ಈ ಪೆಜತ್ತಾಯನು ಯಾಕೆ ಒಂದು ಚೂರು ಬೇಗಡೆಯ ಕಾಗದಕ್ಕೆ ಪರದಾಡುತ್ತಾ ಇದ್ದಾನೆ? ಎಂತ ಅನ್ನಿಸಬಹುದು ನಿಮಗೆ. ಈಗ ಕೇಳಿ ಒಂದು ಚೂರು ಬ್ಯಾಗಡೆಯ ಕಾಗದಕ್ಕಾಗಿ ನಾನು ಪಟ್ಟ ಪರದಾಟದ ಪ್ರಸಂಗ….!

೧೯೬೧-೬೨ನೇ ಇಸವಿ. ಆಗ ನಾನು ಉಡುಪಿಯಲ್ಲಿ ಪ್ರೀ ಯೂನಿವರ್ಸಿಟಿ ಕ್ಲಾಸಿನಲ್ಲಿ ಓದುತ್ತಿದ್ದೆ. ಉಡುಪಿಯಲ್ಲಿ ನನ್ನ ದೊಡ್ಡ ಅಣ್ಣ ಶ್ರೀ ದೇವೇಂದ್ರ ಪೆಜತ್ತಾಯರು ಕಲ್ಪನಾ ಎಂಬ ಪ್ರಸಿದ್ಧ ಉಪಹಾರ ಗೃಹವನ್ನು ನಡೆಸುತ್ತಿದ್ದರು. ಆಗ ನಮ್ಮ ಮನೆಯಲ್ಲಿ ಎರಡು ಕಾರುಗಳಿದ್ದವು. ಬಾಬು ಎಂಬ ಒಬ್ಬ ಡ್ರೈವರನಿದ್ದ. ಒಂದು ಆಸ್ಟಿನ್-೧೦ ಎಂಬ ಇಂಗ್ಲಿಷ್ ಕಾರು, ಮತ್ತೊಂದು ಹೊಸ ಹಿಂದುಸ್ಥಾನ್ ಅಂಬಾಸೆಡರ್-೧೯೬೦. ಆಸ್ಟಿನ್ ಕಾರು ಕಪ್ಪು ಬಣ್ಣದ್ದು. ಅಂಬಾಸೆಡರ್ ಕಾರು ಕಡು ನೀಲಿ ಬಣ್ಣದ್ದು. ಅದು ಆಗಿನ ಲೇಟೆಸ್ಟ್ ಕಾರು. ಅದಕ್ಕೆ ಓವರ್ ಹೆಡ್ ವಾಲ್ವ್ ಅಳವಡಿಸಿದ ಎಂಜಿನ್ ಇತ್ತು. ಅದಕ್ಕಿಂತ ಹಿಂದಿನ ಮಾಡೆಲ್ಲಿನ ಅಂಬಾಸೆಡರ್ ಕಾರುಗಳಿಗೆಲ್ಲಾ ಸೈಡ್ ವಾಲ್ವ್ ಎಂಜಿನ್ಗಳೇ ಇರುತ್ತಿದ್ದುವು.

ಅಣ್ಣನ ಆಣತಿಯ ಮೇರೆಗೆ, ನನಗೆ ಆಗಾಗ ಆಸ್ಟಿನ್ ಕಾರು, ಡ್ರೈವಿಂಗ್ ಕಲಿಯುವ ಸಲುವಾಗಿ ಸಿಗುತ್ತಿತ್ತು. ಡ್ರೈವರ್ ಬಾಬು ನನಗೆ ಎಲ್ಲಾದರೂ ಊರ ಹೊರಗಿನ ಮೈದಾನದಲ್ಲಿ ಕಾರು ಚಲಾಯಿಸಲು ಹೇಳಿಕೊಡುತ್ತಿದ್ದ. ಹದಿನೆಂಟು ವರ್ಷ ಪೂರ್ತಿಯಾಗದೇ ಪಬ್ಲಿಕ್‌ರಸ್ತೆಯಲ್ಲಿ ಕಾರು ಓಡಿಸಿದರೆ, ಈಗಿನಂತೆ, ಆಗ ಕೂಡಾ ಅದು ಅಪರಾಧ ಎನ್ನಿಸಿಕೊಳ್ಳುತ್ತಿತ್ತು. ಬರೇ ಹದಿನಾರು ವರ್ಷ ಮತ್ತು ಕೇವಲ ಐದು ಅಡಿ ಎತ್ತರದ ವಾಮನಮೂರ್ತಿಯಾದ ನನಗೆ ನಮ್ಮ ಮನೆಯಲ್ಲಿದ್ದ ಹೊಸ ಅಂಬಾಸೆಡರ್ ಕಾರು ಓಡಿಸಲು ಪರ್ಮಿಶನ್ ಸರ್ವಥಾ ಇರಲಿಲ್ಲ. ನಮ್ಮ ಡ್ರೈವರ್ ಬಾಬು ಇಲ್ಲದ ದಿನಗಳಲ್ಲಿ, ಅಂಬಾಸೆಡರ್ ಕಾರಿನ ಚಾವಿಯನ್ನು ಕಾರು ತೊಳೆಯುವ ನೆವದಲ್ಲಿ ಕೇಳಿ ತೆಗೆದುಕೊಂಡು, ಆ ಕಾರನ್ನು ಶೆಡ್ಡಿನಿಂದ ಈಚೆಗೆ ತಂದು, ತೊಳೆದು ನಮ್ಮ ಮನೆಯ ದೊಡ್ಡದಾದ ಕಂಪೌಂಡಿನೊಳಗೆ ನಿಧಾನವಾಗಿ ಹಿಂದೆಮುಂದೆ ಓಡಾಡಿಸಿ ತೃಪ್ತಿಪಡುತ್ತಿದ್ದೆ.

ಆಗ ಪೆಟ್ರೋಲ್ ಬಗ್ಗೆ ಯಾರೂ ಜಾಸ್ತಿ ಚಿಂತೆ ಪಡುತ್ತಿರಲಿಲ್ಲ. ಯಾಕೆಂದರೆ ಪೆಟ್ರೋಲ್ ದರ ಹಾಗಿತ್ತು! ಒಂದು ಲೀಟರ್ ಪೆಟ್ರೋಲಿಗೆ ಕೇವಲ ಅರವತ್ತು ಪೈಸೆ! ಡೀಸೆಲ್ ಒಂದು ಲೀಟರಿಗೆ ಮೂವತ್ತೆಂಟು ಪೈಸೆ ಎಂಬ ನೆನಪು. ನಮ್ಮ ಕೈಯಲ್ಲಿಯ ಪಾಕೆಟ್ ಮನಿ ಹನ್ನೆರಡು ರೂಪಾಯಿಯಷ್ಟು ಒಟ್ಟಾದಾಗ, ನಮ್ಮ ಅತ್ತಿಗೆ ಮತ್ತು ಅಕ್ಕನನ್ನು ಪುಸಲಾಯಿಸಿ,  ಮೂವತ್ತಾರು ಮೈಲು (೫೮ ಕಿ.ಮೀ.) ದೂರದ ಮಂಗಳೂರಿಗೆ ನಾವೆಲ್ಲಾ ಸಿನೆಮಾ ಅಥವಾ ಸರ್ಕಸ್ ನೋಡಲು ಹೊರಡುತ್ತಿದ್ದೆವು. ನಮ್ಮ ತಾಯಿ ಹೆಚ್ಚಾಗಿ ನಮ್ಮ ಜೊತೆಗೆ ಬರುತ್ತಿರಲಿಲ್ಲ. ದೊಡ್ಡ ಅಣ್ಣ ಕಾರ್ಯ ಬಾಹುಳ್ಯದಿಂದ ಬಿಡುವಿಲ್ಲ! ಎನ್ನುತ್ತಾ ಉಡುಪಿಯಲ್ಲೇ ಉಳಿಯುತ್ತಿದ್ದರು. ನನ್ನ ಇನ್ನೊಬ್ಬ ಅಣ್ಣ ನರಹರಿ ಆಗ ಫೈನಲ್ ಬಿ.ಏ. ಓದುತ್ತಿದ್ದ. ಆತ ಡ್ರೈವಿಂಗ್ ಲೈಸನ್ಸ್ ಹೊಂದಿದ್ದ. ನನ್ನ ಓರಗೆಯ ಅಣ್ಣ ಬಾಲಕೃಷ್ಣ ಮತ್ತು ಅಕ್ಕ ಶಶಿಕಲಾ ಮತ್ತು ನಮ್ಮೆಲ್ಲರ ಪ್ರೀತಿಯ ದೊಡ್ಡ ಅತ್ತಿಗೆಯವರಾದ ರತ್ನಾ ದೇವೇಂದ್ರ ಪೆಜತ್ತಾಯ ಇಷ್ಟು ಜನ ಮಾತ್ರ ಈ ಅಪರೂಪದ ಮಂಗಳೂರು ಯಾತ್ರೆಗೆ ಹೊರಡುತ್ತಿದ್ದೆವು. ಹನ್ನೆರಡು ರೂಪಾಯಿಯ ಪೆಟ್ರೋಲ್ ನಮ್ಮದಾದರೆ, ಅತ್ತಿಗೆಯವರದು ಸಿನೆಮಾ ಮತ್ತು ಕಾಫಿತಿಂಡಿ ಖರ್ಚು!  ಎಂತಹಾ ಮಜವಾದ ದಿನಗಳು ಅವು!

ಮಧ್ಯಾಹ್ನ ಹನ್ನೆರಡೂವರೆಗೆ ಹೊರಟು ಮಂಗಳೂರು ತಲುಪಿ, ಮ್ಯಾಟಿನೀಶೋ ನೋಡುತ್ತಿದ್ದೆವು. ಆನಂತರ ಮಂಗಳೂರಿನ ಪ್ರಸಿದ್ಧ ಉಪಹಾರ ಗೃಹಗಳಾದ ಕೋಮಲಾ, ವುಡ್‌ಲ್ಯಾಂಡ್ಸ್ ಅಥವಾ ಮೋಹಿನಿ ವಿಲಾಸ ಇವುಗಳಲ್ಲಿ ಒಂದನ್ನು ಹೊಕ್ಕು ಹೊಟ್ಟೆ ತುಂಬಾ ತಿಂಡಿ ಮತ್ತು ಐಸ್‌ಕ್ರೀಮ್ ಮೆಲ್ಲುತ್ತಿದ್ದೆವು. ಸಾಯಂಕಾಲ ಏಳೂವರೆಗೆಲ್ಲಾ ಉಡುಪಿಗೆ ವಾಪಾಸ್ ಬರುತ್ತಿದ್ದೆವು.

ನಮ್ಮ ಅಂಬಾಸೆಡರ್ ಹೊಸ ಕಾರು ಮತ್ತು ಬೆಲೆ ಬಾಳುವ ಕಾರು ಎಂದು ಅದನ್ನು ಎಲ್ಲರೂ ಬಹಳ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದೆವು. ಆ ಹೊಸ ಕಾರಿಗೆ ೧೯೬೧ನೇ ಇಸವಿಯಲ್ಲಿ ನಮ್ಮ ಅಣ್ಣ ಹನ್ನೆರಡು ಸಾವಿರದ ಎಂಟು ನೂರು ಕೊಟ್ಟು, ಕೊಂಡ ನೆನಪು. ಆ ಕಾರು ಕೊಂಡಾಗ ಹಿಂದುಸ್ಥಾನ್ ಮೋಟರ್ ಕಂಪೆನಿಯವರು ಡ್ರೈವರ್ ಬಾಬುವಿಗೆ ನೂರು ರೂಪಾಯಿಯ ಇನಾಮು ಕೊಟ್ಟಿದ್ದರು..!! ಈ ಪದ್ಧತಿಯನ್ನು ಈಗ ಎಲ್ಲಾ ಕಾರುಗಳ ಕಂಪೆನಿಯವರು ಕೈಬಿಟ್ಟಿರುತ್ತಾರೆ.

ಆ ಕಾರನ್ನು ನನಗೆ ಪ್ರಾಯವಾಗಿಲ್ಲ ಮತ್ತು ನಾನು ಕುಳ್ಳ ಎಂಬ ಕಾರಣಕ್ಕೆ ಎಂದೂ ಡ್ರೈವ್ ಮಾಡಲು ಕೊಡುತ್ತಿರಲಿಲ್ಲ. ಅದರ ಕೈಕೀಲಿಯನ್ನು ಯಾವಾಗಲೂ ಮನೆಯ ಮಧ್ಯದ ಹಾಲಿನಲ್ಲಿದ್ದ ದೊಡ್ಡ ರೇಡಿಯೋ ಸ್ಟಾಂಡಿನ ಕೆಳಗಿದ್ದ ಕೊಂಡಿಗೆ ಸಿಕ್ಕಿಸಿ ಜೋಪಾನವಾಗಿ ಇಡುತ್ತಿದ್ದರು. ನನಗೋ, ಆ ಕಾರನ್ನು ಓಡಿಸಲೇಬೇಕೆಂಬ ಹಂಬಲ!

ನಾನು ಒಂದು ದಿನ ನಮ್ಮ ಮೆಕ್ಯಾನಿಕ್ ವಿನ್ಸೆಂಟ್ ಹತ್ತಿರ ನೀನು ಹೇಗೆ ಅಂಬಾಸೆಡರ್ ಕಾರಿನ ಕೀಲಿ ಇಲ್ಲದೇ ಕಾರು ಸ್ಟಾರ್ಟ್ ಮಾಡುತ್ತೀ? ಎಂದು ಆಸಕ್ತಿ ಇಲ್ಲದವನಂತೆಯೇ ಕೇಳಿದೆ. ಆತ ನನಗೆ ‘ಕೀ ಇಲ್ಲದೇ ಅಂಬಾಸೆಡರ್ ಕಾರು ಸ್ಟಾರ್ಟ್ ಮಾಡುವ ವಿಧಾನ ಹೇಳಿಕೊಟ್ಟ. ಕಾರಿನ ಬಾನೆಟ್ ಎತ್ತಿ ಕಾರಿನ ಮೈನ್ ಫ್ಯೂಜ್ಗಳ ಮಧ್ಯೆ ಸಂಪರ್ಕ ಮಾಡಬೇಕು. ಇದನ್ನು ಚಿಕ್ಕ ವಯರ್ ತುಂಡು ಬಳಸಿ ಕೂಡಾ ಮಾಡಬಹುದು. ಆದರೆ, ಸಿಗರೇಟ್ ಪ್ಯಾಕೆಟ್ ಒಳಗೆ ಇರುವ ಅಲ್ಯೂಮಿನಿಯಮ್ ಬ್ಯಾಗಡೆ ಕಾಗದ ಬಳಸಿದರೆ ಈ ಕಾರ್ಯ ಬಹಳ ಸುಲಭ!! ಎಂದು ಆತ ತೋರಿಸಿ ಕೊಟ್ಟಿದ್ದ. ವಿಧಾನ ಈ ರೀತಿ ಇದೆ. ಖಾಲಿ ಸಿಗರೇಟ್ ಪ್ಯಾಕೆಟ್‌ನಿಂದ ಬ್ಯಾಗಡೆಯುಳ್ಳ ಪದರ ತೆಗೆದುಕೊಳ್ಳಬೇಕು. ಅದರ ಹಿಂಬದಿಯ ಬಿಳಿಯ ಟಿಷ್ಯೂ ಕಾಗದದಿಂದ ಬ್ಯಾಗಡೆಯನ್ನು ಬೇರ್ಪಡಿಸಬೇಕು. ಈ ತರಹ ಬೇರ್ಪಡಿಸಿದ ಶುದ್ಧವಾದ ಅಲ್ಯೂಮಿನಿಯಮ್ ಹಾಳೆಯನ್ನು ಒತ್ತೊತ್ತಾಗಿ ಮಡಚಿ, ಕಾರಿನ ಎರಡು ಮೈನ್ ಫ್ಯೂಜ್‌ಗಳ  ಮಧ್ಯೆ ಭದ್ರವಾಗಿ ಕುಳ್ಳಿರಿಸಿ ಬಿಟ್ಟರೆ, ಅಂಬಾಸೆಡರ್ ಕಾರಿನ ಇಗ್ನಿಶನ್ ಲೈಟ್ ಬೆಳಗುವುದು.  ಆ ಮೇಲೆ ಸ್ಟಾರ್ಟರ್ ನಾಬ್ ಎಳೆದರೆ ಕಾರು ಸ್ಟಾರ್ಟ್ ಆಗುವುದು. ಈ ವಿಚಾರವನ್ನು ಚೆನ್ನಾಗಿ ಮನನ ಮಾಡಿಕೊಂಡೆ.

ಕೀ ಇಲ್ಲದೇ ಸ್ಟಾರ್ಟ್ ಮಾಡುವ ಗುಟ್ಟು ತಿಳಿದುಕೊಂಡ ಮೇಲೆ ನನಗೆ ಸದಾ ಒಂದೇ ಆಲೋಚನೆ! ಯಾರಿಗೂ ಗೊತ್ತಾಗದ ಹಾಗೆ, ಒಂದುದಿನ ರಾತ್ರಿಯ ಸಮಯದಲ್ಲಿ ಅಂಬಾಸೆಡರ್ ಕಾರನ್ನು ಲಪಟಾಯಿಸಿ, ಚೆನ್ನಾಗಿ ತಿರುಗಾಡಿ ಬರಬೇಕು! ಎನ್ನುವುದೇ ನನ್ನ ಮನದ ಮಹದಾಸೆ ಆಯಿತು.

ನಮ್ಮ ಬೆಲೆಬಾಳುವ ಅಂಬಾಸೆಡರ್ ಕಾರನ್ನು ಪ್ರತೀ ರಾತ್ರಿ ಮನೆಯ ಕಾರ್‌ಶೆಡ್ನಲ್ಲಿ ನಿಲ್ಲಿಸುತ್ತಿದ್ದೆವು. ನಮ್ಮ ಹಳೆಯ ಆಸ್ಟಿನ್-೧೦ ಕಾರನ್ನು ನಮ್ಮ ಕಂಪೌಂಡಿನಲ್ಲಿದ್ದ ಧಾರೆಹುಳಿಯ ಮರದ ಅಡಿಯಲ್ಲಿ ನಿಲ್ಲಿಸುತ್ತಿದ್ದೆವು. ಕಾರುಗಳನ್ನು ಸಂಪೂರ್ಣ ಲಾಕ್ ಮಾಡುವ ಪರಿಪಾಠ ಆ ದಿನಗಳಲ್ಲಿ ಇರಲೇ ಇಲ್ಲ. ರಾತ್ರಿ ಗ್ಲಾಸ್ ಏರಿಸಿ ಬಿಟ್ಟು, ಚಾವಿ ಒಳಗಿಟ್ಟರೆ ನಮ್ಮ ಕಾರುಗಳ ಭದ್ರತೆಯ ಕಾಳಜಿ ಮುಗಿದುಬಿಡುತ್ತಿತ್ತು. ಯಾಕೆಂದರೆ, ಕಳ್ಳತನ ಎಂಬುದು ನಮ್ಮ ಊರಿನಲ್ಲಿ ಇರಲೇ ಇಲ್ಲ ಎಂಬ ಸುದಿನಗಳು ಅವು!

ಆದಿನ ಕೂಡಾ, ರಾತ್ರಿಯ ಹೊತ್ತು ಅಂಬಾಸೆಡರ್ ಕಾರನ್ನು ಶೆಡ್ಡಿನಲ್ಲಿ ನಿಲ್ಲಿಸಿ, ನಮ್ಮ ಡ್ರೈವರ್ ಕಾರಿನ ಕೀಲಿ ಮನೆಯಲ್ಲಿ ಕೊಟ್ಟು, ತನ್ನ ಮನೆಗೆ ಹೊರಟುಹೋದ. ಕಾರುಗಳ ಚಾವಿಗಳನ್ನು ಎಂದಿನಂತೆ ಮಧ್ಯದ ಹಾಲಿನ ರೇಡಿಯೋದ ಕೆಳಗಿನ ಕೊಂಡಿಗೆ ಸಿಕ್ಕಿಸಿ ಇಟ್ಟಿದ್ದರು.

ನಮ್ಮ ಮಂಗಳೂರು ಹೆಂಚಿನ ಸಾಂಪ್ರದಾಯಿಕ ಶೈಲಿಯಲ್ಲಿ ಕಟ್ಟಿದ ದೊಡ್ಡ ಮನೆಗೆ ಎದುರು ಬದಿಯಲ್ಲಿ ಎರಡು ದೊಡ್ಡ ಪೋರ್ಟಿಕೋಗಳಿದ್ದುವು. ಆ ಎರಡು ಪೋರ್ಟಿಕೋಗಳಿಗೂ ಕಬ್ಬಿಣದ ಪಟ್ಟಿಯ ಜಾಲರಿ ಹಾಗೂ ಬಾಗಿಲು ಇದ್ದುವು. ನನ್ನದು ಮನೆಯ ಬಲಬದಿಯ ಪೋರ‍್ಟಿಕೋದಲ್ಲಿ ಸಂಪೂರ್ಣ ಠಿಕಾಣಿ. ಅದರೊಳಗೇ ಓದಿ ಬರೆದುಕೊಂಡು, ಅಲ್ಲೇ ಮಲಗುತ್ತಿದ್ದೆ. ನಾನು ರಾತ್ರಿ ಹೊತ್ತು ಅಡೆತಡೆ ಇಲ್ಲದೆ ಜಾಲರಿಯ ಬಾಗಿಲು ತೆರೆದುಕೊಂಡು, ಹೊರಗೆ ಹೋಗಿ ಬರಲು ಅಡ್ಡಿಯೇ ಇರಲಿಲ್ಲ. ಹೀಗಿರಲು, ಒಂದುದಿನ ಮನಸಾರೆ ಹೊಸ ಅಂಬಾಸೆಡರ್ ಕಾರು ಓಡಿಸಲೇ ಬೇಕು! ಎಂದು ತೀರ್ಮಾನಿಸಿದೆ.

ಆದಿನ ಸಾಯಂಕಾಲವೇ ಮಾರ್ಗದಲ್ಲಿ ಕಂಡ ಸಿಗರೇಟ್ ಪ್ಯಾಕ್‌ವೊಂದರ ಬ್ಯಾಗಡೆ ಕಾಗದವನ್ನು ಕಿತ್ತು ನನ್ನ ಜೇಬಲ್ಲಿ ಹಾಕಿಕೊಂಡಿದ್ದೆ. ಅಂಬಾಸೆಡರ್ ಕಾರನ್ನು ಆ ರಾತ್ರಿ ಯಾರಿಗೂ ತಿಳಿಯದ ರೀತಿಯಲ್ಲಿ ಮನೆಯ ಕಂಪೌಂಡಿನಿಂದ ಹೊರಗೆ ಒಯ್ದು, ಚೆನ್ನಾಗಿ ತಿರುಗಾಡಿಕೊಂಡು ಬರುವ ಆಲೋಚನೆಯಿಂದಲೇ, ನನಗೆ ಮನೋ ಉದ್ವೇಗ ಹೆಚ್ಚಿತು. ಆ ರಾತ್ರಿ ಪಾಠಪುಸ್ತಕ ಕೈಯ್ಯಲ್ಲಿ ಹಿಡಿದು ಕುಳಿತರೂ, ನನ್ನ ಹತ್ತಿರ ನಿದ್ರೆಯೇ ಸುಳಿಯಲಿಲ್ಲ! ಇತರೇ ದಿನಗಳಲ್ಲಿ, ರಾತ್ರಿಯ ಊಟವಾದೊಡನೆ ಪಾಠಪುಸ್ತಕ ಕೈಯ್ಯಲ್ಲಿ ಹಿಡಿದರೆ ಸಾಕು, ಕಣ್ಣು ತೂಗಿಬಂದು, ಎಷ್ಟೋ ಸಲ ಲೈಟು ಆರಿಸದೇ ನಿದ್ರಾಪರವಶನಾಗಿಬಿಡುತ್ತಿದ್ದೆ. ಅಂದು ರಾತ್ರಿ ಸುಮಾರು ಹನ್ನೊಂದೂವರೆ ಗಂಟೆಯ ತನಕ ಓದುತ್ತಾ ಕುಳಿತಂತೆ ನಟಿಸಿ ಕಾಲಹರಣ ಮಾಡಿದೆ. ಮನೆಯಲ್ಲಿ ಎಲ್ಲರೂ ಮಲಗಿ ನಿದ್ರೆ ಹೋದರು.

ಕಾರನ್ನು ಮನೆಯ ಶೆಡ್ಡಿನಿಂದ ಗೇಟಿನ ಹೊರಗೆ ನೂಕಿಕೊಂಡು ಹೋಗಬೇಕಾಗಿತ್ತು. ಹೀಗೆ ಮಾಡದಿದ್ದರೆ, ಕಾರು ಸ್ಟಾರ್ಟ್ ಆದ ಸದ್ದಿಗೆ ಮನೆಯವರು ಎಚ್ಚರಗೊಳ್ಳುವ ಸಾಧ್ಯತೆಯಿತ್ತು. ನನ್ನ ಪುಣ್ಯವೋ ಎಂಬಂತೆ ಕಾರ್ ಶೆಡ್ಡಿನಿಂದ ಗೇಟ್‌ವರೆವಿಗೂ ಸ್ವಲ್ಪ ತಗ್ಗು ಇತ್ತು. ಅಲ್ಲಿಂದ ಬಲಕ್ಕೆ ತಿರುಗಿದರೆ ಮುಂದಿನ ಮಾರ್ಗವು ಕೂಡಾ ಇಳಿಜಾರಾಗಿತ್ತು. ಕಾರನ್ನು ಒಮ್ಮೆ ನೂಕಿ ಹೊರಡಿಸಿದರೆ, ಅದು ಸುಲಭವಾಗಿ ಮನೆಯಿಂದ ಒಂದು ಫರ್ಲಾಂಗ್ ದೂರ ತಾನಾಗಿಯೇ ನಿಶ್ಯಬ್ದವಾಗಿ ಇಳಿಜಾರಿನಲ್ಲಿ ಹರಿದುಹೋಗುವಂತೆ ಇತ್ತು. ಅದಲ್ಲದೇ, ಮರಳಿ ಮನೆಗೆ ಬರುವಾಗ, ಮೇಲಣ ಮಾರ್ಗವಾಗಿ ಬಂದರೆ, ಬಹಳ ದೂರದಲ್ಲೇ ಕಾರಿನ ಎಂಜಿನ್ ಆಫ್ ಮಾಡಿಕೊಂಡರೂ, ಇಳಿಜಾರಿನ ಫಲವಾಗಿ ಕಾರು ಮನೆಯ ಶೆಡ್ಡಿನ ಒಳಗೆ ನಿಶ್ಶಬ್ದವಾಗಿ ಸಾಗಿ ಬಂದು ನಿಲ್ಲುವ ಸಾಧ್ಯತೆಯಿತ್ತು.

ನಾನು ಕಾರು ಶೆಡ್ಡಿನ ಬಾಗಿಲು ಮೊದಲು ಸರಿಸಿ ತೆಗೆದೆ! ಆ ಮೇಲೆ ಗೇಟ್ ತೆರೆದೆ.  ಶೆಡ್ ಒಳಗೆ ಬಂದು ಕಾರನ್ನು ನ್ಯೂಟ್ರಲ್ ಮಾಡಿ ಚೆನ್ನಾಗಿ ದಬ್ಬಿ, ಅದರ ಒಳಗೆ ಹಾರಿ ಕುಳಿತೆ. ಕಾರಿನ ಬಾಗಿಲನ್ನು ಶಬ್ದವಾಗದಂತೆ ಒಳ ಸರಿಸಿದೆ. ಕಾರು ನಿಶ್ಶಬ್ದವಾಗಿ ಗೇಟುದಾಟಿ ತಾರುಮಾರ್ಗಕ್ಕೆ ಇಳಿಯಿತು. ಮನೆಯಿಂದ ಇನ್ನೂರು ಗಜ ದೂರ ಸರಿದ ನಂತರ ಕಾರು ನಿಲ್ಲಿಸಿದೆ. ನನ್ನ ಪಾಕೇಟಿನಲ್ಲಿ ಇದ್ದ ಬ್ಯಾಗಡೆ ಚೂರನ್ನು ಮಡಚಿ ಚಿಕ್ಕದಾಗಿ ಮಾಡಿದೆ. ಕಾರಿನ ಬಾನೆಟ್ ಎತ್ತಿ ಫ್ಯೂಜ್ಗಳ ಮಧ್ಯೆ ಅದನ್ನು ಸಿಕ್ಕಿಸಿ ಬಾನೆಟ್ ಮುಚ್ಚಿದೆ. ಇಗ್ನಿಶನ್ ಲೈಟ್ ಬೆಳಗುತ್ತಿತ್ತು! ಸೀಟನ್ನು ನನ್ನ ಎತ್ತರಕ್ಕೆ ಅನುಗುಣವಾಗಿ ಸ್ವಲ್ಪ ಮುಂದೆ ಸರಿಸಿ, ನನ್ನ ಕಾಲುಗಳಿಗೆ ಬ್ರೇಕ್, ಕ್ಲಚ್ ಮತ್ತು ಆಕ್ಸಲರೇಟರ್ ಎಟಕುತ್ತವೆ..! ಎಂದು ಖಾತ್ರಿಪಡಿಸಿಕೊಂಡೆ. ಆ ನಂತರ ಸ್ಟಾರ್ಟರ್ ನಾಬ್ ಎಳೆದೆ.

ಕಾರು ಸ್ಟಾರ್ಟ್ ಆಯಿತು….!

ಹೆಡ್‌ಲೈಟ್ ಉರಿಸಿ, ಕಾರನ್ನು ನಡೆಸುತ್ತಾ ಸ್ವಲ್ಪ ಮುಂದೆ ಹೋಗಿ, ಹೆದ್ದಾರಿ ಬಿಟ್ಟು ಮಲ್ಪೆಗೆ ಹೋಗುವ ರಸ್ತೆಯಲ್ಲಿ ಕಾರು ನಡೆಸಿದೆ. ಉಡುಪಿಯಿಂದ ಮಲ್ಪೆಗೆ ಸುಮಾರು ನಾಲ್ಕು ಮೈಲು ದೂರ. ಕಾರು ಹಳ್ಳಕ್ಕೆ ಬೀಳದೇ ಸರಾಗವಾಗಿ ಮಾರ್ಗದಲ್ಲೇ ಓಡುತ್ತಿತು! ಮಾರ್ಗದ ಮೇಲೆಯೇ ಕಾರು ಓಡಿಸುವಷ್ಟು ಡ್ರೈವಿಂಗ್ ಬರುತ್ತಿದೆ! ಎಂಬ ವಿಚಾರ ಆಗ ನನ್ನ ಅರಿವಿಗೆ ಬಂತು. ಅಷ್ಟು ಡ್ರೈವಿಂಗ್ ವಿದ್ಯೆಯನ್ನು ನಮ್ಮ ಹಳೇ ಆಸ್ಟಿನ್ ಕಾರಿನಲ್ಲೇ ಕಲಿತಿದ್ದೆ. ನನ್ನ ಸಂತೋಷಕ್ಕೆ ಪಾರವೇ ಇಲ್ಲ…!!

ಕಾರಿನ ಹೆಡ್‌ಲೈಟ್ ಪ್ರಕಾಶಮಾನವಾಗಿ ಬೆಳಗುತ್ತಿತ್ತು. ಕಾರು ಕತ್ತಲೆಯನ್ನು ಸೀಳುತ್ತಾ, ಸರಾಗವಾಗಿ ಅಷ್ಟೇನೂ ಚೆನ್ನಾಗಿಲ್ಲದ ತಾರುರಸ್ತೆಯಲ್ಲಿ ಓಡುತ್ತಾ ಇತ್ತು. ಕಾರನ್ನು ಜೋರಾಗಿ ನಡೆಸುವ ಉಮೇದು ಬಂತು. ಆಕ್ಸೆಲರೇಟರ್ ಒತ್ತುತ್ತಾ, ನೇರವಾದ ರಸ್ತೆಯಲ್ಲಿ ಕಾರಿನ ಸ್ಪೀಡೋಮೀಟರ್ ನಲ್ವತ್ತು ಮೈಲಿ ವೇಗ (೬೪ ಕಿ.ಮೀ) ತೋರುವವರೆಗೂ ಓಡಿಸಿದೆ. ಬಹಳ ಹೆಮ್ಮೆ ಎನಿಸಿತು. ಆ ನಂತರ ವೇಗ ತಗ್ಗಿಸಿದೆ. ಕಲ್ಮಾಡಿ ಸೇತುವೆ ದಾಟಿ ಕಾರು ಉಡುಪಿಯಿಂದ ನಾಲ್ಕು ಮೈಲಿ ದೂರದ ಮಲ್ಪೆಯ ಸಣ್ಣ ಪೇಟೆಯನ್ನು ತಲುಪಿತು. ಕಾರಿನ ವೇಗವನ್ನು ಮತ್ತಷ್ಟು ಕಡಿಮೆ ಮಾಡಿದೆ. ನಿದ್ರಿಸುತ್ತಿದ್ದ ಪೇಟೆಯ ಮಧ್ಯೆ ಸಾಗಿ ಅಲ್ಲಿಂದ ಬಲಕ್ಕೆ ತಿರುಗಿ, ಅಲ್ಲಿಂದ ಒಂದು ಮೈಲಿ ದೂರದ ವಡಭಾಂಡೇಶ್ವರ ದೇವಸ್ಥಾನದ ಕಡೆಗೆ ಕಾರು ನಡೆಸಿದೆ. ದೇವಸ್ಥಾನದ ಹತ್ತಿರ ವಿಶಾಲವಾದ ಜಾಗದಲ್ಲಿ ಕಾರನ್ನು ಹಿಂದಕ್ಕೆ ತಿರುಗಿಸಿದೆ. ಪುನಃ ಮಲ್ಪೆಯ ಪೇಟೆಗೆ ಬಂದು ಉಡುಪಿಯ ರಸ್ತೆ ಹಿಡಿದೆ.

ನನ್ನಲ್ಲಿ ದಿಗ್ವಿಜಯ ಮಾಡಿಬಿಟ್ಟಂತಹ ಸಮಾಧಾನ ಮತ್ತು ಹೆಮ್ಮೆಗಳು ಜೊತೆಯಾಗಿ ಮೂಡಿ ಬಂದುವು. ಮಲ್ಪೆಯ ಪೇಟೆಯನ್ನು ದಾಟಿ ಕಲ್ಮಾಡಿ ಕಡೆಗೆ ಹಿಂದಿರುಗಿ ಬರುತ್ತಿದ್ದಾಗ ಮಾರ್ಗವು ಭತ್ತದ ಗದ್ದೆಗಳ ನಡುವೆ ಸಾಗುತ್ತಿತ್ತು. ಆ ರಸ್ತೆಯಲ್ಲಿ ಜಾಗರೂಕನಾಗಿ ಸುಮಾರು ಇಪ್ಪತ್ತೈದು ಮೈಲು ವೇಗದಲ್ಲಿ ಕಾರನ್ನು ನಡೆಸತೊಡಗಿದೆ. ಕಡಲ ತೀರದ ಕಡೆಗೆ ಗಾಳಿಯು ಬೀಸುತ್ತಿತ್ತು. ಆಗ ರಾತ್ರಿಯ ಹನ್ನೆರಡೂವರೆಯ ಸಮಯ ಆಗಿರಬಹುದು. ನಾನಂತೂ,  ಸಂತೋಷದ ಕಡಲಲ್ಲಿ ತೇಲುತ್ತಾ ಕಾರು ನಡೆಸುತ್ತಿದ್ದೆ.

ಇದ್ದಕ್ಕಿದ್ದಂತೆ ಕಾರಿನ ಎಂಜಿನ್ ನಿಂತು ಹೋಗಿ ಕಾರು ರಸ್ತೆಯಲ್ಲೇ ಮುಗ್ಗರಿಸಿತು! ಕಾರಿನ ಹೆಡ್‌ಲ್ಯಾಂಪುಗಳು ಆರಿಹೋದುವು! ಪಾರ್ಕಿಂಗ್ ಲ್ಯಾಂಪ್‌ಗಳು ಮಾತ್ರ ಉರಿಯುತ್ತಿದ್ದುವು..! ಒಮ್ಮೆಗೇ ಕಣ್ಣಿಗೆ ಕತ್ತಲು ಎದುರಾಯಿತು! ಆದರೂ, ನೇರ ರಸ್ತೆಯಾದುದರಿಂದ ನಾನು ಗಾಬರಿಯಾಗಲಿಲ್ಲ. ಮರುಕ್ಷಣದಲ್ಲೇ ಪಾರ್ಕಿಂಗ್ ಲ್ಯಾಂಪುಗಳ ಬೆಳಕಿಗೆ ಸ್ವಲ್ಪಮಟ್ಟಿಗೆ ರಸ್ತೆ ಕಾಣಹತ್ತಿತು. ನಿಧಾನವಾಗಿ ಬ್ರೇಕ್ ಹಾಕುತ್ತಾ ಕಾರನ್ನು ಮಾರ್ಗದ ಎಡಬದಿಗೆ ನಿಲ್ಲಿಸಿದೆ.

ಹೀಗಾಗಲು ಕಾರಣವೇನು? ಎಂದು ಆಲೋಚಿಸಿದೆ. ನನ್ನ ಬ್ಯಾಗಡೆ ಕಾಗದದ ಕನೆಕ್ಷನ್ ಕಾರಿನ ಅದುರುವಿಕೆ ಮತ್ತು ಎದುರು ಗಾಳಿಯ ರಭಸಕ್ಕೆ ಹಾರಿ ಹೋಗಿರಬೇಕೆಂದು ತರ್ಕಿಸಿದೆ ಕೆಳಗಿಳಿದು ಬಾನೆಟ್ ಎತ್ತಿ ನೋಡಿದೆ. ನನ್ನ ಊಹೆ ಸರಿಯಾಗಿತ್ತು….! ಈಗ ಇನ್ನೊಂದು ಬ್ಯಾಗಡೆ ಕಾಗದಕ್ಕೆ ಎಲ್ಲಿ ಹೋಗೋಣ? ಎಂದುಕೊಳ್ಳುತ್ತಾ ಕಾರಿನ ಸುತ್ತಮುತ್ತ ನನ್ನ ಬ್ಯಾಗಡೆ ಕಾಗದಕ್ಕೆ ಹುಡುಕಿದೆ. ಬೆಳದಿಂಗಳೂ ಇಲ್ಲ! ಬರೇ ದಟ್ಟಕತ್ತಲು! ಆ ಪುಟ್ಟ ಬ್ಯಾಗಡೆ ಕಾಗದ ಎಲ್ಲಿ ಕಂಡೀತು? ಆ ತಂಪಾದ ರಾತ್ರಿಯಲ್ಲಿ ನನ್ನ ಮೈ ಬೆವರತೊಡಗಿತು.

ಈ ಕಾಳರಾತ್ರಿಯಲ್ಲಿ ಇನ್ನೊಂದು ಬ್ಯಾಗಡೆ ಚೂರು ಎಲ್ಲಿಂದ ತರಲಿ? ಎಂದು ಆಲೋಚಿಸಿದೆ. ಅಷ್ಟರಲ್ಲಿ, ನನ್ನ ಕಣ್ಣು ಕತ್ತಲೆಗೆ ಸ್ವಲ್ಪಮಟ್ಟಿಗೆ ಹೊಂದಿಕೊಂಡು, ನಕ್ಷತ್ರಗಳ ಬೆಳಕಿಗೆ ತಾರುಮಾರ್ಗದಲ್ಲಿ ನಡೆಯುವಷ್ಟು ಕಾಣತೊಡಗಿತು. ಮಲ್ಪೆಯ ಕಡೆಗೆ ನಡೆಯುತ್ತಾ ಹೋದರೆ ಮಾರ್ಗದ ಬದಿಯಲ್ಲಿ ಯಾರಾದರೂ ಪುಣ್ಯಾತ್ಮರು ಎಸೆದಿದ್ದ ಸಿಗರೇಟ್ ಪ್ಯಾಕ್ ಸಿಕ್ಕೀತು! ಎಂಬ ಆಸೆಯಲ್ಲಿ ಧೈರ್ಯ ತಂದುಕೊಂಡು ಮಲ್ಪೆಯ ಕಡೆಗೆ ನಡೆಯತೊಡಗಿದೆ.                    ನನಗೆ ಕತ್ತಲೆಯ ಹಾಗೂ ಭೂತ ಪ್ರೇತಗಳ ಹೆದರಿಕೆ ಕಡಿಮೆ. ಮಾರ್ಗದ ಕತ್ತಲಲ್ಲಿ ಕಾಲಡಿ ಕಾಣದೆ, ನಾನು ಹಾವು ಏನಾದರೂ ಮೆಟ್ಟಿದರೆ? ಎಂದು ಭಯವಾಯಿತು. ಅಥವಾ, ಕತ್ತಲಲ್ಲಿ ಒಬ್ಬಂಟಿಯಾಗಿ ನಡೆಯುತ್ತಾ ಬ್ಯಾಗಡೆಗಾಗಿ ನೆಲವನ್ನು ಪರದಾಡುತ್ತಾ ಸಾಗುತ್ತಿದ್ದ ನನ್ನನ್ನು ಕಂಡು ಯಾರಾದರೂ, ಏ ಹುಡುಗಾ! ನೀನು ಇಲ್ಲಿ ಏನು ಮಾಡುತ್ತಾ ಇದ್ದೀ? ಎಂದು ಪ್ರಶ್ನಿಸಿದರೆ, ಏನು ಉತ್ತರ ಕೊಡಲಿ..? ಎಂದೂ ಚಿಂತಿಸಿದೆ.

ಮನೆಯಲ್ಲಿ ಕಾರು ಮತ್ತು ನಾನು ಗಾಯಬ್ ಆದುದನ್ನು ಕಂಡು ಮನೆಯವರು ಪೋಲೀಸರಿಗೆ ತಿಳಿಸಿದರೆ ನನ್ನ ಗತಿ ಏನು? ಎಂದು ಚಿಂತಿಸಿದೆ. ಇದೇ ರೀತಿಯ ಹತ್ತು ಹಲವಾರು ಆಲೋಚನೆಗಳು ಒಂದರ ಮೇಲೊಂದು ಬರಹತ್ತಿದುವು.

ನನಗೆ ಈಗ ದೇವರೇ ಗತಿ! ಎಂದುಕೊಂಡೆ. ದೇವರೇ! ನಾನು ಈದಿನ ಕಾರು ಕದ್ದು ತಂದುದು ಬಿಟ್ಟರೆ, ಇದುವರೆವಿಗೆ ಬೇರೆ ಯಾವ ಅಪರಾಧವನ್ನು ತಿಳಿದಂತೆ ಮಾಡಿಲ್ಲ! ಅಪರೂಪಕ್ಕೆ ಒಮ್ಮೆ ಕಾಲೇಜಿನ ಕ್ಲಾಸು ತಪ್ಪಿಸಿ ಮ್ಯಾಟಿನಿ ಶೋಗಳಿಗೆ ಹೋಗಿದ್ದ ವಿಚಾರ ಸರ್ವಾಂತರ್ಯಾಮಿ ಆದ ನಿನಗೆ ಆಗಲೇ ಗೊತ್ತು! ನೀನು ಈ ಬಗ್ಗೆ ನನ್ನ ದೋಸ್ತಿಗಳಾದ ಟೋನಿ, ದಿವಾಕರ, ರಷೀದ್ ಮತ್ತು ದಾಮು ಇವರನ್ನು ಇದುವರೆಗೆ ಈ ಕ್ಷುಲ್ಲಕ ತಪ್ಪಿಗೆ ಶಿಕ್ಷಿಸಿಲ್ಲ! ಈ ಬಗ್ಗೆ ದಯವಿಟ್ಟು ನನ್ನ ಕುರಿತೂ ಸ್ವಲ್ಪ ಕಣ್ಣುಮುಚ್ಚಿಕೊಂಡಿರು….! ಈಗ ನನಗೆ ಒಂದು ಬ್ಯಾಗಡೆ ಚೂರು ಸಿಗುವಂತೆ ಮಾಡು, ಕರುಣಾಮಯನೇ! ಎಂದು ಪ್ರಾರ್ಥಿಸುತ್ತಾ ಸುಮಾರು ಅರ್ಧ ಮೈಲು ದೂರದ ಮಲ್ಪೆಯ ಕಡೆಗೆ ನಡೆಯತೊಡಗಿದೆ.

ನಡೆಯುತ್ತಿದ್ದಾಗ ದಾರಿಯಲ್ಲಿ ಕಾಲಿನ ಚಪ್ಪಲಿಗೆ ಏನೋ ತೊಡರಿತು! ಕಾಲಲ್ಲೇ ತಡವರಿಸಿದೆ. ಅದೊಂದು ಸಿಗರೇಟು ಪ್ಯಾಕ್! ನನ್ನ ಮೊರೆಯನ್ನು ಕೇಳಿದ ಆ ಒಳ್ಳೆಯ ದೇವರನ್ನು ಅಭಿನಂದಿಸುತ್ತಾ ಸಂಭ್ರಮದಿಂದ ಆ ಖಾಲಿ ಸಿಗರೇಟ್ ಪ್ಯಾಕೆಟ್ ಕೈಗೆತ್ತಿಕೊಂಡೆ. ಆದರೆ, ಅದನ್ನು ತೆರೆದು ನೋಡಿದರೆ ಅದರ ಒಳಗೆ ಬರೇ ಪೇಪರ್….! ಅದು ಅಗ್ಗದ ಚಾರ್‌ಮಿನಾರ್ ಸಿಗರೇಟಿನ ಪ್ಯಾಕೆಟ್ ಆಗಿತ್ತು..!

ಇವನಾವ ಸಿಗರೇಟ್ ಭಕ್ತ? ಸ್ವಲ್ಪ ದುಬಾರಿ ಸಿಗರೇಟ್ ಸೇದಲು ಈತನಿಗೆ ಏನು ಧಾಡಿ? ಎಂದು ಆ ಕಾಣದ ಸಿಗರೇಟ್ ಪ್ರೇಮಿಯನ್ನು ಶಪಿಸಿದೆ. ಪುನಃ ದೇವರನ್ನು ಸಂಬೋಧಿಸುತ್ತಾ, ದೇವರೇ, ನೀನು ಸುಮ್ಮನೆ ಈ ರೀತಿ ನನ್ನನ್ನು ಛೇಡಿಸಬೇಡ! ನನಗೆ ಒಂದು ಒಳ್ಳೆಯ ಸಿಗರೇಟ್ ಪ್ಯಾಕಿನ ಬ್ಯಾಗಡೆ ಸಿಕ್ಕುವಂತೆ ಮಾಡು..!,ಬೇಕಾದರೆ ನನ್ನನ್ನು ಈ ಸಲ ಪಿ.ಯು.ಸಿ ಕ್ಲಾಸಿನಲ್ಲಿ ಫೇಲ್ ಮಾಡಿಸು…! ಈ ಸಲಕ್ಕೆ ಒಮ್ಮೆ ಕರುಣೆ ತೋರಿ ಕಾಪಾಡು ಪ್ರಭೋ..! ಎಂದು ಆ ಕತ್ತಲೆಯಲ್ಲಿ ಪರಮಾತ್ಮನಿಗೆ ಭಕ್ತಿಯಿಂದ ವಂದಿಸಿ ಮುನ್ನಡೆದೆ. ಬಹಳ ನಡೆದರೂ ದಾರಿಯಲ್ಲಿ ಏನೂ ಸಿಗಲಿಲ್ಲ.

ಮುಂದೆ ಮಲ್ಪೆಯ ಪೇಟೆ ಬಂತು. ಪೇಟೆಯಲ್ಲಿ ಅಲ್ಲಲ್ಲಿ ಒಂದು ರಸ್ತೆಯ ಕುರುಡು ದೀಪ ಬೆಳಗುತ್ತಿದ್ದುವು. ಆ ಬೆಳಕಿನಲ್ಲಿ ಅತೀ ಆಸೆಯಿಂದ ಒಂದು ಖಾಲಿ ಸಿಗರೇಟ್ ಪ್ಯಾಕೆಟ್ ಕಾಣುತ್ತದೆಯೇ ಎಂದು ಮಾರ್ಗವಿಡೀ ಹುಡುಕಾಡಿದೆ. ಆ ದಾರಿಯಲ್ಲಿ ಮೊದಲಿಗೆ ಇದ್ದುವು ಕೆಲವು ಮನೆಗಳು, ಆಮೇಲೆ ಒಂದು ಸೈಕಲ್ ಶಾಪ್! ಆ ಮೇಲೆ, ಪುನಃ ಮನೆಗಳು! ನಂತರ ಒಂದು ಡಾಕ್ಟರರ ದವಾಖಾನೆ. ಅದರೆದುರೂ, ಸಿಗರೇಟ್ ಪ್ಯಾಕ್ ಇಲ್ಲ. ಆ ಡಾಕ್ಟರ್ ಮಹಾಶಯ ತಾನೊಬ್ಬ ಸಿಗರೇಟ್ ದ್ವೇಷಿ ಆಗಿದ್ದು, ತನ್ನ ಗಿರಾಕಿಗಳು ಸಿಗರೇಟು ಸೇದಬಾರದು ಎಂದು ಕಟ್ಟಾಜ್ಞೆ ಮಾಡುತ್ತಾ ಇದ್ದಿರಬೇಕು! ಹಾಳಾಗಲಿ ಹೋಗಲಿ ಈ ಡಾಕ್ಟರ್! ಎಂದು ಶಪಿಸುತ್ತಾ ಮುನ್ನಡೆದೆ.

ಕೊನೆಗೂ, ಮರುಭೂಮಿಯಲ್ಲಿನ ಒಯಸಿಸ್ನಂತೆ ಒಂದು ಬಾಗಿಲು ಮುಚ್ಚಿದ್ದ ಗೂಡಂಗಡಿ ರಸ್ತೆಬದಿಯಲ್ಲಿ ಸಿಕ್ಕಿತು. ಆದರೆ, ಅದರ ಎದುರು ಕಸ ಇದ್ದರೆ ತಾನೇ? ಆ ಗೂಡಂಗಡಿಯ ಸಾಹುಕಾರ ಸಾಯಂಕಾಲವೇ ತನ್ನ ಅಂಗಡಿಯ ಎದುರಿನ ಮತ್ತು ಸುತ್ತಮುತ್ತದ ಕಸ ಗುಡಿಸಿ ಚೊಕ್ಕ ಮಾಡಿ, ಧೂಳು ಏಳದಂತೆ ನೀರು ಸಿಂಪಡಿಸಿದ್ದ. ಅಂಗಡಿಯ ಮುಂದೆ ರಂಗೋಲೆ ಹಾಕಿಹೋಗಿದ್ದ. ಈ ಅಂಗಡಿಯ ಮಾಲಿಕನಿಗೆ ಆ ದರಿದ್ರ ಲಕ್ಷ್ಮಿಯ ದಯೆ ಸದಾ ಇರಲಿ! ಎಂದು ಮನಸಾರೆ ಹಾರೈಸುತ್ತಾ ಮುನ್ನಡೆದೆ. ಎರಡು ಹೆಜ್ಜೆ ಇಟ್ಟವನೇ ಈ ಮಹಾಶಯ ಕಸ ಎಲ್ಲಿ ಎಸೆದಿರಬಹುದು? ಎಂದು ನನ್ನ ಪತ್ತೇದಾರಿ ಬುದ್ಧಿಯನ್ನು  ಉಪಯೋಗಿಸಹತ್ತಿದೆ.

ಪತ್ತೇದಾರಿ ಕಾದಂಬರಿಗಳನ್ನು ತಪ್ಪದೇ ಓದುತ್ತಿದ್ದ ನನ್ನ ಕೆಲವು ಸಹಪಾಠಿಗಳು ಕೆಲವೊಮ್ಮೆ ನನ್ನನ್ನು ತಮಾಷೆಗೆ ಪತ್ತೇದಾರ ಮಧುಸೂದನ ಎನ್ನುತ್ತಿದ್ದರು. ಅವರುಗಳು ಓದುತ್ತಿದ್ದ ಕಾದಂಬರಿಗಳಲ್ಲಿ ನನ್ನ ಹೆಸರಿನ ಒಬ್ಬ ಪ್ರತಿಭಾಶಾಲಿ ಪತ್ತೇದಾರ ಇದ್ದನಂತೆ. ಅಂಗಡಿಯ ಅನತಿ ದೂರದಲ್ಲೇ ಚರಂಡಿಯ ಬಳಿ ಕಸದ ರಾಶಿ ಬಿದ್ದಿತ್ತು! ಅದನ್ನು ಕಂಡು ಹಸುರು ಹುಲ್ಲು ಕಂಡ ಬಡಕಲು ದನದಂತೆ ಅಲ್ಲಿಗೆ ಧಾವಿಸಿದೆ.

ಅಲ್ಲಿ ಬರ್ಕಲಿ, ಹನಿಡ್ಯೂ, ಚಾರ್ಮಿನಾರ್, ವಿಲ್ಸ್ ಮೊದಲಾದ ನಾನಾವಿಧದ ಜನಪ್ರಿಯ ಬ್ರಾಂಡಿನ ಖಾಲಿ ಸಿಗರೇಟ್ ಪ್ಯಾಕ್‌ಗಳು ಬಿದ್ದಿದ್ದುವು! ಸಂತೋಷಾತಿರೇಕದಿಂದ, ಕಸದ ರಾಶಿ ಬಾಚಿ, ನಾಲ್ಕಾರು ಬ್ಯಾಗಡೆ ಕಾಗದಗಳನ್ನು ಲಗುಬಗೆಯಿಂದ ಆರಿಸಿಕೊಂಡು, ನಾಗಾಲೋಟದಿಂದ (ಮನುಷ್ಯ ಜನ್ಮದಲ್ಲಿ ಹುಟ್ಟಿದುದರಿಂದ ಅದು ನಿಜವಾಗಲೂ ಎರಡು ಕಾಲಿನ ಓಟ!) ಉಡುಪಿಯ ಕಡೆಗೆ ಓಡುತ್ತಾ ಸಾಗಿ ನಿಲ್ಲಿಸಿಟ್ಟ ನಮ್ಮ ಕಾರನ್ನು ತಲುಪಿದೆ. ಬಳಿಕ ಎಲ್ಲವೂ ಸುಖಾಂತ್ಯ!

ಹೊಸ ಬ್ಯಾಗಡೆಯ ಕನೆಕ್ಷನ್ ಸೇರಿಸಿದೊಡನೆಯೇ, ನಮ್ಮ ಹೊಸ ಕಾರು ಸ್ವಲ್ಪವೂ ತಕರಾರು ಮಾಡದೆ ಸ್ಟಾರ‍್ಟ್ ಆಯಿತು! ಮನೆಗೆ ಒಂದು ಫರ್ಲಾಂಗ್ ಇರುವಾಗಲೇ, ಮೇಲಿನ ರಸ್ತೆಯಲ್ಲಿ ಕಾರು ನಿಲ್ಲಿಸಿ, ನಾನು ಸಿಕ್ಕಿಸಿ ಇಟ್ಟಿದ್ದ ಬ್ಯಾಗಡೆಯ ಚೂರು ತೆಗೆದೆ. ಕಾರನ್ನು ದಬ್ಬುತ್ತಾ, ಅದು ಸ್ಪೀಡ್ ತಗೆದುಕೊಂಡ ಮೇಲೆ ಒಳಗೆ ಹಾರಿಕುಳಿತೆ. ತಗ್ಗಿನಲ್ಲಿ ಕಾರು ನಿಶ್ಯಬ್ದವಾಗಿ ಮುಂದೆ ಹರಿದು, ಗೇಟಿನೊಳಗೆ ನುಗ್ಗಿ ಗ್ಯಾರೇಜ್ ಕಡೆಗೆ ಸಾಗಿತು. ಗ್ಯಾರೇಜ್ ತಲುಪುತ್ತಲೇ ಕಾರಿನ ಬ್ರೇಕ್ ಹಾಕಿ ಯಥಾಸ್ಥಾನದಲ್ಲಿ ಕಾರು ನಿಲ್ಲಿಸಿದೆ. ನನ್ನ ಅದೃಷ್ಟಕ್ಕೆ ಮನೆಯಲ್ಲಿ ಯಾರೂ ಎಚ್ಚರಗೊಳ್ಳಲಿಲ್ಲ. ಗಂಟೆ ಎರಡಕ್ಕೆ ಐದು ನಿಮಿಷವಿತ್ತು. ಬ್ಯಾಗಡೆಗೆ ಪರದಾಡಿ ಓಡಾಡಿದ್ದುದರಿಂದ ನನ್ನ ಮೈ ಬೆವರು ವಾಸನೆ ಬರುತ್ತಾ ಇತ್ತು. ಗೇಟ್ ಮುಚ್ಚಿ, ಗ್ಯಾರೇಜ್ ಬಾಗಿಲು ಸರಿಸಿ, ನಿಧಾನವಾಗಿ ಮನೆಯೊಳಗೆ ಸೇರಿಕೊಂಡು ಆ ದಯಾಮಯ ಪರಮಾತ್ಮನಿಗೆ ವಂದಿಸಿ ಮಲಗಿ ನಿದ್ದೆಹೋದೆ.

ಆ ವರ್ಷ ದೇವರು ಮಾತ್ರ ನಾನು ಕೊಟ್ಟಿದ್ದ ಡೆಸ್ಪರೇಟ್ ಆಫರ್ ಸ್ವೀಕರಿಸಿದ್ದ..! ಆ ವರ್ಷ ನಾನು ಎಮ್.ಎಸ್.ಎಮ್. (ಮಾರ್ಚ್-ಸೆಪ್ಟಂಬರ್-ಮಾರ್ಚ್) ಮಾಡಿದ ನಂತರವೇ ಪ್ರೀ ಯೂನಿವರ್ಸಿಟಿ ಕೋರ್ಸ್ ಪಾಸ್ ಆದದ್ದು! ಅಂತೂ, ನಾನು ನನ್ನ ಗಾಡ್ ಪ್ರಾಮಿಸ್ ಉಳಿಸಿಕೊಂಡೆ. ಮುಂದಕ್ಕೆ, ನಾನು ಎಂದೂ ನಮ್ಮ ಮನೆಯ ಕಾರನ್ನು ಕದ್ದು ಸವಾರಿಗೆ ಹೋಗಲಿಲ್ಲ!

ನನಗೆ ಹದಿನೆಂಟು ತುಂಬಿದ ಕೆಲವೇ ದಿನಗಳಲ್ಲಿ ನಾನು ಮತ್ತು ನನ್ನ ದೊಡ್ಡ ಅಣ್ಣ ನಮ್ಮ ಅಂಬಾಸೆಡರ್ ಕಾರಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದೆವು. ದಾರಿಯಲ್ಲಿ ನಿರ್ಜನ ಪ್ರದೇಶವೊಂದರಲ್ಲಿ ಅಣ್ಣ ಕಾರು ನಿಲ್ಲಿಸಿ ಕೆಳಗೆ ಇಳಿದರು. ಅವರಾಗಿಯೇ ಅಂಬಾಸೆಡರ್ ಕಾರಿನ ಕೀಲಿಕೊಟ್ಟು ಡ್ರೈವ್ ಮಾಡು! ಎನ್ನುತ್ತಾ ಮುಂದಿನ ಎಡಗಡೆಯ ಪ್ಯಾಸೆಂಜರ್ ಸೀಟ್‌ನಲ್ಲಿ ಕುಳಿತರು. ನಾನು ಕಾರನ್ನು ಅಳುಕಿಲ್ಲದೇ ಓಡಿಸಿದೆ.

* * *