ನಾನು ಆರನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ಜೊತೆಗೆ ಓದುತ್ತಿದ್ದ, ಆಟೋಟಗಳಲ್ಲಿ ಚುರುಕಾಗಿದ್ದ ಗಂಡುಮಕ್ಕಳೆಲ್ಲಾ ಆಗಲೇ ಸೈಕಲ್ ಸವಾರಿ ಮಾಡಲು ಕಲಿತಿದ್ದರು. ನನ್ನ ಅಣ್ಣ ನರಹರಿಯ ಹತ್ತಿರ ಹೊಸಾ ಈಸ್ಟರ್ನ್ ಸ್ಟಾರ್ ಸೈಕಲ್ ಇತ್ತು. ಆದರೆ ಅದು ೨೨ ಇಂಚು ಸೈಜಿನ ಎತ್ತರದ ದೊಡ್ಡ ಸೈಕಲ್. ನಾನು ಆ ಸೈಕಲ್‌ನಲ್ಲಿ ಬ್ಯಾಲೆನ್ಸ್ ಕಲಿಯ ಹೋಗಿ ಬೀಳಿಸಿ ಹಾಳುಮಾಡುತ್ತೇನೆಂದು ಅದನ್ನು ಅವನು ನನಗೆ ಕೊಡುತ್ತಿರಲಿಲ್ಲ.

ನಮ್ಮ ಮನೆಯ ಹತ್ತಿರ ರಾಮ ಎಂಬ ಲೋಕಲ್ ರೌಡಿಯೊಬ್ಬ ಹೊಸದಾಗಿ ಸೈಕಲ್ ಅಂಗಡಿ ತೆರೆದ. ಅವನಲ್ಲಿ ಎಲ್ಲಾ ಸೈಜಿನ ಸೈಕಲುಗಳು ಬಾಡಿಗೆಗೆ ದೊರಕುತ್ತಿದ್ದುವು. ಬಾಡಿಗೆ ಒಂದು ಗಂಟೆಗೆ ಬರೇ ಎರಡು ಆಣೆ ಮಾತ್ರ. ಆದರೆ ಆ ಮೊತ್ತವೇ ಪಾಕೆಟ್ ಮನಿ ಪದ್ಧತಿ ಇಲ್ಲದ ನಮಗೆ ದೊಡ್ಡ ಮೊತ್ತವಾಗಿತ್ತು. ಅದಲ್ಲದೇ, ರೌಡಿ ರಾಮನು ಸೈಕಲ್ ಹೊಡೆಯಲು ಬರದ ಹುಡುಗರಿಗೆ ಸೈಕಲ್ ಬಾಡಿಗೆಗೆ ಕೊಡುತ್ತಿರಲಿಲ್ಲ. ಪ್ರತೀ ಬಾಡಿಗೆದಾರ ಹುಡುಗನೂ ರೌಡಿ ರಾಮನ ಎದುರು ಸೈಕಲ್ ಸವಾರಿ ಮಾಡಿ ತೋರಿಸಿಯೇ ಅವನಿಂದ ಸೈಕಲ್ ಪಡೆಯಬೇಕಾಗಿತ್ತು.

ಸೈಕಲ್ ಕೊಡುವಾಗ ಆತನು ಕಣ್ಣು ಕೆಂಪಗೆ ಮಾಡಿ ಇದರಲ್ಲಿ ಯಾರಿಗೂ ಸೈಕಲ್ ಹೊಡೆಯಲು ಕಲಿಸಬೇಡ. ನನ್ನ ಬಾಡಿಗೆಯ ಸೈಕಲುಗಳು ಎಲ್ಲಾದರೂ ಅಡ್ಡ ಬಿದ್ದರೆ, ಅವನ್ನು ನೋಡಿದ ಕೂಡಲೇ ನನಗೆ ಗೊತ್ತಾಗುತ್ತದೆ. ನನ್ನ ಸೈಕಲುಗಳಿಗೆ ಏನಾದರೂ ಪೆಟ್ಟುಮಾಡಿ ತಂದರೆ, ನಾನು ನಿಮ್ಮ ಮನೆಗೆ ಬಂದು ಹೊಸ ಸೈಕಲ್ ಕ್ರಯ ವಸೂಲಿ ಮಾಡುತ್ತೇನೆ ಎಂದು ಹೆದರಿಸಿಯೇ ಹುಡುಗರಿಗೆ ಬಾಡಿಗೆಗೆ ಕೊಡುತ್ತಿದ್ದ.

ನನ್ನ ಸ್ನೇಹಿತನಾದ ಕಲ್ಮಾಡಿ ರವಿ ಶ್ರೀಮಂತ ಮನೆತನದ ಹುಡುಗ. ಅವನು ರಜಾಕಾಲದಲ್ಲಿ ಅವನ ಮದರಾಸಿನ ಅಕ್ಕನ ಮನೆಯಲ್ಲಿದ್ದ ಚಿಕ್ಕ ಸೈಕಲಿನಲ್ಲಿ ಸ್ವಲ್ಪಮಟ್ಟಿಗೆ ಸೈಕಲ್ ಬ್ಯಾಲೆನ್ಸ್ ಕಲಿತಿದ್ದ. ಆತನಿಗೆ ಮನೆಯಲ್ಲಿ ಸಾಕಷ್ಟು ಪಾಕೆಟ್ ಮನಿ ಕೂಡಾ ಸಿಗುತ್ತಿತ್ತು. ಅವನನ್ನು ಹೊಗಳಿ ಪುಸಲಾಯಿಸಿ ರವೀ, ನೀನು ನನಗೆ ಒಂದು ಉಪಕಾರ ಮಾಡಲೇಬೇಕು, ನಮ್ಮ ಕ್ಲಾಸಿನಲ್ಲಿ ನಾವೇ ಆಟಗಳಲ್ಲಿ ಬಹಳ ಚುರುಕಾಗಿದ್ದು ಪಾಠಗಳಲ್ಲಿ ಅಷ್ಟಕ್ಕಷ್ಟೇ ಎನ್ನಿಸಿರುವ ಹುಡುಗರು. ನಮ್ಮ ಗುಂಪಿನ ಎಲ್ಲಾ ಹುಡುಗರು ಅದಾಗಲೇ ಸೈಕಲ್ ಕಲಿತುಬಿಟ್ಟಿದ್ದಾರೆ. ನಮ್ಮ ಗುಂಪಿನಲ್ಲಿ ನಾನೊಬ್ಬನೇ ಈಗ ಸೈಕಲ್ ಕಲಿಯಲು ಬಾಕಿ ಉಳಿದವನು. ನಮ್ಮ ಕ್ಲಾಸಿನಲ್ಲಿ ಓದಲು ಮಾತ್ರ ಲಾಯಕ್ಕಿದ್ದ ಹುಡುಗರಲ್ಲಿ ಕೆಲವರು ಇನ್ನೂ ಸೈಕಲ್ ಕಲಿತಿಲ್ಲ. ಅವರು ನಮ್ಮೊಡನೆ ಆಟಕ್ಕೂ ಬರುವುದಿಲ್ಲ. ಅವರೆಲ್ಲಾ ಕ್ಲಾಸಿನ ಹೆಣ್ಣುಮಕ್ಕಳೊಂದಿಗೆ ಕಲ್ಲಾಟ, ಕವಡೆ ಆಟ, ಚೌಕಾಬಾರ ಆಟ ಆಡಲು ಮಾತ್ರ ಲಾಯಕ್ಕು. ಧೈರ್ಯವಂತ ಹುಡುಗರ ಟೀಮ್ ಎಂದು ಎನ್ನಿಸಿಕೊಂಡು ಪ್ರಸಿದ್ಧವಾದ ನಮ್ಮ ಕ್ರಿಕೆಟ್ ಟೀಮಿನಲ್ಲಿ ಈಗ ನಾನೊಬ್ಬನು ಮಾತ್ರ ಸೈಕಲ್ ಕಲಿತಿಲ್ಲ. ಇದರಿಂದಾಗಿ, ನನಗೆ ಒಂದು ತರಹದ ಅಪಮಾನದ ಭಾವನೆ ಬರುತ್ತಾ ಇದೆ. ನೀನು ನನಗೆ ಸೈಕಲ್ ಕಲಿಸಿಕೊಟ್ಟರೆ, ನಾನು ನಿನಗೆ ಶ್ರೀಕೃಷ್ಣ ಮಠದ ಸರೋವರದಲ್ಲಿ ಈಜು ಹೊಡೆಯಲು ಕಲಿಸುವೆ ಎಂಬ ಭರವಸೆಯನ್ನು ಕೂಡಾ ನೀಡಿದೆ. ರವಿಯ ತಾಯಿಗೆ ನೀರೆಂದರೆ ಬಹಳ ಹೆದರಿಕೆ. ಅವರು ಅವನನ್ನು ಎಂದೂ ಈಜು ಕಲಿಯಲು ಕಳುಹಿಸಿದವರಲ್ಲ. ಆದರೂ, ಈಜು ಕಲಿಯಬೇಕು ಎಂಬ ಆಸೆಯೇ ಅವನನ್ನು ನನಗೆ ಸೈಕಲ್ ಕಲಿಸುವಂತೆ ಪ್ರೇರೇಪಿಸಿತು.

ನಾಲ್ಕಾರು ದಿನ ರವಿ ತನ್ನ ಖರ್ಚಿನಲ್ಲೇ ರಾಮಣ್ಣನ ಅಂಗಡಿಯಿಂದ ಹೊಸದಾದ ಪುಟ್ಟ ಸೈಕಲ್ ತಂದು ನನಗೆ ಸೈಕಲ್ ಸವಾರಿ ಮಾಡಲು ಕಲಿಸಿಯೇಬಿಟ್ಟ. ನನಗೆ ಬ್ಯಾಲೆನ್ಸ್ ಚೆನ್ನಾಗಿ ಬರುವ ತನಕ ಆ ಪುಟ್ಟ ಸೈಕಲಿನ ಸೀಟನ್ನು ಬಲವಾಗಿ ಹಿಡಿದು, ನನ್ನ ಹಿಂದೆ ಓಡಿಯೇ ಬರುತ್ತಿದ್ದ. ಕೊನೆಗೊಮ್ಮೆ, ಮಾರ್ಗದ ಎಡಭಾಗದಲ್ಲಿ ಧೈರ್ಯವಾಗಿ, ಪುಟ್ಟ ಸೈಕಲನ್ನು ಸವಾರಿಮಾಡುತ್ತಾ ಹೋಗುವಷ್ಟು ನನಗೆ ಬ್ಯಾಲೆನ್ಸ್ ಬಂತು. ನನ್ನ ಸೈಕಲ್ಲಿಗೆ ಏನಾದರೂ ಅಡ್ಡಬಂದರೆ, ಬ್ರೇಕ್ ಹಾಕಿ ಸೈಕಲ್ ನಿಲ್ಲಿಸಿ, ನೆಲಕ್ಕೆ ಬಲವಾಗಿ ಪಾದಗಳನ್ನು ಊರಿ ನಿಂತುಬಿಡುತ್ತಿದ್ದೆ. ಸದಾ ಪುಟ್ಟ ಸೈಕಲ್ ಮಾತ್ರ ಸವಾರಿ ಮಾಡುತ್ತಿದ್ದ ನಮಗೆ, ಪೆಡಲಿಗೆ ಕಾಲುಕೊಟ್ಟು ಎತ್ತರದ ಸೈಕಲ್ ಹತ್ತುವ ವಿದ್ಯೆ ಇನ್ನೂ ಕರಗತವಾಗಿರಲಿಲ್ಲ. ಆ ವಿದ್ಯೆಯು ನನ್ನ ಗುರುವಾದ ಕಲ್ಮಾಡಿ ರವಿಗೂ ಆ ತನಕ ಒಲಿದಿರಲಿಲ್ಲ. ಆತನು ನನಗೆ ಅದನ್ನು ಹೇಗೆ ಹೇಳಿಕೊಟ್ಟಾನು?

ಈ ರೀತಿ ಸಾಧಾರಣವಾಗಿ ಸೈಕಲ್ ಸವಾರಿ ಮಾಡಲು ಕಲಿತ ಮೇಲೆ, ನಾನು ರವಿಯನ್ನು ಈಜು ಕಲಿಯಲು ಆಹ್ವಾನಿಸಿದೆ. ಆದರೆ, ಅವನ ತಾಯಿ ಅವನಿಗೆ ಈಜು ಕಲಿಯಲು ಅನುಮತಿ ಕೊಡಲೇ ಇಲ್ಲ.

ಆತ ಊರಿನ ಪ್ರತಿಷ್ಠಿತ ಮನೆತನಗಳಲ್ಲಿ ಒಂದಾದ ಕಲ್ಮಾಡಿ ರಾಯರ ಮನೆತನದವನು. ನಾನು ಕೂಡಾ ಸಾಕಷ್ಟು ಪ್ರಸಿದ್ಧವಾದ ಪೆಜತ್ತಾಯರ ಮನೆತನದವನು. ನಾವುಗಳು ಯಾರ ಗಮನಕ್ಕೂ ಬರದಂತೆ ಊರಿನ ಮಧ್ಯೆ ಇರುವ ದೇವಸ್ಥಾನದ ಸರೋವರದಲ್ಲಿ ಈಜಲು ಉಡುಪಿಯಂತಹಾ ಊರಿನಲ್ಲಿ ಸಾಧ್ಯವೇ ಇರಲಿಲ್ಲ. ಶಾಲೆಗೆ ರಜೆ ಇರುವ ದಿನಗಳಲ್ಲಿ ನಾವು ಶ್ರೀಕೃಷ್ಣ ದೇವಸ್ಥಾನದ ಮಧ್ವ ಸರೋವರದಲ್ಲಿ ಈಜಾಡಲು ಹೋದರೆ, ನಮ್ಮ ನೆರೆಕರೆಯ ಯಾರಾದರೂ ಒಬ್ಬರು ನಮ್ಮನ್ನು ನೋಡಿ ನಮ್ಮ ಮನೆಯವರಿಗೆ ಈ ವಿಚಾರವನ್ನು ತಿಳಿಸಿಯೇ ತಿಳಿಸುತ್ತಿದ್ದರು. ನನಗೆ ಆಗಲೇ ಈಜು ಬರುತ್ತಿದ್ದುದರಿಂದ, ನನಗೆ ಮನೆಯಲ್ಲಿ ಯಾರೂ ಏನೂ ಹೇಳುತ್ತಿರಲಿಲ್ಲ. ಆದರೆ, ಇಂತಹಾ ಸಂಗತಿ ರವಿಯ ತಾಯಿಯ ಕಿವಿಗೆ ಬಿದ್ದರೆ, ಅವರು ಖಂಡಿತವಾಗಿ ಅವನನ್ನು ಸುಮ್ಮನೆ ಬಿಡುತ್ತಾ ಇರಲಿಲ್ಲ. ಅಂತೂ, ಅವನ ಈಜು ಕಲಿಯುವ ಆಸೆ ಕೈಗೂಡಲೇ ಇಲ್ಲ.

ಸ್ವಲ್ಪ ದಿನಗಳಲ್ಲೇ ನಾವು ನಮ್ಮ ಅಣ್ಣಂದಿರನ್ನು ಗೋಗರೆದು ಅವರುಗಳ ದೊಡ್ಡ ಸೈಜಿನ ಸೈಕಲ್ ಹೊಡೆಯಲು ಶುರುಮಾಡಿದೆವು. ನನ್ನ ಅಣ್ಣ ನರಹರಿ ಮತ್ತು ರವಿಯ ಅಣ್ಣ ಶ್ರೀನಿವಾಸಣ್ಣ, ಇವರು ನಮಗೆ ಪ್ರತೀ ಸಾಯಂಕಾಲ ಅವರು ಹೈಸ್ಕೂಲಿನಿಂದ ಮನೆಗೆ ಮರಳಿದ ಮೇಲೆ, ಉದಾರಬುದ್ಧಿಯಿಂದ ಸೈಕಲ್ಲುಗಳನ್ನು ಕೊಡಹತ್ತಿದರು. ಆಗ ನಮ್ಮ ಸಂತೋಷಕ್ಕೆ ಪಾರವೇ ಇಲ್ಲ..!!

ಆ ದೊಡ್ಡ ಸೈಕಲ್ಲುಗಳನ್ನು ಸ್ವಶಕ್ತಿಯಿಂದ ಏರಿ ಸವಾರಿ ಮಾಡಲು ನಮಗಿಬ್ಬರಿಗೂ ಪೆಡಲ್ ಬ್ಯಾಲೆನ್ಸ್ ಬರುತ್ತಿರಲಿಲ್ಲ. ಅತೀ ಚಿಕ್ಕದಾದ ರಾಮಣ್ಣನ ಬಾಡಿಗೆಯ ಸೈಕಲಿನಲ್ಲಿ ಪೆಡಲ್ ಬ್ಯಾಲೆನ್ಸ್ ಕಲಿಯುವುದು ನಮಗೆ ಸಾಧ್ಯವಾಗಿರಲಿಲ್ಲ. ನಮ್ಮ ರವಿಗೆ ದೊಡ್ಡ ಸೈಕಲ್‌ಗಳಲ್ಲಿ ಒಂದನ್ನು ಸವಾರಿ ಮಾಡಿತೋರಿಸಿ ಬಾಡಿಗೆಗೆ ಪಡೆಯುವ ಧೈರ್ಯ ಸುತಾರಾಂ ಇರಲಿಲ್ಲ.   ಆದರೂ, ನಾವಿಬ್ಬರೂ ನಮ್ಮ ಅಣ್ಣಂದಿರ ದೊಡ್ಡ ಸೈಕಲ್ಲುಗಳನ್ನು ಏರುವ ಹಾಗೂ ಇಳಿಯುವ ಉಪಾಯವನ್ನು ಪೆಡಲ್ ಬ್ಯಾಲೆನ್ಸ್ ಬಳಸದೇ ನಿಭಾಯಿಸುತ್ತಿದ್ದೆವು. ಯಾವುದಾದರೂ ಮೋರಿ (ಕಲ್ವರ್ಟ್) ಅಥವಾ ಲೈಟುಕಂಬದ ಬದಿಯಲ್ಲಿ ಸೈಕಲ್ ನಿಲ್ಲಿಸಿ ಸೈಕಲ್ಲಿನ ಬಾರ್ ಮೇಲೆ ಭದ್ರವಾಗಿ ಕುಳಿತು, ತದನಂತರ ಪೆಡಲ್ ತುಳಿಯುತ್ತಾ ನಮ್ಮ ಸೈಕಲ್‌ಗಳನ್ನು ಮುಂದಕ್ಕೆ ಓಡಿಸುತ್ತಿದ್ದೆವು. ಸೈಕಲ್ ಸೀಟ್ ಮೇಲೆ ಏರಿ ಕೂರುವಷ್ಟು ನಾವು ಎತ್ತರವಾಗಿ ಬೆಳೆದಿರಲಿಲ್ಲ.  ಸೈಕಲ್‌ಗಳ ರೋಲ್ ಮೇಲೆ ಕುಳಿತೇ ಬಹಳ ಟ್ರಾಫಿಕ್ ಇಲ್ಲದ ಉಡುಪಿ ಪೇಟೆಯ ರಸ್ತೆಗಳಲ್ಲಿ ನಾವು ಸೈಕಲ್ ಸವಾರಿ ಮಾಡುತ್ತಿದ್ದೆವು. ಎಲ್ಲಾದರೂ ಇಳಿಯಬೇಕಾಗಿ ಬಂದರೆ, ಹತ್ತಿರದ ಮೋರಿ ಅಥವಾ ಲೈಟುಕಂಬದ ಸಹಾಯ ಪಡೆದು ಸೈಕಲ್ಲಿನಿಂದ ಇಳಿಯುತ್ತಿದ್ದೆವು. ಇದೊಂದು ದೊಡ್ಡ ಹ್ಯಾಂಡಿಕ್ಯಾಪ್ ಆಗಿ ನಮಗೆ ಆಗ ತೋರಿಬರಲಿಲ್ಲ.

ನಾನು ಮತ್ತು ರವಿ ದಿನದಿನವೂ ಸ್ವಲ್ಪ ಸ್ವಲ್ಪ ಹೆಚ್ಚಿನ ದೂರಕ್ಕೆ ಸುತ್ತಾಡಿ ನಾವು ನಮ್ಮ ಸೈಕಲ್ ಸವಾರಿಯಲ್ಲಿನ ಆತ್ಮಸ್ಠೈರ್ಯ ಹೆಚ್ಚಿಸಿಕೊಳ್ಳುತ್ತಾ ಬಂದೆವು. ಉಡುಪಿಯ ಪೇಟೆಯಲ್ಲಿ ಲೈಟುಕಂಬ ಮತ್ತು ಮೋರಿಗಳು ಎಲ್ಲೆಲ್ಲೂ ಇದ್ದುವು. ಆದುದರಿಂದ, ನಾವುಗಳು ಸೈಕಲ್ ಹತ್ತಲು ಮತ್ತು ಇಳಿಯಲು ಉಪಯುಕ್ತವಾದ ಪೆಡಲ್ ಬ್ಯಾಲೆನ್ಸ್ ವಿಧಾನವನ್ನು ಕಲಿಯುವ ಆಲೋಚನೆಯನ್ನೇ ಮಾಡದೆ, ಪೇಟೆ ಸುತ್ತುವಷ್ಟು ಧೈರ್ಯ ತಂದುಕೊಂಡೆವು. ಉಡುಪಿ ಪೇಟೆಯಲ್ಲಿ ಲೈಟುಕಂಬ ಮತ್ತು ಮೋರಿಗಳಿಗೇನೂ ಬರ ಇರಲಿಲ್ಲವಾದ ಕಾರಣ, ನಾವು ಇದೇ ರೀತಿಯಲ್ಲಿ ಹಲವು ತಿಂಗಳುಗಳ ಕಾಲ ಸಾಯಂಕಾಲ ಹೊತ್ತು ಸೈಕಲ್ ಸವಾರಿ ಮಾಡುತ್ತಾ ಕಳೆದೆವು. ಹೀಗಿರುವಾಗ, ಬಂತು ನೋಡಿ ಒಂದು ದಿನ ಗಂಡಾಂತರ…!!!

ನಮ್ಮ ಮನೆಗಳಿಂದ ಅರ್ಧ ಮೈಲು ದೂರದ ಸೈಂಟ್ ಸಿಸಿಲೀಸ್ ಕಾನ್ವೆಂಟಿನ ಹೈಸ್ಕೂಲ್ ವಿಭಾಗದ ಹುಡುಗಿಯರು ತಮ್ಮ ಹೈಸ್ಕೂಲಿನ ಸ್ಕೂಲ್‌ಡೇ ಸಲುವಾಗಿ ತಾಲೀಮು ಶುರುಮಾಡಿದ್ದರು.  ದಿನದ ತಾಲೀಮು ಮುಗಿದ ನಂತರ ಅದರಲ್ಲಿ ಭಾಗವಹಿಸಿದ ಹುಡುಗಿಯರೆಲ್ಲಾ ಸಾಯಂಕಾಲದ ಆರು ಗಂಟೆಯ ಸಮಯಕ್ಕೆ ಒಮ್ಮೆಲೇ ಶಾಲೆಯಿಂದ ಹೊರಬಿದ್ದು ತಮ್ಮತಮ್ಮ ಮನೆಗಳಿಗೆ ಹೊರಡುತ್ತಿದರು.

ಸಾಮಾನ್ಯವಾಗಿ ನಮ್ಮ ರಾಜ್ಯದ ಹೈಸ್ಕೂಲುಗಳಲ್ಲಿ ಓದುವ ಹುಡುಗಿಯರಿಗೆ ಒಂದು ಪ್ರಿಯವಾದ ಯೂನಿವರ್ಸಲ್ ಚಾಳಿ ಇದೆ. ಈ ಚಾಳಿಯು ಈ ದಿನಗಳಲ್ಲೂ ಚಾಲ್ತಿಯಲ್ಲಿ ಇರುವುದು ನಿಮಗೆ ಕಂಡು ಬಂದರೆ ಅಚ್ಚರಿ ಪಡಬೇಡಿ. ಇದಕ್ಕೆ ಕಾರಣ ನಿಚ್ಚಳವಾಗೇ ಇದೆ. ಅಂದಿನ ಕಿಶೋರಿಯರೇ ಇಂದಿನ ಮಾತೆಯರು..! ತಾಯಂದಿರ ಈ ಚಾಳಿ ರಕ್ತಗತವಾಗಿ ಮಗಳಂದಿರಿಗೆ ಹರಿದು ಬರುವುದು ಸಹಜವಲ್ಲವೇ? ಈ ಚಾಳಿ ಏನೆಂದರೆ, ನಾಲ್ಕಾರು ಮಂದಿ ಹೈಸ್ಕೂಲ್ ಹುಡುಗಿಯರು ಮಾತನಾಡಿಕೊಳ್ಳುತ್ತಾ, ಈ ಲೋಕವನ್ನೇ ಮರೆತು ತಮ್ಮ ಹರಟೆಯಲ್ಲೇ ತಲ್ಲೀನರಾಗಿ, ಮಾರ್ಗದ ಅಗಲಕ್ಕೆ ಗೋಡೆ ಕಟ್ಟುವ ರೀತಿಯಲ್ಲಿ (ಅಂದರೆ Extended Lineನಲ್ಲಿ) ನಡೆಯುವುದು. ಈ ರೀತಿ ಹರಟುತ್ತಾ ಸಾಗುವಾಗ ಅವರಿಗೆ ಮಾರ್ಗದಲ್ಲಿ ಬರುವ ವಾಹನಗಳ ಪರಿವೆಯೇ ಇರುವುದಿಲ್ಲ!

ಆ ದಿನ ಸಂಜೆ ನಾನು ಮತ್ತು ರವಿ, ನಮ್ಮ ನಮ್ಮ ಅಣ್ಣಂದಿರ ಸೈಕಲ್ಲುಗಳನ್ನು ಏರಿ ಸ್ವಲ್ಪ ಸ್ಪೀಡ್ ಆಗಿಯೇ ಕಾನ್ವೆಂಟ್‌ರೋಡಿನ ಇಳಿಜಾರಿನಲ್ಲಿ ಬರುತ್ತಿದ್ದೆವು. ಆಗ ತಾನೇ ಮಾರ್ಗದಲ್ಲಿ ಎಸ್.ಎಸ್.ಎಲ್.ಸಿ. ಕ್ಲಾಸಿನ ಹುಡುಗಿಯರ ಒಂದು ತಂಡ ತಮ್ಮ ಸ್ಕೂಲ್ ಡೇ ಕಾರ್ಯಕ್ರಮಗಳ ರಿಹರ್ಸಲ್ ಮುಗಿಸಿ ಮನೆಗೆ ಹೊರಟಿತ್ತು. ಅವರು ಮಾರ್ಗದಲ್ಲಿ ಅವರವರ ಮಧ್ಯೆ ಆರು ಇಂಚಿನ ಗ್ಯಾಪ್ಕೂಡಾ ಬಿಡದೆ ಒತ್ತೊತ್ತಾಗಿ ನಡೆಯುತ್ತಿದ್ದರು. ಮಾತುಗಳ ನಡುವೆ ಅವರಿಗೆ ನಮ್ಮ ಸೈಕಲ್ಲುಗಳ ಬಡಪಾಯಿ ಬೆಲ್ಗಳ ಸದ್ದು ಕೇಳಿಸಲೇ ಇಲ್ಲ.

ನಾನು ಮತ್ತು ರವಿ, ಅಯ್ಯೊ! ಅಯ್ಯೋ!! ಏಳಿ, ಏಳಿ!!………ಬಾಜೂ, ಬಾಜೂ! ಎಂದೇನೋ ಜೋರಾಗಿ ಅರಚಿಕೊಂಡೆವು. ಆದರೆ, ಅದಾವುದೂ ಅವರಿಗೆ ನಾಟಿದಂತೆ ಕಾಣಲಿಲ್ಲ. ನಾವು ಪೂರ್ತಿಯಾಗಿ ಬ್ರೇಕ್ ಹಾಕಿದರೆ, ನಾವಿಬ್ಬರೂ ಎತ್ತರವಾದ ಸೈಕಲ್ಲುಗಳ ಮೇಲಿಂದ ಟಾರ್ ರಸ್ತೆಯ ಮೇಲೆ ಬಿದ್ದು ಪೆಟ್ಟು ಮಾಡಿಕೊಳ್ಳುತ್ತೇವೆ! ನಮಗೆ ಸೈಕಲ್‌ಗಳಿಂದ ಇಳಿಯಲು ಗೊತ್ತಿಲ್ಲ! ಮುಂದೆ ಹೋದರೆ ಸೈಕಲ್ಲುಗಳು ಆ ಹುಡುಗಿಯರಿಗೆ ಡ್ಯಾಶ್ ಹೊಡೆಯುತ್ತವೆ. ಅಷ್ಟರಲ್ಲಿ, ರವಿ ಹೋ…… ಎಂದು ಅರಚುತ್ತಾ ಒಬ್ಬಳು ಹುಡುಗಿಗೆ ಡ್ಯಾಷ್ ಹೊಡೆದೇಬಿಟ್ಟ! ಕೆಳಗೆ ಬೀಳುವಾಗ ಪೆಟ್ಟಾಗದಂತೆ ಹ್ಯಾಂಡಲ್ ಬಾರಿನ ಮೇಲಿದ್ದ ಕೈಗಳನ್ನು ಬಿಟ್ಟು ಆತನ ಎಡಪಕ್ಕದಲ್ಲಿ ನಡೆಯುತ್ತಿದ್ದ ಹುಡುಗಿಯ ಹೆಗಲ ಮೇಲೆ ಭಾರಹಾಕಿ ನೆಲಕ್ಕೆ ಮುಗ್ಗರಿಸಿದ! ಆತನ ಬೆನ್ನಿಗೇ ನಾನು ಕೂಡಾ ಅವನಂತೆಯೇ ಇನ್ನೊಬ್ಬಾಕೆಗೆ ಡ್ಯಾಷ್ ಹೊಡೆದು, ನನ್ನ ಬಲಪಕ್ಕಕ್ಕೆ ನಡೆಯುತ್ತಾ ಇದ್ದಾಕೆಯ ಮೇಲೆ ಭಾರಹಾಕಿ ಮುಗ್ಗರಿಸಿದೆ. ನಮ್ಮ ಸೈಕಲ್ಲುಗಳು ಧರಾಶಾಯಿಗಳಾದುವು.

ಇದ್ದಕ್ಕಿದ್ದಂತೆಯೆ ತಮ್ಮ ಮೇಲೆ ಎರಗಿದ ನಮ್ಮನ್ನು ಕಂಡು ಆ ಹುಡುಗಿಯರಿಗೂ ಗಾಬರಿ ಆಯಿತು. ಅವರಿಗೆ ನಮಗೆ ಎರಡು ಬಿಗಿಯುವಷ್ಟು ಸಿಟ್ಟು ಬಂದರೂ, ನಮ್ಮ ವಾಮನಾವತಾರ ಕಂಡು, ನಾವು ಅವರನ್ನು ಛೇಡಿಸುವ ಪೈಕಿಯ ದೊಡ್ಡ ಹುಡುಗರಲ್ಲ ಎಂದು ಮನವರಿಕೆ ಮಾಡಿಕೊಂಡರು. ಆದರೂ, ಬೈಗಳ ಸುರಿಮಳೆಯೇ ನಮ್ಮ ಮೇಲೆ ಆಯಿತು. ಮಾನಗೆಟ್ಟ ಹುಡುಗರು, ನೀತಿಗೆಟ್ಟ ಹುಡುಗರು…. ಮರ್ಯಾದಿಯಿಲ್ಲದ ಹುಡುಗರು… ಎಂದು ಏನೇನೊ ಬೈಗಳುಗಳನ್ನು ತಮ್ಮ ಇಂಪಾದ ಕಂಠಗಳಿಂದ ನಮ್ಮ ಮೇಲೆ ಸುರಿಸಿದರು. ಸದ್ಯಕ್ಕೆ, ನಮಗೆ ಅವರು ಪೆಟ್ಟು ಕೊಡಲಿಲ್ಲ..!!

ನಾವು ಬದುಕಿದೆಯಾ ಬಡ ಜೀವವೇ..! ಎಂದುಕೊಳ್ಳುತ್ತಾ, ಕೆಳಗೆ ಬಿದ್ದಿದ್ದ ನಮ್ಮ ಸೈಕಲ್ಲುಗಳನ್ನು ಎತ್ತಿ ಜೋರಾಗಿ ನೂಕಿಕೊಂಡು ಓಡುತ್ತಾ ಸೈಕಲ್ ಹತ್ತಲು ಪ್ರಯತ್ನಿಸಿದೆವು. ಆಗ ಒಂದು ಪವಾಡವೇ ನಡೆಯಿತು, ನಮ್ಮ ಪಾಲಿಗೆ.

ಏನಾಶ್ಚರ್ಯ! ಕೆಲವೇ ಸೆಕೆಂಡುಗಳಲ್ಲಿ ನಾನು ಮತ್ತು ರವಿ ನಮ್ಮ ನಮ್ಮ ಸೈಕಲ್ಲುಗಳನ್ನು ಹೇಗೋ ಏರಿಬಿಟ್ಟು, ಅವರಿಂದ ದೂರಕ್ಕೆ ಶರವೇಗದಿಂದ ದೌಢಾಯಿಸುತ್ತಿದ್ದೆವು…!!! ಅದುವರೆಗೆ ನಮಗೆ ಒಲಿಯದ ಪೆಡಲ್ ಮೇಲೆ ಕಾಲಿಟ್ಟು ಸೈಕಲ್ ಏರುವ ವಿದ್ಯೆ ಆ ಪ್ರಾಣಾಂತಿಕ ಕ್ಷಣದಲ್ಲಿ ನಮಗಿಬ್ಬರಿಗೂ ಒಲಿದಿತ್ತು.

ಆ ಕೋಪಗೊಂಡ ಲಲನಾಮಣಿಯರ ತಂಡದಿಂದ ಬಹಳ ದೂರ ಸಾಗಿದ ಮೇಲೆ ನಾವಿಬ್ಬರೂ ಲೈಟುಕಂಬ ಅಥವಾ ಮೋರಿ ಇಲ್ಲದೆ ಅದು ಹೇಗೆ ಸೈಕಲ್ ಏರಿದೆವು? ಎಂದು ಆಶ್ಚರ್ಯಪಟ್ಟೆವು. ಬಹಳ ದೂರ ಸಾಗಿ ಅಲ್ಲಿ ಸಿಕ್ಕಿದ ಒಂದು ಮೋರಿಯ ಸಹಾಯದಿಂದ ಸೈಕಲ್ಲುಗಳಿಂದ ಕೆಳಗೆ ಇಳಿದೆವು. ಈಗ ಇನ್ನೊಮ್ಮೆ ಪ್ರಯತ್ನಿಸೋಣ ಎಂದು ಎಡಕಾಲನ್ನು ಪೆಡಲ್ ಮೇಲೆ ಇರಿಸಿ ಸೈಕಲ್ ಏರಲು ಪ್ರಯತ್ನ ಮಾಡುತ್ತಾ ಸ್ವಲ್ಪ ತಡವರಿಸಿದರೂ ಸಫಲರಾದೆವು. ಮರುದಿನ ನಾವಾಗಿಯೇ ಸೈಕಲ್‌ನಿಂದ ಇಳಿಯುವ ವಿದ್ಯೆಯನ್ನು ಕೂಡಾ ಕಲಿತುಬಿಟ್ಟೆವು.

ಹೀಗೆ, ನಮಗೇ ಆಶ್ಚರ್ಯಕರವಾದ ರೀತಿಯಲ್ಲಿ ಸೈಕಲ್ ಹತ್ತುವ ಮತ್ತು ಇಳಿಯುವ  ವಿದ್ಯೆಯು ನಮಗೆ ಕರಗತವಾಯಿತು. ಸೈಕಲ್ ಏರುವ ವಿದ್ಯೆಯನ್ನು ನಮಗೆ ಕರುಣಿಸಿದ ಆ ಹೈಸ್ಕೂಲ್ ಹುಡುಗಿಯರ ಗುಂಪಿಗೆ ನಾನು ಮತ್ತು ರವಿ ಇಂದಿಗೂ ಚಿರ‌ಋಣಿಗಳಾಗಿದ್ದೇವೆ.

* * *

ನೋಟ್ : ನನ್ನ ಸ್ನೇಹಿತ ಕಲ್ಮಾಡಿ ರವಿ ಇಂದು ಒಬ್ಬ ಜನಪ್ರಿಯ ಡಾಕ್ಟರಾಗಿ ದಕ್ಷಿಣಕನ್ನಡದ ಉಚ್ಚಿಲ ಎಂಬ ಊರಿನಲ್ಲಿ ನೆಲೆಸಿದ್ದಾನೆ.