“ನಮ್ಮ ಕೈಯಲ್ಲಿ ಇಂದು ನಮ್ಮ ಭವಿಷ್ಯ ಮಾತ್ರವಲ್ಲ;
ಜೊತೆಗೆ ನಮ್ಮೊಂದಿಗೆ ಈ ಭೂಮಿಯಲ್ಲಿರುವ
ಎಲ್ಲ ಜೀವಿಗಳ ಭವಿಷ್ಯವೂ ಅಡಗಿದೆ‘’
ಡೇವಿಡ್ ಅಟೆನ್‌ಬರೋ

 

ಜೈವಿಕ ವೈವಿಧ್ಯವು ಪ್ರಕೃತಿಯ ಅಮೂಲ್ಯ ಆಸ್ತಿ. ಇದು ಪರಿಸರ ಸಮತೋಲನ ಹಾಗೂ ಮಾನವನ ಬದುಕಿಗೆ ನೀಡುವ ಕೊಡುಗೆಯನ್ನು ಮತ್ತಾವುದೇ ವಿಧಾನದಿಂದ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಇದರ ಸ್ಥಾನವನ್ನು ತುಂಬಬಲ್ಲ ಮತ್ತೊಂದು ವಸ್ತು ಪ್ರಕೃತಿಯಲ್ಲಿಲ್ಲ. ನಾವು ಜೈವಿಕ ವೈವಿಧ್ಯವನ್ನು ಸೃಷ್ಟಿ ಮಾಡಲಾರೆವು. ಜೈವಿಕ ವೈವಿಧ್ಯದ ನಾಶವು ಶಾಶ್ವತವಾದದು. ನಾಶಹೊಂದಿದ ಯಾವುದೇ ಸಸ್ಯ ಅಥವಾ ಪ್ರಾಣಿಯನ್ನು ನಾವಿಂದು ಮರುಸೃಷ್ಟಿಸಲು ಸಾಧ್ಯವಿಲ್ಲ. ಸ್ಪಿಲ್‌ಬರ್ಗ್‌ರವರ ರೋಚಕ ಚಲನಚಿತ್ರ `ಜುರಾಸಿಕ್ ಪಾರ್ಕ್‘ನಲ್ಲಿ ಮರುಸೃಷ್ಟಿ ಸಾಧ್ಯವೆಂಬಂತೆ ತೋರಿಸಿದ್ದರೂ ಸಹ, ಅಂತಹ ಸಾಧನೆ ಇನ್ನೂ ಕೈಗೆಟುಕದ ವಿಷಯ. ಆದ್ದರಿಂದ ಈಗ ಹಾಲಿ ಜೀವಂತವಾಗಿರುವ ಪ್ರಭೇದಗಳನ್ನು ರಕ್ಷಿಸುವುದು, ವಿನಾಶದ ಅಂಚಿನಲ್ಲಿರುವ, ಕಡಿಮೆ ಸಂಖ್ಯೆಯಲ್ಲಿರುವ ಪ್ರಭೇದಗಳನ್ನು ಉಳಿಸಿ ಬೆಳೆಸುವುದು ನಮ್ಮ ಮೊದಲ ಕರ್ತವ್ಯವಾಗಬೇಕು.

ಜೈವಿಕ ವೈವಿಧ್ಯದ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಗೆ ಪ್ರಪಂಚದ ಬಹುತೇಕ ವಿಜ್ಞಾನಿಗಳು ಮತ್ತು ಸರ್ಕಾರಗಳು ನಾಲ್ಕು ಮುಖ್ಯ ಮಾರ್ಗಗಳನ್ನು ಅನುಸರಿಸಬೇಕಿದೆ. 1.ೊಪ್ರಮುಖವಾದ ಕೆಲವು ಜೀವಾವಾಸಗಳನ್ನು ರಾಷ್ಟ್ರೀಯ ವನ, ವನ್ಯಧಾಮ ಅಥವಾ ರಕ್ಷಿತ ಪ್ರದೇಶಗಳೆಂದು ಘೋಷಿಸಿ, ಅವನ್ನು ರಕ್ಷಿಸಬೇಕು. 2. ಯಾವುದಾದರೂ ಒಂದು ಪ್ರಭೇದ ಅಥವಾ ಹಲವು ಪ್ರಭೇದಗಳು ತೀವ್ರ ಬಳಕೆಗೆ ಒಳಗಾಗಿದ್ದರೆ, ಅವನ್ನು ರಕ್ಷಿಸಬೇಕು. 3. ಕೃತಕ ನೆಲೆಯಲ್ಲಿ (ex-situ) ಪ್ರಭೇದಗಳನ್ನು ಸಂರಕ್ಷಿಸಬೇಕು. ಸಸ್ಯಗಳ ಉದ್ಯಾನವನ ಮಾಡುವ ಮೂಲಕ ಅಥವಾ ಬೀಜ, ಊತಕ, ಜೀವಕೋಶ, ಪರಾಗ ಅಥವಾ ಅಂಡಾಣು ಅಥವಾ ವೀರ್ಯ ಬ್ಯಾಂಕುಗಳ ನಿರ್ಮಾಣದಿಂದ ಜೀವಿ ವೈವಿಧ್ಯವನ್ನು ಕಾಪಾಡಬೇಕು. 4. ಜೀವಗೋಳವು ಮಾಲಿನ್ಯದಿಂದ ಆಘಾತಕ್ಕೆ ಒಳಗಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕು.

ಮೇಲಿನ ಮಾರ್ಗಗಳನ್ನು ಅನುಸರಿಸಲು ಕೆಲವು ಅಂತಾರಾಷ್ಟ್ರೀಯ, ವಲಯ, ಸ್ಥಳೀಯ ಸಮಾವೇಶ ಮತ್ತು ಕಾರ್ಯಕ್ರಮಗಳು ನಡೆಯುತ್ತಿವೆ. ಬಹುತೇಕ ರಾಷ್ಟ್ರಗಳು ಇಂದು ರಕ್ಷಿತ ಅರಣ್ಯಗಳನ್ನು ಸ್ಥಾಪಿಸಿದ್ದಾರೆ. 1970ರಲ್ಲಿ 1,478 ರಕ್ಷಿತ ಪ್ರದೇಶಗಳಿದ್ದವು. ಅವುಗಳ ಸಂಖ್ಯೆ 1990ರಲ್ಲಿ 6,930ಕ್ಕೆ ಏರಿದೆ. 1970ರಲ್ಲಿ ರಕ್ಷಿತ ಪ್ರದೇಶಗಳ ವಿಸ್ತಾರವು 164 ಮಿಲಿಯ ಹೆಕ್ಟೇರುಗಳಷ್ಟಿತ್ತು. 1990ರಲ್ಲಿ ಅದು 652 ಮಿಲಿಯ ಹೆಕ್ಟೇರುಗಳಷ್ಟಾಗಿದೆ. ಭೂಪ್ರದೇಶದ ಸುಮಾರು 4.9ರಷ್ಟು ಪ್ರದೇಶವು ಈಗ ರಕ್ಷಿತ ಪ್ರದೇಶವಾಗಿದೆ.

ಸಸ್ಯಗಳ ಅನುವಂಶೀಯ ಸಂಪನ್ಮೂಲಗಳನ್ನು ರಕ್ಷಿಸಲು ಅಂತಾರಾಷ್ಟ್ರೀಯ ಸಮಿತಿ ರಚನೆಯಾಗಿದೆ. ಇದು ಮುಖ್ಯ ಬೆಳೆಗಳಾದ ಗೋದಿ, ಜೋಳ, ಭತ್ತ ಮುಂತಾದವುಗಳ ಅನುವಂಶೀಯ ವೈವಿಧ್ಯವನ್ನು ರಕ್ಷಿಸಲು ತಾಂತ್ರಿಕ ನೆರವು ಮತ್ತು ಆರ್ಥಿಕ ಬೆಂಬಲ ನೀಡುತ್ತಿದೆ. ಈಗಾಗಲೇ ಬಿತ್ತನೆ ಬೀಜಗಳ ಬ್ಯಾಂಕ್ ಸಿದ್ಧವಾಗಿದೆ. ಅಲ್ಲದೆ ಆಯ್ದ ತಳಿಗಳ ರಕ್ಷಣೆಯೂ ನಡೆಯುತ್ತಿದೆ. ವಲಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಗಳಲ್ಲಿನ ವೈವಿಧ್ಯವನ್ನು ಸಂರಕ್ಷಿಸುವ ಕೌಶಲವನ್ನು ಜನರಿಗೆ ಕಲಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ವಿಶ್ವವನ್ಯನಿಧಿ ಸಂಸ್ಥೆ (W W F) ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಮತ್ತು ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸಂಘ (IUCN)ಗಳು ಜೈವಿಕ ವೈವಿಧ್ಯದ ಸಂರಕ್ಷಣೆಗಾಗಿ ಕೆಲವು ಸ್ಪಷ್ಟವಾದ ಉದ್ದೇಶಗಳನ್ನು ಗುರುತಿಸಿ ವಿಶ್ವ ಸಂರಕ್ಷಣಾ ತಂತ್ರವನ್ನು ರೂಪಿಸಿವೆ. ಅದರ ಮೂರು ಮುಖ್ಯ ಉದ್ದೇಶಗಳು ಹೀಗಿವೆ: i) ಅಗತ್ಯವಾದ ಪರಿಸರ ಪ್ರಕ್ರಿಯೆಗಳನ್ನು ಮತ್ತು ಜೀವಿಗಳಿಗೆ ಅಗತ್ಯವಿರುವ ವ್ಯವಸ್ಥೆಗಳನ್ನು ರಕ್ಷಿಸುವುದು; ii) ಅನುವಂಶೀಯ ವೈವಿಧ್ಯವನ್ನು ಸಂರಕ್ಷಿಸುವುದು; ಮತ್ತು iii) ಪ್ರಭೇದ ಮತ್ತು ಪರಿಸರ ವ್ಯವಸ್ಥೆಗಳ ಸುಸ್ಥಿರ ಬಳಕೆಯನ್ನು ಖಾತ್ರಿಗೊಳಿಸುವುದು. 1991ರ ಅಕ್ಟೋಬರ್‌ನಲ್ಲಿ IUCN, UNEP ಮತ್ತು W W F ಸಂಸ್ಥೆಗಳು ಜಂಟಿಯಾಗಿ `ಭೂಮಿಯ ರಕ್ಷಣೆಗಾಗಿ‘ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. 50ಕ್ಕಿಂತ ಹೆಚ್ಚು ರಾಷ್ಟ್ರಗಳು ತಮ್ಮ ಜೀವ ಸಂಪನ್ಮೂಲಗಳ ರಕ್ಷಣೆಗಾಗಿ ವಿಶ್ವ ಸಂರಕ್ಷಣಾ ತಂತ್ರವನ್ನು ಅಳವಡಿಸಿಕೊಂಡಿರುವುದು ಸಂತಸದ ವಿಷಯ. ಸಂರಕ್ಷಣೆ ಹಾಗೂ ಆರ್ಥಿಕ ಅನುಕೂಲಗಳೆರಡನ್ನು ಈ ತಂತ್ರ ಒಳಗೊಂಡಿರುವುದರಿಂದ ಯಶಸ್ವಿಯ ಸಾಧ್ಯತೆ ಹೆಚ್ಚಿದೆ.

ಜೈವಿಕ ವೈವಿಧ್ಯದ ಸಂರಕ್ಷಣೆಯ ಎಲ್ಲ ಸಮಸ್ಯೆ ಮತ್ತು ಮಾರ್ಗಗಳನ್ನು ಅರಿಯಲು ವಿಶ್ವದ ಅನೇಕ ಸಂಸ್ಥೆಗಳು ಸೇರಿ ಜಾಗತಿಕ ತಂತ್ರವನ್ನು ರೂಪಿಸಿವೆ. ಇದರ ಸಂಸ್ಥೆಗಳಲ್ಲಿ W W F, IUCN, UNEP, ವಿಶ್ವಬ್ಯಾಂಕ್, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಸೇರಿವೆ. ಅವುಗಳ ಗುರಿ ಹೀಗಿದೆ:

1) ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಮತ್ತು ಆದ್ಯತೆಗಳನ್ನು ಒಪ್ಪಿಕಾರ್ಯ- ವೆಸಗುವುದು.

2) ಜೈವಿಕ ವೈವಿಧ್ಯದ ಸಂರಕ್ಷಣೆಗೆ ಅಡ್ಡಬರುವ ಸಮಸ್ಯೆಗಳನ್ನು ಪರಿಶೀಲಿಸುವುದು ಮತ್ತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಲುವುಗಳನ್ನು ಅಗತ್ಯಕ್ಕೆ ತಕ್ಕನಾಗಿ ಮಾರ್ಪಡಿಸುವುದು

3) ಜೈವಿಕ ಸಂಪನ್ಮೂಲಗಳ ರಕ್ಷಣೆಯು ಅಭಿವೃದ್ದಿಯ ಜೊತೆಗೆ ಪರಿಣಾಮಕಾರಿಯಾಗಿ ಹೊಂದಿಕೊಳ್ಳುವಂತೆ ಮಾಡುವುದು. ಮಾನವೀಯತೆಗೂ, ಜೈವಿಕ ವೈವಿಧ್ಯಕ್ಕೂ ಇರುವ ಸಂಬಂಧವನ್ನು ಅರಿಯಲು ಪ್ರಯತ್ನಿಸುವುದು.

4) ಜೈವಿಕ ವೈವಿಧ್ಯದ ಸಂರಕ್ಷಣೆಗಾಗಿ ವಲಯ ಮಟ್ಟದ ಹಾಗೂ ರಾಷ್ಟ್ರಮಟ್ಟದ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳ ಜಾರಿಗೆ ಪ್ರೋನೀಡುವುದು.

 

ಸಿಸ್ಟಮ್ಯಾಟಿಕ್ಸ್ ಅಜೆಂಡ 2000

ಭೂಮಿಯಲ್ಲಿರುವ ಎಲ್ಲ ಜೀವಿಗಳನ್ನು ಮಾನವ ಕಲ್ಯಾಣದ ದೃಷ್ಟಿಯಿಂದ ರಕ್ಷಿಸುವ ಅಗತ್ಯವಿದೆ. ಈ ಅರಿವನ್ನು ಎಲ್ಲ ಶ್ರೀಸಾಮಾನ್ಯರಲ್ಲಿ, ರಾಷ್ಟ್ರಗಳಲ್ಲಿ ಮೂಡಿಸುವುದು ಇಂದಿನ ಆದ್ಯ ಕರ್ತವ್ಯವಾಗಿದೆ. ಪ್ರತಿ ರಾಷ್ಟ್ರವೂ ಸಹ ಅದರ ಗಡಿಯೊಳಗೆ ಇರುವ ಪ್ರಭೇದಗಳನ್ನು ರಕ್ಷಿಸುವ ಜವಾಬ್ದಾರಿ ಹೊರಬೇಕು. ಆದರೆ ಈ ಪ್ರಯತ್ನವು ಜಾಗತಿಕ ಪ್ರಯತ್ನವಾಗಬೇಕು. ಶ್ರೀಮಂತ ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಈ ಉದ್ದೇಶಕ್ಕಾದರೂ ಪರಸ್ಪರ ಸಹಕಾರ, ಸಹಾಯ ಬರುವಂತಾಗಬೇಕು.

21ನೇ ಶತಮಾನದಲ್ಲಿ ಕೃಷಿ, ಕೈಗಾರಿಕೆ ಹಾಗೂ ಔಷಧ ಉತ್ಪನ್ನಗಳಲ್ಲಿ ಸೇಕಡಾ 40ರಷ್ಟು ಉತ್ಪನ್ನಗಳು ಜೀವ ತಂತ್ರಜ್ಞಾನದ ಕೊಡುಗೆಯಿಂದ ಬಂದವುಗಳಾಗಿರುತ್ತವೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಜೀವ ತಂತ್ರಜ್ಞಾನದ ನಿರಂತರ ಪ್ರಗತಿಗೆ ಜೈವಿಕ ವೈವಿಧ್ಯ ಅತ್ಯಗತ್ಯ. ಅದರ ಅಡಿಪಾಯದ ಮೇಲೆ ಜೀವ ತಂತ್ರಜ್ಞಾನ ಉಳಿಯಲು, ಬೆಳೆಯಲು ಸಾಧ್ಯ. ಆದರೆ ಜನಸಂಖ್ಯಾ ಸ್ಪೋಟ, ಅತಿ ಬಳಕೆ, ಅರಣ್ಯ ನಾಶ, ಮಾಲಿನ್ಯ, ಜಾಗತಿಕ ಉಷ್ಣತೆ, ಮರುಭೂಮಿಯ ವಿಸ್ತರಣೆ ಮುಂತಾದ ಕಾರಣಗಳಿಂದ ಜೈವಿಕ ವೈವಿಧ್ಯದ ಮೇಲೆ ಅಪಾರ ಒತ್ತಡ ಉಂಟಾಗಿದೆ. ಆದ್ದರಿಂದ ಹಾಲಿ ಇರುವ ಜೈವಿಕ ವೈವಿಧ್ಯವನ್ನು ತಿಳಿಯುವ, ದಾಖಲಿಸುವ, ರಕ್ಷಿಸುವ ಉದ್ದೇಶದಿಂದ ವಿಜ್ಞಾನಿಗಳು `ಸಿಸ್ಟಮಾಟಿಕ್ಸ್ ಅಜೆಂಡ 2000’ (Systamatics agenda 2000) ಎಂಬ ವಿನೂತನ ಕಾರ್ಯಯೋಜನೆಯನ್ನು ಆರಂಭಿಸಿದ್ದಾರೆ. ಇದರ ಮೂರು ಮುಖ್ಯ ಧ್ಯೇಯಗಳು ಹೀಗಿವೆ:

i) ಜೈವಿಕ ವೈವಿಧ್ಯದ ಸಂಶೋಧನೆ, ಪ್ರಭೇದಗಳ ವಿವರಣೆ ಮತ್ತು ವರ್ಗೀಕರಣ.

ii) ಜೈವಿಕ ವೈವಿಧ್ಯದ ಸಂಪತ್ತನ್ನು ಸಂಶೋಧನೆ ಮತ್ತು ಬಳಕೆಗೆ ವ್ಯವಸ್ಥಿತವಾಗಿ ನಿರ್ವಹಿಸುವುದು.

iii) ಜೈವಿಕ ವೈವಿಧ್ಯದ ವಿಕಾಸ, ಪರಿಸರ ಅಧ್ಯಯನ, ಅವುಗಳ ನಡುವಿನ ಸಂಬಂಧ ಮುಂತಾದವನ್ನು ಅರ್ಥಮಾಡಿಕೊಳ್ಳುವುದು.

ಮೇಲಿನ ಧ್ಯೇಯಗಳನ್ನು ಜಾರಿಗೊಳಿಸುವುದರ ಉದ್ದೇಶಗಳು ಹೀಗಿವೆ:

1. ಜೈವಿಕ ವೈವಿಧ್ಯದ ಜ್ಞಾನವನ್ನು ಜನರ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳಲ್ಲಿ ಬಳಸುವುದು.

2. ಜೀವ ತಂತ್ರಜ್ಞಾನದಲ್ಲಿ ಜೈವಿಕ ವೈವಿಧ್ಯವನ್ನು ವಿವೇಚನಾ ಪೂರ್ಣವಾಗಿ ಬಳಸುವುದು.

3. ಜೀವ ತಂತ್ರಜ್ಞಾನವನ್ನು ಕೃಷಿ, ಮೀನುಗಾರಿಕೆ ಮತ್ತು ಅರಣ್ಯಾಧರಿತ ಕೈಗಾರಿಕೆಗಳಲ್ಲಿ ಬಳಸುವುದು.

4. ಜೀವಿಗಳನ್ನು ಸಂರಕ್ಷಿಸುವುದು ಹಾಗೂ ಜೀವಾವಾಸಗಳನ್ನು ನಿರ್ವಹಿಸುವುದು.

ಜೈವಿಕ ವೈವಿಧ್ಯದ ಪ್ರಾಮುಖ್ಯತೆಯಿಂದ ಜೈವಿಕ ವೈವಿಧ್ಯ ವಿಜ್ಞಾನ (Bio-diversity Science) ಎಂಬ ವಿಜ್ಞಾನ ಕ್ಷೇತ್ರವೇ ಆರಂಭವಾಗಿದೆ. ವಿವಿಧ ಜೀವ ಪ್ರಭೇದಗಳ ಪೂರ್ಣಜ್ಞಾನ, ಅವುಗಳ ಸಂರಕ್ಷಣೆ ಹಾಗೂ ವಿವೇಚನಾಪೂರ್ಣ ಬಳಕೆಯನ್ನು ಈ ವಿಜ್ಞಾನ ಶಾಖೆಯಲ್ಲಿ ಅಧ್ಯಯನ ಮಾಡುವರು. ಮುಂಬರುವ ದಿನಗಳಲ್ಲಿ ಈ ವಿಜ್ಞಾನ ಶಾಖೆಯು ಮಹತ್ವದ ಸ್ಥಾನ ಪಡೆಯಲಿದೆ.

 

ಭಾರತದ ಮಾರ್ಗ ಯಾವುದು?

ನಮ್ಮ ದೇಶದ ಬಾಸುಮತಿ ಅಕ್ಕಿಯನ್ನು `ಟೆಕ್ಸ್‌ಮತಿ‘ ಎಂಬ ಹೆಸರಿನಲ್ಲಿ ಅಮೇರಿಕದವರು ಸ್ವಾಮ್ಯ ಹಕ್ಕನ್ನು ಸ್ಥಾಪಿಸಿಕೊಂಡಿದ್ದಾರೆ. ನಮ್ಮ ಬೇವಿನ ಮರದ ಎಲ್ಲ ಗುಣಧರ್ಮಗಳನ್ನು ಡಬ್ಲ್ಯು.ಆರ್. ಗ್ರೇಸ್ ರವರು ತಮ್ಮ ಹಕ್ಕನ್ನಾಗಿ ಸನ್ನದು ಪಡೆದಿದ್ದಾರೆ. ವಿದೇಶಿ ಔಷಧ ಕಂಪೆನಿಗಳು, ಸಂಶೋಧನಾ ಸಂಸ್ಥೆಗಳು ಒಂದಲ್ಲಾ ಒಂದು ರೂಪದಲ್ಲಿ ನಮ್ಮ ದೇಶದ ಜೈವಿಕ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದಾರೆ, ಮಾಡುತ್ತಿದ್ದಾರೆ. ಭಾರತದಲ್ಲಿ ಹುಟ್ಟಿ ಅಮೇರಿಕದಲ್ಲಿ ವಾಸವಾಗಿರುವ ಇಬ್ಬರು ವಿಜ್ಞಾನಿಗಳು ನಮ್ಮ ದೇಶದ ಅರಿಶಿಣದ ಗುಣಲಕ್ಷಣಗಳನ್ನೂ ತಮ್ಮದನ್ನಾಗಿ ಮಾಡಿಕೊಂಡಿದ್ದರು. ಭಾರತದ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯು (CSIR) ಈ ಸ್ವಾಮ್ಯ ಹಕ್ಕಿನ (patent) ವಿರುದ್ದ ಕಾನೂನು ಹೋರಾಟ ನಡೆಸಿತು. ಸಹಸ್ರಾರು ವರ್ಷಗಳಿಂದ ನಮ್ಮ ಪೂರ್ವಿಕರು ಅರಿಶಿಣವನ್ನು ಔಷಧವನ್ನಾಗಿ, ಪೂತಿನಾಶಕವನ್ನಾಗಿ ಬಳಸುತ್ತಿದ್ದುದನ್ನು ವಿವಿಧ ದಾಖಲೆಗಳನ್ನು ಒದಗಿಸಿ ವಾದವನ್ನು ಮಂಡಿಸಿತು. ಅದೃಷ್ಟವಶಾತ್ ಅಮೇರಿಕದ ಸ್ವಾಮ್ಯಹಕ್ಕಿನ ಸಂಸ್ಥೆಯು CSIRನ ವಾದವನ್ನು ಅಂಗೀಕರಿಸಿ ಆ ಮೋಸಗಾರ `ವಿಜ್ಞಾನಿ‘ಗಳಿಗೆ ನೀಡಿದ ಸ್ವಾಮ್ಯ ಹಕ್ಕನ್ನು ನಿಷೇಧಿಸಿತು.

ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಪ್ರಪ್ರಥಮವಾಗಿ ನಮ್ಮ ದೇಶದಿಂದ ಜೈವಿಕ ವೈವಿಧ್ಯ ಲೂಟಿಯಾಗುತ್ತಿರುವುದನ್ನು ತಡೆಗಟ್ಟಬೇಕು. ಸಹಸ್ರಾರು ವರ್ಷಗಳಿಂದ ಬಂದಿರುವ ನಮ್ಮ ಜಾನಪದದ ಜ್ಞಾನವನ್ನು ದಾಖಲು ಮಾಡಬೇಕು. ಆಯುರ್ವೇದ, ಯುನಾನಿ, ನಾಟಿ ಔಷಧ ಪದ್ದತಿಗಳಲ್ಲಿ ಬಳಸುವ ಗಿಡಮೂಲಿಕೆಗಳ ವಿವರವನ್ನು ಸಂಗ್ರಹಿಸಿ `ಸಾಮೂಹಿಕ ಭೌದ್ದಿಕ ಹಕ್ಕು‘ನ್ನು ದಾಖಲಿಸಿ, ಸ್ವಾಮ್ಯ ಹಕ್ಕನ್ನು ಸ್ಥಾಪಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ಕೃಷಿ, ಔಷಧ, ಕೈಗಾರಿಕೆಗಳ ಬಗ್ಗೆ ಪ್ರಭೇದಗಳಿಂದ ಬರುವ ಅನುಕೂಲಗಳನ್ನು ಜನರಿಂದ ಸಂಗ್ರಹಿಸಿ, ದಾಖಲಿಸಬೇಕು. ಈಗಾಗಲೇ ಭಾರತದಿಂದ ವಿದೇಶಗಳಿಗೆ ಹೋಗಿ, ಆ ಜನರ, ದೇಶದಿಂದ ಸ್ವಾಮ್ಯಹಕ್ಕು ಸ್ಥಾಪಿಸಲಾಗಿದ್ದರೆ, ಅದರ ವಿರುದ್ಧ ಕಾನೂನು ಹೋರಾಟ ಮತ್ತು ಅಂತಾರಾಷ್ಟ್ರೀಯ ಒತ್ತಡ ನಿರ್ಮಿಸಿ ನಮ್ಮ ಹಕ್ಕನ್ನು ಸ್ಥಾಪಿಸಿಕೊಳ್ಳಬೇಕು. ಜೈವಿಕ ವೈವಿಧ್ಯದ ವಿಶ್ವ ಸಮಾವೇಶದ ಧ್ಯೇಯಗಳನ್ನು ಪ್ರಾಮಾಣಿಕವಾಗಿ ಜಾರಿಮಾಡಬೇಕು.

ಎರಡನೆಯದಾಗಿ ನಮ್ಮ ದೇಶದಲ್ಲಿರುವ ಜೈವಿಕ ವೈವಿಧ್ಯದ ಸಮಗ್ರ ವಿವರಗಳನ್ನು ಸಂಗ್ರಹಿಸಬೇಕು. ಸಹಸ್ರಾರು ಪ್ರಭೇದಗಳನ್ನು ನಾವು ಇನ್ನೂ ಗುರುತಿಸಬೇಕಿದೆ, ಹೆಸರಿಸಬೇಕಿದೆ. ಅವುಗಳ ಜೀವನ ಚರಿತ್ರೆಯನ್ನು, ಪ್ರಕೃತಿಯಲ್ಲಿ ಅವುಗಳ ಪಾತ್ರವನ್ನು ಮತ್ತು ಮಾನವನ ಕಲ್ಯಾಣಕ್ಕೆ ಅವುಗಳಿಂದಾಗಬಹುದಾದ ಕೊಡುಗೆಯನ್ನು ತಿಳಿಯಬೇಕಿದೆ. ಇದು ಒಬ್ಬರಿಂದ, ಒಂದು ತಂಡದಿಂದ ಆಗುವ ಕಾರ್ಯವಲ್ಲ. ಬಹುಶಃ ಸಹಸ್ರಾರು ಜನರಿಂದ, ಸ್ಥಳೀಯರಿಂದ, ಮಹಿಳೆಯರಿಂದ, ಗಿರಿಜನ, ಬುಡಕಟ್ಟು ಜನರಿಂದ ಹಾಗೂ ವಿಜ್ಞಾನಿಗಳಿಂದ ಆಗಬೇಕಾದ ಕೆಲಸ.

ನಮ್ಮ ರಾಷ್ಟ್ರದ ಪ್ರಖ್ಯಾತ ಪರಿಸರ ತಜ್ಞರಾದ ಡಾ. ಮಾಧವ ಗಾಡ್ಗೀಲ್‌ರವರು ಇತ್ತೀಚೆಗೆ ಪಶ್ಚಿಮ ಘಟ್ಟಗಳ ಜೈವಿಕ ವೈವಿಧ್ಯವನ್ನು ಅಧ್ಯಯನ ಮಾಡಿದ್ದು ಒಂದು ವಿಶೇಷ ಸಂಗತಿ. ಘಟ್ಟ ಪ್ರದೇಶಗಳಲ್ಲಿರುವ ಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ, ಅವರ ಮೂಲಕ ಜೈವಿಕ ವೈವಿಧ್ಯದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅದೇ ರೀತಿಯ ಪ್ರಯೋಗ ದಕ್ಷಿಣ ಕನ್ನಡ ಜಿಲ್ಲೆಯ ಮಾಳ ಗ್ರಾಮ ಪಂಚಾಯಿತಿಯಲ್ಲಿಯೂ ನಡೆದಿದೆ. ಗ್ರಾಮ ಪಂಚಾಯಿತಿ ಪ್ರದೇಶದಲ್ಲಿರುವ ಎಲ್ಲ ಪ್ರಭೇದಗಳ ವಿವರ, ಅವುಗಳ ಔಷಧೀಯ ಬಳಕೆ, ಉಪಯೋಗ ಮುಂತಾದ ವಿವರಗಳನ್ನು ಸಂಗ್ರಹಿಸಿ, ವೈಜ್ಞಾನಿಕ ಮಾಹಿತಿಯನ್ನು ವ್ಯವಸ್ಥಿತವಾಗಿ ದಾಖಲಿಸಲಾಗಿದೆ. ಮುಂದೆ ಇದೇ ರೀತಿ ಭಾರತದ ಎಲ್ಲ ಪಂಚಾಯಿತಿಗಳಲ್ಲಿ ಜೈವಿಕ ವೈವಿಧ್ಯದ ಮಾಹಿತಿಯನ್ನು ಸಂಗ್ರಹಿಸಬೇಕು. ಹೀಗೆ ನಾವು ನಮ್ಮ ದೇಶದ ಪೂರ್ಣ ಜೈವಿಕ ಮಾಹಿತಿ ಕೋಶವನ್ನು ಸಿದ್ಧಪಡಿಸಬೇಕು. ಈ ದಿಶೆಯಲ್ಲಿ ಭಾರತದ ಸಸ್ಯ ಸರ್ವೇಕ್ಷಣೆ (BSI) ಪ್ರಾಣಿಸರ್ವೇಕ್ಷಣೆ (ZSI) ಮತ್ತು CSIRನ ಪ್ರಯೋಗಾಲಯಗಳು, ಪರಿಸರ ಇಲಾಖೆ, ವಿಜ್ಞಾನ ಇಲಾಖೆ ಮಾಡಿರುವ ಕೆಲಸ ಶ್ಲಾಘನೀಯ.

ಇಂತಹ ಕೆಲಸಗಳಿಗೆ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಮುಂದಾಗಬೇಕು. ಅವಕ್ಕೆ ಬೇಕಾದ ತರಬೇತಿ ಮತ್ತು ಆರ್ಥಿಕ ಬೆಂಬಲವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೀಡಬೇಕು. ಒಮ್ಮೆ ಮಾಹಿತಿ ಕೋಶ ಸಿದ್ಧವಾದ ತಕ್ಷಣ ಆ ಜೈವಿಕ ವೈವಿಧ್ಯ ಹಾಗೂ ಅದರ ಉಪಯೋಗದ ಜ್ಞಾನವನ್ನು ನೋಂದಾಯಿಸಿ ಸ್ವಾಮ್ಯ ಹಕ್ಕನ್ನು ಸ್ಥಾಪಿಸಿಕೊಳ್ಳಬೇಕು.

ಮೂರನೆಯದಾಗಿ ನಮ್ಮ ದೇಶದಲ್ಲಿ ವಿಶಿಷ್ಟ ಪರಿಸರ ವ್ಯವಸ್ಥೆಗಳನ್ನು, ಜೀವಾವಾಸಗಳನ್ನು ರಕ್ಷಿತ ಪ್ರದೇಶಗಳೆಂದು ಘೋಷಿಸಬೇಕು. ನಮ್ಮಲ್ಲಿ ಸುಮಾರು 27ರಷ್ಟು ಭೂ ಪ್ರದೇಶವನ್ನು ರಾಷ್ಟ್ರೀಯ ವನ ಅಥವಾ ಅರಣ್ಯ ಧಾಮಗಳೆಂದು ಘೋಷಿಸಿದ್ದೇವೆ. ಇವು ಪ್ರಕೃತಿಯ ಪ್ರಯೋಗಾಲಯಗಳು, ಜೈವಿಕ ವೈವಿಧ್ಯದ ಆಗರಗಳು ಆಗಿರುವುದರಿಂದ ಅವುಗಳನ್ನು ಪೂರ್ಣವಾಗಿ ರಕ್ಷಿಸುವ ಜವಾಬ್ದಾರಿ ಎಲ್ಲ ಭಾರತೀಯರಿಗೆ ಸೇರಿದ ವಿಚಾರ. ವಿಶ್ವದ 18 ಅಗ್ರತಾಣಗಳಲ್ಲಿ ಎರಡು ನಮ್ಮ ದೇಶದಲ್ಲಿವೆ. ಅಲ್ಲಿನ ಜೈವಿಕ ವೈವಿಧ್ಯದ ಅಧ್ಯಯನ ಹಾಗೂ ಸಂರಕ್ಷಣೆಗೆ ಪ್ರಾಶಸ್ತ್ಯ ನೀಡಬೇಕು. ಬೆಳೆಗಳ ಕಾಡು ತಳಿಗಳನ್ನು ಗುರುತಿಸಿ ಕಾಪಾಡಬೇಕು. ಕಣ್ಣಿಗೆ ಕಾಣುವ ಸಸ್ತನಿ, ಪ್ರಾಣಿ, ಮರಗಳ ಜೊತೆಗೆ ಎಲ್ಲ ರೀತಿಯ ಸೂಕ್ಷ್ಮಜೀವಿಗಳ ವಾಸಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಆಯುರ್ವೇದ, ಕೈಗಾರಿಕೆ, ಔಷಧದ ಉದ್ಯಮಕ್ಕೆಂದು ಅತಿಬಳಕೆಯಾಗುತ್ತಿರುವ ಪ್ರಭೇದಗಳನ್ನು ರಕ್ಷಿಸಬೇಕು. ರಕ್ಷಣೆಗೆ ಉನ್ನತ ತಂತ್ರಜ್ಞಾನವನ್ನೂ ಬಳಸಿಕೊಳ್ಳಬೇಕು.

ನಾಲ್ಕನೆಯದಾಗಿ ವಿನಾಶದ ಅಂಚಿನಲ್ಲಿರುವ ಜೀವಿಗಳನ್ನು ರಕ್ಷಿತ ಜೀವಿಗಳೆಂದು ಘೋಷಿಸಿ ಸಂರಕ್ಷಿಸಬೇಕು. ಭಾರತದಲ್ಲಿ 2000 ಪ್ರಭೇದಗಳ ಸಸ್ಯಗಳು ವಿನಾಶದ ಅಂಚಿನಲ್ಲಿವೆ. ಕೆಲವನ್ನು ರಾಷ್ಟ್ರ ಪ್ರಾಣಿ, ರಾಷ್ಟ್ರ ಸಸ್ಯ, ರಾಷ್ಟ್ರ ಹೂ, ರಾಜ್ಯಪ್ರಾಣಿ, ಸಸ್ಯ, ಹೂ ಎಂದು ಘೋಷಿಸಿ ರಕ್ಷಿಸುವ ಕಾರ್ಯವಾಗಬೇಕು. ಮಿಕ್ಕ ಪ್ರಭೇದಗಳ ರಕ್ಷಣೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅವಲ್ಲದೆ ಜೈವಿಕ ವೈವಿಧ್ಯದ ಎಲ್ಲ ಅನುವಂಶೀಯ ಸಂಪನ್ಮೂಲಗಳನ್ನು ನಾವು ಜೀವ ದ್ರವ್ಯ (ಜರ್ಮ್ ಪ್ಲಾಸಮ್ Germplasm) ಬ್ಯಾಂಕ್, ಜೀನ್ ಬ್ಯಾಂಕ್, ಬಿತ್ತನೆ ಬೀಜದ ಬ್ಯಾಂಕ್, ಊತಕಗಳ ಬ್ಯಾಂಕ್, ಜೀವಕೋಶಗಳ ಬ್ಯಾಂಕ್‌ಗಳನ್ನು ಸ್ಥಾಪಿಸುವ ಮೂಲಕ ರಕ್ಷಿಸಬೇಕು. ಭಾರತ ಕೃಷಿ ವಿಶ್ವವಿದ್ಯಾಲಯಗಳು, ಭಾರತದ ಕೃಷಿ ಸಂಶೋಧನಾ ಸಂಸ್ಥೆಯ ಅಂಗ ಸಂಸ್ಥೆಗಳು ಮುಂತಾದವು ಈಗಾಗಲೇ ಈ ದಿಶೆಯಲ್ಲಿ ಕಾರ್ಯಪ್ರವೃತ್ತವಾಗಿವೆ. ಅವುಗಳೆಲ್ಲದರ ಪ್ರಯತ್ನ ಪುನರಾವೃತ್ತಿ ಹಾಗೂ ಅಪೂರ್ಣವಾಗುವ ಸಾಧ್ಯತೆ ಇದೆ. ಇವುಗಳ ಸಂಶೋಧನೆಗೆ, ದಾಖಲೆಗೆ ಒಂದು ಸಮನ್ವಯವಿರುವಂತೆ ಮತ್ತು ನಿಗಧಿತ ವೇಳೆಯಲ್ಲಿ ಪೂರ್ಣವಾಗುವಂತೆ ನೋಡಿಕೊಳ್ಳಬೇಕು. ಧಾನ್ಯಗಳ, ಅವುಗಳ ವಿವಿಧ ತಳಿಗಳ, ಕಾಡುಜಾತಿಗಳ ಹಾಗೂ ಬೆಳೆಗಳ ಮಧ್ಯೆಯೇ ಬೆಳೆಯುವ ಕಳೆಗಿಡಗಳ ಜೀನ್ ಬ್ಯಾಂಕ್‌ಗಳನ್ನು ನಿರ್ಮಿಸಬೇಕು.

ಕೊನೆಯದಾಗಿ ಹಾಗೂ ಬಹಳ ಮುಖ್ಯವಾಗಿ ನಮ್ಮ ರಾಷ್ಟ್ರವು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ಕೃಷ್ಟ ಸಂಶೋಧನೆಗಳನ್ನು ಮಾಡುವಂತಾಗಬೇಕು. ಆದಷ್ಟು ಎಲ್ಲ ಶ್ರೀಮಂತ ರಾಷ್ಟ್ರಗಳಿಗೆ ಹಾಗೂ ಜೀವ ತಂತ್ರಜ್ಞಾನದಲ್ಲಿ ಮುಂದುವರೆದ ರಾಷ್ಟ್ರಗ9ಳಿಗೆ ಸರಿಸಮನಾದ ಸಂಶೋಧನೆ ನಮ್ಮಲ್ಲಿರು- ವಂತಾಗಬೇಕು. ನಮ್ಮ ಜನರಿಗೆ ಅಗತ್ಯವಾದ, ನಮ್ಮ ಮಣ್ಣಿನಲ್ಲಿ ಬೆಳೆದು ಅಧಿಕ ಇಳುವರಿ ನೀಡುವ ಹಾಗೂ ರೋಗಗಳಿಗೆ ಪ್ರತಿರೋಧವಿರುವ ಬಿತ್ತನೆ ಬೀಜಗಳನ್ನು ನಮ್ಮ ವಿಜ್ಞಾನಿಗಳೇ ಸಿದ್ಧಪಡಿಸುವಂತಿರಬೇಕು. ಇಲ್ಲವಾದಲ್ಲಿ ನಾವು ಬಿತ್ತನೆ ಬೀಜಕ್ಕಾಗಿ ಬಹುರಾಷ್ಟ್ರೀಯ ಕಂಪನಿಗಳನ್ನು ಅವಲಂಬಿಸ- ಬೇಕಾಗುವುದು. ಶ್ರೀಮಂತ ರಾಷ್ಟ್ರಗಳನ್ನು ಅಂಗಲಾಚಬೇಕಾಗುವುದು. ಅವರ ಕರುಣೆ ಇದ್ದರೆ ನಮ್ಮಲ್ಲಿ ಬೆಳೆ-ಆಹಾರ ಸಾಧ್ಯವಾಗುವುದು. ಅವರ ಮಾತು ಕೇಳದೆ ಹೋದರೆ, ಅವರು ನಮಗೆ ಉತ್ತಮ ಬಿತ್ತನೆ ಬೀಜಗಳನ್ನು ನಿರಾಕರಿಸಬಹುದು. ಒಂದು ವೇಳೆ ನಮ್ಮ ರಾಷ್ಟ್ರವು ಬಾಹ್ಯಾಕಾಶ ವಿಜ್ಞಾನ ಹಾಗೂ ಪರಮಾಣು ವಿಜ್ಞಾನದಲ್ಲಿ ಉನ್ನತಿಯನ್ನು ಸಾಧಿಸದೆ ಹೋಗಿದ್ದಲ್ಲಿ ಶ್ರೀಮಂತ ರಾಷ್ಟ್ರಗಳ ಮರ್ಜಿಗೆ ಒಳಗಾಗ- ಬೇಕಿತ್ತಲ್ಲವೇ? ದೂರದರ್ಶನಕ್ಕೂ ವಿದೇಶಗಳನ್ನು ಅವಲಂಬಿಸಬೇಕಿತ್ತಲ್ಲವೇ? ಅದೇ ರೀತಿ ಮುಂಬರುವ ದಿನಗಳಲ್ಲಿ ಜೀವ ತಂತ್ರಜ್ಞಾನದಲ್ಲಿ ನಾವು ಉನ್ನತಿ ಸಾಧಿಸದಿದ್ದಲ್ಲಿ ನಾವು ಜೀವ ತಂತ್ರಜ್ಞಾನವಿರುವ ದೇಶಗಳ ಕೈಗೊಂಬೆಗಳಾಗಬೇಕಾಗುತ್ತದೆ. ಪ್ರಕೃತಿಯ ಆಶೀರ್ವಾದದಿಂದ, ಇಲ್ಲಿನ ವಿಶಿಷ್ಟ ವಾತಾವರಣದಿಂದ ನಮ್ಮ ದೇಶವು ಜೈವಿಕ ವೈವಿಧ್ಯದಲ್ಲಿ ಸಂಪದ್ಭರಿತವಾಗಿದೆ. ಇಲ್ಲಿ ಉತ್ತಮ ಪ್ರತಿಭೆಯಿರುವ ವಿಜ್ಞಾನಿಗಳೂ ಇದ್ದಾರೆ. ಪ್ರತಿಭಾವಂತ ಯುವಕರೂ ಇದ್ದಾರೆ. ಅವರಿಗೆ ಉತ್ತಮ ಅವಕಾಶ, ಪ್ರೋಬೆಂಬಲಗಳನ್ನು ನೀಡಿದರೆ ಅಭಿವೃದ್ದಿಶೀಲ ರಾಷ್ಟ್ರಗಳ ಪೈಕಿ ಭಾರತವು ಜೀವತಂತ್ರಜ್ಞಾನದಲ್ಲಿ ಉನ್ನತಿ ಸಾಧಿಸಿದ ಮೊದಲ ದೇಶವಾಗಬಲ್ಲದು. ಆಗ ನಮ್ಮ ಜೈವಿಕ ವೈವಿಧ್ಯದ ಸಂರಕ್ಷಣೆಯನ್ನು ಹಾಗೂ ಸುಸ್ಥಿರ ಬಳಕೆಯನ್ನು ಯಶಸ್ವಿಯಾಗಿಸುವುದರ ಜೊತೆಗೆ ಆಹಾರ ಉತ್ಪಾದನೆ, ಔಷಧ ಉತ್ಪಾದನೆ ಹಾಗೂ ಹೊಸ ಜೀವ ತಂತ್ರಜ್ಞಾನದ ವಸ್ತುಗಳ ಉತ್ಪಾದನೆಯಲ್ಲಿ ದಾಖಲೆ ಸ್ಥಾಪಿಸಬಹುದು. ಶ್ರೀಮಂತ ರಾಷ್ಟ್ರಗಳ ಏಕಸ್ವಾಮ್ಯವನ್ನು ಮುರಿದು ಮಾನವ ಕಲ್ಯಾಣಕ್ಕೆ ಉತ್ತಮ ಕೊಡುಗೆ ನೀಡಬಹುದು. ಯಾವುದೇ ರಾಷ್ಟ್ರದ ಅಥವಾ ಕಂಪನಿಗಳ ಒತ್ತಡಕ್ಕೆ ಮಣಿಯದೆ ಜೈವಿಕ ವೈವಿಧ್ಯದ ಗರಿಷ್ಠ ಬಳಕೆ ಎಲ್ಲ ಮಾನವರಿಗೂ ದೊರಕುವಂತೆ ಹಾಗೂ ಎಲ್ಲ ಜೀವಿಗಳ ಜೊತೆ ಮಾನವನು ಬದುಕಿ ಬಾಳುವಂತೆ ಮಾಡಬಹುದು.

* * *

 

ಪನಾಯಂ ತದಶ್ವಿನಾ ಕೃತಂ ವಾಂ
ವೃಷಭೋ ದಿವೋ ರಜುಸಃ ಪೃಥಿವ್ಯಾಃ
ಸಹಸ್ರಂ ಶಂ ಸಾ ಉತಯೇ ಗರಿಷ್ಠೌ
ಸರ್ವಾಂ ಇತ್ ತಾನ್ ಉಪಯಾತಾ ಪಿಬಧ್ಯೈ‘’

 

ಅಶ್ವಿನಿ ದೇವತೆಗಳಿಂದ ನಿರ್ಮಿತವಾದ ಈ ಪ್ರಪಂಚದಲ್ಲಿ ಜಲಚರ ಜಂತುಗಳಿವೆ (ಮೀನು ಮೊದಲಾದವು), ವ್ರೋಪ್ರಾಣಿಗಳಿವೆ (ಹಕ್ಕಿಗಳು), ಭೂಚರ ಜೀವಿಗಳಿವೆ (ಪಶು, ಮನುಷ್ಯ ಮೊದಲಾದವು). ಇವಕ್ಕೆಲ್ಲ ಈ ಭೂಮಿಯು ಸಮಾನವಾದ ಸುಖ ಸಾಮಗ್ರಿಯ ಭಂಡಾರ. ಯಾವ ಪ್ರಾಣಿಗಾಗಲಿ ತೊಂದರೆಯಾಗದಂತೆ ನಾವು ಬದುಕೋಣ. ಸಾವಿರಾರು ಪಶುಗಳು ಬಂದು ನೀರನ್ನು ಕುಡಿದು ತೃಪ್ತಿ ಪಡಲಿ, ಎಲ್ಲ ಪ್ರಾಣಿಗಳೂ ಈ ಲೋಕದಲ್ಲಿ ಸುಖವನ್ನು ಹೊಂದುವಂತಾಗಲಿ‘’

– (ಅಥರ್ವವೇದ)