ನಾನೀಗ ಧುರ್ಯೋಧನನ ಕಥೆಯನ್ನು ಹೇಳುತ್ತಿಲ್ಲ. ನಾನೀಗ ಛಲದಂಕ ಮಲ್ಲ ಎಂದು ಕರೆಯುತ್ತಿರುವುದು ನನ್ನ ಸಹಪಾಠಿ ಕೃಷ್ಣಭಟ್ ಎಂಬ ವ್ಯಕ್ತಿಯನ್ನು.

ಆತನು ಎಲ್ಲರಂತೆಯೇ ಮಾಮೂಲಿ ಹುಡುಗನಾಗಿದ್ದ. ದೂರದ ಪುತ್ತೂರಿನಿಂದ ಬಂದು ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನ ಹಾಸ್ಟೆಲಿನಲ್ಲಿ ವಾಸಿಸುತ್ತಾ ನನ್ನ ಜತೆಗೆ ಪಿ.ಯೂ.ಸಿಯಲ್ಲಿ ಓದುತ್ತಿದ್ದನು. ಆಗ ಪುತ್ತೂರಿನಲ್ಲಿ ಕಾಲೇಜ್ ಇರಲಿಲ್ಲ. ಸನ್ ಸಾವಿರದ ಒಂಭೈನೂರ ಅರುವತ್ತೊಂದನೇ ಇಸವಿ ಇರಬೇಕು. ಆಗ ನಾವು ಒಂದೇ ವರುಷದ ಪ್ರೀ ಯೂನಿವರ್ಸಿಟಿ ಕೋರ್ಸ್ ಓದುತ್ತಾ ಇದ್ದೆವು. ಆಗಿನ ಒಂದೇ ವರುಷದ ಪ್ರೀ ಯೂನಿವರ್ಸಿಟಿ ಓದಿಗೆ ಕಾರಣ ಏನೆಂದರೆ, ನಾವುಗಳು ಹೈಸ್ಕೂಲಿನ ಎಸ್.ಎಸ್.ಎಲ್.ಸಿ. ತಲುಪಲು ಹನ್ನೊಂದು ವರ್ಷ ಸವೆಸಬೇಕಾಗಿತ್ತು. ಈ ದಿನಗಳಲ್ಲಿ ಹೈಸ್ಕೂಲಿನಲ್ಲಿ ನಮ್ಮ ಮಕ್ಕಳು ಹತ್ತುವರ್ಷ ಓದಿದ ನಂತರ ಹೈಸ್ಕೂಲಿನ  ಎಸ್.ಎಸ್.ಎಲ್.ಸಿ. ಪರೀಕ್ಷೆ ಕಟ್ಟುತ್ತಾರೆ. ಆದ್ದರಿಂದ ಪಿಯುಸಿ ಕೋರ್ಸ್ ಈಗ ಎರಡು ವರ್ಷಗಳ ಕಾಲ ನಡೆಯುತ್ತಿದೆ.

ನನ್ನ ಅಣ್ಣಂದಿರು ಬಹು ಹಿಂದೆ ಹೈಸ್ಕೂಲ್‌ಗಳಲ್ಲಿ ಹನ್ನೊಂದು ವರ್ಷ ಓದಿ, ಎರಡು ವರ್ಷಗಳ ಇಂಟರ್ ಮೀಡಿಯೇಟ್ ಎಂಬ ಎರಡು ವರ್ಷಗಳ ಕೋರ್ಸ್ ಮುಗಿಸಿಕೊಂಡು ‘ಎರಡೇ ವರ್ಷಗಳ ಡಿಗ್ರೀ ಕೋರ್ಸ್ ಓದುತ್ತಿದ್ದರು. ಅವರ ನಂತರದ ಬ್ಯಾಚ್‌ಗಳಿಗೆ ಮೂರು ವರ್ಷಗಳ ಕಾಲದ ಡಿಗ್ರಿಕೋರ್ಸ್‌ಗಳು ಶುರುವಾದುವು. ಅಂತೂ, ಅಂದಿನಿಂದ ಇಂದಿನ ತನಕ ಪ್ರತೀ ವಿದ್ಯಾರ್ಥಿಯೂ ಕುಂತಿ ಮಕ್ಕಳಿಗೆ ವನವಾಸ ತಪ್ಪಿದ್ದಲ್ಲ ಎಂಬಂತೆ, ಹದಿನೈದು ವರ್ಷಗಳ ಕಾಲ ಓದಿ ಬಿ.ಏ., ಬಿ.ಎಸ್.ಸಿ. ಅಥವಾ ಬಿ.ಕಾಂ. ಪದವೀಧರರು ಎನ್ನಿಸಿಕೊಳ್ಳಬೇಕಾಗಿದೆ. ಅಂದಿನ ಕಾಲೇಜು ವಿದ್ಯಾಭ್ಯಾಸ ಎಲ್ಲರಿಗೆ ನಿಲುಕುವಂತೆ ಇರಲಿಲ್ಲ. ಕಾಲೇಜಿನ ಓದಿಗೆ ವಿದ್ಯಾರ್ಥಿಯ ಪೋಷಕರು ತುಂಬಾ ಹಣ ವ್ಯಯ ಮಾಡಬೇಕಿತ್ತು. ಅದಲ್ಲದೇ, ವಿದ್ಯಾರ್ಥಿಯು ಕೂಡಾ ತನ್ನ ಯೌವ್ವನದ ಐದು ವರ್ಷಗಳನ್ನು ಯೂನಿವರ್ಸಿಟಿಯ ಪದವಿಗೋಸ್ಕರ ಮುಡುಪಾಗಿ ಇಡಬೇಕಾಗಿತ್ತು. ಕಾಲೇಜು ಓದು ಕೈಗೆ ಎಟುಕದವರು ತಮ್ಮ ಎಸ್.ಎಸ್.ಎಲ್.ಸಿ.ಯ ಸರ್ಟಿಫಿಕೇಟ್ನ ಬಲದಿಂದಲೇ ನೌಕರಿ ಗಿಟ್ಟಿಸಿಕೊಂಡು ಜೀವನ ನಡೆಸುತ್ತಿದ್ದರು. ಈಗಿನ ಕಾಲದಲ್ಲಿ ಸ್ನಾತಕ ಪದವಿಗೆ ಇರುವ ಮರ್ಯಾದೆಯು, ಆಗಿನ ಕಾಲದ ಎಸ್.ಎಸ್.ಎಲ್.ಸಿ.ಗೆ ಇತ್ತೆಂದು ಹೇಳಿದರೆ ಅದು ಹೆಗ್ಗಳಿಕೆಯಲ್ಲ. ಜನ ಸಾಮಾನ್ಯರು ಎಸ್.ಎಲ್.ಸಿ. ಓದಿದವರನ್ನು ವಿದ್ಯಾವಂತ ಎಂದು ಪರಿಗಣಿಸುತ್ತಿದ್ದ ಕಾಲವದು!

ನಾನು ಚಿಕ್ಕವನಿದ್ದಾಗ ಅಂದರೆ ಸುಮಾರು ಸಾವಿರದ ಒಂಬೈನೂರ ಐವತ್ತನೇ ಇಸವಿಯಲ್ಲಿ, ಬಾಲವಾಡಿ (ಪ್ರೀ-ನರ್ಸರಿ), ಎಲ್.ಕೆ.ಜಿ. ಮತ್ತು ಯೂ.ಕೇ.ಜಿ. ಎಂಬ ಕ್ಲಾಸುಗಳೇ ಇರಲಿಲ್ಲ. ಎಲ್ಲಾ ಶಾಲೆಗಳಲ್ಲಿ ಐದೂವರೆ ವರ್ಷ ತುಂಬಿದ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಿಕೊಳ್ಳುತ್ತಿದ್ದರು. ನನ್ನ ಅಜ್ಜ ನನಗೆ ಮನೆಯಲ್ಲಿಯೇ ನೀಡಿದ ವಿದ್ಯಾಭ್ಯಾಸದ ಫಲವಾಗಿ, ನಾನು ಪ್ರಾಥಮಿಕ ಎರಡನೇ ಈಯತ್ತೆಗೆ ನೇರವಾಗಿ ಸೇರಿಕೊಂಡೆ. ಪರಿಣಾಮವಾಗಿ, ನಾನು ನನ್ನ ಹದಿನೈದೂವರೆ ವರ್ಷದ ಪ್ರಾಯಕ್ಕೆ ಕಾಲೇಜು ಮೆಟ್ಟಿಲು ಹತ್ತಿದ್ದೆ. ನನ್ನ ಎತ್ತರ ಆಗ ಐದು ಅಡಿಗಿಂತಲೂ ಕಡಿಮೆ! ನಾನು ಮೊದಲ ದಿನ ಹಾಫ್ ಶಾರ್ಟ್ಸ್ ಧರಿಸಿ ಕಾಲೇಜಿಗೆ ಹೋದೆ. ನಮ್ಮ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಸುಂದರರಾವ್ ಅವರು ನನ್ನನ್ನು ಕಾಲೇಜ್ ಕಾರಿಡಾರಿನಲ್ಲಿ ಕಂಡು, ಮೈ ಡಿಯರ್ ಬಾಯ್, ಯೂ ಆರ್ ಎ ಪ್ರೀ ಯೂನಿವರ್ಸಿಟಿ ಸ್ಟ್ಯೂಡೆಂಟ್ ನವ್…., ಪ್ಲೀಸ್ ವೇರ್ ಫುಲ್ ಟ್ರೌಸರ್ಸ್ ವ್ಹೆನ್ ಯು ಕಮ್ ಟು ಯುವರ್ ಕ್ಲಾಸಸ್ ಎಂದು ಉಪದೇಶಿಸಿದ್ದರು. ನಂತರವೇ ನಾನು ಹಾಫ್ ನಿಕ್ಕರಿಗೆ ವಿದಾಯ ಹೇಳಿ, ಪ್ಯಾಂಟ್ ಧರಿಸಲು ತೊಡಗಿದ್ದು.

ನನ್ನ ಪಕ್ಕದಲ್ಲೇ ಕೂರುತ್ತಿದ್ದ ಕೃಷ್ಣಭಟ್ ಸುಮಾರು ಹದಿನೆಂಟರ ಹರೆಯದ ಕುಡಿಮೀಸೆಯ ನೀಳಕಾಯದ ಗೌರವ ವರ್ಣದ ಯುವಕ. ಆತನು ದೊಡ್ಡ ಅಡಿಕೆ ಬೇಸಾಯಗಾರರ ಮನೆತನದವನಂತೆ! ಆಟೋಟಗಳಲ್ಲಿ ಆತ ಯಾವಾಗಲೂ ಮೊದಲಿಗ. ಓದಿನಲ್ಲಿ ಆತ ದಡ್ಡ ಅಲ್ಲದಿದ್ದರೂ, ಮೊದಲ ಶ್ರೇಣಿಯ ವಿದ್ಯಾರ್ಥಿಯಲ್ಲ. ಕ್ರಮೇಣ ನಾವು ಆತ್ಮೀಯ ಗೆಳೆಯರಾದೆವು.

ಬಿಗಿಯಾದ ಶಿಸ್ತಿನ ಹೈಸ್ಕೂಲುಗಳಿಂದ ಹೊರಬಂದು ಕಾಲೇಜುಗಳ ಸ್ವಚ್ಛಂದ ವಾತಾವರಣ ಕಂಡೊಡನೇ, ಸಾಮಾನ್ಯವಾಗಿ ಎಲ್ಲಾ ವಿದ್ಯಾರ್ಥಿಗಳೂ ಕಿವಿಗೆ ಗಾಳಿ ಹೊಕ್ಕ ಕರುಗಳಂತೆ ಸ್ವಲ್ಪ ನಲಿದಾಡುವುದು ಸಾಮಾನ್ಯ. ಆಗಾಗ ಪಾಠದ ಯಾವುದಾದರೂ ಪೀರಿಯಡ್‌ವೊಂದಕ್ಕೆ ಹಾಜರಾಗದೇ ಇರುವುದು ಕಾಲೇಜು ವಿದ್ಯಾರ್ಥಿಗಳ ಸಾಮಾನ್ಯ ನಡವಳಿಕೆ ಎನ್ನಿಸಿದ್ದ ಕಾಲವದು. ಈ ಸ್ವತಂತ್ರ ವಾತಾವರಣದ ಪರಿಣಾಮವಾಗಿ, ನಾನು ಮತ್ತು ಕೃಷ್ಣಭಟ್ ಹೆರ್ಕುಲಿಸ್ ಅನ್-ಚೈನ್ಡ್ ಎಂಬ ಇಂಗ್ಲಿಷ್ ಸಿನಿಮಾ ನೋಡಲು ಮಧ್ಯಾಹ್ನದ ಎರಡು ಪೀರಿಯಡ್‌ಗಳಿಗೆ ಒಮ್ಮೆ ಚಕ್ಕರ್ ಹೊಡೆದೆವು. ಆ ಸಿನೆಮಾದಲ್ಲಿ ‘ಸ್ಟೀವ್ ರೀವ್ಸ್ ಎಂಬ ಮಿ.ಯೂನಿವರ್ಸ್ ನಟಿಸಿದ್ದನು. ಮರುದಿನ ನಾವು ಶೂರರಂತೆ ಕ್ಲಾಸಿಗೆ ಬಂದಾಗ, ಹಿಂದಿನ ಮಧ್ಯಾಹ್ನ ನಮ್ಮ ಮ್ಯಾಥ್ಸ್ ಪೊಫೆಸರರು ಸರ್ಪ್ರೈಸ್ ಟೆಸ್ಟ್ ಕೊಟ್ಟಿದ್ದ ವಿಚಾರ ತಿಳಿದು ಗಾಬರಿಯಾಯಿತು. ಅದೇದಿನ ಮ್ಯಾಥ್ಸ್ ಕ್ಲಾಸಿನಲ್ಲಿ ನಮ್ಮ ಗೈರುಹಾಜರಿಯ ಬಗ್ಗೆ ವಿಚಾರಣೆಯಾಯಿತು.

ನಾವಿಬ್ಬರೂ ಸತ್ಯವನ್ನೇ ಹೇಳಿ ಕ್ಷಮೆ ಕೇಳಿದೆವು. ಡೇ ಸ್ಕಾಲರ್ ಆಗಿದ್ದ ನನಗೆ ಕ್ಷಮಾಪಣೆ ಪತ್ರ ಬರೆದು ಪೋಷಕರ ಸಹಿ ಹಾಕಿಸಿ ತರಲು ಪ್ರೊಫೆಸರ್ ಅಪ್ಪಣೆ ಮಾಡಿದರು. ನಾನು ಇಂಗ್ಲೀಷಿನಲ್ಲಿ ಕ್ಷಮಾಯಾಚನೆಯ ಪತ್ರ ಬರೆದು ಸರಿಯಾಗಿ ಇಂಗ್ಲಿಷ್ ಬಾರದ ನನ್ನ ತಾಯಿಯವರ ಸಹಿ ಹಾಕಿಸಿ ತಂದುಕೊಟ್ಟು ಸಂದಿಗ್ಧದಿಂದ ಬಚಾವ್ ಆದೆ.

ಆದರೆ, ಹಾಸ್ಟೆಲ್ ವಾಸಿಯಾದ ಕೃಷ್ಣಭಟ್‌ಗೆ ಪ್ರೊಫೆಸರ್, ಹೀನಾಮಾನ ಬೈದು ನಾಲ್ಕು ದಿನ ಮ್ಯಾಥ್ಸ್‌ಕ್ಲಾಸ್‌ನಿಂದ ಡಿಬಾರ್ ಮಾಡಿಬಿಟ್ಟರು. ಪಾಪ!  ಕೃಷ್ಣಭಟ್‌ಗೆ ಪನಿಷ್ಮೆಂಟ್‌ಗಿಂತ ಜಾಸ್ತಿಯಾಗಿ ಪ್ರೊಫೆಸರರ ಬೈಗಳು ನಾಟಿತ್ತು. ಸ್ವಾಭಿಮಾನಿಯಾದ ಆತನಿಗೆ ಬೈಗಳ ಬೇಗೆ ತಡೆಯಲಾಗದೆ, ಆತ ನಾಲ್ಕುದಿನ ಯಾವ ಕ್ಲಾಸಿಗೂ ಬರಲಿಲ್ಲ. ತನ್ನ ಹಾಸ್ಟೆಲ್ ರೂಮಿನಲ್ಲೇ ಒಬ್ಬಂಟಿಯಾಗಿ ಕುಳಿದ್ದನು. ಐದನೇ ದಿನ ಕ್ಲಾಸಿಗೆ ಬಂದು ನನ್ನ ಪಕ್ಕದಲ್ಲಿ ಕೃಷ್ಣಭಟ್ ಕುಳಿತುಕೊಂಡ. ನನ್ನೊಡನೆಯೂ ಆತ ಜಾಸ್ತಿ ಮಾತನಾಡಲಿಲ್ಲ.

ನಮ್ಮ ಮ್ಯಾಥ್ಸ್ ಪ್ರೊಫೆಸರಿಗೆ ಒಂದುಮಾತು ಹೇಳುವುದಿದೆ! ಎಂದು ನಿಟ್ಟುಸಿರು ಬಿಟ್ಟು ಮೌನವಾಗೇ ಮ್ಯಾಥ್ಸ್‌ಕ್ಲಾಸಿಗೆ ಕಾದುಕುಳಿತ. ಮ್ಯಾಥ್ಸ್ ಪ್ರೊಫೆಸರರು ಬಂದು ಹಾಜರಿ ಪಡೆದ ನಂತರ, “Mr. Krishna Bhat, you seem to have decided to join your class today, instead of watching the moovies!” ಎಂದರು. ಆಗ ಕೃಷ್ಣಭಟ್ ಎದ್ದು ನಿಂತು ವಿನಮ್ರನಾಗಿಯೇ, “Sir, I have decided to quit studies in this college as on today. I have taken the punishment sportively. But, your abusive words have hurt my vanity. I shall continue to work hard and live in my native village by cultivating land and I want to show the world that I can live without the aid of your mathematics lecture. Thank you, Sir” ಎಂದು ಹಿಂತಿರುಗಿ ನೋಡದೇ ನಡೆದೇ ಬಿಟ್ಟ..! ಪ್ರಾಧ್ಯಾಪಕರು ಆತನನ್ನು ಬುಸುಗುಟ್ಟುತ್ತಾ ನೋಡುತ್ತಿದ್ದರು.

ಅಲ್ಲಿಂದಲೇ ಆತ ನೇರವಾಗಿ ಹಾಸ್ಟೆಲ್‌ಗೆ ಹೋಗಿ ತನ್ನ ಹಾಸ್ಟೆಲ್‌ನ ರೂಮ್ ಖಾಲಿಮಾಡಿ ಪುತ್ತೂರಿನ ಬಸ್ ಹಿಡಿದನಂತೆ. ತದನಂತರ ನಾನು ಕೃಷ್ಣಭಟ್‌ನನ್ನು ಕಾಲೇಜಿನ ಬಳಿ ಎಂದೂ ನೋಡಲಿಲ್ಲ. ಆತನು ತನ್ನ ಸರ್ಟಿಫಿಕೇಟ್‌ಗಳಿಗಾಗಿ ಕೂಡಾ ಕಾಲೇಜಿಗೆ ಬರಲಿಲ್ಲವಂತೆ..!

ಸುಮಾರು ಮೂವತ್ತು ವರುಷಗಳು ಉರುಳಿದುವು. ನನ್ನ ದೊಡ್ಡ ಅಣ್ಣನ ಮಗ ವಾದಿರಾಜನ ಮದುವೆ ಪುತ್ತೂರಲ್ಲಿ ನಡೆಯಿತು. ಸಭೆಯಲ್ಲಿ ಕುಳಿತಿದ್ದ ನನಗೆ ಕೃಷ್ಣಭಟ್‌ನಂತೆಯೇ ಇರುವ ವ್ಯಕ್ತಿಯೊಬ್ಬ ಗೋಚರಿಸಿದರು. ಅವರ ಪಕ್ಕಕ್ಕೆ ಹೋಗಿ ಕುಳಿತೆ. ಅದೇ ಎತ್ತರ..! ಬಣ್ಣ ಮಾತ್ರ ಸ್ವಲ್ಪ ಬಿಸಿಲಿಗೆ ಬಿದ್ದು ಕೆಂಪಾದಂತೆ ಕಂಡಿತು. ಮೈಯ್ಯಲ್ಲಿ ಇನ್ನೂ ಕಟ್ಟುಮಸ್ತಾಗಿದ್ದ ಆ ವ್ಯಕ್ತಿ ನನ್ನನ್ನು ಗುರುತು ಹಿಡಿದಂತೆ ಕಾಣಲಿಲ್ಲ.

ನೀವು ಕೃಷ್ಣಭಟ್ ಅಲ್ಲವೇ? ಎಂದೆ. ಅಷ್ಟರಲ್ಲೇ ಆತನಿಗೆ ನನ್ನ ಗುರುತು ಸಿಕ್ಕಿತು..! ಮಧುಸೂದನ ಪೆಜತ್ತಾಯ….! ಎಂದು ನನ್ನ ಹೆಗಲನ್ನು ತಬ್ಬಿಕೊಂಡ. ನಾವು ಒಂದು ಬದಿಯಲ್ಲಿದ್ದ ಎರಡು ಕುರ್ಚಿ ಹಿಡಿದು ಕುಳಿತೆವು. ಪರಸ್ಪರ ವಿಚಾರ ವಿನಿಮಯದಲ್ಲೇ ಬಹಳ ಹೊತ್ತು ಕಳೆದೆವು. ಆತನೀಗ ಒಬ್ಬ ಗಣ್ಯ ಅಡಿಕೆ ಬೆಳೆಗಾರನಾಗಿದ್ದ.

ಈಗ ನಾನು ಕೃಷ್ಣಭಟ್ ಹೇಳಿದ ವಿಚಾರಗಳನ್ನು ತಮಗೆ ಸಮಗ್ರವಾಗಿ ಹೇಳುತ್ತೇನೆ.

ಕಾಲೇಜು ಬಿಟ್ಟು ಮನೆಗೆ ಬಂದ ಮಗನನ್ನು ಕಂಡು ಆತನ ತಂದೆತಾಯಿ ದಂಗಾದರಂತೆ. ಅವರು ಆತನನ್ನು ಕಾಲೇಜಿಗೆ ಹಿಂದಿರುಗಿ ಹೋಗಲು ಒತ್ತಾಯಿಸಿದರೂ ಆತ ಒಪ್ಪಲಿಲ್ಲವಂತೆ. ತಾನೇ ಕಷ್ಟಪಟ್ಟು ತೋಟಮಾಡಿ ಹೆಸರು ಮತ್ತು ಹಣ ಮಾಡಿ ತೋರುವೆನೆಂದು ಹಠ ಹಿಡಿದನಂತೆ. ತಮ್ಮ ಮನೆಯಿಂದ ಹತ್ತು ಮೈಲಿ ದೂರದ ಕಾಡಿನ ಬದಿಯ ಗುಡ್ಡದ ತಪ್ಪಲಿನ ಜಾಗದಲ್ಲಿ ಅಡಿಕೆ ಸಾಗುವಳಿ ಮಾಡಲು ಪಣತೊಟ್ಟನಂತೆ.

ರಸ್ತೆಯಿಲ್ಲದ ಆ ಜಾಗದಲ್ಲಿ ಗುಡಿಸಲು ಕಟ್ಟಿ ಮೊದಲ ವರ್ಷ ತಾನೇ ಕೈಯ್ಯಾರೆ ಅಡಿಕೆ ಗಿಡಗಳ ಗುಂಡಿ ತೋಡಿದನಂತೆ. ನೀರಿನ ಅಭಾವ ಎದುರಾದಾಗ ಗುಡ್ಡದ ತಪ್ಪಲಿಗೆ ಅಡ್ಡ ಬೋರ್ ಹೊಡೆಸಿ, ನೀರು ಪಡೆದವರಲ್ಲಿ ಆತನೇ ಮೊದಲಿಗನಂತೆ. ಅಡ್ಡ ಬೋರ್ನಿಂದ ಒಸರಿದ ನೀರನ್ನು ದೊಡ್ಡ ಕೆರೆ ತೋಡಿ ಸಂಗ್ರಹಿಸಿ, ಅಡಿಕೆಯ ಜೊತೆಗೆ ಸ್ವಲ್ಪ ಭತ್ತದ ಕೃಷಿ ಕೂಡಾ ಮಾಡಿ ಜೀವನ ಸಾಗಿಸಿದನಂತೆ. ಅಡಿಕೆಯ ಮಧ್ಯೆ ಬಾಳೆ ನೆಟ್ಟು, ಅಡಿಕೆಗಿಡಗಳು ಫಸಲು ಬರುವ ತನಕ ಬಾಳೆ ಬೆಳೆದು ಚೆನ್ನಾಗೇ ಸಂಪಾದಿಸಲು ಶುರುಮಾಡಿದನಂತೆ.

ಹೀಗಿರಲು, ಆತನ ತೋಟದಲ್ಲಿ ಕಳ್ಳರ ಹಾವಳಿ ಜಾಸ್ತಿಯಾಯಿತಂತೆ. ಬಲವಾದ ತಂತಿ ಬೇಲಿ ಹಾಕಿದರೂ ಕಳ್ಳತನ ಕಡಿಮೆಯಾಗಲಿಲ್ಲವಂತೆ. ಇದಕ್ಕೆ ಒಂದೇ ಉಪಾಯ ಎಂದು ನಾಲ್ಕು ಡಾಬರ್ ಮನ್ ನಾಯಿಮರಿಗಳನ್ನು ಬೆಂಗಳೂರಿನಿಂದ ತಂದು ಸಾಕಿದನಂತೆ. ಕ್ರಮೇಣ, ಕಳ್ಳರು ಅವುಗಳ ಸ್ನೇಹ ಸಂಪಾದನೆಗೆ ತೊಡಗಿದುದು ಆತನ ಗಮನಕ್ಕೆ ಬಂದಿತಂತೆ.

ಆಗ ಕೃಷ್ಣಭಟ್ ಈ ನಾಲ್ಕು ನಾಯಿಗಳನ್ನು ರಕ್ತ ಪೀಪಾಸು ನಾಯಿಗಳಾಗಿ ಪರಿವರ್ತಿಸಲು ತನ್ನದೇ ರೀತಿಯ ಒಂದು ಯೋಜನೆ ಹಾಕಿದನಂತೆ. ನಾಯಿಗಳಿಗೆ ಪ್ರತೀ ದಿನ ಒಂದೇ ಊಟ ಹಾಕಲು ಶುರು ಮಾಡಿದನಂತೆ. ಅನ್ನ ಮತ್ತು ಹಸಿ ಮಾಂಸದ ಒಂದೇ ಊಟ ಹಾಕಿ ಆ ನಾಯಿಗಳನ್ನು ಹಗಲಿಡೀ ಕತ್ತಲೆಕೋಣೆಯೊಂದರಲ್ಲಿ ಕೂಡಿಹಾಕಿ ಬೆಳೆಸಿದನಂತೆ. ರಾತ್ರಿ ಹೊತ್ತು ಮಾತ್ರ ಅವುಗಳನ್ನು ತೋಟದ ಒಳಗೆ ಓಡಾಡಲು ಬಿಡುತ್ತಿದ್ದನಂತೆ. ಅವುಗಳ ಕ್ರೌರ್ಯವನ್ನು ಹೆಚ್ಚಿಸುವ ಸಲುವಾಗಿ ಪ್ರತೀ ಹುಣ್ಣಿಮೆ ಮತ್ತು ಅಮವಾಸ್ಯೆಯ ದಿನಗಳಲ್ಲಿ ಸ್ಟೆರೈಲ್ ಸಿರಿಂಜ್ ಉಪಯೋಗಿಸಿ ತನ್ನ ರಕ್ತವನ್ನೇ ಅವುಗಳ ಊಟದ ಜತೆಗೆ ಉಣ್ಣಿಸಿ ಅವುಗಳನ್ನು ರಕ್ತ ಪೀಪಾಸುಗಳಾಗಿ ಮಾಡಿದನಂತೆ. ತನ್ನ ಒಡೆಯನನ್ನು ಮಾತ್ರ ಗುರುತಿಸುತ್ತಿದ್ದ ಈ ನಾಯಿಗಳು ರಾತ್ರಿ ಹೊತ್ತು ತೋಟಕ್ಕೆ ಯಾರು ಬಂದರೂ ಅವರ ಮೇಲೆ ಎರಗಿ ಮಾಂಸವನ್ನೇ ಬಗೆಯ ಹತ್ತಿದವಂತೆ. ಈ ನಾಯಿಗಳ ದೆಸೆಯಿಂದ ಕಳ್ಳರ ಕಾಟ ಸಂಪೂರ್ಣವಾಗಿ ನಿಂತೇ ಹೋಯಿತಂತೆ.

ಹೀಗೆ ಛಲದಿಂದ ಬೇಸಾಯ ಮಾಡಿ, ಮನೆಯ ಹಿರಿಯರಿಂದ ಆ ಕಾಡು ಜಾಗವನ್ನು ಮಾತ್ರ ಪಡೆದು ಇಂದಿನ ಉಚ್ಛ್ರಾಯ ಸ್ಥಿತಿಗೆ ಕೃಷ್ಣಭಟ್ ತಲುಪಿದನಂತೆ.

ಅಂತೂ ತನ್ನ ಹಠದಿಂದ ತನ್ನ ಜೀವನ ರೂಪಿಸಿಕೊಂಡ ಮಹಾನುಭಾವ ಈ ಕೃಷ್ಣಭಟ್. ಆತನಿಗೆ ನಾನು ಛಲದಂಕ ಮಲ್ಲ ಎಂಬ ಬಿರುದನ್ನು ಮನಸ್ಸಿನಲ್ಲೇ ಸಮರ್ಪಿಸಿದ್ದೇನೆ.

* * *