ಜೇಡಿಬೈಲು ಗಣಪತಿ ಗೌಡರ ತೋಟ ನಮ್ಮ ತೋಟದಿಂದ ನಾಲ್ಕುಮೈಲು ದೂರ. ಅವರು ಈಗ ಇಲ್ಲ. ನನ್ನಲ್ಲಿ ಉಳಿದಿರುವುದು ಅವರ ನೆನಪು ಮಾತ್ರ.

ಅವರ ಮನೆಯು ದಾನಧರ್ಮ ಮತ್ತು ಪೂಜೆಪುನಸ್ಕಾರಗಳಿಗೆ ಹೆಸರಾಗಿತ್ತು. ಗಣಪತಿ ಗೌಡರು ಮಹಾ ದೈವಭಕ್ತ. ಬೆಳಗ್ಗೆ ಐದಕ್ಕೇ ಏದ್ದೇಳುತ್ತಿದ್ದ ಅವರ ಪೂಜೆಪುನಸ್ಕಾರಗಳು ಮುಗಿಯಬೇಕಾದರೆ ಗಂಟೆ ಎಂಟೂವರೆ ಆಗುತ್ತಿತ್ತು. ಪ್ರತೀ ಸೋಮವಾರ, ಶನಿವಾರ ಮತ್ತು ಹಬ್ಬಹರಿದಿನಗಳಲ್ಲಿ ಅವರ ಪೂಜೆ ಮುಗಿಯುವಾಗ ಬೆಳಗಿನ ಹತ್ತುಗಂಟೆಯೇ ಆಗುತ್ತಿತ್ತು. ಗಣಪತಿ ಗೌಡರು ಹಳೇ ತಲೆಮಾರಿನ ಕಾಫಿ ಬೆಳೆಗಾರರು. ನಮ್ಮ ಸರಹದ್ದಿನ ಪಯನೀಯರ್ ಕಾಫಿ ಬೆಳೆಗಾರರಾದ, ಕೆಂಟ್ ಸಹೋದರರು, ಸಿಂಪ್ಸನ್, ರೀಡ್, ಫಾಸ್ಟರ್ ಮೊದಲಾದ ಇಂಗ್ಲಿಷ್ ಪ್ಲಾಂಟರುಗಳ ಪರಿಚಯ ಅವರಿಗೆ ಚೆನ್ನಾಗಿತ್ತು. ಈ ಪ್ಲಾಂಟರುಗಳಿಂದಲೇ ಕಾಫಿಯ ಬಗ್ಗೆ ಅವರು ಬಹಳಷ್ಟು ಕಲಿತಿದ್ದರು. ಕಾಫಿ ಬೆಳೆಯುವಲ್ಲಿನ ಪೂರ್ವಕಾಲದ ಇತಿಹಾಸವನ್ನು ಅವರ ಬಾಯಿಂದಲೇ ನಾನು ಕೇಳಿದ್ದೆ.

ಹಿಂದಿನ ಕಾಲದಲ್ಲಿ ಚಿಕ್ ಎಂಬ ಅರೆಬಿಕಾ ಕಾಫಿಯ ತಳಿಯನ್ನು ನಮ್ಮ ಆಸುಪಾಸಿನಲ್ಲಿ ಬೆಳೆಯುತ್ತಿದ್ದರಂತೆ. ಆ ಮೇಲೆ ಎಲ್ಲರೂ ಕೆಂಟ್ಸ್ ತಳಿ ಎಂಬ ಸುಧಾರಿತ ತಳಿಯ ಕಾಫಿ ಬೆಳೆಸಲು ಶುರುಮಾಡಿದರಂತೆ. ಕೆಂಟ್ ಸಹೋದರರು ಅಭಿವೃದ್ಧಿ ಪಡಿಸಿದ ಕೆಂಟ್ಸ್ ಅರೆಬಿಕಾ ಕಾಫಿಯ ಬೀಜಗಳನ್ನು ಶ್ರೀ ಗಣಪತಿ ಗೌಡರು ನನ್ನ ಮಾವ ದಿವಂಗತ ಶ್ರೀ ರಘುಪತಿ ಹೆಬ್ಬಾರರ ಜತೆಗೆ ಹೋಗಿ, ಕೆಂಟ್ ಸಹೋದರರ ಕಚ್ಚಿನ ಹಕ್ಕಲು ಎಂಬ ತೋಟದಿಂದ ತಂದು ನೆಟ್ಟರಂತೆ. ಹಿಂದಿನ ಕಾಲದಲ್ಲಿ ಕಾಫಿ ಬೆಳೆಯ ಬಗ್ಗೆ ಸಂಶೋಧನೆಗಳನ್ನು ನಡೆಸಲು ರೀಸರ್ಚ್ ಸ್ಟೇಶನ್ ಅಂತ ಇರಲಿಲ್ಲವಂತೆ! ಕಾಫಿಯ ಬಗ್ಗೆ ಹಾರ್ಟಿಕಲ್ಚರ್ ಇಲಾಖೆಯಲ್ಲೇ ಅಲ್ಪ ಸ್ವಲ್ಪ ಸಂಶೋಧನೆ ಮಾಡುತ್ತಿದ್ದರಂತೆ.

ಮೈಸೂರು ಸಂಸ್ಥಾನದ ಹಾರ್ಟಿಕಲ್ಚರ್ ಡೈರೆಕ್ಟರ್ ಆಗಿದ್ದ ಶ್ರೀ ಕೋಲ್ಮನ್ ಎಂಬ ವಿಜ್ಞಾನಿಯು ಕಾಫಿಬೆಳೆಗೆ ಮಾರಕವಾಗಿದ್ದ ಕೊಳೆರೋಗವನ್ನು ನಿಯಂತ್ರಿಸಲು ಬೋರ್ಡೋ ಮಿಶ್ರಣದ ಸ್ಪ್ರೇ ಉಪಯುಕ್ತ ಎಂದು ಕಂಡುಹಿಡಿದರಂತೆ. ಈ ಬೋರ‍್ಡೋ ದ್ರಾವಣವನ್ನು ಪಾತಿಯ ಗಿಡಗಳು ಮತ್ತು ಕಾಫಿತೋಟಕ್ಕೆ ಸಿಂಪಡಿಸಿದಾಗ ಈ ರೋಗದ ಮೇಲೆ ಮೊದಲನೇ ಬಾರಿ ನಿಯಂತ್ರಣ ಸಿಕ್ಕಿತಂತೆ. ಈ ಬೋರ್ಡೋ ಮಿಶ್ರಣವನ್ನು ನಾವು ಇಂದಿಗೂ ವ್ಯಾಪಕವಾಗಿ ಬಳಸಿ, ಕಾಫಿಬೆಳೆಯ ಪರಮವೈರಿ ಅನ್ನಿಸಿಕೊಂಡಿರುವ ಕೊಳೆರೋಗದಿಂದ ರಕ್ಷಣೆ ಪಡೆಯುತ್ತಿದ್ದೇವೆ. ಆ ಕಾಲದಲ್ಲಿ ಕಾಫಿಬೆಳೆಯ ಬಗ್ಗೆ ಹೆಚ್ಚಿನ ಸಂಶೋಧನೆಗಳು ಪ್ರಗತಿಪರ ಪ್ಲಾಂಟರುಗಳ ಖಾಸಗಿ ತೋಟಗಳಲ್ಲೇ ಹೆಚ್ಚಾಗಿ ನಡೆಯುತ್ತಿದ್ದುವಂತೆ. ಬೋರ್ಡೋ ಮಿಶ್ರಣದ ಉಪಯೋಗ ಕಂಡುಹಿಡಿಯುವ ತನಕ ಕಾಫಿಗಿಡಗಳು ಕೊಳೆ ರೋಗದಿಂದ ಹೆಚ್ಚಾಗಿ ನಿರ್ಮೂಲ ಆಗುತ್ತಿದ್ದುವಂತೆ. ಮಳೆಗಾಲದಲ್ಲಿ ಈ ರೋಗವು ಹೆಚ್ಚಿನ ಅರೆಬಿಕಾ ತೋಟಗಳಲ್ಲಿ ಕಂಡುಬಂದು ರೈತರಿಗೆ ತುಂಬಾ ನಷ್ಟವಾಗುತ್ತಿತ್ತಂತೆ. ಆ ಕಾಲದಲ್ಲಿ ಕಾಫಿ ಪಾತಿಯಲ್ಲಿ ಗಿಡಗಳನ್ನು ಬಿದಿರು ತಟ್ಟಿಯಿಂದ ತಯಾರಿಸಿದ ಪಾತಿ ಕುಕ್ಕೆ ಎಂದು ಕರೆಯಲ್ಪಡುವ ಬುಟ್ಟಿಗಳಲ್ಲಿ ನೆಟ್ಟು ಬೆಳೆಸುತ್ತಾ ಇದ್ದರಂತೆ. ಈ ಬಿದಿರಿನ ಬುಟ್ಟಿಗಳು ಕೊಳೆಯುವಾಗ ಅವುಗಳಿಗೆ ಫೈಟೋಫ್ತೆರಾ ಎಂಬ ಬ್ಯಾಕ್ಟೀರಿಯಾಗಳು ಸೋಂಕಿ, ಅವು ಕಾಫಿಗಿಡಗಳಿಗೆ ಹರಡಿ, ಅವುಗಳನ್ನು ಕೊಲ್ಲುತ್ತಿದ್ದುವಂತೆ. ಈ ಬಿದಿರಿನ ಪಾತಿ ಕುಕ್ಕೆಗಳನ್ನು ಬೋರ್ಡೋ ದ್ರಾವಣದಲ್ಲಿ ಅದ್ದಿ ಒಣಗಿಸಿ, ಆ ನಂತರ ಉಪಯೋಗಿಸಿದಾಗ, ಈ ಉಪಟಳ ಕಡಿಮೆಯಾಯಿತಂತೆ.

೧೯೬೦ರ ದಶಕದಲ್ಲಿ ಪಾಲಿಥೀನ್ ಪಾತಿಕುಕ್ಕೆಗಳ ಬಳಕೆ ವ್ಯಾಪಕವಾಗಿ ಶುರುವಾಯಿತಂತೆ. ಇವು ಪ್ಲಾಸ್ಟಿಕ್ ಚೀಲಗಳಾಗಿರುವುದರಿಂದ ನೀರು ಸೋಂಕಿದಾಗ ಕೊಳೆಯುವುದಿಲ್ಲ. ಆದ್ದರಿಂದ, ಇವುಗಳ ಬಳಕೆ ಶುರುಮಾಡಿದ ಮೇಲೆ, ಕಾಫಿತೋಟಗಳಲ್ಲಿ ಪಾತಿಗಿಡಗಳು ಈ ಕಾಯಿಲೆಯ ಭಯವಿಲ್ಲದೆ, ಸುರಕ್ಷಿತವಾಗಿ ಬೆಳೆಯತೊಡಗಿದುವಂತೆ. ಬಿದಿರಿನ ಬುಟ್ಟಿಗಳ ಬಳಕೆ ಒಮ್ಮೆಲೇ ಕಡಿಮೆ ಆದುದರಿಂದ, ಹಲವು ಸಾವಿರ ಬಿದಿರಿನ ಪಾತಿಕುಕ್ಕೆಗಳನ್ನು ತಯಾರಿಸಿ ಕೊಡುತ್ತಿದ್ದ ಮೇದಾರ ಜನಾಂಗದ ಕೆಲಸಗಾರರು ತಮ್ಮ ಕೆಲಸ ಕಳೆದುಕೊಂಡರಂತೆ..!

ಕೇಂದ್ರ ಸರಕಾರದ ಕಾಫಿಯ ಸಂಶೋಧನಾ ಕೇಂದ್ರ ಬಾಳೆಹೊನ್ನೂರಿನಲ್ಲಿ ಶುರುವಾದ ಮೇಲೆ ಈ ಸಂಶೋಧನಾ ಕ್ಷೇತ್ರದ ಅಧಿಕಾರಿಗಳು ಬಿಡುಗಡೆ ಮಾಡಿದ ‘ಸಿಲೆಕ್ಷನ್ ಕಾಫಿತಳಿಗಳು ರೈತರ ಕಾಫಿತೋಟಗಳನ್ನು ಪ್ರವೇಶಿಸಿದುವು ಎಂದು ಶ್ರೀ ಗಣಪತಿ ಗೌಡರು ಹೇಳುತ್ತಿದ್ದರು. ಕಾಫಿಬೆಳೆಯನ್ನು ವಿಸ್ತೃತ ಜಾಗದಲ್ಲಿ ಗಣಪತಿ ಗೌಡರು ಬೆಳೆಯುತ್ತಿದ್ದರೂ, ಮಲೆನಾಡಿನ ಸಾಂಪ್ರದಾಯಿಕ ಬೆಳೆಗಳಾದ ಅಡಿಕೆ ಮತ್ತು ಭತ್ತಗಳನ್ನು ಕಡೆಗಣಿಸಿದವರಲ್ಲ. ಹತ್ತಿಪ್ಪತ್ತು ಎಕರೆ ಭತ್ತದ ಗದ್ದೆ ಮತ್ತು ಹತ್ತಿಪ್ಪತ್ತು ಎಕರೆ ಅಡಿಕೆ, ಇವುಗಳನ್ನು ಬಹುಮುತುವರ್ಜಿಯಿಂದ ಅವರು ಸಾಗುವಳಿ ಮಾಡುತ್ತಿದ್ದರು.

ಗಣಪತಿ ಗೌಡರು ಕಟ್ಟಾ ಸಸ್ಯಾಹಾರಿಗಳಾಗಿದ್ದು, ಎಂದಿಗೂ ಮಾಂಸಾಹಾರ ತಿಂದವರಲ್ಲ. ಅವರು ಕಳ್ಳು ಮತ್ತು ಸರಾಯಿಗಳು ಅವರ ಮನೆಯ ಹತ್ತಿರ ಸುಳಿಯಬಾರದು ಎಂದು ಕಟ್ಟಾಜ್ಞೆ ಮಾಡಿದ್ದರು. ಅವರ ಮನೆಗೆ ಯಾರು ಊಟ ಅಥವಾ ತಿಂಡಿಯ ಸಮಯ ಹೋದರೂ, ಅವರಿಗೆ ಪುಷ್ಕಳವಾದ ಊಟತಿಂಡಿಗಳು ದೊರೆಯುತ್ತಿದ್ದವು. ಬ್ರಾಹ್ಮಣ ವರ್ಗದ ಜನರು ಅವರಲ್ಲಿಗೆ ಹೋದರೆ, ಅವರಿಗೆ ಧಾರಾಳವಾಗಿ ಪಡಿ ಕೊಟ್ಟು, ಅಡುಗೆ ಮಾಡಿಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಅತಿಥಿಗಳಾದ ಬ್ರಾಹ್ಮಣರು ಉಂಡ ಮೇಲೆಯೇ, ಮನೆಯವರು ಊಟ ಮಾಡುತ್ತಿದ್ದುದು ಅವರ ಪದ್ಧತಿ. ಹಬ್ಬಹರಿದಿನಗಳಲ್ಲಿ ಜೇಡಿಬೈಲಿನ ಬಂಗಲೆಯಲ್ಲಿ ಔತಣದ ಊಟವೇ ಬಡಿಸಲ್ಪಡುತ್ತಿತ್ತು. ಪ್ರತಿನಿತ್ಯ ಸಾಯಂಕಾಲ ಹೊತ್ತಿಗೆ ಗಣಪತಿ ಗೌಡರು ಧರ್ಮಗ್ರಂಥಗಳನ್ನು ತಮ್ಮ ಕಂಚಿನ ಕಂಠದಲ್ಲಿ ಪಾರಾಯಣ ಮಾಡುತ್ತಿದ್ದರು. ಆನಂತರ ನಿತ್ಯದ ಸಾಯಂಕಾಲದ ಭಜನೆ. ದೇವರ ಭಜನೆ ಆದ ನಂತರವೇ ಮನೆಯವರಿಗೆ ರಾತ್ರಿಯ ಊಟ, ಇದು ಅವರ ಅನೂಚಾನದ ಪದ್ಧತಿ.

ವರುಷಕ್ಕೊಮ್ಮೆ ಸತ್ಯನಾರಾಯಣ ಪೂಜೆ ಮತ್ತು ಒಂದು ಹರಿಸೇವೆ ಕಡ್ಡಾಯವಾಗಿ ನಡೆಸುತ್ತಿದ್ದರು.  ಬ್ರಾಹ್ಮಣರನ್ನು ಕರೆಸಿ ಪೂಜೆ ಪಾರಾಯಣಗಳನ್ನು ಭಕ್ತಿಯಿಂದ ಮಾಡಿಸುತ್ತಿದ್ದರು. ಈ ದಿನಗಳಲ್ಲಿ ಬ್ರಾಹ್ಮಣರಿಂದಲೇ ಅಡುಗೆ ಮಾಡಿಸಿ ಊರಿಗೆಲ್ಲಾ ಊಟ ಬಡಿಸುತ್ತಿದ್ದರು.

ಗೌಡರದು ಮಧ್ಯಮ ಎತ್ತರದ ಕೃಷ್ಣವರ್ಣದ ಕಟ್ಟಾಳಿನ ಮೈಕಟ್ಟು. ನಾನು ಅವರನ್ನು ಮೊದಲ ಸಲ ಕಂಡಾಗ ಅವರಿಗೆ ಅರುವತ್ತೈದು ಕಳೆದಿತ್ತು. ನೋಡಲು ಅವರು ನಲ್ವತ್ತೈದರ ಹರಯದವರಂತೆ ಆರೋಗ್ಯವಾಗಿ ಕಾಣುತ್ತಿದ್ದರು! ನಿಷ್ಠೆಯ ಜೀವನ ಮತ್ತು ಕಠಿಣ ದುಡಿಮೆ ಅವರ ಆರೋಗ್ಯದ ಗುಟ್ಟುಗಳಾಗಿದ್ದುವು, ಎಪ್ಪತ್ತರ ದಶಕದಲ್ಲಿ ಹತ್ತಾರು ಮೈಲಿ ದೂರ ಹೋಗಬೇಕಾಗಿದ್ದರೆ, ಅವರ ಮನೆಯಲ್ಲಿ ಜೀಪ್ ಇದ್ದರೂ ಅದನ್ನು ಅವಲಂಬಿಸುತ್ತಿರಲಿಲ್ಲ, ತಾನು ನಡೆದೇ ಹೋಗುತ್ತಿದ್ದರು. ದಾರಿಯಲ್ಲಿ ಯಾರೇ ಸಿಕ್ಕಲಿ, ಉಭಯ ಕುಶಲೋಪರಿ ಮಾತನಾಡಿಸುತ್ತಿದ್ದರು. ತಮಗಿಂತ ಚಿಕ್ಕವರನ್ನು ಕಂಡರೆ ಅವರಿಗೆ ನೀತಿಬೋಧೆ ಮಾಡುತ್ತಿದ್ದರು. ಯಾರ ಬಗ್ಗೆಯೂ ಕೆಟ್ಟ ಮಾತು ಅಥವಾ ಕೆಟ್ಟ ಶಬ್ದಗಳನ್ನು ಅವರು ಎಂದೂ ಆಡಿದವರಲ್ಲ. ಅವರು ತಮ್ಮ ಉತ್ತಮ ಗುಣಗಳಿಂದ ಊರಿನಲ್ಲಿ ಗೌರವಾನ್ವಿತ ವ್ಯಕ್ತಿ ಅನ್ನಿಸಿದ್ದರು. ಊರಿನವರ ಹಲವಾರು ಬಗೆಯ ಸಂಸಾರಿಕ ಸಮಸ್ಯೆಗಳಿಗೆ ಗಣಪತಿ ಗೌಡರು ತೀರ್ಮಾನ ಹೇಳುತ್ತಿದ್ದರು. ಗಣಪತಿ ಗೌಡರ ತೀರ್ಮಾನ ಯಾವಾಗಲೂ ನ್ಯಾಯ ಸಮ್ಮತವಾಗಿ ದಯೆಯಿಂದ ಕೂಡಿದುದಾಗಿ ಇರುತ್ತಿದ್ದುವು. ಅವರ ಮಾತಿಗೆ ನಮ್ಮ ಊರಿನಲ್ಲಿ ತುಂಬಾ ಬೆಲೆಯಿತ್ತು.

ಗಣಪತಿ ಗೌಡರ ಮಕ್ಕಳೆಲ್ಲಾ ವಿದ್ಯಾವಂತರು ಮತ್ತು ಸುಸಂಸ್ಕೃತರು. ಅವರೆಲ್ಲಾ ತಂದೆಯ ಮಾತಿಗೆ ವಿಧೇಯರಾಗಿ ನಡೆಯುತ್ತಿದ್ದರು. ಗಣಪತಿ ಗೌಡರು ಸಾಯಂಕಾಲದ ಹೊತ್ತನ್ನು ತನ್ನ ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಕಳೆಯುತ್ತಿದ್ದರು. ಅವರು ಆ ಚಿಕ್ಕಮಕ್ಕಳಿಗೆ ಹಲವು ನೀತಿ ಕಥೆಗಳನ್ನು ಹೇಳುತ್ತಿದ್ದರು. ಜತೆಗೆ ಅಕ್ಷರ ಅಭ್ಯಾಸವನ್ನೂ ಮಾಡಿಸುತ್ತಿದ್ದರು. ಮೊಮ್ಮಕ್ಕಳನ್ನು ಆರುವರ್ಷ ತುಂಬದೇ, ವಿದ್ಯಾಭ್ಯಾಸಕ್ಕಾಗಿ ಹೊರಗಿನ ಊರುಗಳಿಗೆ ಕಳುಹಿಸಲು ಅವರು ಎಂದೂ ಅನುಮತಿ ಕೊಡುತ್ತಿರಲಿಲ್ಲ.

ಆರು ವರ್ಷಗಳ ತನಕ ಮಕ್ಕಳು ಕಡ್ಡಾಯವಾಗಿ ತಾಯಿತಂದೆ ಮತ್ತು ಅಜ್ಜ‌ಅಜ್ಜಿ ಇವರೊಡನೆಯೇ ಬೆಳೆಯಬೇಕು..! ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. ನಮ್ಮ ಮಲೆನಾಡಿನಲ್ಲಿ ಉಳ್ಳವರು ತಮ್ಮ ಮಕ್ಕಳನ್ನು ಹೆಸರಾಂತ ಬೋರ್ಡಿಂಗ್ ಶಾಲೆಗಳಲ್ಲಿ ಬಿಟ್ಟು ಓದಿಸುವುದು ಪದ್ಧತಿ. ಹೆಚ್ಚಿನ ಪ್ಲಾಂಟರುಗಳ ಮಕ್ಕಳಿಗೆ ಮೂರುವರ್ಷ ತುಂಬುತ್ತಲೇ ಹಾಸ್ಟೆಲ್‌ವಾಸ ಪ್ರಾರಂಭವಾಗುತ್ತದೆ. ರಜೆಯಲ್ಲಿ ಮಾತ್ರ ಮನೆಯ ವಾತಾವರಣ. ಮನೆಯಿಂದ ಹೊರಗೆಯೇ ಅಷ್ಟು ಚಿಕ್ಕಮಕ್ಕಳು ಬೆಳೆದರೆ, ಅವರು ನಮ್ಮ ‘ನಡೆ ನುಡಿ ಸಂಸ್ಕೃತಿ ಕಲಿಯುವುದೆಂದು? ಎಂಬುದು ಗಣಪತಿ ಗೌಡರ ಪ್ರಶ್ನೆ. ಅವರು ತಮ್ಮ ಮೊಮ್ಮಕ್ಕಳಿಗೆ ಮನೆಯಲ್ಲಿ ಮಹಾಭಾರತ, ರಾಮಾಯಣ, ಭಾಗವತಗಳ ಕಥೆಗಳನ್ನು ಹೇಳುತ್ತಾ, ದೇವರ ಭಜನೆ, ಶ್ಲೋಕ, ಚುಟುಕಾದ ಪ್ರಾರ್ಥನಾಮಂತ್ರ. ಕನ್ನಡ, ಇಂಗ್ಲಿಷ್ ಮತ್ತು ದೇವನಾಗರೀ ಲಿಪಿಗಳನ್ನು ಕಲಿಸುತ್ತಿದ್ದರು. ಮಗ್ಗಿ ಬಾಯಿಪಾಠ ಮತ್ತು ಜಾಣ್ಮೆಲೆಕ್ಕಗಳನ್ನೂ ಹೇಳಿಕೊಡುತ್ತಿದ್ದರು. ಅವರ ಮೊಮ್ಮಕ್ಕಳೆಲ್ಲಾ ಆರು ವರ್ಷದ ನಂತರವೇ ಹೆಸರಾಂತ ಬೋರ್ಡಿಂಗ್ ಶಾಲೆಗಳನ್ನು ಸೇರಿ, ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದೇ ಸೀಟು ಗಿಟ್ಟಿಸಿಕೊಂಡವರು. ಈಗ ಎಲ್ಲರೂ ತಮ್ಮ ವಿದ್ಯಾಭ್ಯಾಸಗಳಲ್ಲಿ ಉತ್ತಮ ಪ್ರಗತಿಯನ್ನು ತೋರಿಸುತ್ತಿದ್ದಾರೆ. ರಜೆಯಲ್ಲಿ ಬಂದಾಗ ಮನೆಯ ವಾತಾವರಣಕ್ಕೂ ಚೆನ್ನಾಗಿ ಹೊಂದಿ ಬಾಳುತ್ತಿದ್ದಾರೆ.

ಗಣಪತಿ ಗೌಡರಿಗೆ ನನ್ನನ್ನು ಮತ್ತು ಸರೋಜಮ್ಮನನ್ನು ಕಂಡರೆ ಬಲು ಅಕ್ಕರೆ. ನಮ್ಮ ಮನೆಯ ಕಡೆಯಿಂದ ಅವರು ಬಾಳೆಹೊಳೆಗೆ ಹೋಗುವಾಗ ನಮ್ಮನ್ನು ಮಾತನಾಡಿಸದೇ ಮುಂದೆ ಹೋಗುತ್ತಿರಲಿಲ್ಲ. ಸರೋಜಮ್ಮನ ತಂದೆಯವರಾದ ದಿವಂಗತ ಶ್ರೀಮಾನ್ ರಘುಪತಿ ಹೆಬ್ಬಾರರಿಗೆ ಅವರು ಬಹು ಆತ್ಮೀಯರಂತೆ. ನಾವು ನಮ್ಮ ಮಕ್ಕಳನ್ನು ಬೋರ್ಡಿಂಗ್ ಶಾಲೆಗೆ ಹಾಕದೇ, ಅವರುಗಳಿಗೋಸ್ಕರವಾಗಿ ಪಟ್ಟಣಗಳಲ್ಲಿ ಬಿಡಾರ ಮಾಡಿ, ಓದಿಸುತ್ತಾ ಇದ್ದುದು ಅವರಿಗೆ ಬಲು ಮೆಚ್ಚುಗೆ.

ಸರೋಜಮ್ಮ ಮತ್ತು ಕೇಸರಿಯವರೇ! ಎಲ್ಲರೂ ನಿಮ್ಮಂತೆ ತ್ಯಾಗಮಾಡಿ ಮಕ್ಕಳನ್ನು ಬೆಳೆಸಲು ಸಾಧ್ಯವಿಲ್ಲ! ನೀವು ನಿಮ್ಮ ತೋಟದಿಂದ ದೂರ ವಾಸಿಸಿ, ಹಲವಾರು ಟನ್ ಕಾಫಿ, ಅಡಿಕೆ ಕಡಿಮೆ ಕೊಯ್ದಿರಬಹುದು..! ಆದರೆ, ನಿಮ್ಮ ತ್ಯಾಗ ಒಳ್ಳೆಯ ಫಲವನ್ನು ನೀಡಿದೆ! ನಿಮ್ಮ ಮಕ್ಕಳು ಮಾತಿನಲ್ಲಿ, ರೀತಿರಿವಾಜುಗಳಲ್ಲಿ ನಿಮ್ಮನ್ನೇ ಹೋಲುತ್ತಾರೆ. ಅವರುಗಳ ನಡವಳಿಕೆ ನಿಮ್ಮ ನಡವಳಿಕೆಯ ಪ್ರತಿಬಿಂಬ. ದೇವರು ನಿಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯಕೊಟ್ಟು ಕಾಪಾಡುತ್ತಾನೆ! ಎಂದು ನಮ್ಮನ್ನು ಸದಾ ಆಶೀರ್ವಾದ ಮಾಡುತ್ತಿದ್ದರು. ಇಂದಿಗೂ ನಾವು ಅವರ ಸಹೃದಯದ ಆಶೀರ್ವಾದಗಳನ್ನು ನೆನೆಯುತ್ತೇವೆ.

ಕೆಲವು ವರ್ಷಗಳ ಹಿಂದೆ ಗಣಪತಿ ಗೌಡರು ತೀರಿಕೊಂಡರು. ಅವರ ಮಕ್ಕಳಿಗೆ ಸಾಂತ್ವನ ಹೇಳಲು ನಾನು ಜೇಡಿಬೈಲಿಗೆ ಹೋಗಿದ್ದೆ. ಆ ಅಪೂರ್ವ ವ್ಯಕ್ತಿ ಇಲ್ಲದ ಆ ದೊಡ್ಡ ಮನೆ ಯಾಕೋ ಬಿಕೋ ಎನ್ನುತ್ತಿತ್ತು. ಆದರೆ, ಅವರ ಮೊಮ್ಮಕ್ಕಳು ಅವರ ಭಾವಚಿತ್ರದ ಮುಂದೆ ಕುಳಿತು, ಅವರ ಪ್ರೀತಿಯ ಅಜ್ಜ ಹೇಳಿಕೊಟ್ಟ ದೇವರ ಶ್ಲೋಕಗಳನ್ನು ಹೇಳುತ್ತಿದ್ದರು. ಅದನ್ನು ಕಂಡು ನನ್ನ ಮನಸ್ಸಿನ ದುಃಖ ಬಹಳಷ್ಟು ಕಡಿಮೆಯಾಯಿತು. ಮಾನ್ಯ ಗಣಪತಿ ಗೌಡರ ಸಂಸ್ಕೃತಿಯನ್ನು ಈ ಚಿಣ್ಣರು ಮುಂದುವರೆಸುತ್ತಿದ್ದಾರೆ! ಎಂದು ನನ್ನ ಮನಸ್ಸಿಗೆ ಸಮಾಧಾನವಾಯಿತು.

ಗಣಪತಿ ಗೌಡರು ಹೇಳುತ್ತಿದ್ದಂತೆ- ಒಂದು ಮರ ಮುದಿಯಾಗಿ ಬಿದ್ದರೆ, ಅದರ ಬುಡದಲ್ಲಿ ಹಲವಾರು ಸಸಿಗಳು ಹುಟ್ಟುತ್ತವೆ.

ಅವರ ಮೇಲಿನ ವ್ಯಾಖ್ಯೆಯ ಸತ್ಯತೆ ನನ್ನ ಕಣ್ಣುಗಳಿಗೆ ಆದಿನ ಗೋಚರವಾಯಿತು.

* * *