ನಾನು ಉಡುಪಿಯ ಮಹಾತ್ಮಗಾಂಧೀ ಮೆಮೋರಿಯಲ್ ಕಾಲೇಜಿನಲ್ಲಿ ಪ್ರೀ ಯೂನಿವರ್ಸಿಟಿ ಕ್ಲಾಸಿನಲ್ಲಿ ಓದುತ್ತಿದ್ದೆ. ೧೯೬೧-೧೯೬೨ ಇಸವಿ. ನನಗೆ ಆಗ ವಯಸ್ಸು ಹದಿನಾರು. ಆಗ ನನ್ನ ಎತ್ತರ ಕೇವಲ ಐದು ಅಡಿ. ಆಗ ನಮ್ಮ ಕಾಲೇಜಿನಲ್ಲಿ ಅಧ್ಯಾಪಕರುಗಳು ಪ್ರತಿವರ್ಷ ನಿಗದಿತ ಸಮಯಕ್ಕೆ ಮುಂಚಿತವಾಗಿ ಫೆಬ್ರವರಿ ತಿಂಗಳ ಕೊನೆಯಲ್ಲೇ ಪಾಠಗಳನ್ನು ಮುಗಿಸಿ, ಮಾರ್ಚ್ ತಿಂಗಳನ್ನು ರಿವಿಜನ್ ಮಾಡಲು ಮೀಸಲಾಗಿಡುತ್ತಿದ್ದರು. ಈ ಸಮಯದಲ್ಲಿ ನನ್ನಂತಹ ಅರೆಪೋಲಿ ಹುಡುಗರಿಗೆ ಅರ್ಥವಾಗದ ಪಾಠ ಪುನಃ ಹೇಳಿಸಿಕೊಳ್ಳುವ ಅವಕಾಶವಿರುತ್ತಿತ್ತು. ನಾವು ಆಗಾಗ ಆಟದ ಪಂದ್ಯಗಳಿಗೋ ಅಥವಾ ಅಪರೂಪಕ್ಕೆ ಒಮ್ಮೆ ಮ್ಯಾಟಿನಿ ಸಿನೆಮಾ ನೋಡಲೋ ಹೋಗಿ, ಪಾಠಗಳಿಗೆ ಚಕ್ಕರ್ ಹೊಡೆಯುತ್ತಿದ್ದೆವು. ಈ ತಪ್ಪಿಹೋದ ಪಾಠಗಳನ್ನು ಈ ರಿವಿಜನ್ ದಿನಗಳಲ್ಲಿ ಸಂಬಂಧಿಸಿದ ಅಧ್ಯಾಪಕರ ಬಳಿ ಹೋಗಿ ಸ್ವಲ್ಪ ಬೈಸಿಕೊಂಡು ಕಲಿತುಕೊಳ್ಳುತ್ತಿದ್ದೆವು. ಅರ್ಥಾತ್, ಇನ್ನೊಮ್ಮೆ ಪಾಠ ಹೇಳಿಸಿಕೊಳ್ಳುತ್ತಿದ್ದೆವು. ಆಗ ಕಾಲೇಜುಗಳ ವಿದ್ಯಾರ್ಥಿಗಳಿಗೆ ಟ್ಯೂಶನ್ ಕ್ಲಾಸುಗಳನ್ನು ಯಾರೂ ನಡೆಸುತ್ತಿರಲಿಲ್ಲ. ನಮ್ಮ ಪ್ರಾಧ್ಯಾಪಕರುಗಳು ನಮ್ಮ ಬೇಜವಾಬ್ದಾರಿಯುತ ನಡವಳಿಕೆಗಳನ್ನು ಮೊದಲಿಗೆ ಖಂಡಿಸಿ ಸ್ವಲ್ಪ ಗದರಿದರೂ, ಆ ನಂತರ ನಮ್ಮ ಮೇಲೆ ಕರುಣೆ ತೋರಿ ಪಾಠ ಹೇಳುತ್ತಿದ್ದರು. ಈಗಿನಂತೆ ಹಣ ಪಡೆದು ಟ್ಯೂಶನ್ ಕೊಡುವ ಪಿಡುಗು ಆ ಕಾಲದಲ್ಲಿ ಇರಲಿಲ್ಲ.

ಪ್ರೀ ಯೂನಿವರ್ಸಿಟಿ ಕ್ಲಾಸಿನಲ್ಲಿ ಓದುತ್ತಿದ್ದಾಗ, ನಾನು ಮತ್ತು ಇನ್ನೂ ನಾಲ್ಕು ಜನ ಹುಡುಗರು ಕೊನೆಯ ಬೆಂಚಿನ ಮಹಾನುಭಾವರಾಗಿ ನಮ್ಮ ಕಾಲೇಜಿಗೆ ಕೀರ್ತಿ ತರುತ್ತಿದ್ದೆವು. ನಾವು ಆಗಾಗ ನಮ್ಮೂರ ಏಕೈಕ ಸಿನೆಮಾಮಂದಿರದಲ್ಲಿ ಬುಧವಾರದ ದಿನ ಮಾತ್ರ ಪ್ರದರ್ಶಿಸುತ್ತಿದ್ದ ಮ್ಯಾಟಿನಿ ಸಿನೆಮಾ ನೋಡುತ್ತಿದ್ದೆವು. ಅಂತರ ಕಾಲೇಜು ಕ್ರೀಡಾಕೂಟ ಮತ್ತು ಎನ್.ಸಿ.ಸಿ.(ನ್ಯಾಶನಲ್ ಕ್ಯಾಡೇಟ್ ಕೋರ್)ನ ಸಮಗ್ರ ಕಾರ್ಯಕ್ರಮಗಳು ಮೊದಲಾದ ಚಟುವಟಿಕೆಗಳಲ್ಲಿ ನಾವು ಸದಾ ಭಾಗಿಗಳು.

ಬೆಳಗ್ಗೆ ಎಂಟೂವರೆಗೇ ಕ್ಯಾಂಪಸ್ಸಿನಲ್ಲಿ ಹಾಜರಾಗಿ ಬೆಳಗಿನ ಕ್ಲಾಸು ಶುರುವಾಗುವ ತನಕ, ಅಂದರೆ ಒಂಬತ್ತೂವರೆಯ ತನಕ, ಕಾಲೇಜ್ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದೆವು. ಈ ಹೆಚ್ಚಿನ ದೈಹಿಕ ಚಟುವಟಿಕೆಯಿಂದಾಗಿ, ಬೆಳಗ್ಗೆ ಒಂಬತ್ತೂವರೆಗೆ ಕ್ಲಾಸುಗಳಿಗೆ ಬರುತ್ತಿದ್ದ ಇತರೇ ಸಾಧು ವಿಧ್ಯಾರ್ಥಿಗಳಿಗಿಂತ ನಮಗೆ ಹಸಿವೆಯ ಕಾಟ ಜಾಸ್ತಿ! ಮಧ್ಯಾಹ್ನ ಹನ್ನೊಂದೂವರೆಗೇ ನಮಗೆ ತಡೆಯಲಾರದ ಹಸಿವು ಆಗುತ್ತಿತ್ತು. ಬೆಳಗಿನ ಲಾಸ್ಟ್ ಪೀರಿಯಡ್ ಹನ್ನೊಂದೂವರೆಯಿಂದ ಹನ್ನೆರಡೂವರೆ ತನಕ ನಡೆಯುತ್ತಿದ್ದುವು. ನಮ್ಮ ಹೊಟ್ಟೆಯಲ್ಲಿ ಉರಿಯುತ್ತಿದ್ದ ವೈಶ್ವಾನರ ಎಂಬ ಜಠರಾಗ್ನಿಯ ಕಾಟತಾಳಲಾರದೇ, ನಾವು ಲಾಸ್ಟ್ ಪೀರಿಯಡ್‌ಗೆ ಹಾಜರಾಗದೇ ಮನೆಗೆ ಹೋಗಿ ನಮ್ಮ ತಾಯಂದಿರನ್ನು ಬೇಗನೇ ಊಟ ಬಡಿಸುವಂತೆ ಪೀಡಿಸುತ್ತಿದ್ದೆವು. ಇಂದು ಯಾಕೆ ಬೇಗ ಬಂದೆ? ಎಂದು ಕೇಳಿದರೆ ಇಂದು ಮೂರನೇ ಪೀರಿಯಡ್ಡಿನ  ಲೆಕ್ಚರರು ರಜಾ ಮಾಡಿದ್ದಾರಮ್ಮಾ! ಎಂದು ನಮ್ಮ ‘ರೆಡಿಮೇಡ್ ಉತ್ತರ ನೀಡುತ್ತಿದ್ದೆವು.

ಸದಾ ಹಸಿವು, ಹಸಿವು..! ಎಂದು ತಾಯಂದಿರನ್ನು ನಾವು ಪೀಡಿಸುತ್ತಿದ್ದರೂ, ಚೆನ್ನಾಗಿ ತಿನ್ನುವ ಮಕ್ಕಳಾದ ನಮ್ಮನ್ನು ಕಂಡರೆ ನಮ್ಮ ತಾಯಂದಿರಿಗೆ ಬಹು ಮಮತೆ. ಇಂದಿನ ಕಾಲದ ಸದಾ ಹೊಟ್ಟೆ ತುಂಬಿದ ಮಕ್ಕಳು ಏನು ತಿಂದಾರು? ಎಷ್ಟು ತಿಂದಾರು? ನಾನು ಪ್ರಮಾಣ ಮಾಡಿ ಹೇಳುತ್ತೇನೆ!-ಈಗಿನ ಕಾಲದ ದೈಹಿಕ ಚಟುವಟಿಕೆ ಇಲ್ಲದ ಯುವಜನರಿಗೆ ನಿಜವಾದ ಹಸಿವೆ ಎಂದರೆ ಏನೆಂದು ನಿಜವಾಗಿಯೂ ಗೊತ್ತಿಲ್ಲ..!. ಈಗಿನ ಯುವಜನರಲ್ಲಿ ಹೆಚ್ಚಿನವರು ಮೈ ಬೆವರದೇ, ದೇಹ ದಂಡಿಸದೇ ಇರುವ ವ್ಯಕ್ತಿಗಳು. ಸ್ಕೂಲ್ ಅಥವಾ ಕಾಲೇಜುಗಳಿಗೆ ಬರೇ ಒಂದು ಮೈಲಿ ದೂರ ಇದ್ದರೂ, ಅಷ್ಟು ದೂರವನ್ನು ನಡೆದುಹೋಗುವ ಜಾಯಮಾನ ಅವರದಲ್ಲ. ಅವರ ಮನೆಗಳಲ್ಲಿ ಅವರು ಮಾಡುವ ದೊಡ್ಡ ಕೆಲಸ ಎಂದರೆ ಟೀವಿ, ಡೀವಿಡಿ ಪ್ಲೇಯರ್‌ಗಳ ರಿಮೋಟ್ ತಿರುಗಿಸುವುದು. ತಮ್ಮ ಮನೆಯ ಪಕ್ಕದಲ್ಲಿನ ಅಂಗಡಿಗೆ ಹೋಗಿ ಬರಲೂ ಅವರಿಗೆ ವಾಹನ ಬೇಕು. ಇದು ಅವರ ತಪ್ಪಲ್ಲ. ಇದಕ್ಕೆ ಕಾರಣ, ಇಂದು ನಾವು ಅವರುಗಳನ್ನು ಬೆಳೆಸುತ್ತಿರುವ ರೀತಿ..! ಈ ವಿಚಾರ ಅಲ್ಲಿಗೇ ಬಿಟ್ಟು ಲೇಖನ ಬರೆದ ವಿಚಾರಕ್ಕೆ ಹಿಂದಿರುಗೋಣ.

ಹೀಗೆ, ಕಾಲೇಜಿನ ಪಠ್ಯವರ್ಷದ ಕೊನೆಯ ಕ್ಲಾಸುಗಳು ರಿವಿಜನ್‌ಗೆ ಮೀಸಲಾಗಿರುತ್ತಿದ್ದವು ಎಂದು ಆಗಲೇ ಹೇಳಿದೆನಲ್ಲವೆ? ಸಾಕಷ್ಟು ಓದಿನಲ್ಲಿ ಮುಂದಿದ್ದು ಸಾಕಷ್ಟು ಅಟೆಂಡೆನ್ಸ್ ಆಗಲೇ ಪಡೆದಿದ್ದ ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗದೇ, ಅವರವರ ಮನೆಗಳಲ್ಲಿ ಕುಳಿತು ಓದುತ್ತಿದ್ದರು. ಆಗಾಗ ಸ್ವಲ್ಪ ಕ್ಲಾಸುಗಳಿಗೆ ಚಕ್ಕರ್ ಹೊಡೆಯುತ್ತಿದ್ದ ವಿದ್ಯಾರ್ಥಿಗಳು ಕೊನೆಯ ಕ್ಷಣದಲ್ಲಿ ಹಾಜರಾತಿ ಭರಿಸಿ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಈ ಕೊನೆಕೊನೆಯ ಕ್ಲಾಸುಗಳಿಗೆ ತಪ್ಪದೇ ಹಾಜರಾಗುತ್ತಿದ್ದರು. ಈ ಗುಂಪಿನಲ್ಲಿ ನಾನು ಮತ್ತು ನನ್ನ ಆಪ್ತಮಿತ್ರರೂ ಸೇರಿದ್ದೆವು.

ಆಗ ನಮ್ಮ ಕಾಲೇಜಿನಲ್ಲಿ ಈಗಿನ ದಿನಗಳಲ್ಲಿ ಆಚರಿಸಲ್ಪಡುವ ಎತ್ನಿಕ್ ಡೇ ಯ ಆಚರಣೆ ಇರಲಿಲ್ಲ. ಆದರೂ, ಅತಿ ಉತ್ಸಾಹದ ಹುಡುಗಣ್ಣಗಳಾದ ನಾವು ವರ್ಷದ ಕೊನೆಯ ತಿಂಗಳಿನಲ್ಲಿ ಸಾಮೂಹಿಕವಾಗಿ ಬೇರೆ ರೀತಿಯ ಧಿರಿಸು ಧರಿಸಿ ಕ್ಲಾಸಿಗೆ ಬರುವ ಪರಿಪಾಠ ಶುರುಮಾಡಿದ್ದೆವು. ಎಲ್ಲರೂ ಒಂದೇ ಬಣ್ಣದ ಯೂನಿಫಾರಂ ಹೊಲಿಸಿಕೊಂಡು ಧರಿಸುವಷ್ಟರ ಮಟ್ಟಿಗೆ, ನಮ್ಮೆಲ್ಲರ ಆರ್ಥಿಕ ಪರಿಸ್ಥಿತಿಯು ಅನುಕೂಲಕರ ಆಗಿರಲಿಲ್ಲ. ಆದ್ದರಿಂದ, ವರುಷದ ಕೊನೆಯ ತಿಂಗಳಿನಲ್ಲಿ ನಮ್ಮ ಊರಿನ ಜನಸಾಮಾನ್ಯರು ಧರಿಸುವ ಉಡುಪಾದ ಧೋತಿ ಮತ್ತು ಬಿಳಿಯ ಶರಟು ಧರಿಸಿ ಕಾಲೇಜಿಗೆ ಹಾಜರಾಗುವುದು ನಮಗೆ ಕಷ್ಟದ ವಿಚಾರವಾಗಿರಲಿಲ್ಲ. ಹಾಗಾಗಿ ಈ ಕೊನೆಯ ತಿಂಗಳುಗಳಲ್ಲಿನ ಒಂದುದಿನ ನಾವೆಲ್ಲಾ ಹುಡುಗರು ಧೋತಿ ಶರಟು ಧರಿಸಿ ಕ್ಲಾಸಿಗೆ ಹಾಜರಾಗುವುದೆಂದು ತೀರ್ಮಾನ ಮಾಡಿದೆವು. ಪುಣ್ಯಕ್ಕೆ ನಮ್ಮ ಪಿ.ಯೂ.ಸಿ ಕ್ಲಾಸಿನ ಪಿ.ಸಿ.ಎಮ್ ವಿಭಾಗದ ಬಿ ಡಿವಿಜನ್‌ನಲ್ಲಿ ನಾವೆಲ್ಲರೂ ಹುಡುಗರೇ ಇದ್ದೆವು. ನಮ್ಮ ಕ್ಲಾಸಿನಲ್ಲಿ ಮಾತ್ರ ಯಾಕೋ ಹುಡುಗಿಯರೇ ಇರಲಿಲ್ಲ. ಹೀಗಾಗಿ, ಇಡೀ ಕಾಲೇಜಿನಲ್ಲಿ ಏಕೈಕ ಗಂಡು ಬೀಡು ಎನಿಸಿದ ನಮ್ಮ ಕ್ಲಾಸಿನ ಹುಡುಗರ ಪ್ರತಾಪ, ಕಿತಾಪತಿ ಮತ್ತು ತಂಟೆ ಸ್ವಲ್ಪ ಹೆಚ್ಚೇ ಆಗಿತ್ತು ಎಂದು ಇಂದಿಗೂ ಒಪ್ಪುತ್ತೇನೆ.

ಒಂದು ಸೋಮವಾರ ನಾವೆಲ್ಲಾ ಧೋತಿ ಮತ್ತು ಬಿಳಿಯ ಶರಟು ಧರಿಸಿಕೊಂಡು ಕ್ಲಾಸಿಗೆ ಹಾಜರಾಗಬೇಕು ಎಂದು ನಿಶ್ಚಯವಾಯಿತು. ಇದಕ್ಕೆ ಕಾರಣ, ಬಿಳಿಯ ಶರಟು ಮತ್ತು ಬಿಳಿಯ ಪಂಚೆ ಹೊಂದಿಸಿಕೊಳ್ಳುವುದು ಬಹುಸುಲಭ.  ನಮ್ಮೆಲ್ಲರ ಮನೆಗಳಲ್ಲಿ ಯಾರಾದರೊಬ್ಬರು ನಮ್ಮ ದಕ್ಷಿಣಕನ್ನಡ ಜಿಲ್ಲೆಯ ಸಾಂಪ್ರದಾಯಿಕ ದಿರುಸಾದ ಬಿಳಿಯ ಶರಟು ಮತ್ತು ಪಂಚೆ ಧರಿಸಿಯೇ ಧರಿಸುತ್ತಿದ್ದರು. ನನ್ನೊಡನೆ ಬಿಳಿಯ ಶರ್ಟ್ ಇತ್ತು. ಅತ್ತಿಗೆಯನ್ನು ಕೇಳಿ ದೊಡ್ಡ ಅಣ್ಣನ ಬಿಳಿಯ ಪಂಚೆ ಹೊಂದಿಸಿಕೊಂಡೆ.

ಸರಿ, ಸೋಮವಾರ ಬೆಳಿಗ್ಗೆ ಎಂಟೂ ಮೂವತ್ತಕ್ಕೆ ಸರಿಯಾಗಿ ಅಣ್ಣನ ವೇಸ್ಟಿಯನ್ನು ಡಬಲ್‌ಫೋಲ್ಡ್ ಮಾಡಿ ಅಡ್ಡಪಂಚೆಯಂತೆ ಉಟ್ಟುಕೊಂಡೆ. ಮೇಲಕ್ಕೆ ಇಸ್ತ್ರಿಮಾಡಿದ ಶರ್ಟ್ ಧರಿಸಿ ನಮ್ಮ ಅತ್ತಿಗೆಯವರ ಹತ್ತಿರ ಅತ್ತಿಗೇ, ನನ್ನ ದಿರುಸು ಸರಿಯಾಯಿತೇ? ನನಗೆ ಈ ವೇಷ ಒಪ್ಪುತ್ತದೆಯೇ? ಎಂದು ಕೇಳಿದೆ.

ಅತ್ತಿಗೆಯಮ್ಮ ನಿನಗೆ ಚೆನ್ನಾಗಿ ಕಾಣುತ್ತೆ. ಆದರೆ, ನೀನು ಸ್ವಲ್ಪ ಎತ್ತರಕ್ಕೆ ಬೆಳೆದ ಮೇಲೆ ಇನ್ನೂ ಚೆನ್ನಾಗಿ ಕಂಡೀತು! ಈ ದಿನ ಸೈಕಲ್ ಮೇಲೆಯೇ ಕಾಲೇಜಿಗೆ ಹೊರಟಿಯಾ? ಪಂಚೆ ಜೋಪಾನ. ಬಿಚ್ಚಿಹೋಗಬಾರದು, ನಡೆಯುವಾಗ ಪಂಚೆ ತೊಡರಿ ಬೀಳಬೇಡ.  ಡ್ರೈವರ್ ಬಾಬುವನ್ನು ಕರಿ. ಅವನ ಜೊತೆಗೆ ಕಾರಿನಲ್ಲೇ ಕಾಲೇಜಿಗೆ ಹೋಗಿ ಬಾ ಎಂದರು. ನನಗೆ ನನ್ನ ಕ್ಲಾಸಿನ ಹುಡುಗರ ಜತೆಗೆ ಸೈಕಲ್ ಏರಿ ಕಾಲೇಜಿಗೆ ಹೋಗಿ ಈ ಪಂಚೆ ದಿರುಸಿನಲ್ಲಿ ಮೆರೆದಾಡಿ ಸಂಜೆ ತಡವಾಗಿ ಬರಬೇಕು ಎಂಬ ಆಶಯ! ಅತ್ತಿಗೇ, ಪಂಚೆ ಸರಿಯಾಗಿಯೇ ಕಟ್ಟಿಕೊಂಡಿದ್ದೇನೆ. ನಾನು ಸ್ವಲ್ಪ ಎತ್ತರ ಬೆಳೆದ ಮೇಲೆ ನಾನು ಈ ದಿರುಸನ್ನೇ ಆಗಾಗ ಉಡಬೇಕಾಗುತ್ತಲ್ಲವೇ? ಅದ್ದರಿಂದ ಆ ಅಭ್ಯಾಸವನ್ನು ಇಂದಿನಿಂದಲೇ ಶುರುಮಾಡುತ್ತೇನೆ. ಈ ದಿನ ಸೈಕಲ್ ಏರಿಯೇ ಕಾಲೇಜಿಗೆ ಹೋಗುತ್ತೇನೆ! ಎಂದೆ.

ಆದರೂ, ಅತ್ತಿಗೆ ಪಂಚೆ ಜಾಗ್ರತೆ ಮಾರಾಯ! ಅದು ನಿನ್ನ ಸೊಂಟದಲ್ಲೇ ಇರಲಿ! ಎಂದು ನಗುತ್ತಾ ಅಡುಗೆ ಮನೆಯ ಕಡೆಗೆ ಹೋದರು.

ಆಗ ನನ್ನ ಎತ್ತರ ಹೆಚ್ಚೆಂದರೆ ಐದು ಅಡಿ ಇದ್ದಿರಬಹುದು. ಹದಿನಾರರ ಪ್ರಾಯ ತುಂಬುವವರೆಗೂ ನಾನು ಎತ್ತರ ಬೆಳೆದಿರಲೇ ಇಲ್ಲ. ಪಂಚೆಯನ್ನು ಭಧ್ರವಾಗಿ ಸುತ್ತಿಕೊಂಡು ಸೈಕಲ್ ಏರಲು ಪ್ರಯತ್ನಿಸಿದಾಗ ಪಂಚೆ ಅಡ್ಡ ಬಂತು. ಪಂಚೆ ಉಟ್ಟುಕೊಂಡಾಗ ಕಾಲನ್ನು ಸೈಕಲ್ಲಿನ ರೋಲ್ ಮೇಲೆ ದಾಟಿಸಿ ಹತ್ತಬೇಕು ಎಂದು ನೆನಪಿಸಿಕೊಳ್ಳುತ್ತಾ ಹಾಗೆಯೇ ಸೈಕಲ್ ಹತ್ತಿ ಕಾಲೇಜಿಗೆ ಹೊರಟೆ. ಯಾಕೋ ಆ ದಿನ ಸ್ವಲ್ಪ ತಡವಾಗಿಯೇ ಕಾಲೇಜಿಗೆ ಹೊರಟಿದ್ದರಿಂದ ಗೆಳೆಯರಾರೂ ದಾರಿಯಲ್ಲಿ ಸಿಗಲಿಲ್ಲ. ಪಂಚೆಯ ಕಡೆಗೆ ನೋಡಿಕೊಂಡೆ. ಪಂಚೆ ಭದ್ರವಾಗಿ ನನ್ನ ಎರಡೂ ಕಾಲುಗಳನ್ನು ಮುಚ್ಚಿತ್ತು. ಆರಾಮವಾಗಿ ಸೈಕಲ್ ತುಳಿಯುತ್ತಾ ಸಾಗಿದೆ. ಮನೆಯಿಂದ ಕಾಲೇಜಿಗೆ ಎರಡು ಮೈಲು ದೂರ ಇತ್ತು. ಕಾಲೇಜಿಗೆ ಎರಡು ಫರ್ಲಾಂಗ್ ದೂರ ಇದೆ ಎನ್ನುವಾಗ ಪುನಹಾ ಪಂಚೆಯ ಕಡೆಗೆ ದೃಷ್ಟಿ ಹಾಯಿಸಿದೆ. ಅಣ್ಣನ ಅತಿಬಿಳುಪಾದ ಫಿನ್ಲೇ ಮಿಲ್ಲಿನ ಪಂಚೆ ನನ್ನ ಕಾಲುಗಳನ್ನು ಭದ್ರವಾಗಿ ಮುಚ್ಚಿತ್ತು.

ಕಾಲೇಜಿನ ಕಡೆಗೆ ಹೊಸ ಹುರುಪಿನಿಂದ ಸೈಕಲ್ ಹೊಡೆಯತೊಡಗಿದೆ. ದಾರಿಯಲ್ಲಿ ವಿದ್ಯಾರ್ಥಿಗಳು ಕಾಲೇಜು ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಅಲ್ಲಲ್ಲಿ ಪರಿಚಯದ ಹುಡುಗರು ನನ್ನನ್ನು ಕೊಂಡೊಡನೆ ನಗುತ್ತಾ ಹೋ…! ಪಂಚೆ….!ಎಂದು ಕೂಗಾಡಹತ್ತಿದರು. ನಾನು ಬಹಳ ಅಪರೂಪಕ್ಕೆ ಪಂಚೆ ಉಟ್ಟಿದುದಕ್ಕೆ ಈ ಹುಡುಗರು ಛೇಡಿಸುತ್ತಿದ್ದಾರೆ! ಎಂದುಕೊಳ್ಳುತ್ತಾ ಅವರತ್ತ ಕೈ ಬೀಸುತ್ತಾ ಜೋರಾಗಿ ಸೈಕಲ್ ತುಳಿಯಹತ್ತಿದೆ. ದಾರಿಯಲ್ಲಿ ಎಂದಿನಂತೆ ಗುಂಪು ಕಟ್ಟಿಕೊಂಡು ಕಾಲೇಜಿಗೆ ನಡೆಯುತ್ತಿದ್ದ ಲಲನಾಮಣಿಗಳು ಕೂಡ ನನ್ನತ್ತ ನೋಡಿ ಕಿಸಿಕ್ಕನೆ ನಗುತ್ತಿರುವುದು ನನ್ನ ಗಮನಕ್ಕೆ ಬಂತು. ಓಹೋ…! ಈ ಹುಡುಗಿಯರು ಕೂಡಾ ನನ್ನ ಅಪರೂಪದ ಡ್ರೆಸ್ ನೋಡಿ ನಗುತ್ತಿದ್ದಾರೆ! ಎಂದುಕೊಳ್ಳುತ್ತಾ ಸೈಕಲ್ಲಿನ ಸ್ಪೀಡ್ ಸ್ವಲ್ಪ ಕಡಿಮೆಮಾಡಿ, ಪ್ರಸನ್ನವದನನಾಗಿ ಮುಗುಳ್ನಗೆ ಬೀರುತ್ತಾ, ಕಾಲೇಜಿನ ಕಡೆಗೆ ಸೈಕಲ್ ಓಡಿಸತೊಡಗಿದೆ.

ಕಾಲೇಜಿನ ಕ್ಯಾಂಪಸ್ಸಿನಲ್ಲಿ ನಾನು ಸೈಕಲ್ ಓಡಿಸುತ್ತಿದ್ದಾಗ ಅಲ್ಲಿ ಓಡಾಡುತ್ತಿದ್ದ ಎಲ್ಲಾ ಹುಡುಗಿಯರೂ ನನ್ನತ್ತ ನೋಡಿ ನಗುತ್ತಿರುವುದು ನನ್ನ ಗಮನಕ್ಕೆ ಬಂತು! ಪಂಚೆ ಉಟ್ಟ ನನ್ನನ್ನು ಕಂಡು ಇಂದು ಇವರೆಲ್ಲಾ ನನ್ನ ಕಡೆಗೆ ನಗು ಬೀರುತ್ತಿದ್ದಾರೆ! ಎಂದು ಸ್ವಲ್ಪ ಹೆಮ್ಮೆ ಕೂಡಾ ಪಟ್ಟೆ.

ದಿನಾಲೂ ಹೀಗೆ ಪಂಚೆ ಉಟ್ಟು ಕಾಲೇಜಿಗೆ ಬಂದರೆ ಕಾಲೇಜಿನ ಹುಡುಗಿಯರೆಲ್ಲಾ ನನಗೆ ಇದೇ ರೀತಿಯ ನಗುಮೊಗದ ಸ್ವಾಗತ ನೀಡುತ್ತಾರೆ! ಹೇಗಾದರೂ ಅತ್ತಿಗೆಯವರನ್ನು ಪೀಡಿಸಿ ಅಣ್ಣನ ಇನ್ನೊಂದೆರಡು ಪಂಚೆ ಗಿಟ್ಟಿಸಿಕೊಳ್ಳಬೇಕು….! ಎಂದು ಮನದಲ್ಲೇ ಲೆಕ್ಕಾಚಾರ ಹಾಕುತ್ತಾ, ಸೈಕಲ್‌ಸ್ಟ್ಯಾಂಡಿನ ಬಳಿ ಸೈಕಲಿನಿಂದ ಇಳಿಯುವಾಗ ನೆನಪಿನಿಂದ ‘ಬಲಕಾಲನ್ನು ಸೀಟಿನ ಮುಂದಿನಿಂದಲೇ ಹಾಯಿಸಿ ಕೆಳಕ್ಕಿಳಿದೆ.

ನಾನೇನೋ ಸರಾಗವಾಗಿ ಸೈಕಲಿನಿಂದ ಕೆಳಗೆ ಇಳಿದೆ…!, ಆದರೆ, ನನ್ನ ಪಂಚೆ ಮಾತ್ರ ಸೈಕಲಿನ ಸೀಟಿನ ಮೇಲೆಯೇ ಉಳಿದಿತ್ತು…..!! ನಾನು ಬರುತ್ತಿರುವಾಗ ದಾರಿಯಲ್ಲೆಲ್ಲೋ ಸೊಂಟಕ್ಕೆ ಸುತ್ತಿದ್ದ ಪಂಚೆಯು ಸಡಿಲವಾಗಿ, ಹಿಂದಿನಿಂದ ಜಾರಿ ಸೈಕಲ್ ಕ್ಯಾರಿಯರ್ ಮೇಲೆ ವಿಶ್ರಮಿಸಿತ್ತು…! ಮುಂದಿನ ಭಾಗ ಮಾತ್ರ ಸರಿಯಾಗಿ ನನ್ನ ಕಾಲುಗಳನ್ನು ಮುಚ್ಚಿತ್ತು. ಮುಂದಿನಿಂದ ಪಂಚೆ ಉಟ್ಟವನಂತೆ ಕಂಡರೂ, ಹಿಂದಿನಿಂದ ಬರುತ್ತಿರುವವರಿಗೆ ನನ್ನ ಅಂಡರ್ ವೇರ್ ಕಾಣುತ್ತಿತ್ತು.

ಆ ದಿನ ಬೆಳಗ್ಗೆ ನನಗೆ ಒದಗಿ ಬಂದ ಪಾಪುಲ್ಯಾರಿಟಿಯ ಗುಟ್ಟು ಮನವರಿಕೆ ಆಯಿತು! ಒಳ್ಳೆಯ ಸ್ಯಾಮ್‌ಸನ್ ಕಂಪನಿಯ ಅರ್ಧ ಚಡ್ಡಿಯಂತಹಾ ಬಿಳಿಯ ಬಣ್ಣದ ಅಂಡರ್‌ವೇರ್ ನನ್ನ ಮಾನ ಕಾಪಾಡಿತ್ತು! ಅಂತೂ, ಅಂದಿನ ಎತ್ನಿಕ್ ಡೇ ಕಾರ್ಯಕ್ರಮ ನಡೆದೇ ಬಿಟ್ಟಿತು. ಕೆಲವು ಹುಡುಗರು ನನ್ನನ್ನು ನೇರ ಗೇಲಿಮಾಡಿ ನಕ್ಕರು. ಕೆಲವು ಹುಡುಗಿಯರು ನನ್ನನ್ನು ಕಂಡ ಕೂಡಲೇ ಮುಸಿಮುಸಿ ನಕ್ಕರು. ತದನಂತರ, ಬಹಳ ದಿವಸದವರೆಗೂ, ನನ್ನನ್ನು ಕಂಡಾಗ ನಗುತ್ತಿದ್ದರು. ನಾನು ಮಾತ್ರ ಏನೂ ಅರಿಯದ ರೀತಿ ಸೋಗುಹಾಕಿ ಬಚಾವ್ ಆದೆ.

ಈ ಪ್ರಕರಣದ ನಂತರ ನನಗೆ ಪಂಚೆ ಉಡಲು ಭಯ! ಅದೆಲ್ಲಿ ಸೊಂಟದಿಂದ ಜಾರಿಹೋಗುತ್ತೋ? ಎಂದು ಭಯ ಪಡುತ್ತಾ, ಅದನ್ನು ಯಾವುದಾದರೂ ಸಮಾರಂಭದಲ್ಲಿ ಉಡಲೇ ಬೇಕಾದಾಗ, ಅದರ ಮೇಲೆ ಒಂದು ಬೆಲ್ಟ್ ಬಿಗಿದು, ಧರಿಸುತ್ತೇನೆ. ಪದೇ ಪದೇ, ಅದು ಜಾರಿಲ್ಲವಲ್ಲಾ? ಎಂದು ಖಾತ್ರಿ ಪಡಿಸಿಕೊಳ್ಳುತ್ತೇನೆ.

* * *