ನಾವು ಏನೆಲ್ಲ ದೈಹಿಕ ಚಟುವಟಿಕೆ ಮಾಡುತ್ತೇವೆ. ಏಳುವುದು, ಬೀಳುವುದು, ಓಡುವುದು, ಬಗ್ಗುವುದು, ಮಲಗುವುದು, ಕುಳಿತುಕೊಳ್ಳುವುದು ಹೀಗೆ ನೂರೆಂಟು ಕೆಲಸಗಳನ್ನು ಬೆನ್ನು ಮೂಳೆಯ ಆಧಾರದಿಂದಲೇ ಮಾಡುತ್ತೇವೆ. ಯೋಗಾಸನಗಳು, ಜಿಮ್ನಾಷಿಯಂ ಮಾಡುವವರನ್ನು ನೋಡಿದಾಗ ದೇಹವನ್ನು ಎಲಾಸ್ಟಿಕಹೇಗೆ ಬೇಕೋ ಹಾಗೆ ಬಗ್ಗಿಸುತ್ತಾರಲ್ಲ ಅನ್ನಿಸುತ್ತದೆ. ಇಷ್ಟೆಲ್ಲ ಕೆಲಸ ಮಾಡುವ ಬೆನ್ನುಮೂಳೆಗೆ ಸ್ವಲ್ಪ ತೊಂದರೆಯಾದರೂ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಯಾವಯಾವ ಕಾರಣಗಳಿಂದ ಬೆನ್ನು ನೋವು ಬರುತ್ತದೆಂದು ನೋಡೋಣ.

* ಅತಿಯಾದ ಭಾರ ಎತ್ತುವುದು.

* ಬೆನ್ನುಮೂಳೆಗೆ ಪೆಟ್ಟು ಬೀಳುವುದು.

* ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದೇ ಇರುವುದು.

* ಅತಿಯಾದ ಕೆಮ್ಮು,

* ಮೂತ್ರಕೋಶದಲ್ಲಿ ಕಲ್ಲುಗಳಿದ್ದಲ್ಲಿ,

* ಗರ್ಭಿಣಿಯರಲ್ಲಿ  ಬೆನ್ನುಮೂಳೆಯ ಮೇಲೆ ಉದರದ ಭಾರ ಬೀಳುವುದರಿಂದ,

* ಸ್ಥೂಲಕಾಯರಲ್ಲಿ ಮುಖ್ಯವಾಗಿ ಹೊಟ್ಟೆ ಮಾತ್ರ ದಪ್ಪಗಿರುವವರಲ್ಲಿ ಉದರದ ಭಾರ ಅತಿಯಾಗುವುದರಿಂದ,

* ದ್ವಿಚಕ್ರ ವಾಹನಗಳಲ್ಲಿ ಅನೇಕ ವರ್ಷಗಳು ಸತತವಾಗಿ ತಿರುಗಾಡುವುದರಿಂದ ವಿಶೇಷವಾಗಿ ಸ್ಕೂಟ್ನಲ್ಲಿ ತಿರುಗಾಡುವುದರಿಂದ,

* ಬೆನ್ನು ಹುರಿ ತೊಂದರೆಯಿದ್ದಲ್ಲಿ,

* ಅಪಘಾತದಿಂದ,

* ಯಾವುದೇ ವ್ಯಾಯಾಮ ಮಾಡದಿದ್ದವರು ಒಮ್ಮೆಲೆ ಶ್ರಮದ ಕೆಲಸ ಮಾಡುವುದರಿಂದ,

* ಗರ್ಭಕೋಶದ ತೊಂದರೆಯಿರುವವರಲ್ಲಿ ಮತ್ತು ಬಿಳಿಮುಟ್ಟಿನ ಸಮಸ್ಯೆಯಿದ್ದಲ್ಲಿ,

* ಯಾವುದೇ ಶಸ್ತ್ರ ಚಿಕಿತ್ಸೆಗೊಳಗಾದ ಕೆಲ ಕಾಲದ ನಂತರ,

* ಸ್ಲಿಪ್ ಡಿಸ್ಕ ಉಂಟಾಗಿದ್ದಲ್ಲಿ,

* ಗ್ಯಾಸ್‌ಟ್ರೈಟಿಸ್ ತೊಂದರೆಯಿರುವವರಲ್ಲಿ,

* ಗರ್ಭಕೋಶ ಜಾರಿದ್ದಲ್ಲಿ,

* ರಕ್ತಹೀನತೆಯ ತೊಂದರೆ,

* ಸುಣ್ಣಾಂಶ ಕಡಿಮೆಯಾಗುವುದರಿಂದ,

* ಮಲಬದ್ಧತೆಯ ತೊಂದರೆಯಿದ್ದಲ್ಲಿ,

* ಮೂಲವ್ಯಾಧಿಯ ತೊಂದರೆಯಿದ್ದಲ್ಲಿ,

* ಮುಟ್ಟು ನಿಲ್ಲುವ ಸಮಯದಲ್ಲಿ (ಋತುಬಂಧ),

* ಲಾರಿ, ಬಸ್ ಡ್ರೈವರ್ಗಳು ಸದಾ ಒಂದೇ ಸಮನೆ ಕುಳಿತು ಗಾಡಿ ಓಡಿಸುವುದರಿಂದ, ಕತ್ತಿನ ಭಾಗದಲ್ಲಿ ನೋವು, ಬೆನ್ನಿನ ಮಾಂಸಖಂಡಗಳಲ್ಲಿ ನೋವು, ಬಿಗಿತ, ಜುಂ ಎನ್ನುವುದು, ಕೆಲವು ಬಾರಿ ಸ್ವಲ್ಪ ಮಟ್ಟಿಗೆ ಉರಿ ಕೂಡ ಕಂಡುಬರುತ್ತದೆ. ಕೆಲವು ಬಾರಿ ಸಣ್ಣಗೆ ನೋವು ಕಾಣಿಸಿಕೊಳ್ಳಬಹುದು. ಕೆಲವು ಬಾರಿ ತೀವ್ರತರ ನೋವು ಕಂಡುಬರಬಹುದು.

* ತೀವ್ರತರ ನೋವಿದ್ದಲ್ಲಿ  ಬೆಡ್ ರೆಸ್ಟ ತುಂಬ ಮುಖ್ಯ. ಕೆಲಸ ಮಾಡದೇ ಸುಮ್ಮನೆ ಮಲಗುವುದು ಅತ್ಯುತ್ತಮ ಚಿಕಿತ್ಸೆ. ಕೆಲವರಲ್ಲಿ ಒಂದೆರಡು ದಿನಗಳ ರೆಸ್ಟ ಸಾಕಾಗಬಹುದು. ಇನ್ನು ಕೆಲವರಲ್ಲಿ ಒಂದೆರಡು ವಾರ ಬೆಡ್‌ ರೆಸ್ಟ ಬೇಕಾಗಬಹುದು. ಅದು ನೋವು ಎಷ್ಟಿದೆ ಮತ್ತು ಯಾವ ಕಾರಣದಿಂದ ಬಂದಿದೆಯೆಂಬುದರ ಮೇಲೆ ಅವಲಂಬಿಸಿರುತ್ತದೆ.

* ನೋವಿರುವ ಭಾಗಕ್ಕೆ ಎಳ್ಳೆಣ್ಣೆ ಸ್ವಲ್ಪ ಬಿಸಿ ಮಾಡಿ ಮಸಾಜ್ ಮಾಡಿ ಶಾಖ ಕೊಟ್ಟಲ್ಲಿ ನೋವು ಕಡಿಮೆಯಾಗುತ್ತದೆ.

* ಬೆನ್ನಿನ ಭಾಗದಲ್ಲಿ ತಣ್ಣೀರು ಹಾಕಿ ನಂತರ ಬಿಸಿ ನೀರು ಹಾಕುವುದು ಕೂಡ ನೋವನ್ನು ಶಮನಗೊಳಿಸುತ್ತದೆ. ಪ್ರಕೃತಿ ಚಿಕಿತ್ಸೆಯಲ್ಲಿ ಒಂದು ಚಿಕಿತ್ಸಾ ಕ್ರಮವೇ ಇದೆ. ಬಾತ್‌ಟಬ್‌ನಲ್ಲಿ ಮಲಗಿಸಿ ಬೆನ್ನಿನ ಭಾಗಕ್ಕೆ ತಣ್ಣೀರು, ಬಿಸಿ ನೀರನ್ನು ಹಾಯಿಸುವುದು. ಮಾಂಸಖಂಡ ಗಳಲ್ಲಿನ ಬಿಗಿತವನ್ನು ಕಡಿಮೆ ಮಾಡುತ್ತದೆ.

* ಮಲಗಿದ್ದಲ್ಲೇ ಕಾಲು ಚಾಚುವುದು, ಮಡಚುವುದು ಕೂಡ ಒಳ್ಳೆಯದು.

* ಮಲಗುವಾಗ ತಾಯಿಯ ಹೊಟ್ಟೆಯಲ್ಲಿ ಮಗು ಹೇಗೆ ಎಲ್ಲವನ್ನು ಮುದುರಿ ಕೊಂಡು ಮಲಗಿಕೊಂಡಿರುತ್ತದೆಯೋ ಆ ತರಹದ ಭಂಗಿಯಲ್ಲಿ ಎರಡು ಮಂಡಿಗಳ ಮಧ್ಯೆ ದಿಂಬು ಇಟ್ಟುಕೊಂಡಿರಬೇಕು.

* ಫೋಮ್ ಬೆಡ್‌ಗಿಂತ ಜಮಖಾನೆ ಇಲ್ಲವೇ ಚಾಪೆಯ ಮೇಲೆ ಮಲಗುವುದು ಒಳ್ಳೆಯದು. ಹತ್ತಿಯ ಹಾಸಿಗೆ ಬಳಸುವುದಾದಲ್ಲಿ ಅನೇಕ ವರ್ಷಗಳು ಬಳಸಿದ ನಂತರ ಒಂದೇ ರೀತಿ ಇರುವುದಿಲ್ಲ. ಅದನ್ನು ಸರಿಪಡಿಸಿಕೊಳ್ಳಬೇಕು.

* ಚಾಪೆಯ ಮೇಲೆ ಇಲ್ಲವೇ ಜಮಖಾನದ ಮೇಲೆ ಬೋರಲು ಮಲಗಿ ಈಜುವಾಗ ಮಾಡಿದಂತೆ ಎಡಗೈ, ಬಲಗಾಲು ಒಂದು ಬಾರಿ ಆಡಿಸಿ ಒಂದು ಸೆಕೆಂಡ್ ಹಾಗೆ ಇರಿ. ನಂತರ ಮತ್ತೊಂದು ಬಾರಿ ಎಡಗಾಲು, ಬಲಗೈ ಆಡಿಸಬೇಕು.

* ಯಾವುದೇ ವ್ಯಾಯಾಮ ಮಾಡಿದಾಗ ನೋವು ಹೆಚ್ಚಾದಲ್ಲಿ ಮಾಡುವುದು ಬೇಡ. ನಿಲ್ಲಿಸುವುದು ಒಳ್ಳೆಯದು.

* ಮಲಗುವಾಗ ದಿಂಬು ಹಾಕಿಕೊಳ್ಳುವುದು ಬೇಡ.

ಮನೆ ಮದ್ದು :

1) ಶುಂಠಿಯ ಕಷಾಯ ತಯಾರಿಸಿ ಅದಕ್ಕೆ ಹಾಲು, ಬೆಲ್ಲ ಸೇರಿಸಿ ಕುಡಿಯಬೇಕು.

2) ಸೊಗದೆ ಬೇರಿನ ಚೂರ್ಣವನ್ನು ಒಂದು ಚಮಚೆ ತೆಗೆದುಕೊಂಡು ಒಂದು ಲೋಟ ನೀರಿನಲ್ಲಿ ಕುದಿಸಿ, ಅರ್ಧ ಭಾಗ ಉಳಿದಾಗ ಇಳಿಸಿ, ಶೋಧಿಸಿ, ಅದಕ್ಕೆ ನಿಂಬೆರಸ ಬೆರೆಸಿ ಕುಡಿಯಬೇಕು.

3) ಶುಂಠಿ, ಮೆಣಸು, ಹಿಪ್ಪಲಿ, ಬೆಲ್ಲ, ನೆಗ್ಗಿಲುಮುಳ್ಳು, ಕೊಬ್ಬರಿ ಎಲ್ಲವನ್ನು ಸೇರಿಸಿ ಕುಟ್ಟಿ ಪುಡಿಮಾಡಿಟ್ಟುಕೊಳ್ಳಬೇಕು. ಒಂದು ಚಮಚೆಯಷ್ಟು ಪುಡಿಯನ್ನು ದಿನಕ್ಕೆರಡು ಬಾರಿ ಎರಡರಿಂದ ಮೂರು ವಾರ ಸೇವಿಸಬೇಕು.

4) ಅಶ್ವಗಂಧವನ್ನು ಹಾಲಿನಲ್ಲಿ ಬೇಯಿಸಿ, ಒಣಗಿಸಿ, ಪುಡಿ ಮಾಡಿ ಒಂದು ಚಮಚೆ ಪುಡಿಯನ್ನು ಜೇನುತುಪ್ಪದೊಂದಿಗೆ ಇಲ್ಲವೇ ಹಾಲಿನೊಂದಿಗೆ ಸೇವಿಸಬೇಕು.

5) ಬ್ರಾಹ್ಮಿ ಎಲೆಯನ್ನು ಒಣಗಿಸಿ ಮಾಡಿದ ಪುಡಿಯನ್ನು ಒಂದು ಚಮಚೆ ತೆಗೆದುಕೊಂಡು ಅದಕ್ಕೆ ಜೇನು ಬೆರೆಸಿ ಸೇವಿಸಬೇಕು.

6) ಆಹಾರದಲ್ಲಿ ಮೆಂತ್ಯ ಸೊಪ್ಪು ಬಳಕೆ ಹೆಚ್ಚಿರಲಿ.

7) ಒಂದು ಚಮಚೆ ತುಂಬೆಯ ರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯಬೇಕು.

8) ಅಮೃತಬಳ್ಳಿಯ ಕಾಂಡ ಮತ್ತು ಕಾಳು ಮೆಣಸಿನ ಪುಡಿ (ಅರ್ಧ ಚಮಚೆ) ಸೇರಿಸಿ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಕುಡಿಯಬೇಕು.

ಬಾಹ್ಯ ಚಿಕಿತ್ಸೆ :

1) 50 ಮಿಲಿ ಎಳ್ಳೆಣ್ಣೆ, 5 ಗ್ರಾಂ ಪಚ್ಚಕರ್ಪೂರ ಮತ್ತು 4 ಬೆಳ್ಳುಳ್ಳಿ ಎಸಳನ್ನು ಜಜ್ಜಿ ಹಾಕಿ ಕುದಿಸಿ, ತುಸು ಬೆಚ್ಚಗಿರುವಾಗ ನೋವಿರುವ ಭಾಗಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಬೇಕು.

2) ತುಂಬೆ ಸೊಪ್ಪನ್ನು ಹರಳೆಣ್ಣೆ ಇಲ್ಲವೆ ಎಳ್ಳೆಣ್ಣೆಯಲ್ಲಿ ಅರೆದು ಲೇಪಿಸಬೇಕು.

3) ಸಾಸುವೆ ಎಣ್ಣೆ, ಬೇವಿನ ಎಣ್ಣೆ, ಹರಳೆಣ್ಣೆ, ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಜೀರಿಗೆ, ಮೆಂತ್ಯ ಮತ್ತು ಬಜೆಯ ಸಮಭಾಗ ಪುಡಿ ಹಾಕಿ ಕಾಯಿಸಬೇಕು. ತಣ್ಣಗಾದ ಮೇಲೆ ಈ ಎಣ್ಣೆಯನ್ನು ನೋವಿರುವ ಜಾಗಕ್ಕೆ ಪದೇ ಪದೇ ಹಚ್ಚುತ್ತಿರಬೇಕು.

4) ಹರಳೆಣ್ಣೆ ಮತ್ತು ನಿಂಬೆಹಣ್ಣಿನ ರಸ ಬೆರೆಸಿ ನೋವಿರುವ ಜಾಗದಲ್ಲಿ ಹಚ್ಚಿ ಶಾಖ ಕೊಡಬೇಕು.

5) ಹೊಂಗೆ ಎಲೆ ಹಾಕಿ ಕುದಿಸಿದ ನೀರಿನಿಂದ ಶಾಖ ಕೊಡಬೇಕು.

6) ನುಗ್ಗೆಸೊಪ್ಪು, ಶುಂಠಿ, ಹರಳುಗಿಡದ ಎಲೆ (ಔಡಲ), ತುಳಸಿ, ಎಳ್ಳು, ಸಾಸಿವೆ, ಎಲ್ಲವನ್ನು ಸ್ವಲ್ಪ ಎಳ್ಳೆಣ್ಣೆಯಲ್ಲಿ ಹುರಿದು ಬಟ್ಟೆಯಲ್ಲಿ ಕಟ್ಟಿಕೊಂಡು ಪೋಟಲಿ ಮಾಡಿ ಅದನ್ನು ಬಿಸಿ ಮಾಡಿ ಶಾಖ ಕೊಡಬೇಕು.

7) ಎಕ್ಕದೆಲೆಯನ್ನು ಬಿಸಿ ಮಾಡಿ ಶಾಖ ಕೊಡಬೇಕು.

ಈ ಮನೆ ಮದ್ದುಗಳಿಗೆ ಕಡಿಮೆಯಾಗದಿದ್ದಲ್ಲಿ ಆಯುರ್ವೇದ ವೈದ್ಯರ ಬಳಿ ಹೋದಲ್ಲಿ ಅವರು ನಿಮ್ಮ ವಯಸ್ಸು, ದೇಹ ಪ್ರಕೃತಿ, ನೋವಿನ ತೀವ್ರತೆಗಳ ಆಧಾರದ ಮೇಲೆ ಔಷಧಿ ಚಿಕಿತ್ಸೆ ನೀಡುವರು. ಅಲ್ಲದೇ ಬೆನ್ನುನೋವು, ಸೊಂಟನೋವುಗಳಿಗೆ ವಿಶೇಷವಾಗಿ `ಕಟಿ ಬಸ್ತಿ’ ಎನ್ನುವ ಚಿಕಿತ್ಸೆ ಇದೆ. ಅದು ತುಂಬ ಉತ್ತಮವಾದ ಚಿಕಿತ್ಸೆ. ಕಟಿ ಅಂದರೆ ಸಂಸ್ಕೃತದಲ್ಲಿ  ಸೊಂಟ ಎನ್ನುವ ಅರ್ಥ.

ನೋವಿರುವ ಜಾಗದಲ್ಲಿ ಕಲೆಸಿದ ಉದ್ದಿನ ಹಿಟ್ಟನ್ನು ಕಟ್ಟೆಯಂತೆ ಕಟ್ಟಿ ಅದರಲ್ಲಿ ಬಿಸಿಯಾದ ಔಷಧೀಯ ತೈಲ ಹಾಕುವುದು. ನಂತರ ಮಸಾಜ್ ಮಾಡಿ ಪತ್ರ ಪಿಂಡ ಸ್ವೇದ ಅಂದರೆ ಔಷಧೀಯ ಸೊಪ್ಪುಗಳನ್ನು ಬಿಸಿ ಮಾಡಿ ಒಂದು ಬಟ್ಟೆಯಲ್ಲಿ ಗಂಟು ಕಟ್ಟಿ ಪೋಟಲಿ ಮಾಡಿ ಕಾವು ಕೊಡುವುದು. ಇದನ್ನು 7 ದಿನ ಇಲ್ಲವೇ 14 ದಿನ ಮಾಡಿದಲ್ಲಿ ನೋವು ತಗ್ಗುತ್ತದೆ.

ಯಾವಾಗ ವೈದ್ಯರನ್ನು ತಕ್ಷಣ ನೋಡಬೇಕು ?

1) ಯಾವುದೇ ಕಾರಣವಿಲ್ಲದೇ ತೀವ್ರತರ ನೋವು ಕಂಡುಬಂದಲ್ಲಿ,

2) ಬೆನ್ನು ನೋವಿನೊಂದಿಗೆ ಜ್ವರ, ಹೊಟ್ಟೆನೋವು, ಎದೆನೋವು, ಉಸಿರಾಟದ ತೊಂದರೆಗಳಿದ್ದಲ್ಲಿ,

3) ಎರಡು-ಮೂರು ದಿನ ರೆಸ್ಟ ತೆಗೆದುಕೊಂಡರೂ ನೋವಿನ ತೀವ್ರತೆ ಕಡಿಮೆಯಾಗದಿದ್ದಲ್ಲಿ,

4) ಬೆನ್ನು ಮತ್ತು ಸೊಂಟ ನೋವು ನಿಧಾನವಾಗಿ ಕಾಲುಗಳಿಗೆ, ಮಂಡಿಗೆ ಮತ್ತು ಪಾದಗಳಿಗೆ ಹರಡಿದಲ್ಲಿ ಅಲಕ್ಷಿಸಬಾರದು.

ಪಥ್ಯ :

ಕರಿದ ಪದಾರ್ಥ ಸೇವನೆ ಒಳ್ಳೆಯದಲ್ಲ. ಹುರುಳಿ, ಹೆಸರುಬೇಳೆ ಒಳ್ಳೆಯದು. ಸೊಪ್ಪು, ತರಕಾರಿ, ಹಣ್ಣುಗಳ ಸೇವನೆ ಯಥೇಚ್ಛವಾಗಿರಲಿ.

ಮೆಂತ್ಯ ಸೊಪ್ಪಿನ ಚಿತ್ರಾನ್ನ :

ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಬೇಕು. ಒಗ್ಗರಣೆ ಹಾಕಿ ಉದ್ದಿನಬೇಳೆ, ಕಡಲೆಬೇಳೆ, ಸಾಸುವೆ, ಒಣಮೆಣಸಿನಕಾಯಿ, ಹಿಂಗು ಹಾಕಿ ನಂತರ ಸೊಪ್ಪು ಹಾಕಿ ಬಾಡಿಸಿಕೊಳ್ಳಬೇಕು. ಉಪ್ಪು ಹಾಕಿ ಬೇಯಿಸಬೇಕು. ಇದನ್ನು ಅನ್ನಕ್ಕೆ ಹಾಕಿ ಕಲೆಸಿಕೊಂಡು ತಿನ್ನಬೇಕು.

ಮೆಂತ್ಯ ಸೊಪ್ಪಿನ ರೊಟ್ಟಿ :

ಅಕ್ಕಿಹಿಟ್ಟು, ಸಣ್ಣಗೆ ಹೆಚ್ಚಿದ ಮೆಂತ್ಯ ಸೊಪ್ಪು, ಹಸಿಮೆಣಸಿನಕಾಯಿ, ಜೀರಿಗೆ, ಹಿಂಗು, ತೆಂಗಿನತುರಿ, ಉಪ್ಪು ಸೇರಿಸಿ ಹಿಟ್ಟು ಕಲೆಸಿ ಬಾಣಲೆಯಲ್ಲಿ ಎಣ್ಣೆ ಸವರಿ ತೆಳ್ಳಗೆ ತಟ್ಟಿ ಕೆಂಪಗೆ ಬೇಯಿಸಬೇಕು. ಗರಿಗರಿಯಾದ ರೊಟ್ಟಿ ಸಿದ್ಧ.

ಮೆಂತ್ಯ ಸೊಪ್ಪಿನ ಪಲ್ಯ :

ತೊಗರಿಬೇಳೆ ಇಲ್ಲವೇ ಹೆಸರುಬೇಳೆಯನ್ನು ಬೇಯಿಸಿಟ್ಟುಕೊಳ್ಳಬೇಕು. ಒಗ್ಗರಣೆ ಹಾಕಿ, ಹೆಚ್ಚಿದ ಮೆಂತ್ಯ ಸೊಪ್ಪನ್ನು  ಹಾಕಿ ಬಾಡಿಸಿ, ಬೇಳೆ ಬೆರೆಸಿ ಉಪ್ಪು, ಒಣ ಮೆಣಸಿನ ಕಾಯಿ ಪುಡಿ ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.

ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಒಗ್ಗರಣೆ ಹಾಕಿ, ನಂತರ ಸ್ವಚ್ಛ ಮಾಡಿದ ಮೆಂತ್ಯಸೊಪ್ಪನ್ನು ಹೆಚ್ಚಿಕೊಂಡು ಬೆರೆಸಬೇಕು. ಅದಕ್ಕೆ ಉಪ್ಪು, ಸಾಂಬಾರು ಪುಡಿ ಹಾಕಿ ಬೇಯಿಸಿಕೊಳ್ಳಬೇಕು. ಇದು ಅನ್ನ ಮತ್ತು ರೊಟ್ಟಿಯೊಂದಿಗೆ ತಿನ್ನಲು ರುಚಿ. ಬೇಕೆನಿಸಿದಲ್ಲಿ ಬೆಲ್ಲ ಬೆರೆಸಿಕೊಳ್ಳಬಹುದು.