ಹಿಂದಿನ ಶತಮಾನದಿಂದಲೂ ಪೋಸ್ಟ್ ಮತ್ತು ಟೆಲಿಗ್ರಾಫ್ ಹಾಗೂ ರೈಲ್ವೇ, ಇವು ಭಾರತ ಸರಕಾರದ ಹೆಮ್ಮೆಯ ಇಲಾಖೆಗಳು. ನಮ್ಮ ದೇಶದ ಅಭಿವೃದ್ಧಿಗೆ ಈ ಇಲಾಖೆಗಳು ಗಣನೀಯ ದೇಣಿಗೆ ನೀಡಿರುತ್ತವೆ. ಈ ಲೇಖನದಲ್ಲಿ ನನ್ನ ನೆನಪಿನಲ್ಲಿರುವಂತೆ, ಐವತ್ತು ವರುಷಗಳ ಹಿಂದಿನ ಟೆಲಿಗ್ರಾಮ್ ಬಗ್ಗೆ ಬರೆಯಲು ಆಶಿಸುತ್ತಿದ್ದೇನೆ.

ನಮಗೆ ತಿಳಿದಂತೆ ಐವತ್ತು ವರ್ಷಗಳ ಹಿಂದೆ ಹಳ್ಳಿವಾಸಿಗಳಾದ ನಮಗೆ ಕಾಣುತ್ತಿದ್ದ ಪ್ರಮುಖ ಸರಕಾರಿ ಕಛೇರಿ ಅಂದರೆ ಅಂಚೆಕಛೇರಿ. ಆಗಿನ ಕಾಲದಲ್ಲಿ ನಾಲ್ಕಾರು ಹಳ್ಳಿಗಳಿಗೆ ಒಂದು ಪೋಸ್ಟ್ ಆಫೀಸ್ ಇರುತ್ತಿತ್ತು. ತಾಲೂಕು ಕೇಂದ್ರಗಳಲ್ಲಿ ಮತ್ತು ಪಟ್ಟಣ ಎನ್ನಿಸಿಕೊಳ್ಳುವ ದೊಡ್ಡ ಹಳ್ಳಿಗಳಲ್ಲಿ ಟೆಲಿಗ್ರಾಫ್ ಕಛೇರಿ ಕೂಡಾ ಇರುತ್ತಿತ್ತು.

ಲೋಹದ ಕಂಬಗಳ ಮೇಲೆ ಬಿಳಿಯ ಬಣ್ಣದ ಪಿಂಗಾಣಿಯ ಇನ್ಸುಲೇಟರ್ಗಳಿಗೆ ಸುತ್ತಿ ಬಳಸಿ ಟೆಲಿಗ್ರಾಫ್ ತಂತಿಗಳು ಹರಿದು ಆ ಅಫೀಸ್‌ಗಳಿಗೆ ಬರುತ್ತಿದ್ದುವು. ಆ ಪೋಸ್ಟ್ ಆಫೀಸ್‌ಗಳಲ್ಲಿ ಕಟ್ಟ ಕಟ್ಟ ಕಡ ಕಟ್ಟ ಎಂಬ ಶಬ್ದವು ಆಪರೇಟರರ ಮೇಜಿನಿಂದ ಹೊಮ್ಮಿ ಬರುತ್ತಿದ್ದುವು.  ಆಪರೇಟರರು ಆ ಶಬ್ದ ಸರಣಿಯನ್ನು ಅರ್ಥೈಸಿಕೊಂಡು,  ಬಂದ ಸಂದೇಶಗಳನ್ನು ಬರೆದುಕೊಳ್ಳುತ್ತಿದ್ದರು. ತಾವು ಕಳುಹಿಸಲಿರುವ ಸಂದೇಶಗಳನ್ನು ಮೋರ್ಸ್ ಕೋಡ್ ಪ್ರೇಷಕದ ಮೇಲೆ ತಮ್ಮ ಬೆರಳನ್ನು ಬಡಿಯುತ್ತಾ ರವಾನಿಸುತ್ತಿದ್ದರು. ತಂತಿ ಸಮಾಚಾರವು ಆ ಕಾಲದ ಆಧುನಿಕ ವಿಜ್ಞಾನದ ಪ್ರತೀಕವಾಗಿತ್ತು.

ನಮ್ಮ ಶಾಲಾಮಾಸ್ತರು ನಮ್ಮನ್ನು ಮೂರನೇ ಕ್ಲಾಸಿನಲ್ಲಿದ್ದಾಗ ಪೋಸ್ಟ್ ಆಫೀಸಿನ ಸಂದರ್ಶನಕ್ಕೆ ಕರೆದುಕೊಂಡು ಹೋಗಿದ್ದರು. ಪೋಸ್ಟ್‌ಮಾಸ್ಟರರು ತಿಳಿಸಿದ ವಿವರಗಳನ್ನು ನಾವು ಅಚ್ಚರಿಯಿಂದ ಕೇಳುತ್ತಾ, ನಮ್ಮ ಬುದ್ಧಿಗೆ ನಿಲುಕಿದಷ್ಟನ್ನು ಅರ್ಥ ಮಾಡಿಕೊಂಡಿದ್ದೆವು.

ಆಗ ಹಳ್ಳಿಗಳಲ್ಲಿ ಟೆಲೆಫೋನ್ ಸೇವೆ ಇರುತ್ತಿರಲಿಲ್ಲ. ದೊಡ್ಡ ಪಟ್ಟಣಗಳಲ್ಲಿ ಮಾತ್ರ ಟೆಲಿಫೋನ್ ಸೇವೆ ಇತ್ತು. ನಾವು ಅಪರೂಪಕ್ಕೆ ಪಟ್ಟಣಗಳಿಗೆ ಹೋದಾಗ, ಅಲ್ಲಿನ ಜನರು ಟೆಲಿಫೋನ್ ಸಂಭಾಷಣೆ ಮಾಡುವುದನ್ನು ಅಚ್ಚರಿಯಿಂದ ನೋಡುತ್ತಿದ್ದೆವು.

ನಾನೊಮ್ಮೆ ನನ್ನ ಉಡುಪಿಯಲ್ಲಿದ್ದ ನನ್ನ ಮಾವನ ಆಫೀಸಿಗೆ ಹೋದಾಗ ಪ್ರಥಮ ಬಾರಿಗೆ ಟೆಲಿಫೋನ್ ಮುಟ್ಟಿನೋಡಿದೆ. ಅವರ ಕೃಪೆಯಿಂದ ನನ್ನ ಜೀವನದಲ್ಲಿ ಮೊದಲಬಾರಿಗೆ ಅವರ ಪರಿಚಯದವರೊಬ್ಬರೊಡನೆ ಪೆದ್ದುಪೆದ್ದಾಗಿ ಸಂಭಾಷಿಸಿದೆ..! ದೂರದಲ್ಲಿ ಇರುವ ಅವರಿಗೆ ಸರಿಯಾಗಿ ಕೇಳಲಿ ಎಂದು ಕಿರುಚಿ ಮಾತನಾಡಿದೆ. ನನ್ನ ಮಾವನವರು ಹಲವು ಬಾರಿ ನೀನು ಕಿರುಚುವ ಅಗತ್ಯ ಇಲ್ಲ ಎಂದು ನನ್ನನ್ನು ಎಚ್ಚರಿಸಬೇಕಾಯಿತು! ನನ್ನ ಮಕ್ಕಳು ಇಂದು ಈ ಕಥೆ ಕೇಳಿ ನಗುತ್ತಾರೆ! ನಾನು ನಮ್ಮ ಹಳ್ಳಿಗೆ ಹಿಂದಿರುಗಿ ಬಂದ ನಂತರ ನನ್ನ ಗೆಳೆಯರಲ್ಲಿ, ಯಾಕೆ.., ನನ್ನ ಕೆಲವು ಉಪಾಧ್ಯಾಯರಲ್ಲಿ ಕೂಡಾ ನಾನು ಟೆಲಿಫೋನ್‌ನಲ್ಲಿ ಮಾತನಾಡಿದ ಸಂಗತಿ ತಿಳಿಸಿ ನನ್ನ ಹೆಗ್ಗಳಿಕೆಯನ್ನು ಮೆರೆದೆ…!. ಕಾರಣ, ಅವರಲ್ಲಿ ಯಾರೂ ಅದುವರೆಗೆ ದೂರವಾಣಿಯಲ್ಲಿ ಮಾತನಾಡೇ ಇರಲಿಲ್ಲ!

ಈಗ ಟೆಲಿಗ್ರಾಮ್ ವಿಚಾರಕ್ಕೆ ಬರೋಣ. ಟೆಲಿಗ್ರಾಮ್ ತಂದು ಕೊಡುವ ಟೆಲಿಗ್ರಾಮ್ ಪೇದೆಯನ್ನು ಟೆಲಿಮ್ಯಾನ್ ಎಂದು ಕರೆಯುತ್ತಿದ್ದರು. ಅವನು ಠಾಕು ಠೀಕಾಗಿ ಪೋಲೀಸಿನವರಂತೆ ಖಾಕಿದಿರಿಸು ತೊಡುತ್ತಿದ್ದ, ಅವನಿಗೆ ಡಿಪಾರ್ಟ್‌ಮೆಂಟ್‌ನವರು ಕೊಡುತ್ತಿದ್ದ ಸೈಕಲ್ ಕೂಡಾ ಇರುತ್ತಿತ್ತು. ತಲೆಯ ಮೇಲೆ ಕೆಂಪು ಲೈನಿಂಗ್ ಮತ್ತು P&T ಬ್ಯಾಡ್ಜ್ ಇದ್ದ ವಾಯುಸೇನೆಯವರ ತರಹದ ಟೋಪಿ ಇರುತ್ತಿತ್ತು.

ನಮ್ಮ ದೃಷ್ಟಿಯಲ್ಲಿ ಟೆಲೆಮ್ಯಾನ್ ಬಹು ಭಾಗ್ಯವಂತ! ಕಾರಣ, ಅವನಿಗೆ ಸರಕಾರದ ವೃತ್ತಿಯಲ್ಲಿ ಇರುವಷ್ಟು ದಿನ ವಾಹನ ಮತ್ತು ದಿರಿಸು ಕೊಡಲ್ಪಡುತ್ತಿತ್ತು. ಆತ ಅತೀ ವೇಗವಾಗಿ ಸೈಕಲ್ ಓಡಿಸಿಕೊಂಡು ಬಂದು ಊರೆಲ್ಲಾ ಸುತ್ತುತ್ತಾ ತುರ್ತಾದ ಟೆಲಿಗ್ರಾಮ್ ಸಂದೇಶಗಳನ್ನು ವಿತರಣೆ ಮಾಡಿ, ತನ್ನ ಬ್ಯಾಗ್‌ನಿಂದ ರಿಜಿಸ್ಟರ್ ತೆಗೆದು, ಗ್ರಾಹಕರ ಸಹಿ ಅಥವಾ ಹೆಬ್ಬೆಟ್ಟು ಮುದ್ರೆಗಳನ್ನು ತೆಗೆದುಕೊಳ್ಳುತ್ತಿದ್ದ. ರಾತ್ರಿಯಾಗಲೀ ಹಗಲಾಗಲೀ ಟೆಲಿಮ್ಯಾನ್ ಸಂದೇಶಗಳನ್ನು ತ್ವರಿತವಾಗಿ ತಲುಪಿಸುತ್ತಿದ್ದ. ತ್ವರಿತವಾಗಿ ಸಂದೇಶಗಳನ್ನು ತಲುಪಿಸುವುದೇ ಟೆಲಿಗ್ರಾಮಿನ ಉದ್ದೇಶವಾಗಿತ್ತು.

ನಾವು ನಮ್ಮೂರಿನ ಟೆಲಿಮ್ಯಾನ್‌ನ ಸಮಯಪ್ರಜ್ಞೆ, ಕರ್ತವ್ಯನಿಷ್ಟೆ, ಶಿಸ್ತು ಮತ್ತು ಡೌಲು ನೋಡಿ ಬೆರಗಾಗುತ್ತಿದ್ದೆವು! ನನ್ನ ಅನೇಕ ಸಹಪಾಠಿಗಳು ಮುಂದಕ್ಕೆ ತಾವೂ ಟೆಲಿಮ್ಯಾನ್ ಆಗುವ ಕನಸು ಕಾಣುತ್ತಿದ್ದರು. ನಾನು ಮಾತ್ರ ನನ್ನ ಚಿಕ್ಕಂದಿನಲ್ಲಿ ಜನರಲ್ ಕಾರ್ಯಪ್ಪನವರನ್ನು ನೋಡಿದ್ದೆ. ನನಗೆ ಅವರ ದಿರುಸು, ಅವರ ಪಿಸ್ತೂಲು, ಅವರ ಜೀಪು ತುಂಬಾ ಇಷ್ಟವಾಗಿತ್ತು. ನನಗೆ ಯಾವಾಗಲೂ ಸೇನೆಯಲ್ಲಿ ಜನರಲ್ ಆಗುವ ಕನಸು..! ಆದ್ರೆ, ಆ ಕನಸು……..  ಈ ಜನ್ಮದಲ್ಲಿ ಈಡೇರಲಿಲ್ಲ. ಮುಂದಿನ ಜನ್ಮ ಎಂಬುದು ಏನಾದರೂ ಇದ್ದರೆ, ಅದರಲ್ಲಿ ನಾನು ಒಬ್ಬ ಜನರಲ್ ಆಗುವುದಕ್ಕೆ ಪ್ರಯತ್ನ ಪಡುತ್ತೇನೆ.

ಇಂದು ಟೆಲಿಗ್ರಾಮ್ ಸಂದೇಶಕ್ಕೆ ಯಾರೂ ಗಾಬರಿ ಆಗುವುದಿಲ್ಲ. ಮದುವೆ ಮುಂಜಿ ಸಮಾರಂಭಗಳಿಗೆ ಹಲವಾರು ಶುಭಾಶಯದ ಟೆಲಿಗ್ರಾಮ್ ಸಂದೇಶಗಳು ಬರುತ್ತವೆ. ನಾವುಕೂಡಾ ಸಮಾರಂಭಗಳಿಗೆ ತಂತಿ ಶುಭಾಶಯ ಕಳುಹಿಸುತ್ತೇವೆ. ಈಗ ತಂತಿ ಮೂಲಕ ಮನಿ‌ಆರ್ಡರ್ ತಲುಪಿಸುವ ವ್ಯವಸ್ಥೆಯಿದೆ. ಈಗಿನ ದಿನಗಳಲ್ಲಿ ತಂತಿಪೇದೆಯ ಚಲನವಲನಗಳನ್ನು ನಾವು ಗಮನಿಸುವುದೇ ಇಲ್ಲ. ಐವತ್ತು ವರುಷಗಳ ಹಿಂದೆ ಟೆಲಿಗ್ರಾಮ್ ಸಂದೇಶ ಎಂದರೆ ಅತೀ ತುರ್ತಾಗಿ ತಿಳಿಸಬೇಕಾದ ಸಂದೇಶ ಆಗಿತ್ತು. ಯಾರಿಗಾದರೂ ಅಪಘಾತವಾದರೆ, ಪ್ರಾಣಾಂತಿಕ ಕಾಯಿಲೆ ಆದರೆ, ಮರಣ ಉಂಟಾದರೆ ಮಾತ್ರ ಹಳ್ಳಿಗಳಿಗೆ ಟೆಲಿಗ್ರಾಮ್ ಬರುತ್ತಿದ್ದುವು.

ಆಗ ಟೆಲಿಗ್ರಾಮ್‌ಗಳು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಬಿತ್ತರಿಸಲ್ಪಡುತ್ತಿದ್ದುವು. ಹಳ್ಳಿಯ ಮುಗ್ದ ಜನರಿಗೆ ಇಂಗ್ಲಿಷ್‌ಭಾಷೆಯಲ್ಲಿ ಬರುವ ಟೆಲಿಗ್ರಾಮ್ ಸಂದೇಶಗಳನ್ನು ಓದಲು ಬರುತ್ತಿರಲಿಲ್ಲ. ಅದಕ್ಕೆ ಸರಿಯಾಗಿ, ಕಳೆದ ಶತಮಾನದಲ್ಲಿ ಎರಡು ಮಹಾಯುದ್ಧಗಳಾದುವು. ನಮ್ಮ ಕರಾವಳಿ ಜಿಲ್ಲೆಯ ಬಹಳ ಮಂದಿ ಯುವಕರು ರಕ್ಷಣಾ ಇಲಾಖೆಗಳಿಗೆ ಸೇರಿದರು. ಉತ್ತಮ ಸಂಬಳ ಮತ್ತು ಸವಲತ್ತುಗಳು ಇದಕ್ಕೆ ಕಾರಣವಾಗಿರಬಹುದು. ಆ ಕಾಲದಲ್ಲಿ ನಿರುದ್ಯೋಗ ಸಮಸ್ಯೆ ಕೂಡಾ ಹೆಚ್ಚಾಗಿತ್ತು. ಎರಡನೇ ಮಹಾಯುದ್ಧಕಾಲಕ್ಕೆ ಬ್ರಿಟಿಷ್ ಸರಕಾರವು ಭಾರತೀಯರು ಬ್ರಿಟನ್ ಮತ್ತು ಸ್ನೇಹಿತ ರಾಷ್ಟ್ರಗಳಿಗೆ ಸೇರಿದ ಸೈನಿಕ ಇಲಾಖೆಗಳಲ್ಲಿ ಕೆಲಸ ಮಾಡಿ ಯುದ್ಧದಲ್ಲಿ ಭಾಗವಹಿಸಿದರೆ, ಭಾರತಕ್ಕೆ ಸ್ವಾತಂತ್ರ ಕೊಡುವುದಾಗಿ ಆಸೆ ತೋರಿಸಿತ್ತು. ಎರಡನೇ ಜಾಗತಿಕ ಯುದ್ಧ ಕಾಲದಲ್ಲಿ ಮಹಾತ್ಮಗಾಂಧಿಯವರು ಕೂಡಾ ಯುವಜನರನ್ನು ಸೈನ್ಯಕ್ಕೆ ಸೇರಲು ಪ್ರೇರೇಪಿಸಿದರಂತೆ. ಕರ್ನಾಟಕದ ಕರಾವಳಿಯ ಪ್ರತೀ ಹಳ್ಳಿಯಿಂದಲೂ ಬಹಳಷ್ಟು ಮಂದಿ ಯುವಕರು ಸೈನ್ಯ ಸೇರಿ ಹೋರಾಡಿದರು. ದೂರದ ಬರ್ಮಾ, ಆಫ್ರಿಕಾ, ಪೂರ್ವ ಏಶಿಯಾ ಮತ್ತು ಯೂರೋಪ್ ದೇಶಗಳಲ್ಲಿ ಭಾರತದ ಸೈನಿಕರು ಹೋರಾಡಿ ಒಳ್ಳೆಯ ಶೂರರೆಂಬ ಹೆಸರು ಗಳಿಸಿದರು. ಯುದ್ಧವೆಂದರೆ ಮರಣ ಸಮಾಚಾರ ಸಾಮಾನ್ಯ. ಬಹಳಷ್ಟು ಜನ ಯುವಜನರು ಮಡಿದರು. ಅವರ ಮರಣದ ಸುದ್ದಿ ಮೊದಲು ಟೆಲಿಗ್ರಾಮ್ ಮೂಲಕ ಅವರ ವಾರಸುದಾರರಿಗೆ ತಿಳಿಸಲ್ಪಡುತ್ತಿತ್ತು.

ಎರಡನೇ ಯುದ್ಧದ ಸಂದರ್ಭದಲ್ಲಿ ಹಳ್ಳಿಗಳ ಮನೆಗಳಿಗೆ ದುಃಖ ಸಮಾಚಾರ ಹೊತ್ತುಬರುವ ತಂತಿ ಸಂದೇಶಗಳು ಜಾಸ್ತಿಯಾದವು. ಮನೆಯ ಎದುರು ತಂತಿಯ ಪೇದೆ ಬಂದರೆ ಮನೆಯವರಿಗೆ ಯಾವುದೋ ಕೆಟ್ಟವಾರ್ತೆ ಕಾದಿದೆ ಎಂಬ ಭಾವನೆ ಉಂಟಾಗುತ್ತಿತ್ತಂತೆ. ಯುದ್ಧದ ಸಮಯ ಬಡ ಹಳ್ಳಿಗರ ಮನೆಗೆ ಟೆಲಿಗ್ರಾಮ್ ಬೇರೆ ಯಾವ ಕಾರಣಕ್ಕೆ ಬಂದೀತು? ಯಾರಿಗಾದರೂ ಟೆಲಿಗ್ರಾಮ್ ಬಂದರೆ ಅಕ್ಕ ಪಕ್ಕದ ಜನರು ಅಯ್ಯೋ! ಎಂದು ಕಣ್ಣೀರು ಸುರಿಸುತ್ತಾ ಬರುತ್ತಿದ್ದರಂತೆ!

ಟೆಲಿಮ್ಯಾನ್ ಅಂದರೆ ಅನಿಷ್ಟ ಸುದ್ದಿ ತರುವ ಯಮದೂತ ಎನ್ನುವ ಭಾವನೆ ಹಳ್ಳಿಗಳಲ್ಲಿ ಉಂಟಾಗಿತ್ತಂತೆ. ಆ ಯುದ್ಧ ಸಮಯದಲ್ಲಿ ಈ ಕೆಲಸಕ್ಕೆ ಜನರು ಸೇರಲು ಬಯಸುತ್ತಿರಲಿಲ್ಲವಂತೆ. ಅದಕ್ಕೋಸ್ಕರ ಬ್ರಿಟಿಶ್ ಸರಕಾರದವರು ಟೆಲಿಮ್ಯಾನ್ ಕೆಲಸದವರಿಗೆ ಗವರ್ನ್‌ಮೆಂಟ್ ಕೆಲಸದವರಿಗೆ ಕೊಡುವ ರಜಾ ಸವಲತ್ತು, ಭತ್ಯ ಪಿಂಚಿಣಿ, ಸೈಕಲ್ ಭತ್ಯ ಮತ್ತು ಯೂನಿಫಾರಮ್ ಕೊಡಲು ಶುರುಮಾಡಿತಂತೆ.

ನನಗೆ ಬುದ್ಧಿ ತಿಳಿಯುವಾಗ ಸ್ವಾತಂತ್ರ್ಯ ಬಂದಾಗಿತ್ತು. ಆಗ ಟೆಲಿಗ್ರಾಮ್‌ನಲ್ಲಿ ದೂರದ ನೆಂಟರು ಊರಿಗೆ ಬರುವ ಸಮಾಚಾರ, ಹತ್ತಿರ ಸಂಬಂಧಿಗಳು ದೂರದ ಊರಿಗೆ ಸುಖವಾಗಿ ಸೇರಿದ ಸಮಾಚಾರ, ಮಕ್ಕಳು ಹುಟ್ಟಿದ ಶುಭ ಸಮಾಚಾರ, ತುರ್ತಾಗಿ ಬಂದು ಕೆಲಸಕ್ಕೆ ಸೇರಲು ಕರೆ ಮೊದಲಾದ ವಾರ್ತೆಗಳು ಕೂಡಾ ಹೆಚ್ಚಾಗಿ ಬರುತ್ತಿದ್ದುವು. ಆದರೂ, ಅಪರೂಪಕ್ಕೊಮ್ಮೆ ಮರಣವಾರ್ತೆ ಅಥವಾ ನಿಮ್ಮ ಸಂಬಂಧದ…. ಇಂಥವರಿಗೆ ಪ್ರಾಣಾಂತಿಕ ಕಾಯಿಲೆಯಾಗಿದೆ, ಕೂಡಲೆ ಹೊರಟು ಬನ್ನಿ ಎಂಬ ಸಮಾಚಾರ ಬರುತ್ತಿದ್ದುವು.

ನಾನು ಚಿಕ್ಕ ಮಗುವಾಗಿದ್ದ ಸಮಯ ಟೆಲಿಮ್ಯಾನ್ ಕೆಲಸದ ಮೇಲಿದ್ದ ಕರಾಳಛಾಯೆ ಸರಿಯಲು ಶುರುವಾಗಿ, ಆ ಕೆಲಸದ ಮೇಲೆ ಗೌರವಭಾವ ಮೂಡುತ್ತಿತ್ತು. ಪಟ್ಟಣಗಳಲ್ಲಿ ಚಿಕ್ಕ ಮಕ್ಕಳಿಗೆ ಅಗ್ನಿಶ್ಯಾಮಕದಳದ ಭಟ, ಸೈನ್ಯದ ಸಿಪಾಯಿ ಮತ್ತು ರೈಲ್ವೇಯ ಏಂಜಿನ್ ಡ್ರೈವರ್ ಕೆಲಸದವರು ಆದರ್ಶ ವ್ಯಕ್ತಿಗಳು ಎಂಬುದಾಗಿ ಕಂಡರೆ, ಹಳ್ಳಿಯ ಮಕ್ಕಳಿಗೆ ಟೆಲಿಮ್ಯಾನ್‌ನ ವ್ಯಕ್ತಿತ್ವ ಮತ್ತು ಕೆಲಸ ಆಕರ್ಷಕವಾಗಿ ಕಾಣಲು ಶುರುವಾಗಿತ್ತೆಂದು ಕಾಣುತ್ತದೆ. ಅದಲ್ಲದೆ, ಹಳ್ಳಿಯಲ್ಲಿ ಸಮವಸ್ತ್ರ ಧರಿಸಿದ ಸೈನಿಕರ ದರ್ಶನವೇ ಆಗುತ್ತಿರಲಿಲ್ಲ. ಪೋಲಿಸ್ ಮತ್ತು ಅಬಕಾರಿ ಸಿಪಾಯಿಗಳು ಬಂದರೆ ಜನ ಹೆದರಿ ಮಕ್ಕಳನ್ನು ಮನೆಯ ಒಳಗೆ ಕೂಡಿಹಾಕುತ್ತಿದ್ದರು. ನಮಗೆ ಯೂನಿಫಾರಮ್ ಧರಿಸಿದ ಅಂಚೆಪೇದೆ ಮತ್ತು ತಂತಿಪೇದೆ ಇವರಿಬ್ಬರೂ ಅಪರೂಪಕ್ಕೆ ಕಾಣಸಿಗುತ್ತಿದ್ದರು. ಅದಲ್ಲದೆ, ಇವರು ಮಕ್ಕಳಾದ ನಮಗೆ ನಿರುಪದ್ರವಿಗಳಾಗಿ ಕಾಣಿಸುತ್ತಿದ್ದರು. ಹಾಗಿರುವಾಗ ಅಂಚೆಯ ಪೇದೆಗಿಂತ ಜರ್ಬಾಗಿ ಕಾಣಿಸುತ್ತಿದ್ದ ತಂತಿಪೇದೆಯು ಆದರ್ಶವ್ಯಕ್ತಿಯಾಗಿ ಕಾಣುವುದು ಶಕ್ಯವಿತ್ತು.

ನಮ್ಮ ಪಕ್ಕದಮನೆಯ ತುಂಗಕ್ಕನ ಮಗ ಹರಿ ಎಂಬ ತರುಣ ಮರ್ಚಂಟ್‌ನೇವಿಯಲ್ಲಿ ಕೆಲಸಮಾಡುತ್ತಿದ್ದ. ಆತನು ರಜೆಯಲ್ಲಿ ಊರಿಗೆ ಬಂದಿದ್ದನು. ಆತನು ರಜೆಯಲ್ಲಿ ಬಂದು ಸುಮಾರು ಒಂದು ತಿಂಗಳಾಗಿತ್ತು. ಮದರಾಸಿಗೆ ಹೋಗಿ ಮಿತ್ರನೊಬ್ಬನನ್ನು ಕಂಡು ಒಂದು ವಾರದೊಳಗೆ ಹಿಂತಿರುಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ. ಒಂದು ದಿನ ತುಂಗಕ್ಕ ಹೊಲದ ಕೆಲಸಕ್ಕೆ ಹೋಗಿದ್ದಾಗ ನಾಗಜ್ಜಿ ಒಬ್ಬಳೇ ಮನೆಯಲ್ಲಿ ಇದ್ದರು. ಆಗಲೇ ತಂತಿಪೇದೆಯ ಸವಾರಿ ಅವರ ಮನೆಗೆ ಬಂತು. ತಂತಿಪೇದೆಯ ಮುಖ ಕಂಡೊಡನೆಯೇ ನಾಗಜ್ಜಿಯ ಜಂಘಾಬಲ ಉಡುಗಿತು! ಆತ ತನ್ನ ಸೈಕಲ್‌ನಿಂದ ಇಳಿಯುವ ಮೊದಲೇ, ಆತನು ಅನಿಷ್ಟ ಸುದ್ದಿ ತಂದಿದ್ದಾನೆ ಎಂಬ ನಂಬಿಕೆಯಿಂದ ನಾಗಜ್ಜಿ ಆತನಿಗೆ ಹಿಡಿಶಾಪ ಹಾಕಿ ಬೈಯ್ಯಲು ಮೊದಲುಮಾಡಿತು..!

ಆತನು ಹರಿ ಎಂಬುವರಿಗೆ ಟೆಲಿಗ್ರಾಂ ಇದೆ, ಸಹಿ ಅಥವಾ ಹೆಬ್ಬೆಟ್ಟು ಮಾಡಿ ಪಡೆಯಿರಿ ಎಂದು ಕೇಳಿಕೊಂಡನು. ಅಜ್ಜಿ ಆಗ ಆತನಿಗೆ ಏನು ಕೆಟ್ಟ ಸುದ್ದಿ ತಂದಿಯೋ ಸುಟ್ಟ ಮುಖದವನೇ! ನಾನು ಸಹಿ ಹಾಕುವುದಿಲ್ಲ. ಮೊದಲು ಈ ಜಾಗ ಖಾಲಿ ಮಾಡು! ಎನ್ನುತ್ತಾ ವಟ ವಟ ಬೈಗಳ ಹೊಳೆಯನ್ನೇ ಹರಿಸಿದಳು.

ಪಾಪ ಆ ತಂತಿಪೇದೆ ಅಜ್ಜೀ ಈ ತಂತಿ ಸಂದೇಶದಲ್ಲಿ ಏನಿದೆ ನನಗೆ ಗೊತ್ತಿಲ್ಲಾ. ಈಗ ತಾನೇ ನಾನು ಡ್ಯೂಟಿಯ ಮೇಲೆ ಬಂದೆ. ನಮ್ಮ ಪೋಸ್ಟ್‌ಮಾಸ್ಟರರು ಈ ಸಂದೇಶ ನನಗೆ ಸೀಲ್ ಮಾಡಿಕೊಟ್ಟರು. ನೀವು ದಯವಿಟ್ಟು ಸಹಿ ಅಥವಾ ಹೆಬ್ಬೆಟ್ಟು ಮುದ್ರೆಹಾಕಿ ಪಡೆಯಿರಿ. ಆ ನಂತರ, ನಾನು ಅದನ್ನು ಓದಿ ಹೇಳುತ್ತೇನೆ ಎಂದು ಅಂಗಲಾಚಿದ.

ಆ ಮುದುಕಿ ಈ ಕಣ್ಣುಮಂಗಳನ (ಮೋಸಗಾರನ) ಮಾತು ನನಗೆ ಗೊತ್ತಿಲ್ಲವಾ? ಸಹಿ ಹಾಕಿ ಪಡೆಯಬೇಕಂತೆ! ನನ್ನ ಮೊಮ್ಮಗ ಹರಿ ದೂರದ ಮದರಾಸಿಗೆ ರೈಲಿನಲ್ಲಿ ಹೋಗಿದ್ದಾನೆ, ನಾನು ಈಗ ನೀನು ತಂದ ಅಮಂಗಲದ ಸಮಾಚಾರ ಪಡೆಯಬೇಕೆಂದು ಹುನ್ನಾರ ಮಾಡುತ್ತಿಯಾ? ಎಂದು ಇನ್ನೂ ಹೆಚ್ಚಿನ ಬೈಗಳ ಹೊಳೆಯನ್ನು ಹರಿಸತೊಡಗಿತು. ಈ ಗಲಾಟೆ ಕೇಳಿ ಹೊಲದಲ್ಲಿದ್ದ ತುಂಗಮ್ಮ ಓಡೋಡಿ ಬಂದಳು. ಲಗುಬಗೆಯಿಂದ ವಿಚಾರ ತಿಳಿದು ಕನ್ನಡದಲ್ಲಿ ಸಹಿ ಹಾಕಿ ಸಂದೇಶ ಪಡೆದು, ತಂತಿಪೇದೆಯೊಡನೆಯೇ ಅದರಲ್ಲಿದ್ದ ಇಂಗ್ಲಿಷ್ ಸಂದೇಶ ಓದಿ ಅರ್ಥ ಹೇಳಲು ಕೇಳಿಕೊಂಡಳು.

ಸಂದೇಶ ಓದಿ ತಂತಿಪೇದೆಯು ನೋಡಿ ತಾಯೀ, ಇದು ನಿಮ್ಮ ಮಗ ಹರಿಯವರಿಗೆ ಅವರ ಶಿಪ್ಪಿಂಗ್ ಕಂಪನಿಯವರಿಂದ ಬಂದ ಸಂದೇಶ. ಅವರು ಬರುವ ತಿಂಗಳು ಒಂದನೇ ತಾರೀಕಿಗೆ ಬೊಂಬಾಯಿಯಲ್ಲಿ ಕೆಲಸಕ್ಕೆ ಹಾಜರ್ ಆಗಬೇಕಂತೆ ಎಂದನು.

ನಾಗಜ್ಜಿಗೆ ಹೋದ ಜೀವ ಬಂದ ಹಾಗಾಯಿತು. ಕೂಡಲೆ ನಾಗಜ್ಜಿ ತನ್ನ ಮಾತಿನ ಸರಣಿಯನ್ನೇ ಬದಲಾಯಿಸಿ, ತಂತಿಪೇದೆಗೆ ಹೌದಾ ಮಗಾ..! ಎಷ್ಟು ಒಳ್ಳೆಯ ಸುದ್ದಿ ತಂದುಬಿಟ್ಟೆ! ನಾನು ಏನೇನೋ ತಿಳಿದುಕೊಂಡು ನಿನಗೆ ಸ್ವಲ್ಪ ಬೈದುಬಿಟ್ಟೆ. ಏನೂ ತಪ್ಪು ತಿಳಿಯಬೇಡ ಮಗಾ! ವಿನಾಕಾರಣ ಯಾರಾದರೂ ನಿರಪರಾಧಿಗಳಿಗೆ ಬೈದರೆ, ಆ ಬೈಗಳು ಆಶೀರ್ವಾದವಾಗಿ ಪರಿವರ್ತಿತವಾಗುತ್ತವಂತೆ! ನಿನಗೆ ದೇವರು ಒಳ್ಳೆಯದು ಮಾಡಲಿ! ನಿನಗೆ ದೀರ್ಘಾಯುಷ್ಯವಾಗಲಿ! ಕುಳಿತೋ ಮಗಾ!  ಸ್ವಲ್ಪ ಚಾ ಮಾಡಿ ತರುತ್ತೇನೆ. ಈ ರಣಬಿಸಿಲಿನಲ್ಲಿ ಆ ಹಾಳು ಸೈಕಲ್ ತುಳಿದು ಅದೆಷ್ಟು ಬಳಲಿದ್ದಿಯೋ ಏನೊ! ಎಂದು ಪ್ರೀತಿಯ ಮಳೆಯನ್ನೇ ಸುರಿಸಿತು.

ತಂತಿಪೇದೆಯು ತನ್ನ ತಲೆಯ ಟೊಪ್ಪಿಯನ್ನು ತೆಗೆದು ಗಾಳಿ ಹಾಕಿಕೊಳ್ಳುತ್ತಾ ನಾಗಜ್ಜೀ, ಇನ್ನೊಂದು ದಿನ ಖಂಡಿತವಾಗಿ ಬಂದು ನಿಮ್ಮ ಮನೆಯಲ್ಲಿ ಚಾ ಕುಡಿಯುವೆ!  ಆದರೆ, ಆ ದಿನ ಕೂಡಾ ನಾನು ಸೈಕಲ್ ಇಳಿಯುವ ಮೊದಲೇ ನೀವು ‘ಆಶೀರ್ವಾದ ಶುರುಮಾಡಿದರೆ, ನಾನು ಚಾ ಮರೆತು ಓಡಿಹೋಗುತ್ತೇನೆ..! ಎಂದ.

ಎಲ್ಲಾದರೂ ಉಂಟೇ ಮಗಾ, ಬರುತ್ತಾ ಇರು! ಎಂದು ತಂತಿಪೇದೆಯನ್ನು ಬೀಳ್ಕೊಟ್ಟಿತು ನಮ್ಮ ನಾಗಜ್ಜಿ.

ಈ ದೃಶ್ಯವನ್ನು ಟೆಲಿಮ್ಯಾನ್ ಆಗಲು ಬಯಸಿದ್ದ ನನ್ನ ಸಹಪಾಠಿಗಳು ಕಂಡಿದ್ದರೆ, ತಾವು ಮುಂದಕ್ಕೆ ತಂತಿಪೇದೆಯಾಗುವ ಆಲೋಚನೆಯನ್ನೇ ಬಿಟ್ಟುಬಿಡುತ್ತಿದ್ದರು!

* * *