೧೯೬೨ನೇ ಇಸವಿ. ನಾನು ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಪ್ರಿ-ಯೂನಿವರ್ಸಿಟಿ ಕ್ಲಾಸಿನಲ್ಲಿ ಓದುತ್ತಿದ್ದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕೂರಲು ಆಗ ಹನ್ನೊಂದು ವರ್ಷ ಓದಬೇಕಾಗಿತ್ತು. ಆದುದರಿಂದ, ನಾವು ಕಾಲೇಜಿನಲ್ಲಿ ಒಂದು ವರ್ಷ ಅವಧಿಯ ಪಿ.ಯು.ಸಿ ಕ್ಲಾಸ್ ಓದಿದರೆ ಸಾಕಿತ್ತು. ೧೯೬೧ನೇ ಇಸವಿ ನಾನು ಪಿಯುಸಿ ಸೇರಿದೆ. ಹೈಸ್ಕೂಲಿನ ಬಿಗು ಶಿಸ್ತಿನ ವಾತಾವರಣ ಕಾಲೇಜಿನಲ್ಲಿ ಇರಲಿಲ್ಲ. ಕಿವಿಗೆ ಗಾಳಿ ಹೊಕ್ಕಿದ ಕರುವಿನಂತೆ ಪಿ.ಯು.ಸಿ ಕ್ಲಾಸಿನಲ್ಲಿ ಮನಬಂದಂತೆ ಕುಣಿದೆ. ನಮ್ಮ ಏ ಡಿವಿಜನ್ ಎಂಬ ಕ್ಲಾಸ್ ತುಂಟರ ಕ್ಲಾಸ್ ಎಂದು ಹೆಸರು ಪಡೆದಿತ್ತು. ಇದಕ್ಕೆ ಇನ್ನೊಂದು ಕಾರಣವೂ ಇತ್ತು…! ನಮ್ಮ ಕ್ಲಾಸ್‌ನಲ್ಲಿ ಹುಡುಗಿಯರೇ ಇರಲಿಲ್ಲ. ನಮ್ಮ ತಂಟೆಯ ಬಗ್ಗೆ ಮೇಸ್ಟರುಗಳಿಗೆ ದೂರು ಹೇಳುವ (ಅಂದರೆ ಮೇಸ್ಟರುಗಳಿಗೆ ಹೆದರಿ ದೂರು ಹೇಳುವ) ಹುಡುಗಿಯರಿಲ್ಲದ ಕಾರಣ, ಕ್ಲಾಸಿನಲ್ಲಿ ಬಲವಾದ ಒಗ್ಗಟ್ಟು ಇತ್ತು. ನಮ್ಮ ಕ್ಲಾಸು ಇಡೀ ಕಾಲೇಜಿಗೇ ಗಂಡುಬೀಡು  ಎಂಬ ಹೆಸರು ಪಡೆದು, ತಂಟೆಯಲ್ಲಿ ಮತ್ತು ಓದಿನಲ್ಲಿ ಉತ್ತಮ ಹೆಸರನ್ನು ಪಡೆದಿತ್ತು. ಕ್ಲಾಸಿನಲ್ಲಿ ಎಂಬತ್ತು ಪ್ರತಿಶತ ಹುಡುಗರು ಮನಸ್ಸಿಟ್ಟು ಓದುತ್ತಿದ್ದರು. ಉಳಿದ ಇಪ್ಪತ್ತು ಪ್ರತಿಶತ ಹುಡುಗರು ನನ್ನಂತೆ ಸ್ವಲ್ಪ ತುಂಟು ಸ್ವಭಾವದವರು. ನನ್ನ ಗುಂಪಿನವರು. ಕ್ಲಾಸಿನ ಹಿಂದಿನ ಬೆಂಚುಗಳಲ್ಲಿ ಕುಳಿತು, ನಾವು ನಮ್ಮದೇ ಆದ ಕಪಿಸಾಮ್ರಾಜ್ಯ ನಡೆಸುತ್ತಾ, ಖುಶಿಯಾಗಿದ್ದೆವು. ಕ್ಲಾಸುಗಳು ನಡೆಯುತ್ತಿರುವಾಗ ನೋಟ್‌ಪುಸ್ತಕಗಳ ಮೇಲೆ ಚೌಕಗಳನ್ನು ಬರೆದು, ಚುಕ್ಕಿಯಾಟ ಆಡುತ್ತಿದ್ದೆವು. ಕನ್ನಡ ಪೀರಿಯಡ್ ತೆಗೆದುಕೊಳ್ಳುತ್ತಿದ್ದ ಅಯ್ಯಂಗಾರರ ಕ್ಲಾಸಿನಲ್ಲಿ ಹಾಜರಿ ಕೊಟ್ಟು ಆದೊಡನೇ, ಡೆಸ್ಕಿನ ಮೇಲೆ ತಲೆಯಿರಿಸಿ, ನಿದ್ರೆ ಕೂಡಾ ಮಾಡುತ್ತಿದ್ದೆವು. ನಾವು ತಲೆಹರಟೆ ಮಾಡುತ್ತೇವೆ ಎಂದು ಅವರು ನಮ್ಮನ್ನು ನಿದ್ರೆಯಿಂದ ಎಬ್ಬಿಸುತ್ತಿರಲಿಲ್ಲ..!!

ಅತಿ ಮೇಧಾವಿಯಾದ ಸುಮಾರು ೨೩ ವರ್ಷ ಪ್ರಾಯದ ಶ್ರೀಶ ಆಚಾರ್ಯ ಎಂಬ ಮ್ಯಾತಮ್ಯಾಟಿಕ್ಸ್ ಲೆಕ್ಚರರ್ ಮೇಲುನೋಟಕ್ಕೆ ಒಬ್ಬ ವಿದ್ಯಾರ್ಥಿಯಂತೆಯೇ ಕಾಣುತ್ತಿದ್ದರು. ಸ್ವಲ್ಪ ಸ್ಟ್ರಿಕ್ಟ್ ಎನಿಸಿದ್ದ ಅವರ ಕ್ಲಾಸಿನಲ್ಲಿ ಸ್ವಲ್ಪ ಕಾಲ ನಾವು ಸುಮ್ಮನಿದ್ದರೂ, ಪಾಠಗಳ ಕಡೆಗೆ ಹೆಚ್ಚಿನ ಗಮನ ಕೊಡುತ್ತಿರಲಿಲ್ಲ. ಫಿಸಿಕ್ಸ್ ಮತ್ತು ಕೆಮಿಸ್ಟ್ರಿಕ್ಲಾಸಿನ ಉಪಾಧ್ಯಾರುಗಳು ಪನಿಶ್ಮೆಂಟ್ ಕೊಡುತ್ತಿದ್ದುದರಿಂದ ಅವರ ಕ್ಲಾಸುಗಳನ್ನು ಗಮನವಿಟ್ಟು ಕೇಳುತ್ತಿದ್ದೆವು.

ಪ್ರೀ ಯುನಿವರ್ಸಿಟಿಯ ಪಬ್ಲಿಕ್ ಪರೀಕ್ಷೆಯಲ್ಲಿ ಮ್ಯಾತಮ್ಯಾಟಿಕ್ಸ್‌ನಲ್ಲಿ ಮಾತ್ರ ಫೈಲ್ ಆಗಿ ಉಳಿದ ಎಲ್ಲಾ ಸಬ್ಜೆಕ್ಟ್‌ಗಳಲ್ಲಿ ನಾನು ಪಾಸಾದೆ. ನನ್ನ ಪ್ರೀತಿಯ ಕೆಲವು ದೋಸ್ತಿಗಳಿಗೂ ಇದೇ ಪಾಡಾಗಿತ್ತು. ನಾವುಗಳು ನಾಪಾಸು ಆದರೂ, ಏನೂ ಬೇಜಾರು ಪಡದೆ, ಕಮ್ ಸೆಪ್ಟೆಂಬರ್..! ಎಂದು ಮುಂದಿನ ಸಪ್ಲಿಮೆಂಟರಿ ಪರೀಕ್ಷೆಯನ್ನು ಸ್ವಾಗತಿಸುತ್ತಾ, ದೋಸ್ತಿಯೊಬ್ಬನ ರೂಮಿನಲ್ಲಿ ಸೇರಿಕೊಂಡು ಜಾಯಿಂಟ್ ಸ್ಟಡಿ ಮಾಡತೊಡಗಿದೆವು. ಅಲ್ಲೂ ನಮ್ಮ ಮಾತುಕತೆ, ಸಿನೆಮಾ, ಫುಟ್‌ಬಾಲ್ ಆಟ ಮುಂದುವರೆಯಿತು. ಸೆಪ್ಟಂಬರದ ಸಪ್ಲಿಮೆಂಟರಿ ಪರೀಕ್ಷೆ ಕಟ್ಟಿದೆವು. ತಮ್ಮ ಮನೆಗಳಲ್ಲಿ ಸ್ವಲ್ಪ ಚುರುಕು ಮುಟ್ಟಿಸಿಕೊಂಡ ನನ್ನ ದೋಸ್ತಿಗಳೆಲ್ಲರೂ ಸೆಪ್ಟಂಬರ್‌ನ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಾಸಾದರು. ನಾನೊಬ್ಬ ಮಾತ್ರ ಹಿಂದೆ ಉಳಿದೆ! ನಾನೊಬ್ಬನೇ ನನ್ನ ಹಣೆಬರಹದ ಮಾರ್ಕ್ಸ್ ಕಾರ್ಡ್ ಹಿಡಿದುಕೊಂಡು ಕಾಲೇಜಿನ ಆಫೀಸಿನಿಂದ ಹೊರಗೆ ಬರುವಾಗ ನಮ್ಮ ಮ್ಯಾತ್‌ಮ್ಯಾಟಿಕ್ಸ್ ಲೆಕ್ಚರರ್ ಶ್ರೀ ಶ್ರೀಶ ಆಚಾರ್ಯರು ನನಗೆ ಎದುರು ಸಿಕ್ಕರು. ನಿನ್ನ ಸಂಗಾತಿಗಳೆಲ್ಲಾ ನಿನ್ನನು ಬಿಟ್ಟು ಮುಂದೆ ಹೋದರು. ನೀನ್ಯಾಕೆ ಹಿಂದೆ ಉಳಿದುಬಿಟ್ಟೆ? ಎಂದು ಪ್ರಶ್ನಿಸಿದರು. ನನಗೆ ಅವಮಾನದಲ್ಲಿ ಕಣ್ಣೀರೇ ಬಂತು..!

ಆಗ ಅವರು, ಚಿಂತಿಸಬೇಡ! ದಿನಾ ಸಾಯಂಕಾಲ ನನ್ನ ಮನೆಗೆ ಆರುಗಂಟೆಗೆ ಬಾ. ನಿನಗೆ ನಾನು ಧರ್ಮಾರ್ಥವಾಗಿ ಲೆಕ್ಕದ ಪಾಠ ಹೇಳುವೆ ಎಂದರು. ಮುಳುಗುವವನಿಗೆ ಕೈಯಾಸರೆ ಸಿಕ್ಕಿದಂತೆ ಆಯಿತು..! ಆ ದಿನಗಳಲ್ಲಿ ಟ್ಯೂಶನ್ ಪದ್ಧತಿಯಿರಲಿಲ್ಲ. ಫೈಲಾದವರು ತಮ್ಮ ಲೆಕ್ಚರರುಗಳನ್ನೇ ಕೇಳಿ, ಸಂಶಯ ನಿವಾರಿಸಿಕೊಂಡು, ಓದಿಕೊಳ್ಳಬೇಕಾಗಿತ್ತು. ನಮ್ಮ ಲೆಕ್ಚರರುಗಳು ಕೂಡಾ, ಉದಾರ ಮನಸ್ಸಿನಿಂದ ಪಾಠ ಹೇಳಿಕೊಡುತ್ತಿದ್ದರು.

ಆ ಸಮಯದ ಸಂಜೆಯ ಪಾಠಗಳಲ್ಲಿ ಶ್ರೀಶ ಆಚಾರ್ಯರು ನನಗೆ ಗಣಿತದ ಸಿಲೆಬಸ್ಸಿನ ಪಾಠಗಳನ್ನು ಮೊದಲಪಾಠದಿಂದ ಶುರುಮಾಡಿ ಹೇಳಿಕೊಡುತ್ತಾ ಬಂದರು. ಅವರು ಪ್ರತಿದಿನ ಆಸಕ್ತಿ ವಹಿಸಿ, ಪಾಠ ಹೇಳಿಕೊಟ್ಟ ಫಲವಾಗಿ, ನಾನು ಕೊನೆಗೂ, ಪಿಯುಸಿ.ಯನ್ನು ಮೇಲಣ ವರುಷದ ಮಾರ್ಚಿನ ಪರೀಕ್ಷೆಯಲ್ಲಿ ಜನತಾಕ್ಲಾಸಿನಲ್ಲಿ ತೇರ್ಗಡೆ ಹೊಂದಿದೆ! ನಾನು ಪಾಸಾದಾಗ ನನಗಿಂತ ಹೆಚ್ಚಿನ ಸಂತೋಷ ಶ್ರೀ ಶ್ರೀಶ ಆಚಾರ್ಯರಿಗೆ ಆಯಿತು. ಜನತಾಕ್ಲಾಸ್‌ನಲ್ಲಿ ನಾನು ಪಾಸ್ ಆದ್ದರಿಂದ, ನನಗೆ ಇಂಜೀನಿಯರಿಂಗ್ ಓದುವ ಅರ್ಹತೆಯಿರಲಿಲ್ಲ.

ನಾನು ಎಂ.ಜಿ.ಎಮ್. ಕಾಲೇಜಿನಲ್ಲೇ ಬಿ.ಎಸ್‌ಸಿ. ಕ್ಲಾಸಿಗೆ ಸೇರಿದೆ. ಅದೇವರ್ಷ ಶ್ರೀಶ ಆಚಾರ್ಯರು ಅಫ್ಘಾನಿಸ್ಥಾನಕ್ಕೆ ಪ್ರಾಧ್ಯಾಪಕರಾಗಿ ಹೊರಟುಹೋದರು. ನನಗಿನ್ನು ಪಾಠ ಹೇಳಿ ಉದ್ಧಾರ ಮಾಡುವವರು ಯಾರೂ ಇಲ್ಲ! ಎಂದು ನಾನು ನನ್ನಿಂದಾದಷ್ಟು ಓದತೊಡಗಿದೆ. ಆಟಗಳಲ್ಲೂ ಹಿಂದೆ ಬೀಳಲಿಲ್ಲ. ಕಾಲೇಜಿನ ಎನ್.ಸಿ.ಸಿ. ಪಡೆಯ ಕ್ಯಾಡೆಟ್ ಕ್ಯಾಪ್ಟನ್ ಆಗಿ ಹಲವಾರು ತರಬೇತಿ ಕ್ಯಾಂಪ್‌ಗಳಲ್ಲಿ ಭಾಗವಹಿಸಿದೆ. ೧೯೬೬ನೇ ಇಸವಿಯಲ್ಲಿನ ಗಣರಾಜ್ಯೋತ್ಸವದ ಪೆರೇಡಿನಲ್ಲಿ ನಾನು ನಮ್ಮ ಮೈಸೂರು (ಈಗಿನ ಕರ್ನಾಟಕ) ರಾಜ್ಯವನ್ನು ಪ್ರತಿನಿಧಿಸಿದೆ. ಅನಿರೀಕ್ಷಿತವಾಗಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಯವರಾಗಿದ್ದ ಶ್ರೀಮಾನ್ ಲಾಲ್‌ಬಹಾದೂರ್‌ಶಾಸ್ತ್ರಿಗಳ ಮರಣ ಜನವರಿ ಹನ್ನೊಂದರಂದು ಸಂಭವಿಸಿತು. ತಾರೀಕು ಹದಿಮೂರರಂದು ನಡೆದ ಅವರ ಅಂತ್ಯಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವಕಾಶ ನನಗೆ ದೊರೆಯಿತು. ಶ್ರೀ ಲಾಲ್‌ಬಹಾದೂರ್ ಶಾಸ್ತ್ರಿಗಳು ಭಾರತದ ಯುವಕರಿಗೆ ಜೈಜವಾನ್! ಜೈ ಕಿಸಾನ್! ಎಂಬ ಕರೆ ಕೊಟ್ಟು ಯುವಜನತೆಯ ಮನಗೆದ್ದಿದ್ದರು. ನಾನು ನನ್ನ ಕಾಲೇಜಿನ ದಿನಗಳಲ್ಲಿ ಭಾರತೀಯ ನೌಕಾಪಡೆಯನ್ನು ಸೇರುವ ನಿರ್ಧಾರ ಕೈಗೊಂಡಿದ್ದೆ. ಭಾರತೀಯ ನೌಕಾಪಡೆಯನ್ನು ಸೇರುವ ಆಲೋಚನೆಗಳಿದ್ದರೂ, ನನ್ನನ್ನು ಸಾಕಿ ಸಲಹಿ ಕಾಲೇಜು ಓದಿಸಿದ ನನ್ನ ಪ್ರೀತಿಯ ಅಕ್ಕ ಡಾ.ಶಶಿಕಲಾ ಆಚಾರ್ಯಳಿಗೆ ಸೇರಿದ ಕಾಡುಜಾಗವನ್ನು ಒಂದು ತೆಂಗಿನ ತೋಟವನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಪ್ರಯುಕ್ತನಾದೆ. ನನ್ನ ಕಾಲೇಜು ಜೀವನ ಮುಗಿಸಿ, ರೈತನಾದೆ. ಹೀಗೆ ಮಾಡಲು ಶ್ರೀ ಲಾಲ್ ಬಹದ್ದೂರರ ಪ್ರೇರಣೆಯೇ ಕಾರಣ. ಮುಂದಕ್ಕೆ ನನ್ನ ಪ್ರೀತಿಯ ವ್ಯವಸಾಯ ಕ್ಷೇತ್ರವೇ ನನಗೆ ಹಿಡಿಸಿತು.

ಇನ್ನು ನಮ್ಮ ಕಾಲೇಜು ಮತ್ತು ಶ್ರೀ ಶ್ರೀಶ ಆಚಾರ್ಯರ ವಿಚಾರಕ್ಕೆ ಬರೋಣ. ಮುಂದಕ್ಕೆ ೧೯೮೦ರ ದಶಕದಲ್ಲಿ, ನನ್ನ ದೊಡ್ಡ‌ಅಣ್ಣನ ಮಗ ಚಿ.ವಾದಿರಾಜನೂ, ನನ್ನಂತೆ ಗಣಿತದಲ್ಲಿ ಹಿಂದೆ ಬಿದ್ದು ಒದ್ದಾಡಿದ..! ಅಷ್ಟರಲ್ಲಿ, ಶ್ರೀಶ ಆಚಾರ್ಯರು ಅಫ್ಘಾನಿಸ್ಥಾನದಿಂದ ತಾಯ್ನಾಡಿಗೆ ಹಿಂದುರಿಗಿ ಬಂದು, ಉಡುಪಿಯಲ್ಲಿ ಗಣಿತದ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ನನ್ನ ಅಣ್ಣನ ಮಗನಿಗೂ, ನನಗೆ ನೀಡಿದಂತಹಾ ಸಹಾಯ ಹಸ್ತ ನೀಡಿದರು. ಅವರ ದಯದಿಂದ, ಆತ ಒಬ್ಬ ಎಲೆಕ್ಟ್ರಾನಿಕ್ಸ್ ಇಂಜಿನೀಯರ್ ಅನ್ನಿಸಿಕೊಂಡುಬಿಟ್ಟ. ನನ್ನ ಅಣ್ಣನ ಮಗ ವಾದಿರಾಜನ ಮದುವೆಗೆ ಹೋದಾಗ, ಬಹಳ ವರ್ಷಗಳ ಮೇಲೆ, ಅಂದರೆ ಸುಮಾರು ಇಪ್ಪತ್ತುವರ್ಷಗಳ ನಂತರ, ಶ್ರೀಶ ಆಚಾರ್ಯರ ಭೇಟಿಯಾಯಿತು. ಆಗ ಶ್ರೀಶ ಅಚಾರ್ಯರು ನನ್ನ ಕೆಲಸಕಾರ್ಯಗಳ ಬಗ್ಗೆ ಬಹಳ ಮುತುವರ್ಜಿಯಿಂದ ವಿಚಾರಿಸಿ ನನ್ನ ವಿಳಾಸ ಪಡೆದುಕೊಂಡರು. ನಂತರ, ಅವರು ನನಗೆ ವರ್ಷಕ್ಕೆ ಒಂದಾದರೂ ಪತ್ರ ಬರೆಯುತ್ತಿದ್ದಾರೆ. ಅಪರೂಪಕ್ಕೊಮ್ಮೆ ದೂರವಾಣಿ ಕರೆಮಾಡಿ ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದಾರೆ.

ಎರಡು ವಾರಗಳ ಹಿಂದೆ ಅವರ ಮಗನ ಮದುವೆಯ ಆಮಂತ್ರಣ ಪತ್ರಿಕೆ ಬಂತು. ಅವರ ಸೊಸೆಯಾಗುವ ಹುಡುಗಿ ಬೆಂಗಳೂರಿನವಳು. ಇಂದು ಬೆಂಗಳೂರಿನ ಅಜಂತಾ ಹೋಟೆಲಿನಲ್ಲಿ ನಡೆಯುವ ಆರತಕ್ಷತೆ ಕಾರ್ಯಕ್ರಮಕ್ಕೆ ಬರಲೇಬೇಕು – ಎಂಬ ಪತ್ರ ಆಮಂತ್ರಣದೊಂದಿಗೆ ಬಂದಿತ್ತು. ಇಂದು ಅಜಂತಾ ಹೋಟೆಲಿಗೆ ಸರೋಜಮ್ಮ ಮತ್ತು ನಾನು ಆರತಕ್ಷತೆಗೆ ಹೋದೆವು. ಆಶೀರ್ವಾದವೇ ಉಡುಗೊರೆ ಎಂದು ಬರೆದದ್ದರಿಂದ ಉಡುಗೊರೆ ಏನೂ ಒಯ್ಯಲಿಲ್ಲ. ಸಭಾಂಗಣ ಹೊಕ್ಕೊಡನೇ ಪ್ರೊ.ಆಚಾರ್ಯರು ನಮ್ಮನ್ನು ಗುರುತಿಸಿ, ನಮ್ಮ ಬಳಿಗೆ ಸಾಗಿಬಂದು ಕುಶಲ ವಿಚಾರಿಸಿದರು. ನಾನು ಅವರ ಪಾದಗಳಿಗೆ ನಮಸ್ಕರಿಸಿದೆ.

ಸರ್! ನಿಮ್ಮಿಂದಾಗಿ ನಾನು ಒಬ್ಬ ವಿದ್ಯಾವಂತ ಮನುಷ್ಯನಾದೆ. ಇಲ್ಲದಿದ್ದರೆ, ೪೨ ವರುಷಗಳ ಹಿಂದೆ ನನ್ನ ವಿದ್ಯೆ ಬರೇ ನೈವೇದ್ಯ ಮಾತ್ರ ಎನ್ನಿಸಿಬಿಡುತ್ತಿತ್ತು..! ನಿಮ್ಮ ಉಪಕಾರ ನಾನು ಎಂದಿಗೂ ಮರೆಯಲಾರೆ! ಇಂದು ನನ್ನನ್ನು ಈ ಸಮಾರಂಭಕ್ಕೆ ಆಮಂತ್ರಿಸಿದುದು ನಿಮ್ಮ ಪ್ರೀತಿಗೆ ಸಾಕ್ಷಿ. ಎಲ್ಲ ಉಪಾಧ್ಯಾಯರುಗಳೂ ಬುದ್ಧಿವಂತರಾದ ವಿದ್ಯಾರ್ಥಿಗಳನ್ನು ಪ್ರೀತಿಸುತ್ತಾರೆ. ನೀವು ಈ ಪಿಯೂಸಿ. M.S.M.- ಅಂದರೆ, ಮಾರ್ಚ್ ಸೆಪ್ಟೆಂಬರ್ ಮಾರ್ಚ್ ಮಾಡಿ ಒಮ್ಮೆಗೆ ಮುಗ್ಗರಿಸಿದ ಈ ತುಂಟ ಹುಡುಗನನ್ನು ಇಂದಿಗೂ ಪ್ರೀತಿಸುತ್ತಿದ್ದೀರಿ! ಎನ್ನುವಾಗ ನನ್ನ ಕಣ್ಣಲ್ಲಿ ನೀರೇ ಬಂತು.

ಪ್ರೊಫೆಸರ್ ಆಚಾರ್ಯರು ನನ್ನ ಬೆನ್ನು ತಟ್ಟಿ ನಕ್ಕರು. ನವ ವಧೂವರರನ್ನು ಅಭಿನಂದಿಸಿ, ಔತಣದ ಊಟ ಮುಗಿಸಿಕೊಂಡು ಮನೆಗೆ ಬರುವಾಗ ನನ್ನ ನೆನಪುಗಳ ಸಂಗ್ರಹದಲ್ಲಿ ಈ ಬಗ್ಗೆ ಬರೆಯಬೇಕು! ಅನ್ನಿಸಿತು. ಇಲ್ಲಿ ಈ ಸಂಗತಿಯನ್ನು ಹೆಮ್ಮೆಯಿಂದ ಬರೆದಿದ್ದೇನೆ.

***

ಬರೆದ ತಾರೀಖು : 18-12-2005.

* * *