ಬಾಳೆಹೊಳೆ ಊರು ಭದ್ರಾನದಿ ತಟದ ಒಂದು ಪುಟ್ಟ ಊರು. ನಾನು ೧೯೭೧ರಲ್ಲಿ ಕಂಡಾಗ ಅದು ಹೇಗಿತ್ತೋ ಹಾಗೆಯೇ ಇಂದಿಗೂ ಇದೆ. ಬಾಳೆಹೊಳೆಯ ಮುಖ್ಯ ಬೀದಿಯೆಂದರೆ ಶ್ರೀ ಚೆನ್ನಕೇಶವ ದೇವಸ್ಥಾನದ ಬೀದಿ. ಈ ಬೀದಿಯ ಉದ್ದ ಸುಮಾರು ೨೦೦ ಮೀ. ಇರಬಹುದು. ಈ ಬೀದಿಯು ಕಳಸಾ ಬಾಳೆಹೊನ್ನೂರು ರಸ್ತೆಯ ಒಂದು ಕವಲು. ಇದು ಕೊನೆಗೊಳ್ಳುವುದು ನಮ್ಮೂರ ಚೆನ್ನಕೇಶವ ದೇವಸ್ಥಾನದ ಹೆಬ್ಬಾಗಿಲಲ್ಲಿ. ಬಾಳೆಹೊಳೆಯ ಇನ್ನೊಂದು ಬೀದಿಯೆಂದರೆ ಬಸರಿಕಟ್ಟೆಯ ಕಡೆಗೆ ಸಾಗುವ ರಸ್ತೆ. ಈ ರಸ್ತೆ ಬಾಳೆಹೊಳೆಯನ್ನು ಬೆಟ್ಟದ ಮೇಲಿನ ಊರಾದ ಬಸರಿಕಟ್ಟೆಯೊಂದಿಗೆ ಸಂಪರ್ಕಿಸುತ್ತದೆ. ದೇವಸ್ಥಾನದ ಬೀದಿ ಮತ್ತು ಬಸರಿಕಟ್ಟೆಯ ಬೀದಿಮಾರ್ಗಗಳ ಮಧ್ಯೆ ಸದಾ ಶುಭ್ರಜಲ ಹರಿಯುವ ಸಿಂಧುವಳ್ಳಿಯ ತೊರೆ ಹರಿಯುತ್ತೆ. ಅದಕ್ಕೆ ಸರ್ಕಾರದವರು ಒಂದು ಸೇತುವೆ ಕಟ್ಟಿದ್ದಾರೆ. ಬಸರಿಕಟ್ಟೆ ರಸ್ತೆಯು ಸಿಂಧುವಳ್ಳಿ ತೊರೆಯ ಬದಿಯನ್ನು ಬಳಸಿ ಏರುತ್ತಾ ಸಾಗಿದರೆ, ಕಳಸಾ ಬಾಳೆಹೊನ್ನೂರು ರಸ್ತೆಯು ನಮ್ಮ ಜೀವನದಿಯಾದ ಭದ್ರಾನದಿಗುಂಟ ಬಳುಕುತ್ತಾ ಬಾಳೆಹೊನ್ನೂರು ಕಡೆಗೆ ಸಾಗುತ್ತದೆ. ಬಾಳೆಹೊಳೆಯಲ್ಲಿ ಒಂದು ಪ್ರಾಥಮಿಕ ಆರೋಗ್ಯಕೇಂದ್ರ, ಒಂದು ಹಿರಿಯ ಪ್ರಾಥಮಿಕ ಶಾಲೆ ಮತ್ತು ನಮ್ಮ ಬಾಳೆಹೊಳೆಯ ಪೋಸ್ಟ್ ಆಫೀಸ್‌ಗಳು ಇವೆ. ಇತ್ತೀಚೆಗೆ ಬಾಳೆಹೊಳೆಯ ಹಿರಿಯ ಪ್ರಾಥಮಿಕ ಶಾಲೆ ಹೈಸ್ಕೂಲಾಗಿ ಬಡ್ತಿ ಹೊಂದಿದೆ. ಬಾಳೆಹೊಳೆಯ ಊರಿನಿಂದ ಪೂರ್ವಕ್ಕೆ ಸಾಗಿ ಭದ್ರಾನದಿ ತಟದಲ್ಲಿ ಕೊನೆಗೊಳ್ಳುತ್ತಿದ್ದ ರಸ್ತೆಯು, ಭದ್ರಾನದಿಯ ಆಚೆಯ ತಟದಲ್ಲಿ ಪುನರಾರಂಭಗೊಂಡು ನಮ್ಮ ಸುಳಿಮನೆ ತೋಟದ ಕಡೆಗೆ ಸಾಗುತ್ತಿತ್ತು. ಆಗ ನದಿಗೆ ಸೇತುವೆ ಇರಲಿಲ್ಲ.

ಬೇಸಿಗೆಯ ಕಾಲದ ಮೂರು ಅಥವಾ ನಾಲ್ಕು ತಿಂಗಳು ನಾವು ಮೊಣಕಾಲಿನಷ್ಟು ಆಳಕ್ಕೆ ಹರಿಯುತ್ತಿದ್ದ ಭದ್ರಾ ನದಿಯನ್ನು ದಾಟಿ ಸಾಗುತ್ತಿದ್ದೆವು. ಇದೇ ಮೂರು ತಿಂಗಳುಗಳಲ್ಲಿ ಲಾರಿ, ಟ್ರ್ಯಾಕ್ಟರ್, ಮತ್ತು ಕೆಲವೇ ಕಾರುಗಳು ಈ ಹರಿಯುವ ನೀರನ್ನು ದಾಟುವ ಧೈರ್ಯಮಾಡಿ ಆಚೆಯ ದಡಕ್ಕೆ ಸಾಗುತ್ತಿದ್ದುವು.

ಪ್ರತಿವರ್ಷ ಬೇಸಿಗೆಯ ಮೇ ತಿಂಗಳಿನಲ್ಲಿ, ನಾವು ನಮಗೆ ಮುಂದಿನ ಎಂಟುತಿಂಗಳ ಕಾಲ ನಮ್ಮ ಮನೆ ಬಳಕೆಗೆ ಮತ್ತು ನಮ್ಮ ತೋಟಕ್ಕೆ ಬೇಕಾಗುವ ವಸ್ತುಗಳನ್ನು ದಾಸ್ತಾನು ಇಟ್ಟುಕೊಳ್ಳುತ್ತಿದ್ದೆವು. ಬೇಸಿಗೆಯ ಸಮಯದಲ್ಲೇ ನಾವು ನಮ್ಮ ತೋಟಕ್ಕೆ ವರ್ಷವಿಡೀ ಬೇಕಾದ ಗೊಬ್ಬರ ಮುಂತಾದ ವಸ್ತುಗಳನ್ನು ಒಮ್ಮೆಗೇ ಕೊಂಡು ದಾಸ್ತಾನು ಇಡಬೇಕಾಗಿತ್ತು. ಮುಂದೆ ಬರಲಿರುವ ಎಂಟು ತಿಂಗಳ ಮಳೆಗಾಲಕ್ಕೆ ಬೇಕಾದ ಅಕ್ಕಿ, ಬೇಳೆ, ಬೆಲ್ಲ ಮೊದಲಾದ ದಿನಸಿಗಳನ್ನು ಬೇಸಿಗೆಯಲ್ಲೇ ಕೊಂಡು, ನಾವು ಅಡುಗೆಮನೆ ಮೇಲಿನ ಬೆಚ್ಚನೆಯ ಅಟ್ಟದಲ್ಲಿ ಸಂಗ್ರಹಿಸಿಡುತ್ತಿದ್ದೆವು. ಹೊಳೆಯ ಈಚಿನ ತಟದಲ್ಲಿ, ಅಂದರೆ ನಮ್ಮ ತೋಟದ ಸುತ್ತಮುತ್ತಲಲ್ಲಿ ಯಾರ ಹತ್ತಿರವೂ ವಾಹನ ಇರಲಿಲ್ಲ. ಹೊಳೆಯನ್ನು ದೋಣಿಯಲ್ಲಿ ದಾಟಿ ಬಾಳೆಹೊಳೆಯನ್ನು ತಲುಪಿದರೆ, ಅಲ್ಲಿ ಇಡೀ ದಿನಕ್ಕೆ ನಾಲ್ಕು ಬಸ್ಸುಗಳು ಮಾತ್ರ ಓಡಾಡುತ್ತಿದ್ದವು. ಎರಡು ಬಸ್ಸುಗಳು ಶಿವಮೊಗ್ಗ ಬಾಳೆಹೊನ್ನೂರು ಕಳಸ ಮಾರ್ಗದಲ್ಲಿ ಎದುರು ಬದುರಾಗಿ ಓಡಾಡಿದರೆ, ಇನ್ನೆರಡು ಬಸ್ಸುಗಳು ಎದುರು ಬದುರಾಗಿ ಕಳಸ ಮತ್ತು ಕೊಪ್ಪಗಳ ಮಧ್ಯೆ ಬಸರಿಕಟ್ಟೆಯ ಮಾರ್ಗವಾಗಿ ಸಾಗುತ್ತಿದ್ದವು.

ಕನ್ನಡ ದಿನಪತ್ರಿಕೆ ಪ್ರಜಾವಾಣಿ ನಮಗೆ ಅದೇ ದಿನ ಸಾಯಂಕಾಲ ಕೈತಲುಪಿದರೆ ನಮ್ಮ ಪುಣ್ಯ..! ಎಂದು ನಾವು ಭಾವಿಸುತ್ತಿದ್ದೆವು. ವಾರಪತ್ರಿಕೆಯಾದ ಪ್ರಜಾಮತ ಗುರುವಾರ ಪ್ರಕಟವಾದರೂ, ನಮ್ಮ ಕೈಗೆ ಶನಿವಾರ ತಲುಪುತ್ತಿತ್ತು. ಆಂಗ್ಲಭಾಷೆಯ ಹಿಂದೂ ದಿನಪತ್ರಿಕೆ, ಸ್ಥಳೀಯ ಏಜೆಂಟ್ ಇರದಿದ್ದ ಕಾರಣ, ನನಗೆ ಮಾರನೇ ದಿವಸ ಟಪಾಲಿನಲ್ಲಿ ಬರುತ್ತಿತ್ತು. ತಿಂಗಳಿಗೊಮ್ಮೆ ನನಗೆ ಟಪಾಲಿನಲ್ಲಿ ಬರುತ್ತಿದ್ದ ಆಂಗ್ಲಭಾಷೆಯ ರೀಡರ್ಸ್ ಡೈಜೆಸ್ಟ್ ಮಾಸಿಕವು ಜಗತ್ತಿನ ವಿಚಿತ್ರಗಳನ್ನೆಲ್ಲಾ ಹೊತ್ತು ತರುತ್ತಿತ್ತು. ಮನೆಯಲ್ಲಿದ್ದ ಒಂದು ಮರ್ಫಿ ಟ್ರಾನ್ಸಿಸ್ಟರ್ ರೇಡಿಯೊ ಮೂಲಕ ಈ ವಿಶಾಲ ಜಗತ್ತಿನ ವಿದ್ಯಮಾನಗಳು ದಿನೇ ದಿನೇ ನಮಗೆ ತಿಳಿಯುತ್ತಿದ್ದುವು.

ಇಷ್ಟೆಲ್ಲಾ ಯಾಕೆ ಹೇಳಿದೆನೆಂದರೆ, ಇದು ಆಗಿನ ಬಾಳೆಹೊಳೆ ಎಂಬ ನಮ್ಮ ಊರಿನ ಚಿತ್ರಣ…! ಇದಿಲ್ಲದೇ, ನಮ್ಮ ಆದಮ್ ಡಾಕ್ಟರನ್ನು ಬಣ್ಣಿಸಲು ಸಾಧ್ಯವಿಲ್ಲ.

ಮಾನ್ಯ ಆದಂ ಡಾಕ್ಟರರ ತಂದೆಯವರಾದ ತುಂಬೆ ಮೊಯ್ದೀನ್ ಬ್ಯಾರಿಗಳು ಇಪ್ಪತ್ತನೇ ಶತಮಾನದ ಆದಿಯಲ್ಲಿ ಬಾಳೆಹೊಳೆಗೆ ಬಂದು ನೆಲೆಸಿ, ವ್ಯಾಪಾರ ಮಾಡಿ ಪ್ರವರ್ಧಮಾನಕ್ಕೆ ಬಂದವರಂತೆ. ನಾನು ೧೯೭೧ನೇ ಇಸವಿಯಲ್ಲಿ ಕಂಡಂತೆ ಅವರ ಮಕ್ಕಳಾದ ಹಾಜೀ ಸಾಯಿರಬ್ಬ, ಹಾಜೀ ಶೇಕಬ್ಬ, ಡಾ. ಆದಮ್ ಮತ್ತು ಹಾಜೀ ಅಬ್ದುಲ್ ರೆಹೆಮಾನ್ ಅವರು ಬಾಳೆಹೊಳೆಯಲ್ಲಿ ಅನುಕೂಲಸ್ಥರಾಗಿಯೇ ಜೀವಿಸುತ್ತಿದ್ದರು. ಹಾಜೀ ಸೈರಬ್ಬರು ಅವರ ತಂದೆಯವರು ಸ್ಥಾಪಿಸಿದ ದೊಡ್ಡ ಅಂಗಡಿಯನ್ನು ನಡೆಸುತ್ತಾ ಇದ್ದರೆ, ಅವರ ತಮ್ಮಂದಿರಾದ ಹಾಜೀ ಶೇಕಬ್ಬನವರು, ನೆಲ್ಲಿ ಕೊಪ್ಪ ಎಂಬ ಅವರ ತೋಟವನ್ನು ನೋಡಿಕೊಳ್ಳುತ್ತಿದ್ದರು. ಆದಮ್ ಡಾಕ್ಟರು ಬಾಳೆಹೊಳೆಯ ತಮ್ಮ ದವಾಖಾನೆ ಮತ್ತು ‘ವಾರ್ಡ್ ಎಂದು ಕರೆಯಲ್ಪಡುತ್ತಿದ್ದ ಪುಟ್ಟ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಅಬ್ದುಲ್ ರಹಿಮಾನ್ ಅವರು ಎಂಟು ಮೈಲು ದೂರದ ಮಾಗುಂಡಿ ಎಂಬಲ್ಲಿ ನೆಲಸಿ ಅಲ್ಲಿನ ಅಂಗಡಿ ಮತ್ತು ಅಕ್ಕಿ ವ್ಯಾಪಾರದ ವಹಿವಾಟು ನೋಡಿಕೊಳ್ಳುತ್ತಿದ್ದರು. ಈ ನಾಲ್ಕು ಮಂದಿ ಸಹೋದರರೂ ಸದ್ಗುಣಿಗಳಾಗಿಯೂ, ಜನಾನುರಾಗಿಗಳಾಗಿಯೂ ಇದ್ದರು. ಇವರುಗಳಲ್ಲಿ ಅತೀ ಜನಪ್ರಿಯರೆನಿಸಿದವರು ನಮ್ಮ ಡಾ.ಆದಮ್ ಎಂದರೆ ಅತಿಶಯೋಕ್ತಿ ಆಗಲಾರದು.

ಆದಂ ಡಾಕ್ಟರು ಬಹಳ ವೈದ್ಯಕೀಯ ವಿದ್ಯೆ ಓದಿದ ಡಾಕ್ಟರ್ ಅಲ್ಲದಿದ್ದರೂ, ಮಂಗಳೂರಿನ ಪ್ರಸಿದ್ಧ ವೈದ್ಯರೊಬ್ಬರ ಬಳಿ ಹಲವಾರು ವರ್ಷ ಕಾಂಪೌಂಡರ್ ಆಗಿ ದುಡಿದು ಲೈಸೆನ್ಸ್ ಏಟ್ ಇನ್ ಮೆಡಿಕಲ್ ಪ್ರಾಕ್ಟಿಸ್ ಎಂಬ ಡಿಪ್ಲೋಮಾ ಪಡೆದವರು. ಅವರು ತನ್ನ ಗುರುಗಳಿಂದ ಕಲಿತ ವೈದ್ಯಕೀಯ ವಿದ್ಯೆಯನ್ನು ಮರೆಯದೇ,  ಬಾಳೆಹೊಳೆಯಂತಹಾ ಚಿಕ್ಕಹಳ್ಳಿಯಲ್ಲಿ ತನ್ನ ವಿದ್ಯಾಸಾಮರ್ಥ್ಯವನ್ನು ಜನರ ಉಪಯೋಗಕ್ಕೆ ಇಟ್ಟು, ನಮ್ಮೂರ ಆಸುಪಾಸಿನ ಊರುಗಳಲ್ಲಿ ಒಳ್ಳೆಯ ಡಾಕ್ಟರ್ ಎಂಬ ಹೆಸರನ್ನು ಪಡೆದವರು.

ಬಾಳೆಹೊಳೆಯಲ್ಲಿ ಸರಕಾರದ ಒಂದು ಪ್ರಾಥಮಿಕ ಆರೋಗ್ಯಕೇಂದ್ರವಿದ್ದರೂ, ಅಲ್ಲಿಗೆ ನಿಯಮಿಸಲ್ಫಟ್ಟ ಎಮ್.ಬಿ.ಬಿ.ಎಸ್ ಓದಿದ ಡಾಕ್ಟರುಗಳು ಸದಾ ರಜೆ ಹಾಕುತ್ತಾ ಗೈರುಹಾಜರಾಗಿ ಬಿಡುತ್ತಿದ್ದರು. ಪಟ್ಟಣಗಳಲ್ಲಿ ಓದಿದ ತರುಣ ಡಾಕ್ಟರುಗಳಿಗೆ ಕುಗ್ರಾಮವಾದ ಬಾಳೆಹೊಳೆಯಲ್ಲಿ ವಾಸ್ತವ್ಯ ಮಾಡಲು ಸಹ್ಯವೆನಿಸುತ್ತಿರಲಿಲ್ಲ. ಬಾಳೆಹೊಳೆಯ ಸರಕಾರೀ ಅಸ್ಪತ್ರೆ ಸದಾ ದೇವನಿಲ್ಲದ ದೇಗುಲದಂತೆ ಇರುತ್ತಿತ್ತು.

ನಮಗೆ ಅನಾರೋಗ್ಯವಾದಾಗ ನಮ್ಮ ಆದಮ್ ಡಾಕ್ಟರೇ ಧನ್ವಂತರಿ. ಅವರ ಹಸ್ತಗುಣ ಚೆನ್ನಾಗಿದ್ದುದರಿಂದ ಊರವರ ಕಾಯಿಲೆಗಳಿಗೆ ಅವರ ದವಾಖಾನೆ ಮತ್ತು ವಾರ್ಡ್‌ಗಳಲ್ಲಿ ಇಲಾಜು ಸಿಗುತ್ತಿತ್ತು. ಹಳ್ಳಿಯ ಜನರಿಗೆ ಕೈಗೆಟುಕುವಂತೆ ಕರುಣಾಳುವಾದ ಡಾಕ್ಟರ್ ಆದಮ್, ಅತೀ ಕಡಿಮೆ ಫೀಜು ತೆಗೆದುಕೊಳ್ಳುತ್ತಿದ್ದರು. ಹಣವಿಲ್ಲದೇ ಬಂದ ರೋಗಿಗೂ ಅವರು ತಾರತಮ್ಯ ತೋರದೆ ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದುದನ್ನು ನಮ್ಮೂರ ಜನರು ಇಂದಿಗೂ ಸ್ಮರಿಸುತ್ತಾರೆ. ನಮ್ಮ ಹಳ್ಳಿಯ ಜನರಲ್ಲಿ ಅತೀ ಬಡವರಾದ ಕೆಲವರು ತಮ್ಮ ಕೈಲಾದಾಗ ಡಾಕ್ಟರ ಬಾಕಿ ತೀರಿಸುತ್ತಿದ್ದರು.

ಹಣಕ್ಕಾಗಿ ಡಾಕ್ಟರ್ ಆದಮ್ ಎಂದೂ ಜುಲುಮೆ ಮಾಡಿದವರಲ್ಲ. ಸಂಕಷ್ಟದಲ್ಲಿರುವ ರೋಗಿಗಳಿಗೆ ಗುಣ ನೀಡುವುದೇ ಅವರ ಮುಖ್ಯ ಧ್ಯೇಯವಾಗಿತ್ತು. ತನಗೆ ಗುಣಮಾಡಲು ಕಷ್ಟವೆನಿಸಿದ ಕೇಸುಗಳನ್ನು ಅವರು ಮಂಗಳೂರಿನ ದೊಡ್ಡ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಹೀಗೆ ಕರೆದೊಯ್ಯಲು ಅವರು ನಮ್ಮ ಹತ್ತಿರದ ಪೇಟೆಗಳಾದ ಕಳಸ ಅಥವಾ ಬಾಳೆಹೊನ್ನೂರುಗಳಿಂದ ಬಾಡಿಗೆಯ ಜೀಪು ತರಿಸಿ ಕರೆದೊಯ್ಯುತ್ತಿದ್ದರು. ರೋಗಿಗಳು ಅತೀ ಬಡವರಾದ ಸಂದರ್ಭದಲ್ಲಿ ಈ ವಾಹನದ ಬಾಡಿಗೆಯ ಹಣವನ್ನು ಅವರೇ ಭರಿಸುತ್ತಿದ್ದರು.

ಸದಾ ಶುಭ್ರವಸನಧಾರಿ ಆದಮ್ ಡಾಕ್ಟರ್ ಸದಾ ಹಸನ್ಮುಖಿಯೂ ಆಗಿದ್ದರು. ದಪ್ಪ ಗಾಜಿನ ಕನ್ನಡಕದ ಹಿಂದೆ ಮಿನುಗುತ್ತಿದ್ದ ಅವರ ಕಣ್ಣುಗಳು ಕರುಣೆಯ ಆಗರಗಳಾಗಿದ್ದುವು. ಬೆಳಗ್ಗೆ ಎಂಟು ಗಂಟೆಗೆ ತಮ್ಮ ವಾರ್ಡಿನ ರೌಂಡ್ಸ್ ಮುಗಿಸಿಕೊಂಡು ಬಂದು ತಮ್ಮ ಪುಟ್ಟ ದವಾಖಾನೆಯಲ್ಲಿ ಬಂದು ಕುಳಿತರೆ, ಸಾಯಂಕಾಲದ ಎಂಟುಗಂಟೆಯ ತನಕ ಅವರು ಜನರಿಗೆ ಲಭ್ಯ ಆದಮ್ ಡಾಕ್ಟರ ದವಾಖಾನೆ ನಮ್ಮೂರ ಬಸ್‌ಸ್ಟಾಪ್ ಹತ್ತಿರವೇ ಇತ್ತು. ಆದಂ ಡಾಕ್ಟರರ ದವಾಖಾನೆಯ ಪಕ್ಕಕ್ಕೆ ನಮ್ಮೂರ ಪೋಸ್ಟ್ ಆಫೀಸು ಕೂಡಾ ಇತ್ತು. ಟಪಾಲಿನ ಬಸ್ಸು ಸೇರಿದಂತೆ ಎಲ್ಲಾ ಬಸ್ಸುಗಳು ಅವರ ದವಾಖಾನೆಯ ಹತ್ತಿರವೇ ನಿಲ್ಲುತ್ತಿದ್ದವು. ನಮ್ಮೂರಿಗೆ ಯಾರೇ ಹೊಸಬರು ಬರಲಿ, ಅವರುಗಳನ್ನು ಆದಮ್ ಡಾಕ್ಟರು ಕರೆದು ತಮ್ಮ ದವಾಖಾನೆಯಲ್ಲಿ ಕುಳ್ಳಿರಿಸಿ ಮಾತನಾಡಿಸುತ್ತಿದ್ದರು. ಅವರ ಪರಿಚಯ ಮಾಡಿಕೊಂಡು, ಅವರು ನಮ್ಮೂರಿನ ಯಾರ ಮನೆಗೆ ಹೋಗಬೇಕೆಂದು ವಿಚಾರಿಸಿ, ಅವರಿಗೆ ದಾರಿ ಗೊತ್ತಿಲ್ಲದ ಸಂದರ್ಭದಲ್ಲಿ ಅವರಿಗೆ ದಾರಿ ತೋರಿಸಲು ಯಾರನ್ನಾದರೂ ಗೊತ್ತುಮಾಡಿ ಕಳುಹಿಸಿಕೊಡುತ್ತಿದ್ದರು. ಮಳೆ ಬರುತ್ತಿದ್ದರೆ ಅವರಿಗೆ ಕೊಡೆ ಅಥವಾ ಕತ್ತಲಾಗುವ ಹೊತ್ತಿನಲ್ಲಿ ಯಾರಾದರೂ ಬಂದು ಇಳಿದರೆ ಅವರಿಗೆ ದಾರಿ ಕಾಣಲು ಟಾರ್ಚು ಕೊಟ್ಟು ಕಳುಹಿಸುತ್ತಿದ್ದರು.

ಆದಮ್ ಡಾಕ್ಟರಿಗೆ ನಮ್ಮೂರಿನ ಎಲ್ಲಾ ಮನೆಗಳು ಪರಿಚಿತ, ಹಾಗಾಗಿ ನಮ್ಮಲ್ಲಿಗೆ ಯಾರಾದರೂ ಹೊಸಬರು ಬರುವವರಿದ್ದರೆ, ಅವರುಗಳಿಗೆ ಬಾಳೆಹೊಳೆಗೆ ಬಂದು ಇಳಿದೊಡನೇ, ನಮ್ಮ ಆದಮ್ ಡಾಕ್ಟರ ದವಾಖಾನೆಯಲ್ಲಿ ನಮ್ಮ ಬಗ್ಗೆ ವಿಚಾರಿಸಿರಿ, ಡಾಕ್ಟರು ಜನ ಕೊಟ್ಟು ನಿಮ್ಮನ್ನು ನಮ್ಮ ಮನೆಗೆ ಕಳುಹಿಸುತ್ತಾರೆ..! ಎನ್ನುತ್ತಿದ್ದೆವು.

ಹೊಳೆಯಲ್ಲಿ ಪ್ರವಾಹ ಬಂದು ನದಿಯಲ್ಲಿ ದೋಣಿ ಸಂಚಾರ ನಿಂತುಹೋದರೂ, ನಮ್ಮ ಕಡೆಯ ಜನರಿಗೆ ಚಿಂತೆ ಇರಲಿಲ್ಲ. ಎಷ್ಟೋ ಸಲ ಬಾಳೆಹೊಳೆ ಶಾಲೆಗೆ ಹೋದ ಮಕ್ಕಳು ಶಾಲೆಯಿಂದ ಹಿಂತಿರುಗಿ ಮನೆಗೆ ಬರಲಾರದ ಪರಿಸ್ಥಿತಿಯುಂಟಾಗುತ್ತಿತ್ತು. ಆಗ ಶಾಲಾಮಕ್ಕಳನ್ನು ಆದಮ್ ಡಾಕ್ಟರು ತನ್ನ ಮನೆಯಲ್ಲಿ ಇರಿಸಿಕೊಂಡು ಉಪಚರಿಸುತ್ತಿದ್ದರು. ಆದ್ದರಿಂದ, ಮನೆಮಕ್ಕಳು ಶಾಲೆಯಿಂದ ಸಾಯಂಕಾಲ ಹಿಂತಿರುಗಿ ಮನೆಗೆ ಬರಲಾಗದ ಮಳೆಗಾಲದ ದಿನಗಳಲ್ಲಿ ಹೆತ್ತವರು ಚಿಂತೆ ಪಡುತ್ತಿರಲಿಲ್ಲ. ತಮ್ಮ ಮಕ್ಕಳು ಆದಮ್ ಡಾಕ್ಟರ ಮನೆಯಲ್ಲಿ ಖಂಡಿತವಾಗಿ ಉಳಿಯುತ್ತಾರೆ ಎಂದು ಹೆತ್ತವರು ನಿಶ್ಚಿಂತೆಯಿಂದ ಇರುತ್ತಿದ್ದರು. ಹೊರ‌ಊರುಗಳಿಗೆ ಹೋಗಿ ಹಿಂತಿರುಗಿ ಬರುವಾಗ, ಒಮ್ಮೊಮ್ಮೆ, ಬಾಳೆಹೊಳೆಯಲ್ಲಿನ ದೋಣಿ ಸಂಚಾರ, ಪ್ರವಾಹ ಪ್ರಯುಕ್ತ ಸ್ಥಗಿತವಾಗಿ ಬಿಡುತ್ತಿತ್ತು. ಇಂತಹಾ ಸಂದರ್ಭಗಳಲ್ಲಿ ಆ ಪ್ರಯಾಣಿಕರಿಗೆ ಆದಮ್ ಡಾಕ್ಟರಲ್ಲಿ ಆಶ್ರಯ ಸಿಕ್ಕೇಸಿಗುತ್ತಿತ್ತು. ಹಾಗೆ ಆದಾಗ, ನಾನೂ ಒಮ್ಮೆ ಆದಮ್ ಡಾಕ್ಟರರ ಮನೆಯಲ್ಲಿ ಒಂದು ರಾತ್ರಿ ಉಳಿದಿದ್ದೇನೆ. ಅವರ ಮನೆಯಲ್ಲಿ ನನಗೆ ದೊರಕಿದ ಊಟ ಉಪಚಾರಗಳನ್ನು ನಾನೆಂದಿಗೂ ಮರೆಯಲಾರೆ.

ಆದಮ್ ಡಾಕ್ಟರಿಗೆ ಮಕ್ಕಳಿರಲಿಲ್ಲ. ಆ ವಿಷಯಕ್ಕೆ ಅವರು ಚಿಂತೆ ಪಡದೆ ನಮ್ಮೂರಿನ ಮಕ್ಕಳೆಲ್ಲರನ್ನೂ ಪ್ರೀತಿಸುತ್ತಿದ್ದರು. ಮಕ್ಕಳಿಗೆ ಸೌಖ್ಯವಿಲ್ಲ ಎಂದು ಕರೆ ಬಂದರೆ, ಸರಿರಾತ್ರಿಯಲ್ಲೂ ಆದಮ್ ಡಾಕ್ಟರು ಮಲೆನಾಡಿನ ಚಳಿ, ಗಾಳಿ ಮತ್ತು ಧಾರಾಕಾರವಾಗಿ ಸುರಿಯುವ ಮಳೆ ಇವನ್ನು ಲೆಕ್ಕಿಸದೆ ರೋಗಿಯನ್ನು ಸಂದರ್ಶಿಸಿ ಚಿಕಿತ್ಸೆ ನೀಡುತ್ತಿದ್ದರು. ಅವರು ರಾತ್ರಿಯ ಹೊತ್ತು ದೋಣಿಯಲ್ಲಿ ಕುಳಿತು ಹೊಳೆಯನ್ನು ದಾಟಿ ನಾಲ್ಕಾರು ಮೈಲು ನಡೆದು ರೋಗಿಗಳಿಗೆ ಔಷಧೋಪಚಾರ ನೀಡಿದ್ದನ್ನು ನಮ್ಮೂರ ಜನರು ಇಂದಿಗೂ ಮರೆತಿಲ್ಲ.

ನಾನು ಈಗಾಗಲೇ ತಿಳಿಸಿದಂತೆ, ಜಾಸ್ತಿ ಮಳೆಬಂದರೆ ಹೊಳೆಯ ಆಚೆ ದಡದ ನಮ್ಮೂರು ಒಂದು ದ್ವೀಪದಂತೆ ಆಗುವುದು. ಹೊಳೆಯಲ್ಲಿ ಪ್ರವಾಹ ಜಾಸ್ತಿಯಾದರೆ ದೋಣಿ ನಡೆಸಿ ದಾಟದಷ್ಟು ಪ್ರವಾಹ ಬರುತ್ತದೆ. ಅಂತಹಾ ಸಂದರ್ಭಗಳಲ್ಲಿ, ಹೊಳೆಯ ಪ್ರವಾಹ ಕಡಿಮೆಯಾಗಿ, ಪುನಃ ದೋಣಿ ಉಪಯೋಗಿಸಿ ಹೊಳೆದಾಟಲು ಕೆಲವು ದಿನಗಳೇ ಕಾಯಬೇಕಾಗುತ್ತಿತ್ತು. ಇಂತಹಾ ಸಂದರ್ಭಗಳಲ್ಲಿ ರೋಗಿಯನ್ನು ಕಂಬಳಿಯ ಜೋಲಿಕಟ್ಟಿ ಹೊತ್ತು ಮಲ್ಲೇಶನ ಗುಡ್ಡ ಎಂಬ ನಮ್ಮೂರ ಗಡಿಯ ಬೆಟ್ಟವನ್ನು ದಾಟಿ, ಹದಿನೈದು ಕಿಲೋಮೀಟರ್ ದೂರದ ಹಿರೇಬೈಲು ಎಂಬಲ್ಲಿಯ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ರೋಗಿಗಳನ್ನು ಹೊತ್ತುಕೊಂಡು ಹೋಗಲೇಬೇಕಾಗುತ್ತಿತ್ತು. ಆಸ್ಪತ್ರೆ ಮುಟ್ಟುವಾಗ ಹಲವು ರೋಗಿಗಳ ಪ್ರಾಣ ಹೋದ ಉದಾಹರಣೆಗಳೂ ಇವೆ.

ಮಳೆಗಾಲದ ದಿನಗಳಲ್ಲಿ, ಇಂತಹಾ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುವಂತೆ, ನಮ್ಮ ಡಾ.ಆದಮ್ ಅವರು, ನಮ್ಮ ಮನೆಗಳಲ್ಲಿ ಇರಿಸಿಕೊಳ್ಳಲು ಪ್ರಥಮ ಚಿಕಿತ್ಸಾ ಔಷಧಿಗಳ ಒಂದು ಚಿಕ್ಕಪೊಟ್ಟಣ ತಯಾರಿಸಿಕೊಡುತ್ತಿದ್ದರು. ಮಳೆಗಾಲದಲ್ಲಿ ಸಾಮಾನ್ಯವಾದ ಶೀತ, ಜ್ವರ, ವಾಂತಿ, ಬೇಧಿ, ಬಿದ್ದು ಮಾಡಿಕೊಂಡ ಗಾಯಗಳು, ಹರಿತವಾದ ಕತ್ತಿ ಮೊದಲಾದುವುಗಳಿಂದ ಆದ ಗಾಯಗಳು, ಸುಟ್ಟಗಾಯಗಳು ಮೊದಲಾದುವಕ್ಕೆ ಈ ಆದಮ್ ಡಾಕ್ಟರ ಔಷಧಿ ಪೆಟ್ಟಿಗೆ ರಾಮಬಾಣ ಎನ್ನಿಸಿಕೊಳ್ಳುತ್ತಿತ್ತು. ಈ ಪ್ರಥಮ ಚಿಕಿತ್ಸಾ ಔಷಧಗಳ ಪೆಟ್ಟಿಗೆಯ ಉಪಯೋಗವನ್ನು ನಾನು, ನನ್ನ ಸಂಸಾರ ಮತ್ತು ಆಳುಗಳು ಹಲವು ಬಾರಿ ಪಡೆದಿದ್ದೇವೆ.

ಆದಮ್ ಡಾಕ್ಟರರ ವಾರ್ಡ್‌ನಲ್ಲಿ ಸಿಗುತ್ತಿದ್ದ ಔಷಧೋಪಚಾರಗಳು ಉತ್ತಮ ಮಟ್ಟದ್ದವೇ ಆಗಿದ್ದುವು. ಇದಕ್ಕೆ ಒಂದು ಉದಾಹರಣೆ ಕೊಡ ಬಯಸುತ್ತೇನೆ. ನಮ್ಮ ನೆರೆಕೆರೆಯ ಮಹಿಳೆಯೊಬ್ಬರ ನೈಲಾನ್ ಸೀರೆ ಹೊತ್ತಿಕೊಂಡು ತೀವ್ರ ಸ್ವರೂಪದಲ್ಲಿ ಅವರ ಮೈ ಸುಟ್ಟುಹೋಯಿತು. ಕೂಡಲೇ ಅವರನ್ನು ಅರುವತ್ತು ಮೈಲಿ ದೂರದ ಜಿಲ್ಲಾ ಅಸ್ಪತ್ರೆಗೆ ಒಯ್ದರು. ಅಲ್ಲಿ ಒಂದು ತಿಂಗಳ ಚಿಕಿತ್ಸೆ ಪಡೆದ ನಂತರವೂ ಅವರ ಸುಟ್ಟಗಾಯಗಳು ಗುಣವಾಗಲಿಲ್ಲ. ಸುಟ್ಟಗಾಯಗಳು ಮಾಯದೇ ವೃಣಗಳಲ್ಲಿ ಕೀವು ಸೋರತೋಡಗಿದಾಗ, ಅವರನ್ನು ಬೆಂಗಳೂರಿನ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ..! ಎಂದು ಜಿಲ್ಲಾ ಡಾಕ್ಟರು ಸಲಹೆಮಾಡಿ ಕಳುಹಿಸಿಕೊಟ್ಟರಂತೆ. ಆ ಮಹಿಳೆಯ ಮನೆಯವರ ಕೈಯ್ಯಲ್ಲಿದ್ದ ಹಣವೆಲ್ಲಾ ಆಗಲೇ ಖರ್ಚಾಗಿ ಹೋಗಿತ್ತು. ಬೆಂಗಳೂರಿಗೆ ಹೋಗಿ ಚಿಕಿತ್ಸೆ ಮಾಡಿಸುವಷ್ಟು ಹಣ ಇಲ್ಲದೇ, ಆ ಮಹಿಳೆಯ ಮನೆಯವರು ಅವರನ್ನು ಬಾಳೆಹೊಳೆಗೆ ಕರೆದುಕೊಂಡು ಬಂದು, ಆದಮ್ ಡಾಕ್ಟರೇ! ನಮಗೆ ನೀವೇ ಗತಿ..! ಹೆಚ್ಚಿನ ಚಿಕಿತ್ಸೆ ಕೊಡಿಸಲು ನಮ್ಮಿಂದ ಸಾಧ್ಯವಿಲ್ಲ..! ಎಂದು ಅಲವತ್ತುಕೊಂಡರು.

ಆಗ ಡಾಕ್ಟರು, ಸರಿ, ಈ ತಾಯಿಯನ್ನು ನನ್ನ ಸಹೋದರಿ ಎಂದು ಭಾವಿಸಿ ನನ್ನ ವಾರ್ಡಿನಲ್ಲಿ ಚಿಕಿತ್ಸೆಕೊಡುತ್ತೇನೆ. ದಯಾಮಯನಾದ ಭಗವಂತ ಖಂಡಿತವಾಗಿ ಗುಣಮಾಡುತ್ತಾನೆ ಎಂದು ರೋಗಿಯನ್ನು ತಮ್ಮ ವಾರ್ಡಿಗೆ ಸೇರಿಸಿಕೊಂಡು, ತಾನೇ ಅವರ ಸುಟ್ಟ ಗಾಯಗಳನ್ನು ಶುಚಿಗೊಳಿಸಿ ಔಷಧೋಪಚಾರ ಮಾಡಲು ತೊಡಗಿದರಂತೆ. ಆದಮ್ ಡಾಕ್ಟರು ಆ ಮಹಿಳೆಯ ಸುಟ್ಟಗಾಯಗಳ ಶುಶ್ರೂಷೆಗೆ ಪ್ರತೀ ದಿನ ಎರಡರಿಂದ ಮೂರು ಗಂಟೆಗಳಷ್ಟು ಸಮಯವನ್ನು ವ್ಯಯಿಸುತ್ತಿದ್ದರಂತೆ. ಡಾಕ್ಟರು ಆಶ್ವಾಸನೆ ನೀಡಿದ ರೀತ್ಯಾ, ಆ ಮಹಿಳೆಯು ನಲ್ವತ್ತು ದಿನಗಳಲ್ಲಿ ಪುನಃ ಹುಶಾರಾಗಿ ತಮ್ಮ ಮನೆಗೆ ಹೋದರು. ಇಂದಿಗೂ, ಆ ಮಹಿಳೆಯು ಆದಮ್ ಡಾಕ್ಟರು ನನಗೆ ಪುನರ್ಜೀವ ಕೊಟ್ಟರು..! ಎನ್ನುತ್ತಾ ಅವರನ್ನು ಸ್ಮರಿಸುತ್ತಾರೆ.

ಆದಂ ಡಾಕ್ಟರು ತಮ್ಮ ವಾರ್ಡಿನ ಸೂಲಗಿತ್ತಿಯ ನೆರವನ್ನು ಪಡೆದು ಅತೀ ಕಷ್ಟವಾದ ಹೆರಿಗೆಗಳನ್ನು ಸುಲಲಿತವಾಗಿ ಮಾಡುತ್ತಿದ್ದರು. ಮುರಿದ ಕೈಕಾಲುಗಳಿಗೆ ಬ್ಯಾಂಡೇಜು ಹಾಕಿ ಗುಣಪಡಿಸುತ್ತಿದ್ದರು. ಕತ್ತಿ ಕೊಡಲಿಗಳಿಂದಾದ ದೊಡ್ಡ ಗಾಯಗಳಿಗೆ ಹೊಲಿಗೆ ಹಾಕಿ ಚಿಕಿತ್ಸೆ ನೀಡುತ್ತಿದ್ದರು.

ಆದಮ್ ಡಾಕ್ಟರು ನನಗೊಬ್ಬ ಹಿರಿಯ ಮಿತ್ರ ಮತ್ತು ಹಿತೈಷಿ ಆಗಿದ್ದರು. ನನ್ನ ಪ್ರಥಮ ಪುತ್ರಿ ರಾಧಿಕಾಳನ್ನು ಅವರು ಬಹುವಾಗಿ ಪ್ರೀತಿಸುತ್ತಾ ಇದ್ದರು. ಅಪರೂಪಕ್ಕೊಮ್ಮೆ, ನಮ್ಮ ಮಗಳೊಂದಿಗೆ ಆಡಲು ನಮ್ಮ ಮನೆಗೆ ಬರುತ್ತಿದ್ದರು. ನೀನು ನನ್ನ ಮೊಮ್ಮಗಳು, ಚೆನ್ನಾಗಿ ಓದಿ ದೊಡ್ಡ ಡಾಕ್ಟರ್ ಆಗಬೇಕು ಎಂದು ಅವಳನ್ನು ಹರಸುತ್ತಿದ್ದರು. ನನ್ನ ಮಗಳು ರಾಧಿಕಾಗೆ ಆಗ ನಾಲ್ಕು ವರ್ಷ ಪ್ರಾಯವಾಗಿತ್ತು.

ಏಪ್ರಿಲ್ ತಿಂಗಳಿನಲ್ಲಿ ಒಮ್ಮೆ ಡಾ. ಆದಮ್ ನಮ್ಮ ಮನೆಗೆ ಬಂದರು. ಮಗುವಿನೊಂದಿಗೆ ಮನಸಾರೆ ಆಡಿದರು. ಹೊರಡುವ ಮುನ್ನ ಆದಮ್ ಡಾಕ್ಟರು ನನ್ನ ಮಗಳು ರಾಧಿಕಾಳ ತಲೆಯ ಮೇಲೆ ಕೈಯಿಟ್ಟು ಮನದೊಳಗೇ ಪ್ರಾರ್ಥಿಸಿದರು. ಅವರು ಕಣ್ಣಿನಲ್ಲಿ ಕಣ್ಣೀರು ತುಂಬಿಕೊಂಡು, ನನ್ನ ಮೊಮ್ಮಗಳನ್ನು ಡಾಕ್ಟರ್ ಓದಿಸಲೇಬೇಕು. ಇನ್ನು ಮುಂದೆ ನಾನು ನಿಮ್ಮನ್ನು ನೋಡುತ್ತೇನೋ ಇಲ್ಲವೋ, ಗೊತ್ತಿಲ್ಲ..! ಎಂದರು.

ನೀವು ಹಾಗೆ ಹೇಳಬೇಡಿರಿ ಡಾಕ್ಟರೇ, ನಿಮಗಿನ್ನೂ ಅರುವತ್ತರ ಪ್ರಾಯವೂ ಅಗಿಲ್ಲ. ಅಂತಹ ಮಾತನ್ನು ಆಡಬೇಡಿರಿ..! ಎಂದು ನಾನು ಮತ್ತು ನನ್ನ ಪತ್ನಿ ಅವರನ್ನು ಗದರಿದೆವು.

ಹೊರಟವರು ಹಿಂದಿರುಗಿ ಬಂದು ಕುಳಿತುಕೊಂಡರು. ಪುನಃ ಹತ್ತು ಮಿನಿಟು ನಮ್ಮ ಮಗಳೊಂದಿಗೆ ಆಡಿದರು. ಆನಂತರ, ನಿಧಾನವಾಗಿ ಬಾಳೆಹೊಳೆಯ ಕಡೆಗೆ ಹೊರಟರು. ಆಮೇಲೆ ಆದಂ ಡಾಕ್ಟರನ್ನು ನಾವು ಕಾಣಲಿಲ್ಲ..!!

ಮರುದಿನ ಬೆಳಗ್ಗೆ, ತಮ್ಮ ಹುಟ್ಟೂರಾದ ತುಂಬೆಗೆ ಹೋದ ಆದಮ್ ಡಾಕ್ಟರು ಮರಳಿ ಬರಲಿಲ್ಲ. ಆ ವರ್ಷದ ಚಾಂದ್ರಮಾನ ಉಗಾದಿಯಂದು ಹೃದಯಾಘಾತದಿಂದ ನಮ್ಮ ಆದಮ್ ಡಾಕ್ಟರ್ ತೀರಿಕೊಂಡ ಸುದ್ದಿಯು, ಅದೇ ದಿನದ ಸಂಜೆಯ ಹೊತ್ತಿಗೆ ನಮಗೆ ತಿಳಿದುಬಂತು. ಆನಂತರ, ಹಲವು ಉಗಾದಿಗಳು ಬಂದು ಹೋಗಿವೆ. ಆದರೆ, ಪ್ರತೀ ಉಗಾದಿಯ ದಿನದಂದು ನಾವು ನಮ್ಮ ಪ್ರೀತಿಯ ಆದಮ್ ಡಾಕ್ಟರನ್ನು ನೆನಪಿಸಿಕೊಳ್ಳುತ್ತಾ ಇದ್ದೇವೆ.

* * *