ದೀರ್ಘಾಯುಗಳಾಗಬೇಕೆಂದು ಬಯಸುವವರೆಲ್ಲ ವೃದ್ಧಾಪ್ಯವನ್ನು ಸಂತೋಷದಾಯಕವನ್ನಾಗಿ ಮಾಡಿಕೊಂಡು ಅದರ ರುಚಿಯನ್ನು ಸವಿಯಲೇಬೇಕು. ವೃದ್ಧಾಪ್ಯವನ್ನು `ಶಾಪ’ವೆಂದು ಭಾವಿಸದೇ `ವರ’ವೆಂದುಕೊಂಡಲ್ಲಿ ನಿಭಾಯಿಸುವುದು ಖಂಡಿತ ಕಷ್ಟವಾಗಲಾರದು. ಮಧ್ಯ ವಯಸ್ಸಿನಲ್ಲಿಯೇ ಪೀಠಿಕೆ ಹಾಕಿ ಆರೋಗ್ಯಕರ ಸೂತ್ರಗಳನ್ನು ಪಾಲಿಸಿದಲ್ಲಿ ವೃದ್ಧಾಪ್ಯವು ಸುಖದಾಯಕವಾಗಿರುತ್ತದೆ. ಯಾವುದೇ ದುಶ್ಚಟಗಳಿಗೆ ದಾಸರಾಗದಂತೆ ಜೀವನ ನಡೆಸಿದಲ್ಲಿ ಆನಾರೋಗ್ಯ ಹತ್ತಿರ ಸುಳಿಯಲಾರದು. ಮಕ್ಕಳು, ಮೊಮ್ಮಕ್ಕಳೊಂದಿಗೆ ಸಂತೋಷದಿಂದ ವೃದ್ಧಾಪ್ಯದಲ್ಲಿ ಸಮಯ ಕಳೆಯುವಂತಾದಲ್ಲಿ ನೆಮ್ಮದಿಯ ಬದುಕು ಸಾಧ್ಯವಾಗುವುದು. ಮಕ್ಕಳು ಕೂಡ ಅಪ್ಪ, ಅಮ್ಮನನ್ನು ಹೊರೆಯೆಂದು ಭಾವಿಸದೇ ಪ್ರೀತಿಯಿಂದ ನೋಡಿಕೊಂಡಲ್ಲಿ, ಉತ್ತಮ ಕೌಟುಂಬಿಕ ಪರಿಸರವಿದ್ದಲ್ಲಿ, ವೃದ್ಧರ ಆರೋಗ್ಯ ನಳನಳಿಸುತ್ತಿರುತ್ತದೆ.

ಬೆಳಿಗ್ಗೆ 20 ರಿಂದ 30 ನಿಮಿಷಗಳ ನಡಿಗೆ, ಧ್ಯಾನ, ಹಿತವಾದ, ಮಿತವಾದ ಸಾತ್ವಿಕ ಆಹಾರ, 2 ಲೀಟ್ ನೀರು ಕುಡಿಯುವುದು, ನಿರಾತಂಕವಾದ ನಿದ್ರೆ ಮಾಡಿದಲ್ಲಿ ಒಳ್ಳೆಯದು. ಇವೆಲ್ಲವೂ ದೈಹಿಕ ಆರೋಗ್ಯವನ್ನು ಕಾಪಾಡಿದಲ್ಲಿ ಸಾಹಿತ್ಯ, ಸಂಗೀತದಂತಹ ಉತ್ತಮ ಹವ್ಯಾಸ, ಜನರೊಂದಿಗೆ ಬೆರೆಯುವುದು, ದೇವಸ್ಥಾನಗಳಿಗೆ ಭೇಟಿ ಕೊಡುವುದು, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು, ನಿಯಮಿತವಾಗಿ ಕುಟುಂಬ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು, ಕುಟುಂಬ ಸಮೇತ ಇಲ್ಲವೇ ಮಿತ್ರರ ಜೊತೆಗೂಡಿ ಪ್ರವಾಸ ಹೋಗುವುದು ಇವೆಲ್ಲವೂ ಮಾನಸಿಕ ಆರೋಗ್ಯ ವೃದ್ಧಿಗೆ  ಸಹಾಯಕವಾಗುತ್ತದೆ.

ನಡಿಗೆ : ನಾವು ನಡೆಯುವಾಗ ನಮ್ಮ ದೇಹದ ಬಹುತೇಕ ಸ್ನಾಯುಗಳು, ಮಾಂಸಖಂಡಗಳು ಬಳಕೆಯಾಗುತ್ತವೆ. ಆದ್ದರಿಂದ ಇದೊಂದು “ಪರಿಪೂರ್ಣ ವ್ಯಾಯಾಮ” ಎಂದು ಪರಿಗಣಿತವಾಗಿದೆ. ನಮ್ಮ ದೇಹದ ಚಟುವಟಿಕೆಗಳ ದರ (BMR – Basic Metabolism rate) ಹೆಚ್ಚುತ್ತದೆ. ಉಸಿರಾಟದ ವೇಗ ಹೆಚ್ಚುತ್ತದೆ. ಹೃದಯದ ಬಡಿತ ಹೆಚ್ಚುವುದರಿಂದ ದೇಹದ ಭಾಗಗಳಿಗೆ ರಕ್ತಪೂರೈಕೆ ಹೆಚ್ಚುತ್ತದೆ. ಶ್ವಾಸಕೋಶಗಳಿಗೆ ಆಮ್ಲಜನಕ ಹೆಚ್ಚು ಪೂರೈಕೆಯಾಗುತ್ತದೆ. ಮೂವತ್ತು ನಿಮಿಷ ನಡೆದರೆ ಸುಮಾರು 200 ಕ್ಯಾಲೊರಿಗಳು ಖರ್ಚಾಗುತ್ತವೆ. ಕನಿಷ್ಠ ಹತ್ತು ನಿಮಿಷಗಳ ನಡಿಗೆಯಿಂದಲೂ ಹೆಚ್ಚಿನ ಮಟ್ಟದ ಪ್ರಯೋಜನವಿದೆ. ಅಲ್ಲದೇ ಮುಖ್ಯವಾಗಿ ನಡಿಗೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ದೇಹಕ್ಕೆ, ಮನಸ್ಸಿಗೆ ಹಿತವೆನಿಸುತ್ತದೆ. ಖಿನ್ನತೆ, ನಿದ್ರಾಹೀನತೆ ಹತ್ತಿರ ಬರಲಾರವು. ಮೆದುಳಿಗೆ ಆಮ್ಲಜನಕ ಪೂರೈಕೆ ಹೆಚ್ಚಾಗಿ ಅಲ್ಲಿನ ಜೀವಕೋಶಗಳು ಕ್ರಿಯಾಶೀಲವಾಗುತ್ತವೆ. ನಡಿಗೆ ನಮ್ಮ ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ. ಬೆಳಿಗ್ಗೆ ಇಲ್ಲವೇ ಸಂಜೆ ಒಂದು ನಿರ್ದಿಷ್ಟ ಸಮಯ ನಿಗದಿಪಡಿಸಿಕೊಂಡು ನಡಿಗೆ ರೂಢಿಸಿ ಕೊಳ್ಳಬೇಕು. ನಡೆಯುವುದನ್ನು ಆನಂದಿಸಿದಲ್ಲಿ ಆರೋಗ್ಯ ಉತ್ತಮಗೊಳ್ಳುತ್ತದೆ. ಹೃದಯಾಘಾತ, ಸಕ್ಕರೆ ಕಾಯಿಲೆ, ಪಾರ್ಶ್ವವಾಯು, ಆಸ್ಟಿಯೋಪೊರೊಸಿಸ್, ಕ್ಯಾನ್ಸರ್, ಸಂಧಿವಾತ ಮುಂತಾದ ಕಾಯಿಲೆಗಳಿಂದ ರಕ್ಷಣೆ ಒದಗಿಸುವುದಲ್ಲದೇ ದೇಹದಲ್ಲಿ ಕೊಲೆಸ್ಟ್ರಾ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ನಡಿಗೆಗೆ ಪ್ರಶಾಂತವಾದ ಸ್ಥಳ ಆಯ್ಕೆಮಾಡಿಕೊಳ್ಳಬೇಕು. ಬಿಗಿಯಾಗಿರುವ ಪಾದರಕ್ಷೆ ಧರಿಸಬಾರದು. ಅನಾರೋಗ್ಯವಿರುವಾಗ ನಡೆಯುವುದು ಬೇಡ. ಚಳಿಗಾಲದಲ್ಲಿ ವಾಕಹೋಗುವಾಗ ಬೆಚ್ಚಗಿನ ಸ್ವೆಟ್, ಟೊಪ್ಪಿ, ಕಾಲುಚೀಲ ಧರಿಸಿ ಹೋಗುವುದು ಒಳ್ಳೆಯದು. ಚಳಿಯಿರುವಾಗ ಬೆಳಗಿನ ಜಾವ ಹೋಗುವುದಕ್ಕಿಂತ ಸ್ವಲ್ಪ ತಡವಾಗಿ `ವಾಕಹೋಗಬಹುದು. ನಡಿಗೆಯು ಅತ್ಯುತ್ತಮ `ಔಷಧಿರಹಿತ ಚಿಕಿತ್ಸೆ’ ಎಂದಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಋತುಬಂಧದ ನಂತರ ಮಹಿಳೆಯರಲ್ಲಿ ಮೂಳೆಗಳು ಟೊಳ್ಳಾಗುವುದು ಸಾಮಾನ್ಯ. ಪ್ರತಿದಿನ ಕ್ರಮಬದ್ಧ ನಡಿಗೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ. ನಡಿಗೆಯು ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ.

ನೀರು : ಬೆಳಿಗ್ಗೆ ಎದ್ದ ಕೂಡಲೇ ಒಂದು ಇಲ್ಲವೇ ಎರಡು ಲೋಟ ನೀರು ಕುಡಿಯಬೇಕು. ಮಳೆಗಾಲ ಮತ್ತು ಚಳಿಗಾಲದಲ್ಲಿ ಬೆಚ್ಚಗಿನ ನೀರನ್ನು ಕುಡಿಯಬೇಕು. ನೀರನ್ನು ಹೆಚ್ಚು ಕುಡಿಯುವುದರಿಂದ ಮೂತ್ರಪಿಂಡ, ಪಿತ್ತಕೋಶ, ಜಠರದ ತೊಂದರೆಗಳು, ಸಣ್ಣ ಕರುಳಿನ ಹುಣ್ಣು ಮತ್ತು ಮಲಬದ್ಧತೆಗಳನ್ನು ತಡೆಗಟ್ಟಬಹುದು. ಶುದ್ಧ ನೀರನ್ನು ಕುಡಿಯುವುದರಿಂದ ಹಸಿವು ಹೆಚ್ಚಾಗುವುದು ಮತ್ತು ಜೀರ್ಣಶಕ್ತಿ ಹೆಚ್ಚುತ್ತದೆ. ಬೇಸಿಗೆಯಲ್ಲಿ ವಾತಾವರಣದ ಉಷ್ಣತೆ ಹೆಚ್ಚಾಗಿ ಬೆವರುವುದು ಅಧಿಕ. ಮೂತ್ರದ ಉತ್ಪತ್ತಿ ಕಡಿಮೆಯಾಗುವುದು. ಆದ್ದರಿಂದ ಬೇಸಿಗೆಯಲ್ಲಿ ನೀರು ಹೆಚ್ಚು ಕುಡಿಯಬೇಕು. ನೀರನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸಕಾಲದಲ್ಲಿ ಕುಡಿಯುವುದರಿಂದ ವೃದ್ಧಾಪ್ಯದಲ್ಲಿ ಬರಬಹುದಾದ ರಕ್ತ ಹೆಪ್ಪುಗಟ್ಟಿ ಉಂಟಾಗುವ ಹೃದಯಾಘಾತ, ಪಾರ್ಶ್ವವಾಯು ತಪ್ಪಿಸಬಹುದು.

ಆಹಾರ : ಸಮತೋಲನ ಆಹಾರವನ್ನು ಹಿತಮಿತವಾಗಿ ಸೇವಿಸಬೇಕು. ಶುಚಿಯಾದ, ರುಚಿಯಾದ ಆಹಾರ ಸೇವಿಸಬೇಕು, ರೋಗಾಣುರಹಿತವಾಗಿರಬೇಕು. ಪೋಷಕಾಂಶಗಳನ್ನು ಒಳಗೊಂಡಿರಬೇಕು. ಬೆಳಗಿನ ಸಮಯ ಹೆಚ್ಚು ಪ್ರಮಾಣದ ಆಹಾರ, ಮಧ್ಯಾಹ್ನ ಸಾಮಾನ್ಯ ಪ್ರಮಾಣದ ಆಹಾರ, ರಾತ್ರಿ ಕನಿಷ್ಟ ಆಹಾರ ಸೇವನೆ ವೃದ್ಧಾಪ್ಯದಲ್ಲಿ ಒಳ್ಳೆಯದು. ಸಾತ್ವಿಕ ಆಹಾರ ಸೇವಿಸಬೇಕು. ಸಾಕಷ್ಟು ನಾರಿನಂಶಗಳು, ಕೊಲೆಸ್ಟ್ರಾಲ್ ರಹಿತ, ಅಗತ್ಯವಾದ ಅನ್ನಾಂಗಗಳು, ಖನಿಜಗಳು, ಸಸಾರಜನಕಗಳು ಮತ್ತು ಕಡಿಮೆ ಪಿಷ್ಠಪದಾರ್ಥಗಳು ಒಳಗೊಂಡ ಆಹಾರ ಪದಾರ್ಥಗಳನ್ನು ಪ್ರತಿದಿನ ಬಳಸಿದಲ್ಲಿ ಆರೋಗ್ಯ ರಕ್ಷಣೆ ಖಚಿತ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದಲ್ಲದೇ ರೋಗಿಗಳಲ್ಲಿ ಮತ್ತು ರೋಗ ಚಿಕಿತ್ಸೆಯಲ್ಲಿ ಶೀಘ್ರ ಗುಣವಾಗಲು ಸಹಾಯ ಮಾಡುತ್ತದೆ.

ತಾಜಾ ತರಕಾರಿಗಳು : ಹಸಿರು ತರಕಾರಿಗಳು – ದಂಟು, ಹರಿವೆ, ಮೆಂತ್ಯ, ಚಕ್ಕೋತ, ಕೊತ್ತಂಬರಿ, ಸಬ್ಬಸಿಗೆ, ನುಗ್ಗೆ, ಪಾಲಕಅಗಸೆ, ಪುದೀನ ಸೊಪ್ಪುಗಳು. ಗಜ್ಜರಿ, ಬೀಟ್‌ರೂಟ್, ಬೆಂಡೆಕಾಯಿ, ಹೀರೆಕಾಯಿ, ಬೂದುಗುಂಬಳ ಮುಂತಾದ ತರಕಾರಿಗಳು ಜೀವಸತ್ವ `ಸಿ’, ಕಬ್ಬಿಣ, ಸುಣ್ಣಾಂಶಗಳನ್ನು ದೇಹಕ್ಕೆ ಒದಗಿಸುತ್ತವೆ. ಪ್ರತಿದಿನ ಒಂದು ಬಟ್ಟಲು ಸಲಾ್ ಅಥವಾ ಅರ್ಧ ಬಟ್ಟಲು ಬೇಯಿಸಿದ ತರಕಾರಿಯನ್ನು ದಿನಕ್ಕೆರಡು ಬಾರಿ ಇಲ್ಲವೇ ಮೂರು ಬಾರಿ ಸೇವಿಸಬೇಕು.

ಹಣ್ಣುಗಳು : ಮೂಸಂಬಿ, ಕಿತ್ತಲೆ, ಕಲ್ಲಂಗಡಿ, ಕರಬೂಜ, ಪರಂಗಿ ಹಣ್ಣು, ಪೈನಾಪ್, ಸೇಬು ಮುಂತಾದ ಹಣ್ಣುಗಳನ್ನು ಆಯಾ ಋತುಮಾನದಲ್ಲಿ ದೊರೆಯುವ ಹಣ್ಣುಗಳನ್ನು ಶರಬತ್ತು ತಯಾರಿಸಿ ಇಲ್ಲವೇ ಹಾಗೆಯೇ ತಿನ್ನಬಹುದು. ಸಕ್ಕರೆ ಕಾಯಿಲೆಯಿರುವವರು ವೈದ್ಯರ ಸಲಹೆ ಮೇರೆಗೆ ಹಣ್ಣುಗಳನ್ನು ತಿನ್ನಬೇಕು. ಅನೇಕ ಹಣ್ಣುಗಳು ನಾರಿನಂಶವನ್ನು, `ಸಿ’ ಜೀವಸತ್ವ, ಕಬ್ಬಿಣಾಂಶವನ್ನು ದೇಹಕ್ಕೆ ಒದಗಿಸುತ್ತವೆ.

ಆಹಾರ ಧಾನ್ಯಗಳು : ಅಕ್ಕಿ, ರಾಗಿ, ಗೋಧಿ, ಜೋಳ, ಬಾರ್ಲಿ, ಮೆಕ್ಕೆಜೋಳ ಮುಂತಾದ ಧಾನ್ಯಗಳು ಅಥವಾ ಅವುಗಳಿಂದ ತಯಾರಿಸಿದ ಹಿಟ್ಟುಗಳನ್ನು ಉಪಯೋಗಿಸಬೇಕು.

ತಂಪು ಪಾನೀಯಗಳ ಸೇವನೆ ಬೇಡ : ತಂಪು ಪಾನೀಯಗಳನ್ನು ಸೇವಿಸಿದರೆ ಆಹಾರ ಜೀರ್ಣವಾಗುವ ಬದಲು ಅಜೀರ್ಣ ಉಂಟಾಗುತ್ತದೆ. ಅಜೀರ್ಣದಿಂದ ರೋಗಕಾರಕ ವಿಷಾಣುಗಳು ಉತ್ಪತ್ತಿಯಾಗಿ ದೇಹದಲ್ಲಿ ಸೇರುತ್ತವೆ. ಈ ಪಾನೀಯಗಳ ಪಿ.ಎನ್. 3.41ರಷ್ಟಿರುತ್ತದೆ. ಅಂದರೆ ಮೂಳೆಯು ಸಹ ಈ ಆಮ್ಲದಲ್ಲಿ ನಾಶಹೊಂದುತ್ತವೆ. ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಂದುತ್ತದೆ. ಉದರದ ಹುಣ್ಣು, ಅಧಿಕ ರಕ್ತದೊತ್ತಡ, ಕೆಮ್ಮು, ನೆಗಡಿ, ಸಂಧಿವಾತ, ಚರ್ಮ ರೋಗಗಳು ಪದೇ ಪದೇ ಉಂಟಾಗುತ್ತವೆ. ಆದ್ದರಿಂದ ವೃದ್ಧಾಪ್ಯದಲ್ಲಿ ತಂಪುಪಾನೀಯಗಳ ಸಹವಾಸದಿಂದ ದೂರವಿರುವುದು ಲೇಸು.

ಧೂಮಪಾನ, ಮದ್ಯಪಾನ ಬೇಡ : ಹೃದಯಾಘಾತ, ಕ್ಯಾನ್ಸ್, ಉದರದ ಹುಣ್ಣು, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು ಮುಂತಾದವುಗಳನ್ನು ಉಂಟುಮಾಡುವ ಧೂಮಪಾನ, ಮದ್ಯಪಾನಗಳು ಮಾರು ದೂರದಲ್ಲಿರಲಿ.

ನಿದ್ರೆ : ಐದರಿಂದ ಆರು ಗಂಟೆ ನಿದ್ರೆ ಅವಶ್ಯಕ ಮತ್ತು ಆರೋಗ್ಯಕರ. ರಾತ್ರಿ 10 ಗಂಟೆಗೆ ಮಲಗಿ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ಬೆಳಿಗ್ಗೆ 4 ಗಂಟೆಗೆ ಏಳುವುದು ಉತ್ತಮ. ಮಲಗುವ ಹಾಸಿಗೆ ಹತ್ತಿಯದ್ದಾಗಿರಲಿ. ಮಲಗುವ ಮುಂಚೆ ಒಳ್ಳೆಯ ಆಲೋಚನೆಗಳಿರಲಿ. ಧ್ಯಾನ ಮಾಡುವುದೂ ಒಳ್ಳೆಯದು. ಆಯಾ ದಿನದ ನಡವಳಿಕೆಗಳನ್ನು ಅವಲೋಕಿಸಿ, ವಿಮರ್ಶಿಸಿಕೊಳ್ಳಿ. ಮಲಗುವ ಮುಂಚೆ ನಿಮಗಿಷ್ಟವಾದ ಸಂಗೀತ ಆಲಿಸಿ.

ರಸಾಯನ ಚಿಕಿತ್ಸೆ : ವೃದ್ಧಾಪ್ಯದಲ್ಲಿ ರಸಾಯನ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಕಾಯಿಲೆಗಳನ್ನು ತಡೆಗಟ್ಟಬಹುದು. ರಸಾಯನ ಚಿಕಿತ್ಸೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಉತ್ಸಾಹ ಹೆಚ್ಚಿಸುತ್ತದೆ. ನೆಲ್ಲಿಕಾಯಿ, ಅಳಲೆಕಾಯಿ, ಭೃಂಗರಾಜ, ಅಶ್ವಗಂಧ, ಶತಾವರಿ, ಹಿಪ್ಪಲಿ ಮುಂತಾದವುಗಳು ರಸಾಯನವಾಗಿ ಕಾರ್ಯ ನಿರ್ವಹಿಸುತ್ತವೆ. ಇವುಗಳಲ್ಲಿ ಯಾವುದಾದರೊಂದನ್ನು ಪುಡಿ ಮಾಡಿ ಇಲ್ಲವೇ ಲೇಹ್ಯ ತಯಾರಿಸಿ ಹಾಲಿನೊಂದಿಗೆ, ಜೇನಿನೊಂದಿಗೆ ಸೇವಿಸಬೇಕು.

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು : ದೈಹಿಕ ಸ್ವಚ್ಛತೆ, ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿದಿನದ ಚಟುವಟಿಕೆಗಳನ್ನು ಶಾಂತ ಮನಸ್ಥಿತಿಯಿಂದ ಸಮಯಕ್ಕೆ ಸರಿಯಾಗಿ ಮಾಡಬೇಕು. ಕುಟುಂಬದವರೊಂದಿಗೆ, ನೆರೆಹೊರೆಯವರೊಂದಿಗೆ, ಸಾರ್ವಜನಿಕರೊಂದಿಗೆ ಸ್ನೇಹ, ಪ್ರೀತಿಯಿಂದ ನಡೆದು ಕೊಳ್ಳಬೇಕು. ಆತ್ಮೀಯರೊಂದಿಗೆ ನಿಮ್ಮ ಆಲೋಚನೆ, ಭಾವನೆ, ಕಷ್ಟಸುಖಗಳನ್ನು ಹಂಚಿಕೊಳ್ಳಿ. ನಿಮ್ಮ ನ್ಯೂನತೆಗಳನ್ನು, ಕೊರತೆಗಳನ್ನು ಗುರುತಿಸಿಕೊಂಡು ವಿಶ್ಲೇಷಿಸಿ, ಅವುಗಳ ನಿವಾರಣೆಯತ್ತ ಗಮನಹರಿಸಿ. ಆಸೆ, ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಬೇಕು. ತೃಪ್ತಿ, ಸಮಾಧಾನಗಳ ಜೀವನ ನಿಮ್ಮದಾಗಬೇಕು. ಮನರಂಜನೆ, ವಿಶ್ರಾಂತಿಗಳಿಗೆ ಗಮನಕೊಡಿ. ಅನಾರೋಗ್ಯವುಂಟಾದಾಗ ಉದಾಸೀನ ಮಾಡದೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು. ಕುಟುಂಬದಲ್ಲಿ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವಾಗ ಮನೆಯವರೊಂದಿಗೆ ಚರ್ಚಿಸಿ, ನಿರ್ಧರಿಸಿ. ಪತಿ /ಪತ್ನಿ ಒಬ್ಬರಿಗೊಬ್ಬರು ಪ್ರೀತಿ, ಗೌರವಗಳಿಂದ ಅನ್ಯೋನ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ಒಬ್ಬರಿಗಿನ್ನೊಬ್ಬರು ಆಸರೆಯಾಗಿರಬೇಕು.

ಮಧುಮೇಹ : 65 ಇಲ್ಲವೇ 70 ವರ್ಷ ತುಂಬಿದ ನಂತರ ಮಧುಮೇಹ ಸ್ವಲ್ಪ ಮಟ್ಟಿಗೆ ಕಾಣಿಸಿಕೊಂಡಲ್ಲಿ ಆಹಾರದಲ್ಲಿ ಪಥ್ಯ, ನಡಿಗೆ ಮತ್ತು ಕೆಲವು ಮನೆ ಔಷಧಿಗಳಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ತರಬಹುದು.

1) ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಬೇವಿನ ಎಳೆಯ ಎಲೆಯ ರಸವನ್ನು 4 ರಿಂದ 5 ಚಮಚೆ ಕುಡಿಯಬೇಕು. ಅಲ್ಲದೇ ಬೇವಿನ ತೊಗಟೆಯ ಕಷಾಯ ಕೂಡ ಒಳ್ಳೆಯದು. ಐದು ಗ್ರಾಂ ಬೇವಿನ ತೊಗಟೆಯನ್ನು ಕುಟ್ಟಿ ಪುಡಿ ಮಾಡಿ ಅರ್ಧ ಲೀಟ್ ನೀರಿನಲ್ಲಿ ಹಾಕಿ ಸಣ್ಣಗಿನ ಉರಿಯಲ್ಲಿ ಕಾಯಿಸಿ ನೀರು ಅರ್ಧದಷ್ಟಾದಾಗ ಅಂದರೆ ಕಾಲು ಲೀಟ್ ನೀರು ಉಳಿದಾಗ ಇಳಿಸಿ, ಆರಿಸಿ ಕುಡಿಯಬೇಕು.

2) ಅಮೃತಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು 2 ರಿಂದ 4 ಚಮಚೆ ರಸವನ್ನು ಬೆಳಿಗ್ಗೆ ಖಾಲಿಹೊಟ್ಟೆಗೆ ಕುಡಿಯಬೇಕು.

3) ಒಂದು ಚಮಚೆ ನೆಲ್ಲಿಕಾಯಿ ಪುಡಿಯನ್ನು ಕಾಲು ಚಮಚೆ ಅರಿಶಿನ ಪುಡಿಯೊಂದಿಗೆ ಬೆರೆಸಿ ಬಿಸಿನೀರಿನಲ್ಲಿ ಕದಡಿ ಬೆಳಿಗ್ಗೆ ಖಾಲಿಹೊಟ್ಟೆಗೆ ಕುಡಿಯಬೇಕು.

4) ನೇರಳೆ ಬೀಜದ ಪುಡಿಯನ್ನು ಒಂದು ಚಮಚೆಯಷ್ಟನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬೇಕು.

ಸ್ಟಿವಿಯಾ : ಸಿಹಿರುಚಿ ಬೇಕೆನ್ನುವವರು, ಸಕ್ಕರೆ, ಬೆಲ್ಲ ತಿನ್ನುವುದು ಬಿಡಲಿಕ್ಕಾಗದವರು ಕಾಫಿ, ಟೀ, ಪಾಯಸ ಮುಂತಾದವುಗಳಿಗೆ ಸ್ಟಿವಿಯಾ ಎಲೆಯ ಪುಡಿಯನ್ನು ಬಳಸಬಹುದು. ಸ್ಟಿವಿಯಾ ಎಲೆ ಸಿಹಿಯಾಗಿದ್ದು ಇದರಲ್ಲಿ ಯಾವುದೇ ಕ್ಯಾಲೊರಿ ಇರುವುದಿಲ್ಲ. ಇದನ್ನು ಸಕ್ಕರೆ ಕಾಯಿಲೆಯವರು ಮಾತ್ರವಲ್ಲ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಅಧಿಕ ಟ್ರೈಗ್ಲಿಸರೈಸ ಇರುವವರು ಕೂಡ ಬಳಸಬಹುದು. ಕನ್ನಡದಲ್ಲಿ ಮಧುವಂತೆ, ಸಿಹಿ ತುಳಸಿ ಎಂದು ಕರೆಯಲಾಗುವ ಸ್ಟಿವಿಯಾ ಗಿಡವನ್ನು ಮನೆಯಲ್ಲೇ ಬೆಳೆಸಬಹುದು. ಎಲೆಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಬೇಕೆಂದಾಗ ಉಪಯೋಗಿಸಬಹುದು. ಸ್ಟಿವಿಯಾದಿಂದ ಸಕ್ಕರೆಯಿಂದಾಗುವ

ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ. ಆಹಾರದಲ್ಲಿ ಸೊಪ್ಪುಗಳನ್ನು ಅದರಲ್ಲೂ ಮೆಂತ್ಯ, ಕರಿಬೇವು, ನುಗ್ಗೆ ಸೊಪ್ಪುಗಳನ್ನು ಬಳಸಿ. ಕಾಯಿಲೆ ಬಗ್ಗೆ ಚಿಂತೆ ಬೇಡ.

ಮಂಡಿನೋವು : ಮಂಡಿನೋವು ಪುರುಷ ಮತ್ತು ಮಹಿಳೆಯರೆಂಬ ೇದವಿಲ್ಲದೇ ಇಬ್ಬರಲ್ಲೂ ಕಾಣಿಸಿಕೊಳ್ಳುವಂತಹುದು. ಮೂಳೆಗಳು ಟೊಳ್ಳಾಗುವಿಕೆ ಯಿಂದ, ದೇಹದ ತೂಕ ಹೆಚ್ಚಾಗಿದ್ದಲ್ಲಿ ಕಾಣಿಸಿಕೊಳ್ಳುತ್ತದೆ. ಮಂಡಿಗಳಲ್ಲಿ ನೋವು, ಊತ, ಬಿಗಿತ ಹೆಚ್ಚಾಗಿರುತ್ತದೆ. ಬೆಳಗಿನ ಸಮಯ ನೋವು ಅಧಿಕ. ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬಾರದು.

1) ಒಣಶುಂಠಿ ಮತ್ತು ಧನಿಯಾ ಪ್ರತಿಯೊಂದು 5 ಗ್ರಾಂ ತೆಗೆದುಕೊಂಡು ಕುಟ್ಟಿ ಪುಡಿ ಮಾಡಬೇಕು. ನಾಲ್ಕು ಲೋಟ ನೀರಿನಲ್ಲಿ ಈ ಪುಡಿಯನ್ನು ಹಾಕಿ ಒಲೆಯ ಮೇಲೆ ಸಣ್ಣಗಿನ ಉರಿಯಲ್ಲಿ ಕುದಿಯಲು ಇಡಬೇಕು. ಚೆನ್ನಾಗಿ ಕುದಿದು ಕಷಾಯ ಅರ್ಧದಷ್ಟಾದಾಗ ಇಳಿಸಿ, ಶೋಧಿಸಿ ದಿನಕ್ಕೆರಡು ಬಾರಿ ಕುಡಿಯಬೇಕು. ಇದನ್ನು 10 ರಿಂದ 15 ದಿನ ನೋವು ಕಡಿಮೆಯಾಗುವವರೆಗೂ ಕುಡಿಯಬೇಕು.

2) ಸಾಸುವೆ ಎಣ್ಣೆ ಮತ್ತು ಎಳ್ಳೆಣ್ಣೆಯನ್ನು ಸಮಭಾಗ ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ ನೋವಿರುವ ಜಾಗಕ್ಕೆ ಮಸಾಜ್ ಮಾಡಬೇಕು. ಮಸಾಜ್ ನಂತರ ಹೊಂಗೆ ಎಲೆಯನ್ನು ಹಾಕಿ ಕುದಿಸಿದ ನೀರಿನಿಂದ ಇಲ್ಲವೇ ಆಲೂಗೆಡ್ಡೆ ಬೇಯಿಸಿದ ನೀರಿನಿಂದಲೂ ಶಾಖ ತೆಗೆದುಕೊಳ್ಳಬಹುದು.

3) ಬೆಳಿಗ್ಗೆ ಹಾಸಿಗೆಯಿಂದೇಳುವ ಸಮಯದಲ್ಲಿ ಮಲಗಿದ್ದಲ್ಲಿಯೇ ಕಾಲನ್ನು 450 ಕೋನದಲ್ಲಿ ಮೇಲೆತ್ತಿ ಇಳಿಸುವಂತಹ ಸರಳ ವ್ಯಾಯಾಮ ಮಾಡಬೇಕು. ಈ ರೀತಿ ಒಂದೊಂದು ಕಾಲಿನಲ್ಲೂ ಕನಿಷ್ಟ 10 ಬಾರಿ ಮಾಡುವುದು ಒಳ್ಳೆಯದು.

4) ಆಹಾರದಲ್ಲಿ ಹೆಸರುಬೇಳೆ, ಹುರುಳಿ ಬಳಸಿದಲ್ಲಿ ಉತ್ತಮ.ಹೆಸರುಬೇಳೆ ಬೇಯಿಸಿ ಕಟ್ಟು ತೆಗೆದು ಅದಕ್ಕೆ ಸ್ವಲ್ಪ ಜೀರಿಗೆ ಪುಡಿ, ಉಪ್ಪು ಬೆರೆಸಿ ಕುಡಿಯಬೇಕು. ಹಾಗಲಕಾಯಿ, ನುಗ್ಗೆಕಾಯಿ, ನುಗ್ಗೆಸೊಪ್ಪು, ಮೆಂತ್ಯಸೊಪ್ಪು, ಶುಂಠಿ, ಬೆಳ್ಳುಳ್ಳಿ ಬಳಸಿದಲ್ಲಿ ಒಳ್ಳೆಯದು.

ಅಮಶಂಕೆ : ಹೊಟ್ಟೆ ಹಿಡಿದಂತಾಗಿ ನೋವು ಬಂದು ಮಲವಿಸರ್ಜನೆ ಆಗುತ್ತಿದ್ದಲ್ಲಿ ಮತ್ತು ಮಲದೊಂದಿಗೆ ಗೊಣ್ಣೆಯಂತಹ ಪದಾರ್ಥ ಹೋಗುತ್ತಿದ್ದಲ್ಲಿ ಆಮಶಂಕೆಯಿಂದಾಗಿ ಹಾಗಾಗುತ್ತಿರುತ್ತದೆ. ಊಟವಾದೊಡನೆ ಮಲವಿಸರ್ಜನೆಗೆ ಹೋಗಬೇಕೆನಿಸುತ್ತದೆ. ಬಾಯಿಯಲ್ಲಿ ನೀರು ಬರುವುದು, ಹೊಟ್ಟೆಯುಬ್ಬರ ಕೂಡ ಇರುತ್ತದೆ.

ಆಮಶಂಕೆಯುಂಟಾಗಲು ಮುಖ್ಯ ಕಾರಣ ಕಲುಷಿತ ನೀರು. ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ಆಹಾರದಲ್ಲಿ ಹೆಚ್ಚು ಕರಿದ ಪದಾರ್ಥಗಳು, ಮಸಾಲೆ ಪದಾರ್ಥ, ಕಾಳುಗಳ ಸೇವನೆ ಬೇಡ. ಕಾಫಿ, ಟೀ ಸೇವನೆ ಮಿತಿಯಲ್ಲಿರಲಿ. ಎಳನೀರು, ಮೂಸಂಬಿ, ಕಿತ್ತಲೆ ಹಣ್ಣಿನ ರಸವನ್ನು ಬೆಲ್ಲ ಇಲ್ಲವೇ ಜೇನುತುಪ್ಪ ಬೆರೆಸಿ ಕುಡಿಯಬೇಕು. ನೇರಳೆ ಹಣ್ಣಿನ ಶರಬತ್ತು ಕೂಡ ಒಳ್ಳೆಯದು. ಸಬ್ಬಕ್ಕಿ (ಸೀಮೆ ಅಕ್ಕಿ) ಪಾಯಸ ಕೂಡ ಉತ್ತಮವಾದುದು. ಹೆಸರುಬೇಳೆ ಹುರಿದು ನಂತರ ಬೇಯಿಸಿ ಕಟ್ಟು ತೆಗೆದು (ಮೇಲಿನ ತಿಳಿ) ಅದಕ್ಕೆ ಮಜ್ಜಿಗೆ ಬೆರೆಸಿ ದಿನಕ್ಕೆರಡು ಬಾರಿ ಕುಡಿಯಬೇಕು. ನಾಲ್ಕು ಚಮಚೆ ದಾಳಿಂಬೆ ರಸವನ್ನು ಆಗಾಗ ಅಂದರೆ ನಾಲ್ಕೈದು ಗಂಟೆಗಳಿಗೊಮ್ಮೆ ಕುಡಿಯಬೇಕು.

ಅಧಿಕ ರಕ್ತದೊತ್ತಡ : ಆಗಾಗ ಕುಟುಂಬ ವೈದ್ಯರನ್ನು ೇಟಿಯಾಗಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬೇಕು. ಹೆಚ್ಚಾಗಿದ್ದಲ್ಲಿ ನಿಯಂತ್ರಿಸಲು ಔಷಧಿ ಸೇವನೆ, ಪಥ್ಯ, ವ್ಯಾಯಾಮ ಪಾಲಿಸ ಬೇಕು. ಉಪ್ಪಿನ ಸೇವನೆ ಮಿತಿಗೊಳಿಸಿ ಕೊಳ್ಳಬೇಕು. ಸಂತೋಷದಿಂದ ಇರಬೇಕು. ಮಾನಸಿಕ ಒತ್ತಡ ಹೆಚ್ಚಾಗಿದ್ದಲ್ಲಿ ತಗ್ಗಿಸಿಕೊಳ್ಳಲು ವಿಧಾನಗಳನ್ನು ಅಂದರೆ ಯೋಗ, ಧ್ಯಾನವನ್ನು ಅಳವಡಿಸಿಕೊಳ್ಳಬೇಕು. ಒಂದೆಲಗದ ಪುಡಿ ಇಲ್ಲವೇ ಸರ್ಪಗಂಧ ಬೇರಿನ ಪುಡಿಯನ್ನು ಒಂದು ಚಮಚೆಯಷ್ಟನ್ನು ಬೆಚ್ಚಗಿನ ನೀರಿನಲ್ಲಿ ದಿನಕ್ಕೆರಡು ಬಾರಿ ಸೇವಿಸಬೇಕು.

ಅಲರ್ಜಿ ತೊಂದರೆ : ಮೈಮೇಲೆ ಕೆಂಪಗೆ ಗಂಧೆಗಳು ಅಥವಾ ಗಾದರಿ (Rashes) ಏಳುತ್ತಿರುತ್ತವೆ. ತುರಿಕೆ ಹೆಚ್ಚಾಗಿರುತ್ತದೆ. ಮಳೆಗಾಲ, ಚಳಿಗಾಲದಲ್ಲಿ ಕೆರೆತ ಹೆಚ್ಚು. ನಮ್ಮ ದೇಹಕ್ಕೆ ಒಗ್ಗದಿರುವುದು ಅಲರ್ಜಿ ಎನಿಸಿಕೊಳ್ಳುತ್ತದೆ. ಯಾವ ಪದಾರ್ಥ ತಿಂದಾಗ ಅಲರ್ಜಿಯಾಗುವುದೋ ಅಂತಹುದನ್ನು ತಿನ್ನಬಾರದು. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಲ್ಲಿ ಅಲರ್ಜಿಯ ತೊಂದರೆ ಹೆಚ್ಚಾಗಿ ಕಾಡಲಾರದು.

1) ದೊಡ್ಡಪತ್ರೆಯ ರಸ ತೆಗೆದು, ಎರಡು ಚಮಚೆ ರಸಕ್ಕೆ ಒಂದು ಚಿಟಿಕೆ ಜೇನು ಬೆರೆಸಿ ದಿನಕ್ಕೆರಡು ಇಲ್ಲವೇ ಮೂರು ಬಾರಿ ಸೇವಿಸಬೇಕು. ಅಲ್ಲದೇ ದೊಡ್ಡಪತ್ರೆಯ ಎಲೆಯನ್ನು ಜಜ್ಜಿ ಗಂಧೆಗಳು ಎದ್ದಿರುವ ಜಾಗಕ್ಕೆ ಲೇಪಿಸಬೇಕು. ಇದರಿಂದ ನವೆ ಕಡಿಮೆಯಾಗುತ್ತದೆ. ದೊಡ್ಡಪತ್ರೆಯ ಎಲೆಯಿಂದ ತಯಾರಿಸಿದ ಚಟ್ನಿ, ತಂಬುಳಿ, ಸಲಾಡ್ ಮುಂತಾದವನ್ನು ಆಹಾರದೊಂದಿಗೆ ತಿನ್ನಬೇಕು.

2) ಒಂದು ಲೋಟ ಬಿಸಿಹಾಲು ಇಲ್ಲವೇ ಬಿಸಿ ನೀರಿಗೆ ಒಂದು ಚಮಚೆ ಶುದ್ಧ ಅರಿಶಿನ ಪುಡಿಯನ್ನು ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ಕುಡಿಯಬೇಕು. ಅಂಗಡಿಯಿಂದ ಖರೀದಿಸಿದ ಅರಿಶಿನ ಪುಡಿ ಬೇಡ. ಮನೆಯಲ್ಲಿ ಅರಿಶಿನ ಕೊಂಬು ಕುಟ್ಟಿ ಪುಡಿ ಮಾಡಿಟ್ಟು ಕೊಳ್ಳಬೇಕು.

3) ದೇಹದ ರೋಗನಿರೋಧಕ ಶಕ್ತಿ ಹೆಚ್ಚಲು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಗೆ ಒಂದು ಚಮಚೆ ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸ ಬೇಕು.

ಆಹಾರದಲ್ಲಿ ಹೆಚ್ಚು ಕರಿದ ಪದಾರ್ಥ, ಖಾರ, ಹುಳಿ ಸೇವನೆ ಬೇಡ. ಗಂಧೆ ಬಂದಿರುವ ಸಮಯದಲ್ಲಿ ಹಾಲು, ಮೊಸರು, ಮಜ್ಜಿಗೆ ಹೆಚ್ಚು ಬಳಸಬೇಕು. ಸ್ನಾನಕ್ಕೆ ಹೆಚ್ಚು ಬಿಸಿನೀರಿನ ಬಳಕೆ ಬೇಡ. ಸ್ವಲ್ಪ ಬೆಚ್ಚಗಿನ ನೀರು ಒಳ್ಳೆಯದು. ಸ್ನಾನಕ್ಕೆ ಕಡಲೆಹಿಟ್ಟು ಬಳಸಬೇಕು. ಧರಿಸುವ ಉಡುಪು ಹತ್ತಿಯದ್ದಾಗಿರಲಿ.

ಹಿಮ್ಮಡಿ ಒಡೆಯುವುದು : ಮಹಿಳೆಯರಲ್ಲಿ  ಪಾದಗಳಲ್ಲಿ ಅದರಲ್ಲೂ ಹಿಮ್ಮಡಿ ಒಡೆಯುವುದು ಅತ್ಯಂತ ಸಾಮಾನ್ಯ. ಹಿಮ್ಮಡಿಗೆ ಹಚ್ಚಿಕೊಳ್ಳಲು ಮನೆಯಲ್ಲಿಯೇ ಮುಲಾಮನ್ನು ತಯಾರಿಸಿಕೊಳ್ಳಬೇಕು.

30 ಗ್ರಾಂ ಜೇನುಮೇಣ (Wax) ಒಂದು ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಡಬೇಕು. ಅದು ಕರಗಿದ ನಂತರ 20 ಮಿಲಿ ಬೇವಿನೆಲೆಯ ರಸ ಅಥವಾ ಬೇವಿನೆಣ್ಣೆ ಮತ್ತು 20 ಮಿಲಿ ಕೊಬ್ಬರಿಎಣ್ಣೆ ಬೆರೆಸಿ ಕೆಳಗಿಳಿಸಿ, ಒಂದು ಅಗಲವಾದ ತಟ್ಟೆಯಲ್ಲಿ ಹಾಕಿ ಆರಿದ ನಂತರ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಪ್ರತಿದಿನ ರಾತ್ರಿ ಕಾಲನ್ನು ಸ್ವಚ್ಛಗೊಳಿಸಿಕೊಂಡು ಒಂದು ಟ್ನಲ್ಲಿ ಬೆಚ್ಚಗಿನ ನೀರಿನಲ್ಲಿ 5 ರಿಂದ 10 ನಿಮಿಷಗಳ ಕಾಲ ಕಾಲಿಟ್ಟುಕೊಂಡಿದ್ದು ನಂತರ ಮೃದುವಾದ ಹತ್ತಿಬಟ್ಟೆಯಿಂದ ಒರೆಸಿ, ಮುಲಾಮನ್ನು ಲೇಪಿಸಿಕೊಳ್ಳಬೇಕು. ಓಡಾಡುವಾಗ ಸಾಕಹಾಕಿ ಚಪ್ಪಲಿಧರಿಸಿ ಇಲ್ಲವೇ ಹಿಮ್ಮಡಿ ಮುಚ್ಚುವಂತಹ ಶೂ ಧರಿಸಿ. ದಿನಕ್ಕೆ ಮೂರು ಲೀಟರ್ ನೀರು ಕುಡಿಯಿರಿ. ಆಹಾರದಲ್ಲಿ ಪ್ರತಿದಿನ ಸೊಪ್ಪು, ತರಕಾರಿ, ಹಣ್ಣುಗಳ ಸೇವನೆ ಹೆಚ್ಚಾಗಿರಲಿ. ಜೀವಸತ್ವ `ಸಿ’ ಹೆಚ್ಚಾಗಿರುವಂತಹ ಮೂಸಂಬಿ, ಕಿತ್ತಲೆ, ಟೊಮ್ಯಾಟೋ, ನಿಂಬೆಹಣ್ಣು, ಬೆಟ್ಟದ ನೆಲ್ಲಿಕಾಯಿಗಳ ಸೇವನೆ ಹೆಚ್ಚಾಗಿರಲಿ.

ನಿದ್ರಾಹೀನತೆ : ವೃದ್ಧಾಪ್ಯದಲ್ಲಿ ಅನೇಕರಿಗೆ ನಿದ್ರಾಹೀನತೆ ತೊಂದರೆ ಕಾಡುತ್ತಿರುತ್ತದೆ. ನಿದ್ರೆ ಸರಿಯಾಗಿ ಬರುವುದಿಲ್ಲ. ಒಮ್ಮೆ ಮಲಗಿದರೂ ಎರಡು-ಮೂರು ಗಂಟೆಗೆಲ್ಲ ಎಚ್ಚರವಾಗಿಬಿಡುವುದು. ಮಾನಸಿಕ ನೆಮ್ಮದಿಯಿಲ್ಲದೇ ಖಿನ್ನತೆ, ಆತಂಕಗಳಿದ್ದಲ್ಲಿಯೂ ನಿದ್ರೆ ಬರುವುದಿಲ್ಲ.

ಸಾಮಾನ್ಯವಾಗಿ ವಯಸ್ಸಾದ ನಂತರ ಸ್ವಲ್ಪ ಮಟ್ಟಿಗೆ ನಿದ್ರೆ ಕಡಿಮೆಯಾಗುತ್ತದೆ. 5 ಗಂಟೆಗಳ ನಿದ್ರೆ ಬಂದರೂ ಸಾಕು. ಅದನ್ನು ಒಳ್ಳೆಯ ನಿದ್ರೆ ಎಂದೇ ಹೇಳಬಹುದು. ರಾತ್ರಿ ಹೊತ್ತು ಬೇಗನೇ ಅಂದರೆ 7 ಗಂಟೆಗೇ ಊಟ ಮಾಡುವುದನ್ನು ರೂಢಿಸಿಕೊಳ್ಳಬೇಕು. ಬಿಸಿಯಾದ, ಜೀರ್ಣಿಸಲು ಸುಲಭವಾದ, ಮೃದುವಾದ ಆಹಾರವನ್ನು ಸೇವಿಸಬೇಕು. ಸಂಜೆ ಹೊತ್ತು ಎರಡು ಚಮಚೆ ಗಸಗಸೆಯನ್ನು ಅರ್ಧ ಲೋಟ ಕುಡಿಯುವ ನೀರಿನಲ್ಲಿ ನೆನೆಯಿಸಿಟ್ಟು ರಾತ್ರಿ ಎಂಟು ಗಂಟೆಗೆ ನೆಂದಿರುವ ಗಸಗಸೆಯನ್ನು ಚೆನ್ನಾಗಿ

ಅಗಿದು ತಿನ್ನಬೇಕು. 15 ದಿನ ಇಲ್ಲವೇ ಒಂದು ತಿಂಗಳ ಕಾಲ ಹೀಗೆ ಮಾಡಿದಲ್ಲಿ ನಿದ್ರೆ ಚೆನ್ನಾಗಿ ಬರುತ್ತದೆ. ರಾತ್ರಿ ಮಲಗುವ ಸಮಯದಲ್ಲಿ ತಲೆಗೆ ಬ್ರಾಹ್ಮೀ ತೈಲವನ್ನು ಹಚ್ಚಿಕೊಳ್ಳಬೇಕು. ಮಲಗುವ ಮುಂಚೆ ತಲೆದಿಂಬಿಗೆ ಗುಲಾಬಿ ತೈಲವನ್ನು (ಸುಗಂಧ ತೈಲ) ಸಿಂಪಡಿಸಿಕೊಳ್ಳಬೇಕು

ಮಲಗುವ ಮುಂಚೆ ಕೊಳಲಿನ ಸಂಗೀತವನ್ನು ಆಲಿಸಬೇಕು. ಉತ್ತಮ ಸಾಹಿತ್ಯ ಕೃತಿಗಳನ್ನು ಓದಬೇಕು. ಮನಸ್ಸು ಸಮಾಧಾನವಾಗಿದ್ದಲ್ಲಿ ನಿದ್ರೆ ತಂತಾನೇ ಬರುತ್ತದೆ. ನಿದ್ರೆಗೆ ಮಾತ್ರೆಯನ್ನು ಅವಲಂಬಿಸುವುದು ಸಲ್ಲದು.

ತಲೆನೋವು : ಕೆಲವರಲ್ಲಿ ತಲೆನೋವು ತಡೆಯಲಾಗದಷ್ಟು ಇರುತ್ತದೆ. ತಲೆ ಬಗ್ಗಿಸಿದಾಗ ತಲೆಸುತ್ತು ಬಂದಂತಾಗುತ್ತದೆ. ತಲೆಭಾರವೂ ಇರುತ್ತದೆ. ಅಂತಹ ಸಮಯದಲ್ಲಿ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ತಲೆನೋವಿಗೆ ಕಾರಣಗಳು ಅನೇಕ. ನಿದ್ರೆ ಇಲ್ಲದಿರುವುದು, ಮಾನಸಿಕ ಒತ್ತಡ, ಎದೆಯುರಿ, ಅಧಿಕ ರಕ್ತದೊತ್ತಡ, ಆತಂಕ, ಖಿನ್ನತೆ ಅನೇಕ ಕಾರಣಗಳಿಂದ ತಲೆನೋವು ಉಂಟಾಗುತ್ತದೆ. ತಲೆನೋವು ಬಿಡದೇ ಕಾಡುತ್ತಿದ್ದಲ್ಲಿ ಒಮ್ಮೆ ನಿಮ್ಮ ಕುಟುಂಬ ವೈದ್ಯರನ್ನು ಕಂಡು ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ. ಅಧಿಕ ರಕ್ತದೊತ್ತಡವಿದ್ದಲ್ಲಿ ತಡಮಾಡದೇ ಚಿಕಿತ್ಸೆ ಆರಂಭಿಸಿ. ಮಾನಸಿಕ ಒತ್ತಡವಿದ್ದಲ್ಲಿ ಯೋಗ, ಧ್ಯಾನದ ಮೂಲಕ ಸರಿಪಡಿಸಿಕೊಳ್ಳಿ. ಒಂದೇ ಸಮನೆ ಕೆಲಸ ಮಾಡದೇ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಶ್ರೀಗಂಧವನ್ನು ಇಲ್ಲವೇ ಶುಂಠಿಯನ್ನು ನೀರಿನಲ್ಲಿ  ಅರೆದು ಹಣೆಯ ಭಾಗಕ್ಕೆ ಲೇಪಿಸಿಕೊಳ್ಳಬೇಕು. ಚಿಂತೆ ಮಾಡಬೇಡಿ. ಯಾವುದಾದರೊಂದು ವಿಷಯದ ಕುರಿತು ತುಂಬ ಆಲೋಚನೆಯಿದ್ದಲ್ಲಿ ಆತ್ಮೀಯರೊಂದಿಗೆ ಮಾತನಾಡಿ. ಬೆಳಿಗ್ಗೆ ಪ್ರತಿದಿನ ಖಾಲಿಹೊಟ್ಟೆಗೆ ಒಂದು ಚಮಚ ಅಶ್ವಗಂಧ ಪುಡಿಯನ್ನು ಜೇನುತುಪ್ಪ ಇಲ್ಲವೇ ಹಾಲಿನೊಂದಿಗೆ ಸೇವಿಸಿ.

ಗುಳ್ಳೆಗಳು : ಕೆಲವರಿಗೆ ಮೈಮೇಲೆ ಅಲ್ಲಲ್ಲಿ ಅದರಲ್ಲೂ ಕಂಕುಳಿನಲ್ಲಿ ಗುಳ್ಳೆಗಳು ಏಳುತ್ತಿರುತ್ತವೆ. ಗುಳ್ಳೆಗಳಲ್ಲಿ ಕೀವು ತುಂಬಿ ನೋವು ಕಾಣಿಸಿಕೊಳ್ಳುತ್ತದೆ. ಪದೇ ಪದೇ ಗುಳ್ಳೆಗಳೇಳುತ್ತಿದ್ದಲ್ಲಿ ಒಮ್ಮೆ ರಕ್ತ ಪರೀಕ್ಷೆ ಮಾಡಿಸಿಕೊಂಡು ಸಕ್ಕರೆ ಕಾಯಿಲೆ ಏನಾದರೂ ಇದೆಯಾ ಎಂಬುದನ್ನು ತಿಳಿದುಕೊಂಡು ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದರೊಂದಿಗೆ ಪಥ್ಯ ಹಾಗೂ ವ್ಯಾಯಾಮ ಅನುಸರಿಸಬೇಕಾಗುತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬಂದಲ್ಲಿ ಗುಳ್ಳೆಗಳೇಳುವುದು ತಂತಾನೇ ಕಡಿಮೆಯಾಗುತ್ತದೆ. ಸಕ್ಕರೆ ಕಾಯಿಲೆ ಇಲ್ಲದಿದ್ದ ಪಕ್ಷದಲ್ಲಿ ರಕ್ತಶುದ್ಧಿಗೆ ಸೊಗದೆ ಬೇರಿನ ಕಷಾಯ ತಯಾರಿಸಿ ಕುಡಿಯಬೇಕು. 10 ಗ್ರಾಂ ಸೊಗದೆ ಬೇರನ್ನು ಒಂದು ಲೀಟ್ ನೀರಿಗೆ ಹಾಕಿ ಕಾಯಿಸಬೇಕು. ನೀರು ಕುದಿದು ಅರ್ಧದಷ್ಟಾದಾಗ ಇಳಿಸಿ, ಶೋಧಿಸಿ, ಆರಿಸಿ ಕುಡಿಯಬೇಕು. ದೇಹದ ಸ್ವಚ್ಛತೆಯ ಕಡೆಗೂ ಗಮನಹರಿಸಬೇಕು. ಸ್ನಾನದ ನಂತರ ಗುಳ್ಳೆಗಳಿಗೆ ಶ್ರೀಗಂಧವನ್ನು ತೇಯ್ದು ಲೇಪಿಸಬೇಕು. ದಿನಕ್ಕೆರಡು ಬಾರಿ ಸ್ನಾನ ಮಾಡಿ. ಬೇವಿನ ಎಲೆ ಹಾಕಿ ಕಾಯಿಸಿದ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು.

ಬಿಳಿ ಮಚ್ಚೆ (ತೊನ್ನು) : ಅಲ್ಲಲ್ಲಿ ಬಿಳಿಮಚ್ಚೆಗಳು ಕೆಲವರಲ್ಲಿ ವಯಸ್ಸಾದ ನಂತರ ಕಾಣಿಸಿಕೊಳ್ಳುತ್ತವೆ. ತೊನ್ನು ಒಂದು ಕಾಯಿಲೆಯೇ ಅಲ್ಲ. ಚರ್ಮಕ್ಕೆ ಬಣ್ಣ ಕೊಡುವ ಮೆಲನಿಲ್ ಅಂಶ ಕಡಿಮೆ ಆದಲ್ಲಿ ತೊನ್ನು ಕಾಣಿಸಿಕೊಳ್ಳುತ್ತಿದೆ. ಓಝೋನ್ ಪದರದಲ್ಲಿ ರಂಧ್ರಗಳು ಹೆಚ್ಚಾಗುತ್ತಿರುವುದರಿಂದಲೂ `ತೊನ್ನು’ ಹೆಚ್ಚುತ್ತಿದೆ. ಬಿಳಿಯಾಗಿರುವ ಭಾಗಕ್ಕೆ ಬಾವಂಚಿ ತೈಲವನ್ನು ಲೇಪಿಸಿಕೊಳ್ಳಿ. ಲೇಪಿಸಿದ ನಂತರ ಬೆಳಗಿನ ಸೂರ್ಯನ ಕಿರಣಗಳಿಗೆ, ಎಳೆ ಬಿಸಿಲಿಗೆ, ಸ್ವಲ್ಪ ಹೊತ್ತು ದೇಹವನ್ನು ಒಡ್ಡಿಕೊಳ್ಳಿ. ಆಹಾರದಲ್ಲಿ ಹುಳಿ ಪದಾರ್ಥಗಳಾದ ಹುಣಸೆಹಣ್ಣು, ಟೊಮೆಟೊ, ನಿಂಬೆಹಣ್ಣು ಮುಂತಾದವುಗಳನ್ನು ಹೆಚ್ಚು ಸೇವಿಸಬೇಡಿ. ಹೆಚ್ಚು ಬಿಸಿಲಿನಲ್ಲಿ ಅಂದರೆ 11 ರಿಂದ 4 ಗಂಟೆಯವರೆಗಿನ ಸಮಯದಲ್ಲಿ ಹೆಚ್ಚು ತಿರುಗಾಡಬೇಡಿ. ಬಿಸಿಲಿಗೆ ಹೋಗಲೇಬೇಕಾದಲ್ಲಿ ಕೊಡೆ ಉಪಯೋಗಿಸಿ. ಹತ್ತಿ ಬಟ್ಟೆ ಧರಿಸಿ. ಸ್ನಾನಕ್ಕೆ ಹೆಚ್ಚು ಬಿಸಿನೀರಿನ ಬಳಕೆ ಬೇಡ. ಆಹಾರದಲ್ಲಿ ಸೊಪ್ಪು, ತರಕಾರಿ, ಹಣ್ಣುಗಳ ಸೇವನೆ ಹೆಚ್ಚಾಗಿರಲಿ. ನೀರನ್ನು ಕುದಿಸಿ, ಆರಿಸಿ ಕುಡಿಯಿರಿ. ತೊನ್ನಿನ ಬಗ್ಗೆ ಹೆಚ್ಚು ಕೊರಗಬೇಡಿ. ಮಾನಸಿಕವಾಗಿ ನೆಮ್ಮದಿಯಿಲ್ಲದಿದ್ದಲ್ಲಿ ಯಾವುದೇ ಕಾಯಿಲೆಯಾದರೂ ಕಡಿಮೆಯಾಗಲಾರದು. ಬದುಕಿನ ಬಗ್ಗೆ ಸಕಾರಾತ್ಮಕ ಮನೋಭಾವವಿರಲಿ.

ಉಬ್ಬಸ : ಉಸಿರು ತೆಗೆದುಕೊಳ್ಳಲು ಉಬ್ಬಸ ರೋಗಿಗಳಲ್ಲಿ ತುಂಬ ಕಷ್ಟವಾಗುತ್ತಿರುತ್ತದೆ. ಸುಂಯ್, ಸುಂಯ್ ಶಬ್ದ ಬರುತ್ತಿರುತ್ತದೆ. ಮಳೆಗಾಲ, ಚಳಿಗಾಲದಲ್ಲಿ  ಉಬ್ಬಸದ ತೊಂದರೆ ಇನ್ನು ಹೆಚ್ಚು. ಕೆಲವರು ಉಬ್ಬಸದಿಂದ ಬಳಲುವವರು ಸಾಮಾನ್ಯವಾಗಿ ರಾತ್ರಿ ಮಲಗುವುದೇ ಇಲ್ಲ. ಕುಳಿತುಕೊಂಡೇ ಉಸಿರಿಗಾಗಿ ತಹತಹಿಸುತ್ತಿರುತ್ತಾರೆ. ಕುಡಿಯುವ ನೀರಿಗೆ ಒಂದು ಚಿಕ್ಕ ತುಂಡು ಶುಂಠಿ ಹಾಕಿ ನೀರನ್ನು ಕುದಿಸಿಟ್ಟುಕೊಂಡು, ಆ ನೀರನ್ನು ಆಗಾಗ ಕುಡಿಯುತ್ತಿರಬೇಕು. ಆಹಾರದಲ್ಲಿ ಹೆಚ್ಚು ಹುಳಿ, ಖಾರ, ಕರಿದ ಪದಾರ್ಥ, ತಂಪು ಪದಾರ್ಥ ಅಂದರೆ ಫ್ರಿಜ್‌ನಲ್ಲಿರಿಸಿದ್ದನ್ನು ಸೇವಿಸುವುದು ಬೇಡ. ರಾತ್ರಿ ಹೊತ್ತು ತಡವಾಗಿ ಊಟ ಮಾಡುವುದು ಬೇಡ. ಏಳು ಗಂಟೆ, ಏಳೂವರೆಗೆಲ್ಲ ಊಟ ಮಾಡಬೇಕು. ರಾತ್ರಿ ಹೊತ್ತು ಹಾಲು, ಮೊಸರು, ಮಜ್ಜಿಗೆ ಸೇವನೆ ಬೇಡ. ಬಿಸಿಯಾದ, ಚೆನ್ನಾಗಿ ಬೇಯಿಸಿದ ಆಹಾರ ಸೇವಿಸಿ. ಉಪ್ಪಿನ ಸೇವನೆ ಮಿತವಾಗಿರಲಿ.

ಮೆಣಸು, ಶುಂಠಿ, ಧನಿಯಾ, ಜೀರಿಗೆ, ಅತಿಮಧುರ (ಜೇಷ್ಠಮಧು), ಈ ಎಲ್ಲವನ್ನೂ ಸಮಭಾಗ ತೆಗೆದುಕೊಂಡು ಪುಡಿ ಮಾಡಿಟ್ಟುಕೊಳ್ಳಬೇಕು. ಒಂದು

ಲೋಟ ನೀರಿಗೆ ಅರ್ಧ ಚಮಚೆ ಈ ಪುಡಿ ಹಾಕಿ ಕುದಿಸಿ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಕುಡಿಯಬೇಕು. ಬೇಕೆನಿಸಿದಲ್ಲಿ ಹಾಲು, ಬೆಲ್ಲ ಬೆರೆಸಿ ಕುಡಿಯ ಬಹುದು. ಸಕ್ಕರೆ ಕಾಯಿಲೆಯಿರುವವರು ಬೆಲ್ಲ ಬೆರೆಸಿಕೊಳ್ಳುವುದು ಬೇಡ. ಬೆಳಿಗ್ಗೆ ಮತ್ತು ಸಂಜೆ ಹೊರಗೆ ತಿರುಗಾಡುವಾಗ ಮಳೆಗಾಲ, ಚಳಿಗಾಲಗಳಲ್ಲಿ ಬೆಚ್ಚನೆಯ ಉಡುಪು ಧರಿಸಿ. ಕಿವಿಗೆ ಹತ್ತಿ ಇರಿಸಿಕೊಳ್ಳಬೇಕು. ಮಲಗುವಾಗ ದಿಂಬು ಎತ್ತರದಲ್ಲಿರಲಿ. ಎಡಗಡೆ ಇಲ್ಲವೇ ಬಲಗಡೆಗೆ ತಿರುಗಿಕೊಂಡು ಮಲಗುವುದು ಒಳ್ಳೆಯದು. ರಾತ್ರಿಹೊತ್ತು ಫ್ಲಾಸ್ಕನಲ್ಲಿ ಬಿಸಿನೀರಿನಲ್ಲಿ ತುಳಸಿ ಎಲೆ ಹಾಕಿಟ್ಟುಕೊಂಡಿದ್ದು ಮಧ್ಯರಾತ್ರಿ ಕೆಮ್ಮು ಬಂದು ಎಚ್ಚರವಾದಲ್ಲಿ ಈ ನೀರನ್ನು ಕುಡಿಯಬೇಕು.

ಕೆಮ್ಮು : ವಯಸ್ಕರಲ್ಲಿ ಕೆಮ್ಮು ಬಹಳಷ್ಟು ಕಾಡುತ್ತಿರುತ್ತದೆ. ಮಳೆಗಾಲದಲ್ಲಿ ಕೆಮ್ಮು ಹೆಚ್ಚು ಬಾಧಿಸುತ್ತದೆ. ಮಳೆಗಾಲ, ಚಳಿಗಾಲದಲ್ಲಿ ಬಿಸಿನೀರನ್ನು ಕುಡಿಯಬೇಕು. ಬಿಸಿಯಾದ ಆಹಾರ ಸೇವಿಸಬೇಕು. ಶುಂಠಿ, ಮೆಣಸು, ಹಿಪ್ಪಲಿ ಈ ಮೂರನ್ನು ಸಮಭಾಗ ಪುಡಿಮಾಡಿಟ್ಟುಕೊಂಡು ಒಂದು ಲೋಟ ನೀರಿಗೆ ಒಂಚು ಚಮಚೆ ಪುಡಿ ಹಾಕಿ ಸಣ್ಣಗಿನ ಉರಿಯ ಮೇಲೆ ಕಾಯಿಸಬೇಕು. ಅದು ಕುದಿದು ಅರ್ಧದಷ್ಟಾದಾಗ ಇಳಿಸಿ ಹಾಲು, ಬೆಲ್ಲ ಸೇರಿಸಿ ಕುಡಿಯಬೇಕು. ಸಕ್ಕರೆ ಕಾಯಿಲೆಯಿದ್ದಲ್ಲಿ ಹಾಲು, ಬೆಲ್ಲ ಬೆರೆಸುವುದು ಬೇಡ. ಆಹಾರದಲ್ಲಿ ಕರಿದ ಪದಾರ್ಥ, ಖಾರ, ಹುಳಿ ಪದಾರ್ಥಗಳ ಸೇವನೆ ಬೇಡ. ಎರಡು ಚಮಚೆ ಆಡುಸೋಗೆ ಎಲೆಯ ರಸವನ್ನು, ಎರಡು ಚಮಚೆ ತುಳಸಿ ರಸದೊಂದಿಗೆ ಜೇನುತುಪ್ಪ ಬೆರೆಸಿ ದಿನಕ್ಕೆರಡು ಬಾರಿ ಬೆಳಿಗ್ಗೆ ಮತ್ತು ರಾತ್ರಿ ಸೇವಿಸಬೇಕು.

ಒಣಕೆಮ್ಮು : ಕಫ ಬಾರದೇ ಒಣಕೆಮ್ಮು ಬರುತ್ತಿದ್ದಲ್ಲಿ ಒಣ ದ್ರಾಕ್ಷಿಯನ್ನು ಆಗಾಗ ತಿನ್ನುತ್ತಿರಬೇಕು. ಅರ್ಧ ಚಮಚೆ ಶುಂಠಿ ಪುಡಿಯನ್ನು ತುಪ್ಪ ಬೆರೆಸಿ ಸೇವಿಸಬೇಕು.

ನೆಗಡಿ : ಬೆಳಿಗ್ಗೆ ಖಾಲಿ ಹೊಟ್ಟೆಗೆ 10 ತುಳಸಿ ಎಲೆಗಳನ್ನು ಅಗಿದು ತಿಂದು ಬಿಸಿನೀರು ಕುಡಿಯಬೇಕು. ಒಂದು ಚಮಚೆ ಅರಿಶಿನ ಪುಡಿಯನ್ನು ಬಿಸಿ ಹಾಲು ಇಲ್ಲವೇ ಬಿಸಿ ನೀರಿಗೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು.

ವಾಯುಬಾಧೆ : ಕೆಲವರಿಗೆ ಹೊಟ್ಟೆ ಉಬ್ಬರಿಸುವುದು ಮತ್ತು ವಾಯು ಹೋಗುತ್ತಲೇ ಇರುತ್ತದೆ. ಇನ್ನೂ ಕೆಲವರಲ್ಲಿ ವಾಯು ಕೆಟ್ಟವಾಸನೆಯಿಂದ ಕೂಡಿರುತ್ತದೆ. ರಾತ್ರಿ ಹೊತ್ತು ಊಟಕ್ಕೂ, ನಿದ್ದೆಗೂ ಮೂರು ಗಂಟೆಯ ಅಂತರವಿರಲಿ. ಮೃದುವಾಗಿ ಬೇಯಿಸಿದ, ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ. ಉಪ್ಪು, ಸಕ್ಕರೆ, ಮೈದಾ ಸೇವನೆ ಅತ್ಯಂತ ಕಡಿಮೆಯಿರಲಿ. ಕಾಳುಗಳ ಸೇವನೆಯೂ ಬೇಡ. ಕಡಲೆಕಾಳು, ಅಲಸಂದೆ, ಅವರೆಕಾಳು, ಬಟಾಣಿ, ಕಡಲೆಹಿಟ್ಟಿನ ಪದಾರ್ಥ, ಸಿಹಿತಿಂಡಿಗಳು ವಾಯುವನ್ನು ಉಂಟುಮಾಡುವುದರಿಂದ ಇವುಗಳ ಸೇವನೆ ಬೇಡ. ಕಾಫಿ, ಟೀ ಸೇವನೆ ಮಿತಿಯಲ್ಲಿರಲಿ. ಆಹಾರದಲ್ಲಿ ದ್ರವಾಹಾರ ಅಂದರೆ ಗಂಜಿ, ಮಜ್ಜಿಗೆ, ತಿಳಿಸಾರು ಸೇವನೆ ಹೆಚ್ಚಾಗಿರಲಿ. ರಾಗಿಯ ಗಂಜಿ ತಯಾರಿಸಿ ಅದಕ್ಕೆ ಮಜ್ಜಿಗೆ ಬೆರೆಸಿ ಕುಡಿಯಿರಿ. ಎರಡು ಲೀಟ್ ನೀರಿಗೆ ಒಂದು ಚಮಚೆ ಜೀರಿಗೆ ಹಾಕಿ ಕುದಿಸಿಟ್ಟುಕೊಂಡು ಆ ನೀರನ್ನು ಆಗಾಗ ಕುಡಿಯುತ್ತಿರಿ. ವಯಸ್ಸಾದ ನಂತರ ಕರುಳಿನ ಚಲನೆ ನಿಧಾನವಾಗುವುದರಿಂದ ವಾಯುಬಾಧೆ, ಮಲಬದ್ಧತೆಗಳು ಕಾಡುತ್ತವೆ. ರಾತ್ರಿ ಮಲಗುವ ಮುಂಚೆ ಒಂದು ಚಮಚೆ ತ್ರಿಫಲಾ ಪುಡಿಯನ್ನು ಬಿಸಿನೀರಿಗೆ ಹಾಕಿ ಕುಡಿಯಬೇಕು.

ಉರಿಮೂತ್ರ : ಪದೇ ಪದೇ ಮೂತ್ರವಿಸರ್ಜನೆ ಮಾಡಬೇಕಾಗುವುದು, ಮೂತ್ರ ವಿಸರ್ಜನೆಯ ನಂತರ ಉರಿಯಾಗುವುದು, ನೋವಾಗುವುದು ಸಾಮಾನ್ಯ. ಋತುಬಂಧದ ನಂತರ ಮಹಿಳೆಯರಲ್ಲಿ ಈ ತೊಂದರೆ ಸಾಮಾನ್ಯ. ದಿನಕ್ಕೆ ಮೂರು ಲೀಟ್ ನೀರು ಕುಡಿಯಬೇಕು. ಎಳನೀರು, ಹಣ್ಣಿನ ರಸ ಕುಡಿಯಬೇಕು. ಸೌತೆಕಾಯಿ ರಸಕ್ಕೆ ಮಜ್ಜಿಗೆ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯಬೇಕು. ಒಮ್ಮೆ ವೈದ್ಯರನ್ನು ಕಂಡು ಸೋಂಕು ಉಂಟಾಗಿದ್ದಲ್ಲಿ ಚಿಕಿತ್ಸೆ ಪಡೆಯಬೇಕು.

ಹೃದ್ರೋಗ : ಹೃದ್ರೋಗಿಗಳು ವೈದ್ಯರ ಫಾಲೋಅನ್‌ನಲ್ಲಿರಬೇಕು. ನಿಯಮಿತವಾಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ದಲ್ಲಿಟ್ಟುಕೊಳ್ಳಬೇಕು. ರಕ್ತದೊತ್ತಡವನ್ನು ಆಗಾಗ ಗಮನಿಸಿಕೊಳ್ಳುತ್ತಿರಬೇಕು. ಮನಸ್ಸಿನ ನೆಮ್ಮದಿಯನ್ನು ಕಾಯ್ದುಕೊಳ್ಳಬೇಕು. ಅರ್ಜುನಾರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟನ್ನು ನೀರಿನೊಂದಿಗೆ ಬೆರೆಸಿ ಊಟದ ನಂತರ ಕುಡಿಯಬೇಕು.

ಪ್ರಾಸ್ಟೇಟ್ ಸಮಸ್ಯೆ : ಸಾಮಾನ್ಯವಾಗಿ 65 ವರ್ಷ ಮೀರಿದ ಪುರುಷರಲ್ಲಿ ಪ್ರಾಸ್ಟೇ್ ಗ್ರಂಥಿಯು ಗಾತ್ರದಲ್ಲಿ ದೊಡ್ಡದಾಗಿ ಮೂತ್ರವಿಸರ್ಜನೆಗೆ ಅಡಚಣೆ ಉಂಟುಮಾಡುತ್ತದೆ. ಉರಿಮೂತ್ರ, ಬಹುಮೂತ್ರ, ನೋವು ಕಂಡುಬರುತ್ತದೆ. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ತೆಗೆದುಕೊಳ್ಳಬೇಕು.

ಮಲಬದ್ಧತೆ : ಆಹಾರದಲ್ಲಿ ನಾರಿನಂಶ ಕಡಿಮೆಯಾದಾಗ, ಕಡಿಮೆ ನೀರು ಕುಡಿಯುವುದರಿಂದ, ಉದರದ ಮಾಂಸಖಂಡಗಳಿಗೆ ವ್ಯಾಯಾಮವಿಲ್ಲದಿರುವುದರಿಂದ, ಕಬ್ಬಿಣಾಂಶದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವುದರಿಂದ, ಖಿನ್ನತೆ ಮುಂತಾದ ಅನೇಕ ಕಾರಣಗಳಿಂದ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ.

ಆಹಾರದಲ್ಲಿ ರಾಗಿ, ಗೋಧಿ, ನಾರಿನಂಶವಿರುವ ಹಸಿರು ತರಕಾರಿ ಹೆಚ್ಚು ಸೇವನೆ ಮಾಡುವುದು, ಹೆಚ್ಚಿನ ಪ್ರಮಾಣದಲ್ಲಿ ನೀರು ಮತ್ತು ಹಾಲು, ಮಜ್ಜಿಗೆ ಕುಡಿಯಬೇಕು. ಊಟದ ನಂತರ ಪಪ್ಪಾಯ ಹಣ್ಣು ಇಲ್ಲವೇ ಆಯಾ ಋತುಮಾನದಲ್ಲಿ ದೊರೆಯುವ ಹಣ್ಣು ತಿನ್ನಬೇಕು. ಪ್ರತಿದಿನ ಬೆಳಿಗ್ಗೆ ಅರ್ಧಗಂಟೆ ನಡಿಗೆ ರೂಢಿಸಿಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಒಂದು ಚಮಚೆ ತ್ರಿಫಲಾ ಪುಡಿಯನ್ನು ಒಂದು ಲೋಟ ಬಿಸಿನೀರಿಗೆ ಬೆರೆಸಿ ಕುಡಿಯಬೇಕು.

ಮರೆವು : ಏಕಾಗ್ರತೆ ಇಲ್ಲದಿರುವುದು, ಆಯಾಸ, ಚಿಂತೆ, ಆತಂಕ, ಖಿನ್ನತೆ, ನಿರಾಸಕ್ತಿ, ನಿರುತ್ಸಾಹ, ಭಾವೋದ್ರೇಕಗಳಿಂದ ಮರೆವು ಕಾಣಿಸಿಕೊಳ್ಳುತ್ತದೆ. ಪೋಷಕಾಂಶವಿರುವ ಆಹಾರ ಸೇವನೆ, ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಒಂದೆಲಗದ ಪುಡಿಯನ್ನು ಒಂದು ಚಮಚೆಯಷ್ಟು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.

ಕಣ್ಣಿನ ಪೊರೆ : ವೃದ್ಧರನ್ನು ಕಾಡುವ ಮತ್ತೊಂದು ಪ್ರಮುಖ ಸಮಸ್ಯೆ ಕಣ್ಣಿನ ಪೊರೆಯ (ಕ್ಯಾಟರ್ಯಾಕಆಗಾಗ ನೇತ್ರ ವೈದ್ಯರನ್ನು ಭೇಟಿ ಮಾಡಿ ಕಣ್ಣುಗಳನ್ನು ಪರೀಕ್ಷಿಸಿಕೊಂಡು ಅವರ ಸಲಹೆಯ ಮೇರೆಗೆ ಚಿಕಿತ್ಸೆ ತೆಗೆದುಕೊಳ್ಳಬೇಕು. ವಾಕಿಂಗ್‌ನ ಸಮಯದಲ್ಲಿ ಹಸಿರನ್ನು ವೀಕ್ಷಿಸುವುದು, ಆಹಾರದಲ್ಲಿ ಹಸಿರು ಸೊಪ್ಪು, ತರಕಾರಿ, ಹಣ್ಣುಗಳ ಸೇವನೆ ಕಣ್ಣಿನ ಆರೋಗ್ಯ ರಕ್ಷಣೆಗೆ ಒಳ್ಳೆಯದು.

ಮಹಿಳೆಯರಲ್ಲಿ ಕ್ಯಾನ್ಸರ್ : ಋತುಬಂಧದ ಅನೇಕ ವರ್ಷಗಳ ನಂತರ ಮಹಿಳೆಯರಲ್ಲಿ ರಕ್ತಸ್ರಾವ, ಬಿಳಿಮುಟ್ಟು ಕಾಣಿಸಿಕೊಂಡಲ್ಲಿ ತಡಮಾಡದೇ ಸ್ತ್ರೀ ರೋಗ ತಜ್ಞರನ್ನು ಕಾಣಬೇಕು. ಸ್ತನಗಳಲ್ಲಿ ಗಂಟು, ಸ್ತನದ ತೊಟ್ಟಿನಲ್ಲಿ ರಕ್ತ, ನೀರಿನಂತಹ ದ್ರವ ಬರುವುದು, ನೋವು ಕಂಡುಬಂದಲ್ಲಿ ಅಲಕ್ಷಿಸದೇ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಏಕೆಂದರೆ ಇವೆಲ್ಲವೂ ಕ್ಯಾನ್ಸರ್ ಲಕ್ಷಣಗಳಾಗಿರಬಹುದು.

ವೃದ್ಧಾಪ್ಯ ಸಹನೀಯವೆನ್ನಿಸಲು ಕುಟುಂಬದವರ ಮತ್ತು ಸಮಾಜದ ಸಹಕಾರ ಅತ್ಯಗತ್ಯ. ಹಿರಿಯರನ್ನು ಗೌರವಿಸುವುದನ್ನು ಮತ್ತು ಅವರಿಗೆ ನೆರವು ನೀಡಲು ಎಲ್ಲರೂ ಮುಂದಾಗಬೇಕು. 65 ವರ್ಷ ಮೀರಿದ ಬಹುತೇಕರು ಪತಿಯನ್ನೋ, ಪತ್ನಿಯನ್ನೋ ಕಳೆದುಕೊಂಡು ಒಂಟಿಯಾಗಿರುತ್ತಾರೆ. ಅಂತಹವರನ್ನು ಪ್ರೀತಿ – ಮಮತೆಯಿಂದ ಎಲ್ಲರೂ ನೋಡಿಕೊಂಡಲ್ಲಿ ಅವರ ಬದುಕು ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಇಲ್ಲದಿದ್ದಲ್ಲಿ ಪ್ರತಿಕ್ಷಣ ಅಂತಹವರಿಗೆ ಬದುಕು ದುರ್ಭರವೆನಿಸುತ್ತದೆ. ಆರ್ಥಿಕ ಸ್ವಾವಲಂಬಿಗಳಲ್ಲದ ವೃದ್ಧರು ಮಕ್ಕಳು ಮತ್ತು ಇತರ ಕುಟುಂಬವರ್ಗದವರನ್ನು ಆಶ್ರಯಿಸಿರುತ್ತಾರೆ. ಅನೇಕರು ಅಂತಹವರ ಬಗ್ಗೆ ಕಾಳಜಿ ತೋರದೇ ಅಲಕ್ಷಿಸುತ್ತಾರೆ. ಕೆಲವರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವುದನ್ನು ಇತರರ ಮುಂದೆ ಯಾಚಿಸುವುದನ್ನು ಕಾಣುತ್ತಿರುತ್ತೇವೆ. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವೃದ್ಧಾಶ್ರಮಗಳ ಸಂಖ್ಯೆ ನೋಡಿದರೆ ಮಕ್ಕಳಿಗೆ ತಂದೆ, ತಾಯಿ ಬಗ್ಗೆ ಯಾಕಿಷ್ಟು ಅನಾದರ ಎನಿಸುತ್ತದೆ. ಹಿರಿಯರು ಮನೆಯಲ್ಲಿದ್ದಲ್ಲಿ ಮನೆಗೊಂದು ಭೂಷಣ. ಅವರ ಮಾರ್ಗದರ್ಶನ ಸದಾ ಕಿರಿಯರಿಗೆ ಬೇಕು. ಮೊಮ್ಮಕ್ಕಳೊಂದಿಗೆ ಆಟವಾಡುತ್ತ, ಕತೆ ಹೇಳುತ್ತ, ನಗುನಗುತ್ತ ಬದುಕುತ್ತಿರುವ ವೃದ್ಧರನ್ನು ನೋಡಿದಾಗ ಆ `ಕುಟುಂಬ’ ಸಂತೋಷದ ತಾಣ ಎನಿಸುತ್ತದಲ್ಲವೇ ? ಎಲ್ಲ ಕುಟುಂಬಗಳೂ ನೆಮ್ಮದಿಯ ಗೂಡಾಗಬೇಕು. ಕಿರಿಯರೂ ಹಿರಿಯರ ಮಾತುಗಳಿಗೆ ಗೌರವ ಕೊಡಬೇಕು. ಹಿರಿಯರೂ ಕಿರಿಯರನ್ನು ಅರ್ಥಮಾಡಿಕೊಂಡು, ಹಟ ಮಾಡದೇ, ಸೌಹಾರ್ದತೆಯಿಂದ ಬಾಳಿದಲ್ಲಿ ಬದುಕಿನ ಮುಸ್ಸಂಜೆ ಆನಂದಮಯವಾಗಿರುತ್ತದೆ.

ಆಕರ ಗ್ರಂಥಗಳು

1) ಚರಕ ಸಂಹಿತೆ

2) ಸುಶ್ರುತ ಸಂಹಿತೆ

3) ಯೋಗ ರತ್ನಾಕರ

೪) ವಂಗಸೇನ ಸಂಹಿತೆ