ನಾನು ಬಹಳ ಚಿಕ್ಕವನಾಗಿದ್ದೆ. ಅಂದಾಜು ೧೯೫೨ನೇ ಇಸವಿ ಇರಬಹುದು. ಉಡುಪಿ ಮತ್ತು ಮಂಗಳೂರುಗಳ ನಡುವೆ ಹರಿಯುತ್ತಿದ್ದ ಮೂರು ದೊಡ್ಡ ನದಿಗಳಿಗೆ ಆಗ ಸರ್ಕಾರದವರು ಸೇತುವೆಗಳನ್ನು ಕಟ್ಟಿಸಿರಲಿಲ್ಲ.

ಆ ದಿನಗಳಲ್ಲಿ ನಮ್ಮೂರಾದ ಉಡುಪಿಯಿಂದ ಮೂವತ್ತಾರು ಮೈಲುಗಳಷ್ಟು ದೂರದಲ್ಲಿದ್ದ ನಮ್ಮ ಜಿಲ್ಲಾಕೇಂದ್ರವಾದ ಮಂಗಳೂರಿಗೆ ಹೋಗಬೇಕಾದರೆ ನಾವು ಮೂರು ದೊಡ್ಡ ನದಿಗಳನ್ನು ದೋಣಿಹತ್ತಿ ದಾಟಬೇಕಿತ್ತು. ಬಸ್ಸಿನಲ್ಲಿ ಹೋಗುವವರು ಆ ನದಿಗಳನ್ನು ದೋಣಿಯಲ್ಲಿ ದಾಟಿದ ನಂತರ ತಾವು ಪ್ರಯಾಣಿಸಿದ ಬಸ್ ಕಂಪೆನಿಗೆ ಸಂಬಂಧಿಸಿದ ಇನ್ನೊಂದು ಬಸ್ ಹಿಡಿದು ಮುಂದಕ್ಕೆ ಪ್ರಯಾಣಿಸಬೇಕಿತ್ತು. ಬಸ್ ಕಂಪನಿದಾರರು ಇದಕ್ಕೋಸ್ಕರವಾಗಿಯೇ ಕಂಬೈನ್ಡ್ ಬುಕ್ಕಿಂಗ್ ಏಜೆನ್ಸಿ ಎಂಬ ಒಂದು ಸಂಸ್ಥೆಯನ್ನು ಹುಟ್ಟುಹಾಕಿ, ಈ ತೊಂದರೆ ನಿವಾರಿಸಿದ್ದರು. ಎಲ್ಲಾ ಪ್ರಮುಖ ಬಸ್ ಕಂಪನಿಯವರು ಈ ಏಜೆನ್ಸಿಗೆ ಮೆಂಬರರಾಗಿ ಸೇರಿದ್ದರು.

ಈ ಏಜೆನ್ಸಿ ಮುಖಾಂತರ ಮಂಗಳೂರಿಗೆ ಡೈರೆಕ್ಟ್ ಟಿಕೆಟ್ ಪಡೆದು, ಇತರೇ ಮೆಂಬರ್ ಕಂಪನಿಗಳ ಬಸ್‌ಗಳಲ್ಲಿ ಅದೇ ಟಿಕೆಟ್ ತೋರಿಸಿ ಕುಳಿತು, ದೂರದ ಮಂಗಳೂರಿಗೆ ಯಾವ ಅಡಚಣೆಯೂ ಇಲ್ಲದೆ ಜನರು ಪ್ರಯಾಣ ಮಾಡಹುದಾಗಿತ್ತು. ಕಾರು ಮತ್ತು ಸ್ವಂತ ಗಾಡಿಗಳಲ್ಲಿ ಪ್ರಯಾಣಿಸುವವರು, ಈ ನದಿಗಳನ್ನು ತಮ್ಮ ವಾಹನ ಸಮೇತ ದಾಟುವ ವ್ಯವಸ್ಥೆ ಇತ್ತು. ಕಾರು, ಗಾಡಿ ಮೊದಲಾದ ಲಘುವಾಹನಗಳನ್ನು ನಾಲ್ಕು ದೊಡ್ಡದಾದ ದೋಣಿಗಳ ಮೇಲೆ ನಿರ್ಮಿಸಿದ ಮಚಾನುಗಳ ಮೇಲೆ ನಿಲ್ಲಿಸಿ, ನದಿಗಳನ್ನು ದಾಟಿಸಲಾಗುತ್ತಿತ್ತು. ಇಂಗ್ಲಿಷ್ ಭಾಷೆಯಲ್ಲಿ ಫೆರ್ರಿ ಎನ್ನಲಾಗುತ್ತಿದ್ದ ಈ ಸಾಗಣೆಯ ಮಚಾನುಗಳನ್ನು ಜನಸಾಮಾನ್ಯರು ಜಂಗಲ್ ಎಂದು ಕರೆಯುತ್ತಿದ್ದರು. ಈ ದೋಣಿಯ ಮೇಲಿನ ತೇಲು ತೆಪ್ಪಗಳನ್ನು, ನಾಲ್ಕಾರು ಜನ ಖಲಾಸಿಗಳು ಜಲ್ಲುಗಳು ಎಂದು ಕರೆಯಲ್ಪಡುವ ಉದ್ದನೆಯ ಬೊಂಬಿನ ಗಳುಗಳ ಸಹಾಯದಿಂದ, ನದಿಯ ತಳದ ನೆಲದ ಹರವನ್ನು ಒತ್ತುತ್ತಾ ಮುಂದೆ ನಡೆಸುತ್ತಿದ್ದರು.

ಆ ದಿನಗಳಲ್ಲಿ ಯಾವುದೇ ವಾಹನದಲ್ಲಿ ಪ್ರಯಾಣಿಸಿದರೂ, ಬೆಳಗ್ಗೆ ಬೇಗ ಹೊರಟರೆ, ಸಾಯಂಕಾಲದ ಹೊತ್ತಿಗೆ ನಾವು ಮಂಗಳೂರನ್ನು ಸೇರುತ್ತಿದ್ದೆವು.

ನಾನು ಈ ನದಿಗಳ ಬಗ್ಗೆ ಯಾಕೆ ಬರೆದೆನೆಂದರೆ, ಆ ಕಾಲದಲ್ಲಿ ನಮಗೆ ತುಂಬಾ ಉಪದ್ರ ಕೊಡುತ್ತಿದ್ದ ತುಡುಗು ದನಗಳು ಮತ್ತು ಕಳ್ಳ ಬೆಕ್ಕುಗಳನ್ನು ಉಪಾಯದಿಂದ ಹಿಡಿದು ಹೊಳೆಯ ಆಚೆ ಬಿಟ್ಟು ಬರುತ್ತಿದ್ದೆವು. ಅವು ಪುನಃ ಈ ಕಡೆಗೆ ದಾಟಿ ವಾಪಸ್ ಬರಲು, ಅವಕ್ಕೆ  ಸದಾ ನೀರು ತುಂಬಿಹರಿಯುವ ಈ ನದಿಗಳು ಅಡ್ಡಿ ಮಾಡುತ್ತಿದ್ದವು. ಯಾಕೆಂದರೆ, ನದಿ ದಾಟಿ ಈ ಕಡೆಗೆ ಬರಲು ಈಗಿನಂತೆ ಸೇತುವೆಗಳು ಆ ದಿನಗಳಲ್ಲಿ ಇರಲಿಲ್ಲ.

ಇಂತಹಾ ಸಂಪರ್ಕ ರಹಿತ ಕಾಲದಲ್ಲಿ, ನಮ್ಮ ಮನೆಗೆ ಒಂದು ದೊಡ್ಡ ಗಡವ ಬೆಕ್ಕು ಬಂದು ಬಹಳ ಉಪಟಳ ಕೊಡಲು ಶುರುಮಾಡಿತು. ಅದು ಸಾಮಾನ್ಯವಾಗಿ ಕಾಣಸಿಗುವ ಬೆಕ್ಕುಗಳಿಗಿಂತ ಗಾತ್ರದಲ್ಲಿ ಎರಡುಪಾಲು ದೊಡ್ಡದಾಗಿತ್ತು. ಅದಕ್ಕೆ ಮನುಷ್ಯನ ಹೆದರಿಕೆ ಸ್ವಲ್ಪವೂ ಇರಲಿಲ್ಲ. ಹೆಂಗಸರು ಮತ್ತು ಮಕ್ಕಳನ್ನು ಕಂಡರೆ ಹುಲಿಯಂತೆ ಕರ್ಕಶವಾಗಿ ಅರಚುತ್ತಾ ಅವರ ಮೇಲೆ ಎಗರಿ ಗಾಯ ಮಾಡುತ್ತಿತ್ತು. ಅದು ನಿರ್ಭಯವಾಗಿ ನಮ್ಮ ಅಡುಗೆ ಮನೆಗೆ ನುಗ್ಗಿ ಹಾಲಿನ ಪಾತ್ರೆ, ಅನ್ನದ ಪಾತ್ರೆಯ ಮುಚ್ಚಳಗಳನ್ನು ಸರಿಸಿ ಹೊಟ್ಟೆ ತುಂಬಾ ಉಣ್ಣುತ್ತಿತ್ತು. ಹಾಲು ಅಥವಾ ಅನ್ನ ಬಿಸಿಯಾಗಿದ್ದರೆ, ಆ ಪಾತ್ರೆಗಳನ್ನು  ನೆಲಕ್ಕೆ ಉರುಳಿಸಿ ಚೆಲ್ಲಿ, ಸ್ವಲ್ಪ ಬಿಸಿ ಆರಿದ ನಂತರ ಮುಕ್ಕುತ್ತಿತ್ತು. ಮೊಸರು, ಬೆಣ್ಣೆ, ತುಪ್ಪದ ಪಾತ್ರೆ ಮತ್ತು ತಿಂಡಿ ತುಂಬಿದ ಪಾತ್ರೆಗಳಿಗೂ ಅದು ಧಾಳಿ ಇಡುತ್ತಿತ್ತು. ಇದು ಮನೆಯಲ್ಲಿನ ಹೆಂಗಸರು ಮತ್ತು ಮಕ್ಕಳನ್ನು ಹೆದರಿಸಿ ಹಗಲು ರಾತ್ರಿ ಎನ್ನದೆ, ಎಷ್ಟು ಹೊತ್ತಿನಲ್ಲಿ ಬೇಕಾದರೂ ನಮ್ಮ ಅಡುಗೆಮನೆಗಳಿಗೆ ಧಾಳಿಯಿಡುತ್ತಿತ್ತು. ಯಾರಾದರೂ ಗಂಡಸರು ಬಡಿಗೆ ತೆಗೆದುಕೊಂಡು ಅದನ್ನು ಬಡಿಯಲು ಬಂದರೆ, ಅದು ವಿಕಾರವಾಗಿ ಕಿರಿಚುತ್ತಾ ಅವರ ಮೇಲೆ ಎರಗಿ ಕಚ್ಚಿ, ಪರಚಿ ಓಡುತ್ತಿತ್ತು.

ಈ ಬೆಕ್ಕಿನ ಬಣ್ಣ ಕಂದು ಮತ್ತು ಬಿಳಿ. ಅದರ ಸ್ವರ ಬಹಳ ಕರ್ಕಶ. ಅದನ್ನು ಕಂಡರೆ ನಮ್ಮಲ್ಲಿ ಎಲ್ಲರಿಗೂ ಹೆದರಿಕೆ. ದೊಡ್ಡ ಗಂಡಸರೂ ಅದನ್ನು ಎದುರಿಸಲು ಧೈರ್ಯ ಮಾಡುತ್ತಿರಲಿಲ್ಲ. ಹೆಂಗಸರು ಅದು ಅಡುಗೆ ಮನೆಗೆ ಬಂದರೆ, ಜಾಗ ಖಾಲಿ ಮಾಡುತ್ತಿದ್ದರು. ಚಿಕ್ಕ ಹುಡುಗರಾದ ನಾವು ಅದನ್ನು ಕಂಡರೆ, ಜಿಮ್ ಕಾರ್ಬೆಟ್ ಅವರ ಕಥೆಗಳಲ್ಲಿ ಬರುವ ನರಭಕ್ಷಕ ಹುಲಿಯನ್ನು ಕಂಡಂತೆ ಹೆದರಿ ಓಡುತ್ತಿದ್ದೆವು.

ಆಗಿನ ಕಾಲದಲ್ಲಿಯ ಎಲ್ಲಾ ಮನೆಗಳಂತೆ, ನಮ್ಮ ಮನೆಯೂ ಕೂಡಾ ಮಂಗಳೂರು ಹೆಂಚಿನ ಮನೆ. ಈ ಬೆಕ್ಕು ಹೆಂಚಿನ ಮಾಡು ಹಾಗೂ ಗೋಡೆಗಳ ಮಧ್ಯದ ಸಂದಿಯಿಂದ ತೂರಿ ಅಡುಗೆ ಮನೆಯ ಒಳಗೆ ಬರುತ್ತಿತ್ತು. ಅಡುಗೆ ಮನೆಯ ಕಿಟಿಕಿ ಬಾಗಿಲುಗಳನ್ನು ಹಾಕಿದರೆ ಅದಕ್ಕೆ ಬಹಳ ಅನುಕೂಲ ಎನ್ನಿಸಿ, ಮಾಡಿನ ಸಂದಿಯಿಂದ ಒಳಗೆ ಇಳಿದು ಬಂದು ಆರಾಮವಾಗಿ ತನಗೆ ಬೇಕಾದ್ದನ್ನು ಅಡ್ಡಿಯಿಲ್ಲದೆ ದೋಚುತ್ತಿತ್ತು.

ನಮ್ಮ ತಾಯಿಯವರು ಈ ಬೆಕ್ಕಿನ ಉಪಟಳ ತಾಳಲಾರದೆ ನಮ್ಮ ತಂಡಕ್ಕೆ ಈ ಬೆಕ್ಕನ್ನು ಗಡೀಪಾರು ಮಾಡುವ ಕೆಲಸ ವಹಿಸಿದರು. ಮೇಲುನೋಟಕ್ಕೆ ಈ ಕೆಲಸವೇನೋ ಬಹು ಸುಲಭವಾಗಿತ್ತು. ಅದೇನೆಂದರೆ, ನಾವು ಈ ಬೆಕ್ಕನ್ನು ಉಪಾಯದಿಂದ ಹಿಡಿದು ನಮ್ಮ ಮನೆಯಿಂದ ಮೂರು ಮೈಲಿ ದೂರದಲ್ಲಿ ಹರಿಯುತ್ತಿದ್ದ ಉದ್ಯಾವರ ನದಿಯನ್ನು ದಾಟಿಸಿ, ಆಚಿನ ದಡದಲ್ಲಿ ಅದನ್ನು ಬಿಟ್ಟು ಬರುವುದಾಗಿತ್ತು.

ಆದರೆ ಈ ಭಯಂಕರವಾದ ಬೆಕ್ಕನ್ನು ಹಿಡಿಯುವುದು ಹೇಗೆ? ಎಂಬ ಸವಾಲು ನಮಗೆ ಎದುರಾಯಿತು. ಈ ಕಳ್ಳ ಬೆಕ್ಕು ಎಂದರೆ ಕರೆದರೆ ಬಂದು ನಮ್ಮ ಕೈನೆಕ್ಕುವ ಬೆಕ್ಕಲ್ಲ! ನಮ್ಮನ್ನು ನೋಡಿದೊಡನೆಯೇ ನಾವು ಅದರ ಹಿತೈಷಿಗಳಲ್ಲ ಎಂದು ಅದು ತೀರ್ಮಾನಿಸಿ, ನಮ್ಮ ಮೇಲೆ ಧಾಳಿ ಇಡುವಂತೆ ಆರ್ಭಟಿಸುತ್ತಿತ್ತು. ಆವೇಶದಿಂದ ನಮ್ಮ ಮೇಲೆ ಎರಗಲು ಬರುತ್ತಿತ್ತು, ಏನಾದರೂ ಹತ್ಯಾರಿ ಅಥವಾ ಕಲ್ಲು ಎತ್ತಿಕೊಂಡು ಅದನ್ನು ಹೊಡೆಯಲು ಹೋದರೆ, ಅದು ನೆಗೆದು ತಪ್ಪಿಸಿಕೊಳ್ಳುತ್ತಿತ್ತು.

ಆ ದಿನ ಸಂಜೆ ನಾವು ಕ್ರಿಕೆಟ್ ಆಡಲು ಹೋಗದೆ, ಬೆಕ್ಕನ್ನು ಬಲಿಹಾಕುವ ಬಗ್ಗೆ ಸಮಾಲೋಚನೆ ನಡೆಸಿದೆವು. ಬೆಕ್ಕಿಗೆ ಏರ್‌ಗನ್‌ನಿಂದ ಹೊಡೆಯುವುದು, ವಿಷಹಾಕುವುದು ಮೊದಲಾದ ನಮ್ಮ ಟೆರರಿಸ್ಟ್ ಐಡಿಯಾಗಳು ನಮ್ಮ ತಾಯಿಯವರಿಗೆ ಅಪಥ್ಯ. ಸಾಲದ್ದಕ್ಕೆ ಬೆಕ್ಕನ್ನು ಕೊಂದರೆ, ಅದನ್ನು ಕೊಂದವನ ಕೈಬಿದ್ದು ಹೋಗಿ, ಜೀವಮಾನವಿಡೀ ನರಳಬೆಕಾಗುತ್ತೆ ಎಂಬ ನಂಬಿಕೆ ನಮ್ಮ ಉಡುಪಿಯ ಊರಿನಲ್ಲಿ ಜನಜನಿತವಾಗಿತ್ತು.

ನಮ್ಮ ಮನೆಯ ಹತ್ತಿರದಲ್ಲೇ ತ್ಯಾಂಪಣ್ಣ ಶೆಟ್ಟಿ ಎಂಬ ಒಬ್ಬ ಮುದುಕ ಇದ್ದರು. ಅವರ ಬಲಗೈಯ್ಯ ಶಕ್ತಿ ಉಡುಗಿ ಹೋಗಿತ್ತು. ನಾವು ಅವರನ್ನು ಅವರ ಬಲಹೀನವಾಗಿದ್ದ ಬಲಕೈಯ ಕಾಯಿಲೆಯ ಬಗ್ಗೆ ಎಷ್ಟುಬಾರಿ ಕೇಳಿದರೂ, ಅವರದ್ದು ಯಾವಾಗಲೂ ಒಂದೇ ಸ್ಟ್ಯಾಂಡರ್ಡ್ ಉತ್ತರ. ಅದೇನೆಂದರೆ,- ಮಕ್ಕಳಿರಾ, ನಾನು ನಿಮ್ಮಂತೆ ಹುಡುಗಾಟಿಕೆಯಲ್ಲಿದ್ದಾಗ ಒಂದು ಕಳ್ಳಬೆಕ್ಕನ್ನು ಇದೇ ಬಲಗೈಯನ್ನು ಉಪಯೋಗಿಸಿ ದೊಣ್ಣೆಯಿಂದ ಹೊಡೆದು ಕೊಂದೆ.  ಮರುದಿನವೇ ನನ್ನ ಕೈ ಬಿದ್ದು ಹೋಯಿತು ಎನ್ನುತ್ತಿದ್ದರು. ಬೆಕ್ಕುಗಳನ್ನು ಹೊಡೆದು ಕೊಲ್ಲಬಾರದು ಎಂಬುದಕ್ಕೆ ಇದಕ್ಕಿಂತ ದೊಡ್ಡ ಪ್ರೂಫ್ ಬೇಕೇ? ಆದ್ದರಿಂದ ನಾವುಗಳು ಈ ಕಳ್ಳಬೆಕ್ಕನ್ನು ಹಿಡಿದು ಗಡೀಪಾರು ಮಾಡುವುದೇ ನಮಗೆ ಉಳಿದ ಏಕಮಾತ್ರ ದಾರಿ ಎಂದು ನಮ್ಮ ಸಭೆಯಲ್ಲಿ ತೀರ್ಮಾನ ಮಾಡಿದೆವು.

ನಮ್ಮ ಕಾರ್ಯಕಾರಿ ಸಮಿತಿಯಲ್ಲಿ ನಾನು, ನನ್ನ ಅಣ್ಣಂದಿರಾದ ಬಾಲಕೃಷ್ಣ ಮತ್ತು ನರಹರಿ ಮತ್ತು ಪಕ್ಕದ ಮನೆಯ ಹುಡುಗ ಸೂಪರ್ ಹಂಟರ್ ಮಧುಕರ ಇದ್ದೆವು. ಮಧುಕರ ಯಾವಾಗಲೂ ಕೈಯ್ಯಲ್ಲಿ ಒಂದು ಚಿಟ್ ಬಿಲ್ (ಕ್ಯಾಟಾಪುಲ್ಟ್) ಹಿಡಿದೇ ತಿರುಗುತ್ತಿದ್ದ. ಅವನು ತಾನು ಆ ಚಿಟ್‌ಬಿಲ್ಲಿನಿಂದ ಹೊಡೆದ ಚಿಕ್ಕಪುಟ್ಟ ಪ್ರಾಣಿಗಳು ಮತ್ತು ಹಕ್ಕಿಗಳ ಯಾದಿಯನ್ನೇ ಹೇಳುತ್ತಿದ್ದ. ಆ ಸಂಖ್ಯೆಗಳನ್ನು ಕೇಳಿದರೇ ನಮಗೆ ತಲೆತಿರುಗಿ ಬಿಡುತ್ತಿತ್ತು. ನಮ್ಮಲ್ಲಿ ಯಾರೊಬ್ಬರೂ ಆತನು ಶಿಕಾರಿ ಮಾಡಿದ ಯಾವ ಪ್ರಾಣಿ ಅಥವಾ ಪಕ್ಷಿಯನ್ನು ಅದುವರೆಗೆ ನೋಡಿರಲಿಲ್ಲ. ತನ್ನ ಚಿಟ್‌ಬಿಲ್ಲಿನ ಹೆಗ್ಗಳಿಕೆ ಹೆಚ್ಚಿಸಲು ಆತ ಹೀಗೆಲ್ಲಾ ಹೇಳುತ್ತಿದ್ದ. ಮಧುಕರ ನಿಜಕ್ಕೂ ಸಾಧುಹುಡುಗ, ಆತನ ಬೇಟೆ ವಿಚಾರವೆಲ್ಲ ಬರೀ ಬೊಗಳೆ ಎಂದು ನಮಗೆ ಗೊತ್ತಿತ್ತು. ಅದನ್ನು ನಾವು ನಂಬುತ್ತಾ ಇಲ್ಲ ಎನ್ನುವ ವಿಚಾರ ಅವನಿಗೂ ಮನದಟ್ಟಾಗಿತ್ತು. ಆದರೂ ನಾವು ಅವನಿಗೆ ಹಂಟರ್ ಮಧುಕರ ಎಂಬ ಬಿರುದು ನೀಡಿ, ಅದಕ್ಕೆ ಪ್ರತಿಫಲವಾಗಿ, ಆತನ ಮನೆಯ ಹಿಂದಿನ ಗೋಡೆಯ ಮೇಲೆ ಕ್ರಿಕೆಟ್ ಸ್ಟಂಪ್‌ಗಳ ಚಿತ್ರವನ್ನು ಚಾಕ್‌ಪೀಸ್‌ನಿಂದ ಬರೆದು ರಬ್ಬರ್‌ಬಾಲ್ ಕ್ರಿಕೆಟ್ ಆಡುತ್ತಿದ್ದೆವು. ನಮ್ಮ ಆಸುಪಾಸಿನಲ್ಲಿ ಆತನ ಮನೆಯೊಂದನ್ನು ಬಿಟ್ಟು ಬೇರಾರ ಮನೆಯ ಹಿಂದುಗಡೆ ಕ್ರಿಕೆಟ್ ಆಡುವಷ್ಟು ಬಯಲು ಜಾಗವಿರಲಿಲ್ಲ.

ನಮ್ಮ ಈ ಬಿರುದಿನಿಂದ ಸುಪ್ರೀತನಾದ ಮಧುಕರ ನಮ್ಮನ್ನು ಆತನ ಮನೆಯ ಹಿಂದೆ ಆಡಲು ಬಿಟ್ಟು, ತಾನೂ ಆಟಕ್ಕೆ ಸೇರಿಕೊಳ್ಳುತ್ತಿದ್ದ. ಅತೀ ಹತ್ತಿರದಲ್ಲಿ ಅವನ ಮನೆ ಇದ್ದುದರಿಂದ ನಾವು ದಿನಾ ಕತ್ತಲಾಗುವ ತನಕ ಅಲ್ಲಿ ಕ್ರಿಕೆಟ್ ಆಡುತ್ತಿದ್ದೆವು.

ನಮಗೆಲ್ಲರಿಗೂ ನಮ್ಮ ಬಲಕೈಗಳ ಮೇಲೆ ಬಹಳ ಪ್ರೀತಿ ಇತ್ತು. ಆದ್ದರಿಂದ ನಾವು ಆ ಕಳ್ಳ ಬೆಕ್ಕನ್ನು ಹೊಡೆದು ಸಾಯಿಸುವ ಹಾಗಿರಲಿಲ್ಲ. ಈ ಶಾಪದ ಕಾರಣವಾಗಿ ನಿರಾಸೆಗೊಂಡಂತೆ ನಟಿಸುತ್ತಾ ನಮ್ಮ ಸೂಪರ್ ಹಂಟರ್ ಮಧುಕರನು ತಾನು ಆ ದುರುಳ ಬೆಕ್ಕನ್ನು ಚಿಟ್‌ಬಿಲ್ಲಿನಿಂದ ಹೊಡೆದು ಕೊಲ್ಲಲಾರದೇ ಹೋದೆನಲ್ಲಾ ಎಂದು ಬಹಳ ಹೊತ್ತು ಹಲುಬಿದ. ಬಹಳ ಹೊತ್ತು ವಿಚಾರ ವಿನಿಮಯ ನಡೆದ ಮೇಲೆ, ನಮ್ಮ ಮೀಟಿಂಗ್‌ನಲ್ಲಿ ಆ ಕಳ್ಳ ಬೆಕ್ಕನ್ನು ಬೋನು ಇರಿಸಿ ಹಿಡಿಯುವ ಯತ್ನಕ್ಕೆ ಸರ್ವಾನುಮತ ದೊರೆಯಿತು.

ಹಂಟರ್ ಮಧುಕರ ಅವನ ಸ್ವಂತ ಐಡಿಯಾ ಹೇಳಿದ ಹುಲಿ ಹಿಡಿಯಲು ಜೀವಂತ ಆಡನ್ನು ಬೋನಿನ ಒಳಗೆ ಕಟ್ಟುತ್ತಾರೆ. ನಾವು ಒಂದು ದೊಡ್ಡ ಸೈಜಿನ ಹೆಗ್ಗಣದ ಬೋನನ್ನು ಸಂಪಾದಿಸಿ ಅದರೊಳಗೆ ಒಂದು ಜೀವಂತ ಇಲಿಯನ್ನು ಕಟ್ಟಿಹಾಕಿ ಈ ದುಷ್ಟ ಬೆಕ್ಕನ್ನು ಹಿಡಿಯಬೇಕು ಎಂದ.

ನಮ್ಮ ಹಂಟರ್ ಹೇಳಿದ ಮೇಲೆ ಆತನ ಅಭಿಪ್ರಾಯಕ್ಕೆ ಅಪೀಲ್ ಉಂಟೇ? ಯಾರದೋ ಅಟ್ಟ ಜಾಲಾಡಿ, ಒಂದು ದೊಡ್ಡ ಸೈಜಿನ ಅಂದರೆ, ನಮ್ಮ ಕಳ್ಳ ಬೆಕ್ಕು ಹಿಡಿಸುವ ಸೈಜಿನ ಹೆಗ್ಗಣ ಹಿಡಿಸುವ ಗೂಡನ್ನು ಸಂಪಾದಿಸಿದ್ದಾಯಿತು. ಈಗ ನಾವು ಅರ್ಜೆಂಟಾಗಿ ಹಿಡಿಯಬೇಕಾಗಿದ್ದುದು ಒಂದು ಜೀವಂತ ಇಲಿ ಮಾತ್ರ. ಸದ್ರಿ ಇಲಿಯನ್ನು ಹೆಗ್ಗಣದ ಗೂಡಿನಲ್ಲಿ ಬಲಿ ಒಡ್ಡಿದರೆ, ಆ ಕಳ್ಳಬೆಕ್ಕು ಸಿಕ್ಕಿಬೀಳುವುದು ಖಂಡಿತಾ ಎಂದು ತೀರ್ಮಾನ ಮಾಡಿದೆವು.

ಆಸುಪಾಸಿನ ಮನೆಗಳಲ್ಲಿ ಹುಡುಕಾಡಿ ಎರಡು ಇಲಿ ಬೋನುಗಳನ್ನು ಸಂಪಾದಿಸಿದೆವು. ಇಲಿ ಹಿಡಿಯಲು ಇಲಿಗೆ ಪ್ರಿಯವಾದ ತಿಂಡಿ ಬೇಕು. ಅದು ಯಾವುದೆಂದರೆ ಕೆಂಡದ ಮೇಲೆ ಸುಟ್ಟು ಘಮಘಮ ಎನ್ನುವ ಕೊಬ್ಬರಿ ಚೂರು. ಎರಡು ಇಲಿ ಗೂಡುಗಳಿಗೆ ಇಡಲೋಸುಗ ನಮ್ಮ ತಾಯಿಯನ್ನು ಪೀಡಿಸಿ ಒಂದು ಇಡೀ ಕೊಬ್ಬರಿ ಗಿಟುಕನ್ನು ಪಡೆದು, ಎರಡು ಭಾಗ ಮಾಡಿ ಬಚ್ಚಲ ಒಲೆಯಲ್ಲಿ ಅದನ್ನು ಸುಟ್ಟೆವು.

ಆಹಾ…! ಅದೇನು ಪರಿಮಳ…! ಇಲಿಗೆ ಅದರ ರುಚಿ ಹಿಡಿಸೀತೇ? ಎಂದು ಪರೀಕ್ಷೆ ಮಾಡಬೇಡವೇ? ಬಿಸಿ ಬಿಸಿಯಾಗಿ ಇರುವಾಗಲೇ ನಾವು ಅದನ್ನು ತಿಂದು ಪರೀಕ್ಷಿಸಿದೆವು. ಅದರ ರುಚಿಯ ಅನುಭವ ನಮಗೆ ಸರಿಯಾಗಿ ಆಗುವಾಗ, ಸುಟ್ಟ ಕೊಬ್ಬರಿ ಎಲ್ಲಾ ಖಾಲಿ. ಈಗೇನು ಮಾಡೋಣ. ನಮ್ಮ ಹಂಟರ್ ಮಧುಕರನನ್ನೇ ಮೊದಲಿಟ್ಟುಕೊಂಡು ಸುಡುವಾಗ ಕೊಬ್ಬರಿ ಯಾಕೋ ಬೆಂಕಿ ಹತ್ತಿಕೊಂಡು ಉರಿದೇಹೋಯಿತು ಎಂದು ನಮ್ಮ ತಾಯಿಯವರ ಹತ್ತಿರ ಸುಳ್ಳು ಹೇಳಿದೆವು. ಕೊನೆಗೆ ಕೊಬ್ಬರಿಯ ಎರಡು ಚೂರುಗಳನ್ನು ನಮ್ಮ ತಾಯಿಯವರೇ ಸುಟ್ಟುಕೊಟ್ಟರು.

ಕೊಬ್ಬರಿಯ ಪರಿಮಳಕ್ಕೇನೋ, ಮೊದಲ ದಿನವೇ ಎರಡು ಇಲಿಗಳು ನಮ್ಮ ಇಲಿ ಬೋನಿಗೆ ಬಿದ್ದಿದ್ದವು. ಇನ್ನು ಇಲಿಗಳ ಕೊರಳಿಗೆ ದಾರ ಬಿಗಿದು, ಅವನ್ನು ಇನ್ನು ಹೆಗ್ಗಣದ ಬೋನಿನಲ್ಲಿ ಬೋನಿನ ಕೀಲಿಗೆ ಬಿಗಿದು ಇರಿಸಬೇಕು. ಒಂದು ಇಲಿಯ ಕುತ್ತಿಗೆಗೆ ನಾವು ದಾರದ ಕುಣಿಕೆಯನ್ನು ತೊಡಿಸಬೇಕು ಎನ್ನುವಷ್ಟರಲ್ಲಿ ಅದು ನಮ್ಮಿಂದ ತಪ್ಪಿಸಿಕೊಂಡೇಹೋಯಿತು.

ಅದು ಹಾಳಾಗಿ ಹೋಗಲಿ! ನಮ್ಮ ಹತ್ತಿರ ಇನ್ನೊಂದು ಇಲಿ ಇದೆಯಲ್ಲಾ ಎಂದು ಸಮಾಧಾನಪಟ್ಟೆವು. ಇನ್ನೊಂದು ಇಲಿಯ ಕುತ್ತಿಗೆಯನ್ನು ಒಂದು ಟ್ವೈನ್‌ದಾರದಿಂದ ಬಿಗಿದು ಅದರ ಇನ್ನೊಂದು ತುದಿಯನ್ನು ಹೆಗ್ಗಣದ ಬೋನಿನ ಕೀಲಿಗೆ ಬಿಗಿದೆವು. ಈ ಇಲಿಯ ಅಲ್ಪ ಬಲಕ್ಕೆ ದೊಡ್ಡ ಬೋನಿನ ಕೀಲಿ ಜಗ್ಗುವುದಿಲ್ಲ ಎಂದು ಕೂಡಾ ಲೆಕ್ಕ ಹಾಕಿ, ನಮ್ಮ ಅಡುಗೆಮನೆಯಲ್ಲಿ ಗಡವ ಬೆಕ್ಕಿಗೆ ಬೋನನ್ನು ಒಡ್ಡಿದೆವು. ಎಂದಿನಂತೆಯೇ ಮಾಡಿನ ಸಂದಿಯಿಂದ ಬೆಕ್ಕು ಬಂದು ಬೋನಿಗೆ ಬೀಳಲಿ! ಎಂದು ಅಡುಗೆಮನೆಯ ಬಾಗಿಲನ್ನು ಭದ್ರಪಡಿಸಿ, ಬೋನಿನ ಬಾಗಿಲು ಮುಚ್ಚಿಕೊಳ್ಳುವ ಶಬ್ದಕ್ಕಾಗಿ ಕಾಯುತ್ತಾ ಅಂದು ರಾತ್ರಿ ಊಟದ ಹಾಲ್‌ನಲ್ಲಿ ನಾವೆಲ್ಲರೂ ಮಲಗಿದೆವು.

ಆ ರಾತ್ರಿ ನಮಗೆ ಏನೂ ಶಬ್ದ ಕೇಳಿಸಲಿಲ್ಲ. ಬೆಳಗ್ಗೆ ಬೇಗನೆ ಎದ್ದು ಬೋನನ್ನು ನೋಡುತ್ತೇವೆ, ನಾವು ಕಟ್ಟಿಹಾಕಿದ್ದ ಬುದ್ಧಿವಂತ ಇಲಿ ತನ್ನನ್ನು ಕಟ್ಟಿದ್ದ ದಾರವನ್ನು ಕತ್ತರಿಸಿ ಪರಾರಿಯಾಗಿತ್ತು. ನಮ್ಮ ಹುಂಬತನಕ್ಕೆ ನಮ್ಮನ್ನು ನಾವೇ ಶಪಿಸಿಕೊಳ್ಳುತ್ತಾ, ಪುನಃ ಒಂದು ಇಲಿಯನ್ನು ಹಿಡಿದು ತೆಳ್ಳಗಿನ ವಯರಿನಲ್ಲಿ ಕಟ್ಟು ಹಾಕಿದರೆ ಹೇಗೆ? ಎಂದು ಆಲೋಚಿಸಿದೆವು. ಅಂದು ರಾತ್ರಿ ನಾವು ಹೊಸಾ ಕೊಬ್ಬರಿ ಚೂರುಗಳನ್ನು ಸಿಕ್ಕಿಸಿ ಬೋನು ಒಡ್ಡಿದರೂ, ಯಾವ ಇಲಿಯೂ ನಮ್ಮ ಇಲಿ ಬೋನುಗಳಿಗೆ ಬೀಳಲಿಲ್ಲ. ಆದಿನ ಇಲಿಗಳು ನಮಗಿಂತಲೂ ಬುದ್ಧಿವಂತಿಕೆಯಿಂದ ವರ್ತಿಸಿದ್ದುವು.

ನಮ್ಮ ಗಡವ ಬೆಕ್ಕಿಗೆ ಇಲಿಯ ಆಮಿಷವನ್ನು ಒಡ್ಡುವುದೇ ಬೇಡ ಎಂದುಕೊಂಡು  ಒಂದು ಚಿಕ್ಕ ಬಟ್ಟಲಿನಲ್ಲಿ ಸ್ವಲ್ಪ ಹಾಲು ಹಾಗೂ ಹೆಗ್ಗಣದ ಬೋನಿನ ಕೀಲಿಗೆ ಒಂದು ದಪ್ಪನೆಯ ಚಪಾತಿ ತಯಾರಿಸಿ ಅದಕ್ಕೆ ತುಪ್ಪ ಹಚ್ಚಿ ಸಿಕ್ಕಿಸಿಬಿಟ್ಟೆವು. ಅಂದು ರಾತ್ರಿ ಹೆಗ್ಗಣದ ಬೋನು ಮುಚ್ಚಿಕೊಂಡ ಸದ್ದು ಕೇಳಿತು. ನಾವು ಎಲ್ಲರೂ ಅಡುಗೆ ಮನೆಗೆ ಧಾವಿಸಿ ನೋಡಿದೆವು. ಗಡವ ಬೆಕ್ಕು ಬೋನಿನ ಒಳಗೆ ಸಿಕ್ಕಿಬಿದ್ದಿತ್ತು..!

ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ..! ಮುಂದಿನ ಆಲೋಚನೆಗಾಗಿ ನಮ್ಮ ಹಂಟರ್ ಮಧುಕರನನ್ನು ಎಬ್ಬಿಸಿ ಕರೆದುಕೊಂಡುಬರೋಣ ಎಂದು ತೀರ್ಮಾನಿಸಿದೆವು. ಅದಕ್ಕೆ ನಮ್ಮ ತಾಯಿಯವರು, ಈ ಅಪರ ರಾತ್ರಿಹೊತ್ತಿನಲ್ಲಿ ಮಧುಕರನ ಮನೆಯವರನ್ನು ಎಬ್ಬಿಸಿ ಗಾಬರಿ ಮಾಡಬೇಡಿರಿ. ಬೆಕ್ಕು ಗೂಡಿನಲ್ಲಿ ಬೆಳಗಿನ ತನಕ ಇರಲಿ, ಮುಂದಕ್ಕೆ ಏನು ಮಾಡಬೇಕೋ ಅದನ್ನು ಬೆಳಗ್ಗೆ ತೀರ್ಮಾನ ಮಾಡಿಕೊಳ್ಳಿ ಎಂದರು. ಬೆಕ್ಕನ್ನು ಗಡೀಪಾರು ಮಾಡುವುದು ಹೇಗೆ? ಎಂಬ ಆಲೋಚನೆಯನ್ನು ಮಾಡುತ್ತಾ ಅಂದು ರಾತ್ರಿ ಬಹಳ ತಡವಾಗಿ ನಾವು ನಿದ್ದೆಹೋದೆವು.

ಬೆಳಗಿನ ಆರು ಗಂಟೆಗೇ ನಮ್ಮ ತುರ್ತುಸಭೆ ಸೇರಿತು. ಬೆಕ್ಕನ್ನು ಗಡೀಪಾರು ಮಾಡುವ ಬಗ್ಗೆ ಹಲವಾರು ಆಲೋಚನೆಗಳಾದುವು. ಅಂದು ನಮಗೆಲ್ಲರಿಗೂ ಶಾಲೆ ಇದ್ದುದರಿಂದ ನಾವುಗಳು ನಮ್ಮಲ್ಲಿಗೆ ಆಗಾಗ ಕೂಲಿ ಕೆಲಸಕ್ಕೆ ಬರುತ್ತಿದ್ದ ಗುರುವ ಎಂಬವನ ಸಹಾಯ ಪಡೆಯುವುದೆಂದು ತೀರ್ಮಾನಿಸಿ, ಅವನನ್ನು ಹುಡುಕಿಕೊಂಡು ಹೋಗಿ ಕರೆತಂದೆವು. ಅವನಿಗೆ ಎಲ್ಲಾ ವಿಚಾರ ತಿಳಿಸಿದೆವು. ನಮ್ಮ ಯೋಜನೆ ಪ್ರಕಾರ ಗುರುವನು ಬೆಕ್ಕಿನ ಸಹಿತ ಆ ಬೋನನ್ನು ಹೊತ್ತು ಮೂರುಮೈಲು ದೂರದ ಉದ್ಯಾವರಕ್ಕೆ ಹೋಗಿ, ದೋಣಿಯಲ್ಲಿ ಕುಳಿತು ಹೊಳೆದಾಟಿ, ಹೊಳೆಯ ಆಚೆಯ ದಡದಲ್ಲಿ ಬೆಕ್ಕನ್ನು ಬಿಡುಗಡೆಗೊಳಿಸಿ ಮರಳಿ ಬರಬೇಕಾಗಿತ್ತು. ಹೆಚ್ಚಿನ ಮುಂಜಾಗ್ರತೆಯಾಗಿ, ತಾನು ಪ್ರಯಾಣಿಸಿದ ದಾರಿಯು ಬೆಕ್ಕಿಗೆ ಕಾಣದಂತೆ ಬೋನನ್ನು ನಾವು ಬಟ್ಟೆ ಮುಚ್ಚಿಕೊಡುವುದಾಗಿ ಅವನಿಗೆ ಹೇಳಿದೆವು.

ಈ ಕೆಲಸ ಮಾಡಲು ಗುರುವನು ಸುತಾರಂ ಒಪ್ಪಲಿಲ್ಲ. ಅಷ್ಟು ಗಟ್ಟಿಮುಟ್ಟಾದ ಹಾಗೂ ಭಾರವಿದ್ದ ಆ ಹೆಗ್ಗಣದ ಬೋನನ್ನು ತಾನು ಹೊತ್ತು ಮೂರು ಮೈಲು ನಡೆಯಲು ಸಾಧ್ಯವಿಲ್ಲ. ಆದ್ದರಿಂದ, ನಾವುಗಳು ಬೆಕ್ಕನ್ನು ಒಂದು ದೊಡ್ಡ ಗೋಣಿ ಚೀಲದಲ್ಲಿ ತುಂಬಿಸಿಕೊಟ್ಟರೆ ಆ ಕೆಲಸ ಮಾಡುವುದಾಗಿ ಹೇಳಿದ. ನಾವು ಈ ಶುಂಠ ಬುದ್ಧಿಯ ಗುರುವನೊಡನೆ ವಾದ ಮಾಡಿ ಪ್ರಯೋಜನವಿಲ್ಲವೆಂದು ಆತನು ಹೇಳಿದಂತೆ ಮಾಡುವುದಾಗಿ ಒಪ್ಪಿದೆವು.

ಎಲ್ಲರೂ ಸೇರಿ ಒಂದು ದೊಡ್ಡ ಸಕ್ಕರೆ ಚೀಲ ತಂದು, ಅದರ ಬಾಯಿಬಿಡಿಸಿ, ಅದನ್ನು ಬೋನಿನ ಬಾಗಿಲಸುತ್ತ ಬಲವಾಗಿ ಹಿಡಿದು ಬೋನಿನ ಬಾಗಿಲನ್ನು ತೆರೆದು ಹೇಗೋ ಬೆಕ್ಕನ್ನು ಚೀಲದೊಳಗೆ ಬಂಧಿಸಿದೆವು. ಆನಂತರ ಒಂದು ತೆಳುವಾದ ಹಗ್ಗವನ್ನು ತಂದು ಗೋಣಿಚೀಲದ ಬಾಯಿಗೆ ಬಿಗಿದು, ಆ ಬೆಕ್ಕಿನ ಚೀಲವನ್ನು ಗುರುವನ ಸುಪರ್ದಿಗೆ ಒಪ್ಪಿಸಿದೆವು. ದಿನವೊಂದಕ್ಕೆ ಒಬ್ಬ ಗಂಡಾಳು ಎರಡು ರೂಪಾಯಿ ದಿನಕೂಲಿ ಪಡೆಯುತ್ತಿದ್ದ ಆ ದಿನಗಳಲ್ಲಿ ನಮ್ಮ ತಾಯಿಯವರು ಗುರುವನಿಗೆ ಬೆಳಗಿನ ಉಪಹಾರ ಕಾಫಿ ಕೊಟ್ಟು, ಆತನ ಕೈಯಲ್ಲಿ ಹತ್ತುರೂಪಾಯಿಗಳನ್ನು ಇತ್ತರು. ಅದರ ಮೇಲೆ, ದೋಣಿಯ ಖರ್ಚಿಗೆಂದು ಮೇಲೆ ಪುನಃ ಒಂದು ರೂಪಾಯಿ ಕೊಟ್ಟರು.

ಎಂದೂ ಮುಖಗಂಟು ಹಾಕಿಕೊಂಡೇ ಮಾತನಾಡುತ್ತಿದ್ದ ಗುರುವ ಆ ದಿನ ಹಸನ್ಮುಖಿಯಾಗಿ ಬೆಕ್ಕನ್ನು ತುಂಬಿ ಕೊಟ್ಟಿದ್ದ ಚೀಲವನ್ನು ಹೆಗಲಿಗೇರಿಸಿ ಮುನ್ನಡೆದ. ಮನೆಯವರೆಲ್ಲರೂ ಗೇಟಿನ ತನಕ ಬಂದು ಆ ಗಡವಬೆಕ್ಕಿಗೆ ವಿದಾಯ ಹೇಳಿದೆವು.

ಆದಿನ ನಮ್ಮ ತಾಯಿ ಬಹಳ ಖುಷಿಯಲ್ಲಿದ್ದರು. ನಾವುಗಳು ಕೂಡಾ ನಮ್ಮ ಮಹತ್ಕಾರ್ಯಕ್ಕೆ ಹೆಮ್ಮೆ ಪಡುತ್ತಾ ನಮ್ಮ ಮಿತ್ರ ಹಂಟರ್ ಮಧುಕರನನನ್ನು ಒಡಗೂಡಿ ನಗುನಗುತ್ತಾ ಶಾಲೆಗೆ ಹೋದೆವು.

ಸಾಯಂಕಾಲ ನಾವು ಮನೆಗೆ ಬರುವಾಗ ನಮ್ಮ ತಾಯಿಯವರು ಪೆಚ್ಚು ಮೋರೆ ಮಾಡಿಕೊಂಡು ನಮ್ಮನ್ನೇ ಕಾಯುತ್ತಿದ್ದರು. ಅಂದು ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆಗೆ ಗಡವ ಬೆಕ್ಕು ನಮ್ಮ ಅಡುಗೆಮನೆಯಲ್ಲಿ ಪ್ರತ್ಯಕ್ಷವಾಗಿ ರಂಪಾಟ ಮಾಡಿತ್ತು..! ಮುಚ್ಚಿಟ್ಟಿದ್ದ ಹಾಲನ್ನು ಪೂರ್ತಿ ಚೆಲ್ಲಿ ಕುಡಿದಿದ್ದೇ ಅಲ್ಲದೆ, ಬಿಸಿಯಾಗಿದ್ದ ಅನ್ನದ ಪಾತ್ರೆ ಮತ್ತು ತುಪ್ಪ ತುಂಬಿದ ಗಾಜಿನ ಭರಣಿಗಳನ್ನು ನೂಕಿ ಕೆಳಗಡೆ ಹಾಕಿ ಒಡೆದು, ತನಗೆ ಬೇಕಾದಷ್ಟು ಅನ್ನ ಮತ್ತು ತುಪ್ಪ ತಿಂದಿತ್ತು. ಅದನ್ನು ಓಡಿಸಲು ಹೋದ ನಮ್ಮ ತಾಯಿಯವರನ್ನು ಹೆದರಿಸಿ, ಅವರನ್ನು ಅಡುಗೆಮನೆಯ ಹತ್ತಿರಕ್ಕೂ ಬರಲು ಬಿಡಲಿಲ್ಲವಂತೆ!

ಗುರುವ ಏಕೆ ಹೀಗೆ ಮಾಡಿದ? ವಿಚಾರಿಸಲು ನಮ್ಮ ಬೆಟಾಲಿಯನ್ ಗುರುವನ ಮನೆಗೆ ಹೋಯಿತು. ಆತ ಮನೆಯಲ್ಲಿರಲಿಲ್ಲ. ಗುರುವ ಎಲ್ಲಿ? ಎಂದು ಆತನ ಹೆಂಡತಿಯನ್ನು ವಿಚಾರಿಸಿದರೆ, ಆಕೆ ತಾತ್ಸಾರದಿಂದ ಅವನು ಎಲ್ಲಿ ಕುಡಿದು ಬಿದ್ದಿದಾನೋ?…ಯಾರಿಗೆ ಗೊತ್ತು! ಎಂದಳು.

ಅವನನ್ನು ಹುಡುಕಿಕೊಂಡು ನಾವು ಉದ್ಯಾವರ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿದಾಗ ಗುರುವನ ಪತ್ತೆಯಾಯಿತು. ಊರ ಹೊರಗೆ ಇದ್ದ ಸರಾಯಿ ಅಂಗಡಿಯ ಅನತಿದೂರದಲ್ಲಿ ಒಂದು ಮರದ ಕೆಳಗೆ ಆತ ಪವಡಿಸಿದ್ದ. ನಮ್ಮ ತಾಯಿಯವರು ಕೊಟ್ಟಿದ್ದ ಹಣವೆಲ್ಲಾ ಸರಾಯಿ ಅಂಗಡಿ ಸೇರಿದ ಪರಿಣಾಮ ಆತ ಯಾವ ಗೊಡವೆಯೂ ಇಲ್ಲದೆ ಮಲಗಿದ್ದ. ಅವನ ತಲೆಯ ಕೆಳಗೆ ನಾವು ಬೆಕ್ಕನ್ನು ತುಂಬಿಕೊಟ್ಟಿದ್ದ ಖಾಲಿ ಗೋಣಿಚೀಲವು ಆತನಿಗೆ ಈಗ ತಲೆದಿಂಬಾಗಿತ್ತು! ಅದರ ಬಾಯಿಗೆ ನಾವು ಬಿಗಿದಿದ್ದ ಹಗ್ಗ ಅಲ್ಲೇ ಬಿಚ್ಚಿಕೊಂಡು ಬಿದ್ದಿತ್ತು. ನಾವು ಗುರುವನನ್ನು ಎಬ್ಬಿಸಲು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗಲು, ನಾವು ಆತನನ್ನು ಶಪಿಸುತ್ತಾ ಮನೆಗೆ ಬಂದೆವು. ಆ ದಿನವನ್ನು ನಾವು ಕುಡುಕ ಗುರುವನನ್ನು ಶಪಿಸುವುದರಲ್ಲೇ ಕಳೆದುಬಿಟ್ಟೆವು.

ಮರುದಿನ ನಮ್ಮ ಸಭೆಯಲ್ಲಿ ಗಡವ ಬೆಕ್ಕನ್ನು ಹಿಡಿಯಲು ಹೊಸ ಹೊಸ ತಂತ್ರಗಳನ್ನು ಪರಿಶೋಧಿಸಲಾಯಿತು. ಒಮ್ಮೆ ಸಿಕ್ಕಿಬಿದ್ದ ನಂತರ ಆ ಕಳ್ಳಬೆಕ್ಕು ಮತ್ತೊಮ್ಮೆ ಹೆಗ್ಗಣದ ಬೋನಿನ ಕಡೆಗೆ ತಿರುಗಿ ನೋಡಲಾರದು. ಮುಂದೆ ನಾವು ಕೈಗೊಳ್ಳಲಿರುವ ಹೊಸಕ್ರಮವನ್ನು ಬಹಳ ಹೊತ್ತು ಚರ್ಚೆಮಾಡಿ ಪರಿಶೀಲಿಸಿ, ಕೊನೆಗೆ ಅದನ್ನೇ ಆರಿಸಿಕೊಳ್ಳುವುದಾಗಿ ತೀರ್ಮಾನಕ್ಕೆ ಬಂದೆವು. ಅದೇನೆಂದರೆ,- ನಮ್ಮ ಮನೆಯಲ್ಲಿ ಸುಮಾರು ಮೂರೂವರೆ ಅಡಿ ಎತ್ತರದ ಒಂದು ತಾಮ್ರದ ಕಡಾಯಿ ಇತ್ತು. ಅದು ಸುಮಾರು ಹತ್ತು ಕಿಲೋ ತೂಕವಿತ್ತು. ಅದರ ಬಾಯಿ ಸಾಧಾರಣ ಎರಡೂವರೆ ಅಡಿಗಳಷ್ಟು ಅಗಲವಾಗಿತ್ತು. ಈ ಕಡಾಯವನ್ನು ತಲೆಕೆಳಗು ಮಾಡಿ ಒಂದೇ ಸೈಜಿನ ಮೂರು ದೊಡ್ಡ ತಂಬಿಗೆಗಳನ್ನು ಬೋರಲು ಹಾಕಿ ಅವುಗಳ ಮೇಲೆ ಬ್ಯಾಲೆನ್ಸ್ ಮಾಡಿ ನಿಲ್ಲಿಸಬೇಕು. ಈ ಮೂರು ತಂಬಿಗೆಗಳ ಕತ್ತಿಗೆ ಗಟ್ಟಿಯಾದ ಪಟ್ಟೆ ನೂಲನ್ನು ಬಿಗಿದು ಅಡುಗೆಮನೆಯ ಬಾಗಿಲಿನಿಂದಾಚೆಗೆ ಇರಿಸಬೇಕು. ಈ ಬೋರಲು ಹಾಕಿದ ಕಡಾಯಿಯ ಕೆಳಗಡೆ ಬೆಕ್ಕಿಗೆ ರುಚಿಯಾಗುವ ಆಹಾರಗಳನ್ನು ದಿನಾ ಇರಿಸಬೇಕು. ಬೆಕ್ಕಿನ ಸಂಶಯ ನಿವಾರಣೆಯಾಗಿ ಅದು ದಿನಾ ಆಹಾರವನ್ನು ತಿನ್ನಲು ಶುರುಮಾಡಿದ ಮೇಲೆ ಕಡಾಯಿಗೆ ಆಧಾರವಾಗಿಟ್ಟ ತಂಬಿಗೆಗಳ ಕತ್ತಿಗೆ ಕಟ್ಟಿದ ದಾರವನ್ನು ನಮ್ಮಲ್ಲೊಬ್ಬರು ಎಳೆದು ಬೆಕ್ಕನ್ನು ಹಿಡಿಯಬೇಕು ಎಂಬ ತೀರ್ಮಾನವಾಯಿತು.

ತಂಬಿಗೆಗಳಿಗೆ ಕಟ್ಟಿದ ಕರಿಯ ಬಣ್ಣದ ಪಟ್ಟೆಯ ನೂಲಿನ ತುದಿಯನ್ನು ಅಡುಗೆಮನೆಯ ಮುಚ್ಚಿದ ಬಾಗಿಲಿನ ಆಚೆಗೆ ಕೊಂಡೊಯ್ಯಲು ಅನುಕೂಲವಾಗುವಂತೆ, ಬಾಗಿಲಿನ ತಳದಲ್ಲಿ ಒಂದು ಚಿಕ್ಕ ರಂಧ್ರ ಕೊರೆಯಬೇಕು. ಅದಲ್ಲದೆ, ಬೆಕ್ಕು ಬಂದು ಆಹಾರ ತಿನ್ನುತ್ತಾ ಇರುವಾಗಲೇ ದಾರ ಎಳೆಯಲು ಅನುಕೂಲವಾಗುವಂತೆ, ಬಾಗಿಲಿನಾಚೆಗೆ ನಾವು ಕಾದು ಕುಳಿತಾಗ ನೋಡಲು, ಇನ್ನೊಂದು ಅರ್ಧ‌ಇಂಚಿನ ರಂಧ್ರ ಕೊರೆಯಬೇಕು. ಇಷ್ಟು ಮಾಡಿದ ಮೇಲೆ, ದಿನಾ ರಾತ್ರಿಹೊತ್ತು ಈ ಕಡಾಯಿಯ ಕೆಳಗೆ ಆಹಾರವಿರಿಸಿ ನಾವು ಕಾದು ಕುಳಿತಲ್ಲಿಂದ ನೋಡಿದರೆ, ಬೆಕ್ಕು ಬಂದು ಆಹಾರ ತಿನ್ನುವುದು ಕಾಣುವಂತೆ ಸಹಾಯವಾಗಲು ಪ್ರತೀ ದಿನ ನಾವು ಅಡುಗೆಮನೆಯ ದೀಪ ಆರಿಸಲೇಬಾರದು ಎಂದು ತೀರ್ಮಾನಿಸಿದೆವು. ಈ ನಮ್ಮ ತಂತ್ರವನ್ನು ನಮ್ಮ ತಾಯಿಗೆ ವಿವರಿಸಿ ಅಡುಗೆ ಮನೆಯ ಬಾಗಿಲಿಗೆ ಎರಡು ರಂಧ್ರಗಳನ್ನು ಕೊರೆಯಲು ನಮ್ಮ ತಾಯಿಯವರ ಅನುಮತಿ ಕೋರಿದೆವು. ಆದರೆ, ಆ ಅನುಮತಿ ಸುಲಭವಾಗಿ ದೊರೆಯಲಿಲ್ಲ. ಆದರೆ, ದಿನೇದಿನೇ ಬೆಕ್ಕಿನ ಹಾವಳಿ ಜಾಸ್ತಿಯಾದಾಗ ಕೊನೆಗೊಮ್ಮೆ ಆಕೆ ಒಪ್ಪಿಗೆಯಿತ್ತರು.

ನಮ್ಮ ಜೊತೆಗೆ ಅಪರೂಪಕ್ಕೆ ಕ್ರಿಕೆಟ್ ಆಡಲು ನಮ್ಮ ಮನೆಯ ಹತ್ತಿರದಲ್ಲಿದ್ದ ಮರಕೆಲಸದ ಕಿಟ್ಟಾಚಾರಿಯ ಮಗ ಸುಬ್ಬ ಎಂಬ ಹುಡುಗ ಬರುತ್ತಿದ್ದನು. ಅವನು ಬಲಶಾಲಿ ಹುಡುಗ, ಕ್ರಿಕೆಟ್ ಆಟದಲ್ಲಿ ಹಿಟ್ಟರ್ ಸುಬ್ಬ ಎಂದೇ ಪ್ರಖ್ಯಾತನಾಗಿದ್ದವನು. ನಾವು ಆತನನ್ನು ನಮ್ಮ ಬೆಕ್ಕನ್ನು ಹಿಡಿಯುವ ತಂಡಕ್ಕೂ ಸೇರಿಸಿಕೊಂಡು, ನಮ್ಮ ಮನೆಯ ಬಾಗಿಲಿಗೆ ಎರಡು ರಂಧ್ರ ಕೊರೆಯುವ ಕೆಲಸಕ್ಕೆ ಹಚ್ಚಿದೆವು. ಆತ ಈ ಕೆಲಸ ಮಾಡಲು ಹಿಂಜರಿದ. ನಮ್ಮ ತಾಯಿಯವರೇ ಸ್ವತಃ ಒಪ್ಪಿಗೆ ನೀಡಿದ ಮೇಲೆ ಅವನು ಬೈರಿಗೆ ತಂದು ಈ ಕೆಲಸ ಮಾಡಿಕೊಟ್ಟ.

ದಿನವೂ ಸಾಯಂಕಾಲ ಗಡವ ಬೆಕ್ಕಿಗೆ ಒಂದು ಭರ್ಜರಿ ತಟ್ಟೆ ತುಂಬಾ ಅನ್ನ ಮತ್ತು ಕೆನೆಹಾಲಿನ ಊಟವನ್ನು, ನಾವು ಬೋರಲುಹಾಕಿ ನಿಲ್ಲಿಸಿದ ಕಡಾಯಿಯ ಅಡಿಯಲ್ಲಿ ಇಡಲು ಶುರುಮಾಡಿದೆವು. ಅಡುಗೆಮನೆಯ ದೀಪವಾರಿಸದೇ ಬಾಗಿಲು ಹಾಕಿ ರಾತ್ರಿ ಮಲಗುತ್ತಿದ್ದೆವು.

ನಮ್ಮ ಬುದ್ಧಿವಂತ ಗಡವ ಬೆಕ್ಕು, ಉರಿಯುತ್ತಿದ್ದ ಲೈಟು, ಬೋರಲುಹಾಕಿದ ಕಡಾಯಿ, ಅದರ ಕೆಳಗಿನ ತಂಬಿಗೆಗಳು ಮತ್ತು ಅವಕ್ಕೆ ಕಟ್ಟಿದ ಕಪ್ಪು ಪಟ್ಟೆದಾರ ಇವನ್ನೆಲ್ಲ ಕಂಡು ಸಂಶಯಪಟ್ಟು ಎರಡು ದಿನ ನಾವು ಇಟ್ಟಿದ್ದ ಆಹಾರ ಮುಟ್ಟಲೇ ಇಲ್ಲ. ತದನಂತರ ಧೈರ್ಯಮಾಡಿಕೊಂಡು ಅಲ್ಲಿಯ ಆಹಾರ ಕಬಳಿಸಲು ಶುರುಮಾಡಿತು.

ಇದೀಗ ನಮ್ಮ ಸಮಯ..! ನಮ್ಮ ಪಟಲಾಮ್ ಖೆಡ್ಡಾ ಕಾರ್ಯಕ್ರಮಕ್ಕೆ ತಯಾರಾಯಿತು. ಆದಿನ ಸಂಜೆ ನಾವು ನಿದ್ದೆಗೆಟ್ಟು ಊಟದ ಹಾಲ್‌ನಲ್ಲಿ ರಾತ್ರಿ ಕಾವಲಿಗೆ ಕೂರಬೇಕಾಗುತ್ತೆ ಎಂಬ ಕಾರಣ ಹೇಳಿ, ನಮಗೆ ನಿದ್ರೆ ಬರದಂತೆ ಆಗಾಗ ಕುಡಿಯಲು ಎರಡು ಥರ್ಮೋಸ್‌ಪ್ಲಾಸ್ಕ್ ತುಂಬಾ ಟೀ ತಯಾರಿಸಿ ಕೊಡಲು ನಮ್ಮ ತಾಯಿಯವರನ್ನು ಕೇಳಿಕೊಂಡೆವು. ನಮ್ಮ ತಾಯಿಯವರು ಟೀ ತಯಾರಿಸಿಕೊಟ್ಟು ರಾತ್ರಿ ಹೊತ್ತು ಗಲಾಟೆಮಾಡದೆ ಪಾಠಪುಸ್ತಕ ಓದಿರೆಂದು ಹೇಳಿ ಮಲಗಿದರು.

ನಮಗೆಲ್ಲಾ ಓದಲು ಪಾಠಪುಸ್ತಕಗಳು ಇದ್ದುವು. ಆದರೆ, ನಮ್ಮ ಹೊಸ ಮೆಂಬರ್ ಹಿಟ್ಟರ್ ಸುಬ್ಬನು ಓದಲು ತಕ್ಕಂತಹಾ ಪುಸ್ತಕ ಈ ಭೂಲೋಕದಲ್ಲೇ ಇರಲಿಲ್ಲ..! ಯಾಕೆಂದರೆ, ಆತನಿಗೆ ಓದಲು ಬರುತ್ತಿರಲಿಲ್ಲ. ಆತನು ಒಂದನೇ ಕ್ಲಾಸಿಗೇ ಶಾಲೆಗೆ ಚಕ್ಕರ್ ಹೊಡೆದು, ಅವನ ತಂದೆಯ ಜತೆ ಸೇರಿ ಉಳಿಸುತ್ತಿಗೆ ಹಿಡಿದವನು. ಇವನು ವಾಚಾಳಿ. ರಾತ್ರಿಯಿಡೀ ಏನೇನೊ ಮಾತನಾಡುತ್ತಾ ನಮ್ಮನ್ನೂ ನಗಿಸಿ ತಾನೂ ನಕ್ಕ. ಆದಿನ ನಮ್ಮ ಗಲಾಟೆಯ ಕಾರಣ ಕಳ್ಳಬೆಕ್ಕು ನಮ್ಮ ಮನೆಯ ಕಡೆಗೆ ತಲೆಯೇ ಹಾಕಲಿಲ್ಲ.

ಮರುದಿನ ನಾವುಗಳು ಹೊಸ ತೀರ್ಮಾನಕ್ಕೆ ಬಂದೆವು. ಅದೇನೆಂದರೆ, ಆ ರಾತ್ರಿ ನಮಗೆ ಟೀ ಬೇಡ. ನಾವು ಐದುಜನರಲ್ಲಿ ಒಬ್ಬರು ಎರೆಡೆರಡು ಗಂಟೆಗಳ ಪಾಳಿಯಲ್ಲಿ ಬಾಗಿಲ ಕಿಂಡಿಗೆ ಕಣ್ಣಿಟ್ಟು ಕಾಯುವುದು. ಉಳಿದವರು ಕಡ್ಡಾಯ ನಿದ್ರೆಮಾಡಬೇಕು ಎಂದುಕೊಂಡೆವು. ಮೊದಲನೇ ಪಾಳಿ ಅತೀ ಚಿಕ್ಕವನಾದ ನನಗೆ ಸಿಕ್ಕಿತು. ನಾನು ಆ ಅರ್ಧ‌ಇಂಚು ರಂಧ್ರದಲ್ಲಿ ಕಣ್ಣಿಟ್ಟು ಅಡುಗೆ ಮನೆಯನ್ನು ವೀಕ್ಷಿಸುತ್ತಾ ಕೈಯ್ಯಲ್ಲಿ ತಂಬಿಗೆಗಳಿಗೆ ಕಟ್ಟಿದ್ದ ದಾರ ಹಿಡಿದು ಎರಡು ಗಂಟೆಯ ಪಾಳಿ ಮುಗಿಸಿದೆನು. ಆ ನಂತರ ನನ್ನ ಅಣ್ಣ ಬಾಲಕೃಷ್ಣನು ಕಾವಲಿಗೆ ಕುಳಿತನು. ಬಾಲಕೃಷ್ಣನ ಸರದಿಯೂ ಮುಗಿದ ನಂತರ ಹಿಟ್ಟರ್ ಸುಬ್ಬ ಕಾವಲಿಗೆ ಕುಳಿತ. ನಾವೆಲ್ಲರೂ ಮಲಗಿದೆವು. ದಿನವಿಡೀ ದುಡಿಯುತ್ತಿದ್ದ ಅವನು ಕುಳಿತಲ್ಲೇ ಕಣ್ಣುಮುಚ್ಚಿ ತನ್ನ ಡ್ಯೂಟಿಮಾಡಿದ.

ಅವನ ನಂತರ ಡ್ಯೂಟಿಮಾಡಲಿದ್ದ ನನ್ನ ಇನ್ನೊಬ್ಬ ಅಣ್ಣ ನರಹರಿ ಎಚ್ಚರಗೊಂಡು ನೋಡುತ್ತಾನೆ, – ಹಿಟ್ಟರ್ ಸುಬ್ಬ ಗೊರಕೆ ಹೊಡೆಯುತ್ತಾ ಅಡುಗೆಮನೆಯ ಬಾಗಿಲಿಗೆ ಒರಗಿ ನಿದ್ರಿಸುತ್ತಿದ್ದಾನೆ..! ಥತ್.. ಏಳೋ.. ಎಂದು ಅವನನ್ನು ಆಚೆಗೆ ಸರಿಸಿ ನರಹರಿ ಅಣ್ಣ ನೋಡುವಾಗ, ಬೆಕ್ಕು ತನ್ನ ಊಟ ಮುಗಿಸಿ ಹೊರಟುಹೋಗಿದೆ! ಆಗ ರಾತ್ರಿಯ ಹನ್ನೆರಡು ಗಂಟೆ ಕಳೆದಿತ್ತು. ಹೊಟ್ಟೆ ತುಂಬಿದ ಬೆಕ್ಕು ಇನ್ನೊಮ್ಮೆ ಆಹಾರ ತಿನ್ನಲು ಬರಲಾರದು. ನಮ್ಮ ಬೇಟೆಯನ್ನು ಹಾಳುಗೆಡವಿದ್ದ ಹಿಟ್ಟರ್‌ನನ್ನು ಮನಸಾರೆ ಬೈದು, ಆ ರಾತ್ರಿ ನಾವೇನೂ ನಿದ್ದೆಗೆಡಬೇಕಾಗಿಲ್ಲ ಎಂದು ಸಮಾಧಾನಪಟ್ಟುಕೊಂಡು ಎಲ್ಲರೂ ನಿದ್ದೆಹೋದೆವು.

ಮರುದಿನ ಎಷ್ಟು ಹೊತ್ತಾದರೂ ಸರಿ, ತಾನೇ ಕಾದು ಕುಳಿತು ಬೆಕ್ಕನ್ನು ಹಿಡಿಯುವೆ ಎಂದು ನಮ್ಮ ಅಣ್ಣ ನರಹರಿ ಶಪಥ ಮಾಡಿದ. ಆ ರಾತ್ರಿ ನರಹರಿಯಣ್ಣ ಕಾವಲಿಗೆ ಕುಳಿತ ನಂತರ, ನಾವೆಲ್ಲರೂ ಊಟದ ಹಾಲ್‌ನಲ್ಲೇ ನಿದ್ದೆಮಾಡಿದೆವು.

ರಾತ್ರಿ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಢಮಾರ್! ಶಬ್ದದೊಂದಿಗೆ ಗಡವ ಬೆಕ್ಕಿನ ಕಿರಿಚಾಟ ಕೇಳಿಸಿತು. ನಾವೆಲ್ಲಾ ಎದ್ದು ಅಡುಗೆಮನೆಗೆ ಹೋಗಿ ನೋಡಿದರೆ, ಗಡವ ಬೆಕ್ಕು ಕಡಾಯಿಯೊಳಗೆ ಬಂಧಿತವಾಗಿದೆ. ಅದು ಕಡಾಯಿಯನ್ನು ಒಳಗಿನಿಂದಲೇ ದಬ್ಬುತ್ತಾ ಪಾರಾಗಲು ಪ್ರಯತ್ನಿಸುತ್ತಿದೆ. ಹರಿ ಅಣ್ಣ ಕೂಡಲೇ ಒಂದು ಭಾರವಾದ ಕಲ್ಲನ್ನು ತಂದು ಕಡಾಯಿಯ ಮೇಲೆ ಹೇರಿದನು. ಬೆಕ್ಕು ತಪ್ಪಿಸಿಕೊಂಡು ಹೋಗಲು ಸಾಧ್ಯವೇ ಇರಲಿಲ್ಲ. ಆ ರಾತ್ರಿ ನಾವು ವಿಜಯೋತ್ಸಾಹದಲ್ಲಿದ್ದರೂ,  ಬೆಕ್ಕನ್ನು ಚೀಲಕ್ಕೆ ತುಂಬಿ ಗಡೀಪಾರು ಮಾಡುವ ಉಪಾಯದ ಬಗ್ಗೆ ಚಿಂತಿಸುತ್ತಿದ್ದೆವು. ಕಡಾಯಿಯ ಬಾಯಿಗೆ ಹೊಂದುವಷ್ಟು ದೊಡ್ಡ ಗೋಣಿಚೀಲ ಎಲ್ಲೂ ಸಿಗಲಾರದು.

ಅದನ್ನು ಈಗ ಹೇಗೆ ಗೋಣಿಚೀಲದ ಒಳಗೆ ತುಂಬುವುದು?  ನಾವು ತುಂಬಲು ಪ್ರಯತ್ನಿಸುವಾಗ,  ಅದು ತಪ್ಪಿಸಿಕೊಂಡರೆ? ಎಂದೆಲ್ಲಾ ಚಿಂತಿಸಿದೆವು. ಕೊನೆಗೆ ತಾಯಿಯವರನ್ನು ಕೇಳಿದಾಗ, ಅವರು ಆ ಕಡಾಯಿಗೆ ಹೊಂದುವ ದೊಡ್ಡ ಮುಚ್ಚಳದ ಹರಿವಾಣವೊಂದು ನಮ್ಮ ಅಟ್ಟದಲ್ಲಿರುವುದಾಗಿ ಹೇಳಿದರು. ಅದನ್ನು ನಾವು ಆ ರಾತ್ರಿಯೇ ಹುಡುಕಿ ತಂದು ಕೆಳಗಿಟ್ಟೆವು. ಮರುದಿನ ಬೆಳಗ್ಗೆ ಬೆಕ್ಕನ್ನು ಗೋಣಿಗೆ ತುಂಬುವ ಕಾರ್ಯಕ್ಕೆ ಸಿದ್ಧತೆ ಶುರುವಾಯಿತು.  ಮುಚ್ಚಳದ ಹರಿವಾಣ ಸುಮಾರು ಒಂದೂವರೆ ಇಂಚು ಎತ್ತರವಿದ್ದುದರಿಂದ, ಆ ದೊಡ್ಡ ಕಡಾಯದ ತಳಭಾಗವನ್ನು ಸ್ವಲ್ಪ ಎತ್ತಿ, ಅದನ್ನು ಬದಿಯಿಂದ ಬೋರಲಾಗಿ ಸರಿಸಿ ಕಡಾಯಿಯ  ಬಾಯನ್ನು ಸಂಪೂರ್ಣವಾಗಿ ಮುಚ್ಚುವುದೆಂದು ತೀರ್ಮಾನವಾಯಿತು. ಆದರೆ, ಅಷ್ಟು ದೊಡ್ಡ  ಕಡಾಯಿಯನ್ನು ಅದರ ಮುಚ್ಚಳ ಸಮೇತ ಮೂರು ಮೈಲು ದೂರದ ಉದ್ಯಾವರಕ್ಕೆ ಹೊರುವುದು ಅಸಾಧ್ಯದ ಮಾತಾಗಿತ್ತು. ಅದನ್ನು ಸಾಗಿಸಲು ನಾವೊಂದು ಎತ್ತಿನ ಗಾಡಿಯ ಮೊರೆ ಹೋಗಬೇಕಾಗಿತ್ತು. ಅಂತೂ, ಆ ರಾತ್ರಿಯೇ ಕಡಾಯವನ್ನು ಸ್ವಲ್ಪವೇ ಎತ್ತಿ, ಎತ್ತರವಾಗಿ ಇಲ್ಲದ ಆ ಅಗಲವಾದ ಮುಚ್ಚಳವನ್ನು ಅದರ ಬಾಯಿಗೆ ಕೂರಿಸಿ, ಭದ್ರವಾಗಿ ಮುಚ್ಚಿ ಕಡಾಯವನ್ನು ಮೇಲ್ಮುಖ ಮಾಡಿ ಮುಚ್ಚಳದ ಮೇಲೆ ಭಾರವಾದ ಕಲ್ಲನ್ನು ಹೇರಿದೆವು.

ಮರುದಿನ ಬೆಳಗ್ಗೆ ಬೇಗನೆ ಒಂದು ದೊಡ್ಡದಾದ ಮತ್ತು ಗಟ್ಟಿಯಿದ್ದ ಗೋಣಿಚೀಲ ಮತ್ತು ಅದರ ಬಾಯಿ ಬಿಗಿಯಲು ತಕ್ಕ ದಾರಗಳನ್ನು ತಂದೆವು. ಕಡಾಯಿಯ ಮುಚ್ಚಳವನ್ನು ಬಿಗಿಹಿಡಿದು ಅಡ್ಡಕ್ಕೆ ವಾಲಿಸಿದ ನಂತರ ಮುಚ್ಚಳವನ್ನು ಸ್ವಲ್ಪವೇ ಸರಿಸಿ, ಆ ಜಾಗಕ್ಕೆ ಗೋಣಿಚೀಲದ ಬಾಯನ್ನು ಅಗಲಿಸಿ ಹಿಡಿದೆವು. ಬೆಕ್ಕು ತಾನಾಗಿ ಗೋಣಿಚೀಲದ ಒಳಗೆ ನಡೆದು ಬರಲಿಲ್ಲ. ಅದಕ್ಕೆ ಕಳೆದ ಸಾರಿಯ ಕಹಿನೆನಪು ಬಂದಿರಬೇಕು. ನಾವುಗಳು ಕಡಾಯಿಯ ಮೇಲೆ ಬಲವಾಗಿ ನಮ್ಮ ಕೈಗಳಿಂದ ಬಾರಿಸಲು, ಶಬ್ದಕ್ಕೆ ಹೆದರಿ ಬೆಕ್ಕು ಚೀಲದ ಒಳಗೆ ನುಗ್ಗಿ ಬಂದಿತು. ನಾವು ಚೀಲದ ಬಾಯಿ ಬಿಗಿದು ಕಟ್ಟಿದೆವು.

ಈ ಸಲ ನಾವು ಕುಡುಕ ಗುರುವನಂತಹಾ ಜನರ ಮೊರೆ ಹೋಗಬಾರದು ಎಂದು ತೀರ್ಮಾನ ಮಾಡಿದೆವು.

ನಮ್ಮ ದೊಡ್ಡ ಅಣ್ಣ ದೇವೇಂದ್ರ ಪೆಜತ್ತಾಯರ ಆಸ್ಟಿನ್-೧೦ ಕಾರಿನಲ್ಲಿ ಅದನ್ನು ಉದ್ಯಾವರಕ್ಕೆ ಸಾಗಿಸುವುದೆಂದು ಸರ್ವಾನುಮತದ ತೀರ್ಮಾನವಾಯಿತು. ನಮ್ಮ ದೊಡ್ಡ ಅಣ್ಣ ಈ ಕೆಲಸಕ್ಕೆ ಸ್ವತಾಃ ಬರಲು ಒಪ್ಪದೇ, ಅವರ ಡ್ರೈವರ್ ಬಾಬುವನ್ನು ನಮ್ಮಜತೆಗೆ ಕಳುಹಿಸುವುದಾಗಿ ಹೇಳಿದರು. ಬೆಕ್ಕನ್ನು ಬಂಧಿಸಿದ್ದ ಚೀಲವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡು ನಮ್ಮ ಸೈನ್ಯವು ಡ್ರೈವರ್ ಬಾಬುವಿನೊಂದಿಗೆ ಕಾರು ಏರಿ ಉದ್ಯಾವರಕ್ಕೆ ಹೊರಟಿತು.

ಹೊಳೆಯ ಈಚೆ ದಡದಲ್ಲಿ ಕಾರು ನಿಲ್ಲಿಸಿ, ನಾವೆಲ್ಲರೂ ನಮ್ಮ ಬೆಕ್ಕಿನ ಚೀಲದೊಂದಿಗೆ ದೋಣಿಯಲ್ಲಿ ಕುಳಿತು ಹೊಳೆ ದಾಟಿದೆವು. ಬೆಕ್ಕು ಜಾಸ್ತಿ ಕೊಸರಾಡದೇ ಇದ್ದುದರಿಂದ ದೋಣಿ ನಡೆಸುವ ಅಂಬಿಗನಿಗೆ ನಮ್ಮ ಚೀಲದಲ್ಲಿ ಏನಿದೆ ಎಂದು ತಿಳಿಯಲಿಲ್ಲ. ಹೊಳೆಯ ಆಚೆಯ ದಡ ತಲುಪಿದ ನಾವು, ಸುಮಾರು ಒಂದು ಮೈಲು ದೂರ ಆ ಕಡೆಯ ರಸ್ತೆಗುಂಟ ನಡೆದು, ಕಟಪಾಡಿ ಎಂಬ ಊರಿನ ಸಮೀಪದ ಒಂದು ನಿರ್ಜನ ಜಾಗದಲ್ಲಿ ಗೋಣಿಚೀಲದ ಬಾಯನ್ನು ಬಿಚ್ಚಿದೆವು.

ನಮ್ಮ ಗಡವ ಬೆಕ್ಕು ಮಿಯಾಂ ಎಂದು ಅರಚುತ್ತಾ, ಮಾರ್ಗದ ಬದಿಯ ಪೊದೆಗಳಲ್ಲಿ ಮರೆಯಾಯಿತು. ನಾವು ನಮ್ಮ ಗಡವ ಬೆಕ್ಕಿನ ಖೆಡ್ಡಾ ಆಚರಣೆಯು ಜಯಪ್ರದವಾಗಿ ಮುಗಿದುದರ ಕಾರಣ ಜಯಕಾರ ಹಾಕುತ್ತಾ ವಿಜಯೋತ್ಸವ ಆಚರಿಸಲು ಮನೆಗೆ ಮರಳಿದೆವು.

ಅನುಭವಿಗಳ ಮಾತು ಅಕ್ಷರಶಃ ನಿಜವಾಯಿತು. ಗಡೀಪಾರಾದ ಕಳ್ಳ ಗಡವ ಬೆಕ್ಕು ನಮ್ಮಲ್ಲಿಗೆ ತಿರುಗಿ ಬರಲೇ ಇಲ್ಲ.

* * *