲಿ ಈ ಪರ್ವತವನ್ನು ಹತ್ತುವ ಕಾರ್ಯಕ್ರಮವೂ ಇತ್ತು. ಇಪ್ಪತ್ತನಾಲ್ಕು ಮಂದಿ ಕ್ಯಾಡೇಟ್‌ಗಳ ತಂಡವನ್ನು ಪೆಟ್ಟಿ ಆಫೀಸರ್ ಪ್ರಧಾನ್ ಎಂಬ ನೇಪಾಳೀ ನಾವಿಕರೊಬ್ಬರು ಈ ಬೆಟ್ಟ ಹತ್ತುವ ಕಾರ್ಯಕ್ರಮಕ್ಕೆ ಕರೆದೊಯ್ದರು.

ಅತೀ ಉತ್ಸಾಹಿಯಾದ ಈ ನಾವಿಕ ನಮ್ಮನ್ನು ಜನಸಾಮಾನ್ಯರು ಏರುವ ಕಾಲು ದಾರಿಯಲ್ಲಿ ಕರೆದೊಯ್ಯದೇ ನೇರವಾದ ಮತ್ತು ತೀರ ಕಡಿದಾದ ಪರ್ವತದ ಮೇಲ್ಮೈಯ್ಯಲ್ಲಿ ಪರ್ವತಾರೋಹಿಗಳನ್ನು ಕರೆದೊಯ್ಯುವ ರೀತಿಯಲ್ಲಿ ಕರೆದೊಯ್ದರು. ಪರ್ವತದ ಮುಕ್ಕಾಲಂಶ ಎತ್ತರವನ್ನು ಪ್ರಯಾಸಪಟ್ಟು ಹತ್ತಿದಮೇಲೆ, ಪರ್ವತದ ಮೇಲ್ಮೈ ತೀರಾ ಕಡಿದಾಯಿತು. ನಮ್ಮೊಡನಿದ್ದ ಆಂಧ್ರಪ್ರದೇಶದ ಕ್ಯಾಡೇಟ್‌ವೊಬ್ಬ ಮತ್ತು ಇನ್ನೊಬ್ಬ ಬಿಹಾರದ ಕ್ಯಾಡೇಟ್ ಹತ್ತಲು ಪ್ರಯಾಸಪಟ್ಟು ನಮ್ಮೊಂದಿಗೆ ಹತ್ತಲಾರದೆ ಹಿಂದೆಬಿದ್ದರು. ನಾನು ಮತ್ತು ಕ್ಯಾಡೇಟ್ ಕ್ಯಾಪ್ಟನ್ ದೀಪಕ್ ಸೈಕಿಯಾ ಅವರಿಗೆ ಸಹಾಯ ಮಾಡುವ ಸಲುವಾಗಿ ಹಿಂದೆ ಉಳಿದೆವು. ಸ್ವಲ್ಪ ಕೆಳಗಿಳಿದು ಧೈರ್ಯಗೆಟ್ಟ ಆ ಇಬ್ಬರನ್ನು ಹುರಿದುಂಬಿಸಿ ಕೈಕಾಲುಗಳನ್ನು ಭದ್ರವಾಗಿ ಊರಲು ಹೋಲ್ಡ್‌ಗಳನ್ನು ತೋರಿಸುತ್ತಾ ಮೇಲೆ ಹತ್ತಲು ಅವರನ್ನು ಹುರಿದುಂಬಿಸತೊಡಗಿದೆವು. ಅವರಿಬ್ಬರೂ ಹೆದರುತ್ತಾ ನಿಧಾನವಾಗಿ ಪರ್ವತವನ್ನು ಹತ್ತತೊಡಗಿದರು. ನಮ್ಮ ಏರುವಿಕೆ ಬಹಳ ನಿಧಾನವಾಯಿತು. ಅಷ್ಟರಲ್ಲಿ, ಪೆಟ್ಟಿ ಆಫೀಸರ್ ಪ್ರಧಾನ್ ನೇತೃತ್ವದ ತಂಡ ಮೇಲೇರುತ್ತಾ,  ಬೆಟ್ಟದ ಉಬ್ಬಿನಲ್ಲಿ ನಮಗೆ ಕಾಣದಾದರು. ನಾವು ನಾಲ್ಕು ಮಂದಿ ನಿಧಾನವಾಗಿ ಚೈನಾ ಪೀಕ್ ಶಿಖರದ ದಿಕ್ಕು ಹಿಡಿದು ಏರಲು ಶುರುಮಾಡಿದೆವು. ಏರುತ್ತಿದ್ದಂತೆಯೇ, ಬೆಟ್ಟದ ಮೇಲ್ಮೈ ತೀರಾ ಕಡಿದಾಗಿ ಶಿಖರಕ್ಕೆ ನೂರು ಮೀಟರುಗಳಿವೆ ಎನ್ನುವಾಗ ಗೋಡೆಯಂತೆ ತೀರಾ ಕಡಿದಾಯಿತು! ನಮಗೆ ಕೆಳಗೆ ಇಳಿಯಲೂ ಸಾಧ್ಯವಿಲ್ಲ ಮೇಲೆ ಏರಲೂ ಸಾಧ್ಯವಿಲ್ಲ ಎಂಬಂತೆ ಸಂದಿಗ್ಧ ಪರಿಸ್ಥಿತಿ ಉಂಟಾಯಿತು. ನೇವಲ್‌ಕ್ಯಾಡೇಟ್‌ಗಳಾದ ನಾನು ಮತ್ತು ದೀಪಕ್ ಸೈಕಿಯಾ ನಮ್ಮ ಯೂನಿಫಾರಮ್ ಜತೆಗೆ ಕೊಡಲ್ಪಟ್ಟಿದ್ದ ನೌಕಾಸೇನೆಯ ಸೈಲರ‍್ಸ್ ನೈಫ್ ಸಹಾಯದಿಂದ ಕಾಲು ಮತ್ತು ಕೈಗಳನ್ನು ಆಧರಿಸಿ ಪರ್ವತ ಏರಲು ಬೇಕಾದ ಕಚ್ಚು (ಹೋಲ್ಡ್)ಗಳನ್ನು ಕೊರೆದು ಮೇಲೇರುತ್ತಾ, ನಮ್ಮ ಹಿಂದಿನ ಇಬ್ಬರನ್ನು ನಾವು ಬಂದ ದಾರಿಯಲ್ಲೇ ಮೇಲೇರಲು ಪ್ರೊತ್ಸಾಹಿಸಿದೆವು. ಪ್ರತೀ ಅಡಿ ಏರುವುದೂ ಒಂದು ದೊಡ್ಡ ಸಾಹಸವಾಗಿ ಪರಿಣಮಿಸಿತು. ಮೇಲೆ ನೋಡಿದರೆ ಮೋಡಗಳಿಂದ ಆವೃತ್ತವಾದ ಆಕಾಶ! ಕೆಳಗೆ ನೋಡಿದರೆ ಸಾವಿರಾರು ಅಡಿಗಳ ಪ್ರಪಾತ! ನಾವೇನೂ ಪರ್ವತಾರೋಹಣಕ್ಕೆ ತಕ್ಕ ದಿರುಸಿನಲ್ಲಿ ಇರಲಿಲ್ಲ! ನಮ್ಮೆಲ್ಲರ ಕಾಲಿನಲ್ಲಿ ಮಾಮೂಲಿ ಕ್ಯಾನ್ವಾಸ್ ಶೂಗಳು. ಕೈಗಳಿಗೆ ಗವಸು ಬೇರೆ ಇಲ್ಲ. ಪರ್ವತ ಹತ್ತಲು ಬೇಕಾದ ಹಗ್ಗ, ಕೈಪಿಕಾಸಿ ಯಾವುದೂ ನಮ್ಮಲ್ಲಿ ಇರಲಿಲ್ಲ. ದೇವರ ಮೇಲೆ ಭಾರಹಾಕಿ, ಹೇಗಾದರೂ ಶಿಖರ ಹತ್ತಲೇಬೇಕು..! ಎಂಬ ಛಲದಲ್ಲಿ, ಹಿಂದುಳಿದ ಆ ಇಬ್ಬರನ್ನು ಹುರಿದುಂಬಿಸುತ್ತಾ ಕೊನೆಯ ನೂರು ಮೀಟರುಗಳನ್ನು ಇರುವೆಗಳ ಗತಿಯಲ್ಲಿ ಪ್ರತೀ ಹೆಜ್ಜೆಯನ್ನೂ ಪ್ರಯಾಸಪಟ್ಟು ಅಳುಕುತ್ತಾ ಇರಿಸಿ ಏರಿದೆವು. ಆ ಕೊನೆಯ ನೂರು ಮೀಟರ್ ಏರಲು ನಾವು ಕಡಿಮೆಪಕ್ಷ ಒಂದೂವರೆ ಗಂಟೆ ಸಮಯ ತೆಗೆದುಕೊಂಡಿರಬಹುದು. ಕೊನೆಗೆ ಶಿಖರ ತಲುಪುತ್ತಲೇ, ಇತರೇ ಕ್ಯಾಡೇಟ್‌ಗಳು ಕೈನೀಡಿ ನಮ್ಮನ್ನು ಮೇಲೆ ಎಳೆದುಕೊಂಡರು. ಚಪ್ಪಾಳೆ ತಟ್ಟಿ ಅತಿ ಹರ್ಷದಿಂದ ನಮ್ಮನ್ನು ಅಭಿನಂದಿಸಿದರು.

ನೀವು ಹೇಗೆ ಏರಿದಿರಿ? ಎಂದು ನಾವು ಮೊದಲು ಏರಿದ್ದವರನ್ನು ಪ್ರಶ್ನಿಸಿದೆವು. ಪರ್ವತದ ಏರು ಕಡಿದಾಗುತ್ತಿದ್ದಂತೆಯೇ ಪೆಟ್ಟಿ ಆಫೀಸರ್ ಪ್ರಧಾನ್, ಕ್ಯಾಡೇಟ್‌ಗಳನ್ನು ಬಲಬದಿಗೆ ಸಮಾನಾಂತರವಾಗಿ ನಡೆಸಿ ಕಾಲುದಾರಿಯನ್ನು ಮುಟ್ಟಿದರಂತೆ. ಆ ನಂತರ ಅವರು ಸುಖವಾಗಿ ನಡೆಯುತ್ತಾ ಕಾಲುದಾರಿ ಗುಂಟ ಶಿಖರ ತಲುಪಿ ನಮಗಾಗಿ ಕಾದರಂತೆ!. ಪೆಟ್ಟಿ ಆಫೀಸರ್ ಪ್ರಧಾನ್ ನಮ್ಮನ್ನು ಹುಡುಕುತ್ತಾ ಕೆಳಗಿಳಿದು ಹೋದರಂತೆ. ಎಲ್ಲೂ ನಮ್ಮನ್ನು ಕಾಣದೇ ಗಾಬರಿಯಾಗಿ, ಆದಷ್ಟು ಬೇಗ ಪರ್ವತವನ್ನು ಇಳಿದು ಒಂದೇ ಓಟದಲ್ಲಿ ಆರ್ಡ್ವೆಲ್ ಕ್ಯಾಂಪ್ ತಲುಪಿ, ಮೇಲಧಿಕಾರಿಗಳಿಗೆ ನಾಲ್ಕು ಕ್ಯಾಡೇಟ್‌ಗಳು ಪರ್ವತ ಏರುವಾಗ ದಾರಿತಪ್ಪಿ ಕಾಣೆಯಾಗಿದ್ದಾರೆ…! ಎಂದರಂತೆ. ಆ ಸಮಯದಲ್ಲೇ ಕಮಾಂಡರ್ ಆರ್ಕ್ಲೇಯವರು ತಮ್ಮ ದುರ್ಬೀನಿನಲ್ಲಿ ನಾವು ಶಿಖರವನ್ನು ಏರಲು ಪಡುತ್ತಿದ್ದ ಪಾಡು ಗಮನಿಸಿದ್ದರಂತೆ. ಕೂಡಲೇ ಒಂದು ಸರ್ಚ್ ಪಾರ್ಟಿಯವರನ್ನು ಒಟ್ಟುಗೂಡಿಸಿ ಅವರೊಡನೆ ಹಗ್ಗ, ಕೈಪಿಕಾಸು, ರಾಟೆಗಳು ಮೊದಲಾದ ಸಲಕರಣೆ ಕೊಟ್ಟು ಹೊರಡಿಸುವುದರಲ್ಲಿದ್ದರಂತೆ. ಅಷ್ಟರಲ್ಲಿ, ನಾವುಗಳೇ ಶಿಖರವನ್ನು ಹರಸಾಹಸ ಮಾಡಿ ಹತ್ತಿದ್ದೆವು..! ನಮ್ಮ ಸಾಹಸವನ್ನು ಕಮಾಂಡರ್ ಆರ್ಕ್ಲೇಯವರು ದುರ್ಬೀನಿನಲ್ಲಿ ನೋಡಿ ನಿಟ್ಟುಸಿರುಬಿಟ್ಟರಂತೆ..!

ನಾವು ಶಿಖರದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಂತೆಯೇ ಕ್ಯಾಂಪಿನಿಂದ ಪೆಟ್ಟಿ ಆಫೀಸರ್ ಪ್ರಧಾನ್ ಜತೆಗೆ ಒಂದು ಕ್ಯಾಡೇಟ್‌ಗಳ ತಂಡವು ಹೊರಟು, ನಮ್ಮೆಲ್ಲರಿಗೂ ಕುಡಿಯುವ ನೀರು ಮತ್ತು ಉಪಹಾರ ಹಿಡಿದುಕೊಂಡು ಬಂದಿತು. ನಾವು ಉಪಹಾರ ಸೇವಿಸಿ, ಸ್ವಲ್ಪಹೊತ್ತು ಸುಧಾರಿಸಿಕೊಂಡ ಮೇಲೆ, ಎಲ್ಲರೂ ಕಾಲುದಾರಿಯಲ್ಲಿ ಕ್ಯಾಂಪಿಗೆ ವಾಪಸ್ ಇಳಿದು ಬಂದೆವು. ಪೆಟ್ಟಿ ಆಫೀಸರ್ ಪ್ರಧಾನ್ ಅವರಿಗೆ ನಮ್ಮೆದುರಿನಲ್ಲೇ ಕಮಾಂಡಿಂಗ್ ಅಫೀಸರ್ ಮತ್ತು ಎಕ್ಸಿಕ್ಯೂಟಿವ್ ಆಫೀಸರುಗಳು ಚೆನ್ನಾಗಿ ಛೀಮಾರಿ ಹಾಕಿದರು.

ಆದಿನ ಸಂಜೆ ಮನೋರಂಜನಾ ಕಾರ್ಯಕ್ರಮ ನಡೆಯುವಾಗ ಕಾರ್ಯಕ್ರಮವನ್ನು ಸ್ವಲ್ಪಕಾಲ ನಿಲ್ಲಿಸಿ, ಕಮಾಂಡರ್ ಆರ್ಕ್‌ಲೇ ಅವರು ನನ್ನನ್ನು ಮತ್ತು ದೀಪಕ್ ಸೈಕಿಯಾನನ್ನು ಸ್ಟೇಜಿನ ಮೇಲೆ ಕರೆದು ಅಭಿನಂದಿಸುತ್ತಾ ಇಂತೆಂದರು, ಡಿಯರ್ ಕ್ಯಾಡೇಟ್ಸ್, ಇಂದು ಪರ್ವತವನ್ನು ಏರಲಾರದೇ ಹಿಂದೆ ಬಿದ್ದಿದ್ದ ಜತೆಗಾರರನ್ನು ಇವರಿಬ್ಬರು ಹುರಿದುಂಬಿಸಿ, ಅವರಿಗೆ ಸಹಾಯ ಮಾಡುತ್ತಾ ಪರ್ವತವನ್ನು ಹತ್ತಿಸಿಬಿಟ್ಟಿರು. ಇದು ನಿಜವಾದ ಲೀಡರ್‌ಶಿಪ್! ಈ ಗುಣವನ್ನು ನೀವೆಲ್ಲರೂ ನಿಮ್ಮ ಜೀವನದಲ್ಲಿ ಬೆಳೆಸಿಕೊಂಡರೆ ಜೀವನದಲ್ಲಿ ನೀವು ಸಫಲರಾಗುತ್ತೀರಿ! ಎಂದರು.

ಎರಡು ವಾರಗಳ ಟ್ರೈನಿಂಗ್ ಕ್ಯಾಂಪ್ ಕೊನೆಗೊಂಡಿತು. ಕೊನೆಯ ದಿನ ಎಲ್ಲಾ ಸ್ಪರ್ಧೆಗಳ ವಿಜಯಿಗಳಿಗೆ ಪಾರಿತೋಷಕಗಳನ್ನು ನೀಡಲಾಯಿತು. ಕ್ಯಾಂಪಿನಲ್ಲಿ ಭಾಗವಹಿಸಿದ ಪ್ರತೀ ವಿದ್ಯಾರ್ಥಿಗೂ ಪ್ರಮಾಣಪತ್ರ ನೀಡಲಾಯಿತು.

ಕ್ಯಾಂಪ್ ಮುಗಿಸಿ ಹೊರಡುವಾಗ ನೌಕಾಪಡೆಯ ಕ್ಯಾಡೇಟ್‌ಗಳಾದ ನಾವೆಲ್ಲ ಕ್ಯಾಡೇಟ್ ಕ್ಯಾಪ್ಟನ್ ದೀಪಕ್ ಸೈಕಿಯಾನ ಮುಂದಾಳತನದಲ್ಲಿ ಸಾಲಾಗಿ ನಿಂತು, ಕಮೋಡೋರ್ ದಿನ್‌ಷಾ ಮತ್ತು ಕಮಾಂಡರ್ ಆರ್ಕ್‌ಲೇ ಅವರಿಗೆ ಹಿಪ್‌ಹಿಪ್ ಹುರ್ರೇ! ಎಂದು ಜಯಕಾರ ಕೂಗಿದೆವು. ಆ ನಂತರ ನೌಕಾಪಡೆಯ ಪದ್ಧತಿಯಂತೆ ಹ್ಯಾಟ್ಸ್ ಆಫ್ ಮಾಡುತ್ತಾ ನಮ್ಮ ಟೋಪಿಗಳನ್ನು ಮೂರು ಸಲ ತಲೆಯಿಂದ ಎತ್ತಿ ವಂದಿಸಿದೆವು.

ನಾವು ಹಿಂತಿರುಗುತ್ತಾ ಟ್ರಕ್‌ಗಳನ್ನು ಹತ್ತುತ್ತಿದ್ದಂತೆಯೇ,  ಕಮಾಂಡಿಂಗ್ ಆಫೀಸರವರ  ಅಪ್ಪಣೆಯ ಮೇರೆಗೆ ನಮಗೆಲ್ಲರಿಗೂ ಲಂಚ್ ಹ್ಯಾಂಪರ್ ವಿತರಿಸಲ್ಪಟ್ಟಿತು. ಅದರಲ್ಲಿ ಎರಡು ಅಲೂ ಪರಾಠಾ, ಉಪ್ಪಿನಕಾಯಿಯ ಚಿಕ್ಕ ಪ್ಯಾಕೆಟ್, ಎರಡು ವೆಜಿಟೇಬಲ್ ಸ್ಯಾಂಡ್ವಿಚ್‌ಗಳು, ಒಂದು ಚಿಕ್ಕ ಕ್ಯಾನ್ ಸಂಸ್ಕರಿಸಿದ ಹಣ್ಣು, ಎರಡು ಪ್ಯಾಕೆಟ್ ಗ್ಲೂಕೋ ಬಿಸ್ಕಿಟ್ ಮತ್ತು ಒಂದು ಬಾಟಲ್ ಹಿಮಾಚಲದ ಆಪಲ್‌ಜೂಸ್ ಇದ್ದುವು. ಈ ಆಹಾರ ನಮಗೆ ಮುಂದಿನ ಇಪ್ಪತ್ತನಾಲ್ಕು ಗಂಟೆಗಳ ಪ್ರಯಾಣಕ್ಕೆ ಸಾಕಾಗುವಷ್ಟು ಇತ್ತು. ತಾಯಿಯು ಮನೆಬಿಟ್ಟು ಹೊರಡುವ ಮಕ್ಕಳಿಗೆ ಬುತ್ತಿ ಕಟ್ಟಿಕೊಡುವಂತೆ, ನಮಗೆ ದಾರಿಯಲ್ಲಿ ತಿನ್ನಲು ಆಹಾರ ಕೊಟ್ಟಿದ್ದರು..!

ಕ್ಯಾಂಪ್ ಬಿಟ್ಟು ಹೊರಡುವಾಗ ನಮಗೆ ಅರಿಯದಂತೆ ಕಣ್ಣಲ್ಲಿ ನೀರೂರಿಬಂತು! ನಮ್ಮ ಕಣ್ಣೀರನ್ನು ಕಂಡ ಕಮೋಡೋರ್ ದಿನ್‌ಷಾ ತನ್ನ ಕಣ್ಣುಗಳಲ್ಲಿ ನೀರೂರುವುದನ್ನು ಮರೆಸಲು ತನ್ನ ರೇಬಾನ್ ಕಪ್ಪುಕನ್ನಡಕ ಧರಿಸಿ ಕೈಬೀಸಿದರು. ಎಕ್ಸಿಕ್ಯೂಟಿವ್ ಆಫೀಸರ್  ಕಮಾಂಡರ್ ಆರ್ಕ್‌ಲೇಯವರು ಗಂಭೀರವಾಗಿ ನಿಂತು, “We shall meet again boys” ಎಂದರು.

ನಮ್ಮನ್ನು ಹೊತ್ತ ಟ್ರಕ್‌ಗಳು ನೈನಿತಾಲ್ ಪಟ್ಟಣವನ್ನು ದಾಟಿ, ಪರ್ವತ ಇಳಿಯತೊಡಗಿದುವು. ಖಾತ್‌ಗೋದಾಂ ರೈಲು ನಿಲ್ದಾಣ ಹತ್ತಿರವಾಗುತ್ತಿದ್ದಂತೆಯೇ ನಮಗೆ ಉತ್ತರಭಾರತದ ಬೇಸಗೆಯ ಸೆಖೆಯ ಅನುಭವವಾಗತೊಡಗಿತು. ನಾವು ಎರಡುವಾರ ನೈನಿತಾಲ್‌ನ ತಂಪಾದ ಶುದ್ಧ ವಾತಾವರಣದ ಹವಾ ಅನುಭವಿಸಿದ್ದೆವು. ಮುಂದಕ್ಕೆ ದೆಹಲಿ, ಆಗ್ರಾ ಮತ್ತು ಮಥುರಾಗಳಲ್ಲಿ ನಲವತ್ತು ಡಿಗ್ರಿ ಸೆಂಟಿಗ್ರೇಡ್‌ಗಿಂತಲೂ ಹೆಚ್ಚಿನ ಸೆಖೆಯನ್ನು ನಾವು ತಡೆದುಕೊಳ್ಳಬೇಕಾಯಿತು. ಆಗಾಗ ನೀರು ಕುಡಿಯುತ್ತಾ, ಕೆಲವುಸಲ ನೀರಿನಲ್ಲಿ ತೊಯ್ಸಿದ ಟೀ-ಶರ್ಟ್‌ಗಳನ್ನು ಧರಿಸುತ್ತಾ, ದೆಹಲಿಯ ಎಲ್ಲಾ ಪ್ರೇಕ್ಷಣೀಯ ಸ್ಥಳಗಳು, ಸಿಕಂದ್ರಾ, ಫತೇಪುರ, ಸಿಕ್ರಿ, ಮಥುರಾ, ಆಗ್ರಾಕೋಟೆ ತಾಜ್‌ಮಹಾಲ್ ಎಲ್ಲವನ್ನೂ ನೋಡಿಕೊಂಡು ಬೇಸಿಗೆಯಲ್ಲಿ ಧಗಧಗಿಸುತ್ತಿದ್ದ ಮದರಾಸ್ ಪಟ್ಟಣವನ್ನು ಸೇರಿದೆವು. ದೆಹಲಿಯ ಸೆಕೆಯನ್ನು ಅನುಭವಿಸಿದ ನಮಗೆ ಮದರಾಸಿನ ಸೆಖೆಯು ವಿಶೇಷ ಎಂದು ಅನ್ನಿಸಲೇ ಇಲ್ಲ. ಮದರಾಸ್ ಪಟ್ಟಣದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ನಾವು ಮಂಗಳೂರು ಮಾರ್ಗವಾಗಿ ಉಡುಪಿ ಸೇರಿದೆವು.

ಮೇ ತಿಂಗಳ ಕೊನೆಯಾದ್ದರಿಂದ ಉಡುಪಿಯಲ್ಲಿ ಆಗಲೇ ಮೂರು ನಾಲ್ಕು ಸಲ ಮಳೆ ಬಿದ್ದಿತ್ತು. ಹವಾ ತಂಪಾಗಿತ್ತು. ನಮ್ಮೂರಿನ ಗಾಳಿ ಮತ್ತು ನಮ್ಮ ಮನೆಗಳ ಆಹಾರ ಕಂಡಾಗ ತುಂಬಾ ಹಾಯೆನಿಸಿತು.

ನಾವು ಎನ್.ಸಿ.ಸಿ.ಯ ಕ್ಯಾಡೇಟ್‌ಗಳಾಗಿ ಮೊದಲಬಾರಿಗೆ ನಮ್ಮ ದೇಶದ ಉತ್ತರ ಭಾಗವನ್ನು ನೋಡಿಬಂದಿದ್ದೆವು. ಉತ್ತರಭಾರತದಲ್ಲಿ ನಾವಾಡುತ್ತಿದ್ದ ಇಂಗ್ಲೀಷ್‌ಭಾಷೆ ಹೆಚ್ಚಿಗೆ ಉಪಯೋಗಕ್ಕೆ ಬರುತ್ತಿರಲಿಲ್ಲ. ನಮ್ಮ ಜತೆಗಿದ್ದ ಉರ್ದೂ ಭಾಷೆ ಮನೆಮಾತಾಗಿ ಆಡುತ್ತಿದ್ದ ಫಾರೂಕ್ ಆಹ್ಮದನಿಗೆ ಚೆನ್ನಾಗಿ ಹಿಂದಿ ಭಾಷೆ ಬರುತ್ತಿತ್ತು. ನಾವು ಆತನನ್ನು ನಮ್ಮ ದೈನಂದಿನ  ವ್ಯವಹಾರಗಳಿಗೆ ಬಹಳವಾಗಿ ಅವಲಂಬಿಸಿದ್ದೆವು.

ಎರಡುವಾರದ ಅವಧಿಯಲ್ಲಿ ನಾವು ಸಾಕಷ್ಟು ಹಿಂದಿಭಾಷೆಯಲ್ಲಿ ಮಾತನಾಡಲು ಕಲಿತಿದ್ದೆವು. ಈ ಅನುಭವದಿಂದ ನಾವು ಮುಂದಕ್ಕೆ ನಮ್ಮಿಂದಾದಷ್ಟು ಹಿಂದಿ ಭಾಷೆ ಕಲಿತು,  ಹಿಂದಿ ಭಾಷೆಯಲ್ಲಿ ಮಾತನಾಡಿ ವ್ಯವಹಾರ ಮಾಡುವಷ್ಟು ಭಾಷಾಜ್ಞಾನ ಹೆಚ್ಚಿಸಿಕೊಂಡೆವು.

* * *