ನಾಗುಗೌಡನು ನನ್ನ ಮಂಗಳೂರು ಹತ್ತಿರದ ಕಿನ್ನಿಕಂಬಳ ಎಂಬ ಊರಿನಲ್ಲಿದ್ದ ನನ್ನ ಅಜ್ಜನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಳು. ಆತನು ಕರಿಯ ಕುಡುಂಬಿ ಎಂಬ ಪಂಗಡಕ್ಕೆ ಸೇರಿದವನು. ಆತ ತುಂಬಾ ಸ್ವಾಭಿಮಾನಿ. ಹಸನ್ಮುಖಿ. ಅಸಾಧಾರಣ ಶಕ್ತಿವಂತ. ಕಾಲು ಸ್ವಲ್ಪ ಕುಂಟು. ಚಿಕ್ಕಂದಿನಲ್ಲಿ ಕಾಡುಹಂದಿಯ ಬೇಟೆಯಲ್ಲಿ ಪೆಟ್ಟು ಮಾಡಿಕೊಂಡ ಪರಿಣಾಮ ಅವನ ಕಾಲು ಹಾಗಾಯಿತಂತೆ.

ಚಿಕ್ಕಮಕ್ಕಳಾಗಿದ್ದ ನಮಗೆಲ್ಲಾ ಅಚ್ಚುಮೆಚ್ಚಿನ ಆಳು ನಾಗುಗೌಡ. ಸಂಜೆ ಹೊತ್ತು ಅವನು ನಮ್ಮನ್ನೆಲ್ಲಾ ಸುತ್ತ ಕೂಡಿಸಿಕೊಂಡು ಕಥೆ ಹೇಳುತ್ತಿದ್ದ. ಅವನ ಕಥೆಯ ರಾಕ್ಷಸ ಬಹಳ ಕ್ರೂರಿಯಾಗಿರುತ್ತಿದ್ದ. ಆ ರಾಕ್ಷಸನ ಪ್ರಾಣವು ಅವನ ಹೆಂಡತಿಯು ಬಹು ಎಚ್ಚರಿಕೆಯಿಂದ  ಬಂಗಾರದ ಪಂಜರದಲ್ಲಿ ಇಟ್ಟು ಕಾಪಾಡುತ್ತಿದ್ದ ಪಂಚರಂಗಿನ ಗಿಳಿಯಲ್ಲಿ ಅಡಕವಾಗಿತ್ತಂತೆ.  ಅವನ ಕಥೆಗಳಲ್ಲಿ ರಾಕ್ಷಸನ ಉಪಟಳವೇ ಅವ್ಯಾಹತವಾಗಿ ಸಾಗುತ್ತಿತ್ತು. ಅವನನ್ನು ಅಣಗಿಸಲು ಆ ಊರಿನ ರಾಜಕುಮಾರ ಬಹಳ ಸಾಹಸ ಪಡುತ್ತಿದ್ದ. ರಾಜಕುಮಾರನು ಅವನನ್ನು ಯಾವ ಯಾವ ರೀತಿಯಲ್ಲಿ ಸಾಯಿಸಲು ಪ್ರಯತ್ನಿಸಿದರೂ, ಅವನು ಸಾಯದೆ ಬದುಕಿಕೊಳ್ಳುತ್ತಿದ್ದ.  ಪ್ರತೀ ಸಾರಿಯೂ ರಾಜಕುಮಾರ ಹೊಸ ಹೊಸ ಆಯುಧಗಳನ್ನು ಸಂಪಾದಿಸಿ ಆತನನ್ನು ಎದುರಿಸಿದರೂ, ಆತನಿಗೆ ಜಯ ಸಿಗುತ್ತಿರಲಿಲ್ಲ. ಇದೇ ಧಾಟಿಯಲ್ಲಿ ಕಥೆಗಳು ಇಂದಿನ ಟೀವಿ ಧಾರಾವಾಹಿಯ ಕಂತುಗಳಂತೆ ತಿಂಗಳುಗಟ್ಟಲೆ ಮುಂದುವರಿಯುತ್ತಿದ್ದುವು. ಅಂತೂ ಕೊನೆಗೊಮ್ಮೆ ರಾಕ್ಷಸನ ಪ್ರಾಣದ ಗುಟ್ಟು ಗೊತ್ತಾದ ರಾಜಕುಮಾರ ಬಂಗಾರದ ಪಂಜರದಲ್ಲಿದ್ದ ಪಂಚರಂಗಿನ ಗಿಳಿಯನ್ನು ಕೊಂದು ಆತನನ್ನು ಸಂಹರಿಸುತ್ತಾನೆ. ರಾಕ್ಷಸನ ಬಂಧನದಲ್ಲಿದ್ದ ರಾಜಕುಮಾರಿಯನ್ನು ಮದುವೆಯಾಗುತ್ತಾನೆ…

ಹೀಗೆ ಒಂದು ಕಥೆ ಮುಗಿದರೂ, ಇನ್ನೊಂದು ಹೊಸ ಕಥೆ ಸೃಷ್ಟಿಯಾಗುತ್ತಿತ್ತು – ನಮ್ಮ ನಾಗುಗೌಡನ ತಲೆಯಲ್ಲಿ..!

ಅವನು ನಮಗೆ ಎಂದೂ ಮುಗಿಯದ ಸಾವಿರ ಕಥೆಗಳ ಸರದಾರನಾಗಿದ್ದ. ಕೆಲವೊಮ್ಮೆ, ಸಾಯಂಕಾಲ ಐದು ಗಂಟೆಯ ಹೊತ್ತಿಗೆ ನಾವು ನಾಗುಗೌಡ, ಇಂದು ಯಾಕೋ ತುಂಬಾ ಹಸಿವೆ ಎಂದರೆ, ತೆಂಗಿನಮರದಿಂದ ಹದವಾಗಿ ಬೆಳೆದ ಬಣ್ಣಂಗಾಯಿ (ದೋರೆಗಾಯಿ) ಎಳನೀರುಗಳನ್ನು ಕಿತ್ತುತಂದು, ಮೊದಲು ಎಳನೀರನ್ನು ನಮಗೆ ಕುಡಿಸುತ್ತಿದ್ದ. ಆಮೇಲೆ, ಮಕ್ಕಳೇ, ಅಜ್ಜಿಯವರ ಹತ್ತಿರ ಸ್ವಲ್ಪ ಬೆಲ್ಲ ಮತ್ತು ಅವಲಕ್ಕಿ ಕೇಳಿಕೊಂಡು ಬನ್ನಿ! ಅನ್ನುತ್ತಿದ್ದ. ನಾವು ಕುಡಿದ ಎಳನೀರ ಬುರುಡೆಗಳನ್ನು ಒಡೆದು ಅವುಗಳ ತಿರುಳನ್ನು ತನ್ನ ಕತ್ತಿಯಿಂದ ಎಬ್ಬಿಸಿ ಎಳನೀರಿನ ಬುರುಡೆಯ ಅರ್ಧಭಾಗಕ್ಕೆ ಹಾಕಿಕೊಡುತ್ತಿದ್ದ. ಆ ಅರೆ ಬಲಿತ ಎಳನೀರ ಗಂಜಿಕಾಯಿಗೆ ನಾವು ಅವಲಕ್ಕಿ ಮತ್ತು ಬೆಲ್ಲಗಳನ್ನು ಚೆನ್ನಾಗಿ ಕಲೆಸಿ ಮೆಲ್ಲುತ್ತಿದ್ದೆವು. ಎಳನೀರಿನ ಬುರುಡೆಯ ಅರ್ಧಭಾಗದಲ್ಲಿ ನಾವು ಕಲೆಸಿಕೊಂಡು ತಿನ್ನುತ್ತಿದ್ದ ಆ ‘ಅನುಪಮ ಭಕ್ಷದ ರುಚಿಯನ್ನು ನಾವು ಎಂದಿಗೂ ಮರೆಯಲಾರೆವು.

ಭಾನುವಾರ ಆತನಿಗೆ ಕೆಲಸಕ್ಕೆ ರಜಾ. ರಜಾದಿನವಾದರೂ, ಸ್ವಲ್ಪ ತಡವಾಗಿ ನಮ್ಮ ಅಜ್ಜನ ಮನೆಯ ಹತ್ತಿರ ಆತ ಹಾಜರಾಗುತ್ತಿದ್ದ. ನಮ್ಮ ಕಪಿಸೈನ್ಯ ಅವನ ಬರವನ್ನೇ ಕಾಯುತ್ತಿರುತ್ತಿತ್ತು. ಪ್ರತೀ ಭಾನುವಾರ ಬರುವಾಗ ನಮಗಾಗಿ ಆತನ ಕೈಯಲ್ಲಿ ನೇರಳೆ ಹಣ್ಣು, ತೌಂಪಿನ ಹಣ್ಣು, ರಂಜಲ ಹಣ್ಣು, ಕುಂಟಾಲ ಹಣ್ಣು, ಬ್ರಮ್ಮೇರ್ಲ ಹಣ್ಣು ಅಥವಾ ಹನೆಬೊಂಡ (=ತಾಳೆಮರದ ಕಾಯಿಗಳು) ಮುಂತಾದುವುಗಳಲ್ಲಿ ಯಾವುದಾದರೂ ಒಂದು ಫಲವಸ್ತು ಇದ್ದೇ ಇರುತ್ತಿತ್ತು. ಆ ಗ್ರಾಮೀಣ ಹಣ್ಣುಗಳ ರುಚಿಯನ್ನು ನಾವಿಂದಿಗೂ ಮರೆತಿಲ್ಲ.

ನಾಗುಗೌಡ ಕರಿಯ ಕುಡುಂಬಿ ಪಂಗಡದಲ್ಲೇ ಮುಂದುವರಿದವನಾಗಿದ್ದ. ಆತನು ನಮ್ಮ ಅಜ್ಜನವರು ಸ್ಥಾಪಿಸಿದ್ದ ಶಾಲೆಯಲ್ಲಿ ಎರಡನೇ ಕ್ಲಾಸಿನ ತನಕ ಓದಿದ್ದನಂತೆ! ಆತ ಸ್ವಲ್ಪಮಟ್ಟಿಗೆ ಓದಿ-ಬರೆಯಬಲ್ಲವನಾಗಿದ್ದ. ಯಕ್ಷಗಾನ ಬಯಲಾಟಗಳಲ್ಲಿ ತಾನು ಕೇಳಿಕೊಂಡಿದ್ದ ಭಾಗವತಿಕೆಯ ಹಾಡುಗಳನ್ನು ಸೊಂಪಾಗಿಯೇ ಹಾಡುತ್ತಿದ್ದ. ಇತರೇ ಕರಿಯ ಕುಡುಂಬಿ ಗಂಡಸರಂತೆ ತಲೆಯ ಕೂದಲನ್ನು ಉದ್ದಕ್ಕೆ ಬಿಟ್ಟು ಸೂಡಿಕಟ್ಟದೇ, ನೀಟಾಗಿ ಕ್ರಾಪ್ ಮಾಡಿಸಿಕೊಳ್ಳುತ್ತಿದ್ದ. ಚೌಕುಳಿಬಟ್ಟೆಯ ರೆಡಿಮೇಡ್ ಕಸೆ ಅಂಗಿ (ಈ ತರಹೆಯ ಅಂಗಿಗಳನ್ನು ಹಳ್ಳಿಯ ದರ್ಜಿಗಳು ತಯಾರಿಸಿ ದಿನಸಿ ಅಂಗಡಿಗಳಲ್ಲಿ ಮಾರಾಟಕ್ಕೆ ಇರಿಸುತ್ತಿದ್ದರು) ಧರಿಸಿ ಮೊಣಕಾಲವರೆಗೆ ಬರುವಂತಹ ತುಂಡುಪಂಚೆ ಧರಿಸುತ್ತಿದ್ದ. ಅವನು ಎಂದೂ ಕಾಲಿಗೆ ಚಪ್ಪಲಿ ಧರಿಸುತ್ತಿರಲಿಲ್ಲ, ಅವನಿಗೆ ಅದರ ಅಗತ್ಯವೂ ಇರಲಿಲ್ಲ ಎಂದು ತೋರುತ್ತದೆ. ಎಷ್ಟೇ ಚೂಪಾದ ಕಲ್ಲು ಮುಳ್ಳುಗಳಿರುವ ಜಾಗವಿರಲಿ, ಆತ ಅಲ್ಲಿ ಸಲೀಸಾಗಿ ಓಡಾಡುತ್ತಿದ್ದ. ಎಂತಹಾ ದೊಡ್ಡ ಮರವೇ ಇರಲಿ ಆತನು ಅದನ್ನು ಸಲೀಸಾಗಿ ಹತ್ತಿಬಿಡುತ್ತಿದ್ದ. ಬೇಸಿಗೆಯ ಕಾಲದಲ್ಲಿ ಹಲಸು, ಮಾವು ಮತ್ತು ಹುಣಸೆ ಮರಗಳ ಫಸಲು ಕೊಯ್ಯುವ ಕೆಲಸ ಆತನದೇ ಆಗಿತ್ತು. ಎಲ್ಲಾ ತೆಂಗಿನಮರಗಳ ಫಸಲು ಸಕಾಲಕ್ಕೆ ಕೊಯ್ದು, ಆ ಮರಗಳ ಆರೈಕೆಯನ್ನು ಆತನೇ ಮಾಡುತ್ತಿದ್ದ.

ನಮ್ಮ ಅಜ್ಜನ ಮನೆಯಲ್ಲಿ ಆತ ದಿನ ಕೂಲಿಯ ಆಳಾಗಿ ಕೆಲಸ ಮಾಡುತ್ತಿದ್ದರೂ,  ಆತನಿಗೆ ಸಂಬಳದ ಜತೆಗೆ ಪಡಿ (ಊಟದ ಅಕ್ಕಿ), ವರ್ಷಕ್ಕೆ ಎರಡು ಜತೆ ಬಟ್ಟೆ, ತೆಂಗಿನಕಾಯಿ, ಹುಣಸೆಹುಳಿ ಮತ್ತು ಮೆಣಸು ಸಲ್ಲುತ್ತಿದ್ದುವು.

ನಾಗುಗೌಡ ನಮ್ಮಲ್ಲಿ ದಿನಾ ಬೆಳಗ್ಗೆ ಬಂದವನೇ ತಂಗಳೂಟ ಮಾಡುತ್ತಿದ್ದ. ಆ ದಿನಗಳಲ್ಲಿ ಅನುಕೂಲವಂತರ ಮನೆಗಳಲ್ಲಿ ಹಿಂದಿನ ದಿನದ ಆಹಾರವನ್ನು ಮನೆಯವರು ಮರುದಿವಸ ಬಳಸುತ್ತ್ತಿರಲಿಲ್ಲ. ಈಗ ಫ್ರಿಜ್ ಬಂದಮೇಲೆ ನಾವು ಯಾವುದನ್ನೂ ಹೊರಗೆ ಹಾಕುತ್ತಿಲ್ಲ. ನಮ್ಮ ಹಳ್ಳಿಗಳಲ್ಲಿ ಫ್ರಿಜ್ಗೆ ಇಂದು ಕೂಡಾ ತಂಗಳು ಪೆಟ್ಟಿಗೆ ಎಂಬ ಅನ್ವರ್ಥನಾಮ ಚಾಲ್ತಿಯಲ್ಲಿದೆ.

ಬೆಳಗಿನ ಮತ್ತು ಸಂಜೆಯ ಕಾಫಿ, ಮಧ್ಯಾಹ್ನದ ಬಿಸಿ ಬಿಸಿ ಊಟ ಮತ್ತು ಆತನಿಗೆ ಸಾಕು ಎನಿಸುವಷ್ಟು ಎಲೆ‌ಅಡಿಕೆ ಇವುಗಳನ್ನು, ನಮ್ಮ ನಾಗುಗೌಡನಿಗೆ ಪುಷ್ಕಳವಾಗಿ, ನಮ್ಮ ಅಜ್ಜಿಯೇ ಕಯ್ಯಾರೆ ಕೊಡುತ್ತಿದ್ದರು.

ಅಡುಗೆಮನೆಯ ಹಿಂದಿನ ಜಗುಲಿಯಲ್ಲಿ, ಬಾಳೆ‌ಎಲೆ ಹಾಕಿಕೊಂಡು, ಆರು ಇಂಚು ಎತ್ತರದ ಕಾಲುಗಳುಳ್ಳ ಕಾಲುಮಣೆಯ ಮೇಲೆ ನಾಗುಗೌಡನು ಕುಕ್ಕರಕಾಲಿನಲ್ಲಿ ಕುಳಿತು ಊಟ ಮಾಡುತ್ತಿದ್ದ ದೃಶ್ಯ ನಾನು ಮರೆಯಲಾರೆ. ನಾಗುಗೌಡ ಕೆಲಸ ಬೊಗಸೆಗಳಲ್ಲಿ ಎಷ್ಟು ಗಟ್ಟಿಯೋ, ಊಟದಲ್ಲೂ ಅಷ್ಟೇ ಗಟ್ಟಿಗ! ದೊಡ್ಡ ಬಾಳೆಯ ಎಲೆಯ ತುಂಬಾ ಅನ್ನ ಹಾಕಿಸಿಕೊಂಡು, ರಾಶಿಯ ಮಧ್ಯೆ ಒಂದು ಗುಂಡಿತೋಡಿ, ಆ ಗುಂಡಿಯೊಳಗೆ ವ್ಯಂಜನಗಳನ್ನು ಹಾಕಿಸಿಕೊಂಡು, ಖುಶಿಯಿಂದ ಕೈ ತುಂಬುವಷ್ಟು ದೊಡ್ಡ ತುತ್ತುಗಳನ್ನು ತೆಗೆದುಕೊಂಡು, ಸೊರ ಸೊರ ಶಬ್ದಮಾಡುತ್ತಾ ಅವನು ಊಟ ಮಾಡುತ್ತಿದ್ದ. ನಮ್ಮ ಅಜ್ಜಿಗೆ ಅವನಿಗೆ ಬಡಿಸಿದಷ್ಟೂ ತೃಪ್ತಿ ಇಲ್ಲ! ಅವರಿಗೆ ಚೆನ್ನಾಗಿ ಉಣ್ಣುವವರನ್ನು ಕಂಡರೆ ಪ್ರೀತಿ. ಅವನು ಅಮ್ಮಾ! ಸಾಕು, ಸಾಕು! ಎನ್ನುವ ತನಕ ಧಾರಾಳವಾಗಿ ಊಟತಿಂಡಿಗಳನ್ನು ಆತನಿಗೆ ಬಡಿಸುತ್ತಿದ್ದರು.

ಅಜ್ಜಿಯ ಮೊಮ್ಮಕ್ಕಳ ಪೈಕಿ ನಾನು ಚೆನ್ನಾಗೇ ಉಣ್ಣುತ್ತಿದ್ದೆ. ಅದಕ್ಕೇ, ಅವರಿಗೆ ನನ್ನನ್ನು ಕಂಡರೆ ತುಂಬಾ ಪ್ರೀತಿ.

ನಾಗುಗೌಡನ ಮನೆ ನನ್ನ ಅಜ್ಜನ ಜಮೀನಿನ ಪಕ್ಕದಲ್ಲಿತ್ತು. ಸರಕಾರಿ ಜಾಗದಲ್ಲಿ ಮನೆ ಮಾಡಿಕೊಂಡು ಆತ ಆ ಜಾಗಕ್ಕೆ ದರಕಾಸ್ತು ಹಕ್ಕನ್ನು ಪಡೆದಿದ್ದ.

ಬಡವನಾದರೂ ನಾಗುಗೌಡ ತುಂಬಾ ಸ್ವಾಭಿಮಾನಿ. ತನ್ನ ಹೆಂಡತಿಯನ್ನು ಎಲ್ಲೂ ಕೆಲಸಕ್ಕೆ ಕಳುಹಿಸುತ್ತಿರಲಿಲ್ಲ. ಆತನ ಹೆಂಡತಿ ತನ್ನ ಮನೆಯ ಸುತ್ತ ಹಲವಾರು ತೆಂಗಿನ ಹಾಗೂ ಹಣ್ಣಿನಮರಗಳನ್ನು ನೆಟ್ಟುಕೊಂಡು ಅವುಗಳ ಆರೈಕೆ ಮಾಡುತ್ತಿದ್ದಳು. ನಾಲ್ಕಾರು ಕರಾವಿನ ಎಮ್ಮೆ ಮತ್ತು ದನಗಳನ್ನು ಆಕೆ ಸಾಕಿದ್ದಳು. ಮನೆಯ ಸುತ್ತಮುತ್ತ ಮಲ್ಲಿಗೆ, ಗೋರಟಿಗೆ ಮತ್ತು ಅಬ್ಬಲ್ಲಿಗೆ ಮೊದಲಾದ ಹೂವುಗಳನ್ನು ಬೆಳೆಸಿ, ಅವನ್ನು ಮಾರಿ, ಅಲ್ಪ ಸ್ವಲ್ಪ ಸಂಪಾದನೆಯನ್ನೂ ಮಾಡುತ್ತಿದ್ದಳು. ಪುಟ್ಟದಾದರೂ, ಚೆಂದದ ಮಂಗಳೂರು ಹೆಂಚಿನ ಮನೆಯನ್ನು ಅವರಿಬ್ಬರೂ ತಮ್ಮ ಕೈಯ್ಯಾರೆ ಕಟ್ಟಿಕೊಂಡಿದ್ದರು. ಅವರ ಚಿಕ್ಕ ದರಕಾಸ್ತಿನ ಸುತ್ತಲೂ, ಅಕ್ಕಪಕ್ಕದಲ್ಲಿ ಧಾರಾಳವಾಗಿ ಸಿಗುತ್ತಿದ್ದ ದುಂಡಗಿನ ಕಲ್ಲುಗಳನ್ನು ಸಂಗ್ರಹಿಸಿ ತಂದು, ಭದ್ರವಾದ ಬೇಲಿ ಗೋಡೆಯನ್ನು ನಿರ್ಮಿಸಿಕೊಂಡಿದ್ದರು. ಮನೆಯ ಮುಂದೆ ಬಿದಿರಿನ ಗಳುಗಳಿಂದ ತಯಾರಿಸಿದ ಚಿಕ್ಕ ಗೇಟ್ ಕೂಡಾ ಇತ್ತು.

ನಾಗುಗೌಡ ಮತ್ತು ಆತನ ಮಡದಿ ಸುಖವಾಗೇ ಬದುಕುತ್ತಿದ್ದರು. ಆದರೆ, ಅವರಿಗಿದ್ದ ಕೊರತೆಯೆಂದರೆ, ಅವರಿಗೆ ಮಕ್ಕಳು ಇರಲಿಲ್ಲ. ಆದರೆ, ಮಕ್ಕಳಿಲ್ಲ ಎಂಬ ಚಿಂತೆ ಅವರನ್ನು ಎಂದೂ ಬಾಧಿಸುತ್ತಿರಲಿಲ್ಲ ಎಂದು ಕಾಣುತ್ತೆ. ಅವರು ಮಕ್ಕಳಿಲ್ಲವೆಂದು ಕೊರಗಿದ್ದನ್ನು ನಾವು ಎಂದೂ ನೋಡಿಲ್ಲ. ಅವರಿಬ್ಬರಿಗೂ ಊರಿನ ಮಕ್ಕಳೆಂದರೆ ಪ್ರೀತಿ. ಅದರಲ್ಲೂ ಧನಿಗಳ ಮನೆಯ ಮಕ್ಕಳಾದ ನಮ್ಮನ್ನು ಕಂಡರೆ ಬಹಳ ಪ್ರೀತಿ. ಅಪರೂಪಕ್ಕೊಮ್ಮೆ ನಾಗುಗೌಡನ ಹೆಂಡತಿ ನಾಗಮ್ಮ ನಮ್ಮನ್ನು ನೋಡಿಹೋಗಲು ಅಜ್ಜನಮನೆಗೆ ಬರುತ್ತಿದ್ದಳು. ನಮ್ಮ ಅಜ್ಜಿ ಅವಳಿಗೆ ಕಾಫಿ, ಎಲೆ ಅಡಿಕೆ ಕೊಟ್ಟು ಗಂಟೆಗಟ್ಟಲೆ ಅವಳೊಂದಿಗೆ ಹರಟುತ್ತಿದ್ದರು.

ನಾಗಮ್ಮ ಬಂದರೆ ನಮಗೆ ಬಹಳ ಸಂಭ್ರಮ..! ಆಕೆ ನಮಗೆ ಹಸಿ ತೆಂಗಿನ ಓಲೆಯಿಂದ ಹಾವು ಹೆಣೆದು ಆಡಲು ಕೊಡುತ್ತಿದ್ದಳು. ನಮ್ಮ ಪುಟ್ಟ ಕೈಗಳಿಗೆ ಹಸಿ ತೆಂಗಿನ ಓಲೆಯ ವಾಚ್ ತಯಾರಿಸಿ ಕಟ್ಟುತ್ತಿದ್ದಳು. ಬಹಳ ಸ್ಪ್ಪೆಶಲ್ ಆಗಿ, ಹಸಿ ತೆಂಗಿನ ಓಲೆ ಮತ್ತು ಹಸಿ ತೆಂಗಿನ ಕಡ್ಡಿಗಳನ್ನು ಬಳಸಿ ನಮಗೆ ಕನ್ನಡಕ ಮಾಡಿಕೊಡುತ್ತಿದ್ದಳು. ಆ ಹಸಿ ತೆಂಗಿನ ಓಲೆಯ ಕಂಪು ಹೊಮ್ಮಿಸುತ್ತಿದ್ದ ಆ ವಾಚ್ ಮತ್ತು ಕನ್ನಡಕಗಳನ್ನು ಧರಿಸಿ ನಾವು ಸಂಭ್ರಮ ಪಡುತ್ತಿದ್ದೆವು. ಇಂದು ನಾವುಗಳು ಧರಿಸುತ್ತಿರುವ ರೇಬಾನ್ ಕನ್ನಡಕ ಮತ್ತು ದುಬಾರಿ ವಾಚುಗಳು ನಮಗೆ ಆ ಸಂತಸವನ್ನು ಖಂಡಿತವಾಗಿ ಕೊಡುತ್ತಿಲ್ಲ..!

ಯಾಕೋ ನಮ್ಮ ಬಾಲ್ಯದ ಆ ಸಂತೋಷಗಳೇ ಬೇರೆ! ನಾಗುಗೌಡನನ್ನು ನಾವು ಬಹಳವಾಗಿ ಗೋಳು ಹೊಯ್ದುಕೊಳ್ಳುತ್ತಿದ್ದೆವು ಮತ್ತು ಕಾಡುತ್ತಿದ್ದೆವು.  ಆದರೂ, ಆತ ನಮ್ಮೊಡನೆ ಎಂದೂ ಸಿಟ್ಟು ಮಾಡಿಕೊಂಡವನಲ್ಲ. ಸದಾ ನಗುಮುಖದ ಅವನನ್ನು ಯಾರಿಗಾದರೂ ಪರಿಚಯಿಸುತ್ತಾ ಮುಖ ನೋಡಿದರೆ ಚಂದ್ರಹಾಸ! ಕಾಲು ನೋಡಿದರೆ ಅಟ್ಟಹಾಸ! ಎನ್ನುತ್ತಾ ಜೋರಾಗಿ ನಗುತ್ತಿದ್ದೆವು. ಆ ನಮ್ಮ ಪ್ರಾಕ್ಟಿಕಲ್ ಹಾಸ್ಯಕ್ಕೆ, ಆತ ಸ್ವಲ್ಪವೂ ಬೇಸರಿಸದೇ, ಆತನೂ ನಮ್ಮ ಜತೆಗೂಡಿ ನಕ್ಕು ಬಿಡುತ್ತಿದ್ದ..!

ನಾಗುಗೌಡ ನಮಗೆ ಬಾಲ್ಯದಲ್ಲಿ ಒಂದು ಅಸೆಟ್ ಅಗಿದ್ದ. ಆ ರೀತಿಯ ಮನುಷ್ಯನನ್ನು ಈ ದಿನಗಳಲ್ಲಿ ನಮ್ಮ ಮಕ್ಕಳು ಮನೆಯ ಸುತ್ತುಮುತ್ತ ಕಾಣಲು ಸಾಧ್ಯವೇ?

ಅದಕ್ಕೋಸ್ಕರವಾಗಿ, ಈ ದಿನ ನಾನು ನಾಗುಗೌಡನನ್ನು ನೆನಪಿಸಿಕೊಳ್ಳುತ್ತಿದ್ದೇನೆ.