`ನನ್ನ ಕೂಸು ಎಣ್ಣೆ ಕುಡ್ದು ಬಿಟ್ಟೈತ್ರಿ, ಜಲ್ದಿ ನೋಡ್ರಿ’ ಎಂದು ಮೂರು ವರ್ಷದ ಮಗುವನ್ನು ಎತ್ತಿಕೊಂಡು ಬಂದ ಗೌರಮ್ಮ ಹೇಳಿದಳು. ಯಾವ ಎಣ್ಣೆ ? ಸೀಮೆ ಎಣ್ಣೆನೋ, ಕಡಲೆಕಾಯಿ ಎಣ್ಣೆನೋ, ಕೊಬ್ಬರಿ ಎಣ್ಣೆನೋ, ಹರಳೆಣ್ಣೆನೋ ಇರಬೇಕು ಎಂದು ಯೋಚಿಸುತ್ತಿರುವಾಗಲೇ ಬೆಂಗಳೂರಿನಲ್ಲಿ ಮದ್ಯಕ್ಕೂ ಎಣ್ಣೆ ಎನ್ನುತ್ತಾರೆ ಎಂಬುದು ನೆನಪಾಯಿತು. ಸಾಮಾನ್ಯವಾಗಿ ಯಾರಾದರೂ ಕುಡಿದು ತೂರಾಡುತ್ತಿದ್ದರೆ, `ಎಣ್ಣೆ ಹೊಡ್ಡಿದ್ದಾನೆ’ ಎನ್ನುವುದು ವಾಡಿಕೆ. ಹಾಗಾಗಿ ಅವರಪ್ಪ ಮನೆಯಲ್ಲಿ ತಂದಿಟ್ಟಿದ್ದ ಸಾರಾಯಿಯನ್ನು ಮಗು ಕುಡಿದಿರಬಹುದೇ ಎಂಬ ಅನುಮಾನ ಬಂತು.

ಉತ್ತರ ಕರ್ನಾಟಕದ ಕಡೆ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕಗಳಿಗೂ ಎಣ್ಣೆ ಎನ್ನುತ್ತಾರೆ. ಸಾರಾಯಿ ವಾಸನೆಯೇನಾದರೂ ಬರುತ್ತಿದೆಯೋ ಎಂದು ನೋಡುತ್ತಿರು ವಾಗಲೇ ಗೌರಮ್ಮ `ನನ್ನ ಯಜಮಾನಂಗೆ ಕೆಮ್ಮು ಬಾಳ ಬಂದಿತ್ತಲ್ರಿ. ಆಗ ನೀವೇ ಕೆಮ್ಮಿನ ಎಣ್ಣಿ ಬರ್ದು ಕೊಟ್ಟಿದ್ರಲ್ರಿ. ಅದೇ ಎಣ್ಣಿ ಬಾಟ್ಲಿಯೊಳಗೆ ಒಂದು ತಟಗು ಇತ್ರಿ. ಅದನ್ನ ಕುಡ್ದು ಬಿಟ್ಟ್ಯೆತ್ರಿ ಇದು’ ಎಂದು ಪಟಕ್ಕನೆ ಸಿಟ್ಟಿನಿಂದ ಮಗುವಿನ ಬೆನ್ನಿಗೊಂದು ಏಟು ಹಾಕಿದಳು.

ಕಳೆದ ವಾರ ಕ್ಲಿನಿಕಬಂದಾಗ ಕೆಮ್ಮಿನ ಸಿರ್ ಬರೆದುಕೊಟ್ಟಿದ್ದು ನೆನಪಾಯಿತು. ಮಗುವನ್ನು ಪರೀಕ್ಷಿಸಿದಾಗ ಯಾವುದೇ ರೀತಿ ತೊಂದರೆಯಾಗಿರಲಿಲ್ಲ. `ಏನೂ ಆಗಿಲ್ಲ, ಹೆದರಿಕೊಳ್ಳಬೇಡಿ. ಆದರೆ ಹಾಗೆಲ್ಲ ಔಷಧಗಳನ್ನು ಮಗುವಿನ ಕೈಗೆ ಸಿಗುವಂತೆ ಇಟ್ಟಿದ್ದು ತಪ್ಪು. ಸ್ವಲ್ಪ ಪ್ರಮಾಣದಲ್ಲಿ ಕುಡಿದಿದ್ದರಿಂದ ಮತ್ತು ಅದು ತುಳಸಿಯಿಂದ ತಯಾರಿಸಿದ ಔಷಧವಾದ್ದರಿಂದ ಯಾವ ತೊಂದರೆಯೂ ಆಗಿಲ್ಲ’ ಎಂದು ಹೇಳಿ ಕಳುಹಿಸಿದೆ. ಆದರೆ `ಎಣ್ಣೆ’ ಎಂಬುದಕ್ಕೆ `ಕೆಮ್ಮಿನ ಔಷಧ’ವೂ ಸೇರಿಕೊಳ್ಳುತ್ತದೆ ಎನ್ನುವುದನ್ನು ನನ್ನ ನಿಘಂಟಿಗೆ ಸೇರಿಸಿಕೊಂಡೆ.

ಔಷಧಗಳು ಮಾತ್ರವಲ್ಲ. ನಮ್ಮ ಮನೆಗಳಲ್ಲಿ ಅನೇಕ ವಿಷಪೂರಿತ ವಸ್ತುಗಳೂ ಇರುತ್ತವೆ. ಗಾಯದ ಮುಲಾಮುಗಳು, ಸೋಂಕು ರೋಧಕಗಳು, ಕೀಟನಾಶಕಗಳು, ಸೀಮೆಎಣ್ಣೆ, ಸ್ಪಿರಿಟ್, ಡೆಟಾಲ್, ಹಾರ್ಪಿಕ ಮುಂತಾದವು ಮುಖ್ಯವಾದವು. ಅದನ್ನು ಮತ್ಯಾವುದೋ ವಸ್ತುವೆಂದು ತಿಳಿದು ಅರಿವಿಲ್ಲದೆ ಸೇವಿಸಿದ ಉದಾಹರಣೆಗಳಿವೆ. ಕೆಲವು ಆಹಾರ ಪದಾರ್ಥಗಳನ್ನು ಅತಿಯಾಗಿ ಸೇವಿಸಿದಾಗ ಅವೂ ವಿಷವಾಗುವುದಿದೆ.

ಆಮ್ಲ, ಪ್ರತ್ಯಾಮ್ಲ, ಸೀಮೆ ಎಣ್ಣೆ ಕುಡಿದ ಪ್ರಸಂಗಗಳನ್ನು ಹೊರತುಪಡಿಸಿ, ಉಳಿದ ಸಂದರ್ಭಗಳಲ್ಲಿ ಆ ವ್ಯಕ್ತಿಗೆ ವಾಂತಿಯಾಗುವಂತೆ ಮಾಡಬೇಕು. ಅದಕ್ಕಾಗಿ ಎರಡು ಚಮಚೆ ಅಡುಗೆ ಉಪ್ಪನ್ನು ಒಂದು ಲೋಟ ನೀರಿಗೆ ಬೆರೆಸಿ ಕುಡಿಸಬೇಕು. ವಾಂತಿಯಾಗದಿದ್ದರೆ ಬೆರಳಿನಿಂದ ಗಂಟಲಿನ ಒಳಭಾಗ ನೀವಿ ವಾಂತಿಯಾಗುವಂತೆ ಮಾಡಬೇಕು. ರೋಗಿ ವಾಂತಿ ಮಾಡಿದ ನಂತರ ಅಧಿಕ ಪ್ರಮಾಣದ ಹಾಲು, ಹಿಟ್ಟು ಬೆರೆಸಿದ ನೀರು, ತುಳಸಿ ಬೀಜ ಮತ್ತು ಶುಂಠಿ ಕಷಾಯ ಕುಡಿಸಬೇಕು.

ಅಡಿಕೆಯ ಅತಿ ಸೇವನೆಯಿಂದ ವಾಂತಿಯಾಗಬಹುದು. ದೊಡ್ಡವರು ಅಡಿಕೆ ತಿನ್ನುವುದು ನೋಡಿ ಮಕ್ಕಳೂ ತಿಂದು ವಾಂತಿ ಮಾಡಿಕೊಳ್ಳುವುದಿದೆ. ಇದರಿಂದ ಮೂರ್ಛೆ ಬರುವಂತಾದರೆ ಮತ್ತು ಭೇದಿಯಾಗುತ್ತಿದ್ದರೆ ತಣ್ಣೀರನ್ನು ಎರಡರಿಂದ ಮೂರು ಲೀಟರ‍್ನಷ್ಟು ಕುಡಿಸಬೇಕು. ತೃಪ್ತಿಯಾಗುವ ತನಕ ನೀರು ಕುಡಿಯುವುದರಿಂದ ಸಮಸ್ಯೆ ಶಮನವಾಗುವುದು.

ಮನೆಯಲ್ಲೇ ಮಾಡಬಹುದು ಚಿಕಿತ್ಸೆ :

ದ್ರಾಕ್ಷಿ, ಜೇಷ್ಠಮಧು, ಜೇನುತುಪ್ಪ, ಹಿಪ್ಪಲಿ, ಖರ್ಜೂರ, ಶ್ರೀಗಂಧ, ಸುಗಂಧಿಬೇರು, ಲಾಮಂಚ ಇವುಗಳ ಬಿಸಿ ಅಥವಾ ತಣ್ಣಗಿನ ಕಷಾಯವು ಬಾಯಾರಿಕೆ, ಮೂರ್ಛೆ, ತಲೆಸುತ್ತುಗಳನ್ನು ಪರಿಹರಿಸುವುದು.

ಹೆಚ್ಚು ವೀಳ್ಯದೆಲೆ ತಿಂದು `ಮತ್ತು’ ಬಂದಂತಾದರೆ ಸುಣ್ಣವನ್ನು ಪುಡಿ ಮಾಡಿ (ಹಿಚುಕಿ) ನಶ್ಯದಂತೆ ಅದರ ವಾಸನೆ ಸೆಳೆದುಕೊಳ್ಳಬೇಕು. ತಕ್ಷಣ ವೀಳ್ಯದೆಲೆಯಿಂದ ತಲೆ ದೋರಿದ ತೊಂದರೆ ನಿವಾರಣೆ ಯಾಗುತ್ತದೆ.

ವಿಷಪ್ರಾಶನದಿಂದ ಮೂರ್ಛೆ ಹೋಗಿದ್ದರೆ, ಹಣೆಗೆ ತಣ್ಣೀರನ್ನು ಬಲವಾಗಿ ಚಿಮುಕಿಸಬೇಕು. ಮಲಗಿದ್ದಲ್ಲಿಯೇ ತಲೆದಿಂಬಿನ ಮೇಲೆ ತಲೆಯನ್ನು ಸ್ವಲ್ಪ ಎತ್ತರಿಸಿಟ್ಟು ನೆತ್ತಿ ಮೇಲೆ ತಣ್ಣೀರನ್ನು ಧಾರೆಯಾಗಿ ಒಂದೆರಡು ನಿಮಿಷ ಜೋರಾಗಿ ಎತ್ತರದಿಂದ ಹುಯ್ಯಬೇಕು. ಲಾಮಂಚ, ಶ್ರೀಗಂಧ, ರಕ್ತಚಂದನ, ಬಜೆ ಮುಂತಾದವುಗಳನ್ನು ಬೆರೆಸಿ ಕುದಿಸಿ ಆರಿಸಿದ ನೀರನ್ನು ಇದಕ್ಕೆ ಉಪಯೋಗಿಸಿದರೆ ಇನ್ನೂ ಉತ್ತಮ. ಕೈಕಾಲುಗಳು ಬೆಚ್ಚಗಿರುವ ಹಾಗೆ ಅವುಗಳನ್ನು ಬಿಸಿ ಕೈಗಳಿಂದ ಉಜ್ಜುವುದು ಮತ್ತು ಬಿಸಿ ನೀರು ತುಂಬಿದ ಬಾಟಲಿ ಅಥವಾ ಹಾಟ್ ವಾಟರ್ ಬ್ಯಾಗ್‌ನಿಂದ ಅಂಗಾಲುಗಳಿಗೆ ಶಾಖ ಕೊಡುವುದು ಒಳ್ಳೆಯದು.

ಅತಿಯಾಗಿ ಜಾಯಿಕಾಯಿ ಸೇವಿಸಿ `ಮತ್ತು’ ಬಂದಿದ್ದರೆ ಅಥವಾ ತಲೆತಿರುಗುತ್ತಿದ್ದರೆ ಅಂಥವರಿಗೆ ಅಳಲೆಕಾಯಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ತಿನ್ನಿಸಬೇಕು. ತಣ್ಣೀರು ಸ್ನಾನ, ಮೊಸರಲ್ಲಿ ಸಕ್ಕರೆ ಬೆರೆಸಿ ತಿನ್ನಿಸುವುದರಿಂದಲೂ ಬೇಗ ಕಡಿಮೆಯಾಗುತ್ತದೆ.

ವಿಷವೃಕ್ಷಗಳ ವಾಸನೆ ಅಥವಾ ವಿಷದಿಂದ ಜ್ವರ ಬಂದಿದ್ದರೆ, `ಸರ್ವಗಂಧ ಕಷಾಯ’ ಕುಡಿಸಬೇಕು. ಸರ್ವಗಂಧ ಎಂದರೆ ಚತುರ್ಜಾತ, ಕರ್ಪೂರ, ಗಂಧ, ಮೆಣಸು, ಅಗಿಲುಗಂಧ, ಕುಂಕುಮ ಕೇಸರಿ, ಲವಂಗಗಳಿಂದ ತಯಾರಿಸಿದ ಕಷಾಯ.

ವಿಷಪ್ರಾಶನದಿಂದ ಮೈ ನಡುಕ, ನಿದ್ರೆ, ಬಾಯಾರಿಕೆ, ದೇಹದಲ್ಲಿ ಚಲನೆ ಇಲ್ಲದಂತಾಗಿದ್ದರೆ ಶತಾವರಿ, ಹಿಪ್ಪಲಿ, ಸಣ್ಣಭದ್ರಮುಷ್ಠಿ, ಖರ್ಜೂರ, ಜೇಷ್ಠಮಧು ಇವುಗಳನ್ನು ಪುಡಿ ಮಾಡಿ ತುಪ್ಪದಲ್ಲಿ ಅರೆದು ಜೇನುತುಪ್ಪ, ಕಲ್ಲುಸಕ್ಕರೆ ಬೆರೆಸಿ ಕುಡಿಸಬೇಕು.

ಶಿರೀಷ, ಜೇಷ್ಠಮಧು, ಇಂಗು, ಬೆಳ್ಳುಳ್ಳಿ, ತಗರ, ಬಜೆ, ಚಂಗಲಕೋಷ್ಠ ಇವುಗಳನ್ನು ನೀರಿನಲ್ಲಿ ಅರೆದು ನಶ್ಯ ಮಾಡಬೇಕು. ಒಂದೆಲಗದ ರಸ, ಬೂದುಗುಂಬಳ ರಸ, ಬಜೆ ರಸ, ಶಂಖಪುಷ್ಪ ಇವುಗಳಲ್ಲಿ ಯಾವುದಾದರೊಂದನ್ನು ಚಂಗ್ಕೋಷ್ಠದ ಪುಡಿ ಮತ್ತು ಜೇನು ಕೂಡಿಸಿ ಕುಡಿಸಬೇಕು.

ಒಣಶುಂಠಿ, ಅಮೃತಬಳ್ಳಿ, ಪುಷ್ಪರಮೂಲ, ಹಿಪ್ಪಲಿ, ಹಿಪ್ಪಲಿ ಮೂಲ, ಕಿರುಗುಳ್ಳದ ಬೇರು ಇವುಗಳ ಕಷಾಯ ತಯಾರಿಸಿ ಕುಡಿಸಬೇಕು.

ಬೂದುಗುಂಬಳ ರಸ, ಜೇಷ್ಠಮಧು ಮತ್ತು ತುಪ್ಪ ಸೇರಿಸಿ ತಯಾರಿಸಿದ ಕೂಷ್ಮಾಂಡ ಘೃತ ಕೂಡ ಒಳ್ಳೆಯದು.

ಆದರೆ, ಒಂದು ವಿಷಯ ನೆನಪಿರಲಿ. ಯಾವುದರಿಂದ ವಿಷ ಪ್ರಾಶನವಾಗಿದೆ ಯೆಂದು ತಿಳಿದಕೂಡಲೇ ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕಾದುದು ಬಹಳ ಮುಖ್ಯ. ಕೆಲವು ವಿಷ ವಸ್ತುಗಳು, ದ್ರವ್ಯಗಳು ಪ್ರಾಣಕ್ಕೇ ಅಪಾಯ ತಂದೊಡ್ಡುತ್ತವೆ. ಹಾಗಾಗಿ ತಕ್ಷಣದ ಚಿಕಿತ್ಸೆ ಬಹಳ ಮುಖ್ಯ.