ನಾನು ಚಿಕ್ಕಂದಿನಲ್ಲಿ ನನ್ನ ಅಣ್ಣಂದಿರು ಮತ್ತು ಅಕ್ಕಂದಿರೊಡನೆ ನಮ್ಮ ಅಜ್ಜನ ಮನೆಯಲ್ಲೇ ಬೆಳೆದೆ. ನನ್ನ ಅಜ್ಜನ ಮನೆ ಮಂಗಳೂರಿನಿಂದ ಹನ್ನೆರಡು ಮೈಲು ದೂರದ ಕಿನ್ನಿಕಂಬಳ ಎಂಬ ಹಳ್ಳಿಯಲ್ಲಿ ಇತ್ತು. ಕಿನ್ನಿಕಂಬಳದಲ್ಲಿ ಹೈಯರ್ ಎಲಿಮೆಂಟರಿ ಶಾಲೆಯಿತ್ತು.

ಆ ಶಾಲೆಯನ್ನು ನಮ್ಮ ಅಜ್ಜ ಖಾಸಗಿ ಶಾಲೆಯಾಗಿ ಸಾವಿರದ ಒಂಬೈನೂರ ಏಳನೇ ಇಸವಿಯಲ್ಲಿ ಪ್ರಾರಂಭಿಸಿದರು. ಹಲವು ವರ್ಷ ಆ ಶಾಲೆಯನ್ನು ಧರ್ಮಾರ್ಥವಾಗಿ ವಿದ್ಯೆ ನೀಡುವ ಖಾಸಗಿ ಶಾಲೆಯಾಗಿ ನಡೆಸಿದರು. ಆ ನಂತರ ಅವರ ಅನಾರೋಗ್ಯದ ಕಾರಣ ಆ ಶಾಲೆಯನ್ನು ಅದರ ಪರಿಸರದ ಜಮೀನು ಸಮೇತ ಸರಕಾರಕ್ಕೆ ಬಿಟ್ಟುಕೊಟ್ಟರು.

ನಮ್ಮ ತಂದೆಯವರ ಸ್ವಂತ ಊರಾದ ಪೂಮಾವರ ಎಂಬ ಹಳ್ಳಿಯಲ್ಲಿ ನಮ್ಮ ಮನೆಯ ಹತ್ತಿರ ಶಾಲೆ ಇರಲಿಲ್ಲ. ಹತ್ತಿರದ ಶಾಲೆಯು ನಾಲ್ಕು ಮೈಲು ದೂರದ ಎಡಪದವು ಎಂಬ ಜಾಗದಲ್ಲಿ ಇತ್ತು. ಚಿಕ್ಕಮಕ್ಕಳಾದ ನಮ್ಮನ್ನು ಗುಡ್ಡಗಾಡಿನ ದಾರಿಯಲ್ಲಿ ನಾಲ್ಕು ಮೈಲು ದೂರದ ಶಾಲೆಗೆ ಕಳುಹಿಸುವುದು ಸಾಧ್ಯವೇ ಇರಲಿಲ್ಲ.

ನಮ್ಮ ತಂದೆಯವರಾದ ಪೂಮಾವರ ಶ್ರೀನಿವಾಸ ಪೆಜತ್ತಾಯರು, ಮೂವತ್ತು ಮೈಲು ದೂರದ ಉಡುಪಿಯ ಶ್ರೀಮನ್ ಮಧ್ವಾಚಾರ್ಯರು ಸ್ಥಾಪಿಸಿದ ಮಧ್ವ ಮತದ ರಜತ ಪೀಠಕ್ಕೆ ಸೇರಿದ ಪಲಿಮಾರು ಮಠದ ದಿವಾನರಾಗಿ ಕೆಲಸ ಮಾಡುತ್ತಾ ಇದ್ದರು. ನಮ್ಮ ತಂದೆಯವರದು ಬಹು ಗೌರವಾನ್ವಿತ ಕೆಲಸ. ಸಮಾಜದಲ್ಲಿ ಅವರಿಗೆ ಉನ್ನತ ಸ್ಥಾನ ಇತ್ತು. ನಮ್ಮ ತಾಯಿಯವರಾದ ಕುಮುದಾದೇವಿ ಪೆಜತ್ತಾಯರು ನಮ್ಮ ಪೂಮಾವರ ಎಂಬ ಊರ ಮನೆಯಲ್ಲೇ ನೆಲಸಿ ನಮ್ಮ ಜಮೀನುಗಳ ರಖೋಲೆ ನೋಡುತ್ತಾ ಇದ್ದರು. ನಮ್ಮ ತಂದೆಯವರು ಪ್ರತಿ ಶನಿವಾರ ಮನೆಗೆ ಬಂದು ಸಂಸಾರದೊಂದಿಗೆ ಇದ್ದು ಸೋಮವಾರ ಬೆಳಗ್ಗೆ ಉಡುಪಿಗೆ ಹಿಂದಿರುಗುತ್ತಿದ್ದರಂತೆ.

ನಮ್ಮ ತಾಯಿಯವರು ನನ್ನ ಅಣ್ಣಂದಿರು ಮತ್ತು ಅಕ್ಕಂದಿರನ್ನು ಅವರ ತಂದೆಯವರಾದ ಶ್ರೀ ಬಾಗಲೋಡಿ ರಾಮರಾಯರ ಮನೆಯಲ್ಲೇ ಬಿಟ್ಟು ಓದಿಸುತ್ತಿದ್ದರು.

ನಾನು ಹತ್ತುತಿಂಗಳ ಮಗುವಾಗಿದ್ದಾಗ ನಮ್ಮ ತಂದೆಯವರು ತೀರಿಕೊಂಡರು. ನಮ್ಮ ತಾಯಿ ನಮ್ಮ ಊರ ಮನೆಯಲ್ಲಿ ಒಂಟಿಯಾಗಿ ಜೀವನ ಮಾಡಬೇಕಾದ ಪ್ರಸಂಗ ಬಂತು. ಆಗಷ್ಟೇ ಉಡುಪಿಯ ಸಂಸ್ಕೃತ ಪಾಠಶಾಲೆಯಲ್ಲಿ ಓದಿ ಊರಿಗೆ ಬಂದ ನಮ್ಮ ದಿವಂಗತ ದೊಡ್ಡಪ್ಪನವರ ಮಗ ಶ್ರೀಪತಿ ಎಂಬವರಿಗೆ ನಮ್ಮ ಸ್ವಂತ ಊರಿನ ಮನೆ ಮತ್ತು ಜಮೀನುಗಳ ಜವಾಬ್ದಾರಿ ವಹಿಸಿ, ನಮ್ಮ ತಾಯಿಯವರು ನಮ್ಮ ವಿದ್ಯಾಭ್ಯಾಸಕ್ಕೋಸ್ಕರ ಅಜ್ಜನ ಮನೆಗೇ ಬಂದು ನೆಲಸಿದರಂತೆ.

ನಾನು ನಮ್ಮಲ್ಲಿ ಎಲ್ಲರಗಿಂತಲೂ ಚಿಕ್ಕವನು. ನನಗೆ ನಾಲ್ಕು ಮಂದಿ ಅಣ್ಣಂದಿರು  ಮತ್ತು ನಾಲ್ಕು ಮಂದಿ ಅಕ್ಕಂದಿರು. ನಮ್ಮೆಲ್ಲರ ಪ್ರಾಥಮಿಕ ವಿದ್ಯಾಭ್ಯಾಸವೂ ಕಿನ್ನಿಕಂಬಳದ ಬೋರ್ಡ್ ಹೈಯ್ಯರ್ ಎಲಿಮೆಂಟರಿ ಶಾಲೆಯಲ್ಲೇ ಆಯಿತು. ನಾನು ಶಾಲೆಗೆ ಸೇರಬೇಕಾದರೆ ನನ್ನ ದೊಡ್ಡ ಅಣ್ಣ ಉಡುಪಿಯಲ್ಲಿ ಕಾಲೇಜ್ ಓದುತ್ತಾ ಇದ್ದರು. ಇಬ್ಬರು ಅಕ್ಕಂದಿರ ಮದುವೆ ಆಗಿತ್ತು. ಬೇಸಿಗೆಯ ರಜಾ ಸಿಕ್ಕಿದ ಕೂಡಲೇ ಉಡುಪಿಯಲ್ಲಿ ಓದುತ್ತಿದ್ದ ದೊಡ್ಡ ಅಣ್ಣ ಮತ್ತು ಅವರ ಸ್ನೇಹಿತ ಪಿ. ಆರ್. ಮಾಧವ ಕಿನ್ನಿಕಂಬಳಕ್ಕೆ ಬರುತ್ತಿದ್ದರು. ಇಂದು ನನ್ನ ದೊಡ್ಡ ಅಣ್ಣ  ದೇವೇಂದ್ರ ಪೆಜತ್ತಾಯ, ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಉಡುಪಿ ಪಟ್ಟಣದಲ್ಲಿ ನೆಲೆಸಿದ್ದಾರೆ. ಶ್ರೀ ಪಿ. ಆರ್. ಮಾಧವ ಅವರು ಕುದುರೆಮುಖ ಅದಿರು ಕಂಪೆನಿಯ ಮುಖ್ಯ ಆಡಳಿತ ಅಧಿಕಾರಿಯಾಗಿದ್ದು ಇಂದು ಅವರು ಕೂಡಾ ನಿವೃತ್ತರಾಗಿ ದಕ್ಷಿಣಕನ್ನಡ ಜಿಲ್ಲೆಯ ಸುರತ್ಕಲ್ ಎಂಬಲ್ಲಿ ನೆಲೆಸಿದ್ದಾರೆ.

ಬೇಸಿಗೆಯ ರಜಾದಲ್ಲಿ ನಮ್ಮ ಅಜ್ಜನ ಮನೆಯಲ್ಲಿನ ಗೇರುಹಣ್ಣು (ಗೋಡಂಬಿ ಹಣ್ಣು) ಕೊಯ್ಯುವ ಕೆಲಸ ಮಕ್ಕಳಿಗೆ ಸೇರಿತ್ತು. ಅಜ್ಜನ ಮನೆಯ ಹಿಂಬದಿಗೆ ಗೇರುಹಣ್ಣಿನ ಮರಗಳಿದ್ದ ದೊಡ್ಡ ಹಾಡಿ ಇತ್ತು. ನಮ್ಮಲ್ಲಿ ಸ್ವಲ್ಪ ದೊಡ್ಡಕ್ಕಿದ್ದ ನರಹರಿ ಅಣ್ಣ ಗೋಡಂಬಿ ಮರಗಳ ಕೊಂಬೆಗಳನ್ನು ಆಧರಿಸಿ ಸ್ವಲ್ಪ ಎತ್ತರಕ್ಕೆ ಏರಿ ಮರಗಳ ಗೆಲ್ಲುಗಳನ್ನು ಜೋರಾಗಿ ಅಲುಗಿಸುತ್ತಿದ್ದರು. ಆಗ ಗೋಡಂಬಿಯ ಹಣ್ಣುಗಳು ಉದುರಿ ನೆಲದ ಮೇಲೆ ಬೀಳುತ್ತಿದ್ದುವು. ಗೋಡಂಬಿ ಹಣ್ಣುಗಳಿಗೆ ಹಳ್ಳಿಯಲ್ಲಿ ಡಿಮಾಂಡ್ ಇಲ್ಲ. ನಾವು ಗೋಡಂಬಿ ಹಣ್ಣು ಕೊಯ್ಯುವಾಗ ಅತೀ ಒಳ್ಳೆಯ ಹಣ್ಣುಗಳನ್ನು ಅಲ್ಲೇ ತಿನ್ನುತ್ತಿದ್ದೆವು. ಹಣ್ಣುಗಳಿಂದ ಗೋಡಂಬಿಯ ಬೀಜ ಬೇರ್ಪಡಿಸಿ ಒಂದು ಬೆತ್ತದ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದೆವು. ಬೀಜ ಬೇರ್ಪಡಿಸಿದ ನಂತರ ಉಳಿದ ಗೋಡಂಬಿಯ ಹಣ್ಣುಗಳನ್ನು ಇನ್ನೊಂದು ಬೆತ್ತದ ಹೆಡಿಗೆಯಲ್ಲಿ ಹಾಕಿ ಸಂಗ್ರಹಿಸಿಕೊಂಡು ಬಂದು ನಮ್ಮ ಮನೆಯ ದನಗಳಿಗೆ ತಿನ್ನಿಸುತ್ತಿದ್ದೆವು. ನಮ್ಮ ಮನೆಯ ದನಗಳು ಗೋಡಂಬಿಯ ಹಣ್ಣುಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದುವು.

ಗೋಡಂಬಿಯ ಹಣ್ಣಿನ ರಸ ಬಟ್ಟೆಯ ಮೇಲೆ ಬಿದ್ದರೆ ಬಟ್ಟೆಯ ಮೇಲೆ ಅಳಿಸಲಾರದ ಕಲೆ ಉಂಟಾಗುತ್ತದೆ. ಆದ್ದರಿಂದ, ನಮ್ಮ ಅಜ್ಜಿ ನಮಗೆ ಗೋಡಂಬಿ ಕೊಯ್ಯಲು ಪ್ರತ್ಯೇಕ ದಿರುಸು ತೆಗೆದಿರಿಸಿ, ಆ ದಿರುಸುಗಳನ್ನೇ ಗೋಡಂಬಿ ಕೊಯ್ಯುವಾಗ ಧರಿಸಲು ಕೊಡುತ್ತಿದ್ದರು.

ಗೋಡಂಬಿ ಸೀಸನ್ ಆದ ನಂತರ ಬಲಿತ ಮಾವಿನಕಾಯಿಗಳನ್ನು ಕೊಯ್ಯುವ ಕೆಲಸವನ್ನು ನಮ್ಮ ಅಜ್ಜನ ಮನೆಯ ಆಳು ನಾಗುಗೌಡ ಮಾಡುತ್ತಿದ್ದ. ಆತ ಮರ ಹತ್ತಿ ಕಲ್ಲಿ ಎಂಬ ಬಲೆಯ ಚೀಲಕಟ್ಟಿದ ವಿಶಿಷ್ಟ ದೋಟಿಯನ್ನು ಉಪಯೋಗಿಸಿ, ಬಲಿತ ಮಾವಿನಕಾಯಿಗಳನ್ನು ಆರಿಸಿ ಕೊಯ್ಯುತ್ತಿದ್ದ. ಅಜ್ಜನ ಮನೆಯ ಮುಂದಕ್ಕೆ ಅನತಿ ದೂರದಲ್ಲಿದ್ದ ನಮ್ಮ ಶಾಲೆಗೆ ಹೊಂದಿಕೊಂಡೇ ನಮ್ಮ ಅಜ್ಜನಿಗೆ ಸೇರಿದ ವಿಶಾಲವಾದ ಮಾವಿನ ತೋಟ ಇತ್ತು. ಅಜ್ಜನ ತೋಟದಲ್ಲಿ ಹಲವಾರು ತರಹೆಯ ಮಾವಿನ ಹಣ್ಣಿನ ಮರಗಳು ಇದ್ದವು. ಆಲ್ಫೋನ್ಸೋ, ರುಮಾನಿಯಾ, ಮುಂಡಪ್ಪ, ರಸಪುರಿ, ಸುಬ್ರಾಯ ಕಸಿ, ನೆಕ್ಕರೆ, ಗಿಣಿಮೂತಿಯ ಮಾವು ಮುಂತಾದ ಸ್ಥಳೀಯ ತಳಿಗಳಲ್ಲದೇ, ಹೊರ ಊರುಗಳಿಂದ ತರಿಸಿ ನೆಟ್ಟಿರುವ ಮಲ್ಗೋವಾ, ಕಾಲಪ್ಪಾಡಿ, ಸಿಂಧೂರ, ಪೈರಿ, ಲಾಂಗ್ಡಾ, ನೀಲಂ, ತೋತಾಪುರಿ ಮೊದಲಾದ ಮಾವಿನ ಮರಗಳು ನಮ್ಮ ಅಜ್ಜನ ತೋಟದಲ್ಲಿದ್ದವು.

ನಾಗುಗೌಡ ಕೊಯ್ದು ಕೊಟ್ಟ ಬಲಿತ ಮಾವಿನಕಾಯಿಗಳನ್ನು ತಂದು ಅಜ್ಜನ ಮನೆಯ ಉಪ್ಪರಿಗೆಯ ಮೇಲಿನ ಮಾವಿನ ಹಣ್ಣಿನ ಕೋಣೆಯಲ್ಲಿ ಭತ್ತದ ಹುಲ್ಲು ಹಾಸಿ ಸಾಲಾಗಿ ಇಟ್ಟು ಅವುಗಳ ಮೇಲೆ ಪುನಃ ಹುಲ್ಲು ಮುಚ್ಚುವ ಕೆಲಸ ಮಕ್ಕಳಿಗೆ ಇರುತ್ತಿತ್ತು. ಮಾವಿನ ಹಣ್ಣುಗಳನ್ನು ಅವುಗಳ ಜಾತಿವಾರ್ ಬೇರೆ ಬೇರೆಯಾಗಿ ಹುಲ್ಲಿನ ಹಾಸು ಹಾಸಿ ನಾವುಗಳು ಜೋಡಿಸಬೇಕಿತ್ತು. ಮಾವು ಹಣ್ಣಾದಂತೆ ಅವನ್ನು ಕೆಳಗೆ ತಂದು ನಮ್ಮ ಅಜ್ಜಿಯ ಸುಪರ್ದಿಗೆ ಕೊಡಬೇಕಿತ್ತು. ರಾತ್ರಿಯ ಊಟವಾದ ನಂತರ ನಮ್ಮ ಅಜ್ಜಿ ನಮಗೆ ಬೇಕಾದಷ್ಟು ಮಾವಿನ ಹಣ್ಣುಗಳನ್ನು ಹೆಚ್ಚಿ ತಿನ್ನಲು ಕೊಡುತ್ತಿದ್ದರು. ಮಾವಿನ ಹಣ್ಣುಗಳ ಸಂಖ್ಯೆ ಹೆಚ್ಚಿದ್ದರೆ ಮರುದಿವಸ ಊಟಕ್ಕೆ ಮಾವಿನ ಹಣ್ಣಿನ ಸೀಕರಣೆ (ನಮ್ಮ ಭಾಷೆಯಲ್ಲಿ ಮಾವಿನ ಹಣ್ಣಿನ ರಸಾಯನ) ಮಾಡಿ ಬಡಿಸುತ್ತಿದ್ದರು. ಕೆಲವು ಜಾತಿಯ ಮಾವಿನ ಹಣ್ಣುಗಳು ಹೆಚ್ಚಾಗಿ ಸಿಕ್ಕಾಗ ಅವುಗಳ ರಸ ಬೇರ್ಪಡಿಸಿ ಮುಂಡುಗನ (ಒಂದು ಸಸ್ಯ) ಎಲೆಗಳಿಂದ ಹೆಣೆದ ಚಾಪೆಯ ಮೇಲೆ ಹಾಸಿ ಬಿಸಿಲಿಗೆ ಇಟ್ಟು ಮಾಂಬಳ ತಯಾರಿಸಿ ಮಳೆಗಾಲದ ಉಪಯೋಗಕ್ಕೆ ತೆಗೆದು ಇಡುತ್ತಿದ್ದರು.

ನಮ್ಮ ಅಜ್ಜ ಮಾವಿನಹಣ್ಣುಗಳನ್ನು ಮಾರುತ್ತಿರಲಿಲ್ಲ, ಈ ಎಲ್ಲಾ ತರಹೆಯ ಮಾವುಗಳು ಮನೆಯ ಮಕ್ಕಳಿಗೆ ಮೀಸಲು. ಮಾವಿನಹಣ್ಣುಗಳು ಮನೆಯ ಉಪಯೋಗಕ್ಕೂ ಮೀರಿ ಹೆಚ್ಚಿಗೆ ಸಿಕ್ಕಾಗ, ನಮ್ಮ ಅಜ್ಜಿ ಅವುಗಳನ್ನು ನೆರೆಕರೆಯ ಮನೆಗಳಿಗೆ ಹಂಚುತ್ತಿದ್ದರು.

ಅಜ್ಜನ ಮನೆಯಲ್ಲಿ ಗದ್ದಾ ಮಾರ್ ಎಂಬ ಮಾವಿನ ಮರ ಇತ್ತು. ಆ ಮರದಲ್ಲಿ ಎಲ್ಲಾ ಮಾವಿನ ಮರಗಳಿಗಿಂತ ಮೊದಲೇ ಫಸಲು ಬರುತ್ತಿತ್ತು. ಹಣ್ಣುಗಳ ಗಾತ್ರ ಅತೀ ದೊಡ್ಡದು. ಕೆಲವು ದೊಡ್ಡ ಹಣ್ಣುಗಳು ಎರಡು ಕೆ.ಜಿ. ಮೀರಿ ಇರುತ್ತಾ ಇದ್ದವೋ ಏನೋ! ಈ ಜಾತಿಯ ಮಾವಿನಮರವೊಂದು ಯಾವುದೋ ಒಬ್ಬ ಮುಸ್ಲಿಮ್ ಜಮೀನುದಾರರ ತೋಟದಲ್ಲಿ ಇತ್ತಂತೆ! ಒಂದುಸಾರಿ ಈ ಮಾವಿನ ಹಣ್ಣು ಗಾಳಿಗೆ ಉದುರಿ, ಆ ಮರದ ಅಡಿಯಲ್ಲಿ ನಿಂತಿದ್ದ ಒಂದು ಕತ್ತೆಯ ಮೇಲೆ ಬಿದ್ದಾಗ, ಆ ಕತ್ತೆ ಸತ್ತೇ ಹೋಯಿತಂತೆ! ಹಾಗಾಗಿ ಆ ಜಾತಿಯ ಮಾವಿನ ಮರಕ್ಕೆ ಗದ್ದಾ ಮಾರ್ ಮರ ಮತ್ತು ಮಾವಿನ ಹಣ್ಣುಗಳಿಗೆ ಗದ್ದಾ ಮಾರ್ ಮಾವಿನಹಣ್ಣು ಎಂಬ ಹೆಸರಾಯಿತಂತೆ.

ಗದ್ದಾಮಾರ್ ಮಾವಿನಕಾಯಿಗಳು ಬೆಂಗಳೂರಿನಲ್ಲಿ ಸಿಗುವ ಆಮ್ಲೆಟ್ ಮಾವಿನಕಾಯಿಗಳನ್ನು ಗುಣದಲ್ಲಿ ಹೋಲುತ್ತಾ ಇದ್ದರೂ, ಗಾತ್ರದಲ್ಲಿ ಅವಕ್ಕಿಂತ ದೊಡ್ಡವು ಎಂದು ನನ್ನ ನೆನಪು. ಆ ಮರದ ಕಾಯಿಗಳು ಹಣ್ಣಾದಾಗ, ಅವು ಬಲು ಹುಳಿ! ಆ ಮರದ ಹಣ್ಣುಗಳನ್ನು ಯಾರಿಂದಲೂ ತಿನ್ನಲು ಸಾಧ್ಯವೇ ಇರಲಿಲ್ಲ! ಅಷ್ಟು ಹುಳಿ! ಆದರೆ, ಆ ಮಾವಿನಕಾಯಿಗಳು ಹೋಳು ಉಪ್ಪಿನಕಾಯಿಗೆ ಹೇಳಿ ಮಾಡಿಸಿದಂತವು. ನಮ್ಮ ಅಜ್ಜಿ ಕೃಷ್ಣವೇಣಮ್ಮ ಈ ಗದ್ದಾಮಾರ್ ಮಾವಿನಕಾಯಿಯ ಉಪ್ಪಿನಕಾಯಿಯನ್ನು ಭರಣಗಟ್ಟಳೆ ತಯಾರಿಸಿ ದಾಸ್ತಾನು ಇಟ್ಟುಕೊಳ್ಳುತ್ತಿದ್ದರು. ಮಿಕ್ಕಿದ ಕಾಯಿಗಳನ್ನು ಊರವರಿಗೆ ಉಪ್ಪಿನಕಾಯಿ ಮಾಡಿಕೊಳ್ಳಲು ಹಂಚುತ್ತಿದ್ದರು. ಈ ಮರದ ಮಾವಿನಕಾಯಿಗಳ ಉಪ್ಪಿನಕಾಯಿ ವರ್ಷಗಟ್ಟಳೆ ಇಟ್ಟರೂ ಹಾಳಾಗುತ್ತಿರಲಿಲ್ಲ.

ಮಿಡಿ ಉಪ್ಪಿನಕಾಯಿ ಹಾಕಲು ಉತ್ತಮವಾದ ಮಾವಿನ ಮಿಡಿ ಕೊಡುವ ಮರಗಳು ಅಜ್ಜನ ತೋಟದಲ್ಲಿ ಇದ್ದುವು. ನೀರು ಮಾವಿನಕಾಯಿ ಎಂದು ನಾವು ಕರೆಯತ್ತಿದ್ದ (ಮ್ಯಾಂಗೋ ಇನ್ ಬ್ರೈನ್) ತಯಾರಿಸಲು ಬೇಕಾದ ಕಾಯಿಕೊಡುವ ಮರಗಳು ಕೂಡಾ ಅಜ್ಜನ ತೋಟದಲ್ಲಿ ಇದ್ದುವು. ಕೆಲವು ಆರಿಸಿದ ಹಲಸಿನ ಮರಗಳ ತೊಳೆಗಳನ್ನು ಕೂಡಾ ನಮ್ಮ ಅಜ್ಜಿ ಇದೇ ರೀತಿ ರಕ್ಷಿಸಿ ನೀರು ಉಪ್ಪಿನಕಾಯಿ ಸೋಳೆ ತಯಾರಿಸಿ ಮಳೆಗಾಲಕ್ಕೆ ಎಂದು ದೊಡ್ಡ ದೊಡ್ಡ ಭರಣಿಗಳಲ್ಲಿ ದಾಸ್ತಾನು ಇಡುತ್ತಿದ್ದರು.

ಅಜ್ಜನ ತೋಟದಲ್ಲಿ ಮಾವಿನಮರಗಳಲ್ಲದೇ ಹಲವು ಬಗೆಯ ಹಲಸು, ದೀವಿಹಲಸು, ಹೆಬ್ಬಲಸು, ತೆಂಗು, ಸೀತಾಫಲ, ರಾಮಫಲ, ಪನ್ನೇರಲು, ನೇರಲು, ಜಂಬುನೇರಲು, ಕಸ್ತೂರಿಜಾಂ, ಸಪೋಟಾ, ಹುಣಸೆ, ವಾಟೆ, ಧಾರೆಹುಳಿ, ಬಿಂಬುಳಿ, ಚಕ್ಕೋತ ಮೊದಲಾದ ಹಣ್ಣಿನಮರಗಳಿದ್ದವು. ಗೋಡಂಬಿಯ ತೋಟದಲ್ಲಿ ಹಲವಾರು ತರಹೆಯ ವಿವಿಧ ಗಾತ್ರದ ಮತ್ತು ವಿವಿಧ ಬಣ್ಣದ ಗೋಡಂಬಿ ಹಣ್ಣುಗಳು ಸಿಗುತ್ತಿದ್ದವು. ನಮ್ಮ ಅಜ್ಜನ ಮನೆಯಲ್ಲಿದ್ದ ವಿವಿಧ ಹಣ್ಣುಗಳನ್ನು ನೆನಪಿಸಿಕೊಂಡರೆ ಈಗಲೂ ನನ್ನ ಬಾಯಲ್ಲಿ ನೀರೂರುತ್ತದೆ.

ಪ್ರತೀ ವೈಶಾಖಮಾಸದ ವಸಂತ ದ್ವಾದಶಿಯಂದು ಮಧ್ಯಾಹ್ನದ ಫಲಹಾರಕ್ಕೆ ಎರಡು ತರಹೆಯ ಕೂಸುಂಬರಿ ಮತ್ತು ಹೊಟ್ಟೆ ಬಿರಿಯುವಷ್ಟು ವಿವಿಧ ಬಗೆಯ ಹಣ್ಣುಗಳು ಮತ್ತು ಕುಡಿಯಲು ಬೇಕಾದಷ್ಟು ಪಾನಕ..! ಆ ದಿನ ನಮ್ಮ ನೆಂಟರಿಷ್ಟರು ಕೂಡಾ ಬಂದು ಫಲಹಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗ ಆ ವಸಂತ ದ್ವಾದಶಿಯ ಸಮಾರಂಭ ಒಂದು ಸವಿ ನೆನಪು.

ನಮ್ಮ ಅಜ್ಜನಮನೆ ಮಧ್ಯಮಗಾತ್ರದ ಮನೆ. ಬೇಸಿಗೆಯ ಸಮಯ ಮನೆಯ ಎದುರು ವಿಶಾಲವಾದ ಚಪ್ಪರಹಾಕಿ ಅದಕ್ಕೆ ತೆಂಗಿನ ಮಡಲು ಹೊಚ್ಚುತ್ತಾ ಇದ್ದರು. ನಾವು ನಮ್ಮ ಮನೆಯ ಆಳು ನಾಗುಗೌಡನ ಹತ್ತಿರ ನುಣ್ಣನೆಯ ಆವೆ ಮಣ್ಣು ತರಿಸಿ, ಆ ಮಣ್ಣಿನಲ್ಲಿ ಇರುವ ಕಲ್ಲುಗಳನ್ನು ಬೇರ್ಪಡಿಸಿ, ನೀರು ಬೆರಸಿ ನಾದಿ, ಕೆಲವುದಿನ ಸಾಕಷ್ಟು ನೀರು ಕೊಟ್ಟು ಹುದುಗಿಸಿ, ಆ ಮಣ್ಣಿಗೆ ತೆಂಗಿನ ಹೊಟ್ಟಿನ ಕರಿ ತಯಾರಿಸಿ ಬೆರೆಸುತ್ತಿದ್ದೆವು. ಚೆನ್ನಾಗಿ ಹುದುಗಿದ ಆ ಕರಿಬಣ್ಣದ ಮಣ್ಣನ್ನು ಚಪ್ಪರದ ಕೆಳಗೆ ಪಸರಿಸಿ, ಹೊಳೆಯ ಕಲ್ಲುಗಳನ್ನು ಕೈಯ್ಯಲ್ಲಿ ಹಿಡಿದು, ಮಣ್ಣು ಹಾಸಿದ ನೆಲವನ್ನು ನುಣ್ಣಗೆ ತಿಕ್ಕಿ ನುಣುಪಾಗಿಸುತ್ತಿದ್ದೆವು. ನುಣುಪಾದ ನೆಲಕ್ಕೆ ಗೇರುಬೀಜದ ಸಿಪ್ಪೆಯ ಎಣ್ಣೆ ಮತ್ತು ಭತ್ತದ ಹೊಟ್ಟಿನ ಕರಿ ಉಪಯೋಗಿಸಿ, ಇನ್ನೊಮ್ಮೆ ತಿಕ್ಕಿ ಪಾಲಿಶ್ ಹಾಕುತ್ತಿದ್ದೆವು. ಚಪ್ಪರದ ಕೆಳಗಿನ ನೆಲವು ನಮ್ಮ ಈ ಶ್ರಮದಿಂದ ಸಿಮೆಂಟಿನ ನೆಲದಂತೆ ಕಾಣಿಸುತ್ತಿತ್ತು.

ಪ್ರತಿವರ್ಷ ನಾಗುಗೌಡನಿಗೆ ಸ್ವಲ್ಪ ಪೂಸಿ ಹೊಡೆದು, ಇನ್ನೂ ಸ್ವಲ್ಪ ಜಾಸ್ತಿ ಆವೆ ಮಣ್ಣು ತರಿಸಿ, ಅಂಗಳದ ಎಡ ಮತ್ತು ಬಲ ಬದಿಯಲ್ಲಿ ಮಣ್ಣಿನ ಸೋಫಾಗಳನ್ನು ರೂಪಿಸುತ್ತಿದ್ದೆವು. ಅಂಗಳಕ್ಕೆ ಪಾಲಿಷ್ ಹಾಕಿದ ರೀತಿಯಲ್ಲೇ ಆ ಸೋಫಾಗಳಿಗೆ ಪಾಲಿಷ್ ಹಾಕುತ್ತಿದ್ದೆವು. ಈ ಮಣ್ಣಿನ ಸೋಫಾಗಳ ಮೇಲೆ ಸುಮಾರು ಹತ್ತರಿಂದ ಹನ್ನೆರಡು ಜನರು ಆರಾಮಾಗಿ ಕುಳಿತುಕೊಳ್ಳಬಹುದಾಗಿತ್ತು. ಯಾರಾದರೂ ಅತಿಥಿಗಳು ಬಂದರೆ, ಮನೆಯೊಳಗಿನಿಂದ ಕುರ್ಚಿ ತಂದು ಹಾಕಬೇಕಿರಲಿಲ್ಲ. ನಮ್ಮ ಸೋಫಾಗಳೇ ಅವರಿಗೆ ಬಹು ಸತ್ಕಾರದ ಆಸನಗಳಾಗುತ್ತಿದ್ದವು.

ಆ ಕಾಲದಲ್ಲಿ ಕಿನ್ನಿಕಂಬಳದ ಹಳ್ಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಮನೆಯೊಳಗೆ ಬಹು ಸೆಕೆ ಅನ್ನಿಸುತ್ತಾ ಇತ್ತು. ಆ ಸಮಯದಲ್ಲಿ ನಾವು ನಮ್ಮ ಹಾಸಿಗೆಗಳನ್ನು ತಂದು ಅಂಗಳದ ಚಪ್ಪರದಡಿ ಹಾಸಿ ಮಲಗುತ್ತಿದ್ದೆವು.

ವಿದ್ಯುತ್ ಇಲ್ಲದ ಆ ದಿನಗಳಲ್ಲಿ ನಾವು ಸಾಯಂಕಾಲ ಕತ್ತಲಾಗುತ್ತಲೇ ದೇವರ ಭಜನೆ ಹೇಳಿ ರಾತ್ರಿಯ ಊಟವನ್ನು ಎಂಟು ಗಂಟೆಯ ಒಳಗೆ ಮುಗಿಸುತ್ತಿದ್ದೆವು.

ನಮ್ಮ ಅಣ್ಣ ಮತ್ತು ಅವರ ಸ್ನೇಹಿತ ಬೇಸಿಗೆಯ ರಜಾಕ್ಕೆ ಬರುವುದನ್ನೇ ನಾವು ಕಾಯುತ್ತಾ ಇದ್ದೆವು. ಪ್ರತಿದಿನ ನಮ್ಮ ಅಣ್ಣ, ದೇವೇಂದ್ರಣ್ಣ ಅಥವಾ ಅವರ ಸ್ನೇಹಿತ ಮಾಧವಣ್ಣ ನಮಗೆ ಹೊಸ ಹೊಸಾ ಭಜನೆಯ ಪದ್ಯಗಳನ್ನು ಹೇಳಿಕೊಡುತ್ತಿದ್ದರು. ರಾತ್ರಿಯ ಊಟ ಆದ ಮೇಲೆ, ಅವರು ನಮಗೆ ಚಿತ್ರ ವಿಚಿತ್ರವಾದ ಕಥೆಗಳನ್ನು ಹೇಳುತ್ತಿದ್ದರು. ತೀರಾ ದೊಡ್ಡ ಕಥೆಗಳಾಗಿದ್ದರೆ, ಅವು ಧಾರಾವಾಹಿಗಳಾಗಿ ಹರಿದುಬರುತ್ತಿದ್ದವು. ಆ ದಿನಗಳಲ್ಲಿ ನಾವು ರಾತ್ರಿ ಒಂಬತ್ತು ಗಂಟೆಗೆಲ್ಲಾ ನಿದ್ರೆ ಮಾಡುತ್ತಿದ್ದೆವು.

ಕೆಲವು ದಿನ ಸಾಯಂಕಾಲ ಹೊತ್ತು ನಮ್ಮ ಅಣ್ಣ ಮತ್ತು ಅವರ ಸ್ನೇಹಿತ ನಮಗೆ ನಾಟಕ ಅಭಿನಯಿಸಿ ತೋರಿಸುತ್ತಿದ್ದರು, ಕೆಲವೊಮ್ಮೆ ಇಬ್ಬರಲ್ಲಿ ಒಬ್ಬರು ಏಕಪಾತ್ರ ಅಭಿನಯ ಮಾಡಿ ತೋರಿಸುವುದೂ ಇತ್ತು. ಅಂತಹಾ ದಿನಗಳಲ್ಲಿ ಮನೆಯ ಹಿರಿಯರೂ, ಚಪ್ಪರದ ಅಡಿ ಕುರ್ಚಿ ಹಾಕಿಸಿಕೊಂಡು ಕುಳಿತು ಅವರ ಪಾತ್ರಗಳನ್ನು ಮುತುವರ್ಜಿಯಿಂದ ನೋಡುತ್ತಿದ್ದರು.        ಆ ದಿನಗಳಲ್ಲಿ ನಮ್ಮ ಮನೆಯಲ್ಲಿ ರೇಡಿಯೋ ಇರಲಿಲ್ಲ. ನಮ್ಮ ಹಳ್ಳಿಗೆ ಯಾವ ಬಾನುಲಿ ಪ್ರಸರಣವೂ ಸಿಗುತ್ತಾ ಇರಲಿಲ್ಲ. ಪ್ರತಿವರ್ಷ ನಮ್ಮೂರಲ್ಲಿ ನಡೆಯುತ್ತಿದ್ದ ಒಂದೆರಡು ಯಕ್ಷಗಾನ ಪ್ರಸಂಗ ಮತ್ತು ನಮ್ಮ ಶಾಲೆಯ ಸ್ಕೂಲ್‌ಡೇ ಇವೇ ನಮ್ಮ ಮನರಂಜನೆಯ ದೊಡ್ಡ ಐಟಂ ಎನ್ನಿಸಿದ್ದವು. ಇವುಗಳ ಬಗ್ಗೆಯೇ ಮುಂದಿನ ವರ್ಷದವರೆಗೂ ನಮ್ಮ ಹಳ್ಳಿಯ ಜನರು ಮಾತನಾಡುತ್ತಿದ್ದರು.

ನಮ್ಮ ಶಾಲೆಯಲ್ಲಿ ಉತ್ತಮ ಕನ್ನಡ ಪುಸ್ತಕಗಳ ಗ್ರಂಥಾಲಯವಿತ್ತು. ವಿದ್ಯೆಯುಳ್ಳ ಪೋಷಕರು ತಮ್ಮ ಮಕ್ಕಳ ಮುಖಾಂತರ ಒಳ್ಳೆಯ ಪುಸ್ತಕಗಳನ್ನು ತರಿಸಿ ಓದುತ್ತಿದ್ದರು. ನಮ್ಮೂರಲ್ಲಿ ಶಾಲೆಗೆ ಮಾತ್ರ ವೃತ್ತಪತ್ರಿಕೆ ಬರುತ್ತಿತ್ತು. ಅದು ಮಧ್ಯಾಹ್ನದ ಎರಡು ಗಂಟೆಯ ಬಸ್‌ನಲ್ಲಿ ಬರುತ್ತಿತ್ತು. ಶಾಲೆಯ ಉಪಾಧ್ಯಾಯರುಗಳು ವೃತ್ತಪತ್ರಿಕೆಯನ್ನು ಪ್ರತಿದಿನ ಸಾಯಂಕಾಲ ಶಾಲೆ ಬಿಟ್ಟೊಡನೆ ಓದುತ್ತಿದ್ದರು. ಮರುದಿನ ಬೆಳಗ್ಗೆ ಶಾಲೆಯ ನಿತ್ಯಪ್ರಾರ್ಥನೆ ಆದನಂತರ, ಹಿರಿಯ ಕ್ಲಾಸುಗಳ ವಿದ್ಯಾರ್ಥಿ ಮುಖಂಡರಲ್ಲಿ ಒಬ್ಬರು ಹಿಂದಿನ ದಿನದ ಪತ್ರಿಕೆಯಲ್ಲಿ ಪ್ರಕಟವಾದ ಬಿಸಿಬಿಸಿ ವಾರ್ತೆಗಳನ್ನು ಓದಿ ನಮಗೆ ವಿಶಾಲ ಜಗತ್ತಿನ ಆಗುಹೋಗುಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ನಮ್ಮ ಕಾಲ ಹೀಗಿತ್ತು ಅಂದರೆ ಇಂದಿನ ಹುಡುಗರು ನಂಬುತ್ತಾರೆಯೆ..?

ಬೇಸಗೆಯ ರಜಾ ಬಂದರೆ, ನಾವು ನಮ್ಮ ಊರಾದ ಪೂಮಾವರಕ್ಕೆ ಹೋಗುತ್ತಿರಲಿಲ್ಲ. ನಮ್ಮ ದಾಯಾದಿ ಶ್ರೀಪತಿ ಅಣ್ಣ ನಮ್ಮ ಎಲ್ಲ ಆಸ್ತಿಯನ್ನೂ ಗೇಣಿದಾರರ ಮುಖಾಂತರ ಸಾಗು ಮಾಡಿಸುತ್ತಾ ಆರಾಮವಾಗಿ ಇದ್ದರು. ನಮ್ಮ ತಾಯಿಯವರಿಗೆ ನಮ್ಮ ಅಸ್ತಿ ಎಲ್ಲಾ ಗೇಣಿದಾರರಿಗೆ ಕೊಟ್ಟುದು ಇಷ್ಟವಾಗಿರಲಿಲ್ಲ. ಆದ್ದರಿಂದ ಅವರು ತಮ್ಮ ಸ್ವಂತ ಮನೆಗೆ ನಮಗೆ ರಜಾ ಸಿಕ್ಕಾಗ ಹೋಗಲು ಕೂಡಾ ಇಷ್ಟಪಡಲಿಲ್ಲ.

ನಮ್ಮ ತಂದೆಯವರು ತೀರಿಕೊಂಡ ಮೇಲೆ ಅದೇಕೋ ನಮ್ಮ ತಾಯಿಯವರು ಸ್ವಲ್ಪ ವೈರಾಗ್ಯ ತಾಳಿದ್ದರು ಎಂದೇ ಹೇಳಬಹುದು.  ಅವರು ನಮ್ಮ ಆಹಾರ ಮತ್ತು ಆರೋಗ್ಯದ ಕಡೆಗೆ ಗಮನ ಕೊಟ್ಟರೂ, ನಮ್ಮನ್ನು ನಮ್ಮ ಅಜ್ಜಿ ಮತ್ತು ಆಗ ಮದುವೆ ಆಗದಿದ್ದ ಕಿಶೋರಿ ಪ್ರಾಯದ ಚಿಕ್ಕಮ್ಮ ಶ್ಯಾಮಲಾದೇವಿ ತುಂಬಾ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು.

ಬೇಸಿಗೆಯ ರಜಾ ಬಂತೆಂದರೆ ನಮಗೆ ಖುಶಿ. ಮೊದಲು ನಮ್ಮ ಮನೆಯ ಚಪ್ಪರದ ನೆಲ ಅರೆದು, ಮಣ್ಣಿನ ಸೋಫಾಗಳನ್ನು ನಿರ್ಮಿಸುವ ಕೆಲಸ ಇರುತ್ತಿತ್ತು. ಆ ಮೇಲೆ ಗೇರುಹಣ್ಣು ಕೊಯ್ಯುವ ಕೆಲಸ. ಆದಾದ ಮೇಲೆ ಮಾವಿನ ಫಸಲಿನ ಉಸ್ತುವಾರಿ. ಅಣ್ಣ ಮತ್ತು ಅವರ ಸ್ನೇಹಿತ ಹೇಳುವ ಉಡುಪಿ ಶಹರದ ಕಾಲೇಜಿನ ಸಂಗತಿಗಳು. ಸಾಯಂಕಾಲದ ಕಥಾ ಕಾಲಕ್ಷೇಪ ಇಲ್ಲವೇ ಅವರ ಏಕಪಾತ್ರ ಅಭಿನಯ…. ನಮ್ಮ ಸಮಯ ಸಂತೋಷವಾಗಿ ಸಾಗುತ್ತಿತ್ತು.

ನಮಗೆ ಹೊಟ್ಟೆಬಟ್ಟೆಗೆ ಏನೂ ಕಮ್ಮಿ ಇರಲಿಲ್ಲ. ಮನೆಯಲ್ಲಿ ಹಾಲುಮೊಸರು ಧಾರಾಳವಾಗಿ ಇತ್ತು. ಅಜ್ಜಿ ಅಜ್ಜನ ಪ್ರೀತಿಯ ರಕ್ಷಣೆ ಇತ್ತು. ನಾವು ನಮ್ಮ ಮಟ್ಟಿಗೆ ಸುಖವಾಗಿಯೇ ಇದ್ದೆವು.

ಮೇ ತಿಂಗಳ ಕೊನೆಯ ವಾರ ದಕ್ಷಿಣಕನ್ನಡದಲ್ಲಿ ಮಳೆ ಶುರುವಾಗುತ್ತಿತ್ತು. ನಾಗುಗೌಡ ಮತ್ತು ಆತನ ಸಹಾಯಕ ಗಣ ಬಂದು ಅಜ್ಜನಮನೆಯ ಎದುರಿನ ಚಪ್ಪರ ಬಿಚ್ಚುತ್ತಿದ್ದರು. ನಮ್ಮ ಅಂಗಳದ ಮಣ್ಣಿನ ಸೋಫಾಗಳು ಮೊದಲ ಮಳೆಯಲ್ಲೇ ನೆನೆದು ಶಿಥಿಲವಾದಾಗ, ನಾಗುಗೌಡ ಅವನ್ನು ಒಂದು ಮಮಟಿ ತಂದು ಅಗೆದು, ಸಿಕ್ಕ ಮಣ್ಣನ್ನು ತರಕಾರಿಗಳ ಪಾತಿಯ ಸಾಲಿಗೆ ಸೇರಿಸಿಬಿಡುತ್ತಿದ್ದ. ಗೋಡಂಬಿ ಮತ್ತು ಮಾವುಗಳ ಕೊಯ್ಲು ಕೂಡಾ ಆಗ ಮುಗಿದಿರುತ್ತಿತ್ತು.

ಮೇ ತಿಂಗಳ ಮೂವತ್ತೊಂದಕ್ಕೆ ನಮ್ಮ ಅಣ್ಣ ಮತ್ತು ಅವರ ದೋಸ್ತಿ ಉಡುಪಿಗೆ ಹೋಗುವ ಬಸ್ ಹತ್ತುತ್ತಿದ್ದರು. ಜೂನ್ ಒಂದನೇ ತಾರೀಕು ನಮಗೂ ಶಾಲೆ ಶುರುವಾಗುತ್ತಿತ್ತು. ಮುಂದಿನ ವರ್ಷದ ಬೇಸಿಗೆ ಯಾವಾಗ ಬರುತ್ತೆ? ಅಂದುಕೊಳ್ಳುತ್ತಾ ನಾವು ಕೂಡಾ ಶಾಲೆಯ ಪಾಠಗಳಲ್ಲಿ ತನ್ಮಯರಾಗುತ್ತಿದ್ದೆವು.

ಬೇಸಿಗೆ ರಜೆಯಲ್ಲಿ ಯಾವ ಊರಿಗೂ ಹೋಗದೇ, ಯಾವ ಸಮ್ಮರ್ ಕ್ಯಾಂಪಿಗೂ ಹಾಜರಿ ಹಾಕದೇ, ಇದ್ದ ಜಾಗದಲ್ಲೇ ನಾವು ಸುಖವಾಗಿ ಇದ್ದೆವು.