ಪ್ರಭೇದ : ಒಂದೇ ರೀತಿಯ ಆಕಾರ, ರಚನೆಯಿರುವ ಜೀವಿಗಳ ಗುಂಪು. ಈ ಗುಂಪಿನ ಸದಸ್ಯರಲ್ಲಿ ಗಂಡು-ಹೆಣ್ಣುಗಳು ಕೂಡಿದಲ್ಲಿ ಸಂತಾನ ಶಕ್ತಿಯುಳ್ಳ ಮರಿಗಳು ಹುಟ್ಟುತ್ತವೆ. ಉದಾಹರಣೆಗೆ ಎಲ್ಲ ಮನುಷ್ಯರೆಲ್ಲರೂ ಒಂದು ಪ್ರಭೇದಕ್ಕೆ ಸೇರುವರು.

ಜೆನರ : ಸುಮಾರು ಒಂದೇ ರೀತಿಯ ಗುಣ ಲಕ್ಷಣಗಳಿರುವ ಹಲವು ಪ್ರಭೇದಗಳನ್ನು ಜೆನರ ಎಂಬ ಹೆಸರಿನ ಗುಂಪಿಗೆ ಸೇರಿಸುವರು. ಉದಾಹರಣೆಗೆ ಬೆಕ್ಕು, ಹುಲಿ, ಸಿಂಹಗಳು ವಿವಿಧ ಪ್ರಭೇದಗಳು. ಆದರೆ ಇವೆಲ್ಲವಕ್ಕೆ ಒಂದೇ ರೀತಿಯ ಗುಣ ಲಕ್ಷಣಗಳಿರುವುದರಿಂದ ಇವನ್ನು ಫೆಲಿಸ್ ಎಂಬ ಜೆನರಕ್ಕೆ ಸೇರಿಸಿದ್ದಾರೆ. ಇದರ ಏಕವಚನ ಜೀನಸ್.

ಜೀನ್ / ಜೀನು : ಜೀವಿಗಳ ಅನುವಂಶೀಯ ಘಟಕಗಳನ್ನು ಜೀನ್‌ಗಳೆಂದು ಕರೆಯುವರು. ಎಲ್ಲ ಜೀವಿಗಳ ಆಕಾರ, ರಚನೆ, ಪ್ರತಿರೋಧ ಶಕ್ತಿ ಮುಂತಾದ ಎಲ್ಲ ಗುಣಲಕ್ಷಣಗಳನ್ನು ಜೀನ್‌ಗಳು ನಿರ್ಧಾರ ಮಾಡುತ್ತವೆ. ಎಲ್ಲ ಜೀನ್‌ಗಳ ರಸಾಯನಿಕ ವಸ್ತುವೇ ಡಿ.ಎನ್.ಎ. (ಡಿ ಆಕ್ಸಿರೈಬೋಸ್ ನ್ಯೂಕ್ಲಿಕ್ ಆಮ್ಲ). ಇದು ಜೀವಕೋಶಗಳ ನ್ಯೂಕ್ಲಿಯಸ್‌ನಲ್ಲಿರುವುದು. ತಂದೆ ತಾಯಿಗಳಿಂದ ಮಕ್ಕಳಿಗೆ ಈ ಅನುವಂಶೀಯ ವಸ್ತು ಸಾಗಿ ಬರುವುದು.

ಬಹುವಾರ್ಷಿಕ : ಹಲವಾರು ವರ್ಷಗಳ ಕಾಲ ಬದುಕುವ ಸಸ್ಯವನ್ನು ಬಹುವಾರ್ಷಿಕ ಸಸ್ಯವೆಂದು ಕರೆಯುವರು. ಒಂದೇ ವರ್ಷದಲ್ಲಿ ಹುಟ್ಟಿ ಬೆಳೆದು, ಹೂ ಹಣ್ಣುಗಳನ್ನು ನೀಡಿ ಸತ್ತು ಹೋಗುವ ಸಸ್ಯ ಪ್ರಭೇದಗಳನ್ನು ಏಕವಾರ್ಷಿಕ ಸಸ್ಯವೆಂದು ಕರೆಯುವರು.

ಬಿಲಿಯನ್ : ಒಂದು ಸಾವಿರ ಮಿಲಿಯನ್‌ಗಳು ಸೇರಿದರೆ ಒಂದು ಬಿಲಿಯನ್ ಆಗುತ್ತದೆ. ಹಿಂದೂ ಸಂಖ್ಯಾ ಪದ್ಧತಿಯ ಒಂದು ನೂರು ಕೋಟಿ ವರ್ಷಗಳು ಸೇರಿ ಒಂದು ಬಿಲಿಯನ್ ಆಗುತ್ತದೆ.

ಮಿಲಿಯ / ಮಿಲಿಯನ್ : ಹತ್ತು ಲಕ್ಷಗಳು ಸೇರಿದರೆ ಒಂದು ಮಿಲಿಯನ್ ಆಗುತ್ತದೆ.

ವಿಕೃತಿ / ಮ್ಯುಟೇಷನ್ : ಅನುವಂಶೀಯ ವಸ್ತುವಾದ ಡಿ.ಎನ್.ಎ ರಚನೆಯಲ್ಲಿ ವ್ಯತ್ಯಾಸ ಉಂಟಾದರೆ, ಅದನ್ನು ವಿಕೃತಿ ಅಥವಾ ಮ್ಯುಟೇಷನ್ ಎನ್ನುವರು. ವಿಕೃತಿಗಳುಂಟಾದರೆ ಜೀವಿಗಳ ಗುಣ ಲಕ್ಷಣಗಳಲ್ಲಿ ವ್ಯತ್ಯಾಸ ಉಂಟಾಗುತ್ತವೆ. ಹಾಗಾಗಿ ವಿಕೃತಿಗಳು ಜೀವಿಗಳ ಭಿನ್ನತೆಯ ಜನಕಗಳು.

ಪುನ್ಯಂಯೋಜನೆ : ಲೈಂಗಿಕವಾಗಿ ಸಂತಾನ ಹೊಂದುವ ಜೀವಿಗಳಲ್ಲಿ ಲಿಂಗಾಣುಗಳು ಉತ್ಪತ್ತಿಯಾಗುವ ಜೀವಕೋಶಗಳಲ್ಲಿರುವ ಪಿತೃ ಹಾಗೂ ಮಾತೃ ಕ್ರೋಮೋಸೋಮುಗಳ ನಡುವೆ ಅನುವಂಶೀಯ ವಸ್ತು ಅದಲು ಬದಲಾಗುವ ಕ್ರಿಯೆ.

ನೈಸರ್ಗಿಕ ಆಯ್ಕೆ : ಒಂದು ಪ್ರಭೇದದ ವಿಭಿನ್ನ ಸದಸ್ಯರ ನಡುವೆ ಅಥವಾ ವಿವಿಧ ಪ್ರಭೇದಗಳ ನಡುವೆ ಅಥವಾ ಜೀವಿಗಳಿಗೂ ಪ್ರಕೃತಿಗೂ ನಡುವೆ ನಡೆಯುವ ಹೋರಾಟದಲ್ಲಿ ಅನುಕೂಲಕರ ವ್ಯತ್ಯಾಸಗಳುಳ್ಳ ಜೀವಿಗಳು ಉಳಿಯುತ್ತವೆ ಹಾಗೂ ಸಂತಾನ ಮುಂದುವರೆಸುತ್ತವೆ. ಅನಾನುಕೂಲದ ವ್ಯತ್ಯಾಸವುಳ್ಳ ಜೀವಿಗಳು ಸತ್ತು ಹೋಗುತ್ತವೆ. ಈ ಕ್ರಿಯೆಯನ್ನು ನೈಸರ್ಗಿಕ ಆಯ್ಕೆ ಎನ್ನುವರು.

ಫಾಸಿಲ್ ಇಂಧನ : ಕೋಟ್ಯಾಂತರ ವರ್ಷಗಳ ಹಿಂದೆ ಬದುಕಿದ್ದ ಜೀವಿಗಳು ಭೂಗೋಳಿಕ ಬದಲಾವಣೆಗಳಿಂದಾಗಿ ನೆಲದಡಿ ಸಿಕ್ಕು ಕೊಳೆಯುವಿಕೆಯಿಂದ ಉಂಟಾದ ಕಲ್ಲಿದ್ದಲು, ಸೀಮೆಎಣ್ಣೆ, ಪೆಟ್ರೋಲ್, ಡೀಸೆಲ್‌ಗಳನ್ನು ಪಾಸಿಲ್ ಇಂಧನಗಳೆನ್ನುವರು.

ಜೈವಿಕ ತಂತ್ರಜ್ಞಾನ : ಡಿ.ಎನ್.ಎ ಅನುವಂಶೀಯ ವಸ್ತುವನ್ನು ವಿವಿಧ ತಳಿ, ಪ್ರಭೇದ ಅಥವಾ ಜೆನರಗಳಲ್ಲಿ ಬದಲಾಯಿಸಿ ಉತ್ತಮ ಇಳುವರಿಯ, ಪ್ರತಿರೋಧ ಗುಣವಿರುವ ಅಥವಾ ಬೇಕಾದ ರಾಸಾಯನಿಕವನ್ನು ಉತ್ಪತ್ತಿ ಮಾಡುವ ತಳಿಗಳನ್ನು ಅಭಿವೃದ್ದಿ ಪಡಿಸುವ ವಿಜ್ಞಾನ.

 

ಜೀವಿ ಸಂರಕ್ಷಣೆ

ಲೇಖಕರು: ಡಾ. ಎಚ್. ಎಸ್. ನಿರಂಜನ ಆರಾಧ್ಯ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ 93ನೇ ಪ್ರಕಟಣೆ. ಡಾ.ಎಚ್.ಎಸ್. ನಿರಂಜನಾರಾಧ್ಯರವರು “ಜೀವಿ ಸಂರಕ್ಷಣೆ‘’ ಎಂಬ ಶೀರ್ಷಿಕೆಯ ಕಿರುಹೊತ್ತಿಗೆಯನ್ನು ಬರೆದುಕೊಟ್ಟು ಪರಿಸರ ಪ್ರೇಮಿಗಳಿಗೆ ಸಹಾಯ ಮಾಡಿದ್ದಾರೆ. ಕರಾವಿಪದ ಘಟಕಗಳ ಸಂಚಾಲಕರು ಈ ಕಿರುಹೊತ್ತಿಗೆಯಲ್ಲಿ ವಿವರಿಸಿರುವ ಪರಿಸರದ ವಿಷಯಗಳ ಕಡೆ ಗಮನ ಹರಿಸಬೇಕು. ಉದಾರೀಕರಣದ ಆಘಾತದ ಈ ದಶಕದಲ್ಲಿ ದೇಶೀಯ ಸಂಪನ್ಮೂಲಗಳನ್ನು ರಕ್ಷಿಸುವುದು ಎಲ್ಲರ ಕರ್ತವ್ಯ. ಇದಕ್ಕೆ ಸಂಬಂಧಪಟ್ಟ ಅನೇಕ ಪ್ರಶ್ನೆಗಳನ್ನು ಡಾ. ಎಚ್.ಎಸ್. ನಿರಂಜನಾರಾಧ್ಯರವರು ಎತ್ತಿ ತೋರಿಸಿದ್ದಾರೆ. ಸೂಕ್ತ ಅಂಕಿ ಅಂಶಗಳನ್ನೊಳಗೊಂಡ ಈ ಕಿರುಹೊತ್ತಿಗೆ ಪರಿಸರ ಆಂದೋಲನದ ಕಾರ್ಯಕರ್ತರಿಗೂ ಉಪಯುಕ್ತ. ಈ ಕಿರುಹೊತ್ತಿಗೆ ಹೆಚ್ಚು ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.

ಈ ಪುಸ್ತಕವನ್ನು ಕರ್ನಾಟಕ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಆರ್ಥಿಕ ನೆರವಿನೊಂದಿಗೆ ಪ್ರಕಟಿಸಲಾಗಿದೆ.

ISBN 81-86692-15-0              ಬೆಲೆ ರೂ. 35.00