ಸಂಗ್ರಹಿಸುವ ಜನರು ಬಹುಜಾಣ್ಮೆಯಿಂದ ಜೇನುತಟ್ಟಿಗಳನ್ನು ಸಂಗ್ರಹಿಸುತ್ತಾರಂತೆ. ಹಲವರು ಈ ಜೇನುತಟ್ಟಿಗಳ ಬುಡಕ್ಕೆ ಕೈ ಪಾತ್ರೆಯಲ್ಲಿ ಬೆಂಕಿಕೊಂಡು ಹೋಗಿ, ಹೊಗೆ ಎಬ್ಬಿಸಿ ಜೇನುನೊಣಗಳನ್ನು ಓಡಿಸಿ, ಜೇನುತುಂಬಿದ ತಟ್ಟಿಗಳನ್ನು ಕೊಯ್ದು ತೆಗೆಯುತ್ತಾರಂತೆ. ನಾನು ಇದುವರೆಗೆ ಈ ವಿಧಾನಗಳನ್ನು ಪ್ರತ್ಯಕ್ಷ ನೋಡಿಲ್ಲವಾದ್ದರಿಂದ ಹೆಚ್ಚಿನ ವಿವರ ನೀಡಲಾರೆ.

ತೊಡುವೆ ಜೇನು ಅಥವಾ ಕೋಲ್ಜೇನು ಅಂದರೆ ನಾವು ಗೂಡುಗಳಲ್ಲಿ ಸಾಕುವ ಜಾತಿಯ ಜೇನು. ಇವುಗಳ ವ್ಯವಸ್ಥಿತ ಸಾಕುವಿಕೆ ಒಂದು ಗೃಹೋದ್ಯಮ ಆಗಿದೆ. ಈ ಜೇನುನೊಣಗಳು ಅವಕ್ಕೆ ತುಂಬಾ ತೊಂದರೆ ಆದರೆ ಕಚ್ಚುತ್ತವೆ. ಆದರೆ ಇವುಗಳ ಕಡಿತ ಹೆಜ್ಜೇನಿನ ಕಡಿತದಷ್ಟು ಪ್ರಾಣಾಂತಿಕವಲ್ಲ. ಹೆಜ್ಜೇನಿಗೆ ಹೋಲಿಸಿದಾಗ, ಈ ತೊಡುವೆ ಜೇನಿನ ಗೂಡುಗಳು ಅಲ್ಪ ಪ್ರಮಾಣದಲ್ಲಿ ಜೇನು ನೀಡುತ್ತವೆ. ಇವನ್ನು ಗೂಡುಗಳಲ್ಲಿ ತುಂಬಿಸಿ, ತಮ್ಮ ಮನೆಗಳ ಹತ್ತಿರ ಇಟ್ಟು ಸಾಕಣೆ ಮಾಡಿದಾಗ, ಹೂವುಗಳ ಮಕರಂದ ಸಂಗ್ರಹದ ಪ್ರಮಾಣಕ್ಕೆ ಹೊಂದಿಕೊಂಡು, ಸಾಕಣೆದಾರರು ವರ್ಷವಿಡೀ ಜೇನು ಸಂಗ್ರಹಿಸಬಹುದು. ನಿಸರ್ಗದ ಹೆಜ್ಜೇನಿನ ಸಂಗ್ರಹಣೆ ವರ್ಷಕ್ಕೊಮ್ಮೆ ಮಾತ್ರ. ಹೆಚ್ಚಾಗಿ ಹೆಜ್ಜೇನನ್ನು ವಸಂತಮಾಸದಲ್ಲಿ ಸಂಗ್ರಹಿಸುತ್ತಾರೆ. ಇನ್ನು ಮೊಜಂಟಿ ಜೇನು ನಮ್ಮಲ್ಲಿ ಬಹು ಅಪರೂಪಕ್ಕೆ ಕಂಡು ಬರುವ ಜೇನು. ಈ ಜಾತಿಯ ಜೇನುನೊಣಗಳು ಬಹು ಚಿಕ್ಕವು. ಇವು ಸಂಗ್ರಹಿಸುವ ಅಲ್ಪಪ್ರಮಾಣದ ಜೇನಿಗೆ ಔಷಧ ಗುಣಗಳು ಜಾಸ್ತಿ ಇರುವುದರಿಂದ, ಈ ಮೊಜಂಟಿ ಜೇನಿಗೆ ಆಯುರ್ವೇದ ವೈದ್ಯಕೀಯದಲ್ಲಿ ಅಪಾರ ಬೇಡಿಕೆ ಇದೆ. ಮೊಜಂಟಿ ಜೇನು ಕಚ್ಚುವುದಿಲ್ಲ. ಈ ಜಾತಿಯ ಜೇನುನೊಣಗಳು ಕಲ್ಲುಗಳ ಸಂದಿನಲ್ಲಿ, ಅಪರೂಪವಾಗಿ ಮರದ ಪೊಟರೆಗಳಲ್ಲಿ ಮತ್ತು ಕೆಲವೊಮ್ಮೆ ಹಳೆಯ ಕಟ್ಟಡಗಳ ಬಿರುಕಿನಲ್ಲಿ ಗೂಡು ಕಟ್ಟುತ್ತವೆ. ಈ ಜಾತಿಯ ಜೇನಿನ ಸಂಗ್ರಹದ ಪ್ರಮಾಣ ನಗಣ್ಯ ಎಂದೇ ಹೇಳಬಹುದು.

ಆಗ ನಾನು, ಭಟ್ಟರೇ, ನಮ್ಮಲ್ಲಿಯ ಹೆಜ್ಜೇನು ಬಹಳ ಸಿಟ್ಟಿನ ಸ್ವರೂಪದವು. ಕೆಲವೊಮ್ಮೆ ನಾವು ತೋಟದಲ್ಲಿ ಕೆಲಸ ಮಾಡುತ್ತಿರಬೇಕಾದರೆ ಬಂದು ನಮ್ಮನ್ನು ಮತ್ತು ನಮ್ಮ ಆಳುಗಳನ್ನು ಕಚ್ಚುವುದು ಇದೆ. ಆಗ ನಾವು ಪಲಾಯನ ಸೂತ್ರ ಪಠಿಸುತ್ತೇವೆ. ನಮ್ಮ ಆಳುಗಳು ಕೆಲವೊಮ್ಮೆ ಜೇನು ಸಂಗ್ರಹಿಸಲು ಜೇನುತಟ್ಟಿಯ ಕೆಳಗಡೆ ಬೆಂಕಿಯ ಹೊಗೆ ಹಾಕಿ ಅವನ್ನು ಓಡಿಸಿ ಜೇನುತಟ್ಟಿಗಳನ್ನು ಕಿತ್ತಾಗ, ಅವು ಆ ಆಳುಗಳನ್ನು ಪ್ರಾಣಾಂತಿಕವಾಗಿ ಕಚ್ಚಿದ್ದೂ ಇದೆ. ಆದ್ದರಿಂದ, ನಾವು ಅಥವಾ ನಮ್ಮ ಆಳುಗಳು ಅವುಗಳ ಸಹವಾಸಕ್ಕೇ ಹೋಗುತ್ತಿಲ್ಲ. ಮನೆ ಮದ್ದಿಗೆ ಮತ್ತು ಮನೆಯ ಮಕ್ಕಳಿಗೆ ಅಪರೂಪದಲ್ಲಿ ತಿನ್ನಿಸುವ ಬಗ್ಗೆ ನಾವು ಜೇನನ್ನು ಬಾಳೆಹೊಳೆಯ ಅಂಗಡಿಯಲ್ಲಿ ಕೊಳ್ಳುತ್ತೇವೆ. ಅಂಗಡಿಯಲ್ಲಿ ಸಿಗುವ ಹತ್ತಿಪ್ಪತ್ತು ರೊಪಾಯಿಗಳ ಜೇನಿಗಾಗಿ ನಾವ್ಯಾರೂ ಪ್ರಾಣವನ್ನು ಪಣವಾಗಿ ಇಡಲು ತಯಾರಿಲ್ಲ ಎಂಬ ಸತ್ಯ ಸಂಗತಿಯನ್ನು ಅವರಿಗೆ ಅರುಹಿದೆ. ಆಗ ಜೇನುಭಟ್ಟರು ಯಾವುದಕ್ಕೂ ನನಗೊಮ್ಮೆ ನಿಮ್ಮ ತೋಟ ತಿರುಗಾಡಿ ಬರಲು ಅಪ್ಪಣೆ ಕೊಡಿ! ಆ ಮೇಲೆ ನಾನು ತಮಗೆ ಈ ವರ್ಷ ಎಷ್ಟು ಜೇನು ಸಿಗಬಹುದು ಎಂಬ ಅಂದಾಜು ಹೇಳುತ್ತೇನೆ ಎಂದರು.

ಆಗ ನಾನು ಭಟ್ಟರೇ! ನೀವು ಒಂದುಸಾರಿ ಜೇನು ಕೊಯ್ದು ಎಲ್ಲಾ ಜೇನುನೊಣಗಳನ್ನು ನಮ್ಮ ತೋಟದಿಂದ ಓಡಿಸಿಬಿಟ್ಟರೆ ನಮ್ಮ ಸಸ್ಯಕ್ಷೇತ್ರದಲ್ಲಿ ಜೇನುನೊಣಗಳೇ ಮಾಡಬೇಕಾದ ಕೆಲವು ಸಸ್ಯಗಳ ಪರಾಗಸ್ಪರ್ಶವನ್ನು ಮಾಡುವವರಾರು? ಅಲ್ಪಸ್ವಲ್ಪ ಜೇನಿನ ಆಸೆಗೆ ಹೋಗಿ ತೋಟದ ಫಸಲಿನಲ್ಲಿ ಕೊರತೆ ಕಾಣಿಸಿದರೆ ನಮ್ಮ ಜೀವನವೇ ಅಭದ್ರವಾದೀತು ಬೇಡಎಂದೆ.

ಆಗ ಭಟ್ಟರು ನಾನು ಜೇನುತಟ್ಟಿಗಳನ್ನು ಸಂಪೂರ್ಣ ನಾಶ ಮಾಡುವುದಿಲ್ಲ. ನಾನು ಜೇನುತಟ್ಟಿ ಕೊಯ್ದರೂ, ಆ ಗೂಡಿನ ಜೇನುನೊಣ ಮತ್ತು ಹುಳುಗಳ ನಿರ್ವಹಣೆಗೆ ತಕ್ಕಷ್ಟು ಜೇನುತಟ್ಟಿ ಉಳಿಸುತ್ತೇನೆ. ನಾನು ಜೇನುಕೊಯ್ಯುವುದರಿಂದ ಜೇನುಸಂತತಿಗಾಗಲೀ, ನಿಮ್ಮ ತೋಟದ ಫಸಲಿಗಾಗಲೀ ಯಾವ ತೊಂದರೆಯೂ ಆಗುವುದಿಲ್ಲ. ನನ್ನ ಮಾತನ್ನು ನಂಬಿ! ಎಂದರು. ನನಗೆ ಯಾಕೋ ಜೇನುಭಟ್ಟರು ಹೇಳುವುದು ನಿಜವಿರಬಹುದು ಎನ್ನಿಸಿತು.

ಭಟ್ಟರೇ, ಈಗ ಮಧ್ಯಾಹ್ನದ ಊಟದ ಸಮಯ ಆಯಿತು. ಮೊದಲು ಕೈಕಾಲು ತೊಳೆದು ಊಟಕ್ಕೆ ಬನ್ನಿ, ಜತೆಗೆ ಊಟ ಮಾಡೋಣ ಎಂದೆ. ಮಲೆನಾಡಿನವರೇ ಆದ ಭಟ್ಟರು ನಮ್ಮ ರೀತಿರಿವಾಜು ತಿಳಿದವರಾಗಿದ್ದರು. ಕೈಕಾಲು ತೊಳೆದುಕೊಂಡು ಬಂದು ನಿಸ್ಸಂಕೋಚವಾಗೇ ಊಟ ಮಾಡಿದರು. ಆನಂತರ, ಅವರೆದುರು ನಾನು ಎಲೆ ಅಡಿಕೆ ಹರಿವಾಣವನ್ನು ಇಟ್ಟು ತಾಂಬೂಲ ಸೇವನೆ ಆಗಲಿ! ಎಂದೆ. ಹೊಗೆಸೊಪ್ಪು ಬಳಸದೇ ಆತ ತಾಂಬೂಲ ಹಾಕಿಕೊಂಡರು.

ಭಟ್ಟರೇ, ಈಗ ತಾವು ನಮ್ಮ ತೋಟ ಸುತ್ತಿ ಬರಬಹುದು. ನೀವು ತೋಟ ತಿರುಗಿ ಬರುವಷ್ಟು ಹೊತ್ತು ನಾನು ಬಂಗಲೆಯಲ್ಲೇ ಇರುತ್ತೇನೆ. ನನಗೆ ಸ್ವಲ್ಪ ಬರವಣಿಗೆ ಕೆಲಸವಿದೆ. ಎಂದು ನಾನು ಅವರನ್ನು ಕಳುಹಿಸಿಕೊಟ್ಟೆ.

ಸುಮಾರು ಮೂರುಗಂಟೆಯ ಹೊತ್ತಿಗೆ ಜೇನುಭಟ್ಟರು ತೋಟಸುತ್ತಿ ಮನೆಗೆ ಬಂದರು. ಅವರಿಗೆ ಕುಡಿಯಲು ಕಾಫಿ ಕೊಡಿಸಿದೆ. ಅವರು ಕಾಫಿ ಕುಡಿಯುತ್ತಾ, ಸರ್! ನಾನು ಈ ಸೀಜನ್‌ನಲ್ಲಿ ನಿಮಗೆ ಎರಡು ಡಬ್ಬ ಜೇನು ಖಂಡಿತವಾಗಿ ಕೊಡುವೆ. ನನ್ನ ಅಂದಾಜು ಒಟ್ಟಿನಿಂದ ನಾಲ್ಕು ಡಬ್ಬ ಜೇನು ಸಿಗಬಹುದು! ಎಂದರು. ನಮ್ಮಲ್ಲಿ ಡಬ್ಬ ಎಂದರೆ ಹದಿನೆಂಟು ಲೀಟರಿನ ಡಬ್ಬ. ಈ ತರಹದ ಡಬ್ಬಗಳಲ್ಲಿ ನಾವು ನಮ್ಮ ಹಳ್ಳಿಯ ಮನೆಗಳಿಗೆ ಮಳೆಗಾಲದ ಅಡುಗೆಗೆ ಬೇಕಾದ ಅಡುಗೆಯ ಎಣ್ಣೆ ತಂದು ದಾಸ್ತಾನು ಇಡುತ್ತೇವೆ. ನನಗೆ ಜೇನುಭಟ್ಟರ ಮಾತು ಕೇಳಿ ಆಶ್ಚರ್ಯವಾಯಿತು.

ಭಟ್ಟರೇ, ನಮಗೆ ಅಷ್ಟು ಜೇನು ಖಂಡಿತಾ ಅಗತ್ಯವಿಲ್ಲ. ಇಷ್ಟೊಂದು ಪ್ರಮಾಣದ ಜೇನು ಸಂಗ್ರಹಿಸಲು ಹೋಗಿ ನಮ್ಮಲ್ಲಿಯ ಜೇನುನೊಣಗಳು ಓಡಿಹೋದರೆ ಅಥವಾ ನಾಶವಾದರೆ ನಮಗೆ ದೊಡ್ಡ ನಷ್ಟವೇ ಆದೀತು! ನೀವು ಜೇನು ತೆಗೆಯುವುದೇ ಬೇಡ..! ಎಂದೆ. ಅದಕ್ಕೆ ಜೇನುಭಟ್ಟರು ನಿಮಗೆ ಅಷ್ಟೊಂದು ಜೇನು ಮನೆಯ ಖರ್ಚಿಗೆ ಬೇಡದಿದ್ದರೆ ಮಿಕ್ಕಿದ್ದನ್ನು ಮಾರಬಹುದು. ಇಲ್ಲವೇ, ತಮಗೆ ಬೇಕಾದವರಿಗೆ ಕೊಡಬಹುದು. ನೀವು ಒಪ್ಪಿಗೆ ಕೊಟ್ಟರೆ, ಕಾಫಿಯ ಹೂವು ಅರಳಿದ ಹದಿನೈದು ದಿನಗಳೊಳಗೆ ಬಂದು ಜೇನು ತೆಗೆಯುತ್ತೇನೆ. ನಾನು ಬರುವಾಗ ಸಹಾಯಕ ಆಳುಗಳನ್ನು ಕರೆದುಕೊಂಡು ಬರಬೇಕು. ಅದಲ್ಲದೆ ನಿಮ್ಮಲ್ಲಿ ಜೇನುಗೂಡು ಕಟ್ಟಿದ ಮರಗಳು ಬಲು ಎತ್ತರ ಎಂದರು.

ನಮ್ಮ ಮಾತುಗಳನ್ನು ಕೇಳುತ್ತಿದ್ದ ನನ್ನ ಯಜಮಾನತಿ ಸರೋಜಮ್ಮನವರು ನನ್ನನ್ನು ಒಂದು ನಿಮಿಷ ಒಳಗೆ ಬನ್ನಿ ಎಂದು ಕರೆದು, ನಮ್ಮ ಪಕ್ಕದ ತೋಟದವರು ಇವರ ಕೈಯ್ಯಲೇ ಪ್ರತೀವರ್ಷ ಜೇನು ತೆಗೆಸುತ್ತಾರಂತೆ! ವರ್ಷವರ್ಷವೂ ಜೇನು ಹೆಚ್ಚಿಗೆ ಸಿಗುತ್ತೆ ವಿನಃ ಕಡಿಮೆ ಆಗಿಲ್ಲವಂತೆ..! ಎಂದರು. ಈ ವಿಚಾರ ಹೇಗೆ ತಿಳಿಯಿತು? ಸರೋಜಮ್ಮನವರನ್ನು ಕೇಳಿದೆ. ಆ ಕಾಲದಲ್ಲಿ ಈಗಿನಂತೆ ನಮ್ಮ ಗ್ರಾಮದಲ್ಲಿ ದೂರವಾಣಿ ಸಂಪರ್ಕ ಇರಲಿಲ್ಲ.

ಆಗ ಸರೋಜಮ್ಮನವರು ನಮ್ಮ ಹಟ್ಟಿಗೆ ಸೊಪ್ಪು ತರುವ ಮ್ಯಾಥ್ಯೂ ಎಂಬ ಆಳು ನಮ್ಮ ಪಕ್ಕದ ತೋಟದಲ್ಲಿ ಹಲವಾರು ವರ್ಷ ದುಡಿದು ಈ ವರ್ಷ ನಮ್ಮಲ್ಲಿಗೆ ಬಂದವನು. ಭಟ್ಟರನ್ನು ನೋಡುತ್ತಲೇ ಅವನಾಗಿಯೇ ಬಂದು ಹೇಳಿದ ಎಂದು ಹೇಳಿದರು.

ಯಜಮಾನತಿ ಒಪ್ಪಿಕೊಂಡ ಮೇಲೆ ಮುಗಿಯಿತು..! ನಾನು ಒಪ್ಪಲೇಬೇಕಾಯಿತು. ಒಲ್ಲದ ಮನಸ್ಸಿನಿಂದಲೇ ಆಗಲಿ ಭಟ್ಟರೇ, ಈ ಸೀಜನ್‌ನ ಜೇನು ನೀವೇ ತೆಗೆದುಕೊಡಿ! ಎಂದು ಹೇಳಿಬಿಟ್ಟೆ. ಭಟ್ಟರು ಆಗಲಿ ಸಾರ್, ತಾವು ಮಾತು ಕೊಟ್ಟಿದ್ದರಿಂದ ಹೇಳಿದ ಪ್ರಕಾರ ಬಂದು ಜೇನು ತೆಗೆದುಕೊಡುತ್ತೇನೆ. ಈಗ ಅಪ್ಪಣೆ ಕೊಡಿ,  ನಮಸ್ಕಾರ ಎನ್ನುತ್ತಾ ಬಾಳೆಹೊಳೆಯ ಕಡೆಗೆ ವೇಗವಾಗಿ ಹೆಜ್ಜೆ ಹಾಕುತ್ತಾ ಹೋದರು.

ಮಲೆನಾಡಿನ ವ್ಯವಹಾರಗಳೇ ಹೀಗೆ. ಮಾತು ಕೊಟ್ಟರೆ ಮುಗಿಯಿತು! ಕಾಗದ ಪತ್ರ ಅಥವಾ ಮುಂಗಡದ ಪದ್ಧತಿ ಆಗ ನಮ್ಮಲ್ಲಿರಲಿಲ್ಲ. ಈಗ ಕಾಲ ಬದಲಾಗಿದೆ. ಈ ವಿಚಾರ ಇಲ್ಲಿ ಈಗ ಪ್ರಸ್ತುತವಲ್ಲ.

ಆ ವರ್ಷ ಕಾಫಿಹೂವು ಅರಳಿದ ಹತ್ತನೇ ದಿನಕ್ಕೆ ಕೈಯ್ಯಾಳು ಕರೆದುಕೊಂಡು ಜೇನುಭಟ್ಟರು ತೋಟಕ್ಕೆ ಬಂದರು. ತಮ್ಮ ವಾಸಕ್ಕೆ ನಮ್ಮ ಕೂಲಿಲೈನಿನಲ್ಲಿ ಒಂದು ಬಿಡಾರ ಕೇಳಿದರು. ನಾವು ಅವರಿಗೆ ಆ ಅನುಕೂಲ ಒದಗಿಸಿದೆವು. ನಾನು ಅವರು ಜೇನು ಹಿಡಿಯುವ ಕ್ರಮ ನೋಡಲು ಹೋಗಲಿಲ್ಲ. ಕಾರಣ, ಹಿಂದೊಮ್ಮೆ ನಾನು ಜೇನುಗೂಡು ಇರುವ ಒಂದು ಮರದ ಬಳಿ ಹೋದಾಗ ಜೇನುನೊಣಗಳು ಹಟಾತ್ತಾಗಿ ನನ್ನನ್ನು ಕಚ್ಚಿದ್ದುವು. ನನ್ನ ಮುಖ ಮೈ ಊದಿಕೊಂಡು ಆ ದಿನ ನನಗೆ ಜ್ವರ ಬಂದಿತ್ತು. ಸ್ಥಳೀಯ ಡಾಕ್ಟರಿಂದ ಎರಡು ದಿನಗಳ ಚಿಕಿತ್ಸೆಯನ್ನು ನಾನು ಪಡೆಯಬೇಕಾಯಿತು. ನಿಸರ್ಗದ ಯಾವ ಜೀವಿಯೂ ವಿನಾಕಾರಣ ಮನುಷ್ಯನಿಗೆ ತೊಂದರೆ ಕೊಡುವುದಿಲ್ಲ. ನನ್ನ ದುರದೃಷ್ಟಕ್ಕೆ ನನಗೆ ಜೇನುನೊಣ ಕಚ್ಚಿದ ದಿನ, ಯಾರೋ ಜೇನುಹುಟ್ಟಿಗೆ ಕಲ್ಲು ಹೊಡೆದುದರಿಂದ ಹೀಗಾಯಿತಂತೆ…! ಒಮ್ಮೆ ನಾಲ್ಕು ಜೇನು ನೊಣಗಳಿಂದ ಕಡಿಸಿಕೊಂಡ ಮೇಲೆ ನಾನು ಜೇನುಹುಟ್ಟು ಇರುವಲ್ಲಿಗೆ ತಲೆಹಾಕಲು ಹೆದರುತ್ತಿದ್ದೆ. ಹೀಗಾಗಿ ಜೇನುಭಟ್ಟರು ಜೇನು ಸಂಗ್ರಹಿಸುವ ರೀತಿಯನ್ನು ವೀಕ್ಷಿಸಲು ಎಂದೂ ಹೋಗಲಿಲ್ಲ.

ನಾಲ್ಕು ದಿನಗಳಲ್ಲಿ ಜೇನುಭಟ್ಟರು ನಮ್ಮ ಮನೆಗೆ ಬಂದು, ನಿಮ್ಮ ತೋಟದಲ್ಲಿ ಈ ಸಲಕ್ಕೆ ಒಟ್ಟು ಐದು ಡಬ್ಬ ಜೇನು ಸಿಕ್ಕಿತು ಎನ್ನುತ್ತಾ ಎರಡೂವರೆ ಡಬ್ಬ ಜೇನು ನಮಗೆ ಅಳೆದುಕೊಟ್ಟರು. ಆ ವರ್ಷ ನಾವು ನಮಗೆ ಬೇಕಾದವರಿಗೆಲ್ಲಾ ಜೇನು ಕೊಟ್ಟೆವು. ನಮ್ಮ ಸಿಬ್ಬಂದಿಯವರಿಗೆಲ್ಲಾ ಹಂಚಿದೆವು. ಕಾಫಿಯ ಹೂವಿನ ಪರಿಮಳದ ಜೇನು ಎಂದು ನಮ್ಮಲ್ಲಿಯ ಜೇನು ಸವಿದವರೆಲ್ಲಾ ಹೊಗಳಿದರು.

ಜೇನುನೊಣಗಳು ಒಂದು ಬಾರಿಯ ಮಕರಂದ ಸಂಗ್ರಹಣೆ ಮಾಡುವಾಗ ಒಂದೇ ಜಾತಿಯ ಹೂವುಗಳ ಮಕರಂದ ಸಂಗ್ರಹಣೆ ಮಾಡುತ್ತವೆ. ಅವುಗಳ ಈ ಸಂಗ್ರಹಣಾ ಕ್ರಮ ಒಂದೇ ಜಾತಿಯ ಹೂವುಗಳ ಪರಾಗಸ್ಪರ್ಶಕ್ಕೆ ಸಹಾಯವಾಗುತ್ತವೆ. ಅಲ್ಲದೇ, ಆಯಾ ಸಂಗ್ರಹಿತ ಜಾತಿಯ ಹೂವುಗಳ ಬಹುಸೂಕ್ಷ್ಮ ಪರಿಮಳವನ್ನು ನಾವು ಜೇನು ಸೇವಿಸುವಾಗ ಕಂಡುಕೊಳ್ಳುತ್ತೇವೆ. ಆ ವರ್ಷ ನಮ್ಮ ಮನೆಯಲ್ಲಿ ಬೆಳಗಿನ ತಿಂಡಿಗೆ ಅಕ್ಕಿರೊಟ್ಟಿ ಅಥವಾ ಉದ್ದಿನದೋಸೆ ಮಾಡಿದಾಗಲೆಲ್ಲಾ ತಿಂಡಿಯ ಜತೆಗೆ ಧಾರಾಳವಾಗಿ ಜೇನು ಬಡಿಸುತ್ತಿದ್ದರು.

ಜೇನುಭಟ್ಟರು ಮುಂದಿನ ವರ್ಷ ಜೇನು ಸಂಗ್ರಹಿಸಲು ಬಂದು ನಮ್ಮ ಪಾಲಿಗೆ ಮೂರು ಡಬ್ಬ ಜೇನು ಕೊಟ್ಟರು. ಅವರು ಹೇಳಿದ ಪ್ರಕಾರ ನಮ್ಮ ತೋಟದಲ್ಲಿ ಜೇನಿನ ಉತ್ಪತ್ತಿ ಹೆಚ್ಚಿತ್ತು. ನನಗೂ ಅವರು ಜೇನಿನ ಸಂತತಿಗೆ ತೊಂದರೆ ಮಾಡಲಿಲ್ಲ ಎಂಬ ಸಮಾಧಾನ ಆಯಿತು. ಮರುವರ್ಷ ಜೇನು ಸಂಗ್ರಹಿಸಲು ಜೇನುಭಟ್ಟರು ಸಂಸಾರ ಸಹಿತ ಬಂದಿದ್ದರು..! ಅದೇ ವರ್ಷ ಅವರಿಗೆ ಮದುವೆ ಆಗಿತ್ತು. ಮದುವೆ ಆಗಬೇಕಿದ್ದರೆ, ಅವರ ಆರ್ಥಿಕಸ್ಥಿತಿ ಖಂಡಿತವಾಗಿ ಸುಧಾರಿಸಿತ್ತು. ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಹೆಚ್ಚುಕಡಿಮೆ ಇದೇ ಪ್ರಮಾಣದಲ್ಲಿ ನಮಗೆ ಜೇನು ಸಿಕ್ಕಿತು. ಆ ನಂತರ, ಅದೇನು ಕಾರಣವೋ ನಮ್ಮಲ್ಲಿಯ ಜೇನುತಟ್ಟಿಗಳ ಸಂಖ್ಯೆ ಕುಸಿಯತೊಡಗಿತು. ಮುಂದಿನ ಮೂರುನಾಲ್ಕು ವರ್ಷಗಳಲ್ಲಿ ಡಬ್ಬಗಟ್ಟಲೆ ಸಿಗುತ್ತಿದ್ದ ಜೇನಿನ ಪ್ರಮಾಣವು ಬಾಟಲಿಗಳಿಗೆ ಸೀಮಿತವಾಯಿತು.

೧೯೮೫ನೇ ಇಸವಿಯಲ್ಲಿ ನಮ್ಮಲ್ಲಿಯ ಜೇನು ಸಂಗ್ರಹಮಾಡಲು ಬಂದ ಜೇನುಭಟ್ಟರು ಸಾರ್! ಅದೇನು ಕಾರಣವೋ ಗೊತ್ತಿಲ್ಲ..! ಈ ವರ್ಷ ನಿಮ್ಮ ತೋಟದಲ್ಲಿ ಮಾತ್ರವಲ್ಲ, ಎಲ್ಲಾ ಕಡೆಯ ತೋಟಗಳಲ್ಲೂ ಜೇನುತಟ್ಟಿಗಳು ಕಾಣುತ್ತಿಲ್ಲ ಅಂದರು. ಆ ವರ್ಷವೇ ಜೇನುಭಟ್ಟರು ಸ್ವಲ್ಪ ಜಮೀನು ಕೊಂಡು ಕೃಷಿಯನ್ನೇ ಅವಲಂಬಿಸಲು ಪ್ರಯತ್ನಿಸುತ್ತಿದ್ದರು. ಮುಂದಕ್ಕೆ ಒಂದೆರಡು ವರ್ಷ ಬೇಸಗೆಯಲ್ಲಿ ಜೇನುಭಟ್ಟರು ನಮ್ಮಲ್ಲಿಗೆ ಬಂದರೂ ಅವರಿಗೆ ಹೆಜ್ಜೇನಿನ ತಟ್ಟಿಗಳು ಕಾಣಲಿಲ್ಲ. ಬಹು‌ಎತ್ತರದ ಮರಗಳ ಮೇಲೆ ಒಂದೋ ಎರಡೋ ಜೇನುತಟ್ಟಿಗಳು ಕಂಡಾಗ ಅವರು ನಾನು ಈ ವರ್ಷ ಜೇನು ತೆಗೆಯುವುದಿಲ್ಲ. ನಾನೇನಾದರೂ ಜೇನು ತೆಗೆದರೆ ಜೇನಿನ ಸಂತಾನವೇ ಮುತ್ತಿಹೋಗುವುದೋ ಎಂಬ ಭಯ ಆಗುತ್ತೆ ಎನ್ನುತ್ತಿದ್ದರು. ಜೇನುನೊಣಗಳಿಗೆ ಅದೇನೋ ಸಾಂಕ್ರಾಮಿಕ ರೋಗ ಬಂದಿರಬೇಕು..! ಎಂದು ಜೇನುಭಟ್ಟರು ತನ್ನ ಕೊನೆಯ ತೀರ್ಮಾನ ಹೇಳಿದರು.

ಮುಂದಿನ ವರ್ಷಗಳಲ್ಲಿ ಜೇನುಭಟ್ಟರು ನಮ್ಮಲ್ಲಿಗೆ ಬರಲೇ ಇಲ್ಲ. ನಮ್ಮಲ್ಲಿಯ ಜೇನುತಟ್ಟಿಗಳ ಸಂಖ್ಯೆ ಈಗ ಮೊದಲಿನ ನೂರನೇ ಒಂದು ಪಾಲಿಗೆ ಇಳಿದಿದೆ. ಮನೆಮಂದಿಗೆ ಮತ್ತು ಮಕ್ಕಳಿಗೆ ಜೇನಿನ ರುಚಿ ಒಗ್ಗಿಹೋಗಿತ್ತು. ನಾನು ಜೇನುಸಾಕಣೆ ಕೇಂದ್ರದವರನ್ನು ಸಂಪರ್ಕಿಸಿ ಜೇನುಗೂಡು ಇಟ್ಟು ತೊಡುವೆ ಜೇನು ಸಾಕುವ ಪ್ರಯತ್ನ ಮಾಡಿದೆ. ಈ ಜೇನುಸಾಕಣೆಯ ಉಪವೃತ್ತಿಯಲ್ಲಿ ನನ್ನನ್ನು ಬಿಟ್ಟು ಬೇರಾರಿಗೂ ಉಮೇದಿರುವಂತೆ ಕಾಣಲಿಲ್ಲ. ನಿಸರ್ಗದಲ್ಲಿ ಸಿಕ್ಕುತ್ತಿದ್ದ ಡಬ್ಬಗಟ್ಟಳೆ ಸಿಹಿ ಜೇನಿಗೆ ಒಗ್ಗಿಹೋದ ಮನೆಮಂದಿ ಮತ್ತು ನೌಕರವರ್ಗ ತೊಡವೆ ಜೇನುಸಾಕಣೆಯಲ್ಲಿ ಉಮೇದು ತೋರಿಸಲೇ ಇಲ್ಲ..! ಜೇನುಸಾಕಣೆ ಕೇಂದ್ರದಿಂದ ತಂದ ಇಪ್ಪತ್ತು ಗೂಡುಗಳಲ್ಲಿ ಒಂದೊಂದೇ ಖಾಲಿ ಆಗುತ್ತಾ, ಕೊನೆಗೆ ಎಲ್ಲವೂ ಖಾಲಿಯಾಗಿ ಭಣಗುಟ್ಟಿದುವು. ಕ್ರಮೇಣ ಅವೆಲ್ಲಾ ಅಟ್ಟ ಸೇರಿಬಿಟ್ಟವು. ತೊಡವೆ ಜೇನುಸಾಕಣೆಯಲ್ಲಿ ನಾನು ಸಂಪೂರ್ಣ ವಿಫಲನಾದೆ..!

ಈಗಲೂ ಒಮ್ಮೊಮ್ಮೆ ಆಪಾಟಿ ಇರುತ್ತಿದ್ದ ಹೆಜ್ಜೇನು ಸಂತತಿಗೆ ಏನಾಯಿತು? ಎಂದು ಆಲೋಚಿಸುತ್ತೇನೆ. ಜೇನುನೊಣಗಳಿಗೆ ಸಾಂಕ್ರಾಮಿಕ ರೋಗ ಬಂದಿರಬಹುದು. ಆದರೆ, ಯಾವ ರೋಗ ಬಂದರೂ ಪ್ರಕೃತಿಯು ಅವುಗಳ ಸಂತಾನ ನಾಶವಾಗಲು ಬಿಡುವುದಿಲ್ಲ. ಕ್ರಮೇಣ, ಜೇನುಹುಟ್ಟುಗಳ ಸಂಖ್ಯೆ ಜಾಸ್ತಿ ಆಗಲೇಬೇಕಿತ್ತು..! ಆದರೆ, ಹಾಗೆ ಆಗಲಿಲ್ಲ. ಈ ವಿಚಾರ ನನಗೆ ಬಹಳ ವ್ಯಥೆ ತಂದಿದೆ.

ಜೇನುನೊಣಗಳ ಸಂಖ್ಯೆ ಕಡಿಮೆ ಆಗಲು ಇನ್ನೊಂದು ಕಾರಣವೂ ಇರಬಹುದು. ೧೯೮೦ನೇ ದಶಕದಲ್ಲಿ ನಮ್ಮ ಮಲೆನಾಡಿನ ರೈತರು ಯಾವುದೇ ಬೆಳೆಗೆ ಕೀಟಗಳ ಪೀಡೆ ಕಂಡರೂ, ಎಂಡೋ ಸಲ್ಫಾನ್ ಎಂಬ ವಿಷವನ್ನು ಸಿಂಪಡಿಸಲು ಶುರುಮಾಡಿದರು. ನಮ್ಮ ವ್ಯವಸಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಈ ಕೀಟನಾಶಕವನ್ನು ಮುಕ್ತಕಂಠದಿಂದ ಶಿಫಾರಸು ಮಾಡಿದುವು. ದಿನ ಬೆಳಗಾದರೆ ಬಾನುಲಿಯ ರೈತರ ಕಾರ್ಯಕ್ರಮದಲ್ಲಿ ಈ ಎಂಡೋಸಲ್ಫಾನ್ ಕ್ರಿಮಿನಾಶಕದ ಗುಣಗಾನವೇ ಹರಿದುಬಂತು. ಮಲೆನಾಡಿನ ರೈತರೂ ಈ ಶಿಫಾರಸನ್ನು ನಂಬಿ ಈ ಕ್ರಿಮಿನಾಶಕವನ್ನು ಉಪಯೋಗಿಸತೊಡಗಿದರು. ಈ ವಿಷವು ಕೃಷಿಗೆ ಅಪಾಯಕಾರಿ ಕೀಟಗಳು ಮತ್ತು ಜಂತುಗಳನ್ನು ನಾಶಪಡಿಸುವುದರ ಜತೆಗೆ, ಕೃಷಿಗೆ ಸಹಾಯಕಾರಿಯಾದ ಕೀಟಗಳನ್ನು ಹಾಗೂ ಇತರೇ ಜಂತುಗಳನ್ನು ನಾಶಪಡಿಸಿತು. ಮೊದಲಿಗೆ ಈ ಕೀಟನಾಶಕ ತಾತ್ಕಾಲಿಕ ಪರಿಹಾರವನ್ನೇನೋ ನೀಡಿತು. ಮುಂಬರುವ ವರ್ಷಗಳಲ್ಲಿ ಈ ಕಾಲಕೂಟದಂತಹಾ ವಿಷವನ್ನು ಪ್ರತಿವರ್ಷ ಸಿಂಪಡಿಸುವ ಅನಿವಾರ್ಯತೆಯನ್ನು ರೈತರು ಕಂಡುಕೊಳ್ಳಬೇಕಾಯಿತು.

ಕೃಷಿಕನಿಗೆ ಸಹಾಯಕ ಎನ್ನಿಸುವ ದೇವರ ಗುಬ್ಬಿ(ಲೇಡಿಬರ್ಡ್), ಹಲವು ತರಹೆಯ ಕಪ್ಪೆಗಳು ಮತ್ತು ಹಾವುಗಳು ನಮ್ಮ ಜಮೀನುಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ನಿರ್ನಾಮವಾದುವು. ಇವುಗಳ ಜತೆಗೆ ಧಾರಾಳವಾಗಿ ಕಾಣಬರುತ್ತಿದ್ದ ಗುಬ್ಬಚ್ಚಿ, ಹಸಿರು ಪಾರಿವಾಳ, ಕೆಂಬತ್ತು ಮುಂತಾದ ಪಕ್ಷಿಗಳೂ ಕಾಣೆಯಾದವು. ಈ ಎಂಡೋ ಸಲ್ಫಾನ್ ನಮ್ಮ ತೋಟಗಳನ್ನು ಪ್ರವೇಶಿಸಿದ ಒಂದೆರಡು ವರ್ಷಗಳಲ್ಲೇ ಜೇನುನೊಣಗಳೂ ಕಡಿಮೆ ಆದುವು. ಹೀಗೆಯೇ ಸಹಾಯಕಾರಿ ಕ್ರಿಮಿಕೀಟ ಮತ್ತು ಜೀವಿಗಳು ಕಾಣೆ ಆಗುವುದರ ಬೆನ್ನಿಗೇ ಎಂಡೋ ಸಲ್ಫಾನ್ ಎಂಬ ಈ ಕೀಟನಾಶಕದ ಉಪಯೋಗ ನಮಗೆ ಬೇಕಾದ ಪ್ರತಿಫಲ ನೀಡಲಿಲ್ಲ. ಬದಲಾಗಿ ಇದನ್ನು ಉಪಯೋಗಿಸಿದ ಕಡೆಗಳಲ್ಲೆಲ್ಲಾ ಸಸ್ಯಗಳಿಗೆ ವ್ಯಾಪಕವಾಗಿ ಶಿಲೀಂದ್ರ ರೋಗ ವ್ಯಾಪಿಸಿದ್ದು ಕಂಡು ಬಂತು. ಈ ಕೀಟನಾಶಕದ ಬಗ್ಗೆ ರೈತರಿಗೆ ಸರಿಯಾದ ಅರಿವು ಮೂಡುವಷ್ಟರಲ್ಲಿ, ನಮ್ಮ ಪರಿಸರಕ್ಕೆ ತುಂಬಲಾರದ ನಷ್ಟ ಆಗೇಬಿಟ್ಟಿತ್ತು. ನಾನು ತಿಳಿದುಕೊಂಡಂತೆ, ಕೀಟನಾಶಕಗಳ ಉಪಯೋಗ ಜೇನುನೊಣಗಳಿಗೆ ಮಾರಕವಾಗಿ ಪರಿಣಮಿಸಿತು.

ಮಲೆನಾಡಿನ ರೈತರಾದ ನಾವು ಶಿಲೀಂದ್ರಭಾದೆ ಹಾಗೂ ಕ್ರಿಮಿಕೀಟಗಳ ಭಾದೆಗಳನ್ನು ನಿಯಂತ್ರಿಸುವರೇ ಇಂದಿಗೆ ಪುನಃ ನೈಸರ್ಗಿಕ ಕೃಷಿ, ಸಾವಯವ ಅಥವಾ ಆರ್ಗ್ಯಾನಿಕ್ ಕೃಷಿಗಳತ್ತ ಒಲವು ತೋರುತ್ತಿದ್ದೇವೆ. ಹಾನಿಕರ ಪರಿಣಾಮ ಬೀರುವ ಕೆಲವು ರಾಸಾಯನಿಕ ಕ್ರಿಮಿನಾಶಕಗಳಿಗೆ ವಿದಾಯ ಹೇಳಿದ ಮೇಲೆ ನಮ್ಮ ತೋಟದಲ್ಲಿ ಇತ್ತೀಚೆಗೆ ಒಂದೊಂದು ಹೆಜ್ಜೇನಿನ ಹುಟ್ಟು ಕಾಣುತ್ತಿದೆ. ನಾವು ಈಗ ಹೆಜ್ಜೇನಿನಿಂದ ಜೇನು ಸಂಗ್ರಹಿಸುವ ಬಗ್ಗೆ ಚಿಂತಿಸುತ್ತಿಲ್ಲ. ನಮಗೆ ಸದ್ಯಕ್ಕೆ ಹೆಜ್ಜೇನು ಬೇಡ! ಅವುಗಳ ಸಂತತಿ ಹೆಚ್ಚಲಿ…! ಎಂದು ಆಶಿಸುತ್ತೇವೆ.

ಇತ್ತೀಚೆಗೆ ಶೃಂಗೇರಿಪೇಟೆಯಲ್ಲಿ ನಮ್ಮ ಜೇನುಭಟ್ಟರು ಸಿಕ್ಕಿದರು. ಈಗ ಏನು ಮಾಡುತ್ತಾ ಇದ್ದೀರಿ ಭಟ್ಟರೇ? ಈಗ ಜೇನು ಸಂಗ್ರಹ ಮಾಡುವುದಿಲ್ಲವೇ? ಎಂದು ಕೇಳಿದೆ.

ಈಗ ನಾನು ಕೃಷಿ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿದ್ದೇನೆ. ಆದರೂ, ಬಹು ವರ್ಷಗಳ ಕಾಲ ಜೇನು ಸಂಗ್ರಹಿಸಿದುದರಿಂದ ಜನ ನನ್ನನ್ನು ಜೇನುಭಟ್ಟರು ಎಂದೇ ಕರೆಯುತ್ತಾರೆ….! ಎಂದರು ನಗುತ್ತಾ.

ಅವರು ಸಂಗ್ರಹಿಸಿ ಕೊಡುತ್ತಿದ್ದ ಡಬ್ಬಗಟ್ಟಲೆ ಜೇನು ಈಗ ಒಂದು ಕನಸು..!

* * *