ಜೀವನ ಎಂಬುದು ವಿಚಿತ್ರ. ಜೀವನದಲ್ಲಿ ಏನೇನು ಸೋಜಿಗಗಳು ನಡೆಯುತ್ತವೆ? ಎನ್ನುವುದಕ್ಕೆ ಈ ಪ್ರಬಂಧ ಒಂದು ನಿದರ್ಶನ. ಡಾ.ಭಟ್ ಎಂಬುವರು ರಾಯಲ್ ಇಂಡಿಯನ್ ಆರ್ಮಿಯ ಮೆಡಿಕಲ್ ಕೋರ್ನಲ್ಲಿ ಎರಡನೇ ಮಹಾಯುದ್ಧ ಸಮಯ ಕೆಲಸ ಮಾಡುತ್ತಿದ್ದರು.

ಡಾ.ಭಟ್ ಅವರು ಆರು ಅಡಿ ಎತ್ತರದ ಗೌರವರ್ಣದ ಧೃಡ ಮತ್ತು ನೀಳಕಾಯದ ವ್ಯಕ್ತಿ, ಸದಾ ಹಸನ್ಮುಖಿ. ಅಂದಿನ ಕಾಲದಲ್ಲಿ ಸೇನೆಯ ವೈದ್ಯಕೀಯ ವಿಭಾಗದಲ್ಲಿ ಬ್ರಿಟಿಷ್ ಜನರೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದರು. ಡಾ.ಭಟ್ ತನ್ನ ವಿದ್ಯೆ, ವೈದ್ಯಕೀಯ ನೈಪುಣ್ಯತೆ ಮತ್ತು ಆಕರ್ಷಕ ವ್ಯಕ್ತಿತ್ವದಿಂದ ಸೇನೆಯಲ್ಲಿನ ಗೌರವಾನ್ವಿತ ಸ್ಥಾನವಾದ ಕ್ಯಾಪ್ಟನ್ ಪದವಿಯನ್ನು ಗಳಿಸಿಕೊಂಡಿದ್ದರಂತೆ. ಯುದ್ಧ ಶುರುವಾಗುವ ಮೊದಲು ಡಾ.ಭಟ್ ಅವರು ದೆಹಲಿಯಲ್ಲಿರುವ ಮಿಲಿಟರಿಯ ಮುಖ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

ಯುದ್ಧಪೂರ್ವಕಾಲದಲ್ಲಿ, ಸೇನೆಯ ವೈದ್ಯಕೀಯ ವಿಭಾಗದಲ್ಲಿನ ಕ್ಯಾಪ್ಟನ್  ಪದವಿಯು ಭಾರತೀಯ ಸಂಜಾತರಿಗೆ ಸಿಕ್ಕಬಲ್ಲ ಬಲು ಅಪರೂಪವಾದ ಪದವಿ ಆಗಿತ್ತಂತೆ!

ಅವರ ಸಂಬಳ ಸಾರಿಗೆ ಎಲ್ಲವೂ ಇತರೇ ಬ್ರಿಟಿಷ್ ಅಧಿಕಾರಿಗಳಿಗೆ ಸರಿಸಮವಾಗಿದ್ದು, ಅವರ ಯೂನಿಟ್ನಲ್ಲಿ ಅವರೊಬ್ಬರೇ ಭಾರತೀಯ ಡಾಕ್ಟರ್ ಎನಿಸಿಕೊಂಡಿದ್ದರಂತೆ.

ಡಾಕ್ಟರ್ ಭಟ್ ಆವರು ದಕ್ಷಿಣಕನ್ನಡದ ಗೌರವಾನ್ವಿತ ಬ್ರಾಹ್ಮಣ ಕುಟುಂಬದವರು. ತಮ್ಮ ಊರಿನಲ್ಲೇ ದೊಡ್ಡ ಜಮೀನುದಾರರಾದ ಅವರ ತಂದೆತಾಯಂದಿರ ಹೆಮ್ಮೆಯ ಪುತ್ರ. ಈ ಸುಂದರ ಶ್ರೀಮಂತ ಸೈನ್ಯಾಧಿಕಾರಿ ತರುಣ ಡಾಕ್ಟರನಿಗೆ ಹೆಣ್ಣು ಕೊಡಲು ಅನೇಕ ಕನ್ಯಾಪಿತೃಗಳು ಕಾತರರಾಗಿದ್ದರಂತೆ. ಡಾ.ಭಟ್ ಅವರ ತಂದೆತಾಯಂದಿರು ಅವರಿಗೆ ಸಕಾಲದಲ್ಲಿ ಅನುರೂಪಳಾದ ಕನ್ಯೆಯನ್ನು ನೋಡಿ ವಿಜೃಂಭಣೆಯಿಂದ ಮದುವೆ ಮಾಡಿದರಂತೆ. ಶ್ರೀಮತಿ ಭಟ್ ಅವರು ತುಂಬಾ ಸುಂದರಿಯಾಗಿದ್ದರಂತೆ. ಶ್ರೀಮತಿ ಭಟ್ ಅವರ ಮಾತಾಪಿತೃಗಳು ಬಹಳ ಪ್ರಸಿದ್ಧವಾದ ವೈದಿಕ ಮನೆತನದವರಂತೆ. ನವದಂಪತಿಗಳು ದೆಹಲಿಯಲ್ಲಿನ ಮಿಲಿಟರಿಯ  ಕ್ವಾರ್ಟರ್ಸ್ ಸೇರಿ ಸುಖವಾಗಿ ಸಂಸಾರ ಶುರುಮಾಡಿದರು.

ಅಷ್ಟರಲ್ಲೇ ಎರಡನೇ ಜಾಗತಿಕ ಯುದ್ಧ ಶುರುವಾಯಿತು. ಡಾ.ಭಟ್ ಅವರಿಗೆ ಬರ್ಮಾದ ಮ್ಯಾಂಡಲೆ ಎಂಬ ಸೇನಾ ಶಿಬಿರಕ್ಕೆ ವರ್ಗವಾಯಿತು. ಮದುವೆಯಾದ ಹೊಸದರಲ್ಲೇ ದಂಪತಿಗಳು ಒಬ್ಬರನ್ನೊಬ್ಬರು ಅಗಲಬೇಕಾಯಿತು. ಶ್ರೀಮತಿ ಭಟ್ ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದ ತವರು ಮನೆಗೆ ಬಂದು ಬರ್ಮಾದಲ್ಲಿದ್ದ ಪತಿಯ ಕಾಗದಗಳನ್ನು ನಿರೀಕ್ಷಿಸತೊಡಗಿದರು. ತಿಂಗಳಿಗೆ ಒಂದೋ ಅಥವಾ ಎರಡು ತಿಂಗಳಿಗೆ ಒಂದೋ ಎಂಬಂತೆ ಪತ್ರಗಳು ಆಕೆಗೆ ಗಂಡನಿಂದ ಬರುತ್ತಿದ್ದುವು.

ಹೀಗಿರುವಾಗ, ಬರ್ಮಾದ ಮೇಲೆ ಜಪಾನೀಯರು ಆಕ್ರಮಣ ಶುರುಮಾಡಿದ ಸುದ್ದಿ ವಾರ್ತಾಪತ್ರಿಕೆಗಳಲ್ಲಿ ಪ್ರಕಟವಾಯಿತಂತೆ. ತನ್ನ ಗಂಡ ಸೌಖ್ಯವಾಗಿ ಹಿಂದಿರುಗಲಿ ಎಂದು ಶ್ರೀಮತಿ ಭಟ್ ದೇವರನ್ನು ಬೇಡಿಕೊಳ್ಳುತ್ತಾ ಕಾಲ ಕಳೆಯುತ್ತಿದ್ದರು.

ಸ್ವಲ್ಪ ಸಮಯದಲ್ಲೇ ಬರ್ಮಾದಲ್ಲಿ ಜಪಾನೀಯರು ಮುನ್ನುಗ್ಗತೊಡಗಿದರಂತೆ. ಡಾಕ್ಟರ್ ಭಟ್ ಅವರನ್ನು ಮ್ಯಾಂಡಲೆಯ ಆಸ್ಪತ್ರೆಯಿಂದ ನೇರವಾಗಿ ಯುದ್ಧರಂಗಕ್ಕೇ ವರ್ಗ ಮಾಡಲಾಯಿತು. ಗಾಯಾಳುಗಳಿಗೆ ಚಿಕಿತ್ಸೆ ಕೊಡುತ್ತಾ ಘೋರಯುದ್ಧದಲ್ಲಿ ಸೋಲನ್ನು ಅನುಭವಿಸುತ್ತಾ ಹಿಂದೆ ಸರಿಯುತ್ತಿದ್ದ ಬ್ರಿಟಿಷ್ ಸೈನ್ಯದ ಶಿಬಿರಗಳಲ್ಲಿ ಅವರು ಅಹರ್ನಿಶಿ ಕೆಲಸ ಮಾಡಬೇಕಾಯಿತು. ಯುದ್ಧದ ಬಿಸಿ ಬರ್ಮಾದಲ್ಲಿ ಏರಿದಂತೆಯೇ ಬ್ರಿಟಿಷ್ ಸೈನ್ಯ ಜಪಾನೀಯರ ಉಗ್ರಧಾಳಿಯನ್ನು ತಾಳಲಾರದೆ ಹಿನ್ನಡೆಯಬೇಕಾಯಿತು. ಕೈ ಕೈ ಮಿಲಾಯಿಸಿ ಯುದ್ಧ ನಡೆಯುತ್ತಿದ್ದರಿಂದ ಹಲವಾರು ಸೈನಿಕರು ಮತ್ತು ಅಧಿಕಾರಿಗಳು ವೀರಮರಣವನ್ನು ಅಪ್ಪಿದರು. ಬಹಳಷ್ಟು ಮಂದಿ ಬ್ರಿಟಿಷ್ ಸೈನಿಕರು ಮತ್ತು ಅಧಿಕಾರಿಗಳು ಜಪಾನೀಯರ ಸೆರೆಗೆ ಸಿಕ್ಕಿದರು. ಹಲವಾರು ಮಂದಿ ನಾಪತ್ತೆಯಾದರು.

ದಕ್ಷಿಣಕನ್ನಡ ಜಿಲ್ಲೆಯಲ್ಲಿನ ತಾಯಿಯ ಮನೆಯಲ್ಲಿದ್ದ ಶ್ರೀಮತಿ ಭಟ್ ಅವರಿಗೆ ನಾಲ್ಕು ತಿಂಗಳಿನಿಂದ ಗಂಡನ ಪತ್ರವೇ ಬರಲಿಲ್ಲ. ಕೊನೆಗೊಂದು ದಿನ, ಸೈನ್ಯದ ಮುಖ್ಯ ಕಛೇರಿಯಿಂದ ಡಾಕ್ಟರ್ ಭಟ್ ಯುದ್ಧರಂಗದಲ್ಲಿ ನಾಪತ್ತೆ ಆಗಿದ್ದಾರೆ ಎಂಬ ಸಂದೇಶ ಹೊತ್ತ ಪತ್ರವು ಶ್ರೀಮತಿ ಭಟ್ ಅವರಿಗೆ ಬಂದು ತಲುಪಿತು. ಈ ಸಂದೇಶ ತಲುಪಿ ಒಂದು ತಿಂಗಳಿನ ಒಳಗೆ ಡಾ. ಭಟ್ ಅವರ ಸ್ವಂತ ಬಟ್ಟೆಬರೆ ಹಾಗೂ ಇತರೇ ವಸ್ತುಗಳನ್ನು ಸೈನ್ಯದವರು ಶ್ರೀಮತಿ ಭಟ್ ಅವರಿಗೆ ತಲುಪಿಸಿ,  ಡಾ.ಭಟ್ ಇನ್ನೂ ಪತ್ತೆಯಾಗಿಲ್ಲ (Missing in Action) ಎಂದು ತಿಳಿಸಿದರು.

ಈ ಸಮಾಚಾರ ತಿಳಿದು ಎಲ್ಲಾ ಸಂಬಂಧಿಕರು ತೀವ್ರ ಶೋಕದಲ್ಲಿ ಮುಳುಗಿದರು. ಬರ್ಮಾ ರಣರಂಗದಲ್ಲಿ ಎಡೆಬಿಡದೇ ಯುದ್ಧ ನಡೆಯುತ್ತಾ ಇದ್ದುದರಿಂದ, ಹಲವಾರು ಸೈನಿಕರ ಮರಣವಾರ್ತೆಯ ಟೆಲಿಗ್ರಾಮ್ಗಳು ದಕ್ಷಿಣಕನ್ನಡದ ಹಲವಾರು ನತದೃಷ್ಟ ಸೈನಿಕರ ಮನೆಗಳಿಗೆ ಬರತೊಡಗಿದುವು. ಇದೇ ರೀತಿಯಲ್ಲಿ ಯುದ್ದದಲ್ಲಿ ವೀರ ಮರಣ ಹೊಂದಿದ ಸೈನಿಕರ ಬಟ್ಟೆಬರೆಗಳನ್ನು ಬಹು ಮರ್ಯಾದೆಯಿಂದ ಮಿಲಿಟರಿಯವರು ತಂದು ಅವರವರ ವಾರಸುದಾರರಿಗೆ ಒಪ್ಪಿಸಿ, ಸಂತಾಪ ತಿಳಿಸುವುದು ದಕ್ಷಿಣಕನ್ನಡದ ಹಳ್ಳಿಗಳಲ್ಲಿ ಸಾಮಾನ್ಯ ಸಂಗತಿಯಾಯಿತಂತೆ.

ಡಾ.ಭಟ್ ಅವರ ಬಟ್ಟೆಬರೆ ಬಂದು ತಲುಪಿದೊಡನೆ ಅವರ ಹಳ್ಳಿಯಲ್ಲಿ ದುಃಖದ ಛಾಯೆಯೇ ಹರಡಿತು. ಯುದ್ಧ ರಂಗದಲ್ಲಿ ನಾಪತ್ತೆ ಎಂದು ಮಿಲಿಟರಿಯವರು ತಿಳಿಸಿದ್ದರೂ, ಆ ವಿಚಾರ ಹಳ್ಳಿಗರ ಬಾಯಲ್ಲಿ ಗೌಣ ವಿಚಾರವಾಗಿ, ಡಾ.ಭಟ್ ಅವರು ವೀರಮರಣವನ್ನು ಅಪ್ಪಿದರು..! ಎಂಬ ಪುಕಾರು ಹರಡತೊಡಗಿತಂತೆ. ಕ್ಯಾಪ್ಟನ್ ಡಾ.ಭಟ್ ಅವರ ಬಟ್ಟೆಬರೆಗಳು ಬಂದುದನ್ನು ತಿಳಿದು ಹಳ್ಳಿಯ ಜನರು ಸಾಲುಗಟ್ಟಿ ಬಂದು ಶ್ರೀಮತಿ ಭಟ್ ಅವರಿಗೆ ಸಂತಾಪ ಸೂಚಿಸಿದರಂತೆ. ಶ್ರೀಮತಿ ಭಟ್ ಅನ್ನ ನೀರು ಬಿಟ್ಟು ಕತ್ತಲೆ ಕೋಣೆ ಸೇರಿ ಕೊರಗತೊಡಗಿದರಂತೆ. ತಿಂಗಳುಗಳು ಕಳೆದು ಹೋದರೂ, ಮಿಲಿಟರಿಯವರಿಂದ ಡಾ.ಭಟ್ ಬಗ್ಗೆ ಯಾವ ಸುದ್ದಿಯೂ ಬರಲಿಲ್ಲವಂತೆ.

ಶ್ರೀಮತಿ ಭಟ್ ಅವರ ತಂದೆತಾಯಿಗಳು ಬಹಳ ಸಂಪ್ರದಾಯಸ್ಥ ವೈದಿಕ ಮನೆತನದವರು. ಊರ ಕೆಲವು ಕುಹಕಿಗಳು ಡಾ.ಭಟ್ ಅವರು ಖಂಡಿತವಾಗಿಯೂ ಬರ್ಮಾ ಯುದ್ಧದಲ್ಲಿ ಮರಣ ಹೊಂದಿದ್ದಾರೆ. ಅವರ ಹೆಂಡತಿಯು ಮುತ್ತೈದೆ ವೇಷದಲ್ಲಿ ಇರಬಾರದು. ಅವರು ಖಂಡಿತವಾಗಿಯೂ ವಿಧವೆ. ಆದ್ದರಿಂದ ಮಡಿ ಹೆಂಗಸಿನಂತೆ ಇದ್ದರೇನೇ ಶ್ರೇಯಸ್ಸು! ಎಂದು ಮಾತನಾಡಲು ಶುರುಮಾಡಿದರಂತೆ.

ಶ್ರೀಮತಿ ಭಟ್ ಸಂಪ್ರದಾಯಸ್ಥ ಮನೆತನದವರಾದುದರಿಂದ ವಿಧವೆಯಂತೆ ಕೇಶಮುಂಡನ ಮಾಡಿಸಿಕೊಂಡು ಕೆಂಪುಸೀರೆ ಉಟ್ಟುಕೊಳ್ಳಬೇಕು ಎಂದು ಬ್ರಾಹ್ಮಣ ಸಮಾಜದ ಕೆಲವು ಪ್ರಭೃತಿಗಳು ಚುಚ್ಚುಮಾತುಗಳನ್ನಾಡಲು ಶುರುಮಾಡಿದರಂತೆ..! ಸ್ವಲ್ಪ ದಿನಗಳಲ್ಲಿ ಈ ವಿಚಾರ ಬಹಳವಾಗಿ ಅಪಪ್ರಚಾರ ಪಡೆದು, ಶ್ರೀಮತಿ ಭಟ್ ಅವರ ತಂದೆತಾಯಿಗಳಿಗೆ ಊರಿನಲ್ಲಿ ತಲೆಯೆತ್ತಿ ತಿರುಗಾಡಲಾರದಷ್ಟು ಉಗ್ರರೂಪ ಪಡೆಯಿತಂತೆ. ಈ ಸಾರ್ವಜನಿಕ ಲೇವಡಿ ಮತ್ತು ಜಾತಿ ಬಾಂಧವರ ಬಹಿಷ್ಕಾರದ ಬೆದರಿಕೆ ಹೆಚ್ಚಾಗಲು, ತಮ್ಮ ತಂದೆತಾಯಂದಿರ ದುಃಖ ನೋಡಲಾಗದೇ, ಶ್ರೀಮತಿ ಭಟ್ ಅವರೇ ತಮ್ಮ ಮಾಂಗಲ್ಯರೂಪ ಕಳೆದು, ವಿಧವೆ ರೂಪಕ್ಕೆ ಬದಲಾಗಲು ಒಪ್ಪಿಕೊಂಡರಂತೆ. ಅಂತೂ, ಕೊನೆಗೊಮ್ಮೆ, ಸ್ವಜಾತಿ ಬಾಂಧವರ ಮತ್ತು ಊರವರ ಸಮಾಧಾನಕ್ಕಾಗಿ, ಶ್ರೀಮತಿ ಭಟ್ ಅವರು ಮಡಿ ಹೆಂಗಸಿನ ರೂಪ ತಾಳಿಯೇಬಿಟ್ಟರು.

ಡಾ.ಭಟ್ ಅವರು ಯುದ್ಧರಂಗದಲ್ಲಿ ಕಳೆದುಹೋಗಿದ್ದಾರೆ! ಎಂಬ ಸುದ್ದಿ ತಲುಪಿ ಸುಮಾರು ಒಂದು ವರ್ಷಕ್ಕೆ ಹತ್ತಿರವಾಗುತ್ತಿರುವಾಗ, ಡಾ.ಭಟ್ ಅವರು ತಮ್ಮ ಊರಿನಲ್ಲಿ ಪ್ರತ್ಯಕ್ಷವಾದರಂತೆ..!

ಅವರು ಬರ್ಮಾದ ಯುದ್ಧರಂಗದಲ್ಲಿ ಜಪಾನೀಯರ ಕೈಗೆ ಸೆರೆಯಾಗದೇ ತಪ್ಪಿಸಿಕೊಂಡು, ದಕ್ಷಿಣ ಬರ್ಮಾದ ಕಾಡುಗಳಲ್ಲಿ ಅವಿತುಕೊಂಡು, ತಮ್ಮ ಸೈನ್ಯದ ತುಕಡಿಯನ್ನು ಸೇರಲು ಪ್ರಯತ್ನಿಸಿದರೂ, ಅವರ ಸುತ್ತಮುತ್ತದ ಪ್ರದೇಶಗಳು ಜಪಾನೀಯರ ಆಕ್ರಮಿತ ಪ್ರದೇಶಗಳಾಗಿಯೇ ಇದ್ದುವಂತೆ! ಹಾಗಾಗಿ, ಜಪಾನೀಯರು ಶರಣಾಗತರಾಗಿ ಮ್ಯಾಂಡಲೆಯಲ್ಲಿ ಶಸ್ತ್ರಗಳನ್ನು ಕೆಳಗಿಡುವ ತನಕ ಅವರು ಕಾಡುಗಳಲ್ಲಿ ಅಡಗಿಯೇ ಇರಬೇಕಾಯಿತಂತೆ. ಜಪಾನೀಯರು ಶರಣಾದ ಕೂಡಲೇ ಡಾ.ಭಟ್ ಅವರು ತಮ್ಮ ಯೂನಿಟ್ಗೆ ಸೇರಿಕೊಂಡು,  ತಕ್ಷಣ ರಜೆ ಪಡೆದು ತಮ್ಮ ಊರಿಗೆ ಬಂದಿದ್ದರಂತೆ.

ತನ್ನ ಹೆಂಡತಿಯನ್ನು ನೋಡಲು ಅವರ ತವರು ಮನೆಗೆ ಬಂದರೆ, ಅವರನ್ನು ಕಂಡು ಸಂತೋಷಿಸುವುದರ ಬದಲು, ಸಂಬಂಧಿಕರು ಮತ್ತು ಊರವರು ಎಲ್ಲರೂ ಗೋಳೊ ಎಂದು ಅಳಲು ಶುರುಮಾಡಿದರಂತೆ..!

ಡಾ.ಭಟ್ ತಮ್ಮ ಹೆಂಡತಿಯನ್ನು ಬಾ ಎಂದು ಕರೆದರೆ,  ಆಕೆ ಕತ್ತಲುಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಅಳುತ್ತಾ ಕುಳಿತರಂತೆ. ಆಕೆಯನ್ನು ಮಾತನಾಡಿಸಲು ಡಾ.ಭಟ್ ಎಷ್ಟು ಪ್ರಯತ್ನಿಸಿದರೂ ಆಕೆ ಮಾತನಾಡದೇ ನಿಮ್ಮ ಹೆಂಡತಿ ಸತ್ತಿದ್ದಾಳೆ ಎಂದು ತಿಳಿಯಿರಿ. ನಾನು ನಿಮಗೆ ಮುಖ ತೋರಿಸಲಾರೆ! ಎಂದರಂತೆ.

ಡಾ.ಭಟ್ ನಾನು ವಿದ್ಯಾವಂತ ಮನುಷ್ಯ, ನನಗೆ ಮೂಢ ನಂಬಿಕೆಗಳಿಲ್ಲ. ದಯವಿಟ್ಟು ಹೊರಗೆ ಬಾ, ನಾನು ಪುನಃ ತಾಳಿಕಟ್ಟಿ ನಿನ್ನನ್ನು ಕರೆದೊಯ್ಯುತ್ತೇನೆ. ಕೂದಲು ಬೋಳಿಸಿದುದಕ್ಕೆ ಚಿಂತೆ ಪಡಬೇಡ. ಕೂದಲು ಕ್ರಮೇಣ ಬೆಳೆಯುತ್ತೆ. ಚಿಂತೆ ಬೇಡ! ಎಂದು ಗೋಗರೆದರೂ,  ಆಕೆ ಬಾಗಿಲು ತೆರೆಯದೇ ನೀವು ಬೇರೆ ಮದುವೆ ಆಗಿ ಸುಖವಾಗಿ ಇರಿ! ಎಂದು ಆಣೆ ಹಾಕಿ ಹೇಳಿದರಂತೆ. ಬೇಸರದಿಂದ ಡಾ.ಭಟ್ ತನ್ನ ಮನೆಗೆ ಹಿಂದಿರುಗಿದರಂತೆ.

ಮನಸ್ಸು ಮುರಿದ ಡಾಕ್ಟರು ಪುನಃ ಸೈನ್ಯಕ್ಕೆ ಹಿಂದಿರುಗಿದರಂತೆ. ಕೊನೆಗೊಮ್ಮೆ ಯುದ್ಧ ಮುಗಿಯಿತು. ಡಾ.ಭಟ್ ಅವರು ಸೈನ್ಯದಿಂದ ಬಿಡುಗಡೆ ಹೊಂದಿ, ರಂಗೂನಿನಲ್ಲಿ ಖಾಸಗಿ ವೈದ್ಯಶಾಲೆ ತೆರೆದರಂತೆ. ತನ್ನ ಹುಟ್ಟೂರಿಗೆ ಬರಲು ಅವರ ಮನ ಒಪ್ಪಲಿಲ್ಲವಂತೆ. ಕ್ರಮೇಣ, ಡಾ.ಭಟ್ ಬರ್ಮೀಸ್ ನರ್ಸ್ ಒಬ್ಬರನ್ನು ಪ್ರೇಮಿಸಿ ವಿವಾಹವಾದರಂತೆ.   ಹತ್ತಾರು ವರ್ಷ ಕಳೆದನಂತರ ತಾಯ್ನಾಡ ಪಾಶ ತಾಳಲಾರದೆ ಡಾ.ಭಟ್ ತನ್ನ ಬರ್ಮೀಸ್ ಹೆಂಡತಿ ಮತ್ತು ಇಬ್ಬರು ಗಂಡುಮಕ್ಕಳೊಂದಿಗೆ ಹಿಂದಿರುಗಿ, ಬೆಂಗಳೂರಿನಲ್ಲಿ ನೆಲೆಸಿ, ತಮ್ಮ ವೈದ್ಯಕೀಯ ವೃತ್ತಿ ಮುಂದುವರೆಸಿದರಂತೆ. ಬೆಂಗಳೂರಲ್ಲಿ ನೆಲೆಸಿ ಹತ್ತಾರು ವರ್ಷಗಳಿಗೆ ಡಾ.ಭಟ್ ಅವರ ಬರ್ಮೀಸ್ ಮಡದಿ ಹೃದಯಾಘಾತದಿಂದ ತೀರಿಕೊಂಡರಂತೆ.         ಈ ವಿಚಾರ ಹಳ್ಳಿಯಲ್ಲಿದ್ದ ಅವರ ವಿಧವಾ ವೇಷದ ಮೊದಲ ಮಡದಿಗೂ ತಿಳಿಯಿತಂತೆ.               ಸುಮಾರು ಇಪ್ಪತ್ತು ವರ್ಷಗಳಲ್ಲಿ ಕಾಲ ಬದಲಾಗಿತ್ತು! ಜನರ ಜೀವನ ರೀತಿಯಿಂದ ಹಳೆಯ ಕಂದಾಚಾರಗಳು ಮೂಲೆಗುಂಪಾಗಿದ್ದುವು. ಇಪ್ಪತ್ತು ವರುಷಗಳ ಕಾಲದಲ್ಲಿ ಹಲವಾರು ಸಾಮಾಜಿಕ ಹಾಗೂ ವೈಚಾರಿಕ ಬದಲಾವಣೆಗಳು ಆಗಿದ್ದುವು. ಡಾ.ಭಟ್ ಅವರ ಬರ್ಮೀಸ್ ಮಡದಿಯ ಮರಣವಾರ್ತೆ ತಿಳಿದ ಕೂಡಲೇ, ಅವರ ಮೊದಲನೇ ಹೆಂಡತಿಯೇ ಖುದ್ದಾಗಿ ಡಾ.ಭಟ್ ಅವರಿಗೆ ಒಂದು ಪತ್ರ ಬರೆದು ತಾವು ಸ್ವೀಕರಿಸುವುದಾದರೆ, ತಾನು ಸೌಭಾಗ್ಯವತೀ ಮುತ್ತೈದೆಯ ವೇಷದಲ್ಲಿ ಬಂದು ತಮ್ಮನ್ನು ಕೂಡಿಕೊಂಡು, ಇಬ್ಬರು ಮಕ್ಕಳನ್ನು ಸಲಹುತ್ತಾ ಸಹಧರ್ಮಿಣಿಯಾಗಿ ಬಾಳುವೆ..! ಎಂದು ಪತ್ರ ಬರೆದರಂತೆ.

ಕೂಡಲೇ ಡಾಕ್ಟರ್ ಭಟ್ ಅವರಿಗೆ ಪ್ರತಿ ಉತ್ತರ ಬರೆದು ಅವರನ್ನು ಸ್ವಾಗತಿಸಿದರಂತೆ! ಹಲವಾರು ವರುಷಗಳ ನಂತರ ಪುನರ್ಮಿಲನಗೊಂಡ ಈ ದಂಪತಿಗಳು ಸುಖವಾಗಿ ಸಂಸಾರ ಮಾಡುತ್ತಾ, ಇಬ್ಬರು ಮಕ್ಕಳನ್ನು ಸಲಹುತ್ತಾ, ಸುಖವಾಗಿದ್ದರು.

ಶ್ರೀಮತಿ ಭಟ್ ಅವರು ತಮ್ಮ ಗಂಡನ ಹಾಗೂ ಮಕ್ಕಳ ಪುರೋಭಿವೃದ್ಧಿಗಾಗಿ ಶ್ರಮಿಸುತ್ತಾ,  ಸಂತೋಷವಾಗಿ ಇನ್ನೂ ಹಲವು ವರ್ಷ ಸುಖವಾಗಿ ಬಾಳಿದರಂತೆ. ಕೊನೆಗೊಂದು ದಿನ ಹೃದಯಾಘಾತಕ್ಕೆ ಬಲಿಯಾಗಿ ಮುತ್ತೈದೆ ಮರಣ ಪಡೆದರಂತೆ. ವಿಧುರರಾದ ಡಾ.ಭಟ್ ಬೆಳೆದ ಗಂಡುಮಕ್ಕಳ ಜತೆಗೆ ಬೆಂಗಳೂರಲ್ಲೇ ವಾಸವಾಗಿದ್ದರು. ದೊಡ್ಡ ಮಗ ಒಬ್ಬ ವೈದ್ಯನಾದ, ಚಿಕ್ಕವನು ಬ್ಯಾಂಕ್‌ವೊಂದರಲ್ಲಿ ಆಫೀಸರನಾದ.

ಅದೊಂದು ದಿನ, ಡಾ.ಭಟ್ ಅವರ ಕಾರು ಯಾಕೋ ಸ್ಟಾರ್ಟ್ ಆಗಲಿಲ್ಲವಂತೆ! ತನ್ನ ಕ್ಲಿನಿಕ್‌ಗೆ ಹೋಗಲು ಡಾಕ್ಟರ್ ಮಗನ ಮೋಟಾರ್ ಸೈಕಲ್ ಹಿಂದೆ ಕುಳಿತುಹೊರಟರಂತೆ. ದಾರಿಯಲ್ಲಿ ಮಿಲಿಟರಿ ಟ್ರಕ್ ಒಂದು ಬಂದು ಮೋಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆಯಿತು. ಮಗ ಮಿಲಿಟರಿ ಟ್ರಕ್ಕಿನ ಚಕ್ರಗಳ ಮಧ್ಯೆ ಬಿದ್ದು ಹೆಚ್ಚು ಪೆಟ್ಟಾಗದೇ ಬದುಕಿಕೊಂಡರೆ, ಡಾ.ಭಟ್ ಟ್ರಕ್ಕಿನ ಚಕ್ರದ ಅಡಿಗೇ ಸಿಕ್ಕಿ ಸ್ಥಳದಲ್ಲೇ ಮರಣ ಹೊಂದಿದರು. ಅಲ್ಲಿಗೆ ಡಾ.ಭಟ್ ಅವರ ಜೀವನ ಚಕ್ರ ಕೊನೆಗೊಂಡಿತು. ಯುದ್ಧದಲ್ಲಿ ಅವರು ಸಾಯಲಿಲ್ಲ!  ಆದರೆ, ಮಿಲಿಟರಿ ಟ್ರಕ್ಕಿನ ಅಡಿಗೆ ಬಿದ್ದು ಸಾಯುವ ಮರಣ ಅವರಿಗೆ ಬರೆದಿತ್ತು!

ಹೇಗಿದೆ ಈ ಜೀವನ ಚಕ್ರ..!?

(ನಮಗೆ ಆಪ್ತರಾದ, ಡಾಕ್ಟರ್ ಅವರ ನಿಜನಾಮಧೇಯವನ್ನು ಗೌಪ್ಯವಾಗಿ ಇರಿಸಿ ಡಾ.ಭಟ್ ಎಂದು ಬರೆಯಲಾಗಿದೆ.)