ಇದು ಸುಮಾರು ೧೯೫೦ರ ದಶಕದಲ್ಲಿ ನಡೆದ ಘಟನೆ. ಡಾ.ಶರ್ಮಾ ಅವರು ಕರಾವಳಿಯ ಒಂದು ಪಟ್ಟಣದ ಹೆಸರಾಂತ ಸರ್ಜನ್. ಅವರು ಬೊಂಬಾಯಿಗೆ ಹೋಗಿ,  ಅಲ್ಲಿಂದ ಇಂಗ್ಲಂಡ್ ದೇಶಕ್ಕೆ ಯಾವುದೋ ಬಹಳ ಮುಖ್ಯವಾದ ಮೆಡಿಕಲ್ ಸೆಮಿನಾರ್ನಲ್ಲಿ ಭಾಗವಹಿಸಲು ಹೊರಟಿದ್ದರು. ಬೆಳಗ್ಗೆ ಎಂಟಕ್ಕೇ ಡಾ.ಶರ್ಮಾ ಅವರ ಕಾರು ಬಜಪೆ ಏರ್‌ಪೋರ್ಟ್‌ಗೆ ಹೊರಡಲು ಅವರ ಬಂಗಲೆಯ ಪೋರ್ಟಿಕೋದಲ್ಲಿ ಸಜ್ಜಾಗಿ ನಿಂತಿತ್ತು. ಡಾಕ್ಟರ್ ಹೊರಟು ಬಂದು ಕಾರಿನಲ್ಲಿ ಕುಳಿತರು.

ಕಾರು ಇನ್ನೇನು ಹೊರಡಬೇಕು! ಅಷ್ಟರಲ್ಲೇ, ಒಬ್ಬ ಯುವತಿ ಅವರ ಮನೆಯ ತೆರೆದ ಗೇಟಿನ ಮೂಲಕ ಧಾವಿಸಿಬಂದು, ಡಾಕ್ಟರ್..!ಎಂದು ಗಟ್ಟಿಯಾಗಿ ಕೂಗುತ್ತಾ ಕಾರಿನ ಕಡೆಗೆ ಓಡಿಬರುತ್ತಾ ಇದ್ದಳು. ಏದುಸಿರು ಬಿಡುತ್ತಿದ್ದ ಆ ಯುವತಿಯ ಕಣ್ಣಿನಿಂದ ಧಾರಾಕಾರವಾಗಿ ಕಣ್ಣೀರು ಬರುತ್ತಿತ್ತು. ಆಕೆ ಬಹುದೂರ ಓಡಿ ಬಂದದ್ದರಿಂದ ಏದುಸಿರು ಬಿಡುತ್ತಾ ಇದ್ದಳು. ಬಹು ಗಾಬರಿಯಾಗಿದ್ದ ಆ ಹುಡುಗಿಯನ್ನು ಸಮಾಧಾನ ಪಡಿಸಲು ಡಾಕ್ಟರು ಕಾರಿನಿಂದ ಇಳಿದರು.

ಓಡುತ್ತಾ ಬಂದುದರಿಂದ ಯುವತಿಗೆ ಮಾತನಾಡಲು ಕೂಡಾ ತುಂಬಾ ಕಷ್ಟವಾಗುತ್ತಿತ್ತು. ಆಕೆ ಡಾ.ಶರ್ಮಾ ಅವರ ಕಾಲುಗಳನ್ನು ಭದ್ರವಾಗಿ ಹಿಡಿದು ಗೋಳೋ ಎಂದು ಅಳಹತ್ತಿದಳು. ಡಾಕ್ಟರು ಯಾಕಮ್ಮಾ ಏನಾಯಿತು? ಎಂದು ಪ್ರಶ್ನಿಸಿದರು.

ಒಂದು ನಿಮಿಷ ಸುಧಾರಿಸಿಕೊಂಡ ನಂತರ ಆ ಯುವತಿಯು ಡಾಕ್ಟರೇ! ನಾವು ತುಂಬಾ ಬಡವರು. ದಯಾಳುವಾದ ನಿಮ್ಮನ್ನು ಬಿಟ್ಟು ನಮಗೆ ಯಾರೂ ಗತಿ ಇಲ್ಲ! ನೀವು ಈ ಕೂಡಲೇ ಬಂದು ನನ್ನ ತಾಯಿಯವರ ಪ್ರಾಣವನ್ನು ಕಾಪಾಡಬೇಕು! ಎಂದು ಗೋಗರೆದಳು. ಡಾಕ್ಟರರು ಆಕೆಯನ್ನು ಸಮಾಧಾನ ಪಡಿಸುತ್ತಾ ನೋಡಮ್ಮಾ, ನಾನು ಹೊರದೇಶಕ್ಕೆ ಹೊರಟು ನಿಂತಿದ್ದೇನೆ. ನನ್ನ ಪ್ರಯಾಣ ರದ್ದುಪಡಿಸಲು ಸಾಧ್ಯವಿಲ್ಲ. ಆದ್ದರಿಂದ ನೀನು ಯಾವುದಾದರೂ ಬೇರೆ ಡಾಕ್ಟರನ್ನು ನಿನ್ನ ಮನೆಗೆ ಕರೆದುಕೊಂಡು ಹೋಗು. ಈ ಊರಿನಲ್ಲಿ ನಾನೊಬ್ಬನೇ ಡಾಕ್ಟರ್ ಅಲ್ಲ. ಬಹಳ ಮಂದಿ ಇದ್ದಾರೆ. ಒಳ್ಳೆಯ ಆಸ್ಪತ್ರೆಗಳೂ ಇವೆ. ದಯವಿಟ್ಟು ಹೊರದೇಶಕ್ಕೆ ಹೊರಟ ನನ್ನನ್ನು ನಿಲ್ಲಲು ಹೇಳಬೇಡ ಎಂದರಂತೆ. ಆದರೆ ಆ ಯುವತಿಯು ನೀವೇ ಬಂದು ನನ್ನ ತಾಯನ್ನು ಉಳಿಸಿಕೊಡಬೇಕು ಎಂದು ಒಂದೇ ಸಮನೆ ಹಠ ಹಿಡಿದಳಂತೆ.

ಆಗ ಡಾಕ್ಟರರು ನಾನು ನಿನಗೆ ಒಬ್ಬ ಒಳ್ಳೆಯ ಡಾಕ್ಟರನ್ನು ಗೊತ್ತು ಮಾಡಿಕೊಟ್ಟೇ ವಿಮಾನನಿಲ್ದಾಣಕ್ಕೆ ಹೋಗುತ್ತೇನೆ. ಈಗ ದಯವಿಟ್ಟು ನನ್ನ ಕಾರಿನಲ್ಲಿ ಕುಳಿತುಕೋ ಎಂದರಂತೆ. ಮರು ಮಾತನಾಡದೇ ಕಾರನ್ನೇರಿದ ಯುವತಿಯು ಇನ್ನೂ ಜೋರಾಗಿಯೇ ಅಳುತ್ತಾ,  ತಾವು ಇಂದಿನ ಪ್ರಯಾಣ ಕ್ಯಾನ್ಸಲ್ ಮಾಡಿ ನನ್ನೊಂದಿಗೆ ಬಂದು ನನ್ನ ತಾಯನ್ನು ಉಳಿಸಿಕೊಡಲೇ ಬೇಕು ಎಂದು ಡಾಕ್ಟರ ಬೂಟುಗಾಲನ್ನು ಗಟ್ಟಿಯಾಗಿ ಹಿಡಿದು ಒಂದೇಸಮನೆ ಅಳಲು ಶುರುಮಾಡಿದಳಂತೆ.

ಈ ಯುವತಿಯ ಕಾಟವನ್ನು ಸಹಿಸಲಾಗದೇ ಡಾ.ಶರ್ಮಾ ಅವರು ಡ್ರೈವರನೊಡನೆ ಕಾರನ್ನು ಆ ಹುಡುಗಿಯ ಮನೆಯ ಕಡೆಗೆ ನಡೆಸಲು ಆಜ್ಞಾಪಿಸಿದರಂತೆ. ಸುಮಾರು ಎರಡು ಮೈಲು ದೂರದಲ್ಲಿದ್ದ ಆ ಯುವತಿಯ ಮನೆಯನ್ನು ತಲುಪಿದಾಗ, ಆ ಯುವತಿಯ ತಾಯಿಯ ಸ್ಥಿತಿಯು ಬಹು ಚಿಂತಾಜನಕವಾಗಿತ್ತಂತೆ. ಡಾಕ್ಟರು ತಮ್ಮ ಪ್ರಯಾಣದ ವಿಚಾರವನ್ನೇ ಮರೆತು ರೋಗಿಗೆ ಬೇಕಾದ ಪ್ರಥಮ ಚಿಕಿತ್ಸೆ ಕೊಟ್ಟು, ಆಕೆಯನ್ನು ತಮ್ಮ ಆಸ್ಪತ್ರೆಗೆ ಕರೆದೊಯ್ದು ಅಡ್ಮಿಟ್ ಮಾಡಿ ಚಿಕಿತ್ಸೆ ನೀಡಿದರಂತೆ. ರೋಗಿ ಆ ದಿನ ಸಾಯಂಕಾಲ ಹೊತ್ತಿಗೆ ಸ್ವಲ್ಪ ಸುಧಾರಿಸಿಕೊಂಡರಂತೆ. ಅಂತೂ, ಆ ದಿನ ಡಾಕ್ಟರಿಗೆ ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣ ತಲುಪಲಾಗದೆ ಅವರ ಅಂದಿನ ಪ್ರಯಾಣ ರದ್ದಾಗಲೇಬೇಕಾಯಿತು.

ಆ ಯುವತಿಯ ಹಠ ಸ್ವಭಾವವನ್ನು ಶಪಿಸುತ್ತಾ, ಆ ದಿವಸ ಡಾ.ಶರ್ಮಾ ಅವರು ತನ್ನ ಡ್ಯೂಟಿಗೆ ಮರಳಿದರಂತೆ. ಅಂತೂ, ಅವರ ವಿದೇಶ ಪ್ರಯಾಣ ರದ್ದಾಗಿತ್ತು.

ಆ ಬಡ ಯುವತಿಯ ತಾಯಿ ಅಂದು ಸಂಜೆಯ ಹೊತ್ತಿಗೆ ಪ್ರಾಣಾಪಾಯದಿಂದ ಪಾರಾಗಿ ಬಿಟ್ಟರು. ರೋಗಿಯ ಬಳಿಯಲ್ಲಿ ಅಂದಿನ ಚಿಕಿತ್ಸೆಗೆ ತಗಲಿದ ಖರ್ಚು ವೆಚ್ಚ ಭರಿಸಲೂ ಹಣ ಇದ್ದಿಲ್ಲವಂತೆ. ಡಾಕ್ಟರು ಅಂದಿನ ಆಸ್ಪತ್ರೆ ಬಿಲ್ಲನ್ನು ಕೂಡಾ ಮಾಫಿ ಮಾಡಿಸಬೇಕಾಯಿತಂತೆ.

ಮರುದಿನ ಡಾ. ಶರ್ಮಾ ಅವರು ತಮ್ಮ ಬಂಗಲೆಯಲ್ಲಿ ಕುಳಿತು ಬೆಳಗಿನ ಬೆಳಗಿನ ಪೇಪರ್ ನೋಡುತ್ತಾರೆ ಅವರು ಪ್ರಯಾಣಿಸಬೇಕಿದ್ದ ಅಂತಾರಾಷ್ಟ್ರೀಯ ವಿಮಾನ ಸಮುದ್ರಕ್ಕೆ ಬಿದ್ದು ಎಲ್ಲಾ ಪ್ರಯಾಣಿಕರೂ ಸತ್ತಿದ್ದಾರೆ…! ಎಂಬ ಸುದ್ದಿ ಇತ್ತಂತೆ.

***

ಅದೇ ದಿನ ಡಾ.ಶರ್ಮಾ ಅವರು ನೇರವಾಗಿ ಆ ಯುವತಿಯ ತಾಯಿಯ ಬಳಿಗೆ ಹೋಗಿ ತಾವು ದೊಡ್ಡ ಮನಸ್ಸು ಮಾಡಿ, ತಮ್ಮ ಮಗಳನ್ನು ನನಗೆ ಮದುವೆ ಮಾಡಿ ಕೊಡಬೇಕು ಎಂದು ವಿನಂತಿಸಿದರಂತೆ.

ಅದೇ ರೀತಿ ಬಹಳ ನಿರಾಡಂಬರವಾಗಿ ಅವರ ಮದುವೆಯೂ ನಡೆಯಿತಂತೆ. ಡಾ.ಶರ್ಮಾ ದಂಪತಿಗಳು ಅನ್ಯೋನ್ಯವಾಗಿ ಬಹುಕಾಲ ಸುಖವಾಗಿ ಸಂಸಾರ ಮಾಡಿದರು. ಇಂದು ಆ ದಂಪತಿಗಳು ತೀರಿಹೋಗಿ ಬಹಳ ವರ್ಷಗಳಾಗಿವೆ.

***

ಯುವತಿಯ ಆರ್ತಾಲಾಪವು ಡಾ.ಶರ್ಮಾ ಅವರ ಪ್ರಾಣವನ್ನು ಉಳಿಸಿದ ಸಂಗತಿ ಮತ್ತು ಅವರು ಸುಖೀ ಸಂಸಾರಿಗಳಾದ ಕಥೆ ನಮ್ಮ ಊರಿನಲ್ಲಿ ಇಂದಿಗೂ ಜನಜನಿತವಾಗಿದೆ.

(ನಮಗೆ ಆಪ್ತರಾದ, ಡಾಕ್ಟರರ ನಿಜ ನಾಮಧೇಯವನ್ನು ಬದಲಾಯಿಸಿ ಬರೆಯಲಾಗಿದೆ.)