ಇಂದಿನ ಸಮಾಜ ಕೈಗಾರಿಕಾ ಸಮಾಜ. ಜೀವಶಾಸ್ತ್ರದ ಒಂದು ಶಾಖೆಯಾದ ಜೀವತಂತ್ರಜ್ಞಾನ ಕಳೆದ ಕೆಲವು ದಶಕಗಳ ನೂತನ ಆವಿಷ್ಕಾರ. ಜೀವ ತಂತ್ರಜ್ಞಾನವು ಈಗಾಗಲೇ ಸಮಾಜದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದರಿಂದ ಅದು ಬರುವ ವರ್ಷಗಳಲ್ಲಿ ರಾಷ್ಟ್ರಗಳ, ವಿಜ್ಞಾನಿಗಳ ಹಾಗೂ ಸಮಾಜದ ಕೇಂದ್ರ ಬಿಂದುವಾಗಲಿದೆ. ಜೀವ ತಂತ್ರಜ್ಞಾನವು ಜೈವಿಕ ವೈವಿಧ್ಯದೊಡನೆ ನಿಕಟ ಸಂಬಂಧ ಹೊಂದಿರುವ ಕಾರಣ ಜೈವಿಕ ವೈವಿಧ್ಯದ ಸಂರಕ್ಷಣೆಯು ಪರಿಸರ ರಕ್ಷಣಾ ಚಳವಳಿಯ ಮೊದಲ ಆದ್ಯತೆಯಾಗಲಿದೆ.

ಪ್ರಕೃತಿಯಲ್ಲಿರುವ ಎಲ್ಲ ಜೀವ ಪ್ರಭೇದಗಳಿಗೂ ತಮ್ಮದೇ ಆದ ಮೌಲ್ಯ, ಪ್ರಾಮುಖ್ಯತೆ ಹಾಗೂ ಪಾತ್ರವಿರುತ್ತದೆ. ಆದರೆ ಮಾನವನು ತನ್ನ ಹಿತಾಸಕ್ತಿಯ ದೃಷ್ಟಿಯಿಂದ ಪ್ರಭೇದಗಳಿಗೆ ಆರ್ಥಿಕ ಮೌಲ್ಯವನ್ನು ಕಟ್ಟುತ್ತಾನೆ. ಆಹಾರದ ಉತ್ಪಾದನೆಗಾಗಿ ಪ್ರಭೇದಗಳನ್ನು ಬಳಸುವುದರಿಂದ ಅವುಗಳ ಬಿತ್ತನೆ ಬೀಜಕ್ಕೆ; ತಿನ್ನುವ ದಾನ್ಯಕ್ಕೆ ಬೆಲೆ ಕಟ್ಟುತ್ತಾನೆ. ಉತ್ತಮ ಜಾತಿಗೆ, ಅಧಿಕ ಇಳುವರಿಯ ಜಾತಿಗೆ ಹೆಚ್ಚಿನ ಮೌಲ್ಯ ನಿರ್ಧರಿಸುತ್ತಾನೆ. ಉತ್ತಮ ತಳಿ ಅಭಿವೃದ್ದಿಗೆ ಆತನು ಆ ಪ್ರಭೇದದ ಕಾಡು ಜಾತಿ ಗಿಡಗಳನ್ನು ಅವಲಂಬಿಸುತ್ತಾನೆ. ತಳಿ ತಂತ್ರಜ್ಞಾನ, ಜೀವ ತಂತ್ರಜ್ಞಾನದ ಸಹಾಯದಿಂದ ತೀವ್ರ ಇಳುವರಿ ಹಾಗೂ ರೋಗ ನಿರೋಧಕ ತಳಿಯನ್ನು ಈಗ ಅಭಿವೃದ್ದಿ ಪಡಿಸುತ್ತಿದ್ದಾನೆ. ಆದ್ದರಿಂದ ಹೆಚ್ಚಿನ ಉತ್ಪಾದನೆಗೆ ಜೈವಿಕ ವೈವಿಧ್ಯದ ಅಗತ್ಯ ಬೀಳುತ್ತದೆ. ಒಂದೆರಡು ವರ್ಷಗಳಲ್ಲಿಯೇ ಪ್ರತಿ ಹೊಸ ತಳಿಗೂ ಕೀಟಗಳ ಹಾವಳಿ ಅಥವಾ ಸೂಕ್ಷ್ಮಜೀವಿಗಳಿಂದ ಉಂಟಾಗುವ ರೋಗಗಳು ಹೆಚ್ಚಾಗುತ್ತವೆ. ಉದಾಹರಣೆಗೆ 1968 ಮತ್ತು 1969ರಲ್ಲಿ IR-8 ಎಂಬ ಭತ್ತದ ತಳಿಯನ್ನು ಅಭಿವೃದ್ದಿಪಡಿಸಿ ಏಷ್ಯಾದ ದೇಶಗಳಲ್ಲಿ ಬಳಸಲಾಯಿತು. ಈ ತಳಿಗೆ 1970 ಮತ್ತು 1971ರಲ್ಲಿ ಟಂಗ್ರೊ ಎಂಬ ವೈರಸ್ ರೋಗ ತಗುಲಿ ಉತ್ಪಾದನೆ ಕುಸಿಯಿತು. 1975ರಲ್ಲಿ ಇಂಡೊನೇಶಿಯಾದಲ್ಲಿ ಭತ್ತದ ತಳಿಯು ಕೀಟಗಳ ಹಾವಳಿಯಿಂದ ತೀವ್ರ ಹಾನಿಗೆ ಒಳಗಾಯಿತು. 1977ರಲ್ಲಿ ಟಂಗ್ರೊ ವೈರ್, ಬ್ಲೈಟ್ ಬ್ಯಾಕ್ಟೀರಿಯಾ ಹಾಗೂ 8 ಕೀಟಗಳ ಹಾವಳಿಗೆ ಪ್ರತಿರೋಧವಿರುವ ನೂತನ ತಳಿ IR-36 ಅನ್ನು ಅಭಿವೃದ್ದಿ ಪಡಿಸಲಾಯಿತು. ಈ ತಳಿಯ ಅಭಿವೃದ್ದಿಗೆ ವಿಜ್ಞಾನಿಗಳು ಮತ್ತೆ ಕಾಡುಜಾತಿಯ ಭತ್ತಗಳಲ್ಲಿರುವ ಜೀನ್‌ಗಳನ್ನು ಬಳಸಿಕೊಂಡರು. ಹೀಗೆ ಎಲ್ಲ ಬೆಳೆಗಳಲ್ಲಿ ಅಧಿಕ ಇಳುವರಿ ತಳಿಗಳನ್ನು ಆಗಾಗ್ಗೆ ಉತ್ತಮ ಪಡಿಸಲು ಜೈವಿಕ ವೈವಿಧ್ಯದ ಅಗತ್ಯ ಇದ್ದೇ ಇರುತ್ತದೆ.

ಕೃಷಿ ಪದ್ಧತಿಯಲ್ಲಿ ಬಹು ಬೆಳೆ ಬೇಸಾಯ ಉತ್ತಮವಾದುದೆಂದು ಅನುಭವದಿಂದ ತಿಳಿದು ಬಂದಿದೆ. ಹೊಲಗಳಲ್ಲಿ ರಾಗಿಯ ಜೊತೆ ಅಕ್ಕಡಿ ಸಾಲುಗಳಲ್ಲಿ ಜೋಳ, ತೊಗರಿ, ನೆಲಗಡಲೆಗಳನ್ನು ಬೆಳೆದರೆ ಇಳುವರಿ ಹೆಚ್ಚಿರುತ್ತದೆ ಮತ್ತು ಈ ಬೆಳೆಗಳು ರೋಗಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಕೃಷಿ ಅರಣ್ಯಗಳಲ್ಲಿಯೂ ಸಹ ಒಂದು ಜಾತಿಯ ಮರಗಳನ್ನು ಬೆಳೆಸಿದಾಗ ಅವು ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಹಲವಾರು ಪ್ರಭೇದಗಳನ್ನು ಒಟ್ಟಿಗೆ ಬೆಳೆದಾಗ ರೋಗ ಬಂದರೂ ಸಹ ಅದರ ತೀವ್ರತೆ ಕಡಿಮೆಯಿರುವುದು.

ಒಂದೇ ಪ್ರಭೇದದ ನಡುವಿನ ಜಾತಿಗಳಲ್ಲಿ, ಒಂದೇ ಜೆನರದ ನಡುವಿನ ಪ್ರಭೇದಗಳಲ್ಲಿ ಮತ್ತು ವಿವಿಧ ಪ್ರಭೇದಗಳ ನಡುವೆಯೂ ಜೀನ್‌ಗಳನ್ನು ವರ್ಗಾಯಿಸಲು ಜೀವತಂತ್ರಜ್ಞಾನದಿಂದ ಸಾಧ್ಯವಿದೆ. ಆದ್ದರಿಂದ ಆಹಾರದ ಬೆಳೆಗಳನ್ನು ಉತ್ತಮಪಡಿಸಲು, ಅರಣ್ಯಗಳ ಗಿಡಗಳನ್ನು ಉತ್ತಮಪಡಿಸಲು ಜೀವತಂತ್ರಜ್ಞಾನಕ್ಕೆ ಜೈವಿಕ ವೈವಿಧ್ಯದ ಅಗತ್ಯಬೀಳುತ್ತದೆ. ಅದೇ ರೀತಿ ಔಷಧಗಳ ಉತ್ಪಾದನೆಗಂತೂ ಜೈವಿಕ ವೈವಿಧ್ಯ ಬೇಕೇ ಬೇಕು.

ಮೇಲೆ ಸೂಚಿಸಿರುವ ಎಲ್ಲ ಕಾರಣಗಳಿಂದ ಜೈವಿಕ ವೈವಿಧ್ಯವು ಉತ್ಪಾದನಾ ಸಾಧನವಾಗಿದೆ. ಅಧಿಕ ಇಳುವರಿ ಗಿಡಗಳನ್ನು “ಸಿದ್ಧಪಡಿಸಲು‘’ ಜೈವಿಕ ವೈವಿಧ್ಯವು `ಕಚ್ಛಾ‘ಸಾಮಗ್ರಿಯಾಗಿದೆ. ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿಯೇ ಜೈವಿಕ ವೈವಿಧ್ಯ ಅಪಾರವಾಗಿರುವುದರಿಂದ ಶ್ರೀಮಂತ ರಾಷ್ಟ್ರಗಳು ನಾನಾ ನೆಪಗಳನ್ನು, ಆಸೆ ಅಮಿಷಗಳನ್ನು ಒಡ್ಡಿ ಜೈವಿಕ ವೈವಿಧ್ಯವನ್ನು ಅಪಹರಿಸುತ್ತಿವೆ. 1988ರಲ್ಲಿ ಪೌಲರ್ ಮತ್ತು ಇತರರು ನೀಡಿರುವ ಹೇಳಿಕೆ ನಿಷ್ಠುರ ಸತ್ಯವಾಗಿದೆ.

ಇತ್ತೀಚಿನ ಬೆಳವಣಿಗೆಗಳು ಅಪಾಯದ ಸೂಚನೆ ನೀಡುವಂತಿವೆ. ಜಪಾನಿನ ಕಂಪನಿಗಳು ಏಷ್ಯಾದಲ್ಲಿನ ಗಿಡಮೂಲಿಕೆಗಳನ್ನು ಸಂಗ್ರಹಿಸುತ್ತಿವೆ. ಲ್ಯಾಟಿನ್ ಅಮೇರಿಕಾದಲ್ಲಿನ ಸಸ್ಯಗಳನ್ನು ಅಮೇರಿಕಾದ ಕಂಪೆನಿಗಳು ಲೂಟಿ ಮಾಡಲು ಆರಂಭಿಸಿವೆ. ಯುರೋಪಿನ ಕಂಪನಿಗಳು ಭಾರತ ಮತ್ತು ಬ್ರೆಜಿಲ್‌ನಲ್ಲಿ ಗಿಡಮೂಲಿಕೆಗಳ ಸಂಶೋಧನಾ ಕೇಂದ್ರಗಳನ್ನು ತೆರೆಯುತ್ತಿವೆ. ಈ ಚಟುವಟಿಕೆಗಳಲ್ಲಿ ಆರ್ಥಿಕ ದೃಷ್ಟಿ ಇದೆ. ಆದರೆ ಗಿಡಗಳಲ್ಲಿನ ಔಷಧೀಯ ಗುಣಗಳನ್ನು ಮೊದಲು ಕಂಡು ಹಿಡಿದ ಸಾಮಾನ್ಯ ಜನತೆಗೆ ಲಾಭದ ಕಿಲುಬು ಕಾಸೂ ದೊರಕದು‘’.

ತಳಿ ತಂತ್ರಜ್ಞಾನ, ಜೀವ ತಂತ್ರಜ್ಞಾನ ಅಥವಾ ಔಷಧ ವಿಜ್ಞಾನದ ಸಹಾಯದಿಂದ ತಳಿಗಳನ್ನು ಅಥವಾ ಔಷಧವನ್ನು ಅಭಿವೃದ್ದಿಪಡಿಸಿದ ನಂತರ ಆ ತಳಿಯನ್ನು, ಪ್ರಭೇದವನ್ನು ಅಥವಾ ಔಷಧವನ್ನು ಬೇರೆಯವರು ಬಳಸಬೇಕಾದರೆ, ಅದನ್ನು ಸಿದ್ಧಪಡಿಸಿದ ವ್ಯಕ್ತಿ ಅಥವಾ ಸಂಸ್ಥೆಗೆ `ರಾಯಧನ‘ವೆಂದು ಹೆಚ್ಚಿನ ಹಣ ನೀಡಬೇಕಾಗುವುದು. ಕೈಗಾರಿಕಾ ತಂತ್ರಜ್ಞಾನದಲ್ಲಿ ಯಾವುದೇ ಹೊಸ ಯಂತ್ರವನ್ನು ಕಂಡುಹಿಡಿದರೆ, ಅದನ್ನು ತನ್ನ ಹಕ್ಕು ಎಂದು ನೋಂದಾಯಿಸಿಕೊಳ್ಳಬಹುದು. ಈ ಹಕ್ಕನ್ನು `ಸ್ವಾಮ್ಯ ಹಕ್ಕು‘ (patent) ಎನ್ನುವರು. ಸ್ವಾಮ್ಯ ಹಕ್ಕು ನೀಡುವ ಸಂಸ್ಥೆಯಿಂದ ಒಮ್ಮೆ ಹಕ್ಕನ್ನು ಪಡೆದ ಮೇಲೆ ಬೇರೆ ಯಾವ ವ್ಯಕ್ತಿ ಅಥವಾ ಸಂಸ್ಥೆಯು ಆ ವಿಧಾನ ಅಥವಾ ವಸ್ತುವನ್ನು ಹಕ್ಕು ಪಡೆದ ವ್ಯಕ್ತಿ ಅಥವಾ ಸಂಸ್ಥೆಯ ಅನುಮತಿಯಿಲ್ಲದೆ ಬಳಸುವಂತಿಲ್ಲ. ಬಳಸಬೇಕಾದರೆ ಸಂಸ್ಥೆ ನಿರ್ಧರಿಸಲ್ಪಟ್ಟ ಹಣವನ್ನು ರಾಯಧನವನ್ನಾಗಿ ನೀಡಲೇಬೇಕು. ಹೊಸ ಸಂಶೋಧನೆಗಳನ್ನು ಪ್ರೋಮತ್ತು ಆ ವಿಧಾನ ಅಥವಾ ವಸ್ತುವನ್ನು ಆವಿಷ್ಕರಿಸಲು ವಿಜ್ಞಾನಿ ತೆಗೆದುಕೊಂಡ ಶ್ರಮ ಮತ್ತು ಕಾಲಕ್ಕೆ ಮೌಲ್ಯ ನೀಡುವ ಉದ್ದೇಶದಿಂದ ಸ್ವಾಮ್ಯ ಹಕ್ಕನ್ನು ನೀಡಲಾಗುವುದು.

ಮೊದಲಿಗೆ ಈ ಸ್ವಾಮ್ಯ ಹಕ್ಕು ಕೇವಲ ಯಂತ್ರ, ಹಾಗೂ ವಸ್ತುಗಳ ಆವಿಷ್ಕಾರಕ್ಕೆ ಮಾತ್ರ ಸೀಮಿತವಾಗಿತ್ತು. ತಳಿ ತಂತ್ರಜ್ಞಾನ, ಜೀವ ತಂತ್ರಜ್ಞಾನಗಳು ಅಭಿವೃದ್ದಿಯಾದ ಮೇಲೆ ಶ್ರೀಮಂತ ರಾಷ್ಟ್ರಗಳಲ್ಲಿ ಜೀವಿಗಳಿಗೂ, ಪ್ರಭೇದಗಳಿಗೂ ಸ್ವಾಮ್ಯ ಹಕ್ಕನ್ನು ನೀಡುತ್ತಿದ್ದಾರೆ. ಈಗಾಗಲೇ ಹಲವಾರು ವಿಜ್ಞಾನಿಗಳು ಕೆಲವು ಸೂಕ್ಷ್ಮಜೀವಿಗಳ ಸ್ವಾಮ್ಯ ಹಕ್ಕು ಪಡೆದಿದ್ದಾರೆ. ಭಾರತದಲ್ಲಿ ಸಹಸ್ರಾರು ವರ್ಷಗಳಿಂದಲೂ ಅರಿಶಿಣವನ್ನು ಔಷಧವನ್ನಾಗಿ ಬಳಸುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಮೇರಿಕದ ಇಬ್ಬರು ವಿಜ್ಞಾನಿಗಳು ಅರಿಶಿಣದ ಸ್ವಾಮ್ಯ ಹಕ್ಕು ತಮ್ಮದೆಂದು ನೋಂದಾಯಿಸಿದ್ದರು. ಬೇವಿನ ಔಷಧ ಗುಣಗಳನ್ನು ಕೆಲವರು ಸ್ವಾಮ್ಯ ಹಕ್ಕಾಗಿ ಪಡೆದಿದ್ದಾರೆ. ಲ್ಯಾಟಿನ್ ಅಮೇರಿಕದಲ್ಲಿನ ಅನೇಕ ಗಿಡಮೂಲಿಕೆಗಳ ಸ್ವಾಮ್ಯ ಹಕ್ಕನ್ನು ಅಮೇರಿಕಾದ ವಿಜ್ಞಾನಿಗಳು / ಸಂಸ್ಥೆಗಳು ಪಡೆಯುತ್ತಿವೆ; ಪಡೆದಿವೆ. ಅಮೇರಿಕದ ಸಂಸ್ಥೆಗಳ, ವಿಜ್ಞಾನಿಗಳ ವಾದ ಹೀಗಿದೆ: “ವಿಜ್ಞಾನಿಗಳು ಹೊಸದೊಂದು ತಳಿಯನ್ನು ಅಭಿವೃದ್ದಿ ಪಡಿಸಲು ಅಥವಾ ಔಷಧವನ್ನು ಸಂಸ್ಕರಿಸಲು ಲಕ್ಷಾಂತರ ಡಾಲರುಗಳ ಹಣ, ಸಾಕಷ್ಟು ಕಾಲ ಮತ್ತು ಶ್ರಮ ಹಾಕುತ್ತಾರೆ. ಅದಕ್ಕೆ ತಕ್ಕ ಪ್ರತಿಫಲ ನೀಡುವುದು ನ್ಯಾಯವಾದುದು. ಆದ್ದರಿಂದಲೇ ಜೀವಿಗಳಿಗೂ, ಔಷಧಗಳಿಗೂ, ವಸ್ತುಗಳಿಗೂ ಹಾಗೂ ವಸ್ತುವಿನ ತಯಾರಿಕೆಯ ವಿಧಾನಕ್ಕೂ ಮೌಲ್ಯವಿರಬೇಕು‘’. ಇತ್ತೀಚೆಗೆ ಒಂದು ನಿರ್ದಿಷ್ಟ ಆಲೋಚನೆಯನ್ನು ಹಕ್ಕಾಗಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಿದ್ದಾರೆ. ಇದನ್ನು ಭೌದ್ದಿಕ ಹಕ್ಕು (Intellectual Property Rights) ಎನ್ನುವರು. GATT ಪ್ರಕಾರ ಈಗ ಭೌದ್ದಿಕ ಹಕ್ಕಿಗೂ ಸ್ವಾಮ್ಯಹಕ್ಕು ಇದೆ. ಎಲ್ಲ ರಾಷ್ಟ್ರಗಳೂ ಸಹ ಭೌದ್ದಿಕ ಹಕ್ಕನ್ನು ಒಪ್ಪಿಕೊಳ್ಳಬೇಕೆಂದು ವಿವಿಧ ರೀತಿಯ ಒತ್ತಡವನ್ನು ಅಮೇರಿಕ ಹೇರುತ್ತಿದೆ.

ಮೇಲ್ನೋಟಕ್ಕೆ ಅವರ ವಾದ ಸರಿ. ಆದರೆ ಲಕ್ಷಾಂತರ ವರ್ಷಗಳ ಕಾಲ ಪ್ರತ್ಯಕ್ಷ ಅನುಭವದಿಂದ ಒಂದು ಗಿಡದ ಉಪಯೋಗವನ್ನು ಕಂಡುಹಿಡಿದ ಶ್ರೀಸಾಮಾನ್ಯರಿಗೆ, ಆ ಗಿಡವನ್ನು ಉಳಿಯುವಂತೆ ನೋಡಿಕೊಂಡಿರುವ ಜನರಿಗೆ ಆ ಹಕ್ಕಿಲ್ಲವೇ? ಅರಿಶಿಣವನ್ನು ಪ್ರತಿಯೊಂದು ಸಂದರ್ಭದಲ್ಲಿಯೂ ಬಳಸುವ ವಿಧಾನ ಕಂಡು ಹಿಡಿದವರಿಗೆ, ಆ ರಾಷ್ಟ್ರಕ್ಕೆ ಲಾಭ ನೀಡಬೇಕಿಲ್ಲವೇ? ಬೇವಿನ ಔಷಧೀಯ ಗುಣ ತಿಳಿದ ನಮ್ಮ ಹಿರಿಯರ ಅನುಭವಕ್ಕೆ ಬೆಲೆ ಇಲ್ಲವೇ? ನಮ್ಮ ಜನರ ಅನುಭವವನ್ನೇ ಸ್ವಲ್ಪ ಪರಿಷ್ಕರಿಸಿದ ನಂತರ ಸಾಮ್ಯ ಹಕ್ಕಿನ ಸಂಸ್ಥೆ ಆ ವಿಜ್ಞಾನಿಗಳಿಗೆ ಹಕ್ಕು ನೀಡುವುದು ಯಾವ ನ್ಯಾಯ? ಶ್ರೀಮಂತ ರಾಷ್ಟ್ರಗಳ ಈ ನೂತನ ದಬ್ಬಾಳಿಕೆಯನ್ನು ತಡೆಯುವುದಾದರೂ ಹೇಗೆ? `ಹಸಿರು ಬಂಡವಾಳ ಶಾಯಿ‘ಯನ್ನು ವಿರೋಧಿಸುವ ಹಾಗೂ ಬಡ ರಾಷ್ಟ್ರಗಳಿಂದ ಗಿಡಮೂಲಿಕೆಗಳ, ಕಾಡು ಸಸ್ಯಗಳ ಲೂಟಿಯನ್ನು ತಡೆಯುವುದಾದರೂ ಎಂತು? ನಮ್ಮ ಜನರ ಪಾರಂಪರಿಕ ಜ್ಞಾನಕ್ಕೆ ಸರಿಯಾದ, ನ್ಯಾಯೋಚಿತವಾದ ಆರ್ಥಿಕ ಮೌಲ್ಯ ಪಡೆಯುವುದು ನಮ್ಮ ಹಕ್ಕಲ್ಲವೇ? ನಮ್ಮ ಭೂ ಪ್ರದೇಶದಲ್ಲಿ ಹುಟ್ಟಿ ಬೆಳೆದ ಜೀವ ಸಂಪನ್ಮೂಲಗಳ ಮೇಲಿರುವ ಹಕ್ಕನ್ನು ನಾವು ಸ್ಥಾಪಿಸಬೇಕಲ್ಲವೇ? ನಮ್ಮಲ್ಲಿ ದೊರೆಯುವ ಚಿನ್ನ, ಕಬ್ಬಿಣ, ನೀರು, ಕಲ್ಲಿದ್ದಲು ಮುಂತಾದ ಸಂಪನ್ಮೂಲಗಳ ಮೇಲೆ ನಮಗೆ ಹಕ್ಕಿರುವಂತೆ ನಮ್ಮಲ್ಲಿನ ಅನುವಂಶೀಯ ಸಂಪನ್ಮೂಲಗಳ ಮೇಲೂ ನಮಗೆ ಹಕ್ಕಿದೆ ಎಂಬುದು ಸರ್ವವಿಧಿತ. ಈ ಅಭಿಪ್ರಾಯಕ್ಕೆ ಅಭಿವೃದ್ದಿ ಹೊಂದಿದ ರಾಷ್ಟ್ರಗಳು ವಿರೋಧಿಸುತ್ತಿವೆ. ಅವರ ಪ್ರಕಾರ ಅನುವಂಶೀಯ ಸಂಪನ್ಮೂಲಗಳು ಜಗತ್ತಿನ ಸಾರ್ವಜನಿಕ ಆಸ್ತಿಯಂತೆ! ಮಿಲಿಯಾಂತರ ವರ್ಷಗಳ ಕಾಲ ಒಂದು ಪ್ರದೇಶದಲ್ಲಿ ಹುಟ್ಟಿ ಬೆಳೆದ ಪ್ರಭೇದಗಳು ಸಾರ್ವಜನಿಕ ಆಸ್ತಿಯಾಗುವುದಾದರೆ, ಕೇವಲ ಕೆಲವು ಸಾವಿರ ವರ್ಷಗಳಿಂದ ಬೆಳೆದು ಬಂದ ಕೈಗಾರಿಕೆಗಳು, ಅವುಗಳ ಬಂಡವಾಳ ಈ ಜಗತ್ತಿನ ಎಲ್ಲ ಶ್ರಮಿಕರ ಸಾರ್ವಜನಿಕ ಆಸ್ತಿ ಏಕೆ ಅಲ್ಲ? ಈ ವಾದ ವಿವಾದಗಳು ಶ್ರೀಮಂತ ರಾಷ್ಟ್ರಗಳಿಗೂ ಅಭಿವೃದ್ದಿಶೀಲ ರಾಷ್ಟ್ರಗಳಿಗೂ ನಡೆಯುತ್ತಲೇ ಇದೆ. ಈ ಮಧ್ಯೆ ಸಹಕಾರ, ಪರಸ್ಪರ ವಿಚಾರ ವಿನಿಮಯ, ಪ್ರಭೇದಗಳ ವಿನಿಮಯ, ಜ್ಞಾನ-ವಿಜ್ಞಾನ, ತಂತ್ರಜ್ಞಾನಗಳ ವಿನಿಮಯ, ವರ್ಗಾವಣೆಯೂ ನಡೆಯುತ್ತಿದೆ.

ಈ ಬಗೆಗಿನ ಚಿಂತನ-ಮಂಥನಗಳಿಂದ ವಿಶ್ವಸಂಸ್ಥೆಯ ಪರಿಸರ ಅಭಿವೃದ್ದಿ ಕಾರ್ಯಕ್ರಮವು (UNEP) ಜೈವಿಕ ವೈವಿಧ್ಯದ ಸಂರಕ್ಷಣೆ ಹಾಗೂ ಅದರ ಸುಸ್ಥಿರ ಬಳಕೆಯ ಬಗ್ಗೆ ಗಂಭೀರ ಗಮನ ನೀಡಲಾರಂಭಿಸಿತು. ತಜ್ಞರ ಬೆಂಬಲದಿಂದ ಜೀವಿ ವೈವಿಧ್ಯ ಸಂರಕ್ಷಣೆಯ ಬಗ್ಗೆ ಕರಡು ಪ್ರತಿಯನ್ನು ಸಿದ್ಧಪಡಿಸಿ ಅದನ್ನು ಜಗತ್ತಿನ ಎಲ್ಲ ರಾಷ್ಟ್ರಗಳ ಚರ್ಚೆಗೆ ಹಾಗೂ ಒಪ್ಪಿಗೆಗೆ ಅವಕಾಶ ನೀಡಿತು. 1988ರಿಂದಲೂ ಜೈವಿಕ ವೈವಿಧ್ಯ ಸಮಾವೇಶದ ಚರ್ಚೆಗೆ ರಾಷ್ಟ್ರಗಳನ್ನು ಆಹ್ವಾನಿಸಿತು. ಹಲವಾರು ಬಾರಿ ಪರಿಷ್ಕರಣಗೊಂಡ ನಂತರ ಅಂತಿಮ ಒಪ್ಪಿಗೆಗಾಗಿ 1992ರ ಜೂನ್‌ನಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊ ನಗರದಲ್ಲಿ ವಿಶ್ವ ಪರಿಸರ ಸಮಾವೇಶವನ್ನು ಕರೆಯಿತು. ಅಲ್ಲಿ ನಡೆದ ಜೈವಿಕ ವೈವಿಧ್ಯ ಸಮಾವೇಶದಲ್ಲಿ ಭಾಗವಹಿಸಿದ 167 ರಾಷ್ಟ್ರಗಳು ಸಮಾವೇಶದ ಸಲಹೆಗಳನ್ನು ಒಪ್ಪಿದವು. 1993ರ ಡಿಸೆಂಬರ್ ತಿಂಗಳ 29ರಂದು ಅನೇಕ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದವು. 1994ರ ಫೆಬ್ರವರಿ 18ರಂದು ಭಾರತವು ಸಹ ಒಪ್ಪಂದಕ್ಕೆ ಸಹಿ ಹಾಕಿತು. ಆದರೆ ಅಮೇರಿಕ ದೇಶ ಇದುವರೆವಿಗೆ ಒಪ್ಪಂದಕ್ಕೆ ಸಹಿ ಹಾಕಿಲ್ಲ.

UNEP ಸಂಸ್ಥೆಯು ಜೈವಿಕ ವೈವಿಧ್ಯದ ಸಮಾವೇಶವನ್ನು ಆಗಾಗ್ಗೆ ಸಂಘಟಿಸುತ್ತದೆ. ಆಗ ಪ್ರತಿ ರಾಷ್ಟ್ರವೂ ಚರ್ಚೆಯಲ್ಲಿ ಭಾಗವಹಿಸಿ, ಜೈವಿಕ ವೈವಿಧ್ಯದ ಸಂರಕ್ಷಣೆಗೆ ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸಬೇಕು.