ಶ್ರೀ ರಾವ್ ಮತ್ತು ಶ್ರೀಮತಿ ರಾವ್ ಇವರು ಸ್ವಾತಂತ್ರಪೂರ್ವ ಕಾಲದಲ್ಲೇ ಉಡುಪಿಯ ಊರಿನ ಪ್ರತಿಷ್ಠಿತ ವ್ಯಕ್ತಿಗಳು. ಆಗ ಅವರದು ಚಿಕ್ಕದಾದ ಚೊಕ್ಕ ಸಂಸಾರ. ಅವರಿಗೆ ಒಬ್ಬ ನಾಲ್ಕು ವರ್ಷದ ಚಿಕ್ಕ ಮಗನಿದ್ದ. ಸ್ವಂತ ಬಂಗಲೆ, ಮನೆಯಲ್ಲಿ ಒಳ್ಳೆಯ ಅಡುಗೆಯ ಭಟ್ಟರು, ಮಗುವನ್ನು ನೋಡಿಕೊಳ್ಳುವ ಬಗ್ಗೆ ಒಬ್ಬ ಆಯಾ, ಸೇವಕ ಸೇವಕಿಯರು ಇದ್ದರು. ಅವರ ವ್ಯಾಪ್ತಿಯಾದ ಕಂಟ್ರಾಕ್ಟ್ ಕೆಲಸ ಚೆನ್ನಾಗಿ ನಡೆಯುತ್ತಿತ್ತು. ಅವರಿಗೆ ತಕ್ಕಷ್ಟು ಕೃಷಿ ಜಮೀನು ಮತ್ತು ತೆಂಗಿನತೋಟಗಳು ಇದ್ದುವು. ಓಡಾಡಲು ಆ ಕಾಲದಲ್ಲಿ ಪ್ರತಿಷ್ಠಿತ ವಾಹನವಾದ ಬ್ಯೂಕ್ ಎಂಬ ಅಮೇರಿಕನ್ ಕಾರ್ ಇತ್ತು. ಅದಕ್ಕೆ ಒಬ್ಬ ನುರಿತ ಡ್ರೈವರನೂ ಇದ್ದ. ಆತನ ಹೆಸರು ವೆಂಕಟ ಎಂದು.

ರಾವ್ ದಂಪತಿಗಳ ಸಂಸಾರನೌಕೆಯು ಬಹು ಚೆನ್ನಾಗಿಯೇ ಸಾಗುತ್ತಿತ್ತು. ಅವರುಗಳು ಭಾಗವಹಿಸದ ಸಾಮಾಜಿಕ ಸಮಾರಂಭವೇ ಇರಲಿಲ್ಲ. ಸರಕಾರೀ ಅಧಿಕಾರಿಗಳು, ಉದ್ಯಮಿಗಳು ಹಾಗೂ ಊರಿನ ದೊಡ್ಡ ಮನುಷ್ಯರೆಲ್ಲಾ ಸದಾ ಅವರ ಮನೆಯಲ್ಲಿ ಔತಣ ಅಥವಾ ಚಹಾಕೂಟಗಳಿಗೆ ನೆರೆಯುತ್ತಿದ್ದರು. ಹಾಗಾಗಿ ರಾವ್ ದಂಪತಿಗಳಿಗೆ ಯಾವಾಗಲೂ ಬಿಡುವಿಲ್ಲದ ಕಾರ್ಯಕ್ರಮಗಳು ಇರುತ್ತಿದ್ದುವು. ಅವರ ಕಂಟ್ರಾಕ್ಟ್ ಕೆಲಸಗಳನ್ನು ನಂಬಿಕೆಗೆ ಪಾತ್ರರಾದ ಒಬ್ಬ ಕ್ರಿಶ್ಚಿಯನ್ ಮ್ಯಾನೇಜರರು ಬಹು ಪ್ರಾಮಾಣಿಕೆಯಿಂದ ನೋಡಿಕೊಳ್ಳುತ್ತಿದ್ದರು. ಜೀವನ ಎಂಬುದು ರಾವ್ ದಂಪತಿಗಳಿಗೆ ಸುಖದ ಸುಪ್ಪತ್ತಿಗೆಯಾಗಿತ್ತು.

ಹೀಗಿರುವಾಗ, ಒಂದು ಹುಣ್ಣಿಮೆಯ ದಿನದ ಸಂಜೆ ಉಡುಪಿಯಿಂದ ಮೂರು ಮೈಲಿ ದೂರದ ಮಲ್ಪೆಯ ಸಮುದ್ರ ತೀರದಲ್ಲಿ ಗೆಳೆಯರೆಲ್ಲಾ ಒಟ್ಟಾಗಿ ಬೆಳದಿಂಗಳ ಭೋಜನ ಏರ್ಪಡಿಸುವುದೆಂದು ರಾವ್ ದಂಪತಿಗಳ ಸ್ನೇಹಿತರ ಕೂಟ ನಿಶ್ಚಯ ಮಾಡಿತು. ಭಾಗವಹಿಸುವ ಪ್ರತೀ ಮನೆಗಳವರು ಏನಾದರೊಂದು ಖಾದ್ಯ ಪದಾರ್ಥವನ್ನು ತಯಾರಿಸಿ ಹುಣ್ಣಿಮೆಯ ದಿನ ರಾತ್ರಿ ಏಂಟಕ್ಕೆ ಸಮುದ್ರದ ಬದಿಯಲ್ಲಿ ಸೇರುವುದು ಎಂಬುದಾಗಿ ತೀರ್ಮಾನವಾಯಿತು. ರಾತ್ರಿಯ ಎಂಟು ಗಂಟೆಯ ವೇಳೆಗೆ ಸರಿಯಾಗಿ ಬೆಳದಿಂಗಳಿನ ಊಟಕ್ಕೆ ಮಿತ್ರ ಬಳಗ ಒಟ್ಟಾದರೆ, ತಂದ ಖಾದ್ಯಪದಾರ್ಥಗಳು ಬಿಸಿಬಿಸಿಯಾಗೇ ಇರುತ್ತವೆ. ಅಲ್ಲದೇ, ರಾತ್ರಿ ಎಂಟಕ್ಕೆ ಮಲ್ಪೆಯ ಸಮುದ್ರ ಕಿನಾರೆಯು ಕೂಡಾ ಜನರಹಿತವಾಗಿರುವುದು ಎಂಬ ವಿಚಾರವೂ ಈ ಎಂಟು ಗಂಟೆಯ ಸಮಯದ ನಿಗದಿಗೆ ಕಾರಣವಾಗಿತ್ತು. ಏಳೆಂಟು ಪ್ರತಿಷ್ಟಿತ ಸಂಸಾರಗಳ ಸುಮಾರು ನಲ್ವತ್ತು ಮಂದಿ ಸಮುದ್ರ ತೀರದಲ್ಲಿ ಸೇರಿ ಬೆಳದಿಂಗಳ ಭೋಜನ ಮುಗಿಸಿ ರಾತ್ರಿ ಹನ್ನೆರಡು ಗಂಟೆಯವರೆಗೂ ಹಾಡು ಹರಟೆಗಳಲ್ಲಿ ಕಾಲ ಕಳೆಯುವ ತಯಾರಿ ನಡೆದಿತ್ತು.

ಆ ಹುಣ್ಣಿಮೆಯ ದಿನದಂದು ಶ್ರೀಮತಿ ರಾವ್ ಅವರ ಮಗು ನೋಡಿಕೊಳ್ಳುವ ಆಯಾ ಅನಿರೀಕ್ಷಿತವಾಗಿ ರಜಾ ಕೇಳಿದ್ದಳು. ಮಗುವಿನ ಆಯಾ ಸಕಾರಣವಾಗಿ ರಜೆ ಕೇಳುತ್ತಾ ಇದ್ದುದರಿಂದ, ಶ್ರೀಮತಿ ರಾವ್ ಆಕೆಗೆ ರಜಾ ನೀಡಿ ಮಗುವನ್ನು ಆ ದಿನದ ಮಟ್ಟಿಗೆ ಬೆಳದಿಂಗಳ ಭೋಜನಕ್ಕೆ ತಾನೇ ಕರೆದುಕೊಂಡು ಹೋಗುವುದಾಗಿ ತೀರ್ಮಾನಿಸಿದರು. ಆದಿನ ಮಗುವು ತಮ್ಮೆಲ್ಲರೊಂದಿಗೆ ಮತ್ತು ಇತರೇ ಮಕ್ಕಳೊಡನೆ ನಲಿದು ಬೆಳದಿಂಗಳಿನಲ್ಲಿ ಮನಸಾರೆ ಉಂಡನಂತರ ಅದಕ್ಕೆ ನಿದ್ರೆ ಬಂದರೆ, ತಮ್ಮ ಕಾರಿನ ಡ್ರೈವರನ ಸುಪರ್ದಿಯಲ್ಲಿ  ಮಗುವನ್ನು ಕಾರಿನಲ್ಲಿ ಮಲಗಿಸಿಬಿಡುವುದು ಎಂದು ತೀರ್ಮಾನಿಸಿದರು.

ಸರಿ! ಬಂದಿತು ಆ ಪೂರ್ಣಮಿಯ ದಿನ. ಏಳೆಂಟು ಕಾರುಗಳಲ್ಲಿ ಹೋದ ಜನರು ಮಲ್ಪೆಯ ವಡಭಾಂಡೇಶ್ವರ ಸಮುದ್ರ ಕಿನಾರೆಯಲ್ಲಿ ಸೇರಿದರು. ಹಾಲು ಚೆಲ್ಲಿದಂತೆ ಬೆಳದಿಂಗಳು ಪಸರಿಸಿತ್ತು. ದೊಡ್ಡವರು ಒಂದು ವೃತ್ತ ರಚಿಸಿ ಕುಳಿತರೆ, ಮಕ್ಕಳದೇ ಇನ್ನೊಂದು ವೃತ್ತ ಅದರ ಪಕ್ಕದಲ್ಲೇ ಸೇರಿತು. ಸೇವಕರು ಆಹಾರ ಪಾನೀಯಗಳ ಸರಬರಾಜಿಗೆ ತೊಡಗಿದರು. ಮಕ್ಕಳನ್ನು ಕಾಯುವ ಕೆಲಸ ಡ್ರೈವರುಗಳಿಗೆ ವಹಿಸಲಾಯಿತು.

ರಾತ್ರಿ ಹತ್ತರ ಸಮಯಕ್ಕೆ ಸೇರಿದ ಮಹನೀಯರುಗಳ ಮತ್ತು ಅವರ ಸಂಸಾರಗಳ ಊಟ ಮುಗಿಯಿತು. ತಮ್ಮ ಊಟಕ್ಕೆ ಮೊದಲೇ ಮಹಿಳೆಯರು ತಮ್ಮ ಮಕ್ಕಳಿಗೆ ಊಟ ಮಾಡಿಸಿ ಅವರುಗಳನ್ನು ಡ್ರೈವರುಗಳ ಸುಪರ್ದಿಯಲ್ಲಿ ಆಡಲು ಬಿಟ್ಟರು. ತಮ್ಮ ಊಟ ಮುಗಿಸಿದ ಮಹಿಳೆಯರು ಮಕ್ಕಳ ಮೇಲ್ವಿಚಾರಣೆ ವಹಿಸಿಕೊಂಡು, ಡ್ರೈವರುಗಳು ಮತ್ತು ಕೆಲಸದವರ ಊಟಕ್ಕೆ ಅನುವು ಮಾಡಿಕೊಟ್ಟರು.

ಆ ದಿನದ ಭೋಜನಕ್ಕೆ ಪ್ರತೀ ಕುಟುಂಬದವರೂ ಅದ್ದೂರಿಯಾಗಿ ಆಹಾರ ಪಾನೀಯಗಳನ್ನು ತಂದಿದ್ದರು. ಸುಮಾರು ಅರುವತ್ತು ಜನರಿಗೆ ಸಾಕಾಗುವಷ್ಟು ಆಹಾರ ಪಾನೀಯಗಳು ಒಟ್ಟಾಗಿದ್ದುದರಿಂದ ಎಲ್ಲರೂ ಹೊಟ್ಟೆ ಬಿರಿಯುವಷ್ಟು ಉಂಡನಂತರವೂ ಇನ್ನಷ್ಟು ಉಳಿಯಿತು. ಶ್ರಮಜೀವಿಗಳಾದ ಡ್ರೈವರುಗಳು ಮತ್ತು ಸೇವಕರಿಗೆ ಅಂದಿನ ಅದ್ದೂರಿ ಊಟ ಬಹು ಮೆಚ್ಚುಗೆಯಾಯಿತು. ಅವರುಗಳಿಗೆ ಅಂತಹಾ ಶ್ರೀಮಂತ ಭೋಜನ ನೋಡಲು ಸಿಗುತ್ತಿದ್ದುದೇ ಅಪರೂಪ. ಹಾಗಾಗಿ, ಅಂದಿನ ರಾತ್ರಿ ಅವರೆಲ್ಲಾ ಸಂಕೋಚಪಡದೇ ಹೊಟ್ಟೆ ಬಿರಿಯುವಷ್ಟು ಊಟಮಾಡಿದರು. ತದನಂತರ, ಪಾತ್ರೆ ಪಗಡಿಗಳನ್ನು ಒಪ್ಪಮಾಡಿ ಕಾರುಗಳಲ್ಲಿ ಇರಿಸಿ. ಕಾರುಗಳಲ್ಲಿ ಇದ್ದ ಜಮಖಾನೆಗಳನ್ನು ತಂದು ಕಡಲತಡಿಯಲ್ಲಿ ಹಾಸಿ ಮಕ್ಕಳ ಸುತ್ತು ಕುಳಿತು ಮಕ್ಕಳನ್ನು ಮಲಗಿಸುವ ಪ್ರಯತ್ನ ಮಾಡಿದರು. ಮೂರರಿಂದ ಹಿಡಿದು ಹತ್ತು ವರ್ಷ ಪ್ರಾಯದ ಮಕ್ಕಳೆಲ್ಲಾ ಒಟ್ಟಾಗಿ ಹಾಡುತ್ತಾ ಕುಣಿಯುತ್ತಾ ಜಮಖಾನಗಳ ಮೇಲೆ ಆಡಿದರು. ಸ್ವಲ್ಪ ಹೊತ್ತಿನ ನಂತರ ಕೆಲವು ಮಕ್ಕಳು ಅವರವರ ಅಮ್ಮಂದಿರು ಬೇಕು ಎಂದು ಹಠಮಾಡುತ್ತಾ ದೊಡ್ಡವರ ಗುಂಪಿನ ಕಡೆಗೆ ಓಡಿದರು. ಅಲ್ಲಿದ್ದ ಡ್ರೈವರುಗಳ ಪಾಲಿಗೆ ಕಪ್ಪೆಗಳನ್ನು ಬುಟ್ಟಿಗೆ ತುಂಬುವ ಕೆಲಸ ಶುರುವಾಯಿತು. ಮಕ್ಕಳು ಚಲ್ಲಾಪಿಲ್ಲಿಯಾಗಿ ತಿರುಗಾಡಲು ಶುರುಮಾಡಿದಾಗ, ಹೊಟ್ಟೆ ಬಿರಿಯುವಂತೆ ಊಟಮಾಡಿದ ಅಮಲಿನಲ್ಲಿದ್ದ ಡ್ರೈವರುಗಳಿಗೆ ಮಕ್ಕಳ ಲೆಕ್ಕ ಸಹಜವಾಗಿ ತಪ್ಪಿಹೋಯಿತು. ಕೆಲಮಕ್ಕಳು ಡ್ರೈವರುಗಳ ಸಂಗಡ ಇರಲು ಒಪ್ಪದೇ, ಅವುಗಳ ತಂದೆತಾಯಿಯರ ಬಳಿ ಹೋಗಿ ಅವರ ಮಡಿಲಲ್ಲೇ ನಿದ್ದೆಹೋದುವು.

ಶ್ರೀಮತಿ ರಾವ್ ಅವರು ಉತ್ಸಾಹದಿಂದ ಪ್ರಮೀಳಾ ಸಾಮ್ರಾಜ್ಯದ ಯಾವುದೋ ಗಹನ ವಿಚಾರದ ಮಾತುಕತೆಯಲ್ಲಿ ತಲ್ಲೀನರಾಗಿಬಿಟ್ಟಿದ್ದರು. ಅವರಿಗೆ ಮೊದಲೇ ಮಗುವನ್ನು ನೋಡಿಕೊಳ್ಳುವ ಅಭ್ಯಾಸ ಇರಲಿಲ್ಲ. ಡ್ರೈವರ್ ವೆಂಕಟನಿಗೆ ಆ ಜವಾಬ್ದಾರಿ ವಹಿಸಿದ್ದರಿಂದ,  ಅವರಿಗೆ ತಮ್ಮ ಮಗುವಿನ ಬಗ್ಗೆ ವಹಿಸಬೇಕಾದ ಕಾಳಜಿಯೇ ಮರೆತುಹೋಯಿತು. ಕೆಲವು ಮಕ್ಕಳು ತಂದೆತಾಯಂದಿರ ಮಡಿಲಲ್ಲಿ ನಿದ್ದೆ ಹೋದರೆ, ಕೆಲವು ಮಕ್ಕಳು ಡ್ರೈವರುಗಳು ಹಾಸಿದ್ದ ಜಮಖಾನಗಳ ಮೇಲೆ ನಿದ್ರೆ ಮಾಡಿದರು.

ಸುಮಾರು ಹನ್ನೊಂದು ಗಂಟೆ ರಾತ್ರಿಗೆ ಶ್ರೀಮತಿ ರಾವ್ ಮತ್ತು ಆಕೆಯ ಸ್ನೇಹಿತೆಯರು  ಸಮುದ್ರದ ನೀರಿನಲ್ಲಿ ಕಾಲುಗಳನ್ನು ಅದ್ದಲು ಬಯಸಿದರು. ಕೆಲವು ಹೆಂಗಸರು ಗುಂಪಾಗಿ ನಿಂತು, ಲಘುವಾಗಿ ಬರುತ್ತಿದ್ದ ತೆರೆಗಳಿಗೆ ಕಾಲೊಡ್ಡುತ್ತಾ, ಸಮುದ್ರದ ಕಿನಾರೆಯಲ್ಲಿ ನಿಂತರು. ಆಗ ಅನತಿ ದೂರದಲ್ಲೇನೊ ಕಪ್ಪಗಿನ ವಸ್ತುವೊಂದು ಸಮುದ್ರದಲ್ಲಿ ತೇಲುತ್ತುವುದನ್ನು ಕಂಡರು. ಅದೇನು? ಎಂದು ಶ್ರೀಮತಿ ರಾವ್ ಆ ಕಡೆಗೆ ಬೆಟ್ಟು ತೋರಿಸುತ್ತಾ ಇತರ ಮಹಿಳೆಯರ ಗಮನವನ್ನು ಅತ್ತ ಸೆಳೆದರು. ಜೊತೆಯಲ್ಲಿ ಇದ್ದ ಹೆಂಗಸರು ಅದು ತಾಳೆಯ ಮರದಕಾಯಿ (ಹನೆ ಬೊಂಡ) ಎಂದರೆ, ಶ್ರೀಮತಿ ರಾವ್ ಅದು ಒಂದು ಚಿಕ್ಕ ಹುಡುಗನ ತಲೆಯಂತೆ ಕಾಣುತ್ತಿದೆ! ಎಂದರು.

ಈ ಬಗ್ಗೆ ಒಂದು ಚರ್ಚೆಯೇ ತಲೆಯೆತ್ತಲು, ಶ್ರೀಮತಿ ರಾವ್ ತಮ್ಮ ಡ್ರೈವರ್ ವೆಂಕಟನನ್ನು ಕೂಗಿಕರೆದು ಅದೇನೆಂದು ಪರೀಕ್ಷಿಸಿ ಹೇಳು! ಎಂದರು. ಸ್ವಲ್ಪ ಹೆಚ್ಚಾಗೇ ಊಟಮಾಡಿದ್ದ ವೆಂಕಟ ನಿದ್ರೆಕಣ್ಣುಗಳಿಂದ ಆ ಕಡೆಗೆ ನೋಡಿ ಅಸಡ್ಡೆಯಿಂದ ಅಮ್ಮಾ. ಅದು ಹನೆ ಬೊಂಡ! ಎಂದ.

ಅವನ ಉತ್ತರದಿಂದ ಶ್ರೀಮತಿ ರಾವ್ ಅವರಿಗೆ ಸಮಾಧಾನವಾಗಲಿಲ್ಲ. ಆಗ ಅವರು ಅದು ಯಾವುದೋ ಮಗುವಿನ ತಲೆಯಂತೆ ನನಗೆ ಕಾಣಿಸುತ್ತಿದೆ! ನಿನಗೆ ಈಜು ಬರುತ್ತೆ. ಸ್ವಲ್ಪ ನೀರಿಗೆ ಇಳಿದು ನೋಡು! ಎಂದರಂತೆ.

ವೆಂಕಟನು ಆ ಕಡೆಗೆ ದಿಟ್ಟಿಸಿನೋಡುತ್ತಾ, ಅಮ್ಮಾ, ಅದು ನಿಜವಾಗಿಯೂ ಒಂದು ಮಗುವಿನ ತಲೆಯೇ ಆಗಿದ್ದರೂ ಕೂಡಾ, ಅದನ್ನು ದಡಕ್ಕೆ ತರಲು ನನಗೇನೂ ಗ್ರಹಚಾರ ಕೆಟ್ಟಿಲ್ಲ! ಅದೇನೆಂದು ಪರೀಕ್ಷಿಸಿ ನೋಡಲು ಹೋಗಿ, ಅದು ನಿಜವಾಗಿದ್ದರೆ ನಾಳೆ ನಾನು ಕೆಂಪು ಮುಂಡಾಸಿನವರ (=ಪೋಲೀಸರ) ಅತಿಥಿಯಾಗಿ ಪೋಲಿಸ್ ಠಾಣೆಯಲ್ಲಿ ಕೂರಬೇಕಾದೀತು! ಒಂದು ವೇಳೆ ಅದು ನಿಜವಾಗಿ ಮಗುವಿನ ದೇಹವೇ ಆಗಿದ್ದಲ್ಲಿ ಕೂಡಾ, ನನಗೆ ಅದರ ಗೊಡವೆ ಬೇಡ! ಈ ಭೂಲೋಕದಲ್ಲಿ ಅದೆಷ್ಟು ಪರದೇಶಿ ಮಕ್ಕಳು ನೀರಿಗೆ ಬಿದ್ದು ಸಾಯುತ್ತಾವೋ ಏನೋ! ನನಗೆ ಅದರ ಗೋಡವೆಯೇ ಬೇಡ! ಎಂದು ಹೇಳಿಬಿಟ್ಟನಂತೆ.

ಕೋಮಲ ಮನಸ್ಸಿನ ಶ್ರೀಮತಿ ರಾವ್ ಅವರ ಮನಸ್ಸಿಗೆ ನೀರಿನಲ್ಲಿ ತೇಲುತ್ತಿದ್ದುದು ಮಗುವಿನ ತಲೆಯ ಭಾಗವೇ ಎಂದು ಅನ್ನಿಸಿತಂತೆ. ಮನದ ಕಳವಳ ತಡೆಯಲಾರದೆ      ಶ್ರೀ ರಾವ್ ಇದ್ದಲ್ಲಿಗೆ ಹೋಗಿ ದಯವಿಟ್ಟು ನಮ್ಮ ಡ್ರೈವರನ ಹತ್ತಿರ ಹೋಗಿ ಪರೀಕ್ಷಿಸಲು ಹೇಳಿ! ಎಂದು ಗೋಗರೆದರಂತೆ. ತಮ್ಮ ರಸವತ್ತಾದ ಸಂಭಾಷಣೆಗೆ ತನ್ನ ಹೆಂಡತಿಯು ಭಂಗ ತಂದರೂ, ರಾವ್ ಅವರು ಡ್ರೈವರ್ ವೆಂಕಟನನ್ನು ಕರೆದು ಕೂಡಲೇ ನೀರಿಗೆ ಇಳಿದು ಅದೇನೆಂದು ಪರೀಕ್ಷಿಸು! ಎಂದು ಆಜ್ಞಾಪಿಸಿದರಂತೆ.

ಡ್ರೈವರ್ ವೆಂಕಟ ಮನಸ್ಸಿನಲ್ಲೇ ಗೊಣಗುತ್ತಾ, ನೀರಿಗೆ ಇಳಿದು ಆ ಕಪ್ಪು ವಸ್ತುವೇನೆಂದು ನೋಡಲು, ಅದು ನಿಜವಾಗಿಯೂ ಒಂದು ಮಗುವಾಗಿತ್ತಂತೆ..! ಕೂಡಲೇ ಅದನ್ನು ಎತ್ತಿಕೊಂಡು ದಡಕ್ಕೆ ಬಂದು ಜಮಖಾನದ ಮೇಲೆ ಮಲಗಿಸಿದಾಗ, ಅದರ ಮುಖ ಕಪ್ಪುಕಟ್ಟಿ ಹೋಗಿತ್ತಂತೆ.

ವೆಂಕಟನು ಸರಿಯಾಗಿ ಪರೀಕ್ಷಿಸಿ ನೋಡಿದಾಗ ಅದು ತನ್ನ ಒಡತಿಯ ಏಕಮಾತ್ರ ಪುತ್ರ..!! ಅಮ್ಮಾ, ನನ್ನನ್ನು ಕ್ಷಮಿಸಿ. ನಾನು ಅಸಡ್ಡೆಮಾಡಿ ನಿಮ್ಮ ಮಗುವಿನ ಸಾವಿಗೆ ಕಾರಣನಾದೆ! ಎನ್ನುತ್ತಾ ವೆಂಕಟ ಅಲ್ಲೇ ಬಿದ್ದು ಗೋಳಾಡಹತ್ತಿದನಂತೆ.

ಪುಣ್ಯವಶಾತ್ ರಾಯರ ಗೆಳೆಯರ ಬಳಗದಲ್ಲಿ ಅಂದಿನ ಭೋಜನಕೂಟಕ್ಕೆ ಉಡುಪಿಯ ಸುಪ್ರಸಿದ್ಧ ಡಾಕ್ಟರೊಬ್ಬರು ಬಂದಿದ್ದರು. ಕೂಡಲೇ ಅವರು ಪ್ರಥಮ ಚಿಕಿತ್ಸೆ ಕೈಗೊಂಡರಂತೆ. ಅಲ್ಲಿದ್ದ ಪ್ರತೀ ಜೀವವೂ ಆ ಮಗುವಿನ ಉಳಿವಿಗೋಸ್ಕರ ಪ್ರಾರ್ಥಿಸಿತಂತೆ..!

ಡಾಕ್ಟರರು ಸುಮಾರು ಹತ್ತು ನಿಮಿಷಗಳಷ್ಟು ಹೊತ್ತು ಪ್ರಯತ್ನಿಸಿದ ನಂತರ, ಮಗು ತಾನಾಗಿ ಉಸಿರಾಡಲು ತೊಡಗಿತಂತೆ! ಕೂಡಲೇ, ಮಗುವನ್ನು ತನ್ನ ಆಸ್ಪತ್ರೆಗೆ ದಾಖಲು ಮಾಡಿಕೊಂಡು, ಎರಡು ದಿನಗಳ ನಿರಂತರ ಚಿಕಿತ್ಸೆ ಮಾಡಿ ಆ ಡಾಕ್ಟರು ಮಗುವಿನ ಪ್ರಾಣ ಉಳಿಸಿದರಂತೆ. ದೇವರ ದಯೆಯಿಂದ ಆಶಾಕಿರಣ ಅವರೆಲ್ಲರಿಗೂ ಗೋಚರಿಸಿತು.

ಮಗುವಿನ ಜೀವವೇನೋ ಉಳಿಯಿತು. ಆದರೆ, ಅಪಘಾತದ ಪರಿಣಾಮವಾಗಿ ಸರಾಗವಾಗಿ ಮಾತುಗಳನ್ನು ಆಡುತ್ತಿದ್ದ ಆ ಮಗು ಮಾತನಾಡುವಾಗ ಉಗ್ಗತೊಡಗಿತು. ಇಂದಿಗೆ ಆ ಮಗು ಬೆಳೆದು ದೊಡ್ಡವನಾಗಿದ್ದಾನೆ. ಆತ ನನಗಿಂತ ಕಾಲೇಜಿನಲ್ಲಿ ನಾಲ್ಕು ವರ್ಷ ಸೀನಿಯರ್. ಈಗಲೂ ಆತನಿಗೆ ನೀರು ಕಂಡರೆ ಭಯ. ಆತನ ಉಗ್ಗು ಮಾತು ಸರಿಪಡಿಸಲು ಆತನ ಶ್ರೀಮಂತ ತಂದೆತಾಯಿಗಳು ಉತ್ತಮ ವೈದ್ಯರಿಂದ ಸತತವಾಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ, ಆತನು ಆತುರದಿಂದ ಮಾತನಾಡಬೇಕಾದರೆ ಉಗ್ಗುತ್ತಾನೆ. ಆತನನ್ನು ಕಂಡಾಗಲೆಲ್ಲಾ ಆತನ ಮಾತೆಯ ಮಾನವೀಯತೆಯ ಗುಣ ಆತನನ್ನು ಉಳಿಸಿತು.. ಎಂಬ ನೆನಪಾಗುತ್ತದೆ.

* * *