ನಾನು ಆಗಷ್ಟೆ ಹೈಸ್ಕೂಲು ಸೇರಿದ್ದೆ. ಅದು ೧೯೫೬ನೇ ಇಸವಿಯಿರಬೇಕು. ಹೊಸ ವಾತಾವರಣ, ಹೊಸ ರೀತಿಯ ಕ್ಲಾಸ್‌ರೂಮುಗಳು, ಹೊಸ ರೂಪಿನ ಮಾಸ್ತರುಗಳು, ಸದಾ ಕಚ್ಚೆ ಧರಿಸಿ ಅದರ ಮೇಲೆ ಕೋಟು ಧರಿಸುವ ಹೆಡ್‌ಮಾಸ್ತರು.

ನಮ್ಮ ಆರನೇ ಬಿ ಈಯತ್ತಿಗೆ ಸುಬ್ಬಾರಾವ್ ಎಂಬುವವರು ಕ್ಲಾಸ್‌ಮಾಸ್ತರರು. ಅವರು ನಮಗೆ ಗಣಿತದ ಪಾಠ ಕಲಿಸುತ್ತಿದ್ದರು.

ನಾನು ದೂರದ ಹಳ್ಳಿಯಾದ ಕಿನ್ನಿಕಂಬಳ ಹೈಯರ್ ಎಲಿಮೆಂಟರಿ ಶಾಲೆಯಿಂದ ಬಂದು ಉಡುಪಿಯ ಬೋರ‍್ಡ್ ಹೈಸ್ಕೂಲ್‌ಗೆ ಸೇರಿಕೊಂಡಿದ್ದೆ. ಆಗ, ಆರನೇ ಈಯತ್ತೆಯನ್ನು ಹೈಸ್ಕೂಲಿನ ಫಸ್ಟ್ ಫಾರಂ ಎಂದು ಕರೆಯಲಾಗುತ್ತಿತ್ತು. ಹೈಸ್ಕೂಲಿನಲ್ಲಿ ನಾವು ಆರು ವರ್ಷ ಓದಬೇಕಾಗಿತ್ತು. ಆಗ ಹೈಸ್ಕೂಲಿನ ಸಿಕ್ಸ್ತ್‌ಫಾರಂ ಎಂದರೆ ಈಗಿನ ಎಸ್.ಎಸ್.ಎಲ್.ಸಿ. ಕ್ಲಾಸು! ಎಸ್.ಎಸ್.ಎಲ್.ಸಿ. ಪಾಸ್ ಆದ ವಿದ್ಯಾರ್ಥಿಗಳಿಗೆ ಆಗ ಒಂದು ವರ್ಷದ ಪಿ.ಯು.ಸಿ. ಕೋರ್ಸ್ ಇತ್ತು.

ನಮ್ಮ ದಕ್ಷಿಣಕನ್ನಡ ಜಿಲ್ಲೆ ಆಗ ಮದರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಮದರಾಸು ಪ್ರಾಂತ್ಯದಲ್ಲಿ ತಮಿಳುಭಾಷೆ ಪ್ರಧಾನಭಾಷೆಯಾಗಿದ್ದರೂ, ನಮಗೆ ತಮಿಳುಭಾಷೆ ಕಡ್ಡಾಯವಾಗಿರಲಿಲ್ಲ. ನಾವು ಸ್ಥಳೀಯ ಭಾಷೆಯಾದ ಕನ್ನಡ ಭಾಷಾ ಮಾಧ್ಯಮದಲ್ಲಿ ಓದಬಹುದಿತ್ತು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳು ಕಡ್ಡಾಯವಾಗಿದ್ದು, ತೃತೀಯ ಭಾಷೆಯಾಗಿ ಹಿಂದಿ ಕಲಿಯಬಹುದಾಗಿತ್ತು. ಅಂದಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಿಂದಿ ಭಾಷೆಯಲ್ಲಿ ತೇರ್ಗಡೆಯಾಗಲೇಬೇಕೆನ್ನುವುದು ಕಡ್ಡಾಯವಾಗಿರಲಿಲ್ಲ. ಆದ್ದರಿಂದ ನಾವುಗಳೆಲ್ಲಾ ಆರನೇ ಕ್ಲಾಸಿನಿಂದಲೇ ಹಿಂದಿ ಪಾಠವನ್ನು ಬಹು ಲಘುವಾಗಿ ತೆಗೆದುಕೊಳ್ಳುತ್ತಿದ್ದೆವು. ಹಿಂದಿಯಲ್ಲಿ ನಾಪಾಸಾದರೆ ಮನೆಯಲ್ಲಿ ಅಥವಾ ಶಾಲೆಯಲ್ಲಿ ಯಾರೂ ಬೈಯುತ್ತಿರಲಿಲ್ಲ. (ಹಿಂದೀಮಾಸ್ತರ್ ಒಬ್ಬರನ್ನು ಬಿಟ್ಟು..!) ಮನೆಯಲ್ಲಿ ಹಿಂದುಸ್ತಾನಿ ಭಾಷೆ ಮಾತನಾಡುತ್ತಿದ್ದ ಮುಸ್ಲಿಮ್ ವಿದ್ಯಾರ್ಥಿಗಳು ಮತ್ತು ಕೊಂಕಣಿ ಮಾತನಾಡುತ್ತಿದ್ದ ಗೌಡ ಸಾರಸ್ವತ ಹುಡುಗರು ಸುಲಭವಾಗಿ ಹಿಂದಿ ಕಲಿತು ಹಿಂದಿ ಪರೀಕ್ಷೆಯಲ್ಲಿ ಪಾಸ್ ಅನ್ನಿಸಿಕೊಳ್ಳುತ್ತಿದ್ದರು. ಮನೆಯಲ್ಲಿ ತುಳು ಮತ್ತು ಕನ್ನಡ ಮಾತನ್ನಾಡುವ ನಮ್ಮಂತಹಾ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೈಲಾಗಿ ಹಿಂದಿ ಪಂಡಿತರ ಕೈಯಲ್ಲಿ ಗಧಾ ಎಂದು ಬೈಸಿಕೊಳ್ಳುತ್ತಿದ್ದೆವು. ಅವರು ನಮ್ಮನ್ನು ಗಧಾ (ಕತ್ತೆ) ಎಂದರೆ – ನಾವು ಅವರ ಬೈಗಳನ್ನು ಕನ್ನಡದಲ್ಲಿ ಅರ್ಥೈಸಿಕೊಂಡು ನಾವು ಭೀಮ ಮತ್ತು ಹನುಮಂತರ ಮೆಚ್ಚುಗೆಯ ಆಯುಧವಾದ ಗದಾಯುಧದ ಹೆಸರು ಅದು ಎಂದು ಕಲ್ಪಿಸಿಕೊಂಡು ಮುದಗೊಳ್ಳುತ್ತಿದ್ದೆವು. ಆದರೂ, ಗಧಾ ಎಂಬ ಶಬ್ದದ ನಿಜವಾದ ಅರ್ಥದ ಅರಿವು ನಮಗೆ ಚೆನ್ನಾಗಿ ಗೊತ್ತಿತ್ತು!

ಹೈಸ್ಕೂಲಿನಲ್ಲಿ ಹಿಂದಿಯನ್ನು ಕಡೆಗಣಿಸುದುದಕ್ಕೆ ನಾನು ಈಗ ಪರಿತಾಪ ಪಡುತ್ತಿದ್ದೇನೆ. ಉತ್ತರಭಾರತಕ್ಕೆ ಹೋದಾಗ ಹಿಂದಿ ಬಿಟ್ಟು ಬೇರೆ ಭಾಷೆ ನಮಗೆ ಉಪಯೋಗಕ್ಕೆ ಬರುವುದಿಲ್ಲ. ಬಹಳ ಕಷ್ಟಪಟ್ಟು ವ್ಯಾವಹಾರಿಕ ಹಿಂದಿ ಭಾಷೆಯನ್ನು ಕಲಿತರೂ, ಓದಿ ಬರೆಯಲು ಮತ್ತು  ಹಿಂದಿ ಭಾಷೆಯಲ್ಲಿ ಎಣಿಸಿಕೊಳ್ಳಲು ನನಗೆ ತುಂಬಾ ಕಷ್ಟವೆನ್ನಿಸುತ್ತಿದೆ. ಈ ಕಾರಣದಿಂದಾಗಿ ಹಿಂದಿ ಬಲ್ಲ ಜನರ ನಡುವೆ ನಾನೊಬ್ಬ ಅನ್ ಪಡ್ ಯಾನೆ ಗಧಾ ಅನ್ನಿಸಿಕೊಳ್ಳುತ್ತಿದ್ದೇನೆ.

ನನ್ನ ಹಳೆಯ ಹೈಯ್ಯರ್ ಎಲಿಮೆಂಟರೀ ಶಾಲೆಗೂ, ಈ ಹೈಸ್ಕೂಲಿಗೂ ಅಜಗಜಾಂತರ ವ್ಯತ್ಯಾಸ ತೋರಿಬರುತ್ತಿತ್ತು. ಅಲ್ಲಿ ಒಂದು ಕ್ಲಾಸಿಗೆ ಒಬ್ಬರೇ ಮಾಸ್ತರಾದರೆ,  ಇಲ್ಲಿ ಪೀರಿಯಡ್‌ಗೆ ಒಬ್ಬರು ಮಾಸ್ತರರು! ಪ್ರತಿಯೊಬ್ಬ ಮಾಸ್ತರೂ ತಮ್ಮ ಪೀರಿಯಡ್ನಲ್ಲಿ ಹಾಜರಿ ಪಡೆದು ಪಾಠ ಆರಂಭಿಸುತ್ತಿದ್ದರು. ನಮ್ಮ ಕ್ಲಾಸ್‌ಮಾಸ್ತರ್ ಗಣಿತದ ಸುಬ್ಬಾರಾಯರಿಗೆ ನಮ್ಮ ಕ್ಲಾಸಿನ ಹುಡುಗರ ಮೇಲೆ ಹೆಚ್ಚಿನ ಅಧಿಕಾರವಿತ್ತು. ಅದನ್ನು ಅವರು ಚೆನ್ನಾಗಿ ಪ್ರಯೋಗಿಸುತ್ತಲೂ ಇದ್ದರು.

ನಮ್ಮ ಫಸ್ಟ್‌ಫಾರ್ಮ್ ಕ್ಲಾಸಿನಲ್ಲಿ ಹೆಚ್ಚಿನವರು ಹೊಸಬರು. ಆದರೆ ಐದು ಮಂದಿ ಹಳಬರೂ ಇದ್ದರು. ಅಂದರೆ, ಈ ಐದು ಮಂದಿ ಫೇಲ್ ಆದ ವಿದ್ಯಾರ್ಥಿಗಳು. ಇವರಲ್ಲಿ ಒಬ್ಬ ಹುಡುಗಿ ಮತ್ತು ನಾಲ್ಕು ಜನ ಹುಡುಗರು. ಇವರೆಲ್ಲರೂ ಹೊಸಬರಿಗಿಂತ ಎತ್ತರವಾಗಿದ್ದು, ನಮ್ಮ ಹೈಸ್ಕೂಲಿನ ಆಗುಹೋಗುಗಳ ಬಗ್ಗೆ ಹೆಚ್ಚಿನ ಅನುಭವಸ್ಥರಾಗಿದ್ದರು..! ಎಲ್ಲಾ ಮಾಸ್ತರುಗಳಿಗೂ ಇವರ ಪರಿಚಯ ಚೆನ್ನಾಗಿತ್ತು.

ಮೀರಾ ಎಂಬ ಹುಡುಗಿ ತನ್ನ ಸಿನೆಮಾ ಗೀಳಿನಿಂದ ಫೇಲ್ ಆಗಿದ್ದಳು. ಪ್ರತೀ ಬುಧವಾರ ನಮ್ಮ ಊರಿನಲ್ಲಿದ್ದ ಏಕೈಕ ಸಿನೆಮಾ ಥಿಯೇಟರಿನಲ್ಲಿ ಮ್ಯಾಟಿನೀ ಶೋ ಸಿನೆಮಾ ಇರುತ್ತಿತ್ತು. ಈ ಮೀರಾ ಎಂಬ ಶ್ರೀಮಂತ ಮನೆತನದ ಹುಡುಗಿ, ಪ್ರತೀ ಬುಧವಾರದ ಮ್ಯಾಟಿನೀ ಶೋವನ್ನು ಹೈಸ್ಕೂಲಿನ ಉಪಾಧ್ಯಾಯರುಗಳು ಮತ್ತು ತನ್ನ ಹಿರಿಯರ ಕಣ್ಣು ತಪ್ಪಿಸಿ ಶಾಲೆಗೆ ಗೈರು ಹಾಜರಾಗಿ ತಪ್ಪದೆ ನೋಡುತ್ತಿದ್ದಳು. ಉಡುಪಿಯಂತಹಾ ಚಿಕ್ಕ ಊರಿನಲ್ಲಿ, ಶಾಲಾ ಮಕ್ಕಳಿಗೆ, ಅದರಲ್ಲೂ ಒಬ್ಬ ಚಿಕ್ಕ ಆರನೇ ಕ್ಲಾಸಿನ ಹುಡುಗಿಗೆ, ಈ ರೀತಿ ಪ್ರತೀ ಬುಧವಾರ ಯಾರಿಗೂ ಗೊತ್ತಾಗದಂತೆ ಸಿನೆಮಾ ನೋಡುವುದು ಬಹಳ ಕಷ್ಟದ ವಿಚಾರವಾಗಿತ್ತು. ಮೀರಾಳ ಸಿನೆಮಾ ಗೀಳಿನ ವಿಚಾರ ಶಾಲೆಯ ಉಪಾಧ್ಯಾಯರುಗಳಿಗೆ ಮತ್ತು ಅವಳ ಪೋಷಕರಿಗೆ ತಿಳಿದುಹೋಯಿತು. ಅವಳ ಪೋಷಕರು ಹೈಸ್ಕೂಲಿಗೆ ಬಂದು ಅವಳ ಸಿನೆಮಾ ಗೀಳಿನ ವಿಚಾರ ಹೆಡ್‌ಮಾಸ್ಟರಿಗೆ ತಿಳಿಸಿದರು. ನಮ್ಮ ಹೈಸ್ಕೂಲಿನ ಹೆಡ್‌ಮಾಸ್ಟರು ಮೀರಾಳನ್ನು ತನ್ನ ಆಫೀಸಿಗೆ ಕರೆಸಿ ಛೀಮಾರಿ ಹಾಕಿ, ಇನ್ನುಮುಂದೆ ಕ್ಲಾಸಿಗೆ ಚಕ್ಕರ್ ಹಾಕಿ ಸಿನೆಮಾಗೆ ಹೋಗಲೇಬಾರದು ಎಂದು ತಾಕೀತು ಮಾಡಿದರಂತೆ. ಈ ಆಜ್ಞೆಗೆ ತಪ್ಪಿದರೆ, ಟೀ.ಸಿ. ಕೊಟ್ಟು ಬೇರೆ ಶಾಲೆಗೆ ಕಳುಸಬೇಕಾಗುತ್ತೆ! ಅಂತ ಬೆದರಿಕೆ ಕೂಡಾ ಹಾಕಿದರಂತೆ. ಮೀರಾಳಿಗೆ ಈ ಘಟನೆಯ ನಂತರ ಓದಿನಲ್ಲಿ ಆಸಕ್ತಿಯೇ ಕುಗ್ಗಿ ಹೋಯಿತಂತೆ! ಓದಿನಲ್ಲಿ ಸಾಮಾನ್ಯ ಮಟ್ಟದಲ್ಲಿ ಇದ್ದ ಹುಡುಗಿ, ಹೆಡ್‌ಮಾಸ್ಟರ ಈ ಎಚ್ಚರಿಕೆಯ ನಂತರ ಓದಿಗೆ ತೀರಾ ಅಸಡ್ಡೆ ತೋರುತ್ತಾ ಕ್ಲಾಸಿನಲ್ಲಿ ಫೇಲ್ ಆದಳಂತೆ.

ಇನ್ನು ಉಳಿದ ನಾಲ್ಕು ಫೈಲ್ ಆದ ಹುಡುಗರ ವಿಚಾರ. ಪುರುಷೋತ್ತಮನೆಂಬ ಹದಿನೈದು ವರ್ಷದ ಹುಡುಗ ಫೈಲ್ ಆಗಲು ಕಾರಣ ಆತನು ಯಾವಾಗಲೂ ಆಟದಲ್ಲಿ ಮುಂದು ಮತ್ತು ಪಾಠದಲ್ಲಿ ಹಿಂದುಎಂಬ ಕಾರಣಕ್ಕಾಗಿತ್ತು. ಪುರುಷೋತ್ತಮನಿಗೆ ಸದಾ ಆಟದ್ದೇ ಧ್ಯಾನ! ಆರನೆ ಕ್ಲಾಸಿನಲ್ಲಿ ಓದುತ್ತಿದ್ದರೂ ಆತ ಐದೂವರೆ ಅಡಿಗೂ ಮೀರಿ ಎತ್ತರವಿದ್ದು ಗಟ್ಟಿಮುಟ್ಟಾಗಿದ್ದ. ಎಲ್ಲಾ ಆಟೋಟ ಚಟುವಟಿಕೆಗಳಲ್ಲಿ ಮುಂದಿದ್ದರೂ ಅವನಿಗೆ ಪಾಠದಲ್ಲಿ ತೀರಾ ಅನಾಸಕ್ತಿ. ಆದರೆ, ಅಂತರ ಹೈಸ್ಕೂಲ್ ಆಟೋಟ ಸ್ಪರ್ಧೆಗಳಲ್ಲಿ ಆತ ಯಾವಾಗಲೂ ಜೂನಿಯರ್ ವಿಭಾಗದ ಛಾಂಪಿಯನ್. ಪಾಠ ಮಾತ್ರ ಅವನ ತಲೆಗೇ ಹತ್ತುತ್ತಿರಲಿಲ್ಲ.

ಉಳಿದ ಮೂವರು ಹುಡುಗರಲ್ಲಿ ಇಬ್ಬರ ಹೆಸರು ನಜೀರ್ ಮತ್ತು ಭಾಸ್ಕರ ಮಣಿಯಾಣಿ. ನಜೀರನಿಗೆ ಉರ್ದು ಭಾಷೆ ಚೆನ್ನಾಗಿ ಬರುತ್ತಿತ್ತು. ಅದು ಅವನ ಮಾತೃಭಾಷೆ. ಅವನು ಸ್ಥಳೀಯ ಮಸೀದಿಯ ಮದ್ರಸಾದಲ್ಲಿ ಕಲಿತು ಐದನೇ ಕ್ಲಾಸು ಪಾಸಾಗಿ ನಮ್ಮ ಹೈಸ್ಕೂಲ್ ಸೇರಿದ್ದ. ನಮ್ಮ ಶಾಲೆಯಲ್ಲಿ ಉರ್ದೂ ಭಾಷೆಯ ವ್ಯಾಸಂಗವೇ ಇರಲಿಲ್ಲ. ಅವನಿಗೆ ಚೊಕ್ಕ ಕನ್ನಡದಲ್ಲಿ ಮಾತನಾಡಲೂ ಕಷ್ಟವಾಗುತ್ತಿತ್ತು. ತಾನೆಂದೂ ಕಲಿಯದ ಕನ್ನಡ ಭಾಷೆಯಲ್ಲಿ ಅವನು ಹೇಗೆ ಪಾಠ ಕಲಿತಾನು? ಆದ್ದರಿಂದ, ಅವನು ಫೈಲ್ ಆಗಿದ್ದ.

ಭಾಸ್ಕರ ಮಣಿಯಾಣಿ! ಅವನ ಹೆಸರೇ ತಿಳಿಸುವಂತೆ ಆತ ಒಬ್ಬ ಮಳೆಯಾಳೀ ಹುಡುಗ. ಅವನಿಗೆ ಮಳೆಯಾಳ ಭಾಷೆ ಬಿಟ್ಟರೆ ಬೇರೆ ಭಾಷೆಯೇ ಬಾರದು! ಆತನ ತಂದೆ ದೂರದ ಕಲ್ಲಿಕೋಟೆಯಿಂದ ಉಡುಪಿಗೆ ಬಂದು, ಕಟ್ಟಡ ಕಂಟ್ರಾಕ್ಟ್ ಕೆಲಸ ಮಾಡುತ್ತಿದ್ದರು. ಭಾಸ್ಕರ ಅತೀ ತುಂಟ ಸ್ವಭಾವದ ಹುಡುಗ. ಅತ್ತ ತಂದೆಯೊಂದಿಗೆ ಕೆಲಸ ಮಾಡಲಾರ, ಇತ್ತ ಕನ್ನಡವನ್ನು ಕಲಿಯಲಾರ!. ಅವನ ತಂದೆ ವೇಲಾಯುಧನ್ ಮಣಿಯಾಣಿ ಎಂಬವರು. ಶಾಲೆಯ ಬಣ್ಣಸುಣ್ಣ ಕೆಲಸ ರಿಯಾಯತಿ ದರದಲ್ಲಿ ಮಾಡಲು ಒಪ್ಪಿಕೊಂಡು ಹೆಡ್‌ಮಾಸ್ಟರ ಒಲವು ಗಳಿಸಿದ್ದರು. ತನ್ನ ತುಂಟ ಮಗನನ್ನು ಕಲ್ಲಿಕೋಟೆಯ ಶಾಲೆಯಿಂದ ಬಿಡಿಸಿ ತಂದು, ನಮ್ಮ ಹೈಸ್ಕೂಲಿಗೆ ಸೇರಿಸುವಲ್ಲಿ ಸಫಲರಾಗಿದ್ದರು. ಕನ್ನಡ ಕಲಿಯಲೊಲ್ಲದ ಮಣಿಯಾಣಿ ಎಲ್ಲರೂ ನಿರೀಕ್ಷಿಸಿದಂತೆಯೇ ಫೈಲ್ ಆಗಿದ್ದ! ಆತನ ತಂದೆ ಹೆಡ್‌ಮಾಸ್ತರ ಕಾಲು ಹಿಡಿದು ತನ್ನ ಮಗ ಪ್ರತೀ ವರ್ಷ ಫೈಲ್ ಆದರೂ ಪರವಾಗಿಲ್ಲ. ಆತನು ಶಾಲೆಗೆ ಮಾತ್ರ ತಪ್ಪಿಸಬಾರದು! ಎಂದು ಬೇಡಿಕೊಂಡಿದ್ದರಂತೆ. ಇದಕ್ಕೆ ಕಾರಣ ಮನೆಯಲ್ಲಿ ಅವನ ಪೋಕರಿತನ! ಅವನ ತುಂಟಾಟ ಅವನ ತಾಯಿಗೆ ಮತ್ತು ಅಕ್ಕಪಕ್ಕದವರಿಗೆ ಸಹಿಸಲು ಸಾಧ್ಯವೇ ಆಗುತ್ತಿರಲಿಲ್ಲವಂತೆ.                ಐದನೇಯ ಫೈಲ್ ಆದ ಮಹಾಶಯನೇ ನನ್ನ ಈ ಲೇಖನದ ಹೀರೋ ರಾಮಕೃಷ್ಣ. ಆತನು ನಮ್ಮ ಊರಿನ ಒಬ್ಬ ಬ್ರಾಹ್ಮಣ ಹುಡುಗ. ಅಸಾಧ್ಯ ಚುರುಕಿನ ಹುಡುಗ ಆದರೆ ಪಾಠದಲ್ಲಿ ಮಾತ್ರ ಆತ ಯಾವಾಗಲೂ ಹಿಂದು! ನಮಗಿಂತ ಎತ್ತರವಾಗಿದ್ದ ಆತನು ತೆಳ್ಳಗೆ ಬೆಳ್ಳಗೆಯಾಗಿದ್ದು, ತುಂಟುತನ ಸೂಸುತ್ತಿದ್ದ ಪ್ರಕಾಶಮಾನವಾದ ಕಣ್ಣುಗಳನ್ನು ಹೊಂದಿದ್ದ. ಏನಾದರೂ ಚೇಷ್ಟೆ ಅಥವಾ ಕಿತಾಪತಿ ಮಾಡಿ ಎಲ್ಲರನ್ನೂ ನಗಿಸುವ ಜಾಯಮಾನ ಅವನದು.  ಇತರರು ನಗುತ್ತಿದ್ದಾಗ, ತಾನು ಮಾತ್ರ ಗಂಭೀರ ಮೋರೆಹಾಕಿ ನಗದೇ ಇರುತ್ತಿದ್ದ. ನಮ್ಮ ಉಪಾಧ್ಯಾಯರುಗಳು ಅವನನ್ನು ತೆನಾಲಿ ರಾಮ ಎಂದು ಕರೆಯುತ್ತಿದ್ದರು. ಉಪಾಧ್ಯಾಯರುಗಳೇ ಹಾಗೆ ಕರೆದ ಮೇಲೆ ಕೇಳಬೇಕೇ? ಇಡೀ ಸ್ಕೂಲಿಗೇ ಆತ ತೆನ್ನಾಲಿ ರಾಮಕೃಷ್ಣ ಎಂಬ ನಾಮಧೇಯದಿಂದ ಪ್ರಸಿದ್ಧನಾಗಿದ್ದ.

ಆತನ ತುಂಟತನ ಒಂದೇ ಎರಡೇ? ಕೆಲವು ಸಲ ಬೀದಿನಾಯಿಯ ಮರಿಗಳನ್ನು ಕದ್ದು ಮುಚ್ಚಿ ತಂದು, ತನ್ನ ಡೆಸ್ಕಿನ ಒಳಗೆ ಬಚ್ಚಿಟ್ಟುಕೊಳ್ಳುತ್ತಿದ್ದ. ಅತೀ ಸ್ಟ್ರಿಕ್ಟ್ ಅನ್ನಿಸಿಕೊಳ್ಳುವ ಮಾಸ್ಟರುಗಳ ಕ್ಲಾಸಿನಲ್ಲಿ ಅವನ್ನು ಕೆಳಗಿರಿಸಿ ಚಿವುಟಿ ಬೇರೆ ವಿದ್ಯಾರ್ಥಿಗಳ ಕಾಲಬುಡಕ್ಕೆ ತಳ್ಳುತ್ತಿದ್ದ! ಮಾಸ್ಟರುಗಳು ಕುಳಿತುಕೊಳ್ಳುವ ಕುರ್ಚಿಗಳ ಮೆಲೆ ಇಂಕ್ ಇಲ್ಲವೇ ಬಣ್ಣದ ಹುಡಿಯನ್ನು ನವುರಾಗಿ ಹರಡುತ್ತಿದ್ದ!. ಆ ಕಾಲದಲ್ಲಿ ಕೆಲವು ಜನ ಮಾಸ್ಟರುಗಳು ಬೆತ್ತದಿಂದ ವಿದ್ಯಾರ್ಥಿಗಳನ್ನು ದಂಡಿಸುವುದು ಸಾಮಾನ್ಯ ವಿಚಾರವಾಗಿತ್ತು. ಯಾರಾದರೂ ಮಾಸ್ಟರರು ಆತನನ್ನು ಹೊಡೆದರೆ, ಕ್ಲಾಸಿನಲ್ಲೇ ಮೂರ್ಛೆ ತಪ್ಪಿಬಿದ್ದಂತೆ ನಟಿಸಿ, ಅವರನ್ನು ಗಾಬರಿ ಮಾಡಿ ಬಿಡುತ್ತಿದ್ದ. ಉಪಾಧ್ಯಾಯರ ಕೈಯ್ಯಲ್ಲೇ ನಿಂಬೆ ಶರಬತ್ತಿನ ಉಪಚಾರ ಮಾಡಿಸಿಕೊಂಡ ನಂತರವೇ ಆತ ಕಣ್ಣುಬಿಡುತ್ತಿದ್ದ. ಈ ಸಂಗತಿ ತಿಳಿದಿದ್ದ ಕೆಲವು ಉಪಾಧ್ಯಾಯರುಗಳು ಅವನನ್ನು ಹೊಡೆಯಲು ಹೋಗದೇ ಬೆತ್ತ ಮಾತ್ರ ಎತ್ತಿ ಹೆದರಿಸುತ್ತಿದ್ದರು. ಹಾಗೆ ಮಾಡಿದಾಗಲೂ ಒಮ್ಮೊಮ್ಮೆ, ಬೇಡಿ, ಸಾರ್! ನನಗೆ ಮೂರ್ಛೆ ತಪ್ಪುವ ರೋಗ ಇದೆ! ದಯವಿಟ್ಟು ಹೊಡೆಯುವೆನೆಂದು ಹೆದರಿಸಬೇಡಿ! ಎನ್ನುತ್ತಾ ‘ಬೆಚ್ಚಿದಂತೆ ನಟಿಸಿ ಅವರ ಕೈಯಲ್ಲಿನ ಕೋಲನ್ನೇ ಕಸಿದುಕೊಂಡು ಕ್ಲಾಸಿನಿಂದ ಹೊರಗೆ ಓಡಿ, ಮನೆಗೆ ಹೋಗುತ್ತಿದ್ದ. ಹಾಗೆ ಓಡಿ ಹೋದರೆ, ಆತ ತಿರುಗಿ ಕ್ಲಾಸಿಗೆ ಬರುತ್ತಿದ್ದುದು ಮರುದಿನವೇ!. ಮಾರನೇ ದಿನ ಮಾಸ್ಟರರು ವಿಚಾರಿಸಿದರೆ ನನ್ನ ಖಾಯಿಲೆ ಹಾಗಿನದು ಸಾರ್!, ಬೆತ್ತ ಕಂಡರೆ ಸಾಕು, ಆಮೇಲೆ ನಾನು ಹೆದರಿಕೆಯಲ್ಲಿ ಏನು ಮಾಡುವೆನೆಂದು ನನಗೇ ಗೊತ್ತಾಗುವುದಿಲ್ಲ! ಮನೆಗೆ ಹೋಗಿ ಮಲಗಿಯೇ ಬಿಡುತ್ತೇನೆ ಸಾರ್!, ಈ ನನ್ನ ವಿಚಿತ್ರ ನಡವಳಿಕೆಯ ಬಗ್ಗೆ ನನ್ನ ಪೋಷಕರಿಂದ ಕಾಗದ ಅಥವಾ ಡಾಕ್ಟರರರಿಂದ ಸರ್ಟಿಫಿಕೇಟ್ ಬೇಕಾದರೂ ತಂದು ತಮಗೆ ಒಪ್ಪಿಸುತ್ತೇನೆ! ಎನ್ನುತ್ತಿದ್ದನು. ಮಾಸ್ಟರುಗಳು ಈ ವಿಚಿತ್ರ ರೋಗಿಯ ಸಹವಾಸವೇ ಬೇಡ! ಎಂದು ಸುಮ್ಮನಾಗುತ್ತಿದ್ದರು.

ತೆನಾಲಿರಾಮನು ಕೆಲವುದಿನ ಮಧ್ಯಾಹ್ನ ಬೇಗನೆ ಊಟ ಮುಗಿಸಿ ಬಂದು, ಕ್ಲಾಸಿನ ಬೋರ್ಡಿನ ಮೇಲೆ ಉಪಾಧ್ಯಾಯರುಗಳ ವ್ಯಂಗ್ಯಚಿತ್ರ ಬರೆಯುತ್ತಿದ್ದ. ಈ ಕಾರಣದಿಂದ ಒಮ್ಮೊಮ್ಮೆ ಇಡಿ ಕ್ಲಾಸಿಗೇ ಶಿಕ್ಷೆ ಸಿಗುತ್ತಿತ್ತು. ಒಮ್ಮೆ ನಮ್ಮ ಕ್ಲಾಸಿನ ಕರಿಹಲಗೆಯ ಮೇಲೆ ಬೆದರು ಬೊಂಬೆಯ (ಬೆರ್ಚಪ್ಪ) ಚಿತ್ರ ಬರೆದು, ಕೆಳಗಡೆ ಕ್ಲಾಸ್‌ಮಾಸ್ಟರ್ ಸುಬ್ಬರಾಯರ ಹೆಸರು ಬರೆದುಬಿಟ್ಟ! ಆ ದಿನ ಇಡೀ ಕ್ಲಾಸನ್ನು ಸುಬ್ಬಾರಾಯರು ಒಂದು ಗಂಟೆ ಹೊತ್ತು ಒಂಟಿ ಕಾಲಿನಲ್ಲಿ ನಿಲ್ಲಿಸಿದರು! ಕೊನೆಗೂ, ಅವರು ಇಡೀ ಕ್ಲಾಸನ್ನು ಹೆದರಿಸಿ ಬೆದರಿಸಿದಾಗ,  ನಮ್ಮ ಸಹಪಾಠಿಯಾದ ಹುಡುಗಿ ಒಬ್ಬಳು ಅವರಿಗೆ ಇದು ರಾಮಕೃಷ್ಣನ ಕೃತ್ಯ ಎಂದು ಬೆದರಿ ಬಾಯಿಬಿಟ್ಟಳು. ಪರಿಣಾಮವಾಗಿ, ರಾಮಕೃಷ್ಣನಿಗೆ ಮೂರುದಿನ ಕ್ಲಾಸಿನಿಂದ ಡಿಬಾರ್ ಆಯಿತು. ನಾಲ್ಕನೇ ದಿನ ರಾಮಕೃಷ್ಣ ಮಾಮೂಲಿನಂತೆ ನಗುನಗುತ್ತಾ ಕ್ಲಾಸಿಗೆ ಬಂದನು. ಮಧ್ಯಾಹ್ನ ಮೊದಲನೇ ಪೀರಿಯಡ್‌ನಲ್ಲಿ ಸುಬ್ಬಾರಾಯರ ಗಣಿತ ಕ್ಲಾಸ್ ನಡೆಯುತ್ತಿದ್ದಾಗ, ಮೂರುದಿನಗಳ ಹಿಂದೆ ಆತನ ಚಾಡಿ ಹೇಳಿದ್ದ ಹುಡುಗಿಯು ಹಟಾತ್ತನೆ ಕ್ಲಾಸಿನ ಸೂರು ಹಾರಿಹೋಗುವಂತೆ ಕಿರುಚಿಕೊಂಡಳು. ಆಕೆಯ ಡೆಸ್ಕಿನ ಒಳಗಿಂದ ದೊಡ್ಡಗಾತ್ರದ ಕಪ್ಪೆಯೊಂದು ಆಕೆಯ ಮೈಮೇಲೆ ನೆಗೆದಿತ್ತು! ಸುಬ್ಬಾರಾವ್ ಮಾಸ್ಟರರು ಇದು ಖಂಡಿತವಾಗಿ ತೆನಾಲಿ ರಾಮಕೃಷ್ಣನ ಕೆಲಸವೆಂದೇ ಬಗೆದರು. ಸಿಟ್ಟಿನಿಂದ ರಾಮಕೃಷ್ಣನ ಶರ್ಟಿನ ಕಾಲರ್ ಹಿಡಿದು, ಆತನನ್ನು ಬರಿ ಕೈಯಿಂದಲೇ ಹೊಡೆಯಲು ತಯಾರಾಗಿ ಕೈ ಎತ್ತಿದರು. ಆಗ ರಾಮಕೃಷ್ಣ ನಾನೇನೂ ಮಾಡಿಲ್ಲಾ, ಸಾರ್! ನಾನೇನೂ ಮಾಡಿಲ್ಲಾ, ಸಾರ್! ನಾನು ನಿರಪರಾಧಿ! ಎಂದು ಅರಚಿಕೊಳ್ಳತೊಡಗಿದ. ಅದಕ್ಕೆ ಸರಿಯಾಗಿ, ಕಪ್ಪೆ ಮೈಮೇಲೆ ಹಾರಿದಾಗ ಕಿರುಚಿಕೊಂಡ ಹುಡುಗಿ ಕೂಡಾ ಸ್ವರ ಸೇರಿಸಿ, ಸಾರ್! ಅದು ರಾಮಕೃಷ್ಣನ ಕೆಲಸವಲ್ಲ. ಆತನು ಇಂದು ನಾನು ಬಂದ ಮೇಲೆ, ಕ್ಲಾಸಿಗೆ ತಡವಾಗಿ ಬಂದನು. ಇದು ಖಂಡಿತಾ ಅವನ ಕೆಲಸವಲ್ಲಾ…. ನೋಡಿ ಸಾರ್, ಆ ಕಪ್ಪೆ ಈ ಮಳೆಗಾಲದಲ್ಲಿ ದಾರಿತಪ್ಪಿ ಡೆಸ್ಕಿನ ಒಳಗಡೆ ಬಂದು ಬೆಚ್ಚಗೆ ಕುಳಿತಿರಬೇಕು, ಖಂಡಿತಾ ತಪ್ಪು ರಾಮಕೃಷ್ಣನದಲ್ಲ ಎಂದು ಬೇಡಿಕೊಂಡಾಗ, ಸುಬ್ಬಾರಾವ್‌ಮಾಸ್ತರ ಕೋಪ ತಣ್ಣಗಾಗಿ, ಅಂದಿನ ಶಿಕ್ಷೆಗೆ ತೆರೆ ಬಿತ್ತು. ನಾವು ಇದು ಹೇಗೆ ಹೀಗಾಯಿತು? ಎಂದು ಸಾಯಂಕಾಲದವರೆಗೂ ಚಿಂತಿಸಿದೆವು. ಆ ದಿನ ಸಾಯಂಕಾಲ ಮನೆಗೆ ಹೋಗುವ ದಾರಿಯಲ್ಲಿ ರಾಮಕೃಷ್ಣ ನನ್ನೊಡನೆ ಗುಟ್ಟಾಗಿ ಹೀಗೆ ಹೇಳಿದ. ನಾನು ಮಧ್ಯಾಹ್ನ ಆ ಹುಡುಗಿಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದೆ!  ಇಂದು ನನ್ನ ಮೇಲೇ ಏನಾದರೂ ಚಾಡಿ ಹೇಳಿದರೆ, ನಾಳೆ ನಿನ್ನ ಮೇಲೆ ಹಾವು ತಂದು  ಎಸೆಯುತ್ತೇನೆ. ಇಂದು ಸುಬ್ಬಾರಾಯರ ಕ್ಲಾಸಿನಲ್ಲಿ ಆಪ್ಪಿತಪ್ಪಿಯೂ, ನನ್ನ ಹೆಸರು ಹೇಳಬೇಡ. ಜಾಗ್ರತೆ! ಎಂದಿದ್ದೆ ಅಂದ. ಹಾಗಾಗಿ ನಾನೇ ಈ ಕೆಲಸಮಾಡಿ ಕ್ಲಾಸಿನಲ್ಲಿ ಕುಳಿತಿದ್ದರೂ, ಆಕೆ, ನಾನು ತಡವಾಗಿ ಕ್ಲಾಸಿಗೆ ಬಂದೆ ಎಂದು ಸಾಕ್ಷಿ ನುಡಿದಳು! ಆಕೆಗೆ ಹಾವು ಎಂದರೆ ಬಹಳ ಹೆದರಿಕೆ ಗೊತ್ತಾ? ಎಂದ. ರಾಮಕೃಷ್ಣನ ಚೇಷ್ಟೆಗಳು ಅವ್ಯಾಹತವಾಗಿ ನಡೆಯುತ್ತಾ ಬಂದುವು.

ಆದರೆ ಒಮ್ಮೆ ಫೈಲ್ ಆದ ಮೇಲೆ ತಾನು ಮುಂದೆಂದೂ ಫೈಲ್ ಆಗಬಾರದು ಎಂದು ರಾಮಕೃಷ್ಣ ನಿಶ್ಚಯಿಸಿಬಿಟ್ಟಿದ್ದ. ಶಾಲೆಯಲ್ಲಿ ದಿನಂಪ್ರತಿ ಏನಾದರೂ ಕಿತಾಪತಿ ಮಾಡುತ್ತಿದ್ದರೂ, ಪರೀಕ್ಷೆ ಬರುವಾಗ ಚೆನ್ನಾಗಿ ಓದಿ ಪಾಸಾಗುತ್ತಾ ಬಂದ. ರಾಮಕೃಷ್ಣನ ಚುರುಕಾದ ನಡವಳಿಕೆ ಕಂಡು, ಕೆಲವು ಉಪಾಧ್ಯಾರು ಅವನನ್ನು ಮೆಚ್ಚಿಕೊಳ್ಳುತ್ತಲೂ ಇದ್ದರು.

ಪ್ರತೀ ವರ್ಷ ನಡೆಯುತ್ತಿದ್ದ ನಮ್ಮ ಶಾಲಾ ವರ್ಧಂತಿಯ ಉತ್ಸವದಂದು ನಡೆಯುತ್ತಿದ್ದ ನಾಟಕಗಳಲ್ಲಿ ರಾಮಕೃಷ್ಣ ಯಾವಾಗಲೂ ಒಂದು ಹಾಸ್ಯದ ಪಾತ್ರ ವಹಿಸುತ್ತಿದ್ದ. ಅದಕ್ಕೆ ಮೇಲಾಗಿ ಮಿಮಿಕ್ರಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ಎಲ್ಲರನ್ನೂ ನಗಿಸುತ್ತಿದ್ದ. ಏಕಪಾತ್ರಾಭಿನಯದಲ್ಲಿ ಅವನನನ್ನು ಮೀರಿಸುವವರೇ ಇರಲಿಲ್ಲ. ಆತನು ಯಾರನ್ನಾದರೂ ಏಕಪಾತ್ರ ಅಭಿನಯದಲ್ಲಿ ಲೇವಡಿಮಾಡಿದ್ದರೂ ಕೂಡ, ಅದು ಬಹು ತಿಳಿಯಾದ ಹಾಸ್ಯರೂಪದಲ್ಲಿದ್ದು, ಆ ವ್ಯಕ್ತಿಯ ಮನಸ್ಸು ನೋಯದಂತೆಯೇ ಇರುತ್ತಿತ್ತು. ರಾಮಕೃಷ್ಣನ ಹಾಸ್ಯದಲ್ಲಿ ಈ ವಿಶೇಷತೆ ಇದ್ದುದರಿಂದ ಕ್ರಮೇಣ ಎಲ್ಲಾ ಉಪಾಧ್ಯಾಯರೂ ಆತನನ್ನು ಮೆಚ್ಚಹತ್ತಿದರು.

ಶಾಲೆಯಲ್ಲಿ ಪ್ರಾರ್ಥನೆ ಹೇಳುವಾಗ ತನ್ಮಯನಾದಂತೆ ಕಣ್ಣುಮುಚ್ಚಿ ಹಾಡುತ್ತಾ ಎಲ್ಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿ ಮುಗಿಸಿದರೂ, ರಾಮಕೃಷ್ಣ ಪ್ರಾರ್ಥನೆಯ ಕೊನೆಯ ಸೊಲ್ಲನ್ನು ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡು, ಬೇಕೆಂತಲೇ ಗೊಗ್ಗರು ದನಿಯಲ್ಲಿ ಹಾಡುತ್ತಿದ್ದ. ಆ ಸಂದರ್ಭಗಳಲ್ಲಿ ಉಪಾಧ್ಯಾಯರುಗಳ ಸಮೇತ ಎಲ್ಲರೂ ಘೊಳ್ಳೆಂದು ನಕ್ಕುಬಿಡುತ್ತಿದ್ದರು. ಆ ನಂತರ ಹೀಗೆ ಹಾಡಿದ್ದಕ್ಕೆ ರಾಮಕೃಷ್ಣನಿಗೆ ತಕ್ಕ ಶಿಕ್ಷೆಯೂ ಸಿಗುತ್ತಿತ್ತು. ರಾಮಕೃಷ್ಣ ಏನೇ ಶಿಕ್ಷೆ ಸಿಗಲಿ, ಆ ಶಿಕ್ಷೆಯನ್ನು ನಗುತ್ತಲೇ ಸ್ವೀಕರಿಸುತ್ತಿದ್ದ. ಮುಂದಿನ ಪ್ರಾರ್ಥನೆಗಳು ನಡೆಯುವಾಗ ಅವನ ಬುದ್ಧಿ ನಾಯಿಬಾಲದಂತೆ ಹಿಂದಿನ ಸ್ಥಿತಿಗೇ ಬಂದು, ಹಿಂದಿನ ಪ್ರಸಂಗವೇ ಪುನರಾವರ್ತಿವಾಗುತ್ತಿತ್ತು! ಕೊನೆಕೊನೆಗೆ, ನಮ್ಮ ಹೆಡ್‌ಮಾಸ್ಟರರು ಆತನು ಈ ತರಹ ವರ್ತಿಸುವುದು ಆತನ ಮಾನಸಿಕ ತೊಂದರೆಯಿಂದಲೇ! ಎಂದು ಪರಿಗಣಿಸಿ, ಆತ ಹೀಗೆ ಮಾಡಿದಾಗ, ಆತನನ್ನು ಒಮ್ಮೆ ಗದರಿ ಸುಮ್ಮನಾಗುವುದು ರೂಢಿಯಾಯಿತು. ಆದರೆ, ರಾಮಕೃಷ್ಣನ ಈ ಚಾಳಿ ಹೈಸ್ಕೂಲು ಬಿಟ್ಟುಹೋಗುವ ತನಕವೂ ನಿಲ್ಲಲೇ‌ಇಲ್ಲ.

ಸುಬ್ಬಾರಾವ್‌ಮಾಸ್ಟರ ಗಣಿತಕ್ಲಾಸಿನಲ್ಲಿ ಅವರು ಕ್ಲಾಸಿಗೆ ಬೆನ್ನುಹಾಕಿ, ಬೋರ್ಡಿನಲ್ಲಿ ಬರೆಯುತ್ತಾ ಇರುವ ಸಮಯದಲ್ಲಿ ಏನಾದರೂ ಚೇಷ್ಟೆ ಮಾಡಿ ವಿದ್ಯಾರ್ಥಿಗಳನ್ನು ನಗಿಸಿಬಿಡುತ್ತಿದ್ದ. ಇದಕ್ಕೆ ರಾಮಕೃಷ್ಣನೇ ಕಾರಣ ಎಂದು ಎಲ್ಲರಿಗೂ ಗೊತ್ತಿದ್ದ ವಿಚಾರವೇ.

ಒಮ್ಮೆ ಅವನು ಈ ರೀತಿ ಮಾಡಿದಾಗ, ಸುಬ್ಬಾರಾವ್‌ಮಾಸ್ಟರ್ ಅವನನ್ನು ಸಂಬೋಧಿಸಿ, ಎಲೋ! ರಾಮಕೃಷ್ಣ ಎಂಬ ಕತ್ತೆಯೇ! ನನ್ನ ಕ್ಲಾಸಿನಲ್ಲಿ ದಯವಿಟ್ಟು ನೀನು ಸುಮ್ಮನೆ ಇರಲಾರೆಯಾ? ಎಂದರು. ಆಗ ರಾಮಕೃಷ್ಣ ಒಳ್ಳೆಯ ಅಗಸನ ಕತ್ತೆಯ ತರಹ ಎರಡು ಸಲ ಜೋರಾಗಿ ಕತ್ತೆಯ ಕೂಗನ್ನು ಅನುಕರಿಸಿ ಕೂಗಿಬಿಟ್ಟ! ಇಡೀ ಕ್ಲಾಸೇ ನಗೆಗಡಲಲ್ಲಿ ಮುಳುಗಿತು…! ಸುಬ್ಬಾರಾವ್ ಮಾಸ್ಟರ್ ಸಿಡಿಮಿಡಿಗೊಂಡು ಕೈಯಲ್ಲಿ ರೂಲರ್ ಹಿಡಿದು ಆತನನ್ನು ಹೊಡೆಯಲೆಂದೇ ಹೋದರು.

ಆಗ ರಾಮಕೃಷ್ಣನು ಅತೀ ದೈನ್ಯದ ದನಿಯಲ್ಲಿ ಸಾರ್! ನನ್ನನ್ನು ತಾವು ‘ಕತ್ತೆ ಎಂದು ಸಂಬೋಧಿಸಿದ ಮೇಲೆ ನಾನು ಕತ್ತೆಯ ಭಾಷೆಯಲ್ಲಿ ಉತ್ತರಿಸದಿದ್ದರೆ, ತಮಗೆ ಬೇಸರವಾಗದೇ? ಅದಕ್ಕೇ, ನಾನು ಶುದ್ಧವಾದ ಕತ್ತೆಭಾಷೆಯಲ್ಲಿ ‘ಆಗಲಿ ಸಾರ್ ಎಂದು ಸ್ಪಷ್ಟವಾಗಿ ಉತ್ತರಿಸಿದೆ! ಎಂದು ಹೇಳಿದ. ಸುಬ್ಬಾರಾವ್ ಮಾಸ್ತರ ಕೋಪ ಮಂಜಿನಂತೆ ಕರಗಿ, ಅವರ ಮುಖದಲ್ಲಿ ಕೂಡಾ ನಗು ಮಿಂಚಿತು! ಅಂದಿನಿಂದ ಅವರು ರಾಮಕೃಷ್ಣನನ್ನು ಕತ್ತೆ ಎಂದು ಬಾಯಿತಪ್ಪಿಯೂ ಕರೆಯಲಿಲ್ಲ.

ಮುಗ್ಗರಿಸದೇ ರಾಮಕೃಷ್ಣ ಓದು ಮುಂದುವರೆಸಿದ. ಪ್ರತಿವರ್ಷ ತಾನು ಪಾಸು ಎಂದು ತಿಳಿದೊಡನೆಯೇ ತನ್ನ ಪುಸ್ತಕಗಳನ್ನು ತನ್ನ ಹಿಂದಿನ ತರಗತಿಗೆ ಬರುವ ಬಡ ವಿದ್ಯಾರ್ಥಿಯೊಬ್ಬನಿಗೆ ದಾನ ಮಾಡುತ್ತಿದ್ದ. ಇದೇ ರೀತಿಮಾಡಲು ಇತರೇ ವಿದ್ಯಾರ್ಥಿಗಳನ್ನೂ ಪ್ರೇರೇಪಿಸುತ್ತಿದ್ದ.

ಆತನ ಮನೆ ಹೈಸ್ಕೂಲಿನಿಂದ ಸ್ವಲ್ಪ ದೂರವೇ ಇತ್ತು. ಎಂಟನೇ ಕ್ಲಾಸಿನ ನಂತರ ಆತನು ಹೈಸ್ಕೂಲಿಗೆ ಟಿಫಿನ್ ಕ್ಯಾರಿಯರ್ ತರಹತ್ತಿದ. ಆತನ ಟಿಫಿನ್ ಕ್ಯಾರಿಯರ್ ಸ್ವಲ್ಪ ದೊಡ್ಡ ಸೈಜಿನದಾಗಿತ್ತು. ಪ್ರತಿ ಮಧ್ಯಾಹ್ನ, ಆತನು ತನ್ನ ಊಟದಲ್ಲಿ, ಟಿಫಿನ್ ಕ್ಯಾರಿಯರ್ ತಾರದೇ ಆರು ಮೈಲಿ ದೂರದಿಂದ ಉಡುಪಿಯ ಹೈಸ್ಕೂಲಿಗೆ ನಡೆದು ಬರುತ್ತಿದ್ದ ಒಬ್ಬ ಬಡ ವಿದ್ಯಾರ್ಥಿಯೊಡನೆ ತನ್ನ ಬುತ್ತಿಯ ಊಟವನ್ನು ಹಂಚಿಕೊಂಡು ಊಟ ಮಾಡುತ್ತಿದ್ದ. ನಮ್ಮ ಹೈಸ್ಕೂಲಿನ ವಿದ್ಯಾರ್ಥಿಗಳಲ್ಲಿ ಹಂಚಿಕೊಂಡು ಊಟಮಾಡುವ ಹವ್ಯಾಸವನ್ನು ತೆನಾಲಿರಾಮ ಹುಟ್ಟುಹಾಕಿದ. ಈ ದೊಡ್ಡ ಗುಣಗಳ ನಡುವೆಯೂ ಆತನ ಚೇಷ್ಟೆ ಅವ್ಯಾಹತವಾಗಿ ಮುಂದುವರೆದಿತ್ತು.

ನಮ್ಮ ಸೈನ್ಸ್‌ಮಾಸ್ಟರ್ ನಾರಾಯಣ ಮಾಸ್ಟರ್ ಬೆಂಕಿ ನವಾಬ ಎಂಬ ಹೆಸರು ಪಡೆದಿದ್ದರು. ಅವರು ಪ್ರಯೋಗಾಲಯದಲ್ಲಿ ಸ್ವಲ್ಪ ಅಶಿಸ್ತನ್ನೂ ಸಹಿಸುತ್ತಿರಲಿಲ್ಲ. ಹತ್ತನೇ ಕ್ಲಾಸಿನಲ್ಲಿ ನಾವು ಕಾಪರ್ ಸಲ್ಫೇಟ್ ಸ್ಪಟಿಕಗಳಲ್ಲಿ ಇರುವ ನೀರಿನ ಅಂಶ ಕಂಡು ಹಿಡಿಯುವ ಪ್ರಯೋಗ ಮಾಡಬೇಕಿತ್ತು. ಒಂದು ಸ್ಟ್ಯಾಂಡಿನ ಮೇಲೆ ಜಾಲರಿ ಇರಿಸಿ ಅದರ ಮೇಲೆ ಕಾಪರ್ ಸಲ್ಫೇಟ್ ಹರಳುಗಳಿದ್ದ ಕ್ರುಸಿಬಲ್ (ಮೂಸೆ) ಇರಿಸಿ ಸ್ಪಿರಿಟ್ ಲ್ಯಾಂಪ್ ಸಹಾಯದಿಂದ ಕಾಪರ್ ಸಲ್ಫೇಟ್ ಬಿಸಿ ಮಾಡಬೇಕಿತ್ತು. ಕ್ರೂಸಿಬಲ್ಲನ್ನು ಬಿಸಿಮಾಡುವ ಮೊದಲು ಮತ್ತು ಅನಂತರ ಫಿಸಿಕಲ್ ಬ್ಯಾಲೆನ್ಸ್ ನಲ್ಲಿ ಅದನ್ನು ತೂಕಮಾಡಬೇಕಿತ್ತು. ರಾಮಕೃಷ್ಣನು ಫಿಸಿಕಲ್ ಬ್ಯಾಲೆನ್ಸ್‌ನಲ್ಲಿ ತೂಕಮಾಡುವ ಕ್ರಮ ತಿಳಿಯದೇ, ತನ್ನ ಪಕ್ಕದಲ್ಲಿ ಪ್ರಯೋಗ ಮಾಡುತ್ತಿದ್ದ ನಮ್ಮ ಕ್ಲಾಸಿನ ಅತೀ ಬುದ್ಧಿವಂತ ಹಾಗೂ ಸಾಧು ಅನ್ನಿಸಿಕೊಂಡಿದ್ದ ಅಚ್ಯುತ ಎಂಬ ಹುಡುಗನ ಸಹಾಯ ಬೇಡಿದ. ಅಚ್ಯುತನು ಅವನಿಗೆ ಸಹಾಯ ಮಾಡಲಿಲ್ಲ. ರಾಮಕೃಷ್ಣನು ಮೊದಲು ಮಾಸ್ಟರರ ಬೈಗಳು ತಿಂದು, ತದನಂತರ ಅವರಿಂದಲೇ ಸಹಾಯ ಪಡೆದು, ತೂಕ ಮಾಡಲು ಕಲಿತ. ಆನಂತರ, ಬೇಕೆಂತಲೇ ಅಚ್ಯುತನಿಗೆ ನೀನು ಕ್ರುಸಿಬಲ್ಲನ್ನು ಸ್ಟಾಂಡ್ ಮೇಲೆ ಡೈರೆಕ್ಟ್ ಆಗಿ ಬಿಸಿ ಮಾಡಿದರೆ ಬಹಳ ಒಳ್ಳೆಯ ರಿಸಲ್ಟ್ ಬರುತ್ತೆ! ಎಂದು ಹೇಳಿಕೊಟ್ಟ. ಆ ಪಾಪದ ಹುಡುಗ ಅದೇರೀತಿ ಕ್ರುಸಿಬಲ್ಲನ್ನು ಬಿಸಿ ಮಾಡಹತ್ತಿದ…! ನಾರಾಯಣ ಮಾಸ್ಟರ್ ಅಚ್ಯುತನು ಕ್ರೂಸಿಬಲ್ಲನು ಡೈರೆಕ್ಟ್ ಆಗಿ ಬಿಸಿಮಾಡುತ್ತಾ ಇರುವುದನ್ನು ಕಂಡು, ಅಚ್ಯುತನಿಗೆ ಬೈಯುತ್ತಾ ನಿನಗೆ ಬುದ್ಧಿ ಇಲ್ಲವೇ? ಸ್ಟಾಂಡ್ ಮೇಲೆ ಲೋಹದ ಜಾಲರಿ ಇಟ್ಟು ಬಿಸಿ ಮಾಡುಎನ್ನುತ್ತಾ ಪಕ್ಕದಲ್ಲಿದ್ದ ಅಚ್ಯುತನ ಲೋಹದ ಜಾಲರಿಯನ್ನು ಕೈಗೆತ್ತಿಕೊಂಡರೆ, ಅದನ್ನು ಆಗಲೇ ನಮ್ಮ ತೆನ್ನಾಲಿ ರಾಮಕೃಷ್ಣ ಕೆಂಪಗೆ ಕಾಸಿ ಇಟ್ಟಿದ್ದ! ಮಾಸ್ಟರು ಹೋ…! ಎಂದು ಕಿರುಚಿ ಕೈಯಲ್ಲಿ  ತೆಗೆದುಕೊಂಡ ಬಿಸಿ ಜಾಲರಿಯನ್ನು ದೂರ ಬಿಸುಟರು. ಅವರ ಕೈಯ್ಯಲ್ಲಿ ಆ ಬಿಸಿ ಜಾಲರಿಯು ಸುಟ್ಟ ಮುದ್ರೆ ಒತ್ತಿತು. ಪ್ರಯೋಗಾಲಯಲ್ಲಿದ್ದ ವಿದ್ಯಾರ್ಥಿಗಳು ಮಾಸ್ಟರ ಅವಸ್ಥೆ ಕಂಡು ಜೋರಾಗಿ ನಕ್ಕುಬಿಟ್ಟರು. ಅವರು ಆ ಅತೀ ಸಾಧು ಹುಡುಗನಾದ ಅಚ್ಯುತನಿಗೆ ನೀನು ಜಾಲರಿಯನ್ನು ಕಾಸಿ ಯಾಕೆ ಪಕ್ಕಕ್ಕೆ ಇಟ್ಟುಕೊಂಡೆ? ಎಂದು ರೇಗಿ ಸಿಕ್ಕಾಪಟ್ಟೆ ಬೈಯ್ಯಲು ಶುರುಮಾಡಿದರು. ಪಾಪ! ಅಚ್ಯುತನು ವಿಷಯವೇನು ಎಂದು ಗೊತ್ತಾಗದೆ ಗಡಗಡ ನಡುಗುತ್ತಿದ್ದನು. ಆಗ, ನಮ್ಮ ಕ್ಲಾಸಿನ ವಿದ್ಯಾರ್ಥಿಗಳೆಲ್ಲಾ ಪ್ರಯೋಗಶಾಲೆಯ ಸೂರು ಎಗರಿಹೋಗುವಂತೆ ನಗುತ್ತಿದ್ದರು. ನಾರಾಯಣ ಮಾಸ್ಟರು ಸಿಟ್ಟು ಮತ್ತು ಅಪಮಾನದಿಂದ ಕುದಿಯುತ್ತಾ ಕೆಂಪುಕೆಂಪಾಗಿದ್ದರು. ಆ ಉದ್ವೇಗದಲ್ಲಿ, ನಾರಾಯಣ ಮಾಸ್ಟರು ಅಚ್ಯುತನನ್ನು ಕ್ಲಾಸಿನಿಂದ ಹೊರಗೆ ಕಳುಹಿಸಿಯೂ ಆಯಿತು! ತನಗೆ ಫಿಸಿಕಲ್ ಬ್ಯಾಲೆನ್ಸ್‌ನಲ್ಲಿ ಮೂಸೆಯನ್ನು ತೂಗಿ ಅಳೆಯಲು ಸಹಾಯಮಾಡದ ಬುದ್ಧಿವಂತನಿಗೆ ತೆನ್ನಾಲಿ ರಾಮಕೃಷ್ಣ ಚೆನ್ನಾಗಿ ಪಾಠಕಲಿಸಿದ್ದ. ಇಂತಹಾ ಘಟನೆಗಳ ನಂತರ ಯಾರೂ ರಾಮಕೃಷ್ಣನ ಅವಕೃಪೆಗೆ ಹೆದರುತ್ತಿದ್ದರು. ಆದರೆ ಸ್ವಭಾವತಃ ರಾಮಕೃಷ್ಣ ಪರೋಪಕಾರಿಯೇ ಆಗಿದ್ದ.

ಶಾಲೆಯ ಕಂಪೌಂಡಿನಲ್ಲಿ ನಮ್ಮ ಕನ್ನಡ ಮಾಸ್ಟರ್ ಪುಟ್ಟಣ್ಣಶೆಟ್ಟರು ಹಲವಾರು ತೆಂಗು ಹಾಗೂ ಮಾವಿನ ಸಸಿಗಳನ್ನು ನೆಡಿಸಿದ್ದರು. ಅವಕ್ಕೆ ವಿದ್ಯಾರ್ಥಿಗಳ ಕೈಯಲ್ಲಿ ಸರದಿ ಪ್ರಕಾರ ನೀರು ಹಾಕಿಸುತ್ತಿದ್ದರು. ನಾವು ಆಳವಾದ ಬಾವಿಯಿಂದ ನೀರು ಸೇದಿ ತಂದು ಆ ಗಿಡ ಮರಗಳಿಗೆ ನೀರು ಉಣ್ಣಿಸಬೇಕಿತ್ತು. ಪುಟ್ಟಣ್ಣಶೆಟ್ಟರು ಒಬ್ಬ ಅಸಾಮಾನ್ಯ ಕನ್ನಡ ಪಂಡಿತ. ಕನ್ನಡ ವ್ಯಾಕರಣದ ಹಲವಾರು ಉತ್ತಮ ಪುಸ್ತಕಗಳನ್ನು ಅವರು ಬರೆದಿದ್ದರು. ಪುಟ್ಟಣ್ಣಶೆಟ್ಟರಿಗೆ ಮೂಗಿನ ತುದಿಯಲ್ಲೇ ಕೋಪ! ಅವರು ಏನು ಅಣತಿ ಇತ್ತರೂ ನಾವು ಮರುತ್ತರ ನೀಡದೆ ಪರಿಪಾಲಿಸುತ್ತಿದ್ದೆವು. ತಾನು ನೆಡಿಸಿದ ಗಿಡಮರಗಳೆಂದರೆ ಅವರಿಗೆ ಬಹಳ ಪ್ರೀತಿ. ಅವರು ಶಾಲೆಯ ಆವರಣದಲ್ಲಿ ಇದ್ದ ಎಲ್ಲಾ ಗಿಡಗಳಿಗೆ ಬೇಸಗೆಯ ದಿನಗಳಲ್ಲಿ ವಿದ್ಯಾರ್ಥಿಗಳ ಕೈಯ್ಯಿಂದ ತಪ್ಪದೇ ನೀರು ಎರೆಸುತ್ತಿದ್ದರು.

ರಾಮಕೃಷ್ಣನು ಐದು ತೆಂಗಿನ ಮರಗಳ ಜವಾಬ್ಡಾರಿಯನ್ನು ಸ್ವಂತ ಉಮೇದಿನ ಮೇಲೆ ವಹಿಸಿಕೊಂಡು ಅವಕ್ಕೆ ತಾನೊಬ್ಬನೇ ವರ್ಷವಿಡೀ ಬಾವಿಯಿಂದ ನೀರು ಸೇದಿ ಹಾಕುತ್ತಿದ್ದ. ಯಾಕೋ, ಆತನಿಗೂ ಮರಗಳೆಂದರೆ ತುಂಬಾ ಪ್ರೀತಿ. ಪುಟ್ಟಣ್ಣಶೆಟ್ಟರ ಕ್ಲಾಸಿನಲ್ಲೂ ನಮ್ಮ ತೆನಾಲಿರಾಮ ಚೇಷ್ಟೆ ಮಾಡುತ್ತಿದ್ದ. ಬೈಗಳೂ ತಿನ್ನುತ್ತಿದ್ದ, ಆದರೆ ವೃಕ್ಷಪ್ರೇಮಿ ಎಂಬ ಕಾರಣಕ್ಕೆ ಪುಟ್ಟಣ್ಣಶೆಟ್ಟರು ಆತನನ್ನು ಹೊಡೆಯುತ್ತಿರಲಿಲ್ಲ.

ನಮಗೆ ಸಾಮಾಜಿಕ ಅಧ್ಯಯನ ಕಲಿಸುತ್ತಿದ್ದ ಹಾಜೀ ಮಾಸ್ತರರು ಕೂಡಾ ತುಂಬಾ ಸ್ಟ್ರಿಕ್ಟ್! ಅವರ ನಿಜ ನಾಮಧೇಯ ಯಾರಿಗೂ ಗೊತ್ತಿರಲಿಲ್ಲ. ಅವರು ಬಹು ಚಿಕ್ಕ ಪ್ರಾಯದಲ್ಲೇ ಪವಿತ್ರ ಹಜ್ ಯಾತ್ರೆ ಮಾಡಿ ಹಾಜೀ ಎನಿಸಿಕೊಂಡಿದ್ದರು. ತೆಳ್ಳಗೆ ಎತ್ತರವಾಗಿ ಇದ್ದ ಅವರದು ಗೌರವ ಮೂಡಿಸುವ ವ್ಯಕ್ತಿತ್ವ. ಯಾವಾಗಲೂ ಶ್ವೇತ ವಸನ ಧಾರಿಯಾದ ಅವರು ಬಿಳಿಯ ಪೈಜಾಮಾ ಜುಬ್ಬ ಮತ್ತು ತಲೆಗೆ ತಲೆಗೆ ಬಿಳಿ ಮುಂಡಾಸು ಧರಿಸುತ್ತಿದ್ದರು. ಅವರು ಕನ್ನಡಕ ಧಾರಿಯಾಗಿದ್ದರೂ, ಪ್ರಕಾಶಮಾನವಾದ ಚುರುಕಾದ ಕಣ್ಣುಗಳನ್ನು ಹೊಂದಿದ್ದರು. ಅವರು ಪಾಠಗಳನ್ನು ಚೆನ್ನಾಗಿಯೇ ಮಾಡುತ್ತಿದ್ದರು. ಕ್ಲಾಸಿನ ಹೊರಗೆ ಅವರು ಮಿತಭಾಷಿ, ತನ್ನ ಕೆಲಸ ಮುಗಿದ ಕೂಡಲೇ ತನ್ನ ಸೈಕಲ್ ಹತ್ತಿ ಮಸೀದಿಯ ಮದರಸಾಕ್ಕೆ ಧಾವಿಸಿ ಅರೆಬಿಕ್ ಗ್ರಂಥಗಳನ್ನು ಓದುತ್ತಿದ್ದರು, ಅಥವಾ ಅರೆಬಿಕ್ ಗ್ರಂಥಗಳನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ಮನನವಾಗುವಂತೆ ಕಲಿಸುತ್ತಿದ್ದರು. ಅವರು ಸಿಟ್ಟುಗೊಳ್ಳುವುದೂ ಅಪರೂಪ. ಅಂತೆಯೇ, ನಗುವುದೂ ಅಪರೂಪ. ಅವರನ್ನು ಕಂಡರೆ ಊರಿನ ಜನರೆಲ್ಲರೂ ಗೌರವ ತೋರುತ್ತಿದ್ದರು.

ಹೀಗಿರುವಾಗ, ಒಂದು ದಿನ ನಮ್ಮ ಕ್ಲಾಸಿನವರು ಸುಮಾರು ಇಪ್ಪತ್ತೈದು ಮೈಲು ದೂರದ ಕಾರ್ಕಳಕ್ಕೆ ಮತ್ತು ಅಲ್ಲಿಂದ ಹನ್ನೆರಡು ಮೈಲಿ ದೂರದ ಮೂಡಬಿದರೆಗೆ ಪ್ರವಾಸ ಹೋಗುವುದೆಂದು ನಿಶ್ಚಯವಾಯಿತು. ಈ ಎರಡು ಸ್ಥಳಗಳು ಜೈನಶಿಲ್ಪಗಳಿಗೆ ಹೆಸರಾಗಿವೆ. ನಮ್ಮ ಕ್ಲಾಸಿನಲ್ಲಿದ್ದ ಆರು ಜನ ಹುಡುಗಿಯರು ಆ ಪ್ರವಾಸ ಎರಡು ದಿನಗಳ ಕಾಲದ ಪ್ರವಾಸವಾಗಿದ್ದುದರಿಂದ ಬರಲು ಒಪ್ಪಲಿಲ್ಲ. ಆದ್ದರಿಂದ, ನಾವು ಸುಮಾರು ಮೂವತ್ತು ಜನ ಹುಡುಗರು ಮಾತ್ರ ಹಾಜೀ ಮಾಸ್ತರರ ಜತೆಯಲ್ಲಿ ಪ್ರವಾಸ ಹೋಗಿ ಬರುವುದೆಂದು ನಿಶ್ಚಯವಾಯಿತು. ನಮ್ಮ ವಸತಿಗೆ ಕಾರ್ಕಳದ ಹೈಸ್ಕೂಲಿನಲ್ಲಿ ನಮಗೆ ಜಾಗ ಒದಗಿಸಲ್ಪಟ್ಟಿತು. ನಮ್ಮ ಊಟಕ್ಕೆ ಕಾರ್ಕಳದ ಇಡ್ಲಿ ಬೆಣ್ಣೆ ಹೋಟೆಲ್ ಎಂದೇ ಪ್ರಸಿದ್ಧವಾದ ಕೃಷ್ಣಭವನದಲ್ಲಿ ಎರ್ಪಾಡು ಮಾಡಲಾಯಿತು. ನಾವು ರಾತ್ರಿ ತಂಗಲಿದ್ದ ಹೈಸ್ಕೂಲಿನಲ್ಲೇ, ನಾವು ನಮ್ಮ ಬೆಳಗಿನ ತಿಂಡಿಯನ್ನು ಹಾಜೀ ಮಾಸ್ತರರ ಮೇಲ್ವಿಚಾರಣೆಯಲ್ಲಿ ನಾವುಗಳೇ ತಯಾರಿಸಿ ತಿಂದು ಕಾರ್ಕಳದ ಗೊಮ್ಮಟ ಗುಡ್ಡಕ್ಕೆ ಬಿಸಿಲೇರುವ ಮೊದಲೇ ಏರಿ ಹೋಗುವುದೆಂದು ಪೂರ್ವ ನಿಶ್ಚಿತವಾಗಿತ್ತು.

ನಮ್ಮಲ್ಲಿ ಹಲವರಿಗೆ ಈ ಬೆಳಗಿನ ತಿಂಡಿ ತಯಾರಿಸಿಕೊಂಡು ತಿನ್ನುವ ಪ್ಲಾನ್ ಇಷ್ಟವಾಗಲಿಲ್ಲ. ಗುಂಪಿನಲ್ಲಿ ರಾಮಕೃಷ್ಣನೂ ಸೇರಿದ್ದ. ನಮ್ಮ ನಾಖುಷಿಗೆ ಕಾರಣ, ನಮಗೆ ಹೊಟ್ಟೆ ತುಂಬಾ ಕಾರ್ಕಳದ ಸುಪ್ರಸಿದ್ಧವಾದ ಹೋಟೆಲಿನ ಇಡ್ಲಿ ಬೆಣ್ಣೆ ಸವಿಯಬೇಕಿತ್ತು! ಏನು ಮಾಡೊಣವೋ? ರಾಮಕೃಷ್ಣ! ಈ ಹಾಜೀ ಮಾಸ್ಟರ್ ನಮಗೆ ಆ ಹಾಳು ಅವಲಕ್ಕಿ ಮತ್ತು ಬಾಳೇಹಣ್ಣು ತಿನ್ನಿಸಿ ಗೊಮ್ಮಟ ಗುಡ್ಡಕ್ಕೆ ಕರೆದುಕೊಂಡು ಹೋಗುವ ಪ್ಲಾನ್ ಮಾಡಿದ್ದಾರಲ್ಲ ಎಂದು ನಾವು ದುಃಖಿಸಿದರೆ, ನಮ್ಮ ಪುಂಡರ ಗುಂಪಿನ ಗುರು ರಾಮಕೃಷ್ಣನು ನೀವೆಲ್ಲಾ ಸುಮ್ಮನಿರಿ, ಏನಾದರೂ ಉಪಾಯ ಮಾಡೋಣ! ಎಂದು ಸುಮ್ಮನಾದ.

ಅಂತೂ ನಾವು ಪ್ರವಾಸ ಹೊರಡುವ ದಿನ ಬಂತು. ನಾವು ನಮ್ಮ ನಮ್ಮ ಬಟ್ಟೆಬರೆ ಮತ್ತು ಹೊದೆಯಲು ಬೆಡ್‌ಶೀಟ್ ಇವನ್ನು ಹೊಂದಿಸಿಕೊಂಡು ಹೊರಟೆವು. ಹಾಜಿ ಮಾಸ್ಟರು ನಮ್ಮ ಬೆಳಗಿನ ತಿಂಡಿಗಾಗಿ ಒಳ್ಳೆಯ ಅವಲಕ್ಕಿ, ತೆಂಗಿನಕಾಯಿ, ಉಪ್ಪು, ಹುಳಿ, ಬೆಲ್ಲ, ಸಕ್ಕರೆ, ಚಾ ಪುಡಿ, ಹಾಲಿನ ಪುಡಿ ಎಲ್ಲಾ ಖರೀದಿಸಿದ್ದರು. ಈ ಸಾಮಗ್ರಿಗಳ ಜೊತೆಗೆ ಒಂದು ಸೀಮೆ‌ಎಣ್ಣೆಯ ಸ್ಟೋವನ್ನು ಚಾ ಮಾಡಲು ಬೇಕಾಗುತ್ತೆ ಎಂದು ಇರಿಸಿದ್ದರು. ಒಂದು ದೊಡ್ಡ ಗೊನೆ ಚೆನ್ನಾಗಿ ಕಳಿತ ಬಾಳೆಹಣ್ಣು ಕೂಡಾ ನಮ್ಮ ಲಗ್ಗೇಜ್ ಸೇರಿತು. ಎಲ್ಲರೂ ಉಮೇದಿನಿಂದ ಆ ಶನಿವಾರ ಮಧ್ಯಾಹ್ನದ ಕಾರ್ಕಳಕ್ಕೆ ಹೋಗುವ ಹನುಮಾನ್ ಕಂಪೆನಿಯ ಬಸ್ ಹಿಡಿದು ಹೊರಟೆವು. ಕಾರ್ಕಳಕ್ಕೆ ಹೋಗುವಾಗ ಬಸ್ಸಿನಲ್ಲಿ ಹಾಡು, ಅಂತ್ಯಾಕ್ಷರಿ ಕಾರ್ಯಕ್ರಮಗಳೆಲ್ಲಾ ನಡೆದುವು.

ಕಾರ್ಕಳದ ಬಸ್‌ಸ್ಟ್ಯಾಂಡ್ ಪಕ್ಕದಲ್ಲೇ ಇದ್ದ ಕೃಷ್ಣಭವನಕ್ಕೆ ನಾವು ಸಂಜೆಯ ಟೀ ಸೇವಿಸಲು ಹೋದೆವು. ಅಲ್ಲಿ, ಆ ಹೊತ್ತಿನಲ್ಲಿ ನಮ್ಮ ಪ್ರೀತಿಯ ಇಡ್ಲಿ-ಬೆಣ್ಣೆ ಇರಲಿಲ್ಲ. ಕೇವಲ ಬೆಳಗಿನ ಹೊತ್ತು ಅಲ್ಲಿ ಇಡ್ಲಿ-ಬೆಣ್ಣೆ ದೊರಕುತ್ತಿತ್ತಂತೆ! ಹಾಜೀ ಮಾಸ್ಟರರು ನಮಗೆಲ್ಲಾ ಬನ್ಸ್ ಮತ್ತು ಮಸಾಲೆ ದೋಸೆ ಕೊಡಿಸಿದರು. ಅಲ್ಲಿಂದ ನಾವು ನಮ್ಮ ರಾತ್ರಿಯ ಬಿಡಾರವಾದ ಕಾರ್ಕಳದ ಹೈಸ್ಕೂಲಿಗೆ ನಡೆದೆವು. ಆ ಶಾಲೆಯವರು ನಮಗೆ ಚೊಕ್ಕಟಗೊಳಿಸಿದ ಕ್ಲಾಸ್ ರೂಮ್‌ಗಳನ್ನು ನಮ್ಮ ವಾಸಕ್ಕೆ ನೀಡಿದರು. ಪ್ರತಿರೂಮಿನಲ್ಲೂ ಬೇಕಾದಷ್ಟು ಬೆಂಚ್ಗಳು  ಇದ್ದುವು. ನಾವುಗಳು ಹತ್ತು ಹತ್ತು ಜನರು ಒಂದೊಂದು ಕ್ಲಾಸ್ ರೂಮಿನಲ್ಲಿ ಉಳಿಯುವುದು ಎಂದು ತೀರ್ಮಾನವಾಯಿತು. ರಾತ್ರಿ ಬೆಳಕಿಗೆಂದು ಮೂರು ಗ್ಯಾಸ್‌ಲೈಟುಗಳನ್ನು ಕೂಡಾ ಶಾಲೆಯವರು ಒದಗಿಸಿದ್ದರು. ನಮಗೆ ಒದಗಿಸಲ್ಪಟ್ಟ ನಾಲ್ಕು ಕೋಣೆಗಳಲ್ಲಿ ಒಂದನ್ನು ನಮ್ಮ ಉಪಾಧ್ಯಾಯರಿಗೆ ಮೀಸಲಿಟ್ಟು, ಆ ಕೋಣೆಯಲ್ಲೇ ನಮ್ಮ ಬೆಳಗಿನ ಉಪಹಾರ ತಯಾರಿಸಲು ಬೇಕಾಗುವ ಸಾಮಗ್ರಿ ಇರಿಸಿದೆವು. ಶಾಲೆಯಲ್ಲಿ ಶೌಚಗೃಹಗಳಿದ್ದರೂ ಸ್ನಾನಕ್ಕೆ ಕೊಠಡಿಗಳು ಇರಲಿಲ್ಲ. ಆದ್ದರಿಂದ ನಾವು ಮರುದಿನದ ಸ್ನಾನವನ್ನು ಅಡ್ವಾನ್ಸ್ ಆಗೇ ಮಾಡಲು ನಿರ್ಧರಿಸಿ ಶಾಲೆಯ ಬಾವಿಯ ಕಟ್ಟೆಯಲ್ಲಿ ಎಲ್ಲರೂ ಒಟ್ಟಾಗಿ ಕೊಡ ತುಂಬಾ ನೀರು ಸೇದಿಕೊಂಡು,  ತಣ್ಣೀರಿನ ಸ್ನಾನ ಮಾಡಿದೆವು. ಸ್ನಾನಮುಗಿಸಿ, ಒದ್ದೆ ಟವಲುಗಳನ್ನು ಪಕ್ಕದಲ್ಲೇ ಒಣಹಾಕಿದೆವು. ಹಾಜಿ ಸಾಹೇಬರೂ ಸಂಜೆಯ ಸ್ನಾನದ ಶಾಸ್ತ್ರಮಾಡಿ, ಮುಸ್ಸಂಜೆಯ ಹಾಗೂ ಆ ನಂತರದ ಎರಡು ನಮಾಜುಗಳನ್ನು ಮುಗಿಸಿದರು. ಅಂದಾಜು ಎಂಟು ಗಂಟೆಯ ಸಮಯಕ್ಕೆ ಎಲ್ಲರೂ ಒಟ್ಟಾಗಿ ಕೃಷ್ಣಭವನ ಹೋಟೆಲ್ಲಿಗೆ ಹೋಗಿ ಹೊಟ್ಟೆ ತುಂಬಾ ಊಟಮಾಡಿ ಬಂದೆವು. ಆಗ ಆ ಹೋಟೆಲ್ಲಿನಲ್ಲಿ ಫುಲ್ ಊಟಕ್ಕೆ ಆರು ಆಣೆ (ಮೂವತ್ತೇಳು ಪೈಸೆ) ಚಾರ್ಜ್ ಇತ್ತು. ಪ್ಲೇಟ್ ಊಟಕ್ಕೆ ನಾಲ್ಕು ಆಣೆ (೨೫ ಪೈಸೆ) ಚಾರ್ಜ್ ಇತ್ತು. ನಾವು ಪ್ರವಾಸೀ ವಿದ್ಯಾರ್ಥಿಗಳು ಎಂಬ ಕಾರಣಕ್ಕೆ ಹೋಟೆಲ್ ಮಾಲಿಕರು ನಮಗೆ ನಾಲ್ಕು ಆಣೆಗೇ ಫುಲ್ ಊಟ ಹಾಕಿದರು! ಸ್ವಲ್ಪ ಕೂಡಾ ದಾಕ್ಷಿಣ್ಯ ಮಾಡದೇ, ನಾವು ಹೊಟ್ಟೆ ತುಂಬಾ ಉಂಡೆವು. ಹೋಟೆಲ್ ಮಾಲಿಕರು ನಾವು ಸ್ಕೂಲ್ ಮಕ್ಕಳು ಎಂಬ ಪ್ರೀತಿಯಿಂದ ಪದೇಪದೇ ವಿಚಾರಿಸಿ, ಬಡಿಸಿ ಉಪಚರಿಸಿದರು. ಈಗಿನ ಕಾಲದಲ್ಲಿ ಆ ರೀತಿ ಉಪಚಾರ ಯಾವ ಹೋಟೆಲಿನಲ್ಲಿ ನೀಡುತ್ತಾರೆ? ನಾವು ಹೋಟೆಲ್ ಯಜಮಾನರ ಹತ್ತಿರ ಬೆಳಗ್ಗೆ ಎಷ್ಟು ಹೊತ್ತಿಗೆ ತಮ್ಮಲ್ಲಿ ‘ಇಡ್ಲಿ-ಬೆಣ್ಣೆ ಸಿಗುತ್ತೆ? ಎಂದು ವಿಚಾರಿಸಿದೆವು. ಅದಕ್ಕೆ ಅವರು ಬೆಳಗ್ಗೆ ಆರೂವರೆ ಗಂಟೆಯಿಂದಲೇ ತಮ್ಮ ಹೋಟೆಲಿನಲ್ಲಿ ಇಡ್ಲಿ-ಬೆಣ್ಣೆ ಮತ್ತು ಬನ್ಸ್ ತಯಾರಾಗುತ್ತವೆ ಮತ್ತು ಸಾಧಾರಣ ಮಧ್ಯಾಹ್ನ ಹನ್ನೆರಡರವರೆಗೂ, ಈ ತಿಂಡಿಗಳು ದೊರೆಯುತ್ತವೆ ಎಂದು ಉತ್ತರಿಸಿದರು.

ನಾವು ಹೈಸ್ಕೂಲಿಗೆ ಬಂದು ಮಲಗುವ ತಯಾರಿ ನಡೆಸಿದೆವು. ಮಲಗುವ ಮೊದಲು ಎಲ್ಲರೂ ರಾಮಕೃಷ್ಣಾ! ಈ ಹಾಜೀ ಮಾಸ್ಟರ ‘ಬೆಳಗಿನ ಅವಲಕ್ಕಿ ಉಪ್ಕರಿ ತಯಾರಿಸುವ ಪ್ರೋಗ್ರಾಮಿನಿಂದಾಗಿ ‘ಇಡ್ಲಿ-ಬೆಣ್ಣೆ ತಪ್ಪುತ್ತಲ್ಲೋ! ಎಂದು ನಮ್ಮ ಸಂಕಟ ವ್ಯಕ್ತಪಡಿಸಿದೆವು. ಆಗ ರಾಮಕೃಷ್ಣ ಅದಕ್ಕೆ ಯಾಕೆ ಚಿಂತೆ ಮಾಡುತ್ತೀರಿ? ಬೆಳಗ್ಗೆ ಎಲ್ಲರಿಗೂ ಕೃಷ್ಣಭವನದ ಇಡ್ಲಿ-ಬೆಣ್ಣೆ ಮತ್ತು ಬನ್ಸ್‌ಗಳ ಉಪಹಾರ ಖಚಿತ ಎನ್ನುತ್ತ ಮಲಗಿಯೇಬಿಟ್ಟ!. ನಾವು ಹೊಸಜಾಗದಲ್ಲಿ ಗಟ್ಟಿಯಾದ ಮರದ ಬೆಂಚುಗಳ ಮೇಲೆ ಪಿಳಿಪಿಳಿ ಕಣ್ಣುಬಿಡುತ್ತಾ,  ಬಹಳ ಹೊತ್ತು ನಿದ್ದೆಮಾಡಲಾಗದೇ ಚಡಪಡಿಸಿ ಕೊನೆಗೂ ನಿದ್ದೆಹೋದೆವು.

ಬೆಳಗಿನ ಜಾವ ನಾಲ್ಕಕ್ಕೆ ಹಾಜೀ ಮಾಸ್ಟರರ ಅಲಾರ್ಮ್ ಗಡಿಯಾರ ರಿಂಘಣಿಸಿತು. ಅವರು ಕೂಡಲೇ ಎದ್ದು, ಅವರ ಕೋಣೆಯಿಂದ ಟಾರ್ಚ್ ಬೆಳಗುತ್ತಾ ಬಾವಿಕಟ್ಟೆ ಮತ್ತು ಶೌಚಗೃಹಗಳ ಕಡೆಗೆ ತಮ್ಮ ಪ್ರಾಥರ್ವಿಧಿ ಮುಗಿಸಿಕೊಳ್ಳಲು ನಡೆದರು. ಅವರು ತಮ್ಮ ಬೆಳಗಿನ ಐದು ಗಂಟೆಯ ನಮಾಜು ಎಂದೂ ತಪ್ಪಿಸುತ್ತಿರಲಿಲ್ಲ. ನಮ್ಮಲ್ಲೂ ನಿದ್ರೆಬಾರದ ಕೆಲಹುಡುಗರು ಎದ್ದು ಕುಳಿತರು. ಕೆಲವರು ಹೊರನಡೆದರೆ,  ಉಳಿದ ಹಲವರು ಮಲಗಿಕೊಂಡೇ, ಏನೇನೊ ಕಾಡುಹರಟೆಯಲ್ಲಿ ತಲ್ಲೀನರಾದರು. ಹಾಜೀ ಮಾಸ್ಟರು ಹಿಂದಿರುಗುವ ಸೂಚನೆ ಕಂಡೊಡನೆಯೇ, ಎಲ್ಲಾ ಹುಡುಗರೂ ಗಪ್‌ಚುಪ್ ಆಗಿ ಪುನಃ ತಮ್ಮ ಬೆಂಚುಗಳನ್ನು ಸೇರಿ ನಿದ್ರೆಮಾಡಲು ಪ್ರಯತ್ನಿಸಿದರು. ನಮ್ಮ ಹಾಜೀ ಮಾಸ್ಟರು ನಮಾಜು ಮಾಡುವಾಗ ಎಲ್ಲರೂ ಮೌನವಾಗಿರಬೇಕು ಎಂಬ ಪ್ರಜ್ಞೆ ಎಲ್ಲರಿಗೂ ಇತ್ತು. ಮಾಸ್ಟರರ ನಮಾಜು ಮುಗಿಯುವಾಗ ಸಾಧಾರಣವಾಗಿ ಬೆಳಕು ಹರಿದಿತ್ತು. ಬೆಳಗಿನ ತಂಪು ಹವೆಗೆ ಹೆಚ್ಚಿನವರು ಪುನಃ ಗಾಢ ನಿದ್ರಾಪರವಶರಾಗಿದ್ದರು. ಬೆಳಗಿನ ಆರೂವರೆಗೆ ಹಾಜೀ ಮಾಸ್ತರು ನಮ್ಮನ್ನು ಹಾಸಿಗೆ ಬಿಟ್ಟು ಏಳಲು ಆಜ್ಞೆಯಿತ್ತರು. ನಾವೆಲ್ಲರೂ ಗಡಿಬಿಡಿಯಿಂದ ಎದ್ದೆವು. ತೆನಾಲಿ ರಾಮಕೃಷ್ಣ ಮಾತ್ರ ಗಾಢನಿದ್ದೆಯಲ್ಲೇ ಇದ್ದ! ಹಾಜೀ ಮಾಸ್ಟರೇ ಆತನನ್ನು ತಟ್ಟಿ ಎಬ್ಬಿಸಬೇಕಾಯಿತು. ಆತ ಅವರ ಕ್ಷಮೆ ಕೇಳುತ್ತಾ ಎದ್ದು ಬಾವಿಕಟ್ಟೆಯ ಕಡೆಗೆ ಓಡಿದ!

ಏಳು ಗಂಟೆಗೆ ಸರಿಯಾಗಿ ಹಾಜೀ ಮಾಸ್ಟರರು ಬೆಳಗಿನ ಅವಲಕ್ಕಿ ಮತ್ತು ಚಾ ತಯಾರಿಸೋಣ, ಎನ್ನುತ್ತಾ ಪರಿಕರಗಳನ್ನು ಅವರ ಕೋಣೆಯಿಂದ ಜಗಲಿಗೆ ತಂದಿಡಲು ಕೆಲವು ಹುಡುಗರಿಗೆ ಆಣತಿ ಇತ್ತರು. ಕೋಣೆಗೆ ಹೋದ ಹುಡುಗರು ವಾಪಾಸ್ ಓಡಿಬರುತ್ತಾ ಸಾರ್! ನಿಮ್ಮ ರೂಮಿನಲ್ಲಿ ಬಾಳೆಹಣ್ಣು ಮತ್ತು ಸ್ಟೊವ್ ಮಾತ್ರ ಇವೆ! ಅವಲಕ್ಕಿ, ಸಕ್ಕರೆ, ಮಸಾಲೆ ಸಾಮಾನು, ಚಾಪುಡಿ ಮತ್ತು ಹಾಲುಪುಡಿ ಯಾವುವೂ ಕಾಣುವುದಿಲ್ಲ..! ಎಂದರು. ಸ್ವತಃ ಮಾಸ್ಟರೇ ಹೋಗಿ ತಮ್ಮ ಕೋಣೆಯನ್ನು ಪರೀಕ್ಷಿಸಿದರು. ಹುಡುಗರು ಹೇಳಿದ ಮಾತು ನಿಜವಾಗಿತ್ತು. ಹಾಜೀ ಮಾಸ್ಟರು ನಮ್ಮನ್ನೆಲ್ಲಾ ಸಾಲಾಗಿ ನಿಲ್ಲಿಸಿ, ಅವಲಕ್ಕಿ ಹಾಗೂ ಇತರೇ ಪದಾರ್ಥಗಳಿದ್ದ ರಟ್ಟಿನ ಬಾಕ್ಸ್ ಎಲ್ಲಿ? ಎಂದು ನಮ್ಮನ್ನೆಲ್ಲಾ ಗದರಿ ಕೇಳಿದರು. ಯಾರನ್ನು ಕೇಳಿದರೂ ಗೊತ್ತಿಲ್ಲ ಎಂಬ ಉತ್ತರ ಬರಲು, ರಾಮಕೃಷ್ಣನ ‘ಚೇಷ್ಟೆ ಸ್ವಭಾವ ಗೊತ್ತಿದ್ದ ಅವರು ಅವನನ್ನು ಗದರಿ ಕೇಳಿದರು. ಅದಕ್ಕೆ ಅವನು ಸಾರ್! ತಾವು ಎಬ್ಬಿಸುವ ತನಕ ನಾನು ಮಲಗಿಯೇ ಇದ್ದೆ! ನನಗೇನೂ ಗೊತ್ತಿಲ್ಲ! ಎಂದು ಹೆದರಿ ಉತ್ತರಿಸಿದ. ಮಾಸ್ಟರಿಗೆ ಬಹಳ ಕೋಪ ಬಂದಿತ್ತು. ಆದರೆ, ಅಪರೂಪವಾಗಿ ಪ್ರವಾಸಕ್ಕೆ ಬಂದ ಶಾಲಾಮಕ್ಕಳನ್ನು ಬೆಳಗಾಗುತ್ತಲೇ ಬೈದು ಪ್ರವಾಸದ ಅನುಭವವನ್ನೇ ಕಹಿಯಾಗಿಸಲು ಅವರ ಮನಸ್ಸು ಒಡಂಬಡಲಿಲ್ಲ.

ನನಗೆ ಗೊತ್ತು, ಇದು ನಿಮ್ಮ ಆಟವೇ! ಸರಿ, ಈಗ ನಾವು ಭಟ್ಟರ ಕೃಷ್ಣಭವನ ಹೋಟೆಲಿಗೆ ಹೋಗಿ ಎಲ್ಲರೂ ಬೇಗ ಉಪಹಾರ ಮುಗಿಸಿ, ನಮ್ಮ ಕಾರ್ಯಕ್ರಮದಂತೆ ಆದಷ್ಟು ಬೇಗ ಗೊಮ್ಮಟನ ಗುಡ್ಡವನ್ನು ಹತ್ತೋಣ ಎಂದು ಹೋಟೆಲ್ಲಿಗೆ ಕರೆದೊಯ್ದರು. ಹೋಟೆಲ್ ಮಾಲಿಕರು ನಮ್ಮನ್ನು ಸ್ವಾಗತಿಸಿ, ಎಲ್ಲರಿಗೂ ತಾನು ರಿಯಾಯತಿ ದರದಲ್ಲಿ ತಿಂಡಿ ಕೊಡುವುದಾಗಿ ತಿಳಿಸುತ್ತಾ, ಎಲ್ಲರಿಗೂ ಹೊಟ್ಟೆ ಬಿರಿಯುವಷ್ಟು ಇಡ್ಲಿ-ಬೆಣ್ಣೆ ಮತ್ತು ಬಿಸಿಬಿಸಿ ಬನ್ಸ್ ನೀಡಿದರು. ಕುಡಿಯಲು ಬೇಕಷ್ಟು ಚಹಾ ಕಾಫಿ ಕೂಡಾ ಕೊಟ್ಟರು. ನಮಗೆಲ್ಲಾ, ಅನಂದವೋ ಅನಂದ!.

ಮಾಸ್ಟರು ಹಣಕೊಡಲು ಹೋದಾಗ ಹೋಟೆಲ್ ಮಾಲಿಕರು ಒಬ್ಬರಿಗೆ ಎರಡು ಇಡ್ಲಿ-ಬೆಣ್ಣೆ, ಒಂದು ಬನ್ ಮತ್ತು ಒಂದು ಟೀಯಂತೆ ಲೆಕ್ಕಹಾಕಿ, ಅಷ್ಟು ಮಾತ್ರಕ್ಕೆ ಹಣ ತೆಗೆದುಕೊಂಡರು. ಮಾಸ್ಟರು ಇಲ್ಲಾ, ನಾವೆಲ್ಲ ಇದಕ್ಕಿಂತ ತುಂಬಾ ಹೆಚ್ಚಿಗೆ ತಿಂದಿದ್ದೇವೆ! ಎಂದರು. ಹೋಟೆಲ್ ಮಾಲಿಕ ಭಟ್ಟರು ನಗುತ್ತಾ ನನಗೆ ಮಕ್ಕಳಿಗೆ ಧರ್ಮಾರ್ಥವಾಗಿ ತಿಂಡಿ ಕೊಡಬೇಕು ಎಂಬ ಆಸೆ ಇದೆ, ಆದರೆ, ನನ್ನದು ಹೊಟ್ಟೆಪಾಡಿನ ವ್ಯಾಪಾರ! ಆದ್ದರಿಂದ, ನನಗೂ ಮಕ್ಕಳಿಗೆ ಹೊಟ್ಟೆತುಂಬಾ ತಿನ್ನಿಸಿದ ಪುಣ್ಯದ ಸ್ವಲ್ಪ ಪಾಲು ಬರಲಿ! ಮಾಸ್ಟರ್ ಜೀ, ದಯವಿಟ್ಟು ಮಧ್ಯಾಹ್ನ ಊಟಕ್ಕೆ ಮಕ್ಕಳನ್ನು ಕರೆದುಕೊಂಡು ಬನ್ನಿ. ಪ್ರತಿ‌ಊಟಕ್ಕೆ ನಾಲ್ಕು ಆಣೆ ಮಾತ್ರ ಚಾರ್ಜು ಮಾಡುವೆ! ಎಂದರು.

ನಾವು ಹೊಟ್ಟೆ ತುಂಬಾ ಇಡ್ಲಿಬೆಣ್ಣೆ ಮತ್ತು ಬನ್ಸ್ ಜಡಿದು ತಿಂದುದರಿಂದ ಏದುಸಿರು ಬಿಡುತ್ತಾ ಗೊಮ್ಮಟ ಗುಡ್ಡದ ಕಡೆಗೆ ಸಾಗಿದೆವು.

ನಾವು ಬಾಹುಬಲಿಮೂರ್ತಿಯ ದರ್ಶನಮಾಡಿ ಸುಮಾರು ಬೆಳಗಿನ ಹತ್ತುಗಂಟೆಯ ಹೊತ್ತಿಗೆ ಬೆಟ್ಟ ಇಳಿದು ಬಂದು, ಮೂಡುಬಿದರೆಯ ಬಸ್ ಹತ್ತಿ ಮೂಡಬಿದರೆಯ ಸಾವಿರ ಕಂಬದ ಬಸದಿಯನ್ನು ನೋಡಿಕೊಂಡು ಕಾರ್ಕಳದ ಬಸ್‌ಸ್ಟಾಂಡಿಗೆ ವಾಪಸ್ ಬಂದೆವು. ಆಗ ಮಧ್ಯಾಹ್ನ ಒಂದೂವರೆ ಗಂಟೆ ಆದುದರಿಂದ ತುಂಬಾ ಹಸಿದಿದ್ದೆವು. ಕೃಷ್ಣ ಭವನದ ಹೋಟೆಲ್ಲಿನ ಯಜಮಾನರು ನಮ್ಮನ್ನು ಸ್ವಾಗತಿಸಿ ಹೊಟ್ಟೆತುಂಬಾ ಊಟ ಬಡಿಸಿದರು. ನಮಗೋಸ್ಕರ ಸ್ಪೆಶಲ್ಲಾಗಿ ಹೆಸರುಬೇಳೆ ಪಾಯಸ ಮಾಡಿಸಿದ್ದರು. ಏಲ್ಲರಿಗೂ ಹೊಟ್ಟೆ ತುಂಬಾ ಬಡಿಸಿದರು. ನಾವೂ ಸಂಕೋಚವಿಲ್ಲದೇ ಊಟ ಮಾಡಿದೆವು. ನಾವೆಲ್ಲರೂ ಹೋಟೆಲ್ ಯಜಮಾನರ ಉದಾರತೆಯನ್ನು ಸ್ಮರಿಸಿ, ಅವರಿಗೆ ವಂದಿಸಿ, ನಮ್ಮ ಬಿಡಾರವಾದ ಹೈಸ್ಕೂಲಿಗೆ ವಾಪಸಾದೆವು.

ಮಾಸ್ಟರರ ಬೀಗಹಾಕಿದ ಕೋಣೆಯ ಎದುರು ನಮ್ಮ ಅವಲಕ್ಕಿ ಹಾಗೂ ಇತರೇ ವಸ್ತುಗಳು ಇದ್ದ ರಟ್ಟಿನ ಪೆಟ್ಟಿಗೆ ಇದ್ದಕ್ಕಿದ್ದಂತೆ ಹಾಜರಾಗಿತ್ತು! ಅದನ್ನು ಕಂಡು ನಮಗೆ ಮತ್ತು ನಮ್ಮ ಹಾಜೀ ಮಾಸ್ಟರಿಗೆ ಬಹಳ ಆಶ್ಚರ್ಯ..!

ನಾವು ಮೂವತ್ತು ಜನ ವಿದ್ಯಾರ್ಥಿಗಳು ಇದ್ದುದರಿಂದ ಸಾಯಂಕಾಲ ಐದೂವರೆಗೆ ಉಡುಪಿಗೆ ಹೊರಡುವ ಬಸ್ಸನ್ನು ಹೈಸ್ಕೂಲ್ ಬಳಿಗೇ ಕಳುಹಿಸುವುದಾಗಿ ಬಸ್ ಏಜಂಟರು ತಿಳಿಸಿದ್ದರು. ಮಧ್ಯಾಹ್ನ ಮೂರುಗಂಟೆಯಿಂದ ನಾಲ್ಕು ಗಂಟೆಯವರೆಗೆ ನಮಗೆ ಹಾಜೀ ಮಾಸ್ಟರರು ವಿಶ್ರಾಂತಿ ಘೋಷಿಸಿ, ನಮ್ಮನಮ್ಮ ಬ್ಯಾಗುಗಳನ್ನು ಕಟ್ಟಿ ತಯಾರಿಮಾಡಿ ಇರಿಸಲು ಹೇಳಿದರು. ಸಾಯಂಕಾಲದ ನಾಲ್ಕುಗಂಟೆಗೆ ಸರಿಯಾಗಿ ನಮ್ಮ ಉಪಹಾರಕ್ಕೆ ‘ಅವಲಕ್ಕಿ ಉಪ್ಪುಕರಿ ಮತ್ತು ಚಾ ಇವುಗಳ ತಯಾರಿ! ಎಂದರು. ನಾವು ನಮ್ಮ ಬ್ಯಾಗುಗಳನ್ನು ನಿಮಿಷಾರ್ಧದಲ್ಲೇ ಕಟ್ಟಿಟ್ಟೆವು. ಅವಲಕ್ಕಿ ಹಸನುಮಾಡಿಟ್ಟು, ತೆಂಗಿನಕಾಯಿ ತುರಿದೆವು. ಬಾವಿಯಿಂದ ನೀರು ಸೇದಿ ತಂದು, ನೀರು ಕುದಿಸಿ ಹಾಲಿನ ಪೌಡರ್ ಕರಗಿಸಿ ಅಮೇರಿಕನ್ ಹಾಲು ತಯಾರಿಸಿದೆವು. ನಮ್ಮ ದೇಶದಲ್ಲಿ ಹಾಲಿನ ಕೊರತೆ ಇದ್ದ ಆಗಿನ ದಿನಗಳಲ್ಲಿ ಅಮೇರಿಕನ್ ಹಾಲಿನ ಪುಡಿ ಮತ್ತು ಎಣ್ಣೆ ರೇಶನ್‌ಶಾಪ್‌ಗಳ ಮೂಲಕ ಹಂಚಲ್ಪಡುತ್ತಿತ್ತು. ಸರಿಯಾಗಿ ನಾಲ್ಕು ಗಂಟೆಗೆ ಹಾಜೀ ಮಾಸ್ಟರರು ಸ್ವತಃ ಬಾಣಲೆಯನ್ನು ಸ್ಟೋವ್ ಮೇಲಿರಿಸಿ, ಘಮ ಘಮ ಒಗ್ಗರಣೆ ಬೆರಸಿ ಅವಲಕ್ಕಿ ಉಪ್ಪುಕರಿ ಮಾಡಿದರು. ಜತೆಗೆ ಬಿಸಿಬಿಸಿ ಚಾ ಕೂಡಾ ತಯಾರಾಯಿತು! ನಾವೆಲ್ಲರೂ ಶಾಲೆಯ ಜಗಲಿಯ ಮೇಲೆ ಸಾಲಾಗಿ ಕುಳಿತು, ಅವಲಕ್ಕಿ, ಬಾಳೆಹಣ್ಣು ಮತ್ತು ಚಹಾ ಸೇವಿಸಿದೆವು. ಮಾಸ್ಟರ ಕೈ ದೊಡ್ಡದು! ನಮಗೆ ಹೊಟ್ಟೆ ತುಂಬಿಹೋಯಿತು! ಚಾ ಕೂಡಾ ಸ್ವಲ್ಪ ಜಾಸ್ತಿಯಾಗೇ ತಯಾರಿ ಮಾಡಿದುದರಿಂದ ನಮಗೆಲ್ಲಾ ಎರಡೆರಡು ಲೋಟ ಸಿಕ್ಕಿತು.

ಮಾಸ್ಟರು ತಯಾರಿಸಿದ್ದ ಅವಲಕ್ಕಿಯ ರುಚಿ ಅದ್ಭುತವಾಗಿತ್ತು..! ಇಂದಿಗೂ ನನಗೆ ಅವಲಕ್ಕಿ ತಿನ್ನುವಾಗ ಹಾಜೀ ಮಾಸ್ಟರು ತಯಾರಿಸಿದ್ದ ಅಂದಿನ ಅವಲಕ್ಕಿಯ ನೆನಪಾಗುತ್ತದೆ!

ಅಂದು ಬೆಳಗಿನ ಜಾವ ಅವಲಕ್ಕಿ, ಸಕ್ಕರೆ, ಚಾಪುಡಿ ಮತ್ತು ಹಾಲಿನಪುಡಿ ಇದ್ದ ರಟ್ಟಿನ ಪೆಟ್ಟಿಗೆಯನ್ನು ಎಗರಿಸಿ ಬಚ್ಚಿಟ್ಟು, ಮಧ್ಯಾಹ್ನ ಪುನಃ ಅದನ್ನು ಮಾಸ್ತರರ ರೂಮಿನ ಇದುರು ಇರಿಸಿದವರು ಯಾರು? ಎಂಬ ವಿಚಾರ ಯಾರಿಗೂ ಅಂದು ಊಹೆ ಮಾಡಲು ಸಾಧ್ಯವಾಗಲಿಲ್ಲ. ಶಾಲೆಯ ವಾಚ್‌ಮ್ಯಾನ್‌ನನ್ನು ಕೇಳೋಣ ಎಂದರೆ, ಕಳ್ಳತನವೇ ಅಪರೂಪವಾಗಿದ್ದ ಆ ಒಳ್ಳೆಯ ದಿನಗಳಲ್ಲಿ ಆ ಶಾಲೆಗೆ ಖಾಯಮ್ ವಾಚ್‌ಮ್ಯಾನ್ ಇರಲೇ‌ಇಲ್ಲ! ಇದೊಂದು ಯಕ್ಷಪ್ರಶ್ನೆಯಾಗೇ ಉಳಿಯಿತು ನಮ್ಮ ಹಾಜೀ ಮಾಸ್ಟರ ಮಟ್ಟಿಗೆ..! ನಮಗೆ ಈ ಪ್ರಶ್ನೆಗೆ ಒಂದು ವಾರದಲ್ಲಿ ಸಮಾಧಾನಕರ ಉತ್ತರ ಸಿಕ್ಕಿತ್ತು..!

ನಮ್ಮ ತೆನ್ನಾಲಿ ರಾಮಕೃಷ್ಣನು ಹಿಂದಿನ ಸಂಜೆ ಹೈಸ್ಕೂಲಿನ ಪಕ್ಕದಲ್ಲೇ ಇದ್ದ ಅವನ ಸಂಬಂಧಿಕರ ಮನೆಗೆ ಹೋಗಿ, ತಾನು ಅವರ ಜಗಲಿಯ ಮೇಲೆ ಮರುದಿನ ಬೆಳಗಿನ ಜಾವ ಒಂದು ರಟ್ಟಿನ ಪೆಟ್ಟಿಗೆ ತಂದು ಇರಿಸುವುದಾಗಿಯೂ, ಅದನ್ನು ಅವರುಗಳು ಮರುದಿನ ಮಧ್ಯಾಹ್ನ ಹನ್ನೆರಡು ಗಂಟೆಗೆ ಸರಿಯಾಗಿ ಮಾಸ್ಟರರ ರೂಮಿನ ಇದುರು ತಂದು ಇರಿಸಬೇಕಾಗಿಯೂ ಬೇಡಿಕೊಂಡಿದ್ದ. ಅವರು ಹೀಗೇಕೆ? ಎನ್ನಲು ಅವರಿಗೆ ನಿಜಸಂಗತಿಯನ್ನು ತಿಳಿಸಿದ್ದ. ನಿಜವಾದ ಕಾರಣ ತಿಳಿದ ಅವರು ಈ ಕೆಲಸ ಮಾಡಲು ಅವರ ಮನೆಯ ಹುಡುಗರನ್ನು ಒಪ್ಪಿಸಿ, ಅದೇ ರೀತಿ ಮಾಡಿದ್ದರು..! ಅಂತೂ, ನಮ್ಮ ತೆನಾಲಿ ರಾಮಕೃಷ್ಣನ ದಯೆಯಿಂದ ನಮಗೆ ಕಾರ್ಕಳದ ಕೃಷ್ಣಭವನದ ಇಡ್ಲಿ-ಬೆಣ್ಣೆ ಮತ್ತು ಬನ್ಸ್ ತಿನ್ನುವ ಅವಕಾಶ ಸಿಕ್ಕಿತ್ತು. ಈ ಅಪರೂಪದ ಅವಕಾಶ ಕೊಡಿಸಿದ್ದಕ್ಕೆ ನಾವು ರಾಮಕೃಷ್ಣನನ್ನು ಈಗಲೂ ನೆನೆಯುತ್ತೇವೆ.

ಈಗ ನಮಗೆ ಬೇಕೆಂದರೂ ಕೂಡಾ ಕಾರ್ಕಳದಲ್ಲಿ ಕೃಷ್ಣಭವನದಲ್ಲಿ ಇಡ್ಲಿಬೆಣ್ಣೆ ಸಿಗುವುದಿಲ್ಲ. ಕಾರಣ, ಆ ಹೋಟೆಲ್ಲಿನ ಮಾಲಿಕತ್ವ ಬದಲಾಗಿದೆ.

ಕಳೆದ ಮೇ ತಿಂಗಳಿನಲ್ಲಿ ನಾವು ಕಾರ್ಕಳ ದಾರಿಯಾಗಿ ಉಡುಪಿಗೆ ಹೋದಾಗ ಇಡ್ಲಿಬೆಣ್ಣೆ ಮತ್ತು ಬನ್ಸ್ ತಿನ್ನುವ ಆಸೆಯಿಂದ ಬೆಳಗಿನ ಒಂಬತ್ತಕ್ಕೇ ಅಲ್ಲಿಗೆ ತಲುಪಿದೆವು. ಆದರೆ. ಇಡ್ಲಿಬೆಣ್ಣೆಯ ಐಟಂ ಈಗ ಅವರ ಹೋಟೆಲ್ಲಿನಲ್ಲಿ ಇಲ್ಲವಂತೆ. ಬದಲಿಗೆ ಇಡ್ಲಿ ಸಾಂಬಾರ್ ಮತ್ತು ಚಟ್ನಿ ಸಿಕ್ಕಿತು! ಆದರೆ, ಹಿಂದಿನ ನೆನಪನ್ನು ತರುವ ಅದೇ ರುಚಿಯ ಬನ್ಸ್ ಮಾತ್ರ ಬಿಸಿಬಿಸಿಯಾಗಿ ದೊರಕಿತು. ನಮಗೆ ಬೇಕಾದಷ್ಟು ಬನ್ಸ್ ತಿಂದು, ದಾರಿ ಖರ್ಚಿಗೆ ಸ್ವಲ್ಪ ಕಟ್ಟಿಸಿಕೊಂಡೆವು.

ಜೊತೆಗೇ, ನನಗೆ ತೆನಾಲಿ ರಾಮನ ನೆನಪಾಯಿತು. ಉಡುಪಿಯಲ್ಲಿರುವ ಅವನ ಮನೆಯಲ್ಲಿ ವಿಚಾರಿಸಲು ಆತನು ಈಗ ಬ್ಯಾಂಕೊಂದರ ಮ್ಯಾನೇಜರನಾಗಿ ಉತ್ತರ ಭಾರತದಲ್ಲಿ ಇದ್ದಾನೆ ಎಂಬ ವಿಚಾರ ತಿಳಿದುಬಂತು.

ಇದು ನಾನು ಕಣ್ಣಾರೆ ಕಂಡ ತೆನಾಲಿ ರಾಮನ ಕಥೆ.

* * *