ನನಗೆ ಆಗ ಸುಮಾರು ಹನ್ನೆರಡು ವರ್ಷ ಪ್ರಾಯ. ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ಆರನೇ ತರಗತಿಯಲ್ಲಿ ಓದುತ್ತಾ ಇದ್ದೆ. ಬಾಲ್ಯ ಕಳೆದು, ಬಾಲಕ ಅವಸ್ಥೆಯನ್ನು ನಾನು ಹೊಗುತ್ತಿದ್ದ ಕಾಲ ಅದು. ನಾನು ಆಗ ಪುರಾಣಕಥೆಗಳು, ಹಲವಾರು ಮಹಾತ್ಮರ ಜೀವನ ಚರಿತ್ರೆ ಮುಂತಾದುವನ್ನು ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದೆ. ಈ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಹಲವಾರು ಸಂಶಯದ ಸುಳಿಗಳೆದ್ದುವು. ನನ್ನ ಪ್ರಶ್ನೆಗಳನ್ನು ನನ್ನ ಶಾಲೆಯ ಮಾರಲ್ ಸೈನ್ಸ್ ಮಾಸ್ತರಾದ ಶ್ರೀ ಬಸಪ್ಪಶೆಟ್ಟರಲ್ಲಿ ಕೇಳಿದಾಗ, ನಿನ್ನ ಪ್ರಶ್ನೆಗಳು ನಿನ್ನ ಪ್ರಾಯದ ಅರಿವಿಗೆ ಮೀರಿದವು. ನೀನು ಈ ಧರ್ಮ ಸಂಶಯಗಳಿಗೆ ಉತ್ತರ ಬೇಕಾದರೆ ನೇರವಾಗಿ ಶಿರೂರು ಮಠದ ಸ್ವಾಮಿಗಳಾದ ಮಾನ್ಯ ಶ್ರೀ ಲಕ್ಷ್ಮೀಂದ್ರ ತೀರ್ಥಸ್ವಾಮಿಗಳ ಬಳಿ ಹೋಗಿ ಕೇಳು. ಅವರಿಂದ ನಿನ್ನ ಸಂಶಯಗಳು ಪರಿಹಾರ ಆಗುತ್ತವೆ ಎಂದರು.

ಆಗ ನಾನು ಅಳುಕುತ್ತಾ. ಸರ್, ನಾನು ಹನ್ನೆರಡು ವರ್ಷದ ಬಾಲಕ. ನಾನು ಉಡುಪಿಯ ರಜತ ಪೀಠದ ಸಂಸ್ಥಾನದ ಯತಿ ಒಬ್ಬರನ್ನು ಕಂಡು ನನ್ನ ಸಂಶಯಗಳನ್ನು ಪರಿಹಾರ ಮಾಡಿಕೊಳ್ಳುವುದು ಸಾಧ್ಯವೆ? ಎಂದು ಕೇಳಿದೆ.

ಆಗ ಬಸಪ್ಪ ಮಾಸ್ತರರು ನಾನು ಸ್ವಾಮೀಜಿ ಅವರಿಗೆ ಒಂದು ಕಾಗದ ಕೊಡುತ್ತೇನೆ. ನೀನು ಸದ್ರಿ ಕಾಗದವನ್ನು ಸಾಯಂಕಾಲ ಐದು ಗಂಟೆಯ ಹೊತ್ತಿಗೆ ಶಿರೂರು ಮಠಕ್ಕೆ ಹೋಗಿ ಅಲ್ಲಿನ ಆಫೀಸಿನಲ್ಲಿ ಕೊಟ್ಟು, ಬಸಪ್ಪಶೆಟ್ಟಿ ಮಾಸ್ತರರು ಈ ಕಾಗದವನ್ನು ಸ್ವಾಮೀಜಿ ಅವರಿಗೆ ಕೊಟ್ಟಿದ್ದಾರೆ, ಇದನ್ನು ದಯವಿಟ್ಟು ಸ್ವಾಮೀಜಿ ಅವರಿಗೆ ತಲುಪಿಸಿ ಎಂದು ಕೇಳಿಕೋ. ಸ್ವಾಮೀಜಿ ಅವರು ಈ ಪತ್ರ ನೋಡಿದೊಡನೆ ನಿನ್ನನ್ನು ಖಂಡಿತವಾಗಿ ಕಾಣುತ್ತಾರೆ ಎಂದರು. ಬಸಪ್ಪ ಮಾಸ್ತರರು ಕೂಡಲೇ ಒಂದು ಪತ್ರ ಬರೆದು ಒಂದು ಲಕೋಟೆಯಲ್ಲಿ ಹಾಕಿ ನನ್ನ ಕೈಗಿತ್ತರು. ನಾನು ಅದೇ ದಿನ ಆ ಪತ್ರವನ್ನು ಒಯ್ದು ಶಿರೂರು ಮಠದ ಆಫೀಸಿನಲ್ಲಿ ಕುಳಿತಿದ್ದ ಓರ್ವ ಗುಮಾಸ್ತರ ಕೈಯ್ಯಲ್ಲಿ ಕೊಟ್ಟೆನು. ಅವರು ನನಗೆ ಆಫೀಸಿನ ಪಕ್ಕದಲ್ಲಿದ್ದ ಬೆಂಚೊಂದನ್ನು ತೋರಿಸುತ್ತಾ, ಸ್ವಲ್ಪ ಹೊತ್ತು ಕುಳಿತಿರು, ಈಗ ಬರುತ್ತೇನೆ ಎನ್ನುತ್ತಾ ಮಠದ ಸ್ವಾಮಿಗಳ ವಸತಿಯ ಕೋಣೆಗಳ ಕಡೆಗೆ ನಡೆದರು. ಎರಡು ನಿಮಿಷಗಳಲ್ಲೇ ಆ ಗುಮಾಸ್ತರು ಬಂದು, ಸ್ವಾಮಿಗಳು ಸಿಂಹಾಸನ ಕೋಣೆಯಲ್ಲಿ ನಿನ್ನನ್ನು ಈಗ ಕಾಣುತ್ತಾರೆ. ನನ್ನೊಂದಿಗೆ ಬಾ! ಎಂದರು.

ಮಠದ ಚೌಕಿಯ ಎಡಬದಿಯ ಮೊದಲನೇ ಕೋಣೆಗೆ ನನ್ನನ್ನು ಕರೆದುಕೊಂಡು ಹೋದರು. ಸ್ವಾಮಿಗಳು ಭಕ್ತರನ್ನು ಭೆಟ್ಟಿಮಾಡುವ ಕೋಣೆಗೆ ಸಿಂಹಾಸನ ಎನ್ನುತ್ತಾರೆ ಎಂಬ ವಿಚಾರ ಉಡುಪಿಯಲ್ಲೆ ಬೆಳೆದವನಾದ ನನಗೆ ತಿಳಿದಿತ್ತು. ಸಿಂಹಾಸನದ ಕೋಣೆ ಅಂದಾಜು ಇಪ್ಪತ್ತು ಅಡಿ ಉದ್ದ ಹಾಗೂ ಹನ್ನೆರಡು ಅಡಿ ಅಗಲ ಇತ್ತು. ಕೆಂಪು ಸಿಮೆಂಟಿನ ನೆಲ ನುಣ್ಣಗೆ ಥಳಥಳನೆ ಹೊಳೆಯುತ್ತಾ ಇತ್ತು. ಆ ಕೋಣೆಯ ತಲೆಭಾಗದಲ್ಲಿ ಮೂರು ಅಡಿ ಎತ್ತರ ಏರಿಸಿದ ಕಟ್ಟೆ ಇತ್ತು.

ಆ ಕಟ್ಟೆಯ ಮೇಲೆ ಸುಮಾರು ಐವತ್ತುವರ್ಷ ಪ್ರಾಯದ ಭವ್ಯ ಆಕೃತಿಯ ಶ್ರೀಪಾದರು ಕುಳಿತಿದ್ದರು. ಉಡುಪಿಯಲ್ಲಿನ ಶಿಷ್ಟಾಚಾರಗಳನ್ನು ಆಗಲೇ ಅರಿತಿದ್ದ ನಾನು ಸ್ವಾಮಿಗಳಿಗೆ ಉದ್ದಂಡ ನಮಸ್ಕಾರ ಮಾಡಿದೆ. ಸ್ವಾಮಿಗಳು ನಾರಾಯಣ ಎನ್ನುತ್ತಾ ನನಗೆ ಆಶೀರ್ವಾದ ಮಾಡಿದರು.

ಸ್ವಾಮಿಗಳು ಕಟ್ಟೆಯ ಮೇಲೆ ಹಾಸಿದ್ದ ದೊಡ್ಡ ಪಟ್ಟೆಹುಲಿಯ ಚರ್ಮದ ಮೇಲೆ ಕುಳಿತಿದ್ದರು. ಅವರ ಮುಖದಲ್ಲಿ ಜ್ಞಾನದ ಕಳೆ ಸೂಸುತ್ತಿತ್ತು. ಅವರು ಕನ್ನಡಕ ಧರಿಸಿದ್ದರು. ಅವರ ಬಲಭಾಗದಲ್ಲಿ ಫಲ ಮಂತ್ರಾಕ್ಷತೆ ತುಂಬಿದ ತಟ್ಟೆಗಳು ಇದ್ದುವು. ಕಾವಿಯ ಬಣ್ಣದ ಹತ್ತಿಯ ಬಟ್ಟೆ ಧರಿಸಿದ ಅವರನ್ನು ನೋಡುತ್ತಲೇ ನನಗೆ ಅವರ ಮೇಲೆ ಭಕ್ತಿಭಾವ ಮೂಡಿ ಬಂತು. ಅವರು ಸ್ಥೂಲದೇಹಿಯಾಗಿದ್ದರೂ, ಲೀಲಾಜಾಲವಾಗಿ ಪದ್ಮಾಸನದಲ್ಲೇ ಕುಳಿತಿದ್ದ ಸ್ವಾಮಿಗಳು ನನ್ನ ಕಡೆ ನೋಡಿ ಮುಗುಳ್ನಗುತ್ತಾ,

ಮಗೂ, ನಿನ್ನ ಹೆಸರು ಏನು? ನಮ್ಮ ಬಸಪ್ಪ ಮಾಸ್ತರ ಶಿಷ್ಯನೋ? ಏನು ಸಂಶಯ ಪರಿಹಾರ ಆಗಬೆಕಿತ್ತು? ಎನ್ನುತ್ತಾ ಒಮ್ಮೆಲೇ ನನ್ನನ್ನು ಪ್ರಶ್ನಿಸಿದರು.

ಗುರುಗಳೇ, ನನ್ನ ಹೆಸರು ಮಧುಸೂದನ ಪೆಜತ್ತಾಯ,  ಬಸಪ್ಪ ಮಾಸ್ತರು ನನ್ನ ಕೆಲವು ಸಂಶಯಗಳ ಪರಿಹಾರಕ್ಕೋಸ್ಕರ ತಮ್ಮನ್ನು ಕಾಣಲು ಹೇಳಿದರು ಎಂದೆ.

ಸಂಕೋಚಪಡದೇ, ಅವೇನು ಸಂಶಯ ಎಂದು ಹೇಳು! ಎಂದು ಸ್ವಾಮಿಗಳ ಅಪ್ಪಣೆ ಆಯಿತು. ಇಷ್ಟು ಸುಲಭವಾಗಿ ಸ್ವಾಮಿಗಳು ನನಗೆ ಸಿಕ್ಕುತ್ತಾರೆಂದು ನಾನು ಎಣಿಸಿರಲಿಲ್ಲ. ನಾನು ಧೈರ್ಯ ತಂದುಕೊಂಡು, ಜಗದ್ಗುರುಗಳೇ! ಸತ್ಯ ಧರ್ಮ ನ್ಯಾಯ ಇವುಗಳ ಬಗ್ಗೆ ನಾನು ಕಂಡಂತೆ ಇರುವ ಕೆಲವು ವಿಚಾರಗಳನ್ನು ಹೇಳಿ, ತಮ್ಮಿಂದ ನನ್ನ ಸಂಶಯ ಪರಿಹಾರವನ್ನು ಬಯಸುತ್ತೇನೆ. ಪುರಾಣಶಾಸ್ತ್ರಗಳು ಮತ್ತು ನೀತಿಕಥೆಗಳಲ್ಲಿ ಒಳ್ಳೆಯ ಕಾರ್ಯ ಮಾಡಿದವರಿಗೆ ಒಳ್ಳೆಯದಾಗುತ್ತದೆ. ಅದೇ ರೀತಿ, ಕೆಟ್ಟಕಾರ್ಯಗಳನ್ನು ಮಾಡುವ ಮಂದಿಗೆ ಅವರು ಮಾಡುವ ಕೆಟ್ಟ ಕಾರ್ಯಗಳಿಗೆ ಪ್ರತಿಫಲವಾಗಿ ಕಷ್ಟಕಾರ್ಪಣ್ಯಗಳು ಪ್ರಾಪ್ತವಾಗುತ್ತವೆ. ಆದರೆ, ನಿಜಜೀವನದಲ್ಲಿ ಸತ್ಕಾರ್ಯಗಳನ್ನು ಮಾಡುತ್ತಾ ಇರುವ ಒಳ್ಳೆಯ ಜನರಿಗೆ ಕೂಡಾ ಅನಿರೀಕ್ಷಿತವಾಗಿ ಕಷ್ಟಕೋಟಲೆಗಳು ಬರುವುದನ್ನು ನಾನು ಕಾಣುತ್ತಾ ಇದ್ದೇನೆ.  ಹಾಗೆಯೇ, ಕೆಟ್ಟ ಕಾರ್ಯಗಳನ್ನು ಮಾಡುತ್ತಾ ಇರುವ ಪಾಪಿಗಳು ಇನ್ನೂ ಪ್ರವರ್ಧಮಾನಕ್ಕೆ ಬರುತ್ತಾ ಇರುವುದನ್ನು ನಾನು ಕಾಣುತ್ತಾ ಇದ್ದೇನೆ. ಇದು ಹೇಗೆ ಸಾಧ್ಯ ಎಂಬುದೇ ನನ್ನ ಸಂಶಯ! ಎಂದು ಹೇಳಿದೆ.             ಸ್ವಾಮಿಗಳ ಮುಖದಲ್ಲಿ ನಗುವೊಂದು ಮಿಂಚಿ ಮಾಯವಾಯಿತು. ಮಗೂ, ಬಹಳ ಒಳ್ಳೆಯ ಪ್ರಶ್ನೆಯನ್ನೇ ಕೇಳಿದಿ. ನಿನಗೆ ತಿಳಿಯುವ ರೀತಿಯಲ್ಲಿ, ನಿನಗೆ ಅರ್ಥ ಆಗುವಂತೆ ವಿವರಣೆ ನೀಡಲು ಪ್ರಯತ್ನಿಸುತ್ತೇನೆ. ನಿನಗೇನಾದರೂ ಸಂಶಯಗಳು ಉಳಿದಿದ್ದರೆ ನೀನು ಆಮೇಲೆ ಕೇಳಬಹುದು ಎಂದರು.

ನಾನು ಕೃಪೆ ಮಾಡಿ ಹೇಳಿ ಗುರುಗಳೇ ಎಂದೆ.

ನೋಡು ಮಗೂ, ಹಿಂದೂ ಧರ್ಮದ ಪ್ರಕಾರ ದೇಹಕ್ಕೆ ಸಾವುಂಟು, ಆತ್ಮಕ್ಕೆ ಸಾವಿಲ್ಲ. ಪುನರಪಿ ಮರಣಂ, ಪುನರಪಿ ಜನನಂ ಇದೇ ಹಿಂದೂ ಧರ್ಮದ ನಂಬಿಕೆ. ಪುನರ್ಜನ್ಮ ಪಡೆದಾಗ ಹಿಂದಿನ ಜನ್ಮದ ಪಾಪಪುಣ್ಯಗಳು ನಮ್ಮೊಂದಿಗೆ ಬರುತ್ತವೆ. ಪುಣ್ಯಪಾಪಗಳ ತುಲನೆಯ ಮೇಲೆ ನಮಗೆ ಉಚ್ಛ ಅಥವಾ ನೀಚ ಜನ್ಮ ಪ್ರಾಪ್ತವಾಗುವುದು. ಪುಣ್ಯವಂತರಿಗೆ ಮಾನವ ಜನ್ಮ ಪ್ರಾಪ್ತಿಯಾಗುತ್ತದೆ. ಮಾನವ ಜನ್ಮದಲ್ಲಿ ಹುಟ್ಟಿದ ನಮಗೆ ಒಳ್ಳೆದು ಅಥವಾ ಕೆಟ್ಟದು ಇವನ್ನು ವಿವೇಚನೆ ಮಾಡುವ ಶಕ್ತಿಯನ್ನು ಆ ಪರಮಾತ್ಮನು ಕೊಟ್ಟಿರುತ್ತಾನೆ. ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಪಾಪ ಅಥವಾ ಪುಣ್ಯ ಸಂಚಯ ಆಗುತ್ತವೆ. ಇವಕ್ಕೆ ತಕ್ಕ ಪ್ರತಿಫಲಗಳೂ ಪ್ರಾಪ್ತವಾಗುತ್ತವೆ. ಈ ಜಗತ್ತು ಮುನ್ಸೀಫ್ ಕೋರ್ಟ್ ಇದ್ದಂತೆ. ಸಣ್ಣ ಪುಟ್ಟ ತಪ್ಪುಗಳು ನಾವಿರುವ ಜನ್ಮದಲ್ಲೇ ತೀರ್ಮಾನ ಆಗುತ್ತವೆ.

ಉದಾಹರಣೆಗೆ, ನೀನು ಯಾರಿಗಾದರೂ ಎರಡು ರೂಪಾಯಿ ವಂಚನೆ ಮಾಡಿದರೆ, ನಿನಗೆ ಬೇರೆಲ್ಲೋ ನಾಲ್ಕು ರೂಪಾಯಿ ಕಳೆದುಕೊಳ್ಳುವ ಯೋಗ ಬರುತ್ತೆ. ನೀನು ಒಂದು ಸತ್ಕಾರ್ಯ ಮಾಡಿದರೆ, ನಿನಗೆ ಎಲ್ಲಿಂದಲೋ ಅನಿರೀಕ್ಷಿತವಾಗಿ ಒಳ್ಳೆಯದು ಪ್ರಾಪ್ತವಾಗುತ್ತದೆ. ಯಾರಾದರೂ ಬಹುದೊಡ್ಡ ವಂಚನೆ ಅಥವಾ ಹಿಂಸೆ ಮಾಡಿದರೆ, ಅದಕ್ಕೆ ಸರಿಯಾದ ಶಿಕ್ಷೆ ಕೊಡುವ ಅಧಿಕಾರ ಈ ಚಿಕ್ಕ ಕೋರ್ಟಿನ ವ್ಯಾಪ್ತಿಗೆ ಬರುವುದಿಲ್ಲ. ಅದು ಆ ಮನುಷ್ಯ ಸತ್ತನಂತರ ಯಮಧರ್ಮನ ಹೈಕೋರ್ಟಿನಲ್ಲಿ ತೀರ್ಮಾನಿಸಲ್ಪಡುತ್ತೆ. ಹೀಗೆ ಪಾಪ ಸಂಚಯಿಸಿಕೊಳ್ಳುತ್ತಿರುವ ಮನುಷ್ಯರಿಗೆ ಇನ್ನೂ ಹೆಚ್ಚಿನ ಧನಕನಕ ಆರೋಗ್ಯ ಕೊಟ್ಟು ಭಗವಂತನು ಪರೀಕ್ಷೆಗೆ ಒಡ್ಡುತ್ತಾನೆ. ಆಗ ಪಾಪಿಯು ಇನ್ನಷ್ಟು ದೊಡ್ಡ ಪಾಪಕಾರ್ಯಗಳನ್ನು ಮಾಡಿ ತನ್ನ ಪಾಪಗಳಿಂದಲೇ ರೌರವ ನರಕಕ್ಕೆ ತಾನಾಗೇ ಅರ್ಹನಾಗುತ್ತಾನೆ. ಮತಿವಂತನು ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಇದೇ ಒಂದು ಅವಕಾಶ ಎಂದು ತಿಳಿದು ತನ್ನ ತಪ್ಪುಗಳನ್ನು ತಿದ್ದಿಕೊಂಡು ಸತ್ಕಾರ್ಯಗಳನ್ನು ಮಾಡುತ್ತಾನೆ. ಮರಣಾನಂತರದಲ್ಲಿ ಪುಣ್ಯವಂತರಿಗೆ ಸ್ವರ್ಗವಾಸ ಪ್ರಾಪ್ತಿಯಾಗುತ್ತದೆ. ಪಾಪಿಗಳಿಗೆ ತಕ್ಕ ಶಿಕ್ಷೆ ನರಕದಲ್ಲಿ ಕೊಡಲ್ಪಡುತ್ತದೆ. ಪ್ರತಿಯೊಬ್ಬನಿಗೂ ತನ್ನ ಪುಣ್ಯಗಳಿಗೆ ತಕ್ಕಷ್ಟು ಸ್ವರ್ಗವಾಸ, ಪಾಪಗಳಿಗೆ ತಕ್ಕ ನರಕವಾಸ ಇದ್ದೇ ಇದೆ. ಆ ನಂತರ ಆ ಜೀವಿಗಳ ಆತ್ಮಕ್ಕೆ ಪುನರ್ಜನ್ಮ ಇದ್ದೇ ಇದೆ. ಕೆಲವರಿಗೆ ಹುಟ್ಟುವಾಗಲೇ ಕಣ್ಣು ಕೈಕಾಲು ಸರಿ ಇರುವುದಿಲ್ಲ ಅಥವಾ ಯಾವುದೋ ದೈಹಿಕ ತೊಂದರೆ ಆನಂತರ ಕಂಡುಬರುತ್ತವೆ. ಹೀಗಾಗಲು, ಪೂರ್ವಜನ್ಮದಲ್ಲಿ ಸಂಚಯವಾದ ಪಾಪವೇ ಕಾರಣ. ಹಾಗೆಯೇ, ಕೆಲವು ಜನರಿಗೆ ಅಯಾಚಿತವಾಗಿ ಒಳ್ಳೆಯ ಆರೋಗ್ಯ, ಧನಕನಕ ಮತ್ತು ಸಕಲಸೌಭಾಗ್ಯಗಳು ಪ್ರಾಪ್ತವಾಗುತ್ತವೆ. ಆಗ ಅವರು ಮದದಿಂದ ವರ್ತಿಸಿ ಪಾಪ ಸಂಚಯನ ಮಾಡಿಕೊಳ್ಳಬಾರದು. ತಮ್ಮ ಭಾಗ್ಯವನ್ನು ಸತ್ಕಾರ್ಯಗಳಲ್ಲಿ ವಿನಿಯೋಗಿಸಿಕೊಳ್ಳಬೇಕು. ನೀನು ಕೇಳಿದ ಪ್ರಶ್ನೆಗಳಿಗೆ ಇದೇ ನಾನು ಹೇಳಬಲ್ಲ ಉತ್ತರ! ಎಂದರು.

ನನಗೆ ಸಕಲ ಸಂಶಯಗಳೂ ನಿವಾರಣೆ ಆದಂತೆ ಅನಿಸಿತು. ಜಗದ್ಗುರುಗಳೇ, ನನ್ನ ಸಂಶಯ ಪರಿಹಾರವಾಯಿತು. ಇನ್ನು ಅಪ್ಪಣೆ ಕೊಡಿಸಿ ಎಂದು ಅಡ್ಡಬಿದ್ದೆ.

ಸ್ವಾಮೀಜಿ ನನಗೆ ಮಂತ್ರಾಕ್ಷತೆ ಕೊಡುತ್ತಾ, ಅಲ್ಲಿದ್ದ ಫಲದ ತಟ್ಟೆಯಿಂದ ನಮ್ಮೂರಲ್ಲಿ ಆಗ ಬಹು ಆಪರೂಪ ಅನಿಸಿದ್ದ ಸೇಬುಹಣ್ಣುಗಳಲ್ಲಿ ಎರಡು ಹಣ್ಣುಗಳನ್ನು ನನಗೆ ಕೊಟ್ಟರು. ಆ ದಿನ ನಾನು ಸ್ವಾಮಿಗಳನ್ನು ಕಂಡನಂತರ, ನನ್ನನ್ನು ಸದಾ ಕಾಡುತ್ತಿದ್ದ ಸಂಶಯಗಳು ಪರಿಹಾರ ಆದುವು. ನಾನು ಕಾಲೇಜು ಮೆಟ್ಟಿಲು ಹತ್ತಿದ ದಿನಗಳಲ್ಲಿ ಶ್ರೀ ಶ್ರೀ ಶ್ರೀ ಲಕ್ಷ್ಮೀಂದ್ರ ತೀರ್ಥರು ವೃಂದಾವನಸ್ಥರಾದರು. ಇಂದಿಗೂ ನಾನು ಆ ಮಹಾಜ್ಞಾನಿಗಳನ್ನು ನೆನೆಪಿಸಿ ಮನದಲ್ಲಿಯೇ ನಮಿಸುತ್ತೇನೆ.

ನಮ್ಮ ಬಸಪ್ಪ ಮಾಸ್ತರೂ ಇಂದು ಇಲ್ಲ. ಅವರು ಅಂದು ನನಗೆ ಕಲ್ಪಿಸಿದ ಅವಕಾಶವನ್ನು ನೆನೆಯುತ್ತಾ, ಅವರ ಆತ್ಮಕ್ಕೂ ನಾನು ನಮಿಸುತ್ತಿದ್ದೇನೆ.